ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿರುವ 2023-24ನೇ ಸಾಲಿನ ಕೆಎಎಸ್ (ಗ್ರೂಪ್ ‘ಎ’ ಮತ್ತು ‘ಬಿ’) ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಬೃಹತ್ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ನಿನ್ನೆ ಆಯೋಗವು 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 15 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅಭ್ಯರ್ಥಿಗಳಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ.
ಒಂದೇ ಕೇಂದ್ರದ, ಅದೂ ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದಿದ್ದ 15 ಮಂದಿ ಅಭ್ಯರ್ಥಿಗಳು ಸಾಲಾಗಿ ಸೀರಿಯಲ್ ನಂಬರ್ ಆಧಾರದಲ್ಲಿ ಆಯ್ಕೆಯಾಗಿದ್ದಾರೆ. ಇದು ಕೇವಲ ಕಾಕತಾಳೀಯವಲ್ಲ, ಇದರ ಹಿಂದೆ ದೊಡ್ಡ ಜಾಲವೇ ಅಡಗಿದೆ ಎಂಬುದು ಅಭ್ಯರ್ಥಿಗಳ ದೂರಾಗಿದೆ. ಇದರ ಜೊತೆಗೆ ಒಂದೇ ಕುಟುಂಬದ ಇಬ್ಬರಿಂದ ಮೂವರು ಅಭ್ಯರ್ಥಿಗಳು ಕೂಡ ಸಂದರ್ಶನಕ್ಕೆ ಆಯ್ಕೆಯಾಗಿದ್ದು, ಪ್ರಭಾವಿಗಳ ಮಕ್ಕಳಿಗೆ ಹುದ್ದೆ ಕೊಡಿಸಲು ತೆರೆಯ ಹಿಂದೆ ಕುತಂತ್ರ ನಡೆದಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದಿದ್ದರೂ ಆಯ್ಕೆಯಾಗದ ಪ್ರಾಮಾಣಿಕ ಅಭ್ಯರ್ಥಿಗಳು, ಫಲಿತಾಂಶದಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ದೊಡ್ಡ ಮಟ್ಟದ ಕ್ಯಾಂಪೇನ್ ಆರಂಭಿಸಿದ್ದು, ಪ್ರತಿಯೊಂದು ಪೋಸ್ಟ್ ಹಂಚಿಕೊಂಡು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರ ನೇಮಕಾತಿಯ ಉನ್ನತ ಸಂಸ್ಥೆಯಾಗಿರುವ ಕೆಪಿಎಸ್‌ಸಿಯಲ್ಲಿ ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗುವ ವಾತಾವರಣವಿಲ್ಲ ಎಂದು ಕಿಡಿಕಾರುತ್ತಿರುವ ವಿದ್ಯಾರ್ಥಿಗಳು, ಕೂಡಲೇ ಈ ಅಕ್ರಮದ ಕುರಿತು ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಕೆಪಿಎಸ್‌ಸಿ ನಡೆಸಿದ ಈ ನೇಮಕಾತಿ ಪ್ರಕ್ರಿಯೆಯು ಮೊದಲಿನಿಂದಲೂ ಎಡವಟ್ಟುಗಳ ಸರಮಾಲೆಯನ್ನೇ ಹೊಂದಿದೆ. 2023-24ನೇ ಸಾಲಿನ ಒಟ್ಟು 384 ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಕ್ಕೆ 2024ರ ಫೆಬ್ರವರಿ 26ರಂದು ಆಯೋಗ ಅಧಿಸೂಚನೆ ಹೊರಡಿಸಿತ್ತು. 2024ರ ಆಗಸ್ಟ್‌ನಲ್ಲಿ ನಡೆದಿದ್ದ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಭಾರಿ ಅನುವಾದ ದೋಷಗಳು ಕಂಡುಬಂದು ವಿವಾದವಾದ ಬಳಿಕ ಸರ್ಕಾರ ಆ ಪರೀಕ್ಷೆಯನ್ನು ರದ್ದುಗೊಳಿಸಿತ್ತು.
ನಂತರ 2024ರ ಡಿಸೆಂಬರ್ 29ರಂದು ನಡೆದ ಮರು ಪರೀಕ್ಷೆಯಲ್ಲೂ ಆಯೋಗವು ಅನುವಾದದಲ್ಲಿ ಅದೇ ತಪ್ಪುಗಳನ್ನು ಪುನರಾವರ್ತಿಸಿತ್ತು. ತದನಂತರ 2025ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದೀಗ ಪ್ರಕಟವಾಗಿರುವ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲೂ ಪ್ರತಿಭಾನ್ವಿತರಿಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದ್ದು, ಕೆಪಿಎಸ್‌ಸಿ ಕಾರ್ಯವೈಖರಿಯ ಬಗ್ಗೆ ಮತ್ತೊಮ್ಮೆ ಅನುಮಾನದ ಕಾರ್ಮೋಡ ಕವಿದಿದೆ.





