ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಒಂದು ದಿನ:
ಇಂಡಿಯಾ ದೇಶದ ಕರ್ನಾಟಕ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲಿ- ಆ ದಿನ ಸೋಮವಾರವಾದುದರಿಂದ ಜನವೋ ಜನ. ದೊಡ್ಡ ಆಸ್ಪತ್ರೆಯ ರೀತಿಯಲ್ಲಿ ರೋಗಿಗಳು ತಮ್ಮ ಹೆಸರು ದಾಖಲು ಮಾಡಿಸಿ, ಗುಮಾಸ್ತನ ಅಮೃತಹಸ್ತದಿಂದ ತಮ್ಮ ಹೆಸರು, ಕುಲಗೋತ್ರ, ವಯಸ್ಸು ಮುಂತಾದುವನ್ನು ಒಳಗೊಂಡ ಚೀಟಿಯ ಮೂಲಕ ವೈದ್ಯಾಧಿಕಾರಿಗಳನ್ನು ಕಾಣುವ ವ್ಯವಸ್ಥೆಗೆ ಇಲ್ಲಿ ಅವಕಾಶವಿಲ್ಲದ್ದರಿಂದ; ಮೊದಲು ಬಂದ ರೋಗಿ ಯಾವುದೋ ಮೂಲೆಯಲ್ಲೋ ಅಥವಾ ವೈದ್ಯಾಧಿಕಾರಿಗಳ ಕೊಠಡಿಯ ಬಾಗಿಲಲ್ಲೊ ನಿಂತು ಅಸಹಾಯಕವಾಗಿ ಪಿಳಪಿಳನೆ ಕಣ್ಣಾಡಿಸುತ್ತ, ಅವರ ಕೃಪೆಗಾಗಿ ಕಾಯುತ್ತ, ಒಮ್ಮೊಮ್ಮೆ ಸುಸ್ತಾಗಿ ವರಾಂಡದಲ್ಲಿ ತಂದ ಸೀಸೆಯನ್ನು ತಲೆದಿಂಬಾಗಿ ಮಾಡಿಕೊಂಡು ತಾನು ಅಥವಾ ತಾವು ಬಂದ ಕೆಲಸವನ್ನೇ ಮರೆತು ನರಳುತ್ತಾ ಮಲಗಿಬಿಡುವುದು. ಹೀಗೆ ಏನೇನೋ ನಂಬಲಾರದಂಥ ವಿಷಯಗಳು. ಕೊನೆಯಲ್ಲಿ ಬಂದವನಿಗೆ ವೈದ್ಯಾಧಿಕಾರಿಗಳಿಂದ ಹಾರ್ದಿಕ ಸ್ವಾಗತ. ಇನ್ನೂ ವರ್ಣಿಸಲು ಅವಕಾಶವಿಲ್ಲದಂಥ ವರ್ಗದ ಜನ ಬಂದಾಗ ಕೃತಕ ವಿಧೇಯತೆ ತುಂಬಿದ ಸ್ವಾಗತ- ಇವೆಲ್ಲಕ್ಕೂ ಪೂರ್ಣ ಅವಕಾಶ ಇದ್ದುದರಿಂದ ಬಳ್ಳೇಕೆರೆ ಎಂಬ ಹಳ್ಳಿಯಿಂದ ಹೊತ್ತು ಮೂಡುವುದಕ್ಕೇ ಮುಂಚೆಯೇ ಬಂದು ಆಸ್ಪತ್ರೆಯಲ್ಲಿ ಕಾಯುತ್ತಿದ್ದ ಒಬ್ಬ ಹೆಂಗಸು ಮತ್ತು ಸುಮಾರು ಹದಿನೈದು ವರ್ಷದ ಹುಡುಗ ಬಹಳ ಹೊತ್ತಿನವರೆಗೂ ಯಾರ ಗಮನಕ್ಕೂ ಬರದೆಯೇ ಬಿದ್ದಿದ್ದರು. ಆ ಹೆಂಗಸು ಆ ಹುಡುಗನ ತಾಯಿ, ಸುಮಾರು ನಲವತ್ತರ ಪ್ರಾಯ. ಹುಡುಗ ವರಾಂಡದಲ್ಲಿ ಕಂಬಕ್ಕೆ ಒರಗಿ, ಆಸ್ಪತ್ರೆಗೆ ಬಂದು ಹೋಗುವವರನ್ನು ಯಾವ ಕುತೂಹಲವೂ ಇಲ್ಲದೆ ನೋಡುತ್ತ ಕುಳಿತಿದ್ದ. ಅವನಿಗೆ ಹದಿನೈದು ವರ್ಷಕ್ಕೇ ಪ್ರಪಂಚದ ಮೇಲೆ ಒಂದು ಬಗೆಯ ಜುಗುಪ್ಸೆ ಮೂಡಿ ನಿಂತಿತ್ತು. ಕುಳಿತು ಕುಳಿತು ಸಾಕಾಗಿ ಅವನು ಪಕ್ಕದಲ್ಲಿಯೇ ನಿಂತಿದ್ದ ತನ್ನ ಅವ್ವನ ಸೀರೆಯನ್ನು ಬಲವಾಗಿ ಎಳೆದು ಹೇಳಿದ:
“ಅವ್ವ, ಬಿಸ್ಲು ಜಾಸ್ತಿ ಆಯ್ತಾ ಅದೆ, ನಡಿ ಊರಿಗೆ ಹೋಗ್ವ.”
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
”ಒಸಿ ಸುಮ್ಮಿರು, ಬಂದೋರು ಬಂದೋ ತೋರಿಸ್ಕೊಂಡೇ ಹೋಗುವ.”
“ಹೊತ್ತೂಡಕೆ ಮುಂಚೆ ಬಂದೋ ನಾವು…”
“ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು?”-
ತನ್ನ ತಾಯಿಯ ಧ್ವನಿಯ ಹಿನ್ನೆಲೆಯ ಅಸಹಾಯಕತೆ, ಸುತ್ತಮುತ್ತಲಿನ ವಾತಾವರಣ ನಿಷ್ಕರುಣೆಯಿಂದ ತುಂಬಿರುವುದನ್ನು ಪರಿಚಯ ಮಾಡಿಕೊಡುವ ರೀತಿಯಲ್ಲಿ ಮೂಡಿ ಬಂದ ರೀತಿಯನ್ನು ಗಮನಿಸಿಯೋ ಅಥವಾ ತನಗಾಗಿ ತನ್ನನ್ನು ಹೆತ್ತವಳು ಮೌನವಾಗಿ ನೋವನ್ನು, ಅವಮಾನವನ್ನು ಸಹಿಸಿಕೊಂಡು ನಿಂತಿರುವುದನ್ನು ಕಂಡೋ ಹುಡುಗ ಹೇಳಿದ: ”ನಾನು ಇದ್ದರೆಷ್ಟು, ಸತ್ತರೆಷ್ಟು ನಡಿಯವ್ವಾ ಹೋಗುವ, ಊರಿಗೆ.”
“ಮೂರೊತ್ತೂ ‘ಸಾಯ್ತಿನಿ, ಸಾಯ್ತಿನಿ’ ಇದೇ ನಿನ್ನ ನಾಲಿಗೆ ಮೇಲೆ.”
“ಇದ್ದು ನಾನು ಯಾವ ರಾಜ್ಯ ಆಳಬೇಕು”- ವಯಸ್ಸಿಗೆ ಮೀರಿದ ಅನುಭವದ ಮಾತುಗಳು ತನ್ನ ಮಗನ ಬಾಯಿಯಿಂದ ಬಂದದ್ದು ತಾಯಿಗೆ ಆಶ್ಚರ್ಯವಾಗಲಿಲ್ಲ. ಈ ವಯಸ್ಸಿಗೆ ಅನುಭವಿಸಿದ್ದ ನೋವಿನ ಮೂಸೆಯಿಂದ ಬಂದ ಮಾತುಗಳಾಗಿದ್ದವು. ಹೆತ್ತ ಕರುಳು ಚುರುಕ್ಕೆಂದು ಸೆರಗಿನಿಂದ ಕಣ್ಣೆರಸಿಕೊಂಡಳು. ತನ್ನ ದೇಹದಲ್ಲಿರುವ ಕಾಯಿಲೆಯ ನೋವನ್ನೂ, ತಾಯಿಯ ಅಸಹಾಯಕತೆಯನ್ನೂ, ತಮಗಾಗುತ್ತಿರುವ ಅವಮಾನವನ್ನೂ ಇನ್ನು ಸಹಿಸಲಾಗದು ಎನ್ನುವ ರೀತಿಯಲ್ಲಿ ಹುಡುಗ ದಢಕ್ಕನೆ ಮೇಲೆದ್ದು ಮುಂದುವರಿದ-
“ಎಲ್ಲಿಗೋ ಮಗ?”
”ಡಾಕ್ಟ್ರು ನೋಡೋಕೆ…”
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
“ಲೋ; ಮೊದಲೇ ತೂರಾಡ್ತಿ, ಬಿದ್ದು ಗಿದ್ದು ಬುಟ್ಟಿ ಕನಪ್ಪ” ಎಂದು ಹಿಡಿದುಕೊಳ್ಳಲು ಬಂದ ತಾಯಿಯ ಕೈಗಳಿಂದ ಕೊಸರಿಕೊಂಡವನೆ ವೈದ್ಯಾಧಿಕಾರಿಗಳ ಕೊಠಡಿಯನ್ನು ಪ್ರವೇಶಿಸಿ, ನೆರೆದಿದ್ದ ಜನರ ಗುಂಪನ್ನು ಸೀಳಿ ವೈದ್ಯಾಧಿಕಾರಿಯ ಮೇಜಿನ ಮುಂದೆ ನಿಂತು, ಜೋರಾಗಿ ಹೇಳಿದ: “ಸಾ! ನಾನು ನಮ್ಮವ್ವ ಒತಾರೆಯಿಂದ ಕಾಯ್ಕೊಂಡೀವಿ.”
ವೈದ್ಯಾಧಿಕಾರಿ ಕತ್ತೆತ್ತಿ ನೋಡಿದ. ಸುಮಾರು ಎತ್ತರದ, ನರಪೇತಲ, ಅಗಲ ಕಿವಿಗಳ ಹೊಟ್ಟೆ ಡುಬ್ಬಣ್ಣನೊಬ್ಬ ತನ್ನ ಮುಂದೆ ಬಂದು ನಿಂತಿದ್ದಾನೆ. ಅವ್ಯಕ್ತ ನೋವಿನ ರೋಷ ಅವನ ಮುಖದ ಮೇಲೆ ನಿಂತಿದೆ.
ಹುಡುಗನೇ ಮತ್ತೆ ಹೇಳಿದ: “ನನ್ನೊಸಿ ನೋಡಿ ಸಾ!” ವೈದ್ಯಾಧಿಕಾರಿಗೆ ಈ ಅಪರೂಪದ ವ್ಯಕ್ತಿಯನ್ನು ಕಂಡು ಸ್ವಲ್ಪ ಕುಚೇಷ್ಟೆ ಮಾಡಬೇಕೆನಿಸಿ, ಅವನನ್ನೇ ದೃಷ್ಟಿಸಿ ಹೇಳಿದ: “ವಸಿ ಏನೋ ಚೆನ್ನಾಗೇ ನೋಡ್ದೆ. ನಿನ್ನ ಹೊಟ್ಟೆ ದಪ್ಪ, ಕೈಕಾಲು ಸಣ್ಣ, ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆಯಪ್ಪಾ.”
ಹುಡುಗ ತನ್ನ ಬಲಗೈಯನ್ನು ಮುಂದೆ ಚಾಚಿ; ”ನನಗೆ ಕಾಯಿಲೆ ಏನು ನೋಡಿ ಸಾ” ಎಂದು ಬೇಡಿದ.
“ನಿಮ್ ದಮ್ಮಯ್ಯ ಕೋಪ ಮಾಡ್ಕೊಳ್ದೆ ನೋಡಿ ಸ್ವಾಮಿ, ಇವನೊಬ್ಬನೇ ನನಗೆ ಗಂಡು ಮಗ ಅಂತ ಇರೋನು!” ಹೆಂಗಸೊಬ್ಬಳು ಗೋಗರೆದಳು.
ವೈದ್ಯಾಧಿಕಾರಿಗೆ ತನ್ನ ಮುಂದೆ ನಿಂತಿರುವ ವ್ಯಕ್ತಿಗಳು ತನ್ನಂತೆಯೇ ಮನುಷ್ಯ ವರ್ಗಕ್ಕೆ ಸೇರಿದವರು ಎಂಬುದು ಜ್ಞಾಪಕಕ್ಕೆ ಬಂದೋ ಅಥವಾ ವೈದ್ಯರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬ ಮಾತು ನೆನಪಾಗಿಯೋ, ಏನು ಕತೆಯೋ, ಒಟ್ಟಿನಲ್ಲಿ ಈ ತಾಯಿ-ಮಗನ ಮೇಲೆ ಕರುಣೆ ಬಂದು ಕೇಳಿದ: “ಇವನು ನಿನ್ನ ಮಗನೇನಮ್ಮ?”
“ಹೂ ಸ್ವಾಮಿ, ದೇವರಾಣೆಗೂ!”
“ಇವನ ಹೆಸರೇನಮ್ಮ?”
“ಗಾಂಧಿ ಸ್ವಾಮಿ!”
“ಏನಮ್ಮ ಹುಡುಗಾಟಕ್ಕೆ ನಾನು ಇವನ ಕಿವಿಗಳು ಗಾಂಧೀಜಿಗೆ ಇದ್ದಂತಿವೆ ಅಂದ್ರೆ ಇವನ್ನ ಸಾಕ್ಷಾತ್ ಗಾಂಧಿ ಅಂತ್ಲೇ ತಿಳ್ಕೊಂಡು ಬಿಟ್ರ?”
”ಇಲ್ಲ ಸ್ವಾಮಿ, ಸುಳ್ಳು ಹೇಳಿದ್ರೆ ನನ್ನ ನಾಲೆಗೆ ಉಳಾ ಬೀಳ್ಲಿ, ಸೇದೋಗ್ಲಿ, ನನ್ನಾಣೆಗೂ ಇವನ ಹೆಸರು ಗಾಂಧಿ ಅಂತ.”
“ನನ್ನ ಹೆಸರು ದೇವರ ಸತ್ಯವಾಗ್ಯೂ ಸಾ ಮಹಾತ್ಮ ಗಾಂಧಿ ಅಂತ” ಹುಡುಗ ಧೈರ್ಯವಾಗಿ, ದೃಢ ನಿಲುವಿನಿಂದ ನುಡಿದ.
ವೈದ್ಯಾಧಿಕಾರಿ ಬೆಪ್ಪಾಗಿ ಹೋದ. ಅವನ ಈವರೆಗಿನ ವೈದ್ಯಕೀಯ ಅವಧಿಯಲ್ಲಿ ಈ ರೀತಿಯ ಕಾಕತಾಳ ನ್ಯಾಯವನ್ನು ಅವನು ಕಂಡಿರಲಿಲ್ಲ. ಕೇಳಿಯೂ ಇರಲಿಲ್ಲ. ತನ್ನ ಜೀವಿತದಲ್ಲಿ ಒದಗಿಬಂದ ಈ ಘಟನೆ ತೀರ ಅಪರೂಪ ಎನ್ನಿಸಿ ಇದನ್ನು ತನ್ನ ಸಹೋದ್ಯೋಗಿಗಳೊಂದಿಗೆ ಪಾಲು ಮಾಡಿಕೊಳ್ಳಲು ಮತ್ತು ಮುಂದೆ ತಾನು ಯಾರಿಗಾದರೂ ವರ್ಣಿಸಿದಾಗ ಇದೊಂದು ಬಿಳಿ ಸುಳ್ಳೆಂದು ಹೇಳಿದರೆ, ಇಂಥಿಂಥವರು ಇದ್ದರು; ಬೇಕಾದರೆ ಕೇಳಿಕೊಳ್ಳಿ ಎಂದು ಸಾಕ್ಷಿಗಳನ್ನು ದಾಖಲುಪಡಿಸಿಕೊಳ್ಳಲು ಜವಾನನನ್ನು ಜೋರಾಗಿ ಕರೆದು ಹೇಳಿದ.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
“ನೋಡೋ ನಾಯ್ಡು, ನರಸಿಂಹಮೂರ್ತಿ, ಸರಸಮ್ಮ ಇವರನ್ನು ಬೇಗನೆ ನಾನು ಬರ ಹೇಳ್ದೆ ಅಂತ ಕೂಗಯ್ಯ” ಎಲ್ಲರೂ ಬಂದರು. ವೈದ್ಯಾಧಿಕಾರಿ ಹೇಳಿದನ್ನು ಕೇಳಿ ಕಿಸಕ್ಕನೆ ನಕ್ಕುಬಿಟ್ಟರು. ಅದರಲ್ಲಿಯೂ ಈಗ ತಾನೆ ಕುಟುಂಬ ಯೋಜನೆಯ ವಿಸ್ತರಣಾಧಿಕಾರಿಯಾಗಿ ಕೆಲಸಕ್ಕೆ ಸೇರಿದ ನರಸಿಂಹಮೂರ್ತಿ ತಾನು ಇದನ್ನು ನಂಬುವುದಿಲ್ಲ ಎನ್ನುವಂತೆ ಕಿಸಕ್ಕನೆ ನಕ್ಕ. ವೈದ್ಯಾಧಿಕಾರಿಗೆ ಸ್ವಲ್ಪ ಕೋಪ ಕೆರಳಿ, ”ಬೇಕಾದ್ರೆ ಅವನ್ನೇ ಕೇಳ್ರಿ” ಎಂದ.
ನರಸಿಂಹಮೂರ್ತಿ ವೈದ್ಯಾಧಿಕಾರಿಗಳ ಕುರ್ಚಿಯ ಮೇಲೆ ಗೋಡೆಗೆ ತೂಗು ಹಾಕಿರುವ ಫೋಟೋ ಒಂದನ್ನು ತೋರಿಸಿ ಕೇಳಿದ: “ಲೋ ಹುಡುಗ ಆ ಫೋಟೋ ಯಾರದಯ್ಯಾ.”
”ಮಹಾತ್ಮ ಗಾಂಧಿಯೋರ್‍ದು ಸಾ, ಇದ ನಾ ಕಾಣನೆ?”
“ನಿನ್ನ ಹೆಸರೇನಯ್ಯ?”
“ಮಹಾತ್ಮ ಗಾಂಧಿ ಸಾ.”
“ಸುಳ್ಳು ಹೇಳಬ್ಯಾಡ.”
“ಸುಳ್ಳು ಹೇಳಿ ನಿಮ್ ತಾವು ನಾನು ಯಾವ ಸಾಮ್ರಾಜ್ಯ ಈಸ್ಕೋ ಬೇಕು.”
ಎಲ್ಲರೂ ನಾಲಿಗೆ ಸೇದಿ ಹೋದವರಂತೆ ನಿಂತರು. ಮಹಾತ್ಮಗಾಂಧೀಜಿಯ ಫೋಟೊವನ್ನು ಒಮ್ಮೆ; ನಂತರ ರಕ್ತ ಮಾಂಸ ತುಂಬಿಕೊಂಡು ಉಸಿರಾಡುತ್ತ ನೋವನ್ನು ಅನುಭವಿಸುತ್ತ ನೆಲದ ಮೇಲೆ ತಮ್ಮ ಕಣ್ಣೆದುರಿಗೆ ನಿಂತಿರುವ ಮಹಾತ್ಮ ಗಾಂಧಿಯ ಕಡೆಗೊಮ್ಮೆ ದೃಷ್ಟಿಯನ್ನು ಬೀರುತ್ತ ನಿಂತರು. ವೈದ್ಯಾಧಿಕಾರಿ ಮತ್ತು ಅವನ ಬಳಗ ಜಗತ್ತಿನ ಮೇಲೆ ತೀರ ಸೋಜಿಗದ ವಿಷಯವನ್ನು ಕಂಡವರಂತೆ ನಿಂತುದನ್ನು ಕಂಡು ಮಹಾತ್ಮಾಗಾಂಧಿಗೆ ಬೇಸರವಾಯಿತು.
“ನನ್ನ ಕಾಯಿಲೆ ನೋಡಿ ಸಾ! ನನ್ನ ಹಣೇಬರ” ಎಂದ.
“ನಿನಗೆ ಈ ಹೆಸರು ಯಾರು ಕಟ್ಟಿದೋರು.”
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
”ನಮ್ಮ ಅಯ್ಯ ಕರಿಸಿದ್ದೇಗೌಡ ಅಂತವ್ನೆ, ಅವ್ನು.” ವೈದ್ಯಾಧಿಕಾರಿ, ಮಿಡ್‌ವೈಫ್ ಅಮ್ಮನವರನ್ನು ಕರೆದುಕೊಂಡು ಗಾಂಧಿಯನ್ನು ಪರೀಕ್ಷೆಯ ಕೊಠಡಿಗೆ ಕರೆದುಕೊಂಡು ಹೋಗಿ ಮಲಗಿಸುವಂತೆ ಹೇಳಿದರು. ಅವಳು ಹಾಗೆಯೇ ಮಾಡಿದಳು. ನಾಲಿಗೆ, ಕಣ್ಣು, ಗಂಟಲು ನೋಡಿದ ಮೇಲೆ ಹೃದಯ ಶ್ವಾಸಕೋಶಗಳ ಪರೀಕ್ಷೆ ಮುಗಿಸಿ, ಹೊಟ್ಟೆಯನ್ನು ಪರೀಕ್ಷೆ ಮಾಡಿದ ವೈದ್ಯಾಧಿಕಾರಿ ಗಾಂಧಿಯ ತಾಯಿಯ ಕಡೆ ತಿರುಗಿ; “ನಿನ್ನ ಹೆಸರೇನಮ್ಮ” ಎಂದರು.
“ನಿಂಗಮ್ಮ ಸ್ವಾಮಿ.”
”ನೋಡಮ್ಮ ನಿಮ್ಮುಡುಗನಿಗೆ ಹೊಟ್ಟೇಲಿ ನೀರು ಸೇರ್‍ಕೊಂಡಿದೆ. ಜೊತೆಗೆ ಕಾಲುಗಳೂ ಊದಿಕೊಂಡಿವೆ. ಇದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ. ಆಗಲೇ ಕಪ್ಪು ಈಲಿಗೂ (ಲಿವರ್) ಕಾಯಿಲೆ ಹಬ್ಬಿ ಅದು ಮುಟ್ಟಿದರೆ ಸಾಕು ಗಾಂಧಿ ನೋವು ಅಂತ ಬಡ್ಕೊತಾನೆ.”
“ಏನೋ ಸ್ವಾಮಿ ನಿಮ್ಮ ಎಕ್ಡ. ಮೂರು ಮೈಲಿ ನಡೀಬೇಕಾದ್ರೆ ಮೂವತ್ತು ತಾವು ಕುಂತ್ಕಂಡು, ತೆವಳ್ಕೊಂಡು ಬಂದ. ಉಳಿಸಿಕೊಡಿ, ನಾಳಾಕೆ ನಮ್ಮಪ್ಪನ ಕರ್ಕೊಂಡು ಬತ್ತೀನಿ… ತಂದೆ ಇಲ್ಲದ ತಬ್ಬಲಿ.”
“ನಿನ್ನ ಗಂಡನಿಗೆ ಏನಾಗಿ ಸತ್ತೋದ?”
“ಸ್ವಾಮಿ, ಸೇಂದಿ ಇಳಿಸೋಕೆ ಸಾಹುಕಾರ್‍ರು ತಾವು ಇದ್ರು, ಒಂದು ದಿನ ಮರದ ಮೇಲಿಂದ ಬಿದ್ದು ಫಕ್ಕನೆ ಪ್ರಾಣ ಬುಟ್ಟು ಬುಟ್ರು.”
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
”ಅಯ್ಯೋ ಪಾಪ! ನೋಡಮ್ಮ ನಿಮ್ಮುಡುಗನಿಗೆ ಎಕ್ಸರೇ ಆಗಬೇಕು, ಹೃದಯದ ಪರೀಕ್ಷೆ ಮಾಡಬೇಕು, ರಕ್ತಮೂತ್ರ ಪರೀಕ್ಷೆ ಮಾಡಬೇಕು. ಇಲ್ಲಾಗೋ ವಿಷಯವಲ್ಲ ಇದು, ಇವನ್ನ ಡಿಸ್ಟ್ರಿಕ್ಟ್ ಆಸ್ಪತ್ರೆಗೆ ಸೇರಿಸಬೇಕು. ನಾನು ಎಲ್ಲಾನು ಬರೆದು ಕೊಡ್ತೀನಿ. ಹೊಟ್ಟೇಲಿರೋ ನೀರು ಕಡಿಮೆ ಆಗೋಕೆ ಈಗ ಎರಡು ಗುಳಿಗೆ ನುಂಗಿಸ್ತೀನಿ” ಎಂದು ಹೇಳಿ ನೀರು ತರಿಸಿ, ಗುಳಿಗೆಗಳನ್ನು ನುಂಗಿಸಿಯೇ ಬಿಟ್ಟರು. ಸರಸರನೆ ದೊಡ್ಡಾಸ್ಪತ್ರೆಗೆ ಗಾಂಧಿಯ ಕಾಯಿಲೆಯ ವಿಷಯವಾಗಿ ತಾವು ಪತ್ತೆ ಹಚ್ಚಿರುವ ವಿವರಗಳನ್ನೂ ನಮೂದಿಸಿ ಕೈಗೆ ಕೊಟ್ಟರು.
*
ಮೊಮ್ಮಗನ ಸ್ಥಿತಿ ಚಿಂತಾಜನಕವಾದುದೆಂಬುದನ್ನು ಕರಿಸಿದ್ದೇಗೌಡನಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅವನ ಆಸೆಯ ಕುಡಿ ತನ್ನ ಮಗಳು ನಿಂಗಮ್ಮ ಮತ್ತು ಅವಳ ಮಕ್ಕಳು ಪದ್ದಿ ಮತ್ತು ಗಾಂಧಿ. ಪದ್ದಿ ಎಷ್ಟೇ ಆದರೂ ನೆರೆಮನೆಗೆ ಹೋಗುವ ಹೆಣ್ಣು. ಗಾಂಧಿಯ ಮೇಲೆ ಕರಿಸಿದ್ದೇಗೌಡನಿಗೆ ಎಲ್ಲೂ ಇಲ್ಲದ ಪ್ರೀತಿ. ತನ್ನ ಈ ಮೊಮ್ಮಗನಿಗೆ ಹೆಸರು ಕಟ್ಟಿದ್ದೇ ಒಂದು ಮರೆಯಲಾಗದ ಘಟನೆ: ಕರಿಸಿದ್ದೇಗೌಡನ ಜೀವನದಲ್ಲಿ ಹದಿನೈದು ವರ್ಷಗಳ ಹಿಂದಿನ ಮಾತು. ಹೊಲ ಉತ್ತು ಸಾಕಾಗೆ ತಾನೂ ಮತ್ತು ಅಳಿಯ ಬುಕ್ಕೇಗೌಡ ಹೊತ್ತು ಮುಳುಗಿದ ಮೇಲೆ ಬಂದಾಗ ಮೊರತುಂಬ ರಗರಗನೆ ಉರಿಯುತ್ತ ಮೊಮ್ಮಗು ಮಲಗಿತ್ತು. ಕರಿಸಿದ್ದೇಗೌಡ ಹಿಗ್ಗಿ ಹೀರೇಕಾಯಿ ಆದ. ತನ್ನ ಮೊಮ್ಮಗನ ಅಗಲವಾದ ಕಿವಿಗಳನ್ನು ಕಂಡು ಆನಂದಿಸುತ್ತ ಜೋಯಿಸರ ಮನೆಗೆ ಹಾರಿದ. ಜೋಯಿಸರು ಮಗು ಬಹು ಪ್ರಶಸ್ತವಾದ ಘಳಿಗೆಯಲ್ಲಿ ಹುಟ್ಟಿದೆ ಎಂದು ಲೆಕ್ಕಾ ಹಾಕಿ ಹೇಳಿ, ಮಗುವಿನ ಕಿವಿ ಅಗಲವಾಗಿರುವುದರಿಂದಲೂ ಮತ್ತು ಕರಿಸಿದ್ದೇಗೌಡ ಬಹಳ ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಮಹಾತ್ಮಾಗಾಂಧೀಜಿಯವರನ್ನು ಖುದ್ದಾಗಿ ದರ್ಶನ ಪಡೆದು ಬಂದವನು ಈ ಸುತ್ತಮುತ್ತಲಿಗೆ ಇವನೊಬ್ಬನೇ ಆದುದರಿಂದಲೂ ಮಗುವಿಗೆ ‘ಮಹಾತ್ಮಾಗಾಂಧಿ’ ಎಂದು ಹೆಸರಿಡಬೇಕೆಂದೂ ತೀರ್ಮಾನ ಹೇಳಿದರು. ಕರಿಸಿದ್ದೇಗೌಡ ಎಷ್ಟು ಮುಗ್ಧ ಎಂದರೆ, ‘ಮಹಾತ್ಮಾ ಗಾಂಧೀಜಿಯವರೇ ಮತ್ತೆ ಜನ್ಮ ಪಡೆದು ನಿನ್ನ ಮಗಳ ಗರ್ಭದಲ್ಲಿ ಜನಿಸಿದ್ದಾರೆ’ ಎಂದರೆ ಅದನ್ನು ನಂಬಿಬಿಡುತ್ತಿದ್ದ. ಸದ್ಯ ಜೋಯಿಸರು ಅಂಥ ಘೋರ ಅಪರಾಧ ಮಾಡಲಿಲ್ಲ.
ಕರಿಸಿದ್ದೇಗೌಡನಿಗೆ ಎರಡು ಎಕರೆ ಹೊಲ. ಒಂದೇ ಮನೆ. ಇತ್ತೀಚೆಗೆ ಈ ಹೊಲದಲ್ಲಿ ಒಂದು ಎಕರೆಯನ್ನು ಬಡವರಿಗೆ ಮನೆಕಟ್ಟಿಕೊಳ್ಳಲೆಂದು ಹಂಚುವುದಕ್ಕಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಇದು ಕರಿಸಿದ್ದೇಗೌಡನಿಗೆ ತನ್ನ ಅಳಿಯ ಸತ್ತುದಕ್ಕಿಂತಲೂ ತೀವ್ರ ಚಿಂತೆಗೆ ಗುರಿ ಮಾಡಿತ್ತು. ಈ ಚಿಂತೆಯಲ್ಲಿ ಮುಳುಗಿ ಸರ್ಕಾರ ವಶಪಡಿಸಿಕೊಂಡಿರುವ ಒಂದು ಎಕರೆ ಭೂಮಿಯಲ್ಲಿರುವ ಸೊಗಸಾದ ಫಲ ನೀಡುವ ಹಲಸಿನ ಮರವನ್ನು ಕಡಿದುಕೊಳ್ಳುವುದೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲಿ ಸಿಕ್ಕಿಬಿದ್ದುದರಿಂದ ಅವನು ತನ್ನ ಮೊಮ್ಮಗನ ಆರೋಗ್ಯದ ಕಡೆಗೆ ಅಷ್ಟು ಗಮನ ಕೊಟ್ಟಿರಲಿಲ್ಲ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಮಗಳು ವೈದ್ಯರು ಬರೆದುಕೊಟ್ಟ ಚೀಟಿಯನ್ನು ಕೊಟ್ಟು ಗಾಂಧಿಯನ್ನು ‘ದೊಡ್ಡಾಸ್ಪತ್ರೆಗೆ ಸೇರಿಸಬೇಕಂತೆ’ ಎಂದು ಹೇಳಿದಾಗ ಕರಿಸಿದ್ದೇಗೌಡನಿಗೆ ಎದೆ ಧಸಕ್ಕೆಂದಿತು.
ಮಾರನೆಯ ದಿನವೇ ಇಡೀ ಸಂಸಾರ ಬಸ್ಸಿನಲ್ಲಿ ಅಷ್ಟೋ ಇಷ್ಟೋ ಇದ್ದ ಪುಡಿಗಂಟನ್ನು ತೆಗೆದುಕೊಂಡು ‘ದೊಡ್ಡಾಸ್ಪತ್ರೆ’ ಇರುವ ತಮ್ಮ ಜಿಲ್ಲಾ ಕೇಂದ್ರಕ್ಕೆ ಪಯಣ ಬೆಳೆಸಿತು.
ಆಸ್ಪತ್ರೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಹೊರ ರೋಗಿಗಳನ್ನು (ಔಟ್ ಪೇಷೆಂಟ್) ಪರೀಕ್ಷೆ ಮಾಡುವ ವಿಭಾಗದಲ್ಲಿ ರೋಗಿಗಳ ಹೆಸರು ದಾಖಲು ಮಾಡಿಕೊಂಡು ಚೀಟಿಯನ್ನು ಕೊಟ್ಟು ವೈದ್ಯರ ಬಳಿಗೆ ಕಳಿಸುವ ಗುಮಾಸ್ತರಿಗೆ ತಮ್ಮ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕೊಟ್ಟಿದ್ದ ಕಾಗದವನ್ನು ಕೊಟ್ಟಾಗ, ಗುಮಾಸ್ತ ಎಲ್ಲವನ್ನೂ ಓದಿ, ರೋಗಿಯ ಹೆಸರನ್ನು ಎರಡು ಮೂರು ಸಾರಿ ಓದಿ, ಏನೋ ಅನುಮಾನ ಬಂದವನಂತೆ, ಕರಿಸಿದ್ದೇಗೌಡನ ಕಡೆ ನೋಡಿ “ಯಾರನ್ನು ತೋರಿಸೋಕೆ ಕರೊಂಡು ಬಂದಿರೋದು” ಎಂದು ಕೇಳಿ, ಕರಿಸಿದ್ದೇಗೌಡ ತನ್ನ ಮೊಮ್ಮಗನನ್ನು ತೋರಿಸಲು: “ಓಹೋ! ಇವನ ಹೆಸರು ‘ಮಹಂತೇಗೌಡ’ ಅಂತ ಅಲ್ವೆ? ನಿಮ್ಮ ಡಾಕ್ಟ್ರು ಇವನ್ನ ‘ಮಹಾತ್ಮ ಗಾಂಧಿ’ ಅಂತ ಬರೆದು ಬುಟ್ಟವರಲ್ಲ!” ಎಂದು ನಕ್ಕ.
ಕರಿಸಿದ್ದೇಗೌಡ, ”ಬರೆದಿರೋದು ಸರಿಯಾಗೆ ಅದೆ ಸ್ವಾಮಿ. ಇವನ ಹೆಸರು ಮಹಾತ್ಮಾಗಾಂಧಿ ಅಂತ್ಲೆ!” ಎಂದ. ಗುಮಾಸ್ತ್ರ ಬಿಟ್ಟಬಾಯಿ ಬಿಟ್ಟುಕೊಂಡೇ ಮಹಾತ್ಮ ಗಾಂಧಿಯನ್ನು ನೋಡಿದ. “ಸರಿಯಪ್ಪ ತಗೋ ಈ ಚೀಟಿ” ಎಂದವನೆ ಹಳೆಯ ಕಾಗದದ ಜೊತೆಗೊಂದು ಹೊಸ ಚೀಟಿಯನ್ನು ಕೊಟ್ಟು ಆ ಕಡೆಗೆ ಹೋಗು ಎಂದು ತೋರಿಸಿದ.
ಅಲ್ಲೊಬ್ಬ ಇವರು ಕೊಟ್ಟ ಕಾಗದಗಳನ್ನೂ ಮತ್ತು ಇನ್ನೂ ಅನೇಕ ಹೊರ ರೋಗಿಗಳು ಕೊಟ್ಟ ಕಾಗದಗಳನ್ನೂ ತೆಗೆದುಕೊಂಡು ಒಳಗೆ ಹೋಗಿ ಒಂದು ದೊಡ್ಡ ಮೇಜಿನ ಸುತ್ತ ಕುರ್ಚಿಗಳಲ್ಲಿ ಕುಳಿತಿದ್ದ ವೈದ್ಯರ ಗುಂಪಿನ ಮುಂದೆ ಇಟ್ಟು ಬಂದ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಮಹಾತ್ಮಾಗಾಂಧಿಯ ಸರದಿ ಬಂದಾಗ ವೈದ್ಯರ ಗುಂಪು ಗಹಗಹಿಸಿತು. ಜೋರಾಗಿ ಕೂಗಿ ಕರೆದರು: ‘ಯಾರಪ್ಪಾ ಮಹಾತ್ಮಾಗಾಂಧಿ?’
“ಕರ್ಕೊಂಡು ಬಂದೇ ಸ್ವಾಮಿ, ಇಲ್ಲವನೆ” ಎಂದು ಕರಿಸಿದ್ದೇಗೌಡ ತನ್ನ ಮೊಮ್ಮಗನನ್ನು ಕರೆದುಕೊಂಡು ಒಳಗೋದ, ನಿಂಗಮ್ಮನನ್ನೂ ಮತ್ತು ಪದ್ದಿಯನ್ನೂ ಹೊರಗಡೆಯೇ ಜವಾನ ತಡೆದ.
ಕರಿಸಿದ್ದೇಗೌಡ ತಮ್ಮ ಮುಂದೆ ಕರೆದು ತಂದು ನಿಲ್ಲಿಸಿದ ವ್ಯಕ್ತಿಯನ್ನು ವೈದ್ಯ ಮಹಾಶಯರುಗಳೆಲ್ಲ ಒಂದು ವಿಚಿತ್ರ ಕಾಯಿಲೆಯನ್ನು ಪತ್ತೆ ಹಚ್ಚಿದಾಗಲೋ ಅಥವಾ ಕ್ಯಾನ್ಸರ್ ವ್ಯಾಧಿಗೆ ಔಷಧಿ ಕಂಡುಹಿಡಿದಾಗಲೋ ಆಗುವ ವಿಸ್ಮಯದಂತೆಯೇ ನೋಡಿದರು.
‘ಮಹಾತ್ಮಾಗಾಂಧಿ’ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಕಂಡು ಅವರಿಗೆ ಅಳಬೇಕೋ ನಗಬೇಕೋ ಅಥವಾ ನಂಬದಿರುವಂಥ ಒಂದು ಸ್ಥಿತಿಯಲ್ಲೇ ಇದ್ದುಬಿಡಬೇಕೋ, ಏನೂ ತೋಚದೆ ಪರೀಕ್ಷೆಯ ಕೊಠಡಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ, ಕರಿಸಿದ್ದೇಗೌಡನನ್ನು ಕರೆದು, ”ನೋಡಯ್ಯ, ನಿನ್ನ ಮೊಮ್ಮಗನಿಗೆ ಹೃದಯ ಹಾಗೂ ಮೂತ್ರಪಿಂಡಗಳ ಕಾಯಿಲೆ. ಔಷಧಗಳೆಲ್ಲಾನೂ ಬರೆದು ಕೊಡ್ತೀವಿ. ತಗೋ, ಹೇಗೆ ಸೇವಿಸಬೇಕು ಅನ್ನೋದ್ನೂ ಹೇಳ್ತಿವಿ. ಹಾಗೆ ಕೊಡು. ಸ್ವಲ್ಪ ಹುಷಾರಾಗುತ್ತೆ” ಎಂದರು. ಕರಿಸಿದ್ದೇಗೌಡನನ್ನು ಕತ್ತಿಡಿದು ನೀರಿಗೆ ಅದುಮಿದಂತಾಯಿತು.
“ನಿಂದಮ್ಮಯ್ಯ, ಏನೋ ನನ್ ಮೊಮ್ಮಗನ್ನ ಕಾಪಾಡಿ. ಇಲ್ಲೇ ಒಸಿ ದಿನ ಇಟ್ಕೊಂಡು ಉಳಿಸಿಕೊಡಿ. ನೀವು ಇವನಿಗೆ ಮಾಡೋ ಉಪಕಾರ ಈ ನನ್ನ ಅಪ್ಪನಿಗೆ ಮಾಡೋ ಉಪಕಾರ ಅಂತ ತಿಳ್ಕೊಂಡು ಮಾಡಿ; ನಿಮ್ಗೆ ಪುಣ್ಯ ಬತ್ತದೆ” ಎಂದು ಅಲ್ಲಿಯೇ ನೇತು ಹಾಕಿದ್ದ ಭಾರತದ ಭಾಗ್ಯ ವಿಧಾತ ಮಹಾತ್ಮಾಗಾಂಧೀಜಿಯವರ ಭಾವ ಚಿತ್ರಕ್ಕೆ ಕೈ ಜೋಡಿಸಿ, ಕಣ್ಣೀರು ಹಾಕುತ್ತ ನಿಂತು ಬಿಟ್ಟ. ವೈದ್ಯರು ಮರು ಮಾತಾಡದೆ ಚೀಟಿಯಲ್ಲಿ ಬರೆದು ಗಂಡಸರ ವಾರ್ಡಿನಲ್ಲಿ ಮಹಾತ್ಮಾಗಾಂಧಿಯನ್ನು ಸೇರಿಸುವುದೆಂದು ಬರೆದು ಒಬ್ಬ ಜವಾನನನ್ನು ಕರೆದು ಜೊತೆಯಲ್ಲಿ ಕಳುಹಿಸಿದರು.
*
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಮುಂದಿನ ವಿಷಯವನ್ನು ಹೆಚ್ಚಿಗೆ ಬೆಳೆಸದೆ ಮುಗಿಸುವುದು ಒಳ್ಳೆಯದೆಂದು ಕಾಣಿಸುತ್ತದೆ. ಮಹಾತ್ಮ ಗಾಂಧಿಯನ್ನು ಮೂವತ್ತು ಜನರು ಇರಬೇಕಾದ ವಾರ್ಡಿನಲ್ಲಿ ಅರವತ್ತು ಜನರಿರುವ ಕಡೆ ನೆಲದ ಮೇಲೆ ಒಂದು ಹಾಸಿಗೆ ಕೊಟ್ಟು ಹಾಕಿದರು. ಎಕ್ಸ್‌ರೇ, ತೊಂಟೆ ಪರೀಕ್ಷೆಗಳ ಜೊತೆಗೆ ಔಷಧೋಪಚಾರವೂ ನಡೆಯತೊಡಗಿತು. ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ತಂದುಕೊಡುವುದಕ್ಕೆ ಮೂರು ದಿವಸಕ್ಕೇ ಕರಿಸಿದ್ದೇಗೌಡನ ಪುಟ್ಟಗಂಟು ಕರಗಿ ಹೋಯಿತು.
ನಾಲ್ಕನೆಯ ದಿನ ಗಾಂಧಿ ತನ್ನ ಅವ್ವ ನಿಂಗಮ್ಮ ತನ್ನ ತಂಗಿಯ ಕಿವಿಯ ಮತ್ತು ತನ್ನ ಕಿವಿಯ ಓಲೆಗಳನ್ನು ಬಿಚ್ಚಿ ತನ್ನ ಅಯ್ಯನಿಗೆ ಏಕೆ ಕೊಡುತ್ತಿದ್ದರೆಂಬುದನ್ನು ಊಹಿಸಿ, ತನ್ನ ಪ್ರೀತಿಯ ಅಯ್ಯನನ್ನು ಕರೆದು ಕೇಳಿದ: “ಅಯ್ಯಾ ನನ್ನ ಊರಿಗೇ ಕರ್ಕೊಂಡು ನಡಿ. ನನ್ನ ಹಣೇಬರಹ ಇದ್ದಂಗಾಯ್ತದೆ.”
“ಅಂಗೆಲ್ಲ ಮಾತಾಡಬ್ಯಾಡ… ನಾನು ಇನ್ನೂ ಬದುಕಿವಿ ಕಣ ಮಗ… ನಿನ್ನ ಉಳಿಸಿಕೋತೀನಿ.”
ತನ್ನ ಮೇಲೆ ಅಯ್ಯನಿಗಿರುವ ಪ್ರೀತಿಗಾಗಿ ಗಾಂಧಿಗೆ ಅಳು ಒಳಗಿಂದ ಗುದ್ದುಕೊಂಡು ಬಂತು. ತನ್ನ ಪ್ರೀತಿಯ ಅಯ್ಯನ ತೊಡೆಯ ಮೇಲೆ ತಲೆ ಮಡಗಿಕೊಂಡು ದೃಷ್ಟಿಗೆ ದೃಷ್ಟಿ ಸೇರಿಸಿ ಹೇಳಿದ: “ಅಯ್ಯ ನಾನು ಸತ್ತೋದ್ರೆ ನನ್ನ ನಮ್ಮ ಅಲಸಿನ ಮರದ ಬುಡದಲ್ಲೇ ಹಾಕಬೇಕು.” ಕರಿಸಿದ್ದೇಗೌಡ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ನಿಂಗಮ್ಮ ‘ಬುಡ್ತು ಅನ್ನು’ ಎಂದು ಗಾಂಧಿಯನ್ನು ಗದರಿಕೊಂಡಳು. ಪದ್ದಿ ‘ಅಣ್ಣಾ ಅಣ್ಣಾ’ ಎಂದು ಬಿಕ್ಕಳಿಸಿ ಅತ್ತುಬಿಟ್ಟಳು.
ಇಷ್ಟೆಲ್ಲಾ ನಡೆಯುತ್ತಿರುವಾಗ ಎಂ.ಡಿ. ಪಾಸು ಮಾಡಿರುವ ದೊಡ್ಡ ಡಾಕ್ಟರ್ ಸಾಹೇಬರು ದಯಮಾಡಿಸಿ, ಗಾಂಧಿಯನ್ನು ಪರೀಕ್ಷೆ ಮಾಡಿ, ಒಂದು ಚೀಟಿಯಲ್ಲಿ ಔಷಧಿಯನ್ನು ಬರೆದು ಆದಷ್ಟು ಬೇಗ ತರಿಸಬೇಕೆಂದು ಅಪ್ಪಣೆ ಮಾಡಿ ಬೇರೆ ರೋಗಿಗಳನ್ನು ನೋಡತೊಡಗಿದರು. ಮಗಳು ಮತ್ತು ಮೊಮ್ಮಗಳ ಓಲೆಗಳನ್ನು ತೆಗೆದುಕೊಂಡು ಊರಿಗೆ ಬಂದು ಕರಿಸಿದ್ದೇಗೌಡ ಗಿರವಿ ಇಡಲು ಪ್ರಯತ್ನಿಸಿದ. ಯಾರೂ ಒಪ್ಪಲಿಲ್ಲ. ಸಾಲ ಪಡೆಯಲು ಯತ್ನಿಸಿದ. ಎಲ್ಲೂ ಒಂದು ಪೈಸೆ ಹುಟ್ಟಲಿಲ್ಲ. ಅಲಸಿನಮರ ಕೊಡುವುದಾದರೆ ಕೊಂಡುಕೊಳ್ಳುವುದಾಗಿ ಸುಳಿವು ಸಿಕ್ಕಲು, ‘ಇನ್ನೂರ ಐವತ್ತು ರೂಪಾಯಿಗಳಿಗೆ ಮರವನ್ನು ಮಾರಬೇಕಾದರೆ ಎರಡು ದಿವಸಗಳು ಹಿಡಿದವು. ಹಣ ಪಡೆದು ಕರಿಸಿದ್ದೇಗೌಡ ಬಸ್ಸು ಹತ್ತಿ ಆಸ್ಪತ್ರೆಯ ಬಳಿಗೆ ಬಂದಾಗ ಮಗಳು ನಿಂಗಮ್ಮ ಬಾಗಿಲಲ್ಲೆ ಪದ್ದಿಯನ್ನು ನಿಲ್ಲಿಸಿಕೊಂಡು ಅಳುತ್ತ ನಿಂತಿದ್ದಳು. ಕರಿಸಿದ್ದೇಗೌಡ, ‘ಗಾಂಧಿ ಹೇಗಿದ್ದಾನೆ?’ ಎಂದು ಕೇಳಲೇ ಇಲ್ಲ. ಬದಲು ‘ಯಾವಾಗ ಜೀವ ಹೋಯ್ತು?’ ಎಂದು ಕೇಳಿದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
“ರಾತ್ರಿ ಸರೊತ್ತಿನಲ್ಲಿ. ಹೆಣಾನ ಮನೇಲಿ ಮಲಗಿಸವ್ರೆ” ಎಂದು ಅಳಲು ಪ್ರಾರಂಭಿಸಿದ ಮಗಳನ್ನು ಸಂತೈಸುತ್ತ ಕರಿಸಿದ್ದೇಗೌಡ ಹೇಳಿದ: “ಮನುಷ್ರು ಸಾಯ್ದೆ ಕಲ್ಲು ಸತ್ತಾದ. ಸುಮ್ಕಿರು ಮಂತೆ” ಎಂದು ಗಾಂಧಿಯ ಹೆಣವನ್ನು ಪಡೆಯಲು ಅಪ್ಪಣೆಗಾಗಿ ದೊಡ್ಡ ಸಾಹೇಬರ ರೂಮಿನ ಕಡೆ ಹೆಜ್ಜೆ ಹಾಕಿದ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಡಾ. ಬೆಸಗರಹಳ್ಳಿ ರಾಮಣ್ಣ(1938-1998): ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಜನಿಸಿದರು. ತಾಯಿ ದೊಡ್ಡತಾಯಮ್ಮ, ತಂದೆ ಚಿಕ್ಕಎಲ್ಲೇಗೌಡ. ಎಂಬಿಬಿಎಸ್ ಪದವೀಧರರು. ರಾಜ್ಯ ಸರ್ಕಾರದ ದವಾಖಾನೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತರಾದರು. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು, ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸಲು ಮೀಸಲಿಟ್ಟವರು ರಾಮಣ್ಣ. ಒಂದೆಡೆ ಸಮುದಾಯದ ದೇಹಾರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿದರು. ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನು ಆಕರ್ಷಿಸಿತು. ಬಸವಣ್ಣ, ಗಾಂಧಿ, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸುತ್ತಲಿನ ಅಸಮಾನತೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡುತ್ತ, ಸಮಾಜವಾದಿ ಯುವಜನ ಸಭಾ, ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘರ್ಷ ಸಮಿತಿ ಮುಂತಾದ ಅನೇಕ ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದರು. ಹಳ್ಳಿಗಾಡಿನ ವೈದ್ಯರಾಗಿ ತಾವು ಕಂಡದ್ದನ್ನು ಕಂಡಂತೆ ವಾಸ್ತವ ನೆಲೆಗಟ್ಟಿನ ಮೇಲೆ ಮಾನವೀಯ ಸಂಬಂಧಗಳ ಶೋಧಕರಾಗಿ, ಗ್ರಾಮಾಂತರ ಬದುಕಿನ ನೋವು ನಲಿವುಗಳನ್ನು, ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸುವಂತಹ ವಿಭಿನ್ನ ನೆಲೆಗಳಲ್ಲಿ ಹಲವಾರು ಕತೆಗಳನ್ನು ರಚಿಸಿದರು. ಪ್ರಕಟಿತ ಕೃತಿಗಳು: ನೆಲದ ಒಡಲು, ಗರ್ಜನೆ, ಹರಕೆಯ ಹಣ, ಒಂದು ಹುಡುಗನಿಗೆ ಬಿದ್ದ ಕನಸು(ಕಥಾ ಸಂಕಲನಗಳು); ರಕ್ತ ಕಣ್ಣೀರು, ತೋಳಗಳ ನಡುವೆ(ಕಾದಂಬರಿಗಳು); ಶೋಕಚಕ್ರ(ಕವನ ಸಂಕಲನ); ಕನ್ನಂಬಾಡಿ, ಕೊಳಲು ಮತ್ತು ಖಡ್ಗ(ಸಣ್ಣ ಕತೆಗಳ ಸಂಕಲನ). ಇವರು ಬರೆದ ಜಾಡಮಾಲಿ ಮತ್ತು ನೂರುರೂಪಾಯಿ ನೋಟು ಕಥೆಗಳು ಜ್ಞಾನಪೀಠ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿ ಪ್ರಕಟಿಸುವ ‘ಭಾರತೀಯ ಕಹಾನಿಯಾ’ ಸಂಕಲನದಲ್ಲಿ ಸ್ಥಾನ ಪಡೆದಿವೆ. ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿಗಳು ಲಭಿಸಿವೆ.





