ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ, ನಗರದಲ್ಲಿ 72 ಕಿ.ಮೀ ವ್ಯಾಪಿಸಿರುವ ಮೆಟ್ರೋದ ವಿಸ್ತರಣೆ ಕಾರ್ಯ ಮುಂದುವರೆದಿದೆ. ಇದೀಗ, ನಮ್ಮ ಮೆಟ್ರೋ ಹಳಿಗಳ ಮೇಲೆ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ.
ಬೆಂಗಳೂರಿಗೆ ಚೀನಾದಿಂದ ಬಂದಿರುವ ಚಾಲಕ ರಹಿತ ಮೆಟ್ರೋ ರೈಲಿನ ಫೋಟೋ ಮತ್ತು ವಿಡಿಯೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಬಿಡುಗಡೆ ಮಾಡಿದೆ.
ಚೀನಾದ ಶಾಂಘೈ ಬಂದರಿನಿಂದ ಜನವರಿ 24ರಂದು ಸಮುದ್ರ ಮಾರ್ಗವಾಗಿ ಚಾಲಕ ರಹಿತ ರೈಲು ಬೋಗಿಗಳನ್ನು ಸಾಗಿಸಲಾಗಿತ್ತು. ಫೆ.6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಫೆಬ್ರುವರಿ 14ರಂದು ಬಂದರಿನಿಂದ ರಸ್ತೆ ಮಾರ್ಗದ ಮೂಲಕವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬಂದು ತಲುಪಿತ್ತು. ಇದೀಗ, ರೈಲಿನ ಮೇಲೆ ಹೊದಿಸಿದ್ದ ಹೊದಿಕೆಯನ್ನು ತೆಗೆದು ರೈಲನ್ನು ಟ್ರ್ಯಾಕ್‌ಗೆ ಇಳಿಸಲಾಗಿದೆ.
ಆರು ಬೋಗಿಗಳನ್ನು ಟ್ರೇಲರ್ಗಳ ಮೂಲಕ ಸಾಗಿಸಲಾಗಿತ್ತು. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ. ಈ ಚಾಲಕ ರಹಿತ ರೈಲು ಆರ್ವಿ ರಸ್ತೆ–ಬೊಮ್ಮಸಂದ್ರ ಲೈನ್ನಲ್ಲಿ ಮುಂದಿನ ದಿನಗಳಲ್ಲಿ ಸಂಚರಿಸಲಿದೆ. ಚೀನಾದ ಸಿಆರ್ಆರ್ಸಿ ನಾನ್ ಜಿಂಗ್ ಪುಜೆನ್ ಕಂ. ಲಿಮಿಟೆಡ್ನಿಂದ ಈ ರೈಲು ತಯಾರಾಗಿದೆ.
ನಮ್ಮ ಮೆಟ್ರೋ ಹಳದಿ(Yellow) ಮಾರ್ಗದ ಮೊದಲ ‘ಡ್ರೈವರ್ ಲೆಸ್’ ಮೆಟ್ರೋದ ಮೊದಲ ಫೋಟೋ ರಿವೀಲ್.
ಹೆಬ್ಬಗೋಡಿ ಡಿಪೋದಲ್ಲಿರುವ ಮೆಟ್ರೋದ ಮೊದಲ ಫೋಟೋ, ವಿಡಿಯೋವನ್ನು BMRCL ಅಧಿಕಾರಿಗಳು ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
@OfficialBMRCL @WF_Watcher @NammaBengaluroo @NammaMetro_ @nammametrouser pic.twitter.com/Jkzs7SOHGw— eedina.com (@eedinanews) February 20, 2024
ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ಚಾಲಕ ರಹಿತ ಮೆಟ್ರೋ ಓಡಾಡಲಿದೆ. ಇನ್ನು ಮೂರು-ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ. ಟ್ರ್ಯಾಕ್ನಲ್ಲಿ ಸುಮಾರು 15 ಮಾದರಿ ಪರೀಕ್ಷೆಗಳು ನಡೆಯಬೇಕಿದೆ. ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಬಳಿಕ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸುಮನಹಳ್ಳಿ ಚಿತಾಗಾರ 10 ದಿನ ತಾತ್ಕಾಲಿಕ ಬಂದ್
ಮುಂದಿನ ದಿನಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್ ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ಓಡಾಟ ನಡೆಸಲು ಸಕಲ ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ.




