ಎಂ.ಎಸ್.ಕೆ. ಪ್ರಭು ಅವರ ಕತೆ | ಎರಡು ತೆಂಗಿನ ಮರದುದ್ದದ ಮನುಷ್ಯ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಒಂದು ದಿನ ಬೆಳಗಿನ ಸುಮಾರು ಐದು ಗಂಟೆಯ ಸಮಯದಲ್ಲಿ ಅವನ ತಾಯಿ ಅದೇ ತಾನೆ ಹೊಳೆಯಲ್ಲಿ ಸ್ನಾನ ಮಾಡಿ ನಡುಗುತ್ತಾ ಒದ್ದೆ ಬಟ್ಟೆಯುಟ್ಟು ನೀರಿನಲ್ಲಿ ತೊಯ್ದು ತೊಟ್ಟಿಕ್ಕುತ್ತಿದ್ದ ಉದ್ದವಾದ ಕೂದಲನ್ನು ಬೆನ್ನಮೇಲೆ ಹರಡಿಕೊಂಡು ಮನೆಗೆ ಬಂದು ಬಟ್ಟೆ ಬದಲಾಯಿಸಿ ಕಾಫಿ ಕುಡಿದು, ಅವಲಕ್ಕಿ ತಿಂದು, ಎಲೆಯಡಿಕೆ ಅಗಿಯುತ್ತಾ ಅವನು ಮಲಗಿದ್ದ ಚಿಕ್ಕ ಮನೆಗೆ ಬಂದು ದೀಪ ಹಾಕಿದಾಗ ಅವನಿಗೆ ಎಚ್ಚರವಾಯಿತು. ಅವನು ಅಗಲವಾಗಿ ಕಣ್ಣುಬಿಟ್ಟು ಹೊದಿಕೆಯನ್ನು ಝಾಡಿಸಿ ಒದ್ದು ಒಂದೇ ಉಸಿರಿಗೆ ಜಿಗಿದು ಅವನ ಅಮ್ಮನ ಕೊರಳನ್ನು ತನ್ನ ತೋಳುಗಳಿಂದ ಬಿಗಿದಪ್ಪಿ ಅವಳ ಬೆನ್ನಮೇಲೆ ವಿಶಾಲವಾಗಿ ಹರಡಿದ್ದ ಒದ್ದೆ ಕೂದಲನ್ನು ತನ್ನ ಬೆರಳುಗಳಿಂದ ಹಿಂಡುತ್ತಾ “ಅಮ್ಮಾ ಹೆಂಗಸರೇಕೆ ಮುಟ್ಟಾಗುತ್ತಾರೆ?” ಎಂದು ಕೇಳಿದಾಗ, ಅವನ ಅಮ್ಮ ಅವನನ್ನು ಹಾಸಿಗೆಯ ಮೇಲೆ ದೂಡಿ “ಥೂ ಮುಂಡೇಗಂಡ, ಏನೇನೋ ಮಾತಾಡ್ತಾನೆ!” ಎಂದಾಗ ಅವನಿಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಅವಮಾನವಾಗಿತ್ತು. ಅವನಿಗೆ ಇದುವರೆಗೂ ಯಾವ ಪ್ರಶ್ನೆಗೂ ಸಮರ್ಪಕವಾದ ಉತ್ತರ ದೊರಕಿದ್ದಿಲ್ಲ. ತಿಳಿದವರೆಂದುಕೊಂಡವರನ್ನು ಕೇಳಿದಾಗ ಅವರಿಂದ ತೀರಾ ಅಸಮಾಧಾನಕರವಾದ ಉತ್ತರಗಳು ಮಾತ್ರ ಸಿಕ್ಕಿತ್ತು.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಮತ್ತೊಮ್ಮೆ ಅವನ ಮೈ-ಕೈಗೆಲ್ಲಾ ಕಜ್ಜಿ ಹತ್ತಿ ಬೆರಳುಗಳ ಸಂದಿ, ತೊಡೆಸಂದಿಯೆಲ್ಲಾ ಹುಚ್ಚು ಹಿಡಿಸುವಷ್ಟು ಕಡಿತ ಆದಾಗ, ಡಾಕ್ಟರು ಕೊಟ್ಟ ಗಂಧಕದ ಮಲಾಮು ಪ್ರಯೋಜನವಾಗಲಿಲ್ಲವೆಂದು ಅವನ ತಂದೆ ನಾಟಿ ಔಷಧ ಪ್ರಯೋಗ ಮಾಡಲು ಊರಿನ ಸುಪ್ರಸಿದ್ದ ನಾಟಿವೈದ್ಯ ಪ್ರವೀಣೆ ಕಾಳಿ ಎಂಬುವಳನ್ನು ಕೇಳಿಕೊಂಡಾಗ ಅವಳು ತೊಂಡೆ ಸೊಪ್ಪಿನ ರಸದ ಜೊತೆಗೆ ಮತ್ತೇನೋ ಗಿಡಮೂಲಿಕೆಗಳ ರಸ ಬೆರೆಸಿ, ನೋಡಿದರೇ ವಾಂತಿ ಬರುವಂತಹ ಒಂದು ಬಗೆಯ ಹಸಿರು ದ್ರಾವಕವನ್ನು ಒಂದು ಕರಟದಲ್ಲಿ ತಂದು ಅವನನ್ನು ಹಿತ್ತಲಿಗೆ ಕರೆದುಕೊಂಡು ಹೋಗಿ ಅಂಗಿ ಚಡ್ಡಿ ಬಿಚ್ಚಿಸಿ ಬುಂಡಗೆ ತುಳಸಿ ಕಟ್ಟೆಯ ಹತ್ತಿರ ಬಿಸಿಲಿನಲ್ಲಿ ನಿಲ್ಲಿಸಿ ಒಂದು ಕಾಗೆ ಗರಿಯಿಂದ ರಸವನ್ನು ಅವನ ಕಜ್ಜಿಯ ಮೇಲೆ ಹಚ್ಚುತ್ತಿದ್ದಾಗ ಉರಿ ಉರಿ ಎಂದು ಅವನು ತಕತಕನೆ ಕುಣಿಯಹತ್ತಿದಾಗ, ಕಾಳಿ ಅವನ ಬೆನ್ನು ಸವರಿ, ತಲೆಗೂದಲನ್ನು ನೇವರಿಸಿ ಅವನನ್ನು ಸಮಾಧಾನಗೊಳಿಸಿ ಕಾಗೆಗರಿಯನ್ನು ಮತ್ತೊಮ್ಮೆ ಕರಟದಲ್ಲಿ ಅದ್ದಿ ಅವನ ತೊಡೆಯ ಸಂದುಗಳಿಗೆ ಸವರುವಾಗ ಅವನು ಹಿತವಾದ ನೇವರಿಕೆಯ ಅನುಭವದಿಂದ ಪುಳಕಿತನಾಗಿ, ಕಾಳಿಯ ತಲೆಯ ಮಧ್ಯದಲ್ಲಿ ಹರಿದಿದ್ದ ಬೈತಲೆಯ ಮೇಲೇ ದೃಷ್ಟಿ ನೆಟ್ಟು ಅವಳ ಕುತ್ತಿಗೆಯ ಮೇಲೆ ಕುಳಿತಿದ್ದ ಕೂದಲ ಗಂಟನ್ನು ಬಿಗಿಯಾಗಿ ಹಿಡಿದು ಕೊಂಡಾಗ ಅವನ ಪ್ರಜ್ಞೆಯ ಪರಿಧಿಯಿಂದ ಹೊರಗಿದ್ದ ಅವನ ಗುಪ್ತಾಂಗ ನಿಮಿರಿದಾಗ ”ಇದೇಕೆ ಹೀಗಾಗುತ್ತೆ?” ಎಂದು ಕಾಳಿಯನ್ನು ಕೇಳಿದಾಗ ಅವಳು ನಾಚಿಕೊಂಡು ಉತ್ತರ ಕೊಡದೆ ಅವನಿಗೆ ಮಾಡುತ್ತಿದ್ದ ಇಲಾಜನ್ನು ಅರ್ಧದಲ್ಲೇ ಕೈಬಿಟ್ಟು ಮನೆಗೆ ಹೊರಟುಹೋಗಿದ್ದಳು. ಆಗ ಅವನಿಗೆ ಸುಮಾರು ಹದಿನಾಲ್ಕು ವರ್ಷ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಕ್ಕಿಗಳು ಆಕಾಶದಲ್ಲಿ ಹಾರಾಡುವಾಗ ಕೆಳಕ್ಕೆ ಏಕೆ ಬಿದ್ದುಬಿಡುವುದಿಲ್ಲ? ಹೊಟ್ಟೆ ಹಸಿದಾಗ ಏಕೆ ಅಸಾಧ್ಯ ಸಂಕಟವಾಗುತ್ತದೆ? ಮಕ್ಕಳು ಹೇಗೆ ಹುಟ್ಟುತ್ತಾರೆ? ರಬ್ಬರ್ ಚೆಂಡನ್ನು ಗೋಡೆಗೆ ಎಸೆದಾಗ ಅದೇಕೆ ವಾಪಸು ಬರುತ್ತದೆ? ಗುಂಡಗಿರುವ ಭೂಮಿಗೆ ಅಂಟಿಕೊಂಡಿರುವ ಸಮುದ್ರದ ಮತ್ತು ನದಿ ಕೆರೆಗಳ ನೀರೇಕೆ ಕೆಳಕ್ಕೆ ಚಿಲ್ಲಿ ಹೋಗುವುದಿಲ್ಲ? ಇತ್ಯಾದಿ ಹಲವಾರು ಪ್ರಶ್ನೆಗಳು ಅವನ ಬಾಲ್ಯಕಾಲದ ಬಿಡಿಸಲಾಗದ ಒಗಟುಗಳಾಗಿದ್ದವು.

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ವಯಸ್ಸಾದಂತೆ ಅವನು ಯುವಕನಾದ.

ಅವನ ಪ್ರಶ್ನೆಗಳ ಸ್ವರೂಪವೂ ಗಂಭೀರವಾದವು. ಗಹನವಾದ ತಾತ್ವಿಕ ಸಮಸ್ಯೆಗಳ ಬಗ್ಗೆ ಚಿಂತನೆ ಶುರು ಮಾಡಿದ. ಸೃಷ್ಟಿಯ ಪ್ರತಿಯೊಂದು ವಸ್ತುವೂ ಅವನಿಗೆ ಬಿಡಿಸಲಾಗದ ಒಗಟಾಯಿತು. ಯಾವುದರ ಸ್ವರೂಪವೂ ಸ್ವಭಾವವೂ ಅವನಿಗೆ ಅರ್ಥವಾಗದೆ, ಹಗಲು, ಸಂಜೆ, ರಾತ್ರಿ ಪ್ರಕೃತಿಯ ಚರಾಚರ ವಸ್ತುಗಳೆಲ್ಲದರ ಬಗ್ಗೆಯೂ ಅವನು ತನ್ನ ಸಂದೇಹಗಳನ್ನು ವ್ಯಕ್ತಪಡಿಸುವ ಪ್ರಶ್ನೆಗಳನ್ನು ಕೇಳತೊಡಗಿದ. ಒಮ್ಮೆ ಆ ಊರಿಗೆ ಬಂದ ಹರಿಕಥೆ ದಾಸರೊಬ್ಬರು ಊರ ಜನರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೋ ಭಗವನ್ನಾಮ-ಸಂಕೀರ್ತನೆ ಮಾಡುತ್ತಿದ್ದಾಗ ನಮ್ಮ ಇವನು ಎದ್ದು ನಿಂತು, “ಆತ್ಮ ಎಂದರೇನು?” ಎಂದು ಕಂಚಿನ ಗಂಟೆ ಹೊಡೆದಂತೆ ಪ್ರಶ್ನೆ ಕೇಳಿ ಇಡೀ ಭಕ್ತಸ್ತೋಮಕ್ಕೆ ಕ್ಷಣಕಾಲ ದಂಗುಬಡಿಸಿದ. ಅವನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಾರದೆ ದಾಸರು ಕ್ಷಣಕಾಲ ಪೆಚ್ಚಾಗಿ, ಮತ್ತೆ ಚೇತರಿಸಿಕೊಂಡು ತಮ್ಮ ವೃತ್ತಿಯ ಅನುಭವದಿಂದ ಪರಿಸ್ಥಿತಿಯನ್ನು ಗೆಲ್ಲಲು ಭಕ್ತ ನಚಿಕೇತ, ಭಕ್ತ ಪ್ರಹ್ಲಾದರ ಕತೆಗಳನ್ನು ಚುಟುಕದಲ್ಲಿ ಹೇಳಿ ಮುಗಿಸಿ, ಅಂತಹ ಪ್ರಶ್ನೆಗಳನ್ನು ಕೇಳುವ ಅರ್ಹತೆ ನಮ್ಮಂತಹ ಕೀಳುಮಾನವರಿಗಿಲ್ಲ ಎಂದು ಅಪ್ಪಣೆ ಕೊಡಿಸಿದಾಗ ಅವನು ದಾಸರ ಮುಂದಿನ ಕತೆಯನ್ನು ಕೇಳಲು ಇಷ್ಟವಿಲ್ಲದೆ ಮನೆಗೆ ವಾಪಸಾಗಿ, ಸೃಷ್ಟಿಯ ಬಗ್ಗೆ, ದೇವರ ಬಗ್ಗೆ, ಚೇತನದ ಬಗ್ಗೆ, ಹುಟ್ಟಿನ ಬಗ್ಗೆ, ಅಮ್ಮನ ಬಗ್ಗೆ, ಕಾಳಿಯ ಬಗ್ಗೆ, ಕಜ್ಜಿಯ ಬಗ್ಗೆ ಹೊಸ ಸಂದೇಹಗಳನ್ನು ವ್ಯಕ್ತಪಡಿಸುವ ಹೊಸ ಹೊಸ ಮೂಲಪ್ರಶ್ನೆಗಳನ್ನು ಹೊಸೆಯುತ್ತಾ ಬೆಳಕು ಹರಿಯುವವರೆಗೂ ಅಗಲ ಕಣ್ಣು ಬಿಟ್ಟುಕೊಂಡು ಹಾಸಿಗೆಯ ಮೇಲೆ ಮಲಗಿದ್ದ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಅವನ ಜಿಜ್ಞಾಸೆಗಳೆಲ್ಲಾ ಒಂದು ಸೂತ್ರರೂಪದ ಪ್ರಶ್ನೆಯಾಗುತ್ತಿತ್ತು. ಅಂತಹ ಸಾವಿರಾರು ಲಕ್ಷಾಂತರ ಕೋಟ್ಯಂತರ ಪ್ರಶ್ನೆಗಳು ಅವನನ್ನು ಕಾಡಿ ತಿನ್ನುತ್ತಿತ್ತು. ಒಂದು ದಿನ ಈ ಎಲ್ಲಾ ಪ್ರಶ್ನೆಗಳನ್ನೂ ಅವನು ಕೂತುಕೊಂಡು ಪಟ್ಟಿ ಮಾಡಿದ. ಅವುಗಳಲ್ಲಿ ಕೆಲವು ಪ್ರಶ್ನೆಗಳು ವಿಧಿ ಇಲ್ಲದೆ ಪುನಃ ಪುನಃ ಬರುತ್ತಿರುವುದನ್ನು ಕಂಡು ಅವನು ಮತ್ತೂ ಶ್ರಮವಹಿಸಿ ಅಂತಹ ಪ್ರಶ್ನೆಗಳನ್ನು ಕ್ರೋಡೀಕರಿಸಿ ಒಂದೇ ಪ್ರಶ್ನೆಯನ್ನಾಗಿ ಪರಿವರ್ತಿಸಿ ತನ್ನ ಸಂದೇಹವನ್ನು ಸ್ಥಿರಪಡಿಸಿಕೊಂಡ. ಆದರೂ ಅವನ ಪ್ರಶ್ನೆಗಳ ಪಟ್ಟಿಯ ಉದ್ದವೇನೂ ಕಡಿಮೆಯಾಗಲಿಲ್ಲ. ನೂರಾರು ದಸ್ತು ಕಾಗದವನ್ನು ತಿಂದು ಹಾಕಿತ್ತು. ಅವನು ಧೈರ್ಯಗುಂದಲಿಲ್ಲ. ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಗದ ಅತೃಪ್ತಿಯ ಜತೆಗೇ ಹೊಸ ಹೊಸ ಪ್ರಶ್ನೆಗಳು ಮಳೆಗಾಲದ ನಾಯಿಕೊಡೆಗಳಂತೆ ಕ್ಷಣಕ್ಷಣಕ್ಕೂ ಉದ್ಭವಿಸಿ ಅವನ ಪಟ್ಟಿಯನ್ನು ಹನುಮಂತನ ಬಾಲವನ್ನಾಗಿ ಮಾಡಿತ್ತು.

ಮತ್ತೊಂದು ದಿನ ಅವನಿಗೆ ಇದ್ದಕ್ಕಿದ್ದಂತೆಯೇ ತನ್ನ ಎಲ್ಲಾ ಕೋಟ್ಯಂತರ ಸಮಸ್ಯೆಗಳು ಮೂಲತಃ ಒಂದೇ ಸಮಸ್ಯೆಯಲ್ಲವೆ ಎಂಬ ಕ್ರಾಂತಿಕಾರಕ ಆಲೋಚನೆ ಹೊಳೆಯಿತು. ಮತ್ತೊಮ್ಮೆ ಎಲ್ಲಾ ಪ್ರಶ್ನೆ ಓದಿ ಪ್ರತಿಯೊಂದು ಪ್ರತ್ಯೇಕ ಪ್ರಶ್ನೆಯ ಸಾರಾಂಶವೂ ಒಂದೇ ಆಗಿರುವದೆಂಬ ರಹಸ್ಯವನ್ನು ಕಂಡುಹಿಡಿದುಕೊಂಡು ತನ್ನ ವಿಚಾರಪಥದಲ್ಲಾದ ಪ್ರಗತಿಯ ಮತ್ತಿನಲ್ಲಿ ಅನೇಕ ದಿನಗಳವರೆಗೆ ಬೆರಗಾಗಿದ್ದ. ಆ ಸಾರಾಂಶವನ್ನೆಲ್ಲಾ ಕ್ರೋಡೀಕರಿಸಿ ಒಂದು ಅತ್ಯಂತ ಮುಖ್ಯವಾದ, ಅತ್ಯಂತ ಗಹನವಾದ, ಅತ್ಯಂತ ಅರ್ಥಪೂರ್ಣವಾದ, ಅತ್ಯಂತ ಸಾರ್ವತ್ರಿಕವಾದ, ಸಾರ್ವಲೌಕಿಕವಾದ, ಸರ್ವವ್ಯಾಪಿಯಾದ, ಸರ್ವೈಕ್ಯವಾದ, ಸ್ಥಳ, ಕಾಲ, ಕ್ರಿಯೈಕ್ಯವಾದ, ಅಖಂಡವಾದ ಒಂದು ನಿರ್ದಿಷ್ಟವಾದ ಬೀಜಪ್ರಶ್ನೆಯನ್ನು ರೂಪಿಸಲು ಅನೇಕ ಹಗಲು ರಾತ್ರಿಗಳ ದುಡಿಮೆಯನ್ನು ವ್ಯಯಮಾಡಿದ.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಎಷ್ಟೋ ವರ್ಷಗಳ ನಂತರ ಅಂತಹ ಒಂದು ಬೀಜ ಪ್ರಶ್ನೆ ಸಿದ್ದವಾಯಿತು. ಅದನ್ನು ಕಾಗದದ ಮೇಲೆ ಬರೆದು ಖಚಿತಪಡಿಸಿಕೊಳ್ಳಲು ಅನೇಕ ದಿನಗಳನ್ನೇ ಮುಡಿಪಾಗಿಡಬೇಕಾಯಿತು. ಕಡೆಗೊಂದು ದಿನ ಆ ಪ್ರಶ್ನೆ ಭಾಷೆಯಲ್ಲಿ ವ್ಯಕ್ತಗೊಂಡು ಕರಿಮಸಿಯಿಂದ ಬಿಳಿ ಕಾಗದದ ಮೇಲೆ ಮೂಡಿಬಂತು. ಆ ಪ್ರಶ್ನೆ ಎಷ್ಟು ಉದ್ದವಿತ್ತೆಂದರೆ ಅದನ್ನು ಬರೆಯಲು ನೂರಾರು ಟನ್ ಕಾಗದ ಬೇಕಾಯಿತು. ಅದೆಷ್ಟೋ ಕಿಲೋ ಲೀಟರ್ ಶಾಯಿ ಬೇಕಾಯಿತು. ಅದೆಷ್ಟೋ ಹಾರ್ಸ್ ಪವರ್ ಶ್ರಮ ವಹಿಸಬೇಕಾಯಿತು, ಅವನು.

ತನ್ನ ಮೂಲಭೂತ ಪ್ರಶ್ನೆಯನ್ನು ಕಂಡುಕಂಡವರಿಗೆಲ್ಲಾ ವಿವರಿಸಿ ಹೇಳುವ ಚಟ ಹತ್ತಿತು. ಬಹುಶಃ ಯಾರಾದರೂ ಅವನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಡಬಹುದೆಂಬ ಆಸೆ ಅವನನ್ನು ಬಿಡದೆ ಕಾಡುತ್ತಿತ್ತು. ಆದರೆ ಅವನು ಪ್ರಶ್ನೆಯನ್ನು ಯಾರೆದುರಿಗೂ ಪೂರ್ತಿ ಓದಿ ಹೇಳುವ ಮೊದಲೇ ಅವರು ಅಲ್ಲಿಂದ ಕಾಲು ಕೀಳುತ್ತಿದ್ದರು. ಯಾಕೆದರೆ, ಆ ಪ್ರಶ್ನೆ ಎಷ್ಟು ದೊಡ್ಡದಿತ್ತೆಂದರೆ, ಅದನ್ನು ಒಮ್ಮೆ ಶುರು ಮಾಡಿ ಒಂದೇ ಉಸಿರಿಗೆ ಓದುತ್ತಾ ಹೋದರೂ, ಪ್ರಶ್ನಾರ್ಥಕ ಚಿಹ್ನೆ ಬರುವ ವೇಳೆಗೆ ಅನೇಕ ತಿಂಗಳು, ಬಹುಶಃ ವರ್ಷಗಳೇ ಬೇಕಾಗುತ್ತಿತ್ತು. ಆದರೆ ಈ ಅವಧಿಯನ್ನು ಖಚಿತವಾಗಿ ಹೇಳಲು ಬರುವಂತಿಲ್ಲ. ಯಾಕಂದರೆ ಅವನು ಎಂದೂ ಯಾರ ಮುಂದೂ ಅವನ ಬೀಜಪ್ರವೃತ್ತಿಯನ್ನು ಪೂರ್ತಿ ಇರಲಿ, ನೂರನೇ ಒಂದು ಭಾಗ, ಅಥವಾ ಸಾವಿರದ ಒಂದು ಭಾಗ ಕೂಡ ಓದಲು ಸಾಧ್ಯವಾಗಿದ್ದಿಲ್ಲ. ಅವನು ಓದಲು ಶುರು ಮಾಡಿದ ನಂತರ ಅವನ ಮಾತನ್ನು ಹತ್ತು ನಿಮಿಷ ಕೇಳಿದವರೇ ಹೆಚ್ಚು ಮಂದಿ, ಹದಿನೈದು ನಿಮಿಷ ಕೇಳಿದವರು ಸುಮಾರು ನೂರನೇ ಒಂದು ಭಾಗ, ಇಪ್ಪತ್ತು ನಿಮಿಷ ಕೇಳಿದವರು ಸಾವಿರದ ಒಂದು ಭಾಗ, ಅದಕ್ಕೂ ಹೆಚ್ಚು ಕಾಲ ಕೇಳಿದವರು ಎಂದರೆ ಸುಮಾರು ಅರ್ಧಗಂಟೆ ಅವನು ಪ್ರಶ್ನೆ ಓದುವುದನ್ನು ಕೇಳಿದವರು- ಒಬ್ಬನೋ ಅಥವಾ ಇಬ್ಬರೋ ಎಂದರೆ ಸುಮಾರು, ಕೋಟಿಯ ಒಂದು ಭಾಗ.

ಹೀಗಾಗಿ ಅವನಿಗೆ ತನ್ನ ಪ್ರಶ್ನೆಗೆ ಉತ್ತರ ಸಿಕ್ಕುವುದಿರಲಿ, ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವವರೇ ಗತಿ ಇಲ್ಲದಂತಾಯಿತು.

ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು

ಅವನು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸಣ್ಣ ಕತೆ ಅವನಿಗೆ ಒಂದು ರಾತ್ರಿ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಾಗ ನೆನಪಿಗೆ ಬಂತು. ಮಾರಲ್ ಕ್ಲಾಸಿನಲ್ಲಿ ಮೇಷ್ಟರು ಹೇಳಿದ್ದ ಸಾಕ್ರಟೀಸನ ಕತೆ. ಸಾಕ್ರಟೀಸನಿಗೆ ಒಬ್ಬ ದೇವತೆ ಕನಸಿನಲ್ಲಿ ಬಂದು ನಿನಗೇನು ವರ ಬೇಕೆಂದು ಕೇಳಿದಾಗ ಅವನು ಅಷ್ಟೈಶ್ಚರ್ಯ ಶತಾಯಸ್ಸು ಆರೋಗ್ಯಭಾಗ್ಯಗಳನ್ನು ಕೇಳಿಕೊಳ್ಳದೆ, ಸೃಷ್ಟಿಯಲ್ಲಿನ ಪ್ರತಿಯೊಂದು ಚರಾಚರ ವಸ್ತುಗಳ ನಿಜವಾದ ಅರಿವಿಗಾಗಿ ದೇವತೆಯನ್ನು ಪ್ರಾರ್ಥಿಸಿದನಂತೆ. ಆಗ ಆ ಕನಸಿನ ದೇವತೆ ಅವನ ಜ್ಞಾನದಾಹಕ್ಕೆ ಮೆಚ್ಚಿ, ಪ್ರಪಂಚದಲ್ಲಿನ ಇತರರೆಲ್ಲರಿಗಿಂತಲೂ ನೀನು ಹೆಚ್ಚು ಬುದ್ಧಿವಂತನಾಗು, ಪ್ರತಿಯೊಂದು ವಸ್ತುವಿನ ಗುಣ ಸ್ವಭಾವಗಳು ನಿನಗೆ ಸರಿಯಾಗಿ ಅರ್ಥವಾಗಲಿ ಎಂದು ಹರಸಿದಳಂತೆ. ಅದರಂತೆ ಅವನು ಮನುಷ್ಯರಲ್ಲೆಲ್ಲಾ ಅದ್ವಿತೀಯ ಮೇಧಾವಿಯಾದನಂತೆ. ಈ ಕತೆ ಎಷ್ಟರಮಟ್ಟಿಗೆ ಸತ್ಯವೋ ಅವನಿಗೆ ತಿಳಿಯಲಿಲ್ಲ. ಆದರೆ ಬಾಲ್ಯದಲ್ಲಿ ಕೇಳಿದ್ದ ಕತೆ ಈಗ ಒಮ್ಮೆಲೇ ಜ್ಞಾಪಕಕ್ಕೆ ಬಂದು ತಾನು ಕೂಡ ಸಾಕ್ರಟೀಸ್‌ನಂತೆ ಮೇಧಾವಿತನವನ್ನು ಪಡೆದರೆ ತನ್ನನ್ನು ಕಿತ್ತುತಿನ್ನುತ್ತಿರುವ ಪ್ರಶ್ನೆಗೆ ಪರಿಹಾರ ಸಿಗಬಹುದೆಂಬ ಯೋಚನೆ ಹುಟ್ಟಿತು.

ಈ ಆಲೋಚನೆ ತಲೆಯಲ್ಲಿ ಸುಳಿದ ತಕ್ಷಣವೇ ಹಾಸಿಗೆಯಿಂದ ಎದ್ದು ತನ್ನ ಪ್ರಶ್ನೆಯ ಅಗಾಧವಾದ ಹೊರೆಯನ್ನು ತಲೆಯ ಮೇಲಿಟ್ಟುಕೊಂಡು ಕತ್ತಲಲ್ಲಿ ಮನೆಯನ್ನು ಬಿಟ್ಟು ತನ್ನನ್ನು ಕಾಪಾಡುವ ಜ್ಞಾನದೇವತೆಯನ್ನರಸುತ್ತಾ ವಿಶಾಲ ಪ್ರಪಂಚದಲ್ಲಿ ಕರಗಿ ಲೀನವಾದ. ಅವನನ್ನು ಆ ರಾತ್ರಿಯ ಕತ್ತಲಿನಲ್ಲಿ ಯಾರಾದರೂ ನೋಡಿದ್ದರೆ ಅವನು ಎರಡು ತೆಂಗಿನ ಮರದುದ್ದ ಕಾಣಿಸುತ್ತಿದ್ದ, ಯಾಕೆಂದರೆ ಅವನು ತಲೆಯ ಮೇಲಿನ ಕಡತ ಅಷ್ಟೊಂದು ದೊಡ್ಡದಾಗಿತ್ತು.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಎಷ್ಟೋ ವರ್ಷಗಳು ಅವನು ಪತ್ತೆ ಇಲ್ಲದಂತೆ ತಪ್ಪಿಸಿಕೊಂಡಿದ್ದ. ಊರಿನ ಜನರೆಲ್ಲಾ ಅವನನ್ನು ಸುಲಭವಾಗಿ ಮರೆತರು. ಅವನು ಹೋದ ಮೇಲೆ ಕೆಲವು ದಿನಗಳು ಮಾತ್ರ ಜನ ಅವನ ಗೈರುಹಾಜರಿಯ ಬಗ್ಗೆ ಕೊಂಕುಮಾತನಾಡಿ ಹಾಸ್ಯ ಮಾಡಿಕೊಂಡು ನಗುತ್ತಿದ್ದರು. ಅವನ ಮನೆಯವರು ಕೂಡ ಅವನ ಬಗ್ಗೆ ಸ್ವಲ್ಪ ದಿನ ಚಿಂತಿಸಿದರೂ ಅವನು ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ, ಯಾಕೆ ಹೋದ ಎಂಬ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿ ಬಿಟ್ಟರು. ಶಾಸ್ತ್ರಕ್ಕೆ ಕೂಡ ಪೋಲೀಸ್ ಕಂಪ್ಲೇಂಟ್ ಕೊಡಲಿಲ್ಲ. ಏನೇನೋ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅರ್ಥವಾಗದ ಮಾತುಗಳನ್ನಾಡಿ ಬೋರ್ ಮಾಡುವ ಒಬ್ಬ ಆಸಾಮಿ ತಮ್ಮ ಮಧ್ಯದಲ್ಲಿ ಇಲ್ಲ ಎಂಬ ಸಂಗತಿ ಮನೆಯವರಿಗೆ ತೀರಾ ನೆಮ್ಮದಿಯ ಮಾತಾಗಿತ್ತೆಂಬುದನ್ನು ಅವರು ಸಾಮಾಜಿಕ ಶಿಷ್ಟಾಚಾರದ ಕಾರಣಗಳಿಂದಾಗಿ ಬಹಿರಂಗವಾಗಿ ವ್ಯಕ್ತಮಾಡುತ್ತಿರಲಿಲ್ಲ, ಅಷ್ಟೇ. ತಮ್ಮ ದೈನಂದಿನ ಆಗುಹೋಗುಗಳಲ್ಲಿ, ಲಾಭ ನಷ್ಟಗಳಲ್ಲಿ ಸಮಷ್ಟಿಯ ವ್ಯವಹಾರಗಳಲ್ಲಿ ಪಾಲುಗೊಳ್ಳದೆ ಯಾವಾಗಲೂ ಕೊಳೆಪಂಚೆಯುಟ್ಟು ಕೈಬೆರಳುಗಳ ಸಂದಿನ ಕಜ್ಜಿಯನ್ನು ತುರಿಸಿಕೊಳ್ಳುತ್ತಾ, ಮಣ್ಣಿನಲ್ಲಿ, ನೀರಿನಲ್ಲಿ, ಆಕಾಶದಲ್ಲಿ, ಮನೆಯಲ್ಲಿ, ಹುಟ್ಟಿನಲ್ಲಿ, ಸ್ಮಶಾನದಲ್ಲಿ, ಹಸಿವಿನಲ್ಲಿ, ಬೀದಿಯಲ್ಲಿ, ಗುಡಿಯಲ್ಲಿ ಎಲ್ಲೆಂದರಲ್ಲಿ ಪ್ರಶ್ನೆಗಳನ್ನು ಕೆದಕುತ್ತಾ, ಯಾರಿಗೂ ಅರ್ಥವಾಗದಂತೆ ಮಾತಾಡುವ ಸಮಾಜದ ಒಬ್ಬ ಸದಸ್ಯ ಕಣ್ಮರೆಯಾಗಿದ್ದುದನ್ನು ಜನ ಬಹುಬೇಗ ಮರೆತರು. ನೆಮ್ಮದಿಯಿಂದ ಬದುಕುತ್ತಾ ಇದ್ದರು. ತಮ್ಮ ಕಷ್ಟ, ನೋವು, ಅವಮಾನ, ನಷ್ಟಗಳ ಮಧ್ಯೆ ಸುಖ, ನಲಿವು, ಸಂತೋಷ, ಜಂಭ, ಲಾಭಗಳನ್ನು ಶ್ರಮವಹಿಸಿ ಗುರುತಿಸಿ, ಒಟ್ಟಿನಲ್ಲಿ ತಮ್ಮ ನೆಮ್ಮದಿಯನ್ನು ಕಾಪಾಡಿಕೊಂಡು ಬರುತ್ತಿದ್ದರು.

ಒಂದು ದಿನ ಅವನು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ. ಎರಡು ತೆಂಗಿನ ಮರದ ಎತ್ತರದ ವ್ಯಕ್ತಿ ಬರುತ್ತಿರುವುದನ್ನು ಜನ ದೂರದಿಂದಲೇ ಗುರುತಿಸಿದರು. ಆಶ್ಚರ್ಯದ ಸುದ್ದಿ ಒಬ್ಬರಿಗೊಬ್ಬರಿಗೆ ಹರಡಿ ಊರಿಗೆ ಊರೇ ಅವನನ್ನು ನೋಡಲು ಘೇರಾಯಿಸಿತು. ತಲೆಯ ಮೇಲಿನ ಕಾಗದದ ಭಾರವನ್ನು ಮುಖದ ಮೇಲೆ ಸ್ವಲ್ಪವೂ ತೋರಿಸದೆ, ಅವನು ಎರಡೂ ಕೈಗಳನ್ನು ಬೀಸಿಕೊಂಡು ಸಲೀಸಾಗಿ ನಡೆದುಬರುತ್ತಿದ್ದ. ಅವನು ಹತ್ತಿರ ಬಂದಂತೆ, ಆಳಿನ ಉದ್ದ ಕೇವಲ ಐದುವರೆ ಅಡಿ, ಮಿಕ್ಕ ಮೇಲಿನ ಎತ್ತರ ಅವನ ಪ್ರಶ್ನೆಯನ್ನು ದಾಖಲಿಸಿದ್ದ ಕಡತದ್ದೆಂದು ಊಹಿಸಲು ಜನರಿಗೆ ತುಂಬ ಕಾಲ ಹಿಡಿಯಲಿಲ್ಲ.

ಜನರ ಕುತೂಹಲವನ್ನು ತಣಿಸಲು ಅವನು ಒಂದು ಸಭೆ ಸೇರಿಸಿದ. ಸಭೆ ಊರಿನ ಮಧ್ಯದ ಆಂಜನೇಯನ ದೇವಸ್ಥಾನದ ಮುಂದಿನ ಬಯಲಿನಲ್ಲಿ ನಡೆಯಿತು. ಯಾಕೆಂದರೆ ಅವನು ಯಾವ ಮನೆಯ ಒಳಗೂ ಬರುವಂತಿರಲಿಲ್ಲ. ಅವನ ತಲೆಯ ಮೇಲಿನ ಸರಕು ಊರಿನ ಯಾವುದೇ ಮನೆಯ ಬಾಗಿಲಿಗಿಂತಲೂ ಎತ್ತರವಾಗಿತ್ತು. ಮತ್ತು ಅವನು ಅದನ್ನು ಕೆಳಕ್ಕಿಳಿಸದೆ ಪೇಟದಂತೆ ಯಾವಾಗಲೂ ಧರಿಸುತ್ತಿದ್ದ. ಜನಸಮೂಹದ ಮಧ್ಯೆ ಅವನು ಕೂತುಕೊಂಡು ಮಾತಾಡುವಾಗಲೂ ಎಲ್ಲರೂ ಅವನನ್ನು ನೋಡಬಹುದಾಗಿತ್ತು. ಎಂದರೆ, ಕಡೇ ಪಕ್ಷ ಅವನ ಪೇಟದ ಹೊರೆಯನ್ನಾದರೂ ನೋಡಬಹುದಾಗಿತ್ತು. ಅದನ್ನು ನೋಡಿದರೂ ಅವನನ್ನೇ ನೋಡಿದ ಭಾವನೆ ಜನರಲ್ಲುಂಟಾಗುತ್ತಿದ್ದರಿಂದ, ಯಾರಿಗೂ ಅವನನ್ನು ನೋಡಲಾಗಲಿಲ್ಲ ಎಂಬ ನಿರಾಶೆಯಾಗಲಿಲ್ಲ. ಅವನ ಮಾತುಗಳೆಲ್ಲಾ ಅದನ್ನು ಕೇಳುತ್ತಿದ್ದವರಿಗೆ ಅವನು ಕಾಣಿಸಿಕೊಳ್ಳುತ್ತಿದ್ದ ಅವನ ದೇಹದ, ಪೇಟದ ವಿವಿಧ ಭಾಗಗಳಿಂದ ಬರುತ್ತಿರುವಂತೆ ಭಾಸವಾಗುತ್ತಿತ್ತು. ಹೀಗಾಗಿ ಅವನ ಪಕ್ಕದಲ್ಲಿ ಕುಳಿತು ಅವನ ಕಿವಿಯನ್ನು ಮಾತ್ರ ನೋಡುತ್ತಿದ್ದವನಿಗೆ ಮಾತುಗಳು ಅವನ ಕಿವಿಯಿಂದ ಬರುತ್ತಿರುವಂತೆ ತೋರುತ್ತಿತ್ತು. ತುಂಬಾ ದೂರ ಕುಳಿತು ಕಾಗದದ ಕಂತೆಯ ಪೇಟದ ಶಿಖರವನ್ನು ನೋಡುತ್ತಿದ್ದವರಿಗೆ ಅವನ ಮಾತುಗಳು ಎತ್ತರದ ಲೌಡ್ ಸ್ಪೀಕರಿನಿಂದ ಬರುತ್ತಿರುವಂತೆ ಕೇಳಿಬರುತ್ತಿತ್ತು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಅವನು ಹೇಳಿದ: “ನಾನು ನೂರಾರು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿಬಂದಿದ್ದೇನೆ. ಹಿಮಾಲಯ, ಕಾರಾಕೋರಮ್, ಆಂಡೀಸ್, ಆಲ್ಪ್ಸ್, ಒಲಿಂಪಸ್, ಪಿರನೀಸ್ ಮುಂತಾದ ಪ್ರಪಂಚದ ಎಲ್ಲಾ ಪರ್ವತಗಳ ತಪ್ಪಲಿನಲ್ಲೂ ನಿರ್ದಿಷ್ಟಕಾಲ ಸಾಧನೆ ತಪಸ್ಸುಗಳನ್ನು ಆಚರಿಸಿ, ಜಗತ್ತಿನ, ಸೃಷ್ಟಿಯ ಮೂಲ ರಹಸ್ಯದ ಅರಿವಿಗಾಗಿ ಪ್ರಾಣ ತೆತ್ತಿದ್ದೇನೆ. ನೀವು ನನ್ನ ತಲೆಯ ಮೇಲೆ ನೋಡುತ್ತಿರುವುದು ಪೇಟ ಅಲ್ಲ. ನಾನು ಅದನ್ನು ಅಲಂಕಾರಕ್ಕಾಗಿ ಧರಿಸಿಲ್ಲ. ಅದು ನನ್ನ ಬೀಜಪ್ರಶ್ನೆ. ಆ ಪ್ರಶ್ನೆಯನ್ನೇ ಚಿಂತಿಸುತ್ತಾ, ಅದಕ್ಕೆ ಉತ್ತರ ಹುಡುಕುತ್ತಾ ಇಷ್ಟು ದಿನ ಕಾಲ ಕಳೆದಿದ್ದೇನೆ. ಹೀಗಾಗಿ ನಾನೇ ಆ ಪ್ರಶ್ನೆಯಾಗಿದ್ದೇನೆ. ನನ್ನ ತಲೆಯ ಮೇಲಿರುವ ಪ್ರಶ್ನೆಯ ಉದ್ದವೇ ನನ್ನ ಎತ್ತರ. ಇದನ್ನು ನಾನು ಕೆಳಕ್ಕೆ ಇಳಿಸಲಾರೆ. ಯಾಕೆಂದರೆ ಈ ಪ್ರಶ್ನೆಯ ಬುಡ ನನ್ನ ತಲೆಗೆ ಬೆಸುಗೆ ಹೊಂದಿದೆ. ಮತ್ತೊಂದು ಮುಖ್ಯ ವಿಚಾರವೆಂದರೆ, ನಾನು ನನ್ನ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳುವ ಅತಿ ಮುಖ್ಯ ಘಟ್ಟದಲ್ಲಿದ್ದೇನೆ. ಇಷ್ಟೊಂದು ವರ್ಷಗಳ ತಪಸ್ಸಿನ ಫಲವಾಗಿ ನನಗೆ ಉತ್ತರ ಎಲ್ಲಿ ದೊರಕುತ್ತದೆಂಬ ಬಗ್ಗೆ ಮಾಹಿತಿ ದೊರೆತಿದೆ. ನಾನು ನನ್ನ ಪ್ರಶ್ನೆಯನ್ನು ಬರೆದು ಅಲ್ಲಿಗೆ ಕಳಿಸಿದರೆ ಸಾಕು, ಉತ್ತರ ಖಂಡಿತಾ ದೊರಕುತ್ತದೆ. ನಾನು ನನ್ನ ಬದುಕನ್ನು ವ್ಯರ್ಥ ಮಾಡಿಕೊಂಡಿಲ್ಲವೆಂಬ ತೃಪ್ತಿಯ ಅನುಭವ ಸಿಗುವುದು ನನಗಾಗಲೇ ಕಾಣಿಸುತ್ತಿದೆ.”

ಯಾರೋ ಒಬ್ಬ ದೂರದಿಂದ ಕೂಗಿ ಕೇಳಿದ: “ನಿಮ್ಮ ಪ್ರಶ್ನೆಗೆ ಉತ್ತರ ಎಲ್ಲಿ ದೊರಕುತ್ತೆ?” ಅವನು ತನ್ನ ಶರಟಿನ ಜೇಬಿಗೆ ಕೈಹಾಕಿ ಮಡಿಸಿದ್ದ ಒಂದು ಚೂರು ಕಾಗದವನ್ನು ತೆಗೆದು ಮೇಲೆತ್ತಿ ಹಿಡಿದು ಎಲ್ಲರಿಗೂ ತೋರಿಸಿದ. ”ಇಗೋ ಇಲ್ಲಿದೆ, ನೋಡಿ ನನ್ನ ತಪಸ್ಸಿನ ಫಲ!”

ಎಲ್ಲರೂ ಬೆರಗಾದರು. ಅವನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಭಾಸ್ ಎಂದರು. ಭಲೇ ಎಂದರು. ಮನೆಗಳಿಗೆ ಹಿಂದಿರುಗಿದರು.

ಅವನು ಅದೇ ಬಯಲಿನಲ್ಲಿ ಕುಳಿತು ತನ್ನ ಪ್ರಶ್ನೆಯನ್ನು ಮತ್ತೊಂದು ಪ್ರತಿ ಮಾಡಿ ಕೆಲವು ದಿನಗಳ ನಂತರ ತಾನು ತಪಸ್ಸಿನ ಫಲವಾಗಿ ಪಡೆದಿದ್ದ ವಿಳಾಸಕ್ಕೆ ಅಂಚೆ ಮೂಲಕ ಕಳಿಸಿದ. ಅಂಚೆಕಚೇರಿಯಲ್ಲಿ ಆ ವಿಳಾಸವನ್ನು ನೋಡಿ ಗುಮಾಸ್ತ ಅದನ್ನು ಕಳಿಸುವ ಹೊಣೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಇಂತಹ ವಿಳಾಸ ಇಲ್ಲವೇ ಇಲ್ಲವೆಂದು ವಾದಿಸಿದ. ಆದರೆ ಅದಕ್ಕೆ ತಗಲುವ ಅಂಚೆವೆಚ್ಚವನ್ನು ಸಲ್ಲಿಸಿ ಸ್ಟಾಂಪುಗಳನ್ನು ಕಾಗದದ ಕಟ್ಟಿನ ಮೇಲೆ ವಿಳಾಸವನ್ನು ಬರೆದಿರುವ ಜಾಗವನ್ನು ಬಿಟ್ಟು ಬೇರೆಲ್ಲಾ ಕಡೆ ಅಂಟಿಸಿದುದರಿಂದ ಕಡೆಗೆ ಅವನು ಒಪ್ಪಿಕೊಳ್ಳಲೇ ಬೇಕಾಯಿತು. ಅಂತೂ ಅದು ಅವನ ಕೈಬಿಟ್ಟು ಹೋಯಿತು. ಮುಂದೇನಾದರೆ ತನಗೇನಂತೆ, ಅದು ವಿಳಾಸಕ್ಕೆ ತಲುಪಲಿಲ್ಲ ಎಂಬ ದೂರು ಮಾತ್ರ ಕೊಡಬೇಡಿ, ಎಂದು ಎಚ್ಚರಿಕೆ ಕೊಟ್ಟ, ಅಂಚೆ ಗುಮಾಸ್ತ್ರ.

ತನ್ನ ಪತ್ರಕ್ಕೆ ಉತ್ತರ ನಿರೀಕ್ಷಿಸುತ್ತಾ ಎರಡು ತೆಂಗಿನ ಮರದುದ್ದದ ಅವನು ಕಾದು ಕುಳಿತ. ದಿನಾ ಬೆಳಿಗ್ಗೆ ಅಂಚೆರೈಲು ಬಂದ ತಕ್ಷಣ ರೈಲುನಿಲ್ದಾಣಕ್ಕೆ ಅಂಚೆ ಗುಮಾಸ್ತನ ಜೊತೆ ಹೋಗಿ ಅವನು ತರುವ ಚೀಲವನ್ನೇ ನೋಡುತ್ತಾ ಅಂಚೆಕಚೇರಿಗೆ ಬರುತ್ತಿದ್ದ. ಅಲ್ಲಿ ಗುಮಾಸ್ತ ಚೀಲದ ಅರಗಿನ ಮುದ್ರೆಯನ್ನು ಒಡೆದು ಒಳಗಿದ್ದ ಕಾಗದಗಳನ್ನೆಲ್ಲಾ ತನ್ನ ಮೇಜಿನ ಮೇಲೆ ಸುರಿದು ಅವುಗಳ ಮೇಲೆ ಟಪ್ ಟಪ್ ಎಂದು ತಾರೀಖಿನ ಮುದ್ರೆಯನ್ನೊತ್ತಿ, ಪ್ರತಿಯೊಂದು ಕಾಗದದ ಮೇಲಿದ್ದ ವಿಳಾಸವನ್ನು ಗಟ್ಟಿಯಾಗಿ ಓದುತ್ತಿದ್ದ. ಅವನು ಹೆಸರು ಕೂಗಿದ ಕೂಡಲೇ ಆಯಾ ಕಾಗದದ ವಾರಸುದಾರರು ಮುಂದೆ ಬಂದು ತಮ್ಮ ತಮ್ಮ ಕಾಗದಗಳನ್ನು ಪಡೆದು ಓದುತ್ತಾ ಹಿಂದಿರುಗಿ ಹೋಗುತ್ತಿದ್ದರು. ಈ ಪ್ರಕಾರ ರೈಲು ನಿಲ್ದಾಣದಿಂದ ಅಂಚೆಕಚೇರಿಗೆ ಓಡಾಡಿ, ಗುಮಾಸ್ತ ಯಾವ ಕ್ಷಣದಲ್ಲಿ ತನ್ನನ್ನು ಕರೆದಾನೋ ಎಂಬ ಕಾತುರದಿಂದ ನಿರೀಕ್ಷಿಸುತ್ತಿದ್ದರೂ ಎರಡು ತೆಂಗಿನ ಮರದುದ್ದದ ಮನುಷ್ಯನಿಗೆ ಹಲವಾರು ವರ್ಷಗಳಾದರೂ ಯಾವ ಕಾಗದವೂ ಬರಲಿಲ್ಲವೆಂಬ ವಿಷಾದನೀಯ ಸಂಗತಿ ಊರಿನಲ್ಲಿ ಮನೆಮಾತಾಗಿತ್ತು. ಎಲ್ಲರ ಬಾಯಲ್ಲೂ ಬೆಳಗಿನ “ಈ ದಿನ ಕೂಡ ಇಲ್ಲ” ಅಥವಾ “ಇವತ್ತೂ ಬರಲಿಲ್ಲ”ಎಂಬ ಮಾತುಗಳು ಎರಡು ತೆಂಗಿನ ಮರದುದ್ದದ ಮನುಷ್ಯ ನಿರೀಕ್ಷಿಸುತ್ತಿದ್ದ ಪತ್ರಕ್ಕೆ ಸಂಬಂಧಿಸಿದುದಾಗಿತ್ತು. ತಮಗೆ ಬರಬೇಕಾದ ಅಥವಾ ಬಂದ ಖಾಸಗಿ ಪತ್ರಗಳಿಗಿಂತ ಇವನಿಗೆ ಬಾರದಿದ್ದ ಪತ್ರದ ವಿಚಾರ ಪ್ರಾಮುಖ್ಯತೆ ಹೊಂದಿತ್ತು.

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

ಅನೇಕ ವರ್ಷಗಳು ಹೀಗೆ ಕಳೆದರೂ ಅವನು ನಿರಾಶನಾಗಲಿಲ್ಲ. ಒಂದು ರಾತ್ರಿ ಅವನು ಆಂಜನೇಯನ ಗುಡಿಯ ಮುಂದಿನ ಬಯಲಿನಲ್ಲಿ ಕೂತು ತೂಕಡಿಸುತ್ತಿದ್ದಾಗ ಅಂಚೆ ಗುಮಾಸ್ತ ಬಂದು ಅವನನ್ನು ಎಚ್ಚರಿಸಿದ. ಅವನ ಒಂದು ಕೈಲಿ ಲಾಂದ್ರ ಮತ್ತು ಮತ್ತೊಂದು ಕೈಲಿ ಎರಡೂವರೆ ಮಾರುದ್ದದ ಒಂದು ಲಕೋಟೆ ಇತ್ತು. ಅದನ್ನು ಕಂಡ ತಕ್ಷಣ ಅವನಿಗೆ ತನ್ನ ಪ್ರಶ್ನೆಗೆ ಉತ್ತರ ಬಂದಿದೆ ಎಂದು ಗೊತ್ತಾಯಿತು. ಲಕೋಟೆಯನ್ನು ತೆಗೆದುಕೊಂಡು ಮೇಲಿನ ವಿಳಾಸವನ್ನು ಓದಿನೋಡಿ ತನಗೇ ಬಂದಿದೆಯೆಂದು ಖಚಿತಪಡಿಸಿಕೊಂಡ. ಆದರೆ ಈ ನಡುರಾತ್ರಿ ಯಾವ ರೈಲೂ ಬಂದಿಲ್ಲವಾದರೂ ಈ ಪತ್ರ ಇಲ್ಲಿಗೆ ಹೇಗೆ ತಲುಪಿತು ಎಂಬ ಪ್ರಶ್ನೆ ಅವನಿಗೆ ಅಪ್ರಸ್ತುತವಾಗಿತ್ತು. ಆತುರದಿಂದ ಲಕೋಟೆಯ ಬಾಯನ್ನು ಒಡೆದು ಒಳಗಿದ್ದ ಎರಡೂವರೆ ಮಾರುದ್ದದ ಒಂದು ಮೊಳ ಅಗಲದ ಕಾಗದವನ್ನು ಹೊರಕ್ಕೆ ಎಳೆಯತೊಡಗಿದ. ಹೊರಕ್ಕೆ ಬಂದ ತುದಿ ನೆಲದ ಮೇಲೆ ಬೀಳದಿರಲೆಂಬ ಉದ್ದೇಶದಿಂದ ಅಂಚೆ ಗುಮಾಸ್ತ ಕಾಗದ ಹೊರಕ್ಕೆ ಬಂದ ಹಾಗೆ ಅದನ್ನು ಹಿಡಿದುಕೊಂಡು ದೂರ ದೂರ ಹೋಗುತ್ತಿದ್ದ. ಕೊನೆಗೊಮ್ಮೆ ಇವನು ಎಳೆಯುವದು ನಿಂತು ಪೂರ್ತಿ ಕಾಗದ ಹೊರಕ್ಕೆ ಬಂತು. ಅದನ್ನು ಅಲ್ಲೇ ನೆಲದ ಮೇಲೆ ಹರಡಿಕೊಂಡು ಅಂಚೆ ಗುಮಾಸ್ತನ ಲಾಂದ್ರದ ಬೆಳಕಿನಲ್ಲಿ ಓದಲು ತವಕದಿಂದ ಶುರು ಮಾಡಿದ. ಅವನ ಎದೆ ಡಬಡಬ ಬಡಿದುಕೊಳ್ಳುತ್ತಿತ್ತು. ಅಂತೂ ಕೊನೆಗೊಮ್ಮೆ ತನ್ನ ತಪಸ್ಸು ಫಲಿಸಿತೆಂಬ ತೃಪ್ತಿಯೂ ಮೂಡತೊಡಗಿತು. ಲಾಂದ್ರದ ಬೆಳಕು ಕಾಗದದ ಮೇಲೆ ಬಿದ್ದು ಅವನು ಮೊದಲನೇ ಸಾಲಿನ ಅಕ್ಷರದ ಮೇಲೆ ಬೆರಳಿಟ್ಟು ಸರಸರನೇ ಓದಿಬಿಡಲು ಅಣಿಯಾದ. ಆದರೆ ಅವನ ಬೆರಳು ಮೊದಲನೇ ಸಾಲಿನ ಮೊದಲನೇ ಅಕ್ಷರದಿಂದ ಮುಂದಕ್ಕೆ ಓಡಲೇ ಇಲ್ಲ. ಯಾಕಂದರೆ ಅವನಿಗೆ ಓದಲು ಸಾಧ್ಯವಾಗಲಿಲ್ಲ. ಲಾಂದ್ರದ ಬತ್ತಿಯನ್ನು ಉದ್ದಮಾಡಿದ. ಹೆಚ್ಚು ಬೆಳಕು ಬಿತ್ತು, ಆದರೂ ಓದಲು ಸಾಧ್ಯವಾಗಲಿಲ್ಲ. ಕಣ್ಮುಚ್ಚಿಕೊಂಡು ದೃಷ್ಟಿಯಲ್ಲಿದ್ದ ಮಂಜನ್ನು ಕಳೆದುಕೊಂಡು ಓದಲು ಪ್ರಯತ್ನ ಪಟ್ಟ. ಆಗಲೂ ಸಾಧ್ಯವಾಗಲಿಲ್ಲ. ಕಾಗದದ ಮೇಲೆಲ್ಲಾ ಕಣ್ಣಾಡಿಸಿದ. ಎಲ್ಲಾ ಅಪರಿಚಿತ ಅಕ್ಷರಗಳು. ಒಂದೇ ಒಂದು ಅಕ್ಷರ ಕೂಡ ಅವನಿಗೆ ತಿಳಿದುದಾಗಿರಲಿಲ್ಲ. ಲಾಂದ್ರದ ಬತ್ತಿಯನ್ನು ಮತ್ತಷ್ಟು ದೊಡ್ಡದು ಮಾಡಿದ. ಅದು ಕಪ್ಪುಹೊಗೆ ಕಾರಲು ಶುರುಮಾಡಿತು. ಗಾಜಿನ ಚಿಮಣಿಗೆಲ್ಲಾ ಹೊಗೆ ಹತ್ತಿ ಮತ್ತೆ ಲಾಂದ್ರ ಮಂಕಾಯಿತು. ಅಂಚೆ ಗುಮಾಸ್ತ ಅದನ್ನು ಕಂಡು ಅವನ ಕೈಯಿಂದ ಲಾಂದ್ರವನ್ನು ಕಿತ್ತುಕೊಂಡು ಹೋದ. ರಾತ್ರಿ ಕತ್ತಲಿನಲ್ಲಿ ಅಪರಿಚಿತ ಭಾಷೆಯಲ್ಲಿ ಬರೆದ ಕಾಗದವನ್ನು ಓದುವುದು ಮತ್ತೂ ಕಷ್ಟವಾಯಿತು. ಇದನ್ನು ಓದಬಲ್ಲೆನೆಂಬ ಹುಚ್ಚು ವಿಶ್ವಾಸದೊಡನೆ ಬೇಗ ಬೆಳಕಾದರೆ ಸಾಕಲ್ಲಪ್ಪಾ ಎಂದು ಪರಿತಪಿಸಿದ. ಕಾಗದವನ್ನು ಕತ್ತಲಿನಲ್ಲೇ ಕಣ್ಣುಮುಂದೆ ಹಿಡಿದುಕೊಂಡು ನೋಡಿದ, ಮೂಸಿ ನೋಡಿದ, ಎದೆಗೊತ್ತಿಕೊಂಡ. ಆದರೂ ಅವನಿಗೇನೂ ಅರ್ಥವಾಗಲಿಲ್ಲ. ಏನಾದರೂ ಮಾಡಿ ಆದಷ್ಟೂ ಬೇಗ ಅದನ್ನು ಓದಲೇಬೇಕೆಂದು ನಿರ್ಧರಿಸಿ, ಕತ್ತಲಲ್ಲಿ ಪೂರ್ವ ದಿಕ್ಕಿಗೆ ಓಡತೊಡಗಿದ. ಓಡಿ ಓಡಿ ಸುಸ್ತಾಗಿ ಒಂದು ಕಡೆ ಏದುಸಿರು ಬಿಡುತ್ತಾ ನಿಂತಾಗ ದಿಗಂತದಲ್ಲಿ ಬೆಳಕು ಮೂಡುವುದು ಕಾಣಿಸಿ ಅವನಿಗೆ ತುಂಬಾ ಸಂತೋಷವಾಯಿತು. ಅಲ್ಲೇ ಕೂತು ಪುನಃ ಕಾಗದವನ್ನು ನೆಲದ ಮೇಲೆ ಹರಡಿಕೊಂಡು ನೋಡತೊಡಗಿದ. ಅದೆಷ್ಟು ಹೊತ್ತು ಹಾಗೇ ನೋಡುತ್ತಿದ್ದನೋ, ಸೂರ್ಯ ನೆತ್ತಿಯ ಮೇಲೆ ಬಂದಾಗ ಕೂಡ ನೋಡುತ್ತಲೇ ಇದ್ದ.

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

ಇದ್ದಕ್ಕಿದ್ದಂತೆ ಅವನಿಗೆ ತನ್ನ ಕನ್ನಡಕದ ನೆನಪಾಯಿತು. ಬಹುಶಃ ಕನ್ನಡಕವಿಲ್ಲದೆ ಅದನ್ನು ಓದಲು ಅಸಾಧ್ಯ ಎನಿಸಿತು. ಕನ್ನಡಕಕ್ಕಾಗಿ ಜೇಬುಗಳಲ್ಲಿ ತಡಕಾಡಿದ. ಸಿಕ್ಕಲಿಲ್ಲ. ಕನ್ನಡಕ ಎಲ್ಲೋ ಇರಲೇಬೇಕೆಂಬ ಧೈರ್ಯದಿಂದ ಊರಿಗೆ ಓಡಿಬಂದು ಬೀದಿಬೀದಿ, ಗಲ್ಲಿಗಲ್ಲಿಗಳಲ್ಲೆಲ್ಲಾ ಹುಡುಕಾಡಿದ. ಕಂಡ ಕಂಡವರನ್ನೆಲ್ಲಾ ತನ್ನ ಕನ್ನಡಕಕ್ಕಾಗಿ ಬೇಡಿಕೊಂಡ. ಆದರೆ ಅವನಿಗೆ ಎಲ್ಲೂ ಕನ್ನಡಕ ಸಿಕ್ಕಲೇ ಇಲ್ಲ. ಎಲ್ಲಾ ಮನೆಗಳಲ್ಲೂ, ಎಲ್ಲಾ ಅಂಗಡಿಗಳಲ್ಲೂ ವಿಚಾರಿಸಿದ. ರೈಲು ನಿಲ್ದಾಣದ ಪ್ಲಾಟಫಾರ್ಮಿನಲ್ಲಿ, ಅಂಚೆ ಕಚೇರಿಯಲ್ಲಿ ಹುಡುಕಾಡಿದ. ಅಂದಿನ ಅಂಚೆ ಚೀಲದಲ್ಲಿ ತನ್ನ ಕನ್ನಡಕವೇನಾದರೂ ಬಂದಿದೆಯೇ ಎಂದು ವಿಚಾರಿಸಿದ. ಆದರೆ ಏನೂ ಲಾಭವಾಗಲಿಲ್ಲ. ಕೊನೆಗೊಮ್ಮೆ ತಾನು ಕನ್ನಡಕ ಉಪಯೋಗಿಸುತ್ತಲೇ ಇರಲಿಲ್ಲವೇನೋ ಎಂದು ಸಮಾಧಾನ ತಂದುಕೊಂಡ. ಮತ್ತೊಮ್ಮೆ ಬರಿಗಣ್ಣಿನಲ್ಲಿ ಓದಲು ಪ್ರಯತ್ನಪಟ್ಟ.

ಸಾಯಂಕಾಲವಾಗಿ ಕತ್ತಲು ಕವಿಯುವ ವೇಳೆಗೆ ಅವನಿಗೆ ಅರ್ಥವಾಗದ ಭಾಷೆಯಲ್ಲಿ ಕಾಗದ ಬರೆಯಲ್ಪಟ್ಟಿದೆ ಎಂಬ ಅರಿವಾಗಿ, ಅದನ್ನು ತಿಳಿದವರಿಂದ ಓದಿಸಬೇಕೆಂದು ಮನಸ್ಸು ಮಾಡಿದ.

ಆ ಕಾಗದದ ಸಾವಿರಾರು ನಕಲುಗಳನ್ನು ತುಂಬಾ ಶ್ರಮವಹಿಸಿ ಜಾಗರೂಕತೆಯಿಂದ, ಶ್ರದ್ಧೆಯಿಂದ ತಯಾರು ಮಾಡಿ, ಪ್ರಪಂಚದ ಎಲ್ಲಾ ಭಾಷಾಶಾಸ್ತ್ರಜ್ಞರಿಗೂ, ವಿಶ್ವವಿದ್ಯಾನಿಲಯಗಳಿಗೂ, ಅಕಾಡೆಮಿಗಳಿಗೂ ಕಳಿಸಿ, ಅದರ ಭಾಷಾಂತರವನ್ನು ದಯವಿಟ್ಟು ಕಳಿಸಬೇಕೆಂಬ ಮನವಿಯನ್ನು ಮಾಡಿಕೊಂಡ. ಆ ದಿನಗಳಲ್ಲಿ ಅಂಚೆ ಗುಮಾಸ್ತನಿಗೆ ಅಂಡು ಕೆರೆದುಕೊಳ್ಳಲು ಪುರುಸೊತ್ತಿಲ್ಲದಷ್ಟು ಕೆಲಸ.

ಅಂಚೆ ರೈಲು ಬರುವ ವೇಳೆಗೆ ಅಂಚೆ ಗುಮಾಸ್ತನೊಂದಿಗೆ ರೈಲು ನಿಲ್ದಾಣಕ್ಕೆ, ಅಲ್ಲಿಂದ ಅಂಚೆ ಕಚೇರಿಗೆ ಮತ್ತೊಮ್ಮೆ ದಿನಾಗಲೂ ಅವನ ಓಡಾಟ ಶುರುವಾಯಿತು. ಆದರೆ ಈ ಬಾರಿ ಅವನಿಗೆ ಬೇಗ ಬೇಗ ಉತ್ತರಗಳು ಬರಲು ಶುರುವಾಯಿತು. ದಿನಾಗಲೂ ಒಂದಲ್ಲೊಂದು ಕಾಗದ ಇದ್ದೇ ಇರುತ್ತಿತ್ತು. ಬಹಳ ದಿನಗಳು ಇಪ್ಪತ್ತು ಮೂವತ್ತು, ನೂರಾರು, ಸಾವಿರಾರು ಬರುತ್ತಿತ್ತು. ಆದರೆ ಅವೆಲ್ಲವುಗಳ ಸಾರಾಂಶ ಒಂದೇ: ಈ ಭಾಷೆ ಯಾವುದೋ ನಮಗೆ ಗೊತ್ತಿಲ್ಲ. ಪ್ರಪಂಚದಲ್ಲಿ ಇಂತಹ ಭಾಷೆ ಇದೆ ಎಂಬ ಸಂಗತಿ ನಮಗೆ ಈಗಲೇ ತಿಳಿದದ್ದು. ಇದನ್ನು ಓದಲು ನಮಗೆ ಸಾಧ್ಯವಾಗಿಲ್ಲ ಎಂದು ತಿಳಿಸಲು ವಿಷಾದ. ಅವನಿಗೆ ಬಂದ ಇಂತಹ ನಿರಾಶಾದಾಯಕ ಕಾಗದಗಳು ಊರಿನ ಬೀದಿ ಬೀದಿಯಲ್ಲೆಲ್ಲಾ ಬಿದ್ದಿರುತ್ತಿತ್ತು. ಯಾಕೆಂದರೆ ಅವನು ಅವನ್ನು ಓದಿ ಎಲ್ಲೆಂದರಲ್ಲೇ ಬಿಸಾಡುತ್ತಿದ್ದ. ಅವನ್ನೆಲ್ಲಾ ಓರಣವಾಗಿ ಫೈಲ್ ಮಾಡಿ ಇಟ್ಟುಕೊಳ್ಳುತ್ತಿರಲಿಲ್ಲ. ಗಾಳಿ ಬಂದಾಗ ಎಂಜಲು ಹಾಳೆಗಳಂತೆ ಹಾರಾಡುತ್ತಿದ್ದ ಆ ಕಾಗದಗಳನ್ನು ನೋಡಿ ಊರಿನ ಜನರೆಲ್ಲಾ ಬೇಸತ್ತಿದ್ದರು. ಜಾಡಮಾಲಿಗಳು ಎಷ್ಟು ಗುಡಿಸಿ ಸುಟ್ಟು ಹಾಕುತ್ತಿದ್ದರೂ, ಅವು ಹಾರಾಡುತ್ತಲೇ ಇದ್ದವು. ನಡೆಯುವಾಗ ಪ್ರತಿಯೊಬ್ಬರ ಕಾಲಿಗೂ ಸಿಕ್ಕೇ ಸಿಗುತ್ತಿದ್ದವು. ಒಟ್ಟಿನಲ್ಲಿ ಊರಿನ ವಾತಾವರಣ ಈ ವಿಷಾದಕರ ಕಾಗದಗಳಿಂದ ತುಂಬಿಹೋಗಿತ್ತು. ಅನೇಕ ವರ್ಷಗಳು ಹೀಗೇ ಉರುಳಿ ಹೋದವು.

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ಪರಿಸ್ಥಿತಿ ಹೀಗಿರುವಾಗ, ಎಂದಿನಂತೆ ಒಂದು ದಿನ ಬೆಳಿಗ್ಗೆ ಅಂಚೆ ಗುಮಾಸ್ತ ಅಂದಿನ ಟಪಾಲು ಚೀಲದ ಅರಗಿನ ಮುದ್ರೆಯನ್ನು ಒಡೆದಾಗ ಅದರೊಳಗೆ ಒಂದೇ ಒಂದು ಕಾಗದ ಇದ್ದುದು ಕಂಡುಬಂತು. ಆ ಕಾಗದ ಎರಡು ತೆಂಗಿನ ಮರದುದ್ದದ ಮನುಷ್ಯನಿಗೇ ಬಂದಿತ್ತೆಂಬುದನ್ನು ಎಂತಹ ಸಣ್ಣ ಮಗುವಾದರೂ ಊಹಿಸಬಹುದಾಗಿತ್ತು. ಅವನು ಆ ಕಾಗದವನ್ನು ತೆಗೆದುಕೊಂಡು ಓದಿದ: ನೀವು ಕಳಿಸಿದ ವಿಚಿತ್ರ ಭಾಷೆಯ ಸಾಹಿತ್ಯ ತಲುಪಿದೆ. ನಾವು ಈ ಬಗ್ಗೆ ಅತ್ಯಂತ ಶ್ರದ್ದೆ ವಹಿಸಿ ಸಂಶೋಧನೆ ನಡೆಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ನಮ್ಮ ಅಮೂಲ್ಯ ಸಂಶೋಧನೆಯ ಫಲವೇನೆಂದರೆ ನೀವು ಕಳಿಸಿದ ಕಾಗದ ಒಂದು ಅಪೂರ್ವವಾದ, ತೀರ ಅಂದರೆ ತೀರಾ ಅಪರೂಪವಾದ ಭಾಷೆಯಲ್ಲಿ ಬರೆಯಲಾಗಿದೆ. ನಿಜ ಹೇಳಬೇಕೆಂದರೆ ಈ ಭಾಷೆಯ ಉಪಯೋಗ ಪ್ರಪಂಚದಲ್ಲಿ ಎಲ್ಲೂ ಇಲ್ಲ. ಹಿಂದೆ ಎಲ್ಲಾದರೂ ಇತ್ತೆಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಭಾಷೆಯ ಬಗ್ಗೆ ಒಂದು ಮಾತನ್ನು ನಮ್ಮ ಸಂಶೋಧನೆಯ ಫಲವಾಗಿ ಖಂಡಿತವಾಗಿ ಹೇಳಬಹುದು- ಈ ಭಾಷೆಗೆ ಲಿಪಿ ಇಲ್ಲ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

MSK Prabhu 2

ಎಂ.ಎಸ್.ಕೆ. ಪ್ರಭು(1938-2000): ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮದವರು. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಭು ಅವರ ಪ್ರಾಥಮಿಕ ಶಿಕ್ಷಣ ಮಂದಗೆರೆ-ಹೊಳೆನರಸೀಪುರಗಳಲ್ಲಿ, ಪ್ರೌಢಶಿಕ್ಷಣ ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಬೆಂಗಳೂರಿನ ಅಕೌಂಟೆಂಟ್‌ ಜನರಲ್‌ರವರ ಕಚೇರಿಯಲ್ಲಿ ಕಾರ್ಯನಿರ್ವಹಣೆ. ನಂತರ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ. ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತರಾದರು. ಹಲವಾರು ಶಬ್ಧ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ಮುಖ್ಯವಾದವು. ಫ್ಯಾಂಟಸಿ ಕತೆಗಳ ಮಾದರಿಯನ್ನು ತಮ್ಮ ಕತೆಗಳಲ್ಲಿ ಹೆಚ್ಚು ದುಡಿಸಿಕೊಂಡ ಪ್ರಭು ಅವರ ಪ್ರಕಟಿತ ಕೃತಿಗಳು: ಬೆತ್ತಲೆ ಅರಸನ ರಾಜರಹಸ್ಯ, ಮುಖಾಬಿಲೆ(ಕಥಾ ಸಂಕಲನಗಳು); ಬಕ, ಮಹಾಪ್ರಸ್ಥಾನ, ಸಿಸೆರೊ, ಒಳ್ಳೆಯ ಸಮಯ ಮತ್ತು ಇತರ ನಾಟಕಗಳು(ನಾಟಕಗಳು); ಕಾಣೆಯಾದ ಟೋಪಿ(ಅನುವಾದ); ಸಾಹಿತ್ಯದಲ್ಲಿ ಫ್ಯಾಂಟಸಿ(ಪ್ರಬಂಧ); ಮೂಗಿನ ಕತೆ ಮತ್ತು ಪತ್ತೆದಾರಿ ಕತೆಗಳ ಸಂಗ್ರಹ ಶೋಧ(ಸಂಪಾದಿತ ಕೃತಿಗಳು), ಪೋಕರಿಪಾಪಣ್ಣನ ಪರಾಕು(ಮಕ್ಕಳಿಗಾಗಿ ರಚಿಸಿದ ಕೃತಿ). ವರ್ಧಮಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಮತೆಂತೋ ನಾಟಕ ರಚನಾ ಸ್ಫರ್ಧೆ ಹಾಗೂ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿ ವಿಜೇತರು. ಎಂ.ಎಸ್.ಕೆ. ಪ್ರಭು ಅವರು 2000ದ ಜನವರಿ 25ರಂದು ನಿಧನರಾದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೀಣಾ ಶಾಂತೇಶ್ವರ ಅವರ ಕತೆ | ತಿರುಗಿ ಹೋದಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...