ದಶಕಗಳಿಂದ ಅಭಿವೃದ್ಧಿಯ ಮೂಲವಾಹಿನಿಯಿಂದ ದೂರ ಸರಿದು, ಇಂದಿಗೂ ಅತಂತ್ರ ಸ್ಥಿತಿಯಲ್ಲಿರುವ ರಾಜ್ಯದ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಕೇವಲ ಭರವಸೆಗಳಲ್ಲ, ಬಲವಾದ ಕಾನೂನಿನ ರಕ್ಷಣೆ ಮತ್ತು ಆರ್ಥಿಕ ಚೈತನ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ‘ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ’, ಈ ಸಂಬಂಧ ಸಮಗ್ರವಾದ ಕರಡು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಕಳೆದ ಜನವರಿ 29ರಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿದಂತೆ, ಅಲೆಮಾರಿ ಸಮುದಾಯಗಳನ್ನು ‘ಎ’ ವರ್ಗಕ್ಕೆ ಸೇರಿಸಿ ಶೇ 1ರಷ್ಟು ಮೀಸಲಾತಿ ಕಲ್ಪಿಸುವುದು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ಸರ್ಕಾರದ ಭರವಸೆಯ ಮುಂದುವರಿದ ಭಾಗವಾಗಿ ಈ ವಿಸ್ತೃತ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅಲೆಮಾರಿಗಳ ಆರ್ಥಿಕ ಬೆನ್ನೆಲುಬು ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಆಯವ್ಯಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಿರುವ ವಿಶೇಷ ಘಟಕ ಯೋಜನೆಯ (ಎಸ್‌ಸಿಪಿ) ಒಟ್ಟು ಅನುದಾನದಲ್ಲಿ ಶೇ 5ರಷ್ಟು ಹಣವನ್ನು ಕಡ್ಡಾಯವಾಗಿ ಈ 49 ಸಮುದಾಯಗಳಿಗೆ ಮೀಸಲಿಡಬೇಕೆಂಬುದು ಒಕ್ಕೂಟದ ಪ್ರಮುಖ ಆರ್ಥಿಕ ಬೇಡಿಕೆಯಾಗಿದೆ. ವಸತಿ ರಹಿತರಿಗೆ ಸೂರು ಒದಗಿಸಲು ‘ಡಾ. ಅಂಬೇಡ್ಕರ್ ಅಲೆಮಾರಿ ವಸತಿ ಯೋಜನೆ’ ಎಂಬ ಹೊಸ ಯೋಜನೆಯನ್ನು ಘೋಷಿಸಿ, ಪ್ರಸಕ್ತ ಸಾಲಿನಲ್ಲಿ ಪ್ರತಿ ಜಿಲ್ಲೆಗೆ 500ರಂತೆ 31 ಜಿಲ್ಲೆಗಳಲ್ಲಿ ಒಟ್ಟು 15,500 ಮನೆಗಳನ್ನು ನಿರ್ಮಿಸಬೇಕು ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಇದನ್ನು 46,500 ಮನೆಗಳಿಗೆ ವಿಸ್ತರಿಸಬೇಕು ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಅಷ್ಟೇ ಅಲ್ಲದೆ, ಮನೆ ನಿರ್ಮಾಣಕ್ಕೆ ನಗರ ಪ್ರದೇಶದಲ್ಲಿ ನೀಡುವ ಸಹಾಯಧನವನ್ನು ₹8 ಲಕ್ಷಕ್ಕೆ ಮತ್ತು ಗ್ರಾಮೀಣ ಭಾಗದಲ್ಲಿ ₹7 ಲಕ್ಷಕ್ಕೆ ಹೆಚ್ಚಿಸಬೇಕು ಹಾಗೂ ಜಿಲ್ಲೆಗೆ 500ರಂತೆ ಉಚಿತ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಒಕ್ಕೂಟ ಒತ್ತಾಯಿಸಿದೆ. ಕೃಷಿಯಲ್ಲಿ ಆಸಕ್ತಿಯಿರುವ ಅಲೆಮಾರಿಗಳಿಗೆ ಭೂಒಡೆತನ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ 100 ಎಕರೆ ಜಮೀನು ಮೀಸಲಿಟ್ಟು, ಅದಕ್ಕೆ ಪೂರಕವಾಗಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು, ಅಲೆಮಾರಿ ಮಕ್ಕಳಿಗಾಗಿಯೇ ‘ಸಾವಿತ್ರಿಬಾಯಿ ಫುಲೆ ಅಲೆಮಾರಿಗಳ ವಸತಿ ಶಾಲೆ’ಗಳನ್ನು ಸ್ಥಾಪಿಸಿ, ಪ್ರಾಥಮಿಕ ಹಂತದಿಂದ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಬೇಕೆಂದು ಒಕ್ಕೂಟ ಆಗ್ರಹಿಸಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮಾದರಿಯಲ್ಲಿ ಪ್ರತಿ ಎರಡು ಜಿಲ್ಲೆಗೆ ಒಂದರಂತೆ ಒಟ್ಟು 15 ಶಾಲೆಗಳನ್ನು ತೆರೆಯಬೇಕು ಮತ್ತು ಸರ್ಕಾರಿ ವಸತಿ ನಿಲಯಗಳಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಸ್ಥಾನ ಮೀಸಲಿಡಬೇಕೆಂದು ಕೋರಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಉನ್ನತ ಶಿಕ್ಷಣದಲ್ಲಿ ಪಿಎಚ್.ಡಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಮಾಸಿಕ ₹25,000 ಫೆಲೋಶಿಪ್ (ಶಿಷ್ಯವೇತನ) ಮತ್ತು ವಿದೇಶಿ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡುವ ಪ್ರಸ್ತಾಪವೂ ಇದರಲ್ಲಿದೆ. ನಿರುದ್ಯೋಗ ನಿರ್ಮೂಲನೆಗಾಗಿ ‘ರಮಾಬಾಯಿ ಅಂಬೇಡ್ಕರ್ ಸ್ವಯಂ ಉದ್ಯೋಗ ಯೋಜನೆ’ ಜಾರಿಗೆ ತಂದು, ಪಾರಂಪರಿಕ ಕೌಶಲ್ಯಗಳನ್ನು ಆಧುನಿಕಗೊಳಿಸಲು ತರಬೇತಿ ಹಾಗೂ ಪ್ರತಿ ವ್ಯಕ್ತಿಗೆ ₹10 ಲಕ್ಷ ಸಾಲ ಮತ್ತು ಸಬ್ಸಿಡಿ ಸೌಲಭ್ಯ ನೀಡಬೇಕೆಂದು ಸರ್ಕಾರವನ್ನು ಕೋರಲಾಗಿದೆ.
ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆ ಮತ್ತು ಕಾನೂನಾತ್ಮಕ ಭದ್ರತೆಯ ವಿಷಯದಲ್ಲಿಯೂ ಒಕ್ಕೂಟ ಹಲವು ಮಹತ್ವದ ಆಗ್ರಹಗಳನ್ನು ಮಂಡಿಸಿದೆ. ಅಲೆಮಾರಿಗಳ ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ‘ಅಲೆಮಾರಿ ಸಮುದಾಯಗಳ ಭಾಷೆ, ಕಲೆ ಮತ್ತು ಸಂಸ್ಕೃತಿ ಅಕಾಡೆಮಿ’ ಸ್ಥಾಪಿಸಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ವಸ್ತುಸಂಗ್ರಹಾಲಯವುಳ್ಳ ‘ಕಲಾ ಸೌಧ’ ನಿರ್ಮಿಸಿ ಮುಂದಿನ ತಲೆಮಾರಿಗೆ ಇವರ ಪರಂಪರೆಯನ್ನು ದಾಟಿಸುವ ಕೆಲಸವಾಗಬೇಕು ಎಂದು ಪ್ರಸ್ತಾಪಿಸಲಾಗಿದೆ.
ಕಾನೂನು ರಕ್ಷಣೆಗಾಗಿ, ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಂತೆಯೇ ‘ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಮೇಲೆ ನಡೆಯುವ ದೌರ್ಜನ್ಯ ತಡೆ ಕಾಯ್ದೆ’ಯನ್ನು ಪ್ರತ್ಯೇಕವಾಗಿ ರೂಪಿಸಬೇಕು. ಅಲ್ಲದೆ, ರಾಜ್ಯದಲ್ಲಿ ‘ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಆಯೋಗ’ ರಚನೆ ಮತ್ತು ನಿಖರ ಜನಸಂಖ್ಯೆ ತಿಳಿಯಲು ಗಣತಿ ನಡೆಸುವ ಅಗತ್ಯವನ್ನೂ ಒಕ್ಕೂಟ ಪ್ರತಿಪಾದಿಸಿದೆ.
ಸಂವಿಧಾನಾತ್ಮಕ ರಕ್ಷಣೆಗಾಗಿ ಕಾಕಾ ಕಾಲೇಲ್ಕರ್ ವರದಿಯ ಶಿಫಾರಸಿನಂತೆ ವಿಮುಕ್ತ ಮತ್ತು ಅಲೆಮಾರಿ ಸಮುದಾಯಗಳನ್ನು ‘ಅತ್ಯಂತ ಹಿಂದುಳಿದ ಜಾತಿಗಳು’ ಎಂದು ಪರಿಗಣಿಸಿ, ಅವರನ್ನು ಸಂವಿಧಾನದ ಪ್ರತ್ಯೇಕ ಅನುಸೂಚಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ಒಕ್ಕೂಟದ ಪ್ರಮುಖ ಹಕ್ಕೊತ್ತಾಯವಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಭಿವೃದ್ಧಿಯ ಪಾಲು ಪಡೆಯದೆ, ಭಿಕ್ಷಾಟನೆಯ ಸ್ಥಿತಿಯಲ್ಲಿರುವ ಈ ಸಮುದಾಯಗಳನ್ನು ‘ವಿಶೇಷ ಜನವರ್ಗ’ ಎಂದು ಪರಿಗಣಿಸಿ ನ್ಯಾಯ ಒದಗಿಸಬೇಕೆಂದು ಒಕ್ಕೂಟ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಿನ್ನ ಡಿ. ಆರ್. ಮಂಜುನಾಥ್ ದಾಯತ್ಕರ್ ಮತ್ತು ಬಸವರಾಜ್ ನಾರಾಯಣ್ಯರ್ ಸೇರಿ ಮುಂತಾದವರು ಹಾಜರಿದ್ದರು.





