ಬೆಂಗಳೂರಿನ ಹೊರವರ್ತುಲ ರಸ್ತೆಯ ಹೊರಮಾವು ಕೆಳಸೇತುವೆ ಬಳಿ ಸರಣಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ತಾಯಿ–ಮಗ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಟೋ ಚಾಲಕ, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
“ಅಶ್ವಿನಿ (29) ಹಾಗೂ ಅವರ ಮಗ ಎನ್ ಯಶ್ವಿನ್ (7) ಮೃತರು. ಅಪಘಾತದಲ್ಲಿ ಆಟೋ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ” ಎಂದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
“ಸ್ಥಳೀಯ ನಿವಾಸಿ ನರೇಶ್ ಅವರು ಪತ್ನಿ ಅಶ್ವಿನಿ ಹಾಗೂ ಮಗ ಯಶ್ವಿನ್ ಜೊತೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದ್ದು, ನರೇಶ್ ಅವರೂ ಗಾಯಗೊಂಡಿದ್ದಾರೆ” ಎಂದು ತಿಳಿಸಿದರು.
“ಹೊರಮಾವು ಕೆಳಸೇತುವೆ ಬಳಿಯ ಬಸ್ ತಂಗುದಾಣದಲ್ಲಿ ಬಿಎಂಟಿಸಿ ಬಸ್ ನಿಂತಿತ್ತು. ಇದೇ ಮಾರ್ಗವಾಗಿ ಹೊರಟಿದ್ದ ಆಟೋ, ಬಸ್‌ಗೆ ಢಿಕ್ಕಿ ಹೊಡೆದಿತ್ತು. ಹಿಂದೆಯೇ ಅತೀ ವೇಗವಾಗಿ ಬರುತ್ತಿದ್ದ ಸರಕು ಸಾಗಣೆ ವಾಹನ, ಆಟೋಗೆ ಗುದ್ದಿತ್ತು. ಬಳಿಕ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ರೈಲಿನಿಂದ ಬಿದ್ದ ಬಾಲಕನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ
ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ನರೇಶ್ ಹಾಗೂ ಪತ್ನಿ–ಮಗ, ರಸ್ತೆಗೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಮಗ ಯಶ್ವಿನ್ ಸ್ಥಳದಲ್ಲೇ ಮೃತಪಟ್ಟರು. ತಾಯಿ ಅಶ್ವಿನಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಅಲ್ಲಿಯೇ ಅಸುನೀಗಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





