ಆರೋಗ್ಯ ಇಲಾಖೆಯ ವಿಬಿಡಿಸಿ ಕಾರ್ಯಕ್ರಮದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ಫೈಲೇರಿಯಾ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆಗೆ ತಾಲೂಕಿನ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಸಂಪೂರ್ಣ ಸಹಕಾರ ನೀಡಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ 37 ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಮತ್ತು ಹೆಚ್ಚುವರಿಯಾಗಿ ಆಯ್ಕೆಯಾದ 15 ಶಾಲೆಗಳ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇಎಲ್‌ಎಫ್ ರೋಗದ ಪ್ರಸರಣಾ ಮೌಲ್ಯಮಾಪನಾ ಸಮೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಮುಖ್ಯಗುರುಗಳು ಮತ್ತು ವ್ಯವಸ್ಥಾಪಕರು ಸಮೀಕ್ಷೆ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಸೂಚಿಸಿದರು.
ಶಾಲೆಗಳು ಸಮೀಕ್ಷೆಗೆ ನಿರಾಕರಿಸಿದಲ್ಲಿ ಅಂತಹ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ಸೆಪ್ಟೆಂಬರ್ 2025ರ ಮಧ್ಯಭಾಗದಲ್ಲಿ ದಸರಾ ರಜೆಗೆ ಮಕ್ಕಳನ್ನು ಕಳುಹಿಸುವ ಮುನ್ನ ಎಫ್‌ಟಿಎಸ್ ಕೀಟ್ಸ್ ಮೂಲಕ ಪರೀಕ್ಷಾ ಕಾರ್ಯ ಪೂರ್ಣಗೊಳಿಸುವಂತೆ ಆರೋಗ್ಯ ಇಲಾಖೆ ಕ್ರಿಯಾ ಯೋಜನೆ ರೂಪಿಸಬೇಕೆಂದು ತಹಶೀಲ್ದಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನ ಭೂಮಿಯಿಲ್ಲದೇ ಅಂತ್ಯಸಂಸ್ಕಾರಕ್ಕೆ ಸಂಕಟ
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧೀಕ್ಷಕರು, ತಾಲೂಕು ಆರೋಗ್ಯಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ವಿಬಿಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು





