ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಅವರದು ಭಿನ್ನ ಮಾರ್ಗ. ತಾಂತ್ರಿಕವಾಗಿ ಗುಣಮಟ್ಟದ, ರುಚಿಶುದ್ಧ ಮನರಂಜನೆಯ ಚಿತ್ರಗಳ ನಿರ್ದೇಶಕರಾಗಿ ಅರ್ಧ ಶತಕವನ್ನು ಪೂರೈಸಿ ಇನ್ನೂ ಕ್ರಿಯಾಶೀಲರಾಗಿರುವ ಅವರ ಚಿತ್ರಗಳು ಚಲನಚಿತ್ರಾಸಕ್ತರಿಗೆ ಅಧ್ಯಯನ ಯೋಗ್ಯ.
ಕನ್ನಡ ಚಲನಚಿತ್ರರಂಗದ ಚರಿತ್ರೆಯಲ್ಲಿ ಮಹಾತ್ಮ ಪಿಕ್ಚರ್ಸ್ ಮತ್ತು ನಿರ್ಮಾಪಕ ನಿರ್ದೇಶಕ ಡಿ. ಶಂಕರ್ ಸಿಂಗ್ ಅವರಿಗೆ ಮಹತ್ವದ ಸ್ಥಾನವಿದೆ. ಅರಸೀಕೆರೆಯಲ್ಲಿ ನಲವತ್ತರ ದಶಕದಲ್ಲಿ ಸಂಚಾರಿ ಚಿತ್ರಮಂದಿರಗಳ ನಿರ್ವಹಣೆ ಮೂಲಕ ಚಲನಚಿತ್ರರಂಗದ ಸಂಪರ್ಕಕ್ಕೆ ಬಂದ ಪಾಲುದಾರರಾದ ಶಂಕರ್ ಸಿಂಗ್ ಮತ್ತು ಬಿ. ವಿಠಲಾಚಾರ್ಯ ಅವರು ಸ್ಥಾಪಿಸಿದ ಮಹಾತ್ಮಾ ಪಿಕ್ಚರ್ಸ್ ಸಂಸ್ಥೆಯು ಚಿತ್ರನಿರ್ಮಾಣದಲ್ಲಿ ಸೊರಗಿದ್ದ ಆರಂಭಕಾಲದ ಕನ್ನಡ ಚಿತ್ರರಂಗ ಉಳಿಯಲು ನೆರವಾದರು. ಲಾಭ ನಷ್ಟಗಳನ್ನು ಲೆಕ್ಕಿಸದೇ 1947ರಿಂದ ಸುಮಾರು ಒಂದು ದಶಕಗಳ ಕಾಲ ವರ್ಷಕ್ಕೆ ಎರಡು- ಮೂರು ಕೆಲವೊಮ್ಮೆ ನಾಲ್ಕರವರೆಗೆ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹಿಡಿದಿದ್ದ ಬಾಲಗ್ರಹವನ್ನು ಬಿಡಿಸಿದರು. ಪಾಲುದಾರರಾದ ವಿಠಲಾಚಾರ್ಯ ಅವರು ದಶಕದ ನಂತರ ಸಂಸ್ಥೆಯಿಂದ ಹೊರಹೋದರೂ ಶಂಕರ್ ಸಿಂಗ್ ಅವರು ಮಹಾತ್ಮಾ ಪಿಕ್ಚರ್ಸ್ ಸಂಸ್ಥೆಯನ್ನು ಮುಂದುವರೆಸಿ ಚಿತ್ರರಂಗಕ್ಕೆ ಅಮೋಘವಾದ ಕೊಡುಗೆ ನೀಡಿದರು.
ಮಹಾತ್ಮಾ ಪಿಕ್ಚರ್ಸ್ ಕೇವಲ ಚಿತ್ರನಿರ್ಮಾಣ ಸಂಸ್ಥೆಯಾಗದೆ ಅದೊಂದು ಚಲನಚಿತ್ರ ವಿಶ್ವ ವಿದ್ಯಾಲಯವಾಗಿತ್ತು. ಚಿತ್ರ ನಿರ್ಮಾಣ ಚಟುವಟಿಕೆಗಳು ಮದರಾಸು ಕೇಂದ್ರಿತವಾಗಿದ್ದ ಕಾಲದಲ್ಲಿ ಮೈಸೂರಿನ ನವಜ್ಯೋತಿ ಸ್ಟುಡಿಯೋಸ್ ಮತ್ತು ಕರ್ನಾಟಕದ ಹೊರಾಂಗಣದ ಲೊಕೇಷನ್‌ಗಳಲ್ಲೇ ಚಿತ್ರ ನಿರ್ಮಿಸಿದ ಶಂಕರ್ ಸಿಂಗ್ ಅವರು ತಮ್ಮ ಸಂಸ್ಥೆಯ ಮೂಲಕ ನೂರಾರು ಕಲಾವಿದರು ಮತ್ತು ಸಂಗೀತ, ಸಾಹಿತ್ಯ, ಸಂಕಲನ, ಛಾಯಾಗ್ರಹಣ ಕ್ಷೇತ್ರದ ತಂತ್ರಜ್ಞರಿಗೆ ಅವಕಾಶ ಕಲ್ಪಿಸಿದರು. ಪೌರಾಣಿಕ, ಜಾನಪದ, ಐತಿಹಾಸಿಕ, ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಚಿತ್ರಗಳನ್ನು ನೀಡಿ ಮನರಂಜನೆ ಮತ್ತು ಮನೋವಿಕಾಸದ ಗಡಿಗಳನ್ನು ವಿಸ್ತರಿಸಿದರು. ಕನ್ನಡ ಚಲನ ಚಿತ್ರರಂಗದಲ್ಲಿ ಗಳಿಕೆಯಲ್ಲಿ ದಾಖಲೆ ಬರೆದ ನಾಗಕನ್ಯೆ, ಜಗನ್ಮೋಹಿನಿ ಚಿತ್ರಗಳನ್ನು; ವಿಚಾರ ಪ್ರಚೋದಕ ಭಕ್ತ ಚೇತ, ಪ್ರಭುಲಿಂಗಲೀಲೆ, ಮನರಂಜನೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಕುರಿತ ವರದಕ್ಷಿಣೆ, ಚಂಚಲ ಕುಮಾರಿ, ದಲ್ಲಾಳಿ, ಆಷಾಢಭೂತಿ, ಒಂದೇ ಕುಲ ಒಂದೇ ದೈವ ಮುಂತಾದ ಚಿತ್ರಗಳನ್ನು ನೀಡಿದರು. ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿಯೇ ಲಾಭ ಗಳಿಸುವಂತಹ ಕಡಿಮೆ ಬಜೆಟ್‌ನಲ್ಲಿಯೇ ಉತ್ತಮ ಚಿತ್ರಗಳನ್ನು ನೀಡಲು ಯತ್ನಿಸುತ್ತಿದ್ದ ಶಂಕರ್ ಸಿಂಗ್ ಅವರ ಮಾದರಿಗಳು ಇಂದಿಗೂ ಅನುಕರಣೀಯ.
ಡಿ. ಶಂಕರ ಸಿಂಗ್ ಅವರ ಮಹಾತ್ಮಾ ಪಿಕ್ಚರ್ಸ್ ಸಂಸ್ಥೆಯ ಆಶಯಗಳು ಮತ್ತು ಸಾಧನೆಗಳು ಅವರ ಕುಟುಂಬದ ಸದಸ್ಯರ ಮೂಲಕ ಸುಮಾರು ಎಂಟು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಮುಂದುವರೆದಿರುವುದು ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ದಾಖಲಾಗಬೇಕಾದ ಸಂಗತಿ. ಶಂಕರ್ ಸಿಂಗ್ ಮತ್ತು ಅವರ ತಾರಾಪತ್ನಿ ಪ್ರತಿಮಾ ದೇವಿ ಅವರಿಂದ ಆರಂಭವಾದ ಕುಟುಂಬದ ಚಲನಚಿತ್ರರಂಗದ ನಂಟು ಮೂರು ತಲೆಮಾರುಗಳವರೆಗೆ ಅಬಾಧಿತವಾಗಿ ಮುಂದುವರೆದಿದೆ. ಎರಡನೇ ತಲೆಮಾರಿನ ಕುಟುಂಬದ ಸದಸ್ಯರಲ್ಲಿ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಅವರದು ಭಿನ್ನ ಮಾರ್ಗ. ತಾಂತ್ರಿಕವಾಗಿ ಗುಣಮಟ್ಟದ ಚಿತ್ರಗಳ ಜೊತೆಗೆ ರುಚಿಶುದ್ಧ ಮನರಂಜನೆಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಅವರು ಭಾರತೀಯ ಚಿತ್ರರಂಗದ ಗಮನ ಸೆಳೆದರು. ನಿರ್ದೇಶಕರಾಗಿ ಅರ್ಧ ಶತಕವನ್ನು ಪೂರೈಸಿ ಇನ್ನೂ ಕ್ರಿಯಾಶೀಲರಾಗಿರುವ ಅವರ ಚಿತ್ರಗಳು ಚಲನಚಿತ್ರಾಸಕ್ತರಿಗೆ ಅಧ್ಯಯನ ಯೋಗ್ಯವೆನಿಸಿವೆ.

ಕನ್ನಡ ಚಲನಚಿತ್ರರಂಗದಲ್ಲಿ ’ಬಾಬು’ ಎಂದೇ ಪರಿಚಿತರಾಗಿರುವ ಶಂಕರ್‌ಸಿಂಗ್ ವೀರರಾಜೇಂದ್ರ ಸಿಂಗ್(ಎಸ್.ವಿ. ರಾಜೇಂದ್ರ ಸಿಂಗ್) ಅವರು ನಿರ್ಮಾಪಕ-ನಿರ್ದೇಶಕ ಡಿ. ಶಂಕರ್ ಸಿಂಗ್ ಮತ್ತು ಕಲಾವಿದೆ ಪ್ರತಿಮಾದೇವಿ ಅವರ ಸುಪುತ್ರರಾಗಿ ಜನಿಸಿದ್ದು 1952ರ ಅಕ್ಟೋಬರ್ 22ರಂದು, ಮೈಸೂರಿನಲ್ಲಿ. ನಿರ್ದೇಶಕರಾಗಿ ಐವತ್ತು ವರ್ಷಗಳ ವೃತ್ತಿ ಬದುಕನ್ನು ಪೂರೈಸಿರುವ ಅವರ ಚಲನಚಿತ್ರರಂಗದ ನಂಟು ಮತ್ತು ಕಾರ್ಯ ಇನ್ನೂ ದೀರ್ಘವಾದುದು. ಚಲನಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ತಂದೆ ಮತ್ತು ತಾಯಿಯ ಕಾರಣದಿಂದ ಚಲನಚಿತ್ರರಂಗದ ನಂಟು ಅವರಿಗೆ ಹುಟ್ಟಿದಂದೇ ಪ್ರಾಪ್ತವಾಯಿತು. ಬಳಿಕ ಎರಡು ವರ್ಷದ ಬಾಲ್ಯದಲ್ಲೇ ಮುಟ್ಟಿದ್ದೆಲ್ಲ ಚಿನ್ನ(1954) ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಚಲನಚಿತ್ರರಂಗದ ನಂಟು ಮತ್ತಷ್ಟು ಗಟ್ಟಿಯಾಯಿತು. ಮುಂದೆ ಗಂಧರ್ವ ಕನ್ಯೆ(1955), ಶಿವಶರಣೆ ನಂಬಿಯಕ್ಕ(1955) ಮತ್ತು ಭಕ್ತ ಚೇತ(1961) ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರಾಜ್‌ಕುಮಾರ್ ಅವರ ಜೊತೆ ಅಭಿನಯಿಸುವ ಮೂಲಕ ಅವರು ಕಲಾವಿದರಾಗಿ ಬೆಳೆಯುವ ಸೂಚನೆಯನ್ನು ನೀಡಿದರು. ನೋಡಲು ಸಾಂಪ್ರದಾಯಿಕ ನಾಯಕ ನಟನಿಗೆ ಅಗತ್ಯವಾದ ದೇಹ, ರೂಪ, ಅಭಿನಯ ಪ್ರತಿಭೆಯಿದ್ದು ಕಲಾವಿದನಾಗಿ ಬೆಳೆಯುವ ಅವಕಾಶವಿದ್ದರೂ, ಅವರ ಆಸಕ್ತಿ ಚಿತ್ರನಿರ್ಮಾಣದ ತಂತ್ರಜ್ಞಾನ ಮತ್ತು ನಿರ್ದೇಶನದತ್ತ ಒಲಿಯಿತು. ಹಾಗಾಗಿ ಕೈಗೆ ಸಿಕ್ಕ ಕ್ಯಾಮೆರಾ ಹಿಡಿದು ಅದು ಮೂಡಿಸುವ ಬಿಂಬದ ಸಾಧ್ಯತೆಗಳು ಮತ್ತು ಶಾಬ್ದಿಕ ಜಗತ್ತಿನ ಸ್ವರೂಪವನ್ನು ಅರಿಯಲು ಯತ್ನಿಸಿದರು. ಜಗತ್ತಿನ ಸಿನೆಮಾಗಳ ಬಗ್ಗೆ ಕುತೂಹಲ ಮತ್ತು ಅವುಗಳ ತಾಂತ್ರಿಕತೆಯ ಬಗ್ಗೆ ಆಸಕ್ತಿ ತಾಳಿದರು. ತಂದೆ ತಾಯಿಗೆ ಮಗ ಅನಿಶ್ಚಯ ಭವಿಷ್ಯದ ಸಿನೆಮಾರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ತಮ್ಮ ತಂದೆಯ ಇಚ್ಛೆಯಂತೆ ವೈದ್ಯವೃತ್ತಿ ಕಲಿಯಲು ಕೊಲ್ಕತ್ತಾಗೆ ಹೋಗಿ ವಿದ್ಯೆಯನ್ನು ಅರ್ಧಕ್ಕೆ ಬಿಟ್ಟು ಬಂದು ಉದ್ಯಮಿಯಾಗಿದ್ದ ಶಂಕರ್ ಸಿಂಗ್ ಅವರಿಗೆ ಈಗ ತಮ್ಮ ಮಗನಾದರೂ ವೈದ್ಯನಾಗಲಿ ಎಂಬ ಹಂಬಲ. ಆದರೆ ತಂದೆಯಂತೆಯೇ ನಿರ್ದೇಶಕನಾಗುವ ಕನಸು ಬಾಬು ಅವರದು. ಆ ನಿಟ್ಟಿನಲ್ಲಿ ಅವರು ನಿರ್ಮಾಣ ಮತ್ತು ನಿರ್ದೇಶನ ಚಟುವಟಿಕೆಗಳಲ್ಲಿ ತಂದೆಗೆ ಸಹಕರಿಸತೊಡಗಿದರು.
ಇದನ್ನು ಓದಿದ್ದೀರಾ?: ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ
ಸ್ವತಂತ್ರ ನಿರ್ದೇಶಕರಾಗುವ ಹಂಬಲ ಬಾಬು ಅವರಿಗೆ ನಾಗಕನ್ಯೆ(1975) ಚಿತ್ರದ ಮೂಲಕ ಕೈಗೂಡಿತ್ತು. 1949ರಲ್ಲಿ ಬಿಡುಗಡೆಯಾಗಿ ಮಹಾತ್ಮಾ ಪಿಕ್ಚರ್ಸ್ ಸಂಸ್ಥೆಗೆ ಆರ್ಥಿಕ ಬಲ ತಂದುಕೊಟ್ಟ ನಾಗಕನ್ನಿಕಾ ಚಿತ್ರದ ಮರು ರೂಪವೇ ಬಾಬು ಅವರ ಚೊಚ್ಚಲ ನಿರ್ದೇಶನದ ನಾಗಕನ್ಯೆ. ಮೂಲ ಚಿತ್ರಕ್ಕೆ ಸಂಭಾಷಣೆ ಬರೆದ ಹುಣಸೂರು ಕೃಷ್ಣಮೂರ್ತಿಯವರೇ ಹೊಸ ಆವೃತ್ತಿಗೂ ಸಾಹಿತ್ಯ ನೀಡಿದ್ದರು. ಪರಂಪರೆಯ ಜೊತೆ ವರ್ತಮಾನವು ಬೆಸೆದ ಘಟನೆ ಅದು. ಒಂದು ದೃಷ್ಟಿಯಲ್ಲಿ ಈ ಚಿತ್ರವು ಬಾಬು ಅವರಿಗೆ ಹಳೆಯ ಪರಂಪರೆಗೆ ವಿದಾಯ ಮತ್ತು ಹೊಸ ಪರಂಪರೆಗೆ ನಾಂದಿ ಹಾಡಲು ಒದಗಿಬಂದ ಅವಕಾಶದಂತೆ ಕಾಣುತ್ತದೆ. ಯುವಜೋಡಿ ವಿಷ್ಣುವರ್ಧನ್ ಮತ್ತು ಭವಾನಿ ಅವರ ತಾರಾಗಣವಿದ್ದ ಈ ಚಿತ್ರವು ಜಾನಪದ ಚಿತ್ರಗಳ ಮೂಲಕ ಭರಪೂರ ಮನರಂಜನೆಯನ್ನು ಒದಗಿಸಿ ಗೆದ್ದ ಮಹಾತ್ಮ ಪಿಕ್ಚರ್ಸ್‌ನ ಪರಂಪರೆಗೆ ಬಾಬು ಅವರು ಸಲ್ಲಿಸಿದ ಗೌರವದ ಕಾಣಿಕೆಯಾಗಿತ್ತು. ಸ್ವತಂತ್ರ ನಿರ್ದೇಶಕರಾಗಿ ಅನುಭವ ನೀಡಿದ ಆ ಚಿತ್ರದ ನಂತರ ಬಾಬು ಅವರು ಕಡಿಮೆ ಬಜೆಟ್‌ನ, ಐತಿಹಾಸಿಕ, ಪೌರಾಣಿಕ ಮತ್ತು ಚಾರಿತ್ರಿಕ ಪ್ರಕಾರಗಳನ್ನು ತೊರೆದು ಸಮಕಾಲೀನ ವಸ್ತುಗಳ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಅಪ್ಪ ಹಾಕಿದ ಆಲದ ಮರದ ನೆರಳಿನ ಆಶ್ರಯ ತೊರೆದು ಸ್ವತಂತ್ರ ಮಾರ್ಗವನ್ನು ಹಿಡಿದರು.
ನಾಗಕನ್ಯೆ(1975) ಚಿತ್ರದಿಂದ ಹಿಡಿದು ರೆಬೆಲ್(2015) ಚಿತ್ರದವರೆಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಮತ್ತು ಚಿತ್ರನಾಟಕ ಕರ್ತೃವಾಗಿ ಬಾಬು ಅವರು ತಮ್ಮ ವೃತ್ತಿ ಬದುಕಿನಲ್ಲಿ ವರ್ಷಕ್ಕೆ ಸರಾಸರಿ ಒಂದರಂತೆ 45 ಚಿತ್ರಗಳಲ್ಲಿ ಕೈಜೋಡಿಸಿದ್ದಾರೆ. ಅನ್ಯ ನಿರ್ಮಾಪಕರ ಸಂಸ್ಥೆಗಳಿಗೂ ಸೇರಿದಂತೆ 31 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಲಿ ಎರಡು ಚಿತ್ರಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡದ ಕತೆ/ಕಾದಂಬರಿಗಳನ್ನು ಆಧರಿಸಿದ 9 ಚಿತ್ರಗಳೂ ಸೇರಿವೆ. ಬಹುತೇಕ ಎಲ್ಲವೂ ಗಳಿಕೆಯಲ್ಲಿ ಯಶಸ್ಸು ಮತ್ತು ಪ್ರೇಕ್ಷಕರ/ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಮೂವತ್ತೆರಡು ಚಿತ್ರಗಳಿಗೆ ಚಿತ್ರನಾಟಕ ಬರೆದಿದ್ದಾರೆ. ನಿರ್ಮಾಪಕರಾಗಿ 27 ಚಿತ್ರಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾರೆ.
ನಿರ್ಮಾಣ, ನಿರ್ದೇಶನದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಚಿತ್ರಗಳಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಬಾಬು ಅವರು ಚಿತ್ರರಂಗದಲ್ಲಿ ಸಾಧಿಸಿದ ಯಶಸ್ಸಿಗೆ ಆಧಾರವೆನಿಸುವುದಿಲ್ಲ. ಅವರು ಚಿತ್ರರಂಗದ ಗಣ್ಯ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಗಳಿಸಿರುವುದಕ್ಕೆ ಅವರ ಚಿತ್ರಗಳ ವೈವಿಧ್ಯ ಮತ್ತು ನಿರ್ದೇಶನದಲ್ಲಿ ತೋರಿದ ದಕ್ಷತೆಯೇ ನಿಜವಾದ ಕಾರಣ. ನಾಗಕನ್ಯೆ ಚಿತ್ರ ನಿರ್ದೇಶಿಸಿದ ನಂತರ ಪೊರೆಬಿಟ್ಟ ಹಾವಿನಂತೆ ಹೊರಬಂದ ಬಾಬು ಅವರು ಚಿತ್ರದ ವಸ್ತುವಿನ ಹುಡುಕಾಟ, ಚಿತ್ರದಿಂದ ಚಿತ್ರಕ್ಕೆ ನಿರೂಪಣೆಯಲ್ಲಿ ಹೊಸತನ ತರಲು ಮಾಡುತ್ತಿದ್ದ ಸತತ ಪ್ರಯತ್ನ ಮತ್ತು ತಾಂತ್ರಿಕವಾಗಿ ಉನ್ನತ ಗುಣಮಟ್ಟ ಸಾಧಿಸಲು ಹಾಕುತ್ತಿದ್ದ ಶ್ರಮದಿಂದ ಅವರು ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕುತ್ತಿದ್ದರು. ಬಾಬು ಅವರ ಚಿತ್ರಗಳು ರುಚಿಶುದ್ಧ ಮನರಂಜನೆಗೆ ಮತ್ತು ಗುಣಮಟ್ಟದ ತಾಂತ್ರಿಕತೆಗೆ, ಅದ್ದೂರಿತನಕ್ಕೆ ಖಾತ್ರಿಪತ್ರಗಳಾಗಿದ್ದವು. ಕೆಲವು ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಯನ್ನು ತಣಿಸದಿದ್ದರೂ ಅವರ ನಿರ್ದೇಶನದ ಚಿತ್ರಗಳನ್ನು ನೋಡಲು ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದುದರಲ್ಲಿ ಸಂದೇಹವಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಇತರ ನಿರ್ದೇಶಕರಂತೆ ಬಾಬು ಅವರು ಯಶಸ್ವಿಯಾದ ತಮ್ಮ ಒಂದು ಚಿತ್ರದ ವಸ್ತು ಮತ್ತು ನಿರೂಪಣೆಯನ್ನು ಮತ್ತೆ ಮುಂದಿನ ಚಿತ್ರದಲ್ಲಿ ಮತ್ತೆ ಅಳವಡಿಸಲು ಹೋಗದಿದ್ದದ್ದು: ತಮ್ಮ ಪ್ರತೀ ಚಿತ್ರವೂ ಎಲ್ಲಾ ಬಗೆಯಲ್ಲೂ ಭಿನ್ನವಾಗಿರಬೇಕೆಂದು ಪ್ರಜ್ಞಾಪೂರ್ವಕವಾಗಿ ಭಿನ್ನ ಮಾದರಿಗಳನ್ನು ಹುಡುಕಲು ಮಾಡುತ್ತಿದ್ದ ಪ್ರಯತ್ನ. ಹಾಗಾಗಿ ’ಅಂತ’ ಚಿತ್ರದ ಯಶಸ್ಸಿನ ನಂತರ ಅಂಥದ್ದೇ ವಸ್ತುವಿನ ಚಿತ್ರ ನಿರ್ದೇಶಿಸಲು ನಿರ್ಮಾಪಕರು ಮಾಡಿದ ಒತ್ತಾಯಗಳಿಗೆ ಮಣಿಯಲಿಲ್ಲ. ’ಬಂಧನ’, ’ಮುಂಗಾರಿನ ಮಿಂಚು’ ಚಿತ್ರದ ಯಶಸ್ಸಿನ ನಂತರವೂ ಅವುಗಳ ನೆರಳಿನಿಂದಾಚೆಗೆ ಬಂದು ಹೊಸಬಗೆಯ ಚಿತ್ರಗಳ ಪ್ರಯೋಗಕ್ಕೆ ಸಿದ್ಧರಾಗಲು ಅವರ ಕ್ರಿಯಾಶೀಲತೆ ಸದಾ ಜಾಗೃತವಾಗಿತ್ತು.
ಕನ್ನಡ ಚಿತ್ರರಂಗವು ವೈವಿಧ್ಯಮಯ ಚಿತ್ರಗಳ ನಿರ್ಮಾಣ ಮತ್ತು ಭಿನ್ನ ಭಿನ್ನ ಹಿನ್ನೆಲೆಯ ನಿರ್ದೇಶಕರು ಆಗಮಿಸಿ ಚಿತ್ರಪ್ರಯೋಗಗಳನ್ನು ಆರಂಭಿಸಿದ ಎಪ್ಪತ್ತರ ಕಾಲಘಟ್ಟದಲ್ಲಿಯೇ ಸ್ವತಂತ್ರವಾಗಿ ವೃತ್ತಿ ಬದುಕನ್ನು ಆರಂಭಿಸಿದ ಬಾಬು ಅವರು ಇತರ ನಿರ್ದೇಶಕರಿಂದ ಹೇಗೆ ಭಿನ್ನವಾಗಿ ಉಳಿದರು ಎಂಬುದನ್ನು ಅರಿತಾಗ ಅವರ ವಿಶಿಷ್ಟತೆ ಕಾಣುತ್ತದೆ.

‘ನಾಗಕನ್ಯೆ’ ಚಿತ್ರವನ್ನು ಹೊರತುಪಡಿಸಿ ಅವರು ನಿರ್ದೇಶಿಸಿದ ಎಲ್ಲ ಚಿತ್ರಗಳು ಸಾಮಾಜಿಕ ವಸ್ತಗಳನ್ನೇ ಆಧರಿಸಿದ್ದರೂ ಅವುಗಳನ್ನು ಮಕ್ಕಳ ಚಿತ್ರಗಳು, ನಾಯಕ ಪ್ರಧಾನ ಸಾಹಸ-ಹಾಸ್ಯಗಳ ರೊಮ್ಯಾಂಟಿಕ್ ಚಿತ್ರಗಳು(ಆಕ್ಷನ್, ಅಡ್ವೆಂಚರ್ ರೋಮ್‌ಕಾಮ್), ಮನುಷ್ಯ ಸಂಬಂಧಗಳ ಭಾವನಾತ್ಮಕ ಸಂಘರ್ಷ ಮತ್ತು ಸಾಮಾಜಿಕ ವಸ್ತು ಕುರಿತ ಗಂಭೀರ(ಸೋಷಿಯಲ್, ಎಮೋಷನಲ್ ಡ್ರಾಮಾ) ಚಿತ್ರಗಳು ಮತ್ತು ಹಾಸ್ಯ ಸರಣಿಯ(ಕಾಮೆಡಿ ಸೀರೀಸ್) ಚಿತ್ರಗಳೆಂದು ಸ್ಥೂಲವಾಗಿ ವರ್ಗೀಕರಿಸಬಹುದು. ಹಲವು ಪ್ರಕರಣಗಳಲ್ಲಿ ಒಂದೇ ಚಿತ್ರವು ಎರಡು-ಮೂರು ಪ್ರಕಾರಗಳಲ್ಲಿಯೂ ಕಾಣಬಹುದು. ಆದರೆ ಪ್ರಕಾರ ಯಾವುದೇ ಇರಲಿ ಪ್ರತಿಯೊಂದು ಚಿತ್ರದಲ್ಲೂ ನಿರ್ದೇಶಕ ಬಾಬು ಅವರ ವಿಶಿಷ್ಟ ಚಹರೆಗಳನ್ನು ಗುರುತಿಸುವಷ್ಟು ಅವು ನಿರ್ದೇಶಕ- ವೈಶಿಷ್ಟ್ಯವನ್ನು ವ್ಯಕ್ತಪಡಿಸುತ್ತವೆ. ಅದು ನಿರೂಪಣೆಯಲ್ಲಿ, ತಾಂತ್ರಿಕ ಅಚ್ಚುಕಟ್ಟುತನದಲ್ಲಿ, ಕಲಾವಿದರ ಅಭಿನಯ ಸಾಮರ್ಥ್ಯವನ್ನು ಹೊರಗೆಳೆಯುವುದರಲ್ಲಿ ವ್ಯಕ್ತವಾಗುತ್ತದೆ. ಚಿತ್ರದ ಪ್ರತಿ ದೃಶ್ಯದಲ್ಲಿ ನಿರ್ದೇಶಕರ ವಿಶಿಷ್ಟ ಗುರುತಿನ ಛಾಪು ಎದ್ದು ಕಾಣುತ್ತದೆ. ಬಹುತೇಕ ಚಿತ್ರಗಳು ನಾಯಕ ಪ್ರಧಾನ ಚಿತ್ರಗಳಂತೆ ಕಂಡರೂ ಮಹಿಳಾ ಪಾತ್ರಗಳು ನಾಯಕ ಪಾತ್ರಗಳ ನೆರಳಾಗಿ ಸೊರಗದೆ ತಮ್ಮ ಸ್ವತಂತ್ರ ನಿಲುವುಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದದ್ದು ಬಾಬು ಅವರ ಚಿತ್ರಗಳ ವಿಶೇಷ. ಅವರ ಸಾಹಸ ಪ್ರಧಾನ ಚಿತ್ರಗಳಲ್ಲಿ ಪ್ರೇಕ್ಷಕರಲ್ಲಿ ರೋಮಾಂಚನ ತರುವ ಸಾಹಸದೃಶ್ಯಗಳ ಮೆರವಣಿಗೆಯ ಹೆಣಿಗೆ ಇರುತ್ತಿತ್ತು. ಸಾಮಾಜಿಕ ಕೌಟುಂಬಿಕ ಸಂಘರ್ಷದ ಚಿತ್ರಗಳಲ್ಲಿಯೂ ಸಹ ಅವರು ತಮ್ಮ ಸಮಕಾಲೀನ ನಿರ್ದೇಶಕರಿಗಿಂತ ಭಿನ್ನ ಹಾದಿ ಹಿಡಿದಿದ್ದರು. ವಾಸ್ತವದ ಸಾಮಾಜಿಕ ಪರಿಸರವನ್ನು ಸೃಷ್ಟಿಸುತ್ತಿದ್ದ ಅವರು ನಿರೂಪಣೆಯನ್ನು ವ್ಯಕ್ತಿಗಳ ಕತೆಗೆ ಕೇಂದ್ರೀಕರಿಸಿ ಗಾಢವಾದ ಪರಿಣಾಮ ಮೂಡಿಸುತ್ತಿದ್ದರು. ಉಪದೇಶದ ಅಂಶಗಳನ್ನು ಕೈಬಿಟ್ಟು, ಪಾತ್ರಗಳು ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವ ನಿರೂಪಣೆಯನ್ನು ಅಂಗೀಕರಿಸಿದ್ದರು. ಸಾಮಾಜಿಕ ವಸ್ತುಗಳ ಸಿನೆಮಾ ವೀಕ್ಷಣೆಯೊಂದು ಗಾಢ ಅನುಭವವಾಗಬೇಕೆಂಬ ಹಂಬಲದಿಂದ ಸ್ಪಷ್ಟವಾಗಿ ಕಡೆದ ಪಾತ್ರಗಳು ಮತ್ತು ಕುತೂಹಲ ಮೂಡಿಸುವ ಸನ್ನಿವೇಶಗಳ ಮೂಲಕ ಕಟ್ಟಲು ಯತ್ನಿಸುತ್ತಿದ್ದರು. ಸಂಗೀತ, ಸಂಕಲನ ಮತ್ತು ದೃಶ್ಯಗಳ ನಡುವೆ ಒಂದು ಸಮುಚಿತ ಬಂಧವನ್ನು ಅವರು ಚಿತ್ರಗಳಲ್ಲಿ ಕಟ್ಟುತ್ತಿದ್ದರು. ವಾಣಿಜ್ಯ ಪಂಥದ ಚಿತ್ರಗಳಾದರೂ ಸಿದ್ಧ ಮಾದರಿಯನ್ನು ನಿರಾಕರಿಸಿ ಭಿನ್ನಪಥವನ್ನು ತುಳಿಯಲು ಮಾಡುತ್ತಿದ್ದ ಯತ್ನದಿಂದಲೇ ಅವರ ಹಲವು ಚಿತ್ರಗಳ ಅಂತ್ಯವು ಪ್ರೇಕ್ಷಕನ ಊಹೆಗಳನ್ನು ಸುಳ್ಳಾಗಿಸುತ್ತಿತ್ತು. (ಉದಾ. ಅಂತ, ಬಂಧನ, ಮುಂಗಾರಿನ ಮಿಂಚು ಇತ್ಯಾದಿ).
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ದೃಶ್ಯಗಳ ಅದ್ದೂರಿತನದಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದ ಬಾಬು ಅವರು ವಾಣಿಜ್ಯ ಚಿತ್ರಗಳ ಭಾಗವಾದ ಸುಮಧುರ ಸಂಗೀತ/ಹಾಡುಗಳಿಗೂ ಆದ್ಯತೆ ನೀಡುತ್ತಿದ್ದರು. ಅವರ ಚಿತ್ರಗಳ ಅನೇಕ ಹಾಡುಗಳು ಸಾರ್ವಕಾಲಿಕ ಜನಪ್ರಿಯತೆ ಪಡೆದಿರುವುದೇ ಅವರು ಇದಕ್ಕೆ ಸಾಕ್ಷಿ. ಕೆಲವು ಕಲಾವಿದರ ಸಿದ್ಧ ಬಿಂಬಗಳನ್ನು ಒಡೆದು ವಿಶಿಷ್ಟವಾದ ಪಾತ್ರಗಳನ್ನು ನೀಡಿ ಅವರ ವೃತ್ತಿಬದುಕು ಉಜ್ವಲಗೊಳ್ಳಲು ಬಾಬು ಅವರ ಚಿತ್ರಗಳು ನೆರವಿಗೆ ಬಂದದ್ದು ಈಗ ಇತಿಹಾಸ. (ಉದಾ: ಅಂಬರೀಷ್ ಅಂತ, ವಿಷ್ಣುವರ್ಧನ್ ನಾಗರಹೊಳೆ, ಬಂಧನ, ಮತ್ತು ಲೋಕೇಶ್ ಮುಂಗಾರಿನ ಮಿಂಚು.) ಕನ್ನಡ ಚಿತ್ರರಂಗಕ್ಕೆ ಅಪರೂಪವೆನಿಸಿದ ಯುದ್ಧ, ವೇಶ್ಯಾ ಸಮಸ್ಯೆ ಮತ್ತು ವ್ಯಕ್ತಿಯ ಅನನ್ಯತೆಗೆ ಸಂಬಂಧಿಸಿದ ವಸ್ತುಗಳನ್ನು ಆಧರಿಸಿದ ಚಿತ್ರಗಳನ್ನು ಮತ್ತು ಒಂದೇ ವಸ್ತುವಿನ ಚಿತ್ರಸರಣಿಯನ್ನು ತರುವ ಸಾಹಸಗಳನ್ನೂ ಅವರು ಮಾಡಿ ಯಶಸ್ವಿಯಾದರು. ಹೆಚ್ಚಿನ ಪ್ರೇಕ್ಷಕ ವರ್ಗವನ್ನು ತಲುಪಲು ಚಿತ್ರರಂಗದ ವಾಣಿಜ್ಯ ಉದ್ದೇಶ ಮತ್ತು ಶಕ್ತ ಸಾಮಾಜಿಕ ಮೌಲ್ಯಗಳ ನಡುವೆ ಸಮತೋಲನ ಸಾಧಿಸಲು ಅವರು ನವೀನ ನಿರೂಪಣಾ ತಂತ್ರಗಳನ್ನು, ಮತ್ತು ಕತೆ ಹೇಳುವ ವಿಧಾನಗಳಲ್ಲಿ ಪರಿವರ್ತನೆಗಳನ್ನು ತಂದು ಸಾಮಾಜಿಕ ಸಮಸ್ಯೆಗಳನ್ನು ಕೆಲವೊಮ್ಮೆ ಸೂಕ್ಷ್ಮವಾಗಿ, ಹಲವು ಬಾರಿ ಗಟ್ಟಿದನಿಯಲ್ಲಿ ದಾಟಿಸುವಲ್ಲಿ ಯಾಶಸ್ವಿಯಾದರು.
ರಾಜೇಂದ್ರ ಸಿಂಗ್ ಅವರ ಕೆಲವು ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಮೂಲಕ ಅವರ ಚಿತ್ರ ಪಯಣ ಮತ್ತು ಚಿತ್ರಗಳ ವಿಶಿಷ್ಟತೆಯನ್ನು ಅರಿಯಲು ಸಹಕಾರಿಯಾಗಬಹುದೆಂಬ ದೃಷ್ಟಿಯಂದ ಅವರ ಕೆಲವು ಮುಖ್ಯವಾದ ಚಿತ್ರಗಳನ್ನು ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಳ್ಳಲಾಗಿದೆ.
‘ನಾಗಕನ್ಯೆ’ ಚಿತ್ರದ ನಂತರ ಬಾಬು ಅವರು ತಮ್ಮ ಎರಡನೆಯ ಪ್ರಯತ್ನವಾಗಿ ಆರಿಸಿಕೊಂಡ ಚಿತ್ರವು ಮಕ್ಕಳ ಸಾಹಸ ಕಥೆಯನ್ನು ಆಧರಿಸಿದ ’ನಾಗರಹೊಳೆ’(1977). ಕನ್ನಡದಲ್ಲಿ ಆವರೆವಿಗೆ ಮಕ್ಕಳೇ ಪ್ರಧಾನವಾದ ಚಿತ್ರಗಳು ಬೆರಳೆಣಿಕೆಯಷ್ಟೂ ಇರಲಿಲ್ಲ. ಪಂತುಲು ಅವರ ಫ್ಯಾಂಟಸಿ ಚಿತ್ರ ’ಮಕ್ಕಳ ರಾಜ್ಯ’(1957), ಮಕ್ಕಳು ಸಂಸಾರದ ಹೊಣೆಯನ್ನು ಹೊರಲು ನಿರ್ಧರಿಸುವ ಆರ್ ನಾಗೇಂದ್ರ ರಾವ್ ಅವರ ’ನಮ್ಮ ಮಕ್ಕಳು’(1969), ವಿಜಯಾ ಸತ್ಯನ್ ಅವರ ಬಾಲಕಿಯ ಸಾಹಸವಿದ್ದ ’ಭಲೇ ರಾಣಿ’(1971) ಚಿತ್ರಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಮಕ್ಕಳ ಚಿತ್ರಗಳು ಅಪರೂಪವಾಗಿದ್ದವು. ಆದರೆ ಈ ಕೊರತೆಯನ್ನು ನೀಗಿಸಲೋ ಎಂಬಂತೆ ಪ್ರೇಕ್ಷಕರ ಮನಸೂರೆಗೊಂಡ ನಾಗರಹೊಳೆ ಚಿತ್ರ ಬಿಡುಗಡೆಯಾಗಿ ಹಣಗಳಿಕೆಯಲ್ಲಿ ಯಶಸ್ಸು ಸಾಧಿಸುವ ಜೊತೆಗೆ ಬಾಬು ಅವರ ವೃತ್ತಿ ಬದುಕಿಗೆ ದೊಡ್ಡ ಅಡಿಪಾಯ ಹಾಕಿತು. ಅಲ್ಲದೆ ವಿಷ್ಣುವರ್ಧನ್, ಅಂಬರೀಷ್, ಸುಂದರ ಕೃಷ್ಣ ಅರಸು ಅವರ ಅಭಿನಯ ಸಾಮರ್ಥ್ಯಕ್ಕೂ ಕನ್ನಡಿ ಹಿಡಿದ ಚಿತ್ರವಾಗಿತ್ತು. ಮಕ್ಕಳ ಸಾಹಸ ಚಿತ್ರಕ್ಕೆ ಮಾದರಿಯಂತಿದ್ದ ಈ ಚಿತ್ರದಲ್ಲಿ ಮೈ ನವಿರೇಳಿಸುವ ಸಾಹಸ, ರಂಜನೆ ಮತ್ತು ನಾಗರಹೊಳೆಯ ಸುಂದರ ಹೊರಾಂಗಣದ ದೃಶ್ಯಗಳು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದವು. ನಾಗರಹೊಳೆಯಲ್ಲಿ ಹಾವಿನಂತೆ ಹರಿದಾಡಿದ ಕ್ಯಾಮೆರಾ ನಿಸರ್ಗದ ಸೊಬಗನ್ನು ಸೆರೆ ಹಿಡಿಯುವುದರ ಜೊತೆಗೆ ತಾಂತ್ರಿಕ ಸಾಧ್ಯತೆಗಳಿಗೆ ಮಿತಿಯಿದ್ದ ಆ ಕಾಲದಲ್ಲಿ ಛಾಯಾಗ್ರಾಹಕ ಪಿ.ಎಸ್. ಪ್ರಕಾಶ್ ಅವರು ವಿಶಿಷ್ಟ ಕೋನಗಳಿಂದ ಚಿತ್ರಿಸಿದ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ಶಕ್ತವಾಗಿದ್ದವು. ಆ ಕಾಲದ ಅತ್ಯಂತ ಎತ್ತರದ ರೈಲ್ವೇ ಬಿಡ್ಜ್ ಮೇಲೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಸವಾಲಾಗಿ ಸ್ವೀಕರಿಸಿ ಚಿತ್ರಿಸಿದ ಬಾಬು ಅವರು ಅದಕ್ಕಾಗಿ ತಮ್ಮೆಲ್ಲ ಕೃತುಶಕ್ತಿಯನ್ನು ಧಾರೆ ಎರೆದಿದ್ದರು. ವಾಣಿಜ್ಯದ ದೃಷ್ಟಿಯಿಂದ ಚಿತ್ರದಲ್ಲಿ ಯುವ ಜೋಡಿಯ ಪ್ರಣಯ, ವಿರಹದಂಥ ಸಬ್ ಪ್ಲಾಟ್ ಒಂದನ್ನು ಮಕ್ಕಳ ಚಿತ್ರದಲ್ಲಿ ಅಳವಡಿಸಿದ್ದರೂ ಅದೊಂದು ದೊಡ್ಡ ತೊಡುಕೆನಿಸಲಿಲ್ಲ. ವಿವಿಧ ಪ್ರಕಾರಗಳನ್ನು ಅನ್ವೇಷಿಸುವ ಬಾಬು ಅವರ ಪ್ರಯೋಗಶೀಲತೆಗೆ ಮತ್ತು ಅವರ ಸಿನೆಮಾ ತಂತ್ರಜ್ಞಾನವನ್ನು ವಿಸ್ತರಿಸುವ ಹಂಬಲಕ್ಕೆ ಆರಂಭದಲ್ಲಿಯೇ ನಾಗರಹೊಳೆ ಸಾಕ್ಷ್ಯ ಒದಗಿಸಿತು. ಹಲವು ಭಾಷೆಗಳಿಗೆ ಡಬ್ ಆದ ‘ನಾಗರಹೊಳೆ ‘ ಮಕ್ಕಳ ಸಾಹಸದ ಚಿತ್ರಕ್ಕೊಂದು ಮಾದರಿಯೆಂದು ಪರಿಗಣಿತವಾಯಿತು.
ಬಾಬು ಅವರು ಮತ್ತೆ ಮೂರು ಚಿತ್ರಗಳ ನಂತರ ’ಸಿಂಹದ ಮರಿ ಸೈನ್ಯ’(1981) ಮೂಲಕ ಮಕ್ಕಳ ಸಾಹಸದ ಚಿತ್ರಕ್ಕೆ ಮರಳಿ ಮತ್ತೊಂದು ದಾಖಲೆ ಸ್ಥಾಪಿಸಿದರು. ಜೀವನೋತ್ಸಾಹದಿಂದ ಪುಟಿಯುವ ವಿವಿಧ ವಯೋಮಾನದ ಮಕ್ಕಳ ತಂಡವೊಂದು ಅಪಹರಿಸಿದ ಮಕ್ಕಳ ರಕ್ಷಣೆಗೆ ಧಾವಿಸುವ ಕಥಾವಸ್ತುವಿದ್ದ ಈ ಚಿತ್ರವು ಬಿಗಿಯಾದ ನಿರೂಪಣೆ, ಹೊರಾಂಗಣ ದೃಶ್ಯಗಳ ಸೊಬಗು ಮತ್ತು ಮಕ್ಕಳ ಮೈನವಿರೇಳಿಸುವ ಸಾಹಸಗಳಿಂದ ಪ್ರೇಕ್ಷಕರ ಮನ ಗೆದ್ದಿತು. ಸಾಹಸ ದೃಶ್ಯಗಳಲ್ಲಿ ಎಂತೋ ಭಾವನಾತ್ಮಕ ಸನ್ನಿವೇಶಗಳನ್ನೂ ಆಪ್ಯಾಯಮಾನವಾಗಿ ನಿರೂಪಿಸಿದ ಬಾಬು ಅವರ ಈ ಚಿತ್ರವು ಮಾಮೂಲಿ ಸಾಹಸಗಳ ಚಿತ್ರಗಳಿಗಿಂತ ಭಿನ್ನವಾಗಿತ್ತು. ಮಕ್ಕಳ ದೃಷ್ಟಿಕೋನದಿಂದಲೇ ಚಿತ್ರವನ್ನು ನಿರೂಪಿಸಿದ್ದ ಈ ಚಿತ್ರವು ಅಂಥ ಅಸಾಂಪ್ರದಾಯಕ ನಿರೂಪಣೆಯೂ ಗೆಲ್ಲಬಹುದೆಂಬುದಕ್ಕೆ ಪುರಾವೆ ಒದಗಿಸಿತು. ಭವಿಷ್ಯದಲ್ಲಿ ’ಆಕ್ಷನ್ ಕಿಂಗ್’ ಬಿರುದನ್ನು ಪಡೆದ ದಕ್ಷಿಣ ಭಾರತದ ಕಲಾವಿದ ಅರ್ಜುನ್ ಸರ್ಜಾ ಅವರ ವೃತ್ತಿಬದುಕಿಗೆ ಭದ್ರ ಅಡಿಪಾಯ ಹಾಕಿದ ಈ ಚಿತ್ರವು ಸಮರಕಲೆಯಲ್ಲಿ ಅವರಿಗಿದ್ದ ಎಲ್ಲ ಕೌಶಲ್ಯಗಳನ್ನು ಬಳಸಿಕೊಂಡಿತ್ತು. ಹಾಗಾಗಿ ನಂಬುವಂತಿದ್ದ ಮಕ್ಕಳ ಸಾಹಸಕ್ಕೊಂದು ಅಥೆಂಟಿಸಿಟಿ ದಕ್ಕಿತು. ಅವರ ರೋಮಾಂಚಿಕ ಸಾಹಸಗಳು ಚಿತ್ರದ ಪ್ರಮುಖ ಅಂಶ. ಪ್ರಾದೇಶಿಕ ಭಾಷೆಯಲ್ಲಿ ತಯಾರಾದ ’ಸಿಂಹದ ಮರಿ ಸೈನ್ಯ’ವು ತಾಂತ್ರಿಕವಾಗಿ ಮಹತ್ವಾಕಾಂಕ್ಷೆಯ ಚಿತ್ರ. ಅಬೇಧ್ಯ ಅರಣ್ಯದ ಪರಿಸರದಲ್ಲಿ ಚಿತ್ರೀಕರಿಸಿದ ಕೆಲವು ಕ್ಲಿಷ್ಟಕರವಾದ ದೃಶ್ಯಗಳು ಪ್ರೇಕ್ಷಕರ ಮನಸೂರೆಗೊಂಡವು.
ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಮಕ್ಕಳ ಸಾಹಸದ ಹಿನ್ನೆಲೆಯಿದ್ದರೂ ’ಸಿಂಹದ ಮರಿ ಸೈನ್ಯ’ ಚಿತ್ರವು ಅದರ ಸನ್ನಿವೇಶಗಳನ್ನು ಮತ್ತು ಅಂತ್ಯವನ್ನು ಸುಲಭವಾಗಿ ಊಹಿಸಬಹುದಾದ ನೇರ ಮತ್ತು ತೀರಾ ಸಾಧಾರಣವಾದ ಕಥಾ ಹಂದರವನ್ನು ಆಧರಿಸಿತ್ತು. ದುಷ್ಟರ ವಿರುದ್ಧ ಸಜ್ಜನರ ವಿಜಯದ ಸವಕಲೆನಿಸಿದ ಕಥೆ. ಮಕ್ಕಳ ಅಪಹರಣಕಾರನ ವಿರುದ್ಧ ತಿರುಗಿಬೀಳುವ ಮಕ್ಕಳ ತಂಡದ ಕಥೆಯಲ್ಲಿ ಕುತೂಹಲಕಾರಿ ತಿರುವುಗಳು ಹೆಚ್ಚಿರಲಿಲ್ಲ. ಅಪಹರಣಕಾರನ ಪತ್ರದಲ್ಲಿ ಪ್ರಖ್ಯಾತ ನಟ ಅಮರೀಶ್ ಪುರಿ ಅವರು ಇದ್ದರೂ ಆ ಕಾಲದ ಎಲ್ಲ ಚಿತ್ರಗಳಂತೆ ದುಷ್ಟತನಕ್ಕೆ ಇದ್ದದ್ದು ಒಂದೇ ಆಯಾಮ. ಈ ಮಿತಿಗಳ ನಡುವೆ ಇದು ಬಾಬು ಅವರ ಇತರ ಪ್ರಸಿದ್ಧ ಕೃತಿಗಳ ಮೇಲ್ಮಟ್ಟವನ್ನು ತಲುಪದಿದ್ದರೂ ಮಕ್ಕಳ ಸಾಹಸದ ಶುದ್ಧ ಮನರಂಜನೆಗೆ ಮೋಸವಿರಲಿಲ್ಲ. ಹಾಗಾಗಿ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ’ಸಿಂಹದ ಮರಿ ಸೈನ್ಯ’ ಚಿತ್ರಕ್ಕೂ ವಿಶಿಷ್ಟ ಸ್ಥಾನವಿದೆ. ಇದು ಪ್ಯಾರಿಸ್ ಮತ್ತು ಮಾಸ್ಕೋದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುದು ಮಾತ್ರವಲ್ಲ. ಹಿಂದೀ ಭಾಷೆಗೆ ಡಬ್ ಆಗಿ ವ್ಯಾಪಕ ಪ್ರದರ್ಶನ ಕಂಡಿತು. ಈ ಚಿತ್ರವನ್ನು ವೀಕ್ಷಿಸಿ ಅನೇಕ ಬಾಲನಟರು ಸಮರ ಕಲೆಯಲ್ಲಿ ಮತ್ತು ಶರೀರ ಸಂವರ್ಧನೆಯ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಹವ್ಯಾಸ ಬೆಳೆಯಿತು. ಮತ್ತು ಅಂಥ ಕಲಾವಿದರು ಮುಂದೆ ಯಶಸ್ವಿಯಾಗಿ ಬೇರೂರಲು ನೆರವಾಯಿತು. ಆ ದೃಷ್ಟಿಯಿಂದ ’ಸಿಂಹದ ಮರಿ ಸೈನ್ಯ’ವು ಚಲನಚಿತ್ರರಂಗದ ಮೇಲೆ ಬೀರಿದ ಸಾಂಸ್ಕೃತಿಕ ಪರಿಣಾಮ ಗಮನಾರ್ಹ.

ನಾಗರಹೊಳೆ ಚಿತ್ರದ ಯಶಸ್ಸಿನ ನಂತರ ರಾಜೇಂದ್ರ ಸಿಂಗ್ ಅವರು ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಮುಖ್ಯವಾಹಿನಿಯ ಚಿತ್ರಗಳಾಗಿ ಜನಪ್ರಿಯವಾಗಿದ್ದ ’ಸಾಹಸ, ರೊಮಾನ್ಸ್, ಸೇಡು’ ಸೂತ್ರದ ಚಿತ್ರಗಳನ್ನು ತೆಗೆಯಲು ಸಿದ್ಧರಾದರು. ಈ ಸೂತ್ರದ ಹಿನ್ನೆಲೆಯಲ್ಲಿ ತಯಾರಾದ ಚಿತ್ರಗಳು, 1978ರಲ್ಲಿ ತೆರೆಗೆ ಬಂದ ’ಕಿಲಾಡಿ ಜೋಡಿ’ ಮತ್ತು ’ಭಾರಿ ಭರ್ಜರಿ ಬೇಟೆ’ ಚಿತ್ರಗಳು. ’ನಾನಿನ್ನ ಮರೆಯಲಾರೆ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದ್ದ ತಾರೆ ಲಕ್ಷ್ಮಿ(ದ್ವಿಪಾತ್ರ) ಮತ್ತು ಆಗತಾನೆ ನಟರಾಗಿ ಬೇರೂರಿ ತಮ್ಮದೇ ಆದ ಪ್ರತ್ಯೇಕ ಸ್ಥಾನ ಗಳಿಸಿಕೊಳ್ಳುವ ಹಾದಿಯಲ್ಲಿದ್ದ ವಿಷ್ಣುವರ್ಧನ್ ಮತ್ತು ಶ್ರೀನಾಥ್ ಅವರ ಜೊತೆಗೆ ವಜ್ರಮುನಿ, ಎಂ.ಪಿ. ಶಂಕರ್, ಕೆ.ಎಸ್. ಅಶ್ವಥ್, ಲೀಲಾವತಿ ಅವರಿದ್ದ ಬಹುತಾರಾಗಣದ ಚಿತ್ರವು ಭರ್ಜರಿ ಪ್ರಚಾರದೊಂದಿಗೆ ಆರಂಭವಾಯಿತು. ಸಮಕಾಲೀನ ಚಿತ್ರರಂಗದ ಎಲ್ಲ ಯಶಸ್ಸಿನ ಸಂಗತಿಗಳನ್ನು ಅಳವಡಿಸುವ ಉಮೇದು ಇದ್ದದ್ದು ಈ ಚಿತ್ರಗಳಲ್ಲಿ ಎದ್ದು ಕಾಣುತ್ತಿತ್ತು. ಅದು ಬಹುತಾರಾಗಣದ ಚಿತ್ರಗಳು ಯಶಸ್ವಿಯಾಗುತ್ತಿದ್ದ ಕಾಲ. ಬ್ರೂಸ್ ಲೀ ಅವರಿಂದಾಗಿ ಸಮರಕಲೆ ಕರಾಟೆ ಪರಿಚಿತವಾಗಿತ್ತು. ಹಾಗಾಗಿ, ಕರಾಟೆಯನ್ನು ಅನುಕರಿಸಿದ ಆಕ್ಷನ್ ದೃಶ್ಯಗಳನ್ನೊಳಗೊಂಡ, ಬಹುತಾರಾಗಣದ ಚಿತ್ರವಾಗಿ ಗಮನ ಸೆಳೆದಿತ್ತು. ಅತಿಥಿ ಪಾತ್ರದಲ್ಲಿ ಅಂಬರೀಷ್ ಹಾಡುವ ಕರಾಟೆ ಹಾಡೂ ಸೇರಿದಂತೆ ರಾಜನ್-ನಾಗೇಂದ್ರ ಅವರು ಸಂಯೋಜಿಸಿದ ಹಲವು ಹಾಡುಗಳು (ಕೃಷ್ಣಸ್ವಾಮಿ, ರಾಮಸ್ವಾಮಿ.., ನಾಚಿಕೆ ಇನ್ನೇಕೆ ಅಂಜಿಕೆ…, ಕನಸಿನಲಿ ನೋಡಿದೆನು… ಮತ್ತು ಶೀರ್ಷಿಕೆ ಗೀತೆ ಕಿಲಾಡಿ ಜೋಡೀ…) ಚಿತ್ರದ ಬಿಡುಗಡೆಗೂ ಮೊದಲೇ ಜನಪ್ರಿಯವಾಗಿ ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದವು.
ಆದರೆ ಬಿಡುಗಡೆಯಾದ ನಂತರ ಸುಮಧುರ ಸಂಗೀತ, ತಾಂತ್ರಿಕ ಶ್ರೀಮಂತಿಕೆ, ಅದ್ದೂರಿ ನಿರ್ಮಾಣದ ಹೊರತಾಗಿಯೂ ಚಿತ್ರವು ನಿರೀಕ್ಷಿತ ಪ್ರಮಾಣದ ಯಶಸ್ಸು ಕಾಣಲಿಲ್ಲ. ಕಿಲಾಡಿ ಜೋಡಿಯ ಕಥೆಯು ಆ ಕಾಲದಲ್ಲಿ ಜನಪ್ರಿಯವಾಗಿದ್ದ ’ಬೇರ್ಪಟ್ಟ ಅವಳಿಗಳ ಪುನರ್ಮಿಲನ’ ಮತ್ತು ಒಂದೇ ರೂಪದ ಎರಡು ಪಾತ್ರಗಳು ಸೃಷ್ಟಿಸುವ ಗೊಂದಲ, ಕಳ್ಳ ಸಾಗಾಣಿಕೆದಾರರ ಜಾಲ ಮತ್ತು ಮುಯ್ಯಿಗೆ ಮುಯ್ಯಿ ತೀರಿಸುವ ಸೇಡಿನ ಕೇಂದ್ರವನ್ನು ಆಧರಿಸಿತ್ತು. ಕಲಾವಿದರ ಉತ್ತಮ ಅಭಿನಯ, ಅನೇಕ ತಿರುವುಗಳಿದ್ದ ಕಥೆಯಿದ್ದರೂ ಕುತೂಹಲವನ್ನು ಕೆರಳಿಸುವಲ್ಲಿ ಸೋತಿದ್ದವು. ಆದರೆ ಹಾಸ್ಯದ ಸನ್ನಿವೇಶ, ಚೇಸಿಂಗ್, ಸಾಹಸ ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣದಲ್ಲಿ ಬಾಬು ಅವರ ಸ್ಪಷ್ಟ ಛಾಪಿತ್ತು. ಚದುರಿದ ದೃಶ್ಯಗಳಲ್ಲಿ ಬಾಬು ಅವರ ಮಾಂತ್ರಿಕತೆ ಇದ್ದರೂ ಇಡಿಯಾಗಿ ಅದು ಪ್ರೇಕ್ಷಕರನ್ನು ತಲುಪುವಲ್ಲಿ ನಿರಾಸೆ ಮೂಡಿಸಿತ್ತು.
ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ
ಹೆಚ್ಚು ಕಡಿಮೆ ಇದೇ ಸೂತ್ರವನ್ನಾಧರಿಸಿದ್ದ ’ಭಾರೀ ಭರ್ಜರಿ ಬೇಟೆ’ ಚಿತ್ರವು ’ಕಿಲಾಡಿ ಜೋಡಿ’ಗಿಂತ ಹೆಚ್ಚು ಅಚ್ಚುಕಟ್ಟಾದ ಚಿತ್ರವಾಗಿ ಗಮನ ಸೆಳೆಯಿತು. ಒಂದು ವಾಣಿಜ್ಯ ಚಿತ್ರವನ್ನು ಸೂತ್ರಬದ್ಧವಾಗಿ ಕಟ್ಟುವ ಕ್ರಮಕ್ಕೆ ಬಾಬು ಅವರು ಮಾದರಿಯೊಂದನ್ನು ಈ ಚಿತ್ರದ ಮೂಲಕ ರಚಿಸಿದ್ದರು. ಅಂಬರೀಶ್, ಶಂಕರ ನಾಗ್, ಜಯಮಾಲ, ಸ್ವಪ್ನ, ವಜ್ರಮುನಿ, ಪ್ರತಿಮಾದೇವಿ, ಎಂ.ಪಿ. ಶಂಕರ್, ಪ್ರಭಾಕರ್, ರಾಜಾನಂದ್ ಮುಂತಾದ ಕಲಾವಿದರ ದಂಡೇ ಇತ್ತು. ಹಿರಿಯನಟ ವಾಸುದೇವ ಗಿರಿಮಾಜಿ ಅವರು ಖಳನಾಯಕನ ಪಾತ್ರದಲ್ಲಿ ನಟಿಸಿ ಅಚ್ಚರಿ ಮೂಡಿಸಿದರು. ಸಾಹಸ ಪ್ರಧಾನವಾದ ಚಿತ್ರವಾಗಿ ಅಗತ್ಯವಾದ ಎಲ್ಲ ರಂಜನೆಯ ಸರಕುಗಳನ್ನು ಸಮುಚಿತ ಪ್ರಮಾಣದಲ್ಲಿ ನಿರ್ದೇಶಕರು ಅಳವಡಿಸಿದ್ದರು. ಊಟಿಯ ಸುಂದರ ಹೊರಾಂಗಣ, ಇಳಯರಾಜಾ ಅವರ ಸಂಯೋಜನೆಯ ಇಂಪಾದ ಹಾಡುಗಳು, ಕಣ್ಣಿಗೆ ತಂಪೆರೆಯುವ ಛಾಯಾಗ್ರಹಣ, ಚಲಿಸುವ ರೈಲಿನಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳು, ವಜ್ರಮುನಿ, ಪ್ರತಿಮಾದೇವಿ, ರಾಜಾನಂದ್ ಅವರ ಭಾವನಾತ್ಮಕ ಅಭಿನಯದಿಂದ ಚಿತ್ರವು ಸೊಗಸಾಗಿ ಮೂಡಿಬಂದಿತ್ತು. ಆದರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದಿರುವುದಕ್ಕೆ ಕಾರಣಗಳೇನೆಂಬುದು ಇಂದಿಗೂ ನಿಗೂಢವಾಗಿದೆ.
ಕಿಲಾಡಿ ಜೋಡಿ ಮತ್ತು ಭಾರಿ ಭರ್ಜರಿ ಬೇಟೆ ಚಿತ್ರಗಳ ಸಾಧಾರಣ ಯಶಸ್ಸಿನಿಂದ ಬಾಬು ಅವರಿಗೆ ಉಂಟಾದ ಹಿನ್ನಡೆಯನ್ನು ಸಂಪೂರ್ಣ ಅಳಿಸಿ ಹಾಕಿದ ಚಿತ್ರ ’ಅಂತ’(1981). ಭಾರತೀಯ ಚಲನಚಿತ್ರರಂಗದಲ್ಲೇ ಒಂದು ಹೊಸ ಟ್ರೆಂಡ್ ಮತ್ತು ಭಾರೀ ಸಂಚಲನ ಮೂಡಿಸಿದ ’ಅಂತ’ವು ಬಿಡುಗಡೆ ಪೂರ್ವದಲ್ಲಿ ಸೆನ್ಸಾರ್ ಸಮಸ್ಯೆ ಮತ್ತು ಬಿಡುಗಡೆಯ ನಂತರ ನಿಷೇಧದ ಆತಂಕಕ್ಕೆ ತುತ್ತಾದ ಚಿತ್ರ. ಹಿಂದೆಂದೂ ಕಾಣದ ಹಿಂಸಾತ್ಮಕ ದೃಶ್ಯಗಳು, ರಾಜಕಾರಣ ವ್ಯವಸ್ಥೆ ಮತ್ತು ಭೂಜಗತ್ತಿನ ನಡುವಿನ ಅಕ್ರಮ ನಂಟಿನ ಅನಾವರಣ ಹಾಗೂ ನಿಷ್ಠಾವಂತ ಕಾನೂನು ಪಾಲಕ ಎದುರಿಸುವ ನೈತಿಕ ಬಿಕ್ಕಟ್ಟು, ಊಹಿಸಲಾಗದ ಅಂತ್ಯದಿಂದ ಚಿತ್ರವು ಪ್ರೇಕ್ಷಕರನ್ನು ಹೊಸ ಅನುಭವವೊಂದರಲ್ಲಿ ಮಿಂದೆಬ್ಬಿಸಿತು. ಸಿನೆಮಾ ಉದ್ಯಮವು ಆವರೆಗೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯಗಳನ್ನು ಬದಿಗೊತ್ತಿ ಹೊಸ ಬಗೆಯ ಅಭಿವ್ಯಕ್ತಿ ಕ್ರಮದಿಂದ ಅನೈತಿಕ ರಾಜಕೀಯ ನಡವಳಿಕೆಗಳನ್ನು ಬಹಿರಂಗಗೊಳಿಸಿತು. ಖಳನಾಯಕನ ಪಾತ್ರಗಳಿಂದ ನಾಯಕನ ಪಾತ್ರಕ್ಕೆ ಆಗತಾನೇ ಬಡ್ತಿ ಪಡೆದಿದ್ದ ಅಂಬರೀಶ್ ’ಅಂತ’ ಚಿತ್ರದ ಅಭಿನಯದಿಂದ ರೆಬೆಲ್ ಸ್ಟಾರ್ ಎಂಬ ಬಿರುದು ಅನ್ವರ್ಥವಾಗುವಂತೆ ನಟಿಸಿದ್ದರು. ಅಂಬರೀಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ ಈ ಚಿತ್ರವು ರಾಜಕೀಯ ಮತ್ತು ಭೂಗತ ನಂಟಿನ ಭಾರತೀಯ ಚಿತ್ರಗಳ ಮುಗಿಯದ ಸರಣಿಯೊಂದಕ್ಕೆ ನಾಂದಿ ಹಾಡಿತು. ಸಿನೆಮಾದಲ್ಲಿ ಹಿಂಸೆಯ ಅಭಿವ್ಯಕ್ತಿ ಕ್ರಮಕ್ಕೆ ಹೊಸ ಭಾಷ್ಯವೊಂದನ್ನು ಬರೆದ ಈ ಚಿತ್ರವು ಆ ಬಗೆಯ ಹೊಸ ಅಲೆಯ ಚಿತ್ರಗಳ ನಿರ್ಮಾಣವನ್ನು ಉದ್ಘಾಟಿಸಿತು. ಮುಂದೆ ಹಿಂದಿಯಲ್ಲೂ ಇದನ್ನು ನಿರ್ದೇಶಿಸಿದ (ಮೇರಿ ಆವಾಜ್ ಸುನೋ) ಬಾಬು ಅವರ ಕಾರ್ಯಕ್ಷೇತ್ರ ವಿಸ್ತಾರವಾಯಿತು.

ಚಿತ್ರದಲ್ಲಿ ಅಂಬರೀಶ್ ಅವರು ಕರ್ತವ್ಯನಿಷ್ಠ ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್ ಮತ್ತು ಅವನ ರೂಪವನ್ನೇ ಹೊತ್ತ ಭೂಜಗತ್ತಿನ ಸಾಹಸಿ ಕನ್ವರ್‌ಲಾನ ಪಾತ್ರ ವಹಿಸಿದ್ದಾರೆ. ಕನ್ವರ್ ಲಾಲ್‌ನ ಮಾರುವೇಷದಲ್ಲಿ ಭೂಗತ್ತಿನೊಡನೆ ನಂಟು ಬೆಳೆಸಿದ ಸುಶೀಲ್ ಕುಮಾರ್ ಅದರ ಜಾಲವನ್ನು ಬಯಲಿಗೆಳೆಯುವ ಹಾದಿಯಲ್ಲಿ ಸವಾಲು ಸಂಕಟಗಳನ್ನು ಎದುರಿಸುತ್ತಾನೆ. ರಾಜಕೀಯ ಪ್ರಭಾವಿ ಶಕ್ತಿಗಳು ಮತ್ತು ಭೂಜಗತ್ತಿನ ಜಾಲದೊಡನೆ ಬೆಸೆದಿರುವ ಅನೈತಿಕ ನಂಟನ್ನು ಬಹಿರಂಗಗೊಳಿಸುವಾಗ ಆತನ ವೈಯಕ್ತಿಕ ಬದುಕು ನಾಶವಾಗುತ್ತದೆ. ಆಗ ಸಿಡಿದೇಳುವ ನಾಯಕ ತೆಗೆದುಕೊಳ್ಳುವ ನಿಲುವು ಊಹಿಸಲಾಗದ ತಿರುವು ಪಡೆಯುತ್ತಾ ಪ್ರೇಕ್ಷಕನನ್ನು ತುದಿಗಾಲಲ್ಲಿರಿಸುತ್ತದೆ. ಸುಶೀಲ್ ಕುಮಾರ್ ಪಾತ್ರಕ್ಕಿಂತ ಕನ್ವರ್‌ಲಾಲ್ ಪಾತ್ರವನ್ನು ಮೈದುಂಬಿಸಿಕೊಂಡಂತೆ ನಟಿಸಿದ ಅಂಬರೀಶ್ ಪ್ರೇಕ್ಷಕರ ಮನಗೆದ್ದರು.
(ಮುಂದುವರೆಯುವುದು…)

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




