ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದ ಬೂತಪ್ಪನ ದೇವಸ್ಥಾನದ ಬಳಿ ಕಳೆದ ಮೂರು ದಿನಗಳಿಂದ ಅನಾಥರಂತೆ ತಂಗಿದ್ದ ಅನಾಮಧೇಯ ಸುಮಾರು 76 ವರ್ಷದ ವಯೋವೃದ್ಧ,ನನ್ನು ಆರೈಕೆ ಮಾಡಿ, ಸಂಬಂಧಿಗಳನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಅವರ ಕುಟುಂಬಕ್ಕೆ ಒಪ್ಪಿಸಿದ ಮಾನವೀಯ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾರ್ಚ್ 2 ರಂದು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬಂದ ದೂರಿನ ಮೇರೆಗೆ 112 ಸಿಬ್ಬಂದಿಯಾದ ಗುರುಮೂರ್ತಿ ಹಾಗೂ ರುದ್ರೇಶ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲಿ ಇದ್ದ ವಯೋವೃದ್ಧರು ತಮ್ಮ ಹೆಸರು ಪೀತಾಂಬರಪ್ಪ ವಿಭೂತಿ ತಂದೆ ನಿಂಗಪ್ಪ ಎಂದು ಮಾತ್ರ ತಿಳಿಸಿ, ಊರು ಹಾಗೂ ಕುಟುಂಬದ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ.
ನಂತರ ಅವರನ್ನು ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಜನಶಕ್ತಿ ಸ್ವಯಂಸೇವಾ ಸಂಸ್ಥೆಗೆ ಸುರಕ್ಷಿತವಾಗಿ ಒಪ್ಪಿಸಲಾಯಿತು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯ ಸಿಪಿಐ ಶಿಲ್ಪ ವೈ ಎಸ್ ಅವರು ರಾಣೇಬೆನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದು. ಬಳಿಕ ರಾಣೇಬೆನ್ನೂರು ಠಾಣೆಯ ಪೊಲೀಸ್ ಸಿಬ್ಬಂದಿ ಪೂಜಾರ್ ಮಾಹಿತಿ ಸಂಗ್ರಹಿಸಿ, ವೃದ್ಧರ ಮಗಳು ಶಿಲ್ಪ (35) ಅವರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿ ಪರಿಶೀಲನೆ ನಡೆಸಿ ವೃದ್ಧರನ್ನು ಅವರ ಅಭಿರಕ್ಷೆಗೆ ಒಪ್ಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ಮೂರು ದಿನಗಳಿಂದ ಅನಾಮಧೇಯವಾಗಿ ಇದ್ದ ವಯೋವೃದ್ಧರನ್ನು ಪತ್ತೆಹಚ್ಚಿ ಕುಟುಂಬಕ್ಕೆ ಸೇರಿಸುವಲ್ಲಿ ಯಶಸ್ವಿಯಾದ ವಿದ್ಯಾನಗರ ಠಾಣೆಯ ಸಿಪಿಐ ಶಿಲ್ಪ ವೈ ಎಸ್, 112 ಸಿಬ್ಬಂದಿ ಗುರುಮೂರ್ತಿ, ರುದ್ರೇಶ್ ಹಾಗೂ ರಾಣೇಬೆನ್ನೂರು ಪೊಲೀಸ್ ಸಿಬ್ಬಂದಿ ಪೂಜಾರ್ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.





