ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿನಿಂದ ವರೆಸಿಕೊಳ್ಳುತ್ತಾ ಸುಮಾರು ಹೊತ್ತು ಅಲ್ಲೇ ಒಂಟಿಕಾಲಲ್ಲೇ ನಿಂತಿದ್ದ. ಅಜ್ಜಿಯ ಹಳೆಸೀರೆ ಬಟ್ಟೆಯಿಂದ ತುಂಡುಮಾಡಿ ಆತನ ತಾತನಿಂದ ದಾರ ಮಾಡಿಸಿಕೊಂಡು ಬುಗುರಿ ಸುತ್ತಿ ಪಡಸಾಲೆಯ ಗಾರೆ ನೆಲದ ಮೇಲೆ ಬಿಟ್ಟು ಅದು ಗುಯ್ ಎಂದು ನಿದ್ದೆಕೊರೆಯುವಾಗ ಕಿವಿಗೊಟ್ಟು ತಲ್ಲೀನನಾಗಿ ಆನಂದಗೊಂಡು ಅದರ ನಾದಕ್ಕೆ ತಾನೇ ಇನ್ನೊಂದು ನಾದ ಎಂಬಂತೆ ಸಂತೋಷಗೊಳ್ಳುತ್ತಿದ್ದ. ಹಸಿರು ಬಿಳಿ ಕೇಸರಿ ಬಣ್ಣದ ರಂಗು ಬುಗುರಿ ಈಗ ಚೆಲುವನ ದುರಂತವೋ, ಅವನ ಅಪ್ಪನ ಹಣೆಬರಹವೋ ಇಲ್ಲವೇ ಇಡೀ ಆ ಮನೆ ಮತ್ತು ಕೇರಿ ಜನರ ದುರದೃಷ್ಟವೋ ಎಂಬಂತೆ, ಹಿಂದೆ ಹಿತ್ತಲಲ್ಲಿ ಮದುವೆ ಸಂದರ್ಭದಲ್ಲಿ ಕಟ್ಟಿಸಿದ್ದ ಕಕ್ಕಸು ಗುಂಡಿಯ ನರಕದಲ್ಲಿ ಬಿದ್ದುಹೋಗಿತ್ತು.
ಬೇಸರವಾಗಿ ಚೆಲುವ ಹಿತ್ತಲಿಗೆ ಬಂದು ಸಾವಿರಾರು ಕಣ್ಣಿಂದ ಚಿಗುರಿ ಭಾರವಾಗಿ ಹಸಿರು ಕಕ್ಕುತ್ತಾ ಕಂಗೊಳಿಸಿದ್ದ ಹೊಂಗೆ ಮರದ ಮೇಲೆ ಹತ್ತಿ ಕುಳಿತ. ಮೇಲಿಂದ ಕಾಣುತ್ತಿರುವ ಇಡೀ ಹೊಲಗೇರಿ ಅವನ ಕಣ್ಣಿಗೆ ರಾಚಿ, ಅಸ್ತವ್ಯಸ್ತವಾಗಿ ಚಿಂದಿ ಬಟ್ಟೆಯಂತೆ ತೂತುತೂತಾಗಿ ಕೊಳಕಾಗಿ ಕಾಣಿಸಿತು. ಧ್ಯಾನಸ್ಥ ಮೌನಿಯಂತೆ ರೆಂಬೆಗಳ ಮೇಲೆ ಕುಳಿತು ಆ ಹೊಂಗೆ ಹೂಗಳಿಗೆ ಮುತ್ತಿಕೊಳ್ಳುತ್ತಿರುವ ಸಣ್ಣ ಸಣ್ಣ ಹುಳುಗಳನ್ನೇ ಮುತ್ತಿಡುವವನಂತೆ ನೋಡಿದ. ಆದರೂ ಬುಗುರಿ ಎಡೆಬಿಡದೆ ಅವನ ತಲೆಯೊಳಗೆ ತಿರುಗುತ್ತಲೇ ಇತ್ತು. ಏನಾದರೂ ಮಾಡಿ ಅದನ್ನು ಹೊರಗೆ ತೆಗೆಯಲೇಬೇಕು. ಮತ್ತೆ ಮತ್ತೆ ಹೊಸ ಬುಗುರಿಗಳನ್ನು ಕೊಂಡುಕೊಳ್ಳಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಅಂತಹ ಬುಗುರಿ ಮತ್ತಿನ್ನೆಂದೂ ಸಿಗುವುದಿಲ್ಲ. ಯಾಕಾದರೂ ಅಪ್ಪನಿಗೆ ತನ್ನ ಬುಗುರಿಗಳ ಬಗ್ಗೆ ಇಂತಹ ಸಿಟ್ಟು ಎಂದುಕೊಂಡು ದುಃಖಿತನಾದ. ಇದ್ದಕ್ಕಿದ್ದಂತೆ ಆ ಹಿತ್ತಲುಗಳ ಕಸದ ರಾಶಿಗಳ ನಡುವಿಂದ, ರೋಜುವಾಳದ ಅಂತಿಂತಹ ಮುಳ್ಳು ಪೊದೆಗಳಿಂದ ನಾಯಿಗಳು ವಿಪರೀತ ಸಿಟ್ಟಿನಿಂದ ರಭಸವಾಗಿ ಅಟ್ಟಿಸಿಕೊಂಡು ಬರುತ್ತಿರುವುದನ್ನು ತಿರುಗಿನೋಡಿದ. ನಾಯಿಗಳ ಬೊವ್ ಗುಟ್ಟುವಿಕೆಯ ಹಿಂದೆಯೇ ‘ಕೀಕ್’ ಎಂಬ ಇನ್ನೊಂದು ಸದ್ದು ಬಂತು. ಹಂದಿಯೊಂದನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದು ಇನ್ನೇನು ತನ್ನ ಹಿಂಬದಿಯನ್ನು ಕಚ್ಚಿ ಕೊಲ್ಲುತ್ತವೆ ಎಂದು ಭಯದಿಂದ ಹಿಂದುಮುಂದು ನೋಡಲಾರದೆ ‘ಕುಯ್ಯೋ’ ಎಂದು ದೊಡ್ಡ ಶಬ್ದ ಮಾಡಿ ಓಡಿಬಂದು ‘ಧಢಕ್’ ಎಂದು ಅದೇ ಕಕ್ಕಸು ಗುಂಡಿಯ ಒಳಕ್ಕೆ ಬಿದ್ದುಹೋಯಿತು. ಚೆಲುವ ಏನನ್ನೂ ಮಾಡಲಾರದಂತಾಗಿ ಓಹ್: ಎಂದುಕೊಂಡು ‘ಹಂದಿ ಏಲ್ ಗುಂಡಿಗ್ ಬಿದ್ದೋಯ್ತು’ ಎನ್ನುತ್ತಾ ಮರದಿಂದ ಕೆಳಗಿಳಿದು ಓಡಿಬಂದು ಮನೆಯೊಳಗಿದ್ದ ತನ್ನ ಅವ್ವನಿಗೆ ‘ಅವೋ ಅವ್ವ ನಮ್ಮಿತ್ಲು ಕಕ್ಕಸ್ ಗುಂಡಿವೊಳಗೆ ಅದ್ಯಾರದ್ದೋ ಹಂದಿ ಬಂದ್ ಬಿದ್ದೋಯ್ತು’ ಎಂದ. ಅವನ ಅವ್ವ ‘ಹಾ!’ ಎನ್ನುತ್ತಾ ‘ಅದ್ಯಾರುದ್ಲಾ ಹಾಳಾದ್ ಹಂದಿಗೆ ನಮ್ಮಿತ್ಲು ಗುಂಡಿಲೆ ಇತ್ತೆ ಸಾಯುದು, ಇನ್ನೆಲ್ಲು ಜಾಗಿರಲಿಲ್ವೆ’ ಎನ್ನುತ್ತಾ ಹೊರಗೆ ಬಂದು ನೋಡಿದಳು. ಯಾಕೋ ಇದ್ದಕ್ಕಿದ್ದಂತೆ ಅವಳ ಮನಸ್ಸು ಬೇಸರಗೊಂಡು ಈ ಹಾಳ್ ಕಕ್ಕಸು ಗುಂಡಿಯನ್ನು ಮುಚ್ಚಿಸಲು ಗಂಡ ಎಂಬ ಕಠೋರನಿಂದ ಆಗುತ್ತಿಲ್ಲವಲ್ಲಾ ಎಂದು ಮನಸೊಳಗೇ ನೊಂದುಕೊಂಡು ‘ಲೋ ಚೆಲ್ವ ವೋಟ್ಲೆಲಿ ನಿಮ್ಮಯ್ಯ ಇರ್‍ಬೋದು ಕರ್‍ಕಂಬರೋಗು, ಏನಾರಮಾಡಿ ಎತ್ತಾಕ್ ಬುಡ್ಲಿ ಈಚ್ಗೆ’ ಎಂದು ಹೇಳಿ ‘ಯಾರ್‍ಯಾರ್‍ಗೋ ಯೇಳ್‌ಗೀಳಿಯ ಜ್ವಾಕೆ. ಆಮೆಕದೊಂದ್ ಜಗಳಾದದು’ ಎನ್ನುತ್ತಾ ಹೇಳಿ ಕಳಿಸಿದಳು.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಚೆಲುವ ತನ್ನ ಬಣ್ಣದ ಬುಗುರಿಗೆ ಇಂಥಾ ಗತಿ ಬಂತಲ್ಲಾ, ಅದನ್ನು ಯಾವ ರೀತಿಯಲ್ಲೂ ಈಗ ಮೇಲೆತ್ತಲು, ಮತ್ತೆ ದಾರಸುತ್ತಿ ಗಾರೆ ನೆಲದ ಮೇಲೆ ಬಿಟ್ಟು ಆಡಲು ಆಗುವುದಿಲ್ಲ ಎಂದು ಇನ್ನಷ್ಟು ನೊಂದುಕೊಂಡ. ಮನೆಯವರು ಆ ಕಡೆ ಈ ಕಡೆ ಎಲ್ಲಿಯಾದರೂ ಹೋದಾಗ ಕಕ್ಕಸು ಗುಂಡಿಯ ಮೇಲೆ ಹೊದಿಸಿರುವ ತೆಂಗಿನ ಗರಿಗಳನ್ನು ಸರಿಸಿ ಕೊಕ್ಕೆ ಹಾಕಿ ಬುಗುರಿ ಎತ್ತಿಕೊಳ್ಳಬೇಕೆಂದಿದ್ದ ತೃಣಮಾತ್ರ ಆಸೆ ಈಗ ಮತ್ತಷ್ಟು ನುಚ್ಚುನೂರಾಗಿತ್ತು. ಆ ಹಂದಿ ಏಲಿನ ಬಗ್ಗಡದಲ್ಲಿ ಜಿಗಿದಾಡಿ, ಬುಗುರಿ ಬಿದ್ದಿರುವ ಗುರುತನ್ನೇ ಧ್ವಂಸಮಾಡಿಬಿಟ್ಟಿರುತ್ತದೆ; ಅಕಸ್ಮಾತ್ ಹಂದಿಯನ್ನು ಎತ್ತುವಾಗ ಬೇರೆಯವರಿಗೆ ಸಿಕ್ಕಿದರೂ ಕೂಡ ಅಪ್ಪನಿಂದ ತನ್ನ ಕೈಗೆ ಬರುವುದಿಲ್ಲ ಎಂದುಕೊಂಡ. ಹಾಗೆ ಯೋಚಿಸುತ್ತಾ ಹೋಟೆಲಿಗೆ ಬಂದು, ತನ್ನ ಅಪ್ಪ ಗಲ್ಲಾದ ಮೇಲೆ ಕುಳಿತಿರುವ ವಿಶೇಷ ಭಂಗಿಯನ್ನು ಗಮನಿಸಿ ಮೆಲ್ಲಗೆ ತನ್ನ ತಾತ ಗುಂಜಾರಯ್ಯನ ಬಳಿಬಂದು ಹಂದಿ ಬಿದ್ದಿರುವ ಸುದ್ದಿಯನ್ನು ಮುಟ್ಟಿಸಿದ. ಗುಂಜಾರಯ್ಯ ಒಮ್ಮೆ ಬೆಚ್ಚಿದಂತೆ ನೋಡಿ ಬೊಂಡ ಬೇಯಿಸುತ್ತಿದ್ದ ಬಾಂಡ್ಲಿಯೊಳಗೆ ಹಿಟ್ಟನ್ನು ಹಾಕುತ್ತಾ, ‘ಯೇಯ್, ನಿಜಯೇಳಿಯೋ ಏನ್ ತಮಾಸೆಯಾಡಿಲಾ, ಅದೆಂಗ್ ಬಿದ್ದೋಯ್ತು ಅದ್ರೊಳಕೆ. ಏನೆಂತದು. ದೊಡ್‌ದೋ, ಚಿಕ್‌ದೋ’ ಎಂದ. ‘ವೋಗಪ್ಪೋ ಸುರ್‍ರನ್ ಬಾ. ಇಲ್ಲೇ ಕುಂತಿದ್ರೆ ಆಮೆಕದೇ ಪೋಯ’ ಎಂದು ಬೇಸರಿಸಿ, ಬೇಗ ಬಂದು ಏನಾದರು ಮಾಡಿ ಹಂದಿ ಎತ್ತಿದರೆ ಬುಗುರಿ ಸಿಗಬಹುದು ಎಂದು ಊಹಿಸಿಕೊಂಡಂತೆಯೇ ‘ತಾಡ್ಲ ಇನ್ನೊಂದೊಬ್ಬೆ ಬೊಂಡ ಬೇಯಿಸ್ ಬುಟ್ಟು ಬತ್ತಿನಿ’ ಎಂದ. ಚೆಲುವ ಸಿಟ್ಟಿನಿಂದ ಹಿತ್ತಲಿಗೆ ಬಂದು ಹೊಂಗೆ ಮರದ ನೆರಳಲ್ಲಿ ಕುಳಿತು ಸಾಯುತ್ತಿರುವ ಹಂದಿಯನ್ನು ಕಲ್ಪಿಸಿಕೊಳ್ಳುತ್ತಾ, ಅಪ್ಪನ ಕೊರಡು ಮೀಸೆಗಳ ಮರೆಯಲ್ಲಿ ಹಂದಿಯ ವಿಚಾರ ತಿಳಿದರೆ ಏನಾಗುತ್ತದೆಂದು ಭಾವಿಸುತ್ತಾ, ತನ್ನ ಬುಗುರಿ ಹೀಗಾಯಿತಲ್ಲಾ ಎಂದು ಸಂಕಟಗೊಳ್ಳುತ್ತಾ ಆಕಾಶವನ್ನು ನೋಡಿದ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
*
ಚೆಲುವನ ತಾತ ಗುಂಜಾರಯ್ಯ ಹೋಟೆಲಲ್ಲಿ ಬೊಂಡವನ್ನು ಬೇಯಿಸಿಯೇ ಹಿತ್ತಲಿಗೆ ಬರಬೇಕಾಗಿತ್ತು. ಆತುರದಲ್ಲಿ ಹಸಿಹಸಿಯಾಗಿಯೇ ಚೆನ್ನಾಗಿ ಬೇಯಿಸದೆ ಬೊಂಡವನ್ನು ಬಾಂಡ್ಲಿಯಿಂದ ಎತ್ತುಹಾಕಿ, ಇನ್ನೊಂದು ‘ವಬ್ಬೆ’ ಹಾಕುವ ತೀರ್ಮಾನದಲ್ಲಿ ಭರಭರನೆ ಬೊಂಡದ ಹಿಟ್ಟನ್ನು ಕೈಯಿಂದ ಬಾಂಡ್ಲಿಗೆ ಹಾಕುತ್ತಾ, ಕೈಸುಟ್ಟುಕೊಳ್ಳುತ್ತಾ, ಕಕ್ಕಸು ಗುಂಡಿಗೆ ಬಿದ್ದಿರುವ ಹಂದಿಯ ದೃಶ್ಯವನ್ನೇ ಯೋಚಿಸಿದ. ಕಳೆದಬಾರಿ ಊರೂರು ಸುತ್ತಿ ಅಲೆದು ಮೇಯುವ ತಿಪ್ಪೇಗೌಡರ ಕೋಣ ಮೇಯುತ್ತಾ ಬಂದು ಇದೇ ಕಕ್ಕಸುಗುಂಡಿಗೆ ಬಿದ್ದಿದ್ದಾಗ ಯಮಪ್ರಯತ್ನ ಪಟ್ಟು ಅದನ್ನು ಮೇಲೆತ್ತಿದ್ದಾಗ ಉಂಟಾಗಿದ್ದ ರೇಜಿಗೆ, ವಾಸನೆ, ಅಸಹ್ಯಗಳೆಲ್ಲ ನೆನಪಾದವು. ಆ ‘ಏಲ್ ಗುಂಡಿ’ಯನ್ನು ಮುಚ್ಚಿಸುವ ಯೋಜನೆಯನ್ನು ಬಹಳ ಸಲ ಹಾಕಿಕೊಂಡಿದ್ದರೂ ಕೂಡ ಅದು ತನ್ನ ಹಿರಿಮಗ ಚಿಕ್ಕಣ್ಣನಿಂದ ಸಾಧ್ಯವಾಗದೆ ವಿಫಲವಾಗಿತ್ತು. ಇಂಥಾ ಎಷ್ಟೋ ದೂರುಗಳು ಚಿಕ್ಕಣ್ಣನ ಆ ಕಕ್ಕಸು ಗುಂಡಿಯ ಮೇಲೆ ಬಂದಿದ್ದವು. ತಿಪ್ಪೇಗೌಡರ ಕೋಣ ಆ ಗುಂಡಿಗೆ ಬಿದ್ದುಹೋಗಿದ್ದಾಗ ‘ಹತ್ತಾಳು’ ಬಂದು ಹಗ್ಗ ಬಿಗಿದು ಒಂದು ದೊಡ್ಡ ಬಂಡೆಯನ್ನೇ ಎಳೆಯುವಂತೆ ಎಳೆದಿದ್ದಾಗ ಆಗಿನ ಈ ಏಲುಗುಂಡಿ ಅದರ ಎರಡು ಪಟ್ಟು ವಿಸ್ತಾರವಾಗಿ ದೊಡ್ಡ ಗುಂಡಿಯೇ ಆಗಿತ್ತು. ಕೊನೆಗೂ ಕೋಣ ಒಂದು ದಿನವೆಲ್ಲ ಆ ಗುಂಡಿಯಲ್ಲೇ ಇದ್ದಿದ್ದರಿಂದ ಹೊರಗೆ ಬಂದ ಸ್ವಲ್ಪದರಲ್ಲೇ ಸತ್ತುಹೋಗಿತ್ತು. ಮುಖ್ಯವಾಗಿ ಅದನ್ನು ಮೇಲೆತ್ತಲು ಮಾಡಿದ್ದ ಹಿಂಸಾತ್ಮಕ ತಂತ್ರದಿಂದಲೇ ಬಹುಪಾಲು ನೋವುಂಟಾಗಿ ಸತ್ತಿತ್ತು. ಹಾಗೆ ಸತ್ತಿದ್ದಕ್ಕೆ ತಿಪ್ಪೇಗೌಡರು ದಂಡರೂಪವಾಗಿ ಹಣ ಕೇಳಿದಾಗ ಚಿಕ್ಕಣ್ಣ ರೌಡಿಗಳ ತರ ಮಾತನಾಡಿ- ‘ಅಲ್ಲಾ ಗೌಡ್ರೆ ಆ ಏಲ್ ಗುಂಡಿಗೆ ನಾವು ಏಳ್ ಕೊಟ್ಟಿದ್ದೆವೆ ಏನಾರ. ಇಂಥಿಂತವ್ರ ಯಮ್ಮೆ ಬತ್ತವೆ, ಕುರಿಗೊಳ್ ಬತ್ತವೆ, ಅವೆಲ್ಲನು ಒಳಕ್ಎಳ್ಕಬುಡು ಅಂತಾ. ನಿಮ್ಮೆಮ್ಮೆಗೆ ಬುದ್ದಿ ಇದ್ದಿದ್ರೆ ಅದ್ಯಾಕ್ ಬತ್ತಿತ್ತು ನಮ್ಮತಿಪ್ಪೆತಕೆ- ಇದೊಳ್ಳೆ ಸರೋಯ್ತಪ್ಪಾ. ನಮ್ಮನುಕೂಲ್‌ಕೆ ನಾವು ಕಕ್ಕಸ್ ಗುಂಡಿ ಮಾಡ್ಕಂದಿದ್ದೋ- ಬಂದ್ ಬಿದ್ದು ಸಾಯ್ತು. ಅದ್ಕೆ, ನಮ್ಮೊಣೆ ಏನಿದ್ದದು. ಯಾವ್ ದಂಡನು ಇಲ್ಲ ಏನೂ ಇಲ್ಲ ಸ್ವಾಮಿ’ -ಎಂದು ರೋಪು ಹಾಕಿ ಕಳಿಸಿಬಿಟ್ಟಿದ್ದ. ಆಗಿನಿಂದಲೂ ಈ ಏಲುಗುಂಡಿಗೆ ಒಂದು ದೊಡ್ಡ ಇತಿಹಾಸವೇ ಬಂದು ಬಿಟ್ಟಿದೆ. ಊರವರೆಲ್ಲ ಏಲ್ ಗುಂಡಿಯ ಮೇಲೆ ಯಾವುದಾದರು ತಗಡನ್ನು ಹೊದಿಸು ಇಲ್ಲವೆ ಕಲ್ಲು ಚಪ್ಪಡಿ ಹಾಕಿಸು ಎಂದು ಹೇಳಿದ್ದರೂ ಕೂಡ ಯಾವುದನ್ನು ಮಾಡಿಸಲು ಆಗಿರಲಿಲ್ಲ. ಕೋಣ ಬಿದ್ದಿದ್ದರಿಂದ ಗುಂಡಿ ವಿಸ್ತಾರವಾಗಿಬಿಟ್ಟಿತ್ತು. ಮಣ್ಣು ಕುಸಿದು ಹಾಳಾಗಿತ್ತು. ಹೀಗಾಗಿ ಅಷ್ಟಗಲಕ್ಕು ಕಲ್ಲು ಇಲ್ಲವೆ ತಗಡನ್ನು ಮುಚ್ಚಿಸಲು ಚಿಕ್ಕಣ್ಣನಿಗೆ ಅಸಾಧ್ಯವಾಗಿತ್ತು. ಸುಲಭವಾಗಿ ಸಿಗುವ ತೆಂಗಿನ ಗರಿಗಳನ್ನು ಈಗ ಮೇಲೆ ಮುಚ್ಚಿದ್ದ. ಹೀಗೆ ಮುಚ್ಚಿದ್ದೇ ಆ ನಂತರ ಊರಿನ ಸುತ್ತಲೂ ಹಬ್ಬಿಕೊಳ್ಳುವ ಎಷ್ಟೋ ತಮಾಷೆಗಳಿಗೆ, ದುರಂತಗಳಿಗೆ ದಾರಿ ಮಾಡಿಕೊಟ್ಟಿತ್ತು.
*
ಗೌಡರ ಆ ಕೋಣವನ್ನು ಆನಂತರ ಮಾದಿಗರ ಯಾಲಕ್ಕಯ್ಯ ಬಂದು ನೋಡಿ, ಚೆನ್ನಾಗಿ ಬಿಸಿನೀರಿಂದ ತೊಳೆಸಿ, ಕೊಯ್ದು ಮಂಕರಿ ತುಂಬ ಬಾಡು ಮಾಡಿಕೊಂಡು ಹೋಗಿದ್ದನ್ನು ಕೇಳಿ ಗೌಡರ ತಲೆ ತಿರುಗಿತ್ತು. ‘ಆ ಹೊಲ್ ಮಾದುಗ ನನ್ ಮಕ್ಕುಳು ಬೇಕಂತ್ಲೆ ಕೋಣುನ್ನ ಏಲ್ ಗುಂಡಿಗೆ ಬೀಳ್ಸಿ ತಿನ್ನುಕೆ ಈ ಕರಾಮತ್ ಮಾಡವರೆ’ ಎಂದು ಊರಲ್ಲೆಲ್ಲ ಮಾತಾಯಿತು. ಆದರೂ ಆ ಕೋಣನ ಬಾಡು ಬಹಳಷ್ಟು ಜನರಿಗೆ ತಲುಪಿದ್ದರಿಂದ ಯಾರೂ ಹೆಚ್ಚಾಗಿ ಆಗ ತಲೆಕೆಡಿಸಿಕೊಂಡಿರಲಿಲ್ಲ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಕೆಲವು ದಿನದ ನಂತರ ಪೇಟೆಯಲ್ಲಿ ಓದಿ ಬಂದಿದ್ದ ಪಡ್ಡೆ ಹುಡುಗರು ‘ಚಿಕ್ಕಣ್ಣನ ಏಲ್ ಗುಂಡಿ ಕೋಣನನ್ನ ಹಿಡಿಯೋ ಖೆಡ್ಡಾ ಕಣ್ರೋ’ ಎಂದು ಗೇಲಿ ಮಾಡುತ್ತಿದ್ದರಾದರೂ ಚಿಕ್ಕಣ್ಣ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗೆ ಇದೆಲ್ಲವನ್ನೂ ಬೊಂಡ ಹಾಕುತ್ತಿದ್ದಂತೆಯೇ ನೆನೆಸಿಕೊಂಡಾಗ ಇಡೀ ಬಾಂಡ್ಲಿಯೇ ಕಕ್ಕಸು ಗುಂಡಿಯಂತೆ ಕಂಡು ವಾಕರಿಕೆ ಬಂದು, ‘ತಥ್ ಇವುನವ್ವುನ್ನಾ ಕೇಯನೆಣ್ವಿ ಸರಿಯಿಲ್ಲಾ. ಎಷ್ಟೊತ್ತಾಯ್ತು ಎಣ್ಣೆಗಾಕಿ, ಇನ್ನೂ ಬೇಯ್ದಿಲ್‌ವಲ್ಲಾ’ ಎಂದು ಬೆಂಕಿಯನ್ನು ಹೆಚ್ಚುಮಾಡಿ-ಕೊನೆಗೂ ಬೇಯಿಸಿ ತನ್ನ ಮಗ ಚಿಕ್ಕಣ್ಣನಿಗೆ ಇದನ್ನು ಗುಟ್ಟಾಗಿ ತಿಳಿಸಿ ಹಿತ್ತಲಿಗೆ ಬಂದ.
ಚೆಲುವ ತನ್ನ ತಾತನಿಗೆ ಬುಗುರಿ ಬಗ್ಗೆ ಹೇಳಬೇಕೆಂದುಕೊಂಡು ಒಮ್ಮೆ ನಿರ್ಧರಿಸಿ ಬೇಡ ಎಂದುಕೊಂಡು, ‘ಯೀಗೆಂಗಪ್ಪಾ ಯೀಚುಕ್ ತೆಗೆದಾಕುದು ಹಂದಿಯಾ’ ಎಂದ. ಗುಂಜಾರಯ್ಯ ಗುಂಡಿಯ ಗರಿಗಳನ್ನು ಮೆಲ್ಲಗೆ ಸರಿಸಿ ನೋಡಿದ. ಒಂದೇ ಬಾರಿಗೆ ಹಂದಿ ನೆಗೆಯುವ ಪ್ರಯತ್ನಮಾಡಿ ಬಡಕ್ ಎಂದು ಒಳಗೇ ಬಿದ್ದುಕೊಂಡು ಕೊಯ್‌ಗುಟ್ಟಿತು. ಹಾಗೆ ಜಿಗಿದದ್ದರಿಂದ ಗುಂಜಾರಯ್ಯನ ಮೂಗಿನ ಮೇಲೆ ಅವರೆಕಾಳಿನ ಗಾತ್ರದ ಏಲಿನ ಸಣ್ಣ ಕಣ ಬಂದು ನೊಣದಂತೆ ಕುಳಿತುಬಿಟ್ಟಿತು. ಸಾದ್ವಿತನದ ಗುಂಜಾರಯ್ಯ ಅತ್ಯಂತ ಸಿಟ್ಟಿನಿಂದ, ಅವಮಾನಿತನಾದವನಂತೆ ಭಾವಿಸಿ, ಧರ್ಮರಾಯ ಸ್ವರ್ಗಾರೋಹಣದ ಕೊನೆಯಲ್ಲಿ ತನ್ನ ಕಿರುಬೆರಳನ್ನು ನರಕಕ್ಕೆ ಅದ್ದಿದ್ದಂತೆ ಆಗಿದ್ದಾಗ ಆದಂತೆಯೇ ತನಗೂ ಆಯಿತೇನೋ ಎಂದುಕೊಂಡು ಎಲೆಯೊಂದರಿಂದ ಮೂಗು ಸೀಟಿಕೊಂಡು ವಾಪಸ್ಸು ಬಂದು, ‘ಒಳಗೇ ಸಾಯ್ಲಿ ಅವುಳ್ ರತ್ತನಾ ಕೇಯುಂದು’ ಎಂದು ಬೈಯ್ಯುತ್ತಾ, ಇದರ ಯವಾರವನ್ನು ಮಗನಿಗೇ ವಹಿಸುವುದು ಸರಿ ಎಂದು ಹೋಟೆಲಿಗೆ ಬಂದುಬಿಟ್ಟ.
ಚೆಲುವ ನಿರಾಶೆಯಿಂದ, ತನ್ನ ಬುಗುರಿ ಇನ್ನು ಯಾವತ್ತೂ ಕೂಡ ತನ್ನ ಕೈಗೆ ಬರುವುದಿಲ್ಲವೇನೋ ಎನ್ನುತ್ತಾ ತನಗೆ ಅರಿವಿಲ್ಲದೆಯೇ ಬುಗುರಿಯ ದಾರವನ್ನು ಬೆರಳುಗಳಿಗೆ ಬಿಗಿಯಾಗಿ ಸುತ್ತಿ ಸುತ್ತಿಕೊಳ್ಳುತ್ತಾ ಫಳಕ್ ಎಂದು ಕಣ್ಣೀರನ್ನು ಬೀಳಿಸಿದ. ಇದ್ದಕ್ಕಿದ್ದಂತೆ ಇಡೀ ಹಂದಿ, ಏಲುಗುಂಡಿ ಮತ್ತು ಊರಿನ ಎಲ್ಲ ಆಗುಹೋಗುಗಳು ಕೂಡ ವಿಷ್ಣುವಿನ ವರಾಹ ಅವತಾರದ ಬಗ್ಗೆ ಹರಿಕತೆ ದಾಸರು ಹೇಳಿದ್ದ ವಿವರದಂತೆ ಕಂಡುಬಂದು ಹೆದರಿಕೆ ಮತ್ತು ವ್ಯಾಕುಲದಿಂದ ಒಳಗೊಳಗೇ ಹಿಂಸೆಪಡತೊಡಗಿದ. ಗುಂಡಿಗೆ ಬಿದ್ದ ಹಂದಿ ಚೆಲುವನ ಬುಗುರಿಯ ಯಾವ ಕುರುಹೂ ಉಳಿಯದಂತೆ ಅಳಿಸಿಹಾಕಿತ್ತು. ಆ ಬುಗುರಿಯನ್ನು ಆತ ಗಾರೆನೆಲದ ಮೇಲೆ ಬಿಟ್ಟು ಗುಯ್ ಗುಡಿಸುವಾಗ ಬೀದಿ ಹೈಕಳು ಅದರ ಸೊಬಗು, ಹೊನಪು, ತಿರುಗುವ ರೀತಿಗಳೆಲ್ಲದರ ಬಗ್ಗೆ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾಗ ಆನಂದಾತಿರೇಕದಲ್ಲಿ ಒಳಗೊಳಗೇ ಖುಷಿ ಪಡುತ್ತಿದ್ದುದೆಲ್ಲ ಲವಲೇಶವೂ ಈಗ ಇಲ್ಲದಂತಾಗಿ ತನ್ನ ಅಪ್ಪನ ಬಗ್ಗೆ ಚೆಲುವ ಸಿಟ್ಟುಗೊಂಡ.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಅವುನು ಯಾಕಾರು ಸಾಯುದಿಲ್ಲ ಬೇವಾರ್ಸಿ, ನನ್ ಬುಗುರಿನೆಲ್ಲ ಇಂಗೇ ಮಾಡ್ಡ. ಅವತ್ತು ಕೊಡ್ಲಿಯಿಂದ ವಳ್ಕಿ ಮೂರು ಬುಗುರಿಗೊಳ್ನೂ ಸೀಳಾಕಿ ವಲೆಗಾಕ್ದ. ಇನ್ನೊಂದ ಕಣ್ಣುಗ್ ಕಾಣ್ದಂಗೆ ದೂರಕ ಬಿಸಾಕ್ದ. ಇವತ್ತು ನೋಡುದ್ರೆ ‘ಯಾವ ಬುಗ್ರಿಯೊ ನೀ ಆಡುದು; ತತ್ತರೋ ಸೂಳೆಮಗ್ನೆ’ ಅಂತಾ ಕಿತ್ಕಂಡು ‘ಇನ್ನೊಂದ್ಸಾರಿ ನಿನ್ ಕೈಲೇನಾರ ಬುಗ್ರಿ ಕಂಡ್ರೆ ಅಮೆಕೆ ನಿನ್ನೇ ಸೀಳಾಕ್ತಿನಿ’ ಅಂತಾ ಬೈಯ್ದು ಕಕ್ಕಸ್ ಗುಂಡಿಗೆ ಹಾಕ್ದ… ಎಂದು ಯೋಚಿಸುತ್ತಾ ಮತ್ತೆ ಹೊಂಗೆ ಮರಕ್ಕೆ ಹತ್ತಿ ಕುಳಿತು, ಅದೇ ಕಕ್ಕಸು ಗುಂಡಿಯನ್ನು ನೋಡುತ್ತಾ ಲೆಕ್ಕಹಾಕತೊಡಗಿದ. ಯಾರು ಯಾರದೋ ಕೋಳಿಗಳು, ಕುರಿಗಳು ಬಂದು ಅದರೊಳಗೆ ಬಿದ್ದು ಸತ್ತಿದ್ದಾಗ ಉಂಟಾಗಿದ್ದ ಜಗಳಗಳಲ್ಲಿ ಅಪ್ಪ ವಿಕಾರವಾಗಿ ಕುಣಿದಾಡಿ ದೊಡ್ಡ ಚಾಕುತಂದು ಹೆದರಿಸಿ ಸುಮ್ಮನಾಗಿಸುತ್ತಿದ್ದೆಲ್ಲ ನೆನಪಾಯಿತು. ಬುಗುರಿಯ ಗಿರಿಗಿರಿ ಸುತ್ತುವಿಕೆ ಆತನ ಮನಸ್ಸು ತಲೆ ಇಡೀ ದೇಹದ ಸುತ್ತ ಬುಗುಬುಗನೆ ಸುತ್ತು ಹಾಕತೊಡಗಿತು. ಆ ನಡುವೆ ಅಸ್ತವ್ಯಸ್ತವಾದ ಕಲಸುಮೇಲೋಗರವಾದ ಇಡೀ ಮನೆಯ ಚಿತ್ರಗಳು ಸೇರಿಕೊಂಡು ಹಿಂಸೆಯಾಗಿ ತಳಮಳಗೊಂಡ.
*
ಚಿಕ್ಕಣ್ಣನ ಹಿತ್ತಲಲ್ಲಿ ಕಟ್ಟಿಸಿದ್ದ ಕಕ್ಕಸುಗುಂಡಿ ಇಡೀ ಊರಲ್ಲೇ ಮೊದಲನೆಯದು. ಅದು ಊರಿಗೆ ಹೊಸ ವ್ಯವಸ್ಥೆಯಾಗಿ ಸೇರಿಕೊಂಡಿತ್ತು. ತನ್ನ ತಮ್ಮ ಶಾಂತರಾಜನ ಮದುವೆಗೆ ಮೈಸೂರಿಂದ ಹೆಣ್ಣು ತಂದಿದ್ದಾಗ, ನೆಂಟರಿಗೆ, ಹೆಂಗಸರಿಗೆ ಕಕ್ಕಸು ಹೋಗಲು ತೊಂದರೆಯಾಗುತ್ತದೆಂದು ಯೋಚಿಸಿ ಕಟ್ಟಿಸಿದ್ದ ಈ ವ್ಯವಸ್ಥೆ ಮದುವೆ ದಿನದಲ್ಲೇ ಕೈಕೊಟ್ಟಿತ್ತು. ಭರ್ಜರಿ ಊಟದ ನಂತರ ಆ ಕಕ್ಕಸು ಗುಂಡಿಗೆ ಬಂದಿದ್ದ ಹಲವಾರು ಹೆಂಗಸರ ಪಾಯಿಕಾನೆಯಿಂದ ತುಂಬಿಹೋಗಿತ್ತು. ಯಥಾವತ್ ಆಧುನಿಕ ಕಕ್ಕಸು ಮನೆಯಂತೆ ಕಟ್ಟಿಸಿದ್ದರಾದರೂ ಆ ಕಕ್ಕಸೆಲ್ಲ ಸಂಗ್ರಹಗೊಳ್ಳಲು ಡ್ರೈನೇಜ್ ವ್ಯವಸ್ಥೆಗೆ ಬದಲು ಹಿಂಭಾಗಕ್ಕೆ ಒಂದುವರೆ ಆಳುದ್ದ ಗುಂಡಿ ತೆಗೆದು ಅದೆಲ್ಲವೂ ಅಲ್ಲಿ ಬೀಳುವ ವ್ಯವಸ್ಥೆ ಮಾಡಲಾಗಿತ್ತು. ಅದು, ಮದುವೆಯ ಮಾರನೆ ದಿನವೇ, ಗುಂಡಿ ತುಂಬಿ ಹೋಗಿ ಭಯಾನಕ ವಾಸನೆ ಮದುವೆ ಮನೆಯನ್ನು ಕವುಚಿಕೊಂಡು ಎಲ್ಲರನ್ನು ತಾಳ್ಮೆ ಪರೀಕ್ಷೆಗೆ ಒಡ್ಡಿತ್ತು. ಹೆಣ್ಣಿನ ಕಡೆಯ ಯಾವನೋ ಒಬ್ಬ ಆ ಗದ್ದಲದಲ್ಲಿ ಯಾರೋ ಒಬ್ಬಳ ಜೊತೆ ಲೈಂಗಿಕ ಸಂಬಂಧ ಏರ್ಪಡಿಸಿಕೊಳ್ಳಲು ಸಂಚುಮಾಡಿ ಆ ರಾತ್ರಿ ಹಿತ್ತಲಲ್ಲಿದ್ದ ಕಕ್ಕಸ್ ಗುಂಡಿಯ ಬಳಿ ಗೊತ್ತಿಲ್ಲದೆ ಆಕೆ ಜೊತೆ ಹೋಗಿ ತನಗರಿವಿಲ್ಲದೆಯೇ ಗುಂಡಿಗೆ ಕಾಲು ಜಾರಿ ಬಿದ್ದು ಬಚಾವಾಗಿ ಕಾಲುತುಂಬ ಏಲುಮಯ ನೀರನ್ನು ಮೆತ್ತಿಸಿಕೊಂಡು ಬಂದು ಎಲ್ಲರಿಗೂ ದೊಡ್ಡ ಹಾಸ್ಯದ ಸಂಗತಿಯಾಗಿ ಬಿಟ್ಟಿದ್ದ. ಆಗ ಆತನೇ ಒಂದು ವಾದವನ್ನು ಹೂಡಿ- ‘ಈ ಜುಜುಬಿ ಹಳ್ಳಿಗಳಿಗೆ ಹೆಣ್ಣು ಕೊಡೋದು ಬ್ಯಾಡ ರಂಗಪ್ಪನೋರೇ ಅಂತಾ ನಮ್ಮ ಫಾದರ್ ಇನ್ಲಾ ಅತ್ರ ಸಾವುರ್ ಸಾರಿ ಬಾಯ್ ಬಡ್ಕಂಡೆ. ಆದ್ರೆ ಆ ಹಲ್ಕಾ ಫಾದರ್‌ಇನ್ಲಾ ನನ್ ಮಾತ ಕೇಳ್‌ಲಿಲ್ಲ. ಯಾವುದೋ ದೆವ್ವ ನನ್ನನ್ನು ಆ ಕಕ್ಕಸ್ ಗುಂಡಿತನಕ ದರದರ ಎಳೆದುಕೊಂಡಂತೆ ಎಳೆದುಕೊಂಡುಹೋಗಿ ಅದರೊಳಕ್ಕೆ ತಳ್ಳುವ ಪ್ರಯತ್ನಮಾಡ್ತು. ಬೈಚಾನ್ಸ್ ತಪ್ಪಿಸ್ಕಂಡ್ ಓಡ್ಬಂದೆ. ಥೂ ಥೂ ಎಂತಾ ವಾಸನೆ. ಹಾಳಾದ್ ಹಳ್ಳಿ ಜನ ಅದೇನ್ ತಿಂತಾರೋ ನನಗೆ ಗೊತ್ತಾಗೋಲಪ್ಪಾ. ಇಂಥಾ ದೆವ್ವ ಪಿಶಾಚಿಗಳಿರೋ ಮನೆಗೆ ಹೆಣ್ಣು ಕೊಡಬಾರದಿತ್ತು’ ಎಂದು ಅವಮಾನ ತಡೆಯಲಾರದೆ ಹೀನಾಮಾನವಾಗಿ ಗಂಡಿನ ಮನೆಯನ್ನು ಹಳಿಯತೊಡಗಿದ್ದ. ಆ ವೇಳೆಗೆ ಕುಡಿತದಲ್ಲಿ ಊರಿಗೆ ಚಾಂಪಿಯನ್ ಆಗಿದ್ದ ಅತಾರಿ ಬಂದವನು ಹೆಣ್ಣಿನ ಕಡೆಯವನ ಮೇಲೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಕೊನೆಗೆ ಗಂಡುಬಂದು ಇಬ್ಬರಿಗೂ ಕೈಮುಗಿದಾಗ ಗದ್ದಲ ಮುಗಿದಿತ್ತು. ಇಂಥಾ ಹತ್ತಾರು ಹಗರಣಗಳ ಕಕ್ಕಸು ಗುಂಡಿ ಈಗ ಒಂದೊಂದೂ ಇತಿಹಾಸದ ಹೊಲಗೇರಿಯ ಬದುಕಿನ ಪುಟಗಳನ್ನು ತೆರೆದಿಡುವಂತೆ ಗುಂಜಾರಯ್ಯನ ತಲೆ ಒಳಗೆ ಬಿಡಿಸಿಕೊಳ್ಳುತ್ತಾ ಬಂದವು. ಚಿಕ್ಕಣ್ಣನಿಗೆ ಹಂದಿ ಬಿದ್ದಿರುವ ಸಂಗತಿ ತಿಳಿದ ಮೇಲಂತೂ ಆನಂದಾತಿರೇಕಕ್ಕೊಳಗಾಗಿ ಬಯಸದೆ ಬಂದ ಭಾಗ್ಯ ಎನ್ನುತ್ತಾ ಆ ಬಗ್ಗೆ ಯೋಜನೆ ಹಾಕತೊಡಗಿದ. ಮನೆಯ ಹೆಂಗಸರು ಈ ಘಟನೆಯಲ್ಲಿ ಯಾವುದೋ ಕೇಡಿನ ಸೂಚನೆ ಎನ್ನುವಂತೆ ಲೆಕ್ಕಹಾಕತೊಡಗಿದರು. ಚೆಲುವನ ಅವ್ವ ಯಾಕೋ ಹೆದರಿ ಮಗನನ್ನು ಕೂಗಿಕೊಂಡಳು. ಹರಿಕತೆಯಲ್ಲಿ ಹೇಳಿದ್ದ ಕತೆ ಅವಳಿಗೂ ನೆನಪಾಗಿ ‘ಅಯ್ಯೋ ದೇವ್ರ, ಸ್ವಾಮಿ ಹಂದಿ ರೂಪ ತಾಳಿತ್ತು ಅಂತಾ ಹೇಳ್ತಿದ್ರಲ್ಲಪ್ಪಾ. ರಾಕ್ಷಸುನ್ನಾ ಸಾಯ್ಸುಕೆ ಆ ಅವುತಾರ ಎತ್ತಿ ಏಲ್ ಮನವೊಳಗಿದ್ದೋನ ಸಿಗುದಾಕ್ತಂತಲ್ಲಾ…’ ಎಂದು ಅಸ್ಪಷ್ಟವಾಗಿ ನೆನಪಿಸಿಕೊಂಡಳು. ‘ಲೋ ಚೆಲುವಾ, ಚೆಲುವಾ, ಬಾರೋ ನಿನಬಾಯುಗ್ ನನ್ ರಕ್ತ ಹಾಕ, ಎಲ್ಲಿದ್ದಿಯೋ’ ಎಂದು ಜೋರಾಗಿ ಕೂಗಿಕೊಂಡಳು. ಯಾವತ್ತೂ ಇಲ್ಲದ ಅವ್ವ ಇವತ್ತು ಏಕೆ ಹೀಗೆ ಬೈಯ್ಯುತ್ತಿದ್ದಾಳೆಂದು ಚೆಲುವ ಮನೆಯೊಳಗೆ ಬಂದು ಏನವ್ವಾ ಎಂದು ನಿಂತ. ಹಿತ್ತಲ ಮನೆಬಾಗಿಲಿಂದ ಕಕ್ಕಸು ಗುಂಡಿಯ ವಾಸನೆ ನಿಧಾನವಾಗಿ ಮನೆಯನ್ನು ಆವರಿಸಿ ವಾಸನೆ ತರಿಸುತ್ತಿದೆ ಎಂದು ಮೂಗು ಮುಚ್ಚಿಕೊಂಡ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
*
ವಿಷಾದವೆಂದರೆ ಚೆಲುವನ ಬುಗುರಿ ಯಾವ ಕಾರಣಕ್ಕೂ ಕೈಗೆ ಬರುತ್ತದೆ ಎಂಬ ಯಾವ ಕುರುಹೂ ಉಳಿಯಲಿಲ್ಲ. ‘ಆ ಗುಂಡಿ ತಂಟೆಗೆ ವೋಗ್ಬೇಡ. ಸಿಲೇಟ್ ತಕಂದು ಪಡಸಾಲೆ ಮ್ಯಾಲೆ ಕುಂತ್ಕ ಬರಿಯೋಗು. ರಜಾ ಇದ್ರೆ ವೋದ್ ಬ್ಯಾಡ ಅಂತಿದ್ದದೇನೋ’ ಎಂಬ ಮಾತು ಅವನಿಗೆ ಬಿತ್ತು. ಹೋಟೆಲ್ ತಿಂಡಿಗಳಿಗಾಗಿ ಅವನ ಅವ್ವ ಏನೆನೋ ಕೆಲಸ ಮಾಡುತ್ತಿದ್ದಳು. ಚೆಲುವ ಬೀದಿಗೆ ಬಂದು ಎಲ್ಲವನ್ನೂ ಜಗಿಯತೊಡಗಿದ. ಅಪ್ಪ ಹಂದಿಯನ್ನು ಹೇಗೆ ಮೇಲೆತ್ತುತ್ತಾನೆ, ಹಾಗೆ ಎತ್ತುವಾಗ ತನ್ನ ಬುಗುರಿ ಏನಾದರೂ ಸಿಕ್ಕಿದರೆ ಏನು ಮಾಡುತ್ತಾನೆ ಎಂದು ಲೆಕ್ಕಿಸಿದ. ಯಾವ ಪರಿಹಾರವೂ ಗೋಚರಿಸಲಿಲ್ಲ. ಸಪ್ಪೆ ಮೋರೆ ಹಾಕಿಕೊಂಡು ‘ನಾನು ಬುಗುರಿಯಾಡುದ್ರೆ ಅವುನ್‌ಗೇನು ಕಷ್ಟ’ ಎಂದು ತನ್ನೊಳಗೇ ಅಂದುಕೊಂಡ. ಬೆಳಿಗ್ಗೆ ಬೀದಿಯಲ್ಲಿ ಬುಗುರಿ ಆಡುತ್ತಿದ್ದಾಗ ಬಾರುಗೋಲು ತಂದು ಚಟೀರೆಂದು ಹೊಡೆದು ಬುಗುರಿಯನ್ನು ಕಿತ್ತುಕೊಂಡು ಹೋಗಿ, ಅವನ ಅಪ್ಪ ಆ ಕಕ್ಕಸು ಗುಂಡಿಗೆ ಬಿಸಾಡಿದ್ದ. ಅಪ್ಪನೇ ಒಂದು ದೊಡ್ಡ ರಾಕ್ಷಸನಂತೆ ಚೆಲುವನ ಮನಸ್ಸಿನಲ್ಲಿ ಸುಳಿದು ಬಂದ. ಹಾಗೆಯೇ ಆ ಮನೆಯ ಅವನ ಅವ್ವ, ಅಜ್ಜಿ, ಅತ್ತೆಯಂದಿರು ಇತ್ಯಾದಿಗಳ ಫೇಲವ ವಿಷಣ್ಣ ಮುಖಗಳು ಎದುರಾಗಿ ಅವರು ಎಂತದೋ ಭಯಂಕರ ರೋಗಗಳಿಂದ ಬಳಲುತ್ತಿರಬೇಕೆಂದು ಭಾವಿಸಿಕೊಂಡ. ಅವನ ಅವ್ವನ ಮಾತನ್ನು ಮೀರಿ ಹೋಟೆಲಿಗೆ ಬಂದ. ಅಲ್ಲಿ ಪರ್ಮಿನೆಂಟ್ ಗಿರಾಕಿಗಳಂತೆ ಸದಾ ಅಪ್ಪನ ಜೊತೆ ಇದ್ದೇ ಇರುತ್ತಿದ್ದ ಅತಾರಿಯನ್ನು ನೋಡಿದ. ಹಂದಿ ಮೇಲೆತ್ತುವ ಬಗೆಗೆ ಏನೇನು ನಿರ್ಣಯ, ಚರ್ಚೆಗಳನ್ನು ಕೈಗೊಳ್ಳುತ್ತಾರೆಂದು ತಿಳಿಯಲು ಚೆಲುವ ಬರುವ ಹೊತ್ತಿಗಾಗಲೆ ಸಾಕಷ್ಟು ಚರ್ಚೆ ಮುಗಿದಿತ್ತು. ಚಿಕ್ಕಣ್ಣ ಮತ್ತು ಅತಾರಿಯ ನೀಲಿನಕ್ಷೆಯಂತೆ ಬಿದ್ದಿರುವ ಹಂದಿಯನ್ನು ಲಪಟಾಯಿಸುವುದೇ ಸರಿ ಎಂದಾಗಿತ್ತು. ಆದರೆ ಒಳಗಿರುವ ಹಂದಿಯನ್ನು ಕೊಲ್ಲುವ ಕೆಲಸ ದುಸ್ಸಾಧ್ಯವಾಗಿತ್ತು. ಗುಂಡಿಯೊಳಗೇ ಅದನ್ನು ಕೊಲ್ಲುವುದು ಸಾಧ್ಯವೇ ಇರಲಿಲ್ಲ. ಹಂದಿ ಜಾತಿಯಂತಹ ಪ್ರಾಣಿಗಳು ‘ಸುಲುಬ್‌ರೇಟೆಲಿ’ ಪ್ರಾಣವನ್ನು ಬೇಗ ಕಳೆದುಕೊಳ್ಳುವಂತಹವಾಗಿರಲಿಲ್ಲ. ಹಾಗೇನಾದರೂ ತಿವಿದು, ಚುಚ್ಚಿ ಕೊಲ್ಲಲು ಹೊರಟರೆ ಅದು ಇಡೀ ಊರಿಗೇ ಗುಟ್ಟು ಗೊತ್ತಾಗುವಂತೆ ಶಬ್ದಮಾಡಿ ಕೊನೆಗೆ ಅದರ ಮಾಲೀಕನಿಗೆ ಸಂಗತಿ ತಿಳಿದು ರಂಪವಾಗಿ ತಮ್ಮ ನೀಲಿನಕ್ಷೆ ಹಾಳಾಗುತ್ತದೆಂದು ಯೋಚಿಸಿದರು. ಕೊನೆಗೆ ಅವರ ಯೋಚನೆಯಂತೆ ಇಷ್ಟು ತೀರ್ಮಾನಗಳಿಗೆ ಬಂದರು.
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಹಂದಿಯನ್ನು ಸಂಜೆತನಕ ಗುಂಡಿಯಲ್ಲೇ ಉಳಿಯಲು ಬಿಡಬೇಕು. ಅದು ವದ್ದಾಡಿ ವದ್ದಾಡಿ ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಭರ್ಜಿಯಿಂದ ತಿವಿಯುವ ಕೆಲಸ ಮಾಡಬೇಕು. ಹಾಗೂ ಸಾಯಲಿಲ್ಲ ಎಂದರೆ ಕಕ್ಕಸು ಗುಂಡಿಯೊಳಕ್ಕೆ ಇಳಿದು ಹಗ್ಗ ಬಿಗಿದು ಮೇಲೆತ್ತಿ ಮುಂದಿನ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರು. ಇಷ್ಟೆಲ್ಲಾ ನಡೆಯುವ ಕೊನೆ ಹಂತವನ್ನು ಕೇಳಿಸಿಕೊಂಡ ಚೆಲುವ ತನ್ನ ಬುಗುರಿಯ ಜೊತೆಗೆ ಹಂದಿ ಸಾಯುವುದನ್ನು ಕಲ್ಪಿಸಿಕೊಂಡ. ಅದನ್ನು ಸಾಯಿಸುವುದಾದರೂ ಯಾಕೆಂದು ಅವನಿಗೆ ತಿಳಿಯಲಿಲ್ಲ. ತನ್ನ ತಾತ ಇಂಥಾ ದುಸ್ಸಾಧ್ಯ ನೀಲಿನಕ್ಷೆಯ ಯೋಜನೆ ಸರಿಯಲ್ಲಾ ಎಂದು ಹೇಳಿದಾಗ ತಾತ ಮಾತ್ರವೇ ಸರಿ ಎನಿಸಿಬಿಟ್ಟಿತು.
ಅಂತೂ- ಹೋಟೆಲಿಗೆ ಗಿರಾಕಿಗಳು ಬಂದರು ಹೋದರು. ಬೊಂಡಗಳ ತಿಂದರು ಟೀ ಹೀರಿದರು. ಅಂತಾ ಇಂತಾ ಮಾತಾಡಿ ಬಿಸಿಲಿನ ಬಗ್ಗೆ ಬೈಯ್ದರು. ಮಳೆ ಈ ವರ್ಷವೂ ಕೈಕೊಡುತ್ತದೆಂದು ನಿರಾಶರಾದರು. ಹಾಗೆಯೇ ಬಂದ ಒಬ್ಬೊಬ್ಬರೂ- ಥೂ; ಇದೇನ್ ಚಿಕ್ಕಣ್ಣಾ ಇಂತಾ ವಾಸ್ಣೆ ಬತ್ತಾದಲ್ಲಾ, ಇವತ್ತು ಏನ್ ಎಲ್ಲಾರ ನಾಯಿಗೀಯಿ ಸತ್ತಿದ್ದದೆ ನಿಮಿತ್ಲೆಲಿ? ಥೂ ಬರೀ ಅಮಾದಿ ವಾಸ್ತೆ ಕನಪ್ಪಾ’-‘ಟೀಯ ಬಾಯ್ದೆ ಬಿಡೋಕೆ ಆಗುದಿಲ್ಲ’- ಎನ್ನುವ ಮಾತುಗಳನ್ನು ಆಡಿದ್ದರು. ಹೀಗೆ ದೈನಂದಿನ ಬದುಕಿನ ಚಟುವಟಿಕೆಗಳೆಲ್ಲದರ ಬಗ್ಗೆ ವಿಚಾರಮಾಡಿ ಅವರವರ ಕೆಲಸಕ್ಕೆ ಹೋಗಿದ್ದರು. ಬಿಸಿಲು ಆಗತಾನೆ ಇಳಿಯುವ ಸೂಚನೆ ತೋರಿತು.
*
ಅತಾರಿ ತನ್ನ ನೀಲಿನಕ್ಷೆಗೆ ತಕ್ಕಂತೆ ಎಲ್ಲವನ್ನು ಸಿದ್ದಮಾಡಿಕೊಂಡಿದ್ದ. ಒಂದು ಮಡಕೆ ಎಂಡವನ್ನು ಈ ಕಾರ್ಯಕ್ಕಾಗಿ ಪೆಂಟೆಯಿಂದ ತಂದು ಹಿತ್ತಲಲ್ಲೇ ಇಟ್ಟಿದ್ದ. ಭಯಂಕರವಾಗಿ ಕುಡಿದು, ಅನಂತರ ವಿಪರೀತ ನಿಶೆಯೇರಿದ ಮೇಲೆಯೇ ತಾವು ಕಾರ್ಯಾಚರಣೆಗೆ ತೊಡಗುವುದು ಸರಿ ಎಂಬುದು ಅವನ ವಾದ. ಯಾಕಂದರೆ, ವಿಪರೀತವಾದ ಆ ಕೆಟ್ಟ ಏಲಿನ ವಾಸನೆಯಿಂದ ಹಂದಿಯನ್ನು ಮೇಲೆತ್ತುವುದಕ್ಕೆ ಕಷ್ಟವಾಗುತ್ತದೆಯಾದ್ದರಿಂದ ಸಂಪೂರ್ಣ ನಿಶೆಯಿದ್ದರೆ ಯಾವ ವಾಸನೆಯನ್ನೂ ಲೆಕ್ಕಿಸದೆ ಕೆಲಸ ಮಾಡಬಹುದು ಎಂದು ನಿರ್ಣಯಿಸಿ ಚಿಕ್ಕಣ್ಣನ ಸಹಬ್ಬಾಸ್‌ಗಿರಿ ಪಡೆದಿದ್ದ. ಅಂತೂ ಎಲ್ಲವೂ ಸಿದ್ಧವಾಯಿತು. ಮನೆಯ ಹೆಂಗಸರು ಈ ನೀಲಿನಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಾದರೂ ಕೂಡ ಅವರ ಧ್ವನಿಗೆ ಯಾವ ಮೈಕೂ ಇರಲಿಲ್ಲ. ಗುಟ್ಟಾಗಿ ಬೇಗ ಕೆಲಸ ಮುಗಿಸಬೇಕೆಂದು ಎಂಡ ಕುಡಿಯುವುದರಲ್ಲಿ ಇಬ್ಬರೂ ತೊಡಗಿದರು. ಚೆಲುವ ಇದನ್ನೆಲ್ಲ ಕದ್ದು ಗಮನಿಸುತ್ತಾ, ಮನುಷ್ಯರು ಏಲುಗುಂಡಿಗೆ ಹೇಗೆ ಇಳಿಯುತ್ತಾರೆಂಬುದನ್ನು ನೋಡಲು ಆಶ್ಚರ್ಯದಿಂದಲು ಬುಗುರಿ ಏನಾದರೂ ಸಿಗಬಹುದೇ ಎಂಬ ಅಣುವಿನಷ್ಟು ಆಸೆಯಿಂದಲು ಕಾದು ತಾನೊಂದು ಕಡೆ ಮರೆಯಲ್ಲಿ ಕುಳಿತ. ಚಿಕ್ಕಣ್ಣ ಒಂದು ಸುತ್ತು ಗಟಗಟ ಕುಡಿದು ಎದ್ದು ಬಂದು ಕಕ್ಕಸು ಗುಂಡಿಯನ್ನು ತೆಗೆದು ನೋಡಿ ಅಸಾಧ್ಯ ವಾಸನೆಗೆ ಬೆಚ್ಚಿ ವಾಪಸ್ಸು ಓಡಿಬಂದು ಪುನಃ ಕುಡಿಯತೊಡಗಿದ. ಆ ಗಬ್ಬು ಇಡೀ ಊರಿನ ಗಬ್ಬಿನಂತೆ, ಮನುಷ್ಯನ ಗಬ್ಬಿನಂತೆ ನಡೆದುಬಂದ ಹಾದಿಯ ಗಬ್ಬಿನಂತೆ ಊರ ಸುತ್ತ ಗಾಳಿಯ ಜೊತೆ ಅಲೆಯತೊಡಗಿತು. ಅತಾರಿಗೆ ವಿಪರೀತ ನಿಶೆ ಏರುತ್ತಿತ್ತು. ತೊದಲುತ್ತ, ‘ಯಂಗೊ ವತಾರಿಂದ ಒಳ್ಗೇ ಬಿದ್ಕಂಡು ಸಾಯುಮಟ್ಟುಕ್ಕೋಗದೆ; ಈಗ ಉಪಾಯ್ದಲಿ ಅದುರ್ ಕತ್ತ ವತ್ಕಂಟ ಜೀಮ ಇಡಂದಿರದೆ. ಅದೇ ಕತ್ತ ಚಿಮ್ಕಿ ಸಾಯ್ತುಮಾತ ಅತ್ತಾಗ್ ಬಿಸಾಕು’ ಎಂದ. ‘ನೀನೇಳುದೂ ಚಿಮ್ಕಿ ಸಾಯಸ್‌ಬೋದು’ -ಎಂದ. ಚಿಕ್ಕಣ್ಣ ಗಟರುಗುಟ್ಟುತ್ತಾ ‘ಅಂಗ್ಮಾಡುದ್ರೆ ಆದಾದ್ಲಾ ಅತಾರಿ. ಅಂದಿ ಸಕ್ನೆವತ್ಕಂಟ ಜೀಮ ಇಡ್ಕಂದಿರ್‍ತದೆ. ಅದ್ಕೇ ಕತ್ತ ಚಿಮ್ಕಿ ಸಾಯ್ಸುಮಾತ ಅತ್ತಾಗ್ ಬಿಸಾಕು’ ಎಂದ. ‘ನೀನೇಳುದೂ ಸರಿಯೇ ಕನ್‌ಲಣ್ಣ. ಯೀಗಾ ಇಂಗ್ಮಾಡ್ವೆ. ಒಂದ್ ದೊಡ್ ಕಂಬ್ಳ ಚೀಲ್ಕೆ ಅದ ಸೇರುಸ್‌ಬುಟ್ಟು, ಆಮೆಕೆ ಅಗ್ಗಕಟ್ಟಿ ಮ್ಯಾಕೆಳಕಮ’ ಎಂದ. ‘ಸೈ ಕಲಾ ಅತಾರಿ’ ಎಂದು ಚಿಕ್ಕಣ್ಣ ಹಾಗೆಯೇ ಒಪ್ಪಿಕೊಂಡು ಕಕ್ಕಸು ಗುಂಡಿಗೆ ಇಳಿಯುವ ಕಾಯಕಕ್ಕೆ ಅಣಿಯಾದರೂ ಚೆಲುವ ಇದನ್ನೆಲ್ಲ ನೋಡುತ್ತಲೇ ಬುಗುರಿ ಸಿಕ್ಕಿದರೂ ಕೂಡ ಅಪ್ಪ ಅದನ್ನು ಕಣ್ಣಿಗೆ ಕಾಣದಂತೆ ದೂರ ಎಸೆಯುತ್ತಾನೆಂದುಕೊಂಡು ದುಃಖಿತನಾದ. ತನ್ನ ಆತ್ಮೀಯರಾರೋ ಕಳೆದುಹೋದರು ಎಂಬಂತೆ ಬುಗುರಿಯ ಬಗ್ಗೆ ಚಿಂತೆಪಡತೊಡಗಿದ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
*
ಹೊದಿಸಿದ್ದ ತೆಂಗಿನ ಗರಿಗಳನ್ನು ಅತಾರಿ ಮೆಲ್ಲಗೆ ಎಳೆದು ಹಾಕಿದ. ಗಬ್ಬುನಾತ ಅಡರಿಕೊಂಡಿತ್ತು. ಕುಡಿದು ಅಮಲಾಗಿದ್ದ ಅದರ ಕಣ್ಣುಗಳು ಆ ವಾಸನೆಗೆ ಸ್ಪಂದಿಸುತ್ತಿರುವಂತೆ ಆ ನರಕದೊಳಗೆ ಹಂದಿಗಾಗಿ ಕಣ್ಣಾಡಿಸಿದರು. ‘ಎತ್ತಾಗೋಯ್ತಣ್ಣಾ ಕಾಣುದೆ ಇಲ್ಲಲ್ವಾ’ ಎಂದ ಅತಾರಿ. ‘ಯೇಯ್ ಮಟ್ವಾಗ್ ನೋಡ್ಲಾ, ಅಲ್ಲೇ ಯೇಲ್ ಮೆರ್‍ಕಂಡು ಬಿದ್ದದಲ್ಲಾ’ ಎನ್ನಲು ಚಿಕ್ಕಣ್ಣ: ‘ವುಂಕನಣ್ಣೊ ಯೇಲೆಲಿ ವುಂಟಾಡಿ ವುಂಟಾಡಿ ಗುರ್‍ತೇ ಕಾಣ್ದಂಗಾಗದೆ’ ಎಂದು ಅಸಾಧ್ಯ ವಾಸನೆಯನ್ನು ಸಹಿಸಿಕೊಂಡು ನೋಡಿದರು. ಈಗ ಇಬ್ಬರಲ್ಲಿ ಒಬ್ಬರು ಕೆಳಕ್ಕೆ ಇಳಿಯುವುದೇ ಸರಿ ಎಂದು ತೀರ್ಮಾನಿಸಿದರು. ಇಷ್ಟೆಲ್ಲದರ ನಡುವೆ ಮಹಾ ಧೈರ್ಯ ತುಂಬಿಕೊಂಡು ಚೆಲುವ, ಬುಗುರಿ ಏನಾದರು ಅಲ್ಲಿ ಕಾಣಬಹುದೇ ಎಂದು ಬಂದು ಬಗ್ಗಿನೋಡಿದ. ಬುಗುರಿಯ ಆಸೆಗಾಗಿ ಆ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಚಿಕ್ಕಣ್ಣ ಸಿಟ್ಟು ಮಾಡಿಕೊಂಡು ‘ಲೇಯ್ ಅದೇನಂಗ್ ಬಗ್ ನೋಡಿಯೇ; ವೋಗತ್ತಗ್ ನಿಂತ್ಕಂದ್ ಯಾರಾರ ನೋಡ್‌ಗೀಡರ್ ಅನ್ನುದಾ ನೋಡ್ಕ ವೋಗು’ ಎಂದು ಕಾಯುವ ಕೆಲಸವನ್ನು ಮಗನಿಗೆ ಚಿಕ್ಕಣ್ಣ ವಹಿಸಿದ. ಚೆಲುವನಿಗೆ ಧೈರ್ಯ ಬಂದಂತಾಗಿ, ‘ಆಯ್ತು’ ಎನ್ನುವಂತೆ ಅವರ ಪಾಡಿಗೆ ಅವರು ಹಂದಿ ಎತ್ತುವ ಕಾಯಕ ಮಾಡಲಿ, ತನ್ನ ಪಾಡಿಗೆ ತಾನು ಬುಗುರಿ ಹುಡುಕುವ ಕೆಲಸ ಮಾಡಿದಂತಾಗಲಿ ಎಂದುಕೊಂಡು ಸ್ವಲ್ಪ ದೂರಕ್ಕೆ ಹೋಗಿ ನಿಂತು ಬುಗುರಿಯ ಗುಯ್ ಗುಟ್ಟುವಿಕೆಗಾಗಿ ಕಾತರಿಸಿದ. ಹಂದಿಯು ವಿಕಾರ ರೂಪವಾಗಿ ಇಡೀ ಮೈತುಂಬ ಅಮಾದಿ ಮೆತ್ತಿಕೊಂಡು ‘ವರಾಹ ಅವತಾರ’ದ ವಿಷ್ಣುವನ್ನು ನೆನಪಿಸುವಂತೆ ಬಿದ್ದಿತ್ತು. ಅದರ ದುರಂತವೊ, ಅತಾರಿಯ ದುರಂತವೋ, ಯಾರ ದುರಂತವೊ ಏನೋ- ಅದು ಅತ್ಯಂತ ನಿಶ್ಯಕ್ತಿಗೊಳಗಾಗಿ ಸಾಯುವ ಸ್ಥಿತಿ ತಲುಪಿದ್ದರಿಂದ ಅವರ ಯೋಜನೆ ಸುಲಭವಾಗತೊಡಗಿತು. ಆದರೂ ಇಬ್ಬರಲ್ಲಿ ಒಬ್ಬ ಗುಂಡಿಗೆ ಇಳಿಯಲೇ ಬೇಕಾದ್ದರಿಂದ ಚಿಕ್ಕಣ್ಣನೇ ಒಳಗೆ ಇಳಿಯುವ ಮನಸ್ಸುಮಾಡಿ ಆ ವಿಪರೀತವಾದ ಗಬ್ಬನ್ನು ಸಹಿಸಿಕೊಂಡು ಇಳಿಯತೊಡಗಿದ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಹಿಂದೆ ಗೌಡರ ಕೋಣ ಒಳಕ್ಕೆ ಬಿದ್ದು ಮಣ್ಣು ಕುಸಿದು ಅಗಲ ಮಾಡಿದ್ದರಿಂದಲು, ಆಳ ಕಡಿಮೆಯಾಗಿದೆ ಎಂತಲು, ಕೆಳಗೆ ನೆಲಗಟ್ಟಿಯಾಗಿದೆ ಎಂದುಕೊಂಡು ಕಾಲುಬಿಟ್ಟು ಇಳಿಯುತ್ತಿರುವಂತೆಯೇ ಆ ಅಸಾಧ್ಯ ವಾಸನೆಯಲ್ಲಿ ಆಯತಪ್ಪಿ, ಅಮಲಿನಿಂದ ನಿಶ್ಯಕ್ತನಾಗಿ ಒಂದೇ ಬಾರಿಗೆ ‘ಪರ್’ ಎಂದು ಜಾರಿಕೊಂಡು ಹೋಗಿ ಥೇಟ್ ಹಂದಿಯಂತೆಯೇ ಆ ಕಕ್ಕಸು ಗುಂಡಿಗೆ ಬಿದ್ದು ಸೊಂಟದ ತನಕ ಏಲು ಮೆತ್ತಿಸಿಕೊಂಡು ಮುಖವನ್ನೆಲ್ಲ ವಿಕಾರವಾಗಿ ಕೊಕ್ಕರಿಸಿಕೊಂಡು ಬಿದ್ದಿದ್ದ ಹಂದಿಯ ಮುಂದೆಯೇ ಹೋಗಿನಿಂತ. ಹಂದಿ ಒಮ್ಮೆ ಜೀವ ಬಿಡುವಂತೆ ಗುಟುಕ್ ಪಟರ್ ಎಂದು ಕ್ಷೀಣವಾಗಿ ಶಬ್ದಿಸಿ ಕಣ್ಣು ಬಿಡುವ ಪ್ರಯತ್ನ ಮಾಡಿತಾದರೂ ಅವುಗಳ ಮೇಲೂ ಅಮಾದಿ ಮೆರೆದುಕೊಂಡಿತ್ತು. ಹೀಗೆ ಆಯತಪ್ಪಿ ಜಾರಿಬಿದ್ದ ಚಿಕ್ಕಣ್ಣನ ಅವಸ್ಥೆಯನ್ನು ಕಂಡು ಮೇಲೆ ನಿಂತಿದ್ದ ಅತಾರಿ ಜೋರಾಗಿ ನಕ್ಕು ‘ಇದೇನಣ್ಣಾ ಅಂದಿ ತರ್‍ದೆಲೇ ನೀನು ವೋಗಿ ಬಿದ್ಕಂದಲ್ಲಾ’ ಎಂದ. ಚಿಕ್ಕಣ್ಣನಿಗೆ ಸಿಟ್ಟು ನೆತ್ತಿಗೇರಿ, ಆದರೂ ತಾನೀಗ ಏಲು ಗುಂಡಿಯಲ್ಲಿ ನಾಟಿಕೊಂಡಿರುವುದರಿಂದ ಕೋಪ ಮಾಡಿದರೆ ಕೆಲಸ ಆಗುವುದಿಲ್ಲ ಎಂದುಕೊಂಡು ‘ಬೊಡ್ಡಿ ಮಗ್ನೇ ಮೊದ್ಲು ಚೀಲ ಕೊಡು, ನಗುವಂತೆ ಆಮೆಕೆ’ ಎಂದ. ಅತಾರಿ ಆತುರದಿಂದಲೆ ಚೀಲಕೊಟ್ಟು, ನಗುತ್ತಲೇ ‘ತಕೋ ಯೀ ಅಗ್ಗನೂ’ ಎಂದ. ಭಯಾನಕ ಚಿತ್ರವನ್ನು ತಾನು ನೋಡುತ್ತಿರುವಂತೆ ಚೆಲುವ ಇದನ್ನು ನೋಡಿ ವಾಕರಿಕೆ ಪಟ್ಟುಕೊಂಡು ಏನೇನೋ ಗೊಂದಲದಿಂದ ಸಪ್ಪಗಾಗಿಬಿಟ್ಟ. ಚಿಕ್ಕಣ್ಣನಿಗೆ ಆ ಅಸಾಧ್ಯ ವಾಸನೆಯಲ್ಲಿ, ಸಿಟ್ಟಿನಲ್ಲಿ ಅವಮಾನದಲ್ಲಿ ಕುಡಿದಿದ್ದೆಲ್ಲ ವಾಂತಿಯಾಗಿ ನಿಶೆಯೆಲ್ಲ ಇಳಿದು ‘ಹಲವಾರು ತರದ ಕೋಪಗಳು’ ಬೆಳೆಯತೊಡಗಿದವು. ಒಳಗೆ ಬಿದ್ದಿರುವ ಹಂದಿ ಕುಂಟಣ್ಣನದೇ ಎಂದು ತಿಳಿಯಲ್ಪಟ್ಟಿತು. ಇಷ್ಟರೊಳಗೆ ಚೆಲುವ ತನ್ನ ಅಪ್ಪನ ಹಣೆಬರಹ ಹೀಗಾಗಿದೆ ಎಂಬಂತೆ ತಾತನಿಗೆ ಹೋಗಿ ತಿಳಿಸಿದ. ಚಿಕ್ಕಣ್ಣನ ಅಪ್ಪ ಗುಂಜಾರಯ್ಯ ಸಿಟ್ಟಿನಿಂದ ಬಂದು- ‘ಇಂಗ್ಮಾಡ್ರಪ್ಪಾ ಅಂತೇಳಿದ್ನೆ ನಾನು. ಮ್ಯಾಲೇ ನಿಂತ್ಕಂಡು ಉಪಾಯ್ದೆಲೆ ಕೊಕ್ಕೆಲಿ ಕುತ್ಗೆಗೆ ಅಗ್ಗ ಹಾಕಂದು ಮ್ಯಾಕೆತ್ತಿ ಅಂತಲು ಹೇಳಿತ್ತು. ಥೂ ರಾಮ ರಾಮಾ- ಯಾವ್ ಕರ್ಮ ಮಾಡಿದ್ರೋ ಪಾಪಿಗೊಳಾ, ಯಾರಾರ ಏಲ್ ಗುಂಡಿಗೆ ಬಿದ್ದು ಬಟ್‌ಬರೆ ಮೈಯೆಲ್ಲನ್ನು ಯೇಲ್ ಮಾಡ್ಕಂದರೇ, ನನ್ ಕಣ್ಣೆದುರ್‍ಗೇ ನರ್‍ಕುಕ್ ಬಿದ್ದಲ್ಲಾ ನೀನು, ಏನ್ ಮಾಡಿಯೇ ಅದು ನಿನ್ ಕರ್ಮ ಕನಪ್ಪಾ’ ಎಂದು ಹಳಿಯುತ್ತಾ ತಾನು ಹೇಳಿದಂತೆ ಮಾಡಿಲ್ಲ ಎಂದು ಗುಂಜಾರಯ್ಯ ಬೈಯ್ಯತೊಡಗಿದ್ದ. ಚಿಕ್ಕಣ್ಣ ಹಂದಿಯನ್ನು ಚೀಲಕ್ಕೆ ಹಾಕಿ ಹಗ್ಗ ಬಿಗಿದು ಕಣ್ಣನ್ನು ಮಳ್ಳಿಸುತ್ತಿದ್ದ. ಗುಂಜಾರಯ್ಯ ಬೇಸರಗೊಂಡು, ತನ್ನ ಮನೆತನದ ಪೂಜಾರಿಕೆ ವಂಶವಲ್ಲವೇ, ಅದು ಹೀಗಾಗಬೇಕಿತ್ತೆ, ಏಲು, ಎಂಡ, ಉಚ್ಚೆ ಎಲ್ಲಾನೂ ಒಂದು ಮಾಡಿಕೊಂಡು ಮನೆತನದ ಶುದ್ಧ ಸೂಕ್ಷ್ಮಗಳನ್ನು ಹಾಳುಮಾಡಿದರಲ್ಲಾ ಎಂದುಕೊಂಡ. ಊರ ದೇವರ ಪೂಜಾರಿಕೆಗೆ ಅಪವಿತ್ರವಾಯಿತು ಎಂದು ನೋವುಪಟ್ಟ. ಚಿಕ್ಕಣ್ಣ ಹಗ್ಗ ಬಿಗಿದು ‘ಹೂಂ’ ಎಂದ ಮೇಲೆ ಅತಾರಿ ಹಂದಿಯನ್ನು ಮೇಲೆ ಎಳೆದು ಹಾಕಿದ. ಹಾಗೆಯೇ ಅತಾರಿ ಮಾತನಾಡಿ ‘ಬಾ ಇಪಟು ಮ್ಯಾಕೆ. ಅಗ್ಗದ ಬಿಗಿಯಾಗ್ ಇಡ್ಕ ಆತಪ್ಪೋ; ಆಮೆಕ್ ತಿರ್‍ಗ ತಳ್‌ತಳುಕ್ಕಾಗಿ ಮಗುಚ್ಕಂದಿಯೇ’ ಎಂದು ನಗಾಡಿದ. ಚಿಕ್ಕಣ್ಣನ ನಿಶಾಯೆಲ್ಲ ಮಂಗಮಾಯವಾಗಿತ್ತು. ಅವಮಾನಿತನಾಗಿ ಮೇಲೆ ಬಂದು ತನ್ನ ಸೊಂಟದ ತನಕ ರೊಚ್ಚು ನೀರು ಇಳಿಯುತ್ತಿರುವುದನ್ನು ಒಮ್ಮೆ ನೋಡಿಕೊಂಡು ಅತ್ಯಂತ ಸಿಟ್ಟಿನಿಂದ ಅಪ್ಪನ ಕಡೆ ಬಂದ- ‘ಏನಂದೆ ನೀನು, ನನ್ ಕಣ್ಣೆದುರ್‍ಗೇ ನರ್‍ಕ ಕಂಡಲ್ಲಾ, ನಿನ್ ಹಣೇ ಬರಾ-ನಿನ್ ಕರ್ಮ ಅಂತಲು ಅಂದದ್ದು ನೀನು. ನೋಡಿಯಾ ಯೀಗ ಯಾರ್ ನರ್‍ಕ ಕಂಡರು ಅನ್ನುದಾ’ ಎಂದು ತನ್ನ ಅಪ್ಪನ ಮೇಲೆಯೇ ಸಿಟ್ಟಿನಿಂದ, ಹಿಂದಿನ ಯಾವುದಾವುದೋ ಅಸಮಾಧಾನಗಳನ್ನು ಕಕ್ಕಿಕೊಳ್ಳುವವನಂತೆ ನುಗ್ಗತೊಡಗಿದ. ಪಾಪ ಗುಂಜಾರಯ್ಯ ‘ಅಯ್ಯೋ ಹೋಗೋ ಅತ್ಲಾಗಿ, ಮುಟ್ಟಿಸ್ಕಬ್ಯಾಡಾ, ನನ್ನೂ ಆಳ್ ಮಾಡ್ ಬ್ಯಾಡ’ ಎಂದು ಹೇಳಿದರೂ ಕೇಳದೆ ಆತನ ಕುತ್ತಿಗೆ ಪಟ್ಟಿಹಿಡಿದು ಎಳೆದಾಡಿ ‘ನಿನ್ನೇ ನರ್‍ಕುಕ್ ತಳ್ತೀನಿಕನ್ನೋ ಬೊಡ್ಡಿಮಗನೆ’ ಎಂದು ತಾರಾಮಾರಾ ವಯಸ್ಸಾದ ಅಪ್ಪನ ಮೇಲೆ ಎರಗಿದ. ಚೆಲುವನಿಗೆ ಬುಗುರಿ ಬೇಕು ಎನಿಸಲಿಲ್ಲ. ಅಳು ಬರುವಂತಾಯಿತು. ಅತಾರಿ ಸಮಯಪ್ರಜ್ಞೆ ಅರಿತು, ಕೆಲಸವೆಲ್ಲ ಹಾಳಾಗಿ ಗುಟ್ಟು ಬಯಲಾಗುತ್ತದೆಂದುಕೊಂಡು ‘ಅಣೋ, ಇದೇನಂದಾರು ತಗಿಯಪ್ಪಾ ಪಾಪ ವಯ್ಸಾದೋನ್ ಮ್ಯಾಲೆ ಯಾವ್ ಜಗ್ಳಂದಾರು. ಬಿಡಣೋ, ಅವುನ್ ತಾನೆ ಯಾರ್‍ಗಂದ. ಮಗ ಅಂತಲ್ಲುವಂದುದ್ದು, ಬಿಡು ಬಿಡು’ ಎಂದು ಮತ್ತಿನಲ್ಲೇ ಸಿಟ್ಟಿನಿಂದ ಚಿಕ್ಕಣ್ಣನ ರಟ್ಟೆಗಳನ್ನು ಹಿಡಿದು ದರದರ ಎಳೆದು ಅತ್ತಬಿಟ್ಟ. ಹಾಗೆ ಬಲವಾಗಿ ಅತಾರಿ ಎಳೆದದ್ದರಿಂದ ಆಯ ತಪ್ಪಿದ ಚಿಕ್ಕಣ್ಣನ ಕಾಲು ಉಳುಕಿದಂತಾಗಿ ‘ಲೋ ಅತಾರಿ, ನೀನೂ ನನ್ ತಳ್ಳಿಯಾ. ಒಳುಗ್ ಬಿದ್ದಿದ್ರೆ ನೀನೂ ನಗೂನಾಗೋದಲ್ಲಾ. ಈಗ ನೋಡುದ್ರೆ ಅವುನ್ ಮಾತೇ ಸರಿ ಅಂತಾ ನನ್ನ ತಳ್ತಿಯಲ್ಲಾ’ ಎಂದು ರೇಗಿದ. ರೇಗಿದರೂ ಬಿಡದೆ ಅತಾರಿ ಆತನನ್ನು ‘ಬಾಣ್ಣೋ ಇಸಾರಿ’ ಎಂದು ‘ಕೆಲ್ಸ ಬ್ಯಾರೆ ಬಿದ್ದದೆ’ ಎನ್ನುತ್ತಾ ಎಳೆದ. ಮೂವರೂ ದುರ್‌ದೈವಿಗಳು ಕಕ್ಕಸು ಗುಂಡಿಯ ಬಳಿಯೇ ನಿಂತಿದ್ದರು. ಅತಾರಿಯು ಜಗಳ ಬಿಡಿಸಬೇಕೆಂದು ಚಿಕ್ಕಣ್ಣನ ಸೊಂಟವನ್ನು ಬಿಗಿಯಾಗಿ ಹಿಡಿದು ‘ಯೇಯ್. ನನುಗ್ ಕ್ವಾಪ ಬರಿಸ್ ಬ್ಯಾಡ ಬಾಪ್ಪ ನೀನಿಪಟು’ ಎಂದು ಜಗ್ಗಿದ. ಚಿಕ್ಕಣ್ಣ ಸಿಟ್ಟಿನಿಂದ ‘ಯೇಯ್ ಬಿಡೋ ಸೂಳೆಮಗ್ನೆ’ ಎಂದು ಬಲವಾಗಿ ಬಿಡಿಸಿಕೊಂಡು ನೂಕಿದ. ಅತಾರಿ ಆ ನೂಕುವಿಕೆಗೆ ನಿಶೆ ಸಹಿತವಾಗಿ ಆಯತಪ್ಪಿ ಯಾವ ತಡೆಯೂ ಯಾವ ನಿರ್ಬಂಧವೂ ಯಾವ ಸಹಾಯವೂ ಇಲ್ಲದಂತೆ ಅತ್ಯಂತ ಸುಲಭವಾಗಿ ಅದೇ ಕಕ್ಕಸು ಗುಂಡಿಯೊಳಕ್ಕೆ ಹಂದಿಯಂತೆಯೇ ಬಿದ್ದುಹೋದ. ಬಿದ್ದವನ ದುರಂತ ಎಂದರೆ- ಅಡ್ಡಡ್ಡಲಾಗಿ ಬಿದ್ದಿದ್ದರಿಂದ ಪೂರ ತಲೆಯಿಂದ ಹಿಡಿದು ಕಾಲಿನತನಕ ಏಲು ಮೆತ್ತಿಕೊಂಡು ಭಯಾನಕ ಅವಮಾನವಾಗಿ ಕ್ರೋಧದಿಂದ ಬಿದ್ದು ತಕ್ಷಣವೇ ಎದ್ದುನಿಂತು ಮೇಲತ್ತುವ ಪ್ರಯತ್ನ ಮಾಡಿದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಈ ಅಚಾನಕ್ಕಾದ ಘಟನೆಯಿಂದ ಚೆಲುವ ನಕ್ಕಿದನಾದರೂ ಇದೆಲ್ಲ ಯಾವುದೋ ಇನ್ನೊಂದು ಆಯಾಮಕ್ಕೆ ಎಳೆದೊಯ್ಯುತ್ತದೆನಿಸಿ, ಮರೆಗೆ ಬಂದು ನಿಂತುಕೊಂಡ. ಮನೆಯ ಹೆಂಗಸರು ಆ ನರಕದ ದರ್ಶನವಾಗದಿದ್ದರೆ ಸಾಕೆಂದು ಅಸಾಧ್ಯ ವಾಸನೆಗೆ ಬಾಗಿಲು, ಕಿಟಕಿ ಮುಚ್ಚಿಕೊಂಡು ಒಳಗೆ ಸೇರಿಬಿಟ್ಟಿದ್ದರು. ಅಪ್ಪ ಮಗ ಇಬ್ಬರೂ ಈಗ ಜಗಳ ಬಿಟ್ಟು ಬಿದ್ದ ಅತಾರಿಯನ್ನು ಮೇಲಕ್ಕೆ ಎತ್ತಿಕೊಂಡರು. ಅತಾರಿಯು ಗಂಭೀರವಾಗಿ ಮೇಲಕ್ಕೆ ಬಂದು ಇಬ್ಬರನ್ನೂ ನೋಡಿ ಮಾತಿಲ್ಲದೆ ದೊಡ್ಡ ಪಾನಿಯಿಂದ ಎಲ್ಲವನ್ನೂ ತೊಳೆದುಕೊಂಡು- ‘ಆಹಾ, ಅಪ್ಪಾ ಚಿಕ್ಕಣ್ಣಪ್ನೋರೆ, ನಿನ್ ಸವಾಸ್ವ ನಾನ್ ಮಾಡುದ್ನಲ್ಲಾ ಮೊದ್ಲು ನಾನೆಕ್ಕುಡ್ದೆಲಿ ವಡ್ಡಬೇಕು. ಸುಮ್ಮೆ ಅನ್ನಾಯ್ದಲಿ ನನ್ನ ಗುಂಡಿಗೆ ತಳ್‌ದಲ್ಲಾ; ಅಕುಸ್ಮಾತ್ ತಲೆ ಏನಾರ ವಳಾಕ್ ನೆಟ್ಕಂದಿದ್ರೆ ಏನಪ್ಪಾ ಮಾಡ್ತಿದ್ದೆ ನೀನು. ಥೂ ಸೂಳೆ ಮಗನೇ, ಇರ್‍ಲಿ, ಇದಾ ಇಷ್ಟುಕ್ಕೇ ನಾ ಬಿಡುಮಗ್ನಲ್ಲಾ, ಅಂತೂ ನಿನ್ ಸಂಗುಕ್ಕೆ ಒಂದ್ ದೊಡ್ ನಮಸ್ಕಾರ ಕನಪಾ’ ಎಂದು ಹೊರಟುಹೋದ.
*
ಈ ಸಂಗತಿ ಊರಿಗೆಲ್ಲ ತುಂಬಿಹೋಯಿತು. ಅತಾರಿ ಈ ಘಟನೆಯನ್ನು ಬೇರೆಯದೇ ರೀತಿಯಲ್ಲಿ ಪ್ರಚಾರಮಾಡಿ ತನಗೆ ಇನ್ನಿಲ್ಲದ ಅವಮಾನವನ್ನು ಅಪ್ಪ ಮಗ ಸೇರಿಕೊಂಡು ಮಾಡಿದರೆಂದು ಹೇಳಿ, ಆ ರಾತ್ರಿಯೇ ಈ ಬಗ್ಗೆ ನ್ಯಾಯ ಮಾಡುವಂತೆ ಎಲ್ಲವನ್ನೂ ಏರ್ಪಾಟು ಮಾಡಿಬಿಟ್ಟಿದ್ದ. ಚಿಕ್ಕಣ್ಣನ ಹಿತ್ತಿಲಲ್ಲಿದ್ದ ಈ ಏಲುಗುಂಡಿ ಈ ಹಿಂದೆ ಇಂಥ ಎಷ್ಟೋ ಅನಾಹುತಗಳಿಗೆ ಕಾರಣವಾಗಿದ್ದರಿಂದ ಅವರು ಅತಾರಿಯ ವಿಷಯದಿಂದಾಗಿ ರೇಗಿ ನ್ಯಾಯಕಟ್ಟೆ ಹತ್ತಿದ್ದರು. ಇತ್ತಲಾಗಿ ಆ ಹಂದಿಯನ್ನು ಎತ್ತಿದನಂತರ ಬಿಸಿನೀರಿನಿಂದ ಮೈತೊಳೆದು ಕೊಯ್ದು ನಾಳಿನ ಸಾದಾರಳ್ಳಿ ಸಂತೆಯಲ್ಲಿ ಮಾರಿ ಹಣ ಹಂಚಿಕೊಳ್ಳಬೇಕೆಂದಿದ್ದ ಇಬ್ಬರ ನೀಲಿನಕ್ಷೆಯು ಚೂರುಚೂರಾಗಿ ಗಾಳಿಗೆ ಹಾರಿ, ಏಲಿನ ವಾಸನೆಯ ಮುಖಾಂತರ, ಅತಾರಿಯ ಅವಮಾನದ ಮೂಲಕ, ಊರಿನ ಕ್ಷುದ್ರತೆಯ ಆಳ ಒಳ ಎಳೆಯ ದುರಂತದ ಮೂಲಕ ವಿಚಿತ್ರ ಘಟನೆಯಾಗಿ ಎಲ್ಲರಿಗೂ ಮೋಜಾಗಿ ಬಿಟ್ಟಿತು. ಈ ಆಯಾಮಗಳಿಂದೆಲ್ಲ ಖುಷಿಪಡುತ್ತಾ, ಹೀಗೆ ನ್ಯಾಯಪಾಯ ಆದರೆ ಗುಂಡಿಯನ್ನು ಮುಚ್ಚಿಸಿಬಿಟ್ಟಾದ ಮೇಲೆ ಅಪ್ಪ ಬುಗುರಿಯನ್ನು ಏಲುಗುಂಡಿಗೆ ಹಾಕಲು ಸಾಧ್ಯವಿಲ್ಲ ಎಂದುಕೊಂಡ. ಅಂತೂ ಇದೆಲ್ಲ ಆಗಿ ಸಂಜೆಗೆ ನ್ಯಾಯಕ್ಕೆ ಎಲ್ಲರನ್ನೂ ಕರೆದರು. ಆದರೆ ಚಿಕ್ಕಣ್ಣ ಮಾತ್ರ ಅಲ್ಲಿಗೆ ಬಂದಿರಲಿಲ್ಲ. ಊರಿನ ಪಡ್ಡೆ ಹುಡುಗರು ಈ ತಮಾಷೆ ದೂರಿನ ಬಗ್ಗೆ ನಗುತ್ತಾ ಅವರದೇ ಲೋಕದಲ್ಲಿ ಮುಳುಗಿದ್ದರು. ಚಿಕ್ಕಣ್ಣನ ಅಪ್ಪ ಗುಂಜಾರಯ್ಯನು, ತನ್ನ ಮಗ ಮಾಡಿರುವುದೆಲ್ಲ ತಪ್ಪೆಂದು ಮನವರಿಕೆ ಮಾಡಿಕೊಂಡಿದ್ದ. ಎಲ್ಲರೂ ಸೇರಿ ಚರ್ಚೆ ಮುಗಿಯುತ್ತಿರುವಾಗ ಯಜಮಾನ ಕಡುಬಯ್ಯ ಮಾತನಾಡಿ- ‘ಅತಾರಿಯನ್ನ ನಿನ್ನ ಮಗ ಏಲ್ ಗುಂಡಿಗೆ ತಳ್ಳಿದ್ದು ತಪ್ಪು. ಆಮೆಕೆ, ಆ ಕುಂಟಣ್ಣನ್ ಹಂದಿಯ ಬೇಕಂತ್ಲೆ ನೀವೆ ಒಳಾಕ್ ಬೀಳ್ಸಿ; ಅದಾ ಸಾದಾರಳ್ಳಿ ಸಂತೆಲಿ ಮಾರುವ ಏರ್ಪಾಟ್ ಮಾಡಿದ್ರಂತೆ. ಅದಾ ಅತಾರಿಯೇ ಯೇಳ್ತಾವ್ನೆ. ಇದೂ ಅಲ್ಲೆಯೇ, ಏಲ್ ಗುಂಡಿಗೆ ಇಳಿದು, ಆ ಏಲೆಲೆಲ್ಲಾ ವುಂಟಾಡಿ, ಬಂದು; ನಮ್ಮ ನಾಷ್ಟ, ಟೀ ಬ್ಯಾರೆ ಕೊಟ್ಟವನೆ. ಇದೆಲ್ಲ ಸರಿಯಲ್ಲ. ಯಂಗೂ ನಿಂಗೇ ಗೊತ್ತದೆ. ಮುನ್ನೂರೊಂದ್ ರುಪಾಯ್ ಮಡುಗ್ ಬುಟ್ಟು ಸಭೆಗೆ ತಪ್ಪಾಯ್ತು ಅಂತಾ ವಪ್ಕಾಪಾ, ಆಮೆಕೆ, ಆ ಅತಾರಿ ಅದೇನೋ ಸೂತ್ಕ ಕೊಳ್ತನಾ ಕಳೀಲಿ ಅಂತ ದೇವುರ್ ಮಾಡ್ತಾನಂತೆ; ಅದ್ಕೇ ಬ್ಯಾರೆ ನೂರ್ ರುಪಾಯ್ ಕೊಟ್‌ಬುಡಿ’ ಎಂದು ನಿರ್ಣಯ ಹೇಳಿದ.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಇದೆಲ್ಲವನ್ನೂ ನ್ಯಾಯಕಟ್ಟೆಯ ಸಂಪಲ್ಲಿ ಕೇಳಿಸಿಕೊಂಡು ನಿಂತಿದ್ದ ಚಿಕ್ಕಣ್ಣ ಬಂದವನೇ ‘ಯಾಕ್ರಪ್ಪಾ ದಂಡ ಕೊಡ್‌ಬೇಕಾಗಿರುದು. ಯಾರ್‍ನಾ ಯಾರು ಏಲ್ ಗುಂಡಿಗೆ ತಳ್ಳಿದುದು. ವಸಿ ಮಟ್ವಾಗಿ ಮಾತಾಡಿ. ಅತಾರಿ ಏನೂ ಕಾಣ್ದ ಹೈದ್ನಲ್ಲ. ತಳ್ದೇಟ್ಗೆ ಬಿದ್ದೋಗುಕೆ. ಅಲ್ಲಪ್ಪಾ, ಅವನಾ ತಳ್ಳುಕೆ ಏನಾರ ಜಿದ್ದಿದ್ದದೆ ಇಬ್ಬುರ್‍ಗು, ಇಲ್ಲಾ ನಾನೇನರ ಕೊಡುದಿದ್ದದೋ, ಅವನೇನಾರ ನನುಗ್ ಕೊಡುದಿದ್ದದೋ…? ಎಲ್ಲಾ ತಂಟೆ ತಗರಾರ್ ಮಾಡ್ಕಂದು ಗಾಳಿ ಗಂಟ್ಲಾಕಂದು ದಂಡತಕಂದು ಸರಾಪ್ ನೆಕ್ಕಮ ಅಂತಾ ಮಾಡಿರಾ ನ್ಯಾಯವಾ. ಅಪೋ ಎದ್ನಡಿ ನೀನು. ಯಾವ್ ದಂಡ್ವ ಕೊಡುದು ಇವುರ್‌ಗೆ. ನಾನಂತು ಒಂದ್ ಚಿಟ್ಟಿ ಪೈಸನು ಕೊಡುದುಲ್ಲಾ’ ಎಂದು ರಂಪಮಾಡಿ, ಕೊನೆಗೆ ಜಗಳ ಕೈ ಕೈ ಮಿಲಾಯಿಸುವ ತನಕ ಮುಟ್ಟಿ ನ್ಯಾಯಾಸ್ಥಾನ ನಿಂತುಹೋಯಿತು. ಚಿಕ್ಕಣ್ಣ ತನ್ನ ಅಪ್ಪನನ್ನು ಬಲವಂತವಾಗಿ ಎಳೆದುಕೊಂಡು ಮನೆಗೆ ಬಂದುಬಿಟ್ಟ.
*
ಚೆಲುವ ಆ ರಾತ್ರಿಯಲ್ಲಿ ಅಪ್ಪನೇ ಒಂದು ದೊಡ್ಡ ಪಿಶಾಚಿ ಎಂದು ಕಲ್ಪಿಸಿಕೊಳ್ಳುತ್ತಾ ನಿದ್ದೆ ಬಾರದೆ ವದ್ದಾಡತೊಡಗಿದ. ರಾತ್ರಿಯ ತಣ್ಣನೆ ಗಾಳಿ ಹೊರಗೆ ಬೀಸುತ್ತಿದೆ ಎನಿಸಿದರೂ ಮನೆಯೊಳಗೆ ಬೆಚ್ಚನೆಯ ಕೆಟ್ಟ ವಾಸನೆಯ ಗಾಳಿ ಸುತ್ತಿ ಹಾಕಿಕೊಂಡಿದೆ ಎನಿಸಿತು. ಚೆಲುವ ಕುಂಟಣ್ಣನ ಅಸಹಾಯಕತೆಗೆ ಮರುಗಿದ. ಊರಿಗೆ ಆತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದವನಾದ್ದರಿಂದ ಅವನಿಗೆಂತಲೇ ಅಣ್ಣ ತಮ್ಮಂದಿರು ಬೆಂಬಲಿಗರು ಇರಲಿಲ್ಲ. ಅಪ್ಪನ ಎದಿರು ಆತ ಅನ್ಯಾಯಕ್ಕೆ ಒಳಗಾಗಿದ್ದಕ್ಕೆ ನೊಂದುಕೊಂಡ. ಹಿಂದೆ ತಿಪ್ಪೇಗೌಡರ ಕೋಣದ ರೀತಿಯಲ್ಲೇ ಹಂದಿಕೂಡ ಅದರೊಳಗೆ ಬಿದ್ದ ನಂತರ ಎತ್ತುವದರೊಳಗಾಗಿ ಸತ್ತೇ ಹೋಗಿತ್ತು. ಆ ಆಳದ ಗುಂಡಿಯಲ್ಲಿ ಮುಳುಗಿ ಸಾವಿನೊಡನೆ ಸೆಣಸಾಡಿ ಬೆಳಿಗ್ಗೆಯಿಂದ ಸಂಜೆತನಕ ಅಲ್ಲೇ ಅದು ಬಿದ್ದಿದ್ದರಿಂದ ಸತ್ತು ಹೋಗಿತ್ತು. ಅದನ್ನು ನೀಲಿನಕ್ಷೆ ಪ್ರಕಾರ ಕೊಯ್ದು ಮಾರುವಂತೆಯೂ ಇರಲಿಲ್ಲ. ಕಕ್ಕಸು ಗುಂಡಿಯ ಬಳಿಯೇ ಅದು ಹೆಣದಂತೆ ಸಾವಿರಾರು ನೊಣಗಳನ್ನು ಮುತ್ತಿಸಿಕೊಂಡು ಬಿದ್ದಿತ್ತು. ಚೆಲುವ ಮಲಗಿದಂತೆಯೇ ಇದೆಲ್ಲವನ್ನು ನೆನೆದು ಹೆದರಿ ಹಂದಿ ಏನಾದರು ದೆವ್ವವಾದರೆ, ಅದು ಮನುಷ್ಯ ರೂಪವಾಗಿ ಬಂದರೆ, ಹೇಗಿರಬಹುದೆಂದು ಕಲ್ಪಿಸಿಕೊಂಡ. ಹಾಗೆ ಕಲ್ಪಿಸುತ್ತಿರುವಂತೆಯೇ ಅದು ಚಿನ್ನದ ಬಣ್ಣದ ಬುಗುರಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಚೂರಿ ಹಿಡಿದುಕೊಂಡು ಮೆಲ್ಲಗೆ ಅಪ್ಪನ ಬಳಿ ಹೋಗಿ ನಿಂತು ಏನೋ ಮಾಡುತ್ತಿದೆ ಎಂಬ ಚಿತ್ರ ಸುಳಿಯಿತು. ಚೆಲುವ ಬೆಚ್ಚಿ ಅಜ್ಜಿಯನ್ನು ತಬ್ಬಿಕೊಂಡ. ಬಗ್ ಎಂದು ವಾಸನೆ ಬಡಿಯಿತು. ಅನಿವಾರ್ಯವಾಗಿ ವಾಸನೆಯನ್ನೇ ಅಪ್ಪಿಕೊಂಡು ಆಕೆ ಆಗಲೇ ನಿದ್ದೆಗೆ ಹೋಗಿದ್ದಳು. ಆ ಹಂದಿಯ ಪಿಶಾಚಿರೂಪದ ಮನುಷ್ಯ ಮನೆಯೊಳಗೆಲ್ಲ ಕುಣಿದಾಡಿ, ಥೇಟ್ ಅಪ್ಪನ ರೀತಿಯಲ್ಲೇ ರೂಪುಪಡೆದು ಮಲಗಿರುವ ಒಬ್ಬೊಬ್ಬರ ತಲೆಗೂ ಬುಗುರಿಯಿಂದ, ಚಾಕುವಿನಿಂದ ತೂತು ಕೊರೆದು ಅದರೊಳಕ್ಕೆಲ್ಲ ಏಲು ತುಂಬುತ್ತಿರುವಂತೆ ಕಂಡ. ಇಡೀ ಊರಿನ ಸುತ್ತ ಮನೆ ಮನೆಯ ಪ್ರತಿಯೊಂದಕ್ಕೂ ತೂತು ಕೊರೆದು ಅಮಾದಿ ತುಂಬಿ ಗಬ್ಬಿನ ಉಸಿರಾಟವನ್ನು ಆ ಹಂದಿರೂಪದ ಪಿಶಾಚಿ ಸೃಷ್ಟಿಸಿ ನಗುತ್ತಾ ಕೇಕೆ ಹೊಡೆಯುತ್ತಿದೆ ಎಂದು ಕಂಡ. ಆ ಪಿಶಾಚಿ ತನ್ನ ಬಳಿ ಬರುತ್ತಿದೆ ಎಂದುಕೊಂಡು ‘ಅಜ್ಜೀ ಅಜ್ಜೀ’ ಎಂದು ಈಕರಿಸಿ ‘ಉಚ್ಚೆ ಉಯ್ಯಬೇಕು ಏಳು ಮ್ಯಾಕೆ’ ಎಂದ. ಇಡೀ ಮನೆ ನಿಶ್ಯಬ್ದವಾಗಿ ಕತ್ತಲಿನಿಂದ ತುಂಬಿತ್ತು. ಅದರೊಳಗೆ ಯಾವುದನ್ನು ಗುರುತಿಸಲಾರದೆ ಹಿಡಿಯಲಾರದೆ, ಆ ಹಾಳು ಬುಗುರಿಯಿಂದಲೇ ಹೀಗಾಗುತ್ತಿದೆಯೇನೋ ಎಂದು ಒಳಗೊಳಗೇ ಬಿಕ್ಕಿದ. ಹೆದರಿಕೆಯಿಂದ ಮತ್ತಷ್ಟು ಬಿಗಿಯಾಗಿ ಕಣ್ಣನ್ನು ಮುಚ್ಚಿಕೊಂಡ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಅವನ ಅಪ್ಪ ವಿಕಾರವಾಗಿ ಗೊರಕೆ ಹೊಡೆಯುತ್ತಿರುವುದು ಕೇಳಿಸಿತು. ಹಿತ್ತಲೆಲ್ಲ ಕಾಗೆಯೊಂದು ನೀರವತೆಯನ್ನು ಸೀಳುವಂತೆ ನಿದ್ದೆಗಣ್ಣಿನ ಸ್ವರದಲ್ಲಿ ವರ್‍ರ್ ಗುಟ್ಟಿ ಪಟಪಟ ಎಂದು ರೆಕ್ಕೆ ಬಡಿದಂತಾಯಿತು. ಆ ಹಂದಿ ಈಗ ಕಾಗೆ ರೂಪವಾಗಿ ಊರ ಸುತ್ತ ಹಾರಾಡಲು ಹೋಗುತ್ತಿರಬಹುದು ಎಂದುಕೊಂಡು, ಅಜ್ಜಿಯ ಸೀರೆಗೆ ಮೆಲ್ಲಮೆಲ್ಲಗೆ ಉಚ್ಚೆ ಉಯ್ಕೊಂಡು ನಿದ್ದೆಗಾಗಿ ಕಾದ. ಆ ಕತ್ತಾಲ ಮನೆಯೊಳಗೆಲ್ಲ ಅಪ್ಪನಂತದೇ ದೊಡ್ಡ ಸಪ್ಪಳದ ಹೆಜ್ಜೆಗಳು ನೆರಳೂ ಚಲಿಸಿದಂತೆ ಕಂಡು ಅಪ್ಪನಂತ ಕ್ರೂರಿ ಇನ್ನಾರೂ ಈ ಊರಿನಲ್ಲಿ ಇಲ್ಲವೇನೋ ಎಂದು ಮಲಗಿದ.
*
ಇಷ್ಟೆಲ್ಲ ಆಗಿದ್ದಾದರೂ ಯಾಕೆ, ಯಾವ ಹಿನ್ನೆಲೆಯಿಂದ ಎಂದು ಸ್ವತಃ ಚಿಕ್ಕಣ್ಣನಿಗೇ ಗೊತ್ತಾಗಲಿಲ್ಲ. ಗುಂಜಾರಯ್ಯ ಚಿಂತೆಯಿಂದ ಬೆಳಿಗ್ಗೆ ಎದ್ದು ಬೀಡಿ ಸೇದುತ್ತಾ ಕುಳಿತಿದ್ದ. ಆ ರಾತ್ರಿ ನ್ಯಾಯಕಟ್ಟೆಯಲ್ಲಿ ಕಂಪ್ಲೇಟ್ ಕೊಡಬೇಕು ಎನ್ನುತ್ತಿದ್ದ ಮಾತುಗಳ ಸುಳಿದು ಏನಾಗುತ್ತದೋ ಎಂದು ಹೆದರಿದ. ಚೆಲುವ ಎದ್ದಿದ್ದವನು ಯಥಾಪ್ರಕಾರ ಹಿತ್ತಲಿಗೆ ಉಚ್ಚೆ ಉಯ್ಯಲು ಬಂದು ನಿಂತಾಗ ಹಂದಿಯ ವಿಕಾರ ರೂಪವನ್ನು ನೋಡಿ ಬಂದು ಮೆಲ್ಲಗೆ ‘ಅಪೋ ಹಿತ್ಲೆಲಿ ಆ ಹಂದಿಯ ನಾಯಿಗೊಳು ತಿಂತಾವೆ’ ಎಂದ. ‘ಅಯ್ಯೋ! ತೂ ಹಾಳಾದೋರ, ವತಾರೆ ಎದ್ದೇಟ್ಗೆ ಯಂತಾ ಸುದ್ದಿ ಯೇಳುಕ್ ಬಂದವ್ನೆ ನೋಡು’ ಎಂದು ಬೈಯ್ದುಕೊಂಡು ಹಿತ್ತಲಿಗೆ ಬಂದು ಆ ನಾಯಿಗಳನ್ನು ಹೊಡೆದು ಅಟ್ಟಿದ. ಇಷ್ಟಕ್ಕೆಲ್ಲ ಕಾರಣ ‘ಚಿಕ್ಕ ಹೈದನೇ’ ಎಂದು ವಿಕಾರವಾಗಿ ಹೊಟ್ಟೆ ಬಗೆಸಿಕೊಂಡು ಬಿದ್ದಿದ್ದ ಹಂದಿಯನ್ನು ಕಂಡು, ‘ಬ್ಯಾಡಕಲಾ ಬ್ಯಾಡಾ ಅಂತ ಬಾಯಬಡ್ಕಂಡು ಮುಚ್ಚಿಸ್ಲಾ ಗುಂಡಿಯಾ ಅಂತ ಯೇಳುದ್ರೂ ನನ್ ಮಾತ ಲೆಕ್ಕ ಜಮುಕ್ಕೇ ತಕದೆವೊದ್ನಲ್ಲ… ಅಂದ್ಗೊಳ್ ಬಿದ್ದೋ, ಕುರಿಗೋಳ್ ಬಿದ್ದೋ, ಕೋಳಿ, ನಾಯಿ, ಕ್ವಾಣಾ, ಏನೇನೋ ಬಿದ್ದೋ… ಅಯ್ಯೋ, ಈ ಗುಂಡಿವೊಳಗೆ ಏನೇನ್ ಬಿದ್ವೋ ಕಾಣ್‌ನಲ್ಲಪ್ಪಾ, ಎಲ್ಲೆಲ್ಲೋ ಅವ ಅಂನ್ಕಂದಿದ್ದೆ ನರುಕ್ವಾ. ಅದು ಇಲ್ಲೇ ನನ್ ಮನೆಲೇ ಅದಲ್ಲಪ್ಪಾ’ ಎಂದು ನಿಟ್ಟುಸಿರು ಬಿಟ್ಟ. ಅಸಹಾಯಕತೆಯಿಂದ ಮಗನ ಎದಿರು ಆತನ ಎಷ್ಟೋ ಬುದ್ದಿಗಳೆಲ್ಲ ಧೂಳಾಗಿ ಬಿದ್ದಿದ್ದವು. ಆತನ ಸಹಜ ಸಾದ್ವಿತನ ಕೆರಳಿ, ‘ಈ ನರುಕ್ವಾ ತಪ್ಪುಸುಕೆ ಯಾರಿದ್ದಾರಪ್ಪಾ, ಲೋಕ್ ವೆಲ್ಲಾ ಒಂತಾರಾ ಇದ್ರೆ ಈ ವೂರೊಂದೇ ಒಂದ್ ತರ್‌ವಲ್ಲ. ಯೇಲೊಳ್‌ಗೆ ಬಿದ್ ಅಂದಿಯ ತಿನ್ನುಕೆ, ಮೂರ್ಕಾಸ್ ಮಾಡ್ಕೊಕೆ ಇಪಾಟಿ ಇಕ್ಮತ್ ಮಾಡ್ಕೊದಾಗಿತ್ತೆ. ಥೂತೋ ನರಕಾ ನರಕಾ ಇದ್ರೊಳಗೆ ಎಲ್ರುನ್ನೂ ತಳ್ತಾ ಕುಂತಿರು ದೇವ್ರು ಅದೆಂಗ್ ಎಲ್ಲನೂ ನೋಡ್ತಾ ಕುಂತಿದ್ದನೋ’… ಎಂದು ಒಳಗೊಳಗೇ ತರ್ಕಿಸುತ್ತಾ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಕಂಗಾಲಾದ.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
*
ಚಿಕ್ಕಣ್ಣನ ಹೋಟೆಲಿಗೆ ಜನವೆಲ್ಲ ಆ ರಾತ್ರಿಯೇ ಬಹಿಸ್ಕಾರ ಹಾಕಿದ್ದರು. ‘ಆತ ಏಲುಗುಂಡಿಗೆ ಬಿದ್ದಿದ್ದೋನು; ಅವನಿಂದ ನಾವೆನೂ ಮುಟ್ಟಿಸ್ಕೋ ಕೂಡ್ದು. ಏನ್ನೂ ತಿನ್‌ಬಾರ್‍ದು. ನಾವೂ ಕೂಡ ಯಾವುದ್ನೇ ಆದ್ರು ಅವುನ್‌ಗೆ ಕೊಡಬಾರ್‍ದು’-ಎಂದು ನಿರ್ಣಯಿಸಿ, ನಂತರ ಆತ ಮೈಲಿಗೆಯಾಗಿ ಕೆಟ್ಟಿರುವುದರಿಂದ ಪೂಜಾರಿಕೆ ಕೆಲಸದಿಂದ ದೂರವಾಗಬೇಕು. ಅವನನ್ನು ಯಾವ ದೇವಕಾರ್ಯಕ್ಕೂ ಸೇರಿಸಿಕೊಳ್ಳಬಾರದು. ಆ ಇಡೀ ಮನೆಯ ಜನ ಯಾವ ಕಾರ್ಯದಲ್ಲೂ ತಮ್ಮ ಜೊತೆ ಬಾಗಿಯಾಗಕೂಡದು… ಇತ್ಯಾದಿ ಇತ್ಯಾದಿಯಾಗಿ ನಿಷೇಧಗಳನ್ನು ಹೇರಿದರು. ಇದಿಷ್ಟೇ ಅಲ್ಲದೆ ಅಕ್ಕೂರಿನ ಪೋಲಿಸ್ ಸ್ಟೇಷನ್‌ಗೆ ತಿಪ್ಪೇಗೌಡರ ಬೆಂಬಲದಿಂದ ದೂರು ಬರೆಸಿಕೊಂಡು ಹೋಗಿ ಕೊಟ್ಟುಬಂದಿದ್ದರು. ಹೀಗೆ ಎಲ್ಲ ತರದಲ್ಲೂ ಆ ಕಕ್ಕಸುಗುಂಡಿ ಇಡೀ ಊರಿನ ಒಂದು ನರಕ ಎನ್ನುವಂತೆಯೂ ಊರಿಗೆಲ್ಲ ಅದೊಂದು ದೊಡ್ಡ ಬಾದೆ, ಅವಮಾನ ಎಂತಲೂ ಆಗಿಬಿಟ್ಟಿತು. ಚೆಲುವ ಈ ಸಂಕೀರ್ಣತೆಯೊಳಗೆ ಬುಗುರಿಯ ಚೆಂದವನ್ನೂ, ಸುತ್ತುವ ಪರಿಯನ್ನೂ ನೆನೆಸಿಕೊಂಡನಾದರೂ ಈ ಪರಿಸ್ಥಿತಿಯಲ್ಲಿ ಅದನ್ನು ಹುಡುಕುವ ತೃಣ ಮಾತ್ರ ಆಸೆಯನ್ನೂ ಕಳೆದುಕೊಂಡಿದ್ದನು. ಹಂದಿಯ ವಿಕಾರ ದೃಶ್ಯ ಪದೇ ಪದೇ ಆ ರಾತ್ರಿಯ ಚಿತ್ರವನ್ನು ಬಿಡಿಸುತ್ತಿತ್ತು. ಇಡೀ ಊರಿಗೆ ಆ ಏಲುಗುಂಡಿ ಒಂದು ವಿಚಿತ್ರ ಸಾಂಸ್ಕೃತಿಕ ಸಮಸ್ಯೆಯಾಗಿ ಪರಿವರ್ತನೆ ಪಡೆಯುತ್ತಾ, ಸಂಕೀರ್ಣತೆಯಲ್ಲಿ ಕಳೆದುಹೋಗುವ ಮಾನವೀಯ ಕ್ಷಣಗಳು ದಿಕ್ಕಾಪಾಲಾಗಿ ಒಂದು ಇತಿಹಾಸವಾಗಿ ಬೆಳೆಯತೊಡಗಿತು. ಈ ಕಕ್ಕಸು ಗುಂಡಿಗೆ ಇಂತಾ ಎಂತೆಂತದೋ ಗುಟ್ಟುಗಳೆಲ್ಲ ಗೊತ್ತಿದ್ದವು. ಹಿಂದೆ ಅವರಿವರು ಕದ್ದು ಬಸುರಾಗಿದ್ದಾಗ ಹುಟ್ಟಿದ ಎಳೆಕೂಸುಗಳನ್ನು ತಂದು ಇದೇ ಕಕ್ಕಸು ಗುಂಡಿಗೆ ಹಾಕಿದ್ದದ್ದೂ ಉಂಟು. ಇದೆಲ್ಲ ಊರಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅಂತೂ ಗಾಳಿ ಬೀಸಿದಂತೆಲ್ಲ ಹೆಣವಾದ ಊದಿಕೊಂಡ ಹಂದಿಯ ವಾಸನೆಯೂ, ಕೊಳೆತ ಏಲಿನ ಗಬ್ಬುನಾತವೂ ಸಮಸ್ಯೆಯ ಸೋಂಕೂ ಹಬ್ಬಿ ಆ ಸುಂದರ ಮುಂಜಾವು ವಿಷಮಯವಾಯ್ತು.
*
ಕೇರಿಯ ಜನ ಈ ವಿಕಾರ ವಾಸನೆಗೆ ಬೇಸತ್ತು ಚಿಕ್ಕಣ್ಣನ ಮೇಲೆ ಜಗಳ ಕಾಯಲು ತವಕಿಸುತ್ತಿದ್ದರು. ನಾಯಿಗಳು ಹಿತ್ತಲಲ್ಲಿ ಹಂದಿ ಬಾಡಿಗಾಗಿ ಕಿತ್ತಾಡುತ್ತಿದ್ದವು. ಮನೆಯ ಹೆಂಗಸರು ನೀರು ತರಲು ಹೋಗಿದ್ದವರಿಗೆ ಬಹಿಷ್ಕಾರ ಹಾಕಿರುವುದು ತಿಳಿದು ಕಣ್ಣೀರು ಹಾಕುತ್ತಾ, ಗಂಡಸರು ಮಾಡಿದ ಕೆಲಸಕ್ಕೆಲ್ಲ ತಾವು ಬಲಿಯಾಗುತ್ತಿರುವುದಕ್ಕೆ ಅತ್ತೂ ಸೊರಗಿ ಮನೆ ಸೇರಿದರು. ಚೆಲುವ ದಿಕ್ಕಿಲ್ಲದವನಂತೆ ಪಡಸಾಲೆಗೆ ಬಂದು ಕುಳಿತ. ವ್ಯಂಗ್ಯ ಮಾಡುವಂತೆ ಬುಗುರಿ ಗಾರೆನೆಲದ ಮೇಲೆ ಗೊಯ್ಗಂಟ್ಟಿದಂತಾಯಿತು. ಅಷ್ಟು ಹೊತ್ತಿಗಾಗಲೇ ಹೊತ್ತು ಮೀರಿತ್ತು. ಚಿಕ್ಕಣ್ಣನನ್ನೂ, ಅತಾರಿಯನ್ನೂ ಅಕ್ಕೂರಿನ ಪೋಲಿಸಿನವರು ತಿಪ್ಪೇಗೌಡರ ಬೆಂಬಲದಿಂದ ಠಾಣೆಗೆ ಕರೆದುಕೊಂಡು ಹೋಗಿದ್ದರು. ತಿಪ್ಪೇಗೌಡರಿಗೆ ಅತಾರಿಯ ಬಗ್ಗೆ ಅಂತಹ ವಿಶೇಷ ವ್ಯಾಮೋಹ ಪ್ರೀತಿ ಇಲ್ಲದಿದ್ದರೂ ಕೂಡ ಹಿಂದೆ ಇದೇ ಚಿಕ್ಕಣ್ಣನ ಕಕ್ಕಸು ಗುಂಡಿಯಲ್ಲಿ ತಮ್ಮ ಕೋಣ ಪ್ರಾಣ ಕಳೆದುಕೊಂಡು ಹೊಲೆಯರ ಹೊಟ್ಟೆ ತುಂಬಿಸಿದ್ದ ನೋವು ಮತ್ತು ಸಿಟ್ಟು ಎರಡೂ ಇದ್ದಿದ್ದರಿಂದಲೇ ಈ ದೂರಿನೊಳಗೆ ಪ್ರವೇಶಿಸಿದ್ದರು. ಯಾರೂ ಇನ್ನೂ ಠಾಣೆಯಿಂದ ಹಿಂತಿರುಗಿ ಬಂದಿರಲಿಲ್ಲ.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಕಕ್ಕಸು ಗುಂಡಿಯನ್ನು ಮುಚ್ಚಬೇಕೆಂತಲೂ, ಆತನಿಂದ ಇಡೀ ಹಳ್ಳಿಯೇ ಕೆಡುತ್ತಿದೆ ಎಂತಲೂ, ಜನರ ರಾಸುಗಳನ್ನು ಗುಂಡಿಗೆ ಬೀಳಿಸಿ ಅವನ್ನು ನಂತರ ಮಂಗಮಾಯ ಮಾಡಿ ಮಾಂಸದ ವ್ಯಾಪಾರಮಾಡಿ ಜನರಿಗೆ ಮೋಸ ಮಾಡುತ್ತಿದ್ದಾನೆಂತಲೂ, ಇದೆಲ್ಲದರಿಂದ ಆಗಿರುವ ನಷ್ಟವನ್ನು ಎಲ್ಲರಿಗೂ ತುಂಬಿಕೊಡಬೇಕೆಂತಲೂ ಹಲವಾರು ಆಪಾದನೆಗಳನ್ನು ಸ್ಟೇಷನ್‌ನಲ್ಲಿ ಕೊಟ್ಟಿದ್ದರು. ಸ್ಟೇಷನ್‌ನಲ್ಲಿ ಇಂತಾ ವಿಚಿತ್ರ ಕೇಸನ್ನು ಅದುವರೆಗೆ ಅಲ್ಲಿನವರು ಯಾರೂ ಎದುರಿಸಿರಲಿಲ್ಲ. ಅತ್ಯಂತ ತಮಾಷೆಯ ಕೇಸಿದು ಎಂದುಕೊಂಡು ನಕ್ಕೂ ನಕ್ಕೂ ಸಾಕಾಗಿ ಇನ್‌ಸ್ಪೆಕ್ಟರರು ಎರಡೂ ಪಾರ್ಟಿಗಳವರನ್ನು ಕೇಳಿ ಏನೇನೋ ಹೇಳಿದರು. ಬಂದಿದ್ದವರನ್ನೆಲ್ಲ ವಾಪಸ್ಸು ಊರಿಗೆ ಕಳಿಸಿಬಿಟ್ಟರು. ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು. ಚಿಕ್ಕಣ್ಣ ಇಂಥಾ ಇಕ್ಕಟ್ಟಿನಲ್ಲೂ ಕಕ್ಕಸುಗುಂಡಿಯ ಬಗ್ಗೆ ಸಮರ್ಥಿಸಿಕೊಳ್ಳಲು ನೋಡಿದನಾದರೂ ಆ ಗುಂಡಿಯಲ್ಲಿ ಆದ ಎಷ್ಟೋ ಅನಾಹುತಗಳಿಗೆ ಈತನೇ ಕಾರಣವೆಂದು ಎಲ್ಲರೂ ನಂಬಿದ್ದರು. ಇದರಿಂದಾಗಿಯೇ ಗುಂಜಾರಯ್ಯನನ್ನು ಕೇಸಿನಿಂದ ಹೊರಗುಳಿಸಿದ್ದರು. ಇನ್‌ಸ್ಪೆಕ್ಟರು ನಗುತ್ತಾ ‘ಅಲ್ಲಯ್ಯಾ; ಚಿಕ್ಕಣ್ಣ ಅನ್ನೋ ಇವನೇ ಏನು ನಿನ್ನನ್ನು ಒಳಕ್ಕೆ ತಳ್ಳಿದ್ದು’ ಎಂದು ಅತಾರಿಗೆ ಪ್ರಶ್ನೆ ಎಸೆದರು. ಅತಾರಿ ‘ವುಂಕ್‌ನ್ ಸ್ವಾಮಿ’ ಎಂದ. ‘ಹೇಗೆ ಬಿದ್ದಯ್ಯಾ’ ಎಂದಾಗ ಅತಾರಿ ಮುಖ ಸಿಂಡರಿಸಿಕೊಂಡು ತೆಪ್ಪಗೆ ನಿಂತ. ‘ಹೇ ಮಾತಾಡಯ್ಯ: ನಿನ್ನನ್ನೇ ಕೇಳ್ತಾ ಇರೋದು’ ಎಂದು ರೇಗಿದಾಗ ‘ಮೊಕಾಡಗೆ ಬಿದ್ದೆ ಸ್ವಾಮಿ’ ಎಂದ. ಆಗ ‘ಅಂಗಾದ್ರೆ ಪೂರಾ ಅದರೊಳಗೇ ಅದ್ಕೋದೇನಯ್ಯಾ’ ಎಂದು ಗಂಟಲು ಅಗಲಿಸಿ ಗಟ್ಟಿಯಾಗಿ ನಕ್ಕರು. ಆ, ಈ ಪೋಲೀಸರೆಲ್ಲ ಒಕ್ಕೊರಲಿನಿಂದ ಅವರಿಗೆ ಜೈಕಾರ ಹಾಕುವಂತೆ ನಗೆಯ ಗುಡುಗುಗಳನ್ನು ಇಬ್ಬರ ಮೇಲೂ ಎಸೆದರು. ನಂತರ ಚಿಕ್ಕಣ್ಣನಿಗೂ ಅದೇ ಪ್ರಶ್ನೆಗಳು ಬಂದು ‘ನೀನೂ ಏಲ್‌ನಲ್ಲಿ ಬಿದ್ದು ಈಜಾಡಿದ್ದಿಯೇನಯ್ಯ’ ಎಂದು ನಗೆ ತಡೆದುಕೊಂಡು ಕೇಳಿದರು. ‘ಹೌದು’ ಎನ್ನುವಂತೆ ಚಿಕ್ಕಣ್ಣ ತಲೆ ತಗ್ಗಿಸಿದ.
*
ಅಂತೂ ಇಷ್ಟೆಲ್ಲಾ ವಿಚಾರಣೆ ಆದಮೇಲೆ ಇನ್‌ಸ್ಪೆಕ್ಟರು ಗಂಟಲನ್ನು ಗಂಭೀರ ಸ್ವರಕ್ಕೆ ತಂದುಕೊಳ್ಳುತ್ತಾ ‘ನೋಡ್ರಯ್ಯಾ ಹೇಗೋ ನೀವಿಬ್ರೂ ಆ ಕಕ್ಕಸ್ ಗುಂಡಿಯೊಳಗೆ ಬಿದ್ದು ಮೈಲಿಗೆ ಮಾಡ್ಕಂಡಿದ್ದೀರಿ. ಇದ್ರೆಲಿ ತಪ್ಪು ಚಿಕ್ಕಣ್ಣಂದೇ ಇದ್ರೂ ಅತಾರಿದೂ ಸ್ವಲ್ಪ ಇದೆ. ಇದನ್ನೆಲ್ಲ ಆಮೇಲೆ ನೋಡೋಣ. ಸದ್ಯಕ್ಕೆ ಎಂಗೂ ಏಲ್‌ನಲ್ಲಿ ಬಿದ್ದೋರು ನೀವಾದ್ರಿಂದ ನಮ್ಮ ಸ್ಟೇಷನ್‌ನಲ್ಲೂ ಇದೇ ಒಂದು ಪ್ರಾಬ್ಲಮ್ ಆಗಿದೆ. ಹಾಳಾದ್ದು ಇದು ಹಳ್ಳಿ ಪೋಲಿಸ್ ಸ್ಟೇಷನ್ ಆದ್ರಿಂದ ಸಿಟಿ ತರದ ಡ್ರೈನೇಜ್ ಸಿಸ್ಟಂ ಇಲ್ಲಿಲ್ಲ. ಸೇಮ್ ಚಿಕ್ಕಣ್ಣನ ತರದ ಕಕ್ಕಸ್ ಮನೆನೇ ಇಲ್ಲೂ ಇರೋದು. ಈಗ ಅದು ಕಕ್ಕಸ್ಸಿಂದ ತುಂಬಿಹೋಗಿದೆ. ಅದನ್ನ ನೀವಿಬ್ರೂ ಸೇರಿ ಎತ್ತಿ ಹೊರ್‍ಗೆ ಹಾಕಿ ಖಾಲಿ ಮಾಡ್ರಯ್ಯಾ. ನಾವೆಲ್ಲ ಯಾರೂ ಆ ಕಕ್ಕಸ್ ಮನೆಗೆ ಹೋಗದಂತೆ ಆಗಿಬಿಟ್ಟಿದೆ’ ಎಂದು ಹೇಳಿ ‘ನೀವೆನಾದ್ರೂ ಇದಾ ಮಾಡ್ಲಿಲ್ಲಾ ಅಂದ್ರೆ ಗ್ಯಾರೆಂಟಿ ನಿಮ್ಮನ್ನ ಆರಾರ್ ತಿಂಗಳು ಜೈಲೊಳಗೇ ಕೊಳೆ ಹಾಕಿಡ್ತೀನಿ’ ಎಂದು ಹೆದರಿಸಿದರು. ಚಿಕ್ಕಣ್ಣನೂ, ಅತಾರಿಯೂ, ನೋವಿನಿಂದ ಇಂತಾ ಸಿಕ್ಕಿಗೆಲ್ಲಾ ತಾವು ಸಿಕ್ಕಿ ಹಾಕಿಕೊಳ್ಳಬಾರದಿತ್ತೇನೋ ಎಂಬ ಮುಖಭಾವದಲ್ಲಿ ‘ಆಗುದಿಲ್ಲ ಸ್ವಾಮಿ, ಯೀಗ್ಲೇ ಆ ನರುಕುಕ್ ಬಿದ್ ಸಾಕಾಗದೆ. ತಿರ್‍ಗಾ ಅಲ್ಲಿಳುದು ನಮ್ ದೇವ್ರಿಂದನಾ ದೂರಾಸ ಆಗ್ಲಾರೆ’ ಎಂದು ಅತಾರಿ ವಯ್‌ಗುಟ್ಟಿದ. ಇನ್‌ಸ್ಪೆಕ್ಟರು ಸಿಟ್ಟಿನಿಂದ ರೂಲು ದೊಣ್ಣೆ ತಿರುಗಿಸುತ್ತಾ ‘ಸೂಳೇ ಮಕ್ಳಾ, ಎಲ್ ಏಲ್‌ನೆ ತಿನ್ಕಂದ್ ಬಿದ್ದಿರೋ ನೀವು ಹಿಂತಿರುಗ್ ಮಾತಾಡ್ತೀರಾ, ಹಿಂದೆಲ್ಲ ಯೇಲ್‌ನೇ ಅಲ್‌ವೇನ್ರೊ ನೀವು ಹೊರ್ತಿದ್ದು. ಈಗೇನ್ ಬಾಳ್ ದೊಡ್ ಮನುಸ್ರೇನೋ ನೀವು. ಲೋಪರ್ ನನ್ ಮಕ್ಳಾ, ನಾನ್ ಹೇಳ್ತಂಗೆ ಮಾಡ್ಲಿಲ್ಲಾ ಅಂದ್ರೆ ಚಾರ್ಜ್ ಸೀಟ್ ಬರ್ದು ಸೆಂಟ್ರು ಜೈಲ್ಗಾಕಿ ಸಾಯ್ಸಾಕ್ ಬುಡ್ತಿನಿ. ದೇಶದೇಶದ ಏಲೆಲ್ಲನು ವರ್‍ಸುವಂಗ್ ಮಾಡ್‌ಬುಡ್ತೀನಿ. ಇಲ್ಲೇನೋ ಸ್ವಲ್ಪ ಇದೆ. ಅಲ್ಲಿ ಸೆಂಟ್ರಲ್ ಜೈಲಲ್ಲಿ ಬರೀ ಕಕ್ಕಸ್‌ನೇ ದಿನಾ ಕ್ಲೀನ್ ಮಾಡುವಂಗ್ ಮಾಡಿ ಅದ್ನೇ ತಿನ್ನುವಂಗ್ ಮಾಡಿಸ್ತೀನಿ’ ಎಂದು ಕುಣಿದಾಡಿದರು. ಇಬ್ಬರೂ ತೆಪ್ಪಗಾಗಿ ಉಸಿರು ಬಿಟ್ಟಂತವರಾಗಿ ತಲೆಬಾಗಿ ಒಪ್ಪಿ ಕಕ್ಕಸ್ ಗುಂಡಿಗೆ ಇಳಿದರು. ಈಗ ಇಬ್ಬರೂ ಯಾವ ಮಾತೂ ಇಲ್ಲದಂತೆ, ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳಲಾಗದೆ, ಹಿಂದಿನ ನೀಲಿನಕ್ಷೆಯ ಯಾವ ಯೋಜನೆಯೂ ಇಲ್ಲದಂತೆ ಗುದ್ದಲಿ ಮಂಕರಿಗಳಿಂದ ಒಳಗಿದ್ದ ಏಲುಗುಂಡಿಯನ್ನು ಖಾಲಿಮಾಡಿ ಬೆವರು ಹರಿಸಿಕೊಂಡು ನಿಂತರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಇನ್‌ಸ್ಪೆಕ್ಟರು ಸಂತೋಷಗೊಂಡು, ಮರೆಯಲ್ಲೇ ಇವರ ಫಜೀತಿಗೆ ನಗುತ್ತಾ, ಕೊನೆಗೆ ಇಬ್ಬರಿಗೂ ಬುದ್ಧಿಹೇಳಿ ಊರಿಗೆ ಕಳುಹಿಸಿಬಿಟ್ಟರು. ಅತಾರಿಯೂ, ಚಿಕ್ಕಣ್ಣನೂ ಎರಡು ದಿಕ್ಕಾಗಿ ಕಂಗಾಲಾಗಿ ದೊಡ್ಡ ಅವಮಾನಕ್ಕೆ ಗುರಿಯಾಗಿ ವ್ಯಗ್ರರಾಗಿ ಊರು ತಲುಪಿದರು. ಚಿಕ್ಕಣ್ಣ ಮೈ ರೋಮರೋಮದಲ್ಲೂ ಸಿಟ್ಟನ್ನು ಬಳಿದುಕೊಂಡು ಅತ್ಯಂತ ವ್ಯಥೆಯಿಂದ ಯಾವತ್ತೂ ಕಂಡಿರದಷ್ಟು ಹಿಂಸೆ ಅವಮಾನಗಳನ್ನು ನುಂಗುತ್ತಾ ಊರಿಗೆ ಬರುವ ದಾರಿಯಲ್ಲಿ ಇದ್ದ ಪೆಂಟೆಯಲ್ಲಿ ವಿಪರೀತ ಎಂಡ ಕುಡಿಯತೊಡಗಿದ. ಮರೆಯಬೇಕು ಎಂದುಕೊಂಡರೂ ಅದೆಲ್ಲ ಮತ್ತೆ ಮತ್ತೆ ನಗಾರಿಯ ಶಬ್ದದಂತೆ ತಲೆಯೊಳಗೆ ಗಟ್ಟಿಸತೊಡಗಿದವು. ದಿನದ ಬಹುಪಾಲು ವೇಳೆ ಸ್ಟೇಷನ್‌ನಲ್ಲೇ ಇರಿಸಿಕೊಂಡಿದ್ದ ಅವರಿಗೆ ಕೊಟ್ಟ ಅವಮಾನದ ಹೊಡೆತಗಳನ್ನು ಸಹಿಸದೆ ಯಾವುದೂ ಅರ್ಥವಾಗದೆ ಕುದಿಯತೊಡಗಿದ. ಸಂಜೆಯ ಕತ್ತಲು ಬಲಿಯುತ್ತಿತ್ತು. ಮನೆಗೆ ಬರುತ್ತಿರುವಂತೆಯೇ ಕಕ್ಕಸುಗುಂಡಿಯ ಹಾಗೂ ಸತ್ತ ಹಂದಿಯ ವಾಸನೆ ವ್ಯಂಗ್ಯ ಮಾಡಿ ಚಿಕ್ಕಣ್ಣನನ್ನು ಕುಕ್ಕಿತು. ಚೆಲುವ ತನ್ನ ಅಪ್ಪನ ವಿಕಾರ ರೂಪವನ್ನು ಕಂಡು ಬೆಚ್ಚಿ, ಬಲವಂತದಿಂದ ಓದುವ ಕೆಲಸಮಾಡುತ್ತಿದ್ದವನು ಮೆತ್ತಗೆ ಮುದುರಿ ಕುಳಿತ. ಚಿಕ್ಕಣ್ಣನಿಗೆ ತನ್ನ ಅವಮಾನ, ಸಿಟ್ಟು ಇತ್ಯಾದಿಗಳ ಜೊತೆಗೆ ಊರಲ್ಲಿ ನ್ಯಾಯಕಾರರು ಹೇರಿದ್ದ ಬಹಿಷ್ಕಾರ ಮತ್ತು ತಿಪ್ಪೇಗೌಡರು ಕೇಸು ಬರೆಸಿಕೊಟ್ಟಿದ್ದು ಎಲ್ಲವೂ ದೆವ್ವದಂತೆ ಮನೆಯೊಳಗೆ ಸುತ್ತಿಕೊಂಡು ಅವನನ್ನೇ ತಿವಿಯತೊಡಗಿದವು. ‘ಲೇಯ್; ಎಲ್ಲೋಗಿದ್ದಾನ್ಲಾ ನಿಮ್ಮಯ್ಯ ಅನಿಸ್ಕೋ ಸೂಳೆಮಗಾ, ಆ ನನುಗುಟ್ಟಿರೋ ಅಪ್ಪಾ ಅನ್ನಿಸ್ಕೋನೆಲ್ಲದ್ದಾನು. ಕೂಕ್ಕ ಬರೋಗು’ ಎಂದು ಮುದುರಿ ಕುಳಿತಿದ್ದ ಮಗನ ರಟ್ಟೆ ಹಿಡಿದು ಎತ್ತಿ ತಳ್ಳಿದ. ಚೆಲುವ ಬುಳಬುಳನೆ ಉಚ್ಚೆ ಹೊಯ್ದುಕೊಂಡು, ರಾತ್ರಿ ಅಜ್ಜಿಯ ಸೀರೆಗೆ ಇದೇ ರೀತಿ ಉಚ್ಚೆ ಹೊಯ್ದುಕೊಂಡದ್ದು ನೆನಪಾಗಿ, ‘ನಂಗೊತ್ತಿಲ್ಲ ಯತ್ತಗೋಗಿದ್ದನೋ’ ಎಂದು ಅಳಲಾರಂಭಿಸಿದ. ಚಿಕ್ಕಣ್ಣ ಕೆಂಡಕೋಪವಾಗಿ ‘ಅವುನೆಂಣ್ತಿನಾ ಕೇಯುನತಾರಿಯಾ ತೋಳ್ನೋ ತೊಡಿಯೋ ಮುರಿದೆ ನಾ ಬಿಡುದಿಲ್ಲ’ ಎಂದು ದೊಡ್ಡಗಂಟಲು ತೆಗೆದ. ಚೆಲುವನ ಅವ್ವ ಕೋಣೆಯಲ್ಲಿ ಹಿಟ್ಟು ಬೆರೆಸುತ್ತಿದ್ದವಳು ಭಯದಿಂದ ಓಡಿಬಂದು ಗಂಡನ ರುದ್ರಾವತಾರ ನೋಡಿ ತಕ್ಷಣಕ್ಕೇ ತೊಡೆಗಳನ್ನು ನಡುಕದಿಂದ ಬಿಗಿಹಿಡಿದುಕೊಂಡು ‘ಅಯ್ಯೋ ರಾಮಾ, ಊರೋರೆಲ್ಲಾವೊಂದಾಗಿ ಏನಾರ ಮಾಡುದ್ರೆ ಏನ್ ಮಾಡನಪ್ಪಾ. ನಿನ್ ದಮ್ಮಯ್ಯಾ ಅಂತಿನಿ ಸುಮ್ನಿರು. ಎಲ್ರೂ ಮಾತಾಡ್ಕಂದವ್ರೆ. ಜಗಳ ಬೋರ ಮಾಡಬ್ಯಾಡ. ವಡ್ದಾಟ್‌ದೆಲಿ ಯಾರಿದ್ದರು ಬಿಡಿಸ್ಕೋಕೆ ನಮ್ಗೀಗ’ ಎಂದಳು.
ಹೆಂಡತಿಯ ಈ ಮಾತುಗಳನ್ನು ಅತ್ತ ಬಿಸಾಡಿ, ‘ಲೇಯ್ ಬೊಡ್ಡಿ, ವೊಂಟೋಗು ಮಾನ್‌ವಾಗೆ ವೊಳಕೆ’ ಎಂದು ತಳ್ಳಿದ. ಹೆಂಡತಿ ಅಷ್ಟಕ್ಕೂ ಕೇಳದೆ ಕಾಲುಕಟ್ಟಿಕೊಳ್ಳಲು ಮುಂದೆ ಹೋದಾಗ ‘ನಿನ್ನವ್ವುನ್ನಾ ಕೇಯುಳೇ, ನನ್ಗೇ ಬುದ್ದಿಯೇಳುಕ್ ಬಂದಿಯಾ ನೀನು’ ಎಂದು ನೂಕಿ ಬೆನ್ನಿನ ಮೇಲೆ ಡಮಡಮ ಎಂದು ಗುದ್ದಿದ. ಚೆಲುವ ಜೋರಾಗಿ ಅಳುತ್ತಾ ಬೀದಿಗೆ ಓಡಿಬಂದು, ‘ಬನ್ರಪ್ಪೋ ನಮ್ಮವ್ವುನ್ನಾ ಸಾಯ್ಸಾಕೆಬುಡ್ತನೆ ನಮ್ಮಪ್ಪ’ ಎಂದು ಅಂಗಲಾಚಿದ. ಚಿಕ್ಕಣ್ಣನ ಬಗ್ಗೆ ಈಗ ಯಾರಿಗೂ ಮರುಕ ಇರಲಿಲ್ಲ. ಇಡೀ ಕೇರಿಯಲ್ಲಿ ಕಕ್ಕಸ್ಸಿನ ಗಬ್ಬು ನಾರುತ್ತಿದ್ದರಿಂದಲೂ, ಆತನ ಬಗ್ಗೆ ಇದ್ದ ಕ್ರೋಧ ಮತ್ತು ಬಹಿಷ್ಕಾರದಿಂದಲೂ ಬಿಡಿಸಿಕೊಳ್ಳಲು ಯಾರೂ ಸಹಾಯಕ್ಕೆ ಬರಲಿಲ್ಲ. ಚಿಕ್ಕಣ್ಣ ಭಯಂಕರವಾಗಿ ಕಿರುಚಿ ಯಾರು ಯಾರನ್ನೋ ಬೈಯುತ್ತಾ ದೊಣ್ಣೆಗಾಗಿ ಹುಡುಕಾಡಿದ. ಅವನ ಸಿಟ್ಟಿಗೆ ಸಿಕ್ಕಿಹಾಕಿಕೊಂಡಿದ್ದವಳು ಆತ ಹಿಟ್ಟಿನ ದೊಣ್ಣೆ ತರಲು ಒಳಗೆ ಹೋದಾಗ ಹಿತ್ತಲ ಬಾಗಿಲಿಂದ ಓಡಿಹೋದಳು. ಕೈಗೆ ಯಾರೂ ಸಿಗಲಿಲ್ಲ ಎಂದು ಕೊನೆಗೆ ಹುಚ್ಚನಂತೆ ಆವೇಶದಿಂದ ಇಡೀ ಹೊಲಗೇರಿ ವಕ್ಕಲಗೇರಿಯ ಜನರನ್ನೆಲ್ಲ ಒಟ್ಟಾಗಿ ಬೈಯ್ಯುತ್ತಾ ಕೋಣೆಯಲ್ಲಿದ್ದ ನೀರಿನ ಮಡಕೆಯನ್ನು ದೊಣ್ಣೆಯಿಂದ ಚಚ್ಚಿದ. ನೀರೆಲ್ಲ ಹರಿಯಿತು. ಸಾಲಾಗಿ ಜೋಡಿಸಿದ್ದ ಮಡಕೆಗಳಿಗೆಲ್ಲ ಮನಬಂದಂತೆ ಚಟ್‌ಚಟ್ ಎಂದು ಚಚ್ಚಿ ಬಡಿದು ಕೋಪದಿಂದ ಕಿರುಚಾಡುತ್ತಿದ್ದ. ಹಿಟ್ಟಿನ ಮಡಕೆಯನ್ನು ಬೆಂಕಿ ಬೇಯಿಸುತ್ತಿತ್ತು. ಹಿಟ್ಟಿನ ಗಮಗಮ ಅಲ್ಲೆಲ್ಲ ಸುತ್ತಿಕೊಂಡು ಚಿಕ್ಕಣ್ಣನ ವಿಕಾರ ಕ್ರೌರ್ಯಕ್ಕೆ ಸಾಕ್ಷಿಯಂತೆ ನೋಡುತ್ತಲೇ ಇತ್ತು. ಮಡಕೆಗಳೆಲ್ಲ ಚೂರುಚೂರಾಗಿ ಉರುಳಾಡಿದವು. ಅವುಗಳಲ್ಲಿ ಇಟ್ಟಿದ್ದ ಹಲವಾರು ಬಗೆಯ ಕಾಳುಗಳು, ರಾಗಿ, ಜೋಳ, ಒಂದಿಷ್ಟು ಅಕ್ಕಿ, ಸ್ವಲ್ಪ ಭತ್ತ ಹೀಗೆ ಅವುಗಳ ಜೊತೆಗೆ ಸಣ್ಣ ಪುಟ್ಟ ಬಟ್ಟೆಯ ಗಂಟುಗಳು ಚೆಲ್ಲಾಪಿಲ್ಲಿಯಾಗಿ ಅಷ್ಟಗಲಕ್ಕೂ ಚೆಲ್ಲಿಕೊಂಡು ಶವದಂತೆ ಚಿಕ್ಕಣ್ಣನ ಕಾಲಿನಡಿ ಜರ್ಜರಿತವಾದವು. ಕೇರಿಯ ಯಾರೂ ಈ ಬಗ್ಗೆ ಸದ್ದೆತ್ತಲಿಲ್ಲ. ಚೆಲುವ ಭೀತಿಯಿಂದ ಅವ್ವ ಎತ್ತ ಹೋದಳೋ ಎಂದು ಕಂಗಾಲಾಗಿ ಬೀದಿಯ ಸಂಪಲ್ಲಿ ಒಬ್ಬನೇ ಮುಸುಮುಸುನೆ ಅಳುತ್ತ ನಿಂತ.
ಗುಂಜಾರಯ್ಯ ಅಪಾಯದ ಸುಳಿವು ತಿಳಿದೋ ಏನೋ ನಾಪತ್ತೆಯಾಗಿದ್ದ. ಚಿಕ್ಕಣ್ಣ ಹಿಂದೆ ಊರಲ್ಲಿ ಹುಲಿಯಂತೆ ಮೆರೆದಿದ್ದವನಿಗೆ ನ್ಯಾಯಾಸ್ಥಾನದಲ್ಲಿ ತುಂಡುಡುಗರ ಅಪಮಾನಕಾರಿ ನಗೆ ಆ ನಡುವೆಯೂ ಚಿಮ್ಮಿತು. ಗೊತ್ತುಗುರಿ ಇಲ್ಲದೆ ಬಾಯಿಗೆ ಬಂದಂತೆ ಭಾಷೆಯನ್ನು ಚೆಲ್ಲಾಡಿದ. ಚಿಕ್ಕಣ್ಣನೇನಾದರು ಬೀದಿಗೆ ಬಂದು ತಮ್ಮ ಮೇಲೇನಾದರು ಹೆಸರಿಡಿದೋ ಅಥವಾ ಪರೋಕ್ಷವಾಗಿ ಏನಾದರೂ ಒಂದು ಸಣ್ಣ ಮಾತಾಡಿದರೂ ಸಾಕು ಆತನನ್ನು ‘ಜಬ್‌ಗರಿಸ್‌ಬೇಕು’ ಎಂದು ಅವರವರ ಪಡಶಾಲೆಗಳಲ್ಲಿ ಕುಳಿತಿದ್ದರು. ಹೆಂಡತಿಯ ಮಾತಿಂದ ಚಿಕ್ಕಣ್ಣನಿಗೆ ಈ ಅನುಮಾನ ಭಯ ಅಧೀರತೆ ಅರಿವಾಗಿತ್ತೋ ಏನೋ ಆತ ಕೇರಿಯವರ ಹೆಸರನ್ನು ಸೂಚಿಸದೆ ತನ್ನ ಸಂಕಟರೂಪದ ಸಿಟ್ಟನ್ನು ತಲೆತಲಾಂತರದಿಂದ ಮನೆಯು ಉಳಿಸಿಕೊಂಡು ಬಂದಿದ್ದ ಮಡಕೆಗಳ ಮೇಲೆ ಪೌರುಷವನ್ನು ಬಿಟ್ಟಿದ್ದ. ಅವು ಆ ಮನೆಯ, ಊರಿನ, ಕೇರಿಯ ಪೂರ್ವಿಕರ ಮತ್ತು ಈಗಿನ ಬಾಲಕರ, ಮುಗ್ಧರ, ಹೆಂಗಸರ ತಲೆಬುರಡೆಗಳಂತೆ ನುಚ್ಚುನೂರಾಗಿ ಉರುಳಾಡಿ ಹೊರಳಾಡಿ ಪುಡಿಯಾಗಿ ಬಿದ್ದ ಧಾನ್ಯಗಳ ಮೇಲೆ ಅಸ್ತಂಗತವಾದವು. ನೊರಕ್ ನೊರಕ್ ಎಂದು ಪುಡಿಗುಟ್ಟಿದ್ದವು. ಆ ಒಂದೊಂದೂ ಮಡಕೆಯ ಒಡೆದ ಸದ್ದುಗಳು ಕ್ರೌರ್ಯಕ್ಕೆ ಭೀತಿಗೆ ಅಸಹಾಯಕತೆಗೆ ಬಲಿಯಾದವರಂತೆ ನಲುಗಿದವು. ಚಿಕ್ಕಣ್ಣನ ಸಿಟ್ಟು ಅಟ್ಟಹಾಸಗೊಂಡು ಏರುತ್ತಿರುವಂತೆಯೇ ಚೆಲ್ಲಿಕೊಂಡ ರಾಗಿಯ ಕಾಳುಗಳು ಚಿಕ್ಕಣ್ಣನನ್ನೇ ನೋಡುತ್ತಿರುವಂತೆ ಬಿದ್ದಿದ್ದು ಆತನ ಸ್ವರೂಪಕ್ಕೆ ಬೆಚ್ಚಿ ಚೂರಾದ ಮಡಕೆಗಳ ಅಡಿಯಲ್ಲಿ ಮರೆಯಾದವು. ಅವನ ವಿಕಾರಕ್ಕೆಲ್ಲ ಕ್ಷಣಕ್ಷಣಕ್ಕೂ ನಡುಗಿ ಚೆಲುವ ಎತ್ತಲೂ ಆ ಕತ್ತಲೆಯಲ್ಲಿ ಓಡಿ ಹೋಗಲಾರದೆ ಬಳಲಿದ. ಚಿಕ್ಕಣ್ಣ ಕುಣಿದಾಡಿ ‘ಯಾವ ಸೂಳೆ ಮಕ್ಕಳಿದ್ರೂ ಬನ್ರೋ; ನಿಮ್ಮೆಡ್ತಿರ್‍ನಾ ಕೆಯ್ಯಾ’ ಎಂದು ಗುಟುರು ಹಾಕಿ ಆ ದೊಣ್ಣೆಯಿಂದ ಉಳಿದಿದ್ದ ಇನ್ನೊಂದು ದೊಡ್ಡ ಗುಡಾಣಕ್ಕೆ ಬಡಿದ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಅದು ದೊಡ್ಡ ಸಪ್ಪಳದೊಂದಿಗೆ, ಆ ಮನೆಯ ಜೀವವು ಮುರುಟಿ ಹೋದಂತೆ ತೆರೆದುಕೊಂಡು ಇಟ್ಟಿದ್ದ ಬಿತ್ತನೆ ರಾಗಿ ಜೊತೆಗೆ ಚೆಲ್ಲಿಕೊಂಡಿತು. ಚೆಲುವ ‘ಕಿರುಮನೆಯ’ ಕಿಟಕಿಯಲ್ಲಿ ಇದೆಲ್ಲವನ್ನು ನೋಡುತ್ತಿದ್ದವನು ಸಕಲ ಆಶ್ಚರ್ಯಗಳಿಂದ ಬೆರಗಾಗಿ, ‘ಆಹಾ; ಆ ಬುಗುರಿಯೆಲ್ಲಿತ್ತು… ಅವ್ವ ಅಲ್ಲೇ ಮಡಗಿತ್ತು’ ಎಂದುಕೊಂಡು ಕಣ್ಣಗಲಿಸಿ ಆ ಬುಗುರಿಯನ್ನೇ ತುಂಬಿಕೊಂಡ. ಯಾವಾಗಲೋ ಅಪ್ಪನ ಕೈಗೆ ಸಿಗದಂತೆ ಚೆಲುವ ಇನ್ನೊಂದು ಬುಗುರಿಯನ್ನು ತನ್ನ ಅವ್ವನ ಕೈಲಿಕೊಟ್ಟು ಬಚ್ಚಿಡಿಸಿದ್ದ. ಹಾಗೆ ಇಟ್ಟಿದ್ದು ಅವ್ವನಿಗೆ ಮರೆತೇ ಹೋಗಿತ್ತು. ಆ ಗುಡಾಣದ ಹೊಟ್ಟೆಯನ್ನು ದೊಣ್ಣೆಯಿಂದ ಚಿಕ್ಕಣ್ಣ ಬಗೆದಿದ್ದಾಗ ರಾಗಿರಾಶಿಯಿಂದ ಉರುಳಿಕೊಂಡು ನೆಲಕ್ಕೆ ಬಿದ್ದಿತ್ತು. ಬುಗುರಿ ಉಳಿಯುವುದಿಲ್ಲ ಎಂದುಕೊಳ್ಳುತ್ತಿರುವಂತೆಯೇ ಚಿಕ್ಕಣ್ಣ ಎಲ್ಲ ಮುಗಿದವು ಎಂಬಂತೆ ಅಡುಗೆಕೋಣೆಗೆ ಹೋಗಿ ಓಲೆಮೇಲೆ ಬೆಂದು ಗಮಗಮಿಸುತ್ತಾ ಹೊಗೆ ಹರಿಸುತ್ತಿದ್ದ ರಾಗಿಹಿಟ್ಟನ್ನು ಕಂಡವನೇ ಹುಚ್ಚನಂತೆ ಎರಗಿ ಇವುಳ್ ರಕ್ತನಾ ಕೇಯುನಿಟ್ಟು ಯಾರುಗ್ ಬೇಕಾಗಿದ್ದದು. ಇಯೇಲ ಯೇಲೇ ತಿನ್ಲಿ ಎಂದುಕೊಂಡು ಹಿಟ್ಟಿನ ಮಡಕೆಯನ್ನು ಎತ್ತಿಕೊಂಡು ದಡದಡನೆ ಹೊರಕ್ಕೆ ಓಡಿಬಂದು ಹಿತ್ತಲುದಾಟಿ ಕಕ್ಕಸು ಗುಂಡಿಯ ಒಳಕ್ಕೆ ‘ದೊಪ್’ ಎಂದು ಬಿಸಾಡಿ ಕ್ಯಾಕರಿಸಿ ಉಗಿದು ‘ಸೂಳೆಮಕ್ಳಾ ನಿಮ್ಮೆಡ್ತೀರ್‌ನೆಲ್ಲಾ ಕೇಯ್ತಿನಿ ಬನ್ರೊ’ ಎಂದು ಅತ್ಯಂತ ಕೆಡುಕಿನ ಅಸಹ್ಯದ ಬೈಯ್ಗಳಗಳನ್ನು ಉಗಿಯುತ್ತಾ ಬೀದಿಗೆ ಓಡಿಬಂದ. ಕಿರುಚಿ ನೆಗೆದು ಸುತ್ತಮುತ್ತ ಇದ್ದ ಜನರನ್ನೆಲ್ಲ ನೋಡಿ ತನ್ನ ಮನೆಮುಂದೆ ಹುಚ್ಚನಂತೆ ಎಗರಾಡಿದ. ಚೆಲುವ ಕಿರುಮನೆಯಿಂದ ಹೊರಬಂದು, ಗುಡಾಣದಿಂದ ಹೊರಬಿದ್ದಿದ್ದ ಆ ಬುಗುರಿಯನ್ನು ಕ್ಷಣದಲ್ಲಿ ಎತ್ತಿಕೊಂಡು ಹಿತ್ತಲ ಬಾಗಿಲಲ್ಲೇ ಬಂದು ಕತ್ತಲಲ್ಲಿ ನಿಂತು ಬುಗುರಿಯನ್ನು ಅತ್ಯಂತ ಸಿಟ್ಟಿನಿಂದ ತನ್ನ ಅಪ್ಪ ಚಿಕ್ಕಣ್ಣನೂ ಎಸೆಯಬಲ್ಲಷ್ಟು ದೂರಕ್ಕೆ ಬಿಸಾಡಿದಂತೆ ಬಿಸಾಡಿ ಒಮ್ಮೆ ಬಿಕ್ಕಿ ಹಾಗೆ ನಿಂತ.
ಆ ಕತ್ತಾಲ ಹಿತ್ತಲ ಮೆಳೆ ಮೂಲೆಯಲ್ಲಿ ಚೆಲುವನ ಅವ್ವ ಬಿಕ್ಕಿ ಅಳುತ್ತಾ ಮಗನನ್ನು ಕೂಗಿಕೊಂಡಳು. ಶಬ್ದ ಬಂದೆಡೆ ಚೆಲುವ ಹೋಗಿ ಅವ್ವನ ಬಿಸಿಕಣ್ಣೀರ ಕೆನ್ನೆಯನ್ನು ಮುಟ್ಟಿ, ‘ಅಳಬ್ಯಾಡ ಸುಮ್ನಿರವ್ವಾ’ ಎಂದು ತಾನೇ ಅಳುತ್ತಾ ಅವ್ವನನ್ನು ತಬ್ಬಿಕೊಂಡು ಆ ಕತ್ತಲೆಯಲ್ಲೇ ಒಬ್ಬರಿಗೊಬ್ಬರು ಎದೆಗವುಚಿಕೊಂಡು ಕುಳಿತರು. ಬೀದಿ ಕೇರಿಯಲ್ಲಿ ಚಿಕ್ಕಣ್ಣನ ಗುಡುಗಿನಂತ ಗಂಟಲ ಕೇಕೆ, ಅವರ ಎದೆಗಳನ್ನು ಹೊಕ್ಕಿ ಢವಗುಡಿಸುತ್ತಿದ್ದಂತೆಯೇ- ಮತ್ತೊಮ್ಮೆ ಯಾರುಯಾರ ಮೇಲೋ ಚಿಕ್ಕಣ್ಣ ನುಗ್ಗಿ ಜಗಳ ಆಡುತ್ತಾ ಹೊಡೆದಾಟಕ್ಕೆ ಇಳಿದಂತೆ ಕಂಡಿತು. ಇಡೀ ಹೊಲಗೇರಿಯ ಹೊಲಸು, ಆ ಕಕ್ಕಸುಗುಂಡಿ, ಸತ್ತ ಹಂದಿ, ಬುಗುರಿ, ಪೋಲೀಸ್ ಠಾಣೆ, ಬಿದ್ದು ಸತ್ತ ಎಷ್ಟೋ ಜೀವಗಳು ಒಂದೊಂದಾಗಿ ತೆರೆದುಕೊಂಡು ಚೆಲುವನಿಗೆ, ರಾತ್ರಿಯ ಪಿಶಾಚಿರೂಪದ ಹಂದಿರೂಪಿ ಮಾನವ ಎಲ್ಲರ ಮೆದುಳಿಗೂ ಕೊರೆದು ಏಲು ತುಂಬುತ್ತಿರುವಂತೆ ಕಂಡಿತು. ಕತ್ತಲೊಳಗೂ ಕರಗಿ ಅವನ ಕಿಬ್ಬೊಟ್ಟೆಗೆ ಮೆತ್ತಿಕೊಂಡು ‘ಅವೋ ನನ್ನ ನಿನ್ನೊಟ್ಟೆವೊಳಕೆ ಸೇರಿಸ್ಕಬುಡವಾ’ ಎಂದ. ಚೆಲುವನ ಅವ್ವ ಕಣ್ಣೀರಲ್ಲೇ ಅಲ್ಲೇ ಕುಳಿತಳು. ತಾರಕಸ್ವರದಲ್ಲಿ ಹೊಲಗೇರಿಯ ಬೀದಿ ಮೊಳಗತೊಡಗಿತ್ತು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಪ್ರೊ. ಮೊಗಳ್ಳಿ ಗಣೇಶ್(1963-2025): ಚನ್ನಪಟ್ಟಣ ತಾಲೂಕಿನ ಸಂತೇಮೊಗೇನಹಳ್ಳಿಯಲ್ಲಿ ಹುಟ್ಟಿದ ಗಣೇಶ್ ಎಂ.ಎ(ಅರ್ಥಶಾಸ್ತ್ರ) ಹಾಗೂ ಎಂ.ಎ(ಜಾನಪದ) ಪದವೀಧರರು. ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ಕಥನ ಅವರ ಪ್ರಬಂಧ ಸಂಕಲನ. ಸೊಲ್ಲು, ವಿಮರ್ಶೆ, ಶಂಬಾ ಭಾಷಿಕ ಸಂಶೋಧನೆ, ತಕರಾರು ಅವರ ವಿಮರ್ಶಾ ಕೃತಿಗಳು. ವಿಶ್ಲೇಷಣೆ ಎಂಬ ಅಂಕಣ ಕೂಡಾ ಜನಪ್ರಿಯ. ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ಅವರ ಚಿಂತನ ಕೃತಿ. ಕತೆಗಳಲ್ಲದೆ, 10 ಸಂಶೋಧನಾ ಯೋಜನೆಗಳ ಭಾಗವಾಗಿ ಕೃತಿಗಳನ್ನು ರಚಿಸಿದ್ದಾರೆ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಭಾಷಾಂತರಗೊಂಡಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸುಮಾರು 28 ವರ್ಷ ಪ್ರಾಧ್ಯಾಪಕರಾಗಿದ್ದರು. ಪ್ರಬಲ ದಲಿತ ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗಿ ಹೋಗಿದ್ದರು. ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.





