ಇಂದು ಕನ್ನಡದ ವಿಸ್ಮಯ ಎಂದೇ ಗುರುತಿಸುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ. ತೇಜಸ್ವಿ ತೀರಿಹೋದ ಸಂದರ್ಭದಲ್ಲಿ, ತೇಜಸ್ವಿಯ ಮೈಸೂರಿನ ದಿನಗಳು ಮತ್ತು ಅವರ ಬರವಣಿಗೆ ಕುರಿತು ಅನಂತಮೂರ್ತಿ ಬರೆದ ಬರೆಹವಿದು...
ನನ್ನ ಬರವಣಿಗೆಯ ಜೀವನದಲ್ಲಿ ನನಗೆ ಅತ್ಯಂತ ಮುಖ್ಯರಾದ ನನ್ನ ಸಮಕಾಲೀನರು ಯಾರು ಅಂತ ಕೇಳಿದರೆ- ಗೋಪಾಲಕೃಷ್ಣ ಅಡಿಗರು, ತೇಜಸ್ವಿ, ಲಂಕೇಶ್ ಈ ಮೂರು ಜನ ಮುಖ್ಯ ಅನ್ನುತ್ತೇನೆ. ಇದನ್ನು ಇಡೀ ಕನ್ನಡಕ್ಕೆ ಅಂತ ಹೇಳುತ್ತಿಲ್ಲ. ನನ್ನ ಮಟ್ಟಿಗೆ ಅವರು ಮುಖ್ಯರು. ಅವರಲ್ಲಿ ಇಬ್ಬರು ನನಗಿಂತ ಕಿರಿಯರು. ನನ್ನ ದುಃಖ ಏನೆಂದರೆ, ನನಗಿಂತ ಕಿರಿಯರು ತೀರಿ ಹೋದಾಗ ನಾನಿನ್ನೂ ಬದುಕಿದೀನಲ್ಲ ಅಂತ ಅನಿಸುತ್ತೆ.
ಅಡಿಗರು ನನಗಿಂತ ಹಿರಿಯರು. ತೇಜಸ್ವಿ ವಿದ್ಯಾರ್ಥಿಯಾಗಿದ್ದಾಗ ‘ಲಿಂಗ ಬಂದ’ ಅಂತ ಒಂದು ಕತೆ ಬರೆದಿದ್ದರು. ಮೈಸೂರಿನ ಕಾಫಿಹೌಸಿನಲ್ಲಿ ಅಡಿಗರು ನನ್ನನ್ನು ಕರೆದು ‘ಈ ತೇಜಸ್ವಿ ನೋಡು ಬಹಳ ಒಳ್ಳೆಯ ಕತೆಗಾರ ಆಗ್ತಾನೆ’ ಅಂದಿದ್ದರು. ಹಿಂದೊಮ್ಮೆ ಬೀರೇಂದ್ರಕುಮಾರ್ ಭಟ್ಟಾಚಾರ್ಯ ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಒಮ್ಮೆ ಅಡಿಗರನ್ನು ನೋಡಲು ಬಂದಿದ್ದರು. ಆಗ ಅವರು ‘ಕುವೆಂಪು ಅವರ ಮಹತ್ವದ ಕೃತಿಗಳು ಯಾವುವು?’ ಅಂತ ಕೇಳಿದರು. ಆಗ ಅಡಿಗರು ‘ಕಾನೂರು ಹೆಗ್ಗಡಿತಿ,’ ‘ಮಲೆಗಳಲ್ಲಿ ಮದುಮಗಳು’ ಅಂತ ಸುಮ್ಮನಾದರು. ‘ರಾಮಾಯಣ ದರ್ಶನಂ’ ಹೆಸರನ್ನೂ ಹೇಳಬಹುದು ಎಂದು ಬೀರೇಂದ್ರಕುಮಾರ್ ಭಟ್ಟಾಚಾರ್ಯ ತಿಳಿದಿದ್ದರು. ಆದರೆ ಅಡಿಗರು ‘ಕುವೆಂಪು ಅವರ ಮೂರನೆಯ ಮಹಾಕೃತಿ ಪೂರ್ಣಚಂದ್ರ ತೇಜಸ್ವಿ’ ಅಂದರು. ಅದು ಒಂದು ರೂಪಕವಾಗಿಯೂ ಅರ್ಥಪೂರ್ಣವಾಗಿತ್ತು.
ನಾನೊಂದು ಪದ್ಯದಲ್ಲಿ ಬರೆದಿದ್ದೇನೆ- ‘ಕುವೆಂಪು ಹಾಗೆ ಬರೀಬೇಕಾದರೆ ತನ್ನ ಘನತೆಯಲ್ಲೇ ನಂಬಿಕೆ ಇರಬೇಕು’ ಅಂತ. ರಾಮಾನುಜನ್ ಕುರಿತು ಬರೆದ ಪದ್ಯದ ಮೊದಲನೇ ಸಾಲು ಇದು. ಕುವೆಂಪುವಿಗೆ ತನ್ನ ಘನತೆಯಲ್ಲೇ ನಂಬಿಕೆಯಿತ್ತು. ತಾನೊಂದು ವಿವೇಕಾನಂದರ ಅವತಾರ ಅಂತ ಅವರು ತಿಳಿದಿದ್ದರು. ಹಾಗೆ ತಿಳಿಯೋದು ಬಹಳ ಕಷ್ಟ. ಅದಕ್ಕೇ ನಾನು ಇಗೋಯಿಸ್ಟಿಕಲ್ ಸಬ್ಲೈಮ್(ಆತ್ಮಾನುಭೂತಿ) ಕುವೆಂಪು ಅವರಲ್ಲಿ ಇದೆ ಅಂದಿದ್ದೆ. ಅದು ಇಲ್ಲದೇ ಇರೋದು ತೇಜಸ್ವಿಯಲ್ಲಿ. ಅಪ್ಪ ಮತ್ತು ಮಗನಲ್ಲಿ ಅಷ್ಟು ದೊಡ್ಡ ವ್ಯತ್ಯಾಸವಿತ್ತು. ಅದಕ್ಕೆ, ನಮ್ಮ ನವ್ಯ ಸಾಹಿತ್ಯ ಚಳವಳಿಯಲ್ಲಿ ತೇಜಸ್ವಿ ಪಾಲುದಾರರಾಗಿದ್ದು ಕೂಡ ಸ್ವಲ್ಪ ಕಾರಣವಿರಬಹುದು.
ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾವೆಲ್ಲರೂ ಎಚ್ಚೆತ್ತುಕೊಂಡು ಕಾಪಾಡಬೇಕಿದೆ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ
ನಾನಾಗ ಕಾಟನ್ ಸೂಟ್ ಹಾಕಿಕೊಂಡು, ಸಿಲ್ಕ್ ಟೈ ಕಟ್ಟಿಕೊಂಡು ತುಂಬಾ ಶೋಕಿಯಾಗಿ ಹೋಗ್ತಿದ್ದೆ ಕಾಲೇಜಿಗೆ. ಈ ವಿದ್ಯಾರ್ಥಿಗಳು ನನಗಿಂತ ನಾಲ್ಕೈದು ವರ್ಷ ಚಿಕ್ಕೋರಷ್ಟೆ. ಆಗ ತೇಜಸ್ವಿ ‘ನೀವು ಹೇರ್‌ಕಟ್ ಮಾಡಿಕೊಳ್ಳೋಕೆ ಬೆಂಗಳೂರಿಗೆ ಹೋಗ್ತೀರಂತೆ ನಿಜವಾ’ ಅಂದರು. ಈ ಬಗ್ಗೆ ಬೇರೆ ಕಡೆ ಬರೆದಿದ್ದೇನೆ. ನನಗೆ ಅವರು ಕೂಡಲೇ ಪ್ರಿಯರಾಗಿಬಿಟ್ಟರು. ತೇಜಸ್ವಿಗೆ ನನ್ನ ಬಗ್ಗೆ ಈ ರೀತಿಯ ಗುಮಾನಿಯೂ ಇತ್ತು. ಈ ಗುಮಾನಿ ಕೊನೇ ತನಕ ತೇಜಸ್ವಿಗೆ ಇತ್ತು. ಆದರೆ ನಾವೆಲ್ಲಾ ಕೂತು ದೊಡ್ಡ ದೊಡ್ಡ ಚರ್ಚೆಗಳನ್ನು ಮಾಡ್ತಾ ಇದ್ದರೂ ಕೂಡ ವೈಯಕ್ತಿಕವಾಗಿ ಇದನ್ನು ಮಾಡಿದವರಲ್ಲ. ಲೇಖಕರ ಒಕ್ಕೂಟ ಆದಾಗ ನಾನು ಬ್ರಾಹ್ಮಣ ಜಾತಿಯವನು ಅಂತ ಲೇಖಕರ ಒಕ್ಕೂಟದೊಳಗೆ ನನ್ನನ್ನ ಕರೆಯಲಿಲ್ಲ. ಕರೆಯದೆ ಇದ್ದಾಗ ಬಹಳ ಬೇಜಾರಾಗಿದ್ದು ಆಲನಹಳ್ಳಿ ಕೃಷ್ಣನಿಗೆ. ಆಮೇಲೆ ಲಂಕೇಶ್‌ಗೆ. ಆದರೆ ಬರಹಗಾರರ ಒಕ್ಕೂಟ ಕಾಲದ ಅಗತ್ಯವಾಗೇ ಬಂದಿತ್ತು ಎಂಬುದು ನನಗೆ ಗೊತ್ತಿತ್ತು. ಅದನ್ನ ನಾನು ವೈಚಾರಿಕವಾಗೇ ಸ್ವೀಕರಿಸುತ್ತಿದ್ದೆ. ಅದೊಂದು ನಮ್ಮ ಮೇಲಿನ ದಾಳಿ ಅಂತ ನನಗೆ ಅನ್ನಿಸುತ್ತಾ ಇರಲಿಲ್ಲ.
ಆ ಕಾಲದಲ್ಲಿ ಒಂದು ದಿನ ತೇಜಸ್ವಿ ನಮ್ಮ ಮನೆಗೆ ಬಂದರು. ‘ಸಾರ್ ನಿಮ್ಮನ್ನ ನಾವು ಎಷ್ಟು ಬಯ್ತೀವಿ. ಆದರೆ ಇವತ್ತು ಆ ಗೀತಾ ಬುಕ್ ಹೌಸ್ ಮುಂದೆ ನಾನು, ಕಡಿದಾಳು ಶಾಮಣ್ಣ ನಿಂತಿದ್ದೀವಿ. ಅಲ್ಲೊಂದಿಷ್ಟು ಬ್ರಾಹ್ಮಣ ಹುಡುಗರು ಬಂದು ನಿಮ್ಮನ್ನ ಎಷ್ಟೊಂದು ಬಯ್ತಾ ಇದ್ರು ಅಂತ ಅಂದರೆ, ನನಗೆ ಏನು ಮಾಡಬೇಕು ಅಂತ ಗೊಂದಲ ಆಗಿಬಿಡ್ತು’ ಅಂತ ಅಂದರು. ‘ನಮ್ಮ ಥರಾನೇ ಅವರೂ ಬಯ್ತಾರಲ್ಲ ಅಂತ ಗೊಂದಲ ಶುರುವಾಯ್ತು’ ಅಂದರು. ನನ್ನ ಬಗ್ಗೆ ಅವರಿಗೆ ಅಷ್ಟೊಂದು ಪ್ರೀತಿ ಇತ್ತು.
ನಮ್ಮ ಮದುವೆಯಾದ ಶುರುವಿನಲ್ಲಿ ನಮಗೊಂದು ಮನೆ ಬೇಕಾಗಿತ್ತು. ಎಲ್ಲಿ ಹೋದರೂ ಮಡಿವಂತರ ಮನೆ. ನಾನು ಬೇರೆ ಜಾತಿಯ ಹೆಣ್ಣನ್ನು ಮದುವೆಯಾಗಿದ್ದೆ. ನಾನು ಮಾಂಸಾಹಾರಿ ಅಲ್ಲದಿದ್ದರೂ ನನ್ನ ಹೆಂಡತಿ ಮಾಂಸಾಹಾರಿ. ಆಮೇಲೆ ನಾನೂ ಮಾಂಸಾಹಾರಿಯಾದೆ, ಅದು ಬೇರೆ ವಿಷಯ! ಇವೆಲ್ಲ ತೇಜಸ್ವಿಗೆ ಗೊತ್ತಿತ್ತು. ಅವರ ಸಂಬಂಧಿಕರಲ್ಲಿ ನನಗೊಂದು ಮನೆ ಮಾಡಿಕೊಟ್ಟರು. ಆಗಾಗ್ಗೆ ನಮ್ಮನೆಗೆ ತೇಜಸ್ವಿ ಮತ್ತು ಶಾಮಣ್ಣ ಬರ್ತಾ ಇದ್ರು. ಶಾಮಣ್ಣ ಎಷ್ಟು ಸಂಗೀತಪ್ರಿಯ ಅಂದರೆ, ಏನೂ ಇಲ್ಲದಿದ್ದರೆ ತನ್ನ ಹಲ್ಲುಗಳನ್ನ ಕಟಕಟಾಂತ ಹೊಡೆದು ಅದರಿಂದ ಸಂಗೀತ ಸೃಷ್ಟಿ ಮಾಡ್ತಿದ್ದರು. ಆಮೇಲೆ ದೊಡ್ಡ ರೈತನಾಯಕರಾದರು ಅವರು. ಆಮೇಲೆ ಇನ್ನೊಬ್ರು ಶ್ಯಾಮ್‌ಸುಂದರ್ ಅಂತ. ಅವರೆಲ್ಲ ಒಂಥರಾ ವಿಚಿತ್ರ ಜನ! ಅವರ ಜೊತೆಗೆ ತೇಜಸ್ವಿ ಕೂಡ ಹಾಗೇ ಇರ್ತಾ ಇದ್ರು. ಡಬಲ್ ರೈಡ್ ಹೋಗ್ತಾ ಇದ್ರು. ‘ಡಬಲ್ ರೈಡ್ ಹೋಗಿ ಹೋಗಿ ನನ್ನ ಕಾಲುಗಳು ಎಷ್ಟು ಗಟ್ಟಿಯಾಗಿವೆ ನೋಡಿ ಸಾರ್’ ಅಂತಿದ್ದರು.
ನನಗಿನ್ನೂ ನೆನಪಿದೆ. ಸಾಹಿತ್ಯದ ಬಗ್ಗೆ ನಾವೆಲ್ಲ ಎಷ್ಟೋ ಜಗಳ ಆಡ್ತಾ ಇದ್ದೆವು. ಹೀಗೆ ಖುಷಿಯಾಗಿಯೂ ಇರುತ್ತಿದ್ದೆವು. ನಮ್ಮ ಶರತ್ ಆಗಿನ್ನೂ ಚಿಕ್ಕವನು. ಅಲ್ಲೊಬ್ಬ ಆಫ್ರಿಕನ್ ವಿದ್ಯಾರ್ಥಿ ಇದ್ದ. ದೈತ್ಯಾಕಾರದ ಮೃದು ಹೃದಯದ ಆಫ್ರಿಕನ್ ಅವನು. ಅವನು ನಮ್ಮ ಮನೆಗೆ ಬಂದು ಮಗ ಶರತ್‌ನ ಕೈ ಹಿಡಿದು ಮೇಲೆತ್ತಿದ. ಹೀಗೆ ಎತ್ತಿದ್ದು ಕಂಡು ನನ್ನ ಹೆಂಡತಿಗೆ ಗಾಬರಿ ಆಯಿತು. ತೇಜಸ್ವಿ ನನ್ನ ಹೆಂಡ್ತಿಯ ಕಡೆ ತಿರುಗಿ ‘ಎಸ್ತರ್ ಯೋಚನೆ ಮಾಡಬೇಡಿ, ಈಗ ಅವನು ನೈಫ್ ಅಂಡ್ ಫೋರ್ಕ್ ಕೇಳ್ತಾನೆ’ ಅಂದರು. ಈ ಜೋಕನ್ನ ನಾನು ಯಾವತ್ತಿಗೂ ಮರೆಯಲಾರೆ.
‘ವಿಸ್ಮಯ’ ತೇಜಸ್ವಿಯ ಮುಖ್ಯವಾದ ಗುಣ ಅಂತ ಯಾಕೆ ನಾನು ಹೇಳ್ತಾ ಇರ್ತಿನಿ ಅಂದರೆ, ಅವರು ಎಲ್ಲವನ್ನೂ ಅಚ್ಚರಿಯ ರೀತಿಯಲ್ಲೇ ನೋಡೋರು, ಮಾತಾಡೋರು. ಏನಾದರೂ ಅದನ್ನ ಬೆರಗಿನಲ್ಲೇ ನೋಡೋರು. ಜಾಣತನವನ್ನು ಬೆರಗಿನಲ್ಲಿ ನೋಡೋರು, ದುಷ್ಟತನವನ್ನು ಬೆರಗಿನಲ್ಲಿ ನೋಡೋರು.
ನಾನು ಮೂರು ಜನ ಲೇಖಕರು ನನಗೆ ಪ್ರಿಯವಾದ ಲೇಖಕರು ಅಂದೆ. ಕೆಲವು ಸಲ ನಾನು ಲಂಕೇಶರನ್ನ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತೇನೆ. ಯಾಕೆಂದರೆ, ಲಂಕೇಶ್‌ಗೆ ವ್ಯಗ್ರತೆಯನ್ನು ವೈಯಕ್ತಿಕವಾಗಿಯೂ ಬರೆದುಕೊಳ್ಳುವ ಸಾಧ್ಯತೆ ಇತ್ತು. ನಾವು ಎಂಬಾರ್ಸ್‌ಮೆಂಟ್ ಅಂತೀವಲ್ಲ, ಅದರ ಬಗ್ಗೆ ಮುಕ್ತವಾಗಿ ಕನ್ನಡದಲ್ಲಿ ಬರೆದಿರೋರು ಯಾರು ಅಂತ ಹುಡುಕಿದರೆ ನಮಗೆ ಸಿಕ್ಕುವುದು ಲಂಕೇಶ್ ಮಾತ್ರ. ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಕತೆಯಲ್ಲಿ ಒಂದು ಹುಡುಗನ ಬೆಳವಣಿಗೆಯಲ್ಲಿರುವ ಕಷ್ಟವನ್ನು ಅವರು ಎದುರಾಗಿ ಬರೆದರು.
ತೇಜಸ್ವಿ ವೈಸ್‌ಛಾನ್ಸಲರ್ ಮಗನಾಗಿದ್ದವರು. ಅವರಿಗೆ ಈ ರೀತಿಯ ಮುಜುಗರಗಳು ಇದ್ದಿರಲಿಕ್ಕಿಲ್ಲ. ಆದರೆ ಅವರಿಗಿದ್ದ ಸಮಸ್ಯೆ ಎಂದರೆ, ಅಪ್ಪನ ವಲಯದಿಂದ ಹೇಗೆ ಹೊರಬರುವುದು ಎನ್ನುವುದು. ಅದು ಬಹಳ ಅಗತ್ಯವೂ ಆಗಿತ್ತು. ಯಾಕೆಂದರೆ, ತೇಜಸ್ವಿಯವರು ಮೈಸೂರಿನ ಕನ್ನಡ ಡಿಪಾರ್ಟ್ಮೆಂಟಿಗೆ ಸೇರದೆ ಇದ್ದಿದ್ದರಿಂದ ಲೇಖಕರಾದರು ಅಂತ ಹೇಳಬಲ್ಲೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಿವರುದ್ರಪ್ಪನವರು ಒಂದು ಸೃಜನಶೀಲ ವಾತಾವರಣ ಸೃಷ್ಟಿ ಮಾಡಿದ್ದರು. ಅದು ಬಿಟ್ಟರೆ ಆಗ ಎಲ್ಲೂ ಸೃಜನಶೀಲತೆ ಇರುವಂಥ ಕನ್ನಡ ವಿಭಾಗಗಳೇ ಇರಲಿಲ್ಲ. ತೇಜಸ್ವಿ ಬಯಸಿದ್ದರೆ ಏನಾದರೂ ಆಗಬಹುದಿತ್ತು. ಆದರೆ ಅದರ ಹತ್ತಿರ ಅವರು ಸುಳಿಯಲಿಲ್ಲ. ನಮ್ಮ ಜೊತೆಗೆ ಇರ್ತಾ ಇದ್ರು.
ಆಗ ನಮಗೆಲ್ಲಾ ಕುವೆಂಪು ಅವರ ಕಾವ್ಯಕ್ಕಿಂತ ಅವರ ಕಾದಂಬರಿಗಳೇ ಹೆಚ್ಚು ಇಷ್ಟ. ಆದರೆ ಕೆಲವು ಪದ್ಯಗಳು ಬಹಳ ಇಷ್ಟವಾಗಿದ್ದವು. ‘ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ ಈ ಥರದ ಪದ್ಯಗಳು. ಆದರೂ ಅವರಲ್ಲಿದ್ದ ಒಂದು ಬಗೆಯ ಹೈಮೈಮೆಟಿಕ್ ಅಥವಾ ಘನ ಅನುಕರಣದ ಮಾದರಿ ಅವರ ಭಾಷೆ ಹಾಗೂ ಇತ್ಯಾದಿಗಳ ಬಗ್ಗೆ ನಮಗೆ ಕೆಲವು ಪ್ರಶ್ನೆಗಳಿದ್ದವು. ತೇಜಸ್ವಿ ಕೂಡ ಈ ಮಾದರಿಯಿಂದ ಹೊರಗೆ ಬಂದರು ಅನ್ನೋದನ್ನ ನೋಡಬೇಕು. ಅದರ ಜೊತೆಗೇ ತೇಜಸ್ವಿ ಹೇಳಿದ ಒಂದು ಮಾತು ಇದು: ‘ಕನ್ನಡದ ಈ ಪ್ರಾಯೋಗಿಕ ಕಾಲದಲ್ಲಿ, ಯಾವ ರೀತಿ ಗದ್ಯವನ್ನು ಬರೆಯಬೇಕು ಅನ್ನುವ ಪ್ರಶ್ನೆ ನಮ್ಮೆದುರಿಗಿದೆ. ಈಗ ಎಲ್ಲ ರೀತಿಯ ಗದ್ಯವನ್ನೂ ಬರೆದು ನೋಡಬೇಕು. ಅದನ್ನ ನಮ್ಮ ಹಿಂದಿನೋರು ಮಾಡಿದಾರೆ.’
ಇದನ್ನು ಓದಿದ್ದೀರಾ?: ವೈಚಾರಿಕತೆ ಎದುರಿಸಲಿಕ್ಕೆ ಆಗದ ಹೇಡಿಗಳು ಗೌರಿಯನ್ನು ಕೊಂದರು: ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು
ಅದು ನಿಜ ಅಂತ ನಾನು ಸ್ವಲ್ಪ ಕಷ್ಟಪಟ್ಟು ಒಪ್ಪಿಕೊಳ್ಳುತ್ತಿದ್ದೆ. ಯಾಕೆಂದರೆ ಹೇಗೆ ಬರೀಬೇಕು ಅನ್ನುವುದರ ಬಗ್ಗೆ ನಾವು ಆಗ ಯುವಕರಾಗಿದ್ರಿಂದ ನಮಗೂ ಖಡಾಖಂಡಿತವಾದ ನಿಲುವುಗಳಿದ್ದವು. ಈಗ ಚಾರಿತ್ರಿಕವಾಗಿ ನೋಡಿದರೆ, ತೇಜಸ್ವಿ ಹೇಳುತ್ತಾ ಇದ್ದುದ್ದು ನಿಜ ಅನ್ನಿಸುತ್ತಿದೆ. ಆಗ ಹೆಚ್ಚು ಸಂಸ್ಕೃತ ಭೂಯಿಷ್ಟವಾದ ಗದ್ಯವನ್ನು ಬಿಟ್ಟು ಬರೆಯಬೇಕಾಗಿತ್ತು ಅಥವಾ ಸಂಸ್ಕೃತವನ್ನೇ ಬಿಟ್ಟ ಗದ್ಯವನ್ನು ಹಾಗೂ ಎಲ್ಲ ರೀತಿಯ ಗದ್ಯಗಳನ್ನು ಕನ್ನಡದಲ್ಲಿ ಬರೆಯಬೇಕಾಗಿತ್ತು.
ನೀವು ಯಾವ ದೊಡ್ಡ ಭಾಷೆಗೆ ಹೋದರೂ ಆ ಭಾಷೆಗಳಲ್ಲಿ ಕಾವ್ಯಕ್ಕೆ ಒಂದು ರೀತಿಯ ಸಾತತ್ಯ ಇರುತ್ತದೆ. ಗದ್ಯಕ್ಕೆ ಆ ಸಾಹಿತ್ಯ ಇರುವುದಿಲ್ಲ. ಗದ್ಯದಲ್ಲಿ ಸಾಮಾನ್ಯವಾಗಿ ಹೊಸ ಹೊಸ ಕಾಲವನ್ನು ಒಳಗೊಳ್ಳಲು ಬಹಳ ಪ್ರಯೋಗಗಳು ನಡೆಯುತ್ತಿರುತ್ತವೆ. ಆದರೆ, ತೇಜಸ್ವಿ ಈ ಎಲ್ಲ ರೀತಿಯ ಗದ್ಯವನ್ನು ಬಿಟ್ಟು ತನ್ನದೇ ಆದ ರೀತಿಯ ಗದ್ಯವನ್ನು ಬರೆಯಲು ಶುರುಮಾಡಿದರು. ನಾನು ಮೊದಮೊದಲು ‘ನೀವು ಬರೆದಿದ್ದೆಲ್ಲ ಬಹಳ ಸಡಿಲವಾಗಿದೆ; ಇದು ಬಹಳ ಲೂಸ್ ಆಗಿದೆ’ ಅನ್ನುತ್ತಿದ್ದೆ. ಆದರೆ ಅವರು ತಮ್ಮ ಗದ್ಯವನ್ನು ಸಮರ್ಥಿಸಿಕೊಳ್ಳುತ್ತಿರಲಿಲ್ಲ. ಹಾಗೆ ಅವರು ಸಡಿಲವಾಗಿ ಬರೆಯುತ್ತಾ ಇದ್ದಿದ್ದರಿಂದ ನಮಗ್ಯಾರಿಗೂ ಬರೆಯಲು ಆಗದೇ ಇದ್ದದ್ದನ್ನು ಅವರು ಬರೆದರು ಅನ್ನುವುದು ಕೂಡಲೇ ನನಗೆ ಗೊತ್ತಾಗಲು ಶುರುವಾಯಿತು.
(ಕೃಪೆ: ಕನ್ನಡ ಟೈಮ್ಸ್)





