ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಗೌರವ್ವ ಸಾಲದ ಒತ್ತಡ ಹಾಗೂ ನಿರಂತರ ಮಾನಸಿಕ ಕಿರುಕುಳದಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಗೋಡೆ ಮೇಲೆ ಬರೆದ ಗೌರವ್ವನ ಕೊನೆಯ ಬರಹ
ನನ್ನ ಸಾವಿಗೆ ಕಾರಣ ಸಂಘದ ಸುಮವ್ವ, ಮಂಜವ್ವ ಮತ್ತು ಕಸ್ತೂರ. ಆರೂಡ ತಂಗಿಯನ್ನ ಚೆನ್ನಾಗಿ ನೋಡಿಕೋ. ಮಕ್ಕಳು ನಿಮ್ಮ ಜವಾಬ್ದಾರಿ. ಸಿದ್ದಪ್ಪ ಆರೂಡನನ್ನ 10ನೇ ತರಗತಿ ಪಾಸು ಮಾಡಿಸು. ಇದೇ ನನ್ನ ಕೊನೆಯ ಆಸೆ.

ಮಕ್ಕಳ ಭವಿಷ್ಯದ ಚಿಂತೆ
ಆತ್ಮಹತ್ಯೆಗೆ ಮುನ್ನ ಗೋಡೆ ಮೇಲೆ ಬರೆದ ಸಂದೇಶದಲ್ಲಿ ಗೌರವ್ವ ತಮ್ಮ ಸಾವಿಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸುವ ಜೊತೆಗೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಆಳವಾದ ಕಾಳಜಿ ವ್ಯಕ್ತಪಡಿಸಿದ್ದಾರೆ. ಅಂತಿಮ ಕ್ಷಣಗಳಲ್ಲೂ ಮಕ್ಕಳ 10ನೇ ಕೊನೆಯ ಆಸೆಯಾಗಿತ್ತು.
ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ
ಗ್ರಾಮಸ್ಥರ ಮಾಹಿತಿ ಪ್ರಕಾರ, ಗೌರವ್ವ ಹಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಕಂತು ಪಾವತಿಯಲ್ಲಿ ವಿಳಂಬವಾದಾಗ ಸಂಘದ ಮಹಿಳೆಯರು ಮನೆಗೆ ಬಂದು ಅವಾಚ್ಯವಾಗಿ ಮಾತನಾಡುವುದು, ಬೆದರಿಕೆ ಹಾಕುವುದು ಮತ್ತು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಗೌರವ್ವ ಮಾನಸಿಕವಾಗಿ ಕುಗ್ಗುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕೆರೆಗೆ ಹಾರಿ ಆತ್ಮಹತ್ಯೆ
ಗೌರವ್ವ ಮನೆಯಿಂದ ಹೊರಟು ಗ್ರಾಮದ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾಹಿತಿ ಪಡೆದ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: 22 ವರ್ಷಗಳ ಬಳಿಕಸುಪ್ರೀಂಕೋರ್ಟ್ ವಿಚಾರಣೆ ಇಂದು
ಪೊಲೀಸ್ ತನಿಖೆ ಆರಂಭ
ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಡೆ ಮೇಲೆ ಬರೆದ ಡೆತ್ ನೋಟ್ ಆಧರಿಸಿ ತನಿಖೆ ಆರಂಭಿಸಿರುವ ಪೊಲೀಸರು, ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಸಮಸ್ಯೆಗಳಿಗೆ ಆತ್ಮಹತೆಯೇ ಪರಿಹಾರವಲ್ಲ




