ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ. ಗೇಯುವುದನ್ನು ನಾಲ್ಕು ದಿನ ತಡಮಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲ. ಆದರೆ ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಇಟ್ಟೊಡನೆ ಮಲಗಿಬಿಡುತ್ತದೆ. ಎಷ್ಟು ಹೊಡೆದರೂ ಏಳುವುದಿಲ್ಲ. ಇನ್ನೊಂದು ಕೂಡ ತನ್ನ ಸಹೋದ್ಯೋಗಿಯಂತೆಯೇ ಆಗಿಬಿಡುವ ಸೂಚನೆಗಳಿವೆ. ಮಲಗಿದ್ದು ಒಂದು ಏಟು ಕೊಟ್ಟೊಡನೆ ಏಳುತ್ತದೆ. ಜೊತೆಗಾರ ಏಳುವುದನ್ನೇ ಕಾದು ಕೆಲಸವಿಲ್ಲದ ಬಗ್ಗೆ ಖುಷಿಗೊಳ್ಳುವಂತೆ ಕಂಡುಬರುತ್ತದೆ. ಆದ್ದರಿಂದ ಬಸಲಿಂಗ ಎರಡೂ ಎತ್ತುಗಳನ್ನು ಯಾರಾದರೊಬ್ಬರಿಗೆ ಸಾಟಿಯಲ್ಲಿ ಕೊಟ್ಟು ಹೊಸ ಎತ್ತುಗಳನ್ನು ಹೊಂಚಿಕೊಳ್ಳಬೇಕು. ಮಗುವಿಗೆ ಮೈಯಲ್ಲಿ ಸರಿಯಿಲ್ಲ. ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೆಂಡ್ತಿ ಸಿದ್ಲಿಂಗಿ ಹೇಳುತ್ತಲೇ ಇದ್ದಾಳೆ. ಮಗುವಿನ ಕೆಮ್ಮು ಹೋಗುತ್ತಲೇ ಇಲ್ಲ. ಈ ನಡುವೆ ಬಸಲಿಂಗನಿಗೆ ಇನ್ನೊಂದು ತೊಂದರೆ ಕಾಣಿಸಿಕೊಂಡಿತು. ಈ ತೊಂದರೆ ತನ್ನನ್ನು ಇಷ್ಟೊಂದು ಗಾಸಿಗೊಳಿಸೀತೆಂದು ಬಸಲಿಂಗ ಊಹಿಸಿರಲಿಲ್ಲ. ತನ್ನ ಮಲಗುವ ಎತ್ತುಗಳನ್ನು ಸಾಟಿಮಾಡಲು ಹೇಳಬೇಕಾದ ಸುಳ್ಳು ಅವನ ತಲೆ ತಿನ್ನತೊಡಗಿತ್ತು. ಸುಳ್ಳು ಹೇಳಲು ಬೇಕಾದ ಛಾತಿ, ಮಾತುಗಾರಿಕೆ ಅವನಲ್ಲಿರಲಿಲ್ಲ. ಎತ್ತುಗಳ ಬಗ್ಗೆ ಹೇಳಲು ಒಳ್ಳೆಯದನ್ನು ಲೆಕ್ಕ ಹಾಕಿದಂತೆಲ್ಲ ತಲೆ ಬಿಸಿಯಾಗುತ್ತಿತ್ತು. ಅದೇನೇ ಆದರೂ ಈ ಸಮಯದಲ್ಲಿ ಬಸಲಿಂಗನ ಎಡಗಣ್ಣಲ್ಲಿ ಕಾಣಿಸಿಕೊಂಡ ನೋವು ಹೆಚ್ಚಾಗುತ್ತಲೇ ಹೋಯಿತು.
ಮೊದಮೊದಲು ಅದು ಕಣ್ಣುಬೇನೆ ಇರಬಹುದೆಂದು ತಿಳಿದ. ಆದರೆ ಕಣ್ಣು ಕೆಂಪಾಗಲಿಲ್ಲ, ಕಣ್ಣಿನ ಸುತ್ತ ನೋವು ಮಾತ್ರ ಹೆಚ್ಚಾಯಿತು. ಈ ನೋವು ಬಲಗಣ್ಣಿನಲ್ಲಿರಲಿಲ್ಲ. ಎಡಗಣ್ಣು ನೋವಿನೊಂದಿಗೆ ಸ್ವಲ್ಪ ಮಂದವಾಗುತ್ತಿದ್ದಂತೆ ಅನ್ನಿಸತೊಡಗಿತು, ಹೆದರಿಕೆ ಶುರುವಾಯಿತು. ನಗರದ ತನ್ನ ಎಂದಿನ ವೈದ್ಯರಿಗೆ ತೋರಿಸಿದ. ಅವರು ನೋವಿನ ವಿವರಗಳನ್ನೆಲ್ಲ ಕೇಳಿ ರೆಪ್ಪೆ ಅಗಲಿಸಿ ನೋಡಿದರು. ಅವರಿಗೆ ಅರ್ಥವಾಗದಿದ್ದರೂ ಬಸಲಿಂಗನಿಗೆ ಧೈರ್ಯ ತುಂಬಲು ಒಳೊಳ್ಳೆಯ ಮಾತನಾಡಿದರು. ತಮ್ಮ ವೈದ್ಯಕೀಯ ಪವಾಡಗಳನ್ನು ವಿವರಿಸಿದರು. ಹಚ್ಚಿಕೊಳ್ಳಲು ಒಂದು ಲೇಹ್ಯ ಕೊಟ್ಟರು. ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ಹಲವು ದಿನ ಲೇಹ್ಯ ಹಚ್ಚಿಕೊಂಡು ವೈದ್ಯರು ಹೇಳಿದಂತೆ ಬಟ್ಟೆಯ ಕಾವು, ಉಪ್ಪಿನ ಕಾವು ಕೊಟ್ಟುಕೊಂಡ. ಆದರೆ ಕಣ್ಣಿನ ನೋವು ಮತ್ತು ಮಂದಸ್ಥಿತಿ ಕಡಿಮೆಯಾಗಲಿಲ್ಲ. ಹಾಗೆಂದು ಹೇಳಿದರೆ ಹೆಂಡತಿ ಸಿದ್ಲಿಂಗಿ ನಂಬಲಿಲ್ಲ. ಅದು ಆತನ ಕಲ್ಪನೆ ಎಂಬಂತೆ ಮಾತಾಡಿದಳು. ಬಸಲಿಂಗನಿಗೆ ಸಿಟ್ಟುಬಂತು. ಒಂದು ರೀತಿಯ ಅಸಹಾಯಕತೆ ಶುರುವಾಯಿತು. ನೋವನ್ನು ಸುಮ್ಮನೆ ವಿವರಿಸದೆ ಕೆಲವರಲ್ಲಿ ತನ್ನ ಕಷ್ಟ ತೋಡಿಕೊಂಡ. ಉಳದಿರುವ ನೆಲ, ಮಗುವಿನ ಕಾಯಿಲೆ ಎಲ್ಲವೂ ಅವನಿಗೆ ಗೌಣವಾಗಿ ಕಾಣತೊಡಗಿದ್ದವು. ಯಾರೋ ಒಬ್ಬರು ಸರ್ಕಾರಿ ಆಸ್ಪತ್ರೆಯ ಡಾ. ತಿಮ್ಮಪ್ಪನಿಗೆ ತೋರಿಸಲು ಹೇಳಿದರು. ಸರ್ಕಾರಿ ಆಸ್ಪತ್ರೆ ಅಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ಎಂದು ತಿಳಿದಿದ್ದ ಅವನಿಗೆ ಇದು ಕೊನೆಯ ಪ್ರಯತ್ನವಾಗಿ ಕಾಣಿಸಿತು. ಆದರೆ ಅವನಿಗೆ ತಿಮ್ಮಪ್ಪನ ಬಗ್ಗೆ ಹೇಳಿದ್ದವರು ಧೈರ್ಯ ತುಂಬಿದರು. ಖಾಸಗಿ ವೈದ್ಯರು ಕೂಡ ಎಷ್ಟು ಕೆಟ್ಟವರೆಂದು ವಿವರಿಸಿದರು.
ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ
ಡಾ. ತಿಮ್ಮಪ್ಪ ಬಿಡುವಿಲ್ಲದ ವೈದ್ಯರು. ಅವರ ಆಸ್ಪತ್ರೆಯಲ್ಲಿ ಹತ್ತಾರು ಜನ ಸಾಲುಗಟ್ಟಿ ನಿಂತಿದ್ದರು. ಎಲ್ಲರೂ ಬಡವರು. ಬಸಲಿಂಗ ಕಾಯುತ್ತಾ ಕೂತ. ಅವನ ಸರದಿ ಬಂದಾಗ ತಿಮ್ಮಪ್ಪನವರ ಎದುರು ನಿಂತು ಒಟ್ಟಿಗೇ ತನ್ನ ಕಷ್ಟಗಳನ್ನು ತೋಡಿಕೊಂಡ. ತನ್ನ ಮಲಗುವ ಎತ್ತುಗಳಿಂದ ಹಿಡಿದು ತನ್ನ ನೋವು, ತನ್ನ ನಿದ್ರೆ, ನೆಮ್ಮದಿಯನ್ನೆಲ್ಲ ಕೆಡಿಸಿರುವುದನ್ನು ಹೇಳಿದ. ತಿಮ್ಮಪ್ಪ ಅವನನ್ನು ಪರೀಕ್ಷಿಸಿದರು. ಸುಟಿಯಾದ ಬೆರಳುಗಳ, ವಿಶ್ವಾಸ ತುಂಬಿದ ಮಾತುಗಳ ಡಾಕ್ಟರು, ಬಸಲಿಂಗನ ದೃಷ್ಟಿಯ ಅಳತೆ, ಸ್ಪಷ್ಟತೆಯನ್ನು ನೋಡಿದರು; ನೋವಿನ ಕಾರಣಕ್ಕಾಗಿ ಹುಡುಕಿದರು. ಕೊನೆಗೆ ಹೇಳಿದರು: “ನಿನ್ನ ಕಣ್ಣು ಸರಿಹೋಗುತ್ತೆ. ಆದರೆ ಆಪರೇಶನ್ ಆಗಬೇಕು, ಪರವಾಗಿಲ್ಲವಾ?”
ಖಂಡಿತಾ ಸರಿಹೋಗುತ್ತಾ ಎಂಬಂತೆ ಬಸಲಿಂಗ ನೋಡಿದ.
ತಿಮ್ಮಪ್ಪ ವಿಶ್ವಾಸದಿಂದ ಮಾತಾಡಿದರು. ಬಸಲಿಂಗ ಇದನ್ನೂ ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡ. ಸಿದ್ಲಿಂಗಿ ಕೇಳಿದಾಗ ಡಾಕ್ಟರ ಹೆಸರನ್ನು ಮಾತ್ರ ಹೇಳಿದ. ವಿವರಗಳನ್ನು ತಿಳಿಸುವ ಉತ್ಸಾಹ ಅವನಲ್ಲಿರಲಿಲ್ಲ. ಮರುದಿನ ಹಕ್ಕೆ, ಹಿತ್ತಿಲು, ನೀರುನಿಡಿಯ ಕೆಲಸವನ್ನೆಲ್ಲ ಮುಗಿಸಿ ಆಸ್ಪತ್ರೆಗೆ ಹೊರಟ. ತಿಮ್ಮಪ್ಪ ಎಷ್ಟು ಒಳ್ಳೆಯವರೆಂದರೆ ಅವರು ಅವನಿಗಾಗಿ ಕಾಯುತ್ತಿದ್ದಂತಿತ್ತು. ಬಸಲಿಂಗನಲ್ಲಿ ಅವರಿಗೆ ವಿಶೇಷ ಆಸಕ್ತಿ, ಪ್ರೀತಿ ಮೂಡಿದ್ದವು. ಅವನ ಹೊಲ, ಎತ್ತು, ಮಗು ಕೂಡ ಅವರಲ್ಲಿ ನಿಂತಿದ್ದವು. ಅನುಭವಿ ವೈದ್ಯರಾದ ತಿಮ್ಮಪ್ಪ ಬಸಲಿಂಗನನ್ನು ಆಪರೇಶನ್‌ಗೆ ಸಿದ್ಧಗೊಳಿಸಿ ಕೆಲವೇ ನಿಮಿಷಗಳಲ್ಲಿ ಆಪರೇಶನ್ ಮುಗಿಸಿದರು. ಅವನ ಕೈ ಹಿಡಿದುಕೊಂಡು ಹೇಳಿದರು. “ನೋಡು, ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು. ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯ ಇದೆ. ಇದನ್ನು ಸರಿಯಾಗಿ ನೆನಪಿಟ್ಟುಕೋ.”
ಬಸಲಿಂಗನಲ್ಲೂ ತಿಮ್ಮಪ್ಪನವರ ಬಗ್ಗೆ ವಿಚಿತ್ರ ಪ್ರೀತಿ ಬೆಳೆದಿತ್ತು. ಆದರೆ ಅವನು ಮನೆಗೆ ಹೋದ ಮೇಲೆ ಸಿದ್ಲಿಂಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದಳು. ಆಕೆಗೆ ಅದು ಹೇಗೋ ತಿಮ್ಮಪ್ಪ ಹೊಲೆಯರೆಂಬುದು ಗೊತ್ತಾಗಿತ್ತು; ತನಗೇ ಗೊತ್ತಿಲ್ಲದ ವಿಷಯ ಆಕೆಗೆ ಹೇಗೆ ತಿಳಿಯಿತೆಂದು ಬೆರಗಾದ. ತನ್ನ ತಿಮ್ಮಪ್ಪನ ನಡುವಿನ ಸಂಬಂಧ ಅವನಿಗೆ ಬೇರೆ ಎರಕದಲ್ಲಿ ಹೊಯ್ದಂತೆ ಕಾಣಿಸಿಕೊಳ್ಳತೊಡಗಿತು. ತನ್ನನ್ನು ಮುಟ್ಟುವ ಮುನ್ನ ಅವರು ತಮ್ಮ ಜಾತಿಯ ಬಗ್ಗೆ ಒಂದು ಮಾತು ಹೇಳಿದ್ದರೆ ಒಳ್ಳೆಯದಿತ್ತೆಂದು ಕ್ಷಣ ಅನ್ನಿಸಿತು. ಆದರೆ ಅಂಥ ಯೋಚನೆ ಕೆಟ್ಟದ್ದೆಂದು ಬೈದುಕೊಂಡ. ತನ್ನ ಆಳ್ತನದಲ್ಲಿ ಏನೋ ಕಮ್ಮಿಯಾದಂತೆ ಬಸಲಿಂಗನಿಗೆ ಅನ್ನಿಸಿತು. ಇದರಿಂದ ನೊಂದುಕೊಂಡ. ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ತೀರ್ಮಾನಿಸಿದ. ಸಿದ್ಲಿಂಗಿ ಕೂಡ ಇದನ್ನು ಒಪ್ಪಿದಳು. ಸೂತಕವನ್ನು ಪರಿಹರಿಸಲು ಬಸಲಿಂಗ ಮೈ ತೊಳೆದುಕೊಳ್ಳಬೇಕು. ತಿಮ್ಮಪ್ಪನವರ ಹಿತವಚನವನ್ನು ಮರೆಯದಿದ್ದರೂ ಅದು ಅಸ್ಪಷ್ಟವಾಗತೊಡಗಿತ್ತು. ಸಿದ್ಲಿಂಗಿ ಅವನಿಗೆ ಕಣ್ಣು ಮಾತ್ರ ನೆನೆಯದಂತೆ ಬಿಸಿಬಿಸಿ ನೀರು ಹೊಯ್ದು ಸ್ನಾನ ಮಾಡಿಸಿದಳು.
ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು
ಮನಸ್ಸು ಹಗುರಾದರೂ ಪಟ್ಟುಗಳಲ್ಲಿ ಭದ್ರವಾಗಿದ್ದ ಎಡಗಣ್ಣು ಎರಡು ದಿನ ನೋವಿನಿಂದ ಮುಕ್ತವಾಗಿದ್ದು ಮೂರನೆಯ ದಿನದಿಂದ ತುಡಿಯತೊಡಗಿತು; ಮತ್ತೆ ನೋವು ಶುರುವಾಯಿತು. ಈಗ ಬಸಲಿಂಗ ಇಕ್ಕಟ್ಟಿಗೆ, ಪಶ್ಚಾತ್ತಾಪಕ್ಕೆ ಸಿಕ್ಕಿಹಾಕಿಕೊಂಡ. ಸುಳ್ಳು ಹೇಳಲಾರದ ಬಸಲಿಂಗ ಒಂದು ವಾರದೊಳಗೆ ತಿಮ್ಮಪ್ಪನವರನ್ನು ಬಿಟ್ಟು ಬೇರೆಲ್ಲ ಡಾಕ್ಟರುಗಳಿಗೆ ತನ್ನ ಕಣ್ಣು ತೋರತೊಡಗಿದ. ಆದದ್ದು ಹೇಳಿದ. ಅವರು ನೀಡಿದ ಸಲಹೆ, ಔಷಧಿ ಸರಿಹೋಗಲೇ ಇಲ್ಲ. ಬೇರೆ ದಾರಿ ಕಾಣದೆ ತಿಮ್ಮಪ್ಪನವರ ಬಳಿಗೇ ಹೋದ. ಅವರು ಅವನನ್ನು ಪ್ರೀತಿಯಿಂದಲೇ ಪ್ರಶ್ನೆ ಕೇಳತೊಡಗಿದರು. ಬಸಲಿಂಗ ಉತ್ತರಿಸಿದ. ತಾನು ತನ್ನ ತಲೆಗೆ ನೀರನ್ನು ಸೋಂಕಿಸಿಯೇ ಇಲ್ಲ ಎಂದು ಸುಳ್ಳು ಹೇಳಿದ. ಅವನು ನಡುಗುತ್ತಿರುವುದನ್ನು ನೋಡಿದ ತಿಮ್ಮಪ್ಪ ತಮಗನ್ನಿಸಿದ್ದನ್ನು ಹೇಳಿದರು. ತನ್ನ ಸುಳ್ಳು ಡಾಕ್ಟರಿಗೆ ಗೊತ್ತಾಗಿರುವುದನ್ನು ಕಂಡ ಬಸಲಿಂಗ ಇನ್ನೂ ತಬ್ಬಿಬ್ಬಾದ.
“ಬಸಲಿಂಗಪ್ಪ, ನೀನು ತುಂಬ ಒಳ್ಳೆಯವನು. ಆದದ್ದು ಆದಹಾಗೆ ಹೇಳು” ಎಂದು ತಿಮ್ಮಪ್ಪ ತಣ್ಣಗೆ ಹೇಳಿದರು.
ಬಸಲಿಂಗ ಜಡಗೊಳ್ಳತೊಡಗಿದ್ದ. ಸುಳ್ಳು ಹೇಳಿದ್ದ ಬಸಲಿಂಗ ಈಗ ಯಾಂತ್ರಿಕವಾಗಿ ಆದದ್ದನ್ನೆಲ್ಲ ಹೇಳಿದ. ತನ್ನ ಎದೆಯ ಭಾರ ಇಳಿದಂತೆ ಸುಮ್ಮನೆ ಮೌನವಾಗಿ ಕೂತ. “ಹೇಗಾದ್ರೂ ಮಾಡಿ ನಂಗೆ ಇನ್ನೊಂದ್ಸಲ ಆಪರೇಶನ್ ಮಾಡಿ ಬಿಡ್ರಿ, ನಿಮ್ಮ ಮಾತು ಮೀರೊಲ್ಲ” ಅಂದ.
ತಿಮ್ಮಪ್ಪ ಕತ್ತು ಅಲ್ಲಾಡಿಸಿದರು. ಇನ್ನೊಂದು ಆಪರೇಶನ್‌ನಿಂದ ಏನೂ ಆಗುವುದಿಲ್ಲ ಎಂದು ಹೇಳಿದರು. “ಈಗಿರೋ ಗಾಯಕ್ಕೆ ಔಷಧಿ ಕೊಡ್ತೇನೆ. ತಪ್ಪದೆ ಹಚ್ಚಿಕೋ” ಎಂದು ಹೇಳಿದರು.
ಅದೇಕೋ ಬಸಲಿಂಗನಿಗೆ ಸಿಟ್ಟು ಬಂದಿತ್ತು. ತನ್ನ ಜಾತಿಯನ್ನು ಕೆಡಿಸಿದ ತಿಮ್ಮಪ್ಪ ತನ್ನ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಳ್ಳುತ್ತಿರುವಂತೆ ಅನ್ನಿಸತೊಡಗಿತ್ತು. ತನ್ನ ಕಣ್ಣು ಹೋಗಲು ತಿಮ್ಮಪ್ಪ ಅದ್ಯಾವುದೋ ರೀತಿಯಲ್ಲಿ ಕಾರಣರಾದಂತೆ ತಿಳಿದ. ಆದದ್ದನ್ನೆಲ್ಲ ತಾನು ಬಲ್ಲವರಲ್ಲಿ ಹೇಳಿಕೊಂಡು ತಿಮ್ಮಪ್ಪನವರನ್ನು ಟೀಕಿಸಿದ. ಅವರಲ್ಲೂ ತಿಮ್ಮಪ್ಪನ ಬಗ್ಗೆ ಸಿಟ್ಟು ಬರುವಂತೆ ವಿಷಯಗಳನ್ನು ತಿರುಚಿ ಹೇಳಿದ. ಹೇಳುತ್ತ ಹೋದಂತೆ ತಾನು ತಿರುಚಿ ಹೇಳುತ್ತಿರುವಂತೆಯೇ ಸತ್ಯವಿರುವುದಾಗಿ ನಂಬಿದ. ಒಮ್ಮೊಮ್ಮೆ ಇಡೀ ದಿನ ಏನೂ ಅರ್ಥವಾಗದವನಂತೆ ಕೂತುಬಿಡುವ; ತನ್ನಲ್ಲಿ ಬೆಳೆಯುತ್ತಿದ್ದ ಸಣ್ಣತನಕ್ಕೆ ದಂಗಾಗಿಬಿಡುವ. ಇದು ಎತ್ತಿನ ಸಾಟಿಗೆ ಅನುಕೂಲವಾಗಬಹುದು, ಸುಳ್ಳು ತನ್ನ ಕುಟುಂಬಕ್ಕೆ ಸಹಾಯವಾಗಬಹುದು, ಹೀಗೂ ಅನ್ನಿಸಿತು. ಹೆಂಡತಿ ಸಿದ್ಲಿಂಗಿಯ ಜೊತೆಗೆ ಮಾತಾಡುವಾಗ ಕಲಿಯಬೇಕೆನ್ನಿಸಿತು. ಗೇಯುವುದು ತಡವಾದರೆ ಸಾಲ ಎತ್ತಿ ಬದುಕಲು ಕೂಡ ಉಡಾಫೆ ಸಹಾಯಕ.
ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ
ಆದರೆ ಬಸಲಿಂಗನ ದುರಂತ ಆ ದಿಕ್ಕಿನಲ್ಲಿರಲಿಲ್ಲ. ತನ್ನ ಎಡಗಣ್ಣು ಪೂರ್ತಿ ಇಲ್ಲವಾಗಿ ನೋವು ಹೊರಟುಹೋಗುತ್ತಿದ್ದಂತೆ ಬಲಗಣ್ಣಿನಲ್ಲಿ ನೋವು ಕಾಣಿಸಿಕೊಂಡಿತು. ಎಡಗಣ್ಣಿನ ನೋವು ಆರಂಭವಾದಾಗಿನ ಅವನ ಮುಗ್ಧತೆ ಕೂಡ ಮತ್ತೆ ಮನಸ್ಸಿಗೆ ಬಸಿಯತೊಡಗಿತು. ಈ ಸಲ ಹೆಚ್ಚು ಚುರುಕಾಗಿರಬಲ್ಲ ‘ಛಾತಿ’ ಪಡೆದಿದ್ದರಿಂದ ಅನೇಕ ಡಾಕ್ಟರನ್ನು ಕಂಡ; ತಾನು ಬಲ್ಲ ತನ್ನ ಲಿಂಗಾಯಿತ ಜಾತಿಯ ರಾಜಕಾರಣಿ ರುದ್ರಪ್ಪನನ್ನು ಜೊತೆಗೇ ಕರೆದುಕೊಂಡು ಡಾಕ್ಟರಲ್ಲಿಗೆ ಅಲೆದ. ಕೆಲವರು ಡಾಕ್ಟರುಗಳು, “ಇದಕ್ಕೆ ಆಪರೇಶನ್ನೇ ಬೇಕಿಲ್ಲ, ಆ ಡಾ. ತಿಮ್ಮಪ್ಪನಿಗೆ ಬುದ್ಧಿ ಇಲ್ಲ ಅದಕ್ಕೇ ಆಪರೇಶನ್ ಮಾಡಿದ್ದಾರೆ” ಎಂದು ಹೇಳಿದರು. ಔಷಧಿ ನೀಡಿ ಹಿತವಚನ ಕೊಟ್ಟರು. ಆದರೆ ಬಸಲಿಂಗನ ನೋವು ಕಡಿಮೆಯಾಗಲಿಲ್ಲ. ಆತಂಕ ಹೋಗಲಿಲ್ಲ. ಈ ಕಣ್ಣಿನ ರೋಗಕ್ಕೆ ಔಷಧಿ ಇದ್ದೇ ಇರುತ್ತೆಂದು ನಂಬತೊಡಗಿದ್ದ ಬಸಲಿಂಗ ಆಸುಪಾಸಿನಲ್ಲಿ ಇದ್ದ ಡಾಕ್ಟರನ್ನೆಲ್ಲ ನೋಡಿದ. ಕೊನೆಗೆ ತನ್ನ ಉಡಾಫೆಯ ಶೈಲಿಯಲ್ಲೇ ತಿಮ್ಮಪ್ಪನವರನ್ನು ನೋಡಿದ.
ತಿಮ್ಮಪ್ಪ ತನ್ನ ರೋಗಿಯಲ್ಲಿ ಆಗಿದ್ದ ಬದಲಾವಣೆ ಗಮನಿಸಿದರು; ಆತನ ಗಂಟಲು ದೊಡ್ಡದಾಗಿತ್ತು. ಅವನು ತನಗರಿವಿಲ್ಲದಂತೆಯೇ ಸಣ್ಣವನಾಗತೊಡಗಿದ್ದ. ಅವನ ಕಾಯಿಲೆ ದೇಹದ ಮಟ್ಟದಿಂದ ಮಾನಸಿಕ ಸ್ತರವನ್ನು ತಲುಪತೊಡಗಿತ್ತು.
ತಿಮ್ಮಪ್ಪ ನೋವಿನಿಂದಲೇ ಹೇಳಿದರು, ”ಬಸಲಿಂಗಪ್ಪ, ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ; ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ. ಅದು ನಿನ್ನ ತಪ್ಪಲ್ಲ. ಇದಕ್ಕಾಗಿ ನಾನು ಯಾರನ್ನೂ ಬೈಯುವುದಿಲ್ಲ. ನೀನು ಈ ಸಲ ಒಂದು ಕೆಲಸ ಮಾಡು. ನನ್ನ ಹೆಸರನ್ನು ಹೇಳಿ ಡಾಕ್ಟರ್ ಚಂದ್ರಪ್ಪನವರನ್ನು ನೋಡು. ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು. ಏನೂ ತಪ್ಪು ತಿಳಿಯಬೇಡ” ಅಂದರು.
ಈಗ ಕೂಡ ಬಸಲಿಂಗ ಡಾ. ತಿಮ್ಮಪ್ಪನವರನ್ನು ದ್ವೇಷಿಸದಿದ್ದರೂ ಅವರ ಬಗ್ಗೆ ಒಂದು ರೀತಿಯ ಸವಾಲು ಬೆಳೆದಿತ್ತು. ತಾನು ಅವರ ಬಗ್ಗೆ ಮತ್ತು ಅವರ ಜಾತಿಯನ್ನು ಕುರಿತು ಮಾತಾಡಿದ್ದೆಲ್ಲ ಅವರಿಗೆ ಗೊತ್ತಾಗಿರಬಹುದೆಂಬ ಆತಂಕ ಹುಂಬತನವಾಗಿ ಜಂಬವಾಗಿ ಬದಲಾಗಿತ್ತು. ಆತ ತಿಮ್ಮಪ್ಪನವರಿಂದ ಹೊರಗೆ ಬಂದೊಡನೆ ರಾಜಕಾರಣಿ ರುದ್ರಪ್ಪನನ್ನು ಕೇಳಿ ಚಂದ್ರಪ್ಪನ ಜಾತಿ ತಿಳಿದುಕೊಂಡ. ತಿಮ್ಮಪ್ಪನ ಜಾತಿಯಷ್ಟು ಕೆಟ್ಟದಾಗಿಲ್ಲದ್ದು ಅರಿತು ನಿಸೂರಾದ. ಕೂಡಲೆ ಹೋಗಿ ಡಾ.ಚಂದ್ರಪ್ಪನವರನ್ನು ನೋಡಿದ.
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
ಅಲ್ಲಿ ಬಸಲಿಂಗನಿಗೆ ಅನಿರೀಕ್ಷಿತವಾದದ್ದು ಕಾದಿತ್ತು. ಬಸಲಿಂಗನ ಎಡಗಣ್ಣಿನ ಪೂರ್ತಿ ಚರಿತ್ರೆಯನ್ನು ಬಸಲಿಂಗನ ತಿರುಚುವಿಕೆಯೊಂದಿಗೆ ಕೇಳಿದ ಚಂದ್ರಪ್ಪ ಹೇಳಿದರು: “ಡಾ. ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ, ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ.”
ರಾಜಕಾರಣಿ ರುದ್ರಪ್ಪನೊಂದಿಗೆ ಹೊರಗೆ ಬಂದ ಬಸಲಿಂಗ. ಬಿಸಿಲಲ್ಲಿ ತಲೆಯ ಮೇಲೆ ಕೈಹೊತ್ತು ಕೂತ. ಯಾರು ಮಾತಾಡಿಸಿದರೂ ಮಾತಾಡಲೇ ಇಲ್ಲ. ಹೆಂಡತಿಯ ಮಾತು ಕಿವಿಗೆ ಬೀಳಲೊಲ್ಲವು. ಬಲಗಣ್ಣಿನ ನೋವು ಭೀಕರವಾಗಿತ್ತು. ಬರುಬರುತ್ತ ದೃಷ್ಟಿ ಮಂದವಾಗುತ್ತಿರುವುದು ಬಸಲಿಂಗನಿಗೆ ಗೊತ್ತಿತ್ತು. ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು- ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗಿತ್ತು. ನೋವು, ದೈಹಿಕ ನೋವನ್ನು ಮೀರಿದ ನೋವು ಅವನನ್ನು ತುಂಬತೊಡಗಿತ್ತು. ಡಾ. ತಿಮ್ಮಪ್ಪನವರ ಮಿಂಚಿನಂತಹ ಬೆರಳು, ಪ್ರೀತಿ ತುಂಬಿದ ಮುಖ ನೆನಪಾದವು. ತನ್ನ ಹೊಲ, ತನ್ನ ಎತ್ತುಗಳು, ತನ್ನ ಗದ್ದೆಯ ವಾರೆಯಲ್ಲಿರುವ ಮಾವಿನ ಮರ, ಪಾರಿಜಾತದ ಹೂವು…
ನೇರವಾಗಿ ತಿಮ್ಮಪ್ಪನವರಲ್ಲಿಗೆ ಹೋದ. ನೋವು ತುಂಬಿದ ಬಲಗಣ್ಣು ಕಂಬನಿ ಸುರಿಸುತ್ತಿತ್ತು. ತಿಮ್ಮಪ್ಪನವರ ಕೈಹಿಡಿದುಕೊಂಡ. ಅವರನ್ನು ಅಪ್ಪಿಕೊಂಡು ಗಟ್ಟಿಯಾಗಿ ಅಳತೊಡಗಿದ. ತಿಮ್ಮಪ್ಪ ಚಲಿಸಲಿಲ್ಲ. ತಲೆ ನೇವರಿಸಲಿಲ್ಲ ಕೂಡ. ಉಸಿರು ಹತೋಟಿಗೆ ಬಂದಾಗ ಬಸಲಿಂಗ ಏನೇನೋ ಬಡಬಡಿಸಿದ. ಅದು ಅವನಿಗೆ ಮತ್ತು ತಿಮ್ಮಪ್ಪನವರಿಗೆ ಮಾತ್ರ ಗೊತ್ತಾಗುವಂತಿತ್ತು.
ಎದುರಿಗೆ ಕುಳಿತಿದ್ದ ಬಸಲಿಂಗನನ್ನು ತಿಮ್ಮಪ್ಪ ಎವೆ ಇಕ್ಕದೆ ನೋಡಿದರು. ಆತನನ್ನು ತಾವು ಇಷ್ಟಪಡಲು ಕಾರಣವೇನೆಂದು ಚಿಂತಿಸಿದರು. ಅದು ಆತನಲ್ಲಿ ಒಮ್ಮೆ ಇದ್ದು ಈಗ ಮರುಕಳಿಸಿರುವ ಮುಗ್ಧತೆ ಇರಬಹುದು. ಅವನನ್ನು ಕಂಡರೆ ಅವನ ಜಾತಿ ಯಾವುದಿರಬಹುದು ಎಂಬ ಪ್ರಶ್ನೆ ಕೂಡ ತಮ್ಮಲ್ಲಿ ಸುಳಿಯದಿದ್ದುದು ಇರಬಹುದು. ಮನುಷ್ಯನ ನೋವಿಗೆ, ಮನುಷ್ಯನ ತೊಳಲಾಟಕ್ಕೆ, ಮನುಷ್ಯನಿಗೆ ಸಾಧ್ಯವಾಗುವ ಸಣ್ಣತನ ಮತ್ತು ಒಳ್ಳೆಯತನಕ್ಕೆ ಸಾಕ್ಷಿಯಾಗಿ ಕಾಣುತ್ತಿದ್ದುದು ಇರಬಹುದು.
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಬಸಲಿಂಗ ಅವರ ನಿಶ್ಚಲ ಕಣ್ಣನ್ನು ನೋಡುತ್ತಲೇ ಇದ್ದ. ತಿಮ್ಮಪ್ಪನವರ ಕಣ್ಣಲ್ಲಿ ತೇವ ಒಸರತೊಡಗಿತು. ಅದು ಕಂಬನಿಯಾಗುವುದಕ್ಕೆ ಮುನ್ನ ಹೇಳಿದರು: “ಈ ಸಲ ತಲೆಗೆ ನೀರು ಸೋಂಕಿಸಕೂಡದು, ಈ ಕಣ್ಣು ಸರಿಹೋಗುತ್ತೆ” ಎಂದು ಮಾತ್ರ ಹೇಳಿ ಶಸ್ತ್ರಚಿಕಿತ್ಸೆ ಸಿದ್ಧತೆ ಮಾಡಿಕೊಳ್ಳತೊಡಗಿದರು.
ಸುಳ್ಳುಗಳಿಂದ ಮುಕ್ತವಾಗಿದ್ದ ಬಸಲಿಂಗ ಮಗುವಿನಂತೆ ಅವರ ಚಲನವಲನ ನೋಡುತ್ತ ಕೂತ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಪಿ. ಲಂಕೇಶ್ (1935-2000): ಜನನ, ಮಾರ್ಚ್ 8, 1935, ಶಿವಮೊಗ್ಗೆಗೆ 14.4 ಕಿ.ಮೀ. ದೂರದಲ್ಲಿರುವ ಕೊನಗವಳ್ಳಿ ಎಂಬ ಗ್ರಾಮದಲ್ಲಿ. ಶಿವಮೊಗ್ಗೆಯಲ್ಲಿ ಇಂಟರ್ ಮೀಡಿಯಟ್, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಇಂಗ್ಲಿಷ್ ಆನರ್ಸ್, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. 1959ರಿಂದ 1962ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕ; ಆನಂತರ ಸೆಂಟ್ರಲ್ ಕಾಲೇಜ್‌ನಲ್ಲಿ ಮೂರು ವರ್ಷ, ಸರ್ಕಾರಿ ಫಸ್ಟ್‌ಗ್ರೇಡ್ ಕಾಲೇಜ್‌ನಲ್ಲಿ ಒಂದು ವರ್ಷ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹನ್ನೆರಡು ವರ್ಷ ಅಧ್ಯಾಪಕ. 1978ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ. 1980ರಲ್ಲಿ ‘ಲಂಕೇಶ್ ಪತ್ರಿಕೆ’ ಆರಂಭ. ಕಥಾ ಸಂಕಲನಗಳು: ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ, ಮಂಜು ಕವಿದ ಸಂಜೆ. ಕಾದಂಬರಿಗಳು: ಬಿರುಕು, ಮುಸ್ಸಂಜೆಯ ಕಥಾಪ್ರಸಂಗ, ಅಕ್ಕ. ನಾಟಕಗಳು: ಟಿ. ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಪೊಲೀಸರಿದ್ದಾರೆ ಎಚ್ಚರಿಕೆ, ತೆರೆಗಳು, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ, ಸಿದ್ಧತೆ, ಸಂಕ್ರಾಂತಿ, ಗುಣಮುಖ. ಅನುವಾದಗಳು: ದೊರೆ ಈಡಿಪಸ್ ಮತ್ತು ಅಂತಿಗೊನೆ, ಪಾಪದ ಹೂವುಗಳು. ಗದ್ಯ ಬರಹಗಳು: ಪ್ರಸ್ತುತ, ಕಂಡದ್ದು ಕಂಡಹಾಗೆ, ಟೀಕೆ-ಟಿಪ್ಪಣಿ(ಭಾಗ 1, 2, 3), ರೂಪಕ ಲೇಖಕರು, ಸಾಹಿತಿ ಸಾಹಿತ್ಯ ವಿಮರ್ಶೆ, ಮರೆಯುವ ಮುನ್ನ. ಕವನ ಸಂಕಲನಗಳು: ತಲೆಮಾರು, ಅಕ್ಷರ ಹೊಸ ಕಾವ್ಯ(ಸಂಪಾದನೆ), ಚಿತ್ರ ಸಮೂಹ, ನೀಲು ಕಾವ್ಯ(ಸಂಗ್ರಹ-1, 2). ಸಿನಿಮಾಗಳು: ಪಲ್ಲವಿ, ಅನುರೂಪ, ಖಂಡವಿದಕೊ ಮಾಂಸವಿದಕೊ, ಎಲ್ಲಿಂದಲೋ ಬಂದವರು. ಆತ್ಮಕಥನ: ಹುಳಿಮಾವಿನ ಮರ. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಲ್ಲವಿ ಚಿತ್ರ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ; ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ. ಮರಣ, ಜನವರಿ 25, 2000.





