ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಮಾರ್ಚ್ 4ರಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮುಷ್ಕರ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.
“ಈ ಹಿಂದಿನ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಯಾವುದೇ ಕೆಲಸಗಳು ಇಲ್ಲಿಯವರೆಗೂ ಆಗಿಲ್ಲ. ಹಾಗಾಗಿ, ಇಗೀನ ಸರ್ಕಾರ ನೌಕರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು” ಎಂದು ರಾಜ್ಯ ಸಾರಿಗೆ ನಿಗಮದ ಕೂಟ ಒತ್ತಾಯಿಸಿದೆ.
ಪ್ರಮುಖವಾಗಿ ಈ ಹಿಂದೆ ಸಾರಿಗೆ ನೌಕರರ ಮುಷ್ಕರಗಳಲ್ಲಿ ಸಿಬ್ಬಂದಿ ಮೇಲೆ ದಾಖಲಾದ ಪ್ರಕರಣ ಹಿಂಪಡೆಯಬೇಕು. ಸರಿಸಮಾನ ವೇತನ ಸೌಲಭ್ಯ ಕಲ್ಪಿಸಬೇಕು ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
“ಕಳೆದ 2020ರ ಡಿಸೆಂಬರ್ ಹಾಗೂ ನಂತರ ವರ್ಷದ 2021ರ ಏಪ್ರಿಲ್ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಕೈಗೊಂಡ ಎಲ್ಲ ಶಿಸ್ತಿನ ಕ್ರಮಗಳನ್ನು ಹಾಗೂ ದಾಖಲಾದ 60ಕ್ಕೂ ಹೆಚ್ಚು ಪ್ರಕರಣವನ್ನು ರದ್ದುಗೊಳಿಸಬೇಕು” ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್.ಸುರೇಶ್ ಹೇಳಿದರು.
“ನೌಕರರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ನಿಯೋಜಿಸಬೇಕು. 2020ರ ಜ.1ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿ ಪಾವತಿಸಬೇಕು. ಅಲ್ಲದೇ, 2020ರಿಂದ ನಿವೃತ್ತಿಯಾದ ನೌಕರರಿಗೆ ವೇತನ ವಿಮರ್ಶೆ ಮಾಡಿ ಬಾಕಿ ಹಿಂಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿ ಮಾಡಬೇಕು” ಎಂದು ತಿಳಿಸಿದರು.
“ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಬೇಕು. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿರುವಂತೆ ಸಮಾನ ವೇತನ ಮತ್ತು ಸಾಲ ಸೌಲಭ್ಯವನ್ನು ಸಾರಿಗೆ ನೌಕರರಿಗೂ ಸರ್ಕಾರ ವಿಸ್ತರಣೆ ಮಾಡಬೇಕು. ಕಾರ್ಮಿಕರ ಸಂಸ್ಥೆಗೆ ಕೂಡಲೇ ಚುನಾವಣೆ ನಡೆಸಿ, ಮಾನ್ಯತೆ ಪ್ರಶ್ನೆ ಇತ್ಯರ್ಥಗೊಳಿಸಬೇಕು” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆ.27 ಮತ್ತು ಫೆ.28 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಸಾರಿಗೆ ನೌಕರರ ಬೇಡಿಕೆಗಳು
- 2020ರ ಜ.1ರಿಂದ ನಿವೃತ್ತ ನೌಕರರ ವೇತನ ಹೆಚ್ಚಳದ ಫಿಕ್ಸೇಷನ್ ಆಗಬೇಕು.
- 38 ತಿಂಗಳ ತುಟ್ಟಿ ಭತ್ಯೆ ಬಾಕಿ ಹಣ ನೀಡಬೇಕು.
- 2021ರ ಮುಷ್ಕರದ ವೇಳೆ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಎಲ್ಲ ರೀತಿಯ ಶಿಕ್ಷೆಗಳನ್ನು ಹಿಂಪಡೆಯಬೇಕು.
- ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳೇ ಓಡಿಸಬೇಕು.
- ಕೇಂದ್ರ ಸರ್ಕಾರ ಫೇಮ್-2 ಯೋಜನೆ ( ಎಲೆಕ್ಟ್ರಿಕ್ ಬಸ್‌ಗಳನ್ನು) ಖಾಸಗಿಯವರ ಮೂಲಕ ಓಡಿಸುವ ಖಾಸಗೀಕರಣವನ್ನು ವಿರೋಧಿಸಬೇಕು.
- ಭ್ರಷಾಚಾರದ ಆಡಳಿತಕ್ಕೆ ಕಡಿವಾಣ ಹಾಕಬೇಕು.
- ಆಡಳಿತ ವರ್ಗ ಏಕ ಪಕ್ಷೀಯವಾಗಿ ಸುತ್ತೋಲೆಗಳನ್ನು ತರುವ ಪದ್ಧತಿ ನಿಲ್ಲಿಸಿ, ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಿ ಉತ್ತಮ ಕೈಗಾರಿಕಾ ಬಾಂಧವ್ಯ ರೂಪಿಸಬೇಕು.
- ಸರ್ಕಾರಿ ನೌಕರರ ಸಂಬಳ ಸಾರಿಗೆ ನೌಕರರಿಗೂ ವಿಸ್ತರಣೆ ಮಾಡಬೇಕು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಒತ್ತಡ ತರಲು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆ ಯಲ್ಲಿ ನೌಕರರು ಪಾಲ್ಗೊಳ್ಳುವಂತೆ ಕರೆ ನೀಡಿದರು.




