ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪಾದ ಸಾವು ಪ್ರಕರಣದ ತನಿಖೆಗೆ ಸಿಐಡಿ ತಂಡ ಭಾನುವಾರ ಯಾದಗಿರಿ ನಗರಕ್ಕೆ ಆಗಮಿಸಿದೆ.
ಎರಡು ಕಾರುಗಳಲ್ಲಿ ಆಗಮಿಸಿರುವ ಸಿಐಡಿ ಡಿವೈಎಸ್ಪಿ ಪುನೀತ್ ನೇತ್ರತ್ವದ ತಂಡ ನಗರದ ಎಸ್.ಪಿ. ಕಚೇರಿಯಲ್ಲಿ ಮಾಹಿತಿ ಪಡೆಯುತ್ತಿದೆ. ಸಿಪಿಐ ಸುನಿಲ್ ಮೂಲಿಮನಿ ಗ್ರಾಮೀಣ ಠಾಣೆ ಪಿಎಸ್‌ಐ ಹನುಮಂತ ಬಂಕಲಗಿ ಜೊತೆಗಿದ್ದಾರೆ.
ಪಿಎಸ್ಐ ಪರಶುರಾಮ್ ಸಾವಿಗೆ ಸಂಬಂಧಿಸಿದಂತೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನರಟ್ಟಿ ಪಾಟೀಲ್ ತುನ್ನೂರ್ ಅವರ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಎಸ್ಐ ಪರಶುರಾಮ್ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಶನಿವಾರ ಸಂಜೆ ಸಿಐಡಿಗೆ ವಹಿಸಿತ್ತು.
ಒಂದೇ ದಿನದಲ್ಲಿ ಯಾದಗಿರಿ ನಗರಕ್ಕೆ ತನಿಖೆ ತಂಡ ಆಗಮಿಸಿದೆ, ಯಾದಗಿರಿ ನಗರ ಪೊಲೀಸರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಸಿಐಡಿ ತಂಡ ಪಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.





