ಆಮ್ ಆದ್ಮಿ ಆಡಳಿತವಿರುವ ಪಂಜಾಬ್ನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಇಂದು(ಫೆ.3) ರಾಜೀನಾಮೆ ನೀಡಿದ್ದಾರೆ.
83 ವರ್ಷದ ಬನ್ವರಿಲಾಲ್ ಪುರೋಹಿತ್ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ಅಂಗೀಕರಿಸುವಂತೆ ಕೋರಿದ್ದಾರೆ.
ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯಪಾಲ ಸ್ಥಾನದ ಜೊತೆಗೆ ಚಂಡೀಗಢ ಆಡಳಿತ ಮುಖ್ಯಸ್ಥನ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಚಂಡೀಗಢ ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಇದರ ಆಡಳಿತ ಜವಾಬ್ದಾರಿಯೂ ಪಂಜಾಬ್ ರಾಜ್ಯಪಾಲರ ಹೊಣೆಯಾಗಿದೆ.
🔴#JustIn | Punjab Governor Banwarilal Purohit resigns due to personal reasons. pic.twitter.com/1aqwni12TG
— NDTV (@ndtv) February 3, 2024
ವೈಯಕ್ತಿಕ ಹಾಗೂ ಇತರ ಕೆಲ ಬಾಧ್ಯತೆಗಳ ಕಾರಣದಿಂದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಬನ್ವರಿಲಾಲ್ ಪುರೋಹಿತ್ ಹೇಳಿದ್ದಾರೆ. ಸೆಪ್ಟೆಂಬರ್ 9, 2021ರಿಂದ ಪಂಜಾಬ್ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಬನ್ವರಿಲಾಲ್ ಪುರೋಹಿತ್, ರಾಜೀನಾಮೆಯಿಂದ ಕೇಂದ್ರ ಸರ್ಕಾರ ಇದೀಗ ಹೊಸ ರಾಜ್ಯಪಾಲರ ನೇಮಕ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಪಂಜಾಬ್ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ನಡುವಿನ ಗುದ್ದಾಟಗಳು ನಡೆಯುತ್ತಿದೆ. ಲೋಕಸಭೆ ಚುನಾವಣೆಗೆ ಯಾವುದೇ ಮೈತ್ರಿ ಇಲ್ಲದೆ ಆಮ್ ಆದ್ಮಿ ಪಾರ್ಟಿ ಏಕಾಂಗಿ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಚಂಡೀಗಡ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ನಡೆಸಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ಭಾರೀ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ರಾಜ್ಯಪಾಲರು ರಾಜೀನಾಮೆ ಸಲ್ಲಿಸಿದ್ದಾರೆ.
ಪಂಜಾಬ್ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದೊಂದಿಗೆ ದೀರ್ಘಕಾಲದ ವಾಗ್ಯುದ್ಧದಲ್ಲಿ ತೊಡಗಿದ್ದರು. ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ಮುಖ್ಯಮಂತ್ರಿ ಭಗವಂತ್ ಮಾನ್ಗೆ ಸರಣಿ ಪತ್ರಗಳನ್ನು ಬರೆದು ಸುದ್ದಿಯಾಗುತ್ತಿದ್ದರು. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಗುರಾಣಿಯಾಗಿ ಬಳಸಿಕೊಂಡು, ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆಪ್ ಸರ್ಕಾರ ಆರೋಪಿಸಿತ್ತು.
ಪಂಜಾಬ್ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಮೊದಲು ಬನ್ವರಿಲಾಲ್ ಪುರೋಹಿತ್ ತಮಿಳುನಾಡು ಹಾಗೂ ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ತುಮಕೂರು ಶಿವಕುಮಾರ ಶ್ರೀಗಳಿಗೆ ‘ಭಾರತ ರತ್ನ’ ನೀಡಲು ಪತ್ರ ಬರೆದಿದ್ದೆವು: ಸಿಎಂ ಸಿದ್ದರಾಮಯ್ಯ
2017ರಿಂದ 2021ರ ವರೆಗೆ ತಮಿಳುನಾಡು ರಾಜ್ಯಪಾಲರಾಗಿ ಹಾಗೂ 2026ರಿಂದ 2017ರ ವರೆಗೆ ಅಸ್ಸಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಬನ್ವರಿಲಾಲ್, 1991ರ ವೇಳೆ ಎಲ್ ಕೆ ಅಡ್ವಾಣಿ ರಾಮಜನ್ಮಭೂಮಿ ರಥಯಾತ್ರೆ ವೇಳೆ ಬಿಜೆಪಿ ಸೇರಿಕೊಂಡಿದ್ದರು.
1991ರಿಂದ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯರಾಗಿ 1996 ಹಾಗೂ 1999ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸೋಲು ಕಂಡಿದ್ದರು. ಬಳಿಕ 2003ರಲ್ಲಿ ಬಿಜೆಪಿ ತೊರೆದು ವಿದರ್ಭ ರಾಜ ಪಾರ್ಟಿ ಸ್ಥಾಪಿಸಿ ಮತ್ತೆ ಸೋಲು ಕಂಡಿದ್ದರು. 2009ರಲ್ಲಿ ಮತ್ತೆ ಬಿಜೆಪಿ ಸೇರಿಕೊಂಡಿದ್ದರು.





