ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅವಳಿಗೀಗ ಐವತ್ತೆರಡು ವಯಸ್ಸು. ಇನ್ನೂ ನಿಲುವುಗನ್ನಡಿಯ ಮುಂದೆ ಕೂತಿರುತ್ತಾಳೆ. ಆಗ ಮತ್ತು ಈಗಿನ ನಡುವೆ ವ್ಯತ್ಯಾಸದ ದೊಡ್ಡ ಕಂದರವಿದೆ. ಆಗ ಇದೇ ಕನ್ನಡಿಯಲ್ಲಿ ತನ್ನನ್ನು ತಾನೇ ಕಂಡುಕೊಂಡಿದ್ದಳು: ಬ್ರಹ್ಮಜ್ಞಾನಿಯ ಪ್ರಜ್ಞೆಯ ತರಹ, ಈಗ ಇದೇ ಕನ್ನಡಿಯಲ್ಲಿ ತನ್ನನ್ನು ತಾನೇ ಕಳೆದುಕೊಂಡಿದ್ದಾಳೆ: ಹುಚ್ಚನ ಅರಿವಿನ ತರಹ. ಆಗ ಅಂದರೆ ಮೂವತ್ತು ವರ್ಷಗಳ ಹಿಂದಿನ ಮಾತು. ಅದಕ್ಕಿಂತ ಮೊದಲು ಇನ್ನೂ ಒಂದು ಆಗ ಇತ್ತು. ಆದರೆ ಅದೆಲ್ಲ ಅವಳ ಆಯುಷ್ಯದ ಲೆಕ್ಕದಲ್ಲಿ ಜಮಾ ಇಲ್ಲ. ಧರ್ಮಾದಾವ ಖಾತೆ ಇದ್ದಹಾಗೆ.
ಗಂಡನ ಮನೆಗೆ ಬರುವ ಮುಂಚೆಯೆ ಅಂದರೆ ಅವಳ ಹದಿನಾಲ್ಕನೆಯ ವಯಸ್ಸಿನಲ್ಲಿ ಆಕೆಯ ಗಂಡ ತೀರಿಕೊಂಡಿದ್ದ. ತೊಟ್ಟಿಲಕ್ಕೆ ಬಾಸಿಂಗ ಕಟ್ಟಿ ಅವಳ ಮದುವೆ ಮಾಡಿದ್ದರು. ಅದೆಲ್ಲ ಮನೆಯಲ್ಲಿನ ಹಿರಿಯರ ಕರುಳಿನ ವ್ಯವಹಾರ. ಗಂಡ ಸತ್ತ ಸುದ್ದಿ ಮನೆಗೆ ಬಂದಾಗ ಗಂಡ ಎಂದರೆ ಯಾವ ಗೂಡಿನ ಎಂಥ ಹಕ್ಕಿ ಎಂಬುದು ಅವಳ ಕನಸು ಮನಸಿನಲ್ಲಿಯೂ ಇರಲಿಲ್ಲ. ಆದರೆ ಯಾವ ವಾರಸಾ ಇಲ್ಲದೆ ಸತ್ತು ಹೋದ ಅವಳ ಗಂಡನ ಹನ್ನೆರಡು ಎಕರೆ ಹೊಲದ ಸಲುವಾಗಿ ಗಂಡನ ಸಂಬಂಧಿಕರು ಕಚ್ಚಾಡತೊಡಗಿದಾಗ ಮತ್ತು ಇವಳ ಸಹಿಗಾಗಿ ಇವಳ ತಂದೆ ತಾಯಿಯ ಮನವೊಲಿಸ ತೊಡಗಿದಾಗ ಈ ಜಗತ್ತಿನ ವಸ್ತುಗಳ ಜೊತೆ ತನ್ನದೇ ಆದ ಒಂದು ಸಂಬಂಧ ಇದೆ, ಅದು ಹಕ್ಕುಬಾಧ್ಯತೆಯ ಸಂಬಂಧ; ತಾನು ಮನಸ್ಸು ಮಾಡಿದರೆ ಒಂದು ಮನೆಯ ಒಡತಿಯಾಗಬಹುದು ಎಂಬುದು ಅವಳಿಗೆ ಗೊತ್ತಾಯಿತು. ತನ್ನ ಗಂಡನ ಮನೆಯೆ ತನ್ನ ಮನೆ; ತಾನು ಅಲ್ಲಿಯೆ ವಾಸವಾಗುವವಳು ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಅವಳು ಇನ್ನೂ ಸಣ್ಣವಳು. ಇಡೀ ಜೀವನದಲ್ಲಿ ಗಂಡಿನ ಸಹವಾಸವಿಲ್ಲದೆ ಹಾದರದ ಯಾವ ಘಟ್ಟಕ್ಕೆ ಹೋಗಿ ಮುಟ್ಟುತ್ತಾಳೆ ಎಂಬ ಸಂಬಂಧಿಕರ ಕುಶಂಕೆ ತಾಯಿ ತಂದೆಯರ ಕಾಳಜಿಯೂ ಆಯಿತು. ಗಂಡನ ಹೆಸರೊಂದೇ ಇಡೀ ಜೀವನ ಸಾಗಿಸಲಿಕ್ಕೆ ಸಾಕು ಎಂದು ಪತಿವ್ರತೆಯರ ಯಾವುದೋ ಕಾಲದ ಮಾತನ್ನು ಅದರ ಅರ್ಥ ಅರಿಯದೆ ದೃಢ ನಿರ್ಧಾರದಿಂದ ಹೇಳಿ ಬಿಟ್ಟಳು. ಅವಳ ಹಟಕ್ಕೆ ತಾಯಿ ತಂದೆಗಳು ಅನಿವಾರ್ಯವಾಗಿ ಹೂಂ ಎನ್ನಲೇಬೇಕಾಯಿತು. ಊರಿಗೇ ತಂದೆಯಂತಿರುವ ಬಸವಂತಪ್ಪಗೌಡರ ಹತ್ತಿರ ಅವಳ ತಾಯಿ ತಂದೆ ಆಕೆಯನ್ನು ಕರೆದುಕೊಂಡು ಹೋಗಿ ‘ಈ ಪರದೇಸಿ ಮಗಳನ್ನು ನಿಮ್ಮ ಉಡಿಯಾಗ ಹಾಕಿವ್ರಿ. ಇನ್ನ ಮುಂದ ಎಲ್ಲಾ ನಿಮ್ಮನ್ನ ಕೂಡೈತ್ರಿಯಪ್ಪಾ’ ಅಂದರು. ಎಲ್ಲ ವಿಷಯ ಗೊತ್ತಿದ್ದ ಗೌಡರು ಹುಡುಗಿಯ ದೃಢ ನಿರ್ಧಾರ ನೋಡಿ ಅವರಿಗೆ ಏನೂ ಕಾಳಜಿ ಮಾಡಬಾರದಾಗಿ ಅಭಯವಿತ್ತರು. ಹೀಗೆ- ಚಿಕ್ಕ ಮಠದವರ ಸಂಗಿ ಹಿರೇ ಮಠದವರ ಸಂಗವ್ವ ಆಗಿ- ಆಕೆ ಗಂಡನ ಮನೆ ಸೇರಿದಳು. ಇಷ್ಟಾಗುವ ಹೊತ್ತಿಗೆ ಮತ್ತೆರಡು ವರ್ಷ ಗತಿಸಿದವು. ಹದಿನಾರು ವರ್ಷದ ಪ್ರಾಯ, ಕವಿಗಳು ವರ್ಣಿಸುವಂತಹ ರೂಪ, ಒಂಟಿ ಹೆಣ್ಣು, ಊರೆಲ್ಲ ಚಿತ್ತಿ ಮಳೆಗೆ ನಾಯಿ ಬೆದೆಗೆ ಬಂದ ಹಾಗಾಗಿತ್ತು. ಅವಳ ಚಲನ ವಲನ ಕಂಡು ಊರಿನ ಗಂಡು ಕಣ್ಣುಗಳೆದುರಿಗೆ ಉಲ್ಕೆಯ ಕಿಡಿ ಉದುರಿದಂತಾಗಿತ್ತು. ಊರ ಉಡಾಳರ ಬಾಯಲ್ಲಿ ಆಕೆ ಹಾಡು ಕೂಡ ಆಗಿಬಿಟ್ಟಳು.
ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ
ಕೆಂಪು ಚೋಳಿನ ನಿಗರಿದ ಕೊಂಡಿ
ಹಿರೇಮಠದವರ ಸಂಗಿ
ಅಮಾಸಿ ಕತ್ತಲ್ದಾಗ ಹೊಡದರ ಎತ್ತಿ
ಬಸವಣ್ಣನ ತೇರ ಊರತೈತಿ ಡೊಗ್ಗಾಲ್ಮಂಡಿ
ಆದರೂ ಇದರ ಕಾವು ಎಲ್ಲಿಯೂ ತಟ್ಟದಂತೆ ತಾನು ದೊಡ್ಡ ಸಂಪತ್ತಿನ ಮನೆಯ ಒಡತಿಯಾಗಬೇಕು, ಇಡೀ ಹಳ್ಳಿ ತನಗೆ ಬಾಗಬೇಕು ಎಂಬ ಅವಳ ಹಂಬಲ ಅವಳ ಹರಿಯುವ ಶರೀರವನ್ನು ಹೆಪ್ಪುಗಟ್ಟಿಸಿತು. ಆಕೆಯ ಮನಸ್ಸು ಲೆಕ್ಕದ ಯಂತ್ರವಾಗಿ ಎಲ್ಲವನ್ನೂ ಮರೆಯಿಸಿತು. ಗೌಡರ ದೃಷ್ಟಿಯ ಕಾವಲು ಅವಳನ್ನು ಯಾರೂ ಸಮೀಪಿಸದಂತೆ ತಡೆಯುವ ಶಸ್ತ್ರವಾಯಿತು.
ಹೊಲದ ಉತ್ಪನ್ನದಲ್ಲಿ ಹೊಟ್ಟೆಗೆ ಬಟ್ಟೆಗೆ ಆಗಿ ಸಾಕಷ್ಟು ಉಳಿಯುತ್ತಿತ್ತು. ಅದು ತನ್ನಿಂದ ತಾನೇ ಬೆಳೆದು ಎರಡರಷ್ಟು ಆಗಬೇಕಾದರೆ ಅದನ್ನು ಬಡ್ಡಿಯಂತೆ ಕೊಡಬೇಕು ಎಂಬುದನ್ನು ಅರಿತಿದ್ದಳು. ತನ್ನ ತಾಯಿ ತಂದೆ ಮಾಡಿದ ಸ್ವಲ್ಪ ಸಾಲಕ್ಕೆ ಬಡ್ಡಿ ಬೆಳೆದು ಅದು ಮತ್ತೆ ಅಸಲಿಗೆ ಜಮಾಆಗಿ ಅದಕ್ಕೆ ಮತ್ತೆ ಬಡ್ಡಿ ಬೆಳೆದು ತಮ್ಮ ಹೊಲವೆ ಹೋಗಿ ಅನ್ನಾನ್ನದೆಸೆಗೆ ಪಿರಿ ಆದುದು ಅವಳಿಗೆ ನೆನಪಿದೆ. ಸಾಲ ಕೊಟ್ಟವರ ಧಿಮಾಕೂ ಗೊತ್ತು. ಅವರ ಚೂರು ದಯೆಗಾಗಿ ಎಂತೆಂಥವರೂ ಸುಂಬಳ ಬಸಪ್ಪರಾಗುತ್ತಾರೆ ಎಂಬುದನ್ನೂ ನೋಡಿದ್ದಳು. ಬಸವಂತಪ್ಪಗೌಡರ ಹತ್ತಿರ ಹೋಗಿ ಸವಿಸ್ತಾರವಾಗಿ ಎಲ್ಲವನ್ನೂ ಹೇಳದೆ ಇಷ್ಟೇ ಹೇಳಿದಳು: “ಅಪ್ಪಾವರ, ನನ್ನ ಕಡೆ ಒಂದಿಷ್ಟ ರೊಕ್ಕ ಐತಿರಿ. ಅದನ್ನ ಮನ್ಯಾಗ ಇಟ್ಟರೆ ಏನ ಮಾಡೂದ್ರಿ. ನಾನೂ ಒಬ್ಬಂಟಿ ಹೆಣ್ಣು. ಯಾರಿಗರ ಅಡಚಣೆ ಇದ್ದರ ಬಡ್ಡಿ ಹಾಂಗ ಕೊಟ್ಟಬಿಡ್ರಿ, ಇಲ್ಲಿದ್ದರ ನೀವ ಇಟ್ಟಕೋರಿ.” ಗೌಡರು ಅವಳ ಮಹತ್ವಾಕಾಂಕ್ಷೆಯನ್ನರಿಯದೆ ಅವಳ ಜಾಣತನವನ್ನು ಬಾಳ್ವೆಯ ಮೇಲೆ ಇರುವ ಹಿಡಿತವನ್ನು ಬಹಳಷ್ಟು ಪ್ರಶಂಸಿಸಿದರು.
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
ತಾವೇ ಜಾಮೀನಾಗಿ ಅವರಿವರಿಗೆ ಆ ಹಣವನ್ನು ಕೊಟ್ಟರು. ತಾವೇ ತಿಂಗಳಿಗೊಮ್ಮೆ ಬಡ್ಡಿ ವಸೂಲ ಮಾಡಿ ಕೊಟ್ಟರು. ವರ್ಷದ ಗಿರಾಕಿಗಳನ್ನು ವರ್ಷದಂತ್ಯದಲ್ಲಿ ಬಡ್ಡಿಗಂಟಿಗಾಗಿ ಅಂಜಿಕೆ ಹಚ್ಚಿ, ಆ ಈ ರಿಕ್ಕು ಹಾಕಿ ವಸೂಲಿ ಮಾಡಿದರು. ಕೊಡಲಾಗದವರ ಮನೆಯನ್ನೊ ಹೊಲವನ್ನೊ ಅವಳ ಹೆಸರಿಗೆ ಬರೆಸಿಯೂ ಕೊಟ್ಟರು. ಐದಾರು ವರ್ಷದಲ್ಲಿ ಸಂಗವ್ವ ಒಳ್ಳೆಯ ಆಸಾಮಿ ಆದಳು. ಹೊಸ ಎರಡು ಮಜಲಿನ ಮನಿ ಕಟ್ಟಿಸಿದಳು. ಗಂಡನ ಹನ್ನೆರಡೆಕರೆ ಭೂಮಿಗೆ ಮತ್ತೆ ಇಪ್ಪತ್ತೆಕರೆ ಸೇರಿಸಿದಳು. ಗೌಡರು ಒಮ್ಮೊಮ್ಮೆ ನಗಚಾರಕಿಲೆ ಕೇಳುತ್ತಿದ್ದರು. “ಸುಖದ ಜೀವಕ್ಕೆ ಇಷ್ಟೆಲ್ಲ ಎಮ್ಮಿ ಹೈನ ಎದಕ್ಕೆ ಬೇಕು ಸಂಗವ್ವ? ಇಷ್ಟೆಲ್ಲ ತ್ರಾಸ ತೊಗೊಂಡ ಇದನ್ನೆಲ್ಲ ಯಾರಿಗಿ ಮಾಡಾಕಿ? ತಿಂದುಂಡ ಸುಮ್ಮನ ಸುಖದಾಗ ಇರಬಾರದ?” ಇದಕ್ಕೆ ಅವಳ ಉತ್ತರ ಸೋಜಿಗದ್ದಾಗಿರುತ್ತಿತ್ತು. “ಹಾಂಗ ಹೀಂಗ ಕೆಟ್ಟ ಹೋಗುವದಕಿಂತ ಈ ಜಂಜಾಟ ಬೇಸಿ ಅನಸ್ತೈತಿ. ಇಷ್ಟೆಲ್ಲ ಗದ್ದಲ ಮಾಡ್ತೀನಿ ಅಂತ ದಿನಾ ನಿಮಗೆ ಭೆಟ್ಟಿ ಆಗ್ತೀನಿ. ಇಲ್ಲಿದ್ದರ ಒಂಟಿಜೀವ ಎಂದೊ ಗಾಳಿಗರಾ ಆಗಿ ಗುಡ್ಡಾ ಬೀಳತಿದ್ನಿ.” ಈ ಮಾತು ಕೇಳಿ ಗೌಡರಿಗೆ ತಮ್ಮ ಗಂಡಸ್ತನದ ನಂದಿಕೋಲು ಇನ್ನಷ್ಟು ಎತ್ತರಕ್ಕೆ ಬೆಳೆದು ಸುಖಾ ಅನಿಸ್ತಿತ್ತು.
ಈ ಮಧ್ಯೆ ಅವಳಿಗೊಂದು ವ್ಯಾಧಿ ಅಂಟಿಕೊಂಡಿತು. ಮಲಬದ್ಧತೆ. ಎರಡು ಮೂರು ದಿನಾ ಸುಸ್ತಾಗಿ, ಸುಂದಾಗಿ ಮಲಗಿ ಬಿಡುತ್ತಿದ್ದಳು. ಇದೇ ಕಾರಣಕ್ಕಾಗಿ ಸೇಡಜಿಯವರ ಗುರುತಾಯಿತು. ಹಳ್ಳಿಗೆಲ್ಲ ಸೇಡಜಿಯವರೆಂದೇ ಪರಿಚಿತರಾದ ಅವರ ಹೆಸರು ನಾನಾಚಂದ ಅಂತ, ವಯಸ್ಸು ಐವತ್ತರ ಸಮೀಪ, ಗೌಡರನ್ನು, ಶಾನುಭೋಗರನ್ನು ಬಿಟ್ಟರೆ ಅವರೇ ಅಷ್ಟು ವಿದ್ಯಾವಂತರು. ಒಂಟಿ ಜೀವ, ಹೆಂಡತಿ ತೀರಿಕೊಂಡು ವರ್ಷಗಳೇ ಆಗಿದ್ದುವು. ಯಾವ ಪುತ್ರ ಸಂತಾನ ಅವರ ಸಂಬಂಧದಲ್ಲಿ ಫಲಿಸಿರಲಿಲ್ಲ. ಮೂರು ತಲೆಮಾರಿನ ಹಿಂದೆ ಹಳ್ಳಿಗೆ ಬಂದು ನೆಲಸಿದ್ದ ಅವರ ಮನೆತನಕ್ಕೆ ಈಗ ಅವರೊಬ್ಬರೆ ವಾರಸುದಾರರು. ಅವರದೂ ಪೂರ್ವಾಪರದಿಂದ ಬಂದ ಉದ್ಯೋಗ ಬಡ್ಡಿ ವ್ಯವಹಾರವೆ. ನೆವಕ್ಕೆ ಒಂದು ಅರಿವಿ ಅಂಗಡಿಯೂ ಇತ್ತು. ಈ ಬಡಹಳ್ಳಿಯಲ್ಲಿ ಅರಿವಿ ವ್ಯಾಪಾರವೆಂದರೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಅದರಲ್ಲಿಯೂ ಅರ್ಧ ಉದ್ರಿ. ಹೀಗಾಗಿ ಮುಖ್ಯ ವ್ಯವಹಾರ ಬಡ್ಡಿಯದೆ. ಇವರ ಹಿರಿಯರು ಜಾಣರು. ಬಡ್ಡಿ ವ್ಯವಹಾರ ಪ್ರಾಪ್ತಿಯದು. ದೇಶ ಬಿಟ್ಟು ಇಷ್ಟು ದೂರ ಬಂದು ಇಂಥ ಹಳ್ಳಿಯಲ್ಲಿ ಬೇರೂರಬೇಕಾದರೆ, ಸಮಾಜದಿಂದ ಬರೀ ತೆಗೆದುಕೊಂಡರೆ ಸಾಲದು. ಪ್ರತಿಯಾಗಿ ಏನಾದರೂ ಕೊಡಬೇಕು ಅಂತ ಪುಕ್ಕಟೆ ವೈದ್ಯಕೀಯ ನಡೆಸಿದ್ದರು. ಅದನ್ನು ನಾನಾಚಂದರೂ ಮುಂದುವರಿಸಿದ್ದರು. ರೊಕ್ಕ ತೆಗೆದುಕೊಳ್ಳದೆ ಆಯುರ್ವೇದ ಪದ್ಧತಿಯ ಔಷಧಿಯಿಂದ ಸಣ್ಣಪುಟ್ಟ ವ್ಯಾಧಿಗಳನ್ನು ಗುಣಪಡಿಸುತ್ತಿದ್ದರು. ಇಲ್ಲವಾದರೆ ಹದಿನಾರು ಮೈಲು ದೂರವಿರುವ ಪೇಟೆಗೆ ಹೋಗಬೇಕಾಗುತ್ತಿತ್ತು. ಸಂಗವ್ವನ ಮಲಬದ್ಧತೆಗೆ ಸೇಡಜಿಯವರ ಜುಲಾಬಿನ ಗುಳಿಗೆಗಳು ಎಷ್ಟೋ ವಾಸಿ ಎನಿಸಿದವು. ವಾರಕ್ಕೊಮ್ಮೆ ಸಂಗವ್ವನ ಮನೆಗೆ ಸೇಡಜಿಯವರ ಸವಾರಿ ಇದ್ದದ್ದೆ. ಪರಿಚಯ ಬೆಳೆದಂತೆ ವ್ಯವಹಾರವೂ ಸೇರಿಕೊಂಡಿತು. ಆಗೀಗ ವ್ಯವಹಾರಕ್ಕಾಗಿ ಕೊಟ್ಟು ತೊಗೊಳ್ಳೋದು ಸುರುವಾಯ್ತು, ವಾರಕ್ಕೊಮ್ಮೆ ಜುಲಾಬ ಕೊಡುವಷ್ಟು ಸುಖ ಅವರಿಗೆ ವ್ಯವಹಾರದಲ್ಲಿ ಮಾತ್ರ ಇರಲಿಲ್ಲ. ಯಾವುದೋ ಋಣ ಹರಿದಷ್ಟು ಹಗುರವಾಗುತ್ತಿತ್ತು. ಯಾವ ರಸಸಂಚಾರದಿಂದಲೋ ಹೂ ಅರಳಿದಂತೆ ಇದೆಲ್ಲದರ ಪರಿಣಾಮ ಅವರಿಬ್ಬರ ಸಂಬಂಧದಲ್ಲಿ ಮಾರ್ಪಾಟಾಯಿತು. ವಿಚಿತ್ರವಾದ ಸಂಬಂಧ ಮೊದಮೊದಲು ಮೈಯಲ್ಲೆಲ್ಲಾ ಅನಿಸಿದ್ದು, ಅರಿವಿಗೆ ಮೂಡಿದ್ದು ಕಣ್ಣಿನಲ್ಲಿ ಉಕ್ಕಿಬಂದು ದೃಷ್ಟಿ ದೃಷ್ಟಿ ಕೂಡಿದಾಗ ತಿಳಿಯದ ಏನೇನೊ ಹೇಳುವ ತುಡುಗು ಸಂಕೇತಗಳ ಸರಪಳಿ ಅವರನ್ನ ಬಿಗಿಯುತ್ತಾ ಹೋಯಿತು. ಆಮೇಲೆ ಒಂದು ದಿನ ಸೇಡಜಿಯವರೇ ಹೆಜ್ಜೆ ಮುಂದಿಟ್ಟರು. ಆ ದಿನ ಒಂದು ದೊಡ್ಡದಾದ ನಿಲುವುಗನ್ನಡಿ ಅವಳ ಮನೆಗೆ ತಂದರು. ”ಇಷ್ಟು ದೊಡ್ಡ ಕನ್ನಡಿ ಯಾಕ ತಂದಿರಿ ಸೇಡಜಿಯವರ” ಎಂದು ಆಕೆ ಕೇಳಿದಳು. “ನೀನೆಂಥ ಒಜ್ಜೆ ಹೊತಗೊಂಡಿದಿ ಎಂಬುದನ್ನ ತೋರಸಾಕ” ಎನ್ನುತ್ತ ಅವರು ಆಕೆಯನ್ನು ಕನ್ನಡಿಯ ಮುಂದೆ ನಿಲ್ಲಿಸಿದರು. ಈವರೆಗೆ ಅವಳು ತನ್ನನ್ನು ಇಡಿಯಾಗಿ ನೋಡಿಕೊಂಡಿರಲೇ ಇಲ್ಲ. ತಲೆಬಾಚುವಾಗ ಕನ್ನಡಿಪೆಟ್ಟಿಗೆಯಲ್ಲಿನ ಸಣ್ಣಕನ್ನಡಿಯಲ್ಲಿ ತನ್ನ ಮುಖವನ್ನಷ್ಟೆ ನೋಡಿದ್ದಳು. ಸಂಪೂರ್ಣವಾಗಿ ಪ್ರತಿರೂಪದಲ್ಲಿ ನೋಡಿಕೊಂಡಾಗ ಕ್ಷಣಹೊತ್ತು ತನಗೇ ತನ್ನ ಗುರುತು ಹತ್ತಲಿಲ್ಲ. ಇಡೀ ಮೈಯಲ್ಲೆಲ್ಲ ಮಿಡಿನಾಗರ ಪೊರೆ ಬಿಟ್ಟ ಹಾಗಾಯಿತು. ಎಂಥ ಭಾರ ಹೊತ್ತಿದ್ದು ತಾನು! ಎದೆ ಮೇಲಿನ ಸೆರಗು ನೆಲಕ್ಕೆ ಬಿತ್ತು. ಕೇವಲ ಸೇಡಜಿಯವರ ಧ್ವನಿಯ ಮೂಲಕ ಅವರ ಮಾತುಗಳು ಎಂತೆಂಥ ದಾಗೀನುಗಳಾಗಿ ಮೈಯಲ್ಲೆಲ್ಲ ಮೂಡತೊಡಗಿದಂತಾಯಿತು. “ದೊಡ್ಡ ಮನೆತನದವರಿಗೆ ಅದೆಂಥ ಶಾಪೋ ಏನೋ? ಪ್ರತಿಯೊಬ್ಬರೂ ಒಂದು ಒಜ್ಜೆ ಹೊತ್ತು ಇರತಾರ. ಅವರ ಕರ್ಮನೂ ಅನಬಹುದು ಅದಕ. ಕೆಲವರು ತಿಳದ ಹೊತ್ತಿರತಾರ. ಇನ್ನ ಕೆಲವರು ತಿಳೀದ ಹೊತ್ತ ಒಜ್ಜೆ ಭಾಳ ಕೆಟ್ಟ. ತೊಡಕುಗಾಲು ಹಾಕಿ ಬಕ್ಕಬರಲೆ ಕೆಡವತೈತಿ. ಒಬ್ಬರಿಗೊಬ್ಬರು ತಿಳಿದು ಹಂಚಿಕೊಂಡರ ಇಬ್ಬರಿಗೂ ಹಗುರ ಆಗತದ. ಈಗ ನಿನಗೆ ರೂಪದ ಭಾರ. ಹೆಣ್ಣಿನ ರೂಪ ನೋಡಿ, ಆ ರೂಪದ ಜೋಡಿ ಸಂಬಂಧ ಕಟ್ಟಿಕೊಳ್ಳಾಗ ಅಂಥ ಕಣ್ಣುಬೇಕು. ಅದಕ ಆತ್ಮದ ಬೆಳಕು ಬೇಕು. ಆತ್ಮದ ಬೆಳಕಿನಾಗ ಪ್ರಕೃತಿ ನೋಡೋದು ಕಲಿತಿರಬೇಕು. ನಮ್ಮ ಹಳ್ಳಿ ಮಂದಿಗೆ ಇದೆಲ್ಲ ತಿಳಿಯೂದಿಲ್ಲ. ಹೆಣ್ಣು ಗಂಡಿನ ಸಂಬಂಧ ಅಂದರ ಅವರಿಗೆ ಬರೇ ಕತ್ತಲಾಗಿನ ವ್ಯವಹಾರ. ದೀಪ ಆರಿಸಿದ ಮ್ಯಾಲೆ ಯಾವ ರೂಪ, ಯಾವ ದೀಪ, ಅಲ್ಲಿ ಬರೇ ಎರಡು ಪಶು ಉಳೀತಾವ.”
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಗರ್ಭಗುಡಿಯಲ್ಲಿ ನಂದಾದೀಪ ಬೆಳಗಿತು. ಆ ಬೆಳಕಿನಲ್ಲಿ ಸಂಗವ್ವ ಬತ್ತಲೆಯಾದಳು. ತನ್ನನ್ನು ನೋಡಬೇಕು… ನೋಡಬೇಕು… ತನ್ನ ಕಣ್ಣಿಂದ, ಸೇಡಜಿಯವರ ಕಣ್ಣಿಂದ. ಅವರ ಮಾತಿನ ಕನ್ನಡಿಯೊಳಗ. ಸಂಗವ್ವನಿಗೆ ಕನವರಿಕೆ ಸುರುವಾಯಿತು…
ಸೇಡಜಿಯವರ ಪ್ರಕೃತಿ ಭಾಳ ಸೂಕ್ಷ್ಮ. ಮಹಾವೀರನ ಮೇಲೆ ಇದ್ದಂತೇ ಗಾಂಧೀಜಿ ಮೇಲೂ ಅಪಾರ ವಿಶ್ವಾಸ ಅವರಿಗೆ. ಜಗಳ ಬಡಿದಾಟ ದೂರವೇ ಉಳಿಯಿತು. ಬಿರಿಸು ಮಾತೂ ಕೂಡ ಹಿಂಸೆ ಅವರಿಗೆ. ನೋವಿನಲ್ಲಿ ಆತ್ಮಹಿಗ್ಗುತ್ತಿತ್ತು. ಸುಖ ಅಂದರೆ ಹಿಂಸೆಯ ಒಂದು ರೂಪ ಎಂದು ಬಗೆಯುತ್ತಿದ್ದರು. ಆದರೆ ಗಾಂಧೀಜಿಯ ಆಸ್ತಿಯ ಬಗೆಗಿನ, ವಸ್ತ್ರ ಒಡವೆಗಳ ಬಗೆಗಿನ ಧೋರಣೆ ಹಿಡಿಸುತ್ತಿರಲಿಲ್ಲ. ಮನುಷ್ಯನಿಗೆ ಬೇಕಾದ ಆತ್ಮೋನ್ನತಿ ಆಗಬೇಕಾದರೆ ಅದಕ್ಕೆ ಅನುಗುಣವಾದ ಸಂಸ್ಕೃತಿ ಇರಬೇಕು. ಅದು ಸಂಪತ್ತಿಲ್ಲದೆ ಸಾಧ್ಯವಿಲ್ಲ. ದಿನಾಲು ದುಡಿಯುವುದು, ತಿನ್ನುವುದು, ಕೂಡುವುದು, ಮಕ್ಕಳು ಮರಿ ಹುಟ್ಟಿಸುವುದು, ಒಂದು ದಿನ ಸತ್ತುಹೋಗುವುದು. ಗಾಣದೆತ್ತಿನ ಗುದ್ದಾಟವಾಗಬೇಕಾದರೆ ಸಂಪತ್ತು ಬೇಕೇಬೇಕು. ಇದು ಅವರ ನಿಲುವು. ಮನುಷ್ಯನ ಸಂಬಂಧದಲ್ಲಿ ಹಿತಮಿತವಾದ ನಿಸರ್ಗ ಅವರಿಗೆ ಹಿಡಿಸುತ್ತಿತ್ತು. ಅವರಿಗೆ ಕಾಡಿನ ಬಗ್ಗೆ ಅಂಜಿಕೆ. ಶರೀರದ ಬಗೆಗೂ ಅಷ್ಟೆ. ಅದೊಂದು ಏನೂ ಉಳಿಸದ ಹಿಂಸ್ರ ಪಶು. ಯಾವಾಗ ಯಾವ ರೀತಿ ದಾಳಿ ಮಾಡಿ ಏನನ್ನು ನಾಶ ಮಾಡೀತೊ ಹೇಳಲು ಬರುವಂತಿಲ್ಲ. ಆದರೆ ಆತ್ಮದ ಸೂತ್ರದಲ್ಲಿ ಬದ್ಧವಾದ ಶರೀರ ದೈವೀವಾದದಂತೆ. ಇವೆಲ್ಲ ಅವರ ವಿಚಾರಗಳು.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಆದ್ದರಿಂದಲೇ ಸಂಗವ್ವನ ಅಂಗಳದಲ್ಲಿನ ಅದೇ ಹೂ ಬಿಟ್ಟ ಕರೀ ಮದುಗುಣಕಿ ಗಿಡ ಪೆಟ್ಟು ಹತ್ತಿ ರಕ್ತ ಮಂಜುಗಟ್ಟಿದ ಹಾಗೆ ಕಾಣಿಸಿತು. ಆಕೆಯನ್ನು ಕರೆದು ಹೇಳಿದರು: ”ಇಂಥ ಗಿಡಾ ಅಂಗಳದಾಗ ಇರಬಾರದ ನೋಡ. ಇದರ ಹೂ ಮೂಸಿ ನೋಡಿದರ ಮನಸ್ಯಾಗ ಹುಚ್ಚ ಹಿಡಿತೈತಿ. ಪ್ರಕೃತಿ ಅಂದರ ಹೇಳಿ ಕೇಳಿ ಮಾಯ. ಹಾಂವಿನ ಹಲ್ಲಿನಾಗ ವಿಷ ಆಗ್ತದ, ಚಿಗರಿ ಹೊಕ್ಕಳದಾಗ ಕಸ್ತೂರಿ ಆಕ್ತೈತಿ. ಅರಿವಿನ ಬೆಳಕಿನಾಗ ಯಾವುದು ಹ್ಯಾಂಗ ಅಂತ ತಿಳಕೊಂಡ ಬದುಕಬೇಕು. ನಮ್ಮ ಜನರಿಗೆ ಕತ್ತಲದಾಗಿನ ವ್ಯವಹಾರಷ್ಟ ಗೊತ್ತ. ಆದರ ನಾನು ನೀನು ಬೆಳಕಿನಾಗ ನಡ್ಯಾಕಬೇಕು.” ಅದೇ ದಿನ ಅಂಗಳದಲ್ಲಿನ ಆ ಗಿಡ ಕಿತ್ತು ಗುಲಾಬಿ ಕಂಟೆಯೊಂದನ್ನು ತಂದು ನೆಟ್ಟರು. ಅದೂ ಹೂ ಬಿಡತೊಡಗಿತು. ಒಂದೇ ಅಂದರೆ ಒಂದೇ ಹೂವನ್ನು ಪ್ರತಿದಿನ ಹರಿದು ದೇವರಿಗೆ ಏರಿಸುವಷ್ಟು ಭಕ್ತಿಯಿಂದ ಅವಳ ತಲೆಗೆ ಮುಡಿಸುತ್ತಿದ್ದರು. ಮರುದಿವಸ ಬಾಡಿದ ಹೂ ಕೈಯಲ್ಲಿ ಹಿಡಿದು ಎಷ್ಟೋ ಹೊತ್ತು ಮೌನವಾಗಿ ಕೂಡುತ್ತಿದ್ದರು. ಸಂಗವ್ವನಿಗೆ ಒಂದು ಥರಾ ಕಸಿವಿಸಿ. ಅವಳ ಮುಖ ನೋಡಿ ಹೇಳುತ್ತಿದ್ದರು: “ಮನಸ್ಯಾನ ಆತ್ಮಾ ಹಿಂಗೆ ಬಾಡೂದಿಲ್ಲ… ಆದರೂ ಬಾಡೂ ಅಂಥ ಸೂಕ್ಷ್ಮವಸ್ತುಗಳ ಜೊತೆ ಆತ್ಮದ ವಿಶೇಷವಾದ ಒಂದು ಸಂಬಂಧ ಇದ್ದೇ ಇರತೈತಿ. ಶರೀರನು ಒಂದಿನಾ ಬಾಡಿ ಹೋಗೂದ. ಆತ್ಮದ ಜೋಡಿ ಸಂಬಂಧ ಇರೂವರೆಗೆ ಬಿಲ್ಲಿನಾಗ ಬಾಣ ಇದ್ದಾಂಗ, ಬಾಣ ಇರೂ ಮಟಾ ಬಿಲ್ಲಿಗೆ ಎಷ್ಟು ಬಿಗಿ, ಆತ್ಮಕ್ಕನೂ ಹಂಗ. ಈ ಬಿಗಿ ಇರೂಮಟ ಎಲ್ಲಾನೂ ಒದಗಿಧಂಗ ಅನಸತೈತಿ.”
ಹೀಗೇನೆ ಬಿಗಿಯಲ್ಲಿ ಬಿಕ್ಕೊಂಡೇನೆ ಹೋದರು. ಆ ದಿನ ಹೋಳಿ ಹುಣ್ಣವಿ. ಮರುದಿವಸ ಕಾಮಣ್ಣನಿಗೆ ಬೆಂಕಿ ಹಚ್ಚುವುದು. ಆದರೂ ಇನ್ನೂ ಹುಡುಗರ ಕಟ್ಟಿಗೆ ಕೂಡಿಸುವ ಉತ್ಸಾಹ ಮುಗಿದಿಲ್ಲ. ಸೇಡಜಿಯವರ ಹಿತ್ತಲಿನಲ್ಲಿ ರೈತರ ರಂಗಪ್ಪನ ಮುರುಕ ಬಂಡಿ ಇತ್ತು. ಅವನಿಗೆ ಮುಂದ ಅಂಗಳಾನೂ ಇಲ್ಲ. ಹಿಂದೆ ಹಿತ್ತಲನೂ ಇಲ್ಲ. ಆದಕಾರಣ ಸೇಡಜಿಯವರ ಹಿತ್ತಲಿನಲ್ಲಿಯೆ ಬಂಡಿ ಬಿಡುತ್ತಿದ್ದ. ಊರ ಹುಡುಗರಿಗೆ ಅದೊಂದು ಬಂಡಿಯನ್ನು ಹೊತ್ತರೆ ಕಾಮಣ್ಣನಿಗೆ ಸಾಕಷ್ಟು ಕಟ್ಟಿಗೆ. ಮತ್ತೆ ಊರ ಜೊತೆ ಯಾವುದರಲ್ಲಿಯೂ ಸಹಕರಿಸದೆ ತನ್ನಷ್ಟಕ್ಕೆ ತಾನೇ ಇರುತ್ತಿದ್ದ ರಂಗಪ್ಪನಿಗೆ ಬುದ್ದಿಯನ್ನೂ ಕಲಿಸಿದ ಹಾಗೆ ಆಯಿತು ಅನ್ನುವ ವಿಚಾರ ಅವರದು. ಆ ರಾತ್ರಿ ದಾಳಿ ಮಾಡಿಯೇ ಬಿಟ್ಟರು. ಒಂದೇ ಹೆಣಕ್ಕೆ ಹದ್ದಿನ ಹಿಂಡೇ ಮುಗಿಬಿದ್ದಂತೆ. ನಡುವಿನಿಂದ ಮೇಲಕ್ಕೆ ಹರಯ ಉಕ್ಕಿದ ಹುಡುಗರು ಕಳಗ ಕಿತ್ತರು. ಇನ್ನಷ್ಟು ಮಂದಿ ಗಾಲಿ ನುಗ್ಗು ಮಾಡಿದರು. ಇದನ್ನೆಲ್ಲ ಹಿತ್ತಲ ಕಡೆಯ ಕಿಟಕಿಯಿಂದ ನೋಡಿದ ಸೇಡಜಿಯವರಿಗೆ ಇದೆಲ್ಲ ಹಿಂಸೆಯ ಮತ್ತೊಂದು ರೂಪ ಎನಿಸಿ ಮೈಯಲ್ಲಾ ಝುಂ ಅಂತು. ಯಾವುದೊ ದೊಡ್ಡ ಬೇನೆಯಿಂದ ಬಳಲಿ ಬಳಲಿ ಸಮಾಧಾನದಿಂದ ಕೊನೆಗೊಮ್ಮೆ ಸಾವನ್ನಪ್ಪುವಾಗ ಮತ್ತೆ ಜೀವಿಸಬೇಕೆಂಬ ಆಸೆ ಹುಟ್ಟಿದ ಹಾಗೆ ವಿಚಿತ್ರ ಸಂಕಟ. ಕಣ್ಣುಮುಚ್ಚಿ ದೀರ್ಘವಾಗಿ ಉಸಿರೆಳೆದು ಒಳಗೆ ಹೋದರು. ತಿಜೋರಿಯನ್ನು ತೆರೆದು ದಾಗೀನಿನ ಪೆಟ್ಟಿಗೆ ತೆಗೆದುಕೊಂಡು ಸಪ್ಪಳಾಗದಂತೆ ಬಾಗಿಲು ಭದ್ರಪಡಿಸಿ ಸಂಗವ್ವನ ಮನೆಯ ಕಡೆ ನಡೆದರು.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಸಂಗವ್ವನ ಬೆತ್ತಲೆ ದೇಹದ ಮೇಲೆ ದಾಗೀನುಗಳೆಲ್ಲ ಹೊಸ ಇಂದ್ರಿಯಗಳಾಗಿ ಒಮ್ಮೆಲೆ ಆಗುವ ದಾಳಿಗೆ ತಮ್ಮನ್ನು ಪೂರ್ತಿಯಾಗಿ ಒಡ್ಡಿಕೊಳ್ಳಬೇಕೆನಿಸಿತವರಿಗೆ. ಸೊಂಟದ ಆಳದಲ್ಲಿ ಬಿಸಿ ಸೆಲೆ ಒಡೆದಂತಾಗಿ ಅದು ಮೇಲಕ್ಕೆ ಕೆಳಕ್ಕೆ ಒಮ್ಮೆಲೆ ಹಬ್ಬತೊಡಗಿತು. ಆದರೆ ಏನು ತಡೆಯೊ ಏನೊ, ಮುಕ್ತವಾಗಿ ಹರಿಯಲಿಲ್ಲ. ಒತ್ತಡ ಮಾತ್ರ ಹೆಚ್ಚುತ್ತ ಹೋಯಿತು. ತಡೆಯಲಾರದೆ ಸಂಗವ್ವನನ್ನು ಅಪ್ಪಿದರು. ಅವಳಿಗೆ ಮೊದಲಿಗೆ ಭಯ… ಕನ್ನಡಿಯಲ್ಲಿನ ತನ್ನ ಪ್ರತಿಮೆ ಎಲ್ಲಿ ಒಡೆದು ಹೋಗುವುದೊ ಎಂದು. ಆದರೆ ಮರುಕ್ಷಣದಲ್ಲಿ ಇಷ್ಟು ವರ್ಷ ಹೆಪ್ಪುಗಟ್ಟಿದ್ದೆಲ್ಲ ಕರಗಿ ಹೋಗಲಿ ಎಂಬ ಆಳದಲ್ಲಿ ಹುದುಗಿದ ಆದಿಮ ಇಚ್ಛೆ. ಸೇಡಜಿಯವರ ಬಿಗಿ ಒಡೆಯಿತು. ಎಲ್ಲವೂ ಸಡಿಲವಾಯಿತು. ವಿಷ್ಠಾಪ್ರವಾಹ ಕೆಳಕ್ಕೆ ಹರಿಯಿತು. ಅವರು ತಣ್ಣಗಾದರು.
ಸಂಗವ್ವನ ಒಡಲಿಗೆ ಕಲ್ಲು ಬೀಸಿದಂತಾಯಿತು. ಕ್ಷಣಮಾತ್ರ ದಿಗಿಲು ಪಟ್ಟರೂ ಆಗಿಂದಾಗಲೆ ಸಂಗವ್ವ ಮೂಲದ ಸಂಗವ್ವಳಾದಳು. ಆಕೆಯ ಮನಸ್ಸು ಕೆಲಸ ಮಾಡತೊಡಗಿತು. ಏನು ಆಗಿದೆ, ತಾನು ಈಗೇನು ಮಾಡಬೇಕೆಂದು. ಮೊದಲು ಎಲ್ಲ ದಾಗೀನುಗಳನ್ನು ತನ್ನ ಟ್ರಂಕಿನಲ್ಲಿ ಸುರಕ್ಷಿತವಾಗಿ ಬಚ್ಚಿಟ್ಟಳು. ನಂತರ ತನ್ನ, ಸೇಡಜಿಯವರ ಸಂಬಂಧ ನೆನೆದು ಮನಸಾರೆ ಅತ್ತಳು. ಆಮೇಲೆ ಯಾವ ರೀತಿಯ ಅನುಮಾನಕ್ಕೂ ಆಸ್ಪದವಾಗದಂತೆ ಸೇಡಜಿಯವರ ಅಂತಿಮ ಸಂಸ್ಕಾರ ನಡೆದು ಹೋಗಲೆಂದು ಗೌಡರ ಮನೆಯತ್ತ ಧಾವಿಸಿದಳು. ವರ್ಷಗಳು ಗತಿಸುತ್ತ ಹೋದವು.
ಸೇಡಜಿಯವರು ತೀರಿಕೊಂಡ ಮೇಲೆ ತನ್ನನ್ನು ತಾನು ಕಾಣುವ ಕಣ್ಣುಗಳಿಗೆ ಹುಡುಕಿದಳು. ಅವರಿವರ ಕಣ್ಣಿನಲ್ಲಿ ಇಣುಕಿದಳು. ಒಂದು ಹೆಣ್ಣನ್ನು ಹೇಗೆ ಕಾಣಬೇಕೊ ಅದೆ ತುಂಬಿತ್ತು ಅಲ್ಲೆಲ್ಲ. ತನ್ನಲ್ಲಿದ್ದುದನ್ನೆಲ್ಲ ಬರಿದಾಗುವವರೆಗೆ ಅವಳಿಗೆ ಅರ್ಪಿಸಿ ತನ್ನ ಮುಖಾಂತರ ಅವಳನ್ನು ದೊಡ್ಡವಳನ್ನಾಗಿ ಮಾಡುವ ದೃಷ್ಟಿ ಯಾವ ಕಣ್ಣುಗಳೂ ಕಾಣಲಿಲ್ಲ. ಹೆಣ್ಣು ಶರೀರದಲ್ಲಿ ಗಂಡಿನ ಅಹಂಕಾರ ಜಾಗ್ರತವಾಗಿತ್ತು. ಶರೀರ ಬಿಟ್ಟು ಎಲ್ಲಿಯೊ ದೂರದ ಆಳದಲ್ಲಿ ಹುದುಗಿದ ಆಸೆಯದು. ಅದಕ್ಕೆ ಮಿತಿಯೇ ಇಲ್ಲ.
ಹೀಗಿರುವಾಗ ಗೌಡರ ಮನೆಯಲ್ಲಿ ಜೀತಕ್ಕೆ ಇದ್ದ ಸಂಗಯ್ಯನ ಕಣ್ಣುಗಳಲ್ಲಿ ತನ್ನ ಬಗ್ಗೆ ವಿಶಿಷ್ಟ ದೃಷ್ಟಿ ಇದ್ದುದು ಅವಳ ಕಣ್ಣಿಗೆ ಬಿತ್ತು.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಚಿಕ್ಕಂದಿನಲ್ಲಿಯೆ ತಾಯಿ ತಂದೆ ತೀರಿಹೋದ ಸಂಗಯ್ಯನನ್ನು ಗೌಡರ ಮನೆಯಲ್ಲಿ ಜೀತಕ್ಕೆ ಸೇರಿಸುವಾಗ ಅವನ ಚಿಕ್ಕಪ್ಪ ಹೇಳಿದ್ದು ಇಷ್ಟು: “ಏನೊ ದೊಡ್ಡ ಗಿಡದ ಆಸರಾ. ಇಂಥ ಮನ್ಯಾಗ ಹುಡುಗ ಬೆಳೆದ ಅಂದ್ರ ನಾಳೆ ನಾಲ್ಕು ಮಂದ್ಯಾಗ ಇರಾಕ ಲೈಕ ಆಗ್ತಾನ ಮತ್ತ ಒಂದ ರೀತೀಲೆ ಮೆಟ್ಟಿಗೂ ಹತ್ತಾನ.” ಈ ವಿಚಾರಕ್ಕೆ ಎಲ್ಲರೂ ತಲೆದೂಗಿದರು. ಆದರೆ ಇದರ ಹಿಂದೆ ಧೂರ್ತತೆಯಿತ್ತು: ”ಈ ಹುಡುಗನನ್ನು ಎಂಟು-ಹತ್ತು ವರ್ಷ ಗೌಡರ ಮನೆ ಸೇರಿಸಿಬಿಟ್ಟರೆ ಅಷ್ಟು ಸಮಯ ಅವನ ಎಂಟು ಎಕರೆ ಹೊಲ ಮತ್ತು ಮನೆ ತನ್ನ ವಶದಲ್ಲಿಯೇ ಉಳಿಯುವುದು. ಅಷ್ಟರವರೆಗೆಂದರೆ ತಾನು ಒಂದು ಮೆಟ್ಟಿಗೆ ಹತ್ತಿ ಹೋಗಬಹುದು” ಎಂಬುದು. ಸಂಗಯ್ಯ ಗೌಡರ ಮನೆ ಸೇರಿದನೇನೊ ಸರಿ. ದೊಡ್ಡ ಗಿಡದ ಆಶ್ರಯದ ಕೆಳಗೆ ಅವನ ವ್ಯಕ್ತಿತ್ವ ವಿಕೃತವಾಗಿ ಬೆಳೆಯಿತು.
ಗೌಡರ ಮನೆಯಲ್ಲಿ ಸಂಗಯ್ಯನಿಗೆ ಮುಟ್ಟಾಳು ಎಂದು ವಿಶೇಷ ಮರ್ಯಾದೆಯಿತ್ತು. ಅಡಿಗೆ ಮನೆಯವರೆಗೆ ನೇರ ಪ್ರವೇಶ, ಮನೆಯ ಹೊರಗೆ ಬರದ ಗೌಡತಿಗೆ ಇವನ ಮುಖಾಂತರವೇ ಹೊರ ಜಗತ್ತಿನ ಸಂಪರ್ಕ. ಹೀಗಾಗಿ ಈ ಮನೆಯಲ್ಲಿ ತನಗೇನೋ ವಿಶೇಷ ಮಹತ್ವ ಎಂಬ ಭಾವನೆ ಬೆಳೆಯತೊಡಗಿತು. ಅದರ ಜೊತೆ ತಾನು ಚೆನ್ನಾಗಿ ಕೆಲಸ ಮಾಡಿದರೆ ಈ ಮಹತ್ವ ಮತ್ತು ಸೌಲಭ್ಯಗಳು ಹೆಚ್ಚುತ್ತ ಹೋಗುತ್ತವೆ ಎಂಬುದನ್ನು ಮನಗಂಡ, ಉಳಿದ ಆಳುಗಳ ಮೈಗಳ್ಳತನ ಅವನಲ್ಲಿ ಬರಲೇ ಇಲ್ಲ. ತನ್ನ ಬಗ್ಗೆ ಇದ್ದ ವಿಶೇಷ ಅನ್ನಿಸಿಕೆಯ ದೃಷ್ಟಿ ಸಂಗಯ್ಯನಲ್ಲಿ ಆಳಕ್ಕೆ ಇಳಿದು ಕುಣಿ ತೋಡಿ, ಕುಣಿಯೆ ಒಂದು ಕಣ್ಣಾಗಿ ಪರಿಣಮಿಸಿತು. ಅವನು ಕೆಲಸದಲ್ಲಿ ಇದ್ದಾಗ ಆ ಕಣ್ಣು ನಗತೊಡಗಿತು. ಅವನ ದಣಿದ ಶರೀರ ವಿಶ್ರಾಂತಿ ಬಯಸಿದಾಗಲೂ ಅದು ಕೆಂಪಗಾಗುತ್ತಿತ್ತು, ಹೀಗಾಗಿ ಆತ ಗಾಣದೆತ್ತಿನ ಬಾಲದಂತಾದ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಸಂಗವನ ಬಗ್ಗೆ ಸಂಗಯ್ಯನಿಗೆ ವಿಶೇಷ ಆದರ, ನೋಡಿದರೆ ಹೆಣ್ಣು ಮಗಳಾದರೂ ಯಾವ ಗಂಡಸನ್ನೂ ನಾಚಿಸುವಂತೆ ಜೀವಿಸುತ್ತಿರುವವಳು. ಈ ದೃಷ್ಟಿಯನ್ನು ಗುರುತಿಸಿದ ಸಂಗವ್ವ ಅವನನ್ನು ಗೌಡರ ನೆರವಿನಿಂದ ದತ್ತು ತೆಗೆದುಕೊಂಡಳು. ಬೇರೆ ಯಾವ ದಾರಿಯೂ ಇರಲಿಲ್ಲ. ಸಂಗಯ್ಯನ ಕಣ್ಣುಗಳಲ್ಲಿ ತಾನು ಸದಾ ಇರಬೇಕಾಗಿದ್ದಲ್ಲಿ ತಾನು ಕಳೆದುಕೊಂಡದ್ದು ಏನೊ ಸಿಕ್ಕಂತಾಗಿ ಮೊದಮೊದಲು ಆಕೆ ಖುಷಿಪಟ್ಟಳು. ಆದರೆ ಸಂಗಯ್ಯ ತುಂಬ ಮಹತ್ವಾಕಾಂಕ್ಷಿಯಾಗಿದ್ದ. ಅವನ ಕೆಲಸದ ವೇಗಕ್ಕೆ ಈಕೆಯ ಇದ್ದಷ್ಟು ಆಸ್ತಿ ಸಾಲದಾಯಿತು. ಹೊಲದಲ್ಲಿ ಭಾವಿ ತೋಡಬೇಕು, ನೀರಾವರಿ ಮಾಡಬೇಕು, ಇಲ್ಲವಾದರೆ ಈ ಒಣ ಬೇಸಾಯದಲ್ಲಿ ಆಗುವುದೆಷ್ಟು, ಹೋಗುವುದೆಷ್ಟು ಇದು ಅವನ ವಿಚಾರ. ಮನೆಯಲ್ಲಿನ ಸ್ವಲ್ಪ ಬಂಗಾರವನ್ನು ಮಾರಿದರೆ ಎಲ್ಲ ಸರಿಯಾಗುತ್ತದೆ ಎನ್ನುತ್ತಿದ್ದ. ಬಂಗಾರ ಮಾರುವ ಸುದ್ದಿ ತೆಗೆದ ಕೂಡಲೆ ಸಂಗವ್ವನ ಎದೆಗೆ ಒದ್ದಂತಾಯಿತು. ತನ್ನೆಲ್ಲ ಇಂದ್ರಿಯಗಳು ಮಹಾರೋಗದಿಂದ ಒಂದೊಂದಾಗಿ ಕಳಚಿ ಬೀಳುತ್ತಿವೆಯೆ ಅನಿಸಿತು. ಗೌಡರು ಸಂಗಯ್ಯನಿಗೆ ಬುದ್ದಿ ಹೇಳಿದರು: “ಆಕಿ ಬಂಗಾರ ತೊಗೊಂಡ ಏನ ಮಾಡ್ತಿ. ಇಂಥ ಒಂದ ಕಾಲ ಮನ್ಯಾಗ ಐತಿ ಅಂದರ ಇನ್ನೊಂದು ಕಾಲ ಗೋರ್‍ಯಾಗ ಐತಿ. ಆಕೆ ಸತ್ತಮ್ಯಾಲ ಎಲ್ಲಾ ನಿಂದೆ ಐತೆಲ. ಜೀವಂತ ಇರುಮಟಾ ತನಗೆ ತಿಳಿಧಾಂಗ ಆಕಿಗೆ ಇರಾಕ ಬಿಡು.” ಸಂಗಯ್ಯ ಗೌಡರ ಮುಂದೆ ಸುಮ್ಮನಾಗಿ ಬಂದರೂ ಅವನಿಗೆ ನೆಮ್ಮದಿಯಿರಲಿಲ್ಲ. ‘ಈ ಮುದುಕಿ ಈಗs ಸಾಯೋದಿಲ್ಲ, ಇನ್ನ ನನ್ನಂಥವರ್‍ನ ಎಷ್ಟ ಮಂದೀಗೆ ಮಣ್ಣಕೊಟ್ಟ ತಾ ಕಣ್ಣ ಮುಚ್ಚತೈತೊ ಏನೊ’ ಎಂದು ವಟಗುಟ್ಟಿದ.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಅಡಿಗೆಯ ಮನೆಯ ಹೊಸ್ತಿಲಲ್ಲಿ ಕುಳಿತ ಸಂಗವ್ವನ ತಲೆಯಲ್ಲಿ ಅಲ್ಲೋಲಕಲ್ಲೋಲ ನಡೆದಿತ್ತು. ಮುಪ್ಪ ಬಂತಂದ್ರ ಕನಡ್ಯಾಗ ಮುಖ ಕಾಣೂದಕಿಂತ ಮೊದಲು ಅದರ ಕಟಗಿ ವಾಸನಿ ಬರಾಕ ಸುರು ಆಗ್ತದ. ಕುಂತಾಗ ಕಣ್ಣ ದೃಷ್ಟಿ ತಂತಾನ ಮ್ಯಾಲ ಜಂತಿ ಕಡೆ ಹರೀತೈತಿ. ಇಲ್ಲಣ ಹಿಡಿದ ಜಂತಿ, ತೊಲಿ ಎಷ್ಟ ಕರ್‍ರಗ ಆಗ್ಯಾವ, ಎಷ್ಟ ವರ್ಷ ಹೊಗಿ ತಿಂದ ಹಿಂಗ್ಯಾಗಾವೊ ಏನೋ? ಬೆಂಕಿ ಹಚ್ಚಿದರ ಅದು ಸಹಿತ ಭಗ್ಗನ ಹತ್ತಾಕಿಲ್ಲ. ಮೊನ್ನೆ ಮೊನ್ನೆ ಗ್ವಾಡೀಗಿ ಸುಣ್ಣ ಬಣ್ಣ ಹಚ್ಚೈತಿ, ಆದರೂ ಅದನ್ನ ದಾಟಿ ಹಾಳುಮಣ್ಣಿನ ವಾಸನಿ ಬರತೈತಿ. ಹೊಲದಾಗಿನ ಮಣ್ಣಿನ್ಹಾಂಗಲ್ಲ ಇದರ ವಾಸ. ಅದು ದಿನಾ ಹೊಸದಾಕ್ಕೈತಿ. ಅದಕ್ಕs ಆ ಮಣ್ಣಿಗೆ ಬಂಜಿತನಾನೂ ಇಲ್ಲೇನೊ? ಎಷ್ಟ ವಿಚಾರ ಬರತಾವ, ಮತ್ತ ಯಾರದರ ತಲಿ ಆಗಿದ್ದರ ಒಡದ ಹೊಗತಿತ್ತೋ ಏನೋ? ಸೇಡಜಿಯವರದೊಂದು ಕೈಚೀಲ ಹಿಂಗ ಇತ್ತು. ಅದರಾಗ ಎಷ್ಟ ಸಾಮಾನು ತುರುಕಿದರೂ ಹಂಗ ಹಿಡಿದ ಹಿಡೀತಿತ್ತು. ಅವರು ಹೋದ ಬಳಿಕ ಆ ಚೀಲ ಎಲ್ಲಿ ಮಸಿ ಅರವಿ ಆಗಿ ಬಿದ್ದ ಹೋತೋ ಏನೋ. ಅವರ ಕೊಟ್ಟ ಬಂಗಾರ ಇನ್ನಾ ನನಗ ಒಜ್ಜ ಆಗಿ ಕುಂತದ. ಯಾಕ ಕೊಟ್ರು ಇನ್ನ ತಿಳಿವಲ್ದು, ಆಗ ತಿರುಗಿಣಿ ಮಡದಾಗ ಬಿದ್ದಾಂಗ ಆಗಿತ್ತು. ಯಾವದೇನೂ ತಿಳೀಲಿಲ್ಲ. ಈಗ ತಿಳಕೊ ಬೇಕಂದ್ರ ಎಲ್ಲಾ ಕನಸಿನ್ಯಾಗ ಆಗಿ ಹೋದಾಂಗ ಆಗೇತಿ. ಯಾಕ ಕೊಟ್ಟಿರಬೇಕ ಅವರು?? ಕೊಡೂದರಾಗ, ತೊಗುಳ್ಳುದರಾಗ ಮನಶಾಗ ಏನರ ಸಿಗತಿರತೈತಿ. ಇದರಾಗ ಬರೆ ಬಂಗಾರಷ್ಟ ಸಿಕ್ತು, ಅದು ಬಂಗಾರಾಗೀನೂ ಸಿಗಲಿಲ್ಲ. ನಾನು ಗಳಿಸಿದ್ದನ್ನು ಕರ್ಚು ಮಾಡಬಹುದು. ಅದನ್ನ ದುಡಿಸಿ ಇನ್ನಷ್ಟ ಹೆಚ್ಚಿಸಬಹುದು. ಆದರ ಇದನ್ನ ಏನೂ ಮಾಡಾಕಾಗಾಂಗಿಲ್ಲ. ಬಾಗಲದಾಗಿನ ಗುಂಡಗಲ್ಲ ಇದ್ದಾಂಗ. ಹೊರಗೆ ಹೊಗಾಗನೂ ತೊಡಕು. ಒಳಗ ಬರಾಕನೂ ಕಾಲ ತೊಡಕ. ಬರೇ ಬಾಗಿಲಾ ಬಂದ ಮಾಡಾಕಷ್ಟ ಉಪಯೋಗ, ಎಷ್ಟ ದಿನಾ ಹಿಂಗs ಬದುಕೂದು? ಎಷ್ಟ ದಿನಾ ಕಾಯೂದು? ಉಳಿದೆಲ್ಲ ಆಸ್ತಿ ಅವ ಏನರ ಯಾಕ ಮಾಡವಲ್ಲ್ಯಾಕ. ಇದಿಷ್ಟ ದಾಗೀನಗೋಳಿಗೆ ಕೈ ಹಚ್ಚದಿದ್ದರ ಸಾಕ, ಎಂತೆಂಥವರೆಲ್ಲಾ ಹಿಂಗಿ ಹೋಗ್ಯಾರ. ನಾ ಒಂದು ಮಂಗ್ಯಾ ಮರಿ ಎದೆಗವಚಿಕೊಂಡು ಕುಂತಾಂಗ ಕುಂತೀನಿ. ಬಬಲಾದಿ ಅಜ್ಜಾ ಅವರು ಮಾಯಿಗೆ ಮೂರು ಸಲ ಬಾ ಅಂತ ಹೇಳಿ ಆಕಿ ಬಂದಾಗೊಮ್ಮೆ ಮಸ್ತಕಕ್ಕ ಪ್ರಾಣ ಏರಿಸಿ ಕುಂತ ಬಿಡತಿದ್ರಂತ. ಏನೂ ಮಾಡಾಕ ಆಗಿದ ಮಾಯಿ ಹೊಳಿ ಹೋಗತಿದ್ದಳಂತ. ಒಮ್ಮೆ ಅವರ ಊರಿಗೆ ಹೊಂಟದಾರ್‍ಯಾಗ ಹೊಳಿ ದಂಡೀಲೆ ಕುಂತಾಗ ಅಜ್ಜ ಅವರಿಗೆ ಗೊತ್ತಾಗದಾಂಗ ಕಡತ ಕೊಟ್ಟs ಬಿಟ್ಟಳಂತ. ಆವಾಗ ಏನೂ ಮಾಡಾಕ ಆಗದ,
“ಅಲ್ಲಿ ಇಲ್ಲಿ ಎಲ್ಲಿ
ಇಲ್ಲೆ ಮುಳಿಗಿತೊ ಹಡಗಾ”
ಅಂತ ಪದಾ ಬರದು ದೇಹ ಬಿಟ್ಟರಂತ. ಎಲ್ಲಾರದೂ ಹಡಗ ಮುಳಗೂದನ. ನಂದ ಹ್ಯಾಂಗ ಮುಳಗತೈತೊ ಏನೊ?
*
ಸಂಗಯ್ಯ ಎಂದೂ ಹೆಣ್ಣಿನ ಮುಖ ಕಣ್ಣೆತ್ತಿ ನೋಡದವನು. ಅಂದು ಕಳೆ ಕಿತ್ತಲು ಬಂದ ಹೊಲೆಯರ ದುರ್ಗವ್ವನಿಗೆ ಕಣ್ಣು ಸನ್ನೆ ಮಾಡಿದ. ಸಂಜೆಗೆ ದಿನಾ ಒಂದು ಗಂಡಿನ ಮುಖ ನೋಡುವ ಅವಳು ಸಂಗಯ್ಯನ ಸನ್ನೆಯ ಅರ್ಥ ತಿಳಿದು ನೀರು ಕುಡಿಯುವ ನೆವ ಮಾಡಿ ಉಳಿದ ಆಳುಗಳನ್ನು ದೂರ ಬಿಟ್ಟು ಅವನ ಹತ್ತಿರ ಬಂದು ಕೊಡದೊಳಗಿನ ನೀರು ಹಾಕಲು ಕೇಳಿದಳು. ಹಾಗೇ ಉಳಿದವರಿಗೆ ಕೇಳದಂತೆ ಇಂದು ಸಂಜೆ ಹೊಲದ ಕಡೆಗೆ ಬರುವುದಾಗಿ ಹೇಳಿದಳು. ಸಂಗಯ್ಯ ಸಾಯಂಕಾಲ ಮುಗಿದು ಚಂದ್ರ ಮೂಡುವ ಹೊತ್ತಿನಲ್ಲಿ ಆಕೆಗಾಗಿ ಕಾಯುತ್ತ ಕುಳಿತಿದ್ದ. ದುರ್ಗವ್ವ ಬಂದಳು. ಹೆಚ್ಚು ಮಾತುಕತೆಗಳೇನೂ ನಡೆಯಲಿಲ್ಲ. ಹಾಗೆ ನಡೆಯಲು ಅವರೇನು ಗೆಣೆಯ ಗೆಣತಿಯರೆ? ಬಂದವಳೆ ನೇರವಾಗಿ ಸಂಗಯ್ಯನ ತೆಕ್ಕೆಯನ್ನೆ ಹೊಕ್ಕಳು. ಎರಡೇ ಕ್ಷಣದಲ್ಲಿ ಅವನಿಗೆ ಗೊತ್ತಾಯಿತು ತಾನು ಆಳವೇ ನಿಲುಕದ ಮಡುವಿಗೆ ಹೆಜ್ಜೆ ಇಟ್ಟಿದ್ದು ಅಂತ. ಸಮುದ್ರದಾಳದಲ್ಲಿ ಇರಬಹುದಾದ ಭಯಂಕರ ಕತ್ತಲೆ ಅವಳ ಶರೀರವನ್ನೆಲ್ಲ ವ್ಯಾಪಿಸಿತ್ತು. ಕಾಣದ ಎಷ್ಟೆಲ್ಲ ಬೆಳಕಿಗಾಗಿ, ಎಷ್ಟೋ ಸಂಪತ್ತಿಗಾಗಿ, ಅವಳ ರಕ್ತದ ಕಣಕಣಗಳಲ್ಲಿ ಮಾಂಸದ ಪೇಶಪೇಶಗಳಲ್ಲಿ ಇಚ್ಛೆ ಉಕ್ಕಿ ಬಂದಿತ್ತು. ಎಲ್ಲ ಮಿತಿಗಳನ್ನೂ ಮಿಕ್ಕಬೇಕೆಂಬ ಹ್ಯಾಂವದಿಂದ ಹಸಿವು ಎಲ್ಲ ಇಂದ್ರಿಯಗಳಲ್ಲಿ ಒಡಮೂಡಿದ್ದರಿಂದ ಸಂಗಯ್ಯ ತತ್ತರಿಸಿ ಹೋದ. ತನ್ನ ಶರೀರದಲ್ಲಿ ಕೂಡಿ ಹಾಕಿದ್ದ ಶಕ್ತಿಯಿಂದ ಶ್ರಮವಹಿಸಿ ತಾನೇನಾದರೂ ಆಗಬೇಕೆಂದಿದ್ದನೊ ಆ ಶಕ್ತಿ ಲೂಟಿಯಾಗುವ ಕ್ಷಣವಿದು ಅಂತ ಅವನಿಗನಿಸಿತು. ಮುದುಕಿ, ಗೌಡ, ಈ ದುರ್ಗಿ ಎಲ್ಲರೂ ತನ್ನನ್ನೇ ದೋಚಿ ಇಲ್ಲವಾಗಿಸಬೇಕೆಂಬ ಬೃಹತ್ ಸಂಚಿನಲ್ಲಿ ಪಾಲುದಾರರು ಎಂದುಕೊಂಡ. ತಾನು ಇದೆಲ್ಲದರಿಂದ ಪಾರಾಗಲೇ ಬೇಕೆಂದವನೆ ಅವಳನ್ನು ಜೋರಾಗಿ ನೂಕಿ ಮನೆಯ ಕಡೆ ಓಡಿದ.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
*
ಮನೆಯ ಬಾಗಿಲು ಹಾಗೆಯೆ ಮುಂದು ಮಾಡಿತ್ತು, ಒಳಗೆ ಹೋದ. ಕೆಳಗೆ ಯಾರೂ ಇರಲಿಲ್ಲ. ಮಹಡಿ ಹತ್ತಿ ಮೇಲೇರಿದ. ಮುದುಕಿ ಒಂದು ಗಂಟನ್ನು ಎದೆಗೆ ಅವಚಿಕೊಂಡು ಮಂಚದ ಮೇಲೆ ಮಲಗಿದ್ದಳು. ಯಾರೊ ಬಂದಂತಾಗಿ ಕಣ್ಣು ತೆರೆದು ನೋಡಿದಳು. ಸಾವೇ ಎದುರಿಗೆ ಬಂದಂತೆ ಸಂಗಯ್ಯ ಭೀಕರವಾಗಿ ಅವಳ ಮುಂದೆ ನಿಂತಿದ್ದ. ಚಂಗನೆ ಹಾರಿ ಸಂಗವ್ವನ ಮೇಲೆ ಬಿದ್ದ. ಒಂದು ಕ್ಷಣ ಒದ್ದಾಡಿದ ಮುದುಕಿ ಶಾಂತವಾದಳು. ಸಂಭೋಗದ ನಂತರ ಬರುವ ಸುಖದ ಗ್ಲಾನಿ ಸಂಗಯ್ಯನನ್ನು ಆಪಾದ ಮಸ್ತಕ ಕವಿಯಿತು. ನಿಲ್ಲಲಾಗದೆ ಭೂಮಿಗೆ ಕುಸಿದುಬಿಟ್ಟ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಬಿ.ಸಿ.ದೇಸಾಯಿ(1941-1990): ಬಾಪೂರಾವ್ ಚಂದೂರಾವ್ ದೇಸಾಯಿ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮ. ಇವರು ಎಂಎ(ಇಂಗ್ಲಿಷ್) ಪದವೀಧರರಾಗಿದ್ದರು. ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ ಸಾಹಿತ್ಯ ಕೃಷಿ ಮಾಡಿದವರು. ಮಾರ್ಕ್ಸ್‌ವಾದಿ ವಿಮರ್ಶೆಯನ್ನು ಎತ್ತಿ ಹಿಡಿದವರು. 1973ರಲ್ಲಿ ಅವರ ಏಕೈಕ ಕವನ ಸಂಕಲನ ‘ಹುಸಿ’ ಪ್ರಕಟವಾಯಿತು. ಇದು ನವ್ಯ ಕಾಲದ ಸಾಹಿತ್ಯ ಸೃಷ್ಟಿಗೆ ಸೇರಿ ದೇಸಾಯಿಯವರ ಸಾಹಿತ್ಯ ರಚನೆ ಪರಿಚಯವಾಯಿತು. ಪ್ರಕಟಿತ ಕೃತಿಗಳು: ಸಾವು ಮತ್ತು ಇತರ ಕತೆಗಳು- ಕಥಾಸಂಗ್ರಹ(1985); ಹುಸಿ- ಕವನ ಸಂಕಲನ(1973). ಅಮೂರ್ತತೆ ಮತ್ತು ಇತರ ಲೇಖನಗಳು, ಎರಡು ವಿಮರ್ಶಾ ಸಂಕಲನಗಳನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಕೊಟ್ಟವರು. ತಮ್ಮ ನಲ್ವತ್ತೊಂಬತ್ತು ವರ್ಷಗಳ ಜೀವಿತಾವಧಿಯಲ್ಲಿ ಬರೆದದ್ದು ಒಟ್ಟು ಎಂಟು ಕತೆಗಳನ್ನಷ್ಟೆ. ಆ ಕತೆಗಳು ಪ್ರಿಂಟರ್ಸ್ ಪ್ರಕಾಶನದ ವತಿಯಿಂದ ಪ್ರಕಟಗೊಂಡಿದೆ. ಇವರ ಹಲವಾರು ವೈಚಾರಿಕ ಪ್ರಬಂಧಗಳು ರುಜುವಾತು, ಶೂದ್ರ, ಸಂಕ್ರಮಣ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.





