ರಾಜ್ಯದ ಹಿತಾಸಕ್ತಿ ಕಾಪಾಡಬೇಕಾದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು, ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿ ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆಯೇ? ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNREGA) ರದ್ದುಪಡಿಸಿರುವ ಕೇಂದ್ರದ ನಡೆಯನ್ನು ಪ್ರಶ್ನಿಸುವ ಸಾಲುಗಳನ್ನು ಓದಲು ನಿರಾಕರಿಸುವ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಹಕ್ಕನ್ನು ದಮನ ಮಾಡಲು ಹೊರಟಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಇಂದು ಭಾಷಣ ಮಾಡಬೇಕಿದ್ದ ರಾಜ್ಯಪಾಲರು, ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣದ ಪ್ರತಿಯಲ್ಲಿರುವ ಕೇಂದ್ರ ಸರ್ಕಾರವನ್ನು ಟೀಕಿಸುವ 11 ಪ್ಯಾರಾಗಳನ್ನು (ಖಂಡಿಕೆ) ಕೈಬಿಡುವಂತೆ ಪಟ್ಟು ಹಿಡಿದಿದ್ದಾರೆ. ಇದು ಚುನಾಯಿತ ಸರ್ಕಾರದ ದನಿಯನ್ನು ಅಡಗಿಸುವ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಜ್ಯದ ಧ್ವನಿ ಅಡಗಿಸುವ ಯತ್ನವೇ?
ಕೇಂದ್ರ ಸರ್ಕಾರವು ಮನರೇಗ (MGNREGA) ಬದಲಿಗೆ ಜಾರಿಗೆ ತಂದಿರುವ ‘ವಿಬಿ-ಜಿ ರಾಮ್ (ಜಿ)’ ಕಾಯ್ದೆಯಿಂದ (VB-G RAM (G) Act) ರಾಜ್ಯದ ಗ್ರಾಮೀಣ ಭಾಗದ ಜನರ ಉದ್ಯೋಗ ಹಕ್ಕಿಗೆ ಧಕ್ಕೆಯಾಗಿದೆ ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಸತ್ಯಾಂಶಗಳನ್ನು ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. “ಪಂಚಾಯಿತಿಗಳ ಅಧಿಕಾರ ಕಸಿದುಕೊಂಡು ದೆಹಲಿಯಲ್ಲಿ ಕುಳಿತು ನಿಯಂತ್ರಿಸುವುದು ಎಷ್ಟು ಸರಿ? ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ರಾಜ್ಯಪಾಲರ ಮೂಲಕ ಹೇಳಿಸಬಾರದೇ?” ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ನಡೆಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರು ಕೇಂದ್ರದ ಕೈಗೊಂಬೆಯಲ್ಲ- ಆಯಾ ರಾಜ್ಯದ ಜನಾದೇಶ ಧಿಕ್ಕರಿಸುವ ನಡೆ ಸಂವಿಧಾನಬಾಹಿರ
ಸಂವಿಧಾನದ ವಿಧಿ 176(1) ಮತ್ತು 163ರ ಅನ್ವಯ, ಸಚಿವ ಸಂಪುಟ ಅನುಮೋದಿಸಿದ ಭಾಷಣವನ್ನೇ ರಾಜ್ಯಪಾಲರು ಯಥಾವತ್ತಾಗಿ ಓದಬೇಕು. ಆದರೆ, ತಮಿಳುನಾಡು ಮತ್ತು ಕೇರಳದ ರಾಜ್ಯಪಾಲರ ಹಾದಿಯನ್ನೇ ತುಳಿದಿರುವ ಗೆಹ್ಲೋಟ್ ಅವರು, ಸಾಂವಿಧಾನಿಕ ಬಾಧ್ಯತೆಗಿಂತ ತಮ್ಮ ಪಕ್ಷದ ನಿಷ್ಠೆಯೇ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ.
ಕಾನೂನು ಹೋರಾಟಕ್ಕೆ ಸರ್ಕಾರ ಸಜ್ಜು
ರಾಜ್ಯಪಾಲರ ಈ ಹಠಮಾರಿ ಧೋರಣೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಈಗಾಗಲೇ ದೆಹಲಿಗೆ ತೆರಳಿದ್ದು, ರಾಜ್ಯಪಾಲರು ಅಧಿವೇಶನಕ್ಕೆ ಗೈರಾದರೆ ಅಥವಾ ಭಾಷಣ ಓದಲು ನಿರಾಕರಿಸಿದರೆ ಕೈಗೊಳ್ಳಬೇಕಾದ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಾಜ್ಯಪಾಲರ ಈ ನಡೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಮತ್ತು ಜನಾದೇಶಕ್ಕೆ ಮಾಡುತ್ತಿರುವ ಅವಮಾನವಾಗಿದೆ.





