ಮತದಾನವು ಕೇವಲ ಹಕ್ಕಷ್ಟೇ ಅಲ್ಲದೆ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮತದ ಮಹತ್ವವನ್ನು ಅರಿತು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಾಚಾರ್ಯ ಡಾ. ಎನ್. ಬಿ. ನಾಲತವಾಡ ತಿಳಿಸಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ರಾಜ್ಯಶಾಸ್ತ್ರ ವಿಭಾಗ, ಮತದಾರರ ಸಾಕ್ಷರತಾ ಕ್ಲಬ್ (ELC) ಹಾಗೂ ಎನ್‌ಎಸ್‌ಎಸ್ ಘಟಕ–I ಮತ್ತು II ಗಳ ಸಹಯೋಗದೊಂದಿಗೆ “ನನ್ನ ಭಾರತ, ನನ್ನ ಮತ” ಎಂಬ ವಿಷಯದಡಿ ‘ರಾಷ್ಟ್ರೀಯ ಮತದಾರರ ದಿನ–2026’ ಅನ್ನು ಆಚರಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ನಾಗರಾಜ್ ಕಂಕಣಿ ಮಾತನಾಡಿ, ತಿಳಿದು ಮತದಾನ ಮಾಡುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ ಎಂದರು. IQAC ಸಂಯೋಜಕಿ ಡಾ. ಸಯ್ಯದ್ ತಾಜುನ್ನೀಸ್ಸಾ ಸ್ವಾಗತಿಸಿ, ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಜಾಗೃತ ಭಾಗವಹಿಸುವಿಕೆಯ ಅಗತ್ಯತೆ ಬಗ್ಗೆ ವಿವರಿಸಿದರು. ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರೊ.ಮುಬಾರಕ್ ಮುಲ್ಲಾ ಕುರಾನ್ ಪಠಿಸಿದರು. ಪ್ರೊ. ಸುರೇಶ ಬಸ್ರಿಕೋಟಿ ಶ್ಲೋಕ ಪಠಿಸಿದರು. ಎನ್‌ಎಸ್‌ಎಸ್ ಸಹ ಸಂಯೋಜಕಿ ಪ್ರೊ. ಶ್ರುತಿ ಎಸ್. ಯಾವಗಲಮಠ ನಿರೂಪಿಸಿದರು. ಎನ್‌ಎಸ್‌ಎಸ್ ಸ್ವಯಂಸೇವಕ ದೀಪಕ್ ವಂದಿಸಿದರು. ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಆಚರಣೆಯು ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಪ್ರತಿ ಮತವೂ ಅಮೂಲ್ಯ ಎಂಬ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿತು ಎಂದು ಈದಿನ.ಕಾಮ್ ಗೆ ತಿಳಿಸಿದರು.





