- ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ವಿದ್ಯಾರ್ಥಿಗಳಿಬ್ಬರು ಅಪ್ಪಿಕೊಂಡ ವಿಡಿಯೋ
- ‘ದ್ವೇಷದ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿದ‘ ರೈತ ಮುಖಂಡರು : ನೆಟ್ಟಿಗರಿಂದ ಶ್ಲಾಘನೆ
ಶಿಕ್ಷಕಿಯ ಮಾತು ಕೇಳಿ ಮುಸ್ಲಿಂ ವಿದ್ಯಾರ್ಥಿಯೋರ್ವನ ಕೆನ್ನೆಗೆ ಇತರೆ ವಿದ್ಯಾರ್ಥಿಗಳು ಬಾರಿಸಿದ್ದ ಘಟನೆಯು ದೇಶಾದ್ಯಂತ ಚರ್ಚೆಗೊಳಗಾಗಿರುವ ನಡುವೆಯೇ ರೈತ ಮುಖಂಡರ ನಡೆಯು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.
ಸದ್ಯ ದೇಶಾದ್ಯಂತ ಚರ್ಚೆಗೊಳಗಾಗಿರುವ ಮುಝಾಫರ್ ನಗರದ ಘಟನೆಯ ವಿಡಿಯೋ ವೈರಲಾದ ವಿಷಯ ಅರಿತ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯತ್ ನೇತೃತ್ವದ ರೈತ ಮುಖಂಡರ ತಂಡ, ಮುಝಾಫರ್ ನಗರದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿತು. ಬಳಿಕ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ನರೇಶ್ ಟಿಕಾಯತ್, “ಈ ಘಟನೆ ನಾಚಿಕೆಗೇಡಿನ ಸಂಗತಿ. ಧರ್ಮದ ಕಾರಣಕ್ಕೆ ಪರಸ್ಪರ ಪ್ರೀತಿಯ ವಾತಾವರಣವನ್ನು ಕೆಡಲು ನಾವು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಆ ಬಳಿಕ ಕೆನ್ನೆಗೆ ಹೊಡೆದಿದ್ದ ಹಿಂದು ವಿದ್ಯಾರ್ಥಿ ಮತ್ತು ಹೊಡೆತ ತಿಂದಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕರೆದು ಪರಸ್ಪರ ಅಪ್ಪಿಕೊಳ್ಳುವಂತೆ ಸೂಚಿಸಿದರು.
ಆಲಿಂಗಿಸಿಕೊಂಡ ವಿದ್ಯಾರ್ಥಿಗಳಿಬ್ಬರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ರೈತ ಮುಖಂಡರ ನಡೆಯು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
“ಯಾವ ಟೀಚರ್ ಮಾತು ಕೇಳಿ ಒಂದು ಮಗು ಮತ್ತೊಂದು ಮಗುವಿನ ಕೆನ್ನೆಗೆ ಬಾರಿಸಿತ್ತೋ, ಇವತ್ತು ರೈತ ಮುಖಂಡರುಗಳು ಮುಂದೆ ಬಂದು ಆ ಎರಡು ಮಕ್ಕಳಿಗೆ ಬುದ್ಧಿ ಹೇಳಿ, ಇಬ್ಬರು ಆತ್ಮೀಯವಾಗಿ ತಬ್ಬಿಕೊಳ್ಳುವ ಹಾಗೆ ಮಾಡಿದರು. ಇದೆ ನಮ್ಮ ನಿಜವಾದ ಭಾರತ ದೇಶದ ಸಂಸ್ಕೃತಿ. ದ್ವೇಷದ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿದ್ದಾರೆ’ ಎಂದು ಹಲವರು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.





