ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಇಸ್ಲಾಪುರ, ಇತ್ತಾವರ, ಜೋಗತಿಪೇಟೆ, ಮಾಲೂರು, ಈ ಹಳ್ಳಿಗಳನ್ನು ಒಂದೇ ಊರು ಎಂದು ಕರೆದಿದ್ದರೂ ನಡೆಯುತ್ತಿದ್ದಿತು. ಏಕೆಂದರೆ ನಾಲೈದು ಮೈಲಿಯ ಕೂಗಳತೆಯೊಳಗೇ ಆ ಹಳ್ಳಿಗಳೆಲ್ಲಾ ಇದ್ದುವು. ಅನೇಕ ಮುಸಲ್ಮಾನ ಕುಟುಂಬಗಳೂ ಕೂಡ ಅಲ್ಲಿದ್ದುವು. ಇಸ್ಲಾಪುರದಲ್ಲಿ ಒಂದು ಮಸೀದಿಯೂ ಇತ್ತು. ಆ ಊರಿನ ಜನಗಳೆಲ್ಲಾ ಒಂದು ಬಗೆಯ ವಿಚಿತ್ರವಾದ ವ್ಯವಹಾರಿಕ ಜನ. ಹತ್ತಕ್ಕೆ ಏರದೆ ನಾಲ್ಕಕ್ಕೆ ಇಳಿಯದೆ, ಲಾಭವಿಲ್ಲದ ನಷ್ಟವರಿಯದ ಅಸಲಿನಲ್ಲೇ ಓಡಾಡುವ ಜನ. ಸುಮ್ಮನೆ ಕಾಲ ಕಳೆಯಲು ನಡೆಸುವ ವ್ಯವಹಾರಗಳಂತೆ ಅವರವು, ಹೋಗೋದು, ಬರೋದು, ಕೂರೋದು, ನಿಲ್ಲೋದು, ಈ ಥರ-ಚುನಾವಣೆಯ ಕಾಲದಲ್ಲಿ ಇವರಿಗೆ ಏನು ಪ್ರಯೋಜನ ತೋರಿಸಿ ಇವರಿಂದ ಓಟು ಕಸಿಯಬೇಕೆಂಬುದೇ ಅಭ್ಯರ್ಥಿಗಳಿಗೆ ಒಂದು ಸಮಸ್ಯೆಯಾಗಿತ್ತು. ಆ ರೀತಿಯ ಜನ ಇವರು. ಹಿಂದೂ ಮುಸ್ಲಿಂ ಸಮಸ್ಯೆಯನ್ನೂ ಎತ್ತುವಂತಿರಲಿಲ್ಲ. ಏಕೆಂದರೆ ಭೂತ ಪ್ರೇತ ಮಾರಿ ಮಸಣಿಗಳ ತಾಪತ್ರಯದಲ್ಲಿ ಸಿಲುಕಿದ್ದ ಅಲ್ಲಿಯ ಮುಸಲ್ಮಾನರಿಗೂ ಹಿಂದುಗಳಿಗೂ ತಮ್ಮ ಮೂಲ ಧರ್ಮದ ಪ್ರಜ್ಞೆಯೇ ಇದ್ದಂತಿರಲಿಲ್ಲ. ಇನ್ನು ಬಡವ ಶ್ರೀಮಂತ ಪ್ರಶ್ನೆ ಎತ್ತೋಣೆಂದರೆ ನಾಲ್ಕಾರು ಶ್ರೀಮಂತರಿದ್ದರಾದರೂ ಅವರ ಬವಣೆ ದರಿದ್ರರಿಗಿಂತ ಕಡಿಮೆ ಇರಲಿಲ್ಲ. ಅಂಗಡಿ ಕಂಬಯ್ಯ, ಅಕ್ಕಿ ವ್ಯಾಪಾರದ ಜೂಗಪ್ಪ, ರಾಜಪ್ಪ, ಕೃಷ್ಣೇಗೌಡ ಮುಂತಾದವರಿದ್ದರೂ, ಅವರು ವಸೂಲಿಗಾಗಿ ತಿರುಗುತ್ತಾ ಸಾಲ ತೆಗೆದುಕೊಂಡವರ ಬಳಿ ಗೋಳಾಡುತ್ತಾ, ವಸೂಲಿ ಸಾಬರಿಗೆ ಸಲಾಮು ಹೊಡೆದು ಸಹಾಯಕ್ಕೆ ಅಂಗಲಾಚುತ್ತಾ “ಕೈಯಾಗಿನ ಕಾಸೂ ಹೋಯ್ತು, ಮೈಯಾಗಿನ ಮಾನಾನೂ ಹೋಯ್ತು” ಎಂದು ಗೊಣಗುತ್ತಾ ತಿರುಗುವುದನ್ನು ನೋಡಿದರೆ ಯಾರೂ ಅವರ ವಿರುದ್ಧ ಹೋರಾಡಲಿಕ್ಕಾಗಿ ಓಟು ಚಲಾಯಿಸಲು ಬಯಸುತ್ತಲೇ ಇರಲಿಲ್ಲ. ಹೀಗಾಗಿ ಪುಸ್ತಕ ರಾಜಕೀಯಕ್ಕೂ ಆ ಹಳ್ಳಿಗಳು ಸವಾಲಾಗಿದ್ದವು.

ಇಂಥವರಲ್ಲಿ ಒಬ್ಬನಾಗಿ ಇಸ್ಲಾಪುರದಲ್ಲಿ ಸೂರಾಚಾರಿ ಇದ್ದ. ಆದರೂ ಆ ಪ್ರದೇಶದಲ್ಲಿದ್ದ ಎರಡು ಮಹತ್ತಾದುದೆನ್ನಬಹುದಾದುದರಲ್ಲಿ ಅವನೂ ಒಬ್ಬನಾಗಿದ್ದ. ಇನ್ನೊಂದು ಎಂದರೆ ಇತ್ತಾವರದ ಸುಬ್ಬಯ್ಯನ ಹೆಂಡತಿ ಗೌರಿ.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೂರಾಚಾರಿ, ಈರೇಗೌಡ, ಇಬ್ಬರೂ ಇಸ್ಲಾಪುರದಿಂದ ಆ ದಿನ ಹೊರಟಾಗ ಒಂದೇ ಸಮನೆ ಮಳೆ ಸುರಿಯುತ್ತಿತ್ತು. ಇಬ್ಬರೂ ಮಾತನಾಡುತ್ತಾ ಇತ್ತಾವರದ ಅಭಿಮುಖವಾಗಿ ಹೊರಟರು. ದಾರಿ ಸಾಗಲೆಂದು ಯಾವ ರಭಸ ಕುತೂಹಲಗಳಿಲ್ಲದ ಏರಿಳಿತಗಳಿಲ್ಲದ ದನಿಯಲ್ಲಿ ‘ಕೊಯ ಪಯ ಕೊಯ ಪಯ’ ಮಾತನಾಡುತ್ತಾ ಕಾಲು ಹಾಕತೊಡಗಿದರು. ಇತ್ತಾವರದ ಸುಬ್ಬಯ್ಯನ ಮನೆಯಲ್ಲಿ ಎತ್ತೊಂದನ್ನು ಖರೀದಿ ಮಾಡಲು ಹೊರಟಿದ್ದರು. ಅವನ ಮನೆಯಲ್ಲಿ ಎತ್ತೊಂದು ಮಾರಾಟಕ್ಕಿದೆ ಎಂದು ಈರೇಗೌಡನಿಗೆ ತಿಳಿಸಿದವನು ಸೂರಾಚಾರಿ. ಈಗ ಅದನ್ನು ಖರೀದಿ ಮಾಡಲು ಮಧ್ಯಸ್ಥಿಕೆಗಾಗಿ ಈರೇಗೌಡ ಸೂರಾಚಾರಿಯನ್ನೇ ಕರೆದುಕೊಂಡು ಹೊರಟಿದ್ದನು.

ಸೂರಾಚಾರಿ ಹಾಲಿ ಇಸ್ಲಾಪುರ ವಾಸಿಯೇ ಆದರೂ ಅವನು ಹಳೇಬೀಡಿನ ಹತ್ತಿರಿದ್ದ ಪನ್ನಾಥಪುರದಿಂದ ಬಂದಿದ್ದನು. ಆತನು ಬಂದಿದ್ದು ಇಸ್ಲಾಪುರದ ಹತ್ತಿರ ಈಶ್ವರ ದೇವಸ್ಥಾನ ಕಟ್ಟುತ್ತಾರೆಂದೂ, ಅದರ ಕಲ್ಲಿನ ಕೆಲಸ, ಚಿತ್ತಾರದ ಕೆಲಸ, ಕುಸುರಿ ಕೆಲಸಗಳನ್ನು ತಾನು ವಹಿಸಿಕೊಳ್ಳಬೇಕೆಂದೂ ಆಲೋಚಿಸಿ ಬಂದಿದ್ದನು. ಆದರೆ ಈಶ್ವರ ದೇವಸ್ಥಾನ ಕಟ್ಟುವ ಕಾರ್ಯಕ್ರಮ ರದ್ದಾಗಿಹೋಯ್ತು. ಏಕೆಂದರೆ ಅದಕ್ಕಾಗಿ ಶೇಖರಿಸಿದ ಹಣವನ್ನು ಅಲ್ಲಿನ ಪೂಜಾರಿಗಳಾಗಬೇಕಾಗಿದ್ದ ಶಂಕರಭಟ್ಟರು ಮಗಳ ಮದುವೆ ಇತ್ಯಾದಿಗಳಿಗೆ ಉಪಯೋಗಿಸಿ ಉಡುಪಿಗೆ ಓಡಿಹೋದರು. ಸೂರಾಚಾರಿ ಅಲ್ಲಿಯೇ ನಾಲ್ಕಾರು ಜನಕ್ಕೆ ತುಳಸಿ ಕಟ್ಟೆ ಇತ್ಯಾದಿಗಳನ್ನು ಮಾಡಿಕೊಟ್ಟು ದೂರದ ಸಂಬಂಧಿಕನಾದ ವಾಸಾಚಾರಿಯಲ್ಲಿ ಕೆಲವು ಕಾಲ ತಂಗಿದ್ದು ಅನಂತರ ಊರಿಗೆ ಹಿಂದಿರುಗುವವನಿದ್ದನು. ವಾಸಾಚಾರಿಗೆ ಹೆಂಡಿರು ಇರಲಿಲ್ಲ. ಒಂದೇ ಒಂದು ಮಗಳು ಇತ್ತು. ಆಕೆಯ ಹೆಸರು ಯಶೋದ ಎಂದು.

ಸೂರಾಚಾರಿಗೆ ಇಳಿವಯಸ್ಸಾಗಿದ್ದರೂ ಏನು ಕಾರಣವೋ ಮದುವೆಯಾಗಿರಲಿಲ್ಲ. ವಾಸಾಚಾರಿ ಬಹಳ ಪುಸಲಾಯಿಸಿ ಯಶೋದಳನ್ನು ಸೂರಾಚಾರಿಗೆ ಕಟ್ಟಿದ. ಮದುವೆ ಸಂದರ್ಭದಲ್ಲಿ ಮುದುಕ ವಾಸಾಚಾರಿಯು ಸಾಯುವವರೆಗೂ ಸೂರಾಚಾರಿ ಇಸ್ಲಾಪುರದಲ್ಲೇ ಇರಬೇಕೆಂತಲೂ ಅನಂತರ ಅವನ ಹೆಂಡತಿಯನ್ನು ಕರೆದುಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದೆಂದೂ ಕರಾರು ಆಯ್ತು. ಸೂರಾಚಾರಿಗೂ ಸಹ ಇಳಿವಯಸ್ಸೇ. ಆದರೆ ವಾಸಾಚಾರಿ ಮುಪ್ಪಿನ ಮುದುಕ. ಸೂರಾಚಾರಿ ಯಶೋದೆಯನ್ನು ಮದುವೆಯಾದಾಗ “ಅವ ಎಲ್ಲಿ ನಿಭಾಯಿಸುತ್ತಾನೋ ಅವಳನ್ನ” ಎಂದು ಅನೇಕರು ಒಳಗೊಳಗೇ ಲೇವಡಿ ಮಾಡಿದರು. ಮುದುಕ ವಾಸಾಚಾರಿಯ ಕುಟುಕುಜೀವ ಹೋಗಲು ತಡವಾದಂತೆ ಸೂರಾಚಾರಿಯ ಅಸಹನೆ ಹೆಚ್ಚುತ್ತಿದ್ದಿತು. “ಈ ಹೆಣ್ಣಿನ ಸಲುವಾಗಿ ಈ ಊರಲ್ಲಿ ನಾನು ಉಳಿಯಬೇಕಾಯ್ತ ಶಿವಾಯಿ ಇಲ್ಲದಿದ್ದರೆ ನಾನು ಎಂದೋ ಈ ಮಲೆಸೀಮೆ ಬಿಟ್ಟಿರುತ್ತಿದ್ದೆ” ಎಂದು ಸೂರಾಚಾರಿ ಎಲ್ಲರ ಬಳಿಯೂ ಹೇಳಿ ಪರಿತಪಿಸುತ್ತಿದ್ದ. ಈ ರೀತಿ ವಾಸಾಚಾರಿಯ ಸಾವಿನ ಪ್ರತೀಕ್ಷೆಯಲ್ಲಿಯೇ ವರುಷಗಳೇ ಸಂದುವು. ಸೂರಾಚಾರಿಗೂ ವಯಸ್ಸಾಗತೊಡಗಿತು. ಕೊನೆಗೆ ಒಂದು ದಿನ ಅವನ ಹಾರೈಕೆಯಂತೆ ವಾಸಾಚಾರಿ ಪ್ರಾಣಬಿಟ್ಟ.

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ಆದರೆ ಸೂರಾಚಾರಿಯ ಹಣೆಬರಹವೇ ಬೇರೆ ರೀತಿಯಲ್ಲಿತ್ತು. ಅವನು ಮಾವನ ಕರ್ಮಗಳನ್ನೆಲ್ಲಾ ಮುಗಿಸಿ ಹೆಂಡತಿ ಕರೆದುಕೊಂಡು ಪನ್ನಾಥಪುರದ ಕಡೆಗೆ ಹೊರಟ. ಆದರೆ ಮಲೆಸೀಮೆ ಗಡಿ ದಾಟುವಲ್ಲಿ ದಿಡ್ಡಿ ಎನ್ನುವ ಹಳ್ಳಿ ದಾಟಿದೊಡನೆಯೇ ಯಾವುದೋ ಒಂದು ಪೀಡೆಯೋ ದೆವ್ವವೋ ಅವನ ಹೆಂಡತಿ ಮೈಮೇಲೆ ಬಂದು ಕಾಟ ಕೊಡತೊಡಗಿತು. ಮತ್ತೆ ಗಡಿ ದಾಟಿ ಮಲೆಸೀಮೆಗೆ ಹಿಂದಿರುಗುವವರೆಗೂ ತೊಂದರೆ ಕೊಡುವುದನ್ನು ಬಿಡಲೇ ಇಲ್ಲ. ಏನು ಮಾಡಿದರೂ ಪರಿಸ್ಥಿತಿ ಹತೋಟಿಗೆ ಬರದೆ ಕೊನೆಗೆ ನಿರುಪಾಯನಾಗಿ ಇಸ್ಲಾಪುರಕ್ಕೆ ಹಿಂದಿರುಗಿದನು.

ಹೆಂಡತಿಗೆ ಕಸಬರಿಕೆ ತೆಗೆದುಕೊಂಡು ಹೊಡೆಯುವುದು, ಮೆಟ್ಟಿನಲ್ಲಿ ಹೊಡೆಯುವುದು, ಹೊಗೆ ಹಾಕಿ ಸೆಗಣಿ ನೀರು ಕುಡಿಸುವುದು, ಇತ್ಯಾದಿಗಳನ್ನೆಲ್ಲಾ ಮಾಡಿ ಮುಗಿಸಿದ. ಹೀಗೆ ದಂಡಿಸುವಾಗೆಲ್ಲಾ ಯಾರು ಯಾರೋ ”ಸೂರಾಚಾರಿ ಹೆಂಡತಿಗೆ ಬೇರೆ ಏನೋ ಚಾಳಿ ಇರಬೇಕು. ಅದಕ್ಕೆ ಇಸ್ಲಾಪುರ ಬಿಡಕ್ಕೆ ಒಲ್ಲೆ ಒಲ್ಲೆ ಅನ್ತದೆ” ಅಂದಿದ್ದೆಲ್ಲಾ ಜ್ಞಾಪಕಕ್ಕೆ ಬಂದು ಹೆಂಡತಿಗೆ ಹಿಡಿದ ದೆವ್ವ ಬಿಡಿಸುವುದಿರಲಿ ಹೆಂಡತಿಯೇ ದೆವ್ವವೆಂದು ತಿಳಿದು ಜಪ್ಪಿಹಾಕಿದ್ದನು. ಕೊನೆಗೆ ಪಿಶಾಚಿಯ ಕಾಟದಿಂದ ಹಿಂದಿರುಗಬೇಕಾಯ್ತೆಂಬುದನ್ನು ಜಾಹೀರು ಮಾಡಲು ಸಹಾಯವೂ ಆಯ್ತೆಂದು ಮಸೀದಿಯಲ್ಲಿ ಇರುತ್ತಿದ್ದ ಭೂತ ವೈದ್ಯ ಫಕೀರಪ್ಪನ ಜೊತೆಗೆ ಸಮಾಲೋಚನೆಯನ್ನೂ ಮಾಡಿದನು. ಏನೇ ಆದರೂ ಸೂರಾಚಾರಿ ಹೆಂಡತಿ ಯಶೋದೆಯನ್ನು ದಿಡ್ಡಿ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.

ಸೂರಾಚಾರಿ ದಿಡ್ಡಿಗಡಿಯನ್ನು ಹೆಂಡತಿಯೊಂದಿಗೆ ದಾಟಲು ಸಾಧ್ಯವಾಗದೆ ಇಸ್ಲಾಪುರಕ್ಕೆ ಬಂದ ನಂತರ ಸೂರಾಚಾರಿಗೆ ಒಂದು ಕಾಟ ಆರಂಭವಾಯ್ತು. ಮಲೆಸೀಮೆಯ ಥಂಡಿ ಹವೆ ಅವನಿಗೆ ಒಗ್ಗದೆ ಗೂರಲು ತರದ ಕೆಮ್ಮು ಹಾಗೂ ಉಬ್ಬಸವೂ ಆಗಾಗ್ಗೆ ಬರಲು ಆರಂಭವಾಯ್ತು.

ಸೂರಾಚಾರಿಯ ಮೂಲ ಕಸುಬು ಕಲ್ಲಿನ ಕೆತ್ತನೆಯ ಕೆಲಸ. ಹೊಯ್ಸಳರ ಕಾಲದಿಂದ ಶಿಲ್ಪಿಗಳಾಗಿದ್ದ ಮನೆತನ ಅವನದು. ದೇವಸ್ಥಾನದ ಕಂಭ, ಮಾಡು, ತುಳಸೀಕಟ್ಟೆ, ದೇವರ ಸುಂದರ ವಿಗ್ರಹಗಳು ಇತ್ಯಾದಿಗಳನ್ನು ಮಾಡುತ್ತಿದ್ದನು. ಅವನು ಕೊಂಚವೂ ತನ್ನ ಅಸಾಮಾನ್ಯ ಕಲೆಗಾರಿಕೆಯ ಬಗ್ಗೆ ಪ್ರಜ್ಞಾವಂತನಾಗಿಲ್ಲದಿದ್ದರೂ ಶ್ರೇಷ್ಠ ಕಲಾವಂತಿಕೆ ಸೂರಾಚಾರಿಯ ಕೈಗಳಿಗೆ ಸಿದ್ಧಿಸಿತ್ತು. ಸೂರಾಚಾರಿ ಕೆಲಸ ಅಚ್ಚುಕಟ್ಟಾಗಬೇಕೆಂಬ ಆಲೋಚನೆಯಿಂದ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿದ್ದನು. ಆದರೆ ಅದನ್ನೊಂದು ಕಲೆ ಎಂದು ತಿಳಿಯುವುದೇ ಆಗಲಿ ಅಥವಾ ಒಂದು ಅಭಿವ್ಯಕ್ತಿ ಮಾಧ್ಯಮ ಎಂದು ತಿಳಿಯುವುದೇ ಆಗಲಿ ಅವನಿಂದ ಕನಸಿನಲ್ಲೂ ಸಾಧ್ಯವಿರಲಿಲ್ಲ. ಆದರೂ ಅವನೊಬ್ಬ ಮಹಾನ್ ಕಲಾವಿದನೇ ಆಗಿದ್ದ ಇಸ್ಲಾಪುರಕ್ಕೆ ಬರುವುದಕ್ಕೆ ಮುಂಚೆ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಮಲೆಸೀಮೆಗೆ ಬಂದನಂತರ ಸೂರಾಚಾರಿಗೆ ಆ ಬಗೆಯ ಕೆಲಸಗಳು ಸಿಗುತ್ತಲೇ ಇರಲಿಲ್ಲ. ಅವನಿಗೆ ಸಿಗುತ್ತಿದ್ದ ಕಲ್ಲಿನ ಕೆಲಸವೆಂದರೆ ಅವರಿವರ ಮನೆಯ ನುಣ್ಣಗಾದ ಒರಳುಕಲ್ಲುಗಳಿಗೆ ಉಳಿಹಾಕಿ ಕೊಡುವುದಷ್ಟೇ. ಹೀಗಾಗಿ ಸೂರಾಚಾರಿ ಬೇರೆ ಕೆಲಸಗಳಿಗೆ ಕೈ ಹಾಕಿದನು. ಮರದ “ಮಾರಿಗೊಂಬೆ”ಗಳನ್ನು ಮಾಡಿಕೊಡುತ್ತಿದ್ದ. ಚಕ್ರದ ಗಾಡಿಯ ಮೇಲೆ ಈ ಉಗ್ರದೇವತೆಗಳನ್ನು ಕೂರಿಸಿ ಅವಕ್ಕೆ ಬಣ್ಣ ಬಳಿದು ಕೈಗೆ ಕತ್ತಿಯನ್ನೋ ತ್ರಿಶೂಲವನ್ನೊ ಕೊಟ್ಟು ದೇವರನ್ನು ತಯಾರಿ ಮಾಡುತ್ತಿದ್ದ. ಆದರೆ ಜನಗಳಿಗೆ ಕಲಾವಿದ ಸೂರಾಚಾರಿಯ ಮಾರಿಗೊಂಬೆಗಳಲ್ಲಿ ಏನೋ ನ್ಯೂನತೆ ಕಾಣತೊಡಗಿತು.

“ಅಲ್ಲಾ, ಆಚಾರ್‍ರೆ ಪೊರಕೆಯಲ್ಲಿ, ಮೊರ, ಮೆಟ್ಟಿನಲ್ಲಿ ಸೇವೆಮಾಡಿ ಊರಾಚೆಗೆ ದೂಡಿಬರ್‍ತೀವಿ. ಅಂಥದಕ್ಕೆ ಯಾಕೆ ಇಷ್ಟೊಂದು ವೈಯ್ಯಾರ ಮಾಡ್ತೀರಿ” ಎಂದು ಹಲವರು ಗೊಣಗಿದರು. ಆ ಗೊಂಬೆಗಳ ಪ್ರಮಾಣಬದ್ಧ ನಿಲುವು, ಮುಖದ ಅಭಿವ್ಯಕ್ತಿ, ಸಮಪ್ರಮಾಣದ ಕುಚಗಳು, ಕರಾರುವಾಕ್ಕಾದ ಭಂಗಿಗಳನ್ನು ಕಂಡು, ”ನಿಮ್ಮ ಗೊಂಬೆ ನೋಡಿದರೆ ಮಾರಿ ಜ್ಞಪ್ತಿಗೆ ಬರೋದೇ ಇಲ್ಲ!” ಎಂದು ಕೆಲವರು ವಿಮರ್ಶಿಸಿದರು. ಸೂರಾಚಾರಿ ಬೇರೆ ದಾರಿ ಕಾಣದೆ ಕೊನೆಗೆ ಕೊಕ್ಕರೆ ಮೂಗು ಬಿಡುಗಣ್ಣಿನ ಕಿಸುಬಾಯಿಯ ಮಡಕೆ ಮೊಲೆಗಳ ಮಾರಿಗೊಂಬೆಗಳನ್ನು ಮಾಡಿಕೊಡತೊಡಗಿದ. ಕೊನೆಕೊನೆಗೆ ಕೋರೆ ಹಲ್ಲುಗಳನ್ನೂ ಸೃಷ್ಟಿಸಿದ. ಚಕ್ರದ ವೇದಿಕೆಯ ಮೇಲೆ ಎಳೆದೊಯ್ಯುವಾಗ ಗಲಗಲ ಅಲಗುವ ಅವುಗಳು ಓಡಾಡಿದಂತೆಲ್ಲಾ “ಹಾಗೇ” ಆಗಬೇಕು ನಿನಗೆ ಎಂದು ಸೂರಾಚಾರಿ ಕಡೆಗೆ ಅಣಕಿಸಿದಂತೆ ಅವನಿಗೆ ಕಾಣಿಸುತ್ತಿತ್ತು.

ಇದೂ ಸಾಲದೆ ಸೂರಾಚಾರಿ ಇನ್ನೂ ಇತರ ಕಸಬುಗಳನ್ನೂ ಮಾಡತೊಡಗಿದನು. ಮಂತ್ರ, ತಂತ್ರ, ತಾಯಿತೆ ಕೊಡುವುದು, ಮದ್ದು ತೆಗೆಯುವುದು ಮುಂತಾದುವನ್ನು ಅಭ್ಯಸಿಸಿದನು. ಏಕೆಂದರೆ ತನ್ನ ಕಲೆಗೆ ಬೇಕಾದ ಬೇಡಿಕೆಗಳನ್ನೂ ಗಿರಾಕಿಗಳನ್ನೂ ತಾನೇ ಸೃಷ್ಟಿಸಬೇಕಿತ್ತು. ಇದರೊಡನೆಯೇ ಇನ್ನೂ ನೂರಾರು ಅರ್ಥಹೀನವಾದ ಅಸಂಬದ್ಧವಾದ ಯಾವು ಯಾವುವೋ ಕಸಬುಗಳನ್ನು ಮಾಡತೊಡಗಿದನು. ಭತ್ತದ ವ್ಯಾಪಾರ, ಅಂಗಡಿ ಕೃಷ್ಣೇಗೌಡರ ಬಾಕಿ ವಸೂಲಿ, ಹೆಣ್ಣಿಗೆ ಗಂಡು ಇಂಥಲ್ಲಿದೆ ಎಂದು ತಿಳಿಸುವುದು, ಎತ್ತಿನ ವ್ಯಾಪಾರ, ಇಂಥವೇ ನೂರಾರು. ಈ ಯಾವುದೇ ವ್ಯವಹಾರದಿಂದಲೂ ಸೂರಾಚಾರಿಗೆ ಒಂದೇ ಒಂದು ಕಾಸಿನ ಲಾಭವೂ ಇರಲಿಲ್ಲ. ಸುಮ್ಮನೆ ಕಾಲ ಕಳೆಯಲೆಂದೇ ಸೂರಾಚಾರಿ ಇಷ್ಟನ್ನೆಲ್ಲಾ ಹಚ್ಚಿಕೊಂಡು ಲಾಟರಿ ಹೊಡೆಯುತ್ತಿದ್ದನು.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಯಾವೊಂದು ವ್ಯವಹಾರದಿಂದಲೂ ವಿಮುಕ್ತನಾಗಿ ಸೂರಾಚಾರಿ ಕೈತೊಳೆದುಕೊಂಡು “ಖುಲಾಸ್” ಆಗಿರಲಿಲ್ಲ. ಆ ಊರಿನ ಜನಗಳ ಸಹನೆ ಸಹಿಷ್ಣುತೆಗಳಿಗೆ ಸೂರಾಚಾರಿ ಒಂದು ಉದಾಹರಣೆಯಾಗಿದ್ದನು. ಆದರೆ ಈ ಸದ್ಗುಣಗಳು ಯಾವುದೇ ಅನುಭವ ವಿವೇಕಗಳಿಂದ ಬರದೆ ರೂಢಿಮಾತ್ರದಿಂದ ಅವರೆಲ್ಲರಿಗೂ ಸಿದ್ದಿಸಿತ್ತು. ಸೂರಾಚಾರಿಯ ಸ್ವಭಾವವೋ ಅಥವಾ ಅವನ ಕರ್ಮವೋ ಅಥವಾ ಅವನಿದ್ದ ಊರು ಹಾಗೋ ಆ ಜನಗಳೇ ಅಂಥವರೋ ಅಂತೂ ಊರುಬಿಟ್ಟು ಹೋಗುವುದೊಂದೇ ಈ ಕರ್ಮಜಾಲದಿಂದ ವಿಮುಕ್ತನಾಗುವ ಏಕಮಾತ್ರ ಮಾರ್ಗವೆಂದು ಸೂರಾಚಾರಿಗೆ ಅನ್ನಿಸಿತ್ತು.

ಆದರೆ ಅವನ “ಶನಿ” ಹೆಂಡತಿಯೊಬ್ಬಳು ದಿಡ್ಡಿ ಗಡಿದಾಟುವ ಹಾಗೆ ಇರಲಿಲ್ಲ. ಈ ವಯಸ್ಸಿನಲ್ಲಿ ಮತ್ತೆ ಒಬ್ಬನೇ ಜೀವನವನ್ನು ಎದುರಿಸುವಷ್ಟು ಚೈತನ್ಯ ಸೂರಾಚಾರಿಗೆ ಬರಲಿಲ್ಲ-ಸೂರಾಚಾರಿಯೂ ಅಜಮೀರಿನ ಫಕೀರಪ್ಪನೂ ಕೈಗೊಂಡ ಭೂತೋಚ್ಚಾಟನಾ ವಿಧಾನಗಳಿಂದ ಯಶೋದೆ ನವೆದುಹೋದಳು. ಜೋಲು ಮೊಲೆಯ ಗುಳಿಗಣ್ಣಿನ ಯಶೋದೆಗೆ ಕೈಗೆ ಒಂದು ಖಡ್ಗವನ್ನೋ ತ್ರಿಶೂಲವನ್ನೋ ಕೊಟ್ಟರೆ ಮಾರಿಗೊಂಬೆಯಂತೆಯೇ ಕಾಣಬಹುದಾದ ಸ್ಥಿತಿಗೆ ಬಂದಿದ್ದಳು.

ಸೂರಾಚಾರಿಯೂ ಈರೇಗೌಡನೂ ನಡೆ ನಡೆಯುತ್ತಾ ಇತ್ತಾವರಕ್ಕೆ ಹತ್ತಿರ ಹತ್ತಿರಾದರು. ಸೂರಾಚಾರಿ “ಏನು ಮಾರಾಯ ಸುಬ್ಬಯ್ಯ ಊರಾಗಿದ್ದಾನೋ ಇಲ್ಲೋ” ಎಂದ.

”ಇರದೆ ಎಲ್ಲಿಗೆ ಹೋಗ್ತಾನೆ ಮೊನ್ನೆ ಬೇರೆ ಅವನದೊಂದು ಕೂಸು ತೀರಿ ಹೋಯ್ತಂತೆ” ಎಂದ ಈರೇಗೌಡ.

”ಇದೊಂದು ಎಡವಟ್ಟು ಸೂಳೇಮಗನ ಊರು, ಯಾವುದೂ ಸುಸೂತ್ರ ಆಗೋಲ್ಲ. ಅದಕ್ಕೇ ಹೇಳಿದೆ” ಎಂದ ಸೂರಾಚಾರಿ.

“ಅದು ಹೇಳಿದಿರಲ್ಲ, ಈ ಪೈಕೀನೇ ಎಡವಟ್ಟು ಅಂತ, ಅದು ಯಾರೂ ಒಪ್ಪಬೇಕಾದ್ದೆ! ವ್ಯಾಪಾರ ತಗೊಳ್ಳಿ, ನಂಟಸ್ತಿಕೆ ತಗೊಳ್ಳಿ, ಬೇಸಾಯ ತಗೊಳ್ಳಿ, ಎಲ್ಲಾ ಎಡವಟ್ಟೆ. ನನಗೆ ಪಾಯಿಖಾನೆ ಸಹಿತ ಸುಸೂತ್ರ ಆಗೋಲ್ಲ” ಎಂದು ತನ್ನ ಮೂಲವ್ಯಾಧಿಯನ್ನೂ ಜ್ಞಾಪಿಸಿಕೊಂಡ ಈರೇಗೌಡ,

“ಸುಬ್ಬಯ್ಯ ಇನ್ನೂ ಮಗೀನ ಹೆಚ್ಚುಗಟ್ಟೆ ಮುಗಿಯೋವರೆಗೆ ಸೂತಕದಾಗೆ ವ್ಯಾಪಾರ ಬ್ಯಾಡಾಂತಾನೋ ಏನೋ. ನನಗಂತೂ ರೇಜಿಗೆ ಹಿಡಿದುಹೋಗಿದೆ” ಎಂದು ಸೂರಾಚಾರಿ ಹೇಳಿದ.

ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು

“ಸುಬ್ಬಯ್ಯನಿಗೇನು ಮಕ್ಕಳ ಯೋಗ ಇಲ್ಲ ಅಂತ ಕಾಣದೆ. ಮೂರ್‍ನಾಲ್ಕು ಮಕ್ಕಳಾದವು. ಆದರೇನು, ಆದವು! ಹೋದವು! ಸುಬ್ಬಯ್ಯನಾಗ ಏನಾದರೂ ಒಳರೋಗ ದೋಸ ಉಂಟಾ?” ಎಂದು ಈರೇಗೌಡ ಹೇಳಿದ. ಹೀಗೆಂದು ಈರೇಗೌಡ ನಾಲ್ಕಾರು ಕಡೆ ಮಾತಾಡಿಯೂ ಇದ್ದ. ಇದು ಸುಬ್ಬಯ್ಯನ ಕಿವಿವರೆಗೂ ಹೋಗಿತ್ತು. ಅದನ್ನು ಕೇಳಿ ಅವನ ಕಿವಿ ತಲುಪಿಸಿದವನ ಬಳಿ ಸುಬ್ಬಯ್ಯ “ಅವನ ಹೆಣ್ತಿ ಕಳಿಸಲಿ ತೋರುಸ್ತೀನಿ ದೋಸ” ಎಂದು ಹೇಳಿಕೊಂಡು ನಕ್ಕಿದ್ದ.

“ನಮಗೆ ಏಕೋ ಆ ಪಂಚಾತಿಗಿ” ಎಂದು ಗೊಣಗಿ ಸೂರಾಚಾರಿ ಇತ್ತಾವರದತ್ತ ಕಾಲು ಸರಸರ ಹಾಕಿದ.

2

ಇತ್ತಾವರ ನಲವತ್ತು ಜನಸಂಖ್ಯೆಯ ಏಳೆಂಟು ಮನೆಗಳ ಒಂದು ಸಣ್ಣ ಹಳ್ಳಿ, ಇಸ್ಲಾಪುರದಿಂದ ಬರುವ ದಾರಿಗೆ ತದ್ವಿರುದ್ಧವಾಗಿ ಇನ್ನೊಂದು ದಾರಿ ಇತ್ತಾವರದಿಂದ ಹೊರಟು ಸಂತೆಮಾಳಕ್ಕೆ ಹೋಗುತ್ತಿತ್ತು. ಇತ್ತಾವರದ ಆ ಪಾರ್ಶ್ವದಲ್ಲಿ ಒಂದು ಅತ್ಯಂತ ವಿಸ್ತಾರವಾದ ಈಚಲು ಬಯಲು ಇತ್ತು. ಈಚಲು ಬಯಲಿನಲ್ಲಿ ನಿಂತು ವೀಕ್ಷಿಸುವವರಿಗೆ ದಾರಿ ನೇರವಾಗಿ ಹೋಗಿ ಇತ್ತಾವರಕ್ಕೆ ತಾಗಿಕೊಂಡಿರುವುದು ಕಾಣುತ್ತಿತ್ತು. ಆ ದಾರಿಯಲ್ಲಿ ಒಂದು ಏಳೆಂಟು ಜನ ಹೆಂಗಸರು ಆ ಊರಿಗೆ ವಿಮುಖವಾಗಿ ನಡೆಯುತ್ತಾ ಸಂತೆಮಾಳದ ಕಡೆಗೆ ಹೊರಟಿದ್ದರು. ಉದೊ ಎಂದು ಮಳೆ ಬೀಳುತ್ತಿದ್ದುದರಿಂದ ಎಲ್ಲರೂ ಒಂದೊಂದು ಕಂದು ಬಣ್ಣದ ಗೊರಬು ಹಾಕಿಕೊಂಡಿದ್ದರು. ಸೀರೆಯನ್ನು ಎತ್ತಿ ಕಟ್ಟಿದ್ದರಿಂದ, ಹಿಂದುಗಡೆಯಿಂದ ನೋಡುವವರಿಗೆ ಕೇವಲ ಒಂದು ಗೊರಬು ಕೆಳಗೆ ಎರಡು ಬೆತ್ತಲೆ ಕಾಲುಗಳು ಕಾಣುತ್ತಿದ್ದುವು. ಇಡೀ ವಾರ ಮೌನವಾಗಿ ಗಂಭೀರವಾಗಿ ಕಾಲಯಾಪನೆ ಮಾಡಿದುದಕ್ಕೆ ಪ್ರತಿಯಾಗಿ ಮುಯ್ಯಿ ತೀರಿಸುವಂತೆ ಎಲ್ಲರೂ ಏಕಕಾಲದಲ್ಲಿ ಮಾತನಾಡುತ್ತಾ ನಡೆಯುತ್ತಿದ್ದುದರಿಂದ ಗಿಲಕಿ ಅಲ್ಲಾಡಿಸಿದಂತೆ ಆ ಗುಂಪಿನಿಂದ ಶಬ್ದ ಹೊರಹೊಮ್ಮುತ್ತಿತ್ತು. ಎಲ್ಲರೂ ಏಕ ಕಾಲದಲ್ಲಿ ಕೇಳುತ್ತಾ ಹರಟುತ್ತಾ ಕೈಬಾಯಿ ಕಿವಿ ಕಣ್ಣುಗಳೆಲ್ಲಕ್ಕೂ ಒಟ್ಟಿಗೆ ಕೆಲಸ ಕೊಟ್ಟು ಸಂತೆ ಕಡೆಗೆ ನಡೆದಿದ್ದರು. ಅದರಲ್ಲಿ ಸುಬ್ಬಯ್ಯನ ಹೆಂಡತಿ ಗೌರಿ ಮಾತ್ರ ಹೆಚ್ಚು ಮಾತನಾಡದೆ ನಡೆಯುತ್ತಿದ್ದಳು. ಮಿಕ್ಕವರ ದೃಷ್ಟಿಯಲ್ಲಿ ಕೆಲವು ದಿನಗಳ ಹಿಂದೆ ಆಕೆಯ ಮಗು ತೀರಿಕೊಂಡಿದ್ದರಿಂದ ಅವಳು ಹಾಗೇ ಇರಬೇಕಾದ್ದು ಸಹಜವೇ ಆಗಿತ್ತು. ಆದರೆ ಅವಳ ಕಿವಿಗೆ ಪುರುಸೊತ್ತು ಕೊಡದೆ ಇಬ್ಬರು ಹೆಂಗಸರು ಸ್ಲೇಟಿನ ಮೇಲೆ ಬಳಪ ಗೀಚಿದಂತೆ ಹರಟೆಯನ್ನು ಗೀಚುತ್ತಿದ್ದರು.

ಅಲ್ಲಿ ಗೌರಿ ಒಂದು ಆಶ್ಚರ್ಯಾದ್ಭುತವಾಗಿದ್ದಳು. ಸೌಂದರ್ಯದಲ್ಲಿ ಸಕಲ ಶಿಲ್ಪ ಶಾಸ್ತ್ರ ಲಕ್ಷಣಗಳ ಅವತಾರದಂತೆ ಕಾಣುತ್ತಿದ್ದಳು. ಮೂಗು ಕಣ್ಣು ಹುಬ್ಬು ಕೂದಲು ತುಟಿ ರೇಖೆಗಳು ಕತ್ತು ಸ್ತನಗಳು ನಡು ಕಾಲು ಎಲ್ಲ ಇನ್ನೇನು ಮಾಡಿಯೂ ಅವಳ ಸೌಂದರ್ಯವನ್ನು ಹೆಚ್ಚಿಸದಷ್ಟು ಅದ್ಭುತ ಸಾಮರಸ್ಯದಲ್ಲಿ ಮಿಳಿತವಾಗಿದ್ದುವು. ಅದಕ್ಕಿಂತ ಮಿಗಿಲಾಗಿ ಆಕೆಯ ನಡೆ ಚರ್ಯೆ ನಿಲ್ಲುವ ನಡೆಯುವ ಭಂಗಿ ಇವುಗಳ ವಿನ್ಯಾಸವಂತೂ ಸೌಂದರ್ಯವೇ ಛಂದೋಬದ್ಧವಾದಂತೆ ಕಾಣುತ್ತಿತ್ತು. ಕುಳಿತರೆ, ನಿಂತರೆ, ನಕ್ಕರೆ ಒಂದೊಂದು ಸಾರಿಯೂ ಒಂದೊಂದು ಸಾಕ್ಷಾತ್ಕಾರವಾದಂತಾಗುತ್ತಿತ್ತು. ಆದರೆ ಯಾರಿಗೆ ಆಗುತ್ತಿತ್ತು ಎನ್ನುವುದು ಮಾತ್ರ ಸಂಶಯಾಸ್ಪದ ಪ್ರಶ್ನೆ. ಏಕೆಂದರೆ ಯಾರಿಗೂ ಅದರತ್ತ ಗಮನವೇ ಇರಲಿಲ್ಲ.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಆಕೆ ಮುಕ್ಕಿಗದ್ದೆಯಿಂದ, ಕೆಳಮನೆ ಸುಬ್ಬಯ್ಯನನ್ನು ಮದುವೆಯಾಗಿ ಇತ್ತಾವರಕ್ಕೆ ಬಂದು ನಾಲ್ಕು ವರ್ಷವಾಗಿತ್ತು. ತನ್ನ ಸೌಂದರ್ಯದ ಬಗ್ಗೆ ಆಕೆಗಿದ್ದ ಅಸ್ಪಷ್ಟ ಪ್ರಜ್ಞೆಯೊಂದನ್ನು ಬಿಟ್ಟರೆ ಬೇರಾರಿಗೂ ಅತ್ತ ಗಮನ ಹೋದಂತಿರಲಿಲ್ಲ. ಅವಳು ಸುಂದರಿ ಎಂದು ಕ್ಷೀಣವಾಗಿ ಅನಿಸಿದ ಕೆಲವರು ”ಈ ಬಿಲ್ಲೋರ ಜಾತಿಯಾಗೆ ಹ್ಯಂಗ ಮಾರಾಯ ಇಂತಾ ಬಾಲೆ ಹುಟ್ತು. ಯಾವ ಬ್ರಾಮರಿಗೆ ಅಡ್ಡ ಹುಟ್ತೋ” ಎಂದು ಮಾತಾಡಿದ್ದರು. ಇನ್ನು ಕೆಲವರು “ಈ ಸುಬ್ಬಯ್ಯನಂಥ ಮನಿಸ್ಯನನ್ನು ಕೈಹಿಡೀಬೇಕಾರೆ, ಏನು ಆಚಾರ ತಪ್ಪಿದ್ದಳೋ!” ಎಂದು ಇತ್ಯಾದಿಯಾಗಿ ವಕ್ರವಾಗಿ ಗಮನಿಸಿದ್ದರು, ಆಕೆಯ ಪವಾಡ ಸದೃಶ ಸೌಂದರ್ಯವನ್ನು.

ಇತ್ತಾವರಕ್ಕೆ ಬಂದ ನಾಲ್ಕು ವರುಷದಲ್ಲಿ ಮೂರು ಮಕ್ಕಳಾಗಿದ್ದವು ಆಕೆಗೆ. ಆದರೆ ಆ ಮಲೆನಾಡಿನ ಶೀತಕ್ಕೊ ಅಥವಾ ಮತ್ತೇನು ಕಾರಣಕ್ಕೊ ಹುಟ್ಟಿದ ಕೆಲವೇ ವಾರಗಳಲ್ಲಿ ಅವು ತೀರಿಕೊಂಡಿದ್ದವು. ಆದರೆ ಅವು ಶೈಶವಾವಸ್ಥೆಯಲ್ಲೇ ತೀರಿಕೊಳ್ಳುತ್ತಿದ್ದುದರಿಂದ ಗೌರಿಗೆ ಅಂಥ ಆತ್ಮೀಯತೆ ಏನೂ ಇರದುದರಿಂದ ವಿಪರೀತ ಎನ್ನುವಂಥ ದುಃಖವಾಗುತ್ತಿರಲಿಲ್ಲ. ಇನ್ನೂ ಅತ್ತೆ ರುದ್ರಮ್ಮನೇ ಮಕ್ಕಳ ಭಾಗ್ಯ ಮಗನಿಗಿಲ್ಲವಲ್ಲಾ ಎಂದು ಇತ್ಯಾದಿಯಾಗಿ ಉದ್ಧರಿಸಿ ಅಳಿಸುತ್ತಿದ್ದಳು ಗೌರಿಯನ್ನು. ಗೌರಿ ಮಳೆಗಾಲದಲ್ಲಿ ಮಕ್ಕಳು ಹುಟ್ಟುವುದರಿಂದಲೇ ಸಾಯುತ್ತವೆಂದು ತೀರ್ಮಾನಕ್ಕೆ ಬಂದಿದ್ದಳು. ಆದುದರಿಂದ ಮುಂದಿನ ಸಾರಿ ಬಸುರಾದಾಗ ಬಯಲು ಸೀಮೆಗೆ ಹತ್ತಿರವಿರುವ ಮಳೆ ಕಡಿಮೆ ಇರುವ ತವರು ಮನೆಗೇ ಹೋಗಬೇಕೆಂಬ ತೀರ್ಮಾನಕ್ಕೆ ಬಂದಿದ್ದಳು.

ಆದರೆ ಈ ದಿನ ಗಂಭೀರವಾಗಿ ಅವಳು ಯೋಚನೆ ಮಾಡುತ್ತಿದ್ದುದು ಅದಲ್ಲ. ಅವಳು ಆ ದಿನ ಅವಳ ಮನೆ ಹಿಂದಿನ ಈಚಲು ಬಯಲಿನಲ್ಲಿ ಮೂರು ಸಣ್ಣ ತಲೆಬುರುಡೆ ಎಲುಬುಗಳನ್ನು ನೋಡಿದ್ದಳು. ಗುಳಿಕಣ್ಣು, ಚಿಲಿದ ಹಲ್ಲಿನ ಆ ಬುರುಡೆಗಳನ್ನು ನೋಡಿ ಅವಳಿಗೆ ಏನೋ ಒಂದು ತರದ ಅವ್ಯಕ್ತ ಭೀತಿ ಆರಂಭವಾಯ್ತು. ತನ್ನ ತೀರಿಹೋದ ಮಕ್ಕಳಿಗೂ ಆ ಬುರುಡೆಗಳಿಗೂ ಯಾವುದೋ ಅವ್ಯಕ್ತ ಸಂಬಂಧವೇರ್ಪಟ್ಟು ಮತ್ತೆ ಮತ್ತೆ ಅವಳ ತಲೆಯೊಳಗೆ ಆ ಬುರುಡೆಗಳೇ ಜ್ಞಾಪಕಕ್ಕೆ ಬರುತ್ತಿದ್ದುವು. ಗಾಢವಾಗಿ ಆಲೋಚನೆ ಮಾಡುತ್ತಿದ್ದ ಗೌರಿ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು. ಗುಂಪಿನಿಂದ ಹಿಂದಾದಳು. ಗೊರಬದಲ್ಲಿ ಅಕ್ಕಪಕ್ಕ ಕಾಣುವುದಿಲ್ಲವಾದುದರಿಂದ ಪಕ್ಕದಲ್ಲಿದ್ದ ಹೆಂಗಸರು ಗೌರಿ ಹಿಂದಾದುದನ್ನು ಗಮನಿಸಲೇ ಇಲ್ಲ. ಅವರು ಮಾತನಾಡುತ್ತಲೇ ಬರುತ್ತಿದ್ದರು. ಅಷ್ಟಕ್ಕೂ ಅವರಿಗೆ ಗೌರಿ ಪಕ್ಕದಲ್ಲಿರುವ ಕಲ್ಪನೆಯೇ ಸಾಕಾಗಿತ್ತು. ಗೌರಿ ಆಲೋಚನೆಯಲ್ಲಿ ಹಿಂದಾಗುತ್ತಾ ಬಂದಂತೆ, ಪಕ್ಕ ಒಟಗುಡುತ್ತಿದ್ದ ಹೆಂಗಸರ ವ್ಯಕ್ತಿತ್ವವೆಲ್ಲಾ ಮಾಸಿ, ಕರಿಯ ಚೂಪನೆಯ ಗೊರಬುಗಳಿಗೆ ಕಾಲು ಬಂದು ನಡೆದುಕೊಂಡು ಹೋಗುತ್ತಾ ಇರುವಂತೆ ಕಂಡವು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಗೌರಿ ತನ್ನ ಮಕ್ಕಳು ಸತ್ತಾಗ ತಾನು ಸ್ಮಶಾನಕ್ಕೆ ಹೋಗಿರಲಿಲ್ಲ. ಅತ್ತೆಯೊಂದಿಗೆ ಕಣ್ಣೀರು ಹಾಕುತ್ತಾ ಮನೆಯಲ್ಲಿ ಕುಳಿತಿದ್ದಳು. ಇವರು ಮಕ್ಕಳನ್ನು ತೆಗೆದುಕೊಂಡು ಹೋದವರು ಏನು ಮಾಡಿದರು? ಮನೆಯ ಹಿತ್ತಿಲಲ್ಲೇ ಎಲ್ಲಾದರೂ ಹುಗಿದರೋ? ಅಥವಾ ಸ್ಮಶಾನದಲ್ಲಿ ಹುಗಿದಿದ್ದನ್ನು ನರಿ ನಾಯಿ ಕಿತ್ತು ತೆಗೆದುವೊ! ಎಂದು ಚಿಂತಿಸಿದಳು. ಏನೋ ಎಲ್ಲರೂ ತನ್ನನ್ನು ಉಪೇಕ್ಷೆ ಮಾಡಿದ್ದಾರೆಂದು ಅವಳಿಗೆ ಅನ್ನಿಸಿತು. ಹೀಗೆ ಆಲೋಚಿಸುತ್ತಾ ನಡೆಯುತ್ತಿದ್ದ ಅವಳ ಪ್ರಜ್ಞೆ ಫಕ್ಕನೆ ವಾಸ್ತವಕ್ಕಿಳಿದಾಗ ಕೊಂಚ ದೂರದಲ್ಲಿ ಸಾಗುತ್ತಿದ್ದ ಹೆಂಗಳೆಯರು ಓಲಾಡುತ್ತಾ ಸಾಗುವ ಕರಿಯ ಗೊರಬುಗಳಂತೆ ಕಂಡು ಬೆಚ್ಚಿಬಿದ್ದಳು. ತನ್ನ ಕಲ್ಪನೆಗಳನ್ನು ಹತ್ತಿಕ್ಕಲೋ ಎಂಬಂತೆ ಸರಸರ ಮುಂದುವರಿದು ಗುಂಪನ್ನು ಕೂಡಿಕೊಂಡಳು. ಮಳೆ ಒಂದೇ ಸಮ ಬೀಳುತ್ತಾ ಗೊರಬದ ಮೇಲೆ ಟರಪರ ಟರಪರ ಶಬ್ದ ಮಾಡುತ್ತಿತ್ತು.

“ಗೌರಿ, ಗೌರಮ್ಮ ಓಯ್” ಎಂದು ಬಹಳ ಹೊತ್ತಿನಿಂದಲೂ ತನ್ನ ಮಾತಿಗೆ ಓಗೊಳ್ಳದಿರುವುದನ್ನು ನೋಡಿ ಸಂಶಯದಿಂದ ಇತ್ತ ತಿರುಗಿದಳು ಪಕ್ಕದಲ್ಲಿ ಬರುತ್ತಿದ್ದ ಸೀತಮ್ಮ. ಗೌರಿ ಆ ವೇಳೆಗೆ ಎಚ್ಚರಾದಂತಾಗಿ “ಆ ಏನಂದಿ” ಎಂದು ತಿರುಗಿದಳು ಬೆಚ್ಚಿ.

”ಥೂ ನಿನ್ನ, ನಾ ಹೇಳೋದನ್ನ ಆಲೈಸ್ತಿಲ್ಲೇನು. ಬಾ ಏನೇನನ್ನೋ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ” ಎಂದು ಸೀತಮ್ಮ ಹೇಳಿದಳು.

“ಇಲ್ಲ ಕೇಳಿದ್ದೀನಿ ನಿನ್ನ ಮಾತು.”

“ಮತ್ತೆ ನಾ ಕೂಗಿದರೆ ಒಕ್ಕುಣಲಿಲ್ಲ?”

ಗೌರಿ ಮಾತನಾಡಲಿಲ್ಲ. ಸೀತಮ್ಮನ ಮನೆ ಗೌರಿಯ ಮನೆಗೆ ಒಂದು ನೂರು ಗಜ ದೂರ ಇತ್ತು. ಹಾಗಾಗಿ ಇಬ್ಬರೂ ಓರಗೆಯವರಾಗಿದ್ದರು.

”ಮಳೆ ಯಾಕೊ ಜೋರಾಗೋ ಹಾಗೆ ಕಾಣ್ತದೆ. ಸಂತೆ ಸೇರ್‍ತದೊ ಇಲ್ಲೋ” ಎಂದಳು ಗೌರಿ.

“ಮೊನ್ನೆ ಅಂತಾ ಮಳೇಲಿ ಸೇರಿತ್ತಂತೆ. ಇವತ್ತು ಈ ಮಳೆಗೆ ಸಂತೆ ಕೈದು ಮಾಡ್ತಾರಾ?” ಎಂದು ಸೀತಮ್ಮ ಆಶ್ವಾಸನೆ ಕೊಟ್ಟಳು.

ಮಳೆ ಅಡ್ಡಡ್ಡಾ ಬೀಸುತ್ತಾ ಜೋರಾಗುವಂತೆ ಕಂಡಿತು. ಎಲ್ಲಾ ಗೊರಬು ಅಡ್ಡ ಮಾಡಿಕೊಂಡು ಮುಂದುವರಿಯತೊಡಗಿದರು.

ಮಳೆಯಲ್ಲಿ ಆ ಗೊರಬಲಿನ ಗುಂಪು ಈಚಲು ಹರದ ಕೊನೆ ಸಾರುವವರೆಗೆ ಬಂದಿತ್ತು. ಅಷ್ಟರೊಳಗೆ ಯಾರೋ ಹಿಂದಿನಿಂದ ಕೂಗಿದಂತಾಯ್ತು. ಮಳೆಯ ಇರಿಚಿಲಿಗೆ ಅಡ್ಡನಿಂತು ಉಪಾಯವಾಗಿ ಎಲ್ಲರೂ ತಿರುಗಿ ನೋಡಿದರು. ದೂರದಲ್ಲಿ ಇನ್ನೊಂದು ಗೊರಬಲು ಓಡಿಬರುತ್ತಾ ಇರುವಂತೆ ಕಂಡರು. ಹತ್ತಿರ ಹತ್ತಿರಾದಂತೆ ಗೌರಿಗೆ ಅವನ ಗುರುತು ಹತ್ತಿತು.

”ಓ ಇಸ್‌ನಾಥ, ಇವನನ್ನು ಯಾಕೆ ಕಳಿಸಿದ್ರಪ್ಪಾ, ಈ ಮಳೇಲಿ ಬ್ಯಾಡಾಂತ ಒಪ್ಪಿಸಿ ಕೂರಿಸಿ ಬಂದಿದ್ದೆ” ಎಂದ ತನ್ನೊಳಗೇ ಹೇಳಿಕೊಂಡಳು.

ವಿಶ್ವನಾಥ ಸುಬ್ಬಯ್ಯನ ಚಿಕ್ಕಪ್ಪನ ಮಗ. ತಂದೆ ತಾಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡುದರಿಂದ ಸುಬ್ಬಯ್ಯನ ಮನೆಯೇ ಅವನ ಮನೆಯಾಗಿತ್ತು. ಹುಡುಗ ಓಡೋಡಿ ಓಡೋಡಿ ಬಂದುದರಿಂದ ಏದುಸಿರು ಬಿಡುತ್ತಾ ಮಾತಾಡದೆ ನಿಂತನು.

”ಎಂಥದೋ ಹುಡುಗಾ! ಯಾಕೋ ಓಡಿಬಂದೆ ಮೆಲ್ಲಕೆ ಬಂದಿದ್ದರೆ ಆಗ್ತಿರಲಿಲ್ಲವೇನೋ? ಹುಚ್ಚು ಮುಂಡೇಗಂಡಾ, ನಾವೇನು ಕಳೆದು ಹೋಗಿದ್ದೆವೇನೋ! ಏನು ಹೇಳು ಹೋಗಲಿ!” ಈ ಬಗೆಯ ನಾನಾ ಪ್ರಕಾರದ ಪ್ರಶ್ನೆಯನ್ನು ಉತ್ತರ ನಿರೀಕ್ಷಿಸಿದ ಎಲ್ಲಾ ಹೆಂಗಸರು ಹಾಕಿದರು. ಒಟ್ಟಿನಲ್ಲಿ ಆ ಹುಡುಗ ಬಂದುದ್ದನ್ನು ಅವರು ಗಮನಕ್ಕೆ ತಂದುಕೊಂಡ ರೀತಿ ಅದಾಗಿತ್ತು.

”ಗೌರತ್ತಿಗಮ್ಮಾ ದಡಪ್ಪಯ್ಯನ ಕಣ್ಣಿಗೆ ಬಿಡಕ್ಕೆ ಔಷಧಿ ಬೇಕಂತೆ” ಎಂದು ನಾಚಿ ನಾಚಿ ಹೇಳಿದ. ಹುಡುಗ ಚಿಕ್ಕವನಾದರೂ ಬಹಳ ಸಭ್ಯವಾಗಿ ಸೌಮ್ಯವಾಗಿದ್ದ.

ಗೌರಿಗೂ ನಾಚಿಗೆಯಾಯ್ತು. “ಮನ್ನಿನದೆಲ್ಲಾ ಮುಗೀತೇನು” ಎಂದು ಕೇಳಿದಳು.

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

“ಏನೋ! ದಡಪ್ಪಯ್ಯ ಹೇಳಿದರು. ಅದಕ್ಕೆ ಬಂದೆ.”

“ಏನು ತಂದೀಯೋ” ಎಂದು ಗೌರಿ ಕೇಳಿದಳು.

ಗೌರಿಯೂ ನಾಚಿಕೆಯಿಂದ ಹೆಸರೆತ್ತದೆ ಔಷಧಿ ಎಂದೆ ಮಾತಾಡಿದಳು. ಪಕ್ಕದಲ್ಲಿದ್ದ ಹೆಂಗಸೊಬ್ಬಳು ”ಬಾರೋ ಮಗಾ ನಿನ್ನ ಕಳಿಸ್ಯಾರಲ್ಲಾ ಹೇಳು ಈ ಮಳೇಲಿ” ಎಂದು ಸಮೀಪಕ್ಕೆ ಕರೆದಳು.

”ಎಂತದಪ್ರೊ ಸರಿಯಾಗಾದ್ರೂ ಹೇಳೋ” ಎಂದು ಸೀತಮ್ಮ ಕೇಳಿದಳು. ಗೌರಿ ಮತ್ತು ವಿಶ್ವನಾಥನ ಸಂಭಾಷಣೆಗಳು ಅವರಿಬ್ಬರಿಗೇ ಅರ್ಥವಾಗುವ ಸಂಕೇತ ಭಾಷೆಯಂತೆ ಕಂಡಿತು ಅವಳಿಗೆ. ವಿಶ್ವನಾಥ ಮತ್ತೂ ನಾಚಿ ಗೊರಬನ್ನು ಓರೆಮಾಡಿ ಮುಖ ಮರೆಸಿಕೊಂಡನು. ಗೌರಿ “ಮಾವನದು ಇಂಥವೇ!” ಎಂದು ರೇಗಿದಂತೆ ನಟಿಸುತ್ತಾ ನಾಚಿಕೆ ಮರೆಸಲೆತ್ನಿಸಿದಳು. ಇದರಿಂದ ಆ ಹೆಂಗಸರಿಗೆ ಇನ್ನೂ ಕುತೂಹಲ ಕೆದರಿತ್ತು.

ವಿಶ್ವನಾಥ ಒತ್ತಿ ಹಿಡಿದ ಸಂಯಮದಿಂದ ಈ ಕಡೆಗೆ ತಿರುಗಿ “ದಡಪ್ಪಯ್ಯನಿಗೆ ಕಣ್ಣಿಗೆ ಬಿಡಕ್ಕೆ ಯದೆ ಹಾಲು ಬೇಕಂತೆ ಒಳಲೆ ಕೊಟ್ಟು ಕಳಿಸಿದಾರೆ!” ಎಂದು ಹೇಳಿ ಅಷ್ಟರೊಳಗೇ ನಾಚಿ ಸರಕ್ಕನೆ ಮುಖ ತಿರುಗಿಸಿಕೊಂಡ.

“ಅಯ್ಯಯ್ಯೋ ನಾಚಿಕೆ ನೋಡ್ರೋ ಇವನಿಗೆ” ಎಂದು ಹಲವು ಹೆಂಗಸರೂ “ಮೊನ್ನೆ ಮೊನ್ನೆ ಮಲೆ ಕುಡಿಯಾದು ಬಿಟ್ಟಿದ್ದಾನೆ. ದೊಡ್ಡ ಗಂಡಸು ಆಡಿದಂಗೆ ಆಡ್ತಾನೆ” ಎಂದು ಕೆಲವರೂ, “ಈ ಹುಡುಗರು ಹಿಂಗೇಂತ ಹೇಳಾ ಹಂಗಿಲ್ಲ ನೋಡಿದಿರಾ ಅಬ್ಬಬ್ಬಾ” ಎಂದು ಮತ್ತೆ ಹಲವರೂ ವಿಶ್ವನಾಥನನ್ನು ಮನಸ್ವಿಯಾಗಿ ಲೇವಡಿ ಮಾಡಿ, ಅವನ ಕಣ್ಣಿನಲ್ಲಿ ಹನಿಗೂಡುವಂತೆ ನಾಚಿಸಿದರು. ಈ ನಡುವೆ ಗೌರಿಯೂ ನಾಚಿದಳು.

ಗೌರಿ ಹೇಗೋ ಚೇತರಿಸಿಕೊಂಡು, ನಾಚಿಕೆಯಿಂದ ಮುಖದಿರುಹಿ ನಿಂತಿದ್ದ ವಿಶ್ವನಾಥನಿಂದ ಒಳಲೆ ತೆಗೆದುಕೊಂಡು ಮಳೆಯಲ್ಲೇ ಕೊಂಚ ಪಕ್ಕಕ್ಕೆ ಸರಿದು ಮರೆಮಾಡಿಕೊಂಡು ಹಾಲು ಹಿಂಡಿದಳು. ಅವಳ ಸೌಂದರ್ಯಕ್ಕೆ ಅವಳ ಕುಚಗಳು ಅದ್ಭುತ ಮೆರುಗನ್ನಿತ್ತಿದ್ದುವು. ವಿಶ್ವನಾಥನ ವಿಪರೀತ ನಾಚಿಕೆಯು ಅವಳಲ್ಲಿನ ಸ್ತ್ರೀತ್ವವನ್ನೂ ಸೌಂದರ್ಯವನ್ನೂ ದಿಗ್ಗನೆ ಜ್ಞಾಪಿಸಿದುವು.

ಮತ್ತೆ ಒಳಲೆಯನ್ನು ವಿಶ್ವನಾಥನ ಬಳಿಗೆ ತಂದು “ತಗೊ ಮರಿ” ಎಂದು ಮುದ್ದಿನಿಂದ ಕೊಟ್ಟಳು. ವಿಶ್ವನಾಥನಿಗೆ ನಾಚಿಕೆಯ ಅಮಲು ಇನ್ನೂ ಇಳಿದಿರಲಿಲ್ಲ. ತಲೆ ತಗ್ಗಿಸಿಕೊಂಡು ಒಳಲೆ ತುಳುಕದಂತೆ ಅಂಗೈಯ್ಯನ್ನು ಒತ್ತಿಹಿಡಿದು ”ಸೂರಾಚಾರ್‍ರು ಬಂದಿದ್ದಾರೆ ಅತ್ತಿಗಮ್ಮ ಔಸ್ತಿ ಮಾಡಕ್ಕೆ” ಎಂದು ಹೇಳಿ ತಡೆದರೆ ಇನ್ನೇನು ಹೇಳಿ ಈ ಹೆಂಗಸರ ಗುಂಪು ಲೇವಡಿ ಮಾಡಿ ನಾಚಿಸುತ್ತದೋ ಎಂದು ಒಂದೇ ಸಮನೆ ಹಿಂದಿರುಗಿ ಓಟ ಕಿತ್ತನು.

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

ಗೌರಿ ಗುಂಪಿನ ಕಡೆ ತಿರುಗಿದಳು; “ಏನಂತೆ? ಏನಾಯ್ತಿ ನಿನ್ನ ಮಾವಗೆ?” ಎಂದು ಗುಂಪು ಪ್ರಶ್ನೆ ಹಾಕಿತು.

“ಏನಿಲ್ಲ ಮೊನ್ನೆ ಮನೆಮಾಡು ಪೂರ್‍ತಾ ಸೋರ್‍ತಿತ್ತು ಎಂದು ಈಚಲು ಹೊದಿಸೋದಿಕ್ಕೆ ಮಾವ ಈಚಲು ಕೊಯ್ಯಲು ಹೋಗಿದ್ದರು. ಈಚಲು ಮುಳ್ಳು ಕಣ್ಣಿಗೆ ಹೊಡೆದು ಗಾಯ ಆಗಿದೆಯಂತೆ. ಇವರು ಉದಾಸಿನ ಮಾಡಿ ಮೊನ್ನೆಯಿಂದ ಜೋರಾಗಿದೆಯಂತೆ. ಅದಕ್ಕೇ ಸೂರಾಚಾರ್‍ರು ಎದೆ ಹಾಲು ಬಿಟ್ಟುಕೋ ಅಂದಿದ್ದಾರಂತೆ” ಎಂದಳು ಕೊಂಚ ನಾಚಿಕೆಯಿಂದಲೇ.

ಅನಂತರ ಗುಂಪು ಮುಂದುವರಿಯತೊಡಗಿತು. ಏನೇನೋ ಮಾತಾಡಿಕೊಂಡು ಕೆಲವರು ಕಿಸಿ ಕಿಸಿ ನಕ್ಕರು. ಮಳೆ ಉರವಣಿಸಿ ಹುಯ್ಯತೊಡಗಿತು.

ಗೌರಿ ”ಸೀತಕ್ಕ ನಮ್ಮೂರಿನ ಸುಡುಗಾಡು ಯಾವುದೆ?” ಎಂದು ಕೇಳಿದಳು.

“ಯಾಕವ್ವಾ ನಿಂಗೀಗ ಸುಡುಗಾಡಿನ ಯೋಚನೆ?” ಎಂದು ಸೀತಮ್ಮ ಕೇಳಿದಳು.

“ಸುಮ್ಮನೆ ಕೇಳಿದೆ ಅಷ್ಟೇ” ಎಂದು ಗೌರಿ ಮಾತಾಡದೆ ನಡೆಯತೊಡಗಿದಳು. ಕೊಂಚ ದೂರ ಕ್ರಮಿಸಿದರು.

“ನಾನ್ಯಾಕೆ ಕೇಳಿದ್ದೂ ಅಂದರೆ ನಮ್ಮ ಮನೆ ಹತ್ತಿರ ಏನಾದರೂ ಸುಡುಗಾಡಿತ್ತ” ಎಂದು ಮತ್ತೆ ಕೇಳಿದಳು ಗೌರಿ.

“ಏನು ಅನಿಷ್ಟಾ ಯೋಚನೆ ಮಾಡ್ತೀಯೇ! ಕಾಲಾಂತರದಾಗೆ ಯಾರ ಯಾರ ಮನೆ ಹತ್ರ ಏನೇನಿತ್ತೊ! ಯಾರಿಗೆ ಗೊತ್ತವ್ವ! ನಮ್ಮ ಮನೆ ಹತ್ತಿರ ಗುಂಡಿ ತೋಡಿಸಬೇಕಾದರೆ ಸತ್ತೋರ ತಲೆದೆಸೆಯಲ್ಲಿಡೋ ಹಣತೆ ಸಿಕ್ಕಿತಂತೆ.”

“ಸೈಯ್ಯೇನು!”

”ಎಲ್ಲಾ ಜಾಗಾದಾಗ ಜನ ಹುಟ್ಟಿರ್‍ತಾರೆ ಸತ್ತಿರ್‍ತಾರೆ ಅದಕ್ಕೆ ಯಾಕೆ ಯೋಚನೆ.”

“ಹಾಗಲ್ಲಾ ಸೀತಕ್ಕಾ, ನಮ್ಮ ಹಿತ್ತಲು ಹಿಂದೆ ಈಚಲು ಹರನಾಗೆ ಅರಮರಲು ಗಿಡ ಇದೆಯಲ್ಲಾ ಅಲ್ಲಿ”-

“ಹೂ ಸರಿ”

“ಅಲ್ಲಿ ಮೂರು ತಲೆ ಬುಳ್ಡೆಗೂಡು ಬಿದ್ದಿದ್ವಕ್ಕಾ. ಕಣ್ಣಿನ ಖಾಲಿ ನನ್ನನ್ನೇ ನೋಡ್ದಂಗಾಗಿ ಬೆಚ್ಚಿಬಿದ್ದೆ ನಾನು.”

“ಹುಚ್ಚಿ ಮನೆ ಹಿಂದೆ ಹೆಂಗಸರು ಮಕ್ಕಳು ಓಡೋಡೋ ಜಾಗದಾಗೆ ಸುಡುಗಾಡು ಮಾಡಿ ಹೆಣ ಹುಗೀತಾರೇನೆ? ಅದಕ್ಕೇನೇನು ನೀನು ಸುಡುಗಾಡು ಯಾವುದೂಂತ ಕೇಳಿದ್ದು.”

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

“ಮತ್ತೆ ಹ್ಯಾಂಗೆ ಬಂತು ಬುಲ್ಡೆ ಚಿಪ್ಪು.”

”ಅದು ಯಾವುದೋ ಮುಸಿಯನದೋ ಮಂಗನದೋ ಇರಬೇಕು!”

“ಥೂ ನಾವು ಭಿಲ್ಲೋರು ಮಂಗನನ್ನು ತಿನ್ನೋದಿಲ್ಲ.”

”ಮತ್ತೇನು ನಾವು ತಿಂದು ಅಲ್ಲಿ ಎಸೆದಿವಿ ಅಂತಾನ. ನಾವು ಮಂಗ ಇರಲಿ ಹಂದೀನೂ ತಿನ್ನಲ್ಲ. ನಿಮ್ಮ ಮಾವ ಅದಾರಲ್ಲ ಗೂರಲು ಅಂತ ಸುಮಾರು ದಿನ ಮಂಗನ ಮಾಂಸ ತಿಂದಿದ್ದಾರೆ. ಆಗೇನಾದ್ರೂ ಎಸೆದವೋ ಏನೋ!’ ಎಂದಳು ಸೀತಮ್ಮ.

“ಇದೇನಕ್ಕಾ ಹಿಂಗಂತಿ. ನಮ್ಮ ತಾಯೀ ಊರಲ್ಲಿ ಹೊಲೇರೂ ಸಹ ತಿಂತಿರಲಿಲ್ಲ ಮಂಗನ್ನ. ಮಾವ ತಿಂದಿದ್ರ!”

”ಔಸ್ತಿ ಅಂತ ಏನಾದರೂ ಮಾಡಬೇಕಾಗುತ್ತೆ. ಈಗ ಎದೆ ಹಾಲಿಗೆ ಒಳಲೆ ಕೊಟ್ಟು ಕಳಿಸಿರಲಿಲ್ಲವೇನು! ರೋಗ ಗುಣ ಆಗ್ಬೇಕಂತಿದ್ರೆ ಏನಾರೂ ಮಾಡಲೇಬೇಕು.”

“ಆದರೆ ಮಂಗನ್ನ ತಿಂದ ಮೇಲೆ ಮನಸರನ್ನ ತಿಂದಂಗೇನೆ ಸೈ.”

”ನೀನು ಕುರಿ ಕೋಳಿ ತಿಂದಿಲ್ಲಾ.”

”ಕುರಿ ಕೋಳಿಗೂ ಮಂಗನಿಗೂ ಒಂದೇನಾ?”

“ಎರಡೂ ಜೀವ ಅಲ್ಲೇನು?”

“ಆದರೂ ಮಂಗಕ್ಕೆ ಮನಸರ ಹಂಗೇ ಕೈ ಇರುತ್ತೆ! ತುರಿಸಿಕೊಳ್ಳುತ್ತೆ! ಎರಡು ಕಾಲಿನ ಮ್ಯಾಲೆ ನಿಲ್ಲುತ್ತೆ! ಹೇನು ತಕ್ಕೊಳ್ಳುತ್ತೆ! ಕೂಸು ಕರಕೊಂಡಿರತ್ತೆ!”

“ಕುರೀಗೂ ಕೋಳಿಗೂ ಮಕ್ಳೂ ಮರಿ ಇರ್‍ತದವ್ವಾ, ಅಂತಾ ದೇವರೇ ಕೊಲ್ಲತಾನಂತೆ! ಇನ್ನು ನಾವು ಕೊಲ್ಲೋದೇನು ಮಹಾ ದೊಡ್ಡದು. ಈಗ ನಿನ್ನ ಮೂರು ಮಕ್ಕಳು ಏನು ಮಾಡಿದ್ವಂತೆ?”

ಸೀತಮ್ಮ ಕೊನೆಗೆ ಎಲ್ಲಾ ತಪ್ಪನ್ನು ಆ ಭಗವಂತನ ತಲೆ ಮೇಲೆ ಹೊರಿಸಿಬಿಟ್ಟಳು. ಗೌರಿ ಮಾತು ಮುಂದುವರಿಸಲಿಲ್ಲ. ಆದರೂ ಮಾವ ಮಂಗನನ್ನು ತಿಂದದ್ದು ಅವಳಿಗೆ ಅಸಹ್ಯಪಡುವಂತಾಯ್ತು.

ಇದನ್ನು ಓದಿದ್ದೀರಾ?: ಬೆಸಗರಹಳ್ಳಿ ರಾಮಣ್ಣ ಅವರ ಕತೆ | ಗಾಂಧಿ

ಒಂದಷ್ಟು ಜನ ಎದುರಿಂದ ಬರ್‍ತಿದ್ದವರು ಸಿಕ್ಕರು. ಹೆಂಗಸರ ಗುಂಪು ಸಂತೆಯ ಬಗ್ಗೆ ವಿಚಾರಿಸಿತು- ಅಕ್ಕಿ ದರ ಇಳಿದಿತ್ತು. ಮೀನು ಸಂತೆಗೆ ಬಂದಿರಲಿಲ್ಲ- ಕಾರಣ ಸಮುದ್ರದಲ್ಲಿ ಭಾರಿ ತುಫಾನು ಎದ್ದಿದ್ದರಿಂದ ಮೀನು ಹಿಡಿಯಲಿಕ್ಕೆ ಯಾರೂ ಸಮುದ್ರಕ್ಕೆ ಹೋಗಿಲ್ಲೆಂದು ಇಲ್ಲಾಪುರದ ಮೀನು ಬೇರಿ ತಿಳಿಸಿದನಂತೆ. ಹೀಗೆ ಏನೇನನ್ನೋ ಕೊಂಚ ಹೊತ್ತು ಮಾತನಾಡಿ ಆ ಹೆಂಗಸರ ಗುಂಪು ಮತ್ತೆ ಮುಂದುವರೆಯಿತು.

3

ಸೂರಾಚಾರಿ ಈರೇಗೌಡನಿಗೆ ಇಸ್ಲಾಪುರದ ಖಾದರುಬೇರಿಯ ಹೆಂಡತಿ ಫಾತಿಮ ಮೂಲವ್ಯಾಧಿಗೆ ಚಿಕಿತ್ಸೆ ನಡೆಸುತ್ತಾಳೆಂದೂ; ಆಸನ ದ್ವಾರದಿಂದ ಮೂಲವ್ಯಾಧಿ ಮೊಳಕೆಯನ್ನು ಕಿತ್ತು ತೆಗೆಯುತ್ತಾಳೆಂದೂ ನೀನೂ ಅವಳ ಬಳಿ ಚಿಕಿತ್ಸೆ ಪಡೆಯುವುದು ಒಳ್ಳೆಯದೆಂದೂ ದಾರಿ ಸಾಗುತ್ತಿದ್ದಂತೆಯೇ ಸೂಚಿಸಿದ.

“ಹೌದು ಹಂಗಂತ ಕೇಳಿದ್ದೆ. ಆದರೆ ಸಾಬರ ಹೆಂಗಸಿನ ಹತ್ರ ಏನೂ ಅಂತ ಸುಮ್ಮನಿದ್ದೆ” ಎಂದ ಈರೇಗೌಡ.

“ರೋಗ ಗುಣಾಗಬೇಕಂತಿದ್ದರೆ ಏನಾರಾ ಮಾಡಬೇಕು. ನಾನು ಬೇಕಾದರೆ ಔಷಧಿ ಕೊಡ್ತೀನಿ. ಆದರೆ ಅದು ತತ್ಕಾಲಕ್ಕೆ. ಮತ್ತೆ ಗರ್ಮಿ ಏನಾದರೂ ತಿಂದರೆ ತೊಂದರೆ ಶುರು ಆಗುತ್ತೆ” ಎಂದು ಸೂರಾಚಾರಿ ಹೇಳುತ್ತಿದ್ದ.

ಆ ವೇಳೆಗೆ ಇಬ್ಬರು ಸುಬ್ಬಯ್ಯನ ಮನೆ ಎದುರು ಇದ್ದರು.

“ಬನ್ನಿ ಬನ್ನಿ” ಎಂದು ಹಲ್ಕಿರಿದು ಸ್ವಾಗತಿಸಿದ ಸುಬ್ಬಯ್ಯ. ಈರೇಗೌಡ ಹಸನ್ಮುಖಿಯಾಗಿ ಮಾತಾಡೋದನ್ನ ನೋಡಿ ತಾನು ಅವನ ಹೆಂಡತಿ ಬಗ್ಗೆ ಮಾಡಿದ ಲೇವಡಿ ಅವನನ್ನು ಮುಟ್ಟಿಲ್ಲೆಂದು ಸುಬ್ಬಯ್ಯನಿಗೆ ಖಾತರಿಯಾಯ್ತು. ಅವರು ಬಂದಿರುವುದು ಏನಕ್ಕೆಂದು ಸುಬ್ಬಯ್ಯನಿಗೆ ಗೊತ್ತಾಗಿತ್ತು. ಆದರೆ ಅದೇನು ಪದ್ಧತಿಯೋ ರೂಢಿಯೋ ವ್ಯವಹಾರದ ಮರ್ಜಿಯೋ, ಈರೇಗೌಡ, ಸೂರಾಚಾರಿ, ಸುಬ್ಬಯ್ಯ ಮೂರು ಜನವೂ ಅದೊಂದನ್ನು ಬಿಟ್ಟು ಮಿಕ್ಕುದ್ದೆಲ್ಲಾ ಮಾತನಾಡುತ್ತಿದ್ದರು. ಆದರೂ ಅವರ ತಲೆಯಲ್ಲಿ ಕುಣಿಯುತ್ತಿದ್ದುದು ಎತ್ತಿನ ವಿಚಾರವೇ.

“ಏನು ಆಗೇಡಿ ಎಲ್ಲಾ ಚೆನ್ನಾಗಿ ಬಂದಿದಿಯೋ?”

“ಚಂದ ಏನು ಬಂತು ಎಲ್ಲಾ ವರುಷ ಇದ್ದಂಗೆ!”

“ಸರಿ ಮತ್ತೆ ಹಾಗಂತ ಅಂದರೆ ಚೆನ್ನಾಗಿದೇ ಅಂತ ಆಯ್ತಲ್ಲ!”

“ಏನು ಚಂದಾ ವರ್ಷಾ ವರ್ಷಾ ಇಳುವರಿ ಕಡಿಮೆ ಆಗ್ತಾ ಇದೆ. ಏನು ಕತೆಯೋ ಏನೋ!”

“ಯಾಕೆ ಗೊಬ್ಬರಗಿಬ್ಬರ ಸರಿಯಾಗಿ ಬೀಳ್ತಿದೆಯೋ!”

“ಕಡಿಮೇನೋ ಹೆಚ್ಚ ಇದ್ದೋಟು ಹಾಕ್ತಿವಿ”

“ಅಲ್ಲಾ ಸೂರಾಚಾರ್‍ರೆ ಗದ್ದೆ ಗೇಣಿಗೆ ಮಾಡಿಸುತ್ತಿದ್ರಲ್ಲಾ ಹೇಗಾಯ್ತು ಅದು.”

“ಏ ಸುಮ್ಮನಿರಲಾರದೆ ನಾನು ಆ ಲುಕ್ಸಾನಿನ ವ್ಯವಹಾರಕ್ಕೆ ಕೈಹಾಕಿದ್ದು, ಕುಯ್ದ ಕೂಲಿ ಗೀಟಲಿಲ್ಲ.”

“ಓ ನೀವು ಹಂಗೆ ಕೋಮಟಿಗರ ಹಂಗೆ ಲೆಕ್ಕಾಚಾರ ಹಾಕೋದಾದರೆ ಬೇಸಾಯಕ್ಕೆ ಯಾಕೆ ಬಂದಿರಿ.”

“ಆತರ ಕೋಮಟಿಗರ ಲೆಕ್ಕಾಚಾರ ಅಲ್ಲೋ ಮಾರಾಯ. ಮನೆಗೆ ಉಣ್ಣಾಕೆ ಭತ್ತ ಬ್ಯಾಡೇನು.”

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಇದೇ ರೀತಿ ಬಹಳ ಹೊತ್ತು ಮಾತನಾಡಿ ಮೂರು ಜನರಿಗೂ ಬೇಸರ ಬಂತು, ಸೂರಾಚಾರಿ “ನಾನು ಹೇಳಿದ್ದು ಏನು ಮಾಡಿದೆ ಮಾರಾಯ?” ಎಂದು ಸುಬ್ಬಯ್ಯನನ್ನು ಕೇಳಿದ,

“ಯಾವುದು ಆಚಾರ್‍ರೆ?”

“ಯಾವುದು! ಇದೊಳ್ಳೆ ಮರೆವಾಯ್ತಲ್ಲಾ ನಿನ್ನದು.”

”ಓಹೋ ಸರಿ ಸರಿ ಹೇಳಿದನೆಲ್ಲಾ ಆಗಲೇ.”

“ಹೇಳೆ ಸರಿ, ಹಾಗೆ ಎಲ್ಲಾ ಹೇಳಿ ಹೇಳಿದಂಗೆಲ್ಲಾ ಆಗೋ ಹಾಗಿದ್ದರೆ, ಈ ಲೋಕ ಯಾಕೆ ಹೀಗಿರುತ್ತಿತ್ತು.”

”ಹೌದೌದು ನೀವು ಹೇಳಿದಂಗೆ ಎಲ್ಲಾ ಆಗಿಬಿಟ್ಟರೆ ಎಲ್ಲಾ ಸಾಫ್ ಸೀದಾ ಇಲ್ಲದಿದ್ದರೆ ಉಳ್ಟಾ ಸೀದಾ.”

“ನಾನು ಹಾಗಂದನಾ ನೀನೇ ಹೇಳು. ವಿನಾಕಾರಣ ಒಬ್ಬರ ಮೇಲೆ ತಪ್ಪು ಹೊರಿಸಬಾರದು.”

“ಮತ್ತಿನ್ನೇನು? ನೀವು ಹೇಳೋದು ಹಂಗೇ ಆಯ್ತು.”

ಎತ್ತಿನ ವ್ಯಾಪಾರಕ್ಕೆ ಮಧ್ಯಸ್ತಿಕೆಗೆ ಸೂರಾಚಾರಿಯನ್ನು ಕರೆದುಕೊಂಡು ಬಂದಿದ್ದ ಈರೇಗೌಡ. ಇವರ ಸಂಕೇತ ಭಾಷೆಗಳ, ಅನ್ಯೋಕ್ತಿಗಳ ಯುದ್ಧವನ್ನು ವೀಕ್ಷಿಸುತ್ತಾ ಒಗಟುಗಳನ್ನು ಬಿಡಿಸಲೆತ್ನಿಸುತ್ತಿದ್ದ. ಅವರ ವ್ಯಾಪಾರಗಳು ಎಂದರೆ ಮಾತಾಡಿ ಮಾತಾಡಿ ಬೇಸತ್ತು ಬಾಯಾರಿಸಿ ಹಸಿವಾಗಿ ದೈಹಿಕವಾಗಿಯೂ ಸೋತು, ಈ ಚೌಕಾಸಿಯ ಜಂಜಾಟದಲ್ಲಿ ಮಾನಸಿಕವಾಗಿಯೂ ಸೋತು ಒಟ್ಟಿನಲ್ಲಿ ಕಂಗೆಟ್ಟು ಹಾಳಾಗಿ ಹೋಗಲಿ ಎಂದು ಯಾವನಾದರೂ ಏನಾದರೊಂದಕ್ಕೆ ಒಪ್ಪಿಬಿಡಬೇಕು. ಅಲ್ಲಿಯವರೆಗೂ ಈ ಚೌಕಾಸಿಯ ವ್ಯವಹಾರದ ಗರಗಸ ಎಳೆದಾಡಲ್ಪಡುತ್ತಲೇ ಇರುತ್ತದೆ. ಅಲ್ಲಿಯವರಾರಿಗೂ ಈ ರೀತಿಯ ವ್ಯವಹಾರದ ಬಗ್ಗೆ ಜಿಗುಪ್ಸೆ ನಿರಾಶೆಗಳಿರಲಿಲ್ಲ. ಏಕೆಂದರೆ ಬೇಗ ವ್ಯವಹಾರ ಮುಗಿಸಿದರೆ ಇನ್ನೇನು ಕೆಲಸ, ಅದು ಬಿಟ್ಟರೆ ಅಂಥದೇ ಇನ್ನೊಂದು ತಾನೆ! ಮತ್ಯಾವ ಮಹದರ್ಥ ಇದೆ ಜೀವನಕ್ಕೆ? ಸೃಷ್ಟಿ, ಸ್ಥಿತಿ, ಲಯಗಳೇ ಅಲ್ಲಿ ಒಂದು ಬಗೆಯ ಚೌಕಾಸಿಯಂತಾಗಿ ಹೋಗಿರುವಾಗ! ಸುಬ್ಬಯ್ಯನ ಮದುವೆ, ಗೌರಿಯ ಹೆರಿಗೆ, ಮಕ್ಕಳ ಸಾವು, ಸೂರಾಚಾರಿಯ ಚೌಕಾಸಿ, ಎಲ್ಲ ಒಂದೇ ಬಗೆಯವು-

ಎತ್ತಿನ ವಿಷಯ ಯಾರು ಮೊದಲು ಎತ್ತಿದರೂ ಆ ಬಗ್ಗೆ ತಮಗೆ ಉತ್ಸಾಹ ಇದೆ ಎಂದು ಮತ್ತೊಂದು ಪಕ್ಷದವರು ಬೆಲೆ ಏರಿಸುವುದೋ ಅಥವಾ ಕೊಳ್ಳುವ ಬೆಲೆ ಇಳಿಸುವುದೋ ಮಾಡುತ್ತಾರೆಂಬ ಗುಮಾನಿ ಉಭಯತ್ರರಿಗೂ! ಆದರೆ ಇದು ಅವರ ಆಲೋಚನೆಗಿಂತ ವ್ಯವಹಾರದ ಸಂಪ್ರದಾಯವೇ ಹೀಗಿತ್ತು. ಈರೇಗೌಡನೂ ಸೂರಾಚಾರಿಯೂ ಬಹಳ ಹೊತ್ತು ಮಾತನಾಡಿ ಕೊನೆಗೆ ಆ ಎತ್ತಿನ ಅಪ್ಪ ಅಮ್ಮ ಅಜ್ಜ ಇತ್ಯಾದಿಗಳ ಮೀಮಾಂಸೆ ನಡೆಯಿತು. ಸೂರಾಚಾರಿಯೇ ಹೊಲೆಯರ ರುದ್ರನ ಹತ್ತಿರ ಇದಕ್ಕೆ ಜೋಡಿ ಇನ್ನೊಂದಿದೆ ಎಂದು ಹೇಳಿದ. ಅದಕ್ಕೆ ಸುಬ್ಬಯ್ಯ “ಅವನನ್ನು ಮೊದಲು ಕೇಳಿ ವ್ಯಾಪಾರ ಕುದುರಿಸಿಕೊಳ್ಳಿ ನನ್ನದೇನು ಇದ್ದೇ ಇರ್‍ತದಲ್ಲ” ಎಂದ. “ಇಲ್ಲಾ ಮಾರಾಯ ಅವನೂ ಹೀಗೇ ಹೇಳಿ ಕಳ್ಸಿದ್ದಾನೆ” ಎಂದ ಸೂರಾಚಾರಿ.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಈರೇಗೌಡ, ಒಂದು ಪಶುವಿನಂತೆ ನಿಂತಿದ್ದ. ಇದೆಲ್ಲಾ ಆದನಂತರ ಎತ್ತಿನ ಬೆಲೆಯ ಬಗ್ಗೆ ಬಂದಿತು. “ನಿಮ್ಮ ಬೆಲೆಗೆ ಒಪ್ಪೋದೂ ಸಾಧ್ಯವೇ ಇಲ್ಲ.”

“ನಿನ್ನದಕ್ಕೆ ಒಪ್ಪೋದು ಸಾಧ್ಯವಿಲ್ಲ” ಎಂದು ಈರೇಗೌಡನ ಎದುರು ಸೂರಾಚಾರಿಯೂ ಸುಬ್ಬಯ್ಯನೂ ಪರಸ್ಪರ ಬಾಯಿಗೆ ಬಾಯಿ ಮಿಲಾಯಿಸಿ ಚೌಕಾಸಿ ಮಾಡತೊಡಗಿದರು.

ಒಟ್ಟಿನಲ್ಲಿ ಈರೇಗೌಡನಿಗೆ ಎತ್ತಿನ ಬೆಲೆ ಇಬ್ಬರೂ ಎಷ್ಟೆಂದು ನಿರ್ಣಯ ಮಾಡಿಕೊಂಡಿದ್ದಾರೆ ಎಂದು ತಿಳಿಯಲಿಲ್ಲ. ಅದೊಂದು ಆತ್ಮದಂತೆ ಕೈಗೆ ಸಿಗದ ವಸ್ತುವಾಗಿ ಹೋಗಿತ್ತು. ಆದರೂ ಇಬ್ಬರೂ ಒಬ್ಬರ ಬೆಲೆಯನ್ನು ಇನ್ನೊಬ್ಬರು ಒಪ್ಪದೆ ಜಗ್ಗಾಡುವುದನ್ನು ನೋಡಿ ಈ ವ್ಯವಹಾರದಲ್ಲಿ ಉದ್ಭವಿಸುವ ನಿರ್ಣಯದಿಂದ ಬಹುಶಃ ತನಗೆ ಮೋಸವಿರಲಾರದು ಎಂದು ಭಾವಿಸಿದ. ಆದರೂ ತಾನು ಒಪ್ಪದೇ ಸುಮ್ಮನಿದ್ದು ಇವರದು ಇತ್ಯರ್ಥ ಆದ ಮೇಲೆ ಕೇಳಿಕೊಂಡು ಮಾತನಾಡೋದು ಒಳ್ಳೆಯದು ಎಂದು ಆಲೋಚಿಸಿದನು.

“ಈಗೇನು ನಿನ್ನದೆಷ್ಟಪ್ಪಾ ಕರಾರುವಾಕ್ಕಾಗಿ ಹೇಳು?” ಎಂದು ಸೂರಾಚಾರಿ ಕೇಳಿದ. ಸುಬ್ಬಯ್ಯ ಅಪ್ರತಿಭನಾಗಿ ನಿಂತ, ಚೌಕಾಸಿಯ ಜಗ್ಗಾಟದಲ್ಲಿ ತಾನೆಷ್ಟು ಹೇಳಿದ್ದೆ ಎಂದು ಅವನಿಗೆ ಗೊತ್ತೇ ಇರಲಿಲ್ಲ. ಒಂದು ಕ್ಷಣ ಬಿಡುಗಣ್ಣು ಬಿಟ್ಟುಕೊಂಡು ಭ್ರಾಂತನಂತೆ ನಿಂತ. ತೀರ ಸಂದಿಗ್ಧ ಪರಿಸ್ಥಿತಿಯೊದಗಿತು. ಹೇಳಿದ್ದು ವಿಪರೀತ ಹೆಚ್ಚಾದರೆ ಅವರು ಅನಾಸಕ್ತರಾಗಿ ಹೊರಟೇಹೋಗುತ್ತಾರೆ. ಕಡಿಮೆಯಾದರೆ ಚೌಕಾಸಿಯ ಕಪಟ ನಾಟಕ ಆಡಿ ಕೊನೆಗೆ ಒಪ್ಪಿ ನನಗೆ ಮೋಸ ಮಾಡ್ತಾರೆ. ಈಗೇನು ಮಾಡುವುದು?

ಕೊನೆಗೆ ಹೆಗಲಿಗೆ ಹಾಕಿಕೊಂಡಿದ್ದ ಗಲೀಜು ಟವಲು ತೆಗೆದುಕೊಂಡು ಬಿಚ್ಚಿ ತನ್ನ ಬಲಗೈಯನ್ನು ಅದರೊಳಗೆ ಹಾಕಿ ಹಿಡಿದ. ಇದೊಂದು ತರದ ಗುಪ್ತ ವ್ಯವಹಾರ, ಎಷ್ಟು ರೂಪಾಯಿಗಳು ಎಂದು ಬಟ್ಟೆಯೊಳಗೇ ಬೆರಳು ಲೆಕ್ಕಮಾಡಿ ಉಭಯತ್ರರೂ ಒಂದು ನಿರ್ಣಯಕ್ಕೆ ಬರುವುದು. ಸೂರಾಚಾರಿ ಕೈಬೆರಳಿಗೆ ಹಿಡಿದಿದ್ದ ಎಲಡಿಕೆ ಸುಣ್ಣವನ್ನು ಪಂಚೆಗೆ ಒರಸಿಕೊಳ್ಳುತ್ತಾ ಸುಬ್ಬಯ್ಯನ ಬಳಿ ಬಂದು ಕುಳಿತ. ಕುಳಿತು ಆಚಾರಬದ್ಧವಾದ ಕರ್ಮಗಳನ್ನು ಮಾಡುವವನಂತೆ ಕೆಮ್ಮಿ ಉಗುಳಿ ಈರೇಗೌಡನ ಕಡೆಗೊಮ್ಮೆ ನೋಡಿ ನಿಧಾನ ಬಲಗೈಯನ್ನು ಟವಲ್ಲಿನ ಒಳಗೆ ಹಾಕಿದ. ಈರೇಗೌಡ ಕುಸ್ತಿಯ ರೆಫ್ರಿ ತರಹ ಕೈಯನ್ನು ಹಿಂದಕ್ಕೆ ಕಟ್ಟಿಕೊಂಡು ವೀಕ್ಷಿಸತೊಡಗಿದ. ಸೂರಾಚಾರಿ ಕೈ ಒಳಗೆ ಹಾಕಿದವನೆ ಏಕ್‌ ದಂ ಕೋಪದಿಂದ-

“ನೋಡು ಸುಬ್ಬಯ್ಯ ನನ್ಮಾತ ಕೇಳು. ಈ ತರ ವ್ಯವಹಾರ ಸರಿ ಅಲ್ಲ.”

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

“ನೋಡಿ ಮತ್ತೂ ನನಗೆ ಹೇಳ್ತಿರಲ್ಲಾ, ಇಳಿಸಿ ಇಳಿಸಿ ಸಾಕಾಗಿದೆ ನಾ ಇನ್ನಂತ ಇಳಿಸಲಿ?”

“ಬೆರಳಿಗೆ ಎಷ್ಟು ಬಿಂದೋ ಹತ್ತೋ ನೂರೋ? ಅದು ಮೊದಲು ಹೇಳು ಮಾರಾಯ” ಎಂದ ಸೂರಾಚಾರಿ.

“ಅಯ್ಯೋ ಅಯ್ಯೋ ಬೆರಳಿಗೆ ನೂರರ ವ್ಯವಹಾರ ಮಾಡೋ ಹಾಗಿದ್ದೀವಾ ನಾವು ನೀವೇ ಹೇಳಿ” ಎಂದು ಸುಬ್ಬಯ್ಯ ಕಂಕ ನರಿಯಂಥ ವಿನಯ ತೋರಿಸಿದ.

“ಹಾಗಾದರೆ ಒಂದೊ.”

“ಇಲ್ಲಾ ಇಲ್ಲಾ ಹತ್ತು!”

“ಹಾಗಾದರೆ ಮಡಿಚು ಇದನ್ನು.”

ಸುಬ್ಬಯ್ಯ ಮಡಿಚಿದನೆಂದು ಕಾಣುತ್ತದೆ.

“ಹ್ಹಾ ಹ್ಹಾ ಹಾಂಗೆ. ಎಲ್ಲಿ ಇದೊಂದನ್ನು ಮಡಿಚು” ಎಂದು ಸೂರಾಚಾರಿ ದಾರಿಗೆ ಬಂದ ಸುಬ್ಬಯ್ಯ ಎನ್ನುವ ಭಂಗಿ ತೋರಿಸಿದನು.

“ಸೂರಾಚಾರ್‍ರೆ ನೀವೇನು ವ್ಯವಹಾರಕ್ಕೆ ಬಂದಿದ್ದೀರೋ, ಯಾರನ್ನಾದರೂ ಖೂನಿ ಮಾಡಕ್ಕೆ ಬಂದಿದ್ದೀರೊ. ನನ್ನ ಹೊಟ್ಟೆ ಉರಿಸಿದರೆ ನಿಮಗೇನು ಗಂಟು ಸಿಗ್ತದೆ” ಎಂದ ಸುಬ್ಬಯ್ಯ.

“ನೋಡು ಹೋಗಲಿ ಇಷ್ಟು ಮಾಡಿಕೋ” ಎಂದ ಸೂರಾಚಾರಿ. ಈರೇಗೌಡ ಬಟ್ಟೆಯನ್ನೇ ದೃಷ್ಟಿಸಿ ನೋಡಿದ. ಬಟ್ಟೆಯಡಿ ನಡೆಯುತ್ತಿದ್ದ ರಹಸ್ಯಪೂರ್ಣ ಸಂವಾದವನ್ನು ಶ್ರದ್ದೆಯಿಂದ ಗಮನಿಸಿದ.

ಸುಬ್ಬಯ್ಯ ಸೂರಾಚಾರಿಯ ಕೈಯನ್ನು ಗಮನಿಸಿದನೆಂದು ಕಾಣುತ್ತದೆ. ಸಿಟ್ಟುಬಂದು ಬಟ್ಟೆಯಿಂದ ಕೈಯನ್ನು ಹೊರಗೆಳೆದುಕೊಂಡು “ನೀವು ಉದ್ಧಾರ ಮಾಡೋಕೆ ಬಂದಿಲ್ಲಾ ನನ್ನ. ಆ ಮಾಲು ತಗೊಂಡು ಹೋದವ ನಾಳೆ ಬದುಕ ಬೇಕೋ ಬ್ಯಾಡೋ!” ಎಂದು ಸುಮ್ಮನೆ ಕೂತುಬಿಟ್ಟ.

ಅಷ್ಟರಲ್ಲಿ ಯಾರೋ ಕೆಮ್ಮುತ್ತಾ ಹೊರಗಡೆ ನಡೆದುಕೊಂಡು ಬರೋ ಸದ್ದು ಕೇಳಿತು. ಎಲ್ಲ ತಿರುಗಿದರು. ಸುಬ್ಬಯ್ಯನ ವಯಸ್ಸಾದ ತಂದೆ ಬೈರಪ್ಪ ತಲೆ ಮೇಲೊಂದು ಗೊರಬು ಕೌಚಿಕೊಂಡು ಒಳಗೆ ಬಂದರು. ಎಡಕಣ್ಣಿಂದ ಕಿಸುರು ನೀರು ಸೋರುತ್ತಿತ್ತು. ಆಗಾಗ ಹೆಗಲಿನ ಮೇಲಿದ್ದ ಟವೆಲ್ಲಿನಲ್ಲಿ ಒರೆಸಿಕೊಳ್ಳುತ್ತಿದ್ದರು.

”ಓ ಹೊ ಹೊ ಏನು ಯಾರ್‍ಯಾರೋ ಇರಾ ಹಂಗಿದೆಯಲ್ಲಾ, ಓ ಈರೇಗೌಡ, ಓ ಸೂರಾಚಾರ್‍ರು” ಎಂದು ಇಬ್ಬರನ್ನೂ ಗಮನಿಸಿದರು.

“ಹೋಯ್ ಸೂರಾಚಾರ್‍ರೆ, ನಿನ್ನೆ ಇಸ್ವನಾಥನನ್ನು ಇಸ್ಲಾಪುರಕ್ಕೆ ಎರಡೆರಡು ಬಾರಿ ಓಡಿಸಿದ್ದು ಯಾಕೆ ಅಂತ ಮಾಡೀರಿ. ಹುಡುಗ ಮುಂಡೇಗಂಡ ಸರಿಯಾಗಿ ಕೆಲಸ ಕೊಟ್ಟಿದ್ದಾ. ನೀವು ಎದೆ ಹಾಲು ಬಿಟ್ಟುಕಾ ಅಂತ ಹೇಳಿದರೆ ಇಲ್ಲಿ ಬಂದು ಎಲೇ ಹಾಲು ಅಂತ ಹೇಳಿದ್ದಾನೆ ನೋಡಿ. ನನಗೇ ಅನುಮಾನ ಬಂದು ಮತ್ತೆ ಓಡಿಸಿದ್ದು.”

”ಈಗ ಹ್ಯಾಗಿದೆ. ನಿನ್ನೆ ಒಂದು ಕೆಲಸ ಆಯ್ತು. ನನಗೆ ಪುರಸೊತ್ತಿರಲಿಲ್ಲ. ಇಲ್ಲದಿದ್ದರೆ ಎದೆ ಹಾಲಿಗೆ ಒಂದೆರಡು ಪದಾರ್ಥ ಹಾಕಿ ಔಸ್ತಿ ಮಾಡೇ ಕಳಿಸುತ್ತಿದ್ದೆ. ಅಲ್ಲದೆ ಆ ಹೊತ್ನಾಗೆ ಯಾರು ಈ ಮೇಲೆ ತಿನ್ನುಸೋ ಅವ್ವಂದಿರು ಯಾರಿದಾರೆ ಅಂತ ಹುಡುಕೋದು ಅಂತ ಸುಮ್ಮನಾದೆ.”

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

”ಹಾಂಗಿದ್ದರೆ ಈಗ್ಯಾಕೆ ಮಾಡಿಕೊಡಬಾರ್‍ದು?” ಭೈರಪ್ಪ ಕೇಳಿದರು.

“ಆಗಬೋದು ಸ್ವಲ್ಪ ಒಣ ಸುಂಠಿ ಸುಟ್ಟು ಭಸ್ಮಮಾಡಿ ಕೊಡಬೇಕು. ಚೂರು ಎದೆಯ ಹಾಲು ಬೇಕು.”

”ಆಗಲಿ ಮಾರಾಯರ ನನಗೆ ಕಣ್ಣೆಂದು ಚೂರು ವಾಸಿಯಾದರೆ ಸಾಕಾಗಿದೆ. ಓ ಅಣ್ಣಾ ಇಸ್‌ನಾಥೂ” ಎಂದು ವಿಶ್ವನಾಥನನ್ನು ಕೂಗಿದರು.

ವಿಶ್ವನಾಥ ಬಾಗಿಲ ಮರೆಯಲ್ಲೇ ಇಣುಕಿ “ಏನು ದಡ್ಡಪ್ಪಯ್ಯ” ಎಂದು ಕೇಳಿದ.

“ಸುಬ್ಬಯ್ಯನ ಹೆಂಗ್ಸಿಗೆ ಹೇಳಿ ಒಂದು ವಳಲೇಲಿ ಈಟು ಹಾಲು ಇಸುಗಾ.”

“ಅತ್ತಿಗಮ್ಮ ಇಲ್ಲ”

“ಎಲ್ಲಿಗೆ ಹೋತೋ”

“ಸಂತಿಗೆ ಹೋತೀನಂತ ಸೀತಮ್ಮನ ಮನಿಗೆ!”

“ಸೀತಮ್ಮನ ಮನಿಂದ ಈಗತಾನೆ ಸಂತಿ ಕಡೀಗೆ ಹೋತು ನಾನು ನೋಡ್ದೆ” ಎಂದು ಯಾವುದೋ ದನಿ ಒಳಗಿನಿಂದ ವಿಶ್ವನಾಥನ ತಪ್ಪು ಹೇಳಿಕೆಯನ್ನು ಸರಿ ಮಾಡಿತು.

”ಹಂಗಾಂಗೆ ಒಂಚೂರು ಓಡೋಗಿ ಇಸುಗುಂ ಬದ್ದೀಯೇನೊ ಇಸೂ.”

“ಮಳೆ ಬರ್‍ತಿದೆಯಲ್ಲ”

“ನಿಂಗೆ ಬೇಕಾದರೆ ಬಿಸಿಲು ಮಳೆ ಒಂದೂ ಲೆಕ್ಕಕ್ಕೆ ಇರಲ್ಲ ಕಣೋ.”

“ನನ್ನ ಗೊರಬು ಹಾಳಾಗಿದೆ.”

“ನಂದು ತಗುಂಡು ಹೋಗೋ.”

“ನಿಂದು ನಂಗೆ ನೆಲಕ್ಕೆ ತಾಗ್ತದೆ.”

“ಥೂ ಹೋಗೂ ಮಾರಾಯ.”

ವಿಶ್ವನಾಥ ಭೈರಪ್ಪ ರೇಗಿದ್ದನ್ನು ನೋಡಿ ಇನ್ನೇನೂ ಮಾಡಲಾರದೆ ಒಳಕ್ಕೆ ಹೋದ ತನ್ನ ಗೊರಬು ತರಲು.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಇತ್ತ ತಿರುಗಿ ಸುಬ್ಬಯ್ಯ “ಹ್ಹೂ ಸೂರಾಚಾರ್‍ರೆ ನಮ್ಮ ಯಾಪಾರ ವ್ಯವಹಾರ ಮುಗಿದಂಗೆ! ಕಾಣ್ತದೆ. ನಾ ಬರ್‍ತೀನಿ ಗದ್ದೆ ಕೆಲಸ ಇದೆ. ನೀವು ಔಸ್ತಿ ಪೌಸ್ತಿ ನೋಡಿ” ಎಂದು ನಿಶ್ಚಯವಾದವನಂತೆ ಸೋಗು ಹಾಕಿ ಎದ್ದ.

ಸೂರಾಚಾರಿ “ನೋಡು ಸುಬ್ಬಯ್ಯ, ಮಾಲು ನಿಂದು. ನೀನು ಸಾವಿರ ರೂಪಾಯಿ ಹೇಳು, ನಿನ್ನಿಷ್ಟ. ನಾನು ಒಂದು ಕಾಸಿಗೆ ಕೇಳ್ತೀನಿ. ನಾನು ಕೇಳಿದೆ ಅಂತ ನೀನೇನು ಕೊಟ್ಟೆಯಾ. ಕೂತು ಮಾತಾಡಬೇಕು. ಯವಹಾರ ಕುದುರಿಸಬೇಕೂ ಅಂತಾದರೆ, ನನಗೆ ಯಾವ ತೆವಲೋ ಮಾರಾಯ ನಿನ್ನ ಹತ್ರ ಜಗ್ಗಾಡಕ್ಕೆ” ಎಂದ.

“ಹೋಗಲಪ್ಪ ನಂದೊಂದು ಕೋನೇದು” ಎಂದು ಸುಬ್ಬಯ್ಯ ಮತ್ತೆ ಟವೆಲ್ಲಿನೊಳಗೆ ಕೈ ಹಾಕಿದ.

”ಆ ಹಾಹಾಹಾ ಪರ್ವಾಗಿಲ್ಲೊ. ಎರಡೂ ಕೈ ಒಳಗಿಟ್ಟು ಹತ್ತು ಬೆರಳು ಹಿಡಿಸಿಬಿಡು” ಎಂದು ಸೂರಾಚಾರಿ ಜೋರು ಮಾಡಿದ.

ಅಷ್ಟರಲ್ಲಿ ವಿಶ್ವನಾಥ ಅವನದೊಂದು ಸಣ್ಣ ಗೊರಬು ತೆಗೆದುಕೊಂಡು ಬಂದ.

”ಏ ಹುಡುಗಾ ಒಳಲೆ ತಗುಂಡಿಯಾ. ನೀ ಹೀಗೆ ನಿಧಾನ ಮಾಡಿದರೆ ಹ್ಯಾಂಗೋ? ಬಾ ಇಲ್ಲಿ, ಏನು ಹೇಳ್ತಿಯಾ ಹೇಳು” ಎಂದ ಭೈರಪ್ಪ.

“ಗೊತ್ತು ಹೇಳ್ತೀನಿ!”

“ಎಂತ ಗೊತ್ತೊ ಹುಚ್ಚು ಮುಂಡೇಗಂಡ. ಎದೆ ಹಾಲು ಅಂದರೆ ಬಂದು ಎಲೆ ಹಾಲು ಅಂದ್ಯಲ್ಲ ಹಂಗ? ಏನು ಹೇಳ್ತೀಯಾ ಸರಿಯಾಗಿ ಹೇಳು” ಎಂದು ಭೈರಪ್ಪ ಹಿಡಿದುಕೊಂಡ.

ವಿಶ್ವನಾಥನಿಗೆ ಕುತ್ತಿಗೆಗೆ ಬಂತು. ನಾಚಿಗೆಯೆಂದರೆ ನಾಚಿಗೆಯಾಯ್ತು.

“ನಂಗೊತ್ತು ನಾ ಹೇಳ್ತೀನಿ.”

“ಏನೇಳ್ತಿಯಾ ಹೇಳೋ.”

ವಿಶ್ವನಾಥ ಮಾತನಾಡಲಿಲ್ಲ. ಅವನ ಕಣ್ಣಿಂದ ಇದ್ದಕ್ಕಿದ್ದಂತೆ ನೀರು ಬಂತು. ಎಲ್ಲೋ ಮಳೆಯಲ್ಲಿ ಹೋಗಲು ಹಿಂದೆಗೆದು ಅಳುತ್ತಿದ್ದಾನೆ ಎಂದು ಅವರು ಬಗೆದರು. ಅದಕ್ಕೇ ಸುಬ್ಬಯ್ಯ ವಿಶ್ವನಾಥನನ್ನು ಕರೆದು ಸಮಾಧಾನ ಮಾಡ್ತ “ನನಗೆ ಬ್ಯಾರೆ ಕೆಲಸ ಇದೆ ಕಾಣೋ! ಇಲ್ಲದಿದ್ದರೆ ನಾನೇ ಹೋಗ್ತಿದ್ದೆ. ಪಕ್ಕನೆ ಹೋಗಿ ಹೇಳು, ಸೂರಾಚಾರ್‍ರು ಬಂದಿದ್ದಾರೆ ಒಂದು ತಟ್ಟು ಮಲೆಹಾಲು ಬೇಕಂತೆ ಔಸ್ತಿಗೆ ಅಂತ ಆಯ್ತಾ” ಎಂದು ಹೇಳಿದ. ಅವರೆಲ್ಲಾ ಕಿಂಚಿತ್ತೂ ನಾಚದೆ ಮೊಲೆಯಂಥ ಗೋಪ್ಯ ವಸ್ತುವಿನ ಬಗ್ಗೆ, ಅದೂ ಗೌರತ್ತಿಗಮ್ಮನ ಬಗ್ಗೆ ಮಾತನಾಡುವುದು ಅಮಾನುಷ ವಸ್ತುನಿಷ್ಠತೆಯಾಗಿ ಕಂಡಿತು ವಿಶ್ವನಾಥನಿಗೆ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಒಳಲೆ ತೆಗೆದುಕೊಂಡು ವಿಶ್ವನಾಥ ಮಳೆಯಲ್ಲಿ ಓಡಿದನು.

“ಸೂರಾಚಾರ್‍ರೆ, ನನ್ನದು ಒಂದು ಕತೆಯಾಗಿ ಹೋಗಿದೆ. ಮಾರಾಯರೆ! ಹಡೆದವು ಒಂದು ಉಳಿಯಾದಿಲ್ಲಲ್ಲ ನನ್ನ ಹೆಂಗ್ಸಿಗೆ! ಏನು ಮಾಡದು ಹೇಳಿ?” ಎಂದು ಸುಬ್ಬಯ್ಯನು ಸೂರಾಚಾರಿಯನ್ನು ಕೇಳಿದ. ಬೇಕೆಂದೆ ಅವನು ಈರೇಗೌಡನ ಎದುರು ಈ ವಿಷಯ ಎತ್ತಿದ್ದ. ಏಕೆಂದರೆ “ನನಗೆ ಒಳರೋಗ ಅಂದನಲ್ಲ ಸೂರಾಚಾರ್‍ರೆ ಹೇಳಲಿ” ಎಂದು ಒಳಗೇ ಅಂದುಕೊಂಡ.

ಸೂರಾಚಾರ್‍ರು ಸುಮಾರು ಹೊತ್ತು ಯೋಚಿಸಿ, “ಹುಟ್ಟಿದ ಕೂಡಲೇ ಸಾಯ್ತಾವೋ ನಾಲ್ಕು ದಿನ ಇದ್ದು ಸಾಯ್ತವೋ” ಎಂದರು.

“ನಾಕು ದಿನ ಇರ್‍ತವೆ, ವೈನಾಗಿರ್‍ತವೆ, ಹಾಲು ಕುಡಿದು ಅತ್ತು ನಕ್ಕು, ಒಂದಲ್ಲಾ ಎರಡಲ್ಲಾ ನನ್ನವು ಮೂರು ಮಕ್ಕಳೂ ಹ್ವಾದ್ವು.”

“ಇನ್ನೇನಿಲ್ಲಾ ಏನಾರೂ ಮಲೆಗಿಲೆ ದೋಸಾನಾ! ಅಂತ” ಎಂದು ಯೋಚಿಸುತ್ತಾ ಸ್ವಗತದ ಧಾಟಿಯಲ್ಲಿ ಸೂರಾಚಾರ್‍ರು ಗೊಣಗಿದರು.

”ಹ್ಹಾ, ನೋಡಿ ನಾನೂ ಅದೇ ಯೋಚ್ನೆ ಮಾಡ್ತಿದ್ದೆ ಮನಸ್ಸಿನ ಒಳಗೇ” ಎಂದು ಖುಷಿಯಿಂದ ಹೇಳಿದ ಸುಬ್ಬಯ್ಯ. ಅವನಿಗೆ “ಒಳರೋಗ” ಎಂದು ಸೂರಾಚಾರ್‍ರು ಹೇಳದಿದ್ದುದು ಸಂತೋಷ ತಂದಿತ್ತು. ಅಷ್ಟಲ್ಲದೆ ಅವನೂ ಅದನ್ನೇ ಗುಮಾನಿಸುತ್ತಿದ್ದುದರಿಂದ ವೈದ್ಯರಾದ ಸೂರಾಚಾರಿಯೂ ಅದೇ ನಿರ್ಣಯಕ್ಕೆ ಬರುವಂತೆ ರೋಗ ಚಿಹ್ನೆಗಳನ್ನು ಹೇಳಿದ್ದ.

“ಸೈ ಬಿಡು ಇದು ಮಲೆ ದೋಸಾನೆ. ನೀ ಬೇರೆ ಯೋಚನೆ ಮಾಡೋದೆ ಬ್ಯಾಡ. ಮಲೇಲಿ ಮೇಲುಗಡೆ ಒಂದು ನೀಲಿ ನರ ಇರ್‍ತದೆ. ಅದರೊಳಗಿರ್‍ತದೆ ನೋಡು ಹುಳ. ಅರಿಶಿನದ ಕೊಂಬಿನ ಕೆಂಡಾ ಮಾಡಿ ಅದನ್ನು ಸುಟ್ಟು ತಗೀಬೇಕು. ಇಲ್ಲದಿದ್ದರೆ ಒಂದಲ್ಲಾ ಮೂರಲ್ಲಾ ನೂರು ಮಕ್ಕಳಾದರೂ ಒಂದೂ ಉಳಿಯಕ್ಕಿಲ್ಲ” ಎಂದ ಸೂರಾಚಾರಿ.

“ಹೌದ್ರಪ್ಪಾ ಹೌದು, ನಾನು ಕೇಳಿದ್ದೀನಿ. ಅದೊಂದು ದರಿದ್ರ ಕಾಯಿಲೇನ, ಮಲೇಗೆ ಬರೆ ಹಾಕ್ತಾರಂತೆ. ಈ ಸುಡುಗಾಡು ಕಾಯಿಲೆ ನನ್ನ ಹಣೆ ಬರ್‍ದಾಗೇ ಇದೇಂತ ಗೊತ್ತಿರಲಿಲ್ಲ ನೋಡಿ, ತುತ್” ಎಂದು ದುಃಖಿಸಿದ ಸುಬ್ಬಯ್ಯ.

“ನೋಡಾನ ಈಗೇನಾದ್ದು ಇನ್ನೊಂದು ಮಗ ಆಗಲಿ. ಆಮೇಲೂ ತೊಂದರೆ ಕಂಡರೆ ಸೂರಾಚಾರ್‍ರಿದ್ದಾರಲ್ಲಾ” ಎಂದು ಇಷ್ಟು ಹೊತ್ತೂ ತೆಪ್ಪನಿದ್ದ ಈರೇಗೌಡ ತಟ್ಟನೆ ಮೈತಿಳಿದವನಂತೆ ಮಾತನಾಡಿದ.

“ನೋಡಾನಂದರೆ ಇನ್ನೆಂತ ನೋಡದು. ಈಗಾಗಲೇ ಮೂರೂ ಹೋದ್ವು. ಬೇಗ ಅದಕ್ಕೇನಾದರೂ ಔಷಧಿ ಮಾಡದಿದ್ದರೆ ನಾನೇನು ಮಕ್ಕಳ ಮಾರೆ ನೋಡಾ ಹಂಗಿಲ್ಲ. ಸತ್ತರೆ ಹಾಲೂ ತುಪ್ಪ ಇಲ್ಲ’ ಎಂದು ಸೂರಾಚಾರ್‍ರ ಕಡೆ ಆರ್ತದೃಷ್ಟಿ ಬೀರಿದ. ಇಷ್ಟು ಹೊತ್ತೂ ಚೌಕಾಸಿಯ ಹಮ್ಮಿನಲ್ಲಿದ್ದವನ ಧಾಟಿ ಆಶ್ಚರ್ಯಕಾರಕವಾಗಿ ಬದಲಾಯಿಸಿಹೋಯ್ತು.

ಸೂರಾಚಾರಿ ತನ್ನ ವಿಧಿಯನ್ನು ತಾನೇ ಶಪಿಸತೊಡಗಿದ. ಸಿಕ್ಕುಬಿದ್ದ ಕೂದಲಿನಲ್ಲಿ ಓಡಾಡುವ ಬಾಚಣಿಗೆಯಂತೆ ಕರ್ಮಜಾಲದ ಬಾಗಿಲಿಲ್ಲದ ಕೋಣೆಯೊಳಗೆ ಬಿದ್ದಂತಾಯ್ತು ಅವನಿಗೆ.

“ಆಚಾರ್‍ರೆ ನೀವು ಹೇಳಿದ್ದಿನ ಬರ್ತೀನಿ ಮಾರಾಯರೆ ಆಕಿ ರೋಗ ಒಂದು ಸರಿಮಾಡಿ ಕೊಡಿ” ಎಂದು ಮತ್ತೆ ಸುಬ್ಬಯ್ಯ ಅಂಗಲಾಚಿದನು.

“ಸರಿಯಪ್ಪ ಇರಾತನಕ ಮಾಡಾದೆ ನನ್ನ ಕರ್ಮ” ಎಂದು ಭಾರದ ದನಿಯಲ್ಲಿ ಹೇಳಿದ ಸೂರಾಚಾರಿ.

ಸುಬ್ಬಯ್ಯ ಬಟ್ಟೆಯೊಳಗೇ ಕೈ ಇಟ್ಟು ಕೊಂಡಿದ್ದವನು ಫಕ್ಕನೆ ತಮ್ಮ ವ್ಯವಹಾರವನ್ನು ಜ್ಞಾಪಿಸಿಕೊಂಡವನು, “ಅರ್‍ರೆರ್‍ರೆ ಕೊಟ್ರಲ್ಲಾ ಕೈ” ಎಂದ.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಎಲ್ಲರೂ ಅಪ್ರತಿಭರಾಗಿ ಈ ಉದ್ಗಾರ ಯಾವುದಕ್ಕೆ ಸಂಬಂಧಿಸಿದ್ದೆಂದು ತಿಳಿಯದೆ ಅತ್ತಿತ್ತ ನೋಡಿದರು.

“ಅಲ್ಲಾ ಯಾವುದೋ ಮಾತ್ನಾಗಿರಬೇಕಾದರೆ ನನ್ನದೊಂದು ಬೆರಳು ಮಡಿಚೇ ಬಿಟ್ಟಿದ್ದೀರಲ್ಲಾ” ಎಂದ. ಎಲ್ಲರಿಗೂ ಸುಬ್ಬಯ್ಯ ವ್ಯವಹಾರಕ್ಕೆ ಹಿಂದಿರುಗಿದ್ದು ಅರ್ಥವಾಯ್ತು.

“ಹೋಗಲಿ ಇದು ಕೊನೇದು. ಅದೊಂದನ್ನು ಅರ್ಧ ಮಡಿಚು. ಮನೇವರಿಗೂ ಈರೇಗೌಡನ್ನ ಕರಕೊಂಡು ಬಂದಿದ್ದಕ್ಕೆ ಒಂದು ಮರ್ಯಾದೆ ಕೊಡು. ಹ್ಹಾ! ಇಷ್ಟು ಸರಿಯಾ! ಸರಿಯಾಗಿ ಜ್ಞಾಪಕದಾಗೆ ಇಟ್ಟುಗಾ” ಎಂದು ಸೂರಾಚಾರಿ ಒಂದು ಇತ್ಯರ್ಥಕ್ಕೆ ಬಂದವನಂತೆ ಬಟ್ಟೆಯೊಳಗಿನ ಕೈತೆಗೆದ. ಸುಬ್ಬಯ್ಯ ಟವಲ್ಲಿನಲ್ಲಿ ಸಿಂಬಳ ಸೀಟಿದ. ಈರೇಗೌಡ ಏನೋ ಮಾತಾಡಲು ಬಾಯಿ ತೆರೆದ. “ಷ್ ಈಗ ಬಾಯಿ ಬಿಡಬೇಡ. ಒಳ್ಳೆ ಗಳಿಗೇಲಿ ಒಂದು ಮನಸ್ಸಿಗೆ ಬಂದಿದ್ದೀವಿ. ಅದೂ ಇದು ಮಾತು ತೆಗೆದು ಹಳೆಚೌಕಾಸಿಗೆ ಇಳೀಬಾರ್‍ದು” ಎಂದು ಅವನ ಕೊಳಕು ಬಾಯನ್ನು ಮುಚ್ಚಿಸಿದ. ಈರೇಗೌಡ ಏನು ಹೇಳಬೇಕೆಂದಿದ್ದನೋ ಏನೋ ಸೂರಾಚಾರಿಯ ಮಾತಿಗೆ ಜೋಭದ್ರ ಮೋರೆ ಹಾಕಿಕೊಂಡು ಹೆಡ್ಡುಹೆಡ್ಡಾಗಿ ತಲೆದೂಗುತ್ತಾ ಸುಮ್ಮನಾದ.

ಅಷ್ಟರಲ್ಲಿ ವಿಶ್ವನಾಥ ಬಂದ. ಓಡೋಡಿ ಬಂದುದರಿಂದ ಏದುತ್ತಾ ಇದ್ದ. ಸೂರಾಚಾರ್‍ರು “ನಾಳಿದ್ದಿನ ಅಮಾಸೆ ಕಳಕುಂಡು ಹೆಂಗ್ಸು ಕರಕೊಂಡು ಬಾ. ಏನಾರು ಒಂದು ಮಾಡಾನ” ಎಂದು ಹೇಳಿದರು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

Tejeswi

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(1938-2007): ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಹುಟ್ಟಿದ ತೇಜಸ್ವಿ ಎಂ.ಎ. ಪದವೀಧರರು. ಹುಲಿಯೂರಿನ ಸರಹದ್ದು(1962), ಕಿರಿಯೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟಾಫೀಸು(1971) ಕಥಾ ಸಂಕಲನಗಳು; ಸ್ವರೂಪ(1966), ನಿಗೂಢ ಮನುಷ್ಯರು(1976) ನೀಳ್ಗತೆಗಳು; ಕರ್ವಾಲೋ(1980), ಚಿದಂಬರ ರಹಸ್ಯ(1984) ಕಾದಂಬರಿಗಳು; ಸ್ವಗತ ಲಹರಿ ಮತ್ತು ಇತರ ಕವನಗಳು- ಕವನ ಸಂಗ್ರಹ; ಯಮಳ ಪ್ರಶ್ನೆ(1964) ನಾಟಕ; ವ್ಯಕ್ತಿ ವಿಶಿಷ್ಟ ಸಿದ್ಧಾಂತ(1964) ಪ್ರಬಂಧ; ಅಣ್ಣನ ನೆನಪು- ತಮ್ಮ ತಂದೆ ಕುವೆಂಪು ಅವರ ಸ್ಮೃತಿ ಚಿತ್ರಣ(1996). ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ‘ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರವಾಗಿ ಪ್ರಾಂತೀಯ ಶ್ರೇಷ್ಠ ಚಿತ್ರ ಎಂಬ ಪ್ರಶಸ್ತಿ ಪಡೆದಿದೆ; ‘ತಬರನ ಕತೆ’ಯ ಚಿತ್ರಕ್ಕೆ ರಾಷ್ಟ್ರಮಟ್ಟದ ಸ್ವರ್ಣಕಮಲ ಪುರಸ್ಕಾರ ಬಂದಿದೆ. 2007ರಲ್ಲಿ, ಮೂಡಿಗೆರೆಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೀಣಾ ಶಾಂತೇಶ್ವರ ಅವರ ಕತೆ | ತಿರುಗಿ ಹೋದಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...