ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ 4 ಕಾರ್ಮಿಕ ಸಂಹಿತೆಗಳಿಗೆ ವಿರುದ್ಧ, ರೈತವಿರೋಧಿ ಕಾಯ್ದೆಗಳು ರದ್ದು ಮಾಡಲು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ಕರೆಯ ಮೇರೆಗೆ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು ಸಂಯುಕ್ತ ಹೋರಾಟ ಕರ್ನಾಟಕ ಅಡಿಯಲ್ಲಿ ಪ್ರತಿಭಟನೆ ನಡೆಸಿದವು. “ಕರಾಳ ಕಾಯ್ದೆಗಳನ್ನು ಹಿಂಪಡೆಯಿರಿ” ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, “ರೈಲ್ವೆ, ಸಾರಿಗೆ, ಕಲ್ಲಿದ್ದಲು, ತೈಲ, ಉಕ್ಕು, ರಕ್ಷಣಾ, ಬ್ಯಾಂಕುಗಳು, ವಿಮೆ, ದೂರಸಂಪರ್ಕ ಸೇರಿದಂತೆ ಹಲವು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದ ಸ್ಥಳೀಯ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡು ನಿರುದ್ಯೋಗ ಸಮಸ್ಯೆ ಗಂಭೀರವಾಗುತ್ತಿದೆ. ಕೃಷಿಯಲ್ಲಿ ಎಂಎಸ್ ಪಿ, ಬೆಂಬಲಬೆಲೆ ಇಲ್ಲದೇ, ಕರಾಳ ಕಾಯ್ದೆ ತರುವ ಮೂಲಕ ರೈತರನ್ನು ದುರ್ಬಲಗೊಳಿಸಲಾಗುತ್ತಿದೆ” ಎಂದು ಆರೋಪಿಸಿದರು.

“ಶಿಕ್ಷಣ-ಆರೋಗ್ಯ ಕ್ಷೇತ್ರಗಳ ಖಾಸಗೀಕರಣ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನರೇಗಾ ಯೋಜನೆಯ ದುರ್ಬಳಕೆ, ವಿದ್ಯುತ್ ತಿದ್ದುಪಡಿ ಮಸೂದೆ, ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಹೆಚ್ಚಳ ಮುಂತಾದ ಕ್ರಮಗಳು ಜನಹಿತ ವಿರೋಧಿ” ಎಂದು ಟೀಕಿಸಿದರು.
“ಬಿಸಿಯೂಟ, ಆಶಾ, ಅಂಗನವಾಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸರ್ಕಾರಿ ನೌಕರರ ಸ್ಥಾನಮಾನ, ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೌಲಭ್ಯಗಳನ್ನು ನೀಡದೆ ಶೋಷಿಸಲಾಗುತ್ತಿದೆ. ಗುತ್ತಿಗೆ, ನಿರ್ಮಾಣ, ಗೃಹ, ವಲಸೆ ಮತ್ತು ಗಿಗ್ ಕಾರ್ಮಿಕರು ಭದ್ರತೆಯಿಲ್ಲದೆ ದುಡಿಯುತ್ತಿರುವುದು ದುಃಖಕರ” ಎಂದು ಅಭಿಪ್ರಾಯಪಟ್ಟರು.
“ಲೇಬರ್ ಕೋಡ್‌ಗಳು ಕಾರ್ಮಿಕರ ಮುಷ್ಕರದ, ಸಂಘಟನೆಯ ಹಕ್ಕು ಮತ್ತು ಸಾಮೂಹಿಕ ಚೌಕಾಸಿ ಹಕ್ಕನ್ನು ಕಡಿಮೆ ಮಾಡುತ್ತವೆ. ದಿನಕ್ಕೆ 12 ಗಂಟೆ ಕೆಲಸದ ಅವಧಿ ಹಾಗೂ ರಾತ್ರಿ ಪಾಳಿ ವ್ಯವಸ್ಥೆ ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ. 29 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಂಡವಾಳಶಾಹಿಗಳಿಗೆ ಲಾಭ ಕಲ್ಪಿಸುವ ಪ್ರಯತ್ನ ಇದಾಗಿದೆ” ಎಂದು ಆರೋಪಿಸಿದರು.
“ಈ ನೀತಿಗಳು ಬಂಡವಾಳ ಶಾಹಿ ಪರವಾಗಿದ್ದು, ಕಾರ್ಮಿಕ ವಿರೋಧಿ ಧೋರಣೆಯ ಪ್ರತಿಬಿಂಬವಾಗಿವೆ. ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿ, ಸಮಾಜವಾದಿ ಮೌಲ್ಯಗಳ ಆಧಾರದ ಮೇಲೆ ಸಮಾನತೆ ಮತ್ತು ಘನತೆಯ ಬದುಕು ಖಾತ್ರಿಪಡಿಸುವ ವ್ಯವಸ್ಥೆಯೇ ಪರಿಹಾರ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾನತೆ ಸಾಧಿಸಲು ನಾನು ಮೀಸಲಾತಿ ಪರ ಇದ್ದೇನೆ: ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ
ಈ ವೇಳೆ ಕಾರ್ಮಿಕ ಮುಖಂಡ ಹೆಚ್.ಜಿ.ಉಮೇಶ್ ಆವರಗೆರೆ, ರಾಘವೇಂದ್ರ ಕೆ.ನಾಯರಿ, ಸೋಮಶೇಖರ್, ಹೊನ್ನೂರು ಮುನಿಯಪ್ಪ, ಕೆ.ಹೆಚ್.ಆನಂದರಾಜ್, ತೊಗಲೇರಿ, ಇ.ಶ್ರೀನಿವಾಸ್, ವಿ.ಲಕ್ಷ್ಮಣ್, ಸತೀಶ್ ಅರವಿಂದ್, ಕೆ.ಹೆಚ್.ಆನಂದ ರಾಜ್, ಹನುಮಂತಪ್ಪ, ಮಲ್ಲೇಶ್, ರಮೇಶ್ ದಾಸರ್, ಐರಣಿ ಚಂದ್ರು, ಪವಿತ್ರ, ಶಿವಾಜಿರಾವ್, ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕವಾಡ, ಗುಮ್ಮನೂರು ಬಸವರಾಜ್, ಬುಳ್ಳಾಪುರ ಹನುಮಂತಪ್ಪ, ಅಶ್ಪಕ್, ಜಬೀನಾ ಖಾನಂ, ಎಂ.ಕರಿಬಸಪ್ಪ, ಮರುಳಸಿದ್ದಪ್ಪ, ನರೇಗಾ ರಂಗನಾಥ, ಹೆಚ್ಕೆಆರ್ ಸುರೇಶ್ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.





