ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಕುಮಾರಸ್ವಾಮಿ ಅವರು ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ರಾಜ್ಯಸಭಾ ಸದಸ್ಯತ್ವದ ಅವಧಿ ಜೂನ್‌ನಲ್ಲಿ ಕೊನೆಗೊಳ್ಳಲಿದ್ದು, ಅವರನ್ನು ರಾಜ್ಯಸಭೆಗೆ ಮರು ನಾಮನಿರ್ದೇಶನ ಮಾಡುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಶಿಫಾರಸ್ಸು ಮಾಡುವುದಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆಂಬ ಚರ್ಚೆಗಳಿರುವ ನಡುವೆ ಕುಮಾರಸ್ವಾಮಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ಸಭೆಗೆ ತಮ್ಮ ತಂದೆಯವರನ್ನೇ ಮರು ನಾಮನಿರ್ದೇಶಿಸಲು ಮನವಿ ಮಾಡಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?
ಇನ್ನು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧದ ರಾಜಕೀಯ ಹೋರಾಟ ಮತ್ತು ಮುಂಬರುವ ನಾಲ್ಕು ಎಂಎಲ್‌ಸಿ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಲ್ಲಿ ರಾಜ್ಯ ಬಿಜೆಪಿ ಮೈತ್ರಿಕೂಟದ ಪಾಲುದಾರ ಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆಯೂ ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಶಾ ಮುಂದೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದರು.





