ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಮ್ಮೂರಿನ ತಲಾಠಿಯವರಿಗೆ ವರ್ಗವಾಗಿ ಅವರ ಜಾಗೆಯಲ್ಲಿ ಇನ್ನೊಬ್ಬರು ಬಂದದ್ದರಲ್ಲಿ ಅಂಥ ವಿಶೇಷವೇನೂ ಇರಬೇಕಾಗಿರಲಿಲ್ಲ. ಆದರೂ ಹೊಸಬರೊಬ್ಬರು ನಮ್ಮೂರಲ್ಲಿ ಇರಲು ಬರುತ್ತಾರೆಂದರೆ ಸ್ವಲ್ಪ ಕುತೂಹಲ ಇದ್ದೇ ಇರುತ್ತದಲ್ಲವೆ? ಅದರಲ್ಲೂ ಹೊಸದಾಗಿ ಬಂದವರು ಕ್ರಿಶ್ಚನ್ನರಾಗಿದ್ದದ್ದು ಸ್ವಲ್ಪ ಮಟ್ಟಿಗೆ ವಿಶೇಷವೇ ಆಗಿತ್ತು. ನಮ್ಮ ಊರು ಮುಖ್ಯವಾಗಿ ಹಿಂದುಗಳ ಊರು. ಎಲ್ಲೋ ಎಂಟು-ಹತ್ತು ಮುಸ್ಲಿಮರ ಮನೆಗಳನ್ನು ಬಿಟ್ಟರೆ ಬೇರೆ ಧರ್ಮದವರು ಇಲ್ಲಿ ಯಾರೂ ಇರಲಿಲ್ಲ. ಮುಸ್ಲಿಮರಾದರೂ ತೀರಾ ಅಲ್ಪಸಂಖ್ಯಾಕರಾಗಿದ್ದುದರಿಂದ ಉಳಿದವರೊಂದಿಗೆ ಹೊಂದಿಕೊಂಡು ಆಚಾರ-ವಿಚಾರ, ಉಡಿಗೆ-ತೊಡಿಗೆಗಳಲ್ಲೆಲ್ಲ ಹಿಂದುಗಳ ಹಾಗೆಯೇ ಕಾಣುತ್ತಿದ್ದರು. ಅಂತೆಯೇ ತೀರ ಬೇರೆ ರೀತಿಯ ಕ್ರಿಶ್ಚನ್ನರೊಬ್ಬರು ಇಲ್ಲಿಗೆ ಬರಲಿರುವದು ಹೆಚ್ಚಿನ ಕುತೂಹಲಕ್ಕೆ ಕಾರಣವಾಯಿತು.
ಹೊಸದಾಗಿ ಬಂದ ತಲಾಠಿಯವರ ಹೆಸರು ಸ್ಯಾಮುಯೆಲ್ ಎಂದಿತ್ತು. ಆದರೆ ಇಂಥ ಹೆಸರುಗಳನ್ನು ಕರೆದು ರೂಢಿಯಿಲ್ಲದ ನಮ್ಮೂರಿನ ಜನ ಅದನ್ನು ತರತರದಿಂದ ಕೆಡಿಸಿದರು. ಕೊನೆಗೆ ಹಾಗೂ ಹೀಗೂ ಆಗಿ ಸ್ಯಾಮಣ್ಣನವರು ಎಂಬ ಹೆಸರು ತಕ್ಕ ಮಟ್ಟಿಗೆ ಸ್ಥಿರವಾಯಿತು. ಹಾಗೆಂದು ತಮ್ಮ ಬಗ್ಗೆ ಏನು ಬೇಕಾದರೂ ಮಾಡಿಕೊಳ್ಳಲು, ತಮ್ಮ ಹೆಸರನ್ನು ಹೇಗೆ ಬೇಕಾದರೂ ಬದಲಿಸಿಕೊಳ್ಳಲು ಅವರು ನಮ್ಮೂರ ಜನರಿಗೆ ಸಲಿಗೆ ಕೊಟ್ಟಿದ್ದರೆಂದೇನೂ ಅರ್ಥವಲ್ಲ. ಊರ ಜನರ ಕೂಡ ಬಂದಾಗಿನಿಂದಲೂ ಅವರು ಬಹಳ ಬಿಗುವಿನಿಂದಲೇ ನಡೆದುಕೊಳ್ಳಲಾರಂಭಿಸಿದರು. ಯಾರ ಜೊತೆಗೂ ಸ್ನೇಹ ಬೆಳೆಸಿಕೊಳ್ಳದೆ ತಮ್ಮಷ್ಟಕ್ಕೆ ತಾವು ಇದ್ದು ಬಿಡುತ್ತಿದ್ದರು. ಮಾತಂತೂ ತೀರಾ ಕಡಿಮೆ. ಇಂಥ ಬಿಗುವಿನ ತಲಾಠಿಯನ್ನು ನಾವು ಇದುವರೆಗೆ ಕಂಡಿರಲಿಲ್ಲ. ಮೊದಲಿನ ತಲಾಠಿಯವರ ಹಾಗೆ ಇವರು ಮನೆಯಲ್ಲೇ ಕಚೇರಿ ನಡೆಸುತ್ತಿರಲಿಲ್ಲ. ಹೊತ್ತಿಗೆ ಸರಿಯಾಗಿ ಚಾವಡಿಗೆ ಹೋಗಿ ಕಚೇರಿಯ ಕೆಲಸವನ್ನೆಲ್ಲ ಅಲ್ಲೇ ಮುಗಿಸಿಬಿಡುತ್ತಿದ್ದರು. ಒಕ್ಕಲುತನವೇ ಮುಖ್ಯ ಉದ್ಯೋಗವಾದ ನಮ್ಮೂರಿನ ಜನರಿಗೆ ಇವರ ಕಚೇರಿಯ ಹೊತ್ತು ಅನುಕೂಲವಿರಲಿಲ್ಲ. ಆದರೂ ಹೊಸ ತಲಾಠಿಯವರು ತಮ್ಮ ವೇಳೆಯನ್ನೇನೂ ಬದಲಿಸಲಿಲ್ಲ. ಅವಸರದ ಕೆಲಸಕ್ಕೆ ಯಾರಾದರೂ ಮನೆಗೆ ಬಂದರೆ, ಇಲ್ಲವೆ ಆಫೀಸಿನ ಹೊತ್ತು ಮೀರಿ ಬಂದರೆ, ಅವರು ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ತಿರುಗಿ ಕಳಿಸಿಬಿಡುತ್ತಿದ್ದರು. ಹಳ್ಳಿಯ ಊರಲ್ಲಿ ಇಷ್ಟೆಲ್ಲಾ ಕಟ್ಟುನಿಟ್ಟಾದರೆ ಹೇಗೆ ನಡೆದೀತು? ಎಂದು ನಾವೆಲ್ಲ ಮೊದಮೊದಲು ಸಾಕಷ್ಟು ಗೊಣಗಿಕೊಂಡೆವು. ಕೆಲವರು ದೊಡ್ಡ ಮನುಷ್ಯರು ಸಿಟ್ಟೂ ಆದರು. ಆದರೆ ಹೊಸ ತಲಾಠಿಯವರು ಇದ್ಯಾವದಕ್ಕೂ ಸೊಪ್ಪು ಹಾಕಲಿಲ್ಲ. ಇದರ ಮೇಲೆ ತಲಾಠಿಗಳಿಗೆಲ್ಲ ಸಾಮಾನ್ಯವಾದ ಚಿಲ್ಲರೆ ಲಂಚದ ಚಟ ಅವರಿಗೆ ಇರಲಿಲ್ಲ. ಈ ವಿಷಯದಲ್ಲಿ ಕ್ಷುಲ್ಲಕತನಕ್ಕಿಳಿಯದೆ, ಒಂದು ಮಟ್ಟವನ್ನು ಕಾಪಾಡಿಕೊಂಡು ತಮ್ಮ ಹುದ್ದೆಗೆ ಒಂದು ಬಗೆಯ ಗೌರವ ತಂದುಕೊಂಡರು. ಸುಳ್ಳು ದಾಖಲೆ ಸೃಷ್ಟಿಸುವದು, ಇದ್ದುದನ್ನು ತಿದ್ದುವದು, ಖೊಟ್ಟಿ ಸರ್ಟಿಫಿಕೇಟ್ ಕೊಡುವದು ಮೊದಲಾದ ತಲಾಠಿ ಹುದ್ದೆಗೆ ತಲೆತಲಾಂತರದಿಂದ ಬಂದ ಭಾನಗಡಿಗಳ ವಿಷಯದಲ್ಲಿ ಅವರು ಬಹಳ ಕಟ್ಟುನಿಟ್ಟಾಗಿದ್ದುದರಿಂದ ಊರಿನ ಗೌಡರು ಮೊದಲುಗೊಂಡು ಎಲ್ಲರೂ ಅವರಿಗೆ ಅಂಜಿಕೊಂಡು ನಡೆಯುವಂತಾಯಿತು. ಈ ಎಲ್ಲ ಕಾರಣಗಳಿಂದಾಗಿ ಅವರ ವ್ಯಕ್ತಿತ್ವಕ್ಕೆ ಒಂದು ಬಗೆಯ ವಿಶೇಷ ದರ್ಪ ಬಂದಿತ್ತು.
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
ನಮ್ಮ ಊರಿಗೆ ಬರುತ್ತಿದ್ದ ತಲಾಠಿಗಳೆಲ್ಲ ಸಾಮಾನ್ಯವಾಗಿ ಕಾಳು-ಕಡಿ, ಕಾಯಿ-ಪಲ್ಲೆ, ಉರುವಲಿನ ಕಟ್ಟಿಗೆ, ಬೆಣ್ಣೆ ಮುಂತಾದ ವಸ್ತುಗಳನ್ನು ಕೊಳ್ಳುತ್ತಿದ್ದುದು ಬಹಳ ಅಪರೂಪ. ಯಾರಾದರೂ ತಲಾರಿಯವರ ಹತ್ತಿರ ಕೆಲಸವಿದ್ದವರು ಎಗ್ಗಿಲ್ಲದೆ ಇವನ್ನೆಲ್ಲ ಒದಗಿಸುತ್ತಿದ್ದರು. ಇದೆಲ್ಲ ಲಂಚ ಎಂದು ನಾವ್ಯಾರೂ ಭಾವಿಸುತ್ತಿದ್ದಿಲ್ಲ. ಊರಿನಲ್ಲಿ ಕೆಲಸ ಮಾಡುವ ಸರಕಾರೀ ಅಧಿಕಾರಿಗಳಿಗೆ ಸಲ್ಲಬೇಕಾದ ಮರ್ಯಾದೆ ಎಂಬ ಔದಾರ್ಯದಿಂದಲೇ ಇದೆಲ್ಲ ನಡೆಯುತ್ತಿತ್ತು. ಆದರೆ ಸ್ಯಾಮಣ್ಣನವರು ಇಂಥದನ್ನೆಲ್ಲ ನಿರ್ದಾಕ್ಷಿಣ್ಯವಾಗಿ, ಅನೇಕ ಸಲ ಒರಟಾಗಿ, ನಿರಾಕರಿಸಿಬಿಟ್ಟರು. ಇದು ಊರವರ ಮನಸ್ಸಿಗೆ ಸಹಜವಾಗಿಯೇ ನೋವನ್ನುಂಟುಮಾಡಿತು. ಇವನೊಬ್ಬ ಸೊಕ್ಕಿನ ಮನುಷ್ಯ, ವಿಚಿತ್ರಪ್ರಾಣಿ, ಮಂದೀ ಹೊಂದಲಗೇಡಿ ಎಂದೇ ನಾವೆಲ್ಲ ತೀರ್ಮಾನಿಸಿದೆವು.
ಸ್ಯಾಮಣ್ಣ ಮೊದಲು ಒಬ್ಬರೇ ಬಂದರು. ಹಿಂದಿನ ತಲಾಠಿಯವರು ಬಿಟ್ಟುಹೋಗಿದ್ದ ಮನೆಯನ್ನೇ ಬಾಡಿಗೆಗೆ ತೆಗೆದುಕೊಂಡರು. ಅದೇನು ಹೊಸ ಬಗೆಯ ಕಾಂಕ್ರೀಟಿನ ಮನೆ ಅಲ್ಲ. ಊರಿನಲ್ಲಿಯ ನಮ್ಮೆಲ್ಲರ ಮನೆಗಳಂಥದೇ ಒಂದು. ಕಲ್ಲು ಮಣ್ಣಿನ ಗೋಡೆಗಳು, ಬೇವಿನ ಮರದ ಅಡ್ಡಾತಿಡ್ಡಿ ತೊಲೆ-ಕಂಬಗಳು, ಮಣ್ಣಿನ ಮೇಲುಮುದ್ದಿಯ ಮಾಳಿಗೆ, ದನಗಳಿರದಿದ್ದರೂ ದಂದಕ್ಕಿಯ ಜಾಗೆ. ಆದರೆ ಇದ್ದ ಮನೆಯನ್ನೇ ಸಾರಿಸಿ ಸ್ವಚ್ಛ ಮಾಡಿ ಇಟ್ಟುಕೊಳ್ಳುವದರಲ್ಲಿ ನಮ್ಮಂಥ ಒಕ್ಕಲುತನದ ಮನೆಗಳವರಿಗೆ ಸಾಧ್ಯವಾಗದ ಒಂದು ಬಗೆಯ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಎಷ್ಟೇ ಅಂದರೂ ಕ್ರಿಶ್ಚನ್ನರಲ್ಲವೆ?- ಎಂದುಕೊಂಡ
ತಮ್ಮ ಬಟ್ಟೆ-ಬರೆಗಳ ವಿಷಯದಲ್ಲೂ ಸ್ವಾಮಣ್ಣ ಅಷ್ಟೇ ಅಚ್ಚುಕಟ್ಟಾಗಿರುತ್ತಿದ್ದರು. ಚಾವಡಿಗೆ ಹೋಗುವಾಗ ಗಂಜೀ ಹಾಕಿ ಚೆನ್ನಾಗಿ ಇಸ್ತ್ರಿ ಮಾಡಿದ ಶರ್ಟು, ಪ್ಯಾಂಟು, ಕೋಟು ಹಾಕಿಕೊಂಡು ಹೋಗುತ್ತಿದ್ದರು. ತಲೆಯ ಮೇಲೆ ನಾವು ಸಣ್ಣವರಿದ್ದಾಗ ನಮ್ಮ ತಂದೆ ಹುಬ್ಬಳ್ಳಿಯ ಪೇಟೆಯಿಂದ ತಂದು ಕೊಡುತ್ತಿದ್ದಂಥ ‘ಸಾಹೇಬರ ಟೊಪಿಗಿ’ ಹಾಕಿಕೊಳ್ಳುತ್ತಿದ್ದರು. ಈ ವೇಷದಲ್ಲಿ ಸಿಗರೇಟು ಹಚ್ಚಿಕೊಂಡು ಚಾವಡಿಗೆ ಹೊರಟರೆ ಹುಬ್ಬಳ್ಳಿಯ ರೇಲ್ವೆ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುವ ಆಂಗ್ಲೋ-ಇಂಡಿಯನ್ನರ ಹಾಗೆ ಕಾಣುತ್ತಿದ್ದರು. ಹಳ್ಳಿಯ ಊರಿನಲ್ಲಿ ಇಂಥ ವೇಷ, ಅದೂ ಒಬ್ಬ ತಲಾಠಿಗೆ, ಬಹಳ ವಿಚಿತ್ರವಾಗಿ ಕಾಣಿಸುತ್ತಿತ್ತು. ಈ ಪರಕೀಯ ವೇಷವೂ ನಮ್ಮ-ಅವರ ನಡುವಿನ ಅಂತರ ಹೆಚ್ಚುವದಕ್ಕೆ ಕಾರಣವಾಯಿತು.
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಆದರೆ ಸ್ಯಾಮಣ್ಣನವರು ನೋಡಲಿಕ್ಕೆ ಅಷ್ಟೇನೂ ಚಂದ ಕಾಣುತ್ತಿದ್ದಿಲ್ಲ. ಇಲ್ಲಿ ‘ಅಷ್ಟೇನು’ ಎಂಬ ಮಾತೂ ಸ್ವಲ್ಪ ಹೆಚ್ಚೇ ಆಯಿತೆನ್ನಬೇಕು. ಕಪ್ಪು ಬಣ್ಣ, ತೆಳ್ಳಗೆ ಬಹಳ ಉದ್ದದ ನಿಲುವು, ಕೂದಲು ಉದುರಿ ಬೋಳಾದ ತಲೆ, ಮೆಳ್ಳಗಣ್ಣು, ಕೊರೆದ ಬೆಂಡೀಕಾಯಿಯಂಥ ಮೂಗು. ಹಿಂದಕ್ಕೆ ಹರಿಜನರಾಗಿದ್ದು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮತಾಂತರ ಹೊಂದಿದವರಾಗಿರಬೇಕೆಂದು ನಮ್ಮೂರಲ್ಲಿ ಅನೇಕರು ಆಡಿಕೊಳ್ಳುತ್ತಿದ್ದರು. ಆದರೆ ಸತ್ಯ ಸಂಗತಿ ಏನೆಂದು ನಮಗ್ಯಾರಿಗೂ ಗೊತ್ತಿರಲಿಲ್ಲ. ಯಾಕೆಂದರೆ ಇಂಥ ವಿಷಯಗಳನ್ನು ಅವರೊಡನೆ ಮಾತಾಡಿ ತಿಳಿದುಕೊಳ್ಳುವಷ್ಟು ಸಲಿಗೆಯನ್ನು ಅವರು ಯಾರಿಗೂ ಕೊಟ್ಟಿರಲಿಲ್ಲ. ಯಾವಾಗಲೂ ಚಾವಡಿಯಲ್ಲಿ ಅವರ ಜೊತೆಗೇ ಇರುತ್ತಿದ್ದ ಗೌಡರಿಗೇ ಅವರ ವಿಷಯ ಗೊತ್ತಿರಲಿಲ್ಲವೆಂದಮೇಲೆ ನಮ್ಮಂಥವರ ಪಾಡೇನು?
ಹೀಗೆ ಸ್ಯಾಮಣ್ಣನವರು ಕುರೂಪಿ ಎಂದು ಕಣ್ಣಿಗೆ ಹೊಡೆಯುವಂತಿದ್ದರೂ ಆ ಕಾರಣಕ್ಕಾಗಿ ಅವರು ಊರ ಜನರ ಕಣ್ಣಿನಲ್ಲಿ ಹಗುರವಾಗಿರಲಿಲ್ಲ. ತಮ್ಮ ರೂಪದ ಕೊರತೆಯನ್ನು, ಅಧಿಕಾರ, ದರ್ಪ, ಗಾಂಭೀರ್ಯಗಳಿಂದ ತುಂಬಿಕೊಂಡಿದ್ದರು. ಹೀಗಾಗಿ ಕೆಲವರು ಬೆನ್ನ ಹಿಂದೆ ಅವರ ರೂಪದ ಬಗ್ಗೆ ಆಡಿಕೊಂಡರೂ ಎದುರಿಗೆ ಮಾತ್ರ ಎಲ್ಲರೂ ಅವರನ್ನು ಮರ್‍ಯಾದೆಯಿಂದಲೇ ಕಾಣುತ್ತಿದ್ದರು.
ಈ ರೀತಿ ನಾಲ್ಕಾರು ತಿಂಗಳು ಕಳೆದು, ನಮ್ಮೂರ ಪ್ರಾಥಮಿಕ ಶಾಲೆಯ ಪರೀಕ್ಷೆಗಳು ಮುಗಿದು, ಶಾಲೆಗಳಿಗೆ ಬೇಸಿಗೆಯ ಸೂಟಿ ಆರಂಭವಾದ ಮೇಲೆ ಸ್ಯಾಮಣ್ಣನವರ ಹೆಂಡತಿ ಮತ್ತು ಮೂರು ಜನ ಮಕ್ಕಳು ಊರಿಗೆ ಬಂದು ಅವರನ್ನು ಕೂಡಿಕೊಂಡರು. ಶಾಲೆಗಳು ಮತ್ತೆ ಆರಂಭವಾದಾಗಲೇ ಅವರ ಹೆಂಡತಿ ನಮ್ಮೂರ ಕನ್ನಡ ಹೆಣ್ಣುಮಕ್ಕಳ ಶಾಲೆಗೆ ಶಿಕ್ಷಕಿಯಾಗಿ ವರ್ಗಮಾಡಿಸಿಕೊಂಡು ಬಂದಿದ್ದಾರೆಂದು ನಮಗೆಲ್ಲಾ ಗೊತ್ತಾದದ್ದು.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಆದರೆ ಸ್ಯಾಮಣ್ಣನವರ ಹೆಂಡತಿ ಊರಿಗೆ ಬಂದು ಎಷ್ಟೋ ದಿನಗಳಾದರೂ ಆಕೆ ಮನೆಬಿಟ್ಟು ಹೊರಗೇ ಬರಲಿಲ್ಲ. ಮನೆಯ ಹಿತ್ತಲಲ್ಲಿಯೇ ಪಾಯಿಖಾನೆ, ಭಾವಿಗಳಿದ್ದುದರಿಂದ ಅವರು ಯಾವುದಕ್ಕೂ ಹೊರಗೆ ಹೋಗುವ ಪ್ರಸಂಗವೇ ಬರುತ್ತಿರಲಿಲ್ಲ. ಅವರ ಮಕ್ಕಳು ಕೂಡ ಆಟಕ್ಕಾಗಿ ಹೊರಗೆ ಬರುತ್ತಿದ್ದುದೇ ಕಡಿಮೆ. ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳನ್ನು ತೊಟ್ಟುಕೊಂಡು, ಅಚ್ಚುಕಟ್ಟಾಗಿ ತಲೆ ಬಾಚಿಕೊಂಡು ಓಡಾಡುತ್ತಿದ್ದ ಆ ಹುಡುಗರು ಕಪ್ಪಗಿದ್ದರೂ ಮುದ್ದಾಗಿ ಕಾಣುತ್ತಿದ್ದರು. ಇಂಥವರು ನಮ್ಮ ಹಳ್ಳಿಯ ಮಕ್ಕಳ ಮಣ್ಣಾಟದಲ್ಲಿ ಭಾಗಿಯಾದಾರೆಂದು ನಿರೀಕ್ಷಿಸುವದು ತಪ್ಪೇ ಆಗಿತ್ತು. ಆದರೆ ನಮ್ಮ ಹುಡುಗರಿಗೆ ಅವರನ್ನು ಮಾತಾಡಿಸಬೇಕೆಂದು ಆಸೆ, ಅವರ ಕೂಡ ಆಡಬೇಕೆಂಬ ಕುತೂಹಲ, ಅವರ ಮನೆಯ ಒಳಗೆ ಹೋಗಿ ಬರಬೇಕೆಂಬ ಮಹತ್ವಾಕಾಂಕ್ಷೆ. ಇದರ ಮೇಲೆ ರವಿವಾರಕ್ಕೊಮ್ಮೆ ಮುಂಜಾನೆ ಮನೆಯ ಬಾಗಿಲು ಮುಚ್ಚಿಕೊಂಡು ಏಸುವಿನ ಕೀರ್ತನೆಗಳನ್ನು ನಮಗೆ ತೀರ ಅಪರಿಚಿತವಾದ ಧಾಟಿಗಳಲ್ಲಿ ಹಾಡಿಕೊಳ್ಳುತ್ತಿದ್ದರು. ಆಗ ಅವರ ಮನೆಯ ಮುಚ್ಚಿದ ಬಾಗಿಲ ಮುಂದೆ ನಮ್ಮೂರ ಹುಡುಗರ ದೊಡ್ಡ ಗುಂಪೇ ಸೇರಿ ಆಶ್ಚರ್ಯ, ಕುತೂಹಲಗಳಿಂದ ಕೇಳುತ್ತ ನಿಲ್ಲುತ್ತಿತ್ತು.
ಇದೆಲ್ಲದರಿಂದಾಗಿ ಸ್ಯಾಮಣ್ಣನವರ ಕುಟುಂಬದ ಸುತ್ತಲೂ ಒಂದು ಬಗೆಯ ನಿಗೂಢ ರಹಸ್ಯ ಬೆಳೆಯತೊಡಗಿತ್ತು. ನಗರಗಳಲ್ಲಿ ಇಂಥ ನಿಗೂಢ ಜೀವನದ ಬಗ್ಗೆ ಯಾರ ಲಕ್ಷ್ಯವೂ ಇರುವದಿಲ್ಲ. ಹತ್ತಾರು ವರ್ಷ ನೆರೆ-ಹೊರೆಯಲ್ಲಿ ಇದ್ದವರಲ್ಲಿ ಪರಿಚಯ ಕೂಡ ಬೆಳೆದಿರುವದಿಲ್ಲ. ಆದರೆ ಹಳ್ಳಿಗಳಲ್ಲಿ ಎಲ್ಲರ ಜೀವನವೂ ಬಟ್ಟಬಯಲು. ಎಲ್ಲರೂ ಎಲ್ಲರಿಗೂ ಪರಿಚಿತರು. ಯಾರ ಮನೆಯಲ್ಲಿ ಏನೇ ಹೊಸ ಸಂಗತಿ ನಡೆದರೂ ಬಲು ಬೇಗ ಪತ್ರಿಕೆಯಲ್ಲಿ ಪ್ರಕಟವಾದಷ್ಟು ನಿಚ್ಚಳವಾಗಿ ಇಡೀ ಊರಿಗೇ ಗೊತ್ತಾಗಿಬಿಡುತ್ತದೆ. ಅದರಲ್ಲೂ ರಹಸ್ಯವಾಗಿರಬೇಕೆಂದಷ್ಟೂ ಸಂಗತಿಗಳು ಚಿತ್ರವಿಚಿತ್ರವಾದ ಬಣ್ಣ-ಆಕಾರ ತಳೆದು ಹರಡುತ್ತವೆ. ಇಂಥ ಬಟ್ಟ ಬಯಲಿನ ಬದುಕಿನ ನಡುವೆ ನಾವು ಸುಲಭವಾಗಿ ಭೇದಿಸಲಾಗದ ರಹಸ್ಯದ ಕೋಟೆಯೊಂದು ಬೆಳೆಯತೊಡಗಿದ್ದು ಊರಿನವರಿಗೆಲ್ಲಾ ಬಹಳ ಕಿರಿಕಿರಿಯನ್ನುಂಟು ಮಾಡಿತು. ಇದು ಸಲ್ಲದ ಕುತೂಹಲಕ್ಕೆ, ಬಗೆಬಗೆಯ ಊಹಾಪೋಹಗಳಿಗೆ ಕಾರಣವಾಯಿತು.
ಉದಾಹರಣೆಗೆ, ಸ್ಯಾಮಣ್ಣನವರ ಹೆಂಡತಿ ಹುಬ್ಬಳ್ಳಿಯ ಆಂಗ್ಲೋ-ಇಂಡಿಯನ್ ಹೆಂಗಸರಂತೆ ಸ್ಕರ್ಟು ತೊಟ್ಟು ಬಾಬ್ ಕಟ್ ಮಾಡಿಸಿಕೊಂಡಿದ್ದಾಳೆಯೆ?- ಎಂದು ನಮಗೆಲ್ಲಾ ಜಿಜ್ಞಾಸೆಯಾಯಿತು. ಸ್ಯಾಮಣ್ಣನವರ ಉಡಿಗೆ-ತೊಡಿಗೆಗಳನ್ನು ನೋಡಿದ ಮೇಲೆ ಅವರ ಹೆಂಡತಿಯ ಉಡುಪಿನ ಬಗೆಗೆ ಈ ಊಹೆ ಹುಟ್ಟುವದು ಅಸಹಜವೇನೂ ಆಗಿರಲಿಲ್ಲ. ಒಂದು ವೇಳೆ ಈ ಊಹೆ ನಿಜವೇ ಆಗಿದ್ದರೆ ನಮ್ಮ ಊರಿನಲ್ಲಿ ಇದೊಂದು ಕೋಲಾಹಲವನ್ನೇ ಮಾಡಬಹುದಾಗಿದ್ದ ಸಾಧ್ಯತೆ ಇತ್ತು.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಅಂತೂ ಕೊನೆಗೊಮ್ಮೆ ಈ ಊಹಾಪೋಹಗಳಿಗೆ ಮುಕ್ತಾಯ ಹೇಳುವ ಕಾಲ ಬಂತು. ರಜೆ ಮುಗಿದು ಶಾಲೆಗಳು ಮತ್ತೆ ಆರಂಭವಾದವು. ಸ್ಯಾಮಣ್ಣನವರ ಹೆಂಡತಿ ದಿನವೂ ತಮ್ಮ ಮನೆಯಿಂದ ಮೂರೂ ಮಕ್ಕಳನ್ನು ಜೊತೆಗೆ ಕರೆದುಕೊಂಡು ಶಾಲೆಗೆ ಹೋಗತೊಡಗಿದರು. ಊರ ಗಂಡಸರೂ ಹೆಂಗಸರೂ ಅವಳು ಹೋಗುವುದನ್ನು ನಿಂತು ನೋಡಿದರು.
ಆಕೆ, ಊರ ಗಂಡಸರೂ ಹೆಂಗಸರೂ ನಿಂತು ನೋಡುವ ಹಾಗೇ ಇದ್ದಳು. ಸ್ಕರ್ಟು ತೊಟ್ಟಿರಲಿಲ್ಲ, ಬಾಬ್ ಕಟ್ಟು ಇರಲಿಲ್ಲ. ಬಿಳಿಯ ಬಣ್ಣದಲ್ಲಿ ಹಗುರ ಬಣ್ಣಗಳ ವಿರಳವಾದ ಪ್ರಿಂಟೆಡ್ ವಿನ್ಯಾಸಗಳಿದ್ದ ಶುಭ್ರವಾದ ಸೀರೆಯನ್ನುಟ್ಟಿದ್ದಳು. ನೀಟಾಗಿ ತಲೆ ಬಾಚಿ ಜಡೆ ಹಾಕಿಕೊಂಡಿದ್ದಳು. ಸೆರಗನ್ನು ಹೆಗಲ ಮೇಲೆ ಹಾಗೇ ಇಳಿ ಬಿಟ್ಟಿದ್ದಳು. ಬಣ್ಣ ಸಾದಗಪ್ಪು, ಎತ್ತರ ಸ್ಯಾಮಣ್ಣನವರಿಗಿಂತ ಕಡಿಮೆ. ಆದರೆ ಮುಖ-ಮೈಕಟ್ಟುಗಳೆಲ್ಲ ಕಡೆದ ಶಿಲ್ಪದ ಹಾಗೆ ಪ್ರಮಾಣಬದ್ಧವಾಗಿ ತುಂಬಿಕೊಂಡಿದ್ದವು. ಮೂರು ಮಕ್ಕಳ ತಾಯಿಯಾದರೂ ಮುಖದ ಮೇಲೆ ತಾರುಣ್ಯದ ಕಳೆ ಎಷ್ಟೂ ಮಾಸಿರಲಿಲ್ಲ. ಒಂದು ಬಗೆಯ ಮಾದಕ ಸೌಂದರ್ಯ ಆಕೆಯದು. ಆದರೆ ಆ ಎಲ್ಲ ಸೌಂದರ್ಯದ ಅರಿವೇ ಇಲ್ಲದಂತೆ, ಉಳಿದವರ ಲಕ್ಷ್ಯವೇ ಇಲ್ಲದಂತೆ, ತನ್ನಷ್ಟಕ್ಕೆ ತಾನು ನಿಧಾನವಾಗಿ, ಸಹಜವಾಗಿ, ಆಕರ್ಷಕವಾಗಿ ನಡೆದುಕೊಂಡು ಹೋಗುತ್ತಿದ್ದಳು. ಒಮ್ಮೆ ಹಾದು ಹೋದರೆ ತಾಸುಗಟ್ಟಲೆ ಅವಳ ಮುಖದ ಪೌಡರಿನ ಮೃದುವಾದ ಪರಿಮಳ ಗಾಳಿಯಲ್ಲಿ ನಿಲ್ಲುತ್ತಿತ್ತು. ಆಕೆ ಮೊದಲ ಬಾರಿ ಹಾಗೆ ನಡೆದುಹೋದಾಗ ಕುತೂಹಲ, ಬೆರಗುಗಳಿಂದ ನಿಂತು ನೋಡಿದ ನಮ್ಮೂರ ಜನ ಅನೇಕ ವರ್ಷಗಳಾದ ಮೇಲೂ ಹಾಗೇ ನೋಡುತ್ತಿದ್ದರು,- ಗಂಡಸರು ಆಶೆಯಿಂದ, ಹೆಂಗಸರು ಸ್ಯಾಮಣ್ಣನಂಥ ಕುರೂಪಿಗೆ ಹೇಗೆ ಸಿಕ್ಕಳೋ ಎಂದು ಊರವರೆಲ್ಲ ಆಶ್ಚರ್ಯಪಟ್ಟರು. ಒಟ್ಟಿನಲ್ಲಿ ಇದೊಂದು ಇಜ್ಜೋಡಿ ಎಂಬುದರಲ್ಲಿ ಎರಡು ಮಾತಿರಲಿಲ್ಲ.
ಆಕೆಯ ಹೆಸರು ಮೇರಿ. ಬಂದು ಅನೇಕ ದಿನಗಳಾದರೂ ಆಕೆಯಾಗಲಿ, ಸ್ಯಾಮಣ್ಣನವರಾಗಲಿ ಊರ ಇತರ ಜನರೊಡನೆಯಾಗಲಿ ನೆರೆಹೊರೆಯವರ ಜೊತೆಗಾಗಲಿ ಸ್ನೇಹ, ಸಲಿಗೆ ಬೆಳೆಸಲೇ ಇಲ್ಲ. ಹಿಂದುಗಳೇ ಇರುವ ಹಳ್ಳಿಯಲ್ಲಿ ಜನ ತಮ್ಮನ್ನು ಕೀಳು ಜಾತಿಯವರೆಂದು ಹೀನಾಯವಾಗಿ ಕಾಣುತ್ತಾರೆಂದು ಭಾವಿಸಿದರೋ ಅಥವಾ ಅಶಿಕ್ಷಿತರಾದ, ಶುಚಿ-ರುಚಿ ಗೊತ್ತಿಲ್ಲದ ಹಳ್ಳಿಯ ಅಸಭ್ಯ ಜನರೊಡನೆ ಸಲಿಗೆ ಬೆಳೆಸುವದು ತಮ್ಮ ಅಂತಸ್ತಿಗೆ ಕಡಿಮೆ ಎಂದುಕೊಂಡರೋ ಅಂತೂ ಊರಲ್ಲಿ ಒಂದು ದ್ವೀಪವಾಗಿ ತಮ್ಮಷ್ಟಕ್ಕೆ ತಾವು ಉಳಿದುಕೊಂಡರು. ಮೇರಿ ಶಾಲೆಯಲ್ಲಿ ಕೂಡ ತಾನೇನೋ, ತನ್ನ ಕ್ಲಾಸೇನೊ ಎಂದುಕೊಂಡು ಇದ್ದುಬಿಡುತ್ತಿದ್ದಳಂತೆ. ಉಳಿದ ಸಹೋದ್ಯೋಗಿ ಶಿಕ್ಷಕಿಯರೊಡನೆ ಅಷ್ಟಕ್ಕಷ್ಟೇ ಮಾತಾಡುತ್ತಿದ್ದಳಂತೆ. ಬಿಂಕದ ಹೆಂಗಸು ಎಂದು ಉಳಿದವರು ಕೂಡ ಮೇಲೆ ಬಿದ್ದು ಮಾತಾಡಿಸುವ ಉಸಾಬರಿಗೆ ಹೋಗಲಿಲ್ಲ. ಅವರ ಮಕ್ಕಳೂ ಕೂಡ ನಮ್ಮ ಮಕ್ಕಳೊಡನೆ ಸೇರಲಿಲ್ಲ. ಇವರ ಮನೆಗೆ ಬೇರೆ ಸಂಬಂಧಿಕರು ಯಾರೂ ಬರುತ್ತಿರಲಿಲ್ಲ. ತೀರಾ ಆಕಸ್ಮಿಕವಾಗಿ ಹುಬ್ಬಳ್ಳಿಯಿಂದ ಒಬ್ಬಿಬ್ಬರು ಪಾದ್ರಿಗಳು ಬರುತ್ತಿದ್ದರು. ಆಗ ಅವರ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಹಬ್ಬಗಳು ವಿಧ್ಯುಕ್ತವಾಗಿ ನಡೆಯುತ್ತಿದ್ದವು. ಆದರೆ ಎಲ್ಲಾವೂ ಮನೆಯ ಒಳಗೇ. ಇವರು ಒಮ್ಮೊಮ್ಮೆ ರವಿವಾರ ಹುಬ್ಬಳ್ಳಿಯ ಚರ್ಚ್‌ಗೆ ಹೋಗಿ ಬರುತ್ತಿದ್ದರು. ವರ್ಷಕ್ಕೊಮ್ಮೆ ಕ್ರಿಸ್‌ಮಸ್ ಕಾಲಕ್ಕೆ ಒಂದಿಷ್ಟು ಸಂಭ್ರಮದ ಉತ್ಸವ ಆಚರಿಸುತ್ತಿದ್ದರು. ಮಕ್ಕಳು ಆ ದಿನ ಹೊಸ ಅರಿವೆತೊಟ್ಟು ಒಂದಿಷ್ಟು ಪಟಾಕಿಗಳನ್ನು ಹಾರಿಸುತ್ತಿದ್ದರು. ಓಣಿಯ ಮಕ್ಕಳೂ ದೊಡ್ಡವರೂ ತಂತಮ್ಮ ಮನೆಯ ಮುಂದೆ ನಿಂತು ದೂರದಿಂದಲೇ ಇದನ್ನೆಲ್ಲ ನೋಡಬೇಕು. ಇವರು ಜಗತ್ತಿನಲ್ಲಿ ತಮ್ಮ ಹೊರತು ಬೇರೆ ಯಾರೂ ಇಲ್ಲ ಎಂಬಂತೆ ತಮ್ಮಷ್ಟಕ್ಕೆ ತಾವು ಸಂತೋಷಪಟ್ಟುಕೊಳ್ಳಬೇಕು. ಹೀಗೆ ಇಡೀ ಕುಟುಂಬ ತನ್ನ ನಿಗೂಢತೆಯ ತತ್ತಿಯೊಳಗಿಂದ ಹೊರಗೆ ಬರಲೇ ಇಲ್ಲ. ಅವರು ನಿಗೂಢವಾದಷ್ಟೂ ನಮ್ಮೂರ ಜನರ ಕುತೂಹಲ ಬೆಳೆಯುತ್ತ ಹೋಯಿತು.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಸ್ಯಾಮಣ್ಣನವರು ಹೊರಗೆ ಹೇಗೋ, ಮನೆಯಲ್ಲೂ ಹಾಗೇ ದರ್ಪ, ಗಾಂಭೀರ್ಯದಿಂದಲೇ ಇರುತ್ತಿದ್ದರೆಂದು ಕಾಣುತ್ತದೆ. ಯಾಕೆಂದರೆ ಮನೆಯಲ್ಲಿ ಗಂಡ-ಹೆಂಡರು ವಿರಾಮವಾಗಿ ವಿನೋದದಿಂದ ಮಾತಾಡುತ್ತ, ಹರಟೆ ಹೊಡೆಯುತ್ತ ಕುಳಿತುಕೊಂಡದ್ದನ್ನು ನಾವ್ಯಾರೂ ನೋಡಿರಲಿಲ್ಲ. ಒಂದು ದಿನವಾದರೂ ಅವರು ಜಗಳಾಡಿದ್ದನ್ನಾಗಲೀ ಬಿರುಸಿನಿಂದ ದನಿ ಎತ್ತರಿಸಿ ಮಾತಾಡಿದ್ದನ್ನಾಗಲೀ ಯಾರೂ ಕೇಳಿರಲಿಲ್ಲ. ಅವರ ಮಕ್ಕಳೂ ಅಷ್ಟೇ. ನಮ್ಮ ಹಳ್ಳಿಯ ಹುಡುಗರಂತೆ ಗಲಾಟೆ ಮಾಡುತ್ತ ತೆಕ್ಕಿಮುಕ್ಕಿ ಬೀಳುತ್ತಿರಲಿಲ್ಲ. ಮನೆಯಲ್ಲಿ ಮಕ್ಕಳಾದರೂ ಇದ್ದಾವೋ ಇಲ್ಲವೋ ಎನ್ನಬೇಕು. ಅದರಲ್ಲೂ ಸ್ಯಾಮಣ್ಣನವರು ಮನೆಯಲ್ಲಿದ್ದರಂತೂ ಎಲ್ಲಾ ಗಪ್ ಚಿಪ್. ಮನೆಯಲ್ಲಿ ಶಿಸ್ತು, ಅಚ್ಚುಕಟ್ಟು, ಸ್ವಚ್ಛತೆಗಳನ್ನು ನೋಡಿಯೇ ನಂಬಬೇಕು.
ಇದೆಲ್ಲ ನಮ್ಮ ಊರಿನ ಜನಕ್ಕೆ ಸ್ವಲ್ಪ ಹೊಸದೇ. ಮೇಲಾಗಿ ಅಂಥ ಕುರೂಪಿ ಗಂಡನ ಜೊತೆಗೆ ಇಂಥ ಚೆಲುವೆ ಹೇಗೆ ಇಷ್ಟು ಹೊಂದಿಕೊಂಡು ಇದ್ದಾಳೆಂದು ನಮಗೆಲ್ಲಾ ಆಶ್ಚರ್ಯವಾಯಿತು. ಒಟ್ಟಿನಲ್ಲಿ ಇಡೀ ಕುಟುಂಬವೇ ನೆಮ್ಮದಿಯಿಂದ ಇತ್ತು. ಗಂಡ-ಹೆಂಡತಿ ಇಬ್ಬರೂ ನೌಕರಿ ಮಾಡುತ್ತಿದ್ದುದರಿಂದ ಸಾಕಷ್ಟು ಪಗಾರ ಬರುತ್ತಿತ್ತು. ಹಳ್ಳಿಯ ಊರಿನಲ್ಲಿ ಕಾಳು-ಕಡಿ, ಕಾಯಿ-ಪಲ್ಲೆ, ಹಾಲು-ಮೊಸರು, ಮನೆಬಾಡಿಗೆ ಇತ್ಯಾದಿಗಳೆಲ್ಲ ಬಹಳ ಸೋವೀ ಇದ್ದುದರಿಂದ ಯಾವುದಕ್ಕೂ ಕೊರತೆ ಇರಲಿಲ್ಲ. ಇದರಿಂದಾಗಿ ಯಾರಿಗೂ ಸೊಪ್ಪು ಹಾಕದೆ, ಯಾರ ಮರ್ಜಿಯನ್ನು ಹಿಡಿಯದೆ ಸ್ಯಾಮಣ್ಣನವರು ತಮ್ಮ ಎಂದಿನ ದರ್ಪ, ಗೌರವಗಳನ್ನು ಸುಲಭವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಯಿತು.
ಹೀಗೆಯೇ ಕೆಲವು ವರ್ಷಗಳು ಕಳೆದವು. ಆಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸ್ಯಾಮಣ್ಣನವರಿಗೆ ಹಾವೇರಿ ತಾಲೂಕಿನ ಯಾವದೋ ಒಂದು ದೂರದ ಊರಿಗೆ ವರ್ಗವಾಯಿತು. ಮೊದಲು ಅವರು ಅಲ್ಲಿಗೆ ಒಬ್ಬರೇ ಹೋದರು. ನಂತರ ಪ್ರಯತ್ನ ಮಾಡಿ ತಮ್ಮ ಹೆಂಡತಿಯನ್ನೂ ಅದೇ ಊರಿಗೆ ವರ್ಗಮಾಡಿಸಿಕೊಳ್ಳುವ ಯೋಚನೆ ಅವರದಾಗಿತ್ತು. ಆದರೆ ಆ ಯೋಚನೆ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ಅವರಿಗೆ ವರ್ಗವಾಗಿದ್ದ ಊರು ನಮ್ಮ ಊರಿಗಿಂತಲೂ ಸಣ್ಣದು. ಅಲ್ಲಿಗೆ ಕುಟುಂಬವನ್ನು ಕರೆದುಕೊಂಡು ಹೋಗಲು ಸರಿಯಾದ ಅನುಕೂಲತೆಗಳು ಇರಲಿಲ್ಲ. ಮೇಲಾಗಿ ಅವರ ಇಬ್ಬರು ಹಿರಿಯ ಮಕ್ಕಳು ಆರು ಮತ್ತು ಐದನೆಯ ಇಯತ್ತೆಗಳಲ್ಲಿ ಕಲಿಯುತ್ತಿದ್ದರು. ಅವರು ಹೋಗಿದ್ದ ಹಳ್ಳಿಯಲ್ಲಿ ನಾಲ್ಕನೆಯ ಇಯತ್ತೆಯವರೆಗೆ ಮಾತ್ರ ಶಾಲೆ ಇತ್ತು. ಅದೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸೇರಿ ಇದ್ದ ಒಂದೇ ಶಾಲೆ. ಅಲ್ಲಿದ್ದ ಇಬ್ಬರು ಶಿಕ್ಷಕರೂ ಗಂಡಸರು. ಎಲ್ಲಾ ಯೋಚಿಸಿ ಸ್ಯಾಮಣ್ಣನವರು ತಮ್ಮ ಹೆಂಡತಿ-ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವ ವಿಚಾರವನ್ನು ಬಿಟ್ಟು ಬಿಟ್ಟರು. ತಾವೇ ಪ್ರಯತ್ನ ಮಾಡಿ ತಿರುಗಿ ನಮ್ಮ ಊರಿಗೆ ವರ್ಗ ಮಾಡಿಸಿಕೊಳ್ಳಲು ಯೋಚಿಸತೊಡಗಿದರು. ಆದರೆ ಪ್ರಯತ್ನ ಅಷ್ಟುಬೇಗ ಫಲಿಸಲಿಲ್ಲ. ಪ್ರಯತ್ನದಲ್ಲಿಯೇ ಒಂದೆರಡು ವರ್ಷಗಳು ಕಳೆದವು.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಸ್ಯಾಮಣ್ಣನವರು ಈಗಿದ್ದ ಊರಿಗೂ ನಮ್ಮ ಊರಿಗೂ ಬಹಳ ದೂರವಿದ್ದುದರಿಂದ ಅವರಿಗೆ ಮೇಲಿಂದ ಮೇಲೆ ಇಲ್ಲಿಗೆ ಬರಲು ಆಗುತ್ತಿರಲಿಲ್ಲ. ಹೀಗಾಗಿ ಮನೆಯ ಭಾರವೆಲ್ಲ ಅವರ ಹೆಂಡತಿಯ ಮೇಲೇ ಬಿತ್ತು. ಗಂಡನಿದ್ದಾಗ ಹೊರಗಿನ ಕೆಲಸಗಳನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದ. ಸಣ್ಣ-ದೊಡ್ಡ ಕೆಲಸಗಳಿಗೆಲ್ಲ ವಾಲೀಕಾರರು ಒದಗುತ್ತಿದ್ದರು. ಅವಳಿಗೆ ಅಡಿಗೆ, ಬಟ್ಟೆ-ಬರೆ, ಮಕ್ಕಳ ದೇಖರೇಕಿಗಳನ್ನಷ್ಟು ನೋಡಿಕೊಂಡಿದ್ದರೆ ಸಾಕಾಗಿತ್ತು. ಈಗ ಎಲ್ಲಾ ಜವಾಬ್ದಾರಿ ಆಕೆಯ ಮೇಲೇ ಬಿದ್ದುದರಿಂದ ಮೊದಲಿನಂತೆ ತನ್ನಷ್ಟಕ್ಕೆ ತಾನು ಮನೆಯ ಒಳಗೇ ಇರುವದು ಕಷ್ಟವಾಯಿತು. ಆದರೂ ಹೇಗೋ ಕಷ್ಟಪಟ್ಟುಕೊಂಡು ತನ್ನ ಮೊದಲಿನ ರೀತಿ-ನೀತಿಗಳಲ್ಲಿ ವಿಶೇಷ ಬದಲಾವಣೆ ಇಲ್ಲದೆ ಸಂಸಾರವನ್ನು ತೂಗಿಸಿಕೊಂಡು ನಡೆದಳು.
ಸ್ಯಾಮಣ್ಣನವರ ಹಿರಿಯ ಮಗ ಏಳನೆಯ ಇಯತ್ತೆ ಪಾಸಾಗಿ ಹುಬ್ಬಳ್ಳಿಯ ಮಿಷನ್ ಹೈಸ್ಕೂಲಿಗೆ ಹೋದ. ಇನ್ನೊಂದು ವರ್ಷದಲ್ಲಿ ಅವರ ಮಗಳೂ ಅವನನ್ನು ಹಿಂಬಾಲಿಸಿದಳು. ಈಗ ಶ್ಯಾಮಣ್ಣನವರಿಗೆ ನಮ್ಮೂರಿನಲ್ಲಿ ಒಂದು ಮನೆ, ತಾವಿದ್ದ ಊರಲ್ಲಿ ಇನ್ನೊಂದು- ಹೀಗೆ ಎರಡು ಮನೆಗಳನ್ನು ತೂಗಿಸಿಕೊಂಡು ಹೋಗುವದರ ಜೊತೆಗೆ ಹುಬ್ಬಳ್ಳಿಯಂಥ ದೊಡ್ಡ ಶಹರದಲ್ಲಿ ಇಬ್ಬರು ಮಕ್ಕಳನ್ನಿಟ್ಟು ಕಲಿಸುವ ಭಾರವೂ ಬಿತ್ತು. ಮೇಲೆ ಅಲ್ಲಿಂದಿಲ್ಲಿಗೆ ಓಡಾಡುವ ಖರ್ಚೂ ಸೇರಿತು. ಇಬ್ಬರ ಪಗಾರ ಸೇರಿಯೂ ಕುಟುಂಬವನ್ನು ಸಾಗಿಸಿಕೊಂಡು ಹೋಗುವದು ಕಠಿಣವೆನಿಸತೊಡಗಿತು. ಆದರೂ ಇದ್ದುದರಲ್ಲಿಯೇ ಹೇಗೋ ಹೊಂದಿಸಿಕೊಂಡು ನಡೆದಿದ್ದರೆಂದು ಕಾಣುತ್ತದೆ.
ಈ ನಡುವೆ ನಮ್ಮ ಊರೂ ನಿಧಾನವಾಗಿ ಬೆಳೆಯುತ್ತಿತ್ತು. ಹೆಣ್ಣು ಮಕ್ಕಳ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಾಯಿತು. ಕ್ಲಾಸುಗಳೂ ಹೆಚ್ಚಾದವು. ಹೊಸ ಶಿಕ್ಷಕರು ಬಂದು ಸೇರಿದರು. ಈವರೆಗೆ ಹೆಣ್ಣುಮಕ್ಕಳ ಶಾಲೆಯಲ್ಲಿ ಕೇವಲ ಹೆಣ್ಣುಮಕ್ಕಳೇ ಶಿಕ್ಷಕರಾಗಿದ್ದು ಈಗ ಒಬ್ಬಿಬ್ಬರು ಗಂಡಸರೂ ಕೂಡಿದರು. ಮೇರಿ ಇಲ್ಲಿಗೆ ಬಂದು ಆಗಲೇ ಕೆಲವು ವರ್ಷಗಳೇ ಆಗಿದ್ದರಿಂದ ಸೀನಿಯಾರಿಟಿಯ ಪ್ರಕಾರ ಆಕೆಯೇ ಶಾಲೆಯ ಹೆಡ್ ಮಿಸ್ಟ್ರಸ್ ಆದಳು. ಇದರಿಂದಾಗಿ, ಮೊದಲಿನಿಂದಲೂ ತನ್ನ ಬಿಗುವಿನಲ್ಲೇ ತಾನು ಇರುತ್ತಿದ್ದ, ಉಳಿದವರ ಜೊತೆ ವಿಶೇಷ ಸಂಪರ್ಕವನ್ನೇ ಇಟ್ಟುಕೊಂಡಿರದಿದ್ದ ಆಕೆ ಈಗ ಎಲ್ಲ ಶಿಕ್ಷಕರ ಜೊತೆಗೂ ವ್ಯವಹರಿಸಬೇಕಾದ, ಉಳಿದವರ ಸಹಕಾರ ಕೇಳಬೇಕಾದ ಅಗತ್ಯ ಬಿತ್ತು. ಶಾಲೆಯ ಆಡಳಿತ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಉಳಿದವರೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಬೇಕಾಯಿತು.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಇಂಥ ಸಂದರ್ಭದಲ್ಲಿ ಹೊಸದಾಗಿ ಬಂದು ಸೇರಿದ್ದ ನೀರಲಗಿ ಮಾಸ್ತರರು ಆಕೆಗೆ ವಿಶೇಷವಾಗಿ ನೆರವಾಗುತ್ತಿದ್ದರು. ಆತ ಆಕರ್ಷಕ ಮೈಕಟ್ಟಿನ ಮೂವತ್ತು-ಮೂವತ್ತೈದರ ಯುವಕ. ಯಾವಾಗಲೂ ನಗುನಗುತ್ತ ಲವಲವಿಕೆಯಿಂದ ಓಡಾಡಿಕೊಂಡಿರುತ್ತಿದ್ದ. ಚತುರ ಮಾತುಗಾರಿಕೆಯಿಂದ ತನ್ನ ಲವಲವಿಕೆಯನ್ನು ಉಳಿದವರಿಗೂ ಹರಡಿಬಿಡುತ್ತಿದ್ದ. ಗಿಡ್ಡವಾಗಿದ್ದರೂ ಸದಾ ಗಂಭೀರವಾಗಿದ್ದು, ಎಂದೂ ಹೆಚ್ಚು ಮಾತನ್ನೇ ಆಡದಿದ್ದ ಬಿಗುವಿನ ಮೇರಿ ಕೂಡ ಅವನ ಲವಲವಿಕೆಯ ಪ್ರಭಾವದಲ್ಲಿ ಕ್ರಮೇಣ ಸಡಿಲವಾಗತೊಡಗಿದಳು. ಅವನ ಜೊತೆಗೆ ನಿರಂಬಳವಾಗಿ ಕುಳಿತು ಹರಟೆ ಹೊಡೆದಳು. ಬಹಳ ದಿನಗಳ ನಂತರ ಗಟ್ಟಿಯಾಗಿ ನಕ್ಕಳು.
ಹೀಗೆ ಇದು ಮೇರಿಯಲ್ಲಿ ವಿಚಿತ್ರ ಬದಲಾವಣೆಗಳನ್ನು ತಂದಿತು. ಇಷ್ಟು ವರ್ಷಗಳ ಕಾಲ ಅನುಭವಿಸಿದ್ದ ಯಾವದೋ ಬಂಧನದಿಂದ ಒಮ್ಮೆಲೇ ಮುಕ್ತಳಾದವಳಂತೆ ಅರಳಿಕೊಂಡಳು. ಹಗ್ಗದ ಹುರಿ ಬಿಚ್ಚಿ ಸಡಿಲವಾದಂತೆ ಸಹಜವಾದಳು. ಅವಳ ನಡೆ-ನುಡಿಗಳಲ್ಲಿ ಹೊಸದೊಂದು ಉತ್ಸಾಹ ಸೇರಿಕೊಂಡಿತು. ಜೊತೆಯವರ ಕೂಡ ಸಲಿಗೆಯಿಂದ ವರ್ತಿಸತೊಡಗಿದಳು. ಓಣಿಯಲ್ಲಿ ನೆರೆಹೊರೆಯವರನ್ನು ಮಾತಾಡಿಸಿದಳು. ಕಾರಣವಿಲ್ಲದೆ ನಕ್ಕಳು. ಅವಳ ಗಂಭೀರ ಚೆಲುವಿಗೆ ಮತ್ತೊಮ್ಮೆ ಹೊಸ ಹರೆಯದ ಬಣ್ಣ ಬಂತು. ನಡೆದರೆ ಕುಣಿದಂತೆ ಕಾಣತೊಡಗಿತು. ಮಾತಾಡಿದರೆ ಹಾಡಿದಂತಿರುತ್ತಿತ್ತು.
ಶಾಲೆಯ ಕೆಲಸಕಾರ್ಯಗಳ ಸಂದರ್ಭದಲ್ಲಿ ನೀರಲಗಿ ಮಾಸ್ತರು ಆಗಾಗ ಮೇರಿಯ ಮನೆಗೆ ಹೋಗಿ ಬರುವದಕ್ಕೆ ಆರಂಭಿಸಿದರು. ಬಹಳ ಹೊತ್ತಿನವರೆಗೆ ಹರಟೆ ಹೊಡೆಯುತ್ತ ಅಲ್ಲೇ ಕುಳಿತಿರುತ್ತಿದ್ದರು. ಎಷ್ಟೋ ಸಲ ರಾತ್ರಿಯ ಹೊತ್ತಿನಲ್ಲೂ ಅವರು ಮೇರಿಯ ಮನೆಯಲ್ಲಿ ಇರುತ್ತಿದ್ದುದನ್ನು ಅನೇಕರು ಕಂಡರು. ಇಷ್ಟು ವರ್ಷ ಕಾಲ ಯಾರೂ ಹೋಗದಿದ್ದ ಮನೆಗೆ, ಯಾರ ಕೂಡ ಹೆಚ್ಚಿಗೆ ಮಾತನ್ನೇ ಆಡದಿದ್ದ ಹೆಂಗಸಿನೊಂದಿಗೆ, ಅದೂ ಗಂಡ ಊರಲ್ಲಿಲ್ಲದ ದಿನಗಳಲ್ಲಿ, ನೀರಲಗಿ ಮಾಸ್ತರು ಹೀಗೆ ಸಲಿಗೆಯಿಂದ ಹೋಗಿ-ಬರುವ ವಿಷಯ ಬಹಳ ಬೇಗ ಊರ ಜನರ ಬಾಯಿಗೆ ಬಿತ್ತು. ಅನೇಕ ಜನ ಅನೇಕ ರೀತಿಯಲ್ಲಿ ಆಡಿಕೊಳ್ಳತೊಡಗಿದರು. ಇಷ್ಟು ದಿನ ಜನರ ಬಾಯಿಗೆ ಬೀಳದೆ, ಒಂದು ಬಗೆಯ ನಿಗೂಢತೆಯಿಂದ, ಬಿಂಕದಿಂದ ನಡೆದುಕೊಂಡು ಊರವರೆಲ್ಲರ ಕುತೂಹಲಕ್ಕೆ ಕಾರಣವಾಗಿದ್ದ, ಆ ಮೂಲಕ ಊರಿಗೆಲ್ಲ ಕಿರಿಕಿರಿಯಾಗಿದ್ದ ಈ ಮನೆತನದ ರಹಸ್ಯಗಳು ನಿಧಾನವಾಗಿಯಾದರೂ ಒಂದೊಂದಾಗಿ ಹೊರಕ್ಕೆ ಬರತೊಡಗಿದ್ದು ಜನರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವನ್ನುಂಟುಮಾಡಿತು. ಸಿಕ್ಕ ಒಂದೆರಡು ಸಣ್ಣ-ಪುಟ್ಟ ಸಂಗತಿಗಳಿಗೇ ಬಣ್ಣ ರೆಕ್ಕೆ ಹಚ್ಚಿ ಹಾರಿಬಿಟ್ಟರು. ನೀರಲಗಿ ಮಾಸ್ತರರಿಗೆ ಅವರ ಗೆಳೆಯರು ಈ ಬಗ್ಗೆ ಸೂಚ್ಯವಾಗಿ ಚೇಷ್ಟೆ ಮಾಡಿದರು. ಅವರು ಈ ಮಾತನ್ನು ವಿನೋದವೆಂದು ತೆಗೆದುಕೊಂಡು ನಕ್ಕು ಹಾರಿಸಿಕೊಂಡುಬಿಡುತ್ತಿದ್ದರೇ ಹೊರತು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಮೇರಿಗೆ ಜನರು ತನ್ನ ಹಿಂದೆ ಏನೇನೋ ಆಡಿಕೊಳ್ಳುತ್ತಿದ್ದುದು ಗೊತ್ತಾಗಿತ್ತೋ ಇಲ್ಲವೊ ಅವಳು ಮಾತ್ರ ಏನೂ ಆಗದವಳಂತೆ ಮೊದಲಿನ ಹಾಗೆ ಸಹಜವಾಗಿಯೇ ನಡೆದುಕೊಳ್ಳತೊಡಗಿದಳು.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಇಷ್ಟರಲ್ಲಿ, ಯಾವುದೋ ಒಂದು ಪ್ರಕರಣದಲ್ಲಿ ತಲಾಠಿ ಸ್ಯಾಮಣ್ಣನವರು ಗ್ರಾಮಸ್ಥರೊಬ್ಬರಿಂದ ಲಂಚ ಸ್ವೀಕರಿಸುವಾಗ ಲಂಚ ನಿರೋಧ ಪಡೆಯವರ ಕೈಯಲ್ಲಿ ಸಿಕ್ಕಿಬಿದ್ದರೆಂದೂ ಕೋರ್ಟಿನಲ್ಲಿ ಕೇಸು ನಿಕಾಲಿಯಾಗುವವರೆಗೆ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆಯೆಂದೂ ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಯಿತು. ಅದಾದ ನಾಲ್ಕೆಂಟು ದಿನಗಳಲ್ಲಿ ಸ್ಯಾಮಣ್ಣನವರು ತಮ್ಮ ಗಂಟು-ಗದಡಿ ಸಮೇತ ಊರಿಗೆ ತಿರುಗಿ ಬಂದುದರಿಂದ ಈ ಸುದ್ದಿ ನಿಜವೆಂದು ಖಾತ್ರಿಯಾಯಿತು. ಆದರೆ ನಮ್ಮೂರಲ್ಲಿ ಸ್ಯಾಮಣ್ಣನವರಿಗೆ ಸ್ನೇಹಿತರೆಂಬುವವರು ಯಾರೂ ಇಲ್ಲದ್ದರಿಂದ ಈ ಬಗ್ಗೆ ಮರುಕ ಪಡುವವರು ಯಾರೂ ಇರಲಿಲ್ಲ. ಬದಲಾಗಿ, ತಮ್ಮ ಅಧಿಕಾರದ ಅವಧಿಯಲ್ಲಿ ಕೆಲವು ಅಕ್ರಮಗಳನ್ನು ಮಾಡಲು ನಿರಾಕರಿಸಿ ಅನೇಕ ದೊಡ್ಡ ಮನುಷ್ಯರ ನಿಷ್ಠುರವನ್ನು ಕಟ್ಟಿಕೊಂಡಿದ್ದರಿಂದ ಇವನಿಗೆ ತಕ್ಕ ಶಾಸ್ತಿಯಾಯಿತೆಂದುಕೊಂಡವರೇ ಬಹಳ ಜನರಿದ್ದರು.
ಆದರೂ ಈ ಲಂಚದ ಪ್ರಕರಣದಲ್ಲಿ ನಿಜವಾಗಿ ನಡೆದದ್ದೇನು ಎಂಬುದು ನಮಗೆ ಸರಿಯಾಗಿ ಗೊತ್ತಾಗಲಿಲ್ಲ. ಯಾರೋ ಅವರಿಗಾಗದವರು ಈ ಪ್ರಕರಣವನ್ನು ಕೃತ್ರಿಮವಾಗಿ ಸೃಷ್ಟಿಸಿ ಲಂಚ ನಿರೋಧ ಅಧಿಕಾರಿಗಳನ್ನು ಒಳಗೆ ಹಾಕಿಕೊಂಡು ಇವರನ್ನು ಹಿಡಿಸಿದರು- ಎಂದು ಒಂದು ಕಥೆ ಪ್ರಚಾರದಲ್ಲಿತ್ತು. ನಮ್ಮೂರಲ್ಲಿದ್ದಾಗ ಸ್ಯಾಮಣ್ಣನವರು ಹಾಗೆಲ್ಲಾ ಲಂಚಕ್ಕಾಗಿ ಹಪಾಪಿಸಿದವರಲ್ಲವೆಂದು ನಮಗೆಲ್ಲಾ ಗೊತ್ತಿದ್ದ ಸಂಗತಿಯೇ ಆದ್ದರಿಂದ ಈ ಕಥೆಯನ್ನು ನಂಬಲು ಸಾಕಷ್ಟು ಕಾರಣಗಳಿದ್ದವು. ಆದರೆ ಇನ್ನೊಂದು ಕಥೆಯ ಪ್ರಕಾರ ಈಚೆಗೆ ಅವರಿಗೆ ಮನೆತನದ ಖರ್ಚು ಹೆಚ್ಚಾಗಿ ಸಣ್ಣ-ಪುಟ್ಟ ಕೆಲಸಗಳಿಗಾಗಿಯೂ ಲಂಚಕ್ಕೆ ಕೈ ಚಾಚತೊಡಗಿ ಜನರಿಗೆ ಬಹಳ ಕಿರುಕುಳ ಕೊಡತೊಡಗಿದ್ದರಂತೆ. ಇದರಿಂದ ಬೇಸತ್ತ ಆ ಊರಿನ ಜನ ಕೊನೆಗೊಮ್ಮೆ ಹೊತ್ತು ನೋಡಿ ಹಿಡಿಸಿದರಂತೆ. ಈ ಕಥೆಯೂ ಸಂಪೂರ್ಣವಾಗಿ ಆಧಾರರಹಿತವೆಂದು ಹೇಳಲಿಕ್ಕಾಗುತ್ತಿರಲಿಲ್ಲ. ಆದರೆ ಸ್ವತಃ ಸ್ಯಾಮಣ್ಣನವರು ಈ ಬಗ್ಗೆ ಯಾರ ಮುಂದೂ ಚಕಾರವೆತ್ತಲಿಲ್ಲ. ಮೊದಲಿನಂತೆ ತಮ್ಮ ಗಾಂಭೀರ್ಯದಲ್ಲಿ ತಾವಿದ್ದು ಬಿಟ್ಟರು. ಮೇರಿಯೂ ಈ ಬಗ್ಗೆ ತನಗೇನೂ ಗೊತ್ತಿಲ್ಲವೆಂದುಬಿಟ್ಟಳಂತೆ. ಸ್ಯಾಮಣ್ಣನವರು ಆಕೆಗಾದರೂ ನಿಜ ಸಂಗತಿಯನ್ನು ಹೇಳಿದ್ದರೋ ಇಲ್ಲವೋ! ಹೇಳಿದರಾದರೂ ಏನು? ಜನ ಇಂಥ ವಿಷಯಗಳಲ್ಲಿ ಕೆಟ್ಟದ್ದನ್ನು ನಂಬುವಷ್ಟು ಸುಲಭವಾಗಿ ಒಳ್ಳೆಯದನ್ನು ನಂಬಲು ತಯಾರಿರುವದಿಲ್ಲ. ಅಂತೂ ಇದೊಂದು ಸಂದಿಗ್ಧ ವಿಷಯವಾಗಿ ಇನ್ನಷ್ಟು ದಿನ ಜನರ ಮಾತಿಗೆ ಸಾಕಷ್ಟು ಊಹಾಪೋಹಗಳಿಗೆ ಸಾಮಗ್ರಿಯನ್ನೊದಗಿಸಿತು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಸ್ಯಾಮಣ್ಣನವರು ಹೀಗೆ ಸಸ್ಪೆಂಡ್ ಆಗಿ ಮನೆಯಲ್ಲಿ ಕೂತದ್ದರಿಂದ ಅವರ ಪಗಾರದಲ್ಲಿ ಬಹಳಷ್ಟು ಕಡಿತವಾಯಿತು. ಮೇಲಿನ ಸಂಪಾದನೆಯಂತೂ ಪೂರ್ತಿಯಾಗಿ ನಿಂತು ಹೋಯಿತು. ಹೀಗಾಗಿ ಮನೆಯ ಹೆಚ್ಚಿನ ಜವಾಬ್ದಾರಿಯೆಲ್ಲಾ ಮೇರಿಯ ಪಗಾರದ ಮೇಲೇ ಬಿತ್ತು. ಇಲ್ಲಿಯವರೆಗೆ ಆರಾಮವಾಗಿ ತಿಂದುಂಡವರಿಗೆ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವದು ಸುಲಭವಾಗಲಿಲ್ಲ. ಹಿರಿಯ ಮಕ್ಕಳಿಬ್ಬರೂ ಈಗ ಕಾಲೇಜಿಗೆ ಸೇರಿದ್ದರಿಂದ ಅವರ ಖರ್ಚು ಮತ್ತಷ್ಟು ಹೆಚ್ಚಾಗಿತ್ತು. ಸ್ಯಾಮಣ್ಣನವರ ಲಂಚದ ಪ್ರಕರಣ ಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದರಿಂದ ಹಗಲೆಲ್ಲ ಹುಬ್ಬಳ್ಳಿಯ ಕೋರ್ಟಿಗೆ ತಿರುಗಾಡಬೇಕಾಯಿತು. ವಕೀಲರನ್ನು ನೇಮಿಸಿ ಅವರಿಗೂ ಸಾಕಷ್ಟು ಹಣ ಸುರಿಯಬೇಕಾಯಿತು. ಹೀಗಾಗಿ ಮೇರಿಯೊಬ್ಬಳ ಪಗಾರದ ಮೇಲೆ ಮನೆತನ ನಡೆಸುವದು ದಿನದಿನಕ್ಕೂ ಕಷ್ಟವಾಗುತ್ತ ಹೋಯಿತು. ಈ ಸ್ಥಿತಿಯಲ್ಲಿ ಕೆಲಸ ಕಳೆದುಕೊಂಡು ಅರೆ ಪಗಾರ ತೆಗೆದುಕೊಳ್ಳುತ್ತ ಮನೆ ಹಿಡಿದು ಕೂಡಬೇಕಾಗಿ ಬಂದ ಸ್ಯಾಮಣ್ಣನವರ ಬಿಗುಮಾನ, ದರ್ಪಗಳು ಕ್ರಮೇಣ ತಣ್ಣಗಾಗುತ್ತ ಬಂದವು. ತನ್ನ ಪಗಾರದ ಮೇಲೇ ಇಡೀ ಮನೆತನವೆಲ್ಲಾ ನಡೆಯುತ್ತಿದೆ ಎಂಬ ಸಂಗತಿ ದೃಢವಾದಂತೆಲ್ಲ ಮನೆಯಲ್ಲಿ ಮೇರಿಯ ಅಧಿಕಾರ, ದರ್ಪ ಹೆಚ್ಚತೊಡಗಿದವು. ಆಗಾಗ ಆಕೆ ಗಂಡನನ್ನು ಹಂಗಿಸಿ ಮಾತಾಡಿದ್ದನ್ನು ಅಕ್ಕ ಪಕ್ಕದವರು ಕೇಳಿಸಿಕೊಂಡರು. ಕ್ರಮೇಣ ಮನೆಯಲ್ಲಿ ಆಕೆಯ ದನಿ ಏರತೊಡಗಿತು. ಸ್ಯಾಮಣ್ಣನವರ ದನಿ ಕುಗ್ಗಿತು. ಅವರ ಉಡಿಗೆತೊಡಿಗೆಗಳ ಮೊದಲಿನ ಶಿಸ್ತು ಹೊರಟು ಹೋಯಿತು. ಗಂಜೀ ಹಾಕಿದ ಇಸ್ತ್ರೀ ಅರಿವೆಗಳ ಬದಲಾಗಿ ಒಗೆದ ಅರಿವೆಗಳು ಬಂದವು. ಬರಬರುತ್ತ ಒಗೆದ ಅರಿವೆಗಳಿಗೂ ಗತಿ ಇಲ್ಲದೆ ಹೊಲಸು ಅರಿವೆಗಳನ್ನೇ ಹಾಕಿಕೊಂಡಿರುತ್ತಿದ್ದರು. ಆದರೆ ಮೇರಿಯ ಶಿಸ್ತು-ಸೊಗಸುಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಲಿಲ್ಲ. ಬದಲಾಗಿ ತಾನೇ ಈಗ ಮನೆಯ ಯಜಮಾನಿ ಎಂಬ ಆತ್ಮವಿಶ್ವಾಸವೂ ಅವಳ ನಡೆ-ನುಡಿಗಳಲ್ಲಿ ಕಾಣಿಸಿಕೊಂಡಿತ್ತು. ಆಕೆ ಈಗ ಹೆಡ್‌ಮಿಸ್ಟ್ರಸ್ ಆಗಿದ್ದರಿಂದ ಶಾಲೆಯ ಕೆಲಸ, ಜವಾಬ್ದಾರಿ ಸ್ವಲ್ಪ ಹೆಚ್ಚಾಗಿತ್ತು. ಅದರಿಂದಾಗಿ ಆಕೆ ಹೆಚ್ಚು ಸಮಯವನ್ನು ಶಾಲೆಯ ಕೆಲಸಕ್ಕಾಗಿ ವ್ಯಯಿಸಬೇಕಾಗುತ್ತಿತ್ತು. ಮನೆಯಲ್ಲಿ ಗಂಡ ಬೇರೆ ಕೆಲಸವಿಲ್ಲದೆ ಕುಳಿತಿದ್ದ. ಆದ್ದರಿಂದ ಮನೆಯ ಕೆಲಸಗಳಲ್ಲಿ ಆಕೆ ಹೆಚ್ಚು ಹೆಚ್ಚಾಗಿ ಗಂಡನ ಸಹಾಯ ಬಯಸಿದಳು. ತಾನು ಹೆಂಡತಿಯ ಪಗಾರದ ಮೇಲೆ ಬದುಕುತ್ತಿದ್ದೇನೆಂಬ ಭಾವನೆ ಬಲಿತ ಹಾಗೆ ಸ್ಯಾಮಣ್ಣನವರಲ್ಲಿಯೂ ಒಂದು ಬಗೆಯ ದೈನ್ಯಭಾವನೆ ಹುಟ್ಟಿಕೊಂಡು ತಾವೇ ಮುಂದಾಗಿ ಹೆಂಡತಿಗೆ ಮನೆಯ ಕೆಲಸಗಳಲ್ಲಿ ನೆರವಾಗತೊಡಗಿದರು. ಆದರೂ ಇದೆಲ್ಲ ಮನೆಯ ಒಳಗಡೆಯೇ ನಡೆದ ವ್ಯವಹಾರವಾದ್ದರಿಂದ ಹೊರಗೆ ಅಷ್ಟಾಗಿ ಗುಲ್ಲಾಗಲಿಲ್ಲ. ಸ್ಯಾಮಣ್ಣನವರ ಕಳೆಗುಂದಿದ ಮುಖ, ಇಳಿದ ದರ್ಪಗಳನ್ನು ಮಾತ್ರ ಯಾರು ಬೇಕಾದರೂ ಗಮನಿಸಬಹುದಾಗಿತ್ತು.
ದಿನ ಕಳೆದಂತೆ ಸ್ಯಾಮಣ್ಣನವರಿಗೆ ಸಂಸಾರವನ್ನು ತೂಗಿಸಿಕೊಂಡು ಹೋಗುವದು ಹೆಚ್ಚು ಹೆಚ್ಚು ಕಷ್ಟವಾಯಿತು. ಊರಿನ ಕಿರಾಣಿ ಅಂಗಡಿಗಳಲ್ಲಿ, ಹಾಲು-ಮೊಸರಿನವರಲ್ಲಿ, ಕಟ್ಟಿಗೆ ಅಡ್ಡೆಯಲ್ಲಿ ಉದ್ರಿ ಬೆಳೆಯುತ್ತ ಹೋಯಿತು. ಕಿರಾಣಿ ಅಂಗಡಿಯವರು ಮನೆಯ ತನಕ ಉದ್ರಿವಸೂಲಿಗೆ ಆಳು ಕಳಿಸಿದರು. ಹಾಲಿನಾಕೆ ದನಿ ಎತ್ತರಿಸಿ ಒದರಾಡಿದಳು. ಅಡ್ಡೆಯವನು ಕಟ್ಟಿಗೆ ಕೊಡಲು ನಿರಾಕರಿಸಿದ. ಸ್ಯಾಮಣ್ಣನವರು ತಡೆಯುವವರೆಗೂ ತಡೆದುಕೊಂಡರು. ಮಿಕ್ಕಿ ಬಂದಾಗ ಅಲ್ಲಲ್ಲಿ ಸಾಲಕ್ಕಾಗಿ ಯತ್ನಿಸಿದರು. ಆದರೆ ಈ ದರ್ಪದ ಮನುಷ್ಯನಿಗೆ ಹೇಗೆ ಸಾಲ ಕೇಳಬೇಕೆಂದು ಕೂಡ ಗೊತ್ತಿರಲಿಲ್ಲ. ಹೆಚ್ಚು ಮಾತು ಆಡಿಯೇ ಅಭ್ಯಾಸವಿಲ್ಲದ ಇವರು ಹೋಗಿ ಸಣ್ಣ ದನಿಯಲ್ಲಿ ಕೇಳಬೇಕು; ಅವರು ಇಲ್ಲವೆಂದು ಅದು-ಇದು ನೆವ ಹೇಳಬೇಕು. ಇವರು ಎದ್ದು ಬರಬೇಕು. ಯಾರ ಮುಂದೂ ತಮ್ಮ ಸ್ಥಿತಿಯನ್ನು ಬಿಚ್ಚಿ ಹೇಳಲಿಲ್ಲ. ಕೇಳುವವರಿಗೆ ಸಹಾನುಭೂತಿ ಹುಟ್ಟುವಂತೆ ದೈನಾಸಬಡಲಿಲ್ಲ. ಹಿಂದೆ ಅಧಿಕಾರದಲ್ಲಿದ್ದಾಗ ತಮ್ಮ ದರ್ಪದಲ್ಲಿ ಯಾರನ್ನೂ ಹಚ್ಚಿಕೊಳ್ಳದಿದ್ದವರನ್ನು ಅಧಿಕಾರ ಹೋದಮೇಲೆ ಯಾರು ಹಚ್ಚಿಕೊಳ್ಳುತ್ತಾರೆ? ಬಡ್ಡಿಯ ಮೇಲೆ ಸಾಲ ಕೊಡುವವರು ಸಹ ಗಟ್ಟಿಮುಟ್ಟಾದ ಆಸ್ತಿ-ಪಾಸ್ತಿಗಳ ಆಧಾರವಿಲ್ಲದೆ ಸಾಲ ಕೊಡುವದಕ್ಕೆ ಒಪ್ಪಲಿಲ್ಲ. ಎಲ್ಲಿಯವನೋ, ಏನು ಕಥೆಯೊ! ತಳ-ಬುಡ ಒಂದೂ ಗೊತ್ತಿಲ್ಲದವನಿಗೆ ಸುಮ್ಮನೇ ಯಾರು ಕೊಡುತ್ತಾರೆ? ಸ್ಯಾಮಣ್ಣನವರೇನೊ ತಮ್ಮ ಖಟ್ಲೆ ನಿಕಾಲಿಯಾದ ತಕ್ಷಣ ಯಾರದೂ ಒಂದು ಪೈಸೆಯನ್ನೂ ಇಟ್ಟುಕೊಳ್ಳದೆ ಹಿಂದಿರುಗಿಸುವದಾಗಿ ಕೇಳಿಕೊಂಡರು. ಆದರೆ ಖಟ್ಲೆ ಇವನಂತೆ ಆಗುವದೆಂದು ಯಾವ ಗ್ಯಾರಂಟಿ? ವಿರುದ್ಧ ಆದರೆ ಮುಂದೆ ಹಣ ತಿರುಗಿ ಬರುವ ದಾರಿ ಏನು?
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಹೀಗಾಗಿ ಸ್ಯಾಮಣ್ಣನವರು ಕೊನೆಕೊನೆಗೆ ಅಕ್ಷರಶಃ ಅವರಿವರ ಕೈಕಾಲು ಹಿಡಿಯಬೇಕಾಯಿತು. ಸ್ವಾಭಿಮಾನಿಯಾದ ಈ ಮನುಷ್ಯ ಮಾರುದ್ದ ದೇಹವನ್ನು ಗೇಣುದ್ದ ಮಾಡಿಕೊಂಡು ಅವರಿವರಲ್ಲಿ ಅಂಗಲಾಚ ಬೇಕಾಗಿ ಬಂದ ಈ ಸ್ಥಿತಿಯಿಂದ ಮಾನಸಿಕವಾಗಿ ಎಷ್ಟು ಯಾತನೆ ಪಟ್ಟಿರಬಹುದೆಂದು ಯಾರಾದರೂ ಊಹಿಸಬಹುದಾಗಿತ್ತು. ಒಬ್ಬಿಬ್ಬರ ಮುಂದೆ ತಡೆಯಲಾರದೆ ಕಣ್ಣೀರು ತೆಗೆದನಂತೆ. ಇದೆಲ್ಲ ಊರ ಜನರಿಗೆ ತಮ್ಮ ಬಹು ದಿನಗಳ ಅಸಮಾಧಾನವನ್ನು ತೋರಿಸಿಕೊಳ್ಳಲು ಒಳ್ಳೆಯ ಅವಕಾಶವನ್ನು ಒದಗಿಸಿತು. ಹಂಗಿಸುವವರು ಹಂಗಿಸಿ ಮುಯ್ಯಿ ತೀರಿಸಿಕೊಂಡರು. ಅನ್ನುವವರು ಹಿಂದೂ ಅಂದರು. ಮುಂದೂ ಅಂದರು. ಆದರೂ ಸ್ಯಾಮಣ್ಣನವರ ಸ್ಥಿತಿ ಜನರ ಮನಸ್ಸನ್ನು ಬಹಳ ಮಟ್ಟಿಗೆ ಕರಗಿಸಿತು. ಯಾರ ಹಂಗು ತನಗೇನು ಎಂದು ತಿರುಗುತ್ತಿದ್ದ. ಈ ಸೊಕ್ಕಿನ ಮನುಷ್ಯ ಈಗಲಾದರೂ ಮೆತ್ತಗಾದನಲ್ಲ ಎಂದು ಅನೇಕರಿಗೆ ಸಮಾಧಾನವಾಯಿತು. ಯಾರ ಜೊತೆಗೂ ಹೆಚ್ಚಿಗೆ ಮಾತನ್ನೇ ಆಡದವನು ತಮ್ಮ ಜೊತೆಗೆ ಮಾತಾಡಿದನಲ್ಲ, ಯಾರ ಮುಂದೂ ತನ್ನ ಸುಖ-ದುಃಖ ಹೇಳಿಕೊಳ್ಳದವನು ತಮ್ಮ ಮುಂದೆ ಹೇಳಿಕೊಂಡನಲ್ಲ ಎಂದು ಕೆಲವರಿಗೆ ಇದು ವೈಯಕ್ತಿಕ ಹೆಮ್ಮೆಯ ವಿಷಯವಾಯಿತು. ಈ ಹೆಮ್ಮೆಯನ್ನು ಇತರರ ಮುಂದೆ ತೋರಿಸಿಕೊಳ್ಳಲಿಕ್ಕಾಗಿ ಕೆಲವರು ಸ್ಯಾಮಣ್ಣ ತಮ್ಮಲ್ಲಿಗೆ ಸಾಲಕ್ಕಾಗಿ ಬಂದಿದ್ದ ವಿಷಯವನ್ನು ಕಂಡವರ ಮುಂದೆಲ್ಲ ಹೇಳುತ್ತ ಹೋದರು. ಹೀಗಾಗಿ ಊರ ತುಂಬ ಸ್ಯಾಮಣ್ಣನ ಸಾಲದ ಸುದ್ದಿಯೇ ಹಬ್ಬಿಕೊಂಡಿತು. ಅವನ ಅವಸ್ಥೆಯನ್ನು ನೋಡಲಾರದೆ ಕೆಲವರು ಅಷ್ಟಿಷ್ಟು ಕೊಟ್ಟೂ ಕೊಟ್ಟರು. ಹೀಗೆ ಅಲ್ಲಿಷ್ಟು ಇಲ್ಲಿಷ್ಟು ಎಂದು ಊರ ತುಂಬ ಸಾಲವಾಯಿತು. ಅಲ್ಲಿ ಸಾಲ ಮಾಡಿ ಇಲ್ಲಿಯದನ್ನು ತೀರಿಸುವದು, ಹೊಸ ಸಾಲ ಮಾಡಿ ಹಳೆಯದನ್ನು ಮುಟ್ಟಿಸುವದು- ಹೀಗೆ ಸಾಲ ಕೊಟ್ಟವರ ಕಾಟ ಸುರುವಾಗಿ ಸ್ಯಾಮಣ್ಣನವರಿಗೆ ಊರಲ್ಲಿ ಮುಖ ಎತ್ತಿ ತಿರುಗುವದೇ ಅಸಾಧ್ಯವಾಯಿತು.
ಈ ನಡುವೆ ಲಂಚದ ಖಟ್ಲೆ ನಿಧಾನವಾಗಿ ನಡೆದೇ ಇತ್ತು. ಮುದ್ದತ್ತು ಇದ್ದಾಗೊಮ್ಮೆ ತಪ್ಪದೇ ಹೋಗಿ ಹಾಜರಾಗಬೇಕು. ಆದರೆ ಮತ್ತೆ ಏನೇನೋ ಕಾರಣಕ್ಕಾಗಿ ಮತ್ತೆ ಮುದ್ದತ್ತು ಮುಂದೆ ಬೀಳುತ್ತಿತ್ತು. ಹೀಗೆ ಒಂದು ಸಲ ಕೋರ್ಟಿನ ಕೆಲಸಕ್ಕಾಗಿ ಹುಬ್ಬಳ್ಳಿಗೆ ಹೋಗಿ ತಿರುಗಿ ಬರುವಾಗ ದಾರಿಯಲ್ಲಿ ಬಸ್ಸು ಕೆಟ್ಟು ಊರು ಸೇರಿದಾಗ ಅಪರಾತ್ರಿಯಾಗಿತ್ತು. ಸ್ಯಾಮಣ್ಣ ಮನೆಗೆ ಬಂದು ಬಾಗಿಲು ಬಡಿದರು. ಆದರೆ ಕದವೇ ತೆಗೆಯಲೊಲ್ಲದು. ಒಳಗೆ ಮೇರಿ ಎಚ್ಚರಿದ್ದಂತೆ ದಡಬಡ ಸದ್ದಾಗುತ್ತಿದ್ದರೂ ಎಷ್ಟು ಕೂಗಿಕೊಂಡರೂ ಕದ ತೆಗೆಯಲೊಲ್ಲದು. ಹೊರಗೆ ನಿಂತು ಅವರು ಕೂಗುತ್ತಿದ್ದ ದನಿ ರಾತ್ರಿಯ ಶಾಂತ ಹೊತ್ತಿನಲ್ಲಿ ಊರಲ್ಲೆಲ್ಲ ತುಂಬಿಕೊಂಡಿತು. ಆ ದನಿ ಕೇಳಿ ಓಣಿಯ ಜನಕ್ಕೆಲ್ಲ ಎಚ್ಚರವಾಯಿತು. ಮೇರಿಗೆ ಮಾತ್ರ ಆದಂತೆ ಕಾಣಲಿಲ್ಲ. ಕೊನೆಗೊಮ್ಮೆ ಕದ ತೆಗೆದಾಗ ಸ್ಯಾಮಣ್ಣನವರು ಒಳಗೆ ಪ್ರವೇಶಿಸುತ್ತಿದ್ದಂತೆ ಯಾರೋ ಅವರ ಪಕ್ಕದಲ್ಲಿಯೇ ಒಳಗಿಂದ ಹೊರಗೆ ಓಡಿಹೋದರು. ಹೋದವರು ಯಾರೆಂದು ಸ್ಯಾಮಣ್ಣನವರಿಗೆ ಕತ್ತಲಲ್ಲಿ ಸರಿಯಾಗಿ ಕಾಣಲಿಲ್ಲ. ಆದರೆ ಹೋದವರು ಗಂಡಸು ಎಂದು ಮಾತ್ರ ಖಾತ್ರಿಯಾಯಿತು. ಅವನು ಯಾರೆಂದು ಹೆಂಡತಿಯನ್ನು ಕೇಳಿದರು. ಆಕೆ ಸುಮ್ಮನಿದ್ದಳು. ಇವರು ಮತ್ತೆ ಕೇಳಿದರು. ಆಕೆ ಹೇಳಲಿಲ್ಲ. ಇವರು ಮತ್ತೆ ಮತ್ತೆ ಕೇಳಿದರು. ಆಕೆ ಬಾಯಿ ಬಿಡಲಿಲ್ಲ. ಕೇಳಿದಾಗೊಮ್ಮೆ ಇವರ ದನಿ ಏರುತ್ತಲೇ ಹೋಯಿತು. ಆಕೆ ಮಾತಿಲ್ಲದೆ ಹೋಗಿ ಮುಸುಗು ಹಾಕಿಕೊಂಡು ಮಲಗಿದಳು. ಇವರಿಗೆ ಸಿಟ್ಟು ತಡೆಯಲಿಲ್ಲ. ಹೋಗಿ ಅವಳ ಜಡೆ ಹಿಡಿದು ಎಳೆದು ಎಬ್ಬಿಸಿ ಮತ್ತೆ ಕೇಳಿದರು. ಆಕೆ ಜೋರಾಗಿ ಬಾಯಿ ಬಡಿದುಕೊಂಡು ಅಳತೊಡಗಿದಳು. ಇವರು ನಾಲ್ಕೇಟು ಜಜ್ಜಿದರು. ಆಕೆ ಅಳುವನ್ನು ಮತ್ತಷ್ಟು ಜೋರು ಮಾಡಿದಳು. ಜೊತೆಗೆ ಅವರ ಕೊನೆಯ ಮಗನೂ ಚೀರಿ ಚೀರಿ ಅಳತೊಡಗಿದ.
ಈ ಬೊಬ್ಬಾಟವನ್ನೆಲ್ಲ ಕೇಳಿ ಎಚ್ಚತ್ತು ತಮ್ಮ ತಮ್ಮ ಮನೆಯ ಮುಂದೆ ಗುಂಪುಗೂಡಿ ಜನ ಒಳಗೆ ನಡೆಯುತ್ತಿದ್ದುದನ್ನೆಲ್ಲ ಕೇಳಿಸಿಕೊಂಡರು. ವಿಷಯವೇನೆಂದು ಎಲ್ಲರಿಗೂ ಗೊತ್ತಾಯಿತು. ಹಿಂದೆ ಊಹಾಪೋಹವಾಗಿದ್ದದ್ದು ಈಗ ನಿಜವಾಗಿತ್ತು. ಸ್ಯಾಮಣ್ಣನವರಿಗೆ ಈಗಲೂ ಸರಿಯಾಗಿ ಗೊತ್ತಿಲ್ಲದ್ದು ತಮಗೆ ಬಹಳ ಹಿಂದೆಯೇ ಗೊತ್ತಿದ್ದಿತೆಂಬ ಸಮಾಧಾನ ಕೆಲವರಿಗೆ. ಕೊನೆಗೆ ಸ್ಯಾಮಣ್ಣನವರ ಬಾಯಿ ಮತ್ತು ಮೇರಿಯ ಚೀರಾಟ ಬಹಳ ಹೆಚ್ಚಾದ ಮೇಲೆ ಒಬ್ಬಿಬ್ಬರು ಓಣಿಯ ಹಿರಿಯ ಮನುಷ್ಯರು ಹೋಗಿ ಅವರ ಮನೆಯ ಬಾಗಿಲು ಬಡಿದರು. ಸ್ಯಾಮಣ್ಣನವರ ಹೆಸರು ಹಿಡಿದು ಕೂಗಿದರು. ಅಷ್ಟಕ್ಕೆ ಒಳಗಿನ ಗಲಾಟೆ ನಿಂತಿತು. ಆದರೆ ಬಾಗಿಲು ಮಾತ್ರ ತೆರೆಯಲಿಲ್ಲ. ಒಳಗಿನಿಂದ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. ಬಾಗಿಲು ಬಡಿದವರು ಸ್ವಲ್ಪ ಹೊತ್ತು ಕಾದಿದ್ದು, ಬಾಗಿಲು ತೆರೆಯದ್ದನ್ನು ನೋಡಿ ತಿರುಗಿ ತಮ್ಮ ತಮ್ಮ ಮನೆಗೆ ಹೋದರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಅದಾಗಿ ಒಂದರ್ಧ ತಾಸೂ ಆಗಿರಲಿಲ್ಲ. ಸ್ಯಾಮಣ್ಣನವರ ಹಿತ್ತಲ ಭಾವಿಯಿಂದ ‘ಧುಡುಂ’ ಎಂಬ ಸಪ್ಪಳವೂ, ಅದನ್ನು ಹಿಂಬಾಲಿಸಿ ಮೇರಿ ಲಬ ಲಬ ಹೊಯ್ಕೊಳ್ಳುತ್ತ ಜನರನ್ನು ಕೂಗತೊಡಗಿದ್ದೂ ರಾತ್ರಿಯ ಹೊತ್ತಿನಲ್ಲಿ ಊರಲ್ಲೆಲ್ಲ ದರುದುಂಬಿತು. ಮತ್ತೇನಾಯಿತೋ ಎಂದು ಜನ ಗಡಬಡಿಸಿ ಎದ್ದು ಓಡಿಹೋದರು. ಮೇರಿ ಬಾಗಿಲ ಹೊರಗೆ ನಿಂತುಕೊಂಡು ಗಡಗಡ ನಡುಗುತ್ತ ತನ್ನ ಗಂಡ ಬಾವಿಗೆ ಹಾರಿದ್ದಾನೆಂದು ತಡವರಿಸಿದಳು. ಗಾಬರಿಯಿಂದ ಅವಳ ಮುಖ ತೌಡು ತೌಡು ಹಾರುತ್ತಿತ್ತು.
ಜನರೆಲ್ಲ ಒಳಗೆ ನುಗ್ಗಿದರು. ಸ್ಯಾಮಣ್ಣನವರು ಅಡಿಗೆ ಮನೆಯ ಕದವನ್ನು ಒಳಗಿನಿಂದ ಹಾಕಿಕೊಂಡಿದ್ದರು. ಜನ ಜೋರಾಗಿ ಕದ ನೂಕಿ ಮುರಿದೇ ಒಳಹೊಕ್ಕರು. ಹಿತ್ತಲು ಬಾಗಿಲಿಗೂ ಹೊರಗಿನಿಂದ ಚಿಲಕ ಹಾಕಿತ್ತು. ತಡವಾಗುತ್ತದೆಂದು ಕೆಲವರು ಹಿತ್ತಲದ ಗೋಡೆ ಹತ್ತಿ ಒಳಗೆ ಇಳಿದರು. ಆ ಕತ್ತಲಿನಲ್ಲಿಯೇ ಅವಸರವಸರವಾಗಿಯೇ ಈಜು ಬಲ್ಲವರು ಬಾವಿಯಲ್ಲಿ ಇಳಿದರು. ಮನೆಯ ತುಂಬ, ಹಿತ್ತಲ ತುಂಬ ಜನ ಆದರು. ಓಣಿಯ ತುಂಬ ಗಲಾಟೆಯಾಯಿತು. ಕೆಲವರು ಬಾವಿಯಲ್ಲಿ ಹಗ್ಗವನ್ನು ಇಳಿಬಿಟ್ಟರು. ಕೆಳಗೆ ಇಳಿದವರು ಸ್ಯಾಮಣ್ಣನವರನ್ನು ನೀರಿನಲ್ಲಿ ಹಿಡಿದು ಮೇಲೆ ಎತ್ತಿದರು. ಇಳಿಬಿಟ್ಟ ಹಗ್ಗಕ್ಕೆ ತೊಟ್ಟಿಲು ಕಟ್ಟಿ ಅದರಲ್ಲಿ ಸ್ಯಾಮಣ್ಣನವರ ದೇಹವನ್ನು ಸೇರಿಸಿ ಮೇಲೆ ಎಳೆದುಕೊಂಡರು. ಒಂದು ಬಗೆಯ ಸಂಭ್ರಮದಿಂದಲೇ ಜನ ಒಳ-ಹೊರಗೆ ಓಡಾಡಿದರು.
ಸ್ಯಾಮಣ್ಣನವರಿಗೆ ಪ್ರಜ್ಞೆ ಇರಲಿಲ್ಲ. ಸಾಕಷ್ಟು ನೀರು ಕುಡಿದು ಹೊಟ್ಟೆ ಉಬ್ಬಿತ್ತು. ಊರಲ್ಲಿಯ ಡಾಕ್ಟರೂ ಬಂದರು. ಹೊಟ್ಟೆಯನ್ನು ಹಿಚುಕಿ ನೀರು ತೆಗೆದರು. ಔಷಧೋಪಚಾರ ನಡೆಯಿತು. ಬೆಳಗಿನ ಹೊತ್ತಿಗೆ ಸ್ಯಾಮಣ್ಣ ಚೇತರಿಸಿಕೊಂಡು ಕಣ್ಣು ತೆಗೆದರು. ಜೀವಕ್ಕೆ ಅಪಾಯವೇನೂ ಇರಲಿಲ್ಲ. ಅಲ್ಲಲ್ಲಿ ಸಣ್ಣ-ಪುಟ್ಟ ಗಾಯಗಳು ಮಾತ್ರ ಆಗಿದ್ದವು. ಕಣ್ಣು ತೆರೆದು ನೋಡಿದಾಗ ಮನೆ ತುಂಬ ಸೇರಿದ್ದ ಜನರನ್ನು ನೋಡಿ ಸ್ಯಾಮಣ್ಣ ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.
ಹಿರಿಯರು ಸ್ಯಾಮಣ್ಣನವರಿಗೆ ಧೈರ್ಯದ ಮಾತು ಹೇಳಿದರು. ಮೇರಿಗೂ ಒಂದಿಷ್ಟು ಬುದ್ದಿಯ ಮಾತು ಹೇಳಿದರು. ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿರುವಾಗ ಹೀಗೆಲ್ಲಾ ಮಾಡಿದರೆ ಮಕ್ಕಳ ಗತಿಯೇನೆಂದು ಛೀ ಮಾಡಿದರು. ಮಕ್ಕಳ ಮುಖವನ್ನಾದರೂ ನೋಡಿ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಬೇಕೆಂದು ಪರಿಪರಿಯಾಗಿ ಹೇಳಿದರು. ಬೈದೂ ಹೇಳಿದರು, ರಮಿಸಿಯೂ ಹೇಳಿದರು. ಮೇರಿಯನ್ನೂ ಮಗುವನ್ನೂ, ಪಕ್ಕದ ಮನೆಯ ಹೆಣ್ಣುಮಕ್ಕಳು ಒತ್ತಾಯ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋದರು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಸಹಜವಾಗಿಯೇ ಊರಿನಲ್ಲಿ ಇದೊಂದು ಭಾರೀ ಸುದ್ದಿಯಾಯಿತು. ಜನ ಸಂಕೋಚವಿಲ್ಲದೆ ಎಲ್ಲಿ ಅಂದರೆ ಅಲ್ಲಿ ಈ ವಿಷಯವಾಗಿ ಮಾತಾಡಿಕೊಂಡರು. ಈ ನಿಗೂಢ ಮನೆತನಕ್ಕೆ ಸಂಬಂಧಿಸಿದ ಹಾಗೆ ಇಂಥದೊಂದು ಭಾರಿ ರಹಸ್ಯ ಹೀಗೆ ಬಹಿರಂಗವಾಗಿ ಸ್ಫೋಟವಾದದ್ದು, ತಮಗೆ ಅದರಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಲು ಅವಕಾಶ ಸಿಕ್ಕದ್ದು ಊರಿನವರಿಗೆಲ್ಲ ಬಹಳಷ್ಟು ಸಮಾಧಾನ ತಂದಿತ್ತು. ರಹಸ್ಯಗಳೆಲ್ಲ ಬಯಲಾಗಿ ನಮ್ಮ ಹಾಗೇ ಬಟ್ಟಬಯಲಾದ ಈ ಸ್ಥಿತಿಯಲ್ಲಿ ಸ್ಯಾಮಣ್ಣ ಹಾಗೂ ಅವರ ಕುಟುಂಬದವರು ನಮಗೆಲ್ಲಾ ಆತ್ಮೀಯರಾಗಿ, ನಮ್ಮೂರವರೇ ಆಗಿ ಕಂಡರು. ಮುಂದಿನ ನಾಲ್ಕಾರು ದಿನ ಸ್ಯಾಮಣ್ಣನವರ ಆರೈಕೆಯ ಮೇಲ್ವಿಚಾರಣೆಯನ್ನು ಊರವರೇ ನೋಡಿಕೊಂಡರು. ದಿನವೂ ಒಬ್ಬರಲ್ಲ ಒಬ್ಬರು ಅಡಿಗೆ ಒಯ್ದು ಕೊಟ್ಟರು.
ಸ್ಯಾಮಣ್ಣನವರು ಆತ್ಮಹತ್ಯೆಗೆ ಪ್ರಯತ್ನಿಸಿದರೆಂಬ ಸುದ್ದಿ ಹತ್ತಿರದ ಪೋಲೀಸ್ ಸ್ಟೇಶನ್ನಿಗೂ ಹತ್ತಿ, ಅಲ್ಲಿಂದ ಒಬ್ಬ ಫೌಜದಾರರೂ ಇಬ್ಬರು ಪೊಲೀಸರೂ ವಿಚಾರಣೆಗಾಗಿ ನಮ್ಮೂರಿಗೆ ಬಂದರು. ನಮ್ಮೂರ ಗೌಡರೂ, ಉಳಿದ ಹಿರಿಯರೂ ಕೂಡಿ ಅವರಿಗೆ ಏನೇನೋ ಹೇಳಿಕೊಂಡು ಬಡಪಾಯಿ ಸ್ಯಾಮಣ್ಣನವರ ಮೇಲೆ ಕೇಸಾಗದಂತೆ ಇಡೀ ವಿಷಯವನ್ನೇ ಮುಚ್ಚಿಹಾಕಿಬಿಟ್ಟರು.
ಈ ಪ್ರಸಂಗದಿಂದಾಗಿ ಮೇರಿಗೂ ಊರಲ್ಲಿ ತಲೆಯೆತ್ತಿ ತಿರುಗದಂತಾಯಿತು. ರಜೆ ಹಾಕಿ ಕೆಲವು ದಿನ ಮನೆಯಲ್ಲೇ ಉಳಿದಳು. ನೀರಲಗಿ ಮಾಸ್ತರು ಆ ರಾತ್ರಿಯೇ ಊರು ಬಿಟ್ಟವರು ತಿರುಗಿ ಬರಲೇ ಇಲ್ಲ. ಕೆಲವು ದಿನ ತಲೆ ತಪ್ಪಿಸಿ ಕೊಂಡು, ಅಲ್ಲಿಂದಲೇ ದೂರದ ಬೇರೆ ಊರಿಗೆ ವರ್ಗಮಾಡಿಸಿಕೊಂಡರು.
ಹೀಗೇ ಮತ್ತೆ ಕೆಲವು ದಿವಸ ಕಳೆದು ಈ ಪ್ರಸಂಗದ ಹೊಸತನ ಮಾಸಿತು. ಸ್ಯಾಮಣ್ಣನವರು ಎದ್ದು ಅಡ್ಡಾಡತೊಡಗಿದರು. ತಮ್ಮ ಕೋರ್ಟಿನ ಕೆಲಸಕ್ಕೆ ಹೋಗಿ ಬರತೊಡಗಿದರು. ಮೇರಿ ಮತ್ತೆ ಕೆಲಸಕ್ಕೆ ಹಾಜರಾದಳು. ಆದರೂ ಗಾಯದ ಒಳನೋವು ಇಬ್ಬರಲ್ಲೂ ಬೇಗ ಮಾಯಲಿಲ್ಲ. ಒಂದು ರೀತಿಯ ಮೂಕ ಪೆಟ್ಟಿನ ಗಾಯದಂತೆ ಅದು ಒಳಗೊಳಗೇ ಅಳುಕುತ್ತಿತ್ತೆಂದು ಕಾಣುತ್ತದೆ. ಇಬ್ಬರ ಮುಖದ ಮೇಲೂ ಚಿವುಟಿದರೂ ಹನಿ ರಕ್ತ ಬರದಂತೆ ಕಳೆ ಮಾಸಿಹೋಯಿತು.
ಇದಾದ ಒಂದೆರಡು ತಿಂಗಳಲ್ಲೇ, ಬಹಳ ದಿನಗಳಿಂದ ನಡೆದಿದ್ದ ಸ್ಯಾಮಣ್ಣನವರ ಲಂಚದ ಖಟ್ಲೆ ಕೊನೆಗೊಮ್ಮೆ ಮುಗಿಯಿತು. ಆರೋಪ ಸಾಬೀತಾಗದೆ ಸ್ಯಾಮಣ್ಣನವರು ನಿರ್ದೋಷಿ ಎಂದು ತೀರ್ಪು ಬಂತು. ಕೂಡಲೇ ಅವರನ್ನು ಕೆಲಸದ ಮೇಲೆ ತೆಗೆದುಕೊಂಡು ಅವರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಕೋರ್ಟು ಸರಕಾರಕ್ಕೂ ತಾಕೀತು ಮಾಡಿತು. ಆ ಪ್ರಕಾರ ಸ್ಯಾಮಣ್ಣನವರಿಗೆ ಮತ್ತೆ ನೌಕರಿ ಸಿಕ್ಕಿತು. ಈ ಬಾರಿ ಹುಬ್ಬಳ್ಳಿಗೆ ಅತಿ ಸಮೀಪದ ಊರೊಂದಕ್ಕೆ ಅವರಿಗೆ ವರ್ಗವಾಯಿತು. ಅವರಿಗೆ ಸಸ್ಪೆಂಡ್ ಆದಾಗಿನಿಂದ ಬಾಕೀ ಉಳಿದಿದ್ದ ಪಗಾರವೆಲ್ಲ ಒಂದೇ ಕಂತಿನಲ್ಲಿ ದೊಡ್ಡ ಮೊತ್ತವಾಗಿ ಕೈಸೇರಿತು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಏನಾದರೂ ಸ್ಯಾಮಣ್ಣನವರಾಗಲಿ ಅವರ ಹೆಂಡತಿಯಾಗಲಿ ಈ ಗೆಲುವಿನಿಂದ ಸಂತೋಷಪಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ತಮ್ಮ ಕೇಸು ಗೆದ್ದು ತಾವು ನಿರ್ದೋಷಿ ಎಂದು ಸಾಬೀತಾದ ನೆನಪಿಗಾಗಿ ಅವರು ಊರವರಿಗೆಲ್ಲಾ ಧಾರವಾಡದ ಫೇಡೆ ತಂದು ಹಂಚಿದರು. ತಮ್ಮ ಪಗಾರದ ಬಾಕೀ ಬಂದೊಡನೆ ಉದ್ರಿ, ಸಾಲ ಇತ್ಯಾದಿ ಕೊಡು-ಕೊಳ್ಳುಗಳನ್ನೆಲ್ಲ ಒಂದೂ ಬಿಡದೆ ತೀರಿಸಿದರು. ತಕ್ಷಣ ಹೋಗಿ ಕೆಲಸದ ಮೇಲೆ ಹಾಜರಾದರು. ಹಾಗೆಯೇ ಒಂದೆರಡೇ ತಿಂಗಳಲ್ಲಿ ಖಟಿಪಿಟಿ ಮಾಡಿ ತಮ್ಮ ಹೆಂಡತಿಗೂ ಅದೇ ಊರಿಗೆ ವರ್ಗಮಾಡಿಸಿಕೊಂಡರು. ಹುಬ್ಬಳ್ಳಿಯ ಕಾಲೇಜಿನಲ್ಲಿ ಓದುತ್ತಿದ್ದ ಅವರ ಇಬ್ಬರೂ ಹಿರಿಯ ಮಕ್ಕಳು ಈಗ ಅವರೊಂದಿಗೇ ಇದ್ದು ದಿನಾಲು ಹುಬ್ಬಳ್ಳಿಗೆ ಹೋಗಿ-ಬರಲು ಸಾಧ್ಯವಾದದ್ದೊಂದು ಅವರಿಗೆ ಹೆಚ್ಚಿನ ಅನುಕೂಲವಾಯಿತು.
ಈಗ ಸ್ಯಾಮಣ್ಣನವರು ನಮ್ಮ ಊರು ಬಿಟ್ಟು ಹೋಗಿ ಬಹಳ ದಿನಗಳಾಗಿವೆ. ಅವರು ಆ ಹೊಸ ಊರಲ್ಲಿ ಹಿಂದಿನದನ್ನೆಲ್ಲಾ ಮರೆತು ಹೊಸ ಜೀವನವನ್ನು ಹೊಸ ರೀತಿಯಲ್ಲೇ ಆರಂಭಿಸಿದರೋ, ನಮ್ಮೂರಲ್ಲಿ ಆರಂಭವಾದ ವಿರಸವನ್ನು ಹಾಗೇ ಮುಂದುವರಿಸಿಕೊಂಡು ಹೋದರೋ, ಅಥವಾ ನಮ್ಮ ಊರಿಗೆ ಮೊದಲು ಬಾರಿ ಬಂದಾಗ ಇದ್ದಂಥ ಹಳೆಯ ಜೀವನಕ್ಕೆ ಹಿಂದಕ್ಕೆ ಹೋದರೋ ನಮಗೆ ತಿಳಿಯದು. ಅದನ್ನೆಲ್ಲ ತಿಳಿದುಕೊಳ್ಳುವದು ಆ ಊರಿನವರಿಗೆ ಸಂಬಂಧಪಟ್ಟ ವಿಷಯ. ನಮಗೆ ಬೇರೆ ಊರಿನ ಜನಗಳ ಬಗ್ಗೆ ಅನವಶ್ಯಕ ಆಸಕ್ತಿ ಇಲ್ಲ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಡಾ. ಗಿರಡ್ಡಿ ಗೋವಿಂದರಾಜ (1939-2018): ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ಕನ್ನಡದ ಖ್ಯಾತ ವಿಮರ್ಶಕರು. ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಗ್ಲೆಂಡ್‌ನಲ್ಲಿರುವ ಲ್ಯಾಂಕಾರ್ಸ್ಟ ವಿಶ್ವವಿದ್ಯಾಲಯದಿಂದ ಎಂಎ(ಭಾಷಾಶಾಸ್ತ) ಪದವಿ ಪಡೆದಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಅವರು ಹೈಸ್ಕೂಲಿನಲ್ಲಿರುವಾಗಲೇ ‘ಶಾರದಾಲಹರಿ’ ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ಪ್ರಕಟಿತ ಕೃತಿಗಳು: ‘ಆ ಮುಖಾ-ಈ ಮುಖಾ'(1970), ‘ಹಂಗು ಮತ್ತು ಇತರ ಕಥೆಗಳು'(1978), ‘ಒಂದು ಬೇವಿನಮರದ ಕಥೆ'(1981) ಕಥಾಸಂಕಲನಗಳು; ‘ರಸವಂತಿ'(1961), ‘ಮರ್ಲಿನ್ ಮನ್ರಿ ಮತ್ತು ಇತರ ಪದ್ಯಗಳು'(1974) ಕವನ ಸಂಕಲನಗಳು; ‘ಸಣ್ಣ ಕತೆಯ ಹೊಸ ಒಲವುಗಳು'(1965), ‘ಜನಪದ ಕಾವ್ಯ'(1971), ‘ನವ್ಯ ವಿಮರ್ಶೆ'(1975), ಕಾದಂಬರಿ; ‘ವಸ್ತು ಮತ್ತು ತಂತ್ರ'(1976), ‘ಸಾಹಿತ್ಯ ಮತ್ತು ಪರಂಪರೆ'(1981), ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ'(1989), ‘ಸಾತತ್ಯ'(1992), ‘ವಚನ ವಿನ್ಯಾಸ'(1997) ವಿಮರ್ಶಾ ಲೇಖನಗಳು; ‘ಸಣ್ಣಕತೆ-1981′(1983), ‘ಕನ್ನಡ ಕಥಾಸಂಕಲನ'(1983), ‘ದಶವಾರ್ಶಿಕ ವಿಮರ್ಶೆಗಳು'(1989) ಎಲ್ಲ ಸಂಪಾದಿತ; ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ(1992) ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಗೌರವ ಫೆಲೋಷಿಪ್ ಪಡೆದಿದ್ದರು. ‘ಸಂಕ್ರಮಣ’ ಸಂಪಾದಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. 2018ರಲ್ಲಿ ಹೃದಯಾಘಾತದಿಂದ ನಿಧನರಾದರು.





