ಸೇಡಂ ತಾಲೂಕಿನ ವಿವಿಧ ಇಲಾಖೆಗಳ ಗಂಭೀರ ಸಮಸ್ಯೆಗಳ ಕುರಿತು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸೇಡಂ ತಾಲೂಕಿನ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಿದರು.
ಸೇಡಂ ನಗರದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ ನಿರಂತರವಾಗಿ ಹೊರಬರುತ್ತಿರುವ ಧೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಹಾಗಾಗಿ ಧೂಳು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯ ಯುವಕರಿಗೆ ಕಾರ್ಖಾನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

‘ಸೇಡಂ ತಾಲೂಕಿನ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಬಿ.ಫಾರ್ಮಸಿ ಹುದ್ದೆಗಳು ಖಾಲಿಯಾಗಿದ್ದು, ಮೂರರಿಂದ ನಾಲ್ಕು ಕೇಂದ್ರಗಳಿಗೆ ಒಬ್ಬರೇ ವೈದ್ಯಾಧಿಕಾರಿ ಸೇವೆ ಸಲ್ಲಿಸುತ್ತಿರುವುದರಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ತಕ್ಷಣವೇ ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು’ ಆಗ್ರಹಿಸಿದರು.
‘ಹೂಡಾ ಹಾಗೂ ಕೊಂತನಪಲ್ಲಿ (ಕಾರಘಟ್ಟ) ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಕ್ಷಣ ನಿಯಂತ್ರಿಸಬೇಕೆಂದು ಮನವಿ ಮಾಡಿದರು. ವಿದ್ಯುತ್ ಇಲಾಖೆಯಲ್ಲಿ ರೈತರಿಗೆ ಐಪಿ ಸೆಟ್ ಲೈನ್ ನೀಡುವ ನೆಪದಲ್ಲಿ ಹಣ ಪಡೆದು ಟ್ರಾನ್ಸ್‌ಫಾರ್ಮರ್ ಹಾಗೂ ಲೈನ್ ಒದಗಿಸುವ ಅಕ್ರಮ ನಡೆಯುತ್ತಿದೆ ಎಂಬ ಆರೋಪವಿದ್ದು, ಇದನ್ನು ತಡೆಗಟ್ಟಿ ರೈತರಿಗೆ 24 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ನೀಡಬೇಕೆಂದು’ ಒತ್ತಾಯಿಸಿದರು.
‘ಸೇಡಂ ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕ್ವಾ ಪ್ಲಾಂಟ್‌ಗಳಿದ್ದರೂ ಸಮರ್ಪಕ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಜೆ.ಜೆ.ಎಂ ಯೋಜನೆಯ ಕೆಲ ಕಾಮಗಾರಿಗಳು ನಡೆಯದಿದ್ದರೂ ಬಿಲ್ ಮಾಡಲಾಗಿದೆ ಎಂಬ ಆರೋಪವಿರುವುದರಿಂದ ತನಿಖೆ ನಡೆಸಬೇಕೆಂದು’ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಶರಣಪ್ರಕಾಶ ಪಾಟೀಲ್ ನಿಮ್ಮ ಕ್ಷೇತ್ರದ ಆಸ್ತಿ ಅಲ್ಲ, ಇಡೀ ರಾಜ್ಯದ ಆಸ್ತಿ: ಡಿ ಕೆ ಶಿವಕುಮಾರ
‘ಉದ್ದು ಹಾಗೂ ಹೆಸರು ಬೆಳೆಗಳನ್ನು ಖರೀದಿ ಕೇಂದ್ರಗಳಲ್ಲಿ ಶೇ.80ರಷ್ಟು ಮಾತ್ರ ಖರೀದಿ ಮಾಡಿ ಉಳಿದ ಶೇ.20ನ್ನು ಖರೀದಿಸುತ್ತಿಲ್ಲ ಎಂದು ಆರೋಪಿಸಿ, ಕಡಲೆ ಹಾಗೂ ತೊಗರಿ ಬೆಳೆಗಳ ಖರೀದಿಯನ್ನು ತಕ್ಷಣ ಆರಂಭಿಸಿ, ರೈತರಿಗೆ ಬೆಂಬಲ ಬೆಲೆ ಹಾಗೂ ಸೂಕ್ತ ದರ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವರದಾ ಸ್ವಾಮಿ ಬಿ. ಹಿರೇಮಠ, ಸೇಡಂ ತಾಲೂಕಾಧ್ಯಕ್ಷ ಆಶೋಕ ಮಡಿವಾಳ ಕೊತ್ತಾಪಲ್ಲಿ , ಚಿಂಚೋಳಿ ತಾಲೂಕಾಧ್ಯಕ್ಷ ರಮೇಶ್ ವಿಶ್ವಕರ್ಮ, ಸೇಡಂ ತಾಲೂಕು ಕಾರ್ಯದರ್ಶಿ ವೆಂಕಟೇಶ ಬೋವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ ಉಪಸ್ಥಿತರಿದ್ದರು.





