ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಅವರದು ಭಿನ್ನ ಮಾರ್ಗ. ತಾಂತ್ರಿಕವಾಗಿ ಗುಣಮಟ್ಟದ, ರುಚಿಶುದ್ಧ ಮನರಂಜನೆಯ ಚಿತ್ರಗಳ ನಿರ್ದೇಶಕರಾಗಿ ಅರ್ಧ ಶತಕವನ್ನು ಪೂರೈಸಿ ಇನ್ನೂ ಕ್ರಿಯಾಶೀಲರಾಗಿರುವ ಅವರ ಚಿತ್ರಗಳು ಚಲನಚಿತ್ರಾಸಕ್ತರಿಗೆ ಅಧ್ಯಯನ ಯೋಗ್ಯ.
ಭಾಗ-2
ಹಿಂದಿನ ಚಿತ್ರಗಳಲ್ಲಿ ಬಾಬು ಅವರು ದೃಶ್ಯ ಸಂಯೋಜನೆಯಲ್ಲಿ, ಚಿತ್ರ ನಿರೂಪಣೆಯಲ್ಲಿ ಅನುಸರಿಸಿದ ಸಂಯಮವನ್ನು, ದೃಶ್ಯ ಸಂಯೋಜನೆಯ ವಿಧಾನಗಳನ್ನು ತೊರೆದು ‘ಅಂತ’ ಚಿತ್ರವನ್ನು ನೇರವಾಗಿ ಎದೆಗೆ ನಾಟುವಂತೆ ಹೇಳಲು ಯತ್ನಿಸಿದರು. ದೃಶ್ಯಗಳ ನಿರೂಪಣೆಯಲ್ಲಿ ಸಾವಧಾನಕ್ಕಿಂತ ಅವಸರಕ್ಕೇ ಹೆಚ್ಚು ಒತ್ತು ನೀಡಿದ್ದರು. ಇದರಿಂದ ದೃಶ್ಯಗಳಲ್ಲಿ ಹೆಚ್ಚಿನ ವಿವರಗಳು ಅಡಕವಾಗದೇ ಸ್ವೋಪಜ್ಞತೆ ಬದಲು ಒಂದು ಬಗೆಯ ಕಚ್ಚಾತನವನ್ನು ಕಾಣಬಹುದಿತ್ತು. ಕತೆಯ ದೃಷ್ಟಿಯಿಂದ ಬಾಬು ಅವರು ಮಾಡಿಕೊಂಡಿರುವ ಮಾರ್ಪಾಡು ಪ್ರೇಕ್ಷಕನನ್ನು ತಲುಪುವಲ್ಲಿ ಸಫಲವಾಯಿತು. ಭೂಗತ ಜಗತ್ತು ಮತ್ತು ರಾಜಕೀಯ ನಂಟಿನಂಥ, ನಿರ್ದೇಶಕರು ಕೈಗೆತ್ತಿಕೊಳ್ಳಲು ಹೆದರುವ ಸೂಕ್ಷ್ಮ ವಸ್ತುವನ್ನು ಆರಿಸಿಕೊಳ್ಳಲು ಬಾಬು ಅವರು ಮಾಡಿದ ಧೈರ್ಯವನ್ನು ಮೆಚ್ಚಲೇಬೇಕು. ಮುಂದೆ ಅದೊಂದು ಟ್ರೆಂಡ್ ಸೃಷ್ಟಿಸಬಹುದೆಂಬ ಕಲ್ಪನೆ ಅವರಿಗೂ ಇದ್ದಂತಿರಲಿಲ್ಲ.
‘ಅಂತ’ ಚಿತ್ರಕ್ಕಿಂತ ಮೊದಲೇ ಚಿತ್ರೀಕರಣ ಆರಂಭಿಸಿ ಪೂರ್ಣಗೊಳ್ಳಲು ವಿಳಂಬವಾದ ‘ಗಂಡ ಭೇರುಂಡ'(1984) ಸಹ ರಾಜೇಂದ್ರ ಸಿಂಗ್ ಅವರ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದು. ನಿಧಿ ಶೋಧದ ಯಾತ್ರೆಯಲ್ಲಿ ಎದುರಾಗುವ ಅಡ್ಡಿಗಳು, ಸಾಹಸಗಳು, ಲೋಭ, ಕೊಲೆ, ವಂಚನೆ, ದ್ರೋಹ, ನಿಧಿಯ ಸುತ್ತ ಆವರಿಸಿಕೊಂಡ ನಿಗೂಢ ಕಥಾನಕಗಳಿರುವ ಅನೇಕ ಹಾಲಿವುಡ್ಡಿನ ಸಿನೆಮಾಗಳು ಈ ಚಿತ್ರಕ್ಕೆ ಸ್ಫೂರ್ತಿ. ಇದು ಸಹ ಹಲವು ವಿಭಿನ್ನ ವರ್ತನೆ ಮತ್ತು ಮನೋಭಾವದ ಪಾತ್ರಗಳಿರುವ ಬಹುತಾರಾಗಣದ ಚಿತ್ರ. ಚಿತ್ರದಲ್ಲಿ ಶ್ರೀನಾಥ್, ಅಂಬರೀಶ್, ಶಂಕರ್ ನಾಗ್, ಉದಯ ಕುಮಾರ್, ಅಮರೀಶ್ ಪುರಿ, ವಜ್ರಮುನಿ, ಲಕ್ಷ್ಮಿ, ಜಯಮಾಲ, ಬಾಲಕೃಷ್ಣ, ದಿನೇಶ್ ಮುಂತಾದವರ ತಾರಾಬಳಗವೇ ಇತ್ತು. ಸ್ಥಳೀಯ ಜಾನಪದ ಕಥೆಯನ್ನು ಸಿನೆಮಾ ಹಂದರಕ್ಕೆ ಹೊಂದಿಸಿದರೂ, ಪಾತ್ರಗಳ ವರ್ತನೆ, ಸ್ವರೂಪವು ಹಾಲಿವುಡ್ ಚಿತ್ರಗಳ ಪಾತ್ರಗಳ ನೆರಳಿನಂತಿದ್ದು ನಿರೂಪಣಾ ಶೈಲಿಯೂ ಅದನ್ನೇ ಅನುಸರಿಸಿತ್ತು. ಹೊರಾಂಗಣದಲ್ಲಿ ನಡೆಯುವ ಸಾಹಸ, ನಿಧಿಶೋಧಕರ ಯಾತ್ರೆ, ಎಸಗುವ ದ್ರೋಹಗಳೆಲ್ಲವೂ ನಮ್ಮ ಸ್ಥಳೀಯ ಪರಿಸರ, ಸಂಸ್ಕೃತಿಗೆ ಹೊಂದದೆ ಅನ್ಯವಾದ ಕಾರಣ ಚಿತ್ರ ಹೆಚ್ಚು ಯಶಸ್ವಿಯಾಗಲಿಲ್ಲ. ಆದರೆ ತಾಂತ್ರಿಕ ಶ್ರೀಮಂತಿಕೆ, ಅರಣ್ಯದ ಭಿತ್ತಿ, ರೋಮಾಂಚಕ ಸನ್ನಿವೇಶಗಳು, ಕಣ್ಣಿಗೆ ಕಟ್ಟುವ ದುರಂತ- ಹೀಗೆ ಬಾಬು ಅವರ ಚಿತ್ರಗಳಲ್ಲಿ ನಿರೀಕ್ಷಿಸಬಹುದಾದ ಎಲ್ಲ ಸಂಗತಿಗಳೂ ಈ ಚಿತ್ರದಲ್ಲಿದ್ದವು.
ಇದನ್ನು ಓದಿದ್ದೀರಾ?: ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ

ಇದೇ ವರ್ಷ ಬಿಡುಗಡೆಯಾದ ಬಾಬು ಅವರ ‘ಬಂಧನ’ ನಿರ್ವಿವಾದವಾಗಿ ಎಲ್ಲ ದೃಷ್ಟಿಯಿಂದಲೂ ಒಂದು ಕ್ಲಾಸಿಕ್ ಚಿತ್ರವೆನಿಸಿತ್ತು. ಸಾಹಸ, ಸೇಡು ಮತ್ತು ಕೌಟುಂಬಿಕ ಸಂಘರ್ಷಗಳ ವಸ್ತುವನ್ನು ಕೈಬಿಟ್ಟ ಬಾಬು ಅವರು ಈ ಬಾರಿ ಸಫಲವಾಗದ, ದುರಂತ ಪ್ರೇಮದ ಕಥೆಯನ್ನು ಎತ್ತಿಕೊಂಡಿದ್ದರು. ಎರಡು ಸರಳ ವ್ಯಕ್ತಿಗಳ ನಡುವೆ ಏರ್ಪಡುವ ಅಪ್ರಕಟಿತ ಭಾವನೆಗಳ ತುಮುಲ, ವಿಧಿಯಾಟ ತಂದೊಡ್ಡುವ ದುರಂತ ಮತ್ತು ಮಾನವ ಸಂಬಂಧಗಳ ಸಂಘರ್ಷದ ಮೂಲಕ ಮನುಷ್ಯ ಸಂಬಂಧಗಳ ಸೂಕ್ಷ್ಮ ಪಾತಳಿಗಳನ್ನು ಶೋಧಿಸುವ ಚಿತ್ರವಾಗಿ ಬಂಧನ ಯಶಸ್ಸು ಕಂಡಿತು. ಆಸಕ್ತಿಯನ್ನು ಮೂಡಿಸುವ ಕಥೆ, ಪಾತ್ರಗಳ ಸೂಕ್ಷ್ಮಗಳನ್ನು ಅರಿತುಕೊಂಡು ಪೈಪೋಟಿಗೆ ಬಿದ್ದಂತೆ ನೀಡಿದ ಕಲಾವಿದರ ಅಭಿನಯ, ಎಂದೆಂದಿಗೂ ಭಾವಭಿತ್ತಿಯಲ್ಲಿ ಉಳಿಯುವ ಹಾಡುಗಳು ಮತ್ತು ತನ್ನ ಅಸ್ತಿತ್ವವನ್ನು ಪ್ರತಿಪಾದಿಸಿ ಸಂಪ್ರದಾಯ ನಡತೆಯ ವಿರುದ್ಧ ನಾಯಕಿ ತೆಗೆದುಕೊಳ್ಳುವ ದಿಟ್ಟ ನಿಲುವಿನಿಂದ ದಟ್ಟ ಅನುಭವ ನೀಡಿದ ಚಿತ್ರವಾಗಿ ಯಶಸ್ಸು ಕಂಡಿತು.
ಉಷಾ ನವರತ್ನರಾಂ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಈ ಚಿತ್ರದ ನಾಯಕ ಡಾ. ಹರೀಶ್ ಮತ್ತು ಆತನ ಶಿಷ್ಯೆ ನಂದಿನಿಯ ನಡುವಿನ ಭಾವನೆಗಳ ತಾಕಲಾಟವೇ ಚಿತ್ರದ ಕೇಂದ್ರ ವಸ್ತು. ಇಲ್ಲಿನ ನಾಯಕ ಸಾಹಸಿಯಲ್ಲ. ತನ್ನ ಭಾವನೆಗಳನ್ನು ಹೇಳಿಕೊಳ್ಳಲಾಗದೆ ಪರಿತಪಿಸುವ ಪ್ರಣಯಿ. ಗುರುವಿನ ಮೇಲೆ ಅಪಾರ ಭಕ್ತಿಯಿರುವ ಶಿಷ್ಯೆ ಗುರುವಿನ ಹಂಬಲಕ್ಕೆ ಪ್ರತಿಕ್ರಿಯಿಸಲಾರಳು. ಪ್ರೇಮದ ಬೆನ್ನತ್ತಿ ಹೋಗದ ನಾಯಕ ತನ್ನ ಆಂತರಿಕ ತುಮುಲಗಳನ್ನು ಹತ್ತಿಕ್ಕಿ ಸಾಗುವ ಬಾಳ ಪಯಣದಲ್ಲಿ ದುರಂತದ ಅಂತ್ಯ ಕಾಣುತ್ತಾನೆ. ಡಾ. ಹರೀಶ್ ಪಾತ್ರದಲ್ಲಿ ವಿಷ್ಣುವರ್ಧನ್ ತಮ್ಮ ಸಾಹಸ ಸಿಂಹದ ಇಮೇಜಿಗೆ ತದ್ವಿರುದ್ಧವಾದ ಪಾತ್ರದಲ್ಲಿ ನೀಡಿರುವ ಸಂಯಮಪೂರ್ಣ ನಟನೆ ಮತ್ತು ನಗುವಿನ ಹಿಂದೆ ನೂರೆಂಟು ಭಾವಗಳನ್ನು ಅಡಗಿಸಿಟ್ಟುಕೊಂಡ ನಂದಿನಿಯಾಗಿ ಸುಹಾಸಿನಿ ಅವರ ಅಭಿನಯ ಚಿತ್ರದ ಹೈಲೈಟ್. ಮುಂದೆ ಇದೇ ಜೊಡಿಯ ಮ್ಯಾಜಿಕ್ ದಿನೇಶ್ ಬಾಬು ಅವರ ‘ಸುಪ್ರಭಾತ’ದಲ್ಲಿ ಮುಂದುವರೆಯಿತು. ಸಾಹಸಮಯ ಚಿತ್ರಗಳಷ್ಟೇ ಸೊಗಸಾಗಿ ಭಾವಸಂಘರ್ಷದ ಚಿತ್ರವನ್ನು ರೂಪಿಸಲು ತಮಗಿರುವ ಸಾಮರ್ಥ್ಯವನ್ನು ಬಾಬು ಈ ಚಿತ್ರದಲ್ಲಿ ನಿರೂಪಿಸಿದರು. ಅಲ್ಲದೇ ಗಂಡನ ಅನುಮಾನದಿಂದ ನೊಂದ ಹೆಣ್ಣಾಗಿ ಯಾವುದೇ ಘೋಷಣೆಯಿಲ್ಲದೆ ಚಿತ್ರದ ಅಂತ್ಯದಲ್ಲಿ ಮಗುವಿನೊಡನೆ ಸ್ವತಂತ್ರವಾಗಿ ಬದುಕಲು ನಂದಿನಿ ತೆಗೆದುಕೊಳ್ಳುವ ಸಹಜ ನಿರ್ಧಾರವು ಆ ಕಾಲದಲ್ಲಿ ಮಹಿಳಾಪರ ಧ್ವನಿಯಾಗಿ ಮೊಳಗಿದ್ದು ಈ ಚಿತ್ರದ ಮತ್ತೊಂದು ವಿಶೇಷ.
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
‘ಬಂಧನ’ ಗಲ್ಲಾಪೆಟ್ಟಿಗೆಯನ್ನು ಚಿಂದಿ ಮಾಡಿದ ಚಿತ್ರ. ಪ್ರೇಕ್ಷಕರ ಮತ್ತು ವಿಮರ್ಶಕರ ಧಾರಾಳ ಮೆಚ್ಚುಗೆ ಪಡೆದ ಚಿತ್ರ. ವಾಣಿಜ್ಯ ಗೆಲುವಿನಾಚೆಗೂ ‘ಬಂಧನ’ ಗಟ್ಟಿಯಾಗಿ ಉಳಿದದ್ದು ಅದರ ಕಲಾತ್ಮಕ ಸಾಧನೆಗಳಿಂದ. ಸಾಹಸ ಚಿತ್ರಗಳಿಗಿಂತಲೂ ಅಸಾಂಪ್ರದಾಯಕ ನಿರೂಪಣೆಯಿರುವ, ಮನುಷ್ಯರ ಸೂಕ್ಷ್ಮ ಸಂಬಂಧಗಳನ್ನು ನವಿರಾಗಿ ಪಿಸುಮಾತಿನಲ್ಲಿ ಹೇಳುವ ಚಿತ್ರಗಳು ಪ್ರೇಕ್ಷಕರ ಮನಗೆಲ್ಲಬಲ್ಲವು ಎಂಬ ಸಂಗತಿಯನ್ನು ನಿರೂಪಿಸಿದ ಚಿತ್ರ. ಇದು ಪ್ರಣಯ-ದುರಂತದ ಪ್ರಕಾರಕ್ಕೆ ಮೇಲ್ಪಂಕ್ತಿ ಹಾಕಿದ ಮತ್ತು ಸಂಯಮಪೂರ್ಣ ನಟನೆ ಹಾಗು ಹೃದಯಸ್ಪರ್ಶಿ ದೃಶ್ಯಗಳಿಗಿರುವ ಶಕ್ತಿಗೊಂದು ಪುರಾವೆ ಒದಗಿಸಿದ ಚಿತ್ರ.
‘ಬಂಧನ’ ಚಿತ್ರದ ನಂತರ ಹಿಂದೀ ಚಿತ್ರರಂಗದಲ್ಲಿ ಎಡೆಬಿಡದೆ ತೊಡಗಿಸಿಕೊಂಡ ಬಾಬು ಅವರು ‘ಶರಾರ'(1984), ‘ಮೇರಾ ಫೈಸ್ಲಾ’ ಮತ್ತು ‘ಏಕ್ ಸೆ ಭಲೇ ದೋ'(1985) ಚಿತ್ರಗಳನ್ನು ನಿರ್ದೇಶಿಸಿದರು. ಹಿಂದೀ ಚಿತ್ರರಂಗದ ದಿಗ್ಗಜರಾದ ದಿಲೀಪ್ ಕುಮಾರ್, ರಾಜ್ ಕುಮಾರ್, ಹೇಮಾ ಮಾಲಿನಿ, ಜಿತೇಂದ್ರ, ಸಂಜಯ ದತ್, ಜಯಪ್ರದ ಮೊದಲಾದವರಿಗೆ ಆಕ್ಷನ್ ಕಟ್ ಹೇಳಿದ ಅವರು ತಮ್ಮ ಪ್ರಯೋಗಗಳನ್ನು ನಡೆಸಲು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದರು. ಅವರು ಮತ್ತೊಮ್ಮೆ ಮಹತ್ವಾಕಾಂಕ್ಷೆಯಿಂದ ನಿರ್ದೇಶಿಸಿದ ಬಣ್ಣದ ಗೆಜ್ಜೆ(ಏಕಕಾಲಕ್ಕೆ ಕನ್ನಡ-ತೆಲುಗು) ಚಿತ್ರವು ಅವರ ವೈಭವವನ್ನು ಮರಳಿ ಗಳಿಸಿಕೊಡಲಿಲ್ಲ. ವಿ ರವಿಚಂದ್ರನ್(ತೆಲುಗಿನಲ್ಲಿ ನಾಗಾರ್ಜುನ) ಮತ್ತು ಅಮಲ ಜೋಡಿಯಿದ್ದ ಈ ಚಿತ್ರದಲ್ಲಿ ಮನಸೂರೆಗೊಳ್ಳುವ ಗೀತೆಗಳಿದ್ದವು. ಪ್ರೇಮ ಕಥೆಯ ಹಂದರವಿದ್ದ ಚಿತ್ರವನ್ನು ತಾಜ್ ಮಹಲ್‌ನಿಂದ ಹಿಡಿದು ಅನೇಕ ಐತಿಹಾಸಿಕ ಸ್ಮಾರಕಗಳ ಹೊರಾಂಗಣದಲ್ಲಿ ಚಿತ್ರೀಕರಿಸಲಾಗಿತ್ತು. ಹಿರಿಯ ಕಲಾವಿದರಾದ ಭಾರತಿ, ಕಲ್ಯಾಣ್ ಕುಮಾರ್ ಮತ್ತು ಹಿಂದಿಯ ಅಮ್ಜದ್ ಖಾನ್ ನಟಿಸಿದ್ದರು. ಆದರೆ ಅದ್ದೂರಿತನ, ಜನಪ್ರಿಯ ಕಲಾವಿದರ ತಂಡ, ಸುಮಧುರ ಸಂಗೀತವಿದ್ದರೂ ಶಕ್ತ ಕಥೆಯ ಕೊರತೆ ಮತ್ತು ಅತಿ ಮೆಲೋಡ್ರಾಮಾ ಹಾಗೂ ಜಾಳು ಜಾಳಾದ ನಿರೂಪಣೆಯು ಚಿತ್ರದ ಯಶಸ್ಸಿಗೆ ಖಾತ್ರಿಯಾಗದೆಂಬ ಸತ್ಯವನ್ನು ಬಣ್ಣದ ಗೆಜ್ಜೆ ನಿರೂಪಿಸಿತು.

ಬಾಬು ಅವರ ಮುಂದಿನ ಚಿತ್ರ ‘ಮುತ್ತಿನ ಹಾರ'(1990) ಕನ್ನಡಕ್ಕೆ ಅಪರೂಪದಲ್ಲಿ ಅಪರೂಪವೆನಿಸಿದ ಯುದ್ಧದ ವಸ್ತುವನ್ನು ಆಧರಿಸಿತ್ತು. ಚಿತ್ರವು ನೇರವಾಗಿ ಯುದ್ಧದ ಸೋಲು ಗೆಲುವುಗಳಿಗೆ ಮಹತ್ವ ನೀಡದೆ ಸೈನಿಕ ಕುಟುಂಬದ ಆಗುಹೋಗುಗಳ ಮೇಲೆ ಯುದ್ಧವು ಬೀರುವ ಪ್ರಭಾವ, ತರುವ ಭೀಕರ ಪರಿಣಾಮಗಳಿಗೆ ಹೆಚ್ಚು ಮಹತ್ವ ನೀಡಿದೆ. ಸಾಂಪ್ರದಾಯಿಕ ಯುದ್ಧದ ಚಿತ್ರಗಳು ಸಾಮಾನ್ಯವಾಗಿ ಆಶ್ರಯಿಸುವ ದೇಶಭಕ್ತಿ, ರಾಜಕೀಯದ ಹಿನ್ನೆಲೆಗಳನ್ನು ಹೊರತುಪಡಿಸಿ ಸೈನಿಕ ಕುಟುಂಬಗಳು ಅನಭವಿಸುವ ವೈಯಕ್ತಿಕ ಸಂಕಟಗಳು ಮತ್ತು ಮಾನಸಿಕ ಯಾತನೆಗಳಿಗೆ ಚಿತ್ರ ಕನ್ನಡಿ ಹಿಡಿಯುತ್ತದೆ.
ಇದೂ ಸಹ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ. ಎರಡನೇ ಮಹಾಯುದ್ಧದಿಂದ ಹಿಡಿದು ಎಪ್ಪತ್ತರ ದಶಕದ ಅವಧಿವರೆಗೆ ಚಾಚುವ ಕಥಾ ಅವಧಿಯಲ್ಲಿ ಕೊಡಗಿನ ಸೈನಿಕ ಅಚ್ಚಪ್ಪ ಮತ್ತು ಆತನ ಪತ್ನಿ, ಸೇನೆಯ ದಾದಿ ಅನ್ನಪೂರ್ಣ(ಅನು) ಅವರ ಬದುಕಿನಲ್ಲಿ ಯುದ್ಧವು ಎಬ್ಬಿಸುವ ಬಿರುಗಾಳಿ ಮತ್ತು ಸಂಕಷ್ಟಗಳನ್ನು ವೈಯಕ್ತಿಕ ತ್ಯಾಗಗಳ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ನಿರ್ದೇಶಕರು ನಿರೂಪಿಸಿದ್ದಾರೆ. ಎರಡನೇ ಮಹಾಯುದ್ಧ ಕಾಲವನ್ನು ಪುನಾರಚಿಸಲು ಮತ್ತು ನಿಜವಾದ ಸೇನಾ ಕಾರ್ಯಾಚರಣೆ ನಡೆವ ಸ್ಥಳದಲ್ಲಿ ಚಿತ್ರೀಕರಣ ಮಾಡಲು ಬಾಬು ಅವರು ಪಟ್ಟಿರುವ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಅಚ್ಚಪ್ಪನಾಗಿ ವಿಷ್ಣುವರ್ಧನ್ ಮತ್ತು ಅನ್ನಪೂರ್ಣಳಾಗಿ ಸುಹಾಸಿನಿ ಅವರ ಅಮೋಘ ಅಭಿನಯ ಸಹ ಚಿತ್ರವನ್ನು ಮೇಲ್ಮಟ್ಟಕ್ಕೇರಿಸಿದೆ. ಹಿಮಾಚ್ಛಾದಿತ ಕಾಶ್ಮೀರದ ಕಣಿವೆಯ ದೃಶ್ಯಗಳು, ರಾಜಾಸ್ತಾನದ ಮರಳುಗಾಡಿನ ವಿಶಾಲ ಹರಹಿನ ಭೂದೃಶ್ಯಗಳು ಚಿತ್ರದ ಕಥನಕ್ಕೆ ಪೂರಕವಾಗಿ ಬಳಕೆಯಾಗಿವೆ.
ಅಬ್ಬಾಯಿ ನಾಯ್ಡು ಅವರು ನಿರ್ಮಿಸಿದ ‘ಮಾತೃಭೂಮಿ'(1969) ಹೊರತುಪಡಿಸಿದರೆ ಕನ್ನಡದಲ್ಲಿ ಯುದ್ಧದ ವಸ್ತುವನ್ನು ಆಧರಿಸಿದ ಚಿತ್ರಗಳು ಇಲ್ಲವೆಂದೇ ಹೇಳಬೇಕು. ಕತೆ ಮತ್ತು ನಿರೂಪಣೆಯಲ್ಲಿ ಸಂಪೂರ್ಣ ಹೊಸತನವಿದ್ದ ‘ಮುತ್ತಿನ ಹಾರ’ ಪ್ರೇಕ್ಷಕರಿಗೆ ವಿಭಿನ್ನ ಅನುಭವ ದಾಟಿಸಿದ ಚಿತ್ರ. ಸಮರ ಭೂಮಿಯ ವಾಸ್ತವ ವಿವರಗಳು, ಕೊಡವ ಸಂಸ್ಕೃತಿಯ ಝಲಕುಗಳು ಮತ್ತು ಸೈನಿಕ ಶಿಬಿರದ ಅನುಭವಗಳು ಚಿತ್ರದ ಆಕರ್ಷಕ ಭಾಗಗಳಾಗಿದ್ದವು. ಇಷ್ಟೆಲ್ಲ ಇದ್ದರೂ ‘ಮುತ್ತಿನ ಹಾರ’ ದೊಡ್ಡ ಯಶಸ್ಸು ಕಾಣಲಿಲ್ಲ. ಚಿತ್ರಕ್ಕೆ ಅದರದೇ ಆದ ಮಿತಿಗಳಿದ್ದವು. ಆದರೂ ಪ್ರತಿಯೊಂದು ಯುದ್ಧದ ಹಿನ್ನೆಲೆಯಲ್ಲಿ ಮನುಕುಲದ ಒಂದು ಪ್ರೀತಿಯ, ಪ್ರಿಯಬಂಧುಗಳ ಪ್ರಾಣ ಹಾನಿಯ ಮತ್ತು ತ್ಯಾಗಗಳ ಕಥೆ ಇರುತ್ತದೆಂಬ ಸತ್ಯವನ್ನು ಪ್ರತಿಬಿಂಬಿಸಿದ ಯತ್ನವಾಗಿ ‘ಮುತ್ತಿನ ಹಾರ’ ಕನ್ನಡದ ಮುಖ್ಯ ಚಿತ್ರಗಳಲ್ಲೊಂದಾಗಿ ಉಳಿಯುತ್ತದೆ.
ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಬಾಬು ಅವರ ಮುಂದಿನ ಸಿನೆಮಾ ‘ಹೂವು ಹಣ್ಣು'(1993) ವೇಶ್ಯಾ ಸಮಸ್ಯೆಯನ್ನು ಆಧರಿಸಿದ ಚಿತ್ರ. ತ್ರಿವೇಣಿ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಸಮಕಾಲೀನ ಸಂದರ್ಭದಲ್ಲಿ ವೇಶ್ಯಾವಾಟಿಕೆಯ ಸಮಸ್ಯೆಯನ್ನು ಹೃದಯಂಗಮವಾಗಿ ಹೇಳಲು ಬಾಬು ಅವರು ಪ್ರಯತ್ನಿಸಿದ್ದರು. ಕಲಾತ್ಮಕವಾಗಿ ಉತ್ತಮ ಅಂಶಗಳಿದ್ದರೂ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಗೆ ಭಾಜನವಾದ ಚಿತ್ರ ಬಾಬು ಅವರ ಸೋತ ಚಿತ್ರಗಳ ಪಟ್ಟಿಯಲ್ಲಿ ಸೇರಿತು. ನತದೃಷ್ಟ ಮಹಿಳೆಯರ ಕತ್ತಲ ಜಗತ್ತಿನ ಬಗ್ಗೆ ಬೆಳಕು ಚೆಲ್ಲಲು ಮಾಡಿದ ಪ್ರಯತ್ನವು ಅಂದಿನ ಕಾಲದಲ್ಲಿ ಇಂಥ ವಸ್ತುಗಳನ್ನು ನಿರ್ವಹಿಸುತ್ತಿದ್ದ ವಿಧಾನಗಳಿಂದ ಭಿನ್ನ ಹಾದಿ ಹಿಡಿದ ಫಲವಾಗಿ ಚಿತ್ರವು ಹೆಚ್ಚು ಜನರನ್ನು ತಲುಪಲಿಲ್ಲ. ಆದರೆ ನಟಿ ಲಕ್ಷ್ಮೀ ಅವರು ರಮಾಬಾಯಿಯ ಪಾತ್ರದಲ್ಲಿ ನೀಡಿದ ಅಭಿನಯ ಅವರಿಗೆ ರಾಜ್ಯ ಚಲನಚಿತ್ರ ಶ್ರೇಷ್ಠ ನಟಿ ಪ್ರಶಸ್ತಿ ತಂದಿತ್ತಿತು. ಚಿತ್ರದ ಕಥಾವಸ್ತು ಸಹ ತೀರ್ಪುಗಾರರ ಮಂಡಲಿಯ ರಾಜ್ಯ ಪ್ರಶಸ್ತಿ ಪಡೆಯಿತು.
ಮತ್ತೊಮ್ಮೆ ವಿಷ್ಣುವರ್ಧನ್ ಅವರ ಜೊತೆಯಾದ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ ‘ಮಹಾಕ್ಷತ್ರಿಯ'(1994) ಚಿತ್ರದ ವಸ್ತುವಿನಲ್ಲಿ ಹೊಸತನವಿತ್ತು. ಕಥೆಯು ಪಾಪಪ್ರಜ್ಞೆ, ವಿಷಾದ, ಮನಪರಿವರ್ತನೆ ಮತ್ತು ಸಮಾಜ ಸುಧಾರಣೆಯ ಸುತ್ತ ಹೆಣೆದುಕೊಂಡಿದೆ. ಸಸ್ಪೆನ್ಸ್, ನಾಟಕೀಯ ತಿರುವುಗಳು ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ತುಂಬಿದೆ. ತಾನು ಮಾಡಿದ ತಪ್ಪನ್ನು ಅರಿತು ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಳ್ಳುವ ಕುಪಿತ ಯುವಕನೊಬ್ಬನ ಜೀವನ ಪ್ರಯಾಣವು ಸಮಾಜದಲ್ಲಿ ದಿಕ್ಕುತಪ್ಪಿದ ಯುವಜನತೆಯನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಸಫಲವಾಗುವ ಕಥಾವಸ್ತು ಬಾಬು ಅವರಿಗೆ ಹೇಳಿ ಮಾಡಿಸಿದಂತಿತ್ತು. ಜೊತೆಗೆ ನಾಗರಹಾವಿನ ಯುವಕನ ಸಿಟ್ಟು ಮತ್ತು ಬಂಧನದ ಸಂಯಮಮೂರ್ತಿಯ ನಡವಳಿಕೆಯನ್ನು ಬೆಸೆದಂಥ ಪ್ರತಾಪ್ ಪಾತ್ರವು ವಿಷ್ಣುವರ್ಧನ್ ಅವರಿಗೆ ಹೇಳಿಮಾಡಿಸಿದಂತಿತ್ತು. ಕಥೆಯನ್ನು ಆಕರ್ಷಕವಾಗಿ ಹೇಳಿರುವ ನಿರ್ದೇಶಕರು ಈ ಚಿತ್ರದಲ್ಲಿ ತಮ್ಮ ಹಿಂದಿನ ‘ಅಂತ’ ಚಿತ್ರದ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದಾರೆ ಎನಿಸುತ್ತದೆ. ಮುಖ್ಯವಾಗಿ ಆಳವಾಗಿ ಬೇರೂರಿರುವ ರಾಜಕೀಯ ಭ್ರಷ್ಟಾಚಾರ ಮತ್ತು ಅದರ ಕ್ರೌರ್ಯಕ್ಕೆ ತುತ್ತಾಗುವ ಯುವಜನರ ಸಂಕಟಗಳು ಸಮಕಾಲೀನ ಸಮಾಜಕ್ಕೆ ಕನ್ನಡಿ ಹಿಡಿಯುತ್ತವೆ. ಪ್ರತಾಪನಾಗಿ ವಿಷ್ಣುವರ್ಧನ್ ಅವರು ಪಾತ್ರದ ತೀವ್ರತೆಯನ್ನು ಜೀವಿಸಿದ್ದಾರೆ. ರಾಮ್ ಕುಮಾರ್, ಶಂಕರ್ ಅಶ್ವಥ್ ಮತ್ತು ಸೋನೂ ವಾಲಿಯಾ ಅಭಿನಯವೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಂಸಲೇಖ ಅವರ ಸಂಗೀತ ಚಿತ್ರದ ಆಶಯಕ್ಕೆ ಪೂರಕವಾಗಿದೆ. ಆದರೆ ತುಂಬಾ ಸಂಕೀರ್ಣ ವಸ್ತು ಮತ್ತು ಅನೇಕ ಸಬ್ ಪ್ಲಾಟ್‌ಗಳಿಂದ ತುಂಬಿರುವ ಚಿತ್ರದ ನಿರೂಪಣೆಯಲ್ಲಿ ಸರಾಗ ಗತಿ ಇಲ್ಲದಿರುವುದೊಂದು ಕೊರತೆ. ವಾಣಿಜ್ಯಮಯ ಸಾಹಸ ಚಿತ್ರವನ್ನು ಸಾಮಾಜಿಕ ಮೌಲ್ಯಗಳ ಮಹತ್ವದೊಡನೆ ನಿರೂಪಿಸಿರುವ ಕಾರಣ ಬಾಬು ಅವರ ಚಿತ್ರ ಬದುಕಿನ ಮಹೋನ್ನತ ಚಿತ್ರವಾಗಿ ಇದು ಮೂಡಿ ಬಾರದಿದ್ದರೂ, ವಿವಿಧ ವಸ್ತುಗಳನ್ನು ತೆರೆಗೆ ಅಳವಡಿಸುವ ಅವರ ಹಂಬಲದ ಭಾಗವಾಗಿ ಮುಖ್ಯ ಚಿತ್ರ ಎನಿಸಿದೆ.

1995ರಲ್ಲಿ ಬಿಡುಗಡೆಯಾದ ‘ಹಿಮಪಾತ’ ಬಾಬು ಮತ್ತು ವಿಷ್ಣುವರ್ಧನ್ ಜೊಡಿಯ ಕೊನೇ ಚಿತ್ರ. ಟಿ.ಕೆ. ರಾಮರಾವ್ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಪ್ರಣಯ-ಸಾಹಸ ಹಾಗೂ ಭಾವನಾತ್ಮಕ ಸನ್ನಿವೇಶಗಳಿಂದ ತುಂಬಿದ ಚಿತ್ರ. ಕುಲು ಮನಾಲಿ, ರೋಹ್ತಾಂಗ್ ಕಣಿವೆಯ ಸುಂದರ ಹೊರಾಂಗಣದಲ್ಲಿ ಚಿತ್ರೀಕರಣಗೊಂಡ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ನಾಯಕಿಯಾಗಿ ಸುಹಾಸಿನಿ ನಟಿಸಿದ್ದರು. ಭಾರತೀಯ ಸಿನೆಮಾರಂಗದಲ್ಲಿ ತೀರಾ ಪರಿಚಿತವಾದ, ಆರ್ಥಿಕವಾಗಿ ಬಡವನಾದ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಶ್ರೀಮಂತ ಕನ್ಯೆಯನ್ನು ಒಲಿಸಿಕೊಳ್ಳಲು ಧನ ಸಂಪಾದನೆಯ ಹಾದಿಯಲ್ಲಿ ಪಡುವ ಪಡಿಪಾಟಲಿನ ಚಿತ್ರ. ಸಾಮಾನ್ಯ ಕಥೆಯಾದರೂ ಬಾಬು ಅವರ ತಾಜಾ ನಿರೂಪಣೆಯಲ್ಲಿ ಚಿತ್ರ ಆಕರ್ಷಣೀಯವಾಗಿತ್ತು. ಚಿತ್ರದ ಸೌಂದರ್ಯಾತ್ಮಕ ಗುಣಗಳು ಸಾಧಾರಣ ಪ್ರೇಮದ ಕತೆಯನ್ನು ರಂಜನೀಯ ಸಿನೆಮವಾಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾಗಿದ್ದವು.
ರಾಜೇಂದ್ರ ಸಿಂಗ್ ಅವರ ವೃತ್ತಿ ಬದುಕಿನ ಮತ್ತೊಂದು ಉಜ್ವಲ ಚಿತ್ರವೆಂದರೆ ‘ಮುಂಗಾರಿನ ಮಿಂಚು'(1995). ಆ ಕಾಲಮಾನದ ಯಶಸ್ವಿ ತಾರೆಯೆನಿಸಿದ್ದ ರಮೇಶ್ ಅರವಿಂದ್ ಮತ್ತು ‘ಜನುಮದ ಜೋಡಿ’ ಖ್ಯಾತಿಯ ಶಿಲ್ಪಾ ಜೋಡಿಯ ಈ ಚಿತ್ರ ತನ್ನ ಪ್ರಣಯ, ಹಾಸ್ಯ, ಕುತೂಹಲ ಮತ್ತು ನಾಟಕೀಯ ತಿರುವುಗಳ ಸೂಕ್ಷ್ಮ ನಿರೂಪಣೆಯಿಂದ ಪ್ರೇಕ್ಷಕರ ಮನಗೆದ್ದಿತು. ಉಷಾ ನವರತ್ನರಾಂ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರವೆಂದು ಹೇಳಿದರೂ ಈ ಚಿತ್ರವು ಹಾಲಿವುಡ್ಡಿನ ‘ಎ ವಾಕ್ ಇನ್ ದಿ ಕ್ಲೌಡ್ಸ್’ ಚಿತ್ರದಿಂದ ಬಹಳಷ್ಟು ಎರವಲು ಪಡೆದಿತ್ತು. ಆದರೆ ಈ ವಿದೇಶೀ ನೆಲದ ಕತೆಯನ್ನು ಮಲೆನಾಡ ಸಂಸ್ಕೃತಿಗೆ ಹೊಂದಿಸಿ ಇಲ್ಲಿನ ನೇಟಿವಟಿಯ ಸ್ಪರ್ಶದಿಂದ ಕಂಗೊಳಿಸುವಂತೆ ಮಾಡುವಲ್ಲಿ ಬಾಬು ಅವರ ಪ್ರತಿಭೆ ಗೆಲುವು ಸಾಧಿಸಿತು. ಅನಿರೀಕ್ಷಿತ ಸಂದರ್ಭದಲ್ಲಿ ವಾಣಿಜ್ಯ ವಸ್ತುಗಳ ಮಾರಾಟದ ಪ್ರಚಾರಕನೊಬ್ಬ ಸಂಕಷ್ಟದಲ್ಲಿದ್ದ ಯುವತಿಗೆ ನೆರವಾಗಲು ಹೋದಾಗ ಸಿಕ್ಕಿ ಬೀಳುವ ಪೇಚಿನ ಪ್ರಸಂಗಗಳು; ನಾಯಕನ ಹಿನ್ನೆಲೆ; ನಾಯಕನ ಮೇಲೆ ಬೆಳೆಯುವ ನಾಯಕಿಯ ಒಲವು; ಸಿಡುಕ ಅಪ್ಪ, ಜೀವನೋತ್ಸಾಹ ತುಂಬಿ ತುಳುಕುವ ತಾತ; ಕೃಷಿ, ಅಡುಗೆಯಿಂದ ಹಿಡಿದು ಆಚರಣೆವರೆಗೆ ಜೀವ ತಳೆಯುವ ಮಲೆನಾಡ ಸಂಸ್ಕೃತಿ, ರಮ್ಯ ಮಲೆನಾಡ ಪರಿಸರ ಭಿತ್ತಿ- ಇವೆಲ್ಲವನ್ನೂ ಬಳಸಿಕೊಂಡು ಬಾಬು ಅವರು ಪ್ರೇಕ್ಷಕರಿಗೆ ರುಚಿಶುದ್ಧ ಮನರಂಜನೆಯ ಮತ್ತು ಉಲ್ಲಾಸ ತುಂಬಿದ ಚಿತ್ರವನ್ನು ಸೃಷ್ಟಿಸಿದ್ದರು. ರಮೇಶ್, ಶಿಲ್ಪಾ ಜೊತೆಗೆ ಅಪ್ಪನಾಗಿ ಶ್ರೀನಿವಾಸ ಮೂರ್ತಿ ಮತ್ತು ಅಜ್ಜನಾಗಿ ಲೋಕೇಶ್ ಪ್ರೇಕ್ಷಕರ ಹೃದಯವನ್ನು ಸೂರೆಗೊಂಡರು.
ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ
ದೃಶ್ಯಗಳ ಮೂಲಕವೇ ಸಿನೆಮಾ ಕಾವ್ಯವನ್ನು ಕಟ್ಟುವ ಬಾಬು ಅವರ ಹಂಬಲಕ್ಕೆ ಬಿ.ಸಿ. ಗೌರಿಶಂಕರ್ ಅವರ ಛಾಯಾಗ್ರಹಣ ಮತ್ತು ವಿ. ಮನೋಹರ್ ಅವರ ಛಾಯಾಗ್ರಹಣ ಅದ್ಭುತ ಸಹಕಾರ ನೀಡಿವೆ. ಹುಸಿ ಪ್ರೇಮವೊಂದು ನಿಜವಾದ ಪ್ರಣಯವಾಗಿ ಪರಿವರ್ತನೆಯಾಗುವ ಸಾಧಾರಣ ಮಾದರಿಯ ಕತೆಯನ್ನು ಬಾಬು ಅವರು ತಮ್ಮ ಕುಸರಿಯಿಂದ ಉಲ್ಲಾಸಕರ ಅನುಭವ ನೀಡುವ ಕೃತಿಯಾಗಿ ರೂಪಿಸಿದ್ದಾರೆ. ನಾಗರಹೊಳೆ, ಅಂತ, ಬಂಧನ ಮತ್ತು ಮುತ್ತಿನ ಹಾರ ಚಿತ್ರದ ಮೂಲಕ ಹಲಬಗೆಯ ಭಿನ್ನ ವಸ್ತುಗಳ ಚಿತ್ರದಲ್ಲಿ ಯಶಸ್ಸು ಕಂಡ ಬಾಬು ಅವರ ವೃತ್ತಿಬದುಕಿನಲ್ಲಿ ಒಂದು ರೊಮ್ಯಾಂಟಿಕ್ ಡ್ರಾಮಾ ಪ್ರಕಾರದಲ್ಲಿ ಯಶಸ್ಸಿನ ಪರಾಕಾಷ್ಠೆ ತಲುಪಿದ ಚಿತ್ರವಿದು.

‘ಮುಂಗಾರಿನ ಮಿಂಚು’ ಚಿತ್ರದ ಯಶಸ್ಸಿನ ಹಿಂದೆ ಬಾಬು ಅವರು ಬಹು ಬೇಗನೆ ಮರೆಯಬಹುದಾದ ‘ದೋಣಿಸಾಗಲಿ'(1998) ಚಿತ್ರವನ್ನು ನಿರ್ದೇಶಿಸಿ ನಿರಾಶೆ ಹುಟ್ಟಿಸಿದರು. ಸೋಲನ್ನು ಮತ್ತೆ ಗೆಲುವಾಗಿ ಪರಿವರ್ತಿಸಿ ಪುಟಿದೇಳುವ ಸಾಮರ್ಥ್ಯವಿರುವ ಬಾಬು ಅವರು ಸಮಕಾಲೀನ ರೈತ ಸಮಸ್ಯೆಯನ್ನು ಕೈಗೆತ್ತಿಕೊಂಡು ‘ಭೂಮಿ ತಾಯಿಯ ಚೊಚ್ಚಲ ಮಗ'(1998) ಚಿತ್ರದ ಮೂಲಕ ಮತ್ತೆ ಮುಂಚೂಣಿಗೆ ಬಂದರು. ಈ ಬಾರಿ ಅವರು ಕರ್ನಾಟಕದ ರೈತ ಹೋರಾಟದ ಹಿನ್ನೆಲೆಯ ಕಥೆಯನ್ನು ಹೆಣೆದು ಯುವಕರು ವ್ಯವಸ್ಥೆಯನ್ನು ಬದಲಿಸಲು ನಡೆಸುವ ಸಂಘರ್ಷದ ಚಿತ್ರವನ್ನು ರೂಪಿಸಿದರು. ಹುಡುಗಾಟದ ಹುಡುಗರಿಬ್ಬರು ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾದ ನಂತರ ಬೇರುಬಿಟ್ಟ ಪಾಳೇಗಾರಿಕೆ ಸಂಸ್ಕೃತಿ ವಿರುದ್ದ ಸಂಘಟಿತ ಹೋರಾಟ ಕಟ್ಟುವ ಕಥೇ. ಇಂಥ ಹೋರಾಟದಲ್ಲಿ ಸಮಷ್ಟಿಯ ಹಿತದ ಮುಂದೆ ವ್ಯಕ್ತಿಯು ತ್ಯಾಗ, ಬಲಿದಾನಗಳು ಅನಿವಾರ್ಯವೆಂಬ ಸಂದೇಶ ಚಿತ್ರದುದ್ದಕ್ಕೂ ಅನುರಣಿಸುತ್ತದೆ. ವಸ್ತವಿನ ದೃಷ್ಟಿಯಿಂದ ಭಿನ್ನವಾದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ವ್ಯವಸ್ಥೆಯ ವಿರುದ್ಧ ಉರಿಯುವ ಸಿಟ್ಟಿನ ನಾಯಕನಾಗಿ ನೀಡಿರುವ ಸಂಯಮಪೂರ್ಣ ನಟನೆ ಅವರ ವೃತ್ತಿ ಬದುಕಿನ ಘನವಾದ ಅಭಿನಯವೆನಿಸಿತ್ತು. ಬಂಡೆಯೊಂದನ್ನು ತನ್ನ ಶ್ರಮದಿಂದ ಕೆಡುವುತ್ತಾ ಜಲಾಶಯ ನಿರ್ಮಿಸಲು ಹೆಣಗುವ ಕಲ್ಲಣ್ಣನ ಪಾತ್ರವು(ಲೋಕೇಶ್) ಬಿಹಾರದಲ್ಲಿ ಇಪ್ಪತ್ತೆರಡು ವರ್ಷಕಾಲ ಏಕಾಂಗಿಯಾಗಿ ಗುಡ್ಡವನ್ನು ಒಡೆದು ದಾರಿ ನಿರ್ಮಿಸಿದ ದಶರಥ ಮಾಂಝಿಯ ಬದುಕನ್ನು ಆಧರಿಸಿತ್ತು. ಹಳ್ಳಿಯ ಯಜಮಾನ ಚನ್ನಬಸಪ್ಪನ ಪಾತ್ರದಲ್ಲಿ ಬಂಗಾಳಿ ನಟ ಸವ್ಯಸಾಚಿ ಚಕ್ರವರ್ತಿಯ ನಟನೆಗೆ ಪ್ರೇಕ್ಷಕರು ಮಾರುಹೋದರು. ಹೀಗೆ ಸಮಕಾಲೀನ ಸಂಗತಿಗಳಿಗೆ ಮುಖಾಮುಖಿಯಾಗಿಸಿದ, ಕನ್ನಡಕ್ಕೆ ದಕ್ಕಿದ ಈ ವಿಶಿಷ್ಟ ಚಿತ್ರ ಗಳಿಕೆಯಲ್ಲಿ ಯಶಸ್ಸು ಪಡೆಯುವದರ ಜೊತೆಗೆ ಅನೇಕ ಪ್ರಶಸ್ತಿಗಳಿಗೂ ಪಾತ್ರವಾಯಿತು.
ವೃತ್ತಿ ಬದುಕಿನುದ್ದಕ್ಕೂ ವಸ್ತು ನಿರೂಪಣೆಯಲ್ಲಿ ಸತತ ಪ್ರಯೋಗ ನಡೆಸುತ್ತಾ ಬಂದ ಬಾಬು ಅವರು ಹಾಸ್ಯ ಚಿತ್ರ ಪ್ರಕಾರಕ್ಕೆ ತಡವಾಗಿ ಪ್ರವೇಶ ಮಾಡಿದರೂ ಕನ್ನಡದ ಫುಲ್ ಲೆಂತ್ ಕಾಮಿಡಿ ಸರಣಿಯನ್ನೇ ರೂಪಿಸಿ ಅಮೋಘ ಯಶಸ್ಸು ಸಾಧಿಸಿದರು. ಅವರ ‘…ಸಾರ್’ ತ್ರಿವಳಿಗಳು ಕನ್ನಡದ ಚಿತ್ರಗಳ ಮನರಂಜನೆಯ ದಿಗಂತವನ್ನು ವಿಸ್ತರಿಸಿದವು. ಇವು ರಾಜೇಂದ್ರ ಸಿಂಗ್ ಅವರ ವೃತ್ತಿ ಬದುಕಿನ ವಿಶಿಷ್ಟ ಹಂತವೊಂದನ್ನು ಪ್ರತಿನಿಧಿಸುತ್ತವೆ. ಲಘು ಹಾಸ್ಯದಿಂದ ತುಂಬಿ ತುಳುಕಿದ, ವಾಣಿಜ್ಯವಾಗಿ ಯಶಸ್ಸು ಸಾಧಿಸಿ, ಅಪಾರ ಜನಪ್ರಿಯತೆ ಪಡೆದ ಈ ತ್ರಿವಳಿಗಳು ಬಾಬು ಅವರ ಸಾಹಸ, ಗಂಭೀರ ಮತ್ತು ಕಲಾತ್ಮಕ ಚಿತ್ರಗಳಿಗಿಂತ ತೀರಾ ಭಿನ್ನ ಹಾದಿ ಹಿಡಿದಿದ್ದವು. ಮೂವರು ನಾಯಕರ (ರಮೇಶ್ ಅರವಿಂದ್, ಎಸ್ ನಾರಾಯಣ್ ಮತ್ತು ಮೋಹನ್/ಕೋಮಲ್) ಮಾಡಿಕೊಳ್ಳುವ ಅಪಾರ್ಥ, ಮೊಂಡು ಸಾಹಸ, ಪೇಚಾಟಗಳು, ಅಪಾಯವಿಲ್ಲದ ಹಿಂಸೆಯ ಸನ್ನಿವೇಶಗಳಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲು ಹೆಣಗುವ ಸ್ಲಾಪ್‌ಸ್ಟಿಕ್ ಕಾಮೆಡಿಯನ್ನು ಈ ಚಿತ್ರಗಳಲ್ಲಿ ಅಳವಡಿಸಿ ಅಶ್ಲೀಲವಿಲ್ಲದ ಹಾಸ್ಯ ದೃಶ್ಯಗಳ ಮೂಲಕವೇ ಭರಪೂರ ಮನರಂಜನೆ ಒದಗಿಸುವಲ್ಲಿ ಯಶಸ್ವಿಯಾದವು.

ಈ ಸರಣಿಯ ಮೊದಲ ಚಿತ್ರವಾಗಿ ಬಿಡುಗಡೆಯಾದ ‘ಕುರಿಗಳು ಸಾರ್ ಕುರಿಗಳು'(2001) ಚಿತ್ರವನ್ನು ಜೈಲೇ ಸುಖ ಒದಗಿಸುವ ಆಶ್ರಯಧಾಮ ಎಂದು ನಂಬಿದ, ಬುದ್ಧಿಹೀನರಂತೆ ಕಾಣುವ ಮೂವರು ನಾಯಕರು ಜೈಲಿನಿಂದ ಬಿಡುಗಡೆಯಾಗಿ ಹೊರಬಂದು ನಾಗರಿಕ ಸಮಾಜದಲ್ಲಿ ಎದುರಿಸುವ ಪಡಿಪಾಟಲುಗಳು ಆವರಿಸಿಕೊಂಡಿವೆ. ಈ ಗೋಜಲಿನೊಳಗೆ ಶ್ರೀಮಂತ ಹುಡುಗಿ, ಹಣ ತುಂಬಿದ ಚೀಲ ಮತ್ತು ಮಾರುವೇಷದ ಪೊಲೀಸ್ ಸೇರಿದಾಗ ನಗೆಯ ಹಬ್ಬ ಸೃಷ್ಟಿಯಾಗುತ್ತದೆ.
‘ಕುರಿಗಳು ಸಾರ್ ಕುರಿಗಳು’ ಯಶಸ್ಸಿನ ಹಿಂದೆಯೇ ತೆರೆಗೆ ಬಂದ ಚಿತ್ರ ‘ಕೋತಿಗಳು ಸಾರ್ ಕೋತಿಗಳು'(2001) ಹಿಂದಿನ ಮೂವರು ನಾಯಕರ ವಿಭಿನ್ನ ಅವತಾರವಿರುವ ಚಿತ್ರ. ತಮ್ಮ ಪತ್ನಿಯರಲ್ಲಿ ಆಸಕ್ತಿ ಕಳೆದುಕೊಂಡ ಮೂವರು ನಾಯಕರು ಮಾಲೀಕನ ಪುತ್ರಿಯರನ್ನು ಒಲಿಸಿಕೊಳ್ಳಲು ಮಾಡುವ ಪ್ರಯತ್ನಗಳು ಮತ್ತು ಗಂಡಂದಿರನ್ನು ಸರಿದಾರಿಗೆ ತರಲು ಫಿಟ್ಟಿಂಗ್ ಮುನಿಯಮ್ಮನ(ಉಮಾಶ್ರೀ) ಜೊತೆ ಸೇರಿ ಪತ್ನಿಯರು ನಡೆಸುವ ಸಾಹಸಗಳು ಮನರಂಜನೆಯ ಮಹಾಪೂರವನ್ನೇ ಹರಿಸುತ್ತವೆ.
ತ್ರಿವಳಿಯ ಕೊನೆಯ ಚಿತ್ರವಾಗಿ ಬಂದ ‘ಕತ್ತೆಗಳು ಸಾರ್ ಕತ್ತೆಗಳು’ ಚಿತ್ರದಲ್ಲಿ ಮೋಹನ್ ಬದಲು ಕೋಮಲ್ ನಟಿಸಿದ್ದಾರೆ. ಸರ್ಕಸ್ ಕಂಪನಿಯ ಕೆಲಸದಿಂದ ವಜಾ ಆದ ಮೂವರು ನಾಯಕರು ಅಪಹರಣ ಮತ್ತು ಬ್ಲಾಕ್‌ಮೇಲ್‌ಗೆ ಸಿಲುಕಿ ಒದ್ದಾಡುವ ಸನ್ನಿವೇಶಗಳು ಚಿತ್ರದ ಹಾಸ್ಯದ ಮೂಲಗಳಾಗಿವೆ.
ಮೂರು ಚಿತ್ರಗಳೂ ಅಸಾಧಾರಣ ವಾಣಿಜ್ಯ ಯಶಸ್ಸು ಪಡೆದಂಥವು. ಚಿತ್ರದ ಮೂವರು ನಾಯಕರ ಕಾಮೆಡಿ ಟೈಮಿಂಗ್‌ಗೆ ಮತ್ತು ರುಕ್ಮಿಣಿ, ಫಿಟ್ಟಿಂಗ್ ಮುನಿಯಮ್ಮ ಮತ್ತು ಜಯಮ್ಮನ ಪಾತ್ರದಲ್ಲಿ ಉಮಾಶ್ರೀ ಅವರ ಮ್ಯಾನರಿಸಂಗಳಿಗೆ ಪ್ರೇಕ್ಷಕರು ಪರವಶರಾದರು.
ಇದನ್ನು ಓದಿದ್ದೀರಾ?: SVR @ 50: ರುಚಿಶುದ್ಧ ರಂಜನೆಯ ಚಿತ್ರಗಳ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ (ಬಾಬು)
‘ಸಾರ್…’ ಹಾಸ್ಯ ಸರಣಿಯಲ್ಲಿ ಕಲಾತ್ಮಕ ಸೊಬಗಿರಲಿಲ್ಲ, ನಿಜ. ಆದರೆ ಈ ಸರಣಿ ರಾಜೇಂದ್ರ ಸಿಂಗ್ ಬಾಬು ಅವರು ವಾಣಿಜ್ಯ ಸಿನೆಮಾಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಲಾತ್ಮಕ ಯಶಸ್ಸು ಕಂಡ ನಿರ್ದೇಶಕರೊಬ್ಬರು ಸಮುದಾಯವನ್ನು ರಂಜಿಸುವ ಯಶಸ್ವೀ ಚಿತ್ರಗಳನ್ನೂ ರೂಪಿಸಬಲ್ಲರು ಎಂಬುದಕ್ಕೆ ಈ ಸರಣಿ ಸಾಕ್ಷಿ.
ಈ ಸರಣಿಯ ನಂತರ ಬಂದ ಬಾಬು ಅವರ ‘ಲವ್’, ‘ಕಾಂಚನ ಗಂಗಾ’, ‘ತಿಪ್ಪಾರಹಳ್ಳಿ ತರ್ಲೆಗಳು’, ‘ಮೋಹಿನಿ 9886788888’, ‘ರೆಬೆಲ್’ ಚಿತ್ರಗಳು ಇತ್ತ ಕಲಾತ್ಮಕ ಯಶಸ್ಸನ್ನು ಸಾಧಿಸದೆ ಅತ್ತ ಹಣಗಳಿಕೆಯಲ್ಲೂ ದಾಖಲೆ ಬರೆಯದ ಚಿತ್ರಗಳೆನಿಸಿದವು. ಆದರೆ ಸೋಲಿನಿಂದ ಎಂದೂ ನಿರಾಶರಾಗದೆ ಪುಟಿದೇಳುವ ಗುಣವುಳ್ಳ ಬಾಬು ಅವರ ಮುಂದಿನ ಚಿತ್ರಗಳಾದ ‘ಕಂಬಳ’ ಮತ್ತು ‘ಮದಕರಿ’ ಎಂದಿನ ಕುತೂಹಲ ಹುಟ್ಟಿಸಿರುವುದು ನಿಜ.

ನಿರ್ದೇಶಕರಾಗಿ ಐವತ್ತು ವರ್ಷಗಳ ದೀರ್ಘ ಪ್ರಯಾಣವನ್ನು ಮುಗಿಸಿ ಸಾಗುತ್ತಿರುವ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ ನಿಸ್ಸಂಶಯವಾಗಿ ತಮ್ಮದೇ ಸ್ವಂತ ನೆಲೆಯನ್ನು ಕಂಡುಕೊಂಡ ಭಾರತೀಯ ಚಿತ್ರರಂಗದ ಸಾಧಕರಲ್ಲೊಬ್ಬರು. ತಮ್ಮ ಚಿತ್ರಗಳಿಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎಂಟು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು ಮೂರು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಬಾಬು ಅವರು ಹಿಂದೀ ಚಿತ್ರರಂಗದಲ್ಲೂ ಗುರುತಿಸಿಕೊಂಡವರು. ಚಿತ್ರ ನಿರ್ಮಾಣ, ನಿರ್ದೇಶನದಾಚೆಗೂ ರಾಜ್ಯದಲ್ಲಿ ನಡೆದ ಜನಪರ ಹಲವು ಚಳವಳಿಗಳಲ್ಲಿ ಭಾಗಿಯಾಗಿ, ಚಿತ್ರೋದ್ಯಮಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಹಲವು ಸಲಹಾ ಸಮಿತಿಗಳ ಸದಸ್ಯರಾಗಿ, ಚಿತ್ರ ನಿರ್ಮಾಣವನ್ನು ಚಟುವಟಿಕೆಯನ್ನು ವಿಸ್ತರಿಸಲು ಚಿಂತಿಸುತ್ತಾ ಸಲಹೆ ನೀಡುವ ಹಿರಿಯ ಚಿತ್ರೋದ್ಯಮಿಯಾಗಿ ಸಕ್ರಿಯರಾಗಿದ್ದಾರೆ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




