ಸಿಲಿಕಾನ್ ಸಿಟಿಯ ದಿಗ್ಗಜರಾದ ಆ್ಯಪಲ್ (Apple) ಮತ್ತು ಅಡೋಬ್ (Adobe) ನಡುವಿನ ಸಂಬಂಧ ಯಾವಾಗಲೂ ಸಂಕೀರ್ಣ. ಐಫೋನ್‌ನಲ್ಲಿ ‘ಫ್ಲ್ಯಾಶ್’ ತಂತ್ರಜ್ಞಾನ ನಿಷೇಧದ ವಿವಾದಕ್ಕೂ ಮುನ್ನ, 2005ರಲ್ಲಿ ಉದ್ಯೋಗಿಗಳ ನೇಮಕಾತಿ ವಿಚಾರದಲ್ಲಿ ಈ ಎರಡು ಕಂಪನಿಗಳ ನಡುವೆ ನಡೆದ ಶೀತಲ ಸಮರವು 2010ರ ನ್ಯಾಯಾಲಯದ ದಾಖಲೆಗಳಲ್ಲಿ ಬಹಿರಂಗವಾಗಿತ್ತು.
2005ರಲ್ಲಿ ಅಡೋಬ್ ಕಂಪನಿಯು ಆ್ಯಪಲ್ ಉದ್ಯೋಗಿಗಳನ್ನು ಸೆಳೆಯುತ್ತಿದೆ ಎಂಬ ಮಾಹಿತಿ ಸ್ಟೀವ್ ಜಾಬ್ಸ್ ಅವರ ಗಮನಕ್ಕೆ ಬಂದಿತ್ತು. ಎರಡು ಕಂಪನಿಗಳ ನಡುವೆ ಉದ್ಯೋಗಿಗಳನ್ನು ಸೆಳೆಯಬಾರದು ಎಂಬ ಅಲಿಖಿತ ಒಪ್ಪಂದವಿದೆ ಎಂದು ನಂಬಿದ್ದ ಜಾಬ್ಸ್ ಕೂಡಲೇ ಅಡೋಬ್ ಸಿಇಒ ಬ್ರೂಸ್ ಚಿಝೆನ್ ಅವರಿಗೆ ನೇರವಾಗಿ, ಖಡಕ್ ಇಮೇಲ್ ಒಂದನ್ನು ರವಾನಿಸಿದ್ದರು.
ಆ ಇಮೇಲ್‌ನಲ್ಲಿ ಜಾಬ್ಸ್, “ಬ್ರೂಸ್, ಅಡೋಬ್ ನಮ್ಮ ಉದ್ಯೋಗಿಗಳನ್ನು ಸೆಳೆಯುತ್ತಿದೆ. ನಾವು ನಿಮ್ಮವರಿಂದ ನೇಮಕಾತಿ ಮಾಡಿಕೊಳ್ಳಬಾರದು ಎಂಬ ನೀತಿ ಪಾಲಿಸುತ್ತಿದ್ದೇವೆ. ಆದರೆ ನಿಮ್ಮ ನೀತಿ ಬೇರೆಯೇ ಇದ್ದಂತಿದೆ. ನಮ್ಮಿಬ್ಬರಲ್ಲಿ ಒಬ್ಬರು ಈ ನೀತಿಯನ್ನು ಬದಲಿಸಿಕೊಳ್ಳಲೇಬೇಕು. ಅದು ಯಾರು ಎಂದು ದಯವಿಟ್ಟು ತಿಳಿಸಿ” ಎಂದು ಎಚ್ಚರಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
ಇದಕ್ಕೆ ಉತ್ತರಿಸಿದ್ದ ಬ್ರೂಸ್, “ನಾವು ಕೇವಲ ಹಿರಿಯ ನಿರ್ದೇಶಕರು ಅಥವಾ ಉಪಾಧ್ಯಕ್ಷರ ಮಟ್ಟದ ಉದ್ಯೋಗಿಗಳನ್ನು ಮಾತ್ರ ಪರಸ್ಪರ ನೇಮಿಸಿಕೊಳ್ಳಬಾರದು ಎಂಬ ಒಪ್ಪಂದವಿದೆ ಎಂದು ನಾನು ಭಾವಿಸಿದ್ದೆ. ಆದರೆ, ಈ ಒಪ್ಪಂದವನ್ನು ಮುಂದುವರಿಸಲು ನಾವು ಸಿದ್ದ” ಎಂದು ಸಮಜಾಯಿಸಿ ನೀಡಿದ್ದರು.
ಅಮೆರಿಕದಲ್ಲಿ ಪ್ರತಿಸ್ಪರ್ಧಿ ಕಂಪನಿಗಳು ಪರಸ್ಪರ ಉದ್ಯೋಗಿಗಳನ್ನು ‘ಕೋಲ್ಡ್ ಕಾಲ್’ ಮಾಡಿ ಸೆಳೆಯಬಾರದು ಎಂದು ಒಳಒಪ್ಪಂದ ಮಾಡಿಕೊಳ್ಳುವುದು ಕಾನೂನುಬಾಹಿರ. ಈ ಇಮೇಲ್ ಸಂಭಾಷಣೆಗಳು 2010ರ ಆಂಟಿಟ್ರಸ್ಟ್ ಮೊಕದ್ದಮೆಯ ವೇಳೆ ಸಾಕ್ಷಿಯಾಗಿ ಬಳಕೆಯಾದವು. ಅಂತಿಮವಾಗಿ, ಉದ್ಯೋಗಿಗಳನ್ನು ಸೆಳೆಯುವಂತೆ ರಹಸ್ಯ ಒಪ್ಪಂದ ಮಾಡಿಕೊಂಡ ಆರೋಪದ ಮೇಲೆ ಆ್ಯಪಲ್, ಅಡೋಬ್, ಗೂಗಲ್ ಮತ್ತು ಇಂಟೆಲ್ ಕಂಪನಿಗಳು ಒಟ್ಟಾಗಿ 415 ಮಿಲಿಯನ್ ಡಾಲರ್ (ಸುಮಾರ್ 3400 ಕೋಟಿ ರೂ) ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕಾಯಿತು.





