ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಕಾಣೆಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದ ಸಮೀಪದ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಐದು ದಿನಗಳ ಹಿಂದೆ ಕಾರ್ಮಿಕನನ್ನು ತುಳಿದು ಸಾಯಿಸಿದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಫೆಬ್ರವರಿ 19ರಿಂದ ಆರಂಭಗೊಂಡಿದ್ದ ಈ ಕಾರ್ಯಾಚರಣೆಯಲ್ಲಿ ಶುಕ್ರವಾರ ಜೂನಿಯರ್ ಅರ್ಜುನ್ ನೇತೃತ್ವದಲ್ಲಿ ತಂಡ ಕಾಡಿಗೆ ತೆರಳಿತ್ತು. ಕಾರ್ಯಾಚರಣೆಗೆ ಒಟ್ಟು 7 ಕುಮ್ಕಿ ಆನೆಗಳನ್ನು ಬಳಸಲಾಗಿತ್ತು. ಈ ವೇಳೆ ಮದವೇರಿದ ಕಾಡಾನೆಯ ಜೊತೆ ಕಾದಾಟದ ಸಂದರ್ಭ ಜ್ಯೂನಿಯರ್ ಅರ್ಜುನ್ ದಾರಿ ತಪ್ಪಿ ಕಾಡಿನೊಳಗೆ ಓಡಿಹೋಗಿದ್ದು, ಕೆಲಕಾಲ ನಾಪತ್ತೆಯಾಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿಗಳು ತಕ್ಷಣ ಗಾಬರಿಗೊಂಡರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ
ಸುಮಾರು ಒಂದು ಗಂಟೆಗಳ ಕಾಲ ಹುಡುಕಾಟ ನಡೆಸಿದ ಅಧಿಕಾರಿಗಳು ಕೊನೆಗೂ ಸಾಕಾನೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಬಳಿಕ ಆನೆಯನ್ನು ನಿಯಂತ್ರಣಕ್ಕೆ ಪಡೆದು ಕಟ್ಟಿ ಹಾಕಲಾಗಿದ್ದು, ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.





