2023ರ ಚುನಾವಣೆ ಮೊದಲು ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿದ ಭರವಸೆಗಳಾದ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ವಚನದಂತೆ ನಡೆದುಕೊಂಡಿದೆ. ಸರ್ಕಾರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು ಎಂ.ಸಿ ಶಿವಾನಂದಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಜೂನ್-2023 ರಿಂದ ಜನವರಿ-2024 ರವರೆಗೆ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಜಿಲ್ಲೆಯ 10.00 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಒಂದಿಲ್ಲೊಂದು ಯೋಜನೆಗಳ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವುದರ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಈ ಯೋಜನೆ ತಲುಪುವಂತೆ ನೋಡಿಕೊಳ್ಳುತ್ತಿದೆ. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಇರುವ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಗಳೊಂದಿಗೆ ಸೇರಿ ಫಲಾನುಭವಿಗಳೊಂದಿಗೆ ಸಂವಾದ, ಕಾರ್ಯಾಗಾರ, ಉದ್ಯೋಗ ಮೇಳ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತದೆ. ಜಿಲ್ಲೆಯಲ್ಲಿ ಶೇಕಡಾ 98.00 ರಷ್ಟು ಪ್ರಗತಿ ಇರುವ ಕಾರಣ, ರಾಜ್ಯ ಗ್ಯಾರಂಟಿ ಸಮಿತಿಯು ಅನುಷ್ಠಾನ ವಿಚಾರದಲ್ಲಿ ಪ್ರಥಮ ಎಂದು ಹೇಳಿರುವುದು ನಮ್ಮ ಹೆಗ್ಗಳಿಕೆಯಾಗಿರುತ್ತದೆ.
ಶಕ್ತಿ ಯೋಜನೆ ಜೂನ್-2023ರಿಂದ ರಾಜ್ಯದ ರಸ್ತೆ ಸಾರಿಗೆ ಬಸ್ಸುಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರವಾಸ ಮಾಡುವ ಈ ಯೋಜನೆ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದೆ. ಉದ್ಯೋಗಸ್ತರು, ಕಾರ್ಮಿಕರು, ಪ್ರವಾಸಿಗರು ಹಾಗೂ ಧಾರ್ಮಿಕ ಪ್ರವಾಸಿಗರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದು, ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು, ಕಡೂರು ಹಾಗೂ ಮೂಡಿಗೆರೆ ಘಟಕಗಳ ಬಸ್ಸುಗಳಲ್ಲಿ ಯೋಜನೆ ಆರಂಭವಾದಗಿನಿಂದ ಈವರೆಗೆ 5.48. ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಪ್ರವಾಸ ಮಾಡಿದ್ದು, ಈ ಸಂಬಂಧ ರಾಜ್ಯ ಸರ್ಕಾರ 216.00 ಕೋಟಿ ರೂ.ಗಳನ್ನು ವ್ಯಯಿಸಿದೆ. ಅನ್ನಭಾಗ್ಯ: ಜುಲೈ-2023ರಿಂದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿ ಒಬ್ಬರಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡಬೇಕಾಗಿದ್ದು ಅಕ್ಕಿ ಲಭ್ಯವಿಲ್ಲದ ಕಾರಣ ಜನವರಿ 2025ರವರೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯ 2,44,353 ಪಡಿತರ ಚೀಟಿಗಳ 8,05,042 ಫಲಾನುಭವಿಗಳಿಗೆ 226.00 ಕೋಟಿ ನೇರ ನಗದು ವರ್ಗಾವಣೆ ಮಾಡಲಾಗಿದ್ದು, 2025ರ ಫೆಬ್ರವರಿಯಿಂದ ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ರೂ. 99.00 ಕೋಟಿಗಳು ಒಟ್ಟಾರೆ ರೂ. 325.00 ಕೋಟಿಗಳನ್ನು ಮಾಡಲಾಗಿದೆ.
ಗೃಹಜ್ಯೋತಿ ಆಗಸ್ಟ್-2023ರಿಂದ ಜಾರಿಗೊಂಡಿರುವ 200 ಯೂನಿಟ್ ವರೆಗಿನ ಈ ಉಚಿತ ಯೋಜನೆಯಿಂದ ಜಿಲ್ಲೆಯಲ್ಲಿ 3,06,735 ಆರ್ ಆರ್ ಸಂಖ್ಯೆಗಳ (ಕನಿಷ್ಠ 10.00 ಲಕ್ಷ ಫಲಾನುಭವಿಗಳು) ವಿದ್ಯುತ್ ಬಿಲ್ಲನ್ನು ಸರ್ಕಾರ ಭರಿಸುತ್ತಿದೆ. ಈವರೆಗೆ 304.00 ಕೋಟಿ ರೂ.ಗಳನ್ನು ವ್ಯಯಿಸಿದ. ಇದರಿಂದ ಕುಟುಂಬದ ಯಜಮಾನರ ಆರ್ಥಿಕ ಶಕ್ತಿ ಹೆಚ್ಚಾಗಿದ್ದು ವಿದ್ಯುತ್ ಚೂಕ್ತಗಾಗಿ ಭರಿಸುತ್ತಿದ್ದ ಹಣವನ್ನು ಉಳಿತಾಯವು ಸೇರಿದಂತೆ ಹಲವು ಕಾರ್ಯಗಳಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಆಗಸ್ಟ್-2023ರಿಂದ ಆರಂಭಗೊಂಡಿರುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಜಿಲ್ಲೆಯ 2,62,862 ಯಜಮಾನಿಯರಿಗೆ ಮಾಸಿಕ ರೂ.2000.00 ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಈವರೆಗೆ 24 ಕಂತುಗಳ ಮೂಲಕ 1,261.00 ಕೋಟಿ ರೂ.ಗಳನ್ನು ನೀಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಉಂಟಾಗಿದ್ದು, ಮಹಿಳೆಯರು ಸ್ವಉದ್ಯೋಗದತ್ತ ಮುಖ ಮಾಡಿದ್ದಾರೆ. ಅಂದರೆ ಹಲವರು ಕುರಿ, ಮೇಕೆ, ಹಸುಗಳನ್ನು ಕೊಂಡು ಹೈನುಗಾರಿಕೆ ಉದ್ಯೋಗ ಆರಂಭಿಸಿದ್ದಾರೆ. ಟೈಲರಿಂಗ್, ಜಿಗ್‌ಜಾಗ್ ಮಿಷಿನ್ ಯಂತ್ರಗಳ ಖರೀದಿಗಳ ಮೂಲಕ ಟೈಲರಿಂಗ್ ಉದ್ಯೋಗವನ್ನು ಆರಂಭಿಸಿದ್ದು, ಇನ್ನೂ ಹಲವರು ಹೂ-ಹಣ್ಣು ವ್ಯಾಪಾರ, ಪಾನಿಪುರಿ ಅಂಗಡಿ, ಸಣ್ಣ ಕ್ಯಾಂಟಿನ್‌ಗಳನ್ನು ತೆರೆದಿದ್ದರೆ, ಕೃಷಿ ಮಹಿಳೆಯರು ಬೋರ್‌ವೆಲ್ ಕೊರೆಸಲು ಈ ಹಣ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಯುವನಿಧಿ ಜನವರಿ-2024 ರಿಂದ ಆರಂಭಗೊಂಡಿರುವ ಪದವೀಧರ ಹಾಗೂ ಡಿಪ್ಲೊಮೊ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ಮೂಲಕ ರೂ.3000.00 ಹಾಗೂ ರೂ.1,500.00 ನೀಡಲಾಗುತ್ತಿದ್ದು, ಈವರೆಗೆ ಜಿಲ್ಲೆಯ 5161 ಪದವಿಧರರು 59 ಡಿಪ್ಲೊಮೋ ಪದವೀಧರರಿಗಾಗಿ 13.00 ಕೋಟಿ ರೂ.ಗಳನ್ನು ಸರ್ಕಾರ ಭರಿಸಿದೆ. ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗ ಉಡುಕುವ ಮತ್ತು ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದು ಸೇರಿದಂತೆ ಆನ್‌ಲೈನ್ ಕೋಚಿಂಗ್ ಮೂಲಕ ಉನ್ನತ ವ್ಯಾಸಾಂಗಕ್ಕೆ ಸದ್ಬಳಕೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟಾರೆ ರೂ.2,110.00 ಕೋಟಿಗಳನ್ನು ಕೊಡಲಾಗುತ್ತಿದೆ. ಈ ವೇಳೆ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಮಂಜುನಾಥ್ ಮಲ್ಲೇಶ ಸ್ವಾಮಿ ಬಸವರಾಜು ಅನ್ಸರ್ ಅಲಿ ನಾಗರಾಜ್ ಹಾಗೂ ಇನ್ನಿತರರಿದ್ದರು.





