'ಸಾಹಿತ್ಯ ಒಂದು ಗೋಳಲ್ಲ, ರಗಳೆ ಅಲ್ಲ, ವಿಲಾಸ ಅಲ್ಲ, ಸರಸ ಅಲ್ಲ. ಅದು ಮನುಷ್ಯತ್ವದ ಹುಡುಕಾಟ, ಅದೇ ಪ್ರಾಣ' ಎಂದ, ಇತ್ತೀಚೆಗೆ ಇಲ್ಲವಾದ ಮೊಗಳ್ಳಿ ಗಣೇಶ್ ಕುರಿತ ಬರೆಹ...
ಕಾಲೇಜಿನ ಲೈಬ್ರರಿಯಲ್ಲಿ ಅಕಸ್ಮಾತ್ ಸಿಕ್ಕ ‘ತೊಟ್ಟಿಲು’ ಕಾದಂಬರಿ ಓದಿದಾಗ ಅಲ್ಲಿನ ಭಾಷೆಯ ಮಾಂತ್ರಿಕ ನಿರೂಪಣೆ ಬೆರಗುಗೊಳಿಸಿತ್ತು. ಕಾದಂಬರಿಯಲ್ಲಿ ರೇಡಿಯೋ ಆಲಿಸುತ್ತಾ ಕಾಲಾತೀತನಾಗಿ, ಅನೂಹ್ಯ ತರಂಗಗಳಲ್ಲಿ ಧ್ಯಾನಸ್ಥ ಸ್ಥಿತಿಗೆ ತಲುಪುವ ನಿರೂಪಕನ ಚಿಕ್ಕಪ್ಪನ ಪಾತ್ರ ಮಸುಕು-ಮಸುಕಾಗಿ ನೆನಪಿದೆ. ‘ಬುಗುರಿ’ ಕತೆಯಲ್ಲಿನ ‘ಹೇಲುಗುಂಡಿ’ ಭಿನ್ನ ಭಾವದ, ತಾರತಮ್ಯದ ಅಸ್ಪೃಶ್ಯ ಭಾರತದ ದರ್ಶನ ಮಾಡಿಸಿತು. ಕತೆಗಾರನೊಬ್ಬ ಮುಗ್ಧ ಮನಸ್ಸಿನ ಹುಡುಗನೊಬ್ಬನ ಅವ್ಯಕ್ತವಾದ ನೋವು, ಸಮುದಾಯದ ಸಂಕಟಗಳಿಗೆ ನುಡಿಕೊಟ್ಟು ಅಕ್ಷರ ರೂಪದಲ್ಲಿ ಜೀವಂತಗೊಳಿಸಿದ.
‘ಒಂದು ಹಳೇ ಚಡ್ಡಿ’ ಕತೆಯು ಮನುಷ್ಯನ ಕ್ಷುಲ್ಲಕ ವರ್ತನೆ, ಕುಟುಂಬವೊಂದರ ದುರಂತ ಅಂತ್ಯದಲ್ಲಿ ಕೊನೆಯಾಗುವ ಗಾಢ ವಿಷಾದವನ್ನು ಬಿಂಬಿಸುತ್ತದೆ. ‘ಅಲ್ಲಿ ಆ ಆಳು ಈಗಲೂ’, ‘ನನ್ನಜ್ಜನಿಗೊಂದಾಸೆಯಿತ್ತು’ ಕಳೆದ ಕಾಲದ ಕವಣೆಕಲ್ಲಿನ ಬೀಸಿನಲ್ಲಿ ಭಗ್ನಗೊಂಡು, ಎಲ್ಲರಿಂದ ದೂರಾದ ತಬ್ಬಲಿಗಳ ಬದುಕಿನ ದುಃಸ್ವಪ್ನದಂತಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಮಾನವೀಯಗೊಳಿಸುವ ನಿಲುವಿನ ಬಿ. ಬಸವಲಿಂಗಪ್ಪನವರ ‘ಬೂಸಾ’ ಹೇಳಿಕೆಯ ವಿಸ್ತರಣೆಯಂತೆ ಮೊಗಳ್ಳಿಯವರ ‘ತಕರಾರು’ ಲೇಖನಗಳನ್ನು ಓದಬಹುದು. ಸಾಹಿತ್ಯದಲ್ಲಿ ಅಂತರ್ಗತವಾಗಿರುವ ಹಿಂದೂ ವೈದಿಕ ಪ್ರಜ್ಞೆ, ಜಾತಿಸೂತಕದಿಂದ ರೋಗಗ್ರಸ್ತವಾಗಿರುವುದಕ್ಕೆ ತಮ್ಮ ‘ಜಾತಿ ಮೀಮಾಂಸೆ’ ಬರಹಗಳ ಮೂಲಕ ಅಲಕ್ಷಿತ ಸಂವೇದನೆಯ ಅಸ್ತಿತ್ವವನ್ನು ಅವರು ಹಕ್ಕೊತ್ತಾಯದಲ್ಲಿ ಮಂಡಿಸಿದರು.
ಇದನ್ನು ಓದಿದ್ದೀರಾ?: ಗತದ ಗೆಳೆಯ ಗಣೇಶ್
“ಇಹದ ಈ ಎಲ್ಲಾ ವಿಕೃತಿಗಳಿಂದ ವಿಮೋಚನೆಗೊಳ್ಳುವುದೇ ಸಾಹಿತ್ಯದ ಪ್ರಾಣತತ್ವ. ಸಾಹಿತ್ಯ ಒಂದು ಗೋಳಲ್ಲ, ರಗಳೆ ಅಲ್ಲ, ವಿಲಾಸ ಅಲ್ಲ, ಸರಸ ಅಲ್ಲ. ಅದು ಮನುಷ್ಯತ್ವದ ಹುಡುಕಾಟ, ಅದೇ ಪ್ರಾಣ” ಎಂದು ಮೊಗಳ್ಳಿ ತಮ್ಮ ಕೊನೆಯ ಸಂದರ್ಶನದಲ್ಲಿ (ಮಯೂರ, ಅಕ್ಟೋಬರ್, 2025) ಹೇಳಿದ್ದಾರೆ. ಅನಾದಿ ಕಾಲದಿಂದಲೂ ಇರುವ ಈ ಎಲ್ಲಾ ವಿಕಾರಗಳನ್ನು ನೀಗಿಸುವ ಧಾವಂತದಲ್ಲಿ ಅವರ ಸೃಜನಶೀಲತೆಯು ವಿಸ್ತರಿಸಿಕೊಂಡಿದೆ.
‘ನಾನೆಂಬುದು ಕಿಂಚಿತ್’ ಆತ್ಮಕಥನ ಬಾಲ್ಯದಲ್ಲಿ ಕಂಡುಂಡ ಹಿಂಸೆ, ಕ್ರೌರ್ಯದ ನರಕ ದರ್ಶನ. ಬದುಕಿನ ಏರಿಳಿತಗಳಲ್ಲಿ ಮನುಷ್ಯರ ಕೇಡಿನಿಂದ ಸಂಭವಿಸುವ ತಲ್ಲಣಗಳು, ವಿಫಲತೆಯಿಂದ ಅನುಭವಿಸುವ ಯಾತನೆಗಳ ವಿರಾಟ ಕಥನ. ‘ದೇಶಿ’, ‘ಅವ್ಯಕ್ತ ಚರಿತ್ರೆ’, ‘ದಲಿತ ಜಾನಪದ’ ಕೃತಿಗಳ ಮೂಲಕ ಜೀವವಿರೋಧಿ, ಲೋಕ ಕಂಟಕವಾಗಿರುವ ಬ್ರಾಹ್ಮಣ್ಯಕ್ಕೆ, ವೈದಿಕ ಪ್ರಜ್ಞೆಯ ಸಿದ್ಧಮಾದರಿಗಳಿಗೆ ಪರ್ಯಾಯವಾಗಿ ಮೌಖಿಕ ಪರಂಪರೆಯ ನೆಲಮೂಲದ ಲಯದಿಂದ ಒಡಮೂಡುವ, ಸಮಷ್ಟಿ ಪ್ರಜ್ಞೆಯ ಹೊಕ್ಕುಳು ಬಳ್ಳಿಯಂತೆ ಬೆಸೆದುಕೊಂಡಿರುವ ಆದಿಮ ಸಂವೇದನೆಯನ್ನು, ದಮನಿತ ಸಮುದಾಯಗಳ ಒಡಲಾಳದಿಂದ ಹೊಮ್ಮುವ ನಾದದಂತೆ ಮೊಗಳ್ಳಿ ನಿರೂಪಿಸಿದ್ದಾರೆ.
‘ನಾನು ಯಾವನಿಗೂ, ಒಂದು ಗಳಿಗೆಯೂ ಗುಲಾಮ ಆದವನಲ್ಲ. ಸತ್ಯದ ಜೀತಗಾರ’ ಎಂದು ತನ್ನ ಬಗ್ಗೆ ತಾನೇ ಆತ್ಮಪ್ರತ್ಯಯದಲ್ಲಿ ಬರೆದುಕೊಂಡಿರುವ ಲೇಖಕ ಮೊಗಳ್ಳಿ ಗಣೇಶ್. ಮೊಗಳ್ಳಿ ತೀರಿಕೊಂಡಾಗ ಅವರ ಗುಣ, ಸ್ವಭಾವ, ದೋಷ, ಸಿಟ್ಟು, ವ್ಯಸನ, ಸಾಧನೆ ಇವುಗಳ ಬಗ್ಗೆ ಅವರ ಸಮಕಾಲೀನರು, ಸ್ನೇಹಿತರು ಬರೆದಿದ್ದಾರೆ. ತನ್ನ ಹುಟ್ಟೂರಿನ ದಟ್ಟ ಅನುಭವವನ್ನು ಮೊಗೆದು, ಸೃಜನಶೀಲತೆಯಲ್ಲಿ ಬಸಿದು ಕನ್ನಡಕ್ಕೆ ಅನನ್ಯವಾದ ಕತೆಗಳನ್ನು ಕೊಟ್ಟ ಮೊಗಳ್ಳಿಯವರಲ್ಲಿ ಇನ್ನೂ ಹುಟ್ಟುತ್ತಿದ್ದ ಕತೆಗಳು, ಕೃತಿಗಳು ಎಷ್ಟಿದ್ದವೋ? ಗೊತ್ತಿಲ್ಲ…
ಆದರೆ, ಕಾಲ ನಮ್ಮ ಲೆಕ್ಕಾಚಾರವನ್ನು, ನಿಸರ್ಗ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಪೂರ್ಣಗೊಳಿಸುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಬದುಕಿದ್ದಾಗ ಕೆಲವರ ಪಾಲಿಗೆ ಏಕಾಂಗಿಯಂತೆ, ವಿಕ್ಷಿಪ್ತನಂತೆ, ಸಿಡುಕಿನ ವ್ಯಕ್ತಿಯಂತೆ, ಅಪ್ರಿಯನಂತೆ ಕಂಡ ಲೇಖಕನೊಬ್ಬ ತಾನು ಇಲ್ಲದಿರುವ ಶೂನ್ಯಗಳಿಗೆಯಲ್ಲಿ, ಆತನ ಸಾಹಿತ್ಯ ಮುಕ್ತವಾಗಿ ಓದುಗನಲ್ಲಿ ರೂಪಾಂತರಗೊಳ್ಳಬಹುದು. ಆ ಮೂಲಕ ಲೇಖಕ ಓದುಗನ ಗ್ರಹಿಕೆಯಲ್ಲಿ ಹೊಸದಾಗಿ ಮರುಹುಟ್ಟು ಪಡೆಯಬಹುದು. ಅದೇ ಲೇಖಕ-ಓದುಗರ ಪಾಲಿನ ಜೀವಂತ ಗಳಿಗೆಯೂ ಆಗಿರಬಹುದು…

ಆರ್. ಶ್ರೀಧರ್
ಲೇಖಕರು, ಸಹಾಯಕ ಪ್ರಾಧ್ಯಾಪಕರು




