ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಸುಬ್ಬಣ್ಣ ಮತ್ತು ಗುಂಡಣ್ಣ ಸರಿರಾತ್ರಿಯಲ್ಲಿ ಅಗೆದೇ ಅಗೆದರು. ಒಂದು ಆಳುದ್ದ ಅಗೆಯುವವರೆಗೆ ಏನೂ ಕಾಣಿಸಲಿಲ್ಲ. ಬೆಳದಿಂಗಳ ರಾತ್ರಿ, ಊರವರೆಲ್ಲ ನಿದ್ದೆಹೋಗಿದ್ದರು. ಸುಬ್ಬಣ್ಣ ಅಗೆಯುವಾಗ ಗುಂಡಣ್ಣ, ಅವನು ಅಗೆಯುವಾಗ ಇವನು, ಯಾರಾದರೂ ತಮ್ಮ ನಿಧಿಯ ಹುಡುಕಾಟವನ್ನು ಗಮನಿಸುತ್ತಿದ್ದಾರೆ ಎಂದು ಕಾವಲಿರುತ್ತಿದ್ದರು. ಆಳುದ್ದ ಅಗೆದಾಗ ಅವರಿಗೊಂದು ದೊಡ್ಡ ಮಡಿಕೆ ಸಿಕ್ಕಿತು. ಮಡಿಕೆಯ ತುಂಬ ದುಂಡುದುಂಡು ಕಲ್ಲುಗಳು. ಸುಬ್ಬಣ್ಣ ನಾಲ್ಕು ಕಲ್ಲನ್ನು, ಗುಂಡಣ್ಣ ನಾಲ್ಕು ಕಲ್ಲನ್ನು ಜೇಬಿಗೆ ಸೇರಿಸಿಕೊಂಡು ಮತ್ತೆ ಅಗೆತ ಪ್ರಾರಂಭವಾಯಿತು. ಒಂದೂವರೆ ಆಳು ಅಗೆದಾಗ ಒಂದು ಪಾಣಿಪೀಠ ಸಿಕ್ಕಿತು. ಅದನ್ನು ಎತ್ತುವಾಗ ಇಬ್ಬರೂ ತಿಣಿಕಿ, ಬೆವರಿಟ್ಟರು. ಮತ್ತೆ ಅಗೆದರು. ಕೊನೆಗೊಂದು ಚಪ್ಪಡಿ ಕಲ್ಲು. ಅದರ ಸುತ್ತ ಗಾರೆ. ಅದನ್ನು ಒಡೆಯುವುದಕ್ಕೆ ಇಬ್ಬರೂ ಹಿಂಜರಿದರು. ಬಹುಶಃ ಅಲ್ಲೇ ನೆಲಮಾಳಿಗೆ ಇರಬೇಕು. ಎಷ್ಟು ಆಳವಿದೆಯೋ ಏನೋ, ಆಮೇಲೆ ಅಲ್ಲಿ ಯಾವ ಹಾವು ಚೇಳು ದೆವ್ವ ಭೂತಗಳು ಕಾದಿವೆಯೋ ಎಂದುಕೊಂಡು ಇಬ್ಬರೂ ಪಿಸುಗುಟ್ಟಿಕೊಂಡು ಮನೆಗೆ ಹಿಂತಿರುಗಿದರು. ಅಕ್ಕ ಪಕ್ಕದಲ್ಲೇ ಅವರ ಮನೆಗಳು. ಬೆಳಿಗ್ಗೆ ಮುಂಚೆ ಎದ್ದು ಗುಂಡಿಯನ್ನು ಮುಚ್ಚುವುದೆಂದು ನಿರ್ಧರಿಸಿದರು.
ಬೆಳಿಗ್ಗೆ ನಸುಕು ಹರಿಯುತ್ತಿದ್ದಾಗ ಕಳೆದ ರಾತ್ರಿಯ ಗುಂಡಿಯನ್ನು ಮುಚ್ಚುತ್ತ ಟೀಪುಸುಲ್ತಾನ ಕಾಲದಿಂದ ಈಚೆಗಿನ ಕೆಲವು ತಾಮ್ರದ ನಾಣ್ಯಗಳು ಅವರಿಗೆ ಸಿಕ್ಕವು. ಸುಬ್ಬಣ್ಣ ಔದಾರ್ಯದಿಂದ ಅದನ್ನೆಲ್ಲ ಗುಂಡಣ್ಣನಿಗೆ ಕೊಟ್ಟುಬಿಟ್ಟ.
*
ಈ ಪ್ರಸಂಗ ನಡೆದು ಈಗ ಸುಮಾರು ನಲವತ್ತು ವರ್ಷಗಳಾದವು. ಗುಂಡಣ್ಣನ ಮಗ ಗುಂಡು ಗುಂಡಾದ ಕಲ್ಲುಗಳನ್ನು ಮತ್ತು ತಾಮ್ರದ ನಾಣ್ಯಗಳನ್ನು ಈಗಲೂ ಇಟ್ಟುಕೊಂಡಿದ್ದಾನೆ. ಗುಂಡಣ್ಣನ ಮಗನ ಹೆಸರು ಲಕ್ಕಣ್ಣ. ಲಕ್ಷ್ಮೀಕಾಂತ ಅವನ ಪೂರ್ತಿ ಹೆಸರು; ರಂಭಾಪುರಿಯಲ್ಲಿ ಅವರ ಮನೆ. ಆ ಊರಿನಲ್ಲಿ ಹೆಸರಿಗೆ ತಕ್ಕಂತೆ ನೂರಾರು ಸೂಳೆಯರ ಮನೆಗಳು ಇದ್ದುವಂತೆ. ಲಕ್ಕಣ್ಣನ ಅಜ್ಜನ ಕಾಲದಲ್ಲಿ ಎಲ್ಲರೂ ಗೌಡಸಾನಿಯೆಂದು ಕರೆಸಿಕೊಳ್ಳಲಿಕ್ಕೆ ಪೈಪೋಟಿ ನಡೆಸುತ್ತಿದ್ದರಂತೆ. ರಂಭಾಪುರಿಯ ದೇವರ ಬಗ್ಗೆ ಹಲವಾರು ಜಾನಪದ ಗೀತೆಗಳಿವೆ. ಇವೆಲ್ಲದರಲ್ಲೂ ಅಲ್ಲಿಯ ದೇವರು ಲಕ್ಷ್ಮೀಕಾಂತನ ಸೂಳೆಗಾರಿಕೆಯ ಬಗ್ಗೆ ಮೋಜುಮೋಜಾದ ಪ್ರಸಂಗಗಳೇ ತುಂಬಿವೆ.
ಇದನ್ನು ಓದಿದ್ದೀರಾ?: ವೀರಭದ್ರ ಅವರ ಕತೆ | ಕೈಬೀಸಿತು ಹೆಣ!
ಗುಂಡಣ್ಣನ ತಮ್ಮ ಫಾರೆಸ್ಟ್ ಡಿಪಾರ್ಟುಮೆಂಟು ಸೇರಿಕೊಂಡು ಯಾವು ಯಾವುದೋ ಊರಿನಲ್ಲಿದ್ದು ಮೈಸೂರಿನಲ್ಲಿ ಮನೆಮಾಡಿಕೊಂಡಿದ್ದರು. ಅವರು ತೀರಿಹೋದ ಮೇಲೆ ಅವರ ಮಗ ನಾಗರಾಜ ಮೈಸೂರು ಮನೆಯನ್ನು ಮಾರಿ ರಂಭಾಪುರಿಯಲ್ಲಿ ಹಿರಿಯರ ಆಸ್ತಿಯನ್ನು ರೂಢಿಸಬೇಕೆಂದುಕೊಂಡು ಒಂದು ದಿನ ಲಕ್ಕಣ್ಣನ ಮನೆಗೆ ಪರಿವಾರ ಸಮೇತ ಬಂದಿಳಿದ. ನಾಗರಾಜರಾಯರು ಬಂದ ಸುದ್ದಿಯನ್ನು ಕೇಳಿ ಸುಬ್ಬಣ್ಣ ಮತ್ತು ಅವರ ಮಗ ಶ್ರೀನಿವಾಸ ಮಾತನಾಡಿಸಲು ಬಂದರು. ರಂಭಾಪುರಿಯ ಒಕ್ಕಲು ಮನೆತನದವರಲ್ಲಿ ಕೆಲವರು ಬಂದರು. ಅವರೆಲ್ಲ ಊರಿಗೆ ಬಂದಿಳಿದ ಸೂಟುಬೂಟಿನ ವ್ಯಕ್ತಿಯನ್ನು ನೋಡಿಕೊಂಡು ಹಿಂದಿರುಗುವಾಗ ಮನೆಯ ಮುಂದೆ ಸೇರಿದ ಚಿಕ್ಕ ವಯಸ್ಸಿನವರು ಯಾರು ಬಂದಿದ್ದಾರೆಂದು ಕೇಳುತ್ತಿದ್ದರು. ”ಗುಂಡಪ್ನೋರ ತಮ್ಮನ ಮಗ ಬಂದೈತೆ” ಎಂದು ಹತ್ತಾರು ಜನ ಸೇರಿ ಹೇಳಿದ್ದು ನಾಗರಾಜರಾಯರ ಕಿವಿಗೆ ಬಿದ್ದಿತು.
ರಾತ್ರಿಯ ಊಟ ಮುಗಿದಾದ ಮೇಲೆ ಲಕ್ಕಣ್ಣ ಮತ್ತು ನಾಗರಾಜ ರಾಯರು ಜಗುಲಿಯ ಮೇಲೆ ಹಾಸಿದ ಜಮಖಾನದ ಮೇಲೆ ಎಲಡಿಕೆ ಹಾಕಿಕೊಳ್ಳುತ್ತ ಕುಳಿತಾಗ ಸುಬ್ಬಣ್ಣನವರೂ ಅಲ್ಲಿಗೆ ಬಂದರು. “ಊಟ ಆಯ್ತ” ಎಂದರು ಸುಬ್ಬಣ್ಣ.
“ಆಯ್ತು” ಎನ್ನುತ್ತ ನಾಗರಾಜರಾಯರು ಎಲಡಿಕೆಯನ್ನೊಮ್ಮೆ ಬಾಯಿಯಲ್ಲಿ ನಾಲಗೆಯಿಂದ ತಿರುವಿದರು.
“ಎಷ್ಟು ದಿವಸದ ಪ್ರೋಗ್ರಾಂ?” ಎಂದು ಸುಬ್ಬಣ್ಣ ಕೇಳಿದರು.
ನಾಗರಾಜರಾಯರು ಬಾಯಿಬಿಡುವುದಕ್ಕೆ ಮುಂಚೆ ಲಕ್ಕಣ್ಣ, “ನಾಗಣ್ಣ ಇಲ್ಲೇ ಇರಲಿಕ್ಕೆ ಬಂದಿದಾನೆ” ಎಂದ.
“ನಿನ್ನ ಹೆಂಡ್ತಿಗೆ ಈ ಊರು ಹಿಡಿಸುತ್ತೇನಪ್ಪ? ಸಿಟೇಲಿದ್ದೋರು, ಈ ಹಳ್ಳಿಗೆಲ್ಲ ಯಾಕೆ ಬರ್‍ತೀರಿ. ನಿಮ್ಮಪ್ಪ ಇದ್ದಾಗ ಕೆಲಸಕ್ಕೆ ಸೇರಿದ ಮೇಲೆ ಒಂದ್ಸಾರೀನೂ ಈ ಕಡೆ ಬಂದಿರಲಿಲ್ಲ. ನೀ ಇಲ್ಲೇ ಇರಲಿಕ್ಕೆ ಬಂದಿದಿ ಅಂತ ಲಕ್ಕಣ್ಣ ಹೇಳಿದ್ರೆ ನನಗೇನೋ ನಂಬಿಕೆಯಾಗೋಲ್ಲ, ಎಲ್ಲೋ ಇಬ್ರೂ ಸೇರಿಕೊಂಡು ನನ್ನ ತಮಾಷೆ ಮಾಡ್ತಿದೀರಿ ಅಷ್ಟೆ” ಎಂದು ಸುಬ್ಬಣ್ಣ ಹಿಹ್ಹಿಹ್ಹಿ ಎಂದರು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ನಾಗರಾಜರಾಯರು “ಹಾಗಲ್ಲ ದೊಡ್ಡಪ್ಪ. ಏನೋ ಹಿರಿಯರು ಮಾಡಿಟ್ಟ ಆಸ್ತಿ ಇದೆ. ಅದನ್ನೇ ಸರಿಯಾಗಿ ನೋಡಿಕೊಂಡು ಹೋದ್ರೆ ನಮ್ಮಂಥವ್ರು ನಾಲ್ಕು ಸಂಸಾರ ತೂಗಬಹುದು. ಹಾಗಂತ ಏನೋ ನಮ್ಮ ಊರಿನಲ್ಲೇ ಬೇರು ಬಿಡೋಣ ಅಂತ ಬಂದೆ” ಎಂದದ್ದಕ್ಕೆ,
ಸುಬ್ಬಣ್ಣ “ಅದೆಲ್ಲ ಸರಿಯಪ್ಪ, ಏನು ಬೆಳೆಯುತ್ತಪ್ಪ ಇಲ್ಲಿ ಮಣ್ಣು? ಹತ್ತು ಚೀಲ ರಾಗಿ ಸರಿಯಾಗಿ ಬರೋಲ್ಲ, ಕಲ್ಲುನೆಲ, ಎಷ್ಟು ಅಗೆದರೂ ಕಲ್ಲು, ಎಷ್ಟು ಗೋರಿದರೂ ಕಲ್ಲು, ಹಿರಿಯರದ್ದು ಅಂತ ಏನಿದೆ ಇಲ್ಲಿ? ಒಂದು ಮುರುಕು ಕೋಟೆ, ಒಂದಿಷ್ಟು ಪಾಳುನೆಲ, ಇನ್ನೊಂದು ಮುವತ್ತು ಎಕರೆ ಕಲ್ಲುಹೊಲ, ಹಿರಿಯರ ಕಾಲಕ್ಕೇನೊ ಪಾಳೆಗಾರರಾಗಿದ್ದ ಅವರ ಹಿರಿಯರು ಹಾಗೆ ರಾಜಠೀವಿಯಿಂದ ನಡೆಸಿಕೊಂಡು ಹೋದರು. ಅವರ ಕಾಲವೂ ಹಾಗಿತ್ತು ಅನ್ನು, ಸಾವಿರಾರು ಎಕರೆ ಅವರ ಸ್ವಾಧೀನದಲ್ಲಿದ್ದುವು. ಊರೆಲ್ಲ ಅವರ ಜೀತ ಮಾಡ್ತಿತ್ತು. ಆಮೇಲೆ ಬಾಬಾ ದೇವರಿಗಷ್ಟು, ಸೂಳೆಯರಿಗೆ, ಸೂಳೆಯರ ಮಕ್ಕಳಿಗೆ ಜಮೀನು ಬರೆದು ಕೊಡುತ್ತ, ಇನ್ನಷ್ಟನ್ನು ಮಾರಿ ಹಾಕಿ ಈಗಿರೋದನ್ನ ನೋಡಿದರೆ ಏನೂ ಸ್ವಾರಸ್ಯವಿಲ್ಲ” ಎಂದು ನಿಟ್ಟುಸಿರು ಬಿಟ್ಟರು.
ನಾಗರಾಜರಾಯರು ”ಇರ್‍ಲಿ ಈ ವಿಷಯ ಮತ್ತೊಮ್ಮೆ ಮಾತಾಡೋಣ” ಎಂದುಕೊಂಡು ದೇವರ ಕೋಣೆಯಲ್ಲಿ ತಮ್ಮ ಶ್ರೀಮತಿಯ ಹತ್ತಿರ ಸೇರಿದರು.
ಸುಬ್ಬಣ್ಣನವರು ”ಲಕ್ಕಣ್ಣ” ಎಂದರು. ಆಚೆ ಈಚೆ ನೋಡಿದರು.
ಲಕ್ಕಣ್ಣ “ಏನು ದೊಡ್ಡಪ್ಪ?” ಎಂದ.
“ನಿಮ್ಮಣ್ಣಂದು ಭಾರೀ ಪ್ಲಾನಿರೋ ಹಾಗಿದೆ ಕಣಯ್ಯ.”
“ಏನಿಲ್ಲ ದೊಡ್ಡಪ್ಪ, ಅವಂದೂ ಹಕ್ಕಿಲ್ಲವೆ ಇಲ್ಲಿ?”
”ಹೌದಯ್ಯ ಭೋಳೇ ಶಂಕರ. ಅವಂದೂ ಹಕ್ಕಿದೆ, ಆಮೇಲೆ ನಿಂಗೆ ಹುಣಸೆಕಾಯಿತೊಕ್ಕು. ಇಷ್ಟು ದಿವಸ ನಿಂಗೆ 30 ಎಕರೆ ಜಮೀನಿದೆ ಅಂತಿದ್ದಿ. ಈಗ ಎಷ್ಟಯ್ಯ ಬರೋದು? ನೀನು, ನಾಗರಾಜ ಮತ್ತು ನಿಮ್ಮ ಖಾಸಾ ದೊಡ್ಡಪ್ಪನ ಮಗ ಎಲ್ರಿಗೂ ಹಂಚಿದ್ರೆ ಏನಯ್ಯ ಬರುತ್ತೆ? ತೆಂಗಿನಚಿಪ್ಪು. ಇವನೂ ಅಪ್ಪ ಕಟ್ಟಿದ ಮನೆ ಮಾರಿ ನಾಲ್ಕು ಕಾಸು ಕೈಯಲ್ಲಿಟ್ಟುಕೊಂಡು ಈ ಹಳ್ಳಿಲಿ ದೊಡ್ಡ ಮನುಷ್ಯ ಆಗ್ಲಿಕ್ಕೆ ಬಂದಿದ್ದಾನೆ. ಅವನು ಎಲ್ಲಾ ವ್ಯವಸ್ಥೆನ ಕೈಗೆ ತೊಕ್ಕೊಂಡ ಅಂದ್ರೆ ನೀನು ಅವ್ನ ಕೂಲಿ ಆಳಿನಂಗೆ ಇರ್‍ಬೇಕಾಗುತ್ತೆ. ಗೊತ್ತಾಯ್ತನೊ ಭೋಳೇ ಶಂಕರ” ಎಂದು ಕಿವಿಯಲ್ಲಿ ಊದಿ, ನಶ್ಯ ಏರಿಸಿ ಸುಬ್ಬಣ್ಣನವರು ಸ್ವಸ್ಥಾನಕ್ಕೆ ತೆರಳಿದರು.
*
ಬಂದ ಮಾರನೆ ದಿನವೆ ಬೆಳಗಿನ ಕಾಫಿತಿಂಡಿ ಆದೊಡನೆಯೇ ನಾಗರಾಜ ರಾಯರೇ ತಮ್ಮ ದೊಡ್ಡಪ್ಪನ ಮಗ ಲಕ್ಕಣ್ಣನನ್ನು ಕರೆದುಕೊಂಡು ತಮ್ಮ ಹೊಲದಕಡೆ ಹೊರಟರು. ಅವರು ಮನೆಯಿಂದ ಹೊರಟಿದ್ದನ್ನು ನೋಡಿ ಸುಬ್ಬಣ್ಣನವರು ‘ಬನ್ನಿ ಬನ್ನಿ’ ಎಂದರು. “ಸ್ವಲ್ಪ ಹೊಲದ ಕಡೆ ಹೋಗಿ ಬರುತ್ತೇನೆ” ಎಂದು ನಾಗರಾಜರಾಯರು ಮುಂದುವರಿದರು. “ನಾವೆಲ್ಲ ಐವತ್ತು ವರ್ಷದಿಂದ ಮಾಡ್ಲಿಕ್ಕಾಗದ್ದನ್ನ ಇವ್ನು ಕಿಸಿಯುತ್ತಾನಂತೆ” ಎಂದು ಸುಬ್ಬಣ್ಣ ಗೊಣಗಿಕೊಂಡಿದ್ದು ಯಾರ ಕಿವಿಗೂ ಬೀಳಲಿಲ್ಲ. ದಾರಿಯಲ್ಲಿ ಸಿಕ್ಕ ಒಂದೆರಡು ಹಳೆಯ ತಲೆಗಳು “ಯಾವಾಗ ಬಂದ್ರಪ್ಪ” ಎಂದ ನಾಗರಾಜರನ್ನು ವಿಚಾರಿಸಿಕೊಂಡರು. ಅಲ್ಲಿಂದ ಮುಂದೆ ಚೌಡಿಗುಡಿ ದಾಟುತ್ತಲೆ ಒಂದು ಅರಳಿಕಟ್ಟೆ, ಅರಳಿಕಟ್ಟೆಯಿಂದ ಆ ಊರಿನ ಲಕ್ಷ್ಮೀಕಾಂತನ ಗುಡಿ ಕಾಣಿಸುತ್ತಿತ್ತು. ಲಕ್ಷ್ಮೀಕಾಂತನ ಗುಡಿಯ ಪಕ್ಕದಲ್ಲಿ ಹಾದು ಹೋಗುವಾಗ ಅರ್ಚಕ ಸೀತಾರಾಮಯ್ಯ ಮನೆಮುಂದೆ ನಿಂತಿದ್ದರು. ಲಕ್ಕಣ್ಣನ ಕಡೆ ತಿರುಗಿ “ಇವರು ಯಾರೊ ಗೊತ್ತಾಗ್ಲಿಲ್ಲ” ಎಂದರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಲಕ್ಕಣ್ಣ “ಇವರು ನಮ್ಮಣ್ಣ” ಎಂದ. “ಓಹೊ ಮೈಸೂರಿನಲ್ಲಿದ್ದರಲ್ಲ, ಅವರೆ?” ಎಂದು ನಾಗರಾಜರಾಯರ ಕಡೆ ತಿರುಗಿ “ಮಧ್ಯಾಹ್ನ ದೇವಸ್ಥಾನಕ್ಕೆ ಬನ್ನಿ” ಎಂದರು. ನಾಗರಾಜರಾಯರು ‘ಆಯ್ತು’ ಎಂದರು. ಲಕ್ಕಣ್ಣನ ಜೊತೆ ಊರ ಗೋಮಾಳವನ್ನು ದಾಟಿ, ರಂಗಪ್ಪ ನಂಜಪ್ಪ ಇವರ ಹೊಲಗಳನ್ನೂ ದಾಟಿ ತಮ್ಮ ಹೊಲಕ್ಕೆ ಬಂದರು. ಇಳಿಜಾರು ನೆಲ, ಈ ತುದಿಯಿಂದ ಆ ತುದಿವರೆಗೆ ಬೆಣಚುಗಲ್ಲು. ಆಗ ಕೊಯ್ಲು ಮುಗಿದದ್ದರಿಂದ ಜೋಳ ರಾಗಿಯ ಸುಳಿಗಳು ಕಾಲಿಗೆ ಚುಚ್ಚುತ್ತಿದ್ದವು. ಒಂಭತ್ತು ಗಂಟೆಯ ಹೊತ್ತಿಗಾಗಲೆ ಬಿಸಿಲು ಪ್ರಖರವಾಗಿತ್ತು. ನಾಗರಾಜರಾಯರು “ಈ ಸುಬ್ಬಣ್ಣ ಎಂಥ ಮನುಷ್ಯ?” ಎಂದು ಕೇಳಿದರು.
ಲಕ್ಕಣ್ಣ “ಹಾಗಂದರೆ?” ಎಂದ.
“ನಾವು ಬಂಧುಬಳಗದವರು ಇಲ್ಲಿ ಇರುವವರು ನಾಲ್ಕು ಮನೆಯವರು ಅಷ್ಟೆ. ನಮ್ಮಲ್ಲಿ ಹೊಂದಿಕೆ ಇದ್ದರೆ ನಾವು ಮುಂದೆ ಬರಲಿಕ್ಕೆ ಸಾಧ್ಯ. ಇಲ್ಲವಾದರೆ ಇರುವ ಚೂರು ಆಸ್ತಿ ಮನೆಯನ್ನು ಕಳೆದುಕೊಂಡು ದಿಕ್ಕಾಪಾಲು ಹೋಗಬೇಕಾಗುತ್ತದೆ. ಅದಕ್ಕೆ ಕೇಳಿದೆ” ಎಂದು ನಾಗರಾಜರಾಯರು ವಿವರಿಸಿದರು.
ಅದಕ್ಕೆ ಲಕ್ಕಣ್ಣ, “ಸುಬ್ಬಣ್ಣ ಬಹಳ ಹುಷಾರಿ ಮನುಷ್ಯ. ನಮ್ಮಪ್ಪನ ಹತ್ತರ ಗಿಲೀಟು ಮಾಡಿಕೊಂಡು ಹೊನ್ನೆಸರದ ಹತ್ತಿರ ಹತ್ತು ಎಕರೆ ಬರೆಸಿಕೊಂಡ ಅಂತ ಸಾಯೋದಕ್ಮುಂಚೆ ಅಪ್ಪ ಹೇಳಿದ್ರು. ಆಮೇಲೆ ನಮ್ಮಪ್ಪ ಮನೆಯ ಹಿತ್ತಲನ್ನು ಭಾಗವಾಗಬೇಡಿ ಎಂದು ಹೇಳಿದ್ದ” ಎಂದು ನಾಗರಾಜರಾಯರಿಗೆ ವಿಷಯ ಪೂರ್ತಿ ಅರ್ಥವಾಯಿತೊ ಇಲ್ಲವೊ ಎಂದು ಅವರ ಮುಖ ನೋಡಿದ.
“ಹಾಗಾದರೆ ಹಿತ್ತಲು ನಮ್ಮಿಬ್ಬರಿಗೂ ಸೇರಿದ್ದು ಅನ್ನು.”
“ಹೌದು, ಸುಬ್ಬಣ್ಣ ಮತ್ತು ನಮ್ಮಪ್ಪ ಅದನ್ನು ಒಟ್ಟಿಗೆ ಖರೀದಿ ಮಾಡಿದ್ರಂತೆ. ಅದ್ರ ಕಾಗ್ದ ಪತ್ರ ನನ್ನತ್ರ ಇದೆ.”
“ಅಲ್ಲ, ಹಿತ್ತಲೆ ಸುಮಾರು ಎರಡು ಎಕರೆ ಜಾಗ ಇದೆ. ಅಲ್ಲಿ ತೆಂಗು ಹಾಕಿದ್ರೆ ಫಸ್ಟ್ ಕ್ಲಾಸ್ ಆಗುತ್ತದಲ್ಲ?”
“ಅದೇನೋ ನಿಜ. ಆದ್ರೆ ಯಾವ ಕಡೆ ತೆಂಗು ಹಾಕಿಸ್ಬೇಕು? ನಾವು ತೆಂಗು ಹಾಕ್ಸಿದ್ಮೇಲೆ ಸುಬ್ಬಣ್ಣ ಅಥವಾ ಅವನ ಮಗ ಶ್ರೀನಿವಾಸ ಅದ್ರಲ್ಲಿ ಪಾಲು ಕೇಳಿದ್ರೆ?”
“ಹಾಗಾದ್ರೆ ಪಾಲು ಯಾಕೆ ಆಗ್ಬಾರ್‍ದು?”
“ಆ ಹಿತ್ತಲಿನಲ್ಲಿ ನಮ್ಮ ಪೂರ್ವಿಕರ ಎಂಭತ್ತು ಅಂಕಣದ ದೊಡ್ಡ ಮನೆಯಿತ್ತು. ಈಗ ಅದ್ರ ತಳಪಾಯ ಮಾತ್ರ ಉಳಿದಿದೆ, ಒಂದೊಂದು ಗೋಡೆ ಎರಡೆರಡು ಮಾರು ದೊಡ್ಡದು. ಅಲ್ಲಿ ನೆಲಮಾಳಿಗೆ ಇದೆಯಂತೆ. ನಿಧಿ ಇದೆಯಂತೆ. ಅಮವಾಸ್ಯೆ ದಿವಸ ಈ ಹಿತ್ತಲಿನಲ್ಲಿ ಒಂದು ದೊಡ್ಡ ಕೆಂಡ ಸುತ್ತು ಹಾಕುತ್ತದೆ ಅಂತ ಅಪ್ಪ ಹೇಳಿದ್ದರು. ನಾವೀಗ ಪಾಲಾದ್ರೆ ನಿಧಿ ಅವರ ಕಡೆ ಹೋಗುತ್ತೋ, ನಮ್ಮ ಕಡೆ ಬರುತ್ತೊ ಹ್ಯಾಗೆ ಹೇಳೋದು? ಅಲ್ಲದೆ ನೆಲಮಾಳಿಗೆ ಯಾವ ದಿಕ್ಕಿಗಿದೆ ಅಂತ ಯಾರಿಗೂ ಗೊತ್ತಿಲ್ಲ” ಅಂದ.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ನಾಗರಾಜರಾಯರು ತಲೆಕೆರೆದುಕೊಂಡರು. “ನಿಂಗೆ ಹಿತ್ತಲಿಗೆ ಹೋದಾಗ ‘ನಾನು ಬರ್ತೀನಿ ನಾನು ಬರ್ತೀನಿ’ ಅಂತ ಹೇಳುತ್ತ? ಯಾವಾಗ್ಲಾದ್ರೂ ಗೆಜ್ಜೆಶಬ್ದ, ದುಡ್ಡಿನ ಶಬ್ದ, ಕೇಳಿದೀಯ?” ಎಂದರು.
”ಅದನ್ನ ನಾನು ಕೇಳಿದೀನಿ ನಾಗಣ್ಣ…” ಎನ್ನುವಷ್ಟರಲ್ಲಿ ನಾಗರಾಜರಾಯರು “ಎಲ್ಲಿ? ಯಾವ ಜಾಗದ ಹತ್ತಿರ? ಎಷ್ಟು ಹೊತ್ತಿನಲ್ಲಿ?” ಎಂದು ಒಮ್ಮೆಗೇ ಕೇಳಿದರು.
“ಶಬ್ದ ಅಲ್ಲ ಕೇಳಿದ್ದು. ನಿಧಿ ಬರೋದಾದ್ರೆ ಹಾಗೆ ಬರುತ್ತೆ ಅನ್ನೋ ಕತೆ ಕೇಳಿದೀನಿ ಅಂದೆ. ಅದು ‘ನಾನು ಬರ್‍ತೀನಿ’ ಅಂದ್ರೆ ‘ಮಗಳಾಗಿ ಬರ್ತಿಯೋ ಅಥವಾ ಸೊಸೆಯಾಗಿ ಬರ್ತಿಯೋ’ ಅಂತ ಕೇಳ್ಬೇಕಂತೆ. ‘ಮಗಳಾಗಿ ಬತ್ತೀನಿ’ ಅಂದ್ರೆ ‘ಬೇಡ’ ಅನ್ಬೇಕಂತೆ. ಯಾಕಂದ್ರೆ ಅದು ಇನ್ಯಾರೊ ಮನೆ ಸೇರುತ್ತೆ. ‘ಸೊಸೆಯಾಗಿ ಬರ್ತಿನಿ’ ಅಂದ್ರೆ ಬಾ ಅನ್ಬೇಕಂತೆ. ‘ಮನೇಲಿ ಯಾರ್‍ಮೆಲಾದ್ರೂ ಬರ್ತಿಯೋ ಅದಿಲ್ದೆ ಪ್ರಾಣಿಗಳ ಮೇಲೆ ಬರ್ತಿಯೋ?’ ಅಂತ ಕೇಳಿ ‘ಪ್ರಾಣಿಗಳ ಮೇಲೆ’ ಅಂದ್ರೆ ‘ಬಾ’ ಅನ್ಬೇಕು. ಅದಿಲ್ದೆ ‘ಮನೇಲಿ ಯಾರ್‍ಮೇಲಾದ್ರೂ ಬರ್‍ತೀನಿ’ ಅಂದ್ರೆ ಅವರನ್ನೇ ಬಲಿ ತೊಗೊಳ್ಳುತ್ತೆ” ಎಂದು ಲಕ್ಕಣ್ಣ ತನ್ನ ನಿಧಿ ವಿಜ್ಞಾನವನ್ನು ಪ್ರದರ್ಶಿಸಿದ. “ಲಕ್ಕಣ್ಣ” ಎಂದರು ನಾಗರಾಜರಾಯರು.
“ಏನು ನಾಗಣ್ಣ!” ಎಂದ ಲಕ್ಕಣ್ಣ.
”ಮನೆ ಹಿತ್ತಲಲ್ಲಿ ಕೆಂಡ ತಿರುಗುತ್ತೆ ಅಂದ್ಯೆಲ್ಲ. ಅದು ನಾಗಮಣಿ ಇದ್ರೂ ಇರಬಹುದು. ನಾಗರಹಾವು ಅದರ ಹೆಡೆ ಮೇಲಿನ ರತ್ನವನ್ನು ತೆಗೆದಿಟ್ಟು ಅದರ ಬೆಳಕಿನಲ್ಲಿ ಆಹಾರ ಹುಡುಕುತ್ತಂತೆ. ಆಗ ಅದಕ್ಕ ಗೊತ್ತಾಗ್ದಂಗೆ ಹೋಗಿ ಆ ರತ್ನದ ಮೇಲೆ ಶೆಗಣಿತೊಪ್ಪೆ ಹಾಕಿದ್ರೆ ಅದು ಕಳೆದು ಹೋಯ್ತು ಅಂತ ತಿಳಕೊಂಡು ಸರ್ಪ ಹೊರಟುಹೋಗುತ್ತಂತೆ.”
“ಏನು ನಾಗಣ್ಣ ನೀನು ಎಂ.ಎ. ಓದಿದ್ರೂ ಇದನ್ನೆಲ್ಲ ನಂಬ್ತೀಯ? ಮೊನ್ನೆ ಯಾವ್ದೊ ಪೇಪರಿನಲ್ಲಿ ಅದೆಲ್ಲ ಸುಳ್ಳು ಅಂತ ಬಂದಿತ್ತು.”
“ನೋಡು ಲಕ್ಕಣ್ಣ ವಿಜ್ಞಾನಿಗಳು ಬಹಳ ಕೆಲಸ ಮಾಡಿದ್ದಾರೆ. ಆದ್ರೂ ಕೆಲವು ವಿಷಯದಲ್ಲಿ ವಿಜ್ಞಾನ ಏನೂ ಮಾಡ್ಲಿಕ್ಕಾಗಿಲ್ಲ. ರಾಘವೇಂದ್ರಸ್ವಾಮಿಗಳು ಕನಸಿನಲ್ಲಿ ಬಂದು ಹೇಳೋದು ಸುಳ್ಳೇನು? ಚೌಡಿಮರ ಕಡೀಲಿಕ್ಕೆ ಹೋದೋರು ರಕ್ತ ಕಾರಿ ಸತ್ತಿಲ್ವೇನು? ಮಾಟಮಾಡ್ಸಿದ್ರೆ ಜನ ಸಾಯಲ್ವೇನು? ಇದಕ್ಕೆಲ್ಲ ವಿಜ್ಞಾನ ಏನೆನ್ನುತ್ತೆ? Black Magic ಅನ್ನುತ್ತೆ, ಅಷ್ಟೆ. ಆಸ್ಪತ್ರೇಲಿ ಮಕ್ಕಳು ಅಳ್ತಾ ಇದ್ರೆ ಏನು ಔಷಧಿ ಕೊಡ್ತಾರೆ? ಅದೇ ರಂಚು ಹಾಕಿದ್ರೆ ಅಥವಾ ದೃಷ್ಟಿ ತೆಗೆದ್ರೆ ಮಕ್ಕಳು ಅಳೋದನ್ನ ನಿಲ್ಸೊಲ್ವೆ? ನಂಗೆ ವಿಜ್ಞಾನದಲ್ಲೂ ನಂಬಿಕೆ ಇದೆ. ಹಾಗೇ ಮೂಢನಂಬಿಕೆಗಳು ಅನ್ನೋದ್ರಲ್ಲೂ ಅರ್ಥ ಇದೆ ಅನ್ಸುತ್ತೆ” ಎಂದು ನಾಗರಾಜರಾಯರು ಪುಟ್ಟ ಭಾಷಣ ಬಿಗಿದರು.
“ಇಲ್ಲಿವರ್‍ಗು ನಮ್ಮ ಹೊಲ ಬರುತ್ತೆ. ನಮ್ಮ ಅಜ್ಜನ ಸೂಳೆ ಲಕ್ಷ್ಮವ್ವನ ಮಗ ಕೆಂಚಪ್ಪ ಇಲ್ಲಿ ಒತ್ತರಿಸಿ ಹೊಡ್ಕೊಂಡಿದಾನೆ ನೋಡಿ. ಒಂದು ರೀತಿಯ ರಕ್ತಸಂಬಂಧ ಅಲ್ವೆ ಅದು? ದಾಯಾದಿತನ ಸಾಧಿಸ್ತಿದಾನೆ” ಎಂದು ಲಕ್ಕಣ್ಣ ಕೆಂಚಪ್ಪನ ಮೇಲೆ ಔಡುಕಚ್ಚಿದ.
“ಮೊದಲು ಸರ್‍ವೇಯರ್‍ರನ್ನ ಕರ್‍ಸಿ ಅಳ್ತೆ ಮಾಡ್ಸೋಣ. ಭಾವಿತೋಡ್ಸಿ ಒಂದು ಮೂರು ಎಕರೆ ತೆಂಗಿನ ಸಸಿ ಕೂಡ್ಸೋಣ. ಸುತ್ತ ಸದ್ಯಕ್ಕೆ ಮುಳ್ಳುಬೇಲಿ, ಅಲ್ಲಿ ಕಳ್ಳಿ ಹಚ್ಚಿ ಅದ್ರ ಪಕ್ಕದಲ್ಲಿ ನೀಲಿಗಿರಿ, ಬೇವು, ತೇಗ ಇಂಥ ಗಿಡಗಳನ್ನ ಕೂಡ್ಸಿದ್ರೆ ಈ ಆಸ್ತಿ ನೋಡಿ ಕಣ್ಬಿಡೋ ಹಾಗಾಗುತ್ತೆ” ಎಂದ ನಾಗರಾಜರಾಯರು “ಈಗ ಈ ಜಮೀನನ್ನ ಎಷ್ಟಕ್ಕೆ ಕೇಳ್ತಾರೆ?” ಎಂದು ಕೇಳಿದರು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಲಕ್ಕಣ್ಣ “ಮೂರು ಸಾವಿರಕ್ಕೆ” ಎಂದ.
“ಮೂವತ್ತು ಎಕರೆಗೆ ಮೂರು ಸಾವಿರವೆ? ಇದನ್ನು 30 ಸಾವಿರಕ್ಕೆ ಇನ್ನೆರಡು ವರ್ಷದಲ್ಲಿ ಕೇಳ್ದಿದ್ರೆ ನಾನು ಮೀಸೆ ಬೋಳಿಸ್ಕೊಂಡು ದೇಶಾಂತ್ರ ಹೊರಟ ಹೋಗ್ತಿನಿ” ಎಂದು ನಾಗರಾಜರಾಯರು ಲಕ್ಕಣ್ಣನ ಮುಖವನ್ನು ನೋಡಿದರು. ಲಕ್ಕಣ್ಣ ಬಿಸಿಲಿಗೆ ಬೆವರು ಒರೆಸಿಕೊಳ್ಳುತ್ತಿದ್ದ. ಹೊತ್ತು ಏರುತ್ತಿತ್ತು. ಎಲ್ಲಿಯೂ ಹತ್ತಿರದಲ್ಲಿ ಮರದ ನೆರಳಿಲ್ಲದೆ ಬಯಲಿನಲ್ಲಿ ಬಿಸಿಲು ತೆರೆತೆರೆಯಾಗಿ ದೂರದಲ್ಲೆಲ್ಲೋ ನೀರಿರುವ ಹಾಗೆ ಅನ್ನಿಸುತ್ತಿತ್ತು. ಈ ಬಯಲು ಸೀಮೆಯ ಬಿಸಿಲುಗಾಡಿನಲ್ಲಿ ನಾಗರಾಜರಾಯರ ಓಯಸಿಸ್ಸು ಅವರ ಮನಸ್ಸಿನಲ್ಲಿನ್ನೂ ಬೀಜವಾಗಿಯೆ ಉಳಿದಿತ್ತು.
*
ನಾಗರಾಜರಾಯರ ಕೈಯಲ್ಲಿ ಸಾಕಷ್ಟು ಹಣವಿದ್ದರೂ ಸರ್ಕಾರ ಕೊಡುವ ಸಾಲದಲ್ಲೇ ಬಾವಿ ತೆಗೆಸಲು ಯೋಚಿಸಿದರು. ದೇವಸ್ಥಾನದ ಅರ್ಚಕ ಸೀತಾರಾಮಯ್ಯ ಸೂಚಿಸಿದಂತೆ ಊರದೇವರು ಲಕ್ಷ್ಮೀಕಾಂತನ ಪ್ರಸಾದವನ್ನೂ ಕೇಳಿಯಾಯಿತು. ನಾಗರಾಜರಾಯರು “ನೋಡಪ್ಪ ನಿನ್ನನ್ನೆ ನಂಬಿದೀವಿ. ನೀನು ಹೇಳಿದಲ್ಲಿ ಭಾವಿ ತೆಗೆಸ್ತೀವಿ. ನೀರು ಸಮೃದ್ಧವಾಗಿರೋ ಜಾಗ ತೋರಿಸು. ಪಶ್ಚಿಮ ದಿಕ್ಕಿನ ಸರ ತಿರುಗುತ್ತಲ್ಲ, ಅಲ್ಲಿ ಅಂತಾದರೆ ಬಲಗಡೆ ಹೆಗಲ ಮೇಲಿನ ಹೂವುಕೊಡು. ಇಲ್ಲವಾದರೆ ದಕ್ಷಿಣ ದಿಕ್ಕಿನಲ್ಲಿ ಈಚಲಗಿಡದ ಪಕ್ಕದಲ್ಲಿ ಅಂತಾದರೆ ಹಣೆಮೇಲಿನ ಹೂವು ಕೊಡು” ಎಂದು ಚಕ್ಕಳೆಮಕ್ಕಲೆ ಹಾಕಿಕೊಂಡು ದೇವರನ್ನೇ ನೋಡುತ್ತ ಕುಳಿತುಕೊಂಡರು. ಐದು ನಿಮಿಷವೂ ಆಗಿರಲಿಲ್ಲ. ಅಷ್ಟರಲ್ಲಿ ಅರ್ಚಕರು ”ಏನಪ್ಪ ನಿನ್ನನ್ನೆ ನಂಬಿದೀವಿ ಅಂತಾರೆ, ಇಷ್ಟು ಹೊತ್ತು ಮಾಡೋದೆ” ಎಂದು ದೇವರನ್ನು ಪುಸಲಾಯಿಸುವಷ್ಟರಲ್ಲಿ ಹಣೆ ಮೇಲಿನ ಹೂವು ಒಗೆದ ಹಾಗೆ ಹಾರಿ ನಾಗರಾಜರಾಯರ ಹತ್ತಿರ ಬಿತ್ತು. “ಇನ್ನೇನು ನೀವು ಕೇಳಿದ್ದೇ ಆಯ್ತಲ್ಲ” ಎಂದು ಅರ್ಚಕರು ಮುಗುಳ್ನಕ್ಕರು. “ನಮ್ಮ ಲಕ್ಷ್ಮೀಕಾಂತ ಭಕ್ತವತ್ಸಲ. ಕೇಳಿದೋರಿಗೆ ಇಲ್ಲಾ ಅನ್ನೋಲ್ಲ” ಎಂದು ಗುಣಗಾನ ಮಾಡಿ ದೇವರಿಗೆ ಮಂಗಳಾರತಿ ಮಾಡಿದರು.
ನಾಗರಾಜರಾಯರ ಸ್ನೇಹಿತನ ಚಿಕ್ಕಪ್ಪ ಅಡಮಾನ ಬ್ಯಾಂಕಿನ ಮ್ಯಾನೇಜರ್ ಆದ್ದರಿಂದ ಕಾಗದಪತ್ರಗಳೆಲ್ಲ ಸಲೀಸಾಗಿ ಮುಗಿದು ಬಾವಿಯ ಕೆಲಸ ಆರಂಭವಾಯಿತು. ಎರಡು ಆಳು ತೋಡುವಷ್ಟರಲ್ಲಿ ಜಲಸ್ಥಾನಗಳು ಕಾಣಿಸಿಕೊಂಡವು. ಸೀತಾರಾಮಯ್ಯನವರ ಡೀಸೆಲ್ ಪಂಪು ಬಾಡಿಗೆಗೆ ಬಂತು. ನೀರೆತ್ತಿ ಇನ್ನೂ ಎಂಟು ಅಡಿ ಬಾವಿಯನ್ನು ಅಗೆದಾಯಿತು. 40 ಅಡಿ ಉದ್ದ 40 ಅಡಿ ಅಗಲದ ಬಾವಿಯಲ್ಲಿ ಹತ್ತು ಅಡಿ ನೀರು ನಿಂತಿತು. ಪಂಪುಸೆಟ್ಟು ಬಂದು ಮನೆಯ ಮುಂದಿನ ಕೋಣೆಯನ್ನು ಅಲಂಕರಿಸಿತು. ಮನೆಗೆ ಒಂದು ಜೊತೆ ಎತ್ತು ಮತ್ತು ಒಂದು ಗಾಡಿ ಬಂದವು. ಹಗಲೆಲ್ಲಾ ನಾಗರಾಜರಾಯರು ಹೊಲಕ್ಕೂ ಮನೆಗೂ ಅಲೆದರು. ಒಬ್ಬ ಆಳನ್ನು ಗೊತ್ತುಮಾಡಿದರು. ಬೇಸಿಗೆಯ ಬೆಳೆ ಎಂದು ಸೀತಾರಾಮಯ್ಯನವರ ಅರ್ಚಕ-ಉಂಬಳಿ ಜಮೀನಿನಲ್ಲಿ ಮೂರು ಎಕರೆ ಕೋರಿಗೆ ಗೊತ್ತುಮಾಡಿಕೊಂಡು ಬಿಳಿಜೋಳ ಬಿತ್ತಿಸಿದರು.
ಪಂಪುಸೆಟ್ಟು ಕೂಡಿಸುವುದಕ್ಕೆ ಮನೆ, ಎತ್ತು ಕಟ್ಟುವುದಕ್ಕೆ ಕೊಟ್ಟಿಗೆ, ಮನೆಯ ಖರ್ಚು ಇತ್ಯಾದಿಯಾಗಿ ರಾಯರು ಯೋಚಿಸಿದ್ದಕ್ಕಿಂತ ಹೆಚ್ಚಾಗಿ ಸರಕಾರದ ಸಾಲವೂ ತೀರಿ, ಕೈಯಲ್ಲಿದ್ದ ಗಂಟೂ ಕರಗುವ ಹಾಗೆ ಕಂಡಿತು.
*
ಲಕ್ಕಣ್ಣನ ಹೆಂಡತಿ ವೆಂಕಮ್ಮನವರು ಮಡಿ ಅಂದರೆ ಮಡಿ, ನಾಗರಾಜರಾಯರ ಹೆಂಡತಿ ಪುಟ್ಟಮ್ಮ ಪಟ್ಟಣದ ನಾಗರಿಕ ವರ್ತನೆಯವರು, ವೆಂಕಮ್ಮನದ್ದೆ ಅಡಿಗೆ. ಪುಟ್ಟಮ್ಮ ಅಡಿಗೆಯ ಮನೆಯ ನೀರು ಮುಟ್ಟುವ ಹಾಗಿಲ್ಲ. ಪುಟ್ಟಮ್ಮ ಗೋಮ ಹಚ್ಚಿದರೆ, ವೆಂಕಮ್ಮ ಇನ್ನೂ ಸ್ವಲ್ಪ ಸೆಗಣಿ ತಂದು ಅದನ್ನು ದೊಡ್ಡದಾಗಿ ಹಚ್ಚುತ್ತಿದ್ದರು. ಪುಟ್ಟಮ್ಮನ ಮಕ್ಕಳೂ ಮಡಿ ಮೈಲಿಗೆ ತಿಳಿಯದೆ ಬೆಳೆದವರು. ವೆಂಕಮ್ಮ ಏನಾದರೂ ಮೈಲಿಗೆ ಮಾಡಿದವು ಅಂತ ಹುಡುಗರನ್ನ ಬೈದರೆ, ಪುಟ್ಟಮ್ಮನಿಗೆ ಸಿಟ್ಟುಬಂದು ಊಟ ಮಾಡದೆ, ಮಲಗಿ ಬಿಡುತ್ತಿದ್ದರು. ದಿನಾ ರಾತ್ರಿ ನಾಗರಾಜರಾಯರ ಹತ್ತಿರ ಪುಟ್ಟಮ್ಮನಿಗೆ ನಾದಿನಿಯ ಮೇಲೆ ಎಷ್ಟು ದೂರು ಹೇಳಿದರೂ ಸಾಲದು. ವೆಂಕಮ್ಮ ಲಕ್ಕಣ್ಣನ ಕಿವಿಯಲ್ಲಿ ಊದಿದ್ದೂ ಊದಿದ್ದೆ.
ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು
ಒಂದೊಂದು ದಿನ ಪುಟ್ಟಮ್ಮ ಮತ್ತು ವೆಂಕಮ್ಮನ ಬಾಯಿ ಸುಬ್ಬಣ್ಣನವರ ಮನೆಯವರೆಗೂ ಕೇಳುತ್ತಿತ್ತು. ವೆಂಕಮ್ಮ ”ಬಂದ್ಲು ಪಟ್ಟಣದಿಂದ ಪುಟ್ಟಮ್ಮ ಯಾವಾಗ್ಲೂ ಜಡೆಹಾಕ್ಕೊಳ್ತ ಕನ್ನಡಿ ನೋಡ್ಕೊಳ್ತ ವಾಯಿಲ್ ಸೀರೆ ಉಡ್ಕೊಂಡು ಒಳಗೆ ಹೊರಗೆ ಓಡಾಡಿದ್ರೆ ಆಗ್ಹೋಯ್ತೇನು? ಮನೆ ಅಂದ್ಮೇಲೆ ಸರೀಗೆ ಸರಿ ಕೆಲಸ ಮಾಡಬೇಕು” ಎನ್ನುತ್ತಿದ್ದರು.
ಪುಟ್ಟಮ್ಮ “ಇಲ್ಲ, ನಿನ್ನಂಗೆ ಮಡೀ ಅಂತ ತೊಡೆ ಕಾಣೋ ಹಾಗೆ ಕೋರಿ ಉಡ್ಕೊಂಡು ಕೂತಿರ್‍ತೀನಿ” ಎನ್ನುತ್ತಿದ್ದರು.
“ಸಾಕೇ ಬಾಯಿಮುಚ್ಚು, ನಿಮ್ಮ ಮಾವ ಫಾರೆಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ಲಂಚ ತಿಂದು ದುಡ್ಡಿಟ್ಟಂಗೆ ನಮ್ಮ ಮಾವನೂ ದುಡ್ಡಿಟ್ಟಿದ್ರೆ ಕುರ್ಚಿ ಮೇಲೆ ರೇಷ್ಮೆ ಸೀರೆ ಉಟ್ಕೊಂಡು ಅಡಿಗೆಯವರನ್ನ ಇಟ್ಕೊಂಡು ಮೆರೀತಿದ್ದೆ.”
“ಗಂಡನ್ನ ಕಸಕ್ಕಿಂತ ಕಡೆಯಾಗಿ ನೋಡೋಳು ಅಡಿಗೇಯೋರನ್ನ ಇಟ್ಕೊಳ್ದೆ ಏನ್ಮಾಡ್ತಿದ್ದಿ?”
”ಏನೇ ಎಷ್ಟುದ್ದಾನೆ ನಿನ್ನ ನಾಲಗೆ. ಚಪ್ಲಿ ತೊಗೊಂಡು ಹೊಡ್ಡು ಬಿಟ್ಟೇನು” ಎಂದ್ಲು ವೆಂಕಮ್ಮ.
“ಹಾದರಗಿತ್ತಿ. ಯಾರನ್ನೆ ಚಪ್ಲಿ ತೊಗೊಂಡು ಹೊಡಿಯೋದು? ಏನೋ ಬಡತನದಲ್ಲಿ ಸಾಯ್ತಿದೀರಲ್ಲ, ನಿಮ್ಮನ್ನ ಉದ್ಧಾರ ಮಾಡೋಣ ಅಂತ ಅವ್ರಿಲ್ಲಿ ಸಾಲಸೋಲ ಮಾಡ್ಕೊಂಡು, ಕೈಯಲ್ಲಿದ್ದ ಕಾಸ್ನಲ್ಲಿ ಹೊಟ್ಟೆತುಂಬ ತಂದ್ಹಾಕ್ತಾರಲ್ಲ. ಅದಕ್ಕೆ ಕೊಬ್ಬು ಕಣೆ ನಿಂಗೆ” ಅಂತ ಪುಟ್ಟಮ್ಮ.
“ಹೌದೌದು. ನೀವು ಬರ್‍ದೆ ಇದ್ರೆ ಉಪವಾಸ ಇರ್‍ತಿದ್ವಿ ಅಲ್ಲ” ಎಂದು ವೆಂಕಮ್ಮ ಲಟಿಕೆ ಮುರಿಯುತ್ತಿದ್ದರು.
ಹೀಗೇ ಒಂದು ದಿನ ನಡೆದಾಗ ಪುಟ್ಟಮ್ಮ ತಮ್ಮ ಪಾತ್ರೆಗಳನ್ನು ಬಿಚ್ಚಿ ದೇವರ ಕೋಣೆಯಲ್ಲಿ ಬೇರೊಂದು ಒಲೆ ಹೂಡಿದರು. ನಾಗರಾಜರಾಯರು ಹೆಂಗಸರ ನಡುವೆ ಯಾವ ರಾಮಾಯಣ ನಡೆದರೂ ಕಿವಿಯ ಮೇಲೆ ಹಾಕಿಕೊಳ್ಳದೆ, ಲಕ್ಕಣ್ಣನ ಹತ್ತಿರ ಒಂದು ದಿನವೂ ಅದನ್ನು ಚರ್ಚಿಸದೆ ಇರುತ್ತಿದ್ದರು. ಅವರಾಯಿತು ವ್ಯವಹಾರವಾಯಿತು. ಹೊಲಕ್ಕೆ ಬದುಗಳನ್ನು ಹಾಕಿಸಿದರು. ಜಾಜಿಹಳ್ಳಿ ಸ್ವಾಮಿಗಳ ಟ್ರ್ಯಾಕ್ಟರನ್ನು ತಂದು ಹೊಡಿಸಿದರು. ಹಿಂದೆ ಹತ್ತು ಎಕರೆ ಸಾಗು ಆಗುತ್ತಿದ್ದರೆ ಈಗ ಇಪ್ಪತ್ತು ಎಕರೆ ಸಾಗಾಗುವ ಹಾಗಾಯಿತು. ಮಳೆ ಆರಂಭವಾದೊಡನೆ ಎರಡು ಎಕರೆ ಮೆಕ್ಕೆಜೋಳ, ಉಳಿದದ್ದಕ್ಕೆ ರಾಗಿ, ಜೋಳ, ನವಣೆ, ಸಜ್ಜೆ, ಸಾಸುವೆ, ಅವರೆ, ಹುರುಳಿ ಬಿತ್ತಿಸಿದರು. ಬಾವಿಯ ಪಕ್ಕದಲ್ಲಿ ಇನ್ನೂರು ತೆಂಗಿನ ಸಸಿ ನಡಿಸಿದರು. ಲಕ್ಕಣ್ಣನಿಗೆ ತನಗೆ ಇಷ್ಟೆಲ್ಲಾ ಏಕೆ ಹೊಳೆಯಲಿಲ್ಲ ಅನ್ನಿಸುತ್ತಿತ್ತು. ಮೊದಲ ವರ್ಷದ ಪೈರು ಬಂದಾಗ ವರ್ಷಕ್ಕೆ ಸಾಕಾಗುವಷ್ಟು ಕಾಳು, ಎತ್ತುಗಳಿಗೆ ಮೇವು ಮನೆಯನ್ನೂ ಹಿತ್ತಿಲ ಕಣಜವನ್ನೂ ಅಲಂಕರಿಸಿದವು.
ಊರಿನ ರೈತರು ನಾಗರಾಜರಾಯರ ಹತ್ತಿರ ಬಂದು ಹೋಗಲಾರಂಭಿಸಿದರು. ಸಿದ್ದಪ್ಪ ಎನ್ನುವವನು “ಸ್ವಾಮಿ ನೀವು ಬರ್‍ದೆ ಹೋಗಿದ್ರೆ ಏನೂ ಆಗ್ತಿದ್ದಿಲ್ಲ ಬಿಡ್ರಿ. ನಮ್ಮ ಚಿಕ್ಕ ಸ್ವಾಮಿಯೋರು ಸ್ವಲ್ಪ ಮೆತ್ತಗೆ ನೀವು ಬಂದಿದ್ರಿಂದ ಅವ್ರಿಗೆ ರೆಕ್ಕೆ ಬಂದಂಗಾಗಿದೆ” ಎಂದ. ಕರಿಯಪ್ಪ “ಏನು ಸ್ವಾಮಿ ನಾವೆಲ್ಲ ಇಷ್ಟೊರ್ಸ ಬ್ಯಾಸಾಯ ಮಾಡಿ ಪರ್ಯೋಜನ ಇಲ್ಲ ಬುಡ್ರಿ. ಒಂದೇ ವರ್ಸಕ್ಕೆ ನೀವು ಇಷ್ಟೆಲ್ಲ ಬದುಕು ಮಾಡಿದೀರಿ” ಎಂದ. ಇದೇ ತರಹದ ಮಾತುಗಳನ್ನು ಲಕ್ಕಣ್ಣನ ಎದುರಿಗೂ ಜನ ಆಡುತ್ತಿದ್ದರು. ಒಂದು ದಿನ ಲಕ್ಕಣ್ಣ ಸುಬ್ಬಣ್ಣನ ಮನೆಗೆ ಹೋದಾಗ ಅವರು “ಏನಯ್ಯ ಭೋಳೇಶಂಕರ, ನೋಡ್ದೇನಯ್ಯ ನಿನ್ನಣ್ಣನ ಕಾರುಭಾರು. ಊರವರೆಲ್ಲ ಹೊಗಳ್ತಾರೆ. ನಿಮ್ಮಪ್ಪ ಕಷ್ಟಪಟ್ಟು ಮನೆ ಸಾಲಾ ತೀರಿಸಿ ಜಮೀನನ್ನ ಉಳುಸ್ದ. ಇವನು ಬಂದು ಯಜಮಾನಿಕೆ ಮಾಡ್ತಿದಾನೆ. ನಿನ್ನ ನಿನ್ಹೆಂಡ್ತಿ ಮಕ್ಕಳನ್ನ ಇವ್ನೆ ಸಾಕಿದ್ನಂತೆ. ನಿನ್ಹೆಂಡ್ತಿ ಬಂದು ಗೋಳಾಡಿಕೊಂಡಳು” ಎಂದರು.
ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ
“ಹಾಗಾದ್ರೇನ್ಮಾಡೋದು ದೊಡ್ಡಪ್ಪ? ಅವು ಬಂದದ್ರಿಂದ ಮನೇಲಿ ನಾಲ್ಕು ಕಾಳು ಎತ್ತು ಗಾಡಿ ಅಂತ ಆಗಿದೆ. ಮೂರುಸಾವಿರಕ್ಕೆ ಕೇಳಿದ್ದ ಹೊಲಾನ ಈಗ ಮೂವತ್ತು ಸಾವಿರಕ್ಕೆ ಕೇಳ್ತಾರೆ. ಇಷ್ಟೆಲ್ಲ ಮಾಡಿದ್ದಕ್ಕೆ ಯಾವ್ದೋ ಸಿಟ್ಟಿನಲ್ಲಿ ನಮ್ಮ ಅತ್ತಿಗೆ ಒಂದು ಮಾತು ಅಂದ್ಲು ಅಂದ್ರೆ ನಾವೇನು ಬೇರೆಯಾಗಿರೋದಕ್ಕೆ ಸಾಧ್ಯವೇ?” ಎಂದ.
“ಮಂಕ ಮಂಕ” ಎಂದು ಸುಬ್ಬಣ್ಣ ಒಂದು ಚಿಟಿಕೆ ನಶ್ಯ ಏರಿಸಿದರು. “ನಿಮ್ಮ ಅಣ್ಣ ತಮ್ಮನ ಪ್ರೀತಿ ವಿಶ್ವಾಸಕ್ಕೆ ಅಡ್ಡ ಬರ್ತೀನಿ ಅಂತ ತಿಳಿದಿದೀಯೇನೋ ಮುಠ್ಠಾಳ? ಹಾಗೆ ಮಾಡಿದ್ರೆ ದೇವ್ರು ಮೆಚ್ತಾನೇನೋ. ನೋಡಿದವ್ರು ನನ್ಮುಖಕ್ಕೆ ಥೂ ಅಂತ ಕ್ಯಾಕರಿಸಿ ಉಗಿಯೋದಿಲ್ಲವೇನೊ? ನಂಗೆ ನೀ ಏನು, ನಾಗಣ್ಣ ಏನು? ಇಬ್ರೂ ಒಂದೇ ಕಣೋ. ನಾ ಸತ್ರೆ ನೀವಿಬ್ಬರೂ ಹತ್ತು ಹತ್ತು ದಿವ್ಸ ಸೂತಕವಿರಬೇಕು. ಹುಚ್ಮುಂಡೇ ಗಂಡ ನಾ ಹೇಳಿದ್ದು ಅದಲ್ಲ. ವ್ಯವಹಾರ ವ್ಯವಹಾರಾನೆ ಅಂತ. ವ್ಯವಹಾರದಲ್ಲಿ ಸರಿಯಾಗಿದ್ರೆ ಪ್ರೀತಿ ವಿಶ್ವಾಸ ಎಲ್ಲಾ ಸರಿಯಾಗಿರುತ್ತೆ. ವ್ಯವಹಾರದಲ್ಲಿ ತಪ್ಪಿದೆಯೋ ಹಣಕಾಸು ಹೊಲಮನೆ ಹೋಗೋದಲ್ದೆ ಪ್ರೀತಿವಿಶ್ವಾಸಾನೂ ನೆಗೆದು ಬಿದ್ಹೋಗುತ್ತೆ. ಗೊತ್ತಾಯ್ತೇನೋ” ಎಂದರು.
“ಗೊತ್ತಾಯ್ತು ದೊಡ್ಡಪ್ಪ” ಎಂದು ಲಕ್ಕಣ್ಣ ಮನೆಗೆ ಹೊರಟ.
*
ಲಕ್ಕಣ್ಣನ ದೊಡ್ಡಪ್ಪನ ಹಿರಿಯಮಗ ಲಕ್ಷ್ಮಣ ಅಷ್ಟು ದಿವಸ ಸೋದರಮಾವನ ಮನೆಯಲ್ಲಿದ್ದವನು ಪಾಲು ಕೇಳಲು ಬಂದ. ನಾಗರಾಜರಾಯರು, ನೋಡಪ್ಪ ಹಿರಿಯರು ಮಾಡಿಟ್ಟ ಆಸ್ತಿ ಏನೂ ಇಲ್ಲ. ಇರೋ 30 ಎಕರೆ ಹಿಸ್ಸೆ ಆದ್ರೆ ಒಬ್ಬೊಬ್ಬರಿಗೆ ಹತ್ತು ಎಕರೇನೂ ಸರಿಯಾಗಿ ಬರೋಲ್ಲ. ಒಟ್ಟಿಗೆ ಇದ್ರೆ ನೋಡ್ಲಿಕ್ಕೂ ಚೆನ್ನಾಗಿರುತ್ತೆ. ಮೂವತ್ತು ಎಕರೇನ್ನೂ ಹಾಗೂ ಹೀಗೂ ರೂಢಿಸಿಕೊಂಡರೆ ನೀವು ಅಣ್ಣ ತಮ್ಮ ಸಹ ಇಲ್ಲೇ ಒಂದು ಮನೆ ಮಾಡಿಕೊಂಡಿರಬಹುದು” ಎಂದರು.
”ನಮಗೆ ಒಟ್ಟಿಗೇ ಇರೋದು ಬೇಕಿಲ್ಲ, ನಾಗಣ್ಣ. ಹುಟ್ತ ಹುಟ್ತ ಅಣ್ಣತಮ್ಮಂದಿರು, ಬೆಳೀತಾ ಬೆಳೀತಾ ದಾಯಾದ್ಯರು ಅಂತ. ಈಗ ದೊಡ್ಡ ಅತ್ತಿಗೆಗೆ ಚಿಕ್ಕ ಅತ್ತಿಗೆಗೆ ತಾಳೆ ಇಲ್ಲ. ನಾಳೆ ನಾವೂ ಮದುವೆಯಾಗಿ ಈ ಮನೆ ಸೇರಿದ್ರೆ ರಾಮಾಯಣ ಮಹಾಭಾರತ ಎಲ್ಲ ನಡೆಯುತ್ತವೆ.”
ಮಾತು ನಡೆಯುತ್ತಿದ್ದಲ್ಲಿಗೆ ಲಕ್ಕಣ್ಣನ ಹೆಂಡತಿ ವೆಂಕಮ್ಮನೂ ಬಂದಳು. ವೆಂಕಮ್ಮ “ನೋಡಿ ನಾಗಣ್ಣ, ಲಕ್ಷ್ಮಣ ಹೇಳೋದು ಒಂದು ರೀತಿಯಿಂದ ಸರಿ. ಅವರವರ ಪಾಲು ಅವರು ತೊಗೊಂಡ್ರೆ ಒಳ್ಳೇದು. ಒಬ್ಬರ ಹಂಗಿನಲ್ಲಿ ಇನ್ನೊಬ್ಬರು ಇರ್‍ಬೇಕಾಗಿಲ್ಲ.”
“ಹಂಗಿನ ವಿಷಯ ನಾನು ಯಾವಾಗ್ಯೂ ಹೇಳ್ಲಿಲ್ವಲ್ಲ ವೆಂಕಮ್ಮಾ. ಮನೆತನ ಮಾಡೋದು ಕಷ್ಟ. ಮುರಿಯೋದು ಬಹಳ ಸುಲಭ” ಎಂದು ನಾಗರಾಜರಾಯರು ಬುದ್ಧಿವಾದ ಹೇಳಿದರು.
ವೆಂಕಮ್ಮ ಗಂಡನ ಕಡೆ ತಿರುಗಿ “ಏನ್ರಿ, ಏನು ಮಿಕಿ ಮಿಕಿ ನೋಡ್ತ ಇದೀರಿ? ನಿಮ್ಮ ನಾಲಗೆ ಸತ್ತು ಹೋಗಿದೆಯೆ? ನಂಗಂತೂ ಹಂಗಿನ ಕೂಳು ತಿಂದು ತಿಂದು ಸಾಕಾಗಿದೆ. ನಿಮಗೆ ನಿಮ್ಮಣ್ಣನ ಹತ್ರ ಆಳಾಗಿ ಇರ್‍ಬೇಕೂಂತಿದ್ರೆ ಇರ್‍ರಿ. ನನಗೆ ನನ್ನ ಜೀವನಾಂಶ ಕೊಟ್ಟು ನೀವು ಅಣ್ಣ ಅತ್ತಿಗೆ ಪಾದ ತೊಳಕೊಂಡು ನೀರು ಕುಡೀತಾ ಬೇಕಾದ್ರೆ ಬಿದ್ದಿರ್‍ರಿ” ಎಂದಳು.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಅಷ್ಟರಲ್ಲಿ ಪುಟ್ಟಮ್ಮನು ಅಲ್ಲಿಗೆ ಬಂದವಳು ಗಂಡನಿಗೆ “ನೋಡ್ರಿ ಆವಾಗ್ಲೆ ಬಡುಕೊಂಡೆ ಕೇಳ್ಲಿಲ್ಲ. ಊರನ್ನೆಲ್ಲ ಉದ್ಧಾರ ಮಾಡ್ಲಿಕ್ಕೆ ಹೋಗುತ್ತೀರಿ. ಯಾವ್ದಾದ್ರೂ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಮೈಸೂರಿನಲ್ಲೆ ಇದ್ದಿದ್ರೆ ಈ ರಂಪರಸಕಸಿಯೇ ಇರ್‍ತಿರ್‍ಲಿಲ್ಲ. ಏನೋ ಬೇರು ಹುಡುಕ್ತೀನಿ ಅಂತ ಇಲ್ಲಿಗೆ ಬಂದ್ರಿ. ಅದೇನು ಪಾಲು ಕೇಳ್ತಾರೋ ಕೊಟ್ಟು ಬಿಟ್ಟು ನಡೀರಿ ಮೈಸೂರಿಗೆ ಹೋಗೋಣ” ಎಂದಳು.
ನಾಗರಾಜರಾಯರು ”ಕಡೇದೊಂದು ಮಾತು ಹೇಳ್ತಿನಿ, ಏನಪ್ಪ ಲಕ್ಷ್ಮಣ ಏನಪ್ಪ ಲಕ್ಕಣ್ಣ, ಕೇಳೋದಿದ್ರೆ ಕೇಳಿ, ನಾವಿಲ್ಲಿ ಒಟ್ಟಾಗಿರಬೇಕು ಅಂತ ನನ್ನ ಇಷ್ಟ. ಇಲ್ಲವಾದರೆ ನಿಮಗೆ ತಿಳಿದಂತೆ ಮಾಡಿ. ನಾಳೆ ದಿನ ಪಂಚಾಯಿತ್ರನ್ನ ಕರೆಸಿ, ಅದೇನು ಪಾಲಿನ ವ್ಯವಸ್ಥೆ ಮಾಡ್ತೀರೋ ಮಾಡ್ರಿ” ಎಂದರು.
*
ಆಸ್ತಿ ಹಂಚಿಕೆಯ ದಿನ ಮಧ್ಯಾಹ್ನ ಊಟವಾದ ಮೇಲೆ ಊರಿನ ಶ್ಯಾನುಭೋಗರು, ನೀಲಕಂಠ ಜೋಯ್ಸರು, ಅರ್ಚಕ ಸೀತಾರಾಮಯ್ಯ ಮತ್ತು ಸುಬ್ಬಣ್ಣ ಮೂರು ಜನ ಅಣ್ಣತಮ್ಮಂದಿರ ಜೊತೆ ಕುಳಿತರು. ಲಕ್ಷ್ಮಣನೇ ಮಾತು ತೆಗೆದ. ”ನೋಡಿ ಪಂಚಾಯಿತರೆ, ನಾನು ಪಾಲು ಕೇಳ್ಲಿಕ್ಕೆ ಬಂದಿದೀನಿ. ಲಕ್ಕಣ್ಣನಿಗೂ ಪಾಲಾಗಬೇಕೆಂದು ಆಸೆ. ಆದ್ರೆ ಕೇಳ್ಲಿಕ್ಕೆ ದಿಗಿಲು. ನೀವೆಲ್ಲ ಸೇರಿ ನಮ್ಮ ಹಕ್ಕು ನಮಗೆ ಸಲ್ಲುವಂತೆ ಮಾಡಬೇಕು” ಎಂದ.
“ಏನಂತೀರಿ ನಾಗರಾಜರಾಯರೆ?” ಎಂದರು ನೀಲಕಂಠ ಜೋಯ್ಸರು.
“ನಾವೇನನ್ನೋದಿದೆ ಸ್ವಾಮಿ? ಈ ಹುಡುಗಂಗೆ ಮೀಸೆ ಬೆಳೆದಿದೆ. ಲಕ್ಕಣ್ಣನಿಗೆ ಹೆಂಡತಿ ಒತ್ತಾಯ. ನೀವೆಲ್ಲ ಊರಿನವರು. ನಾನೆಷ್ಟಾದರೂ ಹೊರಗೇ ಇದ್ದು, ಏನೋ ನಮ್ಮೂರಿನ ಆಸೆ ಇಟ್ಟುಕೊಂಡು ಬಂದವನು. ನಾನು ಬಂದ ಮೇಲೆ ಜಮೀನು ಯಾವ ಸ್ಥಿತಿಗೆ ಬಂದಿದೆ ಎನ್ನುವುದು ತಮಗೇ ತಿಳಿದಿದೆ. ನಾವೆಲ್ಲ ಒಟ್ಟಿಗೇ ಇದ್ದರೆ ಈ ಆಸ್ತಿಯಲ್ಲಿ ಕಾರಿಟ್ಟುಕೊಂಡು ಓಡಾಡುವ ಸ್ಥಿತಿಗೆ ಇನ್ನೆರಡು ವರ್ಷದಲ್ಲಿ ಬರುತ್ತೇವೆ. ಇನ್ನು ಪಾಲಾಗುವ ತೀರ್ಮಾನವೆ ಕೊನೆಯದಾದರೆ ಲೆಕ್ಕಾಚಾರ ಮಾಡಿಬಿಡಿ” ಎಂದರು.
ಸುಬ್ಬಣ್ಣ ಲಕ್ಕಣ್ಣನ ಕಡೆ ನೋಡಿದರು. ಲಕ್ಕಣ್ಣ ಜೀವ ತುಂಬಿದವನಂತೆ “ಕೇಳಿದ್ರ ಸೀತಾರಾಮಯ್ಯನೋರೆ, ನಮ್ಮಣ್ಣ ನಿಮ್ಮೆಲ್ಲರ ಎದುರಿಗೆ ನನ್ನ ಹೆಂಡತಿಯ ಗುಲಾಮ ಅಂತ ಕರೆದಿದ್ದು. ನಮ್ಮಪ್ಪ ಹೊಟ್ಟೆ ಬಟ್ಟೆ ಕಟ್ಟಿ ಮನೆತನದ ಸಾಲ ತೀರಿಸ್ದೆ ಹೋಗಿದ್ರೆ, ನಾಗಣ್ಣನಿಗೆ ಯಾವ ಆಸ್ತಿಯೂ ಸಿಕ್ತಿರಲಿಲ್ಲ. ನಮ್ಮ ಮನೆಗೆ ಬಂದು ನಮ್ಮೇಲೆ ಯಜಮಾನಿಕೆ ನಡಸ್ತ ಇರಲಿಲ್ಲ” ಎಂದ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
“ಪರವಾಗಿಲ್ಲ ಲಕ್ಕಣ್ಣ, ಗಿಳಿಪಾಠ ಒಪ್ಪಿಸಿದೆಯಲ್ಲ. ಗೆದ್ದೆ” ಎಂದು ನಾಗರಾಜರಾಯರು ಮುಖ ಮುರಿದರು. ಸುಬ್ಬಣ್ಣ ”ಲಕ್ಕಣ್ಣ ಹೇಳೋದು ನ್ಯಾಯವೇ ಅಲ್ಲವೇ ನೋಡಿ ಸೀತಾರಾಮಯ್ಯ. ನೋಡಿ ಜೋಯ್ಸರೆ, ನೀವೂ ನೋಡಿ ನಾಗರಾಜರಾಯರೆ” ಎಂದು ಚಿಟಿಕೆ ನಶ್ಯ ಏರಿಸುತ್ತ ”ನೀವು ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟರೆ ಏನಾಯ್ತು ಹೇಳಿ? ನಾನಿಲ್ಲಿ ಪಂಚಾಯಿತರಲ್ಲಿ ಒಬ್ಬನಾಗಿ ಬಂದು ಕೂತಿದೀನಿ. ಹಾಗೆ ನೋಡಿದರೆ ಬರಿ ಪಂಚಾಯಿತ ಅಲ್ಲ. ಈ ಮನೆತನದಲ್ಲಿ ಉಳಿದಿರೋ ಹಿರೇ ತಲೆ ಬೇರೆ ಆಗಿದೀನಿ. ನಾನೇನು ಲಕ್ಕಣ್ಣನ ಪರ ವಹಿಸಿ ಮಾತಾಡ್ತಿಲ್ಲ. ನಂಗೆ ನೀವು ಮೂರು ಜನ ಅಣ್ಣತಮ್ಮಂದಿರೂ ಒಂದೆ. ನಾನು ಸತ್ರೆ ನೀವು ಹತ್ತು ದಿನ ಸೂತಕ ಇರ್ಬೇಕು” ಎಂದು ಮುಂದುವರಿಸುವುದನ್ನು ನಾಗರಾಜರಾಯರು ತಡೆದು “ದೊಡ್ಡಪ್ಪ, ನಿಮ್ಮ ಸಭ್ಯತನ ನನಗೆ ಹೇಳಬೇಕಾಗಿಲ್ಲ. ಲಕ್ಕಣ್ಣನ ಜೊತೆಗೆ ನಾನು ಬಂದಾಗಿನಿಂದ ಕಿತಾಪತಿ ಮಾಡ್ತಾನೆ ಇದೀರಿ. ಅವನನ್ನ ಪುಸಲಾಯಿಸಿ ಮನೆಯ ಹಿತ್ತಲಿನಲ್ಲಿ ನೆಲಮಾಳಿಗೆಯ ಭಾಗ ಹೊಡೀಬೇಕು ಅಂತ ನಿಮ್ಮ ಪ್ಲಾನು. ಲಕ್ಕಣ್ಣನಿಗೂ ಗೊತ್ತಿಲ್ಲ ಅಂತ ತಿಳೀಬೇಡಿ” ಎಂದರು.
“ಶಾಂತಿ ಶಾಂತಿ” ಎಂದರು ಜೋಯ್ಸರು.
”ನನಗೆ ಸುಬ್ಬಣ್ಣನವರು ಮಾತಾಡುವುದು ಬೇಕಿಲ್ಲ” ಎಂದರು ನಾಗರಾಜರಾಯರು.
ಲಕ್ಕಣ್ಣ “ಅವ್ರು ನನಗೆ ಬೇಕಾದವರು. ನಾಗಣ್ಣಂಗೆ ಬೇಡ್ದೆ ಹೋದ್ರೆ ಅವರ ಹತ್ರ ಮಾತಾಡ್ಬೇಕಿಲ್ಲ. ಆದ್ರೆ ಉಳಿದಿಬ್ಬರು ಪಂಚಾಯಿತರಿಗೆ ಅವ್ರು ಹೇಳೋದನ್ನ ಹೇಳ್ಲಿ ಅಂತ ಕರ್‍ಸಿದೀನಿ” ಎಂದ.
”ಶಾಂತಿ ಶಾಂತಿ” ಎಂದರು ಜೋಯ್ಸರು. ಮಾತಾಡಲಿಕ್ಕೆ ಬಾಯಿ ತೆರೆದವರು ಸುಮ್ಮನಾದರು. ಜೋಯ್ಸರು ಗಂಭೀರ ಸ್ವರದಲ್ಲಿ “ನೋಡ್ರಪ್ಪ ಜಗಳ ಆಡ್ತ ಹೋದ್ರ ಕೊನೆಯಿಲ್ಲ ಮೊದಲಿಲ್ಲ. ಮೊದಲು ನಮಗೆ ನಿಮ್ಮ ಲೆಕ್ಕ ಪತ್ರಗಳು ಏನಿವಿಯೋ ಅವನ್ನ ಕೊಡಿ. ನೀವು ನಿಮ್ಮ ನಿಮ್ಮ ಪರವಾಗಿ ಏನು ಹೇಳಬೇಕೋ ಹೇಳಿ. ಕೇಳಿ ನಮ್ಮ ನ್ಯಾಯ ಹೇಳುತ್ತೇವೆ. ಒಪ್ಪುವುದು ಬಿಡುವುದು ನಿಮಗೆ ಸೇರಿದ್ದು” ಎಂದು ಹೇಳಿದರು.
ಲಕ್ಕಣ್ಣ “ನಮ್ಮಪ್ಪ ಮನೆತನದ ಸಾಲ ಎಲ್ಲಾ ತೀರ್‍ಸಿದರು. ನಾಗಣ್ಣನ ಅಪ್ಪ ನಮ್ಮಪ್ಪನ ಹತ್ರ ಜಗಳ ಆಡಿಕೊಂಡು ನನಗೆ ಯಾವ ಆಸ್ತಿಯೂ ಬೇಡ, ಸಾಲವೂ ಬೇಡ ಎಂದು ಹೊರಟು ಹೋಗಿದ್ದರು. ಆದ್ದರಿಂದ ನಾಗಣ್ಣನಿಗೆ ಇದರಲ್ಲಿ ಯಾವ ಹಕ್ಕೂ ಇಲ್ಲ” ಎಂದ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಲಕ್ಷ್ಮಣ “ಇಷ್ಟು ವರ್ಷ, ನಾವು ಅಣ್ಣ ತಮ್ಮ ಸೋದರಮಾವನ ಮನೇಲಿ ಇದೀವಿ. ಲಕ್ಕಣ್ಣನವರು ಮೊನ್ನೆ ಮೊನ್ನೆವರೆಗೆ ನಮ್ಮ ಭಾಗದ ಜಮೀನನ್ನು ಉಪಭೋಗಿಸುತ್ತಿದ್ದರು. ಈಗ ಒಂದೂವರೆ ವರ್ಷದಿಂದ ನಾಗರಾಜರಾಯರೂ ಅದನ್ನು ಅನುಭವಿಸಿದ್ದಾರೆ. ಇವರಿಬ್ಬರಿಂದ ಫಸಲಿನಲ್ಲಿ ನಮ್ಮ ಭಾಗಗಳನ್ನೂ ಜಮೀನಿನಲ್ಲಿ ನಮ್ಮ ಭಾಗಗಳನ್ನೂ ಕೊಡಿಸಿಕೊಡಬೇಕು” ಎಂದ.
ನಾಗರಾಜರಾಯರು “ನಮ್ಮಪ್ಪ ತನಗೆ ಪಾಲು ಬೇಡ ಅಂತ ಹೇಳಿದ್ದರೆ ಹೊರತು, ತಮ್ಮ ಮಗನಿಗೆ ಪಾಲು ಬೇಡ ಅಂತ ಹೇಳಿರಲಿಲ್ಲ. ಇದು ಅವಿಭಾಜ್ಯ ಆಸ್ತಿಯಾದ್ದರಿಂದ ಇದರಲ್ಲಿ ನನ್ನ ಪಾಲೂ ಇದೆ. ಲಕ್ಕಣ್ಣನ ತಂದೆ ಮನೆತನದ ಸಾಲ ತೀರಿಸಿದ್ದರೆ, ಒಟ್ಟು ಆಸ್ತಿಯನ್ನೆಲ್ಲ ಅನುಭವಿಸಿದ್ದರಿಂದ ಫಸಲಿನ ಪಾಲನ್ನು ನಾನು ಕೇಳುತ್ತಿಲ್ಲ. ಇದು ನ್ಯಾಯವೊ ಅಲ್ಲವೊ ನೀವೇ ಹೇಳಬೇಕು. ಈಗ ಜಮೀನಿನ ಮೇಲೆ ಹತ್ತು ಸಾವಿರ ಸಾಲ ಇದೆ. ನಾನು ಕೈಯಿಂದ ಬದು ಹಾಕಿಸಲಿಕ್ಕೆ, ಮಟ್ಟ ಮಾಡಲಿಕ್ಕೆ ಗೊಬ್ಬರಕ್ಕೆ ಅಂತ ಮೂರು ಸಾವಿರ ಖರ್ಚು ಮಾಡಿದ್ದೇನೆ. ಇದಕ್ಕೆಲ್ಲ ಲೆಕ್ಕ ಇಟ್ಟಿದ್ದೇನೆ ನೋಡಿ” ಎಂದು ಒಂದು ದಪ್ಪ ರಟ್ಟಿನ ನೋಟ್ ಬುಕ್ಕನ್ನು ಮುಂದಿಟ್ಟರು.
ಮೂವರೂ ಪಂಚಾಯಿತರು ಪುಸ್ತಕಗಳನ್ನು ನೋಡಿದರು. ಅರ್ಚಕ ಸೀತಾರಾಮಯ್ಯನವರು ”ಲಕ್ಷ್ಮಣ ಪಾಲು ಕೇಳುವುದು ಸರಿ, ಆದ್ರೆ ಇಷ್ಟು ವರ್ಷದ ಫಸಲಿನಲ್ಲಿ ಪಾಲು ಕೇಳುವುದು ನ್ಯಾಯ ಅನ್ನಿಸುವುದಿಲ್ಲ. ಏಕೆಂದರೆ ಅವರು ಅಣ್ಣ ತಮ್ಮ ಈ ಮನೆಯಲ್ಲಿ ಇದ್ದಿದ್ದರೆ ಅವರಿಗೆ ಯಾರೂ ಬೇಡವೆನ್ನುತ್ತಿರಲಿಲ್ಲ. ಅಲ್ಲದೆ ಲಕ್ಕಣ್ಣನ ತಂದೆ ಹಿರಿಯರು ಮಾಡಿದ ಸಾಲವನ್ನೆಲ್ಲ ತೀರಿಸಿದ್ದಾರೆ. ಇನ್ನು ಲಕ್ಕಣ್ಣ ನಾಗರಾಜರಾಯರಿಗೆ ಪಾಲಿಲ್ಲ ಅಂತ ಹೇಳಿದರೆ ಯಾವ ನ್ಯಾಯವೂ ಒಪ್ಪುವುದಿಲ್ಲ. ಈಗ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಹಂಚಿಕೆಯಾಗಬೇಕೆಂದರೆ ಈಗಿರುವ ಜಮೀನನ್ನು ಮತ್ತು ಈಗಿರುವ ಸಾಲವನ್ನು ಎಲ್ಲರೂ ಹಂಚಿಕೊಳ್ಳಬೇಕು” ಎಂದು ತೀರ್ಮಾನ ಹೇಳಿದರು.
ನೀಲಕಂಠ ಜೋಯ್ಸರು “ನನಗೂ ಆ ಮಾತು ಒಪ್ಪುತ್ತೆ” ಎಂದರು.
ಲಕ್ಷ್ಮಣ “ನನಗೆ ಸಾಲ ಬೇಕಿಲ್ಲ, ಸಾಲ ಮಾಡ್ಲಿಕ್ಕೆ ನನ್ನ ಕೇಳಿ ಮಾಡ್ಲಿಲ್ಲ” ಎಂದ.
ನಾಗರಾಜರಾಯರು ”ಅಲ್ಲಪ್ಪ ಲಕ್ಷ್ಮಣ? ಸಾಲ ಮಾಡೋದಕ್ಕೂ ಮುಂಚೆ ಪಾಲಾಗಿದ್ದರೆ ನಿನ್ನ ಜಮೀನಿಗೆ ಎಷ್ಟು ಬೆಲೆಯಿತ್ತೋ ಆ ಬೆಲೆಯನ್ನು ತೆಗೆದುಕೊಳ್ತಿಯ?” ಎಂದರು.
“ನಂಗೆ ಈಗಿನ ಖರೀದಿ ಬೇಕು” ಎಂದ ಲಕ್ಷ್ಮಣ.
“ಹಾಗಿದ್ರೆ ಸಾಲಾನೂ ತೊಗೋಬೇಕಾಗುತ್ತೆ” ಎಂದರು ಸೀತಾರಾಮಯ್ಯ.
“ಸಾಲದ ವಿಷಯ ನಮ್ಮ ಸೋದರಮಾವನ್ನ ಕೇಳ್ಬೇಕಾಗುತ್ತೆ” ಎಂದ ಲಕ್ಷ್ಮಣ.
“ಅಲ್ಲಯ್ಯ ಮೆಜಾರಿಟಿಗೆ ಬಂದಿದೀಯ, ಪಾಲು ಕೇಳ್ಲಿಕ್ಕೆ ಒಬ್ಬನೇ ಬಂದಿದೀಯ. ಸಾಲ ಹೊತ್ಕೊಳ್ಳೋ ಅಷ್ಟು ಗಂಡುಸಲ್ವೇ?” ಎಂದು ಸ್ವಲ್ಪ ರೇಗಿಯೇ ಜೋಯ್ಸರು ಕೇಳಿದರು.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಸುಬ್ಬಣ್ಣನವರು ”ಹೋಗ್ಲಿ ಬಿಡ್ರಿ ಜೋಯ್ಸರೆ. ಏನೋ ಹುಡುಗ. ಆಗ್ಲಪ್ಪ ಲಕ್ಷ್ಮಣ. ನೀನು ಈಗ್ಲೆ ಐದು ಗಂಟೆ ಬಸ್ಸಿಗೆ ಹೋಗಿ ರಾತ್ರಿ ಬಂದ್ಬಿಡು. ನಾಳೆ ಬೆಳಿಗ್ಗೆ ನೋಡೋಣ” ಎಂದು “ನಾನು ಮಾತಾಡಿದ್ದು ಸಮ್ಮತವೆ ಜೋಯ್ಸರೆ?” ಎಂದು ಕೇಳಿ ನಾಗರಾಜರ ಮುಖ ನೋಡಿದರು. ಜೋಯ್ಸರು ”ಇನ್ನೇನು ಮಾಡುವುದು ಸ್ವಾಮಿ? ಹುಡುಗರ ಜೊತೆ ಪಂಚಾಯ್ತಿಗೆ ಬಂದದ್ದು ನಮ್ಮ ತಪ್ಪು” ಎಂದರು.
*
ಲಕ್ಷ್ಮಣನ ಸೋದರಮಾವ ವೆಂಕಟೇಶ ಜೋಯ್ಸರು ಬಂದಾಯಿತು. ಅವರ ಜೊತೆಗೆ ಮತ್ತೆ ಪಂಚಾಯಿತಿ ಆರಂಭವಾಯಿತು. ಅವರು ನಯವಾಗಿ ಮಾತನಾಡಿದರು. ”ಲಕ್ಷ್ಮಣನಿಗೆ ಈ ಊರಿನಲ್ಲಿರುವ ಇಚ್ಛೆಯಿಲ್ಲ. ಅವನೇನೋ ಕಿರಾಣಿ ಅಂಗಡಿ ತೆಗೆಯುತ್ತಾನಂತೆ. ಮಾವ ದುಡ್ಡು ಕೊಡು ಅಂತ ನನ್ನ ಕೇಳಿದ. ನನ್ನ ಹತ್ರ ದುಡ್ಡೆಲ್ಲಿದೆಯಪ್ಪ. ನಾಲ್ಕು ಜನ ಹೆಣ್ಣು ಮಕ್ಕಳು. ಪೌರೋಹಿತ್ಯ, ಇದಿಷ್ಟೆ ನನ್ನ ಸಂಪಾದನೆ ಎಂದೆ. ಅವನು ಹೇಗಾದರೂ ಮುಂದುವರೆಯುವುದು ಮುಖ್ಯ. ಬೆಳೆಯೋ ಹುಡುಗ ಈಗ ಸಾಲವನ್ನು ಹೊತ್ತುಕೊಂಡರೆ ಎಳೆಗರುವನ್ನು ಬೇಸಾಯಕ್ಕೆ ಕಟ್ಟಿದ ಹಾಗಾಗುತ್ತೆ. ಆದ್ದರಿಂದ ನಾಗರಾಜರಾಯರು ಹೇಳಿದ ಪ್ರಕಾರವೆ ಹಳೆ ಖರೀದಿಯಂತೆ ಅವರಿಬ್ಬರ ಪಾಲಿಗೆ ಏನು ಬರುತ್ತದೊ ಅದನ್ನು ಕೊಟ್ಟರೆ ನನಗೆ ಸಾಕು ಅನ್ನಿಸುತ್ತದೆ. ಇನ್ನು ಎಷ್ಟಾದರೂ ಅವನು ನಿಮ್ಮ ಹುಡುಗ. ಏನೋ ನಾಗರಾಜರಾಯರು ದೊಡ್ಡ ಮನಸ್ಸು ಮಾಡಿ ಇನ್ನೂ ನೂರಿನ್ನೂರು ರೂಪಾಯಿ ಜಾಸ್ತಿಕೊಟ್ಟು ಆಶೀರ್ವಾದ ಮಾಡಿದರೆ ಲಕ್ಷ್ಮಣ ಅವರ ಉಪಕಾರವನ್ನು ಮರೆಯೋಲ್ಲ” ಎಂದರು.
“ಏನಂತಿಯಪ್ಪ ಲಕ್ಷ್ಮಣ? ಏನಂತೀರಿ ನಾಗರಾಜರಾಯರೆ?” ಎಂದು ನೀಲಕಂಠ ಜೋಯ್ಸರು ಕೇಳಿದರು.
ಲಕ್ಷ್ಮಣ “ಮಾವ ಹೇಳಿದಂತೆ ಆಗಲಿ” ಎಂದ.
ನಾಗರಾಜರಾಯರು “ಹಳೆ ಖರೀದಿಯಂತೆ ಒಂದೂವರೆ ಸಾವಿರ ಆಗುತ್ತೆ. ಇನ್ನೂ ಇನ್ನೂರು ರೂಪಾಯಿ ಜಾಸ್ತಿ ಕೊಡುತ್ತೇನೆ” ಎಂದರು.
“ಐನೂರು ರೂಪಾಯಿ ಕೊಡಿ” ಎಂದರು ವೆಂಕಟೇಶಜೋಯ್ಸರು.
“ಆಗಲಿ” ಎಂದರು ನಾಗರಾಜರಾಯರು. ಅಲ್ಲಿಗೆ ಒಂದು ಸಮಸ್ಯೆ ಇತ್ಯರ್ಥವಾಯಿತು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
”ಇನ್ನು ಲಕ್ಕಣ್ಣ ಸಾಲ ತೆಗೆದುಕೊಳ್ಳಲಿಕ್ಕೆ ಸಿದ್ದನಿದ್ದಾನ?” ಎಂದು ನೀಲಕಂಠ ಜೋಯ್ಸರು ತೀರ್ಮಾನದ ಪ್ರಶ್ನೆಯನ್ನು ಮುಂದಿಟ್ಟರು.
“ನಂಗೆ ಸಾಲಬೇಡ. ಈಗ ನಾಗರಾಜರಾಯರಿಗೆ ಒಟ್ಟು ಆಸ್ತಿಯಲ್ಲಿ ಎರಡು ಪಾಲು ಸಿಕ್ಕಹಾಗಾಯ್ತಲ್ಲ. ಬಾವಿ ಇರೋ ಸೀಳನ್ನು ನನಗೆ ಕೊಡಿಸಿ ಕೊಡಬೇಕು” ಎಂದು ಲಕ್ಕಣ್ಣ ತನ್ನ ಆಸೆಯನ್ನು ವ್ಯಕ್ತಪಡಿಸಿದ.
ಅದಕ್ಕೆ ನಾಗರಾಜರಾಯರು “ಬಾವಿಯಿರೋ ಜಾಗ ಬೇಕೆಂದರೆ ಪೂರ್ತಿ ಸಾಲ ತೊಗೋಬೇಕಾಗುತ್ತದೆ” ಎಂದರು.
ಪಂಚಾಯಿತರು ಗುಸಗುಸ ಮಾತನಾಡಿ, ಅರ್ಚಕ ಸೀತಾರಾಮಯ್ಯನವರು “ಬಾವಿಯ ಸಾಲವಿನ್ನೂ ಮುಗಿದಿಲ್ಲ. ಹತ್ತು ಸಾವಿರ ಸಾಲ ತೀರಿಸಬೇಕೆಂದರೆ ಸಣ್ಣ ಮಾತಲ್ಲ. ಲಕ್ಷ್ಮಣನೇನೊ ಈ ಊರಿನಲ್ಲಿ ಇರುವ ಹಾಗಿಲ್ಲ. ಆದ್ದರಿಂದ ಅವನದು ಒಂದು ಇತ್ಯರ್ಥಕ್ಕೆ ಬಂತು. ಆದರೆ ಲಕ್ಕಣ್ಣ ಮತ್ತು ನಾಗರಾಜರಾಯರು ರಂಭಾಪುರಿಯಲ್ಲಿ ಇರುವವರಾದ್ದರಿಂದ, ಅವರು ಸದ್ಯಕ್ಕೆ ಪಾಲಾದರೂ ಒಟ್ಟಿಗೆ ಇರುವುದು ಸೂಕ್ತ” ಎಂದರು.
”ಒಟ್ಟಿಗೇ ಇರುವುದಕ್ಕೆ ನನ್ನದೇನೂ ಅಡ್ಡಿಯಿಲ್ಲ. ನಾನು ಲಕ್ಕಣ್ಣನ ಪಾಲನ್ನೂ ಉತ್ಕೃಷ್ಟವಾಗಿ ಮಾಡಿ ಅವನಿಗೆ ಬಿಟ್ಟುಕೊಡುತ್ತೇನೆ” ಎಂದು ನಾಗರಾಜರಾಯರು ಹೇಳಿದರು.
“ಈಗ ಮಾಡಿರೋ ಉಪಕಾರ ಸಾಕು. ಈಗ ಅನ್ನಿಸಿಕೊಂಡಿರೋದು ಸಾಕು. ಅವರ ಪಾಲು ಅವರಿಗೆ ಕೊಟ್ಟುಬಿಡಿ” ಎಂದು ಹೆಣ್ಣುದನಿಯೊಂದು ಹೊಸ್ತಿಲಾಚೆಯಿಂದ ಕೇಳಿಸಿತು. ವೆಂಕಮ್ಮನ ದನಿ ಅದೆಂದು ಎಲ್ಲರಿಗೂ ಗೊತ್ತಾಯಿತು.
“ಏನಂತೀಯಪ್ಪ ಲಕ್ಕಣ್ಣ?” ಎಂದು ನೀಲಕಂಠ ಜೋಯ್ಸರು ಕೇಳಿದರು.
“ಅವರೇನಂತಾರೆ. ಬಸವಣ್ಣನಂಗೆ ಹೇಳಿದ್ದಕ್ಕೆಲ್ಲ ತಲೆಹಾಕ್ತಾರೆ. ನಾಗರಾಜರಾಯರಿಗೆ ಸಾಲ ತೊಗೊಂಡು ಬಾವಿ ತೋಡಿಸಲಿಕ್ಕಾದ್ರೆ ನಮ್ಗೂ ಆಗೋದಿಲ್ಲವೇನು? ಅವರ ಬಾವೀಲಿ ಯಾಕೆ ಹೋಗಿ ಬೀಳ್ಬೇಕು? ಹಾಗೆ ಸಾಲದ ಬಾವೀಲಿ ಬೀಳೋದಾದ್ರೆ ನಂಬಾವೀಲೆ ಬೀಳ್ತಿವಿ. ಉಚ್ಚೆ ಕುಡಿದ್ರೂ ತನ್ನಿಚ್ಛೇಲಿ ಇರು ಅಂತ ಗಾದೆ ಇಲ್ವೆ?” ಎಂದು ವೆಂಕಮ್ಮ ಮತ್ತೆ ಮಾತನಾಡಿದರು.
ಸುಬ್ಬಣ್ಣನವರು ”ಲಕ್ಕಣ್ಣನಿಗೇನೋ ಪಾಲಾಗೋದೆ ಉತ್ತಮ ಅನಿಸುತ್ತೆ” ಅಂದರು.
ಲಕ್ಕಣ್ಣ ‘ಹೂಂ’ ಎಂದ.
ನೀಲಕಂಠ ಜೋಯ್ಸರು “ನೋಡಿ ನಾಗರಾಜರಾಯರೆ, ಇದು ಇಷ್ಟಕ್ಕೆ ಬೆಳೆದ್ಮೇಲೆ ಶಸ್ತ್ರಚಿಕಿತ್ಸೆಯೇ ಈ ರೋಗಕ್ಕೆ ಮದ್ದು. ಲಕ್ಕಣ್ಣನ ಪಾಲು ಅವನಿಗೆ ಕೊಟ್ಟುಬಿಡಿ. ನೀವೆಲ್ಲ ಆಚೆಗ್ಹೋಗಿದ್ರೂ ಅವನ ಅಪ್ಪ, ಅವ್ನು ಇದೇ ಊರಿನಲ್ಲಿದ್ದು ಮನೆತನದ ಹೆಸರು ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಊರಮಗ್ಗುಲಿನ ಹತ್ತು ಎಕರೆ ಅವನ ಪಾಲಿಗೆ ಬಿಡಿ. ನನ್ನ ದೃಷ್ಟಿಯಲ್ಲಿ, ನೀವು ಇನ್ನೂ ಎರಡೂವರೆ ಎಕರೆ ಅವನ ಪಾಲಿಗೆ ಬಿಟ್ಟರೆ ಆ ಜಮೀನು ಅಷ್ಟು ಉತ್ಕೃಷ್ಟವಲ್ಲವಾದ್ದರಿಂದ ಲಕ್ಕಣ್ಣನಿಗೂ ಅನುಕೂಲವಾಗುತ್ತದೆ” ಎಂದರು.
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
”ಆಗಲಿ” ಎಂದರು ನಾಗರಾಜರಾಯರು. ”ಇಷ್ಟೆಲ್ಲಾ ಆದ್ಮಲೆ ನನ್ನ ಹೆಂಡತಿಗೂ ವೆಂಕಮ್ಮನಿಗೂ ಎಣ್ಣೆ ಸೀಗೆ ಅನ್ನೋದು ಊರಿಗೆಲ್ಲಾ ಗೊತ್ತಾಗಿದೆ. ನಾ ಏನೋ ಲಕ್ಕಣ್ಣ ಪಾಲ ಕೇಳಿದ ಅಂತ, ಅಥವಾ ಎರಡು ಮಾತು ದುಡುಕಿ ಮಾತಾಡಿದ ಅಂತ ಎಲ್ಲ ಸಂಬಂಧವನ್ನೂ ಇವತ್ತು ಹರಿದುಕೊಂಡಿಲ್ಲ. ಮುಂದೆಯೂ ಹರಿದುಕೊಳ್ಳುವುದಿಲ್ಲ. ಆದರೆ ನಿಮಗೆಲ್ಲಾ ಗೊತ್ತಿರೋ ಹಾಗೆ ಈ ಹೆಂಗಸರು ಒಂದೇ ಸೂರಿನ ಕೆಳಗೆ ಇರುವುದು ಸಾಧ್ಯವಿಲ್ಲವಾದ್ದರಿಂದ ಮನೆಯಲ್ಲಿ ನನ್ನ ಪಾಲನ್ನು ಬಿಟ್ಟುಬಿಡುತ್ತೇನೆ. ನನಗೆ ಅದರ ಬದಲಿ ಒಂದು ಜಾಗ ಈ ಮನೆಯ ಪಕ್ಕದಲ್ಲಿ ಕೊಟ್ಟರೆ ಒಳ್ಳೆಯದು” ಎಂದು ಸುಬ್ಬಣ್ಣನವರ ಕಡೆ ನೋಡಿದರು.
ಸುಬ್ಬಣ್ಣನವರಿಗೆ ಇದೇನೊ ಮಸಲತ್ತು ನಡೆದಿದೆ ಎನ್ನಿಸಿತು. “ಹಾಗೆ ಅವರಿಗೆ ಒಟ್ಟಿಗೇ ಇರೋದು ಇಷ್ಟವಿಲ್ಲವಾದರೆ ಲಕ್ಕಣ್ಣ ಮತ್ತು ನಾಗಣ್ಣ ಮನೆಯನ್ನು ಸರಿಯಾಗಿ ಹಂಚಿಕೊಂಡು ಮಧ್ಯ ಗೋಡೆ ಎಬ್ಬಿಸಲಿ” ಎಂದರು.
“ಗೋಡೆಯ ಖರ್ಚು ನಮ್ಮ ದೊಡ್ಡಪ್ಪಂದಿರು ಕೊಡುತ್ತಾರೆ!” ಎಂದು ನಾಗರಾಜರಾಯರು ವ್ಯಂಗ್ಯವಾಗಿ ಮಾತನಾಡಿದರು.
“ನಾನ್ಯಾಕಪ್ಪ ಕೊಡಲಿ. ನಾನು ಪಂಚಾಯಿತಿಗೆ ಹೇಳಿದೆ” ಎಂದರು ಸುಬ್ಬಣ್ಣ.
ಲಕ್ಕಣ್ಣ “ನಾನು ಒಂದು ಮಾತು ಹೇಳ್ತಿನಿ ಜೋಯ್ಸರೆ. ನಾಗಣ್ಣನ ಹತ್ರ ನಾನು ಪಾಲು ತೊಗಂಡಿದೀನಿ ನಿಜ. ಅವನ ಹತ್ರ ವ್ಯಾಜ್ಯ ಆಡಿದೀನಿ. ಅದೂ ನಿಜ. ಆದ್ರೂ ನಾವಿಬ್ರೂ ಒಂದೇ ಊರಿನಲ್ಲಿರೋದು. ಸುಬ್ಬಣ್ಣ ದೊಡ್ಡಪ್ಪ ನಂಗೆ ಒಂದ್ಸಾರಿ ಹೇಳಿದ್ದರು, ವ್ಯವಹಾರ ವ್ಯವಹಾರಾನೆ. ವ್ಯವಹಾರದಲ್ಲಿ ಸರಿ ಇದ್ರೆ ಪ್ರೀತಿ ವಿಶ್ವಾಸ ಉಳಿಯುತ್ತೆ. ವ್ಯವಹಾರದಲ್ಲಿ ತಪ್ಪಿದರೆ ಹಣಕಾಸು, ಹೊಲಮನೆ, ಹೋಗೋದಲ್ದೆ ಪ್ರೀತಿ ವಿಶ್ವಾಸಾನೂ ನೆಗೆದು ಬಿದ್ದೋಗುತ್ತೆ ಅಂತ. ಅದ್ರ ಅರ್ಥ ನಂಗೆ ಈಗ ಆಗ್ತಿದೆ. ವೆಂಕು ಏನೇ ಹೇಳಲಿ ಇದೊಂದು ವಿಷಯದಲ್ಲಿ ನಾನು ನಿರ್ಧಾರಕ್ಕೆ ಬಂದಿದೀನಿ. ಈ ಮನೆಯ ಪಕ್ಕದ ಜಾಗ ನಮ್ಮಪ್ಪ ಮತ್ತು ಸುಬ್ಬಣ್ಣ ದೊಡ್ಡಪ್ಪ ಒಟ್ಟಿಗೇ ಕ್ರಯಮಾಡಿದ್ದು. ಆದ್ರಿಂದ ಅದ್ರಲ್ಲಿ ಬರೋ ಪಾಲು ಪೂರಾ ನನ್ನ ಹಿಸ್ಸೆ. ಈಗ ಮನೆಯ ಪಾಲನ್ನು ಬಿಟ್ಟಿರೋದರಿಂದ ನಾಗಣ್ಣನಿಗೆ ಆ ಜಾಗದ ಹಕ್ಕನ್ನು ಬಿಟ್ಟು ಕೊಡ್ತೀನಿ” ಎಂದ. ಸುಬ್ಬಣ್ಣನವರಿಗೆ ಏನು ಹೇಳಲೂ ತೋಚಲಿಲ್ಲ. “ನಂಗೆ ಅದನ್ನು ಪಾಲಾಗ್ಲಿಕ್ಕೆ ಇಷ್ಟ ಇಲ್ಲ” ಎಂದರು.
”ಯಾಕೆ?” ಎಂದರು ನೀಲಕಂಠ ಜೋಯ್ಸರು.
”ಅದರಲ್ಲಿ ನಿಧಿ ಇದೆ. ಪಾಲಾದ್ರೆ ನನ್ನ ಪಾಲಿಗೆಲ್ಲಿ ಬರುತ್ತೋ ಅಂತ ನಮ್ಮ ದೊಡ್ಡಪ್ಪಂದಿರಿಗೆ ಹೆದರಿಕೆ” ಎಂದರು ನಾಗರಾಜರಾಯರು. “ಅವ್ರು ಹೇಗೊ ಅದನ್ನು ಒಂದ್ಸಾರಿ ಅಗೆದು ದುಂಡು ದುಂಡು ಕಲ್ಲುಗಳನ್ನು ದೊಡ್ಡ ಮಡಿಕೆಯಿಂದ ತೆಗೆದಿದ್ದಾರೆ. ಅದಲ್ದೆ ಅವರಿಗೆ ಪಾಣಿಪೀಠ ಬೇರೆ ಸಿಕ್ಕಿದೆ. ನೆಲಮಾಳಿಗೆ ಬಾಗಿಲವರೆಗೂ ಹೋಗಿದ್ದಾರೆ. ಬೇಕಾದ್ರೆ ಆ ಭಾಗ ಅವ್ರೆ ಇಟ್ಟುಕೊಳ್ಳಲಿ” ಎಂದು ನಾಗರಾಜರಾಯರು ಸುಬ್ಬಣ್ಣನವರನ್ನು ಒಂದು ದಿಕ್ಕಿಗೆ ತಿರುಗಿಸಲಿಕ್ಕೆ ನೋಡಿದರು.
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
ಸುಬ್ಬಣ್ಣನವರು ಗುಣಾಕಾರ ಹಾಕುತ್ತಿದ್ದರು. ಪೂರ್ವಪಶ್ಚಿಮವಾಗಿ ಇಬ್ಬಾಗ ಮಾಡೋಣವೋ, ಉತ್ತರ ದಕ್ಷಿಣವಾಗಿ ಇಬ್ಬಾಗ ಮಾಡೋಣವೋ ಅಂತ. ಪೂರ್ವ ಪಶ್ಚಿಮವಾಗಿ ಮಾಡಿದರೇನೊ ತಾವು ಹಿಂದೆ ನೋಡಿದ ನೆಲಮಾಳಿಗೆಯ ಮುಖ ತಮಗೆ ಸಿಗುತ್ತದೆ. ಆದರೆ ನಿಧಿ ನೆಲಮಾಳಿಗೆಯಲ್ಲೇ ಇದೆಯೋ ಅಥವಾ ಬೇರೆ ಕಡೆ ಇದೆಯೋ? ಇವರ ಒಳಗುದಿ ಅರ್ಥವಾದವರಂತೆ ಅರ್ಚಕ ಸೀತಾರಾಮಯ್ಯನವರು “ಇದ್ಯಾವ ದೊಡ್ಡ ವಿಷಯ ಸುಬ್ಬಣ್ಣನವರೆ, ನಮ್ಮೆಲ್ಲರಿಗೂ ಪಂಚಾಯಿತಿ ಹೇಳೋ ಲಕ್ಷ್ಮೀಕಾಂತನ ಪ್ರಸಾದ ಕೇಳಿದರಾಯಿತು. ಅವನು ಹೇಗೆ ಅಪ್ಪಣೆ ಕೊಡಿಸುತ್ತಾನೋ ಹಾಗೆ ಮಾಡೋಣ” ಎಂದರು.
ಇಡೀ ತಂಡ ಅಲ್ಲಿಂದ ದೇವಸ್ಥಾನಕ್ಕೆ ಹೋಯಿತು. ಸುಬ್ಬಣ್ಣನವರು ಭಕ್ತಿಪೂರ್ವಕವಾಗಿ ಲಕ್ಷ್ಮೀಕಾಂತನಿಗೆ ಅಡ್ಡಬಿದ್ದು ಕೇಳಿಕೊಂಡರು. ಲಕ್ಷ್ಮೀಕಾಂತನ ಹೊಟ್ಟೆಯ ಮೇಲಿನ ಹೂವು ಅವರು ಕೇಳಿದ್ದು. ಲಕ್ಕಪ್ಪ, ಲಕ್ಷ್ಮೀಕಾಂತ, ನನ್ನ ತಂದೆ, ನನ್ನ ಕಷ್ಟ ಸುಖ ನಿನಗೇ ಗೊತ್ತಿದೆ. ನನ್ನ ಕಣ್ಣೆದುರಿಗೆ ಹುಟ್ಟಿಬೆಳೆದ ಈ ಪೋರ ನಾಗಣ್ಣ, ಇವತ್ತು ನನಗೆ ಸವಾಲು ಹಾಕಿದಾನೆ. ಪಾಲಾಗದೆ ಗತ್ಯಂತರವಿಲ್ಲ ಅಂತ ನಿನಗೇ ಗೊತ್ತಿದೆ. ಹೇಗಾದ್ರೂ ಪಾಲಾಗ್ಲಿ ನೀನು ಹೇಳಿದಂಗೆ ಆಗ್ತಿನಿ. ಆದ್ರೆ ನಿಧಿ ಇರೋ ಜಾಗ ನನಗೆ ಬರೋ ಹಾಗೆ ಮಾಡು, ಹಾಗಾಗುತ್ತೆ ಅನ್ನೋದಾದ್ರೆ ಹೊಟ್ಟೆ ಮೇಲಿನ ಹೂವು ಕೊಡು. ಇಲ್ಲ ನಾನು ಹೀಗೇ ಭಿಕಾರಿ ಹಾಗಿರ್‍ಬೇಕು ಅನ್ನೋದಾದ್ರೆ ಎಡಗಡೆ ಹೂವು ಕೊಡು. ಹೊಟ್ಟೆಮೇಲಿನ ಹೂವು ಕೊಟ್ಟರೆ ಪೂರ್ವಪಶ್ಚಿಮವಾಗಿ ಭಾಗವಾಗ್ತಿನಿ, ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿ ದೇವರನ್ನು ಕಣ್ಣರಳಿಸಿ ನೋಡುತ್ತ ಕುಳಿತುಕೊಂಡರು.
ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ
ಲಕ್ಷ್ಮೀಕಾಂತ ಅವರ ಮನಸ್ಸಿಗೆ ಇಷ್ಟವಾದ ಹೂವನ್ನೇ ತೆಗೆದು ಬಿಸಾಡಿದ. ಸುಬ್ಬಣ್ಣನವರು ದೇವರನ್ನು ಕೊಂಡಾಡಿ ನನ್ನ ಮನಸ್ಸಿನಂತೆ ನಡೆಸಿಕೊಟ್ಟಿದ್ದಕ್ಕೆ ನಿನಗೆ ಈಗಲೆ ಉರುಳುಸೇವೆ ಹಾಕ್ತಿನಿ ಎಂದು ಉತ್ತರೀಯ ಸರಿಪಡಿಸಿಕೊಂಡರು. ದೇವಸ್ಥಾನದ ಪ್ರಾಕಾರದ ಸುತ್ತ ಉರುಳಲಿಕ್ಕೆ ಆರಂಭಿಸಿದರು. ಜೋಯ್ಸರು, ಅರ್ಚಕರು, ನಾಗರಾಜರಾಯರು, ಲಕ್ಕಣ್ಣ, ವೆಂಕಟೇಶ ಜೋಯ್ಸರು, ಲಕ್ಷ್ಮಣ ಯಾರು ಮಾತಾಡಿಸಿದರೂ ಮಾತಿಲ್ಲ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹಾಸುಗಲ್ಲಿನ ಮೇಲೆ ಈ ಬಡಬ್ರಾಹ್ಮಣ ಉರುಳುತ್ತ ಹೋಗುವುದನ್ನು ನೋಡಿ ನಾಗರಾಜರಾಯರಿಗೆ ತುಂಬ ಕನಿಕರವೆನಿಸಿತು. ಲಕ್ಷ್ಮಣನನ್ನು ಕರೆದು “ಮನೆಗೆ ಹೋಗಿ ಒಂದಿಷ್ಟು ಪಾನಕ ಮಾಡಿಸಿಕೊಂಡು ಬಾ” ಎಂದು ಕಳಿಸಿದರು. ಬರಿಗಾಲಿನಲ್ಲಿ ನಡೆಯುತ್ತಿದ್ದವರಿಗೆಲ್ಲ ಕಾಲು ಚುರುಗುಟ್ಟುತ್ತಿತ್ತು. ಸುಬ್ಬಣ್ಣನವರು ಮಾತ್ರ ಏಕಮನಸ್ಸಿನಿಂದ ಏದುಸಿರು ಬಿಡುತ್ತ ಉರುಳುಸೇವೆಯನ್ನು ಮುಗಿಸಿದರು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಡಾ. ಸುಮತೀಂದ್ರ ನಾಡಿಗ (1935-2018): ಚಿಕ್ಕಮಗಳೂರಿನ ಕಳಸದಲ್ಲಿ ಜನಿಸಿದ ನಾಡಿಗರು, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪಿಎಚ್.ಡಿ. ಪದವೀಧರರು. ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದವರು. ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು); ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ಇಂಪತ್ಯಗೀತೆ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು); ಅಡಿಗರ ಕಾವ್ಯ, ಕಾವ್ಯ ಎಂದರೇನು?, ವಿಮರ್ಶೆಯ ದಾರಿಯಲ್ಲಿ, ಸಖೀಗೀತದಲ್ಲಿ ಋತುವರ್ಣನೆ, ಹೀಗೊಂದು ಸಾಹಿತ್ಯ ಚರಿತ್ರೆ, ಇನ್ನೊಂದು ಸಾಹಿತ್ಯ ಚರಿತ್ರೆ, ನೆಲೆಗಳು (ವಿಮರ್ಶಾ ಲೇಖನಗಳು); ಹನ್ನೊಂದು ಹಂಸಗಳು, ಸಾಹಸ, ಗಾಳಿಪಟ, ಇಲಿ ಮದುವೆ (ಮಕ್ಕಳ ಸಾಹಿತ್ಯ). ಇವಲ್ಲದೆ ಇಂಗ್ಲಿಷ್‌ನಿಂದ ಅನೇಕ ಕತೆ, ಕಾದಂಬರಿ ಮತ್ತು ವಿಮರ್ಶಾ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ನ್ಯಾಷನಲ್ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2018ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.





