ಭೂದಾಖಲೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರ ಅಲೆದಾಟ ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ ‘ಸ್ವಯಂಚಾಲಿತ ಮ್ಯುಟೇಶನ್’ (Automated Mutation) ತಂತ್ರಾಂಶವು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಫೆಬ್ರವರಿ 24 ರಿಂದ ಜಾರಿಗೆ ಬಂದ ಈ ವ್ಯವಸ್ಥೆಯ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 900ಕ್ಕೂ ಅಧಿಕ ಮ್ಯುಟೇಶನ್‌ಗಳು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ಅನುಮೋದನೆಗೊಂಡಿವೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ಹಿಂದೆ ಕ್ರಯ, ವಿಭಾಗ ಅಥವಾ ದಾನ ಪತ್ರಗಳಿಗೆ ಸಂಬಂಧಿಸಿದಂತೆ 7 ದಿನಗಳ ಹಾಗೂ ಪೌತಿ ಮ್ಯುಟೇಶನ್‌ಗಳಿಗೆ 15 ದಿನಗಳ ನೋಟಿಸ್ ಅವಧಿ ಇರುತ್ತಿತ್ತು. ಈ ಅವಧಿ ಮುಗಿದ ನಂತರ ರಾಜಸ್ವ ನಿರೀಕ್ಷಕರು (RI) ಖುದ್ದಾಗಿ ಡಿಜಿಟಲ್ ಸಹಿ ಮಾಡಬೇಕಿತ್ತು. ಇದರಿಂದಾಗಿ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು. ಆದರೆ ಹೊಸ ತಂತ್ರಾಂಶದಲ್ಲಿ ನೋಟಿಸ್ ಅವಧಿ ಮುಗಿದ ತಕ್ಷಣ ಸರ್ವರ್ ಸಹಿಯ ಮೂಲಕವೇ ಸ್ವಯಂಚಾಲಿತವಾಗಿ ದಾಖಲೆಗಳು ಅಪ್‌ಡೇಟ್ ಆಗುತ್ತಿವೆ.
- ನೇರ ಪ್ರಕ್ರಿಯೆ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತಾವೇಜು ನೋಂದಣಿಯಾದ ತಕ್ಷಣ ‘ಭೂಮಿ’ ತಂತ್ರಾಂಶದಲ್ಲಿ ಮ್ಯುಟೇಶನ್ ಪ್ರಕ್ರಿಯೆ ಆರಂಭವಾಗುತ್ತದೆ.
- ಆಕ್ಷೇಪಣೆಗೆ ಅವಕಾಶ: ನೋಟಿಸ್ ಅವಧಿಯೊಳಗೆ ಸಾರ್ವಜನಿಕರು ಅಥವಾ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶವಿದೆ. ಆಕ್ಷೇಪಣೆ ಸಲ್ಲಿಕೆಯಾದಲ್ಲಿ ಅಂತಹ ಪ್ರಕರಣಗಳನ್ನು ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ.
- ಮಾಹಿತಿ ತಲುಪಿಸುವಿಕೆ: ಪ್ರಕ್ರಿಯೆಯ ಪ್ರತಿ ಹಂತದ ಮಾಹಿತಿಯನ್ನು ಅರ್ಜಿದಾರರ ಮೊಬೈಲ್‌ಗೆ ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.
- ಭ್ರಷ್ಟಾಚಾರಕ್ಕೆ ತಡೆ: ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದ ಕಾರಣ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರಕ್ಕೆ ಈ ವ್ಯವಸ್ಥೆ ಕಡಿವಾಣ ಹಾಕಲಿದೆ.
ಇ ಸುದ್ದಿ ಓದಿದ್ದೀರಾ? ಕಾರವಾರ | ನೌಕಾಬಲಕ್ಕೆ ಆನೆಬಲ: ಕಲ್ವರಿ ಸಬ್‌ಮೆರಿನ್ ನಿರ್ವಹಣಾ ಕೇಂದ್ರ ಲೋಕಾರ್ಪಣೆ
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,77,450 ಮ್ಯುಟೇಶನ್‌ಗಳು ದಾಖಲಾಗಿದ್ದು, ಹೊಸ ವ್ಯವಸ್ಥೆ ಬಂದ ನಂತರ 7 ದಿನಗಳ ಅವಧಿಯ 465 ಹಾಗೂ 15 ದಿನಗಳ ಅವಧಿಯ 547 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥವಾಗಿವೆ. ಪಹಣಿಯಲ್ಲಿ ಬದಲಾವಣೆಯಾದ ತಕ್ಷಣ ಮೊಬೈಲ್‌ಗೆ ಸಂದೇಶ ಬರುವುದರಿಂದ ವಂಚನೆಗಳನ್ನು ತಡೆಯಬಹುದು.
ಆದ್ದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರು ತಮ್ಮ ಪಹಣಿಗೆ (RTC) ಕೂಡಲೇ ಆಧಾರ್ ಜೋಡಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ವ್ಯವಸ್ಥೆಯಿಂದಾಗಿ ರೈತರು ಮತ್ತು ಆಸ್ತಿ ಮಾಲೀಕರು ಬ್ಯಾಂಕ್ ಸಾಲ, ಬೆಳೆ ವಿಮೆ ಹಾಗೂ ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ.





