ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಬಿಲ್ಡಿಂಗಿನ ಮೇಲುಗಡೆ ಹೋಗಿ ಪಶ್ಚಿಮಕ್ಕೆ ನೋಡುತ್ತ ನಿಂತಾಗ ಇಳಿಮುಖನಾದ ಸೂರ್ಯನ ಹಿನ್ನೆಲೆಯಲ್ಲಿ ಆ ‘ಕ್ರಾಸ್’ ಕಾನ್ವೆಂಟಿನ ಮೇಲೆ ಏಸುವಿನ ನೆನಪನ್ನು ತಂದಿತು. ಅದರ ಹಿಂದಕ್ಕೆ ನೆಲದ ಮಟ್ಟದಲ್ಲಿ ಒಂದೇ ಒಂದು ಸಮಾಧಿಯ ಸಣ್ಣ ಗುಡಿಯಂಥ ರೂಮು- ಕಾಣಿಸದಿದ್ದರೂ ಅಲ್ಲಿದೆ ಎಂಬುದು ಮನಸ್ಸಿಗೆ ಖಾತರಿ. ಅದರಲ್ಲಿಯ ಸಣ್ಣ ಸಮಾಧಿಗೆ ಬೆಳಕಿಲ್ಲ. ಆದರೆ ಅದರ ಒಂದೇ ಒಂದು ಸಣ್ಣ ಕಿಟಕಿಯಿಂದ ಚೆಲ್ಲುವ ಬೆಳಕಿನಲ್ಲಿ ಒಬ್ಬರ ಮುಖವನ್ನೊಬ್ಬರು ಕಾಣಬಹುದು… ಆ ಸಣ್ಣ ಬಾಗಿಲನ್ನು ದಾಟಿ ಒಳಗೆ ಸೇರಿಕೊಂಡವರು ಬಾಗಿಲು ಸದ್ದಾಗದಂತೆ ಬೆನ್ನಿಗೆ ಮುಚ್ಚಬಹುದು. ಆ ಕಿಷ್ಕಂಧದಲ್ಲಿ ಬಾಗಿ ನೋಡುತ್ತಾ ಒಂದೆರಡು ನಿಮಿಷ ಕಳೆದರೆ ಸಮಾಧಿಯ ಬರಹವನ್ನು ಓದಬಹುದು. ಭಕ್ತಿಯಿಂದ ಒಂದು ಹಣತೆಯನ್ನೋ ಒಂದು ಮೋಂಬತ್ತಿಯನ್ನೊ ಹೊತ್ತಿಸಿದರೆ ತೀರಿತು… ಬೇಕಾದ ವರವನ್ನು ಕೇಳಿಕೊಳ್ಳಬಹುದು. ಸಂಜೆಯ ವೇಳೆ ಅದರಲ್ಲೂ ಕ್ರೈಸ್ತ ಹಬ್ಬಗಳಲ್ಲಿ ಅಂಥ ಭಕ್ತರೇ ಬಹಳ… ನಿಜ. ಆದರೆ ನಾಲ್ಕು ಘಂಟೆಗೆ ಅಲ್ಲಿ ಯಾರೂ ಹೋಗಲಾರರೆಂದರೆ ಈ ಹುಡುಗಿ ಎಂಥ ಕೆಲಸ ಮಾಡಿದ್ದಾಳೆ. ಒಬ್ಬಳೇ… ಎಂಥ ಧೈರ್ಯ… ಇವಳ ಗುಂಡಿಗೆ ಎಷ್ಟು? ಅವನು ಯಾರೋ ಹುಡುಗ. ಪೋಲಿಯೋ ಅಲ್ಲವೋ. ಇಬ್ಬರೂ ಹಾಡೇ ಹಗಲಲ್ಲಿ… ಎಲ್ಲೂ ಇಲ್ಲದೆ ಆ ಸಮಾಧಿಯ ಬಳಿ ಕತ್ತಲೆಯಲ್ಲಿ ಸೇರಿಕೊಂಡರಂತಲ್ಲಾ… ಆಗಲೇ ನನ್ನ ಕಣ್ಣಿಗೆ ಬಿದ್ದಿರಬಾರದಿತ್ತೇ? ಕಂಡವರು ಚಿಣ್ಣಿ-ದಾಂಡು ಆಡುವುದಕ್ಕೆ ಬಾಜಿಕಟ್ಟಿ ಬಂದ ಒಂದು ಹುಡುಗರ, ಚಿಳ್ಳೆಪಿಳ್ಳೆಗಳ, ಗುಂಪು… ಮುಖದ ಬೆವರೊರೆಸಿಕೊಂಡು ಒಬ್ಬಳೇ ಗುಡಿಯಿಂದ ಬಂದವಳು. ಯಾರಿಗೂ ಲೆಕ್ಕಿಸದೆ ಅವರ ನಡುವೆಯೇ ಹೊರಟು ಪಕ್ಕದ ಹಾದಿಯಲ್ಲಿ ನಡೆದುಬಂದವಳು… ನಮ್ಮ ಕಾಲೇಜಿನಲ್ಲೇಕೆ ಬಂದಿದ್ದಾಳು?…
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಸಾರ್… ಆ ಹುಡುಗಿ… ಅಲ್ಲಿ… ಗುಡಿಯಲ್ಲಿ ಮಲಗಿದ್ದಳು. ಯಾರೊ ಕಂಡವರು? ನಾವ್ ಕಂಡ್ವಿ ಸಾರ್- ಎಯ್ ಹೋಗರೊ, ಬುದ್ದಿಯಿಲ್ಲ ನಿಮಗೆ- ಇಲ್ಲಾ ಸಾರ್. ಅವನೂ ಇದ್ದ… ಒಂದು ಸೈಕಲ್ ಹತ್ತಿ ಹೋದ ಸಾರ್… ಇತ್ಯಾದಿ! ಹೌದು ಅವಳು ಬಂದವಳು ಇಲ್ಲಿ ಏನಾದಳು ?… ಅವರು ತೋರಿಸಿದ ಹುಡುಗಿ ಹೋಗುತ್ತಿದ್ದಾಳೆ? …ಕೊಂಚ ಕುಳ್ಳಗೆ ಮಾಸಲು ಸೀರೆ ಉಟ್ಟವಳು… ಹಿಂದಿನ ಗೇಟಿನಿಂದ ಬಂದವಳು… ಒಳಗೆ ಬಂದಾಗ ಹಿಂಭಾಗ ಮಾತ್ರ ಕಾಣಿಸಿತ್ತು. ಆ ಹುಡುಗರ ಸಂಗಡ ಮಾತನಾಡುವುದರಲ್ಲಿ ಅವಳು ಎಲ್ಲಿಯೋ ಮಾಯವಾದಳು… ಎಲ್ಲಿಗೆ? ಕೈಯಲ್ಲಿ ಪುಸ್ತಕಗಳಿದ್ದ ಕಾರಣ ಯಾವುದೋ ತರಗತಿಗೇ ಹೋಗಿರಬೇಕು… ಎಂದುಕೊಂಡು ಕಾಲೇಜಿನಲ್ಲಿ ಆಗ ನಡೆಯುತ್ತಿದ್ದ ಕ್ಲಾಸುಗಳನ್ನೆಲ್ಲಾ ಕಣ್ಣಿಟ್ಟು ನೋಡಿದ್ದಾಯಿತು. ಹತ್ತು ಕೊಠಡಿಗಳಲ್ಲಿ ಪಾಠ ಜರುಗುತ್ತಿದೆ. ಎಲ್ಲದರಲ್ಲೂ ಹುಡುಗರು ಹುಡುಗಿಯರು ಇದ್ದೇ ಇದ್ದಾರೆ… ಅದರಲ್ಲಿ ಒಂದೇ ಒಂದು ಬರಿಯ ಹುಡುಗರ ಕ್ಲಾಸಾದರೆ ಒಂದು ಬರಿಯ ಹುಡುಗಿಯರದು… ಅವಳು ಆ ಹುಡುಗಿಯರ ತರಗತಿಯವಳೆ? ಇರಬಾರದೇಕೆ? ಅದೇ ಗೊಂದಲದ ಕ್ಲಾಸು. ಅನೇಕ ಮೇಷ್ಟರು ಹೇಳುವುದು ಅದರ ಮೇಲೆಯೇ ದೂರು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಅವಳ ನೆರಳೆಷ್ಟು ಉದ್ದವೆಂದು ಕಂಡರೂ ಅವಳ ಮುಖ ಕಾಣಲಿಲ್ಲವಲ್ಲ. ಅವಳ ಎರಡು ಜಡೆ, ಅದರಲ್ಲೂ ಒಂದಕ್ಕೆ ಮಾತ್ರ ಒಂದು ಗುಲಾಬಿ ಹೂ… ಎಲೆ ಸಹಿತ ಜೋತು ಬಿದ್ದಿತ್ತು. ಅವಳ ಆ ಹುಡುಗ ಮುಡಿಸಿದ್ದಿರಬೇಕು. ಅವಳು ಗಾಬರಿಯಾಗಿದ್ದಂತೆ ಹೆಜ್ಜೆಗಳು. ನಿಜ, ಕೊಂಚದರಲ್ಲಿ ಅವಿತುಕೊಂಡಳಲ್ಲಾ- ಹುಡುಗರ ಲ್ಯಾವೇಟರಿಗೆ ಹೋಗಿ ಯೋಚಿಸುತ್ತಾ ಬಂದು ಕಡೆಗೆ ಹುಡುಗಿಯರ ಲ್ಯಾವೇಟರಿಯ ಕಡೆಗೆ ಹಾಯ್ದು ನಿಂತು ನೋಡಿದ್ದಾಯಿತು. ಹೊಲಸಿಗಾಗಿಯೇ ಅಲ್ಲವೇ ಅದಿರುವುದು. ಲೇಡಿ ಅಟೆಂಡರ್‌ಗೆ ಹೇಳಿ ನೋಡಿಸಿದ್ದಾಯಿತು. ಅಲ್ಲಿಯೂ ಇಲ್ಲ. ಛೆ ಮೊದಲೇ ಈ ಕೆಲಸ ಮಾಡಿದ್ದರೆ ಚೆನ್ನಾಗಿತ್ತು. ರೆಡ್ ಹ್ಯಾಂಡಾಗಿ ಹಿಡಿಯಬಹುದಿತ್ತು. ಆ ಕೆಟ್ಟ ಹುಡುಗಿಯನ್ನು ಹಿಡಿದು ಹಾಕಿದ್ದರೆಷ್ಟು ಚೆನ್ನಾಗಿತ್ತು. ಕೆಟ್ಟ ಕೆಲಸ ಮಾಡಿದಮೇಲೆ ಅವಳನ್ನು… ಅವನನ್ನೂ ಒದ್ದರೂ ಯಾರೂ ಕೇಳುವುದಿಲ್ಲ. ಆ ಸಮಾಧಿಯ ಬಳಿ ಇಂಥ ಕೆಲಸ ಮಾಡಬೇಕಾದರೆ… ಅದರಲ್ಲೂ ನಾಲ್ಕು ಘಂಟೆ ಸಮಯಕ್ಕೆ… ಅವಳು ಬಡವರ ಮನೆಯವಳಿರಬೇಕು. ಉಟ್ಟ ಸೀರೆ ಭಾರಿಯಿಲ್ಲ. ಝರಿಯಿಲ್ಲದ ಕಾಟನ್… ಸ್ವಲ್ಪ ಕೊಳಕು ಬೇರೆ. ಆ ಗುಂಡಿಯ ಪ್ರಭಾವವಿದ್ದರೂ ಸರಿಯೆ. ಆ ಸಮಾಧಿಯ ಧೂಳುಹತ್ತಿರಬೇಕು. ಆದರೆ ಮಾಸಲು ಬಣ್ಣ… ಗುರುತಿಸಬಹುದು… ಹುಡುಗಿ ವಾಚ್ ಕಟ್ಟಿದಂತೆಯೇ ಇತ್ತು. ಯಾವುದಾದರೂ ವಿಮೆನ್ಸ್ ಹಾಸ್ಟೆಲಿನ ಹುಡುಗಿಯೇ ಇರಬಹುದು. ನಮ್ಮ ಕಾಲೇಜಿನ ಹುಡುಗಿ ಬೇರೆ. ಎಂಥ ಮೋಸವಾಯ್ತು. ಹತ್ತು ಕೊಠಡಿಗಳಲ್ಲಿ ಹುಡುಗರು ಹಾಯಾಗಿ ಪಾಠಪ್ರವಚನ ಕೇಳುತ್ತಿದ್ದಾರೆ. ಇನ್ನೇನು ಹತ್ತು ನಿಮಿಷದಲ್ಲಿ ಕೊನೆಯ ಘಂಟೆ ಭಾರಿಸುತ್ತದೆ. ಆಗ ಸಾವಿರ ಹುಡುಗರು ರಾಷ್ಟ್ರಗೀತೆ ಹಾಡುತ್ತಾರೆ… ಬಿಟ್ಟರೆ ಸಾಕೆಂದು ಓಡುವವರೆಷ್ಟೊಂದು ಮಂದಿ… ಆ ವೇಳೆಗೆ ಹುಡುಕಬಹುದು. ಎಲ್ಲರೂ ಆತುರದಲ್ಲಿ ಹಾಡುತ್ತಾರೆ, ಮನೆಗೆ ಹೋದರೆ ಸಾಕೆಂದು… ಅಲ್ಲ, ಹಾಗಲ್ಲ ಕಾಲೇಜಿನಿಂದ ಹೊರಗೆ ಹೋದರೆ ಸಾಕೆಂದು… ಅಷ್ಟೆ. ಅಂತೂ ನಮ್ಮ ವಿದ್ಯಾಭ್ಯಾಸ ಇಷ್ಟಕ್ಕೆ ಬಂದಂತಾಗಿದೆ. ಆ ಹುಡುಗ, ಅವಳ ಗೆಣೆಯ… ಎಲ್ಲೋ ಕಾದಿರಬೇಕು. ಅವನಿರಲಿ, ಅವನೊಬ್ಬ ಹುಡುಗ, ನನ್ನ ಯೌವನದಲ್ಲಿ ನನಗೂ ಇಂಥ ಆಸಕ್ತಿ ಇರಲಿಲ್ಲವೇ? ಆದರೆ ನಾನು ಯಾವಾಗಲೂ ಗುಡಿಯನ್ನು ಕೆಡಿಸಿರಲಿಲ್ಲ. ಹುಡುಗಿಯರು ನಕ್ಕಾಗ ನಗುವ ಗುಲಾಬಿಯಂತಿರುವುದು ಖಂಡಿತ… ಆದರೆ ಅವಳ ಮುಖ ಕಾಣದೇ ಹೋಯಿತಲ್ಲ.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಹಾಳಾದವಳು ಯಾರಿಗೂ ಕಾಣದಂತೆ ನಡೆದುಕೊಳ್ಳಬಾರದಿತ್ತೆ. ತಪ್ಪು ಮಾಡುವ ಹೊತ್ತಿನಲ್ಲಿ ಬುದ್ಧಿ ಜಾಗರೂಕವಾಗಿರಬೇಡವೆ. ಇಲ್ಲಿಗೇಕೆ ಬರಬೇಕಿತ್ತು! ಈ ಸುದ್ದಿ ಹುಡುಗರಲ್ಲಿ ಚಟಾಕಿ ಸರದಂತೆ ಹತ್ತಿಕೊಳ್ಳುವುದಿಲ್ಲವೇ? ಇನ್ನು ಕಕ್ಕಸಿನಲ್ಲಿ ಅವಳ ಹೆಸರನ್ನೂ ಬರೆದಾರು. ಅವಳ ಚಿಂತೆಯಲ್ಲಿ ನೋಡಿದಾಗಲೂ ಅಷ್ಟೆ. ಅಲ್ಲಿ ಕೆಲವು ಹೆಸರುಗಳು, ಅರ್ಧಂಬರ್ಧ ಅಲ್ಲವೆ. ಈ ಕಕ್ಕಸು ತೊಳೆಯುವರು ಎಷ್ಟು ಅಳಿಸಿದರೂ ಹುಡುಗರು ಬರೆದೇ ಬರೆಯುತ್ತಾರೆ. ಹಲ್ಲಿಯ ಬಾಲದಂತೆ ಅವರ ಮನಸ್ಸು. ಅದನ್ನು ಎಷ್ಟೆಂದು ತಿದ್ದುವುದು… ಅಳಿಸಿದಷ್ಟು ಬರವಣಿಗೆ ಬರುವ ಬ್ಲಾಕ್ ಬೋರ್ಡ್… ಗೋಡೆಗಳನ್ನು ಶುದ್ಧ ಮಾಡಬಹುದು. ಹಾಳು ಮನಸ್ಸು. ಹಾಗೆಯೇ ಸುಣ್ಣ ಬಣ್ಣ ಹೊಡೆದಿರುವುದು ಅಸಾಧ್ಯ. ಪುಸ್ತಕದ ನೀತಿಯಿದೆ. ಅದರ ಹೊರೆಯಲ್ಲಿ ಅನೀತಿಯೇ ಸರಳ. ಸ್ಪಷ್ಟವಾಗಿ ಬೆರಳು ಮಾಡಿ ತೋರಿಸಿದಂತೆ ಕಾಣುತ್ತದೆ… ಅಷ್ಟೊಂದು ನಿಯಮಗಳ ಗೊಂದಲವೇಕೆ… ಯಾರಿಗಾದರೂ ಹೊಳೆಯಬಹುದು, ಈ ಟೆಕ್ಟ್ಸ್ ಬುಕ್ಕುಗಳನ್ನು ಆಯುವವರು ಬರಿಯ ಆದರ್ಶಗಳನ್ನೇ ಪಟ್ಟಿ ಮಾಡಿಕೊಂಡಂತೆ ವರ್ತಿಸುತ್ತಾರೆ. ನೀತಿಯನ್ನು ಒತ್ತಿದರೆ ಅನೀತಿಯಲ್ಲವೆ ಬೆಳಕಾಗುವುದು. ಅನೀತಿಯನ್ನು ಕತ್ತಲೆಗೆ ಅಜ್ಞಾನಕ್ಕೆ ಯಾವನು ಮೊದಲು ಹೋಲಿಸಿದನೋ ಏನೋ… ಜೀವಂತವಾಗಿರುವುದು ಅನೀತಿಯೇ… ಛೇ ಮೇಷ್ಟರು ಹೀಗೆ ಯೋಚಿಸಬಾರದು. ಹುಡುಗರನ್ನು ಸರಿಯಾದ ಹಾದಿಯಲ್ಲಿ ಹಾಕುವವರು ಹೀಗೆ ಚಿಂತಿಸಬಾರದು ನಿಜ. ಆದರೆ ಪರಿಹಾರವೆಲ್ಲಿ ಬಂತು. ನೀತಿ-ಅನೀತಿ ಹೆಣ್ಣಿನಷ್ಟು ಹಳೆಯದೋ ಗಂಡಿನಷ್ಟು ಹಳೆಯದೋ… ಇಬ್ಬರಲ್ಲಿ ಒಬ್ಬರೇ ಈ ಜಗತ್ತಿನಲ್ಲಿದ್ದಿದ್ದರೆ ಈ ಅನೀತಿಯ ಪ್ರಶ್ನೆಯಿರುತ್ತಿತ್ತೆ! ಯಾಕಿರಲಾರದು. ಆಗಲೂ ಮತ್ತೊಂದು ಬಗೆ… ಒಬ್ಬಳು ಹುಡುಗಿ ವಯಸ್ಸಿಗೆ ಬಂದು ತಪ್ಪು ಹಾದಿಯಲ್ಲಿ ನಡೆದುಕೊಂಡರೆ ಆ ತಪ್ಪು ತಂದೆತಾಯಿಗಳದ್ದು. ಅವರಾದರೂ ಏನು ಮಾಡಬೇಕು. ಅವಳು ಆ ಕಾನ್ವೆಂಟ್ ಹುಡುಗಿಯಾಗಿದ್ದರೆ ಹೀಗೆ ಮಾಡುತ್ತಿದ್ದಳೆ? ಆ ಯೂನಿಫಾರಂ ಧರಿಸಿದ ಬೋಧಕರು… ಆ ಶಿಸ್ತು. ಎಲ್ಲರೂ ಆ ಶಿಸ್ತಿನ ಮೂರ್ತಿಗಳಲ್ಲವೆ? ಅವರ ಅನೀತಿಯ ಗತಿಯೇನು? ಗೋಡೆಗೆ ಸುಣ್ಣ ಬಣ್ಣ ಹೊಡೆದರೆ ಮಣ್ಣಿನ ಗುಣವೇನಾದೀತು. ಅದಿರಲಿ ಅವಳು ಅಲ್ಲಿಂದ ಇಲ್ಲಿಗೆ ಬರಬೇಕಾಗಿದ್ದರೆ ಅವಳು ಖಂಡಿತ ನಮ್ಮ ಕಾಲೇಜಿನ ಹುಡುಗಿಯೇ ಇರಬೇಕು. ಹೌದು ಯೂನಿಫಾರಂ ಧರಿಸಿರಲಿಲ್ಲ. ಹೈ ಹೀಲ್ಡ್ ಷೂಸ್ ಹಾಕಿದ್ದಳಲ್ಲ. ಬೇಗ ಬೇಗನೆ ಕ್ವಾಡ್ರಾಂಗಲ್‌ಗೆ ಬಂದಳು. ಅಲ್ಲಿಯೇ ನಾಲ್ಕೈದು ತರಗತಿಗಳು ನಡೆದಿವೆ. ಹತ್ತು ನಿಮಿಷ ಮಾತ್ರ ತಡವಾಗಿರಬೇಕು. ಅವಳು ಬಂದಾಗ 4-10. ಮಿಂಚಿನಂತೆ ಮಾಯವಾಗಿ ಬಿಟ್ಟಳಲ್ಲ. ಹೋಗಲಿ ಒಮ್ಮೆಯಾದರೂ ಹಿಂದಿರುಗಿ ನೋಡಬಾರದಿತ್ತೆ?
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಇಂದಲ್ಲ ನಾಳೆಯಾದರೂ ಪತ್ತೆ ಹಚ್ಚಿ ಅವಳಿಗೆ ತಕ್ಕ ಶಿಕ್ಷೆ ವಿಧಿಸದಿದ್ದರೆ ಈ ರೋಗ ಹುಡುಗರಲ್ಲಿ ಸಾಂಕ್ರಾಮಿಕವಾದೀತು. ಎರಡು ಸಾವಿರ ವಿದ್ಯಾರ್ಥಿಗಳಲ್ಲಿ ಇದು ಸಲೀಸಾದರೆ… ಬೆಂಗಳೂರು ನಗರದಲ್ಲೇ ಭಯಂಕರ ಜಾಡ್ಯವಾಗಬಹುದು. ಇಂತಹ ಅಪೂರ್ವ ಘಟನೆಯನ್ನು ಡೈರಿಯಲ್ಲಿ ಬರೆದಿಡುವುದು ಮೇಲು… “ಇನ್ನೂ ಹುಡುಗಿ, ಕಾಲೇಜಿನವಳು… ಹಾಡೇ ಹಗಲು ಒಂದು ಕ್ರೈಸ್ತ ಸಮಾಧಿಯ ಬಳಿ ಹಾದರ ಮಾಡಿದ್ದಾಳೆ. ಇದು ಅನ್ಯಾಯ” ಇತ್ಯಾದಿ. ಇಂಥ ಹುಡುಗಿಯನ್ನು ಪತ್ತೆ ಹಚ್ಚಿ ಅವಳ ತಂದೆತಾಯಿಗಳಿಗೆ ಬುದ್ದಿ ಹೇಳಬೇಕು… ಇಲ್ಲದಿದ್ದರೆ ಎಂಥ ಅವಮಾನ! ಈ ಕಾಲೇಜಿನಲ್ಲಿ ಮೇಷ್ಟರ ಹೊಣೆಗಾರಿಕೆಯನ್ನು ಸಾಧಿಸಿದರ ಫಲವೇನು. 10 ವರ್ಷಗಳ ಸರ್ವಿಸ್ ದಂಡ. ಕಾಲೇಜು ನನ್ನನ್ನು ಸಾಕುತ್ತಿದೆ. ಇನ್ನೇನು ನಾನೊಬ್ಬ ಸ್ಲೇವಿನಂತೆ ದುಡಿಯುತ್ತಿದ್ದೇನೆ. ಇದರ ರೀತಿ ನೀತಿಗಳಿಗೆ ನಾನು ಗುಲಾಮ. ಇಲ್ಲಿ ಅನೀತಿಯ ಪ್ರಶ್ನೆಯೇ ಇಲ್ಲ. ಇವಳು ಅನೀತಿಯಿಂದ ನಡೆದುಕೊಂಡಿದ್ದಾಳೆ. ಶಿಕ್ಷೆಯಾಗಲೇಬೇಕು… ರೈಲು ಬೇರೆ ಕೂಗುತ್ತಿದೆ. ಇನ್ನೇನು ಐದು ಘಂಟೆ. ಅನೇಕ ಹುಡುಗರು ಹುಡುಗಿಯರು ಮನೆಗಳಿಗೆ ರೈಲಿನಲ್ಲಿ ಹೋಗುತ್ತಾರೆ. ಬೆಳಿಗ್ಗೆ ಬರುವ ಅದೇ ರೈಲಿನಲ್ಲಿ ಅವರು ಬರುತ್ತಾರೆ. ಅವರಲ್ಲಿ ಯಾರಾದರೂ ಇರಬಹುದು. ಜೊತೆ ಹಕ್ಕಿಗಳಂತೆ ವಿಹರಿಸುವುದು ಸಹಜ. ಎಂಥ ಧೈರ್ಯ ಇವಳಿಗೆ. ಖಂಡಿತವಾಗಿಯೂ ಬೇರೆಯ ಊರಿನವಳಿರಬೇಕು. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳ ಮೇಲೆ ಕಂಪ್ಲೇಂಟುಗಳು ಹೆಚ್ಚು. ಅವರು ಪಟ್ಟಣಿಗರೂ ಅಲ್ಲ, ಹಳ್ಳಿಯವರೂ ಅಲ್ಲ. ಪಟ್ಟಣದ ಗೊಂದಲಗಳಲ್ಲಿ ಅವರು ದಾರಿ ತಪ್ಪುವುದು ಖಂಡಿತ. ಹಳ್ಳಿಯ ನೀತಿ ನಿಯಮಗಳೂ ಅಡ್ಡಿಯಾಗಲಾರವು ಎಂದರೆ ಇನ್ನೇನು ಹೇಳಬೇಕು. ನಾವೆಲ್ಲಿ ಹೋಗುತ್ತಿದ್ದೇವೆ? ಅಯ್ಯೋ ನಮ್ಮ ಸಂಸ್ಕೃತಿಯ ಗತಿಯೇನು? ಇವಳಂತೆ ಎಲ್ಲರೂ ಮಾಡತೊಡಗಿದರೆ ಕಾಲೇಜನ್ನೇ ಮುಚ್ಚಿಸಿಬಿಡುವುದು ಮೇಲು. ಮೇಷ್ಟರಾಗಿ ಏನು ಮಾಡಿದ ಹಾಗಾಯಿತು. ಇವಳನ್ನು ಪತ್ತೆ ಹಚ್ಚಿ ಈ ವಾಸನೆ ಹರಡದಂತೆ ಮಾಡದಿದ್ದರೆ ಪ್ರಯೋಜನವೇನು? ಐವತ್ತು ಮೆಟ್ಟಲೇರಿ ನಿಂತು ನೋಡಿದರೂ ಏನು ಬಂದ ಹಾಗೆ ಆಯಿತು. ಆ ಕ್ರಾಸು ಪಶ್ಚಿಮದ ಪ್ರಭಾವಳಿಯಲ್ಲಿದೆ. ಅದರ ಬೆಳಕಿನಲ್ಲೇ ಇಂಥ ಅನಾಹುತ ಜರುಗಿದೆ. ಅಲ್ಲಿ ಗಂಭೀರವಾಗಿ ಪ್ರಾರ್ಥನೆ ಮಾಡಬೇಕು. ಬದಲು ಇಂಥ ಕೆಲಸ ಮಾಡಿದ್ದಾರಲ್ಲಾ. ಅವನು ಯಾರೋ ಒಬ್ಬ ಹುಡುಗ. ಆದರೆ ಹುಡುಗಿ ನಮ್ಮವಳು… ಹೇಳುವವರು ಕೇಳುವವರು ಯಾರೂ ಇಲ್ಲವೆ? ಐದು ಬಾರಿಸಲು ಹತ್ತು ನಿಮಿಷಗಳಿವೆಯಲ್ಲ. ಆಗಲೇ ಯಾರೋ ಮೇಷ್ಟರು ತರಗತಿಯನ್ನು ಬಿಟ್ಟಂತಿದೆಯಲ್ಲ… ಹೌದು ಬಿಟ್ಟಿದ್ದಾರೆ… ಇದು ಇಂಗ್ಲಿಷಿನ ತರಗತಿಯೇ. ಅವರಿಗೆ ತಾವು ಈ ದೇಶದವರೆಂದು ಅನ್ನಿಸುವುದೇಯಿಲ್ಲ. ವಿಲಾಯಿತಿಯಲ್ಲಿ ಹುಟ್ಟಿ ಬಂದವರಿಗಿಂತ ವಿಪರೀತವಾಗಿ ಭಾವಿಸಿಕೊಳ್ಳುವ ಜನ. ಅದು ಪಶ್ಚಿಮದ ಭಾಷೆಯಾದರೂ ಬದುಕು ಪೂರ್ವದ್ದೆಂಬ ಪ್ರಜ್ಞೆ ಬೇಡವೆ. ಹುಡುಗರು ರಾಷ್ಟ್ರಗೀತೆಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾರೆ. ಯಾರಿಗಾಗಿ ಈ ನಿಯಮಗಳು ಬೇಕು. ಬರಿಯ ಮೇಷ್ಟರಿಗೆ ಮಾತ್ರವೆ. ನೀತಿಯನ್ನು ಹೇಳಿ ಹೇಳಿ ಸುಸ್ತಾಗಬೇಕಷ್ಟೆ. ಹಾಗಾದರೆ ಅದನ್ನೇಕೆ ಹೇಳಬೇಕು… ಇನ್ನೇನು ಅನೀತಿಯನ್ನು ಹೇಗೆ ಹೇಳುವುದು. ಅದು ಕಲಿಸದೇ ಬರುತ್ತದೆಯಂತೆ. ಅಂದ ಮೇಲೆ ಅದಕ್ಕೆ ಉತ್ತೇಜನ ಬೇಕಾದೀತೆ… ನನಗೂ ಚಪಲವಿದೆಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಹುಡುಗಿಯರಲ್ಲಿ ಯಾರಾದರೊಬ್ಬರ ನೆನಪು ಕಾಡುತ್ತಿತ್ತು. ಆದರೆ ಇಷ್ಟು ಅಸಹ್ಯವಾಗಿ ಯಾರೂ ನನ್ನೊಡನೆ ನಡೆದುಕೊಂಡಿರಲಿಲ್ಲ. ಈ ಬೀದಿಯ ಹುಡುಗರು ಬಂದು ಇವರು ಸಮಾಧಿಯ ಬಳಿ ಮಲಗಿದ್ದರೆಂದು ಹೇಳುವ ಕೆಲಸ ನಾನು ಮಾಡಿರಲಿಲ್ಲ. ಆಂಜನೇಯನ ಗುಡಿಯಲ್ಲಿ ದೇವರ ಪ್ರಸಾದಕ್ಕೆ ಕೈಯೊಡ್ಡಿದಾಗ ಎದುರಿಗೇ ಬಂದು ಕೈನೀಡುತ್ತಿದ್ದ ಹುಡುಗಿ ನಾಲೈದು ಬಾರಿ ನಕ್ಕಿದ್ದಳು, ಮನೆಗೂ ಕರೆದಿದ್ದಳು, ಅಷ್ಟೆ. ಅವಳ ನೆನಪು ಕನಸಾಗಿ ಕಾಡಿತು. ನೋಟ್ಸ್ ಕೊಟ್ಟಳು… ತೆಗೆದುಕೊಂಡಳು. ಅವಳ ಮುದ್ದಾದ ಬರವಣಿಗೆ ಕಣ್ಣಿಗೊತ್ತಿಕೊಳ್ಳುವಂತಿತ್ತು. ಇನ್ನೊಂದು ಬೇಸಗೆ ಕಳೆಯುವುದರಲ್ಲಿ ಯಾರನ್ನೋ ಮದುವೆಯಾಗಿ ಮರೆಯಾದಳು… ಅವಳನ್ನು ಮುಟ್ಟಬೇಕೆಂಬಾಸೆಯಿತ್ತು. ಒಂದೆರಡು ಬಾರಿ ಅವಳ ಮೋಹಕ ಮಾದಕ ನಗೆಗೆ ಒಮ್ಮೆಲೆ ಮುದ್ದಿಡಬೇಕೆಂದೂ ಇರಬಹುದು. ಅದರ ನೆನಪು ಈಗ ಧೂಳೀಪಟವಾಗಿದೆ. ಅವಳ ಹೆಸರು ಮಾತ್ರ ನೆನಪಿದೆ. ಆದರೆ ಕನಸಿನಲ್ಲಿ ಮಾತ್ರ ನಾನು ಅವಳು ಸೇರಿದಂತಾಗಿತ್ತಷ್ಟೆ.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಅದಕ್ಕೂ ಇದಕ್ಕೂ ಅಜಗಜಾಂತರವಲ್ಲವೆ?… ಯಾವುದು ಅಪರಾಧ? ಅಲ್ಲದೆ ನಮ್ಮಿಂದ ಬೇರೆ ಯಾರೂ ಅನುಕರಣೆ ಮಾಡಿದಂತಾಗಲಿಲ್ಲ… ಆದರೆ ಈ ಹುಡುಗಿ… ಬೇಜವಾಬ್ದಾರಿಯವಳು. ಇವಳು ಇಷ್ಟು ಧೈರ್ಯಮಾಡಿದ ಮೇಲೆ ಕಾಲೇಜಿನ ಯುವಕರನ್ನೆಲ್ಲಾ ಕೆಡಿಸಬಹುದು. ಆಗ, ಗತಿ?… ಅದು ಅಷ್ಟಕ್ಕೇ ನಿಲ್ಲಲಾರದು… ಒಂದು ಕಾಲೇಜಿನಿಂದ ಮತ್ತೊಂದು…
ಇನ್ನು 50 ಮೆಟ್ಟಿಲುಗಳನ್ನಿಳಿಯಬೇಕು. ಆ ಕ್ರಾಸಿನ ಚಿತ್ರ ಕೊನೆಗೂ ಎಷ್ಟು ಚಂದವಾಗಿದೆ. ಅದರ ಕೆಳಗೆ ಎಂಥ ಭಯಂಕರ ಕಾರ್ಯ ಜರುಗಿಹೋಗಿದೆ… ಅದೋ ಇನ್ನೂ ಒಂದು ತರಗತಿಯನ್ನು ಬಿಟ್ಟರೆಂದು ಕಾಣುತ್ತದೆ. ಎಣಿಸಿಕೊಂಡೇ ಇಳಿಯಬಹುದು… ಇಲ್ಲಿಗೆ ಕಾಣುತ್ತಿದೆ. ಆ ಹುಡುಗರು ರಾಷ್ಟ್ರಗೀತೆಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾರೆ… ಇವರನ್ನು ಹದ್ದಿನಂತೆ ಕಾಯುವುದೊಂದು ಹಿಂಸೆ. ಮೇಷ್ಟರಾಗಿದ್ದಕ್ಕೆ ಇಷ್ಟೊಂದು ಹೊಣೆಗಾರಿಕೆಯೇಕೆ ಬೇಕು. ಇವರ ತಂದೆ ತಾಯಿಗಳೇ ಗಮನಿಸಿದ ಹಾಗೆ ಕಾಣುವುದಿಲ್ಲ. ಇದು ನಮ್ಮ ಮನೆ, ನಮ್ಮ ದೇಶ… ನಮ್ಮ ರಾಷ್ಟ್ರ… ಇತ್ಯಾದಿ ಭಾವನೆಗಳು ಹುಟ್ಟಿದ ಮನೆಯಲ್ಲೇ ಕಲಿಯುವ ಪಾಠವಲ್ಲವೆ. ಈ ಹುಡುಗರಿಗೆ ರಾಷ್ಟ್ರಗೀತೆಯೆಂದರೆ ಒಂದು ಅಣಕ, ದೇಶಪ್ರೇಮವೆಂದರೆ ಸಂಘ ಸಂಸ್ಥೆ ಮಣ್ಣು-ಮನೆ ಲಂಗು ಲಸುಕು… ಇಂಥ ಸದರಕ್ಕೇನು ಮಾಡಬೇಕು. ಯಾವ ನೀತಿಯ ಪಾಠವೂ, ಯಾವ ‘ರಿಪಬ್ಲಿಕ್ ಡೇ’ ವರ್ಣನೆಯೂ ತಡೆಯುವುದಿಲ್ಲ… ಯಾರೋ ಒಬ್ಬರು ಮೇಷ್ಟರು ಗೇಟ್ ಬಳಿ ನಿಂತರೆಂದು ಕಾಣುತ್ತೆ… ಹುಡುಗರು ಸದ್ದುಮಾಡುತ್ತಿದ್ದಾರೆ. ಬೋನಿಗೆ ಬಿದ್ದ ಇಲಿಗಳಂತೆ ಓಡಾಡುತ್ತಾರೆ… ಇದು ಪ್ರತಿ ದಿನದ ಹಣೆಬರಹ… ಗಂಟೆಯೂ ಬಾರಿಸಿತಲ್ಲ… ಇರಲಿ. ಈಗ ರಾಷ್ಟ್ರಗೀತೆ ನಡೆಯುವಾಗ್ಗೆ ಆ ಹುಡುಗಿಯನ್ನು ಪತ್ತೆ ಹಚ್ಚಬಹುದು. ಸಾಲಾಗಿ ನಿಂತವರನ್ನು ಹಿಂದಿನಿಂದ ನೋಡುತ್ತಾ ಹೋದರಾಯಿತು.
ಇಷ್ಟು ಬೇಗನೆ ಅವಳು ಓಡಿ ಹೋಗಿರಲಾರಳು. ಯಾರಿಗೂ… ತನ್ನ ಸಂಗಡಿಗರಿಗೂ ಅನುಮಾನದ ಸುಳಿವು ಕೊಡದಂತೆ ಇರಬೇಕಾದರೆ ಏನೂ ಅರಿಯದವಳ ಹಾಗೆ ಜೊತೆಗಾತಿಯರ ಸಂಗಡ ಹರಟೆ ಕೊಚ್ಚುತ್ತ ಅಥವಾ ಬಿನ್ನಾಣವಾಗಿ ಹೊರಡಬೇಕು… ಅಲ್ಲವೆ… ಮೊದಲಿಗೇ ಓಡಿದ್ದರೆ ಒಂದು ತೆರ. ಆದರೆ ಆಗ ಹೋಗುತ್ತಿದ್ದವರು ಬರಿಯ ಗಂಡು ಹುಡುಗರು… ಅಷ್ಟೆ… ಆದ್ದರಿಂದ ಅವಳು ಇಲ್ಲಿ ಸಾಲಿನಲ್ಲಿ ಇರಲೇಬೇಕು… ಇಲ್ಲದಿದ್ದರೆ ಹತ್ತು ನಿಮಿಷ ತಡವಾಗಿ ಬಂದವಳು ಯಾವುದೋ ತರಗತಿಯಲ್ಲಿ ಹೋಗಿ ಕೂಡುತ್ತಿರಲಿಲ್ಲ… ಅವಳ ಗುಲಾಬಿ ಹೂ, ಮಾಸಿದ ಸೀರೆ… ಗಿಡ್ಡಾದ ಅಗಲವಾದ ಬೆನ್ನು, ಆ ಕೆಳಗಿನ ಪಿರ್‍ರೆ… ಆ ನಡಿಗೆ ನನಗೆ ಗೊತ್ತು. ಎಲ್ಲಿ ಬೇಕಾದರೂ ಗುರುತಿಸಬಲ್ಲೆ… ಇರಲಿ.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಹೂ ಬೇಗ ಬೇಗ ನಿಂತುಕೊಳ್ಳಿ ಸರಿಯಾಗಿ. ಚೂರುಪಾರು ಸಾಲುಗಳಲ್ಲಿ ನಿಂತವರಿಗೆ ಮೇಷ್ಟರುಗಳು ಆದೇಶ ನೀಡುತ್ತಿದ್ದಾರೆ. ರಾಷ್ಟ್ರಗೀತೆಯನ್ನು ಹಾಡಲೇ ಬೇಕೆಂಬ ನಿಯಮಕ್ಕೆ ಅವರು ಗುಲಾಮರಾಗಿದ್ದಾರೆ. ಅಧಿಕಾರದ ಚಾವಟಿಯನ್ನು ಅವರು ಬೀಸುತ್ತಿದ್ದಾರೆ… ಆ ಮಾತಿನ ಚುರುಕು ಹುಡುಗರಿಗೆ ನಿತ್ಯ ಪರಿಚಯವಾಗಿದೆ… ಸುಮಾದ 500 ಮಂದಿಯಾದರೂ ಹುಡುಗಿಯರಿದ್ದಾರೆ… ಹೂ ಮುಡಿದವರು ಬಹಳ… ಅದರಲ್ಲೂ ಈ ದಿನ ಗುಲಾಬಿಯೇ ಸೀಸನ್ ಆದಂತಿದೆಯಲ್ಲ. ಎಲ್ಲರೂ ಮುಡಿದು ಬಂದಿರುವುದು ಗುಲಾಬಿಯೇ ಆದಂತಿದೆ. ಬರಿಯ ಹೂವಲ್ಲ… ಜೊತೆಗೆ ಒಂದೆಸಳು ಹಸುರೆಲೆ… ಅನೇಕರ ತಲೆಯಿಂದ ತೂಗುತ್ತಿದೆ. ಇರಲಿ ಮೊದಲು ರಾಷ್ಟ್ರಗೀತೆಯಾಗಲಿ…
ಇನ್ನು ಹೊರಗಿನ ಬಾಗಿಲಲ್ಲಿ ನಿಂತು ನೋಡುವುದೊಂದೇ ಮಾರ್ಗ. ಹೌದು ಹೀಗೇಕೆ ನನ್ನನ್ನೇ ಹುಡುಗರು ನೋಡುತ್ತಿದ್ದಾರೆ? ನನ್ನನ್ನು ಕಂಡು ಮಾಮೂಲು ನಗೆ ಬೀರಿ ತಲೆ ತಗ್ಗಿಸುವ ಹುಡುಗಿಯರು ನನಗೆ ಚೆನ್ನಾಗಿ ಗೊತ್ತು. ಅವರ ಮನೆಮಂದಿಯಲ್ಲಿ ಹಲವರ ಪರಿಚಯವೂ ನನಗಿದೆ… ಅವರು, ಖಂಡಿತವಾಗಿ ಒಳ್ಳೆಯವರು, ಗುಣವಂತರು. ಇಂಥ ಕೆಲಸಕ್ಕೆ ತೊಡಗುವವರಲ್ಲ. ಈಕೆಯ ವಿಚಾರವೇ ಬೇರೆ… ಇವಳು ತುಂಟಳಿರಬೇಕು. ನಾನಿರುವ ಕಡೆ ಬರದೆ ಆಚೆಯ ಪಕ್ಕದಲ್ಲಿ ಹೋಗಬಹುದಲ್ಲಾ. ಎಲ್ಲರೂ ಇದೇ ಗೇಟಿನಲ್ಲಿ ಹೋಗಬೇಕೆಂಬುದು ಒಂದು ರೂಢಿ, ನಿಯಮ. ಸುಳುವು ಕೊಡದಂತೆ ಅವಳು ಹೋಗಬೇಕಾದರೆ ಇಲ್ಲಿಯೇ ಹೋಗಬೇಕು. ಬೆಕ್ಕಿನಂತೆ ಜಾರಿಕೊಳ್ಳಬೇಕು… ಅವಳು ಆಚೆಯ ಬಾಗಿಲಿಂದ ಬಂದವಳು ಈ ಬಾಗಿಲಿಂದಲೇ ಹೋಗಬೇಕು… ಈಗ ಅದನ್ನು ಮುಚ್ಚಿಯೂ ಬಿಟ್ಟಿರುತ್ತದೆ. ಅಂದಮೇಲೆ ಅವಳು… ನನ್ನ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳುವಂತಿಲ್ಲ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಇದೇನು, ಇವಳು ಯಾರು?… ಎಲ್ಲರ ಮುಖದಲ್ಲೂ… ಎಲ್ಲ ಗುಲಾಬಿ ಮುಡಿದವರಲ್ಲೂ ಗುರುತಿಸಲಾಗದಷ್ಟು ತೊಡಕೆ… ಕಂಡ ಕಂಡ ಗುಲಾಬಿಗಳೆಲ್ಲಾ ಸಣ್ಣನೆ ನಕ್ಕಂತೆ… ಗುರುತು ಸಿಕ್ಕುವವರೇ ಎಲ್ಲರೂ… ಯಾರೂ ಅವಳಲ್ಲ. ಎಲ್ಲರ ಗುಲಾಬಿಯೂ ಒಂದೇ ತರಹವಿದ್ದಂತಿದೆಯಲ್ಲ. ಹುಡುಗಿಯರೇಕೆ ನನ್ನನ್ನು ನೋಡಿ ಗಾಬರಿಯಿಂದ ತಲೆ ತಗ್ಗಿಸಿಕೊಂಡು ಹೋಗುತ್ತಿದ್ದಾರೆ. ಒಂದಿಬ್ಬರು ಬಾಗಿಲು ದಾಟುತ್ತಲೇ ಪಿಸುಗುಟ್ಟಿದರಲ್ಲಾ… ಆದರೆ ಅವರಲ್ಲಿ ಯಾರೂ ಅವಳಲ್ಲ… ಅವರು ಗುಲಾಬಿಯನ್ನೇ ಮುಡಿದಿಲ್ಲ. ಮಾಮೂಲು ನಮಸ್ಕಾರ ಮಾಡುವವರೂ ಹಿಂಜರಿಯುತ್ತಿದ್ದಾರಲ್ಲ… ಹೌದು ಇವರೆಲ್ಲರೂ ಅಂಥವರೇ… ಅದೇ ರೀತಿ ನೀತಿ. ಈಗ ತಪ್ಪುಮಾಡಿದವಳು ಒಬ್ಬಳಾದರೂ, ಅವಳು ಇವರಲ್ಲೆಲ್ಲಾ ಇದ್ದಾಳೆಯೇ… ಖಂಡಿತವಾಗಿ. ಈ ಹುಡುಗಿಯರಲ್ಲಿ ಯಾರು ಬೇಕಾದರೂ ಇಂಥ ಅನೀತಿಯ ಕೆಲಸ ಮಾಡಬಹುದು; ಕಥಾನಾಯಕಿಯಾಗಬಹುದು. ಆ ಕ್ರಾಸಿನ ಗುಡಿಯಲ್ಲಿ ತಮತಮಗೆ ಬೇಕಾದವರ ಸಂಗಡ ಮಲಗಬಹುದು… ಇದು ಸಾಧ್ಯ… ಕೊನೆಗೆ ಎಲ್ಲರಿಗಿಂತ ನಿಧಾನವಾಗಿ ಯಾವುದೋ ಪುಸ್ತಕ ನೋಡುತ್ತಾ, ನಾನು ನಿಂತಿರುವುದನ್ನು ಗಮನಿಸದೆ ನಾಲ್ಕು ಹುಡುಗಿಯರು ಹೋಗುತ್ತಿದ್ದಾರೆ… ಒಬ್ಬಳಂತೂ ಗುಲಾಬಿ ಹೂ ಮುಡಿದವಳೆ. ಆದರೆ ಅವಳ ನಿಲುವೇ ಬೇರೆ. ಅವಳಲ್ಲ… ಖಂಡಿತ ಅವಳಲ್ಲ.
ಇನ್ನು ಇಲ್ಲಿ ಗೇಟಿನಲ್ಲಿ ನಿಂತಿರುವುದೇ ತಪ್ಪು. ಆ ಕೊಂಚ ಬೆಳ್ಳನೆಯ ಹುಡುಗಿ ಗುಲಾಬಿ ಹೂ ಧರಿಸಿದ್ದಾಳೆ. ಹಸುರೆಲೆ ಸಹಿತ ಗಾಳಿಯಲ್ಲಿ ಅಲುಗಾಡುತ್ತಿದೆ. ಹೈಹೀಲ್ಡ್ ಷೂ ಧರಿಸಿದ್ದಾಳೆ. ಬಟ್ಟನೆಯ ಹಿಂಭಾಗ. ಕೂದಲು ಮಿಂಚುತ್ತದೆ. ಕಪ್ಪು ಎರಡು ಜಡೆ ಮಾಸಲು ಸೀರೆಯಾದರೂ ಯೌವನಕ್ಕೆ ಕೊರತೆಯಿಲ್ಲ. ಆ ವೇಗದ ನಡಿಗೆಯಲ್ಲಿ ದೇಹಕ್ಕೆ ಎಂಥ ಸೊಗಸಿದೆ. ಯೌವನದ ಚಿಗುರು… ಮರೆತಿದ್ದೆ… ಕೈಯಲ್ಲಿ ಒಂದೊಂದು ಬಳೆಯಿದೆ. ಉಗುರುಗಳಿಗೆ ಮದರಂಗಿ ಬಣ್ಣ ಹಾಕಿದ್ದಾಳೆ. ಕಿವಿಗೆ ಲೋಲಾಕಿದೆ… ಇಂಥವಳು ನನ್ನ ಕಣ್ಣಿಗೆ ಬೀಳದಂತೆ ಈ ಗೇಟಿನಲ್ಲಿಯೇ ಸಾವಿರ ಹುಡುಗ ಹುಡುಗಿಯರಲ್ಲಿ ಒಬ್ಬಳಾಗಿ ಹೊರಟು ಹೋಗಿದ್ದಾಳೆ…
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಈ ಹುಡುಗಿಯನ್ನು ಗುರುತಿಸಿ ಕೊಟ್ಟವರಿಗೆ ನಾನು ಏನು ಬೇಕಾದರೂ ಕೊಡಬಲ್ಲೆ. ಇಲ್ಲದಿದ್ದರೆ ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ. ಇವಳನ್ನು ಹಿಡಿದು ಶಿಕ್ಷಿಸದಿದ್ದರೆ ನನ್ನ ಮೇಷ್ಟರುತನಕ್ಕೆ ಅವಮಾನ. ನಮ್ಮ ಕಾಲೇಜಿನ ಬಾಗಿಲಲ್ಲಿ ಆ ಹುಡುಗಿಯ ಪತ್ತೆ ಹಚ್ಚಲು ನಿಂತಿದ್ದೇನೆ. ನಾಳೆಯೂ ನಿಲ್ಲುತ್ತೇನೆ. ಯಾರೂ ನನ್ನನ್ನು ತಪ್ಪು ತಿಳಿದುಕೊಳ್ಳಬಾರದೆಂದು ನನಗಿರುವ ಒಂದೇ ಒಂದು ಉಪಾಯವನ್ನು ಮಾಡುತ್ತೇನೆ. ದಯವಿಟ್ಟು ಯಾರಿಗೂ ಹೇಳಬೇಡಿ, ನನ್ನ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಹುಡುಕುತ್ತೇನೆ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಕ.ವೆಂ. ರಾಜಗೋಪಾಲ (1924-2014): ಚಿಕ್ಕಮಗಳೂರು ಜಿಲ್ಲೆಯ ಕಟ್ಟೆಪುರದಲ್ಲಿ ಜನಿಸಿದ ಇವರು ಎಂ.ಎ. (ಕನ್ನಡ) ಪದವೀಧರರು. ಹಲವಾರು ವರ್ಷಗಳ ಕಾಲ ಅಧ್ಯಾಪಕ ವೃತ್ತಿ ನಡೆಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದ ನಾಟಕ, ಸಂಗೀತ, ಲಲಿತ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕ, ಪ್ರಾಂಶುಪಾಲರಾಗಿದ್ದರು. ವಿಮರ್ಶಕ ಹಾಗೂ ಮಾರ್ಕ್ಸ್ ವಾದಿ ಚಿಂತಕರಾಗಿದ್ದರು. ಪ್ರಕಟಿತ ಕೃತಿಗಳು: ‘ಅರ್ಧ ತೆರೆದ ಬಾಗಿಲು’, ‘ಎಣಿಸಿದ ಹಣ’, ‘ರಾಗ ಜಯಂತ’, ‘ಅನಾಥ ಮೇಷ್ಟರ ಸ್ವಗತ ಸಂಪ್ರದಾಯ'(ಕಥಾ ಸಂಕಲನಗಳು); ‘ಅಂಜೂರ’, ‘ನದಿಯ ಮೇಲಿನ ಗಾಳಿ’, ‘ಮೇ ತಿಂಗಳ ಒಂದು ಅಬ್ಬರ'(ಕವನ ಸಂಕಲನಗಳು). ಜಾನಪದ ನಾಟಕಗಳ ವಿಮರ್ಶೆ, ಹಿಮಗಿರಿಯ ಕರೆ, ಕೋರಿಯಾಲೆನಸ್(ಅನುವಾದ); ತುಳುವರ ಆಚರಣೆಗಳಲ್ಲಿ ಕಲಾವಂತಿಕೆ(ಸಂಪಾದನೆ). ಇವರು ವಿವಿಧ ರೇಡಿಯೋ ನಾಟಕಗಳನ್ನೂ ರಚಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಕೆಲಸ ಮಾಡಿರುವ ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿದ್ದಾರೆ. 2014 ಅಕ್ಟೋಬರ್ 20ರಂದು ನಿಧನರಾದರು.





