ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಘೋರ ಅನ್ಯಾಯ ಮಾಡಿ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲಿ ಖಾಲಿ ಚೊಂಬನ್ನೇ ನೀಡುತ್ತಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಭವಿಷ್ಯ ನುಡಿದರು.
ಬೀದರ್ ಪತ್ರಿಕಾ ಭವನದಲ್ಲಿ ಖಾಲಿ ಚೊಂಬು ಹಿಡಿದುಕೊಂಡು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯಕ್ಕೆ ಪರಿಹಾರ ನೀಡುವಂತೆ 25 ಬಿಜೆಪಿ ಸಂಸದರು ಕೇಳಲೇ ಇಲ್ಲ. ರೈತರ ನೆರವಿಗೆ ಬಾರದ ಭಗವಂತ ಖೂಬಾ ಎಲ್ಲಿ ಹೋಗಿದ್ದರು” ಎಂದು ಪ್ರಶ್ನಿಸಿದರು.
“ರಾಜ್ಯದಲ್ಲಿ ಮಳೆ ಕೊರತೆಯಿಂದ ಈ ಬಾರಿ ಬರ ಪರಿಸ್ಥಿತಿ ಎದುರಾಗಿದೆ. ರೈತರ ಬೆಳೆ ಹಾನಿ ಪರಿಹಾರ ನೀಡಲು, ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಬರ ಪೀಡಿತ ಜಿಲ್ಲೆಗಳಲ್ಲಿ 90 ದಿನಗಳ ಉದ್ಯೋಗ ನೀಡಲು, ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್ ನಿಯಮಾವಳಿಗಳ ರೀತಿಯ 18 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಳೆದ ಸೆಪ್ಟೆಂಬರ್ ನಲ್ಲಿಯೇ ಮನವಿ ಮಾಡಲಾಗಿತ್ತು. ಆದರೆ ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಈಗ ನ್ಯಾಯಾಲಯಕ್ಕೆ ಹೋದ ಬಳಿಕ 3400 ಕೋಟಿ ರೂ. ಘೋಷಿಸಿದೆ. ಅಂದರೆ ಕೇವಲ ಶೇ.19 ರಷ್ಟು ನೀಡಿದೆ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು. ಮಿಗಿಲಾಗಿ ಜನತಾ ನ್ಯಾಯಾಲಯದಲ್ಲಿ ಈ ವಿಷಯ ಮಂಡಿಸಲಾಗುವುದು” ಎಂದರು.
ಮೋದಿ ಸರ್ಕಾರದ ಡಿಎನ್‌ಎ ಕರ್ನಾಟಕ ವಿರೋಧಿ :
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಹಲವು ಕಡೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ʼಮೋದಿ ಗೋ ಬ್ಯಾಕ್ʼ ಎಂಬ ಘೋಷಣೆಗಳು ಎಲ್ಲ ಕಡೆ ಕೇಳಿ ಬರುತ್ತಿವೆ. ಬರ ಪರಿಹಾರದ ವಿಷಯದಲ್ಲಿ ಕರ್ನಾಟಕದ ರೈತರಿಗೆ ಘೋರ ಅನ್ಯಾಯ ಮಾಡಿರುವ ಮೋದಿ ಸರ್ಕಾರದ ಡಿಎನ್‌ಎ ಕರ್ನಾಟಕ ವಿರೋಧಿಯಾಗಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು.
“ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಅವರು ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಏಳು ತಿಂಗಳ ಹಿಂದೆ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕರ್ನಾಟಕದ ರೈತರ ಹಿತ ಕಾಯುವ ಬದಲು ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ಘೋರ ಅನ್ಯಾಯ ಎಸಗಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ನೀವು ಗೆಲ್ಲಿಸಿದರೆ, ಅವರು ಸಂಸತ್ ನಲ್ಲಿ ಬೀದರ್ ಮತ್ತು ರಾಜ್ಯದ ಧ್ವನಿಯಾಗುತ್ತಾರೆ. ಹೀಗಾಗಿ ಈ ಬಾರಿ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಅರಣ್ಯ ಪರಿಸರ ಮತ್ತಿ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಅರವಿಂದ ಅರಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಮಾಜಿ ಶಾಸಕ ಅಶೋಕ ಖೇಣಿ, ರಾಜಶೇಖರ ಪಾಟೀಲ, ವಿಜಯ ಸಿಂಗ್, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





