ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ

Date:

ಸೆಪ್ಟೆಂಬರ್ 18ಕ್ಕೆ ಕನ್ನಡದ ಸ್ಫುರದ್ರೂಪಿ ನಟ ವಿಷ್ಣುವರ್ಧನ್ 75 ವರ್ಷಗಳನ್ನು ಪೂರೈಸಲಿದ್ದಾರೆ. 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ಕೊನೆಯವರೆಗೂ ಕನ್ನಡಿಗರನ್ನು ರಂಜಿಸುತ್ತಲೇ ಸಾಗಿದರು. ಚಿತ್ರಗಳಿಗೆ, ಪಾತ್ರಗಳಿಗೆ ಪಕ್ಕಾದರು. ಪ್ರತಿಭೆಯಿಂದ ಪುಟಿದೆದ್ದರು. ಕನ್ನಡಿಗರ ಹೃದಯದಲ್ಲಿ ನೆಲೆಯಾದರು...

ಮಹಿಳಾ ಪ್ರಧಾನ ವಸ್ತುವಿದ್ದ ಗೆಜ್ಜೆ ಪೂಜೆ(1970) ಮತ್ತು ಶರಪಂಜರ(1971) ಚಿತ್ರಗಳ ಜೋಡಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಖ್ಯಾತ ನಿರ್ದೇಶಕ ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರು ನಾಯಕ ಪ್ರಧಾನ- ಸಾಕ್ಷಾತ್ಕಾರ(1971) ಚಿತ್ರದ ಸೋಲಿನಿಂದ ಕಂಗಾಲಾಗಿದ್ದ ಸಮಯ. ಆದರೂ ಅವರು ತಮ್ಮ ಮುಂದಿನ ಚಿತ್ರಕ್ಕೆ (ನಾಗರಹಾವು) ಆರಿಸಿಕೊಂಡದ್ದು ನಾಯಕ ಪ್ರಧಾನವಾದ ತ.ರಾ.ಸು ಅವರ ಮೂರು ಕಾದಂಬರಿಗಳನ್ನು. 1972ರ ಆರಂಭದ ತಿಂಗಳಲ್ಲಿ ಪುಟ್ಟಣ್ಣ ಅವರು ಚಿತ್ರದ ನಾಯಕ ರಾಮಾಚಾರಿಯ ಪಾತ್ರಕ್ಕೆ ಹೊಸ ಕಲಾವಿದನೊಬ್ಬನ ಆಯ್ಕೆಗೆ ನಡೆಸಿದ ಹುಡುಕಾಟವು ಆ ಕಾಲಕ್ಕೆ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು. ಬೆಂಗಳೂರಿನಲ್ಲಿ ಪುಟ್ಟಣ್ಣ ಅವರು ತಂಗಿದ್ದ ಹೋಟೆಲ್‌ಗೆ ನಟನಾಕಾಂಕ್ಷಿಗಳು ರಾಜ್ಯದ ನಾನಾ ಕಡೆಯಿಂದ ಧಾವಿಸಿ ಬಂದರು. ರಾಮಾಚಾರಿಯ ಪಾತ್ರಕ್ಕೆ ಸೂಕ್ತವಾದ ಕಲಾವಿದನ ಆಯ್ಕೆಗೆ ನಡೆಸಿದ ಸಂದರ್ಶನ ಹಲವು ದಿನ ನಡೆಯಿತು.

ತ.ರಾ.ಸು ಅವರ ಕಾದಂಬರಿಗಳಲ್ಲಿ ಬಿಂಬಿತವಾದ ನಾಯಕ ತನಗೆ ಒಪ್ಪಿಗೆಯಾಗದ ವಿಚಾರ ಮತ್ತು ವ್ಯಕ್ತಿಗಳ ವಿರುದ್ಧ ಪರಿಣಾಮಗಳನ್ನು ಲೆಕ್ಕಿಸದೇ ಏರಿಹೋಗುವ; ತಳಮಳ, ಚಡಪಡಿಕೆ ಮತ್ತು ಮುಂಗೋಪದಲ್ಲೇ ಕುದಿಯುವ; ಕಾಲುಕೆರೆದು ಜಗಳಕ್ಕೆ ಸದಾ ಸನ್ನದ್ಧವಾಗಿರುವ ಯುವಕ. ವೈಯಕ್ತಿಕ ಲಾಭ ನಷ್ಟಗಳ ಹಂಗಿಲ್ಲದೆ ತನಗನಿಸಿದ್ದನ್ನು ಮಾಡುವ ನಿಷ್ಠುರಿ. ಕೊಟ್ಟ ಮಾತಿಗೆ ಸ್ವಾರ್ಥವನ್ನು ಬಿಟ್ಟು ತ್ಯಾಗಕ್ಕೂ ಸಿದ್ಧನಾಗುವ, ಸವಾಲುಗಳೆದರು ಈಜುವ ಸಾಹಸಿ. ಮುಂಗೋಪಿ ಮಗ ತಮಗೊಂದು ಶಾಪ ಎಂದು ಭಾವಿಸಿದ ಜನ್ಮದಾತರ ಉಪೇಕ್ಷೆ ಮತ್ತು ತನ್ನ ವರ್ತನೆಯನ್ನು ಸದಾ ಅಪಾರ್ಥ ಮಾಡಿಕೊಂಡ ಸಮಾಜದ ವಿರುದ್ಧ ಉರಿಯುವ ಸಿಟ್ಟಿನ ರಾಮಾಚಾರಿಯ ಮನಸ್ಸಲ್ಲಿ ವಾತ್ಸಲ್ಯಕ್ಕೆ ಕರಗುವ, ಪ್ರೀತಿಗೆ ಮರುಳಾಗುವ ಭಾವುಕತೆಗೂ ಎಡೆಯಿದೆ. ತನ್ನ ತಳಮಳವನ್ನು ಅರ್ಥಮಾಡಿಕೊಂಡು ವಾತ್ಸಲ್ಯದ ತೆಕ್ಕೆಗೆ ತೆಗೆದುಕೊಂಡ ಮೇಷ್ಟ್ರು ಚಾಮಯ್ಯ ದಂಪತಿಗಳ ಆರಾಧಕ. ಸಿಟ್ಟು, ತಳಮಳ, ಪ್ರೀತಿ, ತ್ಯಾಗ, ಆರಾಧನಾ ಭಾವಗಳ ಮಡುವಾದ ರಾಮಾಚಾರಿಯಂಥ ಸಂಕೀರ್ಣ ಪಾತ್ರವನ್ನು ತೆರೆಯ ಮೇಲೆ ಅಭಿವ್ಯಕ್ತಿಸುವುದು ಯಾವುದೇ ಕಲಾವಿದನಿಗೊಂದು ದೊಡ್ಡ ಸವಾಲು.

ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂಥ ಸವಾಲನ್ನು ನಿಭಾಯಿಸಲು ಸಾಧ್ಯವಿರುವ ಕಲಾವಿದನ ಹುಡುಕಾಟದಲ್ಲಿ ತೊಡಗಿದ ಪುಟ್ಟಣ್ಣ ಅವರು ನಡೆಸುತ್ತಿದ್ದ ಸಂದರ್ಶನದಲ್ಲಿ ಕಿಡಿ ಸುರಿಸುವ ಕಣ್ಣಿನ ಸ್ಫುರುದ್ರೂಪಿ ಯುವಕನೊಬ್ಬ ಗಮನ ಸೆಳೆದ. ರಾಮಾಚಾರಿ ಪಾತ್ರಕ್ಕೆ ಆಯ್ಕೆಯಾದ. ಆ ಆಯ್ಕೆಗೆ ಭವಿಷ್ಯದ ಕನ್ನಡ ಚಿತ್ರರಂಗದ ದಿಕ್ಕನ್ನು ನಿರ್ದೆಶಿಸುವ ಶಕ್ತಿ ಇತ್ತೆಂಬುದು ಮುಂದೆ ರುಜುವಾತಾಯಿತು. ಪುಟ್ಟಣ್ಣನವರೇ ಸಂದರ್ಶನವೊಂದರಲ್ಲಿ ಹೇಳಿದಂತೆ ‘ಆತನ ಕಣ್ಣುಗಳನ್ನು ನೋಡಿದರೆ, ಕತ್ತು ತಿರುಗಿಸುವ ದಾಟಿ ನೋಡಿದರೆ, ನಾಗರಹಾವನ್ನು ನೋಡಿದಂತೆಯೇ ಆಗುತ್ತದೆ’ ಎಂದು ಹೇಳಿ ತಮ್ಮ ಆಯ್ಕೆಯ ಹಿಂದಿನ ಕಾರಣ ವಿವರಿಸಿದ್ದರು. ಆತನ ಹುಟ್ಟು ಹೆಸರನ್ನು ಬದಲಿಸಿ ಹೊಯ್ಸಳ ದೊರೆ ಮತ್ತು ಕಲಾಪೋಷಕ ವಿಷ್ಣುವರ್ಧನನ ಹೆಸರಿಟ್ಟರು. ಕನ್ನಡ ಚಿತ್ರರಂಗಕ್ಕೆ ಒಂದು ಅಪರೂಪದ ವಿದ್ಯಮಾನವಾಗಿ ವಿಷ್ಣುವರ್ಧನ್ ಆಗಮಿಸಿದ್ದು ಹೀಗೆ. ಅವರು ಬದುಕಿದ್ದರೆ ಈ ವರ್ಷದ ಸೆಪ್ಟೆಂಬರ್ 18ಕ್ಕೆ 75 ವರ್ಷ ತುಂಬುತ್ತಿತ್ತು. ಲಕ್ಷಾಂತರ ಅಭಿಮಾನಿಗಳು ನೆರೆದ ವಿಷ್ಣುವರ್ಧನ್ ಅವರ ಜನ್ಮದಿನ ಸಮಾರಂಭದಲ್ಲಿ ರೋಮಾಂಚನೆಗೆ ನೆರೆ ಬರುತ್ತಿದ್ದುದು ಖಂಡಿತ.

vishnu1

ಪತ್ರಕರ್ತ ಮತ್ತು ಸಿನೆಮಾ ಲೇಖಕ ಎಚ್.ಎಲ್. ನಾರಾಯಣ ರಾವ್ ಮತ್ತು ಕಾಮಾಕ್ಷಮ್ಮ ದಂಪತಿಗಳ ಮಗನಾಗಿ ಮೈಸೂರಿನಲ್ಲಿ 1950ರ ಸೆಪ್ಟೆಂಬರ್ 18ರಂದು ತುಂಬು ಕುಟುಂಬದಲ್ಲಿ ಜನಿಸಿದ ಸಂಪತ್ ಕುಮಾರ್‌ಗೆ ನಟನಾಗಬೇಕೆಂಬುದು ಬಾಲ್ಯದಲ್ಲೇ ಅಂಕುರಿಸಿದ ಹಂಬಲ. ಮೈಸೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲಿ ವ್ಯಾಸಂಗ ಮುಂದುವರೆಸಿದ ಕುಮಾರ್ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಕಾಲೇಜಿನಲ್ಲಿರುವಾಗಲೇ ನಾಟಕಗಳಲ್ಲಿ ಅಭಿನಯಿಸಿ ನಟನೆಯ ಪಾಠ ಕಲಿತ, ಹೆಚ್ಚು ಅಂತರ್ಮುಖಿಯಾಗಿದ್ದ ಕುಮಾರ್, ಮುಂದೆ ವಿಷ್ಣುವರ್ಧನ್ ಆಗಿ ಲಕ್ಷಾಂತರ ಕನ್ನಡಿಗರ ಅಭಿಮಾನಿಗಳ ಆರಾಧನಾಮೂರ್ತಿಯಾಗಿ ಭಾರತೀಯ ಚಲನಚಿತ್ರರಂಗದಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗುವರೆಂಬ ಕಿಂಚಿತ್ ಕಲ್ಪನೆ ಅವರ ಒಡನಾಡಿಗಳಿಗಿರಲಿಲ್ಲ.

ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ವಿಷ್ಣುವರ್ಧನ್ ಅವರ ಆಗಮನ, ಮೂಡಿಸಿದ ಸಂಚಲನ ಅಭೂತಪೂರ್ವ. ‘ನಾಗರಹಾವು’ ಅವರಿಗೆ ‘ಡ್ರೀಂ ಎಂಟ್ರಿ’ ನೀಡಿದ ಚಿತ್ರ. ಆ ಒಂದು ಚಿತ್ರದಿಂದ ಅವರು ದಿನಬೆಳಗಾಗುವುದರೊಳಗೆ ತಾರೆಯಾಗುವ ವಿದ್ಯಮಾನಕ್ಕೆ ನಾಡು ಸಾಕ್ಷಿಯಾಯಿತು. ಆ ಚಿತ್ರದ ಮೂಲಕ ಅವರು ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದರು. ದೊಡ್ಡಮಟ್ಟದಲ್ಲಿ ಉದ್ಯಮದ ಗಮನ ಸೆಳೆದರು. ಮಾಧ್ಯಮಗಳ ಕಣ್ಮಣಿ ಎನಿಸಿದರು. ನಾಗರಹಾವು ಚಿತ್ರದ ವಿಷ್ಣು ಅವರ ಅಭಿನಯ ಶ್ಲಾಘಿಸಲು ಆಗ ಮಾಧ್ಯಮಗಳ ನಡುವೆ ಪೈಪೋಟಿ ಏರ್ಪಾಟಾಗಿತ್ತು. ಸಂಕೀರ್ಣ ವ್ಯಕ್ತಿತ್ವದ ಯುವಕನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ವಿಷ್ಣುವರ್ಧನ್, ನಾಗರಹಾವು ಚಿತ್ರಕ್ಕೂ ಮೊದಲು ಕ್ಯಾಮೆರಾ ಎದುರಿಸಿದ್ದು ಕಾರ್ನಾಡ್- ಕಾರಂತ ಜೋಡಿಯ ರಾಷ್ಟ್ರೀಯ ಪುರಸ್ಕಾರ ಪಡೆದ ವಂಶವೃಕ್ಷ(1972) ಚಿತ್ರದಲ್ಲಿ. ಅದರಲ್ಲಿ ಪೃಥ್ವಿ ಪಾತ್ರದ ಅಭಿನಯ ನಾಗರಹಾವು ಚಿತ್ರದ ರಾಮಾಚಾರಿಯ ಪಾತ್ರದ ಪೂರ್ವಭಾವಿ ಸಿದ್ಧತೆಗೆ ಹೇಳಿ ಮಾಡಿಸಿದಂತಿತ್ತು. ಸಂಶೋಧನೆಯ ಹುಚ್ಚಿನಲ್ಲಿ ಹೆಂಡತಿ, ಮಗ, ಸಂಸಾರವನ್ನು ಮರೆತು ಎರಡನೆ ಮದುವೆ ಮಾಡಿಕೊಂಡು ಹೋಗುವ ತಂದೆ ಸದಾಶಿವರಾಯರ ವಿರುದ್ಧ ಸಿಟ್ಟು ಬೆಳೆಸಿಕೊಳ್ಳುವ ಪೃಥ್ವಿಯ ಪಾತ್ರವನ್ನು ವಿಷ್ಣುವರ್ಧನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಪೃಥ್ವಿಯಂತೆ ಕುಪಿತನಾದ ‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರವು ಅವರ ಅಭಿನಯದಲ್ಲಿ ಸ್ಫೋಟಿಸಿತು. ಆ ಚಿತ್ರ ಒಬ್ಬ ಕಲಾವಿದನನ್ನು ಮಾತ್ರ ನೀಡಲಿಲ್ಲ; ಒಬ್ಬ ‘ತಾರೆ’ಯನ್ನೂ ಕೊಡುಗೆಯಾಗಿ ನೀಡಿತ್ತು. ವಿಷ್ಣುವರ್ಧನ್ ಅವರ ನಟನಾವೃತ್ತಿ ಕಲಾತ್ಮಕ ಚಿತ್ರದಿಂದ ಆರಂಭವಾದರೂ ಅವರು ಕನ್ನಡದ ಒಬ್ಬ ಜನಪ್ರಿಯ ನಟರಾಗುವ ಭವಿಷ್ಯಕ್ಕೆ ನಾಗರಹಾವು ಮುನ್ನುಡಿ ಬರೆಯಿತು. 1972ರಲ್ಲಿ ವರ್ಷದ ಕೊನೆಯ ಚಿತ್ರವಾಗಿ ಬಿಡುಗಡೆಯಾಗಿ, ರಾಜ್ಯಾದ್ಯಂತ ಅನೇಕ ಕೇಂದ್ರಗಳಲ್ಲಿ ಶತದಿನೋತ್ಸವ, ರಜತ ಮಹೋತ್ಸವಗಳನ್ನು ಆಚರಿಸಿ ಜಯಭೇರಿ ಬಾರಿಸಿದ ನಾಗರಹಾವು ಚಿತ್ರವು 1972-73ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಟನೆಗಾಗಿ ವಿಷ್ಣುವರ್ಧನ್ ಅವರೂ ಸೇರಿದಂತೆ ದಾಖಲೆ ಎನಿಸಿದ ಎಂಟು ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಿತು. ಭಾರತದ ಇತರೆ ಚಿತ್ರರಂಗದವರ ಗಮನವನ್ನೂ ಸೆಳೆದು ಮೂರು ಭಾಷೆಗಳಲ್ಲಿ ರೀಮೇಕ್ ಆಯಿತು.

ಕನ್ನಡ ಚಿತ್ರರಂಗವು ವಿಶಿಷ್ಟವಾದ ಹಂತವನ್ನು ಪ್ರವೇಶಿಸಿದ ಹೊತ್ತಲ್ಲಿ ವಿಷ್ಣುವರ್ಧನ್ ಅವರ ಆಗಮನವಾಯಿತು. ಕನ್ನಡ ಚಿತ್ರರಂಗದ ಸುವರ್ಣಯುಗ ಎಂದೇ ಗುರುತಿಸಲಾದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರೋದ್ಯಮವು ಸಂಖ್ಯೆ ಮತ್ತು ಗುಣಮಟ್ಟದ ಚಿತ್ರಗಳ ನಿರ್ಮಾಣದಿಂದ ವಿಸ್ತಾರ ಕಂಡುಕೊಳ್ಳುತ್ತಿತ್ತು. ಎಪ್ಪತ್ತರ ಆರಂಭದಲ್ಲಿ ಹಳೆ ತಲೆಮಾರಿನ ನಿರ್ದೇಶಕರೆನಿಸಿದ ಬಿ.ಆರ್. ಪಂತುಲು( ಶ್ರೀ ಕೃಷ್ಣದೇವರಾಯ), ಆರ್. ನಾಗೇಂದ್ರ ರಾವ್(ನಾಡಿನ ಭಾಗ್ಯ), ಬಿ.ಎಸ್. ರಂಗಾ(ಸಿಡಿಲಮರಿ), ವೈ.ಆರ್. ಸ್ವಾಮಿ(ಬಿಡುಗಡೆ, ಸಿಪಾಯಿ ರಾಮು), ದೊರೈ ಭಗವಾನ್(ಕಸ್ತೂರಿ ನಿವಾಸ), ಎಂ.ಆರ್. ವಿಠಲ್,  ಗೀತಪ್ರಿಯ, ರವೀ, ಪೇಕೇಟಿ ಶಿವರಾಂ ಮೊದಲಾದವರು ಸಕ್ರಿಯವಾಗಿ ಯಶಸ್ವಿ ಸಿನೆಮಾ ನಿರ್ದೇಶಿಸುತ್ತಿದ್ದರೆ, ನಂತರದ ತಲೆಮಾರಿನ ನಿರ್ದೇಶಕರೆನಿಸಿದ ಪುಟ್ಟಣ್ಣ ಕಣಗಾಲ್(ಗೆಜ್ಜೆ ಪೂಜೆ, ಶರಪಂಜರ), ಸಿದ್ಧಲಿಂಗಯ್ಯ(ಬಾಳು ಬೆಳಗಿತು, ನ್ಯಾಯವೇ ದೇವರು, ಬಂಗಾರದ ಮನುಷ್ಯ), ವಿಜಯಾ ರೆಡ್ಡಿ(ಗಂಧದ ಗುಡಿ) ಮೊದಲಾದವರು ವಾಣಿಜ್ಯ ಚಿತ್ರಗಳಲ್ಲಿಯೇ ವಿಭಿನ್ನ ಪ್ರಯೋಗ ನಡೆಸುತ್ತಿದ್ದವರು. ಸಂಸ್ಕಾರ ಮತ್ತು ವಂಶವೃಕ್ಷ ಚಿತ್ರಗಳ ಯಶಸ್ಸು ಕಲಾತ್ಮಕ ಚಿತ್ರಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದವು. ಚಿತ್ರ ನಿರ್ಮಾಣ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಆದರೆ ಈ ಸನ್ನಿವೇಶದಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ನಾಯಕರ ಸಂಖ್ಯೆಯಲ್ಲಿ ಕೊರತೆಯಿತ್ತು. ಕುಮಾರತ್ರಯರಲ್ಲಿ ರಾಜ್‌ಕುಮಾರ್ ಒಬ್ಬರ ಜನಪ್ರಿಯತೆ ಅಬಾಧಿತವಾಗಿ ಮುಂದುವರೆದಿದ್ದರೆ ಕಲ್ಯಾಣ್ ಕುಮಾರ್ ಮತ್ತು ಉದಯಕುಮಾರ್ ಪೋಷಕ ಪಾತ್ರಗಳಿಗೆ ಜಾರಿದ್ದರು. ರಾಜೇಶ್ ಅವರು ಕೌಟುಂಬಿಕ ಚಿತ್ರಗಳಿಗೆ ಮಿತಿಗೊಂಡರೆ, ಗಂಗಾಧರ್ ಮಹಿಳಾ ಪ್ರಧಾನ ಚಿತ್ರಗಳ ನಾಯಕರಾಗಿ ಉಳಿದಿದ್ದರು. ನಾಯಕರಾಗಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ ಶ್ರೀನಾಥ್ ಅವರು ಪೋಷಕ ಪಾತ್ರಗಳನ್ನೂ ಒಪ್ಪಿಕೊಂಡು ಚಿತ್ರರಂಗದಲ್ಲಿ ಬೇರೂರಲು ಹೋರಾಟ ನಡೆಸಿದ್ದರು. ಹಾಗಾಗಿ ನಾಯಕನೊಬ್ಬ ಅರಳಲು ಅವಕಾಶದ ಹೆಬ್ಬಾಗಿಲು ತೆರದಿತ್ತು. ವಿಷ್ಣುವರ್ಧನ್ ಅವರು ಸರಿಯಾದ ಸಮಯದಲ್ಲಿ ಆಗಮಿಸಿ ಸರಿಯಾದ ಚಿತ್ರದಲ್ಲಿ ಪ್ರವೇಶ ಪಡೆದು ಇತಿಹಾಸ ನಿರ್ಮಿಸಿದರು.

vishnu

ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ

ನಾಗರಹಾವು ಚಿತ್ರದ ಯಶಸ್ಸಿನ ಹೊಳೆಯಲ್ಲಿ ಮಿಂದೆದ್ದ ವಿಷ್ಣುವರ್ಧನ್ ಅವರಿಗೆ ಉದ್ಯಮದಲ್ಲಿ ಬೇಡಿಕೆ ಸೃಷ್ಟಿಯಾದರೂ ಆರಂಭದ ವೃತ್ತಿ ಬದುಕು ನಿರೀಕ್ಷಿತ ಏರುಗತಿ ಕಾಣಲಿಲ್ಲ. ಅವರ ವೃತ್ತಿ ಬದುಕಿನ ಮೊದಲ ದಶಕವು ಹಲವು ಗೆಲುವು ಸೋಲುಗಳ ಏರಿಳಿತವನ್ನು ಕಂಡಿತು. ಈ ಏರಿಳಿತದ ಬದುಕಿನಲ್ಲಿ ಹಲವಾರು ಅನಗತ್ಯ ವಿವಾದಗಳಿಗೆ ತುತ್ತಾದರೂ ರಾಮಾಚಾರಿಯ ಹಠ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡೇ ಅವರು ಪ್ರತಿ ಸೋಲಿನ ಹಿಂದೆಯೇ ಪುಟಿದೆದ್ದು ಅಚ್ಚರಿ ಮೂಡಿಸಿದರು. ಉದಾಹರಣೆಗೆ ನಾಗರಹಾವಿನ ನಂತರ ಅಪಾರ ನಿರೀಕ್ಷೆಯೊಡನೆ ಬಿಡುಗಡೆಯಾದ ಸೀತೆಯಲ್ಲ ಸಾವಿತ್ರಿ(1973) ಇನ್ನಿಲ್ಲದಂತೆ ನೆಲ ಕಚ್ಚಿತು. ಅದರ ಹಿಂದೆ ಬಿಡುಗಡೆಯಾದ ‘ಮನೆ ಬೆಳಗಿದ ಸೊಸೆ’ಯ ಸಾಧಾರಣ ಯಶಸ್ಸು ಮತ್ತು ‘ಗಂಧಧ ಗುಡಿ’ ಹಾಗೂ ‘ಬೂತಯ್ಯನ ಮಗ ಅಯ್ಯು'(1974) ಚಿತ್ರಗಳ ಭರ್ಜರಿ ಯಶಸ್ಸು ಅವರ ವೃತ್ತಿಬದುಕಿಗೆ ಆಸರೆಯಾದವು. ಬೂತಯ್ಯನ ಮಗ ಅಯ್ಯುವಿನಲ್ಲಿ ಮತ್ತೊಮ್ಮೆ ಅನ್ಯಾಯಗಳ ವಿರುದ್ಧ ಸಿಡಿಯುವ ಯುವಕನ ಪಾತ್ರದಲ್ಲಿ ಪ್ರೇಕ್ಷಕರ ಹೃದಯ ತಟ್ಟಿದರು. ನಂತರ ಬಿಡುಗಡೆಯಾದ ‘ಪ್ರೊ. ಹುಚ್ಚೂರಾಯ’ ಮತ್ತು ‘ಅಣ್ಣ ಅತ್ತಿಗೆ'(1974) ಚಿತ್ರಗಳಲ್ಲಿ ಸವಾಲೆನಿಸುವ ಪಾತ್ರಗಳಿರಲಿಲ್ಲ. 1975ರಲ್ಲಿ ಭರ್ಜರಿ ಯಶಸ್ಸು ಕಂಡ ‘ದೇವರಗುಡಿ’ ಸಾಂಸಾರಿಕ ಚಿತ್ರ ಮತ್ತು ‘ಕಳ್ಳ ಕುಳ್ಳ’ ಚಿತ್ರಗಳು ಅವರ ರೊಮ್ಯಾಂಟಿಕ್ ಮತ್ತು ಆಕ್ಷನ್ ಹೀರೋ ಇಮೇಜಿಗೆ ತಳಹದಿ ಹಾಕಿದವು. ಆ ಚಿತ್ರಗಳ ಅವರು ವ್ಯಕ್ತಪಡಿಸಿದ ಪ್ರಣಯಿಯ ತುಂಟತನ, ರಮ್ಯ ಭಾವಗಳು, ಸಾಹಸಗಳು ಯುವಜನತೆಗೆ ಗುಂಗು ಹಿಡಿಸಿದರೂ ಆ ವರ್ಷ ಬಿಡುಗಡೆಯಾದ ಇತರೆ ನಾಲ್ಕು ಚಿತ್ರಗಳು ಯಶಸ್ಸು ಕಾಣಲಿಲ್ಲ. ಮರುವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ತಗ್ಗಿದುದರ ಜೊತೆಗೆ ದೊಡ್ಡ ಮಟ್ಟದಲ್ಲಿ ಯಾವುದೊಂದೂ ಯಶಸ್ಸು ಕಾಣಲಿಲ್ಲ. ಆದರೆ 1977ರಿಂದ ವಿಷ್ಣುವರ್ಧನ್ ಅವರ ದೆಸೆ ಸಂಪೂರ್ಣ ಬದಲಾಯಿತು. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ‘ನಾಗರಹೊಳೆ’ಯ ಯಶಸ್ಸು ಅವರನ್ನು ಮತ್ತೆ ಗೆಲುವಿನ ಹಾದಿಗೆ ತಿರುಗಿಸಿತು. ವಿಶೇಷವೆಂದರೆ ಆ ವರ್ಷ ಬಿಡುಗಡೆಯಾದ ಒಂಬತ್ತು ಚಿತ್ರಗಳಲ್ಲಿ ‘ಶನಿ ಪ್ರಭಾವ’ ಚಿತ್ರ ಹೊರತುಪಡಿಸಿದರೆ, ನಾಗರಹೊಳೆ, ಸೊಸೆ ತಂದ ಸೌಭಾಗ್ಯ, ಕಿಟ್ಟು ಪುಟ್ಟು, ಸಹೋದರರ ಸವಾಲ್ ಮತ್ತು ಗಲಾಟೆ ಸಂಸಾರ ಚಿತ್ರಗಳು ಅವರ ಅಭಿನಯ ವೈವಿಧ್ಯಕ್ಕೆ ಸಾಕ್ಷಿಯಾಗಿ, ಸಾಧಾರಣ ಯಶಸ್ಸಿನಿಂದ ಸೂಪರ್ ಹಿಟ್‌ವರೆಗೂ ಯಶಸ್ಸು ಕಂಡವು. ಅಲ್ಲಿಂದಾಚೆಗೆ ಅವರಿಗೆ ವೈವಿಧ್ಯಮಯ ಪಾತ್ರಗಳು ಅರಸಿ ಬಂದವು; ಯಶಸ್ವೀ ಚಿತ್ರಗಳ ಸಂಖ್ಯೆ ಸಹ ಇಮ್ಮಡಿಯಾಯಿತು; ಜೊತೆಗೆ ಅಭಿಮಾನಿ ವಲಯ ಸಹ ವಿಸ್ತರಿಸಿತು.

ಎಪ್ಪತ್ತರ ದಶಕದ ಅವಧಿಯ ಕಾಲಧರ್ಮಕ್ಕೆ ಅನುಗುಣವಾಗಿ ವಸ್ತು, ನಿರೂಪಣೆಯಲ್ಲಿ ಒಟ್ಟು ಭಾರತೀಯ ಚಿತ್ರರಂಗದಲ್ಲಿ ಸಂಭವಿಸಿದಂತೆಯೇ ಕನ್ನಡ ಚಿತ್ರರಂಗವೂ ಹಲವು ಪರಿವರ್ತನೆಗಳನ್ನು ಹಾಯ್ದು ಹೋಯಿತು. ಕೌಟುಂಬಿಕ ಚಿತ್ರಗಳ ಪ್ರಾಬಲ್ಯ ನಿಧಾನವಾಗಿ ಇಳಿಕೆಯಾಗಿ ಸಾಮಾಜಿಕ ಅನ್ಯಾಯಗಳ ವಿರುದ್ಧ ಸಿಡಿದೇಳುವ ಯುವಜನರ ಆಕ್ರೋಶ, ಸೇಡು, ಸಾಹಸಗಳ ವಸ್ತುಗಳನ್ನು ರಂಜನೀಯವಾಗಿ ಹೇಳುವ, ಗಂಡು ಹೆಣ್ಣಿನ ಸಂಬಂಧಗಳನ್ನು ನವಿರಾಗಿ ನಿರೂಪಿಸುವ ಚಿತ್ರಗಳು ಮುನ್ನೆಲೆಗೆ ಬಂದವು. ವಿಷ್ಣುವರ್ಧನ್ ಅವರ ಪಾಲಿಗೂ ಈ ಬಗೆಯ ಚಿತ್ರಗಳು ಅರಸಿ ಬಂದವು. ಹಾಗೆ ನೋಡಿದರೆ ಹಿಂದಿಯ ಜಂಜೀರ್-ದೀವಾರ್ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ವಿಜೃಂಭಿಸುವ ಮೊದಲೇ ಕುಪಿತ ಯುವಕನ ಪಾತ್ರವನ್ನು ವಿಷ್ಣುವರ್ಧನ್ ಅವರು ನಾಗರಹಾವು ಚಿತ್ರದಲ್ಲಿ ಉದ್ಘಾಟಿಸಿದ್ದರು. ನಾಗರಹೊಳೆಯಿಂದ ಆರಂಭವಾದ ಸಾಹಸಮಯ ಚಿತ್ರಗಳ ಯಶಸ್ಸು ಸಹೋದರರ ಸವಾಲ್, ನನ್ನ ರೋಷ ನೂರು ವರುಷ, ಸ್ನೇಹಿತರ ಸವಾಲ್, ಸ್ನೇಹ ಸೇಡು, ಸಿಂಗಾಪುರದಲ್ಲಿ ರಾಜಾ ಕುಳ್ಳ, ಸಿಂಹ ಜೋಡಿ, ಮಹಾ ಪ್ರಚಂಡರು, ನಾಗ ಕಾಳ ಭೈರವ ಮುಂತಾದ ಚಿತ್ರಗಳಲ್ಲಿ ಪುನರಾವರ್ತನೆಯಾಯಿತು. ಅದೇ ವೇಳೆ ಗಲಾಟೆ ಸಂಸಾರ, ಕಿಟ್ಟು ಪುಟ್ಟು, ಕಿಲಾಡಿ ಜೋಡಿ, ಮಕ್ಕಳ ಸೈನ್ಯ ಚಿತ್ರಗಳ ಹಾಸ್ಯ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಚಗುಳಿಯಿಟ್ಟರು. ಹೊಂಬಿಸಿಲು, ಸೊಸೆ ತಂದ ಸೌಭಾಗ್ಯ, ಬಂಗಾರದ ಜಿಂಕೆ, ಅವಳ ಹೆಜ್ಜೆ ಮೊದಲಾದ ಚಿತ್ರಗಳಲ್ಲಿ ಸಂಯಮದ ಅಭಿನಯದಿಂದ ಮನಸೆಳೆದರು. ಇದೇ ಅವಧಿಯಲ್ಲಿ ಬಿಡುಗಡೆಯಾದ ಗುರುಶಿಷ್ಯರು(1981) ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆದುದು ಮಾತ್ರವಲ್ಲ, ಅವರ ಜನಪ್ರಿಯತೆಯನ್ನು ವಿಸ್ತರಿಸಲು ನೆರವಾಯಿತು. ಹೀಗೆ 1981ರ ವೇಳೆಗೆ ವಿಷ್ಣುವರ್ಧನ್ ಅವರ ಹತ್ತು ವರ್ಷದ ವೃತ್ತಿ ಬದುಕಿನಲ್ಲಿ ಅಭಿನಯಿಸಿದ 65 ಚಿತ್ರಗಳಲ್ಲಿ ಸಾಧಾರಣ ಹಿಟ್ ಚಿತ್ರಗಳಿಂದ ಹಿಡಿದು ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಉಡಾಯಿಸಿದ ಚಿತ್ರಗಳು ಸೇರಿದ್ದವು. ಆ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ

Vishnuvardhan 1

1981ರ ನಂತರ ವಿಷ್ಣುವರ್ಧನ್ ಅವರ ವೃತ್ತಿ ಬದುಕು ಯಶಸ್ಸಿನ ಮೆಟ್ಟಿಲನ್ನು ಏರುತ್ತಲೇ ಸಾಗಿತು. ಅಭಿಮಾನಿ ವರ್ಗ ಸಹ ವೃದ್ಧಿಸಿತು. ಎಂಬತ್ತರ ದಶಕದಲ್ಲಿ ಸಾಹಸ ಚಿತ್ರಗಳು ವಿನೂತನ ಹೊಡೆದಾಟ(ಆಕ್ಷನ್)ಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಕಾಲ. 1982ರಲ್ಲಿ ಬಿಡುಗಡೆಯಾದ ಜೋ ಸೈಮನ್ ಅವರ ನಿರ್ದೇಶನದ ‘ಸಾಹಸ ಸಿಂಹ’ ಚಿತ್ರವು ಅವರನ್ನು ಸೂಪರ್‌ಸ್ಟಾರ್ ಪಟ್ಟಕ್ಕೇರಿಸಿತು. ಸಾಹಸ ಸಿಂಹ ಬಿರುದಿಗೆ ತಕ್ಕಂತೆ ಅವರದೇ ಆದ ವಿಶಿಷ್ಟ ಶೈಲಿಯ ಹೊಡೆದಾಟಗಳಿಂದ ರಂಜಿಸಿದ ಸಾಲು ಸಾಲೇ ಚಿತ್ರಗಳು ಬಿಡುಗಡೆಯಾದವು. ಒಂದೇ ಗುರಿ, ಸಿಡಿದೆದ್ದ ಸಹೋದರ, ಸಿಂಹಘರ್ಜನೆ, ಖೈದಿ, ವೀರಾಧಿವೀರ, ಜಯಸಿಂಹ, ದೇವಾ, ದಾದಾ, ಪೊಲೀಸ್ ಮತ್ತು ದಾದಾ ಮೊದಲಾದವು ಈ ದಶಕದಲ್ಲಿ ಯಶಸ್ವಿಯಾದ ಸಾಹಸಮಯ ಚಿತ್ರಗಳು. ಅಭಿಮಾನಿಗಳ ಒತ್ತಡಕ್ಕೆ ಸಿಲುಕಿದಂತೆ ಆ ಇಮೇಜಿನಲ್ಲಿ ಬಂಧಿಯಾದಂತೆ ಕಂಡರೂ ಕಾಲ ಕಾಲಕ್ಕೆ ತಮ್ಮ ಅಭಿನಯ ಸಾಮರ್ಥ್ಯವನ್ನು ನಿರೂಪಿಸುವ ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ತಮ್ಮ ವೃತ್ತಿ ಬದುಕಿನಲ್ಲಿ ಸಮತೋಲನ ಕಾಯ್ದುಕೊಂಡರು. ಈ ಅವಧಿಯಲ್ಲಿ ಹೊಡೆದಾಟದ ಚಿತ್ರಗಳನ್ನು ಮರೆಯುವಂಥ ಭಾವಾಭಿನಯವೇ ಪ್ರಧಾನವಾದ ಬಂಧನ, ಜೀವನಚಕ್ರ, ಸುಪ್ರಭಾತ, ಕರ್ಣ, ಮಲಯ ಮಾರುತ, ನೀ ಬರೆದ ಕಾದಂಬರಿ, ಮುತ್ತಿನ ಹಾರ, ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರ ಸಂಯಮದ ಅಭಿನಯ ಪ್ರೇಕ್ಷಕರ ಮನಗೆದ್ದಿತು. ಹಾಸ್ಯಲೇಪಿತ ಪಾತ್ರಗಳಿದ್ದ ಇಂದಿನ ರಾಮಾಯಣ ಮತ್ತು ಮದುವೆ ಮಾಡು ತಮಾಷೆ ನೋಡು ಚಿತ್ರಗಳಲ್ಲಿ ಅವರ ಹಾಸ್ಯ ಪ್ರತಿಭೆಗೆ ಪ್ರೇಕ್ಷಕರು ಶರಣಾದರು. 1973ರಲ್ಲಿ ತಮಿಳು ಚಿತ್ರ ‘ಅಲೈಗಳ್’ ಮೂಲಕ ಅನ್ಯ ಭಾಷೆಯ ಚಿತ್ರರಂಗಕ್ಕೂ ಕಾಲಿರಿಸಿದ್ದ ಅವರು ಈ ದಶಕದಲ್ಲಿ ಮಲಯಾಳಂ (ಅಡಿಮೈ ಚಂಗಲ-1980), ಹಿಂದೀ (ಏಕ್ ನಯೀ ಇತಿಹಾಸ್-1984) ಮತ್ತು ತೆಲುಗು (ಸರ್ದಾರ್ ಧರ್ಮನ್ನ-1987) ಚಿತ್ರರಂಗವನ್ನೂ ಪ್ರವೇಶಿಸಿ ಬಹುಭಾಷಾ ಕಲಾವಿದರಾಗಿ ಹೊಮ್ಮಿದರು. ಎಂಬತ್ತರ ದಶಕದ ಅಂತ್ಯಕ್ಕೆ ಅವರು 123 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡದ ಯಶಸ್ವೀ ಕಲಾವಿದರಾಗಿ ಗಟ್ಟಿಯಾದರು.

(ಮುಂದುವರೆಯುವುದು…)

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...