ಕಲಬುರಗಿಯಲ್ಲೇಕೆ ಓದುಗರ ಸಮಾವೇಶ? ಈ ಒಂದು ಒಲವಿನೋಲೆ ಓದಿ

Date:

ನವೆಂಬರ್ 30ಕ್ಕೆ ಕಲಬುರಗಿಯಲ್ಲಿ ಈದಿನ ಡಾಟ್ ಕಾಮ್ ಓದುಗರ ಸಮಾವೇಶ ನಡೆಯಲಿದೆ.

ಇದು ಹೂವು-ಬಳ್ಳಿಯ ನಾಡು (ಗುಲಾಬ್‌-ಅರ್ಗ್)‌. ಇಲ್ಲಿಗೆ ತಮಗೆ ಸ್ವಾಗತ. ಈ ಸಂಭ್ರಮದ ಸೌಂದರ್ಯ ಸವಿಯಲು ಬನ್ನಿ, ನಮ್ಮ ಸಂತೋಷದಲ್ಲಿ ಭಾಗಿಯಾಗಿ.

ಇಲ್ಲಿಗೆ ಬಂದಿಳಿದ ಮೊದಲನೇಯ ದಿನವೇ ‘ಇಲ್ಲಿ ಎತ್ತ ನೋಡಿದಲ್ಲಿ ಧೂಳು-ಕಸ-ಅವ್ಯವಸ್ಥೆ’ ಎಂದು ಬೇಸರಾಗಬೇಡಿ. ಬೆಂಗಳೂರಿನ ‘ಧೂಳು-ಕಸ-ಅವ್ಯವಸ್ಥೆ’ಯ ಬಗ್ಗೆಯೂ ನೋಡಿರಬಹುದು. ನೀವು ವಾಪಸು ಹೋದ ಮೇಲೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇನಿದು ಚಳಿಗಾಲದಲ್ಲೂ ಭಾರೀ ಬಿಸಿಲು ಅಂತ ಶುರು ಮಾಡಬೇಡಿ. ಇದು ಭಾರಿ ಬಿಸಿಲೇನಲ್ಲ. ರಾಜಸ್ತಾನದ ಫಾಲೋದಿಯಲ್ಲಿ 53 ಡಿಗ್ರಿ ತಾಪಮಾನ ಇರುತ್ತದೆ. ರಾಮಗುಂಡಂ-ಸಿಂಗರೇನಿಯಲ್ಲಿ 52 ಇರುತ್ತದೆ. ಗುಜರಾತಿನ ಅನೇಕ ನಗರಗಳು 42ಕ್ಕಿಂತ ಹೆಚ್ಚು ಬಿಸಿ ಇರುತ್ತದೆ. ನಾಗಪುರದಲ್ಲಿ 42 ಸರ್ವೇ ಸಾಮಾನ್ಯ. ಅಬುಧಾಬಿಯಲ್ಲಿ 48, ಸೌದಿ ಅರೇಬಿಯಾದಲ್ಲಿ 47 ಮುಟ್ಟುತ್ತದೆ. ಗಲ್ಫ್‌ ದೇಶಗಳಲ್ಲಿ ವರ್ಷವಿಡೀ 40ರಿಂದ 50ರ ನಡುವೆ ಅಲೆದಾಡುತ್ತಿರುತ್ತದೆ.

WhatsApp Image 2025 11 24 at 11.46.46 AM 1
ಶರಣಬಸವೇಶ್ವರ ದೇವಾಲಯ ಕಲಬುರಗಿ

ಈ ಎಲ್ಲ ಕಡೆಗಳಲ್ಲಿ ತಾವು ಕ್ರಿಕೆಟ್ಟೋ, ಕಂಪನಿಯದೋ ಸುದ್ದಿ ಮಾಡಲು, ಹೋದಾಗ ಕಿರಿಕಿರಿ ಮಾಡಿಕೊಳ್ಳದೇ ಅಥವಾ ಅಪರೂಪಕ್ಕೆ ಸ್ನೇಹಿತರು, ಅಥವಾ ಅತೀ ಅಪರೂಪಕ್ಕೆ ಕುಟುಂಬದ ಜೊತೆ ಪಿಕ್‌ನಿಕ್ಕಿಗೆ ಹೋದಾಗ ತಾಪಮಾನ ಮರೆತು ಖುಷಿ ಪಡುವಂತೆ ಈಗಲೂ ಇರಿ. ಸಮಾವೇಶದ ಮುಖ್ಯ ಉದ್ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

ಇಂತಹ ಬಿಸಿಲಿನಲ್ಲಿಯೂ ಗುಲಬರ್ಗಾ ನಗರದಲ್ಲಿ ಆರೇಳು ಲಕ್ಷ ಜನ ಇದ್ದಾರೆ. ಜಿಲ್ಲೆಯಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ಅವರೂ ಮನುಷ್ಯರು, ಚಳಿ-ಬಿಸಿಲುಗಳು ಅವರಿಗೂ ತಗಲುತ್ತವೆ. ಆದರೂ ಅವರು ಹೊಂದಿಕೊಂಡು ಇದ್ದಾರೆ. ಈ ಭಾವನೆ ನಿಮ್ಮಲ್ಲಿ ಇರಲಿ. ಇಲ್ಲೇನು ಇವರೆಲ್ಲ ಉರ್ದು ಮಾತಾಡುತ್ತಾರೆ, ವಿಚಿತ್ರ ಅಂತ ನಿಮ್ಮ ನಿಮ್ಮಲ್ಲೇ ಮಾತಾಡಿಕೊಳ್ಳಬೇಡಿ.

ಬೆಂಗಳೂರಿಗರಷ್ಟು ಉರ್ದು ಮಾತಾಡುವವರು ಬೇರೆ ಯಾರೂ ಇಲ್ಲ. ನೀವು ‘ಪರವಾಗಿಲ್ಲ’ ಎಂದಾಗ, ‘ಸಖತ್‌ ಖುಷಿ ಮಗಾ’ ಅಂದಾಗ, ‘ಮಸ್ತ್‌ ಮಜಾ ಮಾಡಿ’ ಅಂದಾಗ, ‘ಸರಕಾರಿ ತರಬೇತಿ ಕೇಂದ್ರ’ ಅಂದಾಗ, ‘ತಿಜೋರಿಯಲ್ಲಿ ಬರೀ ಚಿಲ್ಲರೆ ಕಾಸು’ ಅಂದಾಗ, ನೀವು ಮಾತಾಡುತ್ತಿರುವುದು- ಉರ್ದು- ಪರ್ಷಿಯನ್‌ ಭಾಷೆ. ಕೃಷ್ಣ ಕೊಲ್ಹಾರ್‌ ಕುಲಕರ್ಣಿ ಸರ್‌ ಹೇಳಿದಂತೆ ಕನ್ನಡಿಗರ ಲಂಗ, ಲುಂಗಿ, ಲಂಗೋಟಿ, ಲಗಾಮು, ಇವು ಯಾವುವೂ ಕನ್ನಡದ್ದಲ್ಲ. ಉರ್ದು-ಪರ್ಷಿಯನ್‌ ಭಾಷೆಯವು. ಇದು ನಿಮಗೆ ಗೊತ್ತಿರಲಿ. ಕುಲಕರ್ಣಿ ಸರ್‌ ಬಹುಶೃತ ವಿದ್ವಾಂಸರು. ಇದೂ ನಿಮಗೆ ಗೊತ್ತಿರಲಿ.

WhatsApp Image 2025 11 24 at 11.39.06 AM 1
ಬುದ್ಧ ವಿಹಾರ

ನಾವು ಮಾತಾಡುವ ರೀತಿ ನೋಡಿ ಕಿಸಕ್ಕನೆ ನಕ್ಕು, ಅಪಹಾಸ್ಯ ಮುಚ್ಚಿಡಲು ‘ನಿಂ ಭಾಷೆ ನಮಗೆ ತುಂಬಾ ಇಷ್ಟ’, ಅಂತ ಓಳು ಕುಟ್ಟಬೇಡಿ. ಅದು ‘ನಮ್‌ ಭಾಷೆʼ ಅಲ್ಲ. ನಮ್ಮ ಶೈಲಿ. ಇದು ನಿಮ್ಮ ಪ್ಯೂರ್‌ ಕನ್ನಡದ ಅಪಭ್ರಂಶ ಅಲ್ಲ. ಅದು ನಾವು ಸಹಜವಾಗಿ ಮಾತಾಡುವ ರೀತಿ. ಅಕೆಡೆಮಿಕ್‌ ಆಗಿ ಹೇಳುವುದಾದರೆ ಅದು ಕನ್ನಡದ ಉಪಭಾಷೆ. ಇತರ ಭಾಷೆಗಳ ನುಡಿಗಟ್ಟಿನ, ವ್ಯಾಕರಣದ ಪ್ರಭಾವದಿಂದ ಗಡಿ ಜಿಲ್ಲೆಗಳು ತಮ್ಮದೇ ಶೈಲಿ ಬೆಳೆಸಿಕೊಂಡಿರುತ್ತವೆ. ಬೆಂಗಳೂರನಲ್ಲಿ ತೆಲುಗು, ತಮಿಳು, ಕರಾವಳಿಯಲ್ಲಿ, ಬ್ಯಾರಿ, ತುಳು, ಕೊಂಕಣಿ, ನವಾಯತಿ, ಮಲಯಾಳ ಪ್ರಭಾವ ಇರುವುದು ಎಷ್ಟು ಸ್ವಾಭಾವಿಕವೋ ಇದೂ ಅಷ್ಟೇ ಸ್ವಾಭಾವಿಕ. ಬೆಂಗಳೂರು-ಮೈಸೂರು ಇತರೆ ಜಿಲ್ಲೆಗಳು ಕೂಡ ಗಡಿಯಲ್ಲಿವೆ. ನಿಮಗೆ ನೆನಪಿರಲಿ.

‘ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಊಟದ ಸವಿ’ ಅನ್ನಬೇಡಿ. ಅದು ಚರ್ಚೆಯ ವಿಷಯವೇ ಅಲ್ಲ. ನಾವು ಇಲ್ಲಿ ದಕ್ಷಿಣ ಆಫ್ರಿಕಾದ ಊಟ ಕೊಡಲಿಕ್ಕೆ ಆಗೋದಿಲ್ಲ. ದಕ್ಷಿಣ ಕರ್ನಾಟಕದ ಊಟ ಹಾಕಲಿಕ್ಕೂ ಆಗೋದಿಲ್ಲ.

ಅದರ ಬದಲು ಹೈದರಾಬಾದು ಕರ್ನಾಟಕ ಕಲ್ಯಾಣ ಕರ್ನಾಟಕವಾಗಿದೆಯೇ? ಅದನ್ನು ಖಟ್ಟಿಗೆ ಹಚ್ಚಿ ಪರೀಕ್ಷಿಸಿ. ಇಲ್ಲಿನ ಸಮಸ್ಯೆಗಳೇನು? ಅವಕ್ಕೆ ಪರಿಹಾರಗಳೇನಿರಬಹುದು? ನಿಮ್ಮ ಅನುಭವ ಶ್ರೀಮಂತಿಕೆಯಿಂದ, ಓಡಾಟದ ಹಿನ್ನೆಲೆಯಿಂದ ಪರಿಹಾರೋಪಾಯಗಳನ್ನು ಸೂಚಿಸಿ. ಪರಿಣಿತರನ್ನು ಕೇಳಿ.

ಸಾಹಿತ್ಯ ಬದುಕಿನಿಂದ ಹೊಮ್ಮುವುದು ಹೌದಾದರೆ ಇಲ್ಲಿನ ಸಾಹಿತ್ಯದ ಬಗ್ಗೆ ಬರೆಯುವಾಗ ಇಲ್ಲಿನ ಬದುಕಿನ ಬಗ್ಗೆಯೂ ಬರೆಯಬಹುದು. ತಪ್ಪೇನಿಲ್ಲ. ವಿವಿಧ ರಾಜಕೀಯ ಪಕ್ಷಗಳು ಈ ಪ್ರದೇಶಕ್ಕಾಗಿ ಯಾವ ರೀತಿ ನೀತಿ ರೂಪಿಸಿದವು? ಯಾವ ಕಾರ್ಯಕ್ರಮಗಳನ್ನು ಜಾರಿ ಮಾಡಿದವು? ಅವು ಎಷ್ಟು ಯಶಸ್ಸು ಪಡೆದವು? ಇದರ ಬಗ್ಗೆ ಯೋಚಿಸಿ. ವಸ್ತುನಿಷ್ಠವಾಗಿ ಬರೆಯಿರಿ. ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡಿ. ಹೊಸ ಹೊಳಹು ಹರಿಯಲಿ.

WhatsApp Image 2025 11 24 at 11.50.33 AM
ಚಿಂಚೋಳಿ ತಾಲೂಕಿನಲ್ಲಿರುವ ಚಂದ್ರಪಳ್ಳಿ ಡ್ಯಾಂ

ನೀವು ರಾಜ್ಯದ ಇತರ ಭಾಗಗಳ, ಇತರ ರಾಜ್ಯಗಳ, ಇತರ ದೇಶಗಳ ಪ್ರದೇಶಗಳಿಗೆ ಭೇಟಿ ನೀಡಿದಾಗ ಯಾವ ಸಮಸ್ಯೆ ಕಂಡವು? ಅವುಗಳನ್ನು ಅಲ್ಲಿಯ ಸರಕಾರಗಳು ಹೇಗೆ ಪರಿಹರಿಸಿದವು? ಇಲ್ಲಿ ಏನಾಯ್ತು? ಯಾರ ತಪ್ಪಿದೆ? ಯಾವ ತಾಳ ತಪ್ಪಿದೆ? ಇವುಗಳ ಬಗ್ಗೆ ಚಿಂತಿಸಿ. ಅನ್ನಿಸಿದನ್ನು ಮಾತಾಡಿ, ಬರೆಯಿರಿ. ಇಲ್ಲಿಯ ಖಡಕ್‌ ರೊಟ್ಟಿ ಉಂಡ ನಂತರ ಇಲ್ಲಿಯವರನ್ನು ಟೀಕಿಸಬಾರದು ಅಂತೇನಿಲ್ಲ.

ಕಲ್ಯಾಣದ ಕರ್ನಾಟಕದ ಮಹಾಮಹೋಪಾಧ್ಯಾಯ ಶಾಂತರಸ ಅವರು ಇಲ್ಲಿನ ಕಲೆ-ಸಾಹಿತ್ಯವನ್ನು ಹಳೇ ಮೈಸೂರಿನವರು ನಿರ್ಲಕ್ಷ ಮಾಡುವುದನ್ನು ಕಂಡು ನೊಂದುಕೊಂಡು ಇಲ್ಲಿನ ಸಂಸ್ಕೃತಿಯನ್ನು ‘ಬೆನ್ನ ಹಿಂದಿನ ಬೆಳಕು’ ಎಂದು ಚಂದಾಗಿ ಕರೆದರು. ಆ ಪರಿಸ್ಥಿತಿ ಇನ್ನೂ ಇದೆಯೇ? ಅದನ್ನು ಅವಲೋಕಿಸಿ. ಇದನ್ನು ಹೇಗೆ ಸರಿಪಡಿಸಬಹುದು ಅನ್ನೋದನ್ನು ಚರ್ಚಿಸಿ. ಕನ್ನಡದ ಹಿರಿ ಸಂಸ್ಕೃತಿ ಕಿರು ಸಂಸ್ಕೃತಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆಯೇ? ವಿಚಾರ ಮಾಡಿ. ಅಂದ ಹಾಗೆ ದಬ್ಬಾಳಿಕೆ ಸಹಿತ ಉರ್ದು-ಪರ್ಷಿಯನ್‌ ಭಾಷೆಯ ಪದ ಇರಲಿ.

WhatsApp Image 2025 11 24 at 12.31.45 PM
ಚಿಂಚೋಳಿಯ ವನ್ಯಧಾಮ

ಓದುಗರ ಸಮಾವೇಶದಲ್ಲಿ ಇಡೀ ಒಂದು ದಿನ ಇರುತ್ತೀರಿ. ಇಲ್ಲಿನ ಕಲಾವಿದ, ಜನರನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳಬೇಡಿ. ಕಲಬುರಗಿ ಕಲಾವಿದರ ಕಾಶಿ. ಇಲ್ಲಿ ನಾಡೋಜ ಜಿ.ಎಸ್‌.ಖಂಡೇರಾವ್‌ ಇದ್ದಾರೆ. ಇನ್ನೂ ಸಕ್ರಿಯವಾಗಿದ್ದಾರೆ. ವಿ.ಜಿ ಅಂದಾನಿ ಅವರ ಕಲಾ ಶಾಲೆಗೆ ಭೇಟಿ ಕೊಟ್ಟು ಅವರ ಶಿಷ್ಯ ವೃಂದವನ್ನು ಮಾತಾಡಿಸಿ. ಇಲ್ಲಿನ ಅಭೂತಪೂರ್ವ ಕತೃಶಕ್ತಿಯ ಕಲಾವಿದ ಎಸ್.‌ಎಂ ಪಂಡಿತ ಅವರ ಮನೆಯನ್ನು ಆರ್ಟ ಗ್ಯಾಲರಿಯಾಗಿಸಲಾಗಿದೆ. ಅದರಲ್ಲಿ ಜಗ ಕಂಡರಿಯದ ಕಲಾಸಿರಿ ಇದೆ. ಮಹಾಭಾರತ-ರಾಮಾಯಣ, ಕಾಳಿ ಮಾತೆ, ಪುರಾಣಗಳ ಸರಣಿಯ ಚಿತ್ರಗಳು, ಇತಿಹಾಸ ಪುರುಷರ ಪೊರ್ಟರೇಟು ಚಿತ್ರಗಳು ಇಲ್ಲಿವೆ. ಅದನ್ನು ನೋಡಿ ಕಣ್ಣುತುಂಬಿಕೊಂಡು ಹೋಗಿ.

‘ಈ ಊರಲ್ಲಿ ನೋಡಲು ಏನೇನೂ ಇಲ್ಲ. ಬರೀ ಡ್ರೈ’ ಅಂತ ಫರಮಾನು ಹೊರಡಿಸಬೇಡಿ. ನೋಡುವ ಕಣ್ಣು, ನಡೆಯುವ ಕಾಲು ಇದ್ದವರಿಗೆ ಎಲ್ಲೆಲ್ಲೂ ಸೌಂದರ್ಯವೇ! ಇಲ್ಲಿ ದಕ್ಷಿಣ ಭಾರತದಲ್ಲಿಯೇ ದೊಡ್ಡ ಬುದ್ಧವಿಹಾರ ಇದೆ. ಅದರ ಹೊರಗೆ ಬುದ್ಧನ ಜೀವನ ಕಾಲದ ಕಲಾಕೃತಿಗಳಿವೆ. ನಗರದ ನಟ್ಟ ನಡುವೆ ಬರಗಾಲದಲ್ಲಿ ತಿಂಗಳು ಗಟ್ಟಲೇ ಬಡವರಿಗೆ ಉಣಲು ನೀಡಿದ ಪುಣ್ಯಪುರುಷ ದೊಡ್ಡಪ್ಪ ಅಪ್ಪನ ದೇವಸ್ಥಾನ ಇದೆ. ಅಪ್ಪನ ಕೆರೆ ಇದೆ. ಸಾತ ಗುಂಬಜ್‌ ಇದೆ. ಕೋಟೆಯಲ್ಲಿ ಅತಿ ದೊಡ್ಡ ಫಿರಂಗಿ ಇರುವ ಗುಂಬಜ್‌ ಇದೆ. ಚಿಂಚೋಳಿಯ ಗೊಟ್ಟಂಗೊಟ್ಟಿಯಲ್ಲಿ ಸುಂದರ ಜಲಪಾತ ಇದೆ. ನೀವು ಓದಿದ್ದು ಸರಿ. ಗುಲಬರ್ಗಾ ಜಿಲ್ಲೆಯಲ್ಲಿ ವರ್ಷ ಪೂರ್ತಿ ಹರಿಯುವ, ಸುಂದರ ಜಲಪಾತ ಇದೆ. ಸಮೃದ್ಧ ಕಾಡು ಇದೆ.

WhatsApp Image 2025 11 24 at 11.46.45 AM

‘ಪಾನಿ ಮೆ ನಮಕ ಡಾಲ್‌ ಔರ ದೇಖ ಉಸೆ. ಪಾನಿ ಮೆ ನಮಕ ಘುಲ್‌ ಜಾಯೆಗಾ ತೋ ನಮಕ್‌ ಕಹೇಂ ಕಿಸೆ’ (ನೀರಲ್ಲಿ ಉಪ್ಪು ಕರಗಿ ಹೋದಮೇಲ ಉಪ್ಪು ಎಂದು ಕರೆಯುವುದಾದರೂ ಏನನ್ನು) ಎಂದು ಧರ್ಮ ನಿರಪೇಕ್ಷತೆ- ಸಹಬಾಳ್ವೆಯ ನೀತಿ ಪಾಠ ಹೇಳಿದ ಬಡವರ ಬಂಧು ಬಂದೇ ನವಾಜ್ ಅವರ ದರ್ಗಾ ಇದೆ. ದರ್ಗಾದ ಎದುರಿಗೆ ಇರುವ ಬೀದಿಯಲ್ಲಿ ಸಿಗುವ ವಿವಿಧ ತಿಂಡಿ ತಿನಿಸುಗಳು ಗಾಂಧಿ ಬಜಾರ್‌ ನ ಶೆಟ್ಟರ ಬೀದಿಯ ತಿಂಡಿಗಿಂತ ಭಿನ್ನವಾಗಿರುತ್ತವೆ. ನೀವು ತಿಂದಿರದೇ ಇರುವ ಟರ್ಕಿಷ ಬೇಕರಿ ವಸ್ತುಗಳು ಇಲ್ಲಿ ಇರುತ್ತವೆ. ಶೀರ್ಮಾಲ್‌, ಶೀರ ಕೂರ್ಮಾ, ಓಸ್ಮಾನಿಯಾ ಬಿಸ್ಕಿಟ್, ಸೆಹರಿ, ತಹರಿ, ಸಮೂಸಾ, ಇರಾನಿ ಚಹಾ, ಶಾಹಿ ಸ್ವೀಟು, ಅಕರೂಟ್‌ ಹಲ್ವಾ, ಬಿರಿಯಾನಿ, ಹಲೀಮಾ, ಹರೀಸ್ ಮುಂತಾದವುಗಳ ಸ್ವಾದವನ್ನು ಬಲ್ಲವರೇ ಬಲ್ಲರು. ಹೊಸ ಬಸ್‌ ಸ್ಟ್ಯಾಂಡಿನ ಎದುರಿಗೆ ಥೈಲಾ ಬಂಡಿಯ ಸೂಸಲಾ ಮಿರ್ಚಿ, ಓಲ್ಗಾ ಬಟ್ಟೆ ಅಂಗಡಿ ಎದುರಿಗೆ ಸಿಗುವ ಬೆಣ್ಣೆ ಲಸ್ಸಿಯ ಸ್ವಾದ ನಿಮ್ಮನ್ನು ವರ್ಷಾನುಗಟ್ಟಲೇ ಕಾಡದೇ ಬಿಡದು.

ಧರೆಗೆ ದೊಡ್ಡವರಾದ, ನಮಗೆಲ್ಲರಿಗೂ ಪೂಜ್ಯರಾದ ವರದಹಳ್ಳಿಯ ಶ್ರೀಧರ ಸ್ವಾಮಿಗಳು ಇಲ್ಲೇ ಅಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದವರು. ಗುಲಬರ್ಗಾದಿಂದ ಸ್ವಲ್ಪ ದೂರ ಬೆಂಡೆ ಬೊಂಬಳಿಯ ಸಾಂಪ್ರದಾಯಿಕ ಶೈಲಿಯ ಕಟ್ಟಡಗಳು ಬೆರಗು ಹುಟ್ಟಿಸುತ್ತವೆ. ಎಕರೆ ಗಟ್ಟಲೇ ಜಾಗದಲ್ಲಿ ಕಟ್ಟಿದ ಇಲ್ಲಿನ ಬಹುಮಹಡಿ ಮಣ್ಣಿನ ಮನೆಗಳು ನೈಸರ್ಗಿಕವಾಗಿ ವಾತಾನುಕೂಲಿತವಾಗಿರುವವು. ಕರೆಂಟ್‌ ಇಲ್ಲದೇ ಎಸಿ ಅನುಭವ ಕೊಡುವವು. ಇವನ್ನು ಜಪಾನು, ಯುರೋಪು ಹಾಗೂ ಅಮೆರಿಕೆ ದೇಶದ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಇಲ್ಲಿ ಕೇಂದ್ರಿಯ ವಿವಿ, ಗುಲ್ಬರ್ಗಾ ವಿವಿ, ಕೆಬಿಎನ್ ವಿವಿ, ಶರಣಬಸಪ್ಪ ವಿಶ್ವವಿದ್ಯಾಲಯಗಳು ಅಲ್ಲದೆ ಇಂಜಿನಿಯರಿಂಗ್‌, ಮೆಡಿಕಲ್ ಕಾಲೇಜುಗಳಿವೆ ಒಮ್ಮೆ ಭೇಟಿ ಕೊಡಿ.

ಇನ್ನು ಗುಲಬರ್ಗಾ-ರಾಯಚೂರು ಗಡಿಯಲ್ಲಿ ʼಗೂಗಲ್‌ʼ ಎಂಬ ವಿಶೇಷ ಹೆಸರಿನ ಒಂದು ಊರು ಇದೆ. ಅಲ್ಲಿ ಹೋಗಿ ಅಲ್ಲಿನ ಮೈಲುಗಲ್ಲಿನ ಹತ್ತಿರ, ಅಲ್ಲಿನ ಜಲಾಶಯ ಗೂಗಲ್‌ ಡ್ಯಾಮ್‌ನ ಹತ್ತಿರ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್-ಇನ್‌ಸ್ಟಾಗ್ರಾಮಿನಲ್ಲಿ ಹಾಕಿ, ನಿಮ್ಮ ಸ್ನೇಹಿತರಿಗೆ ಹೊಟ್ಟೆ ಉರಿಸಿ.

WhatsApp Image 2025 11 24 at 11.59.06 AM
ಖಾಜಾ ಬಂದೇ ನಜಾಜ್‌ ದರ್ಗಾ

ಇಲ್ಲಿನ ಸಾಹಿತ್ಯದ ಬಗ್ಗೆ, ಪರಿಷತ್ತಿನ ಬಗ್ಗೆ, ಹೈದರಾಬಾದು-ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಬರೆಯದೇ, ಮಾತನಾಡದೆ ಬರೀ ಗುಲಬರ್ಗದ ‘ಬ್ಯಾಕ್‌ ವರ್ಡ್‌ ಏರಿಯಾ’ ಬಗ್ಗೆ ಬರೆಯಬೇಡಿ. ಅದಕ್ಕೆ ಆಮೇಲೆ ಬರುವಿರಂತೆ. ಸ್ವಲ್ಪ ಸಂಶೋಧನೆ ಮಾಡಿ ಬರೆಯುವಿರಂತೆ.

ಇದನ್ನೂ ಓದಿ : SIR ಡೆಡ್‌ಲೈನ್‌ಗೆ ಶಿಕ್ಷಕರ ಜೀವ ಬಲಿ! ಚುನಾವಣಾ ಆಯೋಗದ ವೈಫಲ್ಯತೆಗೆ ಹಿಡಿದ ಕನ್ನಡಿ

ಇಂಗ್ಲಿಷು ಪತ್ರಿಕೆಯ ಸಂಪಾದಕರೊಬ್ಬರು ‘ಬ್ಯಾಂಗಲೋರ್‌ ಇಸ್‌ ದ ಸೆಂಟರ್‌ ಆಫ್‌ ದಿ ಉನಿವರ್ಸ್‌’ ಅಂತ ಪದೇ ಪದೇ ಹೇಳುತ್ತಿದ್ದರಂತೆ. ಅವರು ಪ್ರಾಥಮಿಕ ಶಾಲೆಯಲ್ಲಿ ಭೂಗೋಳ ತರಗತಿಗೆ ಚಕ್ಕರ್ ಹೊಡೆದಿದ್ದರು. ಅವರು ತಪ್ಪಿಸಿದ ಕ್ಲಾಸಿನಲ್ಲಿ ಅವರ ಶಿಕ್ಷಕರು ಕೋಪರನಿಕಸ್‌ ಹಾಗೂ ಗೆಲಿಲಿಯೊರ ಬಗ್ಗೆ ಹೇಳಿದ್ದರು. ಆಗ ಶಿಕ್ಷಕರು ಹೇಳಿದ್ದೇನೆಂದರೆ ಪ್ರತಿಯೊಬ್ಬರಿಗೂ ತಮ್ಮ-ತಮ್ಮ ಊರೇ ವಿಶ್ವದ ಕೇಂದ್ರಸ್ಥಾನ. ಇದು ನಮ್ಮೆಲ್ಲರಿಗೂ ಗೊತ್ತಿರಲಿ.

(2020ರ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಹಿರಿಯ ಪತ್ರಕರ್ತರಾದ ಹೃಷಿಕೇಶ ಬಹದ್ದೂರ್ ದೇಸಾಯಿ ಅವರು ಬರೆದ ಲೇಖನವನ್ನು ಸ್ವಲ್ಪ ಮಾರ್ಪಾಡು ಮಾಡಿ ಇಲ್ಲಿ ಪ್ರಕಟಿಸಿದ್ದೇವೆ)

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...