“ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು ರಾಯಭಾರಿ ಆಗಬೇಕು ಎಂಬ ಉದ್ದೇಶದಿಂದ, ಇನ್‌ಸ್ಟಾಗ್ರಾಂನಲ್ಲಿ 28.5 ಮಿಲಿಯನ್ ಬೆಂಬಲಿಗರನ್ನು (ಪಾಲೋವರ್ಸ್) ಹೊಂದಿರುವ ಬಹುಭಾಷಾ ತಾರೆ ತಮನ್ನಾ ಭಾಟಿಯ ಅವರನ್ನು ಆಯ್ಕೆ ಮಾಡಿದ್ದೇವೆ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ʼರಾಯಭಾರಿ ಅನಾವರಣ ಹೊಸ ರೂಪದ ವಿಜೃಂಭಣೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯ ಅನೇಕ ಉತ್ಪನಗಳಿಗೆ ಇಂದಿನಿಂದ ಬಹುಭಾಷಾ ನಟಿ ತಮನ್ನಾ ಭಾಟಿಯಾ ರಾಯಭಾರಿ ಎಂದು ಘೋಷಿಸಿದರು.
“ಪ್ರಸ್ತುತ 1,777 ಕೋಟಿ ರೂಪಾಯಿ ವಹಿವಾಟನ್ನು ಮಾಡಿ, 450 ಕೋಟಿ ರೂಪಾಯಿ ಲಾಭವನ್ನು ಕೆಎಸ್‌ಡಿಎಲ್ ಸಂಸ್ಥೆ ಪಡೆದಿದೆ. ಆದ್ದರಿಂದ, ಆಧುನಿಕ ಸ್ಪರ್ಷವನ್ನು ಕೊಡುವ ಉದ್ದೇಶದಿಂದ ಹೊಸ ರೀತಿಯ ಪ್ಯಾಕ್‌ಗಳನ್ನು ತಯಾರು ಮಾಡಿದ್ದೇವೆ. ಜೊತೆಗೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪನ್ನು ಕೊಂಡ್ಯೊಯುವ ಪ್ರಯತ್ನವನ್ನು ಮಾಡುತ್ತಿದ್ದೇವೆ” ಎಂದರು.

“ಸೋಪಿನ ಜೊತೆಗೆ ಸೌಂದರ್ಯ ಉತ್ಪನ್ನಗಳು ಮತ್ತು ಗೃಹ ಉಪಯೋಗಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಕೆಎಸ್‌ಡಿಎಲ್ ಸಂಸ್ಥೆಯಿಂದ ಒಟ್ಟು 93 ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. 2030ರ ವೇಳೆಗೆ 5 ಸಾವಿರ ಕೋಟಿ ವಹಿವಾಟನ್ನು ತಲುಪುವ ಗುರಿ ಹಾಕಿಕೊಂಡಿದ್ದೇವೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಸುಗಂಧ ದ್ರವ್ಯ ಕ್ಷೇತ್ರದಲ್ಲಿಯೂ ಹೆಜ್ಜೆ ಇಡುತ್ತಿದ್ದೇವೆ. ಸುಗಂಧ ದ್ರವ್ಯದ ರಾಜಧಾನಿ ಎಂದೇ ಖ್ಯಾತವಾಗಿರುವ ಕನೌಜ್‌ಗೆ ಹೋಗಿ ಅಧ್ಯಯನ ಮಾಡಲಾಗಿದೆ. ಅದರಂತೆ ಪ್ರೀಮಿಯಂ, ಮಧ್ಯಮ ಮತ್ತು ಸಾಧರಣ ಮಟ್ಟದಲ್ಲಿ ಮೂರು ತರದ ಸುಗಂಧ ದ್ರವ್ಯವನ್ನು ತರಲಾಗುತ್ತಿದೆ” ಎಂದು ಹೇಳಿದರು.
“ಮೈಸೂರು ಸ್ಯಾಂಡಲ್ ಸೋಪ್ ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಇದನ್ನು ಕಟ್ಟಿ ಬೆಳೆಸಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ, ಇವರ ಜೊತೆಗೆ ಸಂಸ್ಥೆಯ ಬೆಳವಣಿಗಾಗಿ ಶ್ರಮಿಸಿದ ಕಾರ್ಮಿಕರ ಕೊಡೆಗೆಯೂ ಸಾಕಷ್ಟಿದೆ” ಎಂದು ಸ್ಮರಿಸಿದರು.

ಪದೇ ಪದೇ ತಮನ್ನಾ ಭಾಟಿಯ ಅವರಿಗೆ 3 ಕೋಟಿಯ ವರೆಗೆ ಇನ್ಸ್ಟಾಗ್ರಾಂ ಬೆಂಬಲಿಗರು ಇದ್ದಾರೆ ಎಂದು ಉಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಅಧ್ಯಕ್ಷರಾದ ಸಿ.ಎಸ್.ಅಪ್ಪಾಜಿ ನಾಡಗೌಡ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಡಾ. ಎಸ್. ಸೆಲ್ವಕುಮಾರ್, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪಿ.ಕೆ.ಪ್ರಶಾಂತ್ ಮತ್ತಿತರು ಉಪಸ್ಥಿತರಿದ್ದರು.





