ಗುತ್ತಿಗೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ 16 ವರ್ಷಗಳಿಂದ ಬಿಲ್ ಪಾವತಿಸದೆ ವಿಳಂಬ ಧೋರಣೆ ಅನುಸರಿಸಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆಗೂ ಕಾನೂನು ಚಾಟಿ ಬೀಸಿದ ಘಟನೆ ನಡೆದಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರ ಕಾರು ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ, ಸಿಇಒ ಒಂದೇ ದಿನದಲ್ಲಿ ಬಾಕಿ ಮೊತ್ತ ಪಾವತಿಸಿ ಪ್ರಕರಣಕ್ಕೆ ತೆರೆ ಎಳೆದ ಅಪರೂಪದ ಘಟನೆ ನಡೆದಿದೆ.
ಹದಿನಾರು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಉಳಿದಿದ್ದ ಬಿಲ್‌ನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಪಾವತಿಸದ ಕಾರಣ, ನಗರದ ಹಿರಿಯ ಶ್ರೇಣಿ ನ್ಯಾಯಾಲಯವು 05-02-2026ರಂದು ಎರಡನೇ ಬಾರಿ ಇಲಾಖೆಯ ವಾಹನ ಜಪ್ತಿಗೆ ಆದೇಶಿಸಿತ್ತು. ಇದಕ್ಕೂ ಮೊದಲು ಜಪ್ತಿಗೆ ಆದೇಶಿಸಿದಾಗ, ಇಲಾಖೆ ಅಧಿಕಾರಿಗಳು ತಡೆಯಾಜ್ಞೆ ಪಡೆದುಕೊಂಡು ನಂತರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ಎರಡು ತಿಂಗಳೊಳಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ನೀಡಿದ ಅವಧಿ ಮುಗಿದರೂ ಪಾವತಿ ಮಾಡದ ಹಿನ್ನೆಲೆ, ನ್ಯಾಯಾಲಯವು ಪುನಃ ಜಪ್ತಿ ಆದೇಶ ಹೊರಡಿಸಿತು. ಇದರ ಅನ್ವಯ, ಫೆ.5ರಂದು ನ್ಯಾಯಾಲಯದ ಅಧಿಕಾರಿಗಳು ಗುತ್ತಿಗೆದಾರರ ಪರ ವಕೀಲರೊಂದಿಗೆ ಇಲಾಖೆಯ ಬುಲೆರೊ ವಾಹನವನ್ನು ಜಪ್ತಿ ಮಾಡಿದರು. ಇದಾದ ಬಳಿಕವೂ ಇಲಾಖೆ ನಿರ್ಲಕ್ಷ್ಯ ತೋರಿದ ಕಾರಣ, ಗುತ್ತಿಗೆದಾರರ ವಕೀಲರು ಫೆ.12ರಂದು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಾರನ್ನೇ ಜಪ್ತಿ ಮಾಡಲು ಮುಂದಾದರು.
ಈ ಸುದ್ದಿ ಓದಿದ್ದೀರಾ? ಲಿಂಗಸುಗೂರು | ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲಿನ ಸುಳ್ಳು ಆರೋಪ ಖಂಡನೆ; ಮೋಹನ್ ಗೋಸ್ಲೆ
ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸಿಇಒ ಈಶ್ವರಕುಮಾರ ಕಾಂಡೂ ಅವರು ತಕ್ಷಣವೇ ಪೂರ್ಣ ಪ್ರಮಾಣದ ಚೆಕ್ ನೀಡುವ ಮೂಲಕ ಬಾಕಿ ಮೊತ್ತ ಪಾವತಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.




