“ಗಾಂಧಿ ಮತ್ತು ನೆಹರೂ ವಿಚಾರಗಳ ಮೇಲೆ ನೇರವಾಗಿ ದಾಳಿ ನಡೆಯುತ್ತಿದೆ. ಮನರೇಗಾದಲ್ಲಿದ್ದ ಗಾಂಧಿ ಹೆಸರನ್ನು ಶಾಶ್ವತವಾಗಿ ತೆಗೆಯಲು ಹೊರಟಿದ್ದಾರೆ. ಈ ಹೊಸದಾಗಿ ತಂದಿರುವ ಜಿ ರಾಮ್ ಜಿ ಅಲ್ಲಿ ರಾಮನ ಹೆಸರಿದ್ದರೆ, ಆರ್‌ಎಸ್‌ಎಸ್ ಕಚೇರಿಯ ಕಸ ಗುಡಿಸುತ್ತೇನೆ. ಇಲ್ಲವಾದರೆ ಮೋದಿ ಅವರು ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಮಾಜಿ ಸಂಸದರಾದ ವಿ. ಎಸ್. ಉಗ್ರಪ್ಪ ಆಗ್ರಹಿಸಿದರು.
ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಬರಹಗಾರ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಲೆಂದು ಮನಮೋಹನ್ ಸಿಂಗ್ ಅವರು ತಂದಿದ್ದ ನರೇಗಾ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸಿದೆ ವಿಬಿ-ಜಿ ರಾಮ್ ಜಿ ಅಂತ ಹೊಸ ಕಾನೂನನ್ನು ತರಲು ಹೊರಟಿದ್ದಾರೆ. ಜಿ ರಾಮ್ ಜಿ ಅಲ್ಲಿ ʼರಾಮ್ʼ ಅಂದರೆ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಅಂತ. ಅಂದರೆ ನಿರುದ್ಯೋಗಿ ಮತ್ತು ಬಿಕ್ಷುಕರ ಮಿಷನ್ ಅನ್ನು ತರುತ್ತಿದ್ದಾರೆ. ಮೋದಿ ಮತ್ತು ಅವರ ಹಿಂಬಾಲಕರು ʼರಾಮʼನ ಹೆಸರು ತಂದಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳಿದರು.
“ಆರ್‌ಎಸ್‌ಎಸ್ ನಲ್ಲಿ ಸುಮಾರು 42 ಸಂಘನೆಗಳಿವೆ. ಇವೆಲ್ಲವು ಚಿತ್ಪವನ ಬ್ರಾಹ್ಮಣರ ವಶದಲ್ಲಿವೆ. ಆರ್‌ಎಸ್‌ಎಸ್ ಎಂದೂ ಶೋಷಿತ ವರ್ಗದವರ ಪರ ಧ್ವನಿ ಎತ್ತುವುದಿಲ್ಲ. ರಾಮನನ್ನು, ಕೃಷ್ಣನನ್ನು ಹೊಗಳುವವರು, ಅವರನ್ನು ಹುಟ್ಟು ಹಾಕಿದ ವಾಲ್ಮೀಕಿಯನ್ನು, ವ್ಯಾಸನನ್ನು ಕೈ ಬಿಟ್ಟಿದ್ದಾರೆ.” ಎಂದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದ ʼಹಿಂದುಗಳು ಮೂರು ಮಕ್ಕಳನ್ನು ಮಾಡಿಕೊಳ್ಳಿʼ ಎಂಬ ಹೇಳಿಕೆಗೆ ಚಿಂತಕರಾದ ಶಿವಸುಂದರ್ “ಹೆಣ್ಣಿನ ಸಂತಾನೋತ್ಪತ್ತಿಗೂ, ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಸಂತಾನೋತ್ಪತ್ತಿ ಎನ್ನುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯನ್ನು ಒಳಗೊಂಡಿರುತ್ತದೆ. ಮುಂದಿನ ದಿನಗಳಲಿ ಇಡೀ ಜಗತ್ತಿನ ಸಂತಾನೋತ್ಪತ್ತಿ ಕಡಿಮೆ ಆಗುತ್ತದೆ” ಎಂದು ತಿರುಗೇಟು ಕೊಟ್ಟರು.

“2011ರ ಜನಗಣತಿಯ ಪ್ರಕಾರ ಕೇರಳದಲ್ಲಿ ಮುಸ್ಲಿಂ ಮಹಿಳೆಯರ ಸಂತಾನೋತ್ಪತ್ತಿ ದರ ಶೇ 1.8ರಷ್ಟಿದೆ. ಆದರೆ ಉತ್ತರ ಪ್ರದೇಶದಲ್ಲಿ ಇಂದಿಗೂ ಶೇ 4.5 ರಷ್ಟಿದೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ಮುಸ್ಲಿಂ ಮತ್ತು ಹಿಂದೂಗಳ ಸಂಖ್ಯೆ 2070ರ ವೇಳೆಗೆ ತೀವ್ರವಾಗಿ ಕುಸಿಯುತ್ತದೆ. ಕೇರಳದಲ್ಲಿ ಮಹಿಳಾ ಉದ್ಯೋಗ ಭಾಗವಹಿಸುವಿಕೆ ದರ ಹೆಚ್ಚಿದೆ. ಆದ್ದರಿಂದ ಅಲ್ಲಿ ಸಂತಾನೋತ್ಪತ್ತಿ ಕಡಿಮೆ ಇದೆ” ಎಂದರು.
“ಬಿಜೆಪಿಯನ್ನು ವಿರೋಧಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಇದೆ ಎಂದು ನಾವು ಭಾವಿಸಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಂಘಿಫ್ಯಾಸಿಸಂ ಅನ್ನು ನೇರವಾಗಿ ವಿರೋಧಿಸುವವರು ಎಷ್ಟು ಜನರಿದ್ದಾರೆ?. 2022ರಲ್ಲಿ ಭಾರತದಲ್ಲಿನ 31 ರಾಜ್ಯಗಳಲ್ಲಿ 600 ಎಂಎಲ್‌ಎಗಳು ಪಕ್ಷಾಂತರಗೊಂಡಿದ್ದಾರೆ. ಅವರಲ್ಲಿ 400ಕ್ಕೂ ಹೆಚ್ಚು ಎಂಎಲ್‌ಗಳು ಕಾಂಗ್ರೆಸ್‌ನಿಂದ ಬಂದವರೇ ಆಗಿದ್ದಾರೆ” ಎಂದು ಹೇಳಿದರು.
“ಕಾರ್ಪೊರೇಟ್ ಹಣದ ಮೂಲಕ ಹಿಂದುತ್ವ ಎನ್ನುವುದು ಬೀದಿ ಬೀದಿಗಳಲ್ಲಿ ಓಡಾಡುತ್ತಿದೆ. ಮೋದಿಯನ್ನು ಅಂಬೇಡ್ಕರ್, ಪೆರಿಯಾರ್, ಭಗತ್‌ಸಿಂಗ್ ಚಿಂತನೆಗಳ ಮೂಲಕ ಸೋಲಿಸಬೇಕು. ಅವರು ಸಾವಿರ ಬಾರಿ ಸುಳ್ಳುಗಳನ್ನು ಹೇಳಿದರೆ, ನಾವು ಲಕ್ಷ ಬಾರಿ ಸತ್ಯವನ್ನು ಹೇಳುತ್ತಿರಬೇಕು” ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್ ಮಾತನಾಡಿ, “ಹಿಂದುಗಳು ಕೋಮುವಾದಿಗಳಾದರೆ ಹಿಂದೂ ಸಮುದಾಯ ನಾಶವಾಗುತ್ತದೆ. ಅದೇ ರೀತಿ ಮುಸ್ಲಿಮರು ಕೋಮುವಾದಿಗಳು ಆದ್ರೆ ಮುಸ್ಲಿಂ ಸಮುದಾಯ ನಾಶವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಟ್ಟಿಗೆ ಕೂತು ಮಾತನಾಡಬೇಕು. ಹಿಂದೂ ರಾಷ್ಟ್ರ ಮತ್ತು ಇಸ್ಲಾಂ ಚಿಂತೆಯನ್ನು ಬಿಟ್ಟು ಸೌಹಾರ್ದಯುತವಾಗಿ ಬದುಕುವುದನ್ನು ಕಲಿಯಬೇಕು” ಎಂದರು
“ಕರಾವಳಿಯಲ್ಲಿ ಕೋಮು ದ್ವೇಷವಿಲ್ಲ. ಹಿಂದೂ-ಮುಸ್ಲಿಮರೆಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ. ಆದರೆ, ಕರಾವಳಿಯಲ್ಲಿರುವುದು ಉತ್ತರ ಭಾರತದ ಬಲಿಷ್ಠ ಕೈಗಾರಿಕೋದ್ಯಮಿಗಳ ಉದ್ಯಮಗಳು. ಇದರ ಬಗ್ಗೆ ಮಾತನಾಡುತ್ತಾರೆ ಅಂತ, ಕೋಮು ಸಂಘರ್ಷವನ್ನು ಹುಟ್ಟುಹಾಕುತ್ತಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಸುಧಾಕರ ಬನ್ನಂಜೆ, ಕೃತಿಯ ಕರ್ತೃ ಎಂ.ಜಿ.ಹೆಗಡೆ, ಕ್ರಿಯಾ ಮಾಧ್ಯಮದ ನಿರ್ದೇಶಕರಾದ ವಿಮಲಾ. ಕೆ. ಎಸ್ ಇದ್ದರು.





