ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನನಗೆ ಹದಿನಾರು ಹದಿನೇಳು ವರ್ಷವಾಗುವವರೆಗೂ ನಾನು ಊರ ಇಗರ್ಜಿಯಲ್ಲೇ ಸದಾ ಬಿದ್ದಿರುತ್ತಿದ್ದೆ. ಇಗರ್ಜಿಯ ಬಾಗಿಲು ತೆರೆಯುವುದು, ಗಂಟೆ ಹೊಡೆಯುವುದು, ಪೀಠದ ಮೇಲಿನ ಹೂದಾನಿಗಳಲ್ಲಿ ಹೂವು ಎಲೆ ಜೋಡಿಸುವುದು, ಮೇಣದ ಬತ್ತಿ ಹಚ್ಚುವುದು, ಪಾದರಿಗೆ ನೀರು ಕಾಯಿಸಿ ಕೊಡುವುದು, ಆತನ ಟಪಾಲು ತರುವುದು, ಮಾಂಸ ತಂದುಕೊಡುವುದು, ಪೂಜಾ ಸಂದರ್ಭದಲ್ಲಿ ಆಲ್ಟರ್ ಬಾಯ್ ಆಗಿ ಅವನಿಗೆ ಸಹಾಯ ಮಾಡುವುದು ಹೀಗೆ ಸಮಸ್ತ ಕೆಲಸಗಳನ್ನು ಶ್ರದ್ಧೆ ಭಯ ಭಕ್ತಿಯಿಂದ ನಾನು ಮಾಡುತ್ತಿದ್ದೆ.
ಆಗ ನನ್ನ ಹಾಗೆಯೇ ಇಗರ್ಜಿಗೆ ಬರುತ್ತಿದ್ದ, ಪಾದರಿಯ ಜತೆ ಸಂಪರ್ಕವಿರಿಸಿಕೊಂಡಿದ್ದ ಹಲವರ ಪರಿಚಯ ನನಗಾಗುತ್ತಿತ್ತು. ಇಗರ್ಜಿಯಲ್ಲಿ ಓಡಾಡಿಕೊಂಡಿದ್ದರಿಂದ ನಾನು ಜನರ ಪಾಲಿಗೆ ದೈವಭೀತಿಯ, ಸನ್ನಡತೆಯ ವಿಧೇಯ ಬಾಲಕನಾಗಿದ್ದೆ. ಅವರೆಲ್ಲ ನನ್ನನ್ನು ಪ್ರೀತಿವಿಶ್ವಾಸದಿಂದ ಕಾಣುತ್ತಿದ್ದರು. ನನ್ನ ಅವರ ನಡುವೆ ಸ್ನೇಹ ಪರಿಚಯ ಬೆಳೆಯಲಿಕ್ಕೆ ಈ ವಿಶ್ವಾಸ ಕಾರಣವಾಗಿತ್ತು. ಹೀಗೆ ನನಗೆ ಪರಿಚಯವಾದವರು ಬಹಳ ಜನ. ಇವರೆಲ್ಲರಲ್ಲಿ ನಾನು ತುಂಬಾ ಮೆಚ್ಚಿಕೊಂಡಿದ್ದು ಬಣ್ಣದ ಬಾಲ್ತಿದಾರರನ್ನು.
ಬಾಲ್ತಿದಾರ ತೆಳ್ಳಗೆ ಎತ್ತರದ ಆಳು. ಮೂವತ್ತು ಮೂವತ್ತೈದು ವರ್ಷ. ಒಂದು ಖಾಕಿ ಪ್ಯಾಂಟು, ಪಟ್ಟಿ ಪಟ್ಟಿಯ ಅಂಗಿ. ಉದ್ದ ಮುಖ, ಚಪ್ಪರದ ಹಾಗೆ ಎಣ್ಣೆ ಕಾಣದ ಹಾರುವ ತಲೆಗೂದಲು, ಮೈಮೇಲೆ ಅಲ್ಲಲ್ಲಿ ಖಾಯಂ ಆಗಿ ಉಳಿದುಬಿಟ್ಟಿರುವ ಬಣ್ಣದ ಹುಂಡುಗಳು.
ಈ ಬಾಲ್ತಿದಾರರನ್ನು ನಾನು ಹಲವಾರು ವರ್ಷಗಳಿಂದ ನೋಡುತ್ತ ಬಂದಿದ್ದೆ. ಊರಿನ ಇಗರ್ಜಿ ಹಬ್ಬಕ್ಕೆ ಒಂದು ತಿಂಗಳಿದೆ ಅನ್ನುವಾಗ ಈತ ಏಣಿ, ಹಲಗೆ, ಹಗ್ಗ, ಮರದ ಕಂಬಗಳನ್ನು ಹೊತ್ತು ಬರುತ್ತಿದ್ದ. ಇಗರ್ಜಿಯೊಳಗಿನ ಕಂಬಗಳಿಗೆ, ಕಮಾನುಗಳಿಗೆ ಒಂದು ಕಡೆಯಿಂದ ಬಣ್ಣ ಬಳಿಯಲು ತೊಡಗುತ್ತಿದ್ದ. ಕೆಲವೆಡೆ ಏಣಿಯ ಮೇಲೆ ನಿಂತು, ಕೆಲವೆಡೆ ಅಟ್ಟಣಿಗೆ ನಿರ್ಮಿಸಿಕೊಂಡು ಈತ ಒಂದೇ ಸಮನೆ ಕೆಲಸ ಮಾಡುತ್ತಿದ್ದ. ನಡುವೆ ಗಂಟೆ ಎರಡು ಗಂಟೆಗೊಮ್ಮೆ ಇಳಿದು, ಹೊರ ಬಂದು ಬೀಡಿ ಸೇದಿ ಮತ್ತೆ ಕೆಲಸದಲ್ಲಿ ನಿರತನಾಗುತ್ತಿದ್ದ. ನಾನು ನನ್ನ ಹಾಗೆಯೇ ಕೆಲ ಹುಡುಗರು ಇವನು ಬಣ್ಣ ಹಚ್ಚುವುದನ್ನು ನೋಡುತ್ತ ನಿಲ್ಲುತ್ತಿದ್ದೆವು. ಧೂಳು ಕುಳಿತು ಮಲಿನಗೊಂಡಿದ್ದ ಗೋಡೆ ಕಮಾನುಗಳು ಇವನ ಬ್ರಷ್‌ನ ಸ್ಪರ್ಶದಿಂದ ಬೆಳ್ಳಗಾಗುತ್ತಿದ್ದವು. ನಿಧಾನವಾಗಿ ಈ ಕಂಬಗಳ ಮೇಲೆ ಹೂ ಬಳ್ಳಿಗಳು, ಹೂ ಗೊಂಚಲು, ಮೊಗ್ಗು ಎಲೆಗಳು ಅರಳುತ್ತಿದ್ದವು. ಕಮಾನಿನ ಅಂಚಿಗೆ ದಾರದ ಗೋಡೆಗಳನ್ನು ಇಳಿಬಿಡುತ್ತಿದ್ದ. ಪರದೆ ನೀಲಿಯಾಗಿದ್ದು, ಕೆಂಪು ಅಂಚು ಅದಕ್ಕಿರುತ್ತಿತ್ತು. ಬಂಗಾರದ ಬಣ್ಣದ ಗೊಂಡೆ ತೂಗು ಬೀಳುತ್ತಿತ್ತು, ಈ ನೀಲಿ ಪರದೆಗೆ.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ನಡುವಿನ ಪೀಠದ ಹಿಂದಿನ ಗೋಡೆಯ ಮೇಲೆ ಬಣ್ಣ ಹಚ್ಚುವಾಗ ಬಾಲ್ತಿದಾರ ನಮ್ಮ ಪಾಲಿಗೆ ಮೈಕೆಲ್‌ಯೇಂಜಲೋ, ಹಗುರವಾದ ತೇಲುವ ಮೋಡಗಳ ಮರೆಯಿಂದ ಹೂವಿನ ಹಾರ ಹಿಡಿದ ದೇವದೂತರು. ಕೆಲವರು ತುತ್ತೂರಿ ಗಿಟಾರ್ ಮೊದಲಾದ ವಾದ್ಯಗಳನ್ನು ಬಾರಿಸುತ್ತಿದ್ದಾರೆ. ಆಗ ಏಸುವಿನ ತಂದೆ ಜೋಸೆಫ್ ತಾಯಿ ಮೇರಿಯವರು ಕಾಣಿಸಿಕೊಳ್ಳುತ್ತಾರೆ. ಇವರ ನಡುವೆ ಬಾಲ ಏಸು, ಹನ್ನೆರಡು ವರುಷದ ಹುಡುಗ, ಮುಗ್ಧ ಮುಖ, ದೈವಿಕತೆಯನ್ನು ಸೂಸುವ ಕಣ್ಣುಗಳು, ತಲೆ ತುಂಬ ಕೂದಲು, ತಂದೆ ತಾಯಿಯ ನಡುವೆ ಮೋಹಕ ನಗುವನ್ನು ಪ್ರಕಟಿಸುತ್ತ ನಿಂತಿದ್ದಾನೆ ಬಾಲಏಸು.
ಐದಾರು ದಿನಗಳವರೆಗೆ ಬಾಲ್ತಿದಾರನ ಈ ಕೆಲಸ ಸಾಗುತ್ತದೆ. ಬೀಡಿ ಸೇದಿ ಅಟ್ಟಣಿಗೆ ಹತ್ತುವ ಮುನ್ನ ಆತ ಒಂದು ಬಾರಿ ಇಗರ್ಜಿಯ ಹೆಬ್ಬಾಗಿಲಿನ ಬಳಿ ನಿಂತು ತನ್ನ ಚಿತ್ರ ನೋಡುತ್ತಾನೆ. ಏನೋ ತೃಪ್ತಿ, ಆತ್ಮವಿಶ್ವಾಸ ಸಂತೋಷದಿಂದ ಅಟ್ಟಣಿಗೆ ಏರುತ್ತಾನೆ. ಕೆಲಸ ಮುಂದುವರಿಸುತ್ತಾನೆ. ತನ್ಮಯನಾಗುತ್ತಾನೆ ಚಿತ್ರದಲ್ಲಿ.
ಈ ಚಿತ್ರವನ್ನು ಮಾತ್ರ ಬಾಲ್ತಿದಾರ ಬದಲಾಯಿಸುವುದಿಲ್ಲ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಾನಾದರೂ ಮೂಲಕಲ್ಪನೆ ಹಾಗೆಯೇ ಇರುತ್ತದೆ. ಜನ ತೀರ್ಮಾನಿಸದೆ ಅವನು ಹಾಗೆಲ್ಲ ಚಿತ್ರದಲ್ಲಿ ಮಾರ್ಪಾಡು ಮಾಡುವಂತೆಯೂ ಇಲ್ಲ. ಆದರೆ ವರ್ಷ ಉರುಳಿದ ಹಾಗೆ ಈ ಚಿತ್ರ ಹೆಚ್ಚು ಆಕರ್ಷಕವೂ, ಪರಿಪೂರ್ಣವೂ ಆಗುತ್ತ ಹೋಗುತ್ತಿದೆ ಎಂದು ಜನ ಹೇಳುತ್ತಾರೆ.
“…ಮೊದಲು ಚಿತ್ರ ಬರೆದ ಹಾಗೆ ಕಾಣುತ್ತಿತ್ತು… ಈಗೀಗ ಸಾಕ್ಷಾತ್ ಏಸು ಮರಿ ಜೋಸೇಫರೇ ಎದ್ದು ಬರೋ ಹಾಗೆ ಕಾಣುತ್ತೆ.”
ಎಂದು ಮಿರೋಣ್ ಹೇಳುವುದನ್ನು ನಾನು ಕೇಳಿದ್ದೆ. ಈ ಮಾತನ್ನು ಉಳಿದ ಹಲವರು ಅನುಮೋದಿಸುತ್ತಿದ್ದರು ಕೂಡ.
ಬಾಲ್ತಿದಾರ ಇಗರ್ಜಿಯ ಕೆಲಸ ಮುಗಿಸಿದ್ದೇ ಕ್ರೀಸ್ತುವರ ಮನೆಗಳತ್ತ ಬರುತ್ತಿದ್ದ. ಕೆಲವರ ಮನೆಗಳಲ್ಲಿ ಮರದ ಸಣ್ಣ ಪೀಠಗಳಿರುತ್ತಿದ್ದವು. ಕೆಲವರು ದೊಡ್ಡ ಪ್ರಮಾಣದ ಪೀಠಗಳನ್ನೇ ಮಾಡಿಸುತ್ತಿದ್ದರು. ಹೀಗಾಗಿ ಬಾಲ್ತಿದಾರನಿಗೆ ಇಲ್ಲೂ ಹಗಲು ರಾತ್ರಿ ಕೆಲಸವಿರುತ್ತಿತ್ತು. ಮರದ ಪೀಠವಾದರೆ ಅದಕ್ಕೆ ಬಣ್ಣ, ಒಳಗಿನ ದೇವರ ಇಮಾಜಿಗೆ ಬಣ್ಣ, ದೊಡ್ಡ ಪೀಠವಾದರೆ ಒಂದು ದಿನದ ಕೆಲಸ.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಕೆಲವರು-
“ಬಾಲ್ತಿದಾರ್ ಮಾಮ್… ಈ ವರ್ಷ ಬೇಡ… ಮುಂದಿನ ವರ್ಷ ನೋಡೋಣ” ಎಂದು ಹೇಳುತ್ತಿದ್ದರು.
“ಒಳ್ಳೇದು… ಹಾಗೇ ಮಾಡಿ” ಎಂದು ಒಂದಿಷ್ಟು ಬೇಸರ ಪಡದೆ ಈತ ಮುಂದಿನ ಮನೆಗೆ ಸಾಗುತ್ತಿದ್ದ.
ಬಾಲ್ತಿದಾರನ ವೈಶಿಷ್ಟ್ಯವೆಂದರೆ ಅವನಿಗೆ ಕೆಲಸದ ಬಗ್ಗೆ ಇದ್ದ ಕಾಳಜಿ, ಮುತುವರ್ಜಿ. ಆತ ಪಡಪೋಶಿ ಕೆಲಸ ಮಾಡುತ್ತಿರಲಿಲ್ಲ. ಬೇಕಾಬಿಟ್ಟಿ ಕೆಲಸ ಅವನಿಗೆ ಗೊತ್ತಿರಲಿಲ್ಲ. ಅವನಿಗೆ ಮುನ್‌ವೇಲ್ ಸಾಹುಕಾರರ ಮನೆಯೂ ಒಂದೇ, ಕೂಲಿ ಲಾದ್ರು ಮನೆಯೂ ಒಂದೇ. ಎಲ್ಲೇ ಹೋದರೂ ಅಷ್ಟೇ ಆಸಕ್ತಿ, ಶ್ರದ್ದೆ.
ನಾನು ಒಂದೆರಡು ಸಾರಿ ಅವನ ಮನೆಗೂ ಹೋಗಿದ್ದೆ.
ಪಾದರಿ ಅವನನ್ನು ಕರೆದು ತಾ ಎಂದಿದ್ದರಿಂದ ರೈಲುಹಳಿ ಮಗ್ಗುಲಲ್ಲಿದ್ದ ಅವನ ಮನೆಗೆ ಹೋಗಿ ವಿಷಯ ತಿಳಿಸಿದ್ದೆ.
ಐದಾರು ತೆರೆದ, ಮುಚ್ಚಿದ ಟ್ರಂಕುಗಳ ನಡುವೆ ಕೈಯಲ್ಲಿ ಬ್ರಶ್ ಹಿಡಿದು ಆತ ಕುಳಿತಿದ್ದ.
”ಏನು… ಮರಿ…”
“ಫಾದರ್ ಬರಲಿಕ್ಕೆ ಹೇಳಿದಾರೆ…”
”ಬರತೀನಿ ಅಂತ ಹೇಳು.”
ನಾನು ನೋಡುತ್ತ ನಿಲ್ಲುವುದಿತ್ತು-
ಬ್ರಶ್ ನಿಧಾನವಾಗಿ ಸರಿದಾಡುತ್ತ ಬಣ್ಣವನ್ನು ಒಂದೇ ಸಮ, ಒಂದೇ ಹೊಳಪಿನಲ್ಲಿ ಹಚ್ಚುವ ಪರಿಯನ್ನು. ಹಸಿರು, ನೀಲಿ, ಕೆಂಪು ಬಣ್ಣದ ಆ ಟ್ರಂಕುಗಳ ಮೇಲೆ ಹೆಸರುಗಳನ್ನು ಆತ ಬರೆದಿರುತ್ತಿದ್ದ. ಹೂವು, ಹಕ್ಕಿ, ಜಿಂಕೆ, ಹುಲಿಯ ಚಿತ್ರಗಳು ಕೂಡ ಅಲ್ಲಿ ಮೂಡಿರುತ್ತಿದ್ದವು. ಇಗರ್ಜಿಯಲ್ಲಿ ಬಣ್ಣ ಹಚ್ಚುವ ಹಾಗೆಯೇ ಆತನ ಕೆಲಸ ಇಲ್ಲೂ ಮುಂದುವರಿಯುತ್ತಿತ್ತು.
ಬಾಲ್ತಿದಾರ ಮನೆಯಲ್ಲಿ ಇರುತ್ತಿದ್ದುದು ಕಡಿಮೆ. ಎಷ್ಟೋ ಸಾರಿ ನಾನು ರೈಲು ಹಳಿಗಳ ಮೇಲಿನಿಂದ ಗೆಳೆಯರ ಜತೆ ತಿರುಗಾಡಲು ಹೋದಾಗ ಬಾಲ್ತಿದಾರನ ಮನೆಗೆ ಬೀಗ ಹಾಕಿರುತ್ತಿತ್ತು. ಬಾಲ್ತಿದಾರ ಕ್ರಿಸ್‌ಮಸ್ ಹಬ್ಬ ಮುಗಿಸಿಕೊಂಡು ಘಟ್ಟದ ಕೆಳಗೆ ಹೊರಡುತ್ತಿದ್ದ.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಘಟ್ಟದ ಕೆಳಗೆ ಕ್ರೀಸ್ತುವರ ಸಂಖ್ಯೆ ಅಧಿಕ. ಪ್ರತಿ ಊರಿನಲ್ಲಿ ಒಂದೊಂದು ಇಗರ್ಜಿ. ಜನವರಿಯಿಂದ ಏಪ್ರಿಲ್ ಮೇ ತಿಂಗಳವರೆಗೆ ಈ ಇಗರ್ಜಿಗಳಲ್ಲಿ ವೈಭವದ ಹಬ್ಬ. ಈ ಎಲ್ಲ ಇಗರ್ಜಿಗಳಿಗೆ ಬಣ್ಣ ಬಳಿಯುವಾತ ಬಾಲ್ತಿದಾರ. ಹೊನ್ನಾವರ, ಚಂದಾವರ, ಗುಂಡಬೋಳೆ, ಮಲ್ಕೋಡು, ಕಾಯ್ಕಿಣಿ, ಕರ್ಕಿ, ಭಟ್ಕಳ, ತೆರನಮಕ್ಕಿ, ಶಿರಾಲಿ, ಮುರುಡೇಶ್ವರ, ಕುಮಟಾ ಎಂದೆಲ್ಲ ಐದು ತಿಂಗಳು ಬಾಲ್ತಿದಾರನಿಗೆ ಭರಪೂರ ಕೆಲಸ. ಪ್ರತಿ ಇಗರ್ಜಿಯ ಹಬ್ಬ ಯಾವಾಗ ಎಂಬುದು ಇವನಿಗೆ ಗೊತ್ತು. ಆ ಇಗರ್ಜಿ ಹಬ್ಬಕ್ಕೆ ಸರಿಯಾಗಿ ಇಗರ್ಜಿಯ ಗೋಡೆ ಕಂಬ ಕಮಾನುಗಳಿಗೆ ಬಣ್ಣ ಹಚ್ಚಿ, ಪಾದರಿ ಕೊಟ್ಟ ಹಣ ಪಡೆದು ಮುಂದಿನೂರಿಗೆ ಈತನ ಪಯಣ. ಈ ಇಗರ್ಜಿಗಳಲ್ಲಿ ಕೂಡ ಒಂದೊಂದು ಪ್ರಮುಖ ದೃಶ್ಯ. ಪ್ರಧಾನ ಪೀಠದ ಹಿಂಬದಿಯ ಗೋಡೆಯ ಮೇಲೆ ಏಸುವಿನ ಸ್ವರ್ಗಾರೋಹಣದ ದೃಶ್ಯ, ಏಸುವನ್ನು ಶಿಲುಬೆಗೇರಿಸಿದ್ದು, ಏಸುವಿನ ಜನನ, ಆತ ಶಿಲುಬೆ ಹೊತ್ತು ಹೋಗುತ್ತಿರುವುದು, ಬೇರೆ ಸಂತರಿಗೆ ಸಂಬಂಧಪಟ್ಟ ದೃಶ್ಯಾವಳಿಗಳು. ಇವುಗಳನ್ನು ಗಾಢ ಆಸಕ್ತಿಯಿಂದ ಪುನರ್ ರಚಿಸುತ್ತಿದ್ದ ಬಾಲ್ತಿದಾರ. ಎಂದಿನಂತೆ ಮಾತಿಲ್ಲ, ಕತೆಯಿಲ್ಲ, ಈ ಇಗರ್ಜಿ ಪಾದರಿ ಜತೆ, ಹತ್ತು ಸಮಸ್ತರ ಜತೆ ಎಷ್ಟು ಬೇಕೋ ಅಷ್ಟು ಮಾತು. ಘಟ್ಟದ ಕೆಳಗಿನ ಅಷ್ಟೂ ಇಗರ್ಜಿಗಳ ಹಬ್ಬ ಮುಗಿದ ಮೇಲೆಯೇ ಬಾಲ್ತಿದಾರ ಹಿಂತಿರುಗುವುದು ನಮ್ಮೂರಿಗೆ.
ಹೀಗೆ ಬಾಲ್ತಿದಾರ ನನಗೆ ತೀರಾ ಪರಿಚಯದವನಾಗಿದ್ದ. ಹಾಗೆಂದು ಇವನ ಜತೆ ನಾನು ಮಾತನಾಡಿದ್ದು ಸ್ವಲ್ಪ: ಆದರೆ ಇವನ ಕೆಲಸ ಕಾರ್ಯಗಳನ್ನು ನಾನು ತುಂಬಾ ನೋಡಿದ್ದೆ. ಇವನು ಬ್ರಶ್ ಹಿಡಿಯುವ ರೀತಿ, ಬಣ್ಣದ ಡಬ್ಬಕ್ಕೆ ಅದನ್ನು ಅದ್ದಿ, ಡಬ್ಬದೊಳಗೇನೆ ಹೆಚ್ಚಿನ ಬಣ್ಣವನ್ನು ತೊಡೆದು, ಎಷ್ಟು ಬೇಕೋ ಅಷ್ಟೇ ಬಣ್ಣವನ್ನು ಚಿತ್ರಕ್ಕೆ ಬಳಸುವ ರೀತಿ, ಇವನು ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುವುದು, ಚಿತ್ರದ ಕಣ್ಣು, ಮೂಗು, ತುಟಿ ಬರೆಯುವಾಗಿನ ಏಕಾಗ್ರಚಿತ್ತತೆ ಎಲ್ಲವೂ ನನಗೆ ಪರಿಚಿತ. ಆಕರ್ಷಕ ಕೂಡ. ಬಾಲ್ತಿದಾರ ಒಬ್ಬನೇ ಇರುವುದು ಕೂಡ ನನಗೆ ಗೊತ್ತಿತ್ತು. ಮನೆಯಲ್ಲಿ ಬೇರೆ ಯಾರೂ ಇದ್ದುದು ನನ್ನ ಗಮನಕ್ಕೆ ಬಂದಿರಲಿಲ್ಲ. ಊರ ಜನ ಈ ವಿಷಯ ಮಾತನಾಡುತ್ತಿದ್ದರು. ಅವನು ಇಲ್ಲಿಯವನಲ್ಲ ಎಂದರು. ಅವನ ಬಂಧು ಬಳಗ ಇಲ್ಲ. ಮದುವೆಯಾಗಿಲ್ಲ. ಯಾವುದೇ ಭಾನಗಡಿಗೆ ಹೋಗುವುದಿಲ್ಲ. ತಾನಾಯಿತು ತನ್ನ ಕೆಲಸವಾಯಿತು. ನಿತ್ಯ ಇಗರ್ಜಿಗೆ ಬರುತ್ತಾನೆ. ಪೂಜೆ ಕೇಳುತ್ತಾನೆ. ಪಾಪನಿವೇದನೆ, ಸತ್ಯಪ್ರಸಾದ ಸ್ವೀಕಾರ ಇದನ್ನು ತಪ್ಪಿಸುವುದಿಲ್ಲ. ಇಗರ್ಜಿಗಳಿಗೆ ಬಣ್ಣ ಹಚ್ಚುವುದೇ ಇವನ ಆತ್ಮೀಯ ಕೆಲಸ. ದೇವರ ಇಮಾಜುಗಳಿಗೂ ಬಣ್ಣ ಹಚ್ಚುತ್ತಾನೆ. ಯಾರಾದರೂ ತೀರ ಒತ್ತಾಯ ಮಾಡಿ ಮನೆಗೊಯ್ದು ಕೊಟ್ಟರೆ ಟ್ರಂಕು ಪೆಟ್ಟಿಗೆಗಳಿಗೆ ಬಣ್ಣ ಹಚ್ಚಿ ಹೆಸರು ಬರೆದುಕೊಡುತ್ತಾನೆ. ಹಣ ಇತ್ಯಾದಿ ಬಗ್ಗೆ ಅಷ್ಟೇನೂ ಪ್ರಾಮುಖ್ಯತೆ ನೀಡುವುದಿಲ್ಲ. ವ್ಯಾವಹಾರಿಕವಾಗಿ ಸ್ವಲ್ಪ ದಡ್ಡ ಎಂದು ಕೂಡ ಹೇಳುವುದನ್ನು ಕೇಳಿದೆ.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ವ್ಯಾವಹಾರಿಕವಾಗಿ ಏನಾದರೇನಂತೆ ಅವನನ್ನು ನಾನು ಮೆಚ್ಚಿಕೊಂಡಿದ್ದೆ.
*
ನಾನು ಕಾಲೇಜಿಗೆ ಬೇರೆ ಊರಿಗೆ ಹೋದೆ. ಎಲ್ಲ ಯುವಕರಂತೆ ನಾನು ಕ್ರಮೇಣ ಇಗರ್ಜಿ, ಪಾದರಿ, ಮಾದರಿಗಳಿಂದ ದೂರವಾದೆ. ಕಾಲೇಜು, ಪರೀಕ್ಷೆ, ನಂತರ ಕೆಲಸ ಎಂದೆಲ್ಲ ಊರ ಹೊರಗೇನೆ ಹತ್ತು ಹದಿನೈದು ವರ್ಷಗಳು ಕಳೆದುಹೋದವು. ಆಗಾಗ್ಗೆ ಊರಿಗೆ ಬರುತ್ತಿದ್ದೆನಾದರೂ ಹಿಂದಿನ ಎಲ್ಲಾ ವಿಷಯಗಳನ್ನು ಗಮನಿಸುವಷ್ಟು ವ್ಯವಧಾನ ಇರುತ್ತಿರಲಿಲ್ಲ. ಅದು ಹೇಗೋ ನನ್ನ ಅಚ್ಚುಮೆಚ್ಚಿನ ಈ ಮೈಕೆಲ್‌ಯೇಂಜಲೋ ನನ್ನ ಮನಸ್ಸಿನಿಂದ ಮರೆಯಾಗಿಬಿಟ್ಟ.
ಇತ್ತೀಚೆಗೆ ಊರಿಗೆ ಬಂದಾಗ ಬಹಳ ವರ್ಷಗಳ ನಂತರ ಇಗರ್ಜಿಗೆ ಹೋಗಿದ್ದೆ. ಗೋಡೆ, ಕಂಬ, ಕಮಾನುಗಳಿಗೆ ಹೊಸ ಬಣ್ಣ ಬಳಿದಿದ್ದರು. ಪೀಠದ ಹಿಂಬದಿಯಲ್ಲಿ ಏಸುವಿನ ಅಂತಿಮ ಭೋಜನದ ದೃಶ್ಯವಿತ್ತು. ತಟ್ಟನೆ ಬಾಲ್ತಿದಾರನ ನೆನಪಾಯಿತು. ಇದು ಬಾಲ್ತಿದಾರನ ಚಿತ್ರವಲ್ಲ. ಆತನು ಏನಾದ? ಎಲ್ಲಿ ಹೋದ?
ಪೂಜೆ ಮುಗಿದು ಹೊರ ಬಿದ್ದವನೇ ಬಾಲ್ತಿದಾರನ ಶೋಧನೆಗೆ ಹೊರಟೆ.
“ಅವನು ಹದಿನೈದು ವರ್ಷಗಳಿಂದ ಇಲ್ಲಿಲ್ಲ” ಎಂದರು ಕೆಲವರು.
”ಘಟ್ಟದ ಕೆಳಗೆ ಹೋದವನು ಬರಲೇ ಇಲ್ಲ” ಎಂದರು ಮತ್ತೂ ಕೆಲವರು.
“ಹೊನ್ನಾವರದ ಹತ್ರ ಇದಾನೆ ಅಂತ ಕೇಳ್ದೆ” ಎಂದ ಅವನ ಮನೆ ಹತ್ತಿರದ ಸಿರೀಲ್ ಮಾಸ್ತರ.
“ಏನಾಯಿತು ಆತನಿಗೆ?” ಅನ್ನುವ ಕುತೂಹಲ. ಇಗರ್ಜಿಗೆ ಬಣ್ಣ ಹಚ್ಚುವವ, ಮನೆಮನೆಗೆ ಬಂದು ಇಮಾಜುಗಳನ್ನು ನವೀಕರಿಸುವವ ಏಕೆ ಊರು ಬಿಟ್ಟ. ಅವನ ವಿಷಯ ಯಾರಿಗೂ ಗೊತ್ತಿಲ್ಲವೆ? ನಾನು ಸಿರೀಲ್ ಮಾಸ್ತರನ ಬೆನ್ನು ಹತ್ತಿದೆ.
“ಸಿರೀಲ್… ಬಾಲ್ತಿದಾರ ಎಲ್ಲಿದಾನೆ ಅಂದಿ?”
“ಹೊನ್ನಾವರದ ಹತ್ತಿರ ಇದಾನಂತೆ…”
“ಯಾರಿಗೆ ಕೇಳಿದ್ರೆ ಗೊತ್ತಾದೀತು?”
“ಹೊನ್ನಾವರದಲ್ಲಿ ಕೇಳಿದ್ರೆ ಗೊತ್ತಾಗಬಹುದು.”
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಹೊನ್ನಾವರಕ್ಕೆ ಹೋಗಿ ಬರಲೆ? ನಾಲ್ಕು ಗಂಟೆಯ ದಾರಿ. ನಾನು ವಿಚಾರ ಮಾಡಿದೆ. ಊರಲ್ಲಿ ಬೇರೆ ಕೆಲಸವೂ ಇರಲಿಲ್ಲ. ಬಸ್ಸು ಹತ್ತಿದೆ.
“ಬಣ್ಣದ ಬಾಲ್ತಿದಾರ ಅಲ್ವೆ?”
ಹೊನ್ನಾವರದ ಇಗರ್ಜಿ ಬಳಿ ಯಾರೋ ಕೇಳಿದರು.
”ಹೌದು… ಅವನೇ…”
“ಅವನು ಇಲ್ಲಿಲ್ಲ… ಇಲ್ಲಿಂದ ಐದಾರು ಮೈಲಿ… ನದೀಲಿ ಹೋಗಬೇಕು…ಅರೆಕಟ್ಟೆ ಅಂತ… ಅಲ್ಲಿದಾನೆ…”
“ಏನು ಮಾಡಿಕೊಂಡಿದಾನೆ?”
“ಇದಾನಪ್ಪ… ಮದುವೆಯಾಗಿದೆ… ಹೆಂಡತಿ ಜತೆ ಇದಾನೆ… ಮಕ್ಕಳೂ ಇವೆ… ಆದರೆ ಈಗ ಬಣ್ಣದ ಕೆಲಸ ಮಾಡತಿಲ್ಲ…”
*
ನಾನು ಲಾಂಚ್ ಹತ್ತಿದೆ.
*
ನದಿ ಇಳಿದರೆ ಅಲ್ಲೇ ಒಂದು ಮನೆ. ಜಗಲಿಯ ಮೇಲೆ ಬಾಲ್ತಿದಾರನನ್ನು ಕಂಡೆ. ಸುಮಾರು ಅರವತ್ತರ ಹತ್ತಿರ ತಲುಪಿದ್ದಾನೆ. ತಲೆಗೂದಲು ಅಲ್ಲಲ್ಲಿ ಹಣ್ಣಾಗಿದೆ. ಕೊಂಚ ಸೊರಗಿದ್ದಾನೆ. ಇನ್ನುಳಿದ ಹಾಗೆ ಬದಲಾವಣೆ ಏನಿಲ್ಲ. ಆದರೆ ಹಿಂದೆ ನಾನು ನೋಡಿದಾಗೆಲ್ಲ ಕೈಮೈಗೆ ಬಣ್ಣ ಮಾಡಿಕೊಂಡಿರುತ್ತಿದ್ದ. ಈಗಿಲ್ಲ.
ನಾನು ನನ್ನ ಪರಿಚಯ ಹೇಳಿಕೊಂಡೆ.
ಊರಿನ ಹೆಸರು ಕೇಳಿದ್ದೇ ತಲೆ ಎತ್ತಿ ನೋಡಿದ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
“ಬನ್ನಿ… ಕೂತ್ಕೊಳ್ಳಿ” ಎಂದು ಸ್ವಾಗತಿಸಿ ಹಲವರ ಹೆಸರು ಹೇಳಿ ಅವರು ಹೇಗಿದ್ದಾರೆ, ಇವರು ಹೇಗಿದ್ದಾರೆ ಎಂದೆಲ್ಲ ಕೇಳಿದ.
“ಇಗರ್ಜಿ ಬಣ್ಣದ ಕೆಲಸಕ್ಕೆ ಅಂತ ಅವತ್ತು ಈ ಕಡೆ ಬಂದೆ… ಮತ್ತೆ ಆ ಕಡೆ ಹೋಗಲೇಇಲ್ಲ…” ಎಂದು ಏನೋ ವಿಷಾದದ ಧಾಟಿಯಲ್ಲಿ ನುಡಿದ. ಅವನು ಹೆಚ್ಚೇನೂ ಹೇಳಲಿಲ್ಲ. ಆದರೆ ಆತ ಹೇಳಿದ್ದರಲ್ಲಿ ನಾನು ನನಗೆ ಬೇಕಾದುದನ್ನು ಗ್ರಹಿಸಿಕೊಂಡೆ.
*
ಬಾಲ್ತಿದಾರ ಬಣ್ಣದ ಡಬ್ಬಿ ಬ್ರಶ್‌ಗಳ ಜತೆ ಅರೆಕಟ್ಟೆಗೆ ಬಂದಾಗ ಅಲ್ಲಿ ಇಗರ್ಜಿಗೆ ಯುವಕ ಪಾದರಿಯೋರ್ವ ಬಂದಿದ್ದ. ಪ್ಯಾಂಟು ಶರಟಿನ ಗಡ್ಡ ಬಿಡದ ಯುವಕ. ಬಾಲ್ತಿದಾರ ತನ್ನ ಪರಿಚಯದ ಹಳೆ ಪಾದರಿಗಾಗಿ ಅತ್ತಿತ್ತ ಹುಡುಕಿದಾಗ ಈ ಹುಡುಗ-
“ಕೋಣ್ ಜಾಯ? (ಯಾರು ಬೇಕು?)” ಎಂದು ಕೇಳಿದ.
”ಫಾದರ್…”
”ನಾನೇ… ಯಾಕೆ?”
ಬಾಲ್ತಿದಾರ ಪರಿಚಯ ಹೇಳಿಕೊಂಡ. ಬಂದ ಉದ್ದೇಶ ಹೇಳಿದ. ಈ ಹತ್ತು ಹದಿನೈದು ವರ್ಷಗಳಿಂದ ತಾನೇ ಬಂದು ಬಣ್ಣದ ಕೆಲಸ ಚಿತ್ರದ ಕೆಲಸ ಮುಗಿಸುತ್ತಿರುವುದಾಗಿಯೂ ಹೇಳಿದ.
“ಈ ಚಿತ್ರಗಳು ನಿಮ್ಮವು ಹಾಗಾದರೆ?”
-ಪಾದರಿ ಕೇಳಿದ ಏನೋ ವ್ಯಂಗ್ಯ ಧಾಟಿಯಲ್ಲಿ.
“ಹೌದು… ಸುತ್ತಮುತ್ತ ಇರೋ ಎಲ್ಲ ಇಗರ್ಜಿ ಚಿತ್ರಗಳೂ ನನ್ನವೆ.”
“ಏನೇನೂ ಸಾಲದು… ಬಣ್ಣದಲ್ಲಿ, ಸ್ಟೈಲ್‌ನಲ್ಲಿ ಒಟ್ಟು ಗೆಟಪ್ಪನಲ್ಲಿ ಏನೂ ಜೀವ ಇಲ್ಲ… ಯಾರಲ್ಲಿ ನೀವು ಕಲಿತದ್ದು…”
“ನಾನೇ ಕಲಿತದ್ದು…” “ಏನೇನೂ ಉಪಯೋಗವಿಲ್ಲ.” ಬಾಲ್ತಿದಾರ ತಲೆತಗ್ಗಿಸಿ ನಿಂತ.
ಹೀಗೆ ಯಾರೂ ಹೇಳಿರಲಿಲ್ಲ ಅವನಿಗೆ. ಆದರೆ ಅವನಿಗೇ ತನ್ನ ಚಿತ್ರಗಳಲ್ಲಿಯ ದೋಷ ಗೊತ್ತಾಗುತ್ತಿತ್ತು. ಅವುಗಳನ್ನು ಆತ ತಿದ್ದಿಕೊಳ್ಳುತ್ತಲೇ ಬಂದಿದ್ದ. ಮುಂದೂ ತಿದ್ದಿಕೊಳ್ಳುವವನಿದ್ದ. ಹೀಗೆಯೇ ತನ್ನ ಚಿತ್ರಗಳು ತೀರ ಕಳಪೆಯಲ್ಲ ಎಂಬ ಅರಿವೂ ಅವನಿಗಿತ್ತು. ಇಗರ್ಜಿಗೆ ಬರುವ ಎಲ್ಲರೂ ಅವುಗಳನ್ನು ಮೆಚ್ಚುತ್ತಿದ್ದರು. ಜನ ಇರಲಿ ತುಂಬಾ ಓದಿಕೊಂಡ, ಗೋವಾನಿ ಫ್ರೆಂಚ್, ಇಂಗ್ಲಿಷ್, ಮಂಗಳೂರಿ ಪಾದರಿಗಳು-
“ಚಿತ್ರ ಚೆನ್ನಾಗಿದೆ…” ಎಂದು ಹೇಳುತ್ತಿದ್ದರು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಬಾಲ್ತಿದಾರ ದೇವರ ಚಿತ್ರಗಳನ್ನೇ ಬರೆಯುತ್ತಿದ್ದ. ದೇವರ ಧ್ಯಾನ ಮಾಡುತ್ತ ಆ ದೇವರನ್ನು ಕಲ್ಪಿಸಿಕೊಂಡು ಕಣ್ಣೆದುರು ತಂದು ನಿಲ್ಲಿಸಿಕೊಂಡು ಬರೆಯುತ್ತಿದ್ದ. ಆದರೆ ತನ್ನ ಶ್ರಮಕ್ಕೇನೆ ಬೆಲೆ ಇಲ್ಲವೆಂದು ಈ ಹುಡುಗ ಪಾದರಿ ಹೇಳುತ್ತಿದ್ದಾನಲ್ಲ-
“ಫಾದರ್… ಈ ಸಾರಿ ಚೆನ್ನಾಗಿ ಬರೀತೀನಿ.”
“ಆಯ್ತು… ನಾನು ನೋಡತೀನಿ… ಚೆನ್ನಾಗಿಲ್ಲ ಅಂದರೆ… ನೀವು ಬರೆಯೋದೇ ಬೇಡ… ನಾನು ಹೊರಗಿನಿಂದ ಬೇರೆ ಆರ್‍ಟಿಸ್ಟನ ಕರೆಸತೀನಿ… ನಿಮಗೆ ಒಂದೇ ಒಂದು ಕಾಸು ಕೊಡೋದಿಲ್ಲ…”
ಒಪ್ಪಿಕೊಂಡ ಬಾಲ್ತಿದಾರ, ನಿಯಮಗಳು ಕಠಿಣವಾಗಿದ್ದರೂ.
ಇಗರ್ಜಿಯ ಹಿಂದೆ ಅಡಿಗೆ ಬಟ್ಲರನ ಮನೆ. ಅಲ್ಲಿ ಕೂಡ ಬದಲಾವಣೆ. ಹಿಂದಿನ ಬಟ್ಲರ್ ಬದಲಿಗೆ ಓರ್ವ ಮುದುಕಿ ಅವಳ ಮಗಳು, ಬಾಲ್ತಿದಾರ ಹೋಗಿ ಈ ಮನೆಯ ಜಗಲಿಯ ಮೇಲೆ ಗಂಟು ಗದಡಿ ಇರಿಸಿದ. ನಾನು ಹೀಗೆ ಪ್ರತಿ ವರ್ಷ ಈ ಕೆಲಸಕ್ಕಾಗಿ ಬರುತ್ತಿದ್ದೆ. ಈ ವರ್ಷ ಕೂಡ ಬಂದಿದ್ದೇನೆ. ಎಂಟು ದಿನ ಇರುತ್ತೇನೆ ಎಂದು ಆ ಮುದುಕಿಗೆ ಹೇಳಿದ.
“ನಾವು ಬಂದೂ ಐದಾರು ತಿಂಗಳಾಯ್ತು… ಹಿಂದಿನ ಫಾದರ್ ಅವರ ಬಟ್ಲರನ್ನು ಅವರ ಜೊತೆ ಕರಕೊಂಡು ಹೋದರು… ಈ ಫಾದರ್‍ಗೆ ಅಡಿಗೆಯೋರಿಲ್ಲ ಅಂತ ಗೊತ್ತಾಗಿ ನಾವು ಬಂದ್ವಿ… ನಮಗೂ ಯಾರೂ ಇಲ್ಲ.”
ಮುದುಕಿ ಕತೆ ಹೇಳತೊಡಗಿದಳು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಬಾಲ್ತಿದಾರ ಇಗರ್ಜಿ ಹಿಂದೆ ಒಲೆ ಹೂಡಿದ. ಚೀಲದಿಂದ ಸಿಲ್ವರ್ ಪಾತ್ರೆ ತೆಗೆದ. ಅಕ್ಕಿ ತೆಗೆದ. ಮುದುಕಿಯ ಮಗಳಿಂದ ನೀರಿನ ಕೊಡಪಾನ ಕೇಳಿ ಪಡೆದ. ತನ್ನ ಕೆಲಸ ಪ್ರಾರಂಭಿಸಿದ.
*
ಸಣ್ಣ ಇಗರ್ಜಿ, ಹೊರಗೆಲ್ಲ ಸುಣ್ಣ. ಬಾಗಿಲುಗಳಿಗೆ ಬೇರೆ ಬಣ್ಣ. ಈ ಕೆಲಸ ಮಾಡಲು ಬೇರೆಯವರಿದ್ದಾರು. ಅಲ್ತಾರಿನ ಮುಂದೆ ಎರಡು ಕಂಬಗಳು. ಈ ಕಂಬಗಳು ಹೊತ್ತು ನಿಂತ ಕಮಾನು.
ಈ ಕಮಾನಿನ ಹಿಂದೆ ಪೀಠ. ಪೀಠದ ಹಿಂದಿನ ಗೋಡೆಯ ಮೇಲೆ ಸಂತ ಜೋಸೇಫರು ಮೇರಿಯನ್ನು, ಏಸು ಬಾಲರನ್ನು ಕುದುರೆಯ ಮೇಲೆ ಕೂರಿಸಿಕೊಂಡು ಐಗುಪ್ತ ದೇಶಕ್ಕೆ ಹೋಗುತ್ತಿರುವ ದೃಶ್ಯ. ಬಾಲ್ತಿದಾರ ಅಟ್ಟಣೆಗೆ ಸಿದ್ಧಪಡಿಸಿದ. ಅಡ್ಡ ಹಲಗೆಯ ಮೇಲೆ ಕುಳಿತು ಇಡೀ ಚಿತ್ರವನ್ನು ಮನಸ್ಸಿನಲ್ಲಿ ತುಂಬಿಕೊಂಡ. ಅನಂತರ ಆ ಚಿತ್ರದ ಮೇಲೆ ದಪ್ಪ ಬಣ್ಣ ಬಳಿದ.
ಎಂದಿನಂತೆ ದೇವರ ಸ್ತುತಿ ಮಾಡಿ ಆತ ಚಿತ್ರ ಬರೆಯತೊಡಗಿದ. ತೆಳುವಾದ ರೇಖೆಗಳಲ್ಲಿ ಇಡೀ ಚಿತ್ರವನ್ನು ಬರೆದುಕೊಂಡ. ಹಾಗೆಯೇ ಸೂಕ್ತ ಬಣ್ಣಗಳನ್ನು ತುಂಬತೊಡಗಿದ.
“… ನಿಲ್ಲಿ… ನಿಲ್ಲಿ…”
ಪಾದರಿ ದನಿ ಕೇಳಿ ಬಾಲ್ತಿದಾರ ಬೆಚ್ಚಿದ.
”ಜೋಸೇಫರ ನಿಲುವಂಗಿಯ ಬಣ್ಣ ಸರಿಯಾಗಿಲ್ಲ… ಅದು ಅಚ್ಚ ನೀಲಿಯಾಗಿರಬೇಕು…”
“ಆಯ್ತು ಫಾದರ್.”
“ನಿಲ್ಲಿ… ನಿಲ್ಲಿ…”
ಬಾಲ್ಕಿದಾರ ತಿರುಗಿ ನೋಡಿದ.
“…ಮರಿಯಳ ಮೇಲುಡುಗೆ ಕೆಂಪಗಿರಲಿ…”
”…ಫಾದರ್…”
“ನಿಮಗೆ ಕಲರ್ ಕಾಂಬಿನೇಷನ್ ಗೊತ್ತಿಲ್ಲ…”
”ಆಯ್ತು…”
“ನಿಲ್ಲಿ… ನೋಡಿ ಏಸು ಬಾಲರ ಕೈ ಸರಿಯಾಗಿಲ್ಲ.”
ಬಾಲ್ತಿದಾರ ಇಗರ್ಜಿ ಹೊರ ಬಂದು ಬೀಡಿ ಹಚ್ಚಿದ.
ಕೆಲಸ ಮುಂದುವರಿಯುತ್ತಿಲ್ಲ. ಯುವ ಪಾದರಿ ತುಂಬಾ ತಿದ್ದುಪಡಿ ಸೂಚಿಸುತ್ತಿದ್ದಾನೆ. ಹೀಗೆ ಆದರೆ ಕೆಲಸ ಮುಗಿಯುವುದು ಯಾವಾಗ?
ಎದೆ ತುಂಬ ಹೊಗೆ ಎಳೆದು ಬಿಟ್ಟ.
ನೆಲಬಾವಿಯಿಂದ ನೀರು ತರುತ್ತಿದ್ದ ಯುವತಿ ಕಣ್ಣೂರೆಸಿಕೊಂಡಳು. ಸೂಕ್ಷ್ಮವಾಗಿ ಅವಳನ್ನೇ ಗಮನಿಸಿದ. ಪಾದರಿ ಬಂಗಲೆ ಹಿಂದಿನ ಬಚ್ಚಲ ಹಂಡೆ ತುಂಬಿಸುತ್ತಿದ್ದಾಳೆ ಹುಡುಗಿ. ಅಲ್ಲಿಂದ ಬರುವಾಗೊಮ್ಮೆ ಸೊರ್ ಎಂದು ಮೂಗು ಹಿಂಡಿಕೊಳ್ಳುತ್ತಾಳೆ. ಅಲ್ಲಿ ಹೋಗುವಾಗೊಮ್ಮೆ ಕಣ್ಣೂರೆಸಿಕೊಳ್ಳುತ್ತಾಳೆ. ಹುಡುಗಿಯ ಕಣ್ಣು ಕೆಂಪೇರಿವೆ, ಕೆನ್ನೆ ಊದಿದೆ. ಚೆಂದದ ಹುಡುಗಿ. ತಾನು ಎಷ್ಟೋ ಚಿತ್ರಗಳಲ್ಲಿ ಚಿತ್ರಿಸಿದ ದೇವದೂತೆಯ ಹಾಗೆಯೇ ಇದ್ದಾಳೆ. ತುಂಬಿಕೊಂಡ ಮೈ, ಕೆಂಪು ಮುಖ, ಪುಟ್ಟ ತುಟಿ, ದುಂಬಿಗಣ್ಣು, ಪುಟಿ ಪುಟಿಯಾದ ಕೈಕಾಲು, ಮುಖದಲ್ಲಿ ಏನೋ ಚೆಲುವು. ಈಗ ಮಾತ್ರ ನೋವು, ವೇದನೆ, ಏನಿರಬಹುದು?
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಬೀಡಿ ಮುಗಿಯಿತು.
ಚಿತ್ರದ ನೆನಪಾಯಿತು.
ಬಾಲ್ತಿದಾರ ಒಳಬಂದ. ಪಾದರಿ ಬಂಗಲೆಯಿಂದ ಇಗರ್ಜಿಗೆ ಬಂದ.
ಎರಡು ದಿನಗಳಾದುವು.
ರೇಖೆಗಳೆಲ್ಲ ಮೈತುಂಬಿಕೊಂಡವು. ಮತ್ತೆ ಎರಡು ದಿನಗಳ ಕೆಲಸ. ಚಿತ್ರ ಮುಗಿಯುತ್ತಿದೆ.
ಆದರೆ ಪಾದರಿ ಲೊಚಗುಟ್ಟುತ್ತಾನೆ. ಛೆಛೆ ಅನ್ನುತ್ತಾನೆ. ಬಾಲ್ತಿದಾರ ಬರೆದಿರುವುದರಲ್ಲಿ ಒಂದೂ ಸರಿ ಎನಿಸುವುದಿಲ್ಲ ಅವನಿಗೆ. ಒಂದರ ಬಣ್ಣ, ಇನ್ನೊಂದರ ಆಕಾರ, ಮತ್ತೊಂದರ ನಿಲುವು, ಮಗದೊಂದರ ಭಂಗಿ, ಎಲ್ಲ ಸಪ್ಪೆ. ಚೆನ್ನಾಗಿಲ್ಲ. ವಿಕಾರವಾಗಿದೆ.
ಕೇಳುತ್ತ, ಆದಷ್ಟು ತಿದ್ದುತ್ತ ಬಂದ ಬಾಲ್ತಿದಾರ.
ಸಂಜೆ ಪಾದರಿ ಒಂದು ಮಾತು ಹೇಳಿದ
“… ಛೇ, ಈ ಚಿತ್ರದಲ್ಲಿ ದೈವಿಕತೆಯೇ ಇಲ್ಲ…”
ಬಾಲ್ತಿದಾರ ಐದು ನಿಮಿಷ ಸುಮ್ಮನೆ ಕುಳಿತ. ನಂತರ ಬ್ರಶ್‌ಗಳನ್ನು, ಬಣ್ಣದ ಡಬ್ಬಿಗಳನ್ನು ತೆಗೆದುಕೊಂಡು ಅಟ್ಟಣಿಗೆಯಿಂದ ಇಳಿದ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
“…ಫಾದರ್ …ನಿಮ್ಮ ಮನಸ್ಸಿಗೆ ಚೆನ್ನಾಗಿ ಕಾಣೋ ಹಾಗೇ ನನ್ನಿಂದ ಬರೀಲಿಕ್ಕೆ ಆಗೋಲ್ಲ, ಕ್ಷಮಿಸಿ” ಎಂದು ಅತೀವ ಸಂಕಟ ಅಪಮಾನದಿಂದ.
*
ಗಂಜಿ ಮಾಡಿಕೊಂಡ. ನಾಳೆ ಹೊರಡುವುದೆಂದು ಎಲ್ಲ ತೆಗೆದಿರಿಸಿದ. ರಾತ್ರಿಯ ಪ್ರಾರ್ಥನೆಗೆಂದು ಮುದುಕಿಯ ಮನೆಬಾಗಿಲಲ್ಲಿ ನಿಂತು ದೇವರ ಪೀಠದತ್ತ ತಿರುಗಿ ಪರಲೋಕ ಮಂತ್ರ ನಮೋರಾಣಿ ಮಂತ್ರ ಹೇಳಿದ. “ಏಸು ಮರಿ ಜೋಸೇಫರೇ ಈ ಹಿಂದೆ ಯಾವತ್ತೂ ಹೀಗಾಗಿರಲಿಲ್ಲ… ಮುಂದೆ ಚಿತ್ರ ಬರೆಯುವ ಬಣ್ಣ ಹಚ್ಚುವ ಕೆಲಸವೇ ಬೇಡ ಎನಿಸುತ್ತಿದೆ… ನೀವೇ ಒಂದು ದಾರಿ ತೋರಿಸಿ…” ಎಂದು ಕೈ ಮುಗಿದ ದೇವರಿಗೆ.
ಮನೆಯೊಳಗೆ ಬಗ್ಗಿ…
”ಅಜ್ಜೀ…” ಎಂದು ಕೂಗಿದ. ಅಡಿಗೆಮನೆಯಲ್ಲಿ ಗೋಡೆಗೆ ಒರಗಿ ತಾಯಿ ಮಗಳು ಕುಳಿತಿದ್ದಾರೆ. ಒಲೆಯಲ್ಲಿ ಬೆಂಕಿ ಉರಿಯುತ್ತಿದೆ. ಇಬ್ಬರೂ ಅಳುತ್ತಿದ್ದಾರೆ. ಇಬ್ಬರ ಕೆನ್ನೆಗಳಿಂದಲೂ ಇಳಿಯುತ್ತಿರುವ ಕಣ್ಣೀರು ಬೆಂಕಿಯ ಝಳಕ್ಕೆ ಮಿನುಗುತ್ತದೆ.
“ಏನಾಗಿದೆ ಇವರಿಗೆ?”
ಒಳಹೋದ. ಮೃದುವಾಗಿ ಕೇಳಿದ.
“ಎರಡು ಮೂರು ದಿನಗಳಿಂದ ನಾನು ನೋಡತಿದೀನಿ…ಏನಾಗಿದೆ ನಿಮಗೆ?”
ಹುಡುಗಿ ಮುಖ ಮುಚ್ಚಿಕೊಂಡಳು.
ಮುದುಕಿ ಸೆರಗನ್ನು ಬಾಯಿಗೆ ಅಡ್ಡ ಹಿಡಿದಳು.
ಇದನ್ನು ಓದಿದ್ದೀರಾ?: ಬೆಸಗರಹಳ್ಳಿ ರಾಮಣ್ಣ ಅವರ ಕತೆ | ಗಾಂಧಿ
“ಯಾಕೆ ಅಳತಿದೀರ? ಏನಾಯ್ತು?”
“ಇದು ಹೇಳೋದಲ್ಲ… ಅನುಭವಿಸೋದಲ್ಲ… ನಾವು ಒಳ್ಳೇದಾದೀತು ಅಂತ ಬಂದ್ವಿ… ಜೀವನಕ್ಕೆ ಒಂದು ಮಾರ್ಗ… ಈ ಹುಡುಗಿಗೆ ಒಂದು ಮನೆ ಸಿಗಬಹುದು ಅಂದುಕೊಂಡ್ವಿ… ಆದರೆ ಇಲ್ಲಿ… ದೇವರು ಕಾಪಾಡೋದರ ಬದಲು…”
ಮುದುಕಿ ಮುಂದೆ ಮಾತನಾಡದೆ ತೊಳಲಾಡಿದಳು.
”ಅಮ್ಮಾ… ಹೇಳಬೇಡ…”
ಹುಡುಗಿ ಚೀರಿಕೊಂಡಳು, ಗಾಬರಿಯಿಂದ.
ಬಾಲ್ತಿದಾರ ಅಟ್ಟಣಿಗೆಯ ಮೇಲೆ ಐದು ನಿಮಿಷ ಸುಮ್ಮನೆ ಕುಳಿತ ಹಾಗೆ ಇಲ್ಲಿಯೂ ಕುಳಿತ.
“ಅಜ್ಜಿ ನೀವು ಏನನ್ನೂ ಹೇಳೋದು ಬೇಡ… ನಾನು ಸಹಜವಾಗಿ ಕೇಳ್ದೆ. ನಾನು ನಾಳೆ ಬೆಳಿಗ್ಗೆ ಹೊರಟೆ… ಅದನ್ನು ಹೇಳಿ ಹೋಗೋಣ ಅಂತ ಬಂದೆ… ಅಷ್ಟೆ…”
ಆತ ನುಡಿದ.
”ಇಗರ್ಜಿಯೊಳಗಿರೋ ಆ ಚಿತ್ರಾನ ಅರ್ಧಕ್ಕೇನೆ ಬಿಟ್ಟು ಹೋಗತಿದೀಯಾ?”
ಆ ಸಂಕಟದಲ್ಲೂ ಕೇಳಿದಳು ಮುದುಕಿ.
“ನನ್ನ ಚಿತ್ರ ಫಾದರ್ ಮನಸ್ಸಿಗೆ ಬಂದಿಲ್ಲ…”
ನಡುಗುವ ದನಿಯಲ್ಲಿ ಒಂದೊಂದೇ ಶಬ್ದ ಉಚ್ಚರಿಸಿದ ಬಾಲ್ತಿದಾರ, ನಿಧಾನವಾಗಿ ಎದ್ದು ನಿಂತ.
ಯುವತಿ ತಲೆ ಎತ್ತಿ ಬಾಲ್ತಿದಾರನ ಮುಖ ನೋಡಿದಳು. ಅವಳ ಎರಡೂ ಕಣ್ಣುಗಳಲ್ಲಿ ತುಂಬಿಕೊಂಡ ನೀರು ದಳದಳನೆ ಅವಳ ಕೆನ್ನೆಗಳಿಂದ ಇಳಿಯಿತು.
ಮುದುಕಿ ಬಾಲ್ತಿದಾರನಿಗೆ ಕುಳಿತುಕೋ ಅನ್ನುವ ಹಾಗೆ ಸಂಜ್ಞೆ ಮಾಡಿದಳು. ಬಂದ ಕಷ್ಟವನ್ನು ಯಾರಲ್ಲಿ ಆದರೂ ಅವಳು ಹೇಳಿಕೊಳ್ಳಲೇಬೇಕಿತ್ತು. ಈಗ ಬಾಲ್ತಿದಾರನೇ ಸರಿಯಾದ ವ್ಯಕ್ತಿ ಎನಿಸಿ ಅವಳು ಬಾಯಿ ತೆಗೆದಳು.
*
ಮುಂಜಾನೆಯ ಪೂಜೆ ಮುಗಿಯಿತು.
ಜನರೆಲ್ಲ ಹೋದರು.
ಪಾದರಿ ಪ್ರಾರ್ಥನೆ ಮುಗಿಸಿ ಬಂದ.
ಮೂಲೆಯಲ್ಲಿ ನಿಂತಿದ್ದ ಬಾಲ್ತಿದಾರ ಮುಂದೆ ಬಂದ.
”ಫಾದರ್…”
“ನಾನು ಹೇಳಿದ್ನಲ್ಲ… ನಾನು ಬೇರೆ ಆರ್‍ಟಿಸ್ಟನ ಕರೆಸಿ…”
”ಅದಲ್ಲ ಫಾದರ್…”
“ಮತ್ತೆ?”
“ನಾನು ಮುದುಕಿ ಮಗಳನ್ನು ಮದುವೆ ಆಗಬೇಕೂಂತ ನಿರ್ಧಾರ ಮಾಡಿದೀನಿ…”
ಪಾದರಿ ಮುಖ ಕಪ್ಪಿಟ್ಟಿತು. ಆತ ಸರ್‍ರನೆ ಒಳಗೆ ಹೋದ. ಓಡಿದ ಎಂದರೂ ಸರಿ.
*
ಈ ಘಟನೆಯಾದ ಎಂಟೇ ದಿನಗಳಲ್ಲಿ ಊರಿಗೆ ಹೊಸ ಪಾದರಿ ಬಂದ. ಯುವಕ ಹೋಗುವಾಗ ಬಾಲ್ತಿದಾರನನ್ನು ಕರೆದು ಒಂದು ಮಾತು ಹೇಳಿದ-
“…ಹಬ್ಬಕ್ಕೆ ಮುಂಚೆ ಈ ಚಿತ್ರಾನ್ನ ದಯವಿಟ್ಟು ಮುಗಿಸಿಬಿಡಿ… ಪಾದರಿ ಅರೆಬರೆ ಕೆಲಸ ಮಾಡಿಸಿದ ಅನ್ನುವ ಅಪವಾದ ನನ್ನ ಮೇಲೆ ಬರೋದು ಬೇಡ…”
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
”ಆಯ್ತು… ಅಂತಹಾ ಅಪವಾದ ಬಾರದೇ ಇರೋ ಹಾಗೆ ನಾನು ನೋಡ್ಕೊತೀನಿ…”
ಬಾಲ್ತಿದಾರ ಆ ಚಿತ್ರ ಮುಗಿಸಿದ.
ಅವನ ಮದುವೆಯೂ ಆಯಿತು.
ಮತ್ತೆ ಚಿತ್ರ ಬರೆಯಲು ಅವನು ಹೋಗಲಿಲ್ಲ.
ಅರೆಕಟ್ಟೆಯಲ್ಲೇ ಸಣ್ಣದೊಂದು ತೆಂಗಿನತೋಟ ಮಾಡಿಕೊಂಡು ಇದ್ದಾನೆ. ಮುದುಕಿ ಸತ್ತು ಏಳೆಂಟು ವರ್ಷಗಳಾಗಿವೆ. ಬಾಲ್ತಿದಾರ ಸುಖವಾಗಿದ್ದಾನೆ, ಹೆಂಡತಿ ಮಕ್ಕಳ ಜತೆ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ನಾ ಡಿಸೋಜ(1937-2025): ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜೂನ್ 6, 1937ರಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ಇವರು ಬರೆದಿರುವ ಕಾದಂಬರಿಗಳು ಸುಮಾರು 40ಕ್ಕೂ ಹೆಚ್ಚು. ಇವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿವೆ, ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿವೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನೂ, ರೇಡಿಯೋ ನಾಟಕಗಳನ್ನೂ ರಚಿಸಿದ್ದಾರೆ. ಜಾನಪದ, ಅನುವಾದ ಕ್ಷೇತ್ರಗಳಲ್ಲದೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದ್ದ ಇವರು, ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2025 ಜನವರಿ 5ರಂದು ನಿಧನರಾದರು.





