ಪ್ರಕೃತಿಯ ಪ್ರವಾಸಿ ತಾಣವಾಗಿರುವ ಮಲೆನಾಡು ಶಾಂತಿ ಸೌಹಾರ್ದ ಪರಂಪರೆ ಇದೆ. ಯಾವುದೇ ಸಮುದಾಯವಿರಲಿ ಸ್ಪಂದಿಸುವ ಮನಸ್ಥಿತಿಯಿದೆ. ಆದರೇ, ಫೆಬ್ರವರಿ 16ರಲ್ಲಿ ತಿಲಕ್ ಪಾರ್ಕ್ ರಸ್ತೆ, ವಿಜಯಪುರ ಬಡಾವಣೆಯಲ್ಲಿ ಮನೆಗೆ ಕಲ್ಲು ತೂರಾಟ ನಡೆದ ಘಟನೆ ಇಡೀ ಕಾಫಿ ನಾಡನ್ನೇ ಬಿಚ್ಚಿಬಿಳಿಸಿದೆ. ಯಾಕೆಂದರೆ, ಕಲ್ಲು ತೂರಾಟ ಆಗಿದೆ ಎಂದು ಹಿಂದೂ, ಮುಸ್ಲಿಂ ಎರಡು ಸಮುದಾಯದಲ್ಲಿ ಕೋಲಾಹಲ ಎದಿದ್ದೆ.

ಘಟನೆ ಬಗ್ಗೆ : ಫೆ. 16ರಂದು ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಈ ಹಿನ್ನೆಯಲ್ಲಿ ಪಾನಿ ಪುರಿ ತಿನ್ನಲು ಬಂದಿದ್ದ ಮುಸ್ಲಿಂ ಸಮುದಾಯದ ಯುವಕರನ್ನು ವಿನಾಕಾರಣ ಯುವಕರನ್ನು ಥಳಿಸಿ, ಮನ ಬಂದಂತೆ ಹಲ್ಲೆ ಗೈದಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುವ ಸ್ಥಳದಲ್ಲಿ ಹಲ್ಲೆ ಗೈದ ಯುವಕರ ಗುಂಪು ಮೂರು ದಿನಗಳ ಹಿಂದಿನಿಂದಲೇ ಮನೆಯ ಸುತ್ತ ಬೈಕಿನಲ್ಲಿ ಓಡಾಡುತ್ತಾ ಅವರನ್ನು ಹಿಂಬಾಲಿಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೂರುದಾರರ ಜೊತೆ ವಾಗ್ವಾದ ನಡೆದಿರುವುದೂ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾಸೀನ್, ಹುಸೇನ್, ಅಕ್ಷದ್, ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ಅಪ್ರಾಪ್ತ ಬಾಲಕರು ಹಾಗೆಯೇ, ಇನ್ನ ಇಬ್ಬರಿಗೆ 18 ವರ್ಷ ವಯಸ್ಸಿನ ಯುವಕರಾಗಿದ್ದಾರೆನ್ನಲಾಗಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರು ಸೇರಿ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ದೊಡ್ಡ ಅನಾಹುತ ಆಗದಂತೆ ಸಾಧ್ಯವಾದಷ್ಟು ಸುಧಾರಿಸಲಾಗಿತ್ತು. ಆದರೇ, ಎರಡು ಸಮುದಾಯದ ಘರ್ಷಣೆ ಹೆಚ್ಚಾದಾಗ ಹಲ್ಲೆ ಮಾಡಿದ ವ್ಯಕ್ತಿಗಳು ಹಾಗೂ ಹಲ್ಲೆಗೊಳಗಾದ ಯುವಕರ ಮೇಲೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಚಿಕ್ಕಮಗಳೂರಿನ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದಾಗ ವಿಚಾರಣೆ ನಡೆಸಿ ನ್ಯಾಯಾಧೀಶರು ಇಬ್ಬರು ಪ್ರಮುಖ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ಆದೇಶಿಸಲಾಯಿತು.ಈ ಕುರಿತು ಕಲ್ಲು ತೂರಾಟ ಮಾಡಿದವರನ್ನು ಹಿಡಿದುಕೊಟ್ಟವರ ವಿರುದ್ದವೆ ಪ್ರಕರಣ ದಾಖಲಿಸಿದ್ದಾರೆಂದು ಬಿಜೆಪಿ ಮುಖಂಡರು ಸಿಡಿಮಿಡಿಗೊಂಡು ಎಲ್ಲೆಡೆ ಮಾತಿನ ಚಕಮಕಿ ಶುರುವಾಯಿತು. ಕಿಡಿಗೇಡಿಗಳು ರಾತ್ರಿ ವೇಳೆ ಮನೆಗಳ ಮೇಲೆ ಕಲ್ಲು ಎಸೆಯುತ್ತಿದ್ದುದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಎದುರಾಗಿದೆ.

ಬಂಧಿತ ಪೋಷಕರ ಮಾತು : ಮಾಧ್ಯಮದೊಂದಿಗೆ ಮಾತಾಡಿದ ಬಂಧಿತ ಅಪ್ರಾಪ್ತ ಬಾಲಕರ ಪೋಷಕರು, ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಜನರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. ನಮ್ಮ ಮಕ್ಕಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಂಜೆ ಪಾನಿಪುರಿ ತಿನ್ನೋಕೆ ಹೋದವರನ್ನು ಹಿಡಿದು ಹೊಡೆದಿದ್ದಾರೆ. ಪೊಲೀಸರು ಬಂದು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ, ಇಬ್ಬರು ಅಪ್ರಾಪ್ತರ ಪೈಕಿ ಓರ್ವನ ತಾಯಿಯಾಗಿರುವ ಶಾಹಿನ್, ನನ್ನ ಮಗ ತಪ್ಪು ಮಾಡಿಲ್ಲ. ಕಲ್ಲು ಯಾರು ಹೊಡೆದಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಮನೆಯಲ್ಲಿ ಸೊಪ್ಪು ಸಾರು ಮಾಡಿದ್ದೆ , ತಿನ್ನಲ್ಲ ಅಂತ ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದಾರೆ. ಆಗ ಯಾರೋ ಹುಚ್ಚರು ರಸ್ತೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಪಾಪದ ಮಕ್ಕಳನ್ನು ಹಿಡಿದು ಬಜರಂಗದಳದವರು ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ಚೆಕ್ ಮಾಡಲಿ ಯಾರು ಕಲ್ಲು ಹೊಡೆದಿದ್ದಾರೆ ಅವರಿಗೆ ಶಿಕ್ಷೆ ಕೊಡಲಿ , ಇವರು ಯಾರು ಶಿಕ್ಷೆ ಕೊಡಲಿಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಅಪ್ರಾಪ್ತನ ತಾಯಿ ರಿಯಾನಾ ಬೇಗಂ ಮಾತನಾಡಿ, ನನ್ನ ಮಗ ತಪ್ಪು ಮಾಡಿಲ್ಲ, ರಾತ್ರಿ ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದರು. ಪಾನಿಪುರಿ ತಿಂದು ಬರುತ್ತಿರುವಾಗ ಕೆಲವರು ಬಂದು ಹೆಸರು ಕೇಳಿದ್ದಾರೆ. ಹೆಸರು ಹೇಳುತ್ತಿದ್ದಂತೆ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮಕ್ಕಳು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪೊಲೀಸರು ಶಿಕ್ಷೆ ಕೊಡಲಿ, ಇವರು ಯಾರು ಶಿಕ್ಷೆ ಕೊಡಲಿಕ್ಕೆ. ನನ್ನ ಮಕ್ಕಳು ತಪ್ಪು ಮಾಡಿದ್ದರೆ ಸಿಸಿಟಿವಿ ಚೆಕ್ ಮಾಡಿ ಹೇಳಲಿ. ನನ್ನ ಮಕ್ಕಳು ಇಂತಹ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ಹಲ್ಲೆಗೊಳಗಾದ ಅಪ್ರಾಪ್ತ ಬಾಲಕರ ಅಭಿಪ್ರಾಯ : ನಾವು ಕಲ್ಲು ತೂರಾಟ ನಡೆಸಿಲ್ಲ, ನಾವು ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದೀವಿ. ಆಗ ಅಲ್ಲಿಯೇ ಇದ್ದ ಶ್ಯಾಮ್ , ಸಂತೋಷ್ ನಮ್ಮ ಮೇಲೆ ಹಲ್ಲೆ ನಡೆಸಿದರು. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆಯಲ್ಲಿ ಹೆಸರು ಕೇಳಿ ಹಲ್ಲೆ ನಡೆಸಿದರು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಅಪ್ರಾಪ್ತ ಬಾಲಕರು ತಮ್ಮ ನೋವನ್ನು ತಿಳಿಸಿದರು.
ಮನೆಗೆ ಕಲ್ಲು ತೂರಾಟ ಮಹಿಳೆ ಅಭಿಪ್ರಾಯ : ಯಾರೇ ತಪ್ಪು ಮಾಡಿದ್ದರು ಸರಿಯಾದ ಶಿಕ್ಷೆ ಆಗಬೇಕು. ನಮ್ಮ ಮನೆಯೇ ಏತಕ್ಕೆ ಗುರಿಯಾಗಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಪತ್ತೆ ಹಚ್ಚಿ ನಂತರ ಸಾಕ್ಷಿ ಹೇಳುತ್ತೇನೆ. ಅಲ್ಲಿಯವರೆಗೂ ನಾನು ಮಾತಾಡುವುದಿಲ್ಲ. ಹಾಗೆಯೇ, ಇಲ್ಲಿ ರಾಜಕೀಯ ಬೆಳೆ ಬೇಯಿಸಲು ಬದಲು ಅಭಿವೃದ್ಧಿ ಕಡೆ ಗಮನ ಕೊಡಲಿ ಜನರ ಸಮಸ್ಯೆ ಬಗ್ಗೆ ಮಾತಾಡಲಿ ಎಂದು ಕುಟುಂಬದವರು ತಿಳಿಸಿದರು.

ಕಾನೂನು ಕೈ ತೆಗೆದುಕೊಂಡವರನ್ನು ಗಡಿಪಾರಿಗೆ ಆಗ್ರಹ : ಹಲ್ಲೆ ನಡೆಸಿರುವ ಬಜರಂಗದಳದ ಮುಖಂಡ ಶ್ಯಾಮ್ ,ಬಿಜೆಪಿ ಮುಖಂಡ ಸಂತೋಷ್ ವಿರುದ್ದ ಸಂಘಟನಾ ಮುಖಂಡರು ಕಿಡಿಕಾರಿದ್ದಾರೆ. ಈ ಇಬ್ಬರನ್ನು ಜಿಲ್ಲೆಯಿಂದ ಕೊಡಲೇ ಗಡಿಪಾರು ಮಾಡಬೇಕು. ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನೆಸಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆಯೋ ಅವರಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಅಮಾಯಕರನ್ನು ಹಿಡಿದು ಹಲ್ಲೆ ನಡೆಸಲಾಗಿದೆ. ಇದನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಗೌಸ್ ಮುನೀರ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮನೆ ಮೇಲೆ ಕಲ್ಲು ತೂರಿದ ಆರೋಪ – ಹಲ್ಲೆ; ಭುಗಿಲೆದ್ದ ಕೋಮು ಉದ್ವಿಗ್ನತೆ
ನಿಜವಾಗಿ ಮಹಿಳೆಯ ಮೆನೆಗೆ ಕಲ್ಲು ತೂರಾಟ ಮಾಡಿದ ಗೌರಿ ಕಾಲುವೆಯ ಭರತ್ (23), ರಾಮನಹಳ್ಳಿಯ ದಿಲೀಪ್ (27) ಹಾಗೂ ಬೈಕ್ ಮಾಲೀಕ ಹರೀಶ್ ಎಂಬಾತರನ್ನು ಬಂಧಿಸಲಾಗಿದೆ. ಮುಸ್ಲಿಂ ಸಮುದಾಯದ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಸತ್ಯಾಂಶ ಬೆಳಕಿಗೆ ಬಂದಿದೆ. ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆಯಾಗಬೇಕು ಅದು ಯಾರೇ ಆಗಲಿ, ಯಾವುದೇ ಸಮುದಾಯದವರಾಗಲಿ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಏನೇ ಆಗಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದವರೇ ಸೌಹಾರ್ದತೆಯನ್ನು ಹದಗೆಡಿಸಲು ಮುಂದಾಗಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಘಟನೆಗಳಿಂದ ಚಿಕ್ಕಮಗಳೂರು ಜನರಲ್ಲಿ ಆತಂಕದ ಭಾವನೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತೆ ವಹಿಸಬೇಕಾಗಿದೆ.





