ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾನತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್ ಟಿ ಫೋತೆ ಹೇಳಿದರು.
‘ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಲಾದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಒಂದು ಕಾಯಕ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕ ಬಸವಾದಿ ಶರಣರು ಶ್ರಮಕ್ಕೆ ಮಹತ್ವ ನೀಡಿದಂತೆ, ಯಾವ ಕೆಲಸವೂ ಮೇಲಲ್ಲ, ಯಾವುದೂ ಕೀಳಲ್ಲ ಶ್ರದ್ಧೆಯಿಂದ ಮಾಡಿದ ಕೆಲಸವೇ ಕಾಯಕವಾಗುತ್ತದೆ ಎಂಬ ಮೌಲ್ಯವನ್ನು ಎನ್‌ಎಸ್‌ಎಸ್ ಕಲಿಸುತ್ತದೆ’ ಎಂದರು.
ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು- ವಿದ್ಯಾರ್ಥಿನಿಯರು ಯಾವುದೇ ಭೇದಭಾವವಿಲ್ಲದೆ ಒಂದೇ ವೇದಿಕೆಯಲ್ಲಿ ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ಕಲಿಯುತ್ತಾರೆ. ಇದು ಸಮಾನತೆಯನ್ನು ಉತ್ತೇಜಿಸುವ ಶಿಬಿರವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಎನ್‌ಎಸ್‌ಎಸ್ ಸಂಯೋಜಕ ಡಾ. ಎಚ್ ಎಸ್ ಜಂಗೆ ಮಾತನಾಡಿ, ‘ರಾಷ್ಟ್ರೀಯ ಸೇವಾ ಯೋಜನೆ ಮೌಲ್ಯಾಧಾರಿತ, ಉದಾತ್ತ ಯುವಜನತೆಯನ್ನು ರೂಪಿಸುವ ಯೋಜನೆಯಾಗಿದೆ. ಯುವಜನತೆ ರಾಷ್ಟ್ರದ ಶ್ರೇಷ್ಠ ನಾಗರಿಕರಾಗಿ ರೂಪುಗೊಂಡು, ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳಬೇಕೆಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸಲು ಎನ್‌ಎಸ್‌ಎಸ್ ರೂಪುಗೊಂಡಿದೆ’ ಎಂದು ಹೇಳಿದರು.
ಇದೆ ವೇಳೆ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಸುಳ್ಳದ್ ಮಾತನಾಡಿ, ‘ಕಾಲೇಜುಗಳಲ್ಲಿ ಪಠ್ಯಾಧಾರಿತ ಶಿಕ್ಷಣ ಮಾತ್ರವಲ್ಲದೆ, ಎನ್‌ಎಸ್‌ಎಸ್ ಮೂಲಕ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ’ ಎಂದರು.
ಇದನ್ನು ಓದಿದ್ದೀರಾ? ಯಾದಗಿರಿ | ಮಹಾನ್ ಯೋಗಿ ವೇಮನರ ಜಯಂತಿ ಆಚರಣೆ
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಡಾ. ಪ್ರಕಾಶ ಕೊಬಾಳಕರ್, ಡಾ. ವಿದ್ಯಾಸಾಗರ, ಡಾ. ಅವಿನಾಶ್, ಅಂಬರೀಶ್ ರೆಡ್ಡಿ ಸೇರಿದಂತೆ ವಿವಿಧ ಕಾಲೇಜುಗಳ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.





