ಕನ್ನಡ ಭಾಷೆ ಮಾತನಾಡುವ ಕನ್ನಡಿಗರನ್ನು ಒಂದೆಡೆ ತರುವ 'ಕರ್ನಾಟಕ ಏಕೀಕರಣ'ದ ಹುಟ್ಟು, ಬೆಳವಣಿಗೆ ಮತ್ತು ಕರ್ನಾಟಕ ಎಂದು ಹೆಸರಾಗುವವರೆಗಿನ ಹೋರಾಟಗಳತ್ತ ಒಂದು ನೋಟ... ಕನ್ನಡ ರಾಜ್ಯೋತ್ಸವಕ್ಕಾಗಿ
ಬ್ರಿಟಿಷರಿಂದ ‘ಭಾರತ’ 1947ರಲ್ಲಿ ಸ್ವತಂತ್ರಗೊಂಡಾಗ, ಈ ದೇಶದಲ್ಲಿ 565 ರಾಜ ಸಂಸ್ಥಾನ(princly states)ಗಳಿದ್ದವು. ಆ ಪೂರ್ವದಲ್ಲಿ, ಕನ್ನಡ ಮಾತನಾಡುವ, ಕನ್ನಡ ಭಾಷಿಕರು, ಕೆಳಕಂಡ ರಾಜ ಸಂಸ್ಥಾನಗಳು ಮತ್ತು ಬ್ರಿಟಿಷ್ ಆಳ್ವಿಕೆಯ ಭೂಪ್ರದೇಶಗಳ ಒಳಗೆ ವಾಸಿಸುತ್ತಿದ್ದರು.
- Mysore Odeyar
- Hyderbad Nizam
- Bombay Presidency
- Madras Presidency
- The Terrototy of Kodagu
I. ಕರ್ನಾಟಕ ವಿದ್ಯಾವರ್ಧಕ ಸಂಘ
ವಿವಿಧ ರಾಜ ಸಂಸ್ಥಾನಗಳು ಮತ್ತು ಬ್ರಿಟಿಷ್ ಪ್ರೆಸಿಡೆನ್ಸಿ ಆಳ್ವಿಕೆ ಪ್ರದೇಶಗಳ ವ್ಯಾಪ್ತಿಯೊಳಗೆ ವಾಸಿಸುತ್ತಿದ್ದ ಕನ್ನಡ ಭಾಷಿಕರನ್ನು ಒಂದೆಡೆ ತರುವ ಚಿಂತನೆಗಳು, 18, 19ನೇ ಶತಮಾನದಲ್ಲಿ ಪ್ರಾರಂಭಗೊಂಡವು. ಅದರ ಫಲವಾಗಿ 1890ರಲ್ಲಿ ರಾ.ಹ. ದೇಶಪಾಂಡೆ ಇವರ ಉಪಕ್ರಮದೊಂದಿಗೆ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ ಆಯಿತು. ಧಾರವಾಡ, ಆ ಅವಧಿಯಲ್ಲಿ ಬ್ರಿಟಿಷ್ ಆಡಳಿತದ ಬಾಂಬೆ ಪ್ರೆಸಿಡೆನ್ಸಿ ವ್ಯಾಪ್ತಿಯಲ್ಲಿತ್ತು. ಈ ಸಂಘವು ಕನ್ನಡ ಭಾಷಿಕರನ್ನು ಒಂದೆಡೆ ತರುವ ಸಲುವಾಗಿ- ಕನ್ನಡ ಭಾಷಿಕರ ಜಾಗೃತಿ; ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ; ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕನ್ನಡ ಭಾಷಿಕರ ಏಕೀಕರಣದ ಕಹಳೆಯನ್ನು ಊದತೊಡಗಿತು; 1896ರಲ್ಲಿ ವಾಗ್ಭೂಷಣ ಎಂಬ ಕನ್ನಡ ಸಾಹಿತ್ಯ ಮಾಸಪತ್ರಿಕೆಯನ್ನು ಈ ಸಂಘ ಪ್ರಾರಂಭಿಸಿತು; ಕನ್ನಡ ಕುಲಪುರೋಹಿತರು ಎಂದು ಕರೆಯಲ್ಪಡುತ್ತಿದ್ದ ಆಲೂರು ವೆಂಕಟರಾಯರನ್ನು ಆ ಪತ್ರಿಕೆಯ ಸಂಪಾದಕರನ್ನಾಗಿ ನೇಮಿಸಿತು; ಈ ಪತ್ರಿಕೆಯಲ್ಲಿ ಕನ್ನಡ ಭಾಷಿಕರ ರಾಜ್ಯ ಮತ್ತು ಏಕೀಕರಣದ ಕನಸುಗಳನ್ನು ಮೇಲಿನ ಎಲ್ಲಾ ಪ್ರಾಂತ್ಯಗಳಲ್ಲಿನ ಕನ್ನಡ ಭಾಷಿಕರಲ್ಲಿ ಬಿತ್ತಲು, ಬರಹಗಳನ್ನು ಬರೆಯಲು ಪ್ರಾರಂಭಿಸಲಾಯಿತು; 1905ರಲ್ಲಿ ಮೊದಲ ಕನ್ನಡ ಲೇಖಕರ ಸಮ್ಮೇಳನವನ್ನು ಆಯೋಜಿಸಿತು.

II. ಕನ್ನಡ ಸಾಹಿತ್ಯ ಪರಿಷತ್ತು
1915ರಲ್ಲಿ ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಪ್ರಾಂತ್ಯದ ಬೆಂಗಳೂರು ನಗರದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1925ರಲ್ಲಿ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಈ ಪರಿಷತ್ತು, ಕನ್ನಡ ಬಾಷಿಕರಿಗಾಗಿ ಪುಸ್ತಕಗಳ ಪ್ರಕಟಣೆ; ಕನ್ನಡ ನಾಡು ನುಡಿಯ ಸಂರಕ್ಷಣೆ ಕಾರ್ಯಗಳನ್ನು ಮಾಡಿತು. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿತು; ಭಾರತ ವ್ಯಾಪಿ ನೆಲಸಿದ್ದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು, ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳನ್ನು ನಡೆಸಿದರು. ಸಮ್ಮೇಳನಗಳಲ್ಲಿ ವಿಚಾರಗೋಷ್ಠಿಗಳು, ಸಂವಾದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನಡೆದವು. ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಪುಸ್ತಕಗಳು ಪುಕ್ಕಟೆಯಾಗಿ ಮತ್ತು ಕಡಿಮೆ ದರಗಳಲ್ಲಿ ಮಾರಾಟ ಮಾಡಲು ಅಂದಿನ ಮೈಸೂರು ಮಹಾರಾಜರುಗಳು ಸಹಾಯ ಹಸ್ತ ನೀಡಿದರು. ಈ ಕನ್ನಡ ಸಾಹಿತ್ಯ ಪರಿಷತ್ತು, ಪ್ರಚಲಿತ ಸಾಹಿತ್ಯಗಳ ಸ್ಥಿತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆಯಾಗಿ ಮಾರ್ಪಟ್ಟಿತು.
ಇದನ್ನು ಓದಿದ್ದೀರಾ?: ಶರಾವತಿ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಆಗ್ರಹ; ಸಿಎಂಗೆ ‘ಪರಿಸರಕ್ಕಾಗಿ ನಾವು’ ಪತ್ರ
III. ಕರ್ನಾಟಕ ಸಭೆ
1916ರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರ ರಾವ್, ಇನ್ನಿತರರು ಕರ್ನಾಟಕ ಸಭೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಕನ್ನಡ ಭಾಷಿಕರ ರಾಜ್ಯದ ಏಕೀಕರಣವನ್ನೇ ಪ್ರಧಾನ ವಿಷಯವನ್ನಾಗಿ ಸ್ವೀಕರಿಸಿ, ಈ ಸಂಘಟನೆ ಮೂಲಕ ಕಾರ್ಯತತ್ಪರರಾದರು.
IV. ಕರ್ನಾಟಕ ರಾಜಕೀಯ ಪರಿಷತ್ತು
ದೇಶದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಳು ಬಿರುಸುಗೊಂಡ ಕಾಲ, ಸ್ವಾತಂತ್ರ್ಯ ಹೋರಾಟದ ಚಳವಳಿಗಳನ್ನು ರೂಪಿಸುತ್ತಿದ್ದ ಕಾಂಗ್ರೆಸ್ ಜನಪ್ರಿಯತೆ ಗಳಿಸುತ್ತಿದ್ದ ಕಾಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗುತ್ತಿದ್ದ ಕನ್ನಡ ಭಾಷಿಕರು, ಅವರೊಂದಿಗೆ ಸ್ವಾತಂತ್ರ್ಯ ಚಳವಳಿಗಳಲ್ಲಿ ತೊಡಗಿದ್ದ ಕಾಂಗ್ರೆಸ್ ದುರೀಣರ, ರಾಜಕಾರಣಿಗಳ ಬೆಂಬಲ ಪಡೆಯುವ ಹಿನ್ನೆಲೆಯಿಂದ 1918ರಲ್ಲಿ ಕರ್ನಾಟಕ ರಾಜಕೀಯ ಪರಿಷತ್ ಸ್ಥಾಪನೆ ಮಾಡಿದರು. ಈ ಪರಿಷತ್‌ನ ಮೊದಲ ಅಧಿವೇಶನವು 1920ರಲ್ಲಿ ಮೈಸೂರು ಸಂಸ್ಥಾನದ ಮಾಜಿ ದಿವಾನ್ ವಿ.ಪಿ.ಮಾಧವರಾಯರ ಅಧ್ಯಕ್ಷತೆಯಲ್ಲಿ, ಧಾರವಾಡದಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವನ್ನೂ ಸೇರಿಸಿ ಒಂದು ಕನ್ನಡಿಗರ ಸ್ವತಂತ್ರ ಪ್ರಾಂತ್ಯವನ್ನಾಗಿ ರಚಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

V. ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿ
1920ರಲ್ಲಿ ನಾಗಪುರದಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿತು. ಈ ಅಧಿವೇಶನದಲ್ಲಿ ಕನ್ನಡ ಪ್ರಾಂತ್ಯಗಳಿಂದ ಕಡಪ ರಾಘವೇಂದ್ರ ರಾಯರು, ಸಕ್ಕರಿ ಬಾಳಾಚಾರ್ಯರ ನೇತೃತ್ವದಲ್ಲಿ ಸುಮಾರು 800 ಕನ್ನಡ ಭಾಷಿಕರು ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿ ಮುಖಂಡತ್ವದಲ್ಲಿ ಕಾಂಗ್ರೆಸ್ ಅಧಿವೇಶನ ಅಲ್ಲಿ ಆಯೋಜನೆಗೊಂಡಿತ್ತು. ಭವಿಷ್ಯತ್ತಿನಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಬಗ್ಗೆ ಗಾಂಧೀಜಿಯವರು ಒಲವು ಹೊಂದಿದ್ದರು. ಆ ಕಾರಣಕ್ಕೆ ಆ ಅಧಿವೇಶನದಲ್ಲಿ ಇತರೆ ಭಾಷಿಕರಂತೆ, ಕನ್ನಡ ಭಾಷಿಕರನ್ನು ಒಳಗೊಂಡ ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿ ರಚನೆ ಮಾಡಲಾಯಿತು. ಈ ಸಮಿತಿ ಆ ಸಮಾವೇಶದಲ್ಲಿ ಪ್ರತ್ಯೇಕ ಸಭೆಯನ್ನು ನಡೆಸಿ, ಯಾವುದೇ ರಾಜ ಸಂಸ್ಥಾನಗಳು ಅಥವಾ ಬ್ರಿಟಿಷ್ ಪ್ರೆಸಿಡೆನ್ಸಿ ಆಳ್ವಿಕೆಗಳ ಕನ್ನಡ ಭಾಷಿಕರ ಪ್ರದೇಶಗಳು ಈ ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯೆಂದು ನಿರ್ಣಯ ಮಾಡಿತು. ಈ ತರುವಾಯ ಯಾವುದೇ ರಾಜ್ಯ ಸಂಸ್ಥಾನಗಳ ಅಥವಾ ಬ್ರಿಟಿಷ್ ಪ್ರೆಸಿಡೆನ್ಸಿಗಳ ಆಳ್ವಿಕೆಯ ಪ್ರದೇಶಗಳಲ್ಲಿನ ಕನ್ನಡ ಭಾಷಿಕರು ಪರಸ್ಪರ ಒಂದಾಗಿ ಸಭೆಗಳು, ಸಮಾರಂಭಗಳು, ಸಮ್ಮೇಳನಗಳನ್ನು ನಡೆಸಲು ಪ್ರಾರಂಭಿಸಿದರು. ಇದರಿಂದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿಯೇ ಸ್ವಾತಂತ್ರ ಹೋರಾಟದ ಜೊತೆ ಜೊತೆಯಲ್ಲಿಯೇ ಕನ್ನಡ ಭಾಷಾವಾರು ಪ್ರಾಂತ ರಚನೆಗೆ ಒಲವು, ಜಾಗೃತಿ, ಬೇಡಿಕೆಗಳು, ಹೆಚ್ಚಳಗೊಂಡವು.
VI. ಕೇಳ್ಕರ್ ಸಮಿತಿ
ಕಾಂಗ್ರೆಸ್, ಭಾಷಾವಾರು ಪ್ರಾಂತ್ಯಗಳ ಕಾಂಗ್ರೆಸ್ ಸಮಿತಿಗಳನ್ನು ರಚನೆ ಮಾಡಿದ ತರುವಾಯ, ತೆಲುಗು ಮತ್ತು ಕನ್ನಡ ಭಾಷಿಕರ ಕಾಂಗ್ರೆಸ್ ಸಮಿತಿಗಳಲ್ಲಿ ಬಳ್ಳಾರಿ ಜಿಲ್ಲೆಯ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾದವು. ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಸಲುವಾಗಿ, ಕಾಂಗ್ರೆಸ್ ಅಂದು ಈ ಕೇಳ್ಕರ್ ಸಮಿತಿಯನ್ನು ರಚನೆ ಮಾಡಿತು. ಈ ಸಮಿತಿಯು ಅಧ್ಯಯನ ಮಾಡಿ, ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಭಾಷಿಕರ ಪ್ರದೇಶಗಳಾಗಿದ್ದ ಅದವಾನಿ, ಆಲೂರು ಮತ್ತು ರಾಯದುರ್ಗ ತಾಲೂಕುಗಳನ್ನು ಆಂಧ್ರಕ್ಕೆ. ಇನ್ನುಳಿದ ಬಳ್ಳಾರಿ ಜಿಲ್ಲೆಯ ಪ್ರದೇಶಗಳನ್ನು ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿ ವ್ಯಾಪ್ತಿಗೆ ತರಲು ಶಿಫಾರಸು ಮಾಡಿತು. ಅದರಂತೆ ಅಂದು ಬಳ್ಳಾರಿ ಜಿಲ್ಲೆ, ಕರ್ನಾಟಕ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿತು.
ಇದನ್ನು ಓದಿದ್ದೀರಾ?: ಪ್ರಕಾಶ್ ರಾಜ್, ಪ್ರೊ. ತರೀಕೆರೆ, ಡಾ. ಚೆನ್ನಿ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
VII ಬೆಳಗಾವಿ ಕಾಂಗ್ರೆಸ್ ಅಧಿವೇಶನ
1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ, ಅಂದು ಮುಂಬೈ ಪ್ರೆಸಿಡೆನ್ಸಿ ಆಳ್ವಿಕೆ ಪ್ರದೇಶವಾಗಿದ್ದ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ಜರುಗಿತು. ಈ ಮಹಾ ಅಧಿವೇಶನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಿಕರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕಾಂಗ್ರೆಸ್ ಉದ್ದೇಶಗಳ ಜೊತೆಯಲ್ಲಿಯೇ, ಈ ಅಧಿವೇಶನದಲ್ಲಿ ಕನ್ನಡ ಭಾಷಿಕರ ಪ್ರಾಂತ್ಯ ರಚನೆ, ಏಕೀಕರಣದ ಬೇಡಿಕೆಗಳ ಚರ್ಚೆ ನಡೆಯಿತು. ಕಾಂಗ್ರೆಸ್ ಪ್ರಮುಖರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಆ ಅಧಿವೇಶನದಲ್ಲಿ ಮಾತನಾಡುತ್ತಾ, “ಛಿದ್ರ ಕರ್ನಾಟಕ, ಒಂದಾದ ರಾಜ್ಯವಾಗಿ ಬಹುಬೇಗ ರೂಪಗೊಳ್ಳಲಿದೆ. ಕನ್ನಡ ನಾಡಿನ ಜನ ಇನ್ನೂ ಬಹಳ ಕಾಲ ಕಾಯಬೇಕಾಗಿಲ್ಲ. ಅವರ ಬೇಡಿಕೆಗಳು ನ್ಯಾಯಯುತವಾಗಿವೆ’ ಎಂದರು. ಈ ತೀರ್ಮಾನ, ನಿರ್ಣಯಗಳಿಗೆ ಕಾಂಗ್ರೆಸ್ ಮಹಾಸಭೆ ಒಪ್ಪಿಗೆ ನೀಡಿತು.
ಇನ್ನು ಈ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ, ಆ ಅಧಿವೇಶನದಲ್ಲಿಯೇ ‘ಕರ್ನಾಟಕ ಏಕೀಕರಣ ಸಂಘ’ ಸ್ಥಾಪನೆ ಮಾಡಲಾಯಿತು ಮತ್ತು ಅಂದಿನ ಮುಂಬೈ ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ ರಾವ್ ಬಹುದ್ದೂರ್ ಸಿದ್ದಪ್ಪ ಕಂಬಳಿ ಅಧ್ಯಕ್ಷತೆಯಲ್ಲಿ, ಆ ಅಧಿವೇಶನದಲ್ಲಿಯೇ ಆ ಸಂಘದ ಮೊದಲ ಸಭೆ ನಡೆಸಲಾಯಿತು. ಈ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ‘ಕರ್ನಾಟಕ ಕೈಪಿಡಿ’ ಎಂಬ ಗ್ರಂಥವನ್ನು ಕಾಂಗ್ರೆಸ್ ಪ್ರಕಟಿಸಿತು. ಆರ್.ಬಿ.ಕುಲಕರ್ಣಿ ಕಾವ್ಯರತ್ನ ಇವರು ಬರೆದ ‘ಕನ್ನಡಿಗನ ಸರ್ವಸ್ವ’, ‘ಸಂಯುಕ್ತ ಕರ್ನಾಟಕ ಪ್ರಾಂತ್ಯ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಅಧಿವೇಶನದಲ್ಲಿಯೇ ಹುಯಿಲುಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಕವನವನ್ನು ಹಾಡಲಾಯಿತು.

VIII ಏಕೀಕರಣದ ಹೋರಾಟಗಳ ಮುನ್ನಡೆ
ಬೆಳಗಾವಿಯಲ್ಲಿ ಜರಗಿದ ಕಾಂಗ್ರೆಸ್ ಅಧಿವೇಶನದ ತರುವಾಯ, ಮುನ್ನಡೆಯ ಜವಾಬ್ದಾರಿಯ ‘ಕರ್ನಾಟಕ ಏಕೀಕರಣ ಸಂಘ’ವು ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿತು. ಅದರಲ್ಲಿ ಪ್ರಮುಖವಾಗಿ, 1946ರಲ್ಲಿ ಮುಂಬೈಯಲ್ಲಿ ಕನ್ನಡ ಭಾಷಿಕರ ಸಮಾವೇಶ ನಡೆಸಿತು. ಆ ಸಮಾವೇಶವನ್ನು ಕಾಂಗ್ರೆಸ್ ಪ್ರಮುಖರಾದ ವಲ್ಲಭಭಾಯ್ ಪಟೇಲರು ಉದ್ಘಾಟಿಸಿದರು. ಇದೇ ವರ್ಷದಲ್ಲಿ ದಾವಣಗೆರೆಯಲ್ಲಿ ಕೂಡ ಸಮಾವೇಶ ನಡೆಸಿತು. 1947ರಲ್ಲಿ ಕಾಸರಗೋಡಿನಲ್ಲಿ ಈ ಸಂಘವು ಕನ್ನಡ ಭಾಷಿಕರ ಸಮಾವೇಶವನ್ನು ನಡೆಸಿತು. ಹೀಗೆ ಪ್ರತಿ ಸಮಾವೇಶಗಳಲ್ಲಿಯೂ ಕನ್ನಡ ಭಾಷಿಕರು, ಸಾಹಿತಿಗಳು, ಪ್ರತ್ಯೇಕ ಭಾಷಾ ಪ್ರಾಂತ್ಯ ರಚನೆಗೆ ನಿರಂತರವಾಗಿ ಒತ್ತಾಯಗಳನ್ನು, ಜಾಗೃತಿಗಳನ್ನು, ಸಂಘದ ವತಿಯಿಂದ ಮಾಡಿದರು. ಜೊತೆಗೆ ಭಾರತ ದೇಶಕ್ಕಾಗಿ ರಚನೆಯಾಗಿದ್ದ ಸಂವಿಧಾನ ಸಭೆಗೆ ಕೂಡ ಈ ಒತ್ತಾಯಗಳನ್ನು ನಿರಂತರವಾಗಿ ಕಳುಹಿಸಿತು.
ಇದನ್ನು ಓದಿದ್ದೀರಾ?: ಒಳಮೀಸಲಾತಿ | ಬರಿಗೈಯಲ್ಲಿ ಮನೆಗೆ ಮರಳುವ ಮಾತೇ ಇಲ್ಲ: ಸಿಎಂ ಸಭೆ ಮುನ್ನವೇ ಅಲೆಮಾರಿಗಳ ಪ್ರತಿಜ್ಞೆ
IX. ಸಂವಿಧಾನ ರಚನಾ ಸಭೆ
ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ‘ಸಂವಿಧಾನ ರಚನಾ ಸಭೆ’ ತನ್ನ ನಡಾವಳಿಗಳಲ್ಲಿ, ಭಾಷೆ, ಸಂಸ್ಕೃತಿ, ಭೂಗೋಳ ಇವುಗಳನ್ನು ಆದರಿಸಿ ಪ್ರಾಂತ್ಯಗಳನ್ನು ರಚಿಸಲು ನಿರ್ಣಯ ಮಾಡಿತು.
X. ಭಾರತಕ್ಕೆ ಸ್ವಾತಂತ್ರ್ಯ, ಭಾಷಾವಾರು ರಾಜ್ಯಗಳ ರಚನೆ
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಜವಾಹರ್ ಲಾಲ್ ನೆಹರು ಪ್ರಧಾನಿ ಹುದ್ದೆಗೆ ಏರಿದರು. ಸ್ವಾತಂತ್ರ್ಯ ಪೂರ್ವದಿಂದಲೂ ನಡೆದ ಚಳವಳಿಗಳು ಮತ್ತು ಸಂವಿಧಾನ ರಚನಾ ಸಭೆಯ ನಿರ್ಣಯಗಳಿಂದ ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ರಾಜ್ಯಗಳ ಗಡಿಗಳನ್ನು ಮರು ಗುರುತಿಸುವ ಪ್ರಕ್ರಿಯೆ ಸಲುವಾಗಿ, ಪ್ರಧಾನಿ ನೆಹರು 1948ರಲ್ಲಿ ದಾರ್ ಆಯೋಗವನ್ನು ರಚನೆ ಮಾಡಿದರು. ನಂತರ 1953ರಲ್ಲಿ ಫಝಲ್ ಆಲಿ ಅಧ್ಯಕ್ಷತೆಯ ಆಯೋಗವನ್ನು ರಚನೆ ಮಾಡಿದರು. ಈ ಆಯೋಗವು ಭಾಷೆಯನ್ನು ರಾಜ್ಯಗಳ ವಿಂಗಡಣೆಯ ಪ್ರಮುಖ ಮಾನದಂಡವಾಗಿ ಪರಿಗಣಿಸಲು; ಭಾರತ ರಾಷ್ಟ್ರದಲ್ಲಿ 15 ಭಾಷಾವಾರು ರಾಜ್ಯಗಳನ್ನು; ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲು ಶಿಫಾರಸ್ಸು ಮಾಡಿ, ವರದಿಯನ್ನು ನೀಡಿತು. ಈ ವರದಿಯನ್ನು ಆದರಿಸಿ ನೆಹರು ಸರ್ಕಾರ ದಿನಾಂಕ:16-3-1956ರಂದು ಸಂಸತ್ತಿನಲ್ಲಿ The States Re-organization Act ಮಸೂದೆಯನ್ನು ಮಂಡಿಸಿತು. ಸಂಸತ್ ಸದರಿ ಮಸೂದೆಗೆ ಅಂಗೀಕಾರ ನೀಡಿತು. ದಿನಾಂಕ:1-11-1956 ರಂದು ಕನ್ನಡ ಭಾಷಿಕರ ‘ಮೈಸೂರು ರಾಜ್ಯ’ ಉದಯದ ಘೋಷಣೆ ಮಾಡಲಾಯಿತು.

ಸ್ವಾತಂತ್ರ್ಯ ಪೂರ್ವದಿಂದಲೂ ಸುಮಾರು ವರ್ಷಗಳಿಂದ ವಿಶ್ರಾಂತ ಚಳವಳಿಗಳ ಫಲವಾಗಿ, ವಿವಿಧ ರಾಜ ಸಂಸ್ಥಾನಗಳ / ಬ್ರಿಟಿಷ್ ಆಳ್ವಿಕೆಯ ಪ್ರದೇಶಗಳಲ್ಲಿ ಛಿದ್ರವಾಗಿದ್ದ ಕನ್ನಡ ಭಾಷಿಕರು, ‘ಮೈಸೂರು ರಾಜ್ಯ’ದ ಒಂದು ಆಡಳಿತದ ತೆಕ್ಕೆಗೆ ಬಂದರು. ಕನ್ನಡ ಭಾಷಿಕರಿಗೆ ಭಾರತ ದೇಶದ ಒಳಗೆ ಒಂದು ರಾಜ್ಯ ದೊರೆಯಿತು. ಮುಂದೆ, ರಾಜ್ಯದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ 1973ರಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ ರಾಜ್ಯ’ ಎಂದು ಮರುನಾಮಕರಣ ಮಾಡಿದರು. ಕನ್ನಡ ಭಾಷಿಕರಿಗೆ ರಾಜ್ಯ ದೊರೆತ ನೆನಪಿಗಾಗಿ, ಪ್ರತಿ ವರ್ಷ ನವೆಂಬರ್ 1ರಂದು ಈ ‘ಕನ್ನಡ ರಾಜ್ಯೋತ್ಸವ’
ನಾಡಹಬ್ಬವನ್ನಾಗಿ ನಾವು ಆಚರಿಸುತ್ತಿದ್ದೇವೆ.

ಎಸ್ ಮೂರ್ತಿ
ಲೇಖಕರು, ವಿಧಾನಸಭೆ ಸಚಿವಾಲಯ ಮಾಜಿ ಕಾರ್ಯದರ್ಶಿ




