ಬರ ಪರಿಹಾರವನ್ನು ರೈತರಿಗೆ ಇನ್ನೂ ನೀಡಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎಂದು ಹೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸುವುದೇ ಹಾಸ್ಯಾಸ್ಪದ. ಬಿಜೆಪಿ ನಾಯಕರಲ್ಲಿ ಅದ್ಯಾವ ನೈತಿಕತೆ ಉಳಿದಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ” ಎಂದು ಕಿಡಿಕಾರಿದರು.
“ಬರ ಪರಿಹಾರ ಪರಿಹಾರ ನಿಧಿ ಕೇಂದ್ರದಿಂದ ಇದುವರೆಗೆ ಬಿಡುಗಡೆಯಾಗಿಲ್ಲ. ರಾಜ್ಯದ 27 ಸಂಸತ್ ಸದಸ್ಯರು ಪ್ರಧಾನಿಯವರಿಗಾಗಲೀ, ಗೃಹ ಸಚಿವರಿಗಾಗಲೀ ಯಾಕೆ ಮನವಿ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಸತ್ ದಾಳಿ ಆರೋಪಿಗಳಿಗೆ ಸುಳ್ಳು ಹೇಳಲು ಒತ್ತಡ; ವಿಪಕ್ಷಗಳನ್ನು ದೇಶದ್ರೋಹಿಗಳೆಂದು ಬಿಂಬಿಸುವ ವಿಫಲ ಯತ್ನ
“ನ್ಯಾಯಸಮ್ಮತವಾಗಿ ರಾಜ್ಯಕ್ಕೆ ಸಲ್ಲಬೇಕಾದ ಬರಪರಿಹಾರ ನಿಧಿ ಬಿಡುಗಡೆ ಮಾಡಲಿ ಅಂತ ಬಿಜೆಪಿ ಪ್ರತಿಭಟಿಸಲಿ. ಅದನ್ನು ಮಾಡೋದು ಬಿಟ್ಟು ಇಲ್ಲಿ ಪ್ರತಿಭಟನೆ ನಡೆಸಿದರೆ ಏನು ಅರ್ಥ? ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ” ಎಂದರು.
ರೈತರಿಗೆ ತಲಾ ರೂ. 2,000ದಂತೆ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಹಣ ವರ್ಗಾಯಿಸಲಾಗಿದೆ. ಕುಡಿಯುವ ನೀರು ಮತ್ತು ಇತರ ಸೌಲಭ್ಯಗಳ ಏರ್ಪಾಟಿಗೆ ರೂ. 545 ಕೋಟಿ ಹಣವನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಹರಿಹಾಯ್ದರು.





