ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅದೊಂದು ವೀರಾವೇಶದ, ಮಾರಾಮಾರಿಯ ಊರು. ಹೆಂಡತಿ ವ್ಯಭಿಚಾರ ಮಾಡಿದರೆ ಗಂಡನ ವಾದವಾಗಲಿ, ಗುಪ್ತವಾಗಿ ವ್ಯಸನ ಪಡುವುದಾಗಲಿ ಆ ಊರಲ್ಲಿ ಇರಲಿಲ್ಲ; ವ್ಯಭಿಚಾರ ಮಾಡಿದವಳು ಮತ್ತು ಆಕೆಯ ಪ್ರಿಯಕರ ಇಬ್ಬರ ಕೊಲೆಯೂ ಒಂದೇ ಗಳಿಗೆಯಲ್ಲಿ ಆಗುತ್ತಿತ್ತು. ಕೊಟ್ಟ ಹಣ ಹಿಂದಿರುಗಿಸದೆ ಇದ್ದರೆ ಕೂಡ. ಕಂಬಕ್ಕೆ ಕಟ್ಟಿ ಹೊಡೆದು ಜೀತ ಮಾಡಿಸುವುದು. ಸಂಪ್ರದಾಯ ಕುಟುಂಬಗಳ ಜಿದ್ದು ಹಾಗೆಯೇ. ಎರಡರಲ್ಲಿ ಒಂದು ಕುಟುಂಬ ದಫನ್ ಆದಂತೆಯೇ. ಪಂಚಾಯತಿಗಳೆಂದರೆ ತಪ್ಪು ಮಾಡಿದವರನ್ನು ಬೆಂಕಿಗೆ ಇಕ್ಕುವ ಸಂದರ್ಭಗಳು.
ಇಂಥ ಊರು ಅದು. ಅಮೃತಾಂಬುಧಿ ಕೆರೆಯ ಹೆಸರನ್ನು ನೀವು ಕೇಳಿರಬಹುದು. ಮತ್ತು ಅಲ್ಲಿ ಆದ ಕೊಲೆಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿರಬಹುದು. ಆ ಕೆರೆ ಜನರನ್ನು ಆದಷ್ಟೂ ಸುಖದಲ್ಲಿ ಇಟ್ಟಿತ್ತು; ಕೆರೆ ಊರಿಗೂ ತನ್ನ ಹೆಸರನ್ನು ಕೊಟ್ಟಿತ್ತು. ಅಲ್ಲದೆ ಅಂದವನ್ನು ಕೂಡ. ಸುಮಾರು ಹತ್ತು ಚದರ ಮೈಲಿ ಹಚ್ಚ ಹಸಿರು, ಮಾವು ಹುಣಿಸೆ ತೆಂಗಿನ ತೋಪುಗಳು. ಚೆನ್ನಗಿರಿಯಿಂದ ಅರಸೀಕೆರೆ ಕಡೆಗೆ ಬರುವ ದಾರಿಯಲ್ಲಿ ಅಮೃತಾಂಬುಧಿ ಇದೆ; ನಿಮ್ಮ ಮೂಗು ಚುರುಕಾಗಿದ್ದರೆ ಅಮೃತಾಂಬುಧಿ ಹತ್ತಿರ ಬರುತ್ತಿದ್ದಂತೆ ಕೇದಿಗೆಯ ವಾಸನೆ ನಿಮ್ಮನ್ನು ಚಕಿತಗೊಳಿಸುತ್ತದೆ. ಊರಿನ ಮಕ್ಕಳು ತಮ್ಮ ಹಸಿರುತೋಟಗಳ ಸಣ್ಣ ಉಣಗೋಲುಗಳನ್ನು ದಾಟಿ ಕೆರೆಯ ಮಗ್ಗುಲಿಗೆ ಹೋಗಿ ಕೇದಿಗೆ ಹೂವು ಕೀಳುತ್ತಾರೆ. ಮಕ್ಕಳು ಹರಯಕ್ಕೆ ಬರುತ್ತಿದ್ದಂತೆ ಕೇದಿಗೆಯ ಆಸೆ ಹೆಚ್ಚು. ಈ ಕತೆಯ ನಾಯಕಿ ಶ್ಯಾಮಲ ಕೂಡ ಹರಯ ಉಕ್ಕುತ್ತಿದ್ದಂತೆ ಗೆಳತಿಯರೊಂದಿಗೆ ಕೇದಿಗೆ ಬನಕ್ಕೆ ಹೋದವಳೇ. ಅಲ್ಲಿ ಅಂಥ ವಿಶೇಷವೇನೂ ಆಗಲಿಲ್ಲ. ಹುಡುಗರು ದೂರದಿಂದಲೇ ಕಿಚಾಯಿಸಿದ್ದರು, ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದರು. ಆಗತಾನೆ ಕಾಲೇಜು ಮೆಟ್ಟಿಲು ಹತ್ತಿದ್ದ ಶ್ಯಾಮಲ ಆಶೆ ತುಂಬಿದ್ದರೂ ಭಯದಿಂದ ಕೇದಿಗೆ ಬನಕ್ಕೆ ನಮಸ್ಕಾರ ಹೇಳಿದ್ದಳು.
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಒಂದಾನೊಂದು ಕಾಲಕ್ಕೆ ಮುನ್ನೂರು ಮನೆಗಳ ಹಳ್ಳಿಯಾಗಿದ್ದ ಅಮೃತಾಂಬುಧಿ ಈ ಕತೆಯ ಸಮಯಕ್ಕೆ ದೊಡ್ಡದಾಗಿತ್ತು. ಸುಮಾರು ಎರಡು ಸಾವಿರ ಜನರ ಊರಾಗಿತ್ತು. ದೂರದಿಂದ ಹಸಿರು ಸ್ವರ್ಗದಂತೆ ಕಾಣುವ ಊರು ಒಳಗೆ ಬಂದರೆ ಸೈಕಲ್ ಶಾಪು, ಡಬ್ಬಿ ಅಂಗಡಿಗಳಿಂದ ಗಲೀಜಾಗಿತ್ತು. ಈ ಊರಲ್ಲಿನ ಮುಖ್ಯರಸ್ತೆ ಬಿಟ್ಟು ಹಿಂದುಗಡೆ, ಊರಿನ ಹಿತ್ತಲಂತಿದ್ದ ಜಾಗದಲ್ಲಿ ಮಲ್ಲಯ್ಯನ ಹತ್ತೆಕರೆ ತೋಟ. ಮಲ್ಲಯ್ಯನ ಮಗಳು ಶ್ಯಾಮಲ. ಮಲ್ಲಯ್ಯನ ನಾದಿನಿಯ ಮತ್ತು ಆಕೆಯ ಗೆಳೆಯನ ಕೊಲೆ ಮೂರು ವರ್ಷದ ಹಿಂದೆ ಆಗಿತ್ತು. ಊರಿನ ಗುಣ ಮರೆಯದಿರಲಿ ಎಂದು ಇದನ್ನು ಸೂಚಿಸುತ್ತಿದ್ದೇನೆ; ನಾದಿನಿಯ ಮೇಲೆ ಗುಮಾನಿ ಹುಟ್ಟಿದ್ದು ಕೊಲೆಗೆ ಕಾರಣವಾಗಿತ್ತು.
ಶ್ಯಾಮಲಾಗೆ ತನ್ನ ಊರಿನ ಬಗ್ಗೆ ಇರುವ ಕತೆಗಳನ್ನು ಕೇಳಿ ನಂಬಿಕೆ ಬಂದಿರಲಿಲ್ಲ. ತನ್ನ ಚಿಕ್ಕಮ್ಮ-ಅಂದರೆ ಮಲ್ಲಯ್ಯನ ನಾದಿನಿ- ರಕ್ತಕಾರಿ ಸತ್ತಾಗ, ಆ ಕೊಲೆಯ ವಿಚಾರ ಕೋರ್ಟಿಗೆ ಕೂಡ ಹೋಗದಿದ್ದಾಗ ತನ್ನ ಊರು ಭೀಕರ ಅನ್ನಿಸಿತ್ತು ಆಕೆಗೆ. ಬೇರೆಯವರ ಕೊಲೆ, ಶಿಕ್ಷೆ, ಸೇಡಿನ ಬಗ್ಗೆ ಕೇಳಿದ್ದು ಕತೆಯಂತೆ, ಪುರಾಣದಂತೆ ಅನ್ನಿಸಿ ಸಂತೋಷವೇ ಆಗಿತ್ತು.
ಹೀಗಿದ್ದಾಗ ಅಮೃತಾಂಬುಧಿಯಲ್ಲಿ ಸಿನಿಮಾ ಕುರಿತ ಕಮ್ಮಟವೊಂದು ನಡೆಯಿತು. ಹಾಸನ ಜಿಲ್ಲೆಯ ಉತ್ಸಾಹಿ ತರುಣರು ಕೆಲವರು ಸಿನಿಮಾದಲ್ಲಿ ಆಸಕ್ತಿ ವಹಿಸಿದ್ದರು. ಶ್ಯಾಮಲ ಎಂದೆಂದೂ ಕೇಳದಿರುವ ಸಿನಿಮಾಗಳು ಮತ್ತು ನಿರ್ದೇಶಕರ ಹೆಸರನ್ನುಳ್ಳ ಪುಸ್ತಿಕೆಯೊಂದು ಆಕೆಯ ವಿಳಾಸಕ್ಕೆ ಬಂತು. ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಕಾಲೇಜು ಗೆಳತಿಯರಿಂದ ಮಾತ್ರ ಬರುತ್ತಿದ್ದ ಪತ್ರಗಳೊಂದಿಗೆ ಈ ಪುಸ್ತಿಕೆ ಬಂದಾಗ ಶ್ಯಾಮಲಾಗೆ ಅಚ್ಚರಿಯಾಯಿತು. ಆಕೆಯ ನೆಚ್ಚಿನ ಸಾಹಿತಿ ಶತ್ರುಘ್ನ; ಅವರು ಕಳಿಸಿರಬೇಕೆಂದು ವಿಳಾಸಕ್ಕಾಗಿ ಹುಡುಕಿದಳು. ಅವರ ವಿಳಾಸವಿರಲಿಲ್ಲ. ಹಾಸನದ ಹುಡುಗನೊಬ್ಬನ ವಿಳಾಸವಿತ್ತು. ಯೋಚಿಸಿದಳು. ಶತ್ರುಘ್ನ ಅವರೇ ತನ್ನ ವಿಳಾಸ ಕೊಟ್ಟಿರಬೇಕೆಂದು ತಿಳಿದಳು. ಏನಾದರಾಗಲಿ, ಕಾಲೇಜು ಬಿಟ್ಟು ವರ್ಷವಾಯಿತು, ಈ ಕಮ್ಮಟಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿದಳು. ತಮ್ಮ ಊರಲ್ಲೇ ನಡೆವ ಕಮ್ಮಟ. ಆಗಾಗ ಮುಂದುವರಿದ ಮಹಿಳೆಯ ನುಡಿಕಟ್ಟಿನಲ್ಲಿ ಮಾತಾಡಿದಾಕೆ ಶ್ಯಾಮಲ. ಇದನ್ನೆಲ್ಲ ಯೋಚಿಸಿದಂತೆ ನಗೆ ಬಂತು. ತನ್ನ ಮನೆಯ ಹೊಸಿಲಿನಿಂದ ಹೊರಗೆ ಹೋಗುವುದಕ್ಕೂ ಮುಂದುವರಿಯುವುದಕ್ಕೂ ಏನು ಸಂಬಂಧ ಎಂದುಕೊಂಡಳು; ಈ ಕಗ್ಗೊಲೆ, ವೀರಾವೇಶದ ಊರಲ್ಲಿ ಬುದ್ಧಿಜೀವಿಗಳ ಕಮ್ಮಟ ನಡೆಯುವುದನ್ನು ನೆನೆದು ಇನ್ನೂ ವಿಸ್ಮಯಗೊಂಡಳು. ಎಲ್ಲಕ್ಕಿಂತ ಮೊದಲು ಕಮ್ಮಟ ಎಂದರೇನೆಂದು ತಿಳಿದುಕೊಳ್ಳಬೇಕೆಂದು ಯತ್ನಿಸಿ ಸಾಧ್ಯವಾಗದೆ ಊರಿನ ಕ್ರಾಂತಿವೇದಿಕೆಯ ರುದ್ರುವನ್ನು ಕೇಳಿದಳು. ಆತ ಹಾಗೆಂದರೆ ‘ಚರ್ಚೆ’ ಎಂದು ಬೂಸಿಬಿಟ್ಟ; ಆಮೇಲೆ ಗೆಳತಿಯೊಬ್ಬಳಿಂದ ಕಮ್ಮಟವೆಂದರೆ ವರ್ಕ್‌ಶಾಪ್ ಎಂದು ತಿಳಿಯಿತು. ಇನ್ನೂ ಗೊಂದಲವಾಗಿ ಕೀಳರಿಮೆ ಅನ್ನಿಸಿತು.
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
ಹುಡುಗಿಯೊಬ್ಬಳ ಬಗ್ಗೆ ಹೇಳುವಾಗ ಆಕೆಯ ಎತ್ತರ, ಶೈಲಿ, ಬಣ್ಣ, ತಿಳಿವಳಿಕೆ ಇತ್ಯಾದಿಯನ್ನು ಹೇಳದಿದ್ದರೆ ಆಗುವುದಿಲ್ಲ. ಸ್ವಲ್ಪ ಕಾಯಿರಿ, ಅದೇ ಈ ಕತೆಯ ವಸ್ತು.
ಸಿನಿಮಾ ಕುರಿತ ವರ್ಕ್‌ಶಾಪ್ ಊರಿನ ಮಾಧ್ಯಮಿಕ ಶಾಲೆಯಲ್ಲಿ ಇತ್ತು. ಮೊದಲ ದಿನ ಶ್ಯಾಮಲ ಅಂಜುತ್ತಲೇ ಹೋದಳು. ಎಷ್ಟೇ ಜಾಣೆಯಾದರೂ ಹೋದೊಡನೆ ಅಧ್ಯಕ್ಷರು ”ಕಮ್ಮಟ ಅಂದರೆ ಏನು? ಏಕೆ ಬಂದಿದ್ದೀ?” ಎಂದು ಕೇಳಿದರೆ ಗತಿಯೇನೆಂದು ಅಂಜಿಕೆಯಾಗಿತ್ತು. ಆದರೆ ಅಂಥದೇನೂ ಆಗಲಿಲ್ಲ. ಸಿನಿಮಾ ಹೀರೋ ತರಹದ ಕೃಷ್ಣೋಜಿ ಅಧ್ಯಕ್ಷತೆ ವಹಿಸಿದ್ದರು. ಅವರ ಪ್ರತಿಯೊಂದು ಮಾತು ಅಲ್ಲಿಗೆ ಬಂದಿದ್ದ ಹತ್ತು ಜನ ಹುಡುಗಿಯರು ಹೊರಟುಹೋಗದಂತೆ ಮೆಚ್ಚಿಸುವುದಕ್ಕೇ ಆಡಿದಂತಿತ್ತು. ಈ ಕೃಷ್ಣೋಜಿ ಹಾಸನದವರು. ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೆ ಅಲ್ಲಿದ್ದವರು ಮೂವತ್ತು ಜನ ಹುಡುಗರು, ಹತ್ತು ಹುಡುಗಿಯರು. ಕೃಷ್ಣೋಜಿ ಸ್ವಲ್ಪ ತಡವಾಗಿ ಬಂದವರನ್ನು ಅತೀ ಗೌರವದಿಂದ ಬರಮಾಡಿಕೊಳ್ಳುತ್ತಿದ್ದರು. ಅಲ್ಲಿಗೆ ಬರುವವರು ತಮಗೆ ಮಹದುಪಕಾರ ಮಾಡುತ್ತಿದ್ದಾರೆ ಎನ್ನುವಂತಿತ್ತು ಕೃಷ್ಣೋಜಿಯವರ ಧಾಟಿ ಅಥವಾ ಇಂಥ ಕಮ್ಮಟಗಳಿಗೆ ಜನ ಬರುವುದು ಕಡಿಮೆಯೋ ಏನೋ. ಶ್ಯಾಮಲಾಳ ಸಹಪಾಠಿ ರಮಾ ಸ್ವಲ್ಪ ತಡವಾಗಿ ಬಂದಳು. ಮರ್ಯಾದೆಯಿಂದ ಅವಳ ಹೆಸರು, ಪರಿಚಯ ಮಾಡಿಕೊಂಡರು. ಆಮೇಲೆ ಒಬ್ಬ ಹುಡುಗ ಬಂದ. ಕೃಷ್ಣೋಜಿ ಸಿನಿಮಾ ಶೂಟಿಂಗ್‌ನಲ್ಲಿನ ನಾಯಕಮಣಿಯಂತೆ, ”ತಮ್ಮ ಹೆಸರು?” ಅಂದರು. ಆತ ಬೆವೆತುಹೋಗಿದ್ದ. ಎಲ್ಲರ ಕಣ್ಣು ಅವನ ಮೇಲಿತ್ತು. ”ತಿಪ್ಪಣ್ಣ” ಎಂದು ಮೆಲ್ಲಗೆ ಅಂದ. ”ಏನಂದ್ರಿ? ಟಿಪ್ಪೂ?” ಅಂದರು ಕೃಷ್ಣೋಜಿ. ತಿಪ್ಪಣ್ಣನ ಹೆಸರನ್ನು ಅರಿತಿದ್ದ ಅಲ್ಲಿದ್ದ ಹುಡುಗರು ಗೊಳ್ಳೆಂದು ನಕ್ಕರು. ಆತ ಮತ್ತೆ ತನ್ನ ಹೆಸರು ಹೇಳಲಾಗದೆ ಕೂತುಕೊಳ್ಳಲು ಜಾಗಕ್ಕಾಗಿ ಹುಡುಕಿದ. ಅವನ ತೊಂದರೆ ಇಮ್ಮಡಿಯಾದಂತೆ ಜಾಗವೇ ಇರಲಿಲ್ಲ. ಶ್ಯಾಮಲ ಪಕ್ಕದಲ್ಲಿ ಸ್ವಲ್ಪ ಜಾಗವಿತ್ತು. ಶ್ಯಾಮಲ ಹಿಂದೆಮುಂದೆ ನೋಡದೆ, ”ಇಲ್ಲಿ ಬನ್ನಿ” ಅಂದೇಬಿಟ್ಟಿದ್ದಳು. ತಿಪ್ಪಣ್ಣ ಇನ್ನೂ ಸಂಕೋಚದಿಂದ ಅಲ್ಲಿ ಕುಳಿತುಕೊಳ್ಳಲು ಹಿಂಜರಿದಾಗ ಎಲ್ಲರೂ ನಕ್ಕರು. ಶ್ಯಾಮಲಾಗೂ ಒಂಥರಾ ಆಯಿತು. ಆದರೆ ಅದೆಲ್ಲ ಇನ್ನೂ ಹೆಚ್ಚಾದೀತೆಂದು ತಿಪ್ಪಣ್ಣ ಶ್ಯಾಮಲ ಪಕ್ಕದಲ್ಲೇ ಕುಳಿತ. ಇದರಿಂದೆಲ್ಲ ಸುಮಾರು ಐದೂಮುಕ್ಕಾಲು ಅಡಿಯ ತಿಪ್ಪಣ್ಣ ಮೂರಡಿಯ ಕುಕ್ಕಡಿಯಂತಾಗಿದ್ದ.
ಮೂರು ದಿನದ ಕಮ್ಮಟದಲ್ಲಿ ಕೃಷ್ಣೋಜಿ ಮತ್ತೆ ಮತ್ತೆ ಮಾತಾಡಿ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದರು. ಕ್ರಾಂತಿ ವೇದಿಕೆಯ ಹುಡುಗರು ಎಲ್ಲ ಚಿತ್ರಗಳಲ್ಲಿ ಕ್ರಾಂತಿಗಾಗಿ ಹುಡುಕಿ ಕೃತಕೃತ್ಯರಾಗಿದ್ದರು. ಚಲನಚಿತ್ರಗಳಲ್ಲಿ ವಸ್ತು, ನಿರ್ದೇಶನ, ಛಾಯಾಗ್ರಹಣ, ಸಿನಿಮಾತಂತ್ರ, ನಾಟಕಗಳಿಗೂ ಸಿನಿಮಾಕ್ಕೂ ವ್ಯತ್ಯಾಸ, ಸಾಹಿತ್ಯ ಮತ್ತು ಚಲನಚಿತ್ರ ಇತ್ಯಾದಿ ಇತ್ಯಾದಿ ವಿಷಯಗಳು ಚರ್ಚಿತವಾಗಿದ್ದವು. ಅನೇಕ ಒಳ್ಳೆಯ ಚಿತ್ರಗಳು ಪ್ರದರ್ಶನಗೊಂಡವು. ಇಲ್ಲಿ ಶ್ಯಾಮಲಾಳನ್ನು ಅಚ್ಚರಿಗೊಳಿಸಿದ ಮುಖ್ಯ ಅಂಶಗಳು:
(1) ತಾನು ಒಳ್ಳೆಯ ಸಿನಿಮಾ ನಟರೆಂದು ತಿಳಿದುಕೊಂಡಿದ್ದ ಅನೇಕರು ಒಳ್ಳೆಯ ನಟರಲ್ಲ. (2) ಕೇವಲ ಸಂಭಾಷಣೆಯಿಂದ ನಾಟಕವೂ ಆಗುವುದಿಲ್ಲ, ಸಿನಿಮಾವೂ ಆಗುವುದಿಲ್ಲ. (3) ಸಿನಿಮಾ ಕೂಡ ತತ್ವಶಾಸ್ತ್ರದಷ್ಟೇ ಗಂಭೀರವೂ ಅರ್ಥಪೂರ್ಣವೂ ಆಗಿರಬಹುದು. ಆದರೆ ಈ ಮೂರಕ್ಕಿಂತ ಮುಖ್ಯವೆನಿಸಿದ್ದು ನಾಲ್ಕನೆಯ ಅಂಶ: (4) ತನ್ನ ಪಕ್ಕದಲ್ಲಿ ಕುಕ್ಕಡಿಯಾಗಿ ಕೂತಿದ್ದ ತಿಪ್ಪಣ್ಣ ಒಳ್ಳೆಯ ಹುಡುಗ.
ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ
ತಿಪ್ಪಣ್ಣ ಮೂರು ದಿನದ ಕಮ್ಮಟದಲ್ಲಿ ಹೆಚ್ಚು ಮಾತನ್ನೇ ಆಡಿರಲಿಲ್ಲ. ಅವನಿಗೆ ತಿಳಿಯುತ್ತಿದ್ದ ವಿಷಯಗಳಿಗಿಂತ ತಿಳಿಯದೇ ಇದ್ದ ವಿಷಯಗಳೇ ಹೆಚ್ಚಾಗಿದ್ದಂತೆ ಗೊಂದಲ ಅವನ ಮುಖದ ಮೇಲೆ ಬರೆದಂತಿರುತ್ತಿತ್ತು. ಅಲ್ಲದೆ ಅವನಿಗೆ ಹತ್ತಿರದ ಗೆಳೆಯರೂ ಇರಲಿಲ್ಲ. ಕಮ್ಮಟದ ಒಂದು ಅಧಿವೇಶನ ಮುಗಿದೊಡನೆ ಇನ್ನೊಂದು ಅಧಿವೇಶನಕ್ಕೆ ಮುಂಚೆ ನೀರಿನಿಂದ ಹೊರಗೆಸೆದ ಮೀನಿನಂತಿರುತ್ತಿದ್ದ. ಶ್ಯಾಮಲಾಳ ಹತ್ತಿರವೇ ಇರುತ್ತಿದ್ದ. ಮೊದಮೊದಲು ತನ್ನ ಜೊತೆಗಿನ ಗಾಳಿ, ಬೆಳಕಿನಂತೆ ಅವನೂ ಒಂದು ವಸ್ತು ಎನ್ನುವಂತೆ ಸುಮ್ಮನಿದ್ದಳು. ತಿಪ್ಪಣ್ಣ ತಾನು ಹುಡುಗ ಎಂಬುದನ್ನು ಮರೆತು ತನಗೆ ಯಾರೂ ದಿಕ್ಕಿಲ್ಲವೆನ್ನುವಂತೆ ಸಹಜವಾಗಿಯೇ, ”ಮಿಸ್, ಆ ನಿರ್ದೇಶಕನ ಹೆಸರಿನ ಸ್ಪೆಲ್ಲಿಂಗ್ ಏನು? ಈ ಚಿತ್ರದ ವಾಸ್ತವವೇನೋ ಲಾರಿಯಲ್ಲಿ ಹೋಗುತ್ತಿದ್ದುದು, ಭ್ರಾಮಕ ಯಾವುದು?” ಎಂಬಂಥ ಪ್ರಶ್ನೆ ಕೇಳುತ್ತಿದ್ದ. ಶ್ಯಾಮಲ ತನಗೆ ಗೊತ್ತಿದ್ದುದು ಹೇಳುತ್ತಿದ್ದಳು. ಆದರೆ ಒಂದು ದಿನ ಶ್ಯಾಮಲಾಗೆ ಮಿಂಚಿನಂತೆ ಒಂದು ಅಂಶ ಹೊಳೆಯಿತು. ಈ ತಿಪ್ಪಣ್ಣ ತನ್ನ ಅಸ್ಪಷ್ಟ, ದುರ್ಬಲ ಭಾಷೆಯಲ್ಲಿ ಕೃಷ್ಣೋಜಿ ಪುಸ್ತಕದಲ್ಲಿ ಓದಿದ್ದುದಕ್ಕಿಂತ ಮುಖ್ಯ ವಿಷಯ ಹೇಳುತ್ತಿದ್ದ. ‘ಹಿರೋಷಿಮಾ’ ಎಂಬ ಚಿತ್ರದ ವ್ಯಭಿಚಾರದ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಮಾತಾಡಿ ‘ಎಲ್ಲ ತಾತ್ಕಾಲಿಕ’ ಎಂಬುದನ್ನು ಸೂಚಿಸುತ್ತಾರೆ, ಅಲ್ಲವೆ. ಹಾಗಾದರೆ ಎಲ್ಲ ತಾತ್ಕಾಲಿಕವಾದರೆ ಇಂಥ ಸಿನಿಮಾ ಮಾಡುವಷ್ಟು ಉತ್ಸಾಹ ನಿರ್ದೇಶಕನಲ್ಲಿ ಹೇಗೆ ಉಕ್ಕಿತು? ಎಂದು ಕೇಳಿ ಸುಮ್ಮನಾದ.
”ಮನುಷ್ಯ ಹಿರೋಷಿಮಾದ ಹುಲ್ಲಿನಂತೆ, ಹಕ್ಕಿಗಳಂತೆ” ಅಂದ.
”ಅಂದರೆ?” ಎಂದು ಕುತೂಹಲದಿಂದ ಮುಗುಳ್ನಕ್ಕಳು.
”ಅಂದರೆ, ಮಿಸ್, ಗೊತ್ತಾಗ್ತಿಲ್ವ. ಮನುಷ್ಯನ ಜಂಬಕ್ಕೆ ಕಾರಣವೇ ಇಲ್ಲ.”
ತಿಪ್ಪಣ್ಣ ತನಗೆ ಗೊತ್ತಿದ್ದುದಕ್ಕಿಂತ ಹೆಚ್ಚು ಹೇಳಲು ಪ್ರಯತ್ನಿಸುತ್ತಿದ್ದಂತೆ ಶ್ಯಾಮಲಾಗೆ ಅನ್ನಿಸಿತು; ಅಥವಾ ತನಗೆ-ಅಂದರೆ ಶ್ಯಾಮಲಾಗೆ-ಗೊತ್ತಿದ್ದುದಕ್ಕಿಂತ ಹೆಚ್ಚು ಹೇಳುತ್ತಿರಬಹುದು. ಅದನ್ನು ಹೇಳುವಾಗ ತಿಪ್ಪಣ್ಣನಲ್ಲಿ ಎಗ್ಗಿರಲಿಲ್ಲ. ಪ್ರದರ್ಶನದ ಗೀಳು ಇರಲಿಲ್ಲ. ಶ್ಯಾಮಲಾಳ ಮಿದುಳನ್ನೂ ಇಸಿದುಕೊಂಡು ತನ್ನ ಮಿದುಳಿನ ಜೊತೆಗೇ ಯೋಚಿಸಲು, ತಿಳಿದುಕೊಳ್ಳಲು ಹವಣಿಸಿದಂತೆ ಇತ್ತು. ಕಮ್ಮಟದ ಮೂರನೇ ದಿನ ಇಬ್ಬರೂ ಮಾತಾಡುತ್ತ ಬಹುದೂರ ನಡೆದಿದ್ದರು. ಅಂದರೆ ಸಂಪಿಗೆ ಗಡ್ಡೆಗಳ ಹತ್ತಿರಕ್ಕೆ. ಶ್ಯಾಮಲ ಅವತ್ತು ಎಲ್ಲ ದಿನಕ್ಕಿಂತ ಹೆಚ್ಚು ಸುಂದರವಾಗಿದ್ದಳು, ಉಲ್ಲಾಸದಿಂದ ತುಂಬಿದ್ದಳು. ದಿನ ಕೂಡ ಚೆನ್ನಾಗಿತ್ತು. ಮಧ್ಯಾಹ್ನವಾದರೂ ತಣ್ಣನೆಯ ಹವೆ; ಅಮೃತಾಂಬುಧಿಯ ಸಣ್ಣ ಸಣ್ಣ ಅಲೆಗಳು, ನೆತ್ತಿಯ ನೀಲಿಯಲ್ಲಿದ್ದ ಚಂದ್ರ ಸಣ್ಣ ತೆರೆಗಳಲ್ಲಿ ಅಲ್ಲಾಡುತ್ತ ಕಾಗದದ ತಟ್ಟೆಯಂತೆ ಅಸ್ಥಿರವಾಗಿತ್ತು. ತುಂಬು, ಗಟ್ಟಿ ತೊಡೆಗಳ, ಪುಟ್ಟ ಗಿರಿಗಳಂತಹ ಎದೆಯ, ಹೊಳೆವ ಕಣ್ಣುಗಳ, ಪ್ರಾಯದ ಮಿಂಚು ಸೂಸುವ ಕೆನ್ನೆಗಳ ಶ್ಯಾಮಲ; ತಮ್ಮಿಬ್ಬರ ಬಿಂಬ ಅಮೃತಾಂಬುಧಿಯಲ್ಲಿ ಕಾಣಿಸಿದಾಗ ಶ್ಯಾಮಲ ಅಪರಿಚಿತ
ಹುಡುಗನೊಬ್ಬನ ಜೊತೆ ನಡೆಯುತ್ತಿರುವುದನ್ನು ಗ್ರಹಿಸಿ ಸಣ್ಣಗೆ ನಡುಗಿದಳು; ತೆಳ್ಳಗೆ ಎತ್ತರಕ್ಕೆ, ಸಾವಿರಾರು ವರ್ಷದಿಂದ ತನಗೆ ಪರಿಚಯವಿದ್ದಂತೆ, ಸ್ವಲ್ಪವೇ ಸ್ವಲ್ಪ ದುಗುಡವಿರುವ ತಿಪ್ಪಣ್ಣ, ‘ಈತ ನನ್ನತ್ತ ನೋಡಿಯೇ ಇಲ್ಲ ಅನ್ನಿಸುತ್ತಿದೆ -ನನ್ನ ಎದೆಯನ್ನು ದಿಟ್ಟಿಸಿದ್ದು ಕೂಡ ಇಲ್ಲ’ ಅಂದುಕೊಂಡಳು. ಬೇರೆ ಹುಡುಗರು ಹಾಗಲ್ಲ. ಅವರು ನೋಡುವುದೇ ಅಲ್ಲಿ. ಬೇಡವೆಂದರೂ ಅವರ ಬಾಯಿಂದ ಸ್ತನಕ್ಕೆ, ಗಲ್ಲಕ್ಕೆ, ತೊಡೆಗೆ ಅನ್ವಯಿಸುವ ಮಾತುಗಳು; ಹಾಗೆ ಹೇಳಲೂ ನಾಚಿಕೆಯಾಗಿ ಸೆಡವು. ತಿಪ್ಪಣ್ಣ ಸುತ್ತ ನೋಡಿ ಹಿಂದಿರುಗಲು ನಿಂತ. ಶ್ಯಾಮಲ ನಿಂತಳು. ಅವಳ ಮನಸ್ಸು ‘ಇಷ್ಟು ಬೇಗ ಹಿಂದಿರುಗುವುದು ಬೇಡ’ ಅಂದಿತು. ಅದು ಅವನಿಗೆ ತಿಳಿಯಿತು. ತಿಪ್ಪಣ್ಣನ ಬಗ್ಗೆ ಆಗಾಗ ಕೇಳಿ ಕೆಲವು ಮಾಹಿತಿ ಸಂಗ್ರಹಿಸಿದ್ದಳು. ಆತ ರೇಷ್ಮೆ ತರಬೇತಿ ಕೇಂದ್ರದಲ್ಲಿ ಗುಮಾಸ್ತನಾಗಿದ್ದ. ಅವನಿಗೆ ತಂದೆ, ತಾಯಿ, ತಂಗಿ ಇದ್ದರು. ಬಿ.ಎ. ಪರೀಕ್ಷೆಯಲ್ಲಿ ಎರಡು ಸಲ ಫೇಲಾಗಿದ್ದ. ಇಷ್ಟೇ ಆಕೆಗೆ ಗೊತ್ತಾದದ್ದು.
ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು
‘ಹಿಂದಿರುಗುವುದು ಬೇಡ’ ಎಂಬುದನ್ನು ಗ್ರಹಿಸಿದ ತಿಪ್ಪಣ್ಣ ಮೆಲ್ಲಗೆ ನಡೆದ. ಶ್ಯಾಮಲ ಪಕ್ಕಕ್ಕೆ ಹೋಗಿ ಕೆರೆಯ ದಂಡೆಯ ಕಲ್ಲಿನ ಮೇಲೆ ಕೂತಳು. ತಿಪ್ಪಣ್ಣ ನೀರು ನೋಡುತ್ತ ನಿಂತಿದ್ದ. ಶ್ಯಾಮಲ ಅವನ ಕೈಹಿಡಿದು ಪಕ್ಕಕ್ಕೆ ಕೂರಿಸಿಕೊಂಡಳು. ಅವಳು ಹಿಡಿದ ಅವನ ಕೈ ಬಿಡಲಿಲ್ಲ, ಮಗ್ಗುಲಲ್ಲಿ ಕೂತ ಅವನ ಕೈ ಮುದ್ದು ಹಕ್ಕಿಯೆಂಬಂತೆ ಹಿಡಿದುಕೊಂಡು ಕೂತಳು. ಅವನ ಕೈ ಜ್ವರ ಬಂದಂತೆ ಬೆಚ್ಚಗಾಯಿತು. ಸಣ್ಣಗೆ ನಡುಗಿದಂತಿತ್ತು. ಆದರೆ ಅವನ ಮುಖದಲ್ಲಿ ಯಾವ ಮೋಹವೂ, ತಳಮಳವೂ ಇರಲಿಲ್ಲ. ಇದರಿಂದಾಗಿ ಸಹಜವಾಗಿಯೇ ಅವನ ಹಸ್ತ ಹಿಡಿದ ಶ್ಯಾಮಲ ಕೇಳಿದಳು, ”ನನ್ನ ನೋಡಿ ಏನನ್ಸುತ್ತೆ?”
ಆ ಮಾತನ್ನು ಹೇಳಿದ ಮೇಲೆ ಶ್ಯಾಮಲಾಗೆ ತಾನು ತೀರಾ ಎಳಸು, ದಡ್ಡಿ ಅನ್ನಿಸಿತು. ತಿಪ್ಪಣ್ಣ ಸುಮ್ಮನೆ ನಕ್ಕ, ಅವನ ಮುಖ ಆಕೆಯ ಬಗ್ಗೆ ಅಭಿಮಾನದಿಂದ, ಮೆಚ್ಚುಗೆಯಿಂದ ತುಂಬಿತ್ತು. ಅವನು ಮಾತನ್ನೇ ಆಡಲಿಲ್ಲ. ಕೈ ಬಿಡಿಸಿಕೊಂಡು ಎದ್ದ. ”ಇಲ್ಲೇ ಇರಿ ಮಿಸ್” ಅಂದು ಕೆರೆಯ ಇನ್ನೊಂದು ಬದಿಯ ಕೇದಿಗೆ ಗುಂಪಿನತ್ತ ನಡೆದ: ಮುಳ್ಳು ಚುಚ್ಚದಂತೆ ಎಚ್ಚರ ವಹಿಸಿ ನಾಲ್ಕು ತೆನೆ ತಂದ. ಸುವಾಸನೆ ತುಂಬಿದ ಕೇದಿಗೆ; ಹಸಿರಿನಿಂದ ಆರಂಭವಾಗಿ ಅಚ್ಚ ಹಳದಿ ಗರಿಗಳು, ಗುಂಗುರು ಪಕಳೆಗಳ ತೆನೆಗಳು. ಅವಳಿಗೆ ನೀಡಿದ.
‘ನೀವು ನನ್ನನ್ನು ಮತ್ತೆ ನೋಡುವುದನ್ನು ಮರೆಯಬಾರದು’ ಅನ್ನಲು ನಾಲಗೆಯ ತುದಿಯವರೆಗೆ ಬಂದಿತ್ತು. ಶ್ಯಾಮಲ ಅನ್ನಲಿಲ್ಲ. ಅದು ಕೂಡ ಎಳಸು ಮಾತಾಗುವುದು ಸಾಧ್ಯವಿತ್ತು. ಹಿಂದಿರುಗುವಾಗ ಅದೇಕೋ ತಿಪ್ಪಣ್ಣ ಇನ್ನೂ ದುಗುಡಗೊಂಡಂತಿತ್ತು. ಒಂದು ಅಡಿಯಷ್ಟು ಹೆಚ್ಚು ದೂರದಲ್ಲಿ ನಡೆಯುತ್ತಿದ್ದಂತಿತ್ತು. ಶ್ಯಾಮಲ ತನ್ನ ಮನಸ್ಸನ್ನು ಪರಿಶೀಲಿಸಿಕೊಂಡಳು. ಅಲ್ಲಿ ಹುಚ್ಚು ಮೋಹವಿರಲಿಲ್ಲ. ಹಾಗೆಯೇ ವೈಚಾರಿಕ ಗೆಳೆತನದ ಭಾವನೆಗಿಂತ ಹೆಚ್ಚಿನ ಸ್ಪಂದನವಿತ್ತು. ಅದೇನು? ಆತನಲ್ಲಿ ವಿಚಿತ್ರ ತಾಯಿತನವೆ? ಅಗೆದಷ್ಟೂ ಸಿಕ್ಕಬಲ್ಲ ಗೆಳೆತನವೆ? ಆತನ ಗೊಂದಲಮಯ ಮಾತುಗಳ ವಿಚಿತ್ರ ಹಂದರವೆ? ತನ್ನ ಬೇಸರದ ದಿನಗಳಿಂದಾಗಿ ಹೀಗೆಲ್ಲ ಅನ್ನಿಸುತ್ತಿರಬಹುದೆ?
ಆದರೆ ಅವನನ್ನೇ ಮದುವೆಯಾಗುವುದಾಗಿ ತೀರ್ಮಾನಿಸಿದಳು.
2
ಇದೆಲ್ಲ ಜೀವನದಲ್ಲಿ ಎಷ್ಟು ಕಾಕತಾಳೀಯ, ಎಷ್ಟು ನಿಗೂಢ ಎಂದೆಲ್ಲ ಹೇಳಬೇಕೆನ್ನಿಸುತ್ತದೆ. ಕಾಕತಾಳೀಯ ಮತ್ತು ನಿಗೂಢಕ್ಕೆ ಪರಸ್ಪರ ಸಂಬಂಧವೇ ಇಲ್ಲ. ಕಮ್ಮಟ ಮುಗಿದು ನಾಲ್ಕು ದಿನವಾಗಿತ್ತು. ಇದು ಬದುಕಿನ ಹೊಲ; ಇಲ್ಲಿ ಎಲ್ಲವೂ ಹುಟ್ಟುತ್ತವೆ, ಬೆಳೆಯುತ್ತವೆ.
ಕಾಲಗರ್ಭದಲ್ಲಿ, ಮನುಷ್ಯರ ಆಳದಲ್ಲಿ ಕುಡಿಯೊಡೆವ ಅನ್ನಿಸಿಕೆಗಳು!
ಸಿನಿಮಾ ಕುರಿತ ಕಮ್ಮಟ ಮುಗಿದುಹೋಗಿತ್ತು. ಅದು ಅಮೃತಾಂಬುಧಿಯಲ್ಲಿ ಮೈಲಿಗಲ್ಲಾಗಲಿ, ಐತಿಹಾಸಿಕ ಘಟನೆಯಾಗಲಿ ಆಗಿರಲಿಲ್ಲ. ಯಾವುದನ್ನೂ ಹೀಗೆ ಮೈಲಿಗಲ್ಲು, ಐತಿಹಾಸಿಕ ಘಟನೆ ಎಂದು ಮುಂತಾಗಿ ವರ್ಣಿಸಕೂಡದು. ಯಾಕೆಂದರೆ ಹೊರನೋಟಕ್ಕೆ ಏನೂ ಆಗದಂಥ, ಯಾವ ಪರಿಣಾಮವನ್ನೂ ಬೀರದಂಥ ಸಂಗತಿಗಳೇ ತಮ್ಮ ಬೀಜವನ್ನು ಬಿತ್ತಿಹೋಗಿ ವಿಚಿತ್ರ ಬದಲಾವಣೆ ತಂದಿರುತ್ತವೆ. ಅದೆಲ್ಲ ಇರಲಿ, ಕಮ್ಮಟಕ್ಕೆ ಬಂದಿದ್ದ ಹುಡುಗ, ಹುಡುಗಿಯರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು; ಕೃಷ್ಣೋಜಿ ಸಾಕಷ್ಟು ಭಾಷಣ ಮಾಡಿ, ಸಿನಿಮಾಗಳನ್ನು ವರ್ಣಿಸಿ, ಯಾರೂ ಕಮ್ಮಟದ ಮಧ್ಯೆಯೇ ಬಿಟ್ಟುಹೋಗದಂತೆ ನೋಡಿಕೊಂಡು ಅದೊಂದು ಅತ್ಯಂತ ಯಶಸ್ವೀ ಕಮ್ಮಟವೆಂದು ಕೊನೆಯ ಭಾಷಣ ಬಿಗಿದು ತೆರಳಿದ್ದರು; ಅಲ್ಲಿಗೆ ಬಂದಿದ್ದ ಹಾಸನ, ಚಿಕ್ಕಮಗಳೂರು, ಅರಸೀಕೆರೆ ಕಡೆಯವರೆಲ್ಲ ಕೃತಕೃತ್ಯ ಭಾವನೆಯಿಂದ ಹಿಂದಿರುಗಿದ್ದರು. ಕೃಷ್ಣೋಜಿಯರಿಗೆ ರೈಲು ಹತ್ತಿಸಿ ಪ್ರತಿಯೊಂದು ಚರ್ಚೆಯನ್ನೂ ಬಂಡಾಯದ ಚರ್ಚೆಯಾಗಿಸಿದ್ದ ಕ್ರಾಂತಿವೇದಿಕೆಯ ರುದ್ರ-ಮಲ್ಲೇಶಿ ಮುಂತಾದವರು ಅಷ್ಟಿಷ್ಟು ತೃಪ್ತಿಪಟ್ಟುಕೊಂಡಿದ್ದರು.
ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ
ಇದೆಲ್ಲ ಕಮ್ಮಟವಾದ ಮೇಲೆ ಉಳಿಯುವ ಸಂಗತಿಗಳಾಗಿದ್ದರಿಂದ ಮುಖ್ಯ ವಿಷಯಕ್ಕೆ ಹಿಂದಿರುಗೋಣ. ಒಂದು ಮಟ್ಟದಲ್ಲಿ ರೌಡಿಗಳು, ಪುಂಡರ ಊರಾದ ಅಮೃತಾಂಬುಧಿ ಇನ್ನೊಂದು ಮಟ್ಟದಲ್ಲಿ ನೇರ ನುಡಿಯ, ಪೊಲೀಸರ ಮರ್ಜಿಗಾಗಿಯಾಗಲಿ, ನ್ಯಾಯಾಲಯದ ತರಲೆಗಳಿಗಾಗಲಿ ಕಾಯದ ಊರು ಎಂಬುದನ್ನು ಮೇಲೆ ನೋಡಿದ್ದೇವೆ. ಇಲ್ಲಿ ಕಮ್ಮಟದೊಂದಿಗೆ ದೊಡ್ಡ ಪುಕಾರು ಎದ್ದಿತು. ಜಂಗಮರ ಹೆಣ್ಣುಮಗಳೊಬ್ಬರು ಬೇಡರ ಹುಡುಗನೊಬ್ಬನನ್ನು ಪ್ರೇಮಿಸುತ್ತಿರುವುದಾಗಿಯೂ ಬೇಡರ ಹುಡುಗ ಒಂದು ವಾರದಿಂದ ಕಾಣೆಯಾಗಿದ್ದಾನೆಂದೂ ಕತೆಗಳು ಹರಡಿದವು. ಅಪ್ಪ ಒಪ್ಪಲಿಲ್ಲ. ಅಮ್ಮ ಉಪವಾಸ ಕೂತಳು. ಹುಡುಗ ಮದುವೆ ಮಾಡಿಕೊಡಬೇಕೆಂದು ಪ್ರತಿಭಟಿಸಿದ, ಇದೆಲ್ಲವೂ ಅಮೃತಾಂಬುಧಿಯ ಧರ್ಮಕ್ಕೆ ತಕ್ಕಂತೆ ಕೊಲೆಯಲ್ಲಿ ಮುಗಿಯಲಿದೆ ಎಂದು ಜನ ಮಾತಾಡಿಕೊಂಡರು.
ಆದದ್ದೇನೆಂದರೆ, ಶ್ಯಾಮಲ ಸುಮ್ಮನಿರಲಿಲ್ಲ. ತನ್ನ ಊರಿಗೆ ತಕ್ಕಂಥ ನೇರ ನಡೆಯ ಶ್ಯಾಮಲ ಸಹಜ ಹೆಣ್ಣಿನ ರೀತಿಯಲ್ಲಿ ವರ್ತಿಸಿದಳು. ಇದರಲ್ಲಿ ಆಕೆ ಕಮ್ಮಟದಲ್ಲಿ ನೋಡಿದ ಸಿನಿಮಾಗಳ ಪ್ರಭಾವ ಎಷ್ಟಿತ್ತು, ಹುಡುಗ ತಿಪ್ಪಣ್ಣನ ಮೌನ ಯಾವ ಪಾತ್ರ ವಹಿಸಿತ್ತು ಎಂದು ಪ್ರತ್ಯೇಕಿಸಿ ಹೇಳಲಾಗುವುದಿಲ್ಲ. ಕಮ್ಮಟವಾದ ನಾಲ್ಕಾರು ದಿನಗಳ ಬಳಿಕ ದಾರಿಯಲ್ಲಿ ಸಿಕ್ಕ ತಿಪ್ಪಣ್ಣನೊಂದಿಗೆ ನಡೆಯತೊಡಗಿದಳು. ಇಬ್ಬರೂ ಹೆಚ್ಚು ಮಾತನ್ನು ಕೂಡ ಆಡಲಿಲ್ಲ. ತಿಪ್ಪಣ್ಣ ಇದನ್ನು ನಿರೀಕ್ಷಿಸಿರಲಿಲ್ಲ; ಅವರು ನಿಂತದ್ದು ಶ್ಯಾಮಲ ಮನೆಯ ಎದುರು. ಒಳ ಬಾ ಎಂದು ಕೂಡ ಆಕೆ ಹೇಳಲಿಲ್ಲ. ಇಬ್ಬರೂ ನಡುಮನೆಯಲ್ಲಿದ್ದರು. ಅಮ್ಮ ಮಾತ್ರ ಒಳಗಿದ್ದಳು. ಮಲ್ಲಯ್ಯ ಎಲ್ಲೋ ಹೋಗಿದ್ದರು. ತಿಪ್ಪಣ್ಣನಿಗೆ ವಿಪರೀತ ಸಂಕೋಚವಾಗಿತ್ತು ಮಾತ್ರ. ಹಳೇ ಸೋಫಾ ಒಂದರ ತುದಿಯಲ್ಲಿ ಕುಗ್ಗಿ ಕೂತು ನೆಲ ನೋಡುತ್ತಿದ್ದ. ಆದರೆ ಶ್ಯಾಮಲ ವಿಚಿತ್ರ ಸಂಭ್ರಮದಲ್ಲಿದ್ದಳು. ”ಅಮ್ಮಾ! ಯಾರು ಬಂದಿದ್ದಾರೆ ನೋಡು!” ಎಂದಳು.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಅವಳಮ್ಮ ಗಿರಿಜವ್ವ ಬಂದು ನೋಡಿದಳು-ಯಾರೋ ಗಣ್ಯರು, ಕನಿಷ್ಠ ಶ್ಯಾಮಲಾಳ ಅಧ್ಯಾಪಕರು ಬಂದಿರಬಹುದೆಂದು ನೋಡಿದರೆ ಸಂಕೋಚದಿಂದ ಭೂಮಿಗಿಳಿದ ತೆಳ್ಳನೆಯ, ಕಪ್ಪನೆಯ ಹುಡುಗ. ”ನಾನು ನಿನ್ನೆ ಇವರ ಮನೆಗೆ ಹೋಗಿದ್ದೆ ಅಂತ ಹೇಳಿಲ್ವೇನಮ್ಮ. ಇವರೇ ತಿಪ್ಪಣ್ಣ ಅಂತ. ನಾನು ಇವರನ್ನೇ ಮದುವೆಯಾಗೋದು!” ಅಂದುಬಿಟ್ಟಳು.
ಗಿರಿಜವ್ವ ದಂಗಾಗಿ ನಿಂತಳು. ಎಂದೂ ಇಂಥ ಮಾತನ್ನೆಲ್ಲ ಆಡದ ಶ್ಯಾಮಲ ಯಾಕೆ ಹೀಗೆ ವರ್ತಿಸುತ್ತಿದ್ದಾಳೆ ಎಂದು ಆಕೆ ಭಯಗೊಂಡಳು. ಆದರೆ ಶ್ಯಾಮಲ ತನ್ನ ಹುಡುಗಾಟದ ನಗೆ ನಿಲ್ಲಿಸಿ ಹೇಳಿದಳು: ”ಈ ತಿಪ್ಪಣ್ಣನನ್ನೇ ಇನ್ನೂ ಕೇಳಿಲ್ಲ. ನಾನು ಅನೌನ್ಸ್ ಮಾಡಿಬಿಟ್ಟೆ. ಆದರೆ ನಿಜ ಅಮ್ಮ, ಇವರನ್ನಲ್ಲದೆ ನಾನು ಬೇರೆ ಯಾರನ್ನೂ ಜೊತೆಗಾರನಾಗಿ ಒಪ್ಪಲಾರೆ.”
ತಿಪ್ಪಣ್ಣ ತನ್ನಲ್ಲೇ ಒದ್ದಾಡುತ್ತಿದ್ದಂತಿತ್ತು. ಆತ ಬೆವೆತು ಹೋಗುತ್ತಿದ್ದುದು ಗಿರಿಜವ್ವನಿಗೂ ಕಾಣಿಸಿತು. ಆಕೆ ಸಿಟ್ಟು ಮಾಡಲಿಲ್ಲ. ಶ್ಯಾಮಲಾಳ ನಿಷ್ಠುರತೆ, ನಿರ್ಧಾರ ಆಕೆಯನ್ನು ಅಲ್ಲಾಡಿಸಿತ್ತು. ಆತ ಬೇಡರ ಹುಡುಗ ಎಂಬುದು ಆಕೆಗೆ ಗೊತ್ತಿತ್ತು. ತನ್ನ ಗಂಡ ಒಪ್ಪುವುದಿಲ್ಲ ಎಂದು ಕೂಡ ಗೊತ್ತಿತ್ತು. ದಿಗ್ಭ್ರಾಂತಳಾಗಿ ಒಂದು ಕ್ಷಣ ನಿಂತ ಗಿರಿಜವ್ವ ಒಳಗೆ ಹೋಗಿ ಕಾಫಿ ಮಾಡಿಕೊಂಡು ತಂದುಕೊಟ್ಟಳು. ತಿಪ್ಪಣ್ಣ ಅದನ್ನು ಮುಟ್ಟದೆ ಸುಮ್ಮನೆ ಇದ್ದ. ಶ್ಯಾಮಲ ಅವನ ಪಕ್ಕದಲ್ಲಿ ಕೂತು ಕೆರೆಯ ಪಕ್ಕದಲ್ಲಿ ಹಿಡಿದುಕೊಂಡಿದ್ದಂತೆಯೇ ಕೈಹಿಡಿದುಕೊಂಡಳು. ”ನನ್ನ ಹಕ್ಕಿ!” ಎಂದು ತಿಪ್ಪಣ್ಣನ ಕಣ್ಣಿನಲ್ಲಿ ಕಣ್ಣಿಟ್ಟು ಧೈರ್ಯ ತುಂಬಲು ಯತ್ನಿಸಿದಳು. ಒಂದು ಕೈಯಲ್ಲಿ ಕಾಫಿಲೋಟ ಎತ್ತಿಕೊಂಡು ಅವನ ಎರಡೂ ಕೈಯಲ್ಲಿ ಇಟ್ಟಳು. ತಿಪ್ಪಣ್ಣನ ಕೈ ನಡುಗುತ್ತಿದ್ದವು.
ಗಿರಿಜವ್ವ ಅವನಿಗೆ ಒಂದೇ ಒಂದು ಮಾತು ಹೇಳಿದಳು, ”ಇದರಿಂದ ನಮಗೆಲ್ಲ ಎಷ್ಟು ಬೇಜಾರಾಗುತ್ತೆ ಅನ್ನೋದನ್ನ ಮರೀಬೇಡ ತಮ್ಮ.”
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಕಾಫಿ ಕುಡಿದು ತಿಪ್ಪಣ್ಣ ಎದ್ದ. ಆತನ ತೊಳಲಾಟ ಅವನು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ಇತ್ತು. ತಣ್ಣನೆಯ ಮಾತುಗಳನ್ನು ನಿಧಾನಕ್ಕೆ ಆಡುವ, ಯಾರಿಗೂ ನೋವನ್ನುಂಟುಮಾಡದ ಹುಡುಗ. ಆತ ಅಲ್ಲಿಂದ ನಡೆಯತೊಡಗಿದ. ಶ್ಯಾಮಲಾಳಿಂದ ತಪ್ಪಿಸಿಕೊಳ್ಳುವ ಚಲನೆ ಅದಲ್ಲ; ನನ್ನ ಜೊತೆಗೆ ಬರುತ್ತೀಯಾ ಎನ್ನುವ ಚಲನೆ. ”ಅಮ್ಮ, ಈಗ ಬಂದುಬಿಟ್ಟೆ!” ಎಂದು ಶ್ಯಾಮಲ ಅವನ ಜೊತೆಗೆ ಬಂದಳು. ಇಬ್ಬರೂ ಮಾತಾಡಲಿಲ್ಲ. ಸುಮ್ಮನೆ ನಡೆದರು, ಸುಮ್ಮನೆ ಒಬ್ಬರ ವ್ಯಕ್ತಿತ್ವವನ್ನು ಒಬ್ಬರು ತುಂಬಿಕೊಂಡು; ಮಾತುಗಳೆಲ್ಲ ಬೇಕಿಲ್ಲ ಎಂಬಂತೆ. ಕೆರೆಯ ಹತ್ತಿರ ಹೋದರು, ಶ್ಯಾಮಲಗೆ ಕೇಳಬೇಕೆನ್ನಿಸಿತ್ತು. ‘ನನ್ನ ಮಾತಿನಿಂದ ಬೇಜಾರಾಯಿತೆ?’ ಅಂತ. ಅದು ಕೂಡ ಅವನ ಎದುರು ಎಳಸು ಮಾತಾಗುತ್ತಿತ್ತು. ಏಕೆಂದರೆ ಅವನಿಗೆ ಬೇಜಾರಾಗಿರಲಿಲ್ಲ. ಕೆರೆಯ ಅಂಗಳಕ್ಕೆ ಬಂದರು. ದೂರದಲ್ಲಿ ನೀರು ಸುತ್ತಣ ಜಗತ್ತನ್ನು ಬಿಂಬಿಸಿತ್ತು. ಶ್ಯಾಮಲಾ ತುಂಬೆ ಗಿಡವೊಂದನ್ನು ಕಿತ್ತುಕೊಂಡಳು. ”ತುಂಬೆ ಹೂವು! ನೋಡು ಎಷ್ಟು ನವಿರು ವಾಸನೆ!” ಎಂದು ಅವನ ಮೂಗಿಗೆ ಹಿಡಿದಳು. ಅವಳ ಏಕವಚನದ ಮಾತು ಕೂಡ ಅವನ ಗಮನಕ್ಕೆ ಬಂದಿರಲಿಲ್ಲ. ಅವನು ತುಂಬೆ ಗಿಡ ಇಸಿದುಕೊಂಡ. ಒಂದು ಎಲೆ ಹಿಂಡಿ ಅವಳಿಗೆ ವಾಸನೆ ನೋಡಲು ಹಿಡಿದ. ಎಷ್ಟು ಸಂದರ ಮೂಗು ಶ್ಯಾಮಲಾಳದು, ಎಷ್ಟು ಸುಂದರಿ ಈ ಹುಡುಗಿ ಎಂದುಕೊಂಡ. ಹೇಳದಿದ್ದರೂ ಅವಳಿಗೆ ಕೇಳಿದಷ್ಟೇ ಸಂತೋಷವಾಗಿತ್ತು. ಇಲ್ಲಿಯವರೆಗೆ ಒಮ್ಮೆಯೂ ತಿಪ್ಪಣ್ಣ ಅವಳ ಕೈಹಿಡಿದುಕೊಂಡಿರಲಿಲ್ಲ, ಮುಟ್ಟಿರಲಿಲ್ಲ. ಆದರೆ ಆತನ ಪ್ರತಿಯೊಂದು ಇಷ್ಟವೂ ಅವಳಲ್ಲಿ ಅನುಷ್ಠಾನವಾಗುತ್ತಿತ್ತು.
3
ಶ್ಯಾಮಲ ಮನೆಗೆ ಬಂದಾಗ ತಂದೆ ಮಲ್ಲಯ್ಯ ರಕ್ಕಸನಂತೆ ಸಿಟ್ಟುಗೊಂಡಿದ್ದ. ಒಳಗೆ ತಲೆಮರೆಸಿಕೊಂಡಿದ್ದ ಗಿರಿಜವ್ವನನ್ನು ಇರಿಯುವಂತೆ ಬೈಯುತ್ತಿದ್ದ. ಅವನಪ್ಪ ಇದನ್ನು ಸಹಿಸಿರಲಿಲ್ಲ. ಅಜ್ಜ ಸಹಿಸಿರಲಿಲ್ಲ. ಮನೆ ವ್ಯಾಜ್ಯದಲ್ಲಿ ಇಬ್ಬರು ಕೊಲೆಯಾಗಿದ್ದರೆ ಇಂಥ ಪ್ರೇಮಪ್ರಕರಣಗಳಲ್ಲಿ ಹಲವು ಖೂನಿಗಳೇ ಆಗಿದ್ದವು. ಗಿರಿಜವ್ವ ಆಗಲೇ ಕೆಲವರಲ್ಲಿ ತಮ್ಮ ದುಃಖ ತೋಡಿಕೊಂಡು ಊರಲ್ಲಿ ಗಾಳಿಸುದ್ದಿಯ ರೂಪ, ಪುರಾಣದ ರೂಪ ತಳೆದು ಶ್ಯಾಮಲ ಕತೆ ಹಬ್ಬಿತ್ತು. ಗಿರಿಜವ್ವ, ಮಲ್ಲಯ್ಯನ ನೆಂಟರಿಗೆಲ್ಲ ಗೊತ್ತಾಗಿತ್ತು. ಇದು ಕೇವಲ ಜಾತಿಯ ಪ್ರಶ್ನೆಯಲ್ಲ, ಬೇಡರ ಹುಡುಗನೊಬ್ಬ ಇಲ್ಲಿ ಉಣ್ಣುವ, ಮಲಗುವ ಪ್ರಶ್ನೆ. ಊರಿನ ಗೈರತ್ತು ಸ್ವಾಭಿಮಾನದ ಪ್ರಶ್ನೆ; ಊರಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಶೈಲಿಯ ಪ್ರಶ್ನೆ.
ದೊಡ್ಡ ಕೋಟು ಹಾಕಿಕೊಂಡು ಮಲ್ಲಯ್ಯ ಬೇಡರ ಹಟ್ಟಿಯತ್ತ ಹೊರಟು ನಿಂತಿದ್ದಾಗಲೇ ಶ್ಯಾಮಲ ಬಂದಳು. ಬೈಗುಳವೆಲ್ಲ ಮುಗಿದಂತಿತ್ತು; ಸಿಟ್ಟು ಮಾತ್ರ ಕೆಂಡದಂತೆ ನಿಗಿನಿಗಿ ಆಗಿತ್ತು. ಒಮ್ಮೆ ಶ್ಯಾಮಲಾಳನ್ನು ದುರುಗುಟ್ಟಿ ನೋಡಿದ ಮಲ್ಲಯ್ಯ; ಅವನ ಮುಖದ ರೇಖೆಗಳೆಲ್ಲ ಬದಲಾದಂತೆ ವಕ್ರವಾಗಿತ್ತು ಮುಖ. ಅದನ್ನು ಕಂಡ ಶ್ಯಾಮಲ ಕುಸಿದು ಕೂತಳು; ಅಮ್ಮ ‘ಓ’ ಎಂದು ಅಳತೊಡಗಿದಳು. ಜೇಬು ಮುಟ್ಟಿಕೊಂಡ ಮಲ್ಲಯ್ಯ ನಿರ್ಧಾರದ ಅಡಿ ಇಟ್ಟು ಹೋಗುವ ಮುನ್ನ ಮಗಳತ್ತ ಒಮ್ಮೆ ಉಗಿದ.
ಶ್ಯಾಮಲ ಭಯ, ನಿರೀಕ್ಷೆಯಿಂದ ಕುಸಿದಳು; ಅವಳ ಯಾವ ಅಂಗವೂ ಚಲಿಸದಂತಾಗಿತ್ತು.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಅದೊಂದು ಚಿಕ್ಕ ಮನೆ, ಕತ್ತಲಲ್ಲಿ ಅದು ಹುಲ್ಲು ಮನೆಯೋ ನಾಡಹೆಂಚಿನ ಮನೆಯೋ ಎಂದು ಕೂಡ ಗೊತ್ತಾಗುತ್ತಿರಲಿಲ್ಲ. ಪುಟ್ಟ ಜಗಲಿಯ ಮೇಲೆ ಕುಕ್ಕೆಯಲ್ಲಿ ಕೋಳಿಗಳಿದ್ದವು; ಅಲ್ಲಿಯೇ ಹುರಿಯ ಮೇಲೆ ಒಗೆದು ಹಾಕಿದ ಬಟ್ಟೆಗಳಿದ್ದವು. ಎಷ್ಟು ಚಿಕ್ಕ ಮನೆ ಎಂದರೆ ಅದಕ್ಕೆ ಎರಡೇ ಕೋಣೆ, ಒಂದೇ ನಡುಮನೆ ಇದ್ದಂತಿತ್ತು. ಮಲ್ಲಯ್ಯ ಅದನ್ನೆಲ್ಲ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ತನ್ನ ಮಾನಕ್ಕೆ ಧಕ್ಕೆ ತಂದವನನ್ನು ಮುಗಿಸುವ ಒಂದೇ ಉದ್ದೇಶ ಅವನಲ್ಲಿದ್ದುದು. ಬಾಗಿಲು ತಟ್ಟಿದ, ”ತಗೀರಿ!” ಎಂದು ಗರ್ಜಿಸಿದ. ಸಿಟ್ಟಿನಿಂದ ಅವನ ಧ್ವನಿ ಕರ್ಕಶವಾಗಿತ್ತು, ಗಟ್ಟಿಯಾಗಿತ್ತು. ಮೃಗದ ಸದ್ದಿನಂತಿತ್ತು. ”ಯಾರು?” ಎಂದು ತಿಪ್ಪಣ್ಣನೇ ಬಾಗಿಲು ತೆಗೆದ. ತಿಪ್ಪಣ್ಣ ಮಲ್ಲಯ್ಯನನ್ನು ಹಲವಾರು ಸಲ ನೋಡಿದ್ದ; ”ಬನ್ನಿ ಸಾರ್” ಎಂದು ಕರೆದ. ಒಳಗಿಂದ ಅವನ ಅಪ್ಪ ಬಂದ. ಅಮ್ಮ, ತಂಗಿ ಒಳಬಾಗಿಲಿನಿಂದ ಇಣಿಕಿ ನೋಡುತ್ತಿದ್ದರು. ”ನಾನು ತಿಪ್ಪಣ್ಣ ಸಾರ್” ಅಂದ, ಕೆಳದನಿಯಲ್ಲಿ.
ಮಲ್ಲಯ್ಯ ನೋಡಲು ಬಂದದ್ದು ಗಟ್ಟಿ ದೇಹದ, ಯೌವನ ತುಂಬಿದ, ಹುಡುಗಿಯನ್ನು ಬಲೆಗೆ ಬೀಳಿಸಿಕೊಳ್ಳಬಲ್ಲ ಆಧುನಿಕ ತರುಣನನ್ನು. ತಿಪ್ಪಣ್ಣ ತದ್ವಿರುದ್ಧವಾಗಿದ್ದ. ಚಪ್ಪಟೆ ಮುಖದ, ನೋಡಿದರೆ ಕರುಣೆ ಬರುವಷ್ಟು ತೆಳ್ಳಗಿನ, ನೋವು ತುಂಬಿದ ಕಣ್ಣುಗಳ ಹುಡುಗ. ಎದುರು ನಿಂತು ಲಜ್ಜೆಯಿಂದ ಭೂಮಿಗಿಳಿಯುವಂತಿದ್ದ. ಆದರೂ ತನ್ನ ಸಿಟ್ಟು ಬಿಟ್ಟುಕೊಡುವ ಸ್ಥಿತಿಯಲ್ಲಿ ಮಲ್ಲಯ್ಯ ಇರಲಿಲ್ಲ. ”ನೀನೇ ಏನೋ? ನೀನು ನನ್ನ ಮಗಳ್ನ ಮದುವೆಯಾಗಬೇಕು ಅಂತ ಇದ್ದೀಯೇನೋ?” ಅಂದ ಮಲ್ಲಯ್ಯ. ಒಂದು ಕೈ ಜೇಬಿನ ರಿವಾಲ್ವರ್ ಮುಟ್ಟುತ್ತಿತ್ತು.
ತಿಪ್ಪಣ್ಣ ಏನನ್ನಾದರೂ ಹೇಳಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂದು ಮಲ್ಲಯ್ಯ ತಿಳಿದಿದ್ದ. ಗುಬ್ಬಚ್ಚಿ ತರಹದ ಹುಡುಗ. ಸುಮ್ಮನೆ ಮಲ್ಲಯ್ಯನನ್ನು ನೋಡಿ ನೆಲ ನೋಡತೊಡಗಿದ. ಅವನ ಅಪ್ಪ ನಡುವೆ ಮಾತಾಡಲು ಯತ್ನಿಸಿದಾಗ ಆತನತ್ತ ನೋಡಿ ಸುಮ್ಮನಿರಿಸಿದ. ಅವನ ಅಮ್ಮ ಮತ್ತು ತಂಗಿಗೆ ಇದೆಲ್ಲ ಸುದ್ದಿಯಾಗಿತ್ತು. ತಿಪ್ಪಣ್ಣ ಮದುವೆಯಾಗುವುದು ಅಂದರೇನು? ತಿಪ್ಪಣ್ಣ ಎಂದೂ ಗಟ್ಟಿಯಾಗಿ ಮಾತಾಡಿದವನೇ ಅಲ್ಲ. ಈಗ ಮಲ್ಲಯ್ಯನಿಗೆ ಹೇಳಿದ, ”ಸಾರ್… ಸಾರ್… ನಾನು ಹುಟ್ಟಿದಾಗಿನಿಂದ ಯಾರ ಮನಸ್ಸೂ ನೋಯಿಸಿಲ್ಲ. ನಿಮ್ಮ ಮನಸ್ಸೂ ನೋಯಿಸೋಲ್ಲ. ನಾನು ತಪ್ಪು ಮಾಡಿದ್ದರೆ ಮರೆತುಬಿಡಿ. ಮಿಸ್‌ನೇ ಕೇಳಿ. ಎಲ್ಲಾನೂ ಮಿಸ್‌ನೇ ಕೇಳಿ.”
”ಏನದು ಮಿಸ್?” ಎಂದು ಅರ್ಥವಾಗಿದ್ದರೂ ಮಲ್ಲಯ್ಯ ಕೂತ. ಅವನ ತಲೆ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ಇತ್ತು. ಊಟದ ಸಮಯ, ಆದರೆ ತಿಪ್ಪಣ್ಣನ ತಂಗಿ, ಅಮ್ಮನಿಗೆ ಊಟದ ವಿಷಯ ಎತ್ತಲು ಹೆದರಿಕೆ. ಬೇಡರ ಮನೆ, ಲಿಂಗಾಯತರ ಮಲ್ಲಯ್ಯ; ಸುಮ್ಮನೆ ಕೂತೇ ಇದ್ದ. ತಿಪ್ಪಣ್ಣ ಕೂಡ ಚಲಿಸಲಿಲ್ಲ. ಎಷ್ಟು ನಿಶ್ಶಬ್ದವಾಗಿತ್ತೆಂದರೆ ಜಗುಲಿಯ ಕೋಳಿಗಳ ಸದ್ದು ಸ್ಲೇಟಿನ ಮೇಲೆ ಗೀರಿದಂತಿತ್ತು. ಮಲ್ಲಯ್ಯ ಬೋನಿನಲ್ಲಿ ಬಿದ್ದಂತಿದ್ದ. ಅಗಲವಾಗಿದ್ದ ಕಣ್ಣುಗಳ ಚಲಿಸದ ಗುಡ್ಡೆಗಳು. ಹಾಗೇ ಕೂತ, ನೆಟ್ಟ ನೋಟ ತೆಗೆಯಲಿಲ್ಲ. ಗೋಡೆಯನ್ನು ನೋಡುತ್ತಿದ್ದಂತಿತ್ತು.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಎದ್ದು ಮನೆಯತ್ತ ಹೊರಟ.
4
ಕೇವಲ ಒಂದು ವರ್ಷದ ಹಿಂದೆ ಅಮೃತಾಂಬುಧಿಯ ಕ್ರಾಂತಿವೇದಿಕೆ ಜನ್ಮ ತಾಳಿತ್ತು. ಅರಸೀಕೆರೆ, ತರೀಕೆರೆ, ಅಜ್ಜಂಪುರ ಮುಂತಾದ ಕಡೆಯೆಲ್ಲ ಅನೇಕ ವರ್ಷಗಳಿಂದ ಇದ್ದ ವೇದಿಕೆ. ಅನೇಕ ಸಲ ಪ್ರತಿಭಟನೆ ಮಾಡಿತ್ತು. ಹರಿಜನರು, ಬೇಡರು, ಕುರುಬರ ಮೇಲೆ ನಡೆಯುವ ಹಲ್ಲೆ, ಅತ್ಯಾಚಾರ ಮುಂತಾದವುಗಳ ವಿರುದ್ಧ ಧರಣಿ, ಸಭೆ, ಮೆರವಣಿಗೆ ನಡೆಸಿತ್ತು. ಒಂದು ಜೀತವಿಮುಕ್ತಿಯ ಪ್ರಕರಣದಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಕಡತೂರು ಎಂಬ ಹಳ್ಳಿಯಲ್ಲಿ ಹತ್ತಾರು ಜನ ಜೀತದಾಳುಗಳಿದ್ದು ಕ್ರಾಂತಿವೇದಿಕೆಯ ರುಕ್ಕೇಶಿ ತನ್ನ ಗೆಳೆಯರೊಂದಿಗೆ ಅಲ್ಲಿಗೆ ಹೋಗಿ ವಿಷಯ ಎತ್ತಿದಾಗ ಜೀತಕ್ಕಿದ್ದವರೂ ಅವರ ಯಜಮಾನರೂ ಸೇರಿಕೊಂಡು ರುಕ್ಕೇಶಿಯ ಗುಂಪಿಗೆ ಇಕ್ಕಿ ಓಡಿಸಿದ್ದರು. ಅತ್ಯಂತ ಬಡಗ್ರಾಮವಾದ ಅಲ್ಲಿ ಜೀತದವರು, ಅವರನ್ನಿಟ್ಟುಕೊಂಡವರು ಎಲ್ಲರೂ ಸಮಾನವಾಗಿ ಬಡವರಾಗಿದ್ದು ಐನೂರು, ಸಾವಿರದ ಮೊತ್ತದ ವ್ಯವಹಾರದಡಿಯಲ್ಲೇ ಅವರ ಜೀತ, ಯಜಮಾನಿಕೆ ಎಲ್ಲ ನಡೆಯುತ್ತಿತ್ತು. ಹೀಗಿದ್ದಾಗ ಅಲ್ಲಿ ಕ್ರಾಂತಿಕಾರಿ ಭಾಷಣ ಮಾಡಿ ಜನರನ್ನು ಪ್ರಚೋದಿಸುವುದಾಗಲಿ, ಮನುಷ್ಯರ ಸಮಾನತೆಯ ಬಗ್ಗೆ ಮಾತಾಡುವುದಾಗಲಿ ಅಸಾಧ್ಯವಾಗಿ ಕಂಡುಬಂತು. ಅಲ್ಲಿಗೆ ಹೋದ ಕ್ರಾಂತಿವೇದಿಕೆಯವರು ಅವತ್ತು ಏಟು ತಿಂದು ಓಡಿಬಂದ ಮೇಲೆ ಸೋಲನ್ನೊಪ್ಪದೆ ಹಿಂದಿರುಗಿ ದೇವಸ್ಥಾನಕ್ಕೆ ಹರಿಜನರ ಪ್ರವೇಶದ ಕಾರ್ಯಕ್ರಮವನ್ನಿಟ್ಟುಕೊಂಡು ಯಶಸ್ವಿಯಾದರು. ಯಾವುದರ ಬಗ್ಗೆಯೂ ಉತ್ಸಾಹ, ಸಿಟ್ಟು ಇಲ್ಲದ ಕಡತೂರಿನ ಜನ ಆ ಸಂದರ್ಭದಲ್ಲಿ ಗುಂಪು ಕೂಡ ಸೇರದೆ ಹರಿಜನರ ಪ್ರವೇಶ ಲಾಗಾಯ್ತಿನ ಘಟನೆಯೆಂಬಂತೆ ದೂರದಲ್ಲಿ ನಿಂತು ನೋಡಿದರು.
ಕಡತೂರಿನ ಪರಿಸ್ಥಿತಿ ಹಾಗಾದರೆ ಅಮೃತಾಂಬುಧಿಯಲ್ಲಿ ಕ್ರಾಂತಿವೇದಿಕೆ ಹುಟ್ಟಿದಾಗ ಹೇಗಿತ್ತೋ ಹಾಗೇ ಇದ್ದು ತೀರಿಕೊಳ್ಳುವಂತಾಗಿತ್ತು. ಕೊಲೆ, ಹಲ್ಲೆಯ ವಿರುದ್ಧ ಪೊಲೀಸರು ತೆಪ್ಪಗಿದ್ದಾಗ ಕ್ರಾಂತಿವೇದಿಕೆಯ ರುದ್ರ, ಮಲ್ಲೇಶಿ ಉಸಿರೆತ್ತುವಂತಿರಲಿಲ್ಲ. ಒಂದುವೇಳೆ ಪ್ರತಿಭಟಿಸಿದರೆ ಅವರ ವಿಳಾಸವೇ ಇಲ್ಲದಂತಾಗುವುದು ಎಲ್ಲರಿಗೂ ಗೊತ್ತಿತ್ತು. ಅವರ ಅತ್ಯಂತ ಕ್ರಾಂತಿಕಾರಿ ಕೆಲಸ ಸಿನಿಮಾ ಕಮ್ಮಟ ನಡೆಸಿದ್ದು. ಹೀಗಿದ್ದಾಗ ತಾವು ಬಲ್ಲ ಹುಡುಗ ತಿಪ್ಪಣ್ಣನಿಗೆ ಯಾವುದೋ ಘೋರ ಅನ್ಯಾಯವಾಗಿದೆಯೆಂದು ಲೆಕ್ಕಹಾಕಿಕೊಂಡರು. ಯಾಕೆಂದರೆ ಅವರಿಗೆ ತಿಪ್ಪಣ್ಣ ಸಿಕ್ಕಲೇ ಇಲ್ಲ. ರೇಷ್ಮೆ ತರಬೇತಿ ಕೇಂದ್ರದಲ್ಲಿ ಕೂಡ ಆತ ಎಂದಿನ ಕುರ್ಚಿಯಲ್ಲಿರದೆ ಎಲ್ಲೋ ಅವಿತುಕೊಂಡಂತಿತ್ತು. ಮನೆಯಲ್ಲಿ ಇರುತ್ತಲೇ ಇರಲಿಲ್ಲ. ಹೀಗಾಗಿ ರುದ್ರ, ಮಲ್ಲೇಶಿಗೆ ಏನು ಮಾಡುವುದೆಂದು ತೋಚದಾಯಿತು. ರುದ್ರ ಒಂದುದಿನ ಮಲ್ಲೇಶಿಯನ್ನು ಕರೆದುಕೊಂಡು ಹತ್ತುಜನ ಕ್ರಾಂತಿವೇದಿಕೆಯ ಗೆಳೆಯರನ್ನು ಕಂಡು ವಿಷಯ ಮಾತಾಡಿದ; ಅಮೃತಾಂಬುಧಿಯಲ್ಲಿ ಚಟುವಟಿಕೆ ಶುರುಮಾಡುವ ಈ ಒಂದು ಅವಕಾಶವನ್ನು ಕಳೆದುಕೊಳ್ಳಕೂಡದು ಎಂದು ಹೇಳಿದ. ಅವರೆಲ್ಲ ಹಿಂಜರಿದರು. ಫಕೀರ, ಶಂಕರ, ಜಂಬಣ್ಣ ಈ ಮೂವರಂತೂ ಸುತಾರಾಮ್ ಸಾಧ್ಯವಿಲ್ಲ ಎಂದು ಕೈ ಕೊಡವಿಬಿಟ್ಟರು. ಮಲ್ಲೇಶಿ ಕೂಡ ಯಾವುದೋ ನೆಪ ಹೇಳಿ ಹೊರಟುಹೋದ. ರುದ್ರ ನಿರ್ವಾಹವಿಲ್ಲದೆ ಅಜ್ಜಂಪುರದ ರುಕ್ಕೇಶಿ ಮತ್ತು ಆತನ ಮೂವರು ಗೆಳೆಯರನ್ನು ಕರೆತಂದು ಒಂದು ಕರಪತ್ರ ಅಚ್ಚು ಮಾಡಿಸಿದ. ಅದರಲ್ಲಿ, ”ಹಿಂದುಳಿದ ವರ್ಗಕ್ಕೆ ಸೇರಿದ ತಿಪ್ಪಣ್ಣ ಎಂಬ ಆಧುನಿಕ, ವಿದ್ಯಾವಂತ ತರುಣ ಲಿಂಗಾಯತರ ಕನ್ಯೆ ಕುಮಾರಿ ಶ್ಯಾಮಲಾಳಲ್ಲಿ ಅನುರಕ್ತನಾಗಿ ಇಬ್ಬರೂ ಮದುವೆಯಾಗಲು ಒಪ್ಪಿದ್ದಾರೆ; ಆದರೆ ಶ್ಯಾಮಲಾಳ ಮಾತಾಪಿತೃಗಳು ದಾವಣಗೆರೆಯ ಜಗದ್ಗುರುವಿನ ಬೆಂಬಲದಿಂದ ಈ ಮದುವೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇವರ ವಿರುದ್ಧ ಪ್ರತಿಭಟಿಸಿ ಶ್ಯಾಮಲ ಮತ್ತು ತಿಪ್ಪಣ್ಣನವರ ಸರಳವಿವಾಹ ನಡೆಸಿಕೊಡುವುದು ಕ್ರಾಂತಿ ವೇದಿಕೆಯ ಅಜ್ಜಂಪುರ ಘಟಕದ ತೀರ್ಮಾನವಾಗಿದೆ” ಎಂದು ಬರೆದಿತ್ತು.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಕರಪತ್ರ ಹಂಚುವ ಮುನ್ನ ತಿಪ್ಪಣ್ಣನನ್ನು ನೋಡಿಯೇ ಬಿಡುವುದು ಒಳ್ಳೆಯದೆಂದು ರುದ್ರ ಒಂದು ರಾತ್ರಿ ತಿಪ್ಪಣ್ಣನನ್ನು ಹುಡುಕಿಕೊಂಡು ಹೋದ. ರುದ್ರನ ಅದೃಷ್ಟಕ್ಕೆ ಆತ ಮನೆಯಲ್ಲಿದ್ದ. ರುದ್ರ ಅವನನ್ನು ಹೊರಗೆ ಕರೆದುಕೊಂಡು ಹೋಗಿ ಕ್ರಾಂತಿವೇದಿಕೆಯ ಉದ್ದೇಶ, ತಾವೆಲ್ಲ ತಿಪ್ಪಣ್ಣನ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿರುವುದು, ತಿಪ್ಪಣ್ಣ ಹೋರಾಟಕ್ಕಿಳಿಯ ಬೇಕಾದ ಅನಿವಾರ್ಯತೆ-ಇತ್ಯಾದಿಯನ್ನೆಲ್ಲ ವಿವರಿಸಿದ. ತಿಪ್ಪಣ್ಣ ಎಂದಿಗಿಂತ ಹೆಚ್ಚು ದುರ್ಬಲನೂ ಅಸ್ಪಷ್ಟನೂ ಆಗಿದ್ದ; ರುದ್ರನ ಮುಖವನ್ನು ಅತೀವ ವೇದನೆಯಿಂದ ನೋಡಿದ. ಮಾತನ್ನೇ ಆಡಲಿಲ್ಲ. ತಿಪ್ಪಣ್ಣನ ಸ್ಥಿತಿಯನ್ನು ಕಂಡ ರುದ್ರ ಧೈರ್ಯ ತುಂಬಲು ಇನ್ನಷ್ಟು ಉಪನ್ಯಾಸ ನೀಡಿದ. ”ನೀನು ಹೆದರಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಅಜ್ಜಂಪುರದ ರುಕ್ಕೇಶಿ ನಮ್ಮ ಹಿಂದೆ ಇದ್ದಾರೆ. ಮಂತ್ರಿಗಳನ್ನೇ ನಡುಗಿಸಿದ ಅರಸೀಕೆರೆಯ ಕ್ರಾಂತಿವೇದಿಕೆ ನಿಮ್ಮ ಪ್ರಕರಣವನ್ನು ಕೇಳಿ ಕಿಡಿಕಿಡಿಯಾಗಿ ನಿಂತಿದೆ. ಈ ಊರಿನವರ ಉದ್ಧಟತನ, ಗೂಂಡಾಗಿರಿ ವಿಪರೀತವಾಗಿದೆ; ಇಲ್ಲಿ ನಾವು ಈಗ ಪ್ರತಿಭಟಿಸದಿದ್ದರೆ ಮೇಲುಜಾತಿಯ ದಬ್ಬಾಳಿಕೆ ನಮ್ಮನ್ನೆಲ್ಲ ಬಲಿ ತೆಗೆದುಕೊಳ್ಳಲಿದೆ.”
”ನೀವು… ನೀವು…” ಎಂದ ತಿಪ್ಪಣ್ಣ ಸುಮ್ಮನಾದ.
”ಸರಿಯಾಗಿ ಹೇಳು. ಕ್ರಾಂತಿಗೆ ಮೊದಲು ಸ್ಪಷ್ಟತೆ, ಖಚಿತತೆ ಅಗತ್ಯ” ಅಂದ ರುದ್ರ.
”ನೀವು… ಹೇಳೋದರಲ್ಲಿ ಒಂದು ಮಾತೂ ಸತ್ಯವಲ್ಲ. ನಾನು ಯಾರಿಗೂ ಹೆದರಿಕೊಂಡಿಲ್ಲ. ಇಲ್ಲಿ ಪ್ರತಿಭಟನೆ… ಇಲ್ಲ… ಯಾವುದಕ್ಕೂ ಕಾರಣವಿಲ್ಲ.”
”ಹೇಗೆ? ನಿನ್ನ ಮದುವೆಗೆ ಅಡ್ಡಗಾಲು ಹಾಕ್ತಿರೋದು ನಿಜವಲ್ಲವೆ? ಇದು ಜಾತಿಯ ಪ್ರತಿಷ್ಠೆಯಿಂದ ಆಗ್ತಿರೋದು ಅಲ್ಲವೆ? ಶ್ಯಾಮಲ ತಂದೆ ಮಲ್ಲಯ್ಯ ಹರಯದಲ್ಲಿ ಅನೇಕರ ಕೊಲೆ ಮಾಡಿದ ಸುದ್ದಿ ಎಲ್ಲ ಸುಳ್ಳೆ?”
ತಿಪ್ಪಣ್ಣ ತಲೆತಗ್ಗಿಸಿ ಸುಮ್ಮನಿದ್ದ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಅವನ ಎದುರು ತನ್ನ ಮಾತೆಲ್ಲ ಕೋಣದ ಮುಂದಿನ ಕಿಂದರಿಯೆಂದು ಒಮ್ಮೆ ರುದ್ರನಿಗೆ ಅನ್ನಿಸಿದರೂ ತಿಪ್ಪಣ್ಣನ ಮುಖದ ತೀವ್ರ ವೇದನೆಯಿಂದ ತಾನು ಅತ್ಯಂತ ಮೂರ್ಖನಂತೆ ಬಡಬಡಿಸುತ್ತಿರುವುದು ಗೊತ್ತಾಯಿತು. ತಿಪ್ಪಣ್ಣ ಜ್ಞಾನಿಯಂತೆ ಸುಮ್ಮನಿರಲಿಲ್ಲ. ಕೇವಲ ಏನೂ ಅರಿಯದ ಹಸುವಿನಂತೆ, ಸುತ್ತಣ ಎಲ್ಲರೂ ತನ್ನ ಯಾವುದೋ ಕೋಮಲ ಅನ್ನಿಸಿಕೆಯನ್ನು ಜಜ್ಜಿ ಹಾಕುತ್ತಿರುವ ವೇದನೆ ಅವನಲ್ಲಿತ್ತು. ಅದನ್ನು ಹೇಳುವ ಇಷ್ಟವಾಗಲಿ, ಶಕ್ತಿಯಾಗಲಿ, ಜಾಣತನವಾಗಲಿ ತಿಪ್ಪಣ್ಣನಲ್ಲಿರಲಿಲ್ಲ. ರುದ್ರ ಕ್ಷಣ ಸುಮ್ಮನಾದ. ತಿಪ್ಪಣ್ಣ ನಿಟ್ಟುಸಿರುಬಿಟ್ಟ. ಅದು ಕೂಡ ರುದ್ರನಿಗೆ ಗೊತ್ತಾದೀತೆಂಬ ಅಳುಕು ಅವನಲ್ಲಿತ್ತು. ತುಂಬ ಕಷ್ಟಪಟ್ಟು ತಿಪ್ಪಣ್ಣ ಹೇಳಿದ: ”ಬೇಸರ ಮಾಡಿಕೊಳ್ಳಬೇಡಿ. ದಯವಿಟ್ಟು ತಪ್ಪು ತಿಳಿಯಬೇಡಿ.”
ಅದು ತಿಪ್ಪಣ್ಣ ”ದಯವಿಟ್ಟು ಹೋಗಿ” ಅನ್ನುವ ರೀತಿಯಾಗಿತ್ತು. ರುದ್ರ ಅಲ್ಲಿಂದ ಹೊರಡಲೇಬೇಕಾಯಿತು. ಕರಪತ್ರಗಳನ್ನು ಹಂಚಲಾಗಲೇ ಇಲ್ಲ. ಕ್ರಾಂತಿ ವೇದಿಕೆ ಹಾಗೇ ಉಳಿಯಿತು.
ತಿಪ್ಪಣ್ಣ ವಿಚಿತ್ರ ಚಿಂತೆಗೆ, ಕಾಯಿಲೆಯ ರೀತಿಯ ದುಗುಡಕ್ಕೆ ಸಿಕ್ಕಿರಲು ಕಾರಣ ಇಲ್ಲದಿರಲಿಲ್ಲ. ರುದ್ರ ಹೇಳಿದ್ದರಲ್ಲಿ ನಿಜ ಕೂಡ ಇತ್ತು. ಸುದ್ದಿ ದಾವಣಗೆರೆಯ ಜಗದ್ಗುರುವಿನವರೆಗೆ ಮುಟ್ಟಿತ್ತು. ಮಲ್ಲಯ್ಯ ಎಂದೂ ಹೀಗೆ ವರ್ತಿಸಿದವನಲ್ಲ. ಒಂದು ಏಟು, ಎರಡು ತುಂಡು ಎಂಬುದರಲ್ಲಿ ನಂಬಿದ್ದ ಮಲ್ಲಯ್ಯ ತನ್ನ ಕುಟುಂಬದ ಈ ಸಮಸ್ಯೆಗೆ ಬೇರೆ ಬೇರೆ ರೀತಿಯ ಪರಿಹಾರ ಹುಡುಕುತ್ತಿದ್ದುದು ವಿಚಿತ್ರವಾಗಿತ್ತು.
5
ದಾವಣಗೆರೆಯ ಹಿಂಬಾವಿ ಮಠದ ಜಗದ್ಗುರು ಶ್ರೀ ಶ್ರೀ ವಿಶ್ವೇಶ್ವರರು ಪ್ರಗತಿಶೀಲ ಸ್ವಾಮಿ ಎಂದು ಹೆಸರು ಮಾಡಿದ್ದರು. ಚಿಕ್ಕ ವಯಸ್ಸಿನಲ್ಲೇ ಗದ್ದಿಗೆ ಏರಿದ ಸ್ವಾಮಿ ಅರ್ಜೆಂಟೈನಾ, ಬ್ರೆಜಿಲ್, ಕೆನಡಾ ಮುಂತಾದ ದೇಶಗಳಿಗೆ ಹೋಗಿ ವಿದ್ವತ್ಪೂರ್ಣ ಭಾಷಣ ಮಾಡಿದ್ದಾರೆಂದು ಅವರ ಭಕ್ತರು ಭಯಭಕ್ತಿಯಿಂದ ಹೇಳುತ್ತಿದ್ದರು. ಅನೇಕ ಸರಳ ವಿವಾಹಗಳನ್ನು ಮಾಡಿರುವುದಲ್ಲದೆ, ಜನರಲ್ಲಿನ ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳ ವಿರುದ್ಧ ಹೋರಾಟ ನಡೆಸಿದ್ದರು. ಕೆಟ್ಟತನ, ವ್ಯಭಿಚಾರ, ಸುಳ್ಳು ಹೇಳುವುದರ ವಿರುದ್ಧ ಕೂಡ ಹೋರಾಡುವ ಉದ್ದೇಶ ಹೊಂದಿದ್ದರು. ಸ್ವಾಮಿ ಎಷ್ಟೇ ಶುಚಿಯಾದ ಜೀವನ ನಡೆಸಿದ್ದರೂ ಅವರ ಅನೇಕ ಹೇಳಿಕೆಗಳು ಪೂರ್ತಿ ಸತ್ಯವಲ್ಲ ಎಂದು ಸ್ಥಳೀಯ ಪತ್ರಿಕೆಯ ಲಕ್ಷ್ಮಣ ತಳವಾರ ಎಂಬ ಹುಡುಗ ವಾದಿಸಿದ್ದ; ಇವತ್ತು ಹೀಗೆ ವಾದಿಸುವಾತ ನಾಳೆ ಸ್ವಾಮೀಜಿ ಕಳ್ಳತನ, ವ್ಯಭಿಚಾರದಿಂದ ಮುಕ್ತರಲ್ಲ ಎಂದು ವಾದಿಸಿಬಿಟ್ಟಾನು ಎಂಬುದು ಸ್ವಾಮಿಗಳ ಭಯವಾಗಿತ್ತು. ಇದರಿಂದಾಗಿ ಮುಂದಿನ ಘಟ್ಟದ ಚಳವಳಿ ಅಂದರೆ ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವುದರ ವಿರುದ್ಧ-ಆರಂಭಿಸುವುದು ಸ್ವಲ್ಪ ಕಷ್ಟವಾಗಿತ್ತು.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಈ ಜಗದ್ಗುರು ಮಲ್ಲಯ್ಯನ ಮನೆಗೆ ಬಂದಾಗ ಸಂಜೆಯಾಗಿತ್ತು. ಇತರೇ ಸ್ವಾಮಿಗಳಂತೆ ದೊಡ್ಡ ಗದ್ದಲ, ವೈಭವದಿಂದ ಬರದೆ ವಿಶ್ವೇಶ್ವರ ಜಗದ್ಗುರು ತಮ್ಮ ಕಾರಿನಲ್ಲಿ ಸರಳವಾಗಿ ಬಂದರು; ಇಷ್ಟರಲ್ಲಿ ಪೂರ್ತಿ ಮೌನದಿಂದಿರತೊಡಗಿದ್ದ ಮಲ್ಲಯ್ಯ ವಿಷಯವನ್ನೆಲ್ಲ ದಾವಣಗೆರೆಯಲ್ಲೇ ಹೇಳಿದಂತಿತ್ತು. ಶ್ಯಾಮಲ ಮತ್ತು ಅವಳ ತಾಯಿ ಗಿರಿಜವ್ವ ಸ್ವಾಮಿಯನ್ನು ಬರಮಾಡಿಕೊಂಡು ಅವರಿಗಾಗಿಯೇ ಪ್ರತ್ಯೇಕ ಕೋಣೆಯನ್ನು ಸಿದ್ಧಪಡಿಸಿ ಅವರ ಸೌಕರ್ಯ ನೋಡಿಕೊಂಡರು. ಪೂಜೆ, ಊಟ, ಉಪಚಾರವೆಲ್ಲ ಮುಗಿದ ಮೇಲೆ ಜಗದ್ಗುರು ಮಲ್ಲಯ್ಯ ಮತ್ತು ಗಿರಿಜವ್ವನಿಗೆ ಶ್ಯಾಮಲಾಳನ್ನು ತಮ್ಮ ಕೋಣೆಗೆ ಕಳಿಸಲು ಹೇಳಿದರು.
ಸ್ವಾಮೀಜಿ ಸಂಕೋಚದ ಮನುಷ್ಯ. ಶ್ಯಾಮಲ ಕೋಣೆಯನ್ನು ಪ್ರವೇಶಿಸಿದಾಗ ಆಕೆಯನ್ನು ನೋಡಿದ್ದು ಬಿಟ್ಟರೆ ಅವರು ಆಕೆಯ ಮುಖವನ್ನೇ ನೋಡಲಿಲ್ಲ. ಆಕೆ ಬಂದು ತಾವು ಕೂತ ಸೋಫಾದಲ್ಲಿಯೇ ಕೂತ ಮೇಲೆ ಹೇಗೆ ಶುರು ಮಾಡುವುದೆಂದು ತೋಚದೆ ಸುಮ್ಮನೆ ಕೂತರು.
ಕೆಲವು ನಿಮಿಷಗಳಾದ ಮೇಲೆ ಕೆಮ್ಮಿದರು, ”ನೀವು ಆ ತರುಣನನ್ನು ತುಂಬ ಇಷ್ಟಪಡ್ತೀರಾ?” ಎಂದು ಕೇಳಿದರು.
ಶ್ಯಾಮಲಾಗೆ ಇಷ್ಟರಲ್ಲೇ ಸ್ವಾಮೀಜಿಯ ಅಂಜಿಕೆ ಗೊತ್ತಾಗಿತ್ತು. ಉತ್ತರಿಸುವ ಅಗತ್ಯವಿಲ್ಲ ಎಂದು ಕೂಡ ಗೊತ್ತಾಗಿತ್ತು. ಸುಮ್ಮನೆ ಕೂತಳು. ಕೆಲವು ನಿಮಿಷಗಳೇ ಸರಿದುಹೋದವು. ಆಕೆಗೆ ಅವರ ಮನನೋಯಿಸುವ ಇಷ್ಟ ಕೂಡ ಇರಲಿಲ್ಲ; ಹಟಮಾರಿ ಹೆಣ್ಣೆಂದು ತೋರಿಸಿಕೊಳ್ಳುವ ಇಷ್ಟ ಕೂಡ ಇರಲಿಲ್ಲ. ಆಕೆಯ ಪ್ರಕಾರ ಇದರಲ್ಲೆಲ್ಲ ಹಟ ಮಾಡುವುದಕ್ಕೆ ಯಾವ ಕಾರಣವೂ ಇದ್ದಂತಿರಲಿಲ್ಲ. ಆದ್ದರಿಂದ ಅವರ ಪ್ರಶ್ನೆಗೆ ಸಂಬಂಧವೇ ಇಲ್ಲದ ಪ್ರಶ್ನೆಯನ್ನೇ ಕೇಳಿದಳು, ”ಮಠದ ಹತ್ತಿರದ ಸಂಪಿಗೆ ಮರ ಇನ್ನೂ ಇದೆಯ?”
ಸ್ವಾಮಿ ನೆಲ ನೋಡುತ್ತಲೇ ನಕ್ಕರು. ”ಸಂಪಿಗೆ ಮರ, ತುಂಗಭದ್ರಾ ನದಿ, ನಾಲ್ಕು ಜಿಂಕೆ, ಎರಡು ನವಿಲು ಇವೆ” ಅಂದರು.
”ನಾವಲ್ಲಿಗೆ ಬಂದಾಗ ನಾನು ಲಂಗದ ಹುಡುಗಿ, ನೀವು ತುಂಬ ಚಿಕ್ಕವರು.”
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
”ಈಗ ಕೂಡ ದೊಡ್ಡವನು ಅನ್ನಿಸ್ತಾನೆ ಇಲ್ಲ. ದೊಡ್ಡವನಂತೆ ವರ್ತಿಸುವುದನ್ನೇ ಜನ ನಿರೀಕ್ಷಿಸುತ್ತಾರೆ. ಗಂಭೀರ ಮಾತನ್ನು ಇಷ್ಟಪಡುತ್ತಾರೆ. ಹುಡುಗಾಟದ ಮನಸ್ಸು ಚಡಪಡಿಸುತ್ತೆ, ನಿನ್ನ ಹತ್ತಿರ ಕೂತು ಇಷ್ಟು ಪ್ರಾಮಾಣಿಕವಾಗಿ ನಾನು ಮಾತಾಡ್ತಿರೋದನ್ನು ಕಂಡು ನನಗೇ ಆಶ್ಚರ್ಯವಾಗ್ತಿದೆ ಮರಿ.”
”ನೀವು ‘ನನಗೆ’ ಅನ್ನಬಾರದು, ‘ನಮಗೆ ಆಶ್ಚರ್ಯವಾಗುತ್ತೆ’ ಅನ್ನಬೇಕು.”
”ಮನುಷ್ಯ ಬಾಯಿ ಬಿಟ್ಟೊಡನೆ ಒಂದು ಸುಳ್ಳನ್ನ ಹೇಳಿರುತ್ತಾನೆ.”
”ನನ್ನ ತಿಪ್ಪಣ್ಣ ಅದಕ್ಕೇ ಹೆಚ್ಚು ಮಾತನ್ನೇ ಆಡಲ್ಲ.”
”ತಿಪ್ಪಣ್ಣ ಯಾರು?”
”ನನ್ನ ತಿಪ್ಪಣ್ಣ.”
ಸ್ವಾಮಿ ನಕ್ಕರು, ಮತ್ತೆ ಮೌನ ಆವರಿಸುವ ಮುನ್ನ ‘ಹೋಗು ಮರಿ’ ಎಂದು ಹೇಳಿದರು. ಆಕೆ ಹೋಗುವಾಗ ಆಶೀರ್ವದಿಸುವ ಆಶೆ ಕೂಡ ಅವರಲ್ಲಿರಲಿಲ್ಲ. ವಿಚಿತ್ರ ನೋವು. ಏನನ್ನೋ ಕಳೆದುಕೊಂಡ ಭಾವನೆ ಅವರಲ್ಲಿತ್ತು. ಇನ್ನೂ ಸಣ್ಣವರಾಗಿ ಕುಗ್ಗಿದಂತೆ ಅವರಿಗೆ ಭಾಸವಾಗತೊಡಗಿತು.
6
ಈ ಕತೆಯನ್ನು ತುಂಬ ಉದ್ದ ಮಾಡುವುದು ಸಾಧ್ಯವಿದೆ. ಆದರೆ ಅದರ ಅಗತ್ಯ ಇಲ್ಲ. ಅಮೃತಾಂಬುಧಿಯ ಅವಾಂತರ ಜನರ ನಡುವೆ ಮಾತ್ರ ಇದು ನಡೆಯುವುದು ಸಾಧ್ಯವಿತ್ತು; ಕಗ್ಗೊಲೆ, ಹಲ್ಲೆ, ಸರಳ ಉತ್ತರಗಳ ಊರು ಅದು. ಮಲ್ಲಯ್ಯ ಮತ್ತೆ ತಿಪ್ಪಣ್ಣನನ್ನು ನೋಡಲಿಲ್ಲ. ಜಗದ್ಗುರುವನ್ನು ಮನೆಗೆ ಕರದುಕೊಂಡು ಬಂದು ನಡೆಸಿದ ಪ್ರಯತ್ನ ಕೊನೆಯದು. ಜಗದ್ಗುರು ಕಾಣಿಕೆ ಪಡೆದು, ಆಶೀರ್ವಾದ ಮಾಡಿ ಹೋಗುವಾಗ ಅವರ ಮುಖ ಕುಂದಿಹೋದಂತಿತ್ತು. ಅವರು ನಿದ್ರೆಗೆಟ್ಟು ಸೊರಗಿದಂತಿದ್ದರು. ಹೋಗುವ ಮುನ್ನ ಮಲ್ಲಯ್ಯನಿಗೆ ಅವರು ಏನನ್ನೂ ಹೇಳಲಿಲ್ಲ; ಶ್ಯಾಮಲ ಏನು ಹೇಳಿದಳೆಂದು ಕೂಡ ಹೇಳಲಿಲ್ಲ. ಸುಮ್ಮನಿದ್ದರು. ತಮ್ಮ ತತ್ವಗಳ ಬುನಾದಿ ಛಿದ್ರಗೊಂಡಂತೆ ಇದ್ದರು. ಮಲ್ಲಯ್ಯನಲ್ಲೂ ಉತ್ಸಾಹ ಉಳಿದಿರಲಿಲ್ಲ.
ಮಲ್ಲಯ್ಯನಲ್ಲಿ ಮೋಸಹೋದ ಭಾವನೆ, ಮಗಳಿಂದ ಅನ್ಯಾಯವನ್ನನುಭವಿಸಿದ ಭಾವ ಇತ್ತೆ? ತನ್ನ ಅಭ್ಯಾಸ, ಆಚಾರದ ಹಂದರ ಕುಸಿದಿದ್ದಕ್ಕೆ ನೋವಾಗಿತ್ತೆ? ಒಬ್ಬಳೇ ಮಗಳ ಮನಸ್ಸು ನೋಯಿಸಲಾರದೆ ಸಂಕಟವಾಗಿತ್ತೆ? ಈ ಯಾವ ಪ್ರಶ್ನೆಗೂ ಉತ್ತರವಿಲ್ಲ.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಅದೊಂದು ದಿನ. ಶ್ಯಾಮಲಾಳಲ್ಲಿ ನಿಷ್ಕಾರಣವಾಗಿ ಸಿಟ್ಟು ಉಕ್ಕಿದ ದಿನ. ಅನ್ನಿಸಿದನ್ನು ಹೇಳಿ, ಹೇಳಿದ್ದಕ್ಕೆ ತಕ್ಕ ಕ್ರಿಯೆಯಲ್ಲಿ ತೊಡಗಿದ್ದರೆ ಎಲ್ಲರನ್ನೂ ತುಂಬುತ್ತಿದ್ದ ಆತಂಕ, ವೇದನೆ ಕಮ್ಮಿಯಾಗುತ್ತಿತ್ತೆಂದು ಆಕೆಗೆ ಅನ್ನಿಸಿತು. ಯಾಕೆಂದರೆ ತಿಪ್ಪಣ್ಣನ ತಂದೆ ಹಾಸಿಗೆ ಹಿಡಿದಿದ್ದ; ತಿಪ್ಪಣ್ಣ ಕೂಡ ಸರಿಯಾಗಿ ಊಟ ಮಾಡದೆ ಬಳಲಿದ್ದ. ಮಲ್ಲಯ್ಯ ತೋಟ ಸೇರಿದ್ದ. ಮನೆಗೆ ಬಾರದಿರುವ ಅಪ್ಪ; ನಿಟ್ಟುಸಿರಿಡುತ್ತ ಕೂರುವ ಅಮ್ಮ. ಏನೋ ಆಗಬಾರದ್ದು ಆದೀತೆಂಬ ಭಯ ಶ್ಯಾಮಲಾಳನ್ನು ತುಂಬಿತ್ತು. ಇದೆಲ್ಲ ಯಾಕೆ? ಮದುವೆಯೇ ಆಗದಿದ್ದರೆ ಏನಾಗುತ್ತದೆ? ಆಕೆಯ ಎದುರು ಸವಾಲುಗಳು ಕೂಡ ಇರಲಿಲ್ಲ; ಯಾವ ಬೆದರಿಕೆಯೂ ಇರಲಿಲ್ಲ. ಕೊಲೆ, ಸಾವಿಗೆ ಆರಂಭದಲ್ಲಿ ಹೆದರಿದ್ದು ನಿಜ. ಈಗ ಆ ಭಯವೂ ಹೊರಟುಹೋಗಿತ್ತು.
ಅವತ್ತು ತಿಪ್ಪಣ್ಣನ ಜೊತೆಗೆ ಹೊರಟಳು.
ಅಮ್ಮ ಇಬ್ಬರನ್ನೂ ಕರೆದಳು. ಕರೆದ ಮೇಲೆ ಅವರಿಗೆ ಏನು ಹೇಳುವುದೆಂದು ತೋಚದೆ ಗಿರಿಜವ್ವ ಸುಮ್ಮನೆ ನಿಂತಳು. ”ನಿಮಗೆ ಏನು ಹೇಳಬೇಕೋ ತಿಳೀತಿಲ್ಲ. ನೀನು ಚಿಕ್ಕ ಹುಡುಗಿ, ಇವನು ಚಿಕ್ಕ ಹುಡುಗ” ಅಂದಳು.
ಅತ್ಯಂತ ಭಂಡ ವಾಕ್ಯವನ್ನು ಶ್ಯಾಮಲ ಬಳಸಿದಳು: ”ನಾವು ಮದುವೆ ಆಗದಿದ್ದರೆ ಎಲ್ಲ ಸರಿಹೋಗುತ್ತಿತ್ತ ಅಮ್ಮ?” ಆಗಲೇ ಮದುವೆಯಾದದ್ದು ಸೂಚಿಸಿದ್ದಳು.
ಗಿರಿಜವ್ವ ತಲೆಯಾಡಿಸಿದಳು, ”ಇಲ್ಲ” ಅಂತ.
ಅಲ್ಲಿಂದ ಹೊರಟರು. ತಿಪ್ಪಣ್ಣ ಶ್ಯಾಮಲಾಳ ಮುದ್ದು ಹಕ್ಕಿ. ಆತ ಪ್ರತಿಭಾವಂತನಲ್ಲ, ಸುಂದರನೂ ಅಲ್ಲ, ಹೆಚ್ಚು ಮಾತು ಕೂಡ ಆಡಲಾರ.
”ನೀನು ನನ್ನನ್ನು ಮದುವೆಯಾಗೋಲ್ಲ ಅಂದಿದ್ದರೆ ಎಲ್ಲ ಸರಿಹೋಗ್ತಿತ್ತು ಅಲ್ಲವಾ?” ಅಂದಳು. ಅನ್ನಬೇಕಾದ್ದನ್ನು ಅನ್ನಲು ಅವತ್ತು ಮನಸ್ಸು ಮಾಡಿದ್ದಳು.
ಆದರೆ ತಿಪ್ಪಣ್ಣ ಭಂಡ ಮಾತಾಡಲು ತೀರ್ಮಾನಿಸಿರಲಿಲ್ಲ. ಸುಮ್ಮನೆ ನಡೆದ. ಹುಲ್ಲು, ಕಲ್ಲಿನ ಹಾದಿ; ಅದು ತನ್ನ ತೋಟಕ್ಕೆ ಹೋಗುತ್ತದೆಂದು ಶ್ಯಾಮಲಾಗೆ ಗೊತ್ತಿತ್ತು. ತಿಪ್ಪಣ್ಣ ಬಸವಳಿದುಹೋಗಿದ್ದ; ಆದರೆ ಅವನ ಕಣ್ಣಿನ ಕಳೆ, ಮುಖದ ಹೊಳಪು ಕುಂದಿರಲಿಲ್ಲ. ಹಾಗೇ ಕಾಲು ಹಾಕುತ್ತಲೇ ಇದ್ದ. ಅವನು ಕನಿಷ್ಠ ಹುಬ್ಬು ಗಂಟುಹಾಕಿರಬೇಕೆಂದು ನೋಡಿದಳು. ಇಲ್ಲ, ಪ್ರಸನ್ನನಾಗಿದ್ದ; ಸಿನಿಮಾ, ಕಾದಂಬರಿ, ಪುರಾಣಗಳ ನಾಯಕರ ಒಂದಂಶವೂ ಇಲ್ಲದ, ಎಲ್ಲ ಹಳಸಲುತನಕ್ಕೆ ಹೊರಗಾದ, ಎಲ್ಲ ಶೈಲಿಗಳಿಂದ ಮುಕ್ತನಾದ ಸರಳ. ಅದಕ್ಕೇ ಆಕೆಗೆ ಅವನು ಹಕ್ಕಿ ಅನ್ನಿಸುತ್ತಿತ್ತು. ಯಾವುದೋ ವಿಚಿತ್ರ ಮರ ಅನ್ನಿಸುತ್ತಿತ್ತು. ತೋಟದ ಹಾದಿ. ತಮಗೆ ಗೊತ್ತಿಲ್ಲದಂತೆಯೇ ತೋಟದ ಹಾದಿ ತುಳಿದಿದ್ದರು. ತಿಪ್ಪಣ್ಣನ ಮನಸ್ಸು ಕೂಡ ವಿಚಿತ್ರ ಅನ್ನಿಸಿಕೆಗಳಿಂದ ತುಂಬಿತ್ತು. ಅವನು ಆಕೆಗಿಂತ ಗೊಂದಲದ ಹುಡುಗ.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಅವಳ ಮುಖ ನೋಡಿದ. ಐದು ನಿಮಿಷಗಳಷ್ಟು ಕಳೆದ ಮೇಲೆ ಅವಳ ಪ್ರಶ್ನೆಗೆ ಉತ್ತರ ಹೇಳಲು ನಿಂತಿದ್ದ. ಆಕೆಗೆ ಅಷ್ಟರಲ್ಲೇ ತನ್ನ ಪ್ರಶ್ನೆಯೇ ಮರೆತುಹೋಗಿತ್ತು.
”ಗೊತ್ತಾ… ಮಿಸ್.” ಮತ್ತೆ ಮೌನ, ”ನಾನು ನಾಲ್ಕು ಸಲ ಹಾಗೆ ಹೇಳೋಕೆ ಅಂತ ನಿಮ್ಮನ್ನ ಹುಡುಕಿಕೊಂಡು ಬಂದೆ. ನಿಮಗೆ ಬೇಸರ ಆಗುತ್ತೆ ಅಂತ ಹೇಳದೆ ಹಿಂದಕ್ಕೆ ಬಂದೆ. ಇದ್ಕಿಂತ ಇನ್ನೊಂದು ವಿಷಯ…”
ಮತ್ತೆ ನೀರವತೆ. ಇಬ್ಬರೂ ನಡೆಯತೊಡಗಿದರು. ನಡೆಯುತ್ತಲೇ ತಿಪ್ಪಣ್ಣ ಹೇಳಿದ, ”ನಿಮ್ಮ ತಂದೆಯವರನ್ನು ನೆನೆದು ಅತ್ತುಬಿಟ್ಟೆ. ಅವತ್ತು ನಮ್ಮನೆಗೆ ಬಂದಾಗ ಮೇಲುಗಡೆ ಸಿಟ್ಟಿದ್ರೂ ಅವರಿಗೆ ಒಳಗೆ ಆಗ್ತಿದ್ದ ನೋವು ನನಗೆ ಗೊತ್ತಿತ್ತು. ಎರಡು ಸಲ ತೋಟದ ಹತ್ರ ಬಂದು ಹಿಂದಿರುಗಿದೆ. ಯಾಕೆ ಅಂದ್ರೆ… ನಾನು ಹಾಗೆ ‘ಮದುವೆಯಾಗೊಲ್ಲ’ ಅಂದಿದ್ರೆ ಅವರಿಗೂ ಬೇಸರ ಆಗ್ತಿತ್ತು.”
”ಅದು ನಿಮಗೆ ಹ್ಯಾಗೆ ಗೊತ್ತು?” ಅಂದಳು ಶ್ಯಾಮಲ.
ತೋಟ ಹತ್ತಿರವಾಯಿತು. ಪ್ರತಿಯೊಂದು ಮಾತನ್ನು ಆಳದಿಂದ ಕಿತ್ತು ತೆಗೆದಂತೆ ಮಾತಾಡುವ ತಿಪ್ಪಣ್ಣ ಮತ್ತೆ ಪಾತಾಳಗರುಡದಂತೆ ತನ್ನ ಆಳಕ್ಕೆ ಇಳಿದಿದ್ದ. ಸುಮ್ಮನೇ ಇದ್ದ. ಕೊನೆಗೆ ಹೇಳಿದ: ”ನನಗೆ ಗೊತ್ತು.”
ಹಚ್ಚಹಸಿರು ತೋಟ. ನಾನೂರು ತೆಂಗಿನ ಮರಗಳ, ಶ್ಯಾಮಲಾಳ ಮೆಚ್ಚಿನ ಮೂರು ರಸಪೂರಿ ಮಾವಿನ ಮರಗಳ, ದೊಡ್ಡ ಬಾವಿ, ತೋಟದ ಮನೆಯುಳ್ಳ ಜಾಗ. ಇಬ್ಬರಲ್ಲೂ ಇದ್ದಕ್ಕಿದ್ದಂತೆ ನೆಮ್ಮದಿ, ಶಾಂತಿ, ಉತ್ಸಾಹ ನೆಲೆಸತೊಡಗಿತ್ತು. ಗೇಟು ತೆಗೆದು ನಡೆಯುತ್ತಿದ್ದಂತೆ ದೂರದಲ್ಲಿ, ಬದುವಿನ ಮೇಲೆ, ಮಾಸಿದ ಬಟ್ಟೆಯಲ್ಲಿ ಅಪ್ಪ ಮಲ್ಲಯ್ಯ ಕಾಣಿಸಿದ. ಆತ ಕತ್ತು ತಗ್ಗಿಸಿ ಯೋಚಿಸುತ್ತಿದ್ದ. ಬಡವಾಗಿದ್ದ. ಅನೇಕ ದಿನಗಳಿಂದ ಏನನ್ನು ತಿಂದಿರಲಿಲ್ಲ ಮಲ್ಲಯ್ಯ. ಆತನನ್ನು ನೋಡಿ ಶ್ಯಾಮಲ, ತಿಪ್ಪಣ್ಣ ನಿಂತರು. ಮಲ್ಲಯ್ಯ ಆಳುಗಳಿಗೆ ಅದೇನೋ ಹೇಳಿದ. ಆಳು ಮಾಲಿಂಗ ಕೂಡಲೆ ಮರಹತ್ತಿ ಎಳನೀರು ಇಳಿಸಿ ಶ್ಯಾಮಲ, ತಿಪ್ಪಣ್ಣನಿದ್ದ ಜಾಗಕ್ಕೆ ತಂದ. ಮಲ್ಲಯ್ಯ ಹಾಗೆಯೇ ಕುಳಿತಿದ್ದ. ತನ್ನನ್ನು ಹೆತ್ತ ತಂದೆ ನೇರ, ಕಠೋರ ಮನುಷ್ಯ. ಬಂಡೆಯ ಸಂದಿಯಲ್ಲಿ ಮರ ಬೇರುಬಿಟ್ಟಂತೆ, ಬೇರುಬಿಟ್ಟು ಬಂಡೆಯನ್ನು ಒಡೆದಂತೆ; ಎಳೆಯ ಹೆಣ್ಣಿನಲ್ಲಿ ಹೊಸ ಜೀವ ಮೊಳೆತಂತೆ, ಮೊಳೆತು ಅವಳನ್ನು ಅಲ್ಲಾಡಿಸಿದಂತೆ ಅಥವಾ ಪರಂಪರಾಗತ ಬದುಕಿನಲ್ಲಿ ಮುಳುಗಿದವ, ಎಲ್ಲ ಜಟಿಲವಾದ ಆಚಾರಗಳಲ್ಲಿ ಬಂಧಿಸಲ್ಪಟ್ಟವ ಒಂದು ದಿನ ಪೂರ್ಣ ನೀಲಿ ಆಕಾಶ, ಬೆಳ್ಳಕ್ಕಿಗಳ ಹಿಂಡು, ಅದರೊಂದಿಗೆ ಅನಂತತೆಯ ಕಾಣ್ಕೆ ಕಂಡಂತೆ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಈ ಸಲ ತಿಪ್ಪಣ್ಣ ತನ್ನ ತಂದೆಯನ್ನು ನೋಡುವಂತೆಯೇ ನೋಡಿದ. ಅವನ ಕೈ ಶ್ಯಾಮಲಾಳ ಹಸ್ತಕ್ಕಾಗಿ ಕಾತರಿಸಿತು. ಶ್ಯಾಮಲ ಅವನ ಇಡೀ ತೋಳನ್ನು ಅಪ್ಪಿ ನಿಂತಳು. ಮಲ್ಲಯ್ಯ ಹಾಗೇ ತಲೆತಗ್ಗಿಸಿ ಕೂತಿದ್ದ.
*
ಈ ಕೊನೆಯ ಟಿಪ್ಪಣಿ ಅಗತ್ಯವೋ ಇಲ್ಲವೋ ಗೊತ್ತಿಲ್ಲ. ಮಲ್ಲಯ್ಯ ತೀರಿಕೊಂಡ. ಗಿರಿಜವ್ವ ತೋಟದ ಮನೆ ಸೇರಿ ಜೀವಿಸತೊಡಗಿದಳು. ತಿಪ್ಪಣ್ಣನ ಬಗ್ಗೆ ವಿಚಿತ್ರವೊಂದು ಶ್ಯಾಮಲಾಗೆ ಗೊತ್ತಾಗಿತ್ತು. ಆತನೇ ಒಂದು ದಿನ ಹೇಳಿದ, ”ಆಗೊಲ್ಲ, ನನ್ನಿಂದ ಆಗೋಲ್ಲ.”
ಅಂದರೆ ತಿಪ್ಪಣ್ಣ ಷಂಡನಂತೆ ಆಗಿದ್ದ. ಇದನ್ನು ಕೇಳಿದ ಶ್ಯಾಮಲ ಗಟ್ಟಿಯಾಗಿ ನಕ್ಕಿದ್ದಳು. ಹೊಟ್ಟೆ ಹಿಡಿದುಕೊಂಡು ನಕ್ಕಿದ್ದಳು. ಹಾಗೆಂದರೇನೆಂದು ಕೇಳಿದ್ದಳು. ತಿಪ್ಪಣ್ಣನಿಗೆ ಅವಳ ಹುಡುಗಾಟ ನೋಡಿ ಖುಷಿಯಾಗಿತ್ತು. ಹಾಗೆಯೇ ಅವನ ಆಳದ ನೋವು, ಹೊಣೆಗಾರಿಕೆಯೆಲ್ಲ ಕರಗಿಹೋಗಿತ್ತು. ಸಹಜವಾಗಿದ್ದ… ಹಕ್ಕಿಯಂತೆ, ಮರದಂತೆ, ಮನುಷ್ಯನಂತೆ ಸಹಜವಾಗಿದ್ದ.
ಆಮೇಲಿನ ಸಂಸಾರದ ತಾಪತ್ರಯಗಳನ್ನೆಲ್ಲ ವಿವರಿಸುವ ಅಗತ್ಯವಿರಲಾರದು.

ಪಿ. ಲಂಕೇಶ್ (1935-2000): ಜನನ, ಮಾರ್ಚ್ 8, 1935, ಶಿವಮೊಗ್ಗೆಗೆ 14.4 ಕಿ.ಮೀ. ದೂರದಲ್ಲಿರುವ ಕೊನಗವಳ್ಳಿ ಎಂಬ ಗ್ರಾಮದಲ್ಲಿ. ಶಿವಮೊಗ್ಗೆಯಲ್ಲಿ ಇಂಟರ್ ಮೀಡಿಯಟ್, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಇಂಗ್ಲಿಷ್ ಆನರ್ಸ್, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. 1959ರಿಂದ 1962ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕ; ಆನಂತರ ಸೆಂಟ್ರಲ್ ಕಾಲೇಜ್‌ನಲ್ಲಿ ಮೂರು ವರ್ಷ, ಸರ್ಕಾರಿ ಫಸ್ಟ್‌ಗ್ರೇಡ್ ಕಾಲೇಜ್‌ನಲ್ಲಿ ಒಂದು ವರ್ಷ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹನ್ನೆರಡು ವರ್ಷ ಅಧ್ಯಾಪಕ. 1978ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ. 1980ರಲ್ಲಿ ‘ಲಂಕೇಶ್ ಪತ್ರಿಕೆ’ ಆರಂಭ. ಕಥಾ ಸಂಕಲನಗಳು: ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ, ಮಂಜು ಕವಿದ ಸಂಜೆ. ಕಾದಂಬರಿಗಳು: ಬಿರುಕು, ಮುಸ್ಸಂಜೆಯ ಕಥಾಪ್ರಸಂಗ, ಅಕ್ಕ. ನಾಟಕಗಳು: ಟಿ. ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಪೊಲೀಸರಿದ್ದಾರೆ ಎಚ್ಚರಿಕೆ, ತೆರೆಗಳು, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ, ಸಿದ್ಧತೆ, ಸಂಕ್ರಾಂತಿ, ಗುಣಮುಖ. ಅನುವಾದಗಳು: ದೊರೆ ಈಡಿಪಸ್ ಮತ್ತು ಅಂತಿಗೊನೆ, ಪಾಪದ ಹೂವುಗಳು. ಗದ್ಯ ಬರಹಗಳು: ಪ್ರಸ್ತುತ, ಕಂಡದ್ದು ಕಂಡಹಾಗೆ, ಟೀಕೆ-ಟಿಪ್ಪಣಿ(ಭಾಗ 1, 2, 3), ರೂಪಕ ಲೇಖಕರು, ಸಾಹಿತಿ ಸಾಹಿತ್ಯ ವಿಮರ್ಶೆ, ಮರೆಯುವ ಮುನ್ನ. ಕವನ ಸಂಕಲನಗಳು: ತಲೆಮಾರು, ಅಕ್ಷರ ಹೊಸ ಕಾವ್ಯ(ಸಂಪಾದನೆ), ಚಿತ್ರ ಸಮೂಹ, ನೀಲು ಕಾವ್ಯ(ಸಂಗ್ರಹ-1, 2). ಸಿನಿಮಾಗಳು: ಪಲ್ಲವಿ, ಅನುರೂಪ, ಖಂಡವಿದಕೊ ಮಾಂಸವಿದಕೊ, ಎಲ್ಲಿಂದಲೋ ಬಂದವರು. ಆತ್ಮಕಥನ: ಹುಳಿಮಾವಿನ ಮರ. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಲ್ಲವಿ ಚಿತ್ರ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ; ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ. ಮರಣ, ಜನವರಿ 25, 2000.





