ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆ ನೆಪದಲ್ಲಿ ಶೆಡ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸಿ ಗಲಾಟೆ ನಡೆಸಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಪುನೀತ್ ಕೆರೆಹಳ್ಳಿ ತೆರಳಿದ್ದ ವೇಳೆ ಬಂಧಿಸಲಾಗಿದೆ.
ಪುನೀತ್ ಕೆರೆಹಳ್ಳಿಯ ವಿರುದ್ಧ ಈ ಹಿಂದೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ವಾಹನಗಳನ್ನು ತಡೆದು ಗಲಾಟೆ… ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಹಲವು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ಇದಕ್ಕೂ ಮುನ್ನ, ಡಿಸೆಂಬರ್ 18ರಂದು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿಯೂ ಪುನೀತ್ ಕೆರೆಹಳ್ಳಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಾಂಗ್ಲಾದೇಶದ ಅಕ್ರಮ ವಲಸಿಗರೆಂದು ಆರೋಪಿಸಿ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ದಾಖಲಾಗಿತ್ತು.
ಶೆಡ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸಿ ಗಲಾಟೆ ನಡೆಸಿದ್ದಾರೆ ಎಂದು ಸಿದ್ದೇಶ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.





