ನಾವು ಸ್ಮಾರ್ಟ್‌ಫೋನ್ ತೆರೆದು ಸ್ಕ್ರೋಲ್ ಮಾಡಲು ಶುರುಮಾಡಿ, ಅದನ್ನ ತಾಸುಗಟ್ಟಲೆ ಮುಂದುವರೆಸುತ್ತಿದ್ದೇವೆಂದರೆ, ಜಗತ್ತಿನ ಅತ್ಯಂತ ಶಕ್ತಿಶಾಲಿ, ಅಪಾಯಕಾರಿ ‘ಡಿಜಿಟಲ್ ಬಲೆ’ಗೆ ಬಿದ್ದಿದ್ದೇವೆ ಎಂದೇ ಅರ್ಥ. ಪ್ರತಿ ನಿತ್ಯ ಎದ್ದು ಕಣ್ಣು ಬಿಡುವ ಮೊದಲಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್.. ಒಟ್ಟಿನಲ್ಲಿ ಒಂದು ಸ್ಕ್ರೀನ್ ಬೇಕಷ್ಟೆ!
ಇಂದು ನಾವು ಸ್ಮಾರ್ಟ್‌ಫೋನ್ ಬಳಸುತ್ತಿದ್ದೇವೆ ಎನ್ನುವುದಕ್ಕಿಂತ, ಸ್ಮಾರ್ಟ್‌ಫೋನ್ ಅಥವಾ ಡಿಜಿಟಲ್ ಮೂಲಕ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಹೆಚ್ಚು ಸೂಕ್ತವೇನೊ. ದಿನದಲ್ಲಿ ಎಷ್ಟು ಬಾರಿ ಮೊಬೈಲ್ ಸ್ಕ್ರೋಲ್ ಮಾಡುತ್ತೀರಿ? ಅದರಲ್ಲಿ ಎಷ್ಟು ಬಾರಿ ಸುಮ್ಮನೆ ಚೆಕ್ ಮಾಡಿ ಇಡುತ್ತೀರಿ? ಎಷ್ಟು ಬಾರಿ ಅದು ಅಭ್ಯಾಸ ಬಲದಿಂದಲೇ ಆಗಿಬಿಡುತ್ತದೆ? ಸಾಕು ಎಂದು ಎನಿಸಿದ ಮೇಲೂ ಅದೆಷ್ಟು ಸಮಯ ಮೊಬೈಲ್ ಸ್ಕ್ರೀನ್ ಒತ್ತುತ್ತಲೇ ಇರುತ್ತೀರಿ? ಎಂದಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ ಯಾರೂ ಈ ಯೋಚನೆ ಮಾಡುವುದಿಲ್ಲ. ಆದರೆ ಖಂಡಿತ ಇದರ ಹಿಂದಿರುವ ತಂತ್ರದ ಕುರಿತು ವಿಚಾರ ಮಾಡಲೇಬೇಕು.
ನಾವು ಸ್ಮಾರ್ಟ್‌ಫೋನ್ ತೆರೆದು ಸ್ಕ್ರೋಲ್ ಮಾಡಲು ಶುರುಮಾಡಿ, ಅದನ್ನ ತಾಸುಗಟ್ಟಲೆ ಮುಂದುವರೆಸುತ್ತಿದ್ದೇವೆಂದರೆ, ಜಗತ್ತಿನ ಅತ್ಯಂತ ಶಕ್ತಿಶಾಲಿ, ಅಪಾಯಕಾರಿ ‘ಡಿಜಿಟಲ್ ಬಲೆ’ಗೆ ಬಿದ್ದಿದ್ದೇವೆ ಎಂದೇ ಅರ್ಥ. ಪ್ರತಿ ನಿತ್ಯ ಎದ್ದು ಕಣ್ಣು ಬಿಡುವ ಮೊದಲಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್.. ಒಟ್ಟಿನಲ್ಲಿ ಒಂದು ಸ್ಕ್ರೀನ್ ಬೇಕಷ್ಟೆ! ಈ ಪರದೆಗಳ ಒಳಗೆ ಹುಟ್ಟಿಕೊಂಡಿರುವ ಡಿಜಿಟಲ್ ಸಂಸ್ಕೃತಿ ಮನುಷ್ಯ ಹೇಗೆ ಯೋಚಿಸುತ್ತಾನೆ, ಹೇಗೆ ಪ್ರತಿಕ್ರಿಯಿಸುತ್ತಾನೆ, ಹೇಗೆ ಸಂಬಂಧ ಬೆಳೆಸುತ್ತಾನೆ ಮತ್ತು ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ನಿರ್ಧರಿಸುತ್ತಿದೆ ಎಂದರೆ ನಂಬಲೇಬೇಕು.
ಇಂದಿನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತಮಗೆ ತಾವು ಮಾಧ್ಯಮಗಳೆಂದು ಹೇಳಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಅವು ಮಾನವನ ಅಮೂಲ್ಯ ಕ್ಷಣಗಳನ್ನು, ಅವನ ಗಮನವನ್ನು ಬಿಕರಿ ಮಾಡುವ ಮಾರುಕಟ್ಟೆಗಳು. ಸಮಯ, ಗಮನ ಮತ್ತು ವರ್ತನೆಯೇ ಅವುಗಳ ಉತ್ಪನ್ನ. ನೀವು ಏನು ನೋಡುತ್ತೀರಿ, ಎಷ್ಟು ಹೊತ್ತು ನೋಡುತ್ತೀರಿ, ಯಾವಾಗ ನಿಲ್ಲಿಸುತ್ತೀರಿ, ಯಾವ ವಿಷಯಕ್ಕೆ ಕೋಪಗೊಳ್ಳುತ್ತೀರಿ, ಯಾವುದನ್ನು ಹೆಚ್ಚು ಆಸ್ವಾದಿಸುತ್ತೀರಿ ಎಲ್ಲವೂ ಅಂಕಿಅಂಶಗಳಾಗಿ ಪರಿವರ್ತಿತವಾಗುತ್ತದೆ. ಪ್ರತಿ ಕ್ಲಿಕ್, ಪ್ರತಿ ಪಾಸ್, ಪ್ರತಿ ಮರುನೋಟ ಡೇಟಾ ಆಗಿ ಸಂಗ್ರಹವಾಗುತ್ತದೆ.
ಈ ಡೇಟಾ ಮೇಲೆ ಕಾರ್ಯನಿರ್ವಹಿಸುವುದು ಅಲ್ಗಾರಿದಮ್. ಯಾವುದೇ ಪ್ಲಾಟ್‌ಫಾರ್ಮ್ ಇರಲಿ ಅಲ್ಲಿ ನೀವು ಹೆಚ್ಚು ಸಮಯ ಕಳೆಯಬೇಕು. ಹಾಗೆ ಮಾಡುವುದೇ ಅಲ್ಗಾರಿದಮ್‌ನ ಕೆಲಸ. ಇದನ್ನ ಮಾಡಲು ಅದು ನಿಮ್ಮ ಭಾವನೆ, ಆಸಕ್ತಿ, ದೌರ್ಬಲ್ಯಗಳನ್ನು ಚಾಚೂ ತಪ್ಪದೇ ಕಲಿಯುತ್ತದೆ. ನೀವು ಸಂತೋಷವಾಗಿದ್ದೀರಾ, ದುಃಖದಲ್ಲಿದ್ದೀರಾ, ಆತಂಕದಲ್ಲಿದ್ದೀರಾ ಎಂಬುದನ್ನು ಅದು ಮೌಲ್ಯಮಾಪನ ಮಾಡುವುದಿಲ್ಲ. ನೀವು ಪ್ರತಿಕ್ರಿಯಿಸುತ್ತಿದ್ದೀರಾ ಎಂಬುದನ್ನಷ್ಟೇ ಅದು ಗಮನಿಸುತ್ತದೆ. ಹೀಗಾಗಿ ಕೋಪ, ಭಯ, ಅತಿರೇಕ, ಹಿಂಸೆ, ಸಂಚಲನಕಾರಿ ವಿಷಯಗಳು ಹೆಚ್ಚಾಗಿ ಮೆಚ್ಚುಗೆ ಪಡೆಯುತ್ತವೆ.
ಅಲ್ಗಾರಿದಂಗಳು ನಮ್ಮ ಮೆದುಳಿನ 86 ಶತಕೋಟಿ ನ್ಯೂರಾನ್‌ಗಳನ್ನು ನೇರವಾಗಿ ‘ರಿಮೋಟ್ ಕಂಟ್ರೋಲ್’ ಮೂಲಕ ನಿಯಂತ್ರಿಸದಿದ್ದರೂ, ಅವುಗಳ ಕಾರ್ಯವೈಖರಿಯನ್ನು (Functioning) ಮತ್ತು ಸಂಪರ್ಕಗಳನ್ನು (Synapses) ಆಮೂಲಾಗ್ರವಾಗಿ ಬದಲಾಯಿಸುವ ಶಕ್ತಿ ಹೊಂದಿವೆ. ಇದು ಒಂದು ರೀತಿಯ “ಬಯೋಲಾಜಿಕಲ್ ಹ್ಯಾಕಿಂಗ್”.

ಈ ಅಲ್ಗಾರಿದಮ್ ಏನೇನು ಮಾಡುತ್ತದೆ?
1. ಬ್ರೇನ್ ಹ್ಯಾಕಿಂಗ್: ಡೋಪಮೈನ್ ಮತ್ತು ಸ್ಲಾಟ್ ಮಷಿನ್ ತಂತ್ರ: ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸುವವರು ಕ್ಯಾಸಿನೊಗಳಲ್ಲಿರುವ ‘ಸ್ಲಾಟ್ ಮಷಿನ್’ ತಂತ್ರವನ್ನು ಬಳಸುತ್ತಾರೆ. ನೀವು ಸ್ಕ್ರೋಲ್ ಮಾಡಿದಾಗ ಪ್ರತಿ ಬಾರಿಯೂ ಹೊಸದೇನೋ ಸಿಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಮುಂದಿನ ಪೋಸ್ಟ್ ಚೆನ್ನಾಗಿರಬಹುದು ಎಂದು ಮೆದುಳು ಹೇಳುತ್ತಿರುತ್ತದೆ. ಈ ಅನಿಶ್ಚಿತತೆಯಿಂದ ಹಾಗೂ ಒಮ್ಮೊಮ್ಮೆ ಅಚಾನಕ್ ಆಗಿ ಇಷ್ಟವಾಗುವ ಪೋಸ್ಟ್ ಬಂದಾಗ ಆಗುವ ಖುಷಿಯಿಂದ ಮೆದುಳಿನಲ್ಲಿ ಡೋಪಮೈನ್ (Dopamine) ಹಾರ್ಮೋನ್ ಬಿಡುಗಡೆಯಾಗುತ್ತದೆ. ಆ ಖುಷಿಯ ನಿರೀಕ್ಷೆ ಹೆಚ್ಚಾದಂತೆಲ್ಲಾ ಬೆರಳು ಸ್ಕ್ರೀನ್ ಅನ್ನು ಮೇಲೆತ್ತುತ್ತಲೇ ಇರುತ್ತದೆ.
ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ (Prefrontal Cortex) ಎಂಬ ಭಾಗವು ನಮ್ಮ ತರ್ಕಬದ್ಧ ಆಲೋಚನೆಗಳನ್ನು ನಿಯಂತ್ರಿಸುತ್ತದೆ. ಆದರೆ, ಈ ನಿರಂತರ ಡೋಪಮೈನ್ ದಾಳಿಯಿಂದಾಗಿ ಈ ಭಾಗ ದುರ್ಬಲಗೊಳ್ಳುತ್ತದೆ. ಪರಿಣಾಮ, “ಇನ್ನೊಂದು ವಿಡಿಯೋ ನೋಡಿದರೆ ಸಾಕು, ಆಮೇಲೆ ಕೆಲಸ ಮಾಡಿದರಾಯಿತು” ಎಂಬ ಹಪಾಹಪಿ ಹೆಚ್ಚಾಗಿ, ಮನುಷ್ಯ ತನ್ನ ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ.
2. ನಿಮಗೆ ಉಣಿಸಿ, ನಿಮ್ಮನ್ನೇ ಉಣ್ಣುವ ಅಲ್ಗಾರಿದಂ (Data Extraction): ಅಲ್ಗಾರಿದಂ ಎಂಬುದು ಒಂದು ಹಸಿದ ಪ್ರಾಣಿಯಿದ್ದಂತೆ. ಅದಕ್ಕೆ ನೀವು ನಿರಂತರವಾಗಿ ಡೇಟಾವನ್ನು ಉಣಿಸಬೇಕಾಗುತ್ತದೆ. ನೀವು ಒಂದು ಪೋಸ್ಟ್ ಅನ್ನು ಕೇವಲ 0.5 ಸೆಕೆಂಡ್ ಹೆಚ್ಚು ಕಾಲ ನೋಡಿದರೂ ಅದು ಡೇಟಾ ಆಗಿ ದಾಖಲಾಗುತ್ತದೆ.
- ವೈಯಕ್ತೀಕರಣ: ಅಲ್ಗಾರಿದಂ ನಿಮ್ಮನ್ನು ನಿಮ್ಮ ಪೋಷಕರಿಗಿಂತ ಅಥವಾ ಸಂಗಾತಿಗಿಂತಲೂ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತದೆ. ನಿಮ್ಮ ಒಲವು, ಭಯ, ಆಸೆ ಮತ್ತು ನಿಮ್ಮ ದುರ್ಬಲ ಕ್ಷಣಗಳನ್ನು ಅದು ಗುರುತಿಸಿ ಸ್ಟೋರ್ ಮಾಡಿಟ್ಟುಕೊಳ್ಳುತ್ತದೆ.
- ಎಕೋ ಚೇಂಬರ್ (Echo Chamber): ಅಲ್ಗಾರಿದಂ ನಿಮಗೆ ಇಷ್ಟವಾಗುವ ವಿಷಯಗಳನ್ನು ಮಾತ್ರ ಪದೇ ಪದೇ ತೋರಿಸುವ ಮೂಲಕ ನಿಮ್ಮ ಆಲೋಚನೆಗಳನ್ನು ಸಂಕುಚಿತಗೊಳಿಸುತ್ತದೆ. ಇದು ನಿಮ್ಮ ವ್ಯಕ್ತಿತ್ವವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ರೂಪಿಸಿಬಿಡುತ್ತದೆ. ಈ ರೀಲ್ಸ್ ಅರ್ಥ ಮಾಡಿಕೊಂಡಷ್ಟು ನಮ್ಮನ್ನು ಬೇರಾರೂ ಅರ್ಥ ಮಾಡಿಕೊಂಡಿಲ್ಲವಲ್ಲ ಎನಿಸುವುದು ಈ ಕಾರಣಕ್ಕೇ.
3. ನ್ಯೂರೋಪ್ಲಾಸ್ಟಿಸಿಟಿ ಮತ್ತು ಏಕಾಗ್ರತೆಯ ನಾಶ: ನ್ಯೂರೋಪ್ಲಾಸ್ಟಿಸಿಟಿ ಎನ್ನುವುದು ಎರಕ ಹೊಯ್ಯುವಂತ ಪ್ರಕ್ರಿಯೆ. ನಮ್ಮ ಮೆದುಳು ಕೂಡ ಪ್ಲಾಸ್ಟಿಕ್‌ನಂತೆ; ನಾವು ಅದಕ್ಕೆ ಏನು ನೀಡುತ್ತೇವೆಯೋ ಹಾಗೆಯೇ ಅದು ರೂಪುಗೊಳ್ಳುತ್ತದೆ (Neuroplasticity). 15 ರಿಂದ 30 ಸೆಕೆಂಡ್‌ಗಳ ಕಿರು ವಿಡಿಯೋಗಳನ್ನು ಗಂಟೆಗಟ್ಟಲೆ ನೋಡುವುದರಿಂದ ನಮ್ಮ ಮೆದುಳು ದೀರ್ಘಕಾಲದ ವಿಷಯಗಳ ಮೇಲೆ ಗಮನ ಹರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
“ಇಂದು ಮನುಷ್ಯನ ಸರಾಸರಿ ಏಕಾಗ್ರತೆಯ ಅವಧಿ (Attention Span) ಕೇವಲ 8.25 ಸೆಕೆಂಡ್‌ಗಳಿಗೆ ಕುಸಿದಿದೆ. (2000ನೇ ಇಸವಿಯ ಮೊದಲು 40-47 ಸೆಕೆಂಡ್‌ಗಳಿತ್ತು.) ಇದು ಒಂದು ಸಣ್ಣ ಮೀನಿಗಿಂತಲೂ (Goldfish) ಕಡಿಮೆ!” ಎಂಬುದು ಆಘಾತಕಾರಿ ಸತ್ಯ.
4. ಭಾವನೆಗಳ ಮಾರಾಟ ಮತ್ತು ಮಾನಸಿಕ ಆರೋಗ್ಯ: ಅಲ್ಗಾರಿದಂಗಳಿಗೆ ನಿಮ್ಮ ಸಂತೋಷಕ್ಕಿಂತ ನಿಮ್ಮ ‘ತೊಡಗಿಸಿಕೊಳ್ಳುವಿಕೆ’ (Engagement) ಮುಖ್ಯ. ಸಂಶೋಧನೆಗಳ ಪ್ರಕಾರ, ಮನುಷ್ಯರು ಸಕಾರಾತ್ಮಕ ವಿಷಯಗಳಿಗಿಂತ ನಕಾರಾತ್ಮಕ, ಆಕ್ರೋಶ ಭರಿತ ಅಥವಾ ಅಸೂಯೆ ಹುಟ್ಟಿಸುವ ವಿಷಯಗಳಿಗೆ ಹೆಚ್ಚು ಪ್ರತಿಕ್ರಿಯಿಸುತ್ತಾರೆ. ಈ ಕಾರಣಕ್ಕಾಗಿಯೇ ಫೀಡ್‌ಗಳಲ್ಲಿ ವಿವಾದಾತ್ಮಕ ವಿಷಯಗಳು ಹೆಚ್ಚು ಹರಿದಾಡುತ್ತವೆ. ಇದು ಬಳಕೆದಾರರಲ್ಲಿ ಆತಂಕ (Anxiety), ಖಿನ್ನತೆ ಮತ್ತು ಲೋನ್ಲಿನೆಸ್ ಅನ್ನು ಹೆಚ್ಚಿಸುತ್ತದೆ.
5. ಪ್ರತಿ ಕ್ಲಿಕ್ ಕೂಡ ಮುಖ್ಯ: ನೀವು ಸ್ಕ್ರೋಲಿಂಗ್ ನಿಲ್ಲಿಸಿ ಒಂದು ಚಿತ್ರವನ್ನು ನೋಡಿದಾಗ, ಅಲ್ಗಾರಿದಂ ನಿಮ್ಮ ಕಣ್ಣಿನ ಚಲನೆಯನ್ನು (ಐ-ಟ್ರ್ಯಾಕಿಂಗ್ ತಂತ್ರಜ್ಞಾನದ ಮೂಲಕ ಸಾಧ್ಯವಿದ್ದಲ್ಲಿ) ಅಥವಾ ನಿಮ್ಮ ನಿಲುಗಡೆಯ ಅವಧಿಯನ್ನು ಅಳೆಯುತ್ತದೆ. ಈ ಡೇಟಾವನ್ನು ಬಳಸಿ ನಿಮ್ಮ ‘ಡಿಜಿಟಲ್ ಅವತಾರ’ವನ್ನು ಸೃಷ್ಟಿಸಲಾಗುತ್ತದೆ. ಈ ಅವತಾರಕ್ಕೆ ಯಾವ ಜಾಹೀರಾತು ತೋರಿಸಿದರೆ ನೀವು ವಸ್ತುಗಳನ್ನು ಕೊಳ್ಳುತ್ತೀರಿ ಅಥವಾ ಯಾವ ಸುಳ್ಳು ಸುದ್ದಿಯನ್ನು ನಂಬುತ್ತೀರಿ ಎಂಬುದು ಮೊದಲೇ ತಿಳಿದಿರುತ್ತದೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?
ನಾವು ಸ್ಕ್ರೀನ್‌ಗಳನ್ನು ಬರೀ ಸವರುತ್ತಿದ್ದೇವೆ ಎಂದುಕೊಂಡರೆ ಮೂರ್ಖತನ. ವಾಸ್ತವದಲ್ಲಿ ಈ ಅಲ್ಗಾರಿದಮ್‌ಗಳು ನಮ್ಮ ಸುಪ್ತ ಚೇತನವನ್ನು ಕೆರೆದು ಹುಣ್ಣು ಮಾಡುತ್ತಿವೆ. 86 ಶತಕೋಟಿ ನ್ಯೂರಾನ್‌ಗಳ ಅದ್ಭುತ ಜಾಲವನ್ನು ಹೊಂದಿರುವ ಮಾನವ ಮೆದುಳು, ಕೆಲವೇ ಕಿಲೋಬೈಟ್‌ಗಳ ಕೋಡಿಂಗ್‌ಗೆ ಶರಣಾಗುತ್ತಿರುವುದು ವಿಪರ್ಯಾಸ. ಅಲ್ಗಾರಿದಮ್‌ಗೆ ಹೃದಯವಿಲ್ಲ, ಹಸಿವಿದೆ. ಆ ಹಸಿವಿಗೆ ನಮ್ಮ ಸಮಯ ಮತ್ತು ಮಾನಸಿಕ ಆರೋಗ್ಯವನ್ನು ಬಲಿ ಕೊಡುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ. ನಾವು ಅಲ್ಗಾರಿದಮ್ ಅನ್ನು ಬಳಸಬೇಕೇ ಹೊರತು, ಅಲ್ಗಾರಿದಮ್ ನಮ್ಮನ್ನು ಬಳಸುವಂತಾಗಬಾರದು. ನೆನಪಿರಲಿ, ನೀವು ಸ್ಕ್ರೋಲ್ ಮಾಡುತ್ತಿರುವ ಪ್ರತಿ ಕ್ಷಣವೂ ನಿಮ್ಮ ಜೀವನದ ಅಮೂಲ್ಯ ಪುಟವೊಂದು ತಿರುವುತ್ತದೆ. ಆ ಪುಟದಲ್ಲಿ ನಿಮ್ಮದೇ ಸ್ವಂತ ಆಲೋಚನೆಗಳನ್ನು ಬರೆಯುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ಸ್ಕ್ರೀನ್‌ಗೆ ಒಪ್ಪಿಸದಿರಿ!





