ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಬಹಳವಾದರೆ ಇಡೀ ಪಾದವು ಮುಳುಗುವಷ್ಟು ನೀರಿರಬೇಕು ಆ ಹಳ್ಳದಲ್ಲಿ. ಇಳಿಜಾರಿನಲ್ಲಿ ಸ್ವಲ್ಪ ಮುಂದಕ್ಕೆ ಹರಿದು ನದಿಗೆ ಕೂಡಿದ್ದರಿಂದ ನೀರಿಗೆ ಸಾಕಷ್ಟು ಸೆಳವೂ ಇತ್ತು. ಆದರೆ ನಡು ನೀರಲ್ಲಿ ಬಸ್ಸಿನ ಗಾಲಿಗಳು ಸಿಕ್ಕುಬೀಳುವಷ್ಟು ಕೆಸರು ಕಲೆತಿರುವ ಅಂದಾಜು ಸ್ವತಃ ಡ್ರಾಯವ್ಹರನಿಗೇ ಇರಲಿಲ್ಲ. ಯಂತ್ರವನ್ನು ಪೂರ್ಣವೇಗದಲ್ಲಿ ಪುನಃ ಪುನಃ ಸುರುಮಾಡಿ ‘ಸ್ಟಿಯರಿಂಗ್ ವ್ಹೀಲ’ನ್ನು ತಿರುವಿ ತಿರುವಿ ಡ್ರಾಯವ್ಹರ್ ಬೇಸತ್ತರೂ ಬಸ್ಸು ಮುಂದೆ ಹೋಗಲೊಲ್ಲದು, ಹಿಂದೆ ಸರಿಯಲೊಲ್ಲದು. ಹೊರಗೆ ನೀರು ನಿಮಿಷ ನಿಮಿಷಕ್ಕೆ ಏರತೊಡಗಿದೆ. ಡ್ರಾಯವ್ಹರನು ಹತಾಶನಾಗಿ ಸಿಟ್ಟಿನಿಂದ ‘ಸ್ಟಿಯರಿಂಗ್ ವ್ಹೀಲ’ನ್ನು ಒಮ್ಮೆಪೂರ್ಣ ತಿರುವಿ ಕೈಬಿಟ್ಟುಬಿಟ್ಟ. ಬಸ್ಸು ಒಮ್ಮೆಲೆ ವೇಗದಿಂದ ಮುಂದೆ ಹಾರಿ ಗಕ್ಕನೆ ನಿಂತುಬಿಟ್ಟಿತು.
ತಂಗಿಯು ಚಿಟ್ಟನೆ ಚೀರಿದಳು. ತಲೆಯು ಹಿಂದೆ ಸೀಟಿನ ಸಳಿಗೆ ಜಜ್ಜಿತ್ತು. ಅರ್ಧ ತೆರೆದು ನಿಂತ ಬಾಗಿಲಿನಿಂದ ನೀರು ಒಳಗೆ ನುಗ್ಗಿತು. ಒಳಗೆ ನಿಂತವರೆಲ್ಲ ಝೋಲಿ ತಪ್ಪಿ ಒಬ್ಬರ ಮೇಲೊಬ್ಬರು ಬಿದ್ದುಬಿಟ್ಟರು. ತಂಗಿಗೆ ಈ ಎಲ್ಲ ಗೊಂದಲದ ಅರ್ಥವೇ ಆಗಲಿಲ್ಲ. ಕಿಟಕಿಯಿಂದ ದೂರದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಕಾಣಿಸಿದವು. ನೋಡು ನೋಡುತ್ತಲೇ ನೀರು ಏರಿ ಬಂದು ಬಸ್ಸನ್ನೆಲ್ಲ ಸುತ್ತಿಕೊಂಡಂತೆ ಅವಳಿಗೆನಿಸಿತು. ತಂಗಿ ಮುಖ ಮುಚ್ಚಿಕೊಂಡು ಮತ್ತೊಮ್ಮೆ ಚೀರಿದಳು.
ತಂದೆ ಹಿಂದಿನ ಸಾಲಿನಲ್ಲಿ ತೂಕಡಿಸುತ್ತ ಕುಳಿತವರು, ಒಮ್ಮೆಲೆ ಬಸ್ಸು ನಿಂತ ರಭಸಕ್ಕೆ ಎಚ್ಚೆತ್ತರು. ಎಚ್ಚೆತ್ತು ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿ ಮತ್ತೆ ಮಲಗಿಕೊಂಡರು. ತಂಗಿಯು ಎರಡನೇ ಸಲ ಚೀರಿದ್ದನ್ನು ಕೇಳಿ ಗಡಬಡಿಸಿಕೊಂಡು ಮತ್ತೆ ಎದ್ದು ಕುಳಿತರು. ಸುತ್ತಲೂ ಏನೋ ಅನಾಹುತ ನಡೆದಿದೆ ಎನ್ನುವುದು ಅವರಿಗೆ ಕ್ರಮೇಣವಾಗಿ ಅರ್ಥವಾಗತೊಡಗಿತು.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ತಾಯಿ ಬಹಳ ಗಾಬರಿಯಾಗಿರಲಿಲ್ಲ. ತಂಗಿಯ ಮಗ್ಗಲಿಗೆ ಕುಳಿತವರು, ಅವಳು ಚೀರಿದ್ದನ್ನು ನೋಡಿ ಅವಳ ಭುಜವನ್ನು ಗಟ್ಟಿಯಾಗಿ ಹಿಡಿದಿಡಲು ಪ್ರಯತ್ನಿಸಿದರು. ಅವರ ಹೊಟ್ಟೆಯಲ್ಲಿ ತಣ್ಣೀರು ಸುರುವಿದಂತಾಯಿತು. ಅವರಿಗೆನಿಸಿತು, ತಂಗಿಯ ಹುಚ್ಚು ಮತ್ತೆ ಮರುಕಳಿಸಿದೆಯೆಂದು. ಇಲ್ಲವಾದರೆ ಅವಳು ಹಾಗೇಕೆ ಅಷ್ಟು ಅಸಹ್ಯವಾಗಿ ಚೀರಿದಳು?
ಪ್ರಯತ್ನಪೂರ್ವಕವಾಗಿ ಇವರನ್ನೆಲ್ಲ ತಪ್ಪಿಸಿ ಮುಂದಿನ ಸೀಟಿನಲ್ಲಿ ಹೋಗಿ ಕುಳಿತಿದ್ದ ತಮ್ಮನಿಗೆ ತಂಗಿಯು ಚೀರಿದ್ದು ಕೇಳಿಸಿರಲಿಲ್ಲ. ಅವನ ಮಗ್ಗುಲಲ್ಲಿ ಮರೆಬಿಟ್ಟು ಕುಳಿತಿದ್ದ ಹೆಂಗಸು ಅವನ ಮೈಮೇಲೆ ಬಿದ್ದುಬಿಟ್ಟಿದ್ದಳು. ಅವಳು ಮುಡಿದಿದ್ದ ಮಲ್ಲಿಗೆಯ ವಾಸನೆ ಅವನಿಗೆ ಆ ಅಪಘಾತವನ್ನು ಮರೆಯಿಸಿಬಿಟ್ಟಿತ್ತು. ಎಷ್ಟೋ ದಿವಸಗಳ ನಂತರ ಹೆಣ್ಣಿನ ಮೈ ಅವನ ಮೈಗೆ ಅಷ್ಟು ರಭಸವಾಗಿ ತಾಕಿತ್ತು. ಸ್ಪರ್ಶ ಹಾಗು ವಾಸನೆ ಇವೆರಡರ ಅನುಭವವು ಒಂದರಲ್ಲೊಂದು ಬೆರೆತು ಅವಳ ಸ್ಪರ್ಶಕ್ಕೇನೇ ಮಲ್ಲಿಗೆಯ ಪರಿಮಳವಿದ್ದಂತೆ ಅವನಿಗೆನಿಸಿತು. ಮರುಕ್ಷಣವೇ, ತಾಯಿಯು ಹಿಂದಿನ ಸೀಟಿನಿಂದ ದುರಗುಟ್ಟಿ ನೋಡುತ್ತಿರಬಹುದೆಂದು ಹೆದರಿಕೆಯಾಯಿತು. ನಿರುಪಾಯನಾಗಿ ದೂರ ಸರಿದು ಕುಳಿತುಕೊಂಡ.
ಬಸ್ಸು ನಿಂತಲ್ಲೇ ನಿಂತಿತ್ತು. ಡ್ರಾಯವ್ಹರನು ಬೇಸತ್ತು, ಬೀಡಿಯನ್ನು ಬಾಯಲ್ಲಿ ಇಟ್ಟು, ಕಡ್ಡಿ ಕೊರೆದು, ಮೇಲೆ ಮುಖ ಮಾಡಿ ಫುಕ್ಕೆಂದು ಹೊಗೆ ಬಿಟ್ಟ. ಮುಂದಿನ ಬಾಗಿಲ ಹತ್ತಿರ ನಿಂತಿದ್ದ ಕಂಡಕ್ಟರ್, ಈ ಅಪಘಾತವೆಲ್ಲ ಒಂದು “ರುಟೀನ್” ಎನ್ನುವಂತೆ, ಒಮ್ಮೆ ಬಸ್ಸಿನಲ್ಲಿದ್ದವರ ಕಡೆಗೆಲ್ಲ ಕಣ್ಣು ಹಾಯಿಸಿ ನಕ್ಕ.
”ಬಸ್ಸನ್ನ ನೀರಿನಲ್ಲಿ ಹಾಕಿ ನಮ್ಮನ್ನೆಲ್ಲ ಇಲ್ಲಿಯೆ ಅರ್ಪಣ ಮಾಡಬೇಕಂತೀಯೇನಯ್ಯಾ, ಮಹಾರಾಯಾ?” ಸಮೀಪದಲ್ಲಿ ಕುಳಿತಿದ್ದ ವೃದ್ಧ ವಿಧವೆಯು ಕಂಡಕ್ಟರನ ಕಡೆಗೆ ಮುಖ ಮಾಡಿ ಡ್ರಾಯವ್ಹರನ ಕಡೆಗೆ ಕಣ್ಣು ಮಾಡಿ ಸಿಡಿಮಿಡಿಗೊಂಡಳು. ಕೈಯಲ್ಲಿಯ ಗಂಟನ್ನು, ಅದು ಒಂದು ಕೂಸು ಎನ್ನುವಂತೆ ಅವಚಿಕೊಂಡು ಹಿಡಿದು ಅತ್ತಿತ್ತ ನೋಡಿದಳು, ತನ್ನ ತಕರಾರನ್ನು ಯಾರಾದರೂ ಅನುಮೋದಿಸುತ್ತಾರೆಯೋ ಎಂದು. ಆದರೆ ಎಲ್ಲರೂ ಸುಮ್ಮನಿದ್ದುದನ್ನು ನೋಡಿ ಕಡೆಗೆ ತಾನೇ ಮುಂದುವರಿಸಿದಳು: “ಕಾಶಿಯಿಂದ ರಾಮೇಶ್ವರದ ವರೆಗೆ ಎಲ್ಲ ತೀರ್ಥಯಾತ್ರೆ ಮುಗಿಸಿ ಬಂದಿದ್ದೇನೆ. ತಿರುಪತಿ ಬೆಟ್ಟ ಬಸ್ಸಿನಲ್ಲಿ ಹತ್ತಿದ್ದೇನೆ. ಬದರಿಗೆ ಕೂಡ ಬಸ್ಸಿನಲ್ಲಿಯೇ ಹೋಗಿ ಬಂದಿದ್ದೇನೆ. ಆದರೆ ಇಂಥ ಅನಾಹುತ ಎಲ್ಲಿಯೂ ಕಾಣಲಿಲ್ಲಮ್ಮಾ. ಈ ಪ್ರಾಯಿವ್ಹೆಟ್ ಬಸ್ ಸರ್ವಿಸಗಳ ಹಣೆಬರಹವೇ ಇಷ್ಟು. ಜಟಕಾ ನಡಿಸೋ ಪೋಲಿಗಳನ್ನು ಬಸ್ ನಡಿಸೋಕೆ ನೇಮಿಸ್ತಾರೆ.” ಹಾಗೂ ತಾನು ಅಂದದ್ದನ್ನು ಸಮರ್ಥಿಸಿಕೊಳ್ಳಲು ಅವಳು ಕೈಗಂಟಿನಲ್ಲಿದ್ದ ಜಪಮಾಲೆಯನ್ನು ತೆಗೆದುಕೊಂಡು ಎಣಿಸತೊಡಗಿದಳು. ಉತ್ತರ ಕೊಡುವದಂತೂ ದೂರವೇ ಉಳಿಯಿತು, ಅವಳ ಮಾತು ಮುಗಿಯುವ ವರೆಗೆ ಕೂಡ ಕಂಡಕ್ಟರ್ ಅಲ್ಲಿ ನಿಂತಿರಲಿಲ್ಲ. ಯಾವಾಗಲೋ ದೂರ ಸರಿದು ಹೋಗಿದ್ದ. ಡ್ರಾಯವ್ಹರನ ಹಿಂದಿನ ಸೀಟಿನಲ್ಲಿಂದ ಕಪ್ಪು ಬಣ್ಣದ ವೈಶ್ಯನೊಬ್ಬ ದೊಡ್ಡ ದನಿಯಲ್ಲಿ ಕಂಠಶೋಷಣೆ ನಡೆಸಿದ್ದ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಕಡೆಯ ಪ್ರಯತ್ನವೆಂದು ಕಂಡಕ್ಟರನು ಕೆಳಗಿಳಿದು ಬಸ್ಸಿನಲ್ಲಿದ್ದವರ ಸಹಾಯದಿಂದ ಬಸ್ಸನ್ನು ನೂಕಿ ದಂಡೆಗೆ ತರಲು ಪ್ರಯತ್ನಿಸಿದ. ಕೆಸರಿನಲ್ಲಿ ಹೂತ ಗಾಲಿಗಳು ಕಿತ್ತಿಕೊಂಡೆದ್ದವು. ಬುರುಗು ಬುರುಗಾಗಿ ನೀರು ಗಾಲಿಯ ಹತ್ತಿರ ಇಬ್ಬದಿಯಾಗುವುದನ್ನು ತಂಗಿ ಕಿಟಕಿಯಿಂದ ದಿಟ್ಟಿಸುತ್ತ ಕುಳಿತಿದ್ದಳು. ನೀರಿನಲ್ಲಿ ತೇಲುತ್ತ ಹೊರಟ ಬಸ್ಸು, ತಿರುಗಣಿಯ ಮಡುವಿನಲ್ಲಿ ಸಿಕ್ಕು ಬೊಗರಿಯಂತೆ ಗಿರಿಗಿರಿ ತಿರುಗಿದಂತೆ ಅವಳಿಗೆ ಭಾಸವಾಯಿತು.
ಬಸ್ಸನ್ನು ದಂಡೆಗೆ ಮುಟ್ಟಿಸಿ ಕಂಡಕ್ಟರನ್ನು ಹಿಡಿದು ಎಲ್ಲರೂ ಒಬ್ಬೊಬ್ಬರಾಗಿ ಬಸ್ಸನ್ನೇರುವಷ್ಟರಲ್ಲಿಯೇ ಬಹಳ ಹೊತ್ತಾಗಿತ್ತು. ಬಸ್ಸು ವೇಗವಾಗಿ ಮುಂದೆ ಹೊರಟಿತು.
“ಎಷ್ಟೆಲ್ಲ ತೀರ್ಥಯಾತ್ರೆ ಮುಗಿಸಿ ಬಂದಿದ್ದೀರಿ. ನೀವು ತುಂಬ ಪುಣ್ಯವಂತರು, ತಾಯೆ. ಈಗೇನು ನೀವೂ ಮಂತ್ರಾಲಯಕ್ಕೇನಾ ಹೊರಟಿದ್ದು?” ಜಪಮಾಲೆಯ ಎಣಿಕೆಯಲ್ಲಿ ಗರ್ಕಾಗಿದ್ದ ವೃದ್ಧವಿಧವೆಯನ್ನು ನೋಡುತ್ತ ಕೌತುಕದಿಂದ ಆ ಹೆಂಗಸು ಕೇಳಿದಳು. ಅವಳ ಮುಖ ನಿಸ್ತೇಜವಿತ್ತು. ಹಣೆಯ ಮೇಲೆ ಬಹಳ ದೊಡ್ಡ ಕುಂಕುಮವಿದೆ. ಅವಳಿಗೆ ಏನಾದರೂ ರೋಗವಿರಬೇಕು. ಮೈಯೊಣಗಿ ಕೈಯ ಮೇಲಿನ ನರಗಳೆಲ್ಲ ಉಬ್ಬಿ ನಿಂತಿವೆ. ಕಣ್ಣುಗಳು ಒಳನಟ್ಟು ಕೆಳಗೆಲ್ಲ ಕಪ್ಪು ಗೆರೆಗಳು ಬಿದ್ದಿವೆ. ಅವಳ ಮೈಗೆ ಮೈ ಹಚ್ಚಿ, ಅಶಕ್ತರಾಗಿದ್ದ ಇಬ್ಬರು ಹುಡುಗರು ಕುಳಿತಿದ್ದರು.
ವಿಧವೆ ಹೇಳಿದಳು: “ಎರಡು ವರ್ಷದಿಂದ ಮನೆಯನ್ನೇ ಕಂಡಿಲ್ಲ. ತೀರ್ಥ ಯಾತ್ರೆಯಲ್ಲೇ ಇದ್ದೇನೆ. ಆದರೆ ಹೋಗಿ ನೋಡಬೇಕಾದದ್ದು ಇನ್ನೂ ಬಹಳ ಇದೆ. ನೀವೇನು ಈಗ…” ಅಷ್ಟರಲ್ಲಿಯೇ, ನಡುರಸ್ತೆಯಲ್ಲಿ ನಿರಂಕುಶವಾಗಿ ಹೊರಟಿದ್ದ ಚಕ್ಕಡಿಯನ್ನು ಬದಿಗೆ ಸರಿಸಲು ಡ್ರಾಯವ್ಹರನು ಕರ್ಕಶವಾಗಿ ಒಂದೇ ಸವನೆ ಹಾರ್ನು ಬಾರಿಸಿದ್ದರಿಂದ, ಹಾರ್ನಿನ ಆ ಧ್ವನಿಯಲ್ಲಿ ಅವಳ ಶಬ್ದಗಳೆಲ್ಲ ಮುಳುಗಿ ಹೋದವು. ಹಾರ್ನಿನ ಸಪ್ಪಳವು ನಿಂತಾಗ ಹೆಂಗಸು ವಿಧವೆಗೆ ಹೇಳುತ್ತಿದ್ದಳು: “…ಎಂಥೆಂಥ ಡಾಕ್ಟರರಿಗೆಲ್ಲ ತೋರಿಸಿದ್ದಾಯಿತು. ಪಥ-ಉಪಚಾರವನ್ನು ಮಾಡಿದ್ದಾಯಿತು. ದೇವರು-ದಿಂಡರಿಗೆ ನಡಕೊಂಡದ್ದಾಯಿತು. ಏನೂ ಉಪಯೋಗವಾಗಲಿಲ್ಲ. ಯಾರೋ ಪುಣ್ಯಾತ್ಮರು ಹೇಳಿದರು, ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿ ಬರ್‍ರಿ, ಖಂಡಿತ ಗುಣವಾಗುತ್ತದೆ ಎಂದು. ಅದಕ್ಕೆ ಮಂತ್ರಾಲಯಕ್ಕೆ ಹೊರಟಿದ್ದೇನೆ. ಏನು ಕಡಿಮೆಯಾಗುವುದು, ಏನು ಕತೆ? ಮತ್ತೇನೂ ಅಂಜಿಕೆಯಿಲ್ಲ ನನಗೆ. ಆದರೆ, ಪಾಪ, ಇಷ್ಟೇ ಎಳೇ ಹುಡುಗರು. ನಾಳೆ ನಾ ಹೋದರೆ ಈ ಹುಡುಗರ ಗತಿ ಏನು?” ತಾಯಿಯು ಅವರಿಬ್ಬರ ಕಡೆಗೆ ನೋಡಿದಳು. ತಾಯಿಯ ಕೈಯನ್ನು ಗಟ್ಟಿಯಾಗಿ ಹಿಡಿದು, ಆ ಹುಡುಗರಿಬ್ಬರು ಆಜ್ಞಾಧಾರಕರಾಗಿ ತಾಯಿಯ ಕಣ್ಣಲ್ಲಿ ನೋಡಿದರು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
“ಶ್ರದ್ದೆ ಇಡಿರಮ್ಮ ರಾಯರು ಮಹಾಮಹಿಮರು, ಎಲ್ಲಾ ಒಳ್ಳೆಯದಾಗುತ್ತದೆ. ಇಂಥ ಎಷ್ಟೋ ಘಟನೆಗಳನ್ನು ನಾನು ಸ್ವತಃ ನೋಡಿದವಳಿದ್ದೇನೆ.” ಯಾರು ಹಾಗೆ ಹೇಳಿದರೆಂಬುದನ್ನು ನೋಡಲು ಆ ಹೆಂಗಸು ತಿರುಗಿದಳು. ಮಧ್ಯಮ ವಯಸ್ಸಿನ ಒಬ್ಬ ಮುತ್ತೈದೆಯಿದ್ದಳು. ಅವಳ ಗಲ್ಲದ ತುಂಬೆಲ್ಲ ಅರಿಷಿಣ ಮೆತ್ತಿದೆ. ಅವಳ ಸಣ್ಣ ಮೂಗಿನ ಮಾನದಿಂದ, ‘ಮೂಗ್ಬೊಟ್ಟು’ ಬಹಳೇ ದೊಡ್ಡದಿದೆ. ಮುತ್ತೈದೆ ಹೆಂಗಸನ್ನು ನೋಡಿ ನಕ್ಕಳು. ಹೆಂಗಸು ಏನೋ ಮಾತಾಡಬೇಕೆಂದು ಮನಸ್ಸಿನಲ್ಲಿ ಎಣಿಕೆ ಹಾಕುವಷ್ಟರಲ್ಲಿಯೇ, ಆ ಮುತ್ತೈದೆಯೇ ಮಾತಿಗೆ ಆರಂಭಿಸಿದಳು:
”ಮಂತ್ರಾಲಯ ಮಹಾ ಪುಣ್ಯಕ್ಷೇತ್ರವಮ್ಮ. ಎಂಥೆಂಥ ಅದ್ಭುತ ಇಲ್ಲಿ ನಡೆದು ಹೋಗಿದೆ. ಮಠದಲ್ಲಿ ರಾಯರ ಮಂಗಳಾರತಿಯಾದ ಮೇಲೆ ಭಕ್ತರಿಗೆ ಮಂಗಳಾರತಿ ಕೊಡಲಿಕ್ಕೆ ಒಬ್ಬ ಹುಡುಗನಿದ್ದಾನೆ. ಅವನನ್ನು ನೀವು ಹೋದ ಮೇಲೆ ನೋಡಿಯೇ ನೋಡುತ್ತೀರಿ. ಆ ಹುಡುಗ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಬಂದಾಗ ಅವನಿಗೆ ನಾಲಿಗೆ ಸರಿಸಲು ಕೂಡ ಬರುತ್ತಿರಲಿಲ್ಲ, ಹುಟ್ಟುಮೂಕ. ಆದರೆ ಈಗ “ಸೇವೆ” ಮಾಡಿ, ತೊದಲು ತೊದಲಾಗಿ ಮಾತಾಡುತ್ತಾನೆ. ಒಂದೇ, ಎರಡೇ. ಇಂಥ ಎಷ್ಟೋ ಘಟನೆಗಳನ್ನು ನಾನು ಕಣ್ಣಾರೆ ಕಂಡವಳಿದ್ದೇನೆ. ಒಂದು ತಿಂಗಳ ಹಿಂದೆಯಂತೂ ಅದ್ಭುತ ಘಟನೆ ನಡೆಯಿತು. ತಲೆ ಕೆಟ್ಟಿದೆಯೆಂದು ಒಬ್ಬ ಗಂಡಸನ್ನು ಸೇವೆಗೆ ಕರೆದುಕೊಂಡು ಬಂದಿದ್ದರು. ಆತ ದಿನಾಲು ಪೂಜೆಯ ವೇಳೆಗೆ ರಾಯರ ಮುಂದೆ ದಳದಳ ಕಣ್ಣೀರು ಸುರಿಸುತ್ತ ನಿಂತುಬಿಡುತ್ತಿದ್ದ. ಒಂದು ದಿವಸ ಏನೆನಿಸಿತೋ ಅವನಿಗೆ, ಯಾರಿಗೆ ಗೊತ್ತು, ರಾತ್ರಿ ನದಿಗೆ ಹೋದ. ಬಹುಶಃ ಜೀವ ಕೊಡಲಿಕ್ಕೆ ಇರಬೇಕು. ನೀರಲ್ಲಿ ಇಳಿಯುತ್ತಿದ್ದಾಗ ಅವನನ್ನು ಯಾರೋ ಕರೆದಂತಾಯಿತು. ಹಿಂದೆ ನೋಡಿದ. ಒಬ್ಬ ತೇಜಸ್ವಿಯಾದ ಆಚಾರ್ಯರು ನಿಂತಿದ್ದರು. “ಸ್ನಾನ ಮುಗಿಯಿತು. ಶುಚಿಯಾದಿ. ಮೇಲೆ ಬಾ ಇನ್ನು” ಎಂದು ಅವನನ್ನು ಮೇಲೆ ಕರೆದು ಹೇಳಿದರು: ”ಇದೋ ಈ ಗೋಪೀಚಂದನ ಹಚ್ಚಿಕೋ. ಒಳಗೆ ಮಾರುತಿಯ ದರ್ಶನ ತೆಗೆದುಕೊಂಡು ಮನೆಗೆ ಹೋಗು.” ಮಂತ್ರಿಸಿದವನಂತೆ ಮೇಲೆ ಬಂದು ಗೋಪೀಚಂದನ ತೆಗೆದುಕೊಂಡು ಅವನು ಗುಡಿಯ ಕಡೆಗೆ ಹೊರಟ. ಅವನಿಗೆ ಆಗ ಏನೂ ಅನಿಸಿಯೇ ಇರಲಿಲ್ಲ. ಯಾರೋ ಒಬ್ಬರು ಆಚಾರ್ಯರಿರಬೇಕು ಎಂದಷ್ಟೇ ಅನಿಸಿತ್ತು. ಆದರೆ ಮುಂದೆ ಹೋದವನು ಅಕಸ್ಮಾತ್ತಾಗಿ ಹಿಂದೆ ತಿರುಗಿ ನೋಡಿದ. ಅವರು ಅಲ್ಲಿರಲಿಲ್ಲ. ಅದೂ ಆಗ ಅವನ ಲಕ್ಷ್ಯಕ್ಕೆ ಬರಲಿಲ್ಲ. ನಡುರಾತ್ರಿಯಲ್ಲಿ ನೇರವಾಗಿ ಗುಡಿಯ ಆವಾರದೊಳಗೆ ಹೊಕ್ಕು ಮಾರುತಿಯ ದರ್ಶನ ತೆಗೆದುಕೊಂಡು, ರಾಯರ ವೃಂದಾವನದ ದರ್ಶನಕ್ಕೆ ಹೋದವ, ಅಲ್ಲೇ ಎಚ್ಚರತಪ್ಪಿ ಹೊಸ್ತಿಲಹತ್ತಿರ ಬಿದ್ದುಬಿಟ್ಟ. ಅವನಿಗೆ ಎಚ್ಚರವಾದಾಗ ಬೆಳಗಾಗಿತ್ತು. ಮಠದ ಪೂಜಾರಿಗಳೆಲ್ಲ ಬೆರಗುಬಟ್ಟು ನಿಂತುಬಿಟ್ಟಿದ್ದರು. ಯಾಕೆಂದರೆ ರಾತ್ರಿ ಹತ್ತಕ್ಕೆ ಗುಡಿಯ ಬಾಗಿಲುಗಳನ್ನೆಲ್ಲ ಭದ್ರವಾಗಿ ಹಾಕಿ, ಬೀಗ ಹಾಕುತ್ತಾರೆ. ಒಳಗೆ ಹೋಗಲು ಬೇರೆ ಹಾದಿಯೇ ಇಲ್ಲ. ನೋಡಿದರೆ ಬಾಗಿಲುಗಳೆಲ್ಲ ಭದ್ರವಾಗಿ ಇದ್ದಂತೇ ಇವೆ. ಅವನನ್ನು ಕೇಳಿದರೆ ಅವನು ಆಗ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮುಂದೆ ಮೂರು ನಾಲ್ಕು ದಿವಸ ಒಂದೇ ಸವನೆ, ರಾತ್ರಿ ಭೆಟ್ಟಿಯಾದ ಆಚಾರ್ಯರನ್ನು ಅವನು ಊರಲ್ಲೆಲ್ಲ ಹುಡುಕಾಡಿದ. ಅವರೆಲ್ಲಿ ಬರಬೇಕು? ರಾಯರೇ ಪ್ರತ್ಯಕ್ಷ “ಫಲ” ಕೊಟ್ಟು ಹೋಗಿದ್ದರು. ಆ ಗಂಡಸು ಈಗ ಎಲ್ಲವನ್ನೂ ಬಿಟ್ಟು ದಾಸನಾಗಿದ್ದಾನೆ.”
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಮಂತ್ರಾಲಯವು ಸಮೀಪಿಸಿತ್ತು. ಬಸ್ಸಿನ ಕಿಟಕಿಯಿಂದ ಹೊರಗೆ ನೋಡಿದರೆ ಮಗ್ಗುಲಲ್ಲೇ ತುಂಗಭದ್ರಾನದಿಯು ಮೌನವಾಗಿ ಟಿಸಿಲು-ಟಿಸಿಲಾಗಿ ಹರಿಯುವದು ಕಾಣಿಸುತ್ತಿತ್ತು. ಸುಣ್ಣ ಬಳೆದ ಮಠದ ದೊಡ್ಡ ದೊಡ್ಡ ಗೋಡೆಗಳು ಸರಿದು ಸಮೀಪಕ್ಕೆ ಬರುವಂತೆನಿಸುತ್ತಿತ್ತು.
ರೋಗಿಷ್ಠ ಹೆಂಗಸಿನ ಮುಖ ತುಸುವೇ ಅರಳಿತು. ಕಂಪಿಸುವ ಧ್ವನಿಯಲ್ಲಿ ಅವಳೆಂದಳು: “ಹಾಗಾದರೆ ನನಗೂ ಕಡಿಮೆಯಾದೀತೇನಮ್ಮ? ಯಾರು ತಾಯೇ, ನೀವು? ಇಷ್ಟೆಲ್ಲ ಕಣ್ಣಾರೆ ನೋಡಿದ್ದೀರಿ. ನೀವೂ ಇಲ್ಲಿ ಸೇವೆಗೆ ಬಂದಿದ್ದೀರಾ?”
ಮುತ್ತೈದೆಯು ನಕ್ಕಳು, ಕಾರಣವಿಲ್ಲದೆ. ಹಾಗೂ ಕೆಳಗಿಟ್ಟಿದ್ದ ಚೀಲವನ್ನು ಕೈಯಲ್ಲಿ ತೆಗೆದುಕೊಳ್ಳುತ್ತ ಹೇಳಿದಳು: “ನಾನು ಹೊರಗಿನವಳಲ್ಲ. ಇಲ್ಲಿಯವಳೇ, ನಮ್ಮ ಮನೆಯವರು ಇಲ್ಲಿಯೇ “ವೈದಿಕೀ” ಮಾಡುತ್ತಾರೆ. ನೀವು ಇಲ್ಲಿ ಬರುವದು ಇದು ಮೊದಲನೇ ಸಲವೆಂದು ಕಾಣುತ್ತದೆ. ಅದೋ, ಬಂದೇ ಬಿಟ್ಟಿತು ಮಂತ್ರಾಲಯ. ನೀವು ಅಲ್ಲೆ ಇಲ್ಲೆ ಇಳಿಯಬೇಡಿರಿ. ಮಠದ ಛತ್ರದಲ್ಲಿಯೇ ತಂಗಿರಿ. ಬೇರೆ ಕಡೆಗೆ ಹೋದರೆ ಸುಮ್ಮನೇ ದುಡ್ಡು ತೆತ್ತಬೇಕಾಗುತ್ತದೆ.”
ಬಸ್ಸು ಗರಕ್ಕನೆ ಹೊರಳಿತು. ಏಳಬೇಕೆಂದ ಆ ಮುತ್ತೈದೆಯು ಮತ್ತೆ ಸೀಟಿನಲ್ಲಿಯೇ ಕುಕ್ಕರಿಸಿದಳು. ”ಬರುತ್ತೇನಮ್ಮ ನಾಳೆ ನಿಮ್ಮನ್ನು ನದಿಯ ಮೇಲೆ ಭೆಟ್ಟಿಯಾಗುತ್ತೇನೆ. ಮರದ ಬಾಗಿಣ ಕೊಡುವವರಿದ್ದರೆ ನನಗೆ ಕೊಟ್ಟುಬಿಡಿರಿ. ಬೇರೆ ಯಾರಿಗೂ ಕೊಡಬೇಡಿರಿ. ನನ್ನ ಹೆಸರು ಕಲಾವತಿ. ಇಲ್ಲಿ ಎಲ್ಲರೂ ನನಗೆ ಕಲ್ಲವ್ವ ಎನ್ನುತ್ತಾರೆ. ಮತ್ತೆ ಯಾರಾದರೂ ಕೇಳಿದರೆ, ಕಲ್ಲವ್ವನಿಗೆ ಕೊಡುತ್ತೇನೆಂದು ಹೇಳಿಬಿಡಿರಿ.” ಹೆಂಗಸಿಗೆ ವಿಚಾರ ಮಾಡಲಿಕ್ಕೂ ಆಸ್ಪದ ಕೊಡದೆ, ಕಲ್ಲವ್ವನು ಅವಳಿಂದ ವಾಗ್ದಾನ ತೆಗೆದುಕೊಂಡುಬಿಟ್ಟಿದ್ದಳು.
ಹೊರಗೆ ದೂರದಲ್ಲಿ ನದಿಯ ನೀರು, ಸಣ್ಣ ಹುಡುಗರು ಬಿಸಿಲಲ್ಲಿ ಹಿಡಿದು ನಿಂತ ಕನ್ನಡಿಯ ತುಣುಕಿನಂತೆ, ಥಕಪಕ ಹೊಳೆಯುತ್ತಿತ್ತು. ಪ್ರವಾಸದಿಂದ ದಣಿದುಹೋಗಿದ್ದ ಜನರ ಮ್ಲಾನ ಮುಖಗಳು ಹೊರಗಿನ ನೋಟಕ್ಕಾಗಿ ಹಾತೊರೆದು ಕಿಟಕಿಯ ಹತ್ತಿರ ನೆರೆದವು.
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಬಸ್ಸು ಸ್ಟ್ಯಾಂಡನ್ನು ಮುಟ್ಟಿದಾಗ ತಮ್ಮನು ಮಲ್ಲಿಗೆಯ ವಾಸನೆಯ ತಪ್ಪುದಾರಿ ಹಿಡಿದು ಗತಜೀವನದ ನೆನಪುಗಳ ಘೋರಾರಣ್ಯದಲ್ಲಿ ಕಳೆದುಕೊಂಡು ಹೋಗಿದ್ದ. ತಂಗಿಯು ಗಾಲಿಯ ಕೆಳಗೆ ಬುರುಗು ಬುರುಗಾಗಿ ಮೇಲೇರಿ ಬರುತ್ತಿದ್ದ ನೀರನ್ನು ನೆನೆದು ಥರಥರ ನಡುಗುತ್ತಿದ್ದಳು. ತಾಯಿಯು ಎರಡೂ ಕೈಯಿಂದ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಶೂನ್ಯಮನಸ್ಕರಾಗಿ ಕುಳಿತಿದ್ದರು. ತಂದೆಯು ಇನ್ನೂ ಅರೆನಿದ್ದೆಯಲ್ಲಿ ತೂಕಡಿಸುತ್ತಿದ್ದರು.
*
ಬೆಳಗಾಗಲು ಇನ್ನೂ ಒಂದು ತಾಸಿದ್ದರೂ ಜನರು ನದಿಯ ದಂಡೆಯಲ್ಲಿ ನೆರೆದಿದ್ದಾರೆ. ಹಾಗೆ ನೋಡಿದರೆ ನಸುಕು ಹರಿಯುವುದರಲ್ಲಿಯೇ ಸ್ನಾನವಾಗಿ ಸೇವೆ ಸುರುವಾಗಬೇಕು.
ಬಂಡೆಗಲ್ಲುಗಳ ಮೇಲೆ ಕಾಳಜಿಪೂರ್ವಕವಾಗಿ ನಡೆಯುತ್ತ ಆ ನಾಲ್ಕೂ ಜನರು ನೀರನ್ನು ಸಮೀಪಿಸಿದರು. ತಂದೆಗೆ ನಿಜವಾಗಿಯೂ ಬಹಳ ಸಿಟ್ಟು ಬಂದಿತ್ತು. ಇಂಥ ಚಳಿಯಲ್ಲಿ ಹೋಗಿ ನದಿಯಲ್ಲಿ ಮುಳುಗು ಹಾಕಿ ಊರ ಮುಂಜಾನೆ ದೇವರ ಮುಂದೆ ಹೋಗಿ ನಿಲ್ಲಬೇಕೆಂದೆಲ್ಲಿದೆ? ಬಿಸಿಲೇರಿದ ಮೇಲೆ ಸ್ನಾನ ಮಾಡಿ ಹೋದರಾಗುವುದಿಲ್ಲವೆ? ಎದ್ದ ಕೂಡಲೆ ಛತ್ರದಲ್ಲಿಯೇ ತಮ್ಮನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು: ನೀವೆಲ್ಲ ಮುಂದೆ ಹೋಗಿರಿ. ನಾನು ಆಮೇಲೆ ಬರುತ್ತೇನೆ ಎಂದು. ಇದು ತಾಯಿಯ ಕಿವಿಗೆ ಬಿದ್ದಿತ್ತು. ಆ ಮಾತು ತಾಯಿಗೆ ಸರಿಬಿದ್ದಿದ್ದಿಲ್ಲವೆನ್ನುವದು ಅವರ ಮುಖ ನೋಡಿದಾಗಲೇ ತಂದೆಗೆ ಗೊತ್ತಾಗಿತ್ತು. “ಯಾವಾಗಲೂ ಇವರು ಹಿಂಗೇ, ಇಲ್ಲೇನು ನನ್ನ ಸಲುವಾಗಿ ಬಂದ್ಹಾಂಗ ಮಾಡತಾರ. ಮಗಳ ಜಡ್ಡು ನೆಟ್ಟಗಾಗಬೇಕೂಂತ…” ಇನ್ನೂ ಏನೆನ್ನುವವರಿದ್ದರೋ, ಅಷ್ಟರಲ್ಲಿ ತಂಗಿ ಓಡುತ್ತ ಬಂದಿದ್ದರಿಂದ ಮಾತು ಅರ್ಧಕ್ಕೆ ನಿಂತುಹೋಗಿತ್ತು.
“ಓ ರಾಯರ, ಆ ಕಡೆಗೆ ಹೋಗಬ್ಯಾಡ್ರಿ, ನೀರಿನ ಸೆಳವು ಭಾಳ ಅದ ಅಲ್ಲೇ. ಹಾಂ, ತುಸು ಈ ಕಡೆ ಬರ್‍ರಿ. ಹೌದು, ಮತ್ತು ಅಲ್ಲಿಯೂ ಈಸ ಬೀಳಬ್ಯಾಡ್ರಿ ಮತ್ತ. ನೀರಾಗ ಎಲ್ಲಾ ಕಡೆ ಬಂಡಿಗಲ್ಲು ಬಹಾಳ ಮುಣಗ್ಯಾವ.” ಹಾಗೆ ಒದರಿ ಹೇಳುತ್ತಿದ್ದವರು ಯಾರೆನ್ನುವುದು ತಂದೆಗೆ ತಿಳಿಯಲಿಲ್ಲ. ಯಾರಿಗೆ ಅವರು ಹೇಳಿದರು ಎನ್ನುವುದೂ ಅರ್ಥವಾಗಲಿಲ್ಲ. ನದಿಯ ಮೇಲೆಲ್ಲ ಒಂದು ಮೇಳವೇ ನೆರೆದಿದೆ. ಗದ್ದಲದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಸಹಜವಾಗಿ ಕೇಳಿಸುವಂತಿಲ್ಲ. ತಂಗಿಯ ಮೈ ಮುಗಿಸಿ ತಾಯಿ ಬರುವವರೆಗೆ ಅವರು ಅಲ್ಲಿಯೇ ಬಂಡೆಗಲ್ಲ ಮೇಲೆ ಕುಳಿತರು.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
“ಸ್ವಲ್ಪ ಹಾದೀ ಬಿಟ್ಟು ಕೂಡ್ರೆಪ್ಪ, ಹೆಂಗಸರು, ಹುಡುಗರು ಹೋಗಿ ಬರೂ ಹಾದಿ ಇದು. ಮಡೀ ಹೆಂಗಸರು ಹೋಗುವ ಹಾದ್ಯಾಗ ಹೀಂಗ ಕೂತರ…” ತಂದೆಯು ತಿರುಗಿ ನೋಡಿದರು. ಅದೇ ಹೆಂಗಸು. ಇನ್ನೂ ಅಷ್ಟೇ ಡೂಗಾಗಿ ಬಿಲ್ಲಿನಂತೆ ಬಾಗಿ ನಡೆಯುತ್ತಿದ್ದಾಳೆ. ಇಷ್ಟು ವರುಷವಾದರೂ ಏನೂ ಬದಲಾವಣೆಯಿಲ್ಲ. ಆಗಿನಕಿಂತ ಸ್ವಲ್ಪ ಸೊರಗಿ, ಕಪ್ಪಾಗಿದ್ದಾಳೆ, ಅಷ್ಟೇ. ಕೈಯಲ್ಲಿ ತಂಬಿಗೆಯಿದೆ- ನೆಗ್ಗಿ ಸವಕಳಿಯಾದ್ದದು. ಬಹುಶಃ ಅದೇ ತಂಬಿಗೆಯಿರಬೇಕು; ಹನ್ನೆರಡು ವರ್ಷಗಳ ಹಿಂದಿನದು.
…ಆಗ ತಮ್ಮ ಹೈಸ್ಕೂಲಿಗೆ ಹೋಗುತ್ತಿದ್ದ. ತಂಗಿ ಅದೇ ಶಾಲೆ ಬಿಟ್ಟಾಗಿತ್ತು. ಹೆಂಡತಿ ಜಗಳವಾಡಿ ತವರೂರಿಗೆ ಹೋಗಿದ್ದರೆಂದು ಆಗ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಅವರು ಮಂತ್ರಾಲಯಕ್ಕೆ ಬಂದಿದ್ದರು. ಅವರು ಆಗ ಬಂದದ್ದು ಮುಖ್ಯ ರೇಲ್ವೆ ಪಾಸಿತ್ತೆಂದು. ಹಾಗೂ ಅನಾಯಾಸ ಹುಡುಗರಿಗೂ ಸೂಟಿಯಿತ್ತು. ಆದರೆ ಹೆಂಡತಿ ತಿರುಗಿ ಬರಲಿ ಎಂದು ಹರಕೆ ಹೊರಲು ಮಾತ್ರ ಸರ್ವಥಾ ಅವರು ಬಂದಿರಲಿಲ್ಲ. ಅವಳ ಸ್ವಭಾವವೇ ಹಾಗೆ. ಅವರು ಅವಳಿಗೆ ಯಾವುದಕ್ಕೂ ಎಂದೂ ಕಡಿಮೆ ಮಾಡಿರಲಿಲ್ಲ. ಆದರೂ ತುಡುಗಿನಿಂದ ಎಲ್ಲೆಲ್ಲೆಂದಲೋ ರೊಕ್ಕ ಕೂಡಿಸಿ ನೂರು ರೂಪಾಯಿಯಷ್ಟು ಕಳ್ಳಗಂಟು ಮಾಡಿಕೊಂಡಿದ್ದಳು. ಊರಿಗೆ ಹೋಗುವಾಗ ಸೀರೆಯ ಗಂಟಿನಲ್ಲಿ ಮುಚ್ಚಿಟ್ಟು ಟ್ರಂಕಿನಲ್ಲಿ ಹಾಕಿಕೊಂಡು ಹೊರಟಿದ್ದಳು. ಇದು ಆಗ ಅವರ ಲಕ್ಷ್ಯಕ್ಕೆ ಬಂದಿತ್ತು. ಹಾಗೆ ಗಂಡನಿಂದ ಮುಚ್ಚಿ ರೊಕ್ಕ ಒಯ್ಯುವುದು ಒಳ್ಳೆಯದಲ್ಲ ಎಂದಿಷ್ಟು ಅವರು ಹೇಳಿದ್ದಕ್ಕೆ ಅವಳು ಸಿಟ್ಟಿಗೆದ್ದು ತವರುಮನೆಗೆ ಹೋಗಿದ್ದಳು.
…ಆಗ ಅವರು ಮಂತ್ರಾಲಯಕ್ಕೆ ಬಂದಿದ್ದರು.
ಆ ಡೂಗ ಹೆಂಗಸು ಅಂದಿನಿಂದಲೂ ಇಲ್ಲಿಯೇ ಇದ್ದಾಳೆ. ತಂಗಿ ಅವಳನ್ನು ಆಗ ನೋಡಿದಾಗ ಭಯ ನೆರೆದ ತಾತ್ಸಾರದಿಂದ ಅವಳಿಂದ ಸರಿದು ದೂರ ಹೋಗಿ ನಿಂತಿದ್ದಳು. ತಮ್ಮ ಅವಳ ಕೈಯಲ್ಲಿ ಯಾವಾಗಲೂ ಇರುವ ತಂಬಿಗೆಯನ್ನು ನೋಡಿ, ಅವಳಿಗೆ ‘ತಂಬಿಗೆಯ ಡೂಗವ್ವ’ ಎಂದು ಕರೆಯುತ್ತಿದ್ದ.
…ತಂಗಿಗಂತೂ ಈಗ ಅದನ್ನು ನೆನಪಿಡಲು ಸಾಧ್ಯವಿಲ್ಲ.
..ಆದರೆ ತಮ್ಮನೂ ಅದನ್ನು ಮರೆತುಬಿಟ್ಟಾನೆಂದರೆ…
ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ
ತಮ್ಮನಿಗೆ ನೆನಪು ಮಾಡಿಕೊಡಲೆಂದು ತಂದೆಯು ಸುತ್ತುಮುತ್ತಲೂ ನೋಡಿದರು. ಆದರೆ ತಮ್ಮನೆಲ್ಲಿದ್ದಾನೆ? ಆ ಕಡೆ ನೀಲಿಯಾದ ಆಕಾಶ, ಈ ಕಡೆ ಅಸ್ತವ್ಯಸ್ತವಾಗಿ ಬಿದ್ದ ಕಪ್ಪು ಬಂಡೆಗಳು. ತಮ್ಮನೆಲ್ಲಿಯೂ ಕಾಣಿಸಲಿಲ್ಲ. ದೂರದ ಇನ್ನೊಂದು ಬಂಡೆಗೆ ಅಡ್ಡಾಗಿ ಹೆಂಗಸರು ಮೈತೊಳೆದುಕೊಳ್ಳುತ್ತಿದ್ದರು. ಬಂಡೆಯ ಮೇಲೆ ಅರಿವೆಗಳನ್ನು ಹರವಿದ್ದರು, ಒಣಗಿಸಲಿಕ್ಕೆಂದು.
ತಂದೆ ದಿಟ್ಟಿಸಿ ಪುನಃ ಪುನಃ ಸುತ್ತೂ ಕಡೆಗೆ ನೋಡಿದರು. ಆದರೆ ತಮ್ಮನೆಲ್ಲಿಯೂ ಸಿಗಲಿಲ್ಲ. ತಮ್ಮನ ಬಗೆಗೆ ಅವರಿಗೆ ಅಪಾರ ಕರುಣೆ ಹುಟ್ಟಿತು. ಕನಿಕರ ಬಂತು. ಅವನನ್ನು ಕರೆದು ಮಗ್ಗಲಿಗೆ ಕೂಡಿಸಿಕೊಂಡು, ಬೆನ್ನಮೇಲೆ ಕೈಯಾಡಿಸಿ ಮತ್ತೆ ಮತ್ತೆ ರಮಿಸಬೇಕು ಎಂದೆನಿಸಿತು. ಅವನ ವಯಸ್ಸಿನಲ್ಲಿ ತಮ್ಮದು ಲಗ್ನ ಕೂಡ ಆಗಿರಲಿಲ್ಲ. ಆದರೆ ತಮ್ಮನ್ನು ಈಗ ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿದ್ದಾನೆ.
ತಂದೆಗೆ ತಮ್ಮನ ಹೆಂಡತಿ ನೆನಪಾದಳು. ತಾವಿದ್ದ ಸ್ಟೇಶನ್ನು ನೆನಪಾಯಿತು. ರೈಲ್ವೆ ಹಳಿ ನೆನಪಾದವು. ಮೊನ್ನೆ ಮೊನ್ನೆ ತಮ್ಮ ಕಣ್ಣರಕೆಯಲ್ಲಿಯೇ ಬೆಳೆದ ಹುಡುಗಿ, ಹೆಂಡತಿಯಾಗಿ ಈಗ ಕತೆಯಾಗಿ ಹೋಗಿಬಿಟ್ಟಿದ್ದಾಳೆ. ಸಾವಿನ ಅರ್ಥ ಕೂಡ ಗೊತ್ತಿರದ ಹಸುಳೆ-ವಯಸ್ಸಿನಲ್ಲಿ ಅವಳು ಸತ್ತುಹೋದಳು. ಸತ್ತ ದಿನವೇ ಪುನಃ ಅವಳನ್ನು ಯಾರಾದರೂ ಎಚ್ಚರಿಸಿದರೆ, ಕಣ್ಣು ತಿಕ್ಕುತ್ತ ನೇರವಾಗಿ ಅವಳು ಮನೆಗೆ ನಡೆದು ಬಂದುಬಿಡಬಹುದಾಗಿತ್ತು.
ಕ್ರಮೇಣ ತಂದೆಯವರಿಗೆ ಅನಿಸತೊಡಗಿತು: ಬಿಸಿಲಿಗೆ ತಮ್ಮ ತಲೆ ಕಾಯಹತ್ತಿದೆ, ಎಂಬುದು. ಕೆಳಗಿಟ್ಟ ಒದ್ದೆಯಾಗಿದ್ದ ಪಂಚೆಯನ್ನು ತಲೆಯ ಮೇಲೆ ಹೊತ್ತುಕೊಂಡರು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಕಪ್ಪಾದ ದೊಡ್ಡ ದೊಡ್ಡ ಬಂಡೆಗಳು ಕಬ್ಬಿಣದ ತುಂಡುಗಳಂತೆ ಬಿದ್ದಿವೆ. ನದಿಯಿಂದ ಮಠಕ್ಕೆ ಹೋಗುವ ದಾರಿಯು ಆ ಬಂಡೆಗಳ ಮೇಲೆ ಹಾಯ್ದು ಹೋಗಿದೆ. ದಾರಿ ಮುಗಿಯುವಲ್ಲಿ ಎತ್ತರವಾದ ಭವ್ಯವಾದ ಗೋಡೆಯಿದೆ. ಗೋಡೆಯನ್ನು ದಾಟಿದರಾಯಿತು ಮಠ ಬಂತು. ಗೋಡೆಗೆಲ್ಲ ಸುಣ್ಣ ಬಡೆದು ಪಟ್ಟಿಯಾಗಿ ಹುರಿಮಂಜನ್ನು ಇಳಿಬಿಟ್ಟಿದ್ದಾರೆ.
ತಾಯಿ-ತಂಗಿ ಮೈ ಮುಗಿಸಿ ಒದ್ದೆಯಲ್ಲಿ ದಂಡೆಗೆ ನಡೆದುಬರುತ್ತಿದ್ದರು. ತಾಯಿಗೆ ಹಾಗೆ ಬರಲು ಸಂಕೋಚವೆನಿಸಿತು. ನೀರಿನಿಂದ ಒಮ್ಮೆಲೆ ಎದ್ದು ಹೊರಗೆ ಬರುವದೆಂದರೆ ಎಷ್ಟು ಖಜೀಲಾಗುತ್ತದೆ ಮನಸ್ಸಿಗೆ. ಅರಿವೆಯೆಲ್ಲ ಮೈಗೆ ತಪತಪ ಅಂಟಿಕೊಂಡಿರುತ್ತವೆ. ತಾವು ದೊಡ್ಡ ಹೆಂಗಸರು, ತಮಗೆ ಇನ್ನೂ ನಾಚಿಕೆಯಾಗುತ್ತದೆ. ಆದರೆ ತಂಗಿಗೆ ಇದರ ಜ್ಞಾನವೆಲ್ಲಿದೆ? ಸ್ನಾನ ಮಾಡಿ ಬಚ್ಚಲದಿಂದ ಓಡಿಹೋಗುವ ಸಣ್ಣಹುಡುಗರಂತೆ, ಧುಡುಧುಡು ದಂಡೆಗೆ ಓಡುತ್ತಿದ್ದಾಳೆ.
ನದಿಯ ಗದ್ದಲ ಬರಬರುತ್ತ ಕಡಿಮೆಯಾಗತೊಡಗಿತ್ತು. ಜನರೆಲ್ಲ ಗಡಬಡಿಸಿ ಕೊಂಡು ಮಠದ ಕಡೆಗೆ ಹೋಗುವ ಸಿದ್ಧತೆ ನಡೆಸಿದ್ದರು. ಒಣಗಹಾಕಲು ಬಂಡೆಯ ಮೇಲೆ ಹಾಸಿದ ಅರಿವೆಗಳೆಲ್ಲ ಕ್ರಮೇಣ ಇಲ್ಲವಾಗುತ್ತಿವೆ.
ಅಲ್ಲಿಯೇ ಅರಿವೆಯೊಗೆಯುತ್ತ ಕುಳಿತ ಕೊಮಟರ ಹೆಂಗಸರು ಅಂದಳು: “ಸಾವಕಾಶ ಬಾರಮ್ಮ ಕಲ್ಲು ಹಾವಸೆಗಟ್ಟಿರುತ್ತದೆ. ಕಾಲು ಜರೆದೀತು. ಮೊನ್ನೆ ನಾನು ಇಷ್ಟು ಹೇಳಿದ್ದಕ್ಕೆ ಒಬ್ಬ ಅಮ್ಮ ಎಷ್ಟು ರೇಗಿಬಿಟ್ಟಳು ಏನು ಕತೆ? ನಾನೇನು ಕೆಡಕು ಹೇಳಿದೆ? ಕಡೆಗೆ ನಾನು ಹೇಳಿದಂತೇ ಆಯಿತು. ಸಿಡಿಮಿಡಿಗೊಂಡು ಮುಂದೆ ಹೊರಟಾಗ ಆ ಅಮ್ಮ ಜರೆದುಬಿದ್ದು ತನ್ನ ಕಾಲು ಮುರಿದುಕೊಂಡಳು.”
ತಾಯಿಗೂ ಬಹಳ ಸಿಟ್ಟು ಬಂತು. ಮಂದಿಯ ಉಸಾಬರಿಯ ಬಿಟ್ಟು ತನ್ನ ಕೆಲಸ ತಾನು ಮಾಡಿಕೊಂಡು ಹೋಗು ಎಂದು ಹೇಳಬೇಕೆನಿಸಿತು. ಆದರೆ ಮುಂಜಾನೆಯೆದ್ದು ಇಲ್ಲದ ನ್ಯಾಯ ತೆಗೆದುಕೊಂಡು ಕೂಡುವುದರಲ್ಲಿ ಏನು ಅರ್ಥವಿದೆಯೆಂದು ಸುಮ್ಮನಾದರು. ಮೆಲ್ಲಮೆಲ್ಲನೆ ಕಾಲಿಡುತ್ತ ತಂಗಿಯನ್ನು ಮೇಲೆ ಮುಟ್ಟಿಸಿ ಆಳವಾಗಿ ಉಸಿರುಬಿಟ್ಟರು.
ತಂಗಿ ಇಲ್ಲಿ ಬಂದ ಕೂಡಲೇ ಬಹಳ ಸಮಾಧಾನಿಯಾಗಿದ್ದಾಳೆ. ಮುಖದ ಮೇಲೆಲ್ಲ ಮ್ಲಾನತೆ ಬಂದಿದೆ. ಯಾವಾಗಲೂ ಯಾವದೋ ತಂದ್ರಿಯಲ್ಲಿ ಮುಳುಗಿ, ಅಮಲೇರಿದಂತಿರುತ್ತಾಳೆ. ಅದೇ, ಸ್ಟೇಶನ್ನಿನಲ್ಲಿದ್ದಾಗ ಎಷ್ಟು ಅಬ್ಬರ ಮಾಡುತ್ತಿದ್ದಳು. ಗಾಡಿಯ ಸಪ್ಪಳ ಕೇಳಿಸಿದಂತಾಗಲು ರೇಲ್ವೆ ಹಳಿಯ ಕಡೆಗೆ ಮತ್ತೆ ಮತ್ತೆ ದಿಕ್ಕುಗೆಟ್ಟು ಓಡುತ್ತಿದ್ದಳು. ಆಗ ಅವಳನ್ನು ಹಿಡಿದಿಡುವದೇ ಎಲ್ಲರಿಗೂ ಒಂದು ಕೆಲಸವಾಗುತ್ತಿತ್ತು. ಹಳಿಯ ಮೇಲೆ ಯಾವಾಗಲೂ ಗಾಡಿ ಬರದಿದ್ದರೇನಾಯಿತು, ಹಳಿಯೇರಿ ಇಳುಕಲು ಇಳಿದರೆ ತೀರಿತು, ಅಲ್ಲಿ ಹಾಳು ಬಾವಿಯಿದೆ.
ತಾಯಿ ಸೀರೆಯುಟ್ಟುಕೊಳ್ಳುತ್ತ ಒಂದು ಸಲ ಎಲ್ಲ ಕಡೆಗೂ ಕಣ್ಣು ಹರಿಸಿದರು, ತಮ್ಮ ಕಡೆಗೆ ಯಾರಾದರೂ ನೋಡುತ್ತಿದ್ದಾರೆಯೇ ಎಂದು. ಅದೇ ವೇಳೆಗೆ ಗಾಳಿಯ ಸೆಳಕು ಪ್ರಬಲವಾಗಿ ಬೀಸಿತು. ಕೈಯಲ್ಲಿ ಗಟ್ಟಿಯಾಗಿ ಹಿಡಿದಿದ್ದ ಸೆರಗಿನಲ್ಲಿ ಗಾಳಿ ತುಂಬಿ, ಹಡಗಿನ ಹಾಯಿಯಂತೆ ಉಬ್ಬಿ ಫಡಫಡಿಸಿತು. ತಾಯಿ ಒಮ್ಮೆಲೆ ಗೊಂದಲಿಸಿದರು. ಸೀರೆಯನ್ನೆಲ್ಲ ಮುದ್ದೆ ಮಾಡಿ ಅವಚಿ ಹಿಡಿದರು. ಆದರೆ ತಂಗಿ ಕುಳಿತಲ್ಲಿ ಇನ್ನಾರಾದರೂ ಇದ್ದರೆ ಅವರಿಗೆ, ಅವರ ಕಾಲಿನ ಹಿಂಭಾಗ ಗಟ್ಟಿಯಾಗಿ, ಬೆಳ್ಳಗಾಗಿ, ಮಾಂಸಲವಾಗಿ ಕಾಣಿಸಬಹುದಿತ್ತು.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ದೂರದಲ್ಲಿ ತಂದೆ ಯಾರೋ ಇಬ್ಬರೊಡನೆ ಮಾತಾಡುತ್ತಿದ್ದಾರೆ. ಕೈ ಮಾಡಿ ಏನೋ ತಿಳಿಸಿ ಹೇಳುವಂತಿದೆ. ಯಾರ ಮುಖವೂ ಅಲ್ಲಿಂದ ಸ್ಪಷ್ಟವಾಗಿ ಕಾಣಿಸುವುದಿಲ್ಲ. ತಾಯಿಗೆ ಒಮ್ಮೆಲೆ ನೆನಪಾಯಿತು. ಸುತ್ತುಮುತ್ತಲು ಗಾಬರಿಯಿಂದ ನೋಡಿದರು: ತಂಗಿ ಇದುವರೆಗೆ ಇಲ್ಲೇ ಕುಳಿತಿದ್ದವಳು ಇಷ್ಟರಲ್ಲಿಯೇ ಎಲ್ಲಿ ಹೋದಳು?
ನಿಜವಾಗಿಯೂ ತಂದೆಗೆ ಅವರನ್ನು ಎಲ್ಲಿಯೂ ನೋಡಿದ ನೆನಪಿರಲಿಲ್ಲ. ಆ ಗೃಹಸ್ಥರು ಕಪ್ಪಾಗಿ, ಕುಳ್ಳಗಿದ್ದರು. ಐವತ್ತೈದು ದಾಟಿರಬೇಕು. ಅವರು ನಕ್ಕ ಕೂಡಲೇ ಆ ಗೃಹಸ್ಥರ ಹರೆಯದ ಹಲ್ಲು ಹೊಳೆದವು. ಬಹುಶಃ ಅವು ಅವರವಿರಲಿಕ್ಕಿಲ್ಲ. ಅವರ ಕೂಡ ಬಂದ ಇನ್ನೊಬ್ಬರ ಪರಿಚಯವಂತೂ ಅವರಿಗೆ ಇಲ್ಲವೇ ಇಲ್ಲ. ಆ ಕಪ್ಪು ಮುದುಕರೆಂದರು: “ಏನು ರಾಯರ ಗುರುತೇ ಹತ್ತಲಿಲ್ಲ ಮೊದಲ ನನಗ. ಈಗ ಎಷ್ಟು ಬದಲಾಗೀರಿ?” ತಂದೆಗೆ ಅವರ ಮಾತಿನ ರೀತಿಯೇ ಗೂಢವೆನಿಸಿತು. ನಾನೆಲ್ಲಿ ಬದಲಾಗಿದ್ದೇನೆ? ಜೀವಮಾನವೆಲ್ಲ ಕಳೆದರೂ ತಾವು ಹಾಗೇ ಉಳಿದರು. ಯಾವ ಬದಲಾವಣೆಯೂ ಆಗಲಿಲ್ಲ. ಇನ್ನು ಮೇಲೆಯಾದರೂ ಏನಾದರೂ ಬದಲಾಗಬೇಕು. ನನ್ನ ಗುರುತನ್ನು ನಾನೇ ಮರೆಯಬೇಕು. ಎಲ್ಲರಿಗೂ ಮರಿಸಬೇಕು… ಯಾರೂ ಗುರುತಿಸದಿದ್ದ ಸ್ಥಳವನ್ನು ಹುಡುಕಿಕೊಂಡು ಒಬ್ಬನೇ ದೂರ ದೂರ ಹೋಗಬೇಕು… ತಂದೆಯು ಹಾಗೆಯೇ ಮಾತಾಡದೆ ಮೌನವಾಗಿರುವದನ್ನು ನೋಡಿ ಮುದುಕರು ಗಟ್ಟಿಸಿ ನುಡಿದರು:
“ನೀವು ಹಿಂದೊಮ್ಮೆ ಸೊಲ್ಲಾಪುರದಲ್ಲಿ ಗೂಡ್ಸ ಕ್ಲಾರ್ಕ ಇದ್ದಾಗ ನಾನು ಅಲ್ಲಿ ಸಿಗ್ನಲರ್ ಎಂದು, ಬಂದಿದ್ದೆ, ಆ ಮಾತಿಗೆ ಈಗ ಮೂವತ್ತು ವರ್ಷವಾಗಿರಬೇಕು. ಮೊನ್ನೆ ಮೊನ್ನೆ ‘ತಕಾರಿ’ಯ ಸ್ಟೇಶನ್ ಮಾಸ್ತರನಾಗಿ ರಿಟಾಯರ್ ಆದೆ. ಈಗ ಬಹಳ ಸೊರಗಿಬಿಟ್ಟಿರಿ ನೀವು.”
“ವಯಸ್ಸಾಗುತ್ತ ಬಂತು. ಮನುಷ್ಯ ಹೇಗೆ ಹಾಗೆಯೇ ಉಳಿಯುತ್ತಾನೆ, ನೋಡಿರಿ? ನನಗೂ ಈಗ ನಿಮ್ಮದು ಸ್ವಲ್ಪ ಗುರುತು ಹತ್ತಿದಂತಾಯಿತು. ನೀವೂ ಈಗ ಆಗಿನಂತೆ ಉಳಿದಿಲ್ಲ.”
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ತಂದೆಗೆ ಇನ್ನೂ ಗುರುತು ಹತ್ತಿರಲಿಲ್ಲ. ಹತ್ತುವಂತೆಯೂ ಇರಲಿಲ್ಲ. ಔಪಚಾರಿಕವಾಗಿ ಅಂದರು, ಅಷ್ಟೇ.
ಮುದುಕರು ಕೇಳಿದರು: “ಈಗೇನು ಒಬ್ಬರೇ ಬಂದಿದ್ದೀರೋ? ಅಥವಾ…”
“ಎಲ್ಲರೂ ಕೂಡಿ ಬಂದಿದ್ದೇವೆ. ಮಗಳ ಪ್ರಕೃತಿ ನೆಟ್ಟಗಿಲ್ಲ. ರಾಯರ ಸೇವೆಗೆಂದು…”
“ಯಾಕೆ, ಏನಾಗಿದೆ?”
“ಹಾಗೆ ವಿಶೇಷವೇನೂ ಇಲ್ಲ. ಏನೋ ನಡುನಡುವೆ ಸ್ವಲ್ಪ ವಿಸ್ಮೃತಿ ಬಂದ ಹಾಗೆ ಮಾಡುತ್ತಾಳೆ, ಅಷ್ಟೇ.”
ತಾಯಿ, ನೀರಿನ ಕಡೆಗೆ ಧಾವಿಸಿದ್ದ ತಂಗಿಯನ್ನು ಹಿಡಿದುಕೊಂಡು ಬಂದು, ಅಸ್ವಸ್ಥರಾಗಿ ತಂದೆಯ ಹಾದಿ ನೋಡುತ್ತ ನಿಂತಿದ್ದರು.
”ಆಗಲಿ. ಹಾಗಾದರೆ ಮತ್ತೆ ಭೆಟ್ಟಿಯಾಗೋಣ. ಉತ್ಸವದವರೆಗೆ ಇರಬೇಕೋ ಏನು ಬೇಗ ಸೇವೆ ಮುಗಿಸಿ ಹೊರಟುಬಿಡುವವರೋ?”
“ರಾಯರು ಹೇಗೆ ಅನುಕೂಲ ಮಾಡಿಕೊಡುತ್ತಾರೆಯೋ ನೋಡಬೇಕು. ಇರುವ ಸಂಕಲ್ಪವನ್ನಂತೂ ಮಾಡಿಕೊಂಡಿದ್ದೇನೆ. ಅದು ಸಾಧಿಸಬೇಕು, ಅಷ್ಟೇ.”
ಮಠದ ಗಂಟೆ ಕೇಳಿಸುತ್ತಿದೆ. ನದಿಯ ದಂಡೆಯ ಮೇಲೆಲ್ಲ ಅರಿಷಿಣ, ಕುಂಕುಮ, ಗೋಪೀಚಂದನದ ವಾಸನೆ ಇಡುಗಿದೆ. ತಂದೆ ಹೊರಟುಹೋದ ಮೇಲೆ ಕಪ್ಪು ಮುದುಕರು ಸಂಗಡಿಗರಿಗೆ ಹೇಳಿದರು:
”ಒಂದು ಲಕ್ಷದ ಕುಳ ಅಪಾ, ಇದು. ಗುಡ್ಸ ಮಾಸ್ತರಾಗಿ ರಿಟಾಯರ್ ಆದರು. ಬಹಾಳ ರೊಕ್ಕ ಮಾಡ್ಯಾರ. ಆದರೇನು, ಬರೀ ರೊಕ್ಕದ ಸುಖ ಸುರೀಲಿಕ್ಕೆ ಆಗತದ? ಇವರ ಹೆಂಡತಿ ರಾಕ್ಷಸಿ ಇದ್ದಾಂಗ ಇದ್ದಾಳ. ಅವರಿಬ್ಬರದೂ ಕಡೆಯವರೆಗೂ ಕೂಡಿ ನಡೀಲಿಲ್ಲ. ಮಾಸ್ತರರ ಮನಸ್ಸಿನ ವಿರುದ್ಧ ತೌರುಮನೀ ಕಡೀದು ಒಂದು ಹುಡಿಗಿನ್ನ ತಂದು ಮಗನಿಗೆ ಲಗ್ನಾ ಮಾಡಿದಳು. ಆ ಹುಡಿಗಿನ್ನ ಸಹಿತ ಒಳ್ಳೆ ರೀತಿಯಿಂದ ಇಟ್ಟುಕೋಳಿಕ್ಕೆ ಆಗಲಿಲ್ಲ ಆಕೀ ಕಡಿಂದ. ಇಕೀ ಕಾಟ ತಾಳಲಾರದಕ್ಕೆ ಹುಡಿಗಿ ಗಾಡೀ ತೆಳಗ ಬಿದ್ದು ಪ್ರಾಣ ಕೊಟ್ಟಿತು. ಮೊನ್ನೆ ಮೊನ್ನೆಯ ಕಥೀ ಇದು. ಮುಂದೆ ಮೂರೇ ತಿಂಗಳಾದಾಗ ಮಗಳಿಗೆ ಹುಚ್ಚು ಹಿಡೀತು. ಸೊಸೀನೇ ಬಡಕೊಂಡಾಳ ಅಂತ ಮಂದಿ ಆಡಕೋತಾರ. ವಿಸ್ಮೃತಿ-ಗಿಸ್ಮೃತಿ ಎಲ್ಲಾ ಸುಳ್ಳು. ಆ ಹುಡಿಗೀಗೇ ಹುಚ್ಚೇ ಹಿಡಿದದ.”
ತಂದೆಯ ತಲೆಯ ಮೇಲೆ ಒದ್ದೆಯಾಗಿದ್ದ ಪಂಚೆ ಇದೆ. ತಾಯಿಯು ಸೀರೆಯ ಕಚ್ಚೆಯನ್ನು ಬಹಳ ಮೇಲೆ ಮಾಡಿ ಉಟ್ಟುಕೊಂಡಿದ್ದಾರೆ. ತೊಯ್ದು ಹೋಗಿದ್ದ ತಲೆಗೂದಲನ್ನು ಪುನಃ ಪುನಃ ಹರವಿಕೊಳ್ಳುತ್ತ ತಂಗಿಯು ಝಾಪುಗಾಲಿಟ್ಟು ಓಡುವವರಂತೆ ನಡೆಯುತ್ತಿದ್ದಾಳೆ.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಮಠದ ಗಂಟೆಯ ಸಪ್ಪಳ ಕೇಳಿಸುತ್ತಿದೆ.
*
ತಂದೆಯು ಕುಳಿತ ಅಲ್ಲಿಂದ ಉತ್ತರ ಭಾಗದ ಬಿಳಿಯ ಗೋಡೆ ಕಾಣಿಸುತ್ತಿತ್ತು. ಗೋಡೆಯ ಒಳಗೆ ಕಿಟಕಿಯ ಆಕಾರದ ಒಂದು ಸಣ್ಣ ಬಾಗಿಲಿದೆ. ನದಿಯಲ್ಲಿ ಸ್ನಾನಮಾಡಿ ಒಬ್ಬೊಬ್ಬರಾಗಿ ಆ ಬಾಗಿಲಿನಿಂದ ಒಳಗೆ ಬರುತ್ತಿದ್ದಾರೆ. ಬಾಗಿಲ ಹೊರಗೆ ದೊಡ್ಡ ಬೇವಿನ ಗಿಡವಿದೆ. ಸಣ್ಣವರಿದ್ದಾಗಲೆ ತಂದೆ ಕೇಳಿದ್ದರು, ಆ ಬೇವಿನಗಿಡದಲ್ಲಿ ಬ್ರಹ್ಮರಾಕ್ಷಸಗಳಿವೆಯೆಂದು, ಗೋಡೆಯನ್ನು ಬಿರಿದು ಬಂದ ಆ ಗಿಡದ ಟೊಂಗೆಯನ್ನು ದಿಟ್ಟಿಸುತ್ತ ತಂದೆಯು ಕುಳಿತಿದ್ದರು. ಒಮ್ಮೆ ಒಂದು ರಾತ್ರಿ ಭಕ್ತನೊಬ್ಬ ಆ ಬಾಗಿಲಿನಿಂದ ಹೊರಬಿದ್ದಾಗ ಬ್ರಹ್ಮರಾಕ್ಷಸವು ಅವನನ್ನು ಹಿಡಿಯಿತು. ಹೆದರಿದ್ದರೂ ಧೈರ್ಯವಾಗಿ ಆ ಭಕ್ತನು ರಾಯರ ಸ್ತೋತ್ರ ಪಠಿಸಲು ಆ ಬ್ರಹ್ಮರಾಕ್ಷಸವು ಕೈಬಿಟ್ಟಿತಂತೆ.
ಎದುರಿಗೆ ತಾಯಿ-ತಂಗಿ ಕಾಣಿಸಿದರು. ಇಬ್ಬರೂ ಪ್ರದಕ್ಷಿಣೆ ಹಾಕುತ್ತಿದ್ದಾರೆ. ತಂಗಿಯ ಹಣೆಗೆಲ್ಲ ಉಸುಕು ಹತ್ತಿದೆ. ಅವಳ ಕಣ್ಣು-ರೆಪ್ಪೆಗಳೆಲ್ಲ ಒದ್ದೆಯಾಗಿವೆ. ತಾಯಿ ಒಂದೇ ಸವನೆ ತೇಕುತ್ತಿದ್ದಾನೆ. ಅವರನ್ನು ನೋಡಿದಾಗ ತಂದೆಗೆ ಎಂದೂ ಇಲ್ಲದ ವಿಚಿತ್ರ ಭಾವನೆ ಬಂತು. ಅವರಿಬ್ಬರೂ ಪೂರ್ಣ ಅಪರಿಚಿತರಂತೆ, ಜನಜಂಗುಳಿಯಲ್ಲಿಯ ಎರಡು ಕಣಗಳಂತೆ ಅವರಿಗೆ ಕಂಡರು. ಯಾರು ಅವರು? ಇಷ್ಟು ದಿವಸ ನಾವು ಕೂಡಿ ಇರದಿದ್ದರೆ, ಅವರಿಬ್ಬರಿಗೂ ನನಗೂ ಏನು ಸಂಬಂಧವಿಲ್ಲ ಎಂದು ನಾನು ಅನ್ನಬಹುದಿತ್ತೆ?-ಇಷ್ಟು ದಿವಸ ನಾವು ಯಾಕೆ ಕೂಡಿದ್ದೆವು? ಹೇಗೆ ಕೂಡಿದ್ದೆವು? ತಂದೆಗೆ ಯಾವ ಪ್ರಶ್ನೆಯ ಉತ್ತರವೂ ಹೊಳೆಯಲಿಲ್ಲ.
ಮಠದಲ್ಲಿ ಊಟ ಬಹಳ ತಡವಾಗುತ್ತದೆ. ಊಟದ ಸಮಯ ಸಮೀಪಿಸತೊಡಗಿದಂತೆ ಮಠದ ಜನಜಂಗುಳಿ ಹೆಚ್ಚುತ್ತದೆ. ತಂದೆಗೆ ಈಗಿನಿಂದಲೇ ಹಸಿವೆಯಾಗಿದೆ. ಎಂದಿನಿಂದಲೂ ಅವರಿಗೆ ಹಸಿವೆಯನ್ನು ತಡೆಯಲಿಕ್ಕಾಗುವದಿಲ್ಲ. ಹಸಿವೆಯಾದರೆ ಮನಸ್ಸು ಉದ್ವಿಗ್ನವಾಗಿಬಿಡುತ್ತದೆ. ಏನೂ ಸುಚಾಸುವದೇ ಇಲ್ಲ. ಸೊಸೆಯು ತೀರಿಕೊಂಡಾಗ ಹೀಗೇ ಆಗಿತ್ತು. ತಮ್ಮ ವಿರುದ್ಧ ಯಾರೋ ದೂರು ಕೊಟ್ಟಿದ್ದರೆಂದು ಆ ದಿವಸ ಅಕಸ್ಮಾತ್ತಾಗಿ ಸ್ಪೆಶಲ್ ಇನ್‌ಸ್ಪೆಕ್ಷನ್ ಬಂದಿತ್ತು. ಗಡಿಬಿಡಿಯಲ್ಲಿ ಊಟದ ಶಾಸ್ತ್ರ ಮಾಡಿ ಅವರು ಗುಡ್ಸ ಶೆಡ್ಡಿಗೆ ಓಡಿದರು. ಮುಂದೆ ರಾತ್ರಿ ಸರಿಯಾಗಿ ಊಟಕ್ಕೆ ಕೂಡುವ ವೇಳೆಗೆ ಇದೆಲ್ಲ ಆಯಿತು. ಭಯಾನಕವಾದ ಸಾವು ಇಷ್ಟು ಸಹಜವಾಗಿ ಎರಗಿ ಸೊಸೆಯನ್ನು ಹೆಕ್ಕಿಕೊಂಡು ಹೋದೀತೆನ್ನುವದು ಕಲ್ಪನೆಗೂ ಅಸಾಧ್ಯವಾದ ಮಾತಿತ್ತು. ಸೊಸೆ ಉಳ್ಳೇಗಡ್ಡಿಯನ್ನು ಹೆಚ್ಚುತ್ತ ಈಳಿಗೆಯ ಮಣಿಯ ಮೇಲೆ ಕುಳಿತಿದ್ದಳು. ಎದುರಿಗೆ ಒಲೆಯ ಮೇಲಿಟ್ಟ ಹಾಲು ಉಕ್ಕುವದರ ಕಡೆಗೆ ಕೂಡ ಲಕ್ಷವಿಲ್ಲದೆ ಅವಳು ಕುಳಿತಿದ್ದಕ್ಕಾಗಿ ತಾಯಿ ಬೈದರು. ಒಮ್ಮೆಲೆ ಎದ್ದು ಹೊರಗೆ ಹೋಗಿ ಬಿಟ್ಟಳು. ತಿರುಗಿ ಬರಲೇ ಇಲ್ಲ. ಓಡುತ್ತ ಓಡುತ್ತ ಎಕ್ಸಪ್ರೆಸ್ಸಿನ ಧಡಧಡ ಸಪ್ಪಳದಲ್ಲಿ ನೋಡುನೋಡುವದರಲ್ಲಿಯೇ ಕಾಣದಾಗಿಬಿಟ್ಟಿದ್ದಳು. ಎಲ್ಲ ರಗಳೆ ಮುಗಿದು ಮನೆ ಕಾಣಬೇಕಾದರೆ ರಾತ್ರಿ ನಾಲ್ಕು ಗಂಟೆಯಾಗಿಹೋಗಿತ್ತು. ಆ ದಿನವೂ ಅವರಿಗೆ ಹೀಗೆಯೇ ಹಸಿವೆಯಾಗಿತ್ತು.
ತಂದೆಗೆ ತಮ್ಮನನ್ನು ನೋಡಿ ಆಶ್ಚರ್ಯವೆನಿಸಿತು. ಒಮ್ಮೆಲೆ ಎಂದಿನಿಂದ ಅವನಿಗೆ ದೇವರಲ್ಲಿ ಭಕ್ತಿ ಹುಟ್ಟಿತು ತಿಳಿಯಲಿಲ್ಲ. ಹೆಂಡತಿಯ ಸಾವು ಅವನಿಗೆ ದೇವರಲ್ಲಿ ಶ್ರದ್ದೆ ಹುಟ್ಟಿಸಿರಬಹುದೇನೋ? ತಮ್ಮನು ಕಣ್ಣುಮುಚ್ಚಿ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕಹತ್ತಿದ್ದಾನೆ. ಅಪೂರ್ಣವಾದ ಯಾವ ಆಕಾಂಕ್ಷೆಯ ಪೂರ್ತಿಗಾಗಿ ಅವನು ಪ್ರಾರ್ಥನೆ ಮಾಡುತ್ತಿರಬಹುದು?
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಪ್ರದಕ್ಷಿಣೆ ಹಾಕಿ ಹಾಕಿ ತಮ್ಮನಿಗೆ ಬೇಸರ ಬಂತು. ಇಷ್ಟಕ್ಕೆ ಕಾಲು ನೋಯತ್ತಿವೆ. ಹೆಂಡತಿ ಇದ್ದರೆ ಈಗ ಅವಳು ಬೈದುಬಿಡಬಹುದಿತ್ತು: “ಊರಾಗ ಇದ್ದಾಗ ಊರೆಲ್ಲ ಕಾಲು ಬಿಟ್ಟ ಕತ್ತೀ ಹಂಗ ಫಿರೋ ಅಂತ ತಿರುಗ್ಯಾಡಿ ಬರೀರಿ. ದೇವರ ಪ್ರದಕ್ಷಿಣೀಂದ್ರ ಕಾಲು ನೋಯಿಸತಾವೇನು ನಿಮ್ಮು? ದೇವರ ಸೇವಾಕ್ಕ ಹಾಂಗ ಬ್ಯಾಸರೀಬಾರದು.” ಅದು ನೆನಪಾಗಿ ಅವನಿಗೆ ಪ್ರದಕ್ಷಿಣೆಯನ್ನು ಮತ್ತೆ ಮುಂದುವರಿಸಬೇಕೆನಿಸಿತು. ತನಗೆ ಸ್ವತಃಕ್ಕೆ ಮಾತ್ರ ದೇವರಲ್ಲಿ ಎಂದೂ ವಿಶ್ವಾಸವಿರಲಿಲ್ಲ. ಈಗಲೂ ಇಲ್ಲ. ಹಾಗಾದರೆ ತಾನು ಈಗ ಪ್ರದಕ್ಷಿಣೆ ಹಾಕುತ್ತಿದ್ದಾನೆ. ಇದರಿಂದ ಅವಳಿಗೆ ಸಂತೋಷವಾಗಬಹುದೆಂದೆ? ಇದ್ದಾಗ ಅವಳನ್ನು ಸುಖವಾಗಿಡಲು ಪ್ರಯತ್ನಿಸಬೇಕು ಎನ್ನುವ ಮಾತು ಅವನ ಗಮನಕ್ಕೇ ಬಂದಿರಲಿಲ್ಲ. ಈಗ ಅವಳಿಗೆ ಯಾವದರಿಂದ ಸಂತೋಷವಾಗಬೇಕಾಗಿದೆ? ಇದ್ದಾಗ ಅವಳ ತೀರ ಒಂದು ಸಣ್ಣ ಇಚ್ಛೆಯನ್ನು ಕೂಡ ಪೂರ್ಣಗೊಳಿಸುವದಾಗಲಿಲ್ಲ. ಲಗ್ನವಾದ ಹೊಸತಲ್ಲಿ ಒಮ್ಮೆ ಮಂತ್ರಾಲಯಕ್ಕೆ ಹೋಗಿಬರುವದು ಅವಳ ಮನಸ್ಸಿನಲ್ಲಿ ಬಹಳವಿತ್ತು. ಅವ್ವನೇ ಇದಕ್ಕೆ ಕಲ್ಲು ಹಾಕಿದಳು. “ಈಗೇನು ಬಹಾಳ ವಯಸ್ಸಾಗ್ಯಾವ ಆಕೀಗೆ? ಇಂದಿಲ್ಲ ನಾಳೆ ಹೋಗಿಯೇ ಹೋಗತಾಳಲ್ಲ. ಲಗ್ನದ ಖರ್ಚೆ ಬಹಾಳ ಆಗೇದ. ಮತ್ತೆಲ್ಲಿ ಹೊಸ ಖರ್ಚು ತಂದಿರಿ?” ಅದು ಉಳಿದದ್ದು ಉಳಿದೇ ಹೋಯಿತು. ಅವಳೇನು ಮಂತ್ರಾಲಯ ಕಾಣಲಿಲ್ಲ. ಈಗ ಅವಳು ತೀರಿಕೊಂಡು ಆರು ತಿಂಗಳು ಕೂಡ ಆಗಿಲ್ಲ. ತಾವು ಎಲ್ಲರೂ ಮಂತ್ರಾಲಯದಲ್ಲಿ ನೆರೆದಿದ್ದಾರೆ.
ನಡೆಯುವಾಗ ತಮ್ಮನ ಧೋತರ ಕಾಲಲ್ಲಿ ಸಿಕ್ಕಿತು. ಎಡವಿ ಇನ್ನೇನು ಕೆಳಗೆ ಬೀಳುವವ ಆದರೆ ಮಗ್ಗಲಿಗಿದ್ದ ಪೌಳಿಯ ಗೋಡೆ ಹಿಡಿದು ನಿಂತ. ದೂರದಲ್ಲಿ ತಾಯಿ ಯಾರೊಡನೆಯೋ ಮಾತಾಡುತ್ತಿದ್ದಂತೆ ಕಾಣಿಸಿತು. ಪ್ರದಕ್ಷಿಣೆಯನ್ನು ಅರ್ಧಕ್ಕೆ ನಿಲ್ಲಿಸಿ ಅವ್ವನು ಏನೋ ಕೈಮಾಡಿ ಮಾಡಿ ಅವರಿಗೆ ಹೇಳುತ್ತಿದ್ದಾಳೆ. ಅವಳು ಏನು ಹೇಳುತ್ತಿದ್ದಾಳೆಂಬುದು ತಮ್ಮನಿಗೆ ನಿಶ್ಚಿತ ಗೊತ್ತಿತ್ತು. ಹೆಂಡತಿಗೆ ದುರ್ಮರಣ ಬಂತೆಂದು ಅವಳು ದೆವ್ವವಾಗಿ ತಂಗಿಗೆ ಬಡಿದುಕೊಂಡು ಕಾಡುತ್ತಿದ್ದಾಳೆ ಎಂದು ಎಲ್ಲರಿಗೂ ಹೇಳುತ್ತ ತಿರುಗಾಡುತ್ತಾಳೆ. “ಇದ್ದಾಗ ಸೊಸೆಗೆ ಇಷ್ಟು ಪರಿ ಮಾಡಿ-ಮಟ್ಟಿದರೂ ನನಗೆ ಕೆಟ್ಟ ಹೆಸರು ಕೊಟ್ಟು ಹೋದಳು” ಎಂದು ಎಲ್ಲರ ಇದಿರಿನಲ್ಲೂ ಅಬ್ಬರ ಮಾಡಿ ಅಳುತ್ತಾಳೆ.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಅವ್ವನ ವಿಕ್ಷಿಪ್ತ ಸ್ವಭಾವದಿಂದ ಮನೆಯಲ್ಲಿ ಎಲ್ಲರೂ ಬೇಸತ್ತಿದ್ದರು. ತಂದೆಯಂತೂ ಸಾಂಸಾರಿಕ ಜೀವನಕ್ಕೆ ಎಂದೋ ತಿಲಾರ್ಪಣೆ ಮಾಡಿದ್ದರೆಂಬುದು ತಮ್ಮನಿಗೆ ವಯಸ್ಸಿಗೆ ಬಂದ ಮೇಲೆ ತಿಳಿದಿತ್ತು. ಮೊದಲಿನಿಂದಲೂ ಅವ್ವನ ವರ್ತನೆ ವಿಚಿತ್ರವಾಗಿಯೇ ಇತ್ತು. ತಂದೆ ಬಹಳ ಊಟ ಮಾಡಿದರೆ ಸಂಶಯ ಪಟ್ಟುಕೊಳ್ಳುವದು, ಊಟ ಮಾಡದಿದ್ದರೂ ಸಂಶಯ ಪಟ್ಟುಕೊಳ್ಳುವದು. ಅದರಲ್ಲಿ ತಂದೆ ತಪ್ಪಿ ಯಾರಾದರೂ ಹೆಂಗಸರ ಕೂಡ ನಗುನಗುತ್ತ ಮಾತಾಡಿದರೋ ಮುಗಿದುಹೋಯಿತು, ಆಗ ಅವ್ವನ ಅವತಾರ ನೋಡಲಿಕ್ಕೆ ಆಗುತ್ತಿರಲಿಲ್ಲ. ಇದೆಲ್ಲ ತಮ್ಮ ಬೆಳೆದು ದೊಡ್ಡವನಾದ ಮೇಲೆ ತಿಳಿಯತೊಡಗಿದ್ದು. ಯಾವುದಾದರೂ ಮಾತು ಅಪ್ಪನ ಮನಸ್ಸಿನ ವಿರುದ್ಧವಾದರೆ ತೀರಿತು, ಅವ್ವ ಮೈ ಮೈ ಪರಚಿಕೊಳ್ಳುತ್ತಿದ್ದಳು. ಮಾತು ಮಾತಿಗೆ ಸಿಟ್ಟು, ಸೆಡವು, ರಂದಿ, ರಸಕಸಿ. ತಾನು ಸಣ್ಣವನಿದ್ದಾಗ ಏನೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ತಂದೆಯವರೊಡನೆ ಜಗಳವಾಡಿ ದಿನವೆಲ್ಲ ಹಣಮಪ್ಪನ ಗುಡಿಯ ಕಟ್ಟೆಯ ಮೇಲೆ ಕುಳಿತು ಸಂಜೆಯಾದ ಕೂಡಲೆ ಮನೆಗೆ ಬಂದಿದ್ದಳು. ಮತ್ತೊಮ್ಮೆ ಇನ್ನೊಂದು ಕಾರಣಕ್ಕಾಗಿ ಜೀವ ಕೊಡುತ್ತೇನೆಂದು ಬಾವಿಯ ಕಟ್ಟೆಯ ಮೇಲೆ ಕುಳಿತು ಬಂದಿದ್ದಳು.
ಅವ್ವನ ಬಾಯಲ್ಲಿ ಸಾವು ದಿನಬಳಕೆಯ ಮಾತಾಗಿದೆ. ಸಿಟ್ಟು ಬಂತೆಂದರೆ ಸಾಯುವೆನೆಂದು ಹೊರಟು ಸಿಟ್ಟು ಇಳಿದ ಕೂಡಲೆ ಮನೆಗೆ ತಿರುಗುತ್ತಾಳೆ.
ತಮ್ಮನಿಗೆ ಈಗ ಬಹಳೇ ಕಾಲು ನೋಯತೊಡಗಿದ್ದವು. ಬಹಳ ನಿತ್ರಾಣವಾಗಿದೆ. ಪ್ರದಕ್ಷಿಣೆ ಹಾಕಿ ಬೇಸರ ಬಂತು. ಬಿಸಿಲು ಏರಿ ಕಾಲಲ್ಲಿಯ ಉಸುಕು ಕಾಯ್ದುಹೋಗಿದೆ. ಅವನಿಗೆ ತಾನು ನೀರಡಿಸಿದ್ದೇನೆ ಎಂಬುದರ ನೆನಪಾಯಿತು. ನದಿಯಿಂದ ತುಂಬಿ ತಂದಿಟ್ಟ ತಂಬಿಗೆಯನ್ನು ನೆನೆದು ಕಟ್ಟೆಯ ಕಡೆಗೆ ಹೋದ.
ತಮ್ಮನು ಕುಳಿತ ಆ ಕಟ್ಟೆಯಿಂದ ರಾಯರ ವೃಂದಾವನವು ಕಾಣಿಸುತ್ತಿತ್ತು. ಕೆಳಗಡೆ ಕಂಬಕ್ಕಾನಿಸಿಕೊಂಡು ಅಚ್ಚೆ ಕೆಂಪು ಬಣ್ಣದ ಪೀತಾಂಬರ ಉಟ್ಟುಕೊಂಡು ಒಬ್ಬ ಮುದುಕರು ಕುಳಿತಿದ್ದಾರೆ. ಅವರ ದೇಹದ ಅರ್ಧ ಭಾಗದ ಚಲನೆ ನಿಂತುಬಿಟ್ಟಂತಿದೆ. ಅವರ ರಟ್ಟೆ ಹಿಡಿದು ಮಗ್ಗಲಿಗೆ ಕುಳಿತ ಆ ಹೆಂಗಸು ಅವರ ಹೆಂಡತಿಯಿರಬೇಕು. ಅವರ ಹತ್ತಿರ ಇಬ್ಬರು ಹುಡಿಗಿಯರು ಮಲ್ಲಿಗೆಯ ಹಾರ ಮಾಡುತ್ತ ಕುಳಿತಿದ್ದಾರೆ. ಒಬ್ಬಳದು ಹಸಿರು ಹಣೆಯಿದೆ. ಮೈಮೇಲೆ ಚೂರೂ ಶೃಂಗಾರವಿಲ್ಲ. ಶುಭ್ರವಾಗಿದ್ದ ಬಿಳಿಯ ಸೀರೆಯುಟ್ಟುಕೊಂಡಿದ್ದಾಳೆ. ಇನ್ನೊಬ್ಬಳ ಹಣೆಯ ಮೇಲೆ ಕುಂಕುಮವಿದೆ. ಅವಳದು ಇನ್ನೂ ಲಗ್ನವಾಗಿಲ್ಲ. ತಮ್ಮನದು ಅವಳ ಕಡೆಗೆ ವಿಶೇಷ ಲಕ್ಷ್ಯ ಹೋಗಲಿಲ್ಲ.
ಹಸಿರು ಹಣೆಯವಳನ್ನೇ ನೋಡುತ್ತ ಕುಳಿತ. ಎಷ್ಟೋ ಹೊತ್ತಿನ ನಂತರ ಅವನ ಲಕ್ಷ್ಯಕ್ಕೆ ಬಂತು, ತನಗೆ ಯಾಕೆ ಅವಳನ್ನು ನಿರೀಕ್ಷಿಸುತ್ತ ಕೊಡಬೇಕೆನಿಸುವದೆಂಬುದು. ಮಗ್ಗಲಿನಿಂದ ನೋಡಿದರೆ ಅವಳು ಥೇಟ್ ತನ್ನ ಹೆಂಡತಿಯಂತೇ ಕಾಣಿಸುತ್ತಿದ್ದಳು. ಎಷ್ಟು ಹೊತ್ತಿನಿಂದ ನೋಡುತ್ತಿದ್ದಾಳೆ, ಅವಳು ನಗುವ ‘ಧರತಿ’ ಪೂರ್ಣ ಹಾಗೆಯೇ ಇದೆ. ಮುಂದೆ ಇವನು ನೋಡುವದು ಅವಳ ಲಕ್ಷ್ಯಕ್ಕೆ ಬಂದು ಅವಳು ಆ ಕಡೆ ಮುಖ ತಿರುಗಿಸಿದಳು. ತಮ್ಮ ಒಮ್ಮೆಲೆ ಹೌಹಾರಿ ಆ ಕಡೆ ಈ ಕಡೆ ನೋಡಿ, ಕೊನೆಗೆ ಹತ್ತಿರವಿದ್ದ ಅಶ್ವತ್ಥವೃಕ್ಷದ ಕೆಳಗೆ ದೃಷ್ಟಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸಿದ.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ಅವನ ಮೈ ಜುಮ್ಮೆಂದಿತು. ಎಷ್ಟೊತ್ತಿನಿಂದ ಅವರು ಅಲ್ಲಿ ನಿಂತಿದ್ದರೋ ಯಾರಿಗೆ ಗೊತ್ತು? ಭಾವನಾರಹಿತವೆಂಬ ಭ್ರಮೆ ಹುಟ್ಟಿಸುವ ನಿಶ್ಚಲದೃಷ್ಟಿಯಿಂದ ತಾಯಿ ಅವನನ್ನು ನೋಡುತ್ತ ನಿಂತಿದ್ದರು. ತಮ್ಮನಿಗೆ ಅಂಜಿಕೆ ಬಂತು. ತಮ್ಮನು ಯೋಚಿಸಿದ: ಅವ್ವನೆಂದರೆ ಅಷ್ಟೇಕೆ ಹೆದರಿಕೆ ಬರಬೇಕು? ಆ ಹೆಂಗಸನ್ನು ತಾನು ನೋಡಿದರೇನು ತಪ್ಪಾಯಿತು? ಅವ್ವನೇನು ಯಾವ ಗಂಡಸರ ಕಡೆಗೂ ನೋಡುವದೇ ಇಲ್ಲವೆ? ಆದರೆ… ಆದರೆ? ಅವ್ವನನ್ನು ಕಂಡರೆ ನಾವೆಲ್ಲರೂ ಯಾಕೆ ಅಂಜುತ್ತೇವೆ? ಸ್ವತಃ ಅಪ್ಪ ಹೆದರುತ್ತಾರೆ. ತಂಗಿಯಂತೂ ಅವ್ವನ ಹೆದರಿಕೆಯ ಝಳಕ್ಕೆ ಹುರಪಳಿಸಿ ಬೆಳೆಯದೆ ಕ್ರಮಶಃ ಕಮರಿ ಹೋಗುತ್ತಿದ್ದಾಳೆ. ತನಗೂ ಅವ್ವನೆಂದರೆ ಭೀತಿ. ಆದರೆ ಈ ಅಂಜಿಕೆಗೆ ಸ್ವಲ್ಪವೂ ಅಳುಕದ ಒಂದೇ ಒಂದು ಜೀವ ನಾಲ್ಕೂಪ್ಪತ್ತು ಬದುಕಿ ಹೋಯಿತು. ತಮ್ಮನಿಗೆ ತನ್ನ ಹೆಂಡತಿಯ ಬಗೆಗೆ ಅಭಿಮಾನವೆನಿಸಿತು. ಅವ್ವನ ಉಪದ್ರಕ್ಕೆ ಬೇಸತ್ತಳು. ಅತ್ತಳು. ಬದುಕಿನುದ್ದಕ್ಕೂ ಎಲ್ಲವನ್ನೂ ಮೂಕವಾಗಿ ಸಹಿಸಿದಳು. ಆದರೆ ಅವಳು ಅವ್ವನಿಗೆ ಎಂದೂ ಅಂಜಲಿಲ್ಲ. ಲಗ್ನವಾದ ಹೊಸದರಲ್ಲಿ ಅವ್ವನಿಗೆ ಗೊತ್ತಾಗದಂತೆ, ಗೆಳೆಯನ ಮನೆಗೆ ಹೋಗಿಬರುತ್ತೇವೆಂದು ಸುಳ್ಳು ಹೇಳಿ ಅವರಿಬ್ಬರೂ ಸರ್ಕಸ್ಸಿಗೆ ಹೋಗಿದ್ದರು. ಮರುದಿವಸವೇ ಅದು ಹೇಗೋ ಅವ್ವನಿಗೆ ಗೊತ್ತಾಗಿಹೋಯಿತು. ಸಿಟ್ಟಿನಿಂದ ಕಂಗಾಲಾಗಿ ಹೋಗಿದ್ದಳು. ತಂಗಿಯನ್ನು ತಪ್ಪಿಸಿಹೋಗಲು ಈ ಆಟ ಹೂಡಿದರೆಂದು ಚೀರಾಡಿ, ಹಟಕ್ಕೆ ಬಿದ್ದು ಅದೇ ದಿವಸ ನೆರೆಮನೆಯ ಹುಡಿಗಿಯನ್ನು ಜೋಡುಮಾಡಿ, ತಂಗಿಯನ್ನು ಸರ್ಕಸ್ಸಿಗೆ ಕಳಿಸಿದ್ದಳು. ಆಗ ಇಷ್ಟೆಲ್ಲ ರಗಳೆಯಾದರೂ ಹೆಂಡತಿಯು ಪಿಟ್ಟೆನ್ನದೆ, ಶಾಂತವಾಗಿ ತನ್ನ ಪಾಡಿಗೆ ತಾನಿದ್ದಳು. ಮತ್ತೊಮ್ಮೆ ಅವ್ವನಿಗೆ ಹೇಳದೆ ಕೇಳದೆ ತಾವಿಬ್ಬರೂ ಕೂಡಿ ಫೋಟೋ ತೆಗೆಯಿಸಿಕೊಂಡು ಬಂದಾಗ ಅವ್ವನ ಅಬ್ಬರಕ್ಕೆ ಮಿತಿಯೇ ಇರಲಿಲ್ಲ. ಮಾತಿಗೆ ಮಾತು ಬೆಳೆದು ಅವ್ವ ಎಲ್ಲರನ್ನೂ ಬಾಯಿಗೆ ಬಂದಂತೆ ಬೈದು ತಾನು ಬಾವಿ ಬೀಳುತ್ತೇನೆಂದು ಹೊರಟಾಗ ಅಷ್ಟೇ ಸಿಟ್ಟಿನಿಂದ ಹೆಂಡತಿ ಧೈರ್ಯವಾಗಿ ಅಂದಿದ್ದಳು: ”ಹೋಗಿ ಬೀಳಿರಲ್ಲ ಧೈರ್ಯ ಅದ ಏನು, ನೋಡೋಣ? ಸಾಯುವವರೇನ ಢಾಣಾ ಡಂಗರಾ ಹೊಡೆದು ಸಾಯತಿರತಾರೇನು?” ಕಡೆಗೆ ಅವಳು ತನ್ನ ಮಾತನ್ನು ಸಿದ್ದಮಾಡಿ ಹೋಗಿದ್ದಳು. ಅಥವಾ ಆ ಮಾತನ್ನು ಸಿದ್ಧ ಮಾಡಲು ಅವಳು ಆ ದಿವಸ ಹಾಗೆ ಓಡಿದಳೊ?… ತಾಯಿಯ ಕೈಯಲ್ಲಿ ಸಾವು ಹಾಸ್ಯಾಸ್ಪದವಾದ ಅಗ್ಗದ ಸರಕಾಗಿತ್ತು. ಬದುಕಿದಾಗೆಲ್ಲ ಸಾವಿನ ನೆನಪಿಗೆ ಜೋತುಬಿದ್ದ ಅವಳಿಗೆ ಬದುಕಿನ ಸುಖವೂ ಸಿಗಲಿಲ್ಲ. ಸಾವಿನ ಸಮಾಧಾನವೂ ಲಭಿಸಲಿಲ್ಲ. ಇದ್ದಾಗ ಸಾವು ಸಾವು ಎಂದು ಬಡಬಡಿಸುವ ಅವ್ವ, ಸಾಯುವ ದಿವಸ ಬದುಕಿಗಾಗಿ ಹಂಬಲಿಸುವಳು.
ತಮ್ಮನು ಕುಳಿತಲ್ಲೇ ಎಣಿಕೆ ಹಾಕತೊಡಗಿದ. ಸ್ಟೇಶನ್ನಿನ ತಮ್ಮ ಮನೆಯಿಂದ ರಾತ್ರಿ ಓಡುತ್ತ ರೇಲ್ವೆ-ಹಳಿಯವರೆಗೆ ಹೋಗಲು ಎಷ್ಟು ವೇಳೆ ಹಿಡಿಯುತ್ತದೆ? ಆ ದಿವಸ ಅವಳು ಓಡುವುದಕ್ಕೂ ಗಾಡಿ ಬರುವದಕ್ಕೂ ವೇಳೆ ಹೇಗೆ ಸರಿಹೋಯಿತು? ಅವ್ವ ಬೈದಾಗ ಅವಳ ಕಣ್ಣಲ್ಲಿ ನೀರಾಡಿರಬೇಕು. ಕಣ್ಣು ಮಂಜಾಗಿ ಆ ದಿವಸ ದಾರಿ ಏಕೆ ತಪ್ಪಲಿಲ್ಲ? ಹಗಲು ಹೊತ್ತಿನಲ್ಲಿ ಸಹಿತ ಹಳಿ ದಾಟಲು ಹೋದಾಗ ತಾನು ಸಿಗ್ನಲ್ಲಿನ ತಂತಿ ಎಷ್ಟು ಸಲ ಎಡವಿ ಮುಗ್ಗರಿಸಿಲ್ಲ? ಆ ತಂತಿ ಆ ದಿವಸ ಅವಳ ವೇಗವನ್ನು ಯಾಕೆ ಕಡಿಮೆ ಮಾಡಲಿಲ್ಲ? ಕತ್ತಲೆಯೆಂದರೆ ಹೆದರುವವಳು ಅಂದು ಒಬ್ಬಳೇ ಹೇಗೆ ಹೋಗುವ ಧೈರ್ಯ ಮಾಡಿದಳು?… ಯಾವ ಪ್ರಶ್ನೆಗೂ ಉತ್ತರವಿರಲಿಲ್ಲ. ಆದರೆ ಎಲ್ಲವೂ ನಡೆದುಹೋಗಿತ್ತು.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಹೆಂಡತಿಯ ನೆನಪಿನಿಂದ ತಮ್ಮನಿಗೆ ಕಳವಳವಾಯಿತು. ಆದರೆ ಅಳುವು ಬರಲಿಲ್ಲ. ಸುಟ್ಟು ಹೋದ ಹೆಂಡತಿಯ ಚಿತೆಯಲ್ಲಿ ಅವನ ಅಳುವೂ ಬೂದಿಯಾಗಿ ಹೋದಂತೆನಿಸಿತು. ತಂದೆ, ತಾಯಿ, ತಂಗಿ ಹಾಗು ತಾನು. ಇವರಲ್ಲಿ ಯಾರಿಗೂ ಪರಸ್ಪರ ಸಂಬಂಧವೇ ಇಲ್ಲ. ಅನಿವಾರ್ಯವಾಗಿ ಒಬ್ಬರು ಇನ್ನೊಬ್ಬರನ್ನು ನಂಬಿ, ಅವಲಂಬಿಸಿ ಒತ್ತಟ್ಟಿಗೆ ಇದ್ದೇವೆ. ಅವನಿಗೆ, ಸರ್ಕಸ್ಸಿನಲ್ಲಿ ಅಂತರಾಳದಲ್ಲಿ ತೂಗಾಡುವ, ಜೋಕಾಲಿಯಿಂದ ಜೋಕಾಲಿಗೆ ಜಿಗಿಯುವ ಆಟಗಾರರ ಗುಂಪು ನೆನಪಾಯಿತು. ಅವರಂತೆ ತಾವೂ ಒಬ್ಬರನ್ನೊಬ್ಬರು ನಂಬಿಕೊಂಡಿರುವದು ಅಗತ್ಯವಾಗಿದೆ. ಒಬ್ಬರ ಬದುಕು ಇನ್ನೊಬ್ಬರ ಮೇಲೆ, ಹಾಗೂ ಎಲ್ಲರ ಬದುಕೂ ಒಬ್ಬರ ಮೇಲೆ ಅವಲಂಬಿಸಿದೆ. ಈ ಸೂಕ್ಷ್ಮವನ್ನು ನಿರ್ಲಕ್ಷಿಸಿ ಒಂದು ಕ್ಷಣ ಸ್ವತಂತ್ರಳಾಗಬಯಸಿದ ಹೆಂಡತಿ ಝೋಲಿ ತಪ್ಪಿ ಕೆಳಗೆ ಬಿದ್ದುಬಿಟ್ಟಳು. ಈಗ ತಂಗಿ ಜೋತಾಡುತ್ತಿದ್ದಾಳೆ. ಅವಳೂ ಕೈಬಿಟ್ಟುಬಿಟ್ಟರೆ ಒಬ್ಬೊಬ್ಬರಾಗಿ ಎಲ್ಲರೂ ನೆಲಕ್ಕಪ್ಪಳಿಸುತ್ತೇವೆ. ಆದರೆ ತಂಗಿಗೆ ಗೊತ್ತೇ ಇಲ್ಲ. ಎಲ್ಲರ ಜೀವನಸೂತ್ರವೂ ಈಗ ತನ್ನ ಕೈಯಲ್ಲಿಯೇ ಇದೆಯೆಂಬುದು. ಅವಳಿಗೆ ಈಗ ವಿಚಾರಮಾಡುವ ಶಕ್ತಿಯಾದರೂ ಎಲ್ಲಿದೆ? ನಾಳೆ ಅವಳು ಮತ್ತೆ ಮೊದಲಿನಂತಾದರೆ, ಎಲ್ಲರೂ ತಮ್ಮ ತಮ್ಮ ಹಾದಿ ಹಿಡಿದು ಹೋಗುವರು. ತಂದೆ ಇನ್ನು ಬಹಳ ದಿವಸ ಮನೆ ನಂಬಿ ಇರಲಿಕ್ಕಿಲ್ಲ. ತನಗಾದರೂ ಮನೆಯಲ್ಲಿ ಯಾವ ಆಕರ್ಷಣೆಯಿದೆ? ಅವಳ ಜಡ್ಡು ಕಡಿಮೆಯಾಗದೇ ಇರುವದರಲ್ಲೇ ಮನೆತನದ ಮಾನವಿದೆ. ಅವಳಿಗೆ ಕಡಿಮೆಯಾದರೆ ಅದು ನುಚ್ಚುನೂರಾಗುವದು. ಎಲ್ಲರೂ ಚದುರಿ ಹೋಗುವರು.
ಬಿಸಿಲಿನ ಝಳ ವಿಪರೀತವಾಗಿದೆ. ಮೈಮೇಲೆ ನೀರಿಳಿಯುತ್ತಿದೆ. ಹಸಿವೆಯಿಂದ ನಿತ್ರಾಣನಾದ ತಮ್ಮನಿಗೆ ನಿದ್ದೆ ಬಂದಂತೆನಿಸಿತು. ಆದರೆ ನಿಜವಾಗಿ ನಿದ್ದೆ ಬಂದಿರಲಿಲ್ಲ. ಕುಳಿತವನು ಹಾಗೆಯೇ ಹಿಂದಿದ್ದ ಗೋಡೆಗೆ ತಲೆ ಆನಿಸಿದ. ಹತ್ತಿರ ಕುಳಿತವರು ತಮ್ಮ ತಮ್ಮೊಳಗೆ ಮಾತಾಡುತ್ತಿದ್ದರು:
“ರಾಯರ, ನೀವು ಏನೇ ಅನ್ನಿರಿ. ಹಿಂದಿನ ಮಠದ ವೈಭವ ಈಗ ಉಳಿದಿಲ್ಲ. ಮಠದ ಪ್ರತಿಷ್ಠೆ ಬರಬರುತ್ತ ಕಡಿಮೆಯಾಗುತ್ತ ನಡೆದಿದೆ.”
”ಇದೇನು ಸ್ವಾಮಿ ಹೀಗೆನ್ನುತ್ತೀರಿ ನೀವು? ಶ್ರೀಗಳವರ ಮಹಿಮೆ ಈಗ ಸರ್ವವ್ಯಾಪಿಯಾಗಿಹೋಗಿದೆ. ನಾನಾ ಪ್ರಾಂತಗಳಿಂದ ಭಿನ್ನಭಾಷಿಗಳಾದ ಭಕ್ತರು ಬಹುಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.”
“ರಾಯರ ಮಹಿಮೆಯ ಬಗೆಗೆ ಹೇಳಲಿಲ್ಲ ನಾನು. ರಾಯರೇ, ಮಠದ ಮಹಿಮೆಯ ಬಗ್ಗೆ ಹೇಳಿದೆ. ಸ್ವಾಮಿಗಳವರು ಇಲ್ಲಿದ್ದಾಗ ಬಹುಶಃ ನೀವು ಬಂದಿರಲಿಕ್ಕಿಲ್ಲ ಆಗ. ಏನು ಅನ್ನಸಂತರ್ಪಣೆ ಆ ಮಹಾನುಭಾವರದು? ತಿಂಗಳುಗಟ್ಟಲೆ ಮಠದಲ್ಲಿ ಊಟ ಮಾಡಿದರೂ ಒಬ್ಬರಿಗೂ ಚಕಾರವೆತ್ತುವ ಧೈರ್ಯವಾಗುತ್ತಿರಲಿಲ್ಲ ಆಗ. ಈಗೇನು ನಾಲ್ಕು ದಿವಸ ಊಟ ಮಾಡಿದರೆ, ಬಡಿಸುವವರು ಕೂಡ ನಿಮ್ಮ ಕಡೆಗೆ ದಿಟ್ಟಿಸಿ ನೋಡಲಿಕ್ಕೆ ಸುರು ಮಾಡಿ ಬಿಡುತ್ತಾರೆ. ಆಗಿನ ಅಡಿಗೆಯ ರುಚಿಯೇನು, ರಾಯರೆ? ‘ರಾಯರ ಮಠ’ದ ಹುಳಿಯೆಂದರೆ ನಮ್ಮ ಕಡೆಗೆ ಮನೆಮಾತಾಗಿಬಿಟ್ಟಿದೆ. ಮುಂಜಾನೆ ಊಟಮಾಡಿ ಹೋದರೆ ಸಂಜೆಯವರೆಗೂ ಮಸಾಲೆಯ ವಾಸನೆ ಹೋಗುತ್ತಿರಲಿಲ್ಲ. ಈಗೆಲ್ಲ ಆ ಮಾನದಿಂದ ಮಠದ ಆಡಳಿತ ಕೆಟ್ಟುಹೋಗಿದೆ. ಮುಖ್ಯವಾಗಿ ಹುಳಿಯೇ ಮೊದಲಿನಂತೆ ಸರಿಯಾಗಿ ಆಗುವದಿಲ್ಲ.”
“ಆದರೆ ರಾಯರ ಮಹಿಮೆಗೂ ಹಾಗೂ ಊಟಕ್ಕೂ ಏನು ಸಂಬಂಧ, ಸ್ವಾಮಿ?”
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
“ನಾನು ಹೇಳುವದು ನಿಮಗೆ ಅಷ್ಟು ಸರಿಯಾಗಿ ಅರ್ಥವಾದಂತಿಲ್ಲ, ಜನರು ಒಂದು ಮಠದ ಯೋಗ್ಯತೆಯನ್ನು ಕಟ್ಟುವದು ಆ ಮಠದ ಅನ್ನಸಂತರ್ಪಣೆಯ ಮೇಲಿಂದ. ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ಎರಡೂ ಹೊತ್ತೂ ಊಟವಿರುತ್ತದಂತೆ. ಏನು ಪುಣ್ಯವಂತರು ಅವರು! ಮುಖ್ಯ ಕಲಿಕಾಲ ಬಂತು. ಎಲ್ಲ ಕಡೆಗೂ ಅನ್ನಸಂತರ್ಪಣೆ ಕಡಿಮೆಯಾಯಿತು.”
ಮಂಗಳಾರತಿಯ ಸಪ್ಪಳ ಎಲ್ಲರನ್ನೂ ಹೊಡೆದೆಬ್ಬಿಸಿತು. ತಮ್ಮನು ಅಲ್ಲಿಯೇ ಎದ್ದು ನಿಂತ. ದೂರದಲ್ಲಿ ತಂದೆ ಓಡಿ ಬಂದು ಜನಸಮುದಾಯವನ್ನು ಕೂಡಿದ್ದು ಅವನಿಗೆ ಅಲ್ಲಿಂದ ಕಾಣಿಸಿತು. ಆಚಾರ್ಯರ ಮಂತ್ರಘೋಷಣೆ ಗುಡಿಯಲ್ಲಿ ಪ್ರತಿಧ್ವನಿಸುತ್ತಿದೆ. ಮಂಗಳಾರತಿಯ ಅಜಸ್ರ ಜ್ಯೋತಿಗಳ ಬೆಳಕಿನಲ್ಲಿ ಕಣ್ಣು ಫಕ್ಕನೆ ಮಂಜಾದಂತಾಗಿ ಆ ಬೆಳಕಿನ ಝಳಕ್ಕೆ ತಮ್ಮನ ಮೈ ಜೋರನೆ ಬೆವತಿತು. ಹೆಂಡತಿಯ ಚಿತೆಯ ಹತ್ತಿರ ನಿಂತಾಗ ಗಾಳಿಯ ಸೆಳಕಿಗೆ ಝಳವು ತೂರಿ ಹೀಗೆಯೇ ಮೈಮೇಲೆ ಬರುತ್ತಿತ್ತು. ಮಂಗಳಾರತಿಯ ಬತ್ತಿಗಳೆಲ್ಲ ಸುಟ್ಟು ಕರಕಾದ ವಾಸನೆ ಬರುತ್ತಿದೆ. ಬೆಂಕಿಗೆ ದರ್ಭ ತುಪ್ಪ ಹಾಗು ಅನ್ನವನ್ನು ಹಾಕಿದರೆ ಇಂಥದೇ ವಾಸನೆ ಬರುತ್ತದೆ. ತಮ್ಮನ್ನು ಕಣ್ಣು ಅರಳಿಸಿ ನಂದಾವನದ ಇದಿರು ವರ್ತುಳಾಕಾರವಾಗಿ ಚಲಿಸುವ ಜ್ಯೋತಿಗಳನ್ನು ನಿಶ್ಚಲವಾಗಿ ದಿಟ್ಟಿಸುತ್ತಿದ್ದಾನೆ. ಜಾಗಟೆಗಳು ಕರ್ಕಶವಾದ ಸಪ್ಪಳ ಮಾಡುತ್ತಿವೆ.
ಜನ ಮುಂದೆ ಮುಂದೆ ನುಗ್ಗುತ್ತಿದ್ದರು. ವೃಂದಾವನದ ಮೇಲೆ ಸಾಗರ ಬೀಳುತ್ತಿದ್ದರು. ತಮ್ಮನ್ನು ನಿಶ್ಚಲವಾಗಿ ಹಾಗೆಯೇ ನಿಂತಿದ್ದಾನೆ.
*
ಮಂಗಳಾರತಿಯ ವೇಳೆಗೆ ಹೆಂಗಸರ ಗುಂಪಿನಲ್ಲಿ ತಾಯಿ ಸಿಕ್ಕುಬಿದ್ದಿದ್ದರು. ವಿಪರೀತ ಗದ್ದಲ. ಈ ತಿಕ್ಕಾಟದಲ್ಲಿ ಯಾರೋ ಕಾಲು ತುಳಿದರು. ವೈಶ್ಯರ ಹೆಂಗಸೊಬ್ಬಳು ಧಿಗ್ಗನೆ ಹಾಯ್ದು ಅವರನ್ನು ಮುಟ್ಟಿಬಿಟ್ಟಳು. ಇದೂ ವರೆಗೂ ಮಡಿಯಲ್ಲಿದ್ದು ತೀರ್ಥದ ವೇಳೆಗೆ ಸರಿಯಾಗಿ ಮೈಲಿಗೆಯಾಗುವದೆಂದರೆ ಎಂಥ ಪ್ರಾರಬ್ದ. ತಲೆಗೆ ತಲೆ ತಾಕಲಾಡುತ್ತಿದೆ. ತಾಯಿ ಗೋಣು ಮುರಿಯುವಂತೆ ಮುಖ ಮೇಲೆತ್ತಿದರು. ಆದರೆ ರಾಯರ ದರ್ಶನವೇ ಆಗಲೊಲ್ಲದು. ಕಪ್ಪಾದ ತಲೆಗಳು ಕಣ್ಣಿದಿರು ಬಂದು ಕಣ್ಣು ಕತ್ತಲೆಗುಡಿಸುತ್ತಿವೆ. ಗಂಟೆಯ ಸಪ್ಪಳ ಕೇಳಿಸುತ್ತಿದೆ. ದೂರದಿಂದಲೇ ಮಸುಕುಮಸಕಾಗಿ ಬೆಳಕು ಸುಳಿದ ಭಾಸವಾಗುತ್ತಿದೆ. ಆದರೆ ವೃಂದಾವನವೇ ಕಾಣಿಸಲೊಲ್ಲದು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಈ ಗೊಂದಲದಲ್ಲಿ ತಂಗಿಯು ಯಾವಾಗಲೋ ಅವ್ವನ ಕೈಕೊಸರಿಕೊಂಡು ಹೋಗಿಬಿಟ್ಟಿದ್ದಳು. ಹೊರಗೆ ಬಂದು ಬೇವಿನ ಗಿಡದ ಕೆಳಗೆ ರಾಶಿರಾಶಿಯಾಗಿ ಬಿದ್ದ ಒಣಗಿದೆಲೆಗಳನ್ನು ಚೆಲ್ಲಾಪಿಲ್ಲಿ ಮಾಡುತ್ತ ಕುಳಿತಳು. ಚೂರೂ ಮೋಡವಿಲ್ಲದ ಮುಗಿಲು ಬಿಸಿಲಿನ ಬೇಗೆಗೆ ಕಾಯ್ದುಹೋಗಿದೆ. ಇದರ ಪರಿವೆ ಇಲ್ಲದೆ ತಂಗಿ ಆಕಾಶವನ್ನು ನಿರ್ವಿಕಾರವಾಗಿ ನೋಡುತ್ತ ಕುಳಿತಿದ್ದಾಳೆ. ಎದುರಿಗೆ, ಕಾಯ್ದುಹೋಗಿದ್ದ ಬಂಡೆಗಲ್ಲುಗಳ ಕೊರಕಲೊಳಗಿನ ಆ ರಸ್ತೆ ನೇರವಾಗಿ ನದಿಗೆ ಹೋಗಿದೆ. ಗಾಳಿಯ ಸುಳಿವಿಲ್ಲದೆ, ಬಿಸಿಲಿನಿಂದ ಕಾಯ್ದ ನದಿಯು ಉಗಿಯಾಡುತ್ತಿದೆ. ತಂಗಿಯು ಝಗ್ಗನೆ ಎದ್ದಳು. ಹತ್ತಿರವೇ ಬಿದ್ದಿದ್ದ ಒಣಗಿದ ಬಾಳೆಯ ಹಣ್ಣಿನ ಸಿಪ್ಪೆಗಳನ್ನೆತ್ತಿಕೊಂಡು ತುಸು ದೂರ ನೆರಳಲ್ಲಿ ಮಲಗಿದ್ದ ನಾಯಿಗೆ ತಿನಿಸಲು ಹೋದಳು. ನಾಯಿಯು ಅದರ ವಾಸನೆ ನೋಡಿ, ಸೀನಿ, ಅಲ್ಲಿಂದ ಹೊರಟು ಹೋಯಿತು. ಆಗ ತಂಗಿಗೆ ಅಕಸ್ಮಾತ್ತಾಗಿ ಹೊಳೆದಂತಾಯಿತು- ತನಗೂ ಹಸಿವೆಯಾಗಿದೆಯೆಂಬುದು. ಸಿಪ್ಪೆಯನ್ನೆತ್ತಿ ತಾನು ತಿನ್ನಬೇಕು ಎಂದು ಯೋಚನೆ ಮಾಡಿ ನಿರ್ಧರಿಸುವದರಲ್ಲಿಯೇ ಮರೆತುಬಿಟ್ಟಳು.
ತಂಗಿಗೆ ಇತ್ತೀಚೆಗೆ ಏನೂ ನೆನಪಿರುವದಿಲ್ಲ. ಒಂದೇ ವೇಳೆಗೆ ಎರಡು ಜಗತ್ತಿನಲ್ಲಿದ್ದು ವ್ಯವಹರಿಸುತ್ತಿದ್ದಂತೆ ಅವಳಿಗನಿಸುತ್ತದೆ. ಸುತ್ತಲಿನ ವಾಸ್ತವಿಕ ಜಗತ್ತಿನ ವ್ಯಾಪಾರ ಒಮ್ಮೆ ನೀರಸವೆನಿಸಿದರೆ, ಇನ್ನೊಮ್ಮೆ ವಿಲಕ್ಷಣವೆನಿಸುತ್ತಿತ್ತು. ಈ ಜಗತ್ತಿನಲ್ಲಿದ್ದೂ ಇನ್ನೊಂದು ಜಗತ್ತಿಗೆ ತಾನು ತೇಲಿ ಹೋಗಿ ತುಟ್ಟತುದಿಯಲ್ಲಿ ಅಂತರಾಳದಲ್ಲಿ ಲಟಪಟ ವದ್ದಾಡುತ್ತಿದ್ದಂತೆ ಭಯಾನಕ ಕಲ್ಪನೆ ಬರುತ್ತಿತ್ತು. ಕಗ್ಗತ್ತಲೆಯಲ್ಲಿ ಚಿಕ್ಕೆ ತೂಗಾಡಿದ ರೀತಿಯಲ್ಲಿ ಕಣ್ಣಿದಿರು ಕತ್ತಲೆ ಪಸರಿಸಿ ಅದರಲ್ಲಿ ಬೆಳಕಿನ ಅಣುಗಳು ಹಲವಾರು ಆಕಾರ ಪಡೆದು ಸಾಲಾಗಿ ಸರಿದು ತೂಗಾಡಿ ಮಾಯವಾಗುತ್ತಿದ್ದವು. ಸಾವಿರ ಘಟನೆಗಳು, ಸಾವಿರ ಮುಖಗಳು ನೂಕುನುಗ್ಗಲಲ್ಲಿ ಎಡವುತ್ತ ಬೀಳುತ್ತ ಅಸಂಬದ್ಧವಾಗಿ ನೆರೆದು ಅವಳನ್ನು ಗೊಂದಲಗೆಡಿಸಿಬಿಡುತ್ತಿದ್ದವು. ಹಾಗೆ ಒಮ್ಮೆಲೇ ಎಂದಿನಿಂದ ಆಯಿತು, ಯಾಕೆ ಆಯಿತು ಎನ್ನುವದು ಅವಳಿಗೆ ಗೊತ್ತಿಲ್ಲ. ವಿಚಾರಶಕ್ತಿ ಈಗ ಅವಳ ಅಧೀನದಲ್ಲಿಲ್ಲ. ಕಣ್ಣಿದಿರು ಸುಳಿಯುವದನ್ನೆಲ್ಲ, ಮನಃಪಟಲದ ಮೇಲೆ ಮೂಡಿ ಹೋಗುವದನ್ನೆಲ್ಲ ಚಿಕ್ಕ ಮಕ್ಕಳು ಚಲನಚಿತ್ರ ನೋಡುತ್ತ ಕುಳಿತಂತೆ- ಅರ್ಥವಾಗದಿದ್ದರೂ ಅಸಹಾಯಕಳಾಗಿ ನೋಡುತ್ತ ಕುಳಿತುಬಿಡುತ್ತಿದ್ದಳು.
ಅತ್ತಿಗೆ ಸತ್ತಾಗ ಅವ್ವ-ಅಪ್ಪ-ಅಣ್ಣ ಎಲ್ಲರೂ ಅತ್ತರು. ಅದು ನೆನಪಾದರೆ ಅವಳಿಗೆ ಈಗಲೂ ನಗೆ ಬರುತ್ತದೆ. ದೊಡ್ಡವರು ಅಳುವದು ಇಷ್ಟು ವಿಚಿತ್ರ ಕಾಣಿಸುವದೆನ್ನುವದು ಅವಳ ಅನುಭವಕ್ಕೆ ಬಂದದ್ದು ಅದೇ ಮೊದಲನೇಯ ಸಲ. ತಾಯಿಗೆ ಧ್ವನಿ ಹೊರಡದೆ ಉಬ್ಬಸಪಡುತ್ತ ಕುಳಿತಿದ್ದರು. ಅಪ್ಪನ ಧ್ವನಿ ಅಳುವಿಗೆ ಸರಿಹೋಗುವದಿಲ್ಲ. ಹಾಗೂ ಅತ್ತಾಗ ಮುಖ ಬಹಳೇ ವಿದ್ರೂಪವಾಗಿ ಕಾಣಿಸುತ್ತದೆ. ಆ ದಿವಸ ಅಪ್ಪನಿಗೆ ಅಳಬೇಡವೆಂದು ಸ್ಪಷ್ಟವಾಗಿ ಹೇಳಬೇಕೆನಿಸಿತ್ತು. ಆದರೆ ತುಣುಕು ತುಣುಕಾಗಿ ಬಿದ್ದಿದ್ದ ಅತ್ತಿಗೆಯ ದೇಹದ ಹತ್ತಿರ ಹೋಗುವ ಧೈರ್ಯವಾಗಿರಲಿಲ್ಲ. ಗಾರ್ಡನ ಕೈದೀಪದ ಬೆಳಕಿನಲ್ಲಿ ಅತ್ತಿಗೆಯನ್ನು ವಿಚ್ಛಿನ್ನ ಮಾಡಿದ ಇಂಜನ್ನಿನ ದೊಡ್ಡ ಗಾಲಿಯು ಮಿಂಚಿತ್ತು. ಸಾಯುವ ನಿಸ್ಸಹಾಯಕ ಕ್ಷಣದಲ್ಲಿ ಅತ್ತಿಗೆಯು ವೇಗವಾಗಿ ತಿರುಗುವ ಆ ಗಾಲಿಯನ್ನು ಅಪ್ಪಿಕೊಳ್ಳುವ ಆಸೆಪಟ್ಟಿರಬೇಕು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ತಂತಿಯ ಮೇಲೆ ಅಂತರಾಳದಲ್ಲಿ ಬೇತಿನಲ್ಲಿ ಸರಿಯುವ ದೊಡ್ಡ ಗಾಲಿ ತಂಗಿಯ ಕಣ್ಣಿದಿರು ಬಂದಿತು. ತಾನು ನೋಡಿದ ಸರ್ಕಸ್ಸು ನೆನಪಾಯಿತು. ಆ ಒಂದು ಗಾಲಿಯ ಸೈಕಲ್ಲನ್ನು ನಡಿಸುವ ಹೆಂಗಸು ಸ್ವಲ್ಪ ಝೋಲಿ ತಪ್ಪಿದ್ದರೆ ತಂತಿಯಿಂದ ಜರೆದು ನೆಲಕ್ಕಪ್ಪಳಿಸುತ್ತಿದ್ದಳು. ಬಣ್ಣಬಣ್ಣದ ಬೆಳಕಿನಲ್ಲಿ, ಬ್ಯಾಂಡಿನ ಉನ್ಮಾದಕಾರಿಯಾದ ಸಂಗೀತದ ತಾಳಕ್ಕೆ ತಕ್ಕಂತೆ ಕುದುರೆಗಳು ಚಕ್ರಾಕಾರವಾಗಿ- ಆಸ್ಥೆಯಿಲ್ಲದೆ, ಬೇಸರವೂ ಇಲ್ಲದೆ- ಸುತ್ತುತ್ತಿದ್ದವು. ಸರ್ಕಸ್ಸಿನಲ್ಲಿ ಸಿಂಹವನ್ನು ನೋಡಿದಾಗ ತಂಗಿಗೆ ಅಂಜಿಕೆ ಬಂದಿರಲಿಲ್ಲ. ಆಟದ ನೆವದಲ್ಲಿ ಅದಕ್ಕೆ ಕೊಟ್ಟ ಚಿತ್ರಹಿಂಸೆಯಿಂದ ಸಿಂಹವು ಸಿಟ್ಟಿಗೆದ್ದಿತ್ತು. ಆದರೆ, ಚಾಬೂಕಿನ ಹೊಡೆತಕ್ಕೆ ತಳಮಳಿಸಿ, ಪಂಜರದ ಕಡೆಗೆ ಹೊರಟದ್ದು ಪುನಃ ತಿರುಗಿ ಪ್ರೇಕ್ಷಕರ ನಡುವೆ ಬಂದಾಗ ಮಾತ್ರ ಅವಳು ಅಂಜಿ ತಣ್ಣಗಾಗಿದ್ದಳು.
ಹೀಗೇ ಘಟನೆಗಳೆಲ್ಲ ಯದ್ವಾ-ತದ್ವಾ ನೆರೆದು, ಮುಟ್ಟಾಟದಲ್ಲಿ ಹುಡುಗರು ದುಂಡಗೆ ನಿಂತು ಮುಟ್ಟಲು ಆಹ್ವಾನಿಸಿದಂತೆ-ನಾಲ್ಕೂ ಕಡೆಯಿಂದ ಅವಳನ್ನು ಆಹ್ವಾನಿಸಿದವು. ಮಠ ದೂರ ಹಿಂದೆ ಉಳಿದುಬಿಟ್ಟಿತ್ತು. ಮಂತ್ರಿಸಿದ ಬೂದಿಯನ್ನು ಕೊಟ್ಟು ಹೊರಟ ಸನ್ಯಾಸಿಯನ್ನು ಹಿಂಬಾಲಿಸಿದಂತೆ ತಂಗಿಯು ಘಟನೆಗಳ ಬೆನ್ನು ಹತ್ತಿ ಹೊರಟಳು. ಅರ್ಧ ದಾರಿ ದಾಟಿ ಬಂದು, ನದಿಯ ಸಮೀಪಕ್ಕೆ ಬಂದಿದ್ದಾಳೆ. ಬಂಡೆಗಲ್ಲುಗಳ ಹಂಚಿನಂತೆ ಕಾಯ್ದುಹೋಗಿದ್ದವು. ತಂಗಿಯು ಕಾಲಿಡಲಿಕ್ಕಾಗದೆ ಥಕಥಕ ಕುಣಿದು ಖೊಳ್ಳೆಂದು ನಕ್ಕಳು. ಆದರೆ ಕಾಲು ಸುಡುವದನ್ನು ಸಹಿಸಲಿಕ್ಕಾಗದೆ ಧ್ವನಿ ತೆಗೆದು ಸಣ್ಣಹುಡುಗರಂತೆ ಗಳಗಳ ಅಳತೊಡಗಿದಳು. ತಾನು ಮುಂದೆ ಎಲ್ಲಿ ಹೋಗಬೇಕೆಂಬುದು ಅವಳಿಗೆ ತಿಳಿಯಲಿಲ್ಲ. ಎದುರಿಗೆ ನದಿ ಅಡ್ಡಗಟ್ಟಿ ನಿಂತಿತ್ತು. ಹಿಂದೆ ದೂರದಲ್ಲಿ ಮಠದ ಗೋಡೆಗಳು ಭವ್ಯವಾಗಿ ಎತ್ತರವಾಗಿ ನಿಂತು ಜೇಲಿನ ಗೋಡೆಗಳಾಗಿ ಅವಳನ್ನು ಹಿಂದೆ ಹೋಗಗೊಡಲೊಲ್ಲವು. ಈ ನೀರವತೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಕರಾಳವಾದ ಕಲ್ಲುಗಳು ದಂಡುಗಟ್ಟಿ ಒಮ್ಮೆಲೆ ಅವಳ ಮೇಲೆ ಏರಿ ಬಂದಂತೆನಿಸಿತು. ಚಿಟಿಚಿಟಿ ಚೀರುತ್ತ ನೀರಿನ ಕಡೆಗೆ ಓಡಿದಳು. ಹಿಂದೆ ನಾಲ್ಕೂ ಕಡೆಗೆ ಬಂಡೆಗಲ್ಲುಗಳು ಕೈಕಟ್ಟಿಕೊಂಡು ಅವಳನ್ನು ಸುತ್ತುಗಟ್ಟುವ ಹವಣಿಕೆಯಿಂದ ನಿಂತಿವೆ. ಅವುಗಳನ್ನು ತಪ್ಪಿಸಿಕೊಂಡು ಮುಂದೆ ಹೋಗಬೇಕೆಂದರೆ ನೀರು. ತಂಗಿಯು ಹೌಹಾರಿದಳು. ಎರಡೂ ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಹಿಡಿದು ಆಕಾಶದ ಕಡೆಗೆ ಮುಖ ಮಾಡಿ ಆಕ್ರಂದನ ಮಾಡಿದಳು.
ಮಠದಲ್ಲಿ ತೀರ್ಥ-ಪ್ರಸಾದವಾಗಿ ಊಟದ ಸಿದ್ಧತೆ ನಡೆದಿದೆ. ಹೆಂಗಸರು, ಹುಡುಗರು ತಮ್ಮ ತಮ್ಮ ಎಲೆ ಹಿಡಿದಿಡಲು ಧಾವಿಸುತ್ತಿದ್ದಾರೆ. ಹುಳಿಯ ವಾಸನೆ ಕಮ್ಮಗೆ ಮಠದಲ್ಲೆಲ್ಲ ಇಡುಗಿದೆ. ಸಾಲುಸಾಲಾಗಿ ಪತ್ರಾವಳಿಗಳನ್ನು ಹಾಕಿದ್ದಾರೆ. ಎಲೆಯಲ್ಲಿ ಅನ್ನ-ಪಾಯಸ-ಹುಳಿ ಹಾಗೂ ಕುಂಬಳಕಾಯಿಯ ಪಲ್ಲೆ ಬಡಿಸಿದೆ.
ಅಪ್ಪ-ತಮ್ಮ ಗಂಡಸರ ಪಂಕ್ತಿಯಲ್ಲಿ ಕುಳಿತಿದ್ದರು. ಅಪ್ಪ ಗಂಧ ಹಚ್ಚಿಕೊಂಡಾಗಿದೆ. ಇನ್ನು ಊಟ ಸುರುವಾಗಲು ಆಚಾರ್ಯರು “ಕೃಷ್ಣಾರ್ಪಣಮಸ್ತು” ಎನ್ನುವದೊಂದೇ ಬಾಕಿ ಉಳಿದಿದೆ. ಅಕ್ಷತೆ ಹಚ್ಚಿಕೊಳ್ಳಲು ತಂದೆಯು ಮುಖ ಮೇಲೆತ್ತಿದರೆ, ಎದುರಿನಲ್ಲಿ ತಾಯಿ ಬಂದು ನಿಂತಿದ್ದಾರೆ. ಮುಖ ಬಿಳುಪಿಟ್ಟಿದೆ. ಮಾತಾಡಲಿಕ್ಕಾಗದೆ ಒಂದೇ ಸಮನೆ ತೇಕುತ್ತಿದ್ದಾರೆ. ಉಸುರು ಹಿಡಿದು ತಾಯಿ ಮೆಲ್ಲಗೆ ಹೇಳಿದರು: “ತಂಗಿಯು ಮಠದಲ್ಲಿಲ್ಲ. ಎಲ್ಲಿಗೋ ಹೋಗಿಬಿಟ್ಟಿದ್ದಾಳೆ.”
ತಂದೆ ಊಟ ಬಿಟ್ಟಿದ್ದರು. ತಮ್ಮ ತಾಯಿ ಇಬ್ಬರೂ ಅವರನ್ನು ಹಿಂಬಾಲಿಸಿದರು. ಎಲ್ಲರೂ ಓಡುತ್ತ ಓಡುತ್ತ ನದಿಗೆ ಬಂದರು. ನೋಡುತ್ತಾರೆ, ತಂಗಿಯು ಬಂಡೆಗಲ್ಲಿಗೆ ತಲೆ ಜಜ್ಜಿಕೊಂಡು ನಿಶ್ಚೇಷ್ಟಿತಳಾಗಿ ಬಿದ್ದುಬಿಟ್ಟಿದ್ದಾಳೆ.
ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ
ಬಿಸಿಲು ರಣಗುಡುತ್ತಿದೆ.
ಗಾಳಿಗೂ ಉಸಿರುಗಟ್ಟಿಹೋಗಿದೆ.
ಆದರೆ ತಂಗಿಯು ಇನ್ನೂ ಉಸಿರಾಡಿಸುತ್ತಿದ್ದಾಳೆ.
*
“ತಂಗೀ, ಕೈಬಿಡಬ್ಯಾಡ. ಘಟ್ಟಿಯಾಗಿ ಹಿಡಿ. ಗದ್ದಲದಾಗ ಎಲ್ಲ್ಯಾರೆ ತಪ್ಪಿಸಿಕೊಂಡೀ” ಮಗಳ ಕೈಯ ಹಿಡಿತವನ್ನು ಇನ್ನೂ ಬಿಗಿಯಾಗಿ ಮಾಡುತ್ತ ತಾಯಿ ಹೇಳಿದರು. ತಂಗಿಯು ಉತ್ಸವಕ್ಕೆಂದು ನೆರೆದಿದ್ದ ಜನಜಂಗುಳಿಯನ್ನು ಬೆರಗುಬಟ್ಟು ನೋಡುತ್ತಿದ್ದಾಳೆ. ಮಠದ ಇದಿರಿನ ಬಯಲಲ್ಲಿ ಸಾಲಾಗಿ ಅಂಗಡಿಗಳನ್ನು ಹಚ್ಚಿದ್ದಾರೆ. ಕೊಳ್ಳುವದು ಏನೂ ಇರದಿದ್ದರೂ ಸುಮ್ಮನೆ ಯಾವುದಾದರೂ ಒಂದು ಅಂಗಡಿಯ ಮುಂದೆ ಹೋಗಿ ನಿಲ್ಲಬೇಕೆಂದು ಅವಳಿಗೆನಿಸಿತು. ತಂಗಿ ಇಂದು ಹುರುಪಿನಲ್ಲಿದ್ದಾಳೆ. ಹಿಂದಿದ್ದ ಮ್ಲಾನತೆ ಕಡಿಮೆಯಾಗಿ ಮೈಯೆಲ್ಲ ಅಪರಿಮಿತ ಉತ್ಸಾಹದಿಂದ ತುಳುಕುತ್ತಿದೆ. ತಂದೆ-ತಮ್ಮ ಇವರ ಹಿಂದಿನಿಂದ ನಡೆದಿದ್ದರು. ತಂದೆಗೆ ತಾವೆಲ್ಲರೂ ಹೊರಟ ರೀತಿ ಹೊಸದೆನಿಸಿತು. ತುಸು ಸಂಕೋಚವೂ ಹುಟ್ಟಿತು. ಇಷ್ಟು ಸನಿಹದಿಂದ ಒಬ್ಬರೊಬ್ಬರಿಗೆ ಮೈಹಚ್ಚಿಕೊಂಡು ಇಡೀ ಸಂಸಾರದೊಂದಿಗೆ ತಾವು ಹಾಗೆ ಹೊರಗೆ ಹೋದದ್ದು ಬಹಳ ಅಪರೂಪ. ಒಂದು ಕ್ಷಣ ತಂದೆಗೆ ಅಭಿಮಾನವೆನಿಸಿತು, ತೃಪ್ತಿಯಾಯಿತು. ನಾವೆಲ್ಲರೂ ಬದುಕಿನಲ್ಲಿ ಹೀಗೆ ಕೂಡಿದ್ದರೆ ನಮ್ಮೆಲ್ಲರ ಬಾಳು ಹೇಗಾಗಬಹುದಿತ್ತು ಎಂಬುದರ ಕನಸು ಕಾಣುತ್ತ ಅವರು ಮುಂದೆ ನಡೆದರು. ತಮ್ಮ ಗದ್ದಲದಲ್ಲಿ ಹಿಂದೆ ಬೀಳುತ್ತಿದ್ದಾನೆ. ಅವನು ಬರುವವರೆಗೆ ನಿಂತು ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ತಂದೆಯು ಮುಂದೆ ನಡೆದರು. ಆದರೆ ಬಹಳ ಅಶಕ್ತತನ ಬಂದಿದೆ. ಗದ್ದಲದಲ್ಲಿ ಸಮತೂಕವಾಗಿ ಉಳಿಯುವ ಶಕ್ತಿ ಈಗ ತಮ್ಮಲ್ಲಿ ಉಳಿದಿಲ್ಲವೆಂಬುದು ಅವರಿಗೆ ಮನದಟ್ಟಾಯಿತು. ಯಾಕೆಂದರೆ ಜನರು ಪ್ರವಾಹದಂತೆ ಕೊಚ್ಚಿ ಬಂದು ಅವರನ್ನು ಮುಂದೆ ಮುಂದೆ ನೂಕುತ್ತಿದ್ದರು. ತಾಯಿಯ ಮುಖವು ಸಿಟ್ಟಿನಿಂದಲೋ ಏನು ತಾತ್ಸಾರದಿಂದಲೋ ಮುದುಡಿಕೊಂಡಿತ್ತು. ಗದ್ದಲದಲ್ಲಿ ಜನರು ಬಂದು ಧಿಗ್ಗನೆ ಹಾಯುವದು ಅವರಿಗೆ ಬಗೆಹರಿದಿರಲಿಲ್ಲ. ಮುದ್ದೆಯಾಗಿ ಮಗಳನ್ನು ಕರೆದುಕೊಂಡು ಎಷ್ಟು ಜಪ್ಪಿಸಿ ನಡೆದರೂ ಜನರು ಹಾಯುತ್ತಿದ್ದರು.
ಆಕಾಶದಲ್ಲೆಲ್ಲ ಮೋಡ ಕವಿದಿದೆ. ಸಾವಿರಾರು ಜನರು ಉಂಡೆದ್ದ ಎಲೆಗಳು ತೆಗೆಯುವವರಿಲ್ಲದೆ ನದಿಯ ದಂಡೆಯ ಹಾದಿಯ ಮೇಲೆ ಹಾಗೆಯೇ ಬಿದ್ದಿವೆ. ರಥೋತ್ಸವದ ದರ್ಶನಕ್ಕೆ ಹಾತೊರೆದು ಜನರೆಲ್ಲರೂ ಮಠದ ಆವಾರದಲ್ಲಿ ಕಿಕ್ಕಿರಿಯತೊಡಗಿದ್ದಾರೆ.
ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ
ಆ ನಾಲ್ವರೂ ನುಗಿಸುತ್ತ ನುಗಿಸುತ್ತ ದಾರಿಮಾಡಿಕೊಂಡು ಹಾಗೂ ಹೀಗೂ ಗುಡಿಯ ಮಹಾದ್ವಾರದವರೆಗೆ ಬಂದು ಮುಟ್ಟಿದರು. ತಮ್ಮನಿಗೆ ಎರಡು ದಿನಗಳಿಂದಲೂ ಈ ಗದ್ದಲ ಸಹಿಸಿ ಕಡೆಗೆ ಈಗ ಬೇಸರ ಬಂದಿತ್ತು. ಹೆರವರ ಮೈ-ಬೆವರಿನ ವಾಸನೆ ಹೇಸಿಗೆ ಹುಟ್ಟಿಸುತ್ತಿತ್ತು. ಮಹಾದ್ವಾರದ ಪಾವಟಿಗೆಯ ಮೇಲಿಂದ ನೋಡಿದರೆ ತಮ್ಮನಿಗೆ ಸುತ್ತಲೂ ಬರೀ ತಲೆಗಳೇ ಕಂಡವು. ಈ ಕೋಲಾಹಲದಲ್ಲಿ ಕೈಕೊಸರಿಕೊಂಡು ಅಪ್ಪನನ್ನು ತನ್ನ ಪಾಡಿಗೆ ಬಿಟ್ಟು ಹೊರಗೆ ಓಡಿ ಹೋಗಬೇಕೆಂದು ತಮ್ಮನಿಗೆ ಉತ್ಕಟೇಚ್ಛೆಯಾಯಿತು. ಮುಂದೆ ಹೋದಂತೆಲ್ಲ ಆವಾರದಲ್ಲಿ ಸ್ಥಳ ಕಿರಿದಾಗುತ್ತ ನಡೆದಿತ್ತು. ಇನ್ನೂ ಸರಿದು ಹಾಗೇ ಮುಂದೆ ಹೋದರೆ ಇಕ್ಕಟ್ಟಿನಲ್ಲಿ ಸಿಕ್ಕು ಜನಸಮ್ಮರ್ದದ ಗಲಭೆಯಲ್ಲಿ ತಾನು ಹಿಚುಕಿ ಹೋಗಬಹುದೆಂದು ಅವನಿಗೆ ಹೆದರಿಕೆಯಾಯಿತು. ತಿರುಗಿ ನೋಡಿದರೆ ಅಲ್ಲಿಂದ ಹಿಂದಿದ್ದ ಅಂಗಡಿಗಳ ಸಾಲು ಕಾಣಿಸುತ್ತದೆ. ಜನರೆಲ್ಲರು ಅಂಗಡಿಗಳನ್ನು ತೆರವು ಮಾಡಿ ಈ ಗದ್ದಲವನ್ನು ಸೇರುತ್ತಿದ್ದಾರೆ. ತಮ್ಮನಿಗೆ ಈ ಉತ್ಸವದಲ್ಲಿ ಏನೂ ಆಸ್ಥೆ ಇರಲಿಲ್ಲ. ಅವನಿಗೆ ಈಗ ಹೆಂಡತಿ ನೆನಪಾದಳು. ಅವಳಿಗೆ ಸಾದಾ ಹಬ್ಬ-ಹುಣ್ಣಿಮೆಯೆಂದರೂ ಕೂಡ ಸಂಭ್ರಮವೇ ಸಂಭ್ರಮ. ಆ ಸಂಭ್ರಮದಲ್ಲಿ ಅವಳಿಗೆ ಏನೂ ಲಕ್ಷ್ಯದಲ್ಲಿರುತ್ತಿರಲಿಲ್ಲ. ಒಮ್ಮೆ ನವರಾತ್ರಿಯಲ್ಲಿ ವೆಂಕಟೇಶದೇವರ ಗುಡಿಗೆ ಹೋದಾಗ ಗದ್ದಲದಲ್ಲಿ ಒಂದು ಭೆಂಡೋಲೆಯನ್ನೇ ಕಳೆದುಕೊಂಡು ಬಂದಿದ್ದಳು. ಅದು ಅವ್ವನ ಗಮನಕ್ಕೆ ಬರಲು ತಡವಾಗಲಿಲ್ಲ. ಇದರ ಪರಿಣಾಮವಾಗಿ ಅವಳ ಮೈಮೇಲಿನ ಆಭರಣಗಳೆಲ್ಲ ಮಾಯವಾಗಿಬಿಟ್ಟವು. ಆದರೆ ಅವಳ ಕೈಯಲ್ಲಿಯ ಉಂಗುರವೊಂದು ಮಾತ್ರ ಕಡೆಯವರೆಗೂ ಅವಳ ಹತ್ತಿರ ಉಳಿದಿತ್ತು. ಅವಳು ಸತ್ತ ದಿವಸ ಅವ್ವನು ಒಂದೇ ಸವನೆ ಸೊಸೆಯ ಕೈ ಹಿಡಿದು ಹಿಡಿದು ಅತ್ತಿದ್ದಳು. ಅವಳು ಕಿರುಬೆರಳಿನ ಉಂಗುರವನ್ನು ದೊಡ್ಡ ಬೆರಳಿಗೆ ಹಾಕಿದ್ದರಿಂದ ಅದು ಬಿಗಿಯಾಗಿಬಿಟ್ಟು ಅವ್ವನ ಚಾತುರ್ಯವೆಲ್ಲ ನಿಷ್ಪಲವಾಗಿಬಿಟ್ಟಿತ್ತು. ಕಡೆಗೆ ನಿರುಪಾಯಳಾಗಿ ನೆರೆದವರ ಕಣ್ಣಿದಿರಿನಲ್ಲಿಯೇ ಆ ಉಂಗುರವನ್ನು ಜಗ್ಗಿ ತೆಗೆದಿದ್ದಳು.
ಮೋಡ ಕವಿದ ಆಕಾಶದಿಂದ ಎಲ್ಲಿಯೇ ಅಪ್ಪಿ ಸೂರ್ಯಕಿರಣ ತೂರಿ ಬಂದು ಬಿದ್ದಿದೆ. ಅದರ ಬೆಳಕಿನಲ್ಲಿ ಮೊದಲೇ ಶೃಂಗಾರಾಗಿ ನಿಂತಿದ್ದ ರಥ ಇನ್ನೂ ಥಳಥಳಿಸುತ್ತಿದೆ. ರಥದ ಮುಂದೆ ಹಿಲಾಲು ಉರಿಯುತ್ತಿದೆ. ಕೆಂಪು ಬಣ್ಣದ ಸತ್ತಿಗೆಗೆ ಹಸಿರು ದಂಡೆಯನ್ನು ಕೂಡಿಸಿದ್ದಾರೆ.
ನೆರೆದಿದ್ದ ಸಹಸ್ರಾರು ಕಂಠಗಳು ನೆಲ ನಡುಗುವಂತೆ ಜಯಜಯಕಾರ ಮಾಡಿದವು. ರಥದ ಮೆರವಣಿಗೆ ಹೊರಟಿತು. ರಥ ಎಳೆದು ಪುಣ್ಯ ಪಡೆಯಲಿಕ್ಕೆ ಜನರು ಏಳುವದು ಬೀಳುವದನ್ನು ಕೂಡ ಲಕ್ಷಿಸದೆ, ಬಡಿದಾಡಿ ಒಬ್ಬರನ್ನೊಬ್ಬರು ಬಲವಾಗಿ ನುಗಿಸಿ ರಥದ ಕಡೆಗೆ ಧಾವಿಸಿದರು. ಮತ್ತೊಮ್ಮೆ ಜಯಜಯಕಾರ.
ಇಷ್ಟರಲ್ಲಿಯೇ ತಮ್ಮನ ಕೈ ತಂದೆಯ ಕೈಯಿಂದ ಬಿಡುಗಡೆಯಾಗಿತ್ತು. ಜನಜಂಗುಳಿ ಒಮ್ಮೆಲೆ ಅಸ್ಥಿರವಾಯಿತು. ನೂಕು ನುಗ್ಗಲಲ್ಲಿ ಕ್ರಮೇಣ ತಂದೆ ಹಾಗೂ ತಮ್ಮ ದೂರ ದೂರ ಸಾಗಿಸಲ್ಪಟ್ಟು ಕಡೆಗೆ ಒಬ್ಬರನ್ನೊಬ್ಬರು ಕಳೆದುಕೊಂಡು ಬಿಟ್ಟರು. ತಾಯಿ-ತಂಗಿಯರಂತೂ ಯಾವಾಗಲೋ ಆ ಪ್ರಕ್ಷುಬ್ಧ ಜನಪ್ರವಾಹದಲ್ಲಿ ಬೆರೆತುಹೋಗಿದ್ದರು. ತಂದೆ ನಿಸ್ಸಹಾಯಕ ಸ್ಥಿತಿಯಲ್ಲಿ ತಮ್ಮನನ್ನು ಹುಡುಕತೊಡಗಿದರು. ಆದರೆ ತಮ್ಮನನ್ನು ಜನಪ್ರವಾಹದ ತೆರೆ, ಎತ್ತಿ ದೂರ ಚೆಲ್ಲಿತ್ತು. ತಂದೆ ಹೌಹಾರಿದರು. ಅವರಿಗೆ ಕಾಲೇ ಹೋದಂತಾದವು. ದೇಹದ ಮೇಲಿನ ಅಧೀನ ತಪ್ಪಿ ತಮ್ಮನ್ನು ತಾವೇ ಪೂರ್ಣವಾಗಿ ಆ ಜನ ಪ್ರವಾಹದ ಸೆಳವಿಗೆ ಒಪ್ಪಿಸಿ ಹತಾಶರಾಗಿ ನಿಂತುಬಿಟ್ಟಿದ್ದರು. ತಮ್ಮ ಇನ್ನು ಬಹುಶಃ ನನ್ನನ್ನು ಹುಡುಕಿಕೊಂಡು ಬರಲಿಕ್ಕಿಲ್ಲ. ಈ ಚಕ್ರವ್ಯೂಹದಿಂದ ಪಾರಾಗುವ ದಾರಿ ನನಗೆ ಗೊತ್ತಿಲ್ಲ. ತಮ್ಮನಿಗಾದರೂ ಇಲ್ಲಿಂದ ಹೊರಬೀಳುವ ಗುಟ್ಟು ಗೊತ್ತಿತ್ತೇನೋ? ಆದರೆ ತಮ್ಮನ್ನು ಇಷ್ಟೊತ್ತಿನ ವರೆಗೆ ನನ್ನ ಕೂಡ ಇದ್ದರೂ ಅದನ್ನು ಕೇಳುವದಕ್ಕೆ ನೆನಪೇ ಆಗಲಿಲ್ಲ. ಈ ಗದ್ದಲದಲ್ಲಿ ಇವರಿಬ್ಬರೂ ಎಲ್ಲಿ ಕರಗಿಹೋದರೋ ಯಾರಿಗೆ ಗೊತ್ತು? ತಂಗಿಯ ಆವೇಶ ಈ ದಿವಸ ಮತ್ತೆ ಹೆಚ್ಚಾಗಿದೆ. ಕೈ ಕೊಸರಿಕೊಂಡು ಹೋದರೆ ಅವಳು ಈ ಸಲ ಖಂಡಿತ ಮರಳಿ ಬರುವ ಆಸೆಯಿಲ್ಲ. ಆ ದಿನದಂತೆ ಅವಳು ಮತ್ತೆ ನದಿಗೆ ಓಡಿದರೆ…
ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ
ಧಮಧಮಧಮ ನಗಾರಿಯ ಸಪ್ಪಳ ಕೇಳಿಸುತ್ತಿದೆ. ರಥ ಮುಂದೆ ಸಾಗಿದೆ. ತಮ್ಮನಿಗೆ ಹರಿಯುವ ಜನಪ್ರವಾಹದ ವಿರುದ್ಧ ಸೆಣಸಿ ಹೊರಗೆ ಬರಬೇಕಾಗಿತ್ತು. ಹೊರಬೀಳುವದು ಕೂಡ ಅಷ್ಟೇ ಅಸಾಧ್ಯವಾದ ಮಾತಾಗಿತ್ತು ಎಂಬುದು ತಮ್ಮನಿಗೆ ಗೊತ್ತಿಲ್ಲ. ತಾಯಿ-ತಂಗಿ ತಿರುಗಣಿಯಲ್ಲಿ ಸಿಕ್ಕುಬಿಟ್ಟಿದ್ದರು. ತಂದೆ ನಡು-ನೀರನ್ನು ಮುಟ್ಟಿದಾಗ ಕೈ ಸಾಗದೆ ದುರ್ಬಲರಾಗಿ ಅಲ್ಲಿಯೇ ದೈವದ ಮೇಲೆ ಭಾರ ಹಾಕಿ ಉಳಿದುಬಿಟ್ಟರು. ಇವರೆಲ್ಲರನ್ನೂ ಈ ಸ್ಥಿತಿಯಲ್ಲಿ ಬಿಟ್ಟು ತಾನು ಹೊರಬೀಳುವದು ಯೋಗ್ಯವೇ ಎಂದು ಸಾಶಂಕನಾದ. ಜನರ ಪದಹತಿ ಪ್ರಬಲವಾಗುತ್ತ ನಡೆದಿತ್ತು. ಈ ಸೆಳವಿನಿಂದ ಯಾರು ಯಾರನ್ನೂ ಹೊರಗೆ ತೆಗೆಯಲು ಸಾಧ್ಯವಿಲ್ಲವೆಂಬ ನಿರ್ಣಯಕ್ಕೆ ಬಂದು, ತಮ್ಮ ಎಲ್ಲರನ್ನೂ ಅವರ ಪಾಡಿಗೆ ಬಿಟ್ಟು ತಾನು ಅಲ್ಲಿಂದ ಹೊರಬಿದ್ದ.
ಮೋಡ ದಟ್ಟವಾಗಿ ಕವಿದು, ಎಲ್ಲಿಂದಲೋ ಸುಂಟರಗಾಳಿಯು ಸುತ್ತಿ ಸುತ್ತಿ ಬಂದು ಬೈಲಿನ ಧೂಳನ್ನೆಲ್ಲ ತಂದು ಅದು ಮಠದ ಮೇಲೆ ತೂರುತ್ತಿದೆ. ರಥವನ್ನು ಎಲ್ಲರೂ ಕಸುವು ಹಾಕಿ ವೇಗವಾಗಿ ಎಳೆಯುತ್ತಿದ್ದಾರೆ. ಜನರೆಲ್ಲ ದಿಕ್ಕುಗೆಟ್ಟು ಕಣ್ಣು ತಿಕ್ಕಿಕೊಳ್ಳುತ್ತ ಚೆಲ್ಲಾಪಿಲ್ಲಿಯಾಗುವ ಬೇತಿನಲ್ಲಿದ್ದಾರೆ.
ರಥವು ಸಮೀಪಿಸಿದ ಕೂಡಲೆ ತಾಯಿಯು ತಂಗಿಯನ್ನೆಳೆದುಕೊಂಡು ಮುಂದೆ ನುಗ್ಗಿದರು. ತಂಗಿಯ ಹಣೆಯ ಮೇಲೆಲ್ಲ ಬೆವರು ಹನಿಹನಿಯಾಗಿ ಪೋಣಿಸಿದಂತೆ ನಿಂತಿದೆ. ಅವಳ ದೊಡ್ಡವಾದ ಕಣ್ಣುಗಳು ಮಂತ್ರಿಸಿದಂತೆ ರಥದಲ್ಲಿ ನೆಟ್ಟಿವೆ. ಮೈ ಥರಥರ ಕಂಪಿಸುತ್ತಿದೆ. ಯಾವುದೋ ಅಮಲಿನಲ್ಲಿ, ಭಯಭೀತಳಾಗಿ ಎಲ್ಲವನ್ನೂ ಮರೆತು ರಥವನ್ನು ನೋಡುತ್ತ ನಿಂತುಬಿಟ್ಟಿದ್ದಾಳೆ. ರಥದ ಪ್ರದಕ್ಷಿಣೆ ಮುಗಿಯುತ್ತ ಬಂದಿತು. ಜನರು ನಿಂತಲ್ಲಿಯೇ ತಲೆ ಬಾಗಿಸಿ ನಮಸ್ಕಾರ ಮಾಡುತ್ತಿದ್ದಾರೆ. ಸಿಂಗರಿಸಿಟ್ಟ ಉತ್ಸವವಿಗ್ರಹಗಳೆಲ್ಲ ರಥದ ಎಳೆದಾಟದಲ್ಲಿ ಹೊಯ್ದಾಡುತ್ತಿವೆ.
ತಂಗಿಯು ರಥದ ಕಡೆಗೆ ಕೈಮಾಡಿ ಒಮ್ಮಿಂದೊಮ್ಮೆಲೇ ಚಿಟ್ಟನೆ ಚೀರಿದಳು: “ಅಯ್ಯೋ, ಬೆಂಕಿ, ಬೆಂಕಿ. ಅವ್ವಾ, ರಥಕ್ಕೆಲ್ಲಾ ಬೆಂಕಿ ಹತ್ತೇದ. ಅಲ್ಲಿ ನೋಡು. ರಥಾ ಹ್ಯಾಂಗ ಧನ್ ಧನ್ ಉರೀತದ. ಅವ್ವಾ, ಬೆಂಕಿ!…” ತಂಗಿಯು ತಾಯಿಯ ಕೈ ಬಿಡಿಸಿಕೊಂಡು ರಥದ ಕಡೆಗೆ ಧಾವಿಸಿದಳು. ಅವಳಕಾಲ ನರಗಳೆಲ್ಲ ಛಟಛಟ ಹರಿದು ನಿರ್ಜಿವವಾದಂತೆನಿಸಿತು. ರಥದಂತೆ ತಾನೂ ಏಕಶಿಖಿಯಾಗಿ ತಪ್ತವಾಗಿ ಅಖಂಡವಾಗಿ ಉರಿಯುತ್ತಿರುವಂತೆ ಅವಳಿಗೆ ವೇದನೆಯಾಯಿತು. ನಿಂತ ನೆಲವೆಲ್ಲ ಎಡೆಬಿಡದೆ ಅವಳ ಸುತ್ತಲೂ ದಿಮಿಧಿಮಿ ತಿರುಗುತ್ತಿದೆ. ಝೋಲಿ ಹಿಡಿಯಲಿಕ್ಕಾಗದೆ ಬೀಳುತ್ತ ಏಳುತ್ತ ಮುಂದೆ ಧಾವಿಸುತ್ತಿದ್ದಾಳೆ. ಎದುರು ರಥ ಜ್ವಲಿಸುತ್ತಿದೆ. ಬೆಳಕಿಗೆ ಕಣ್ಣು ಕುಕ್ಕುತ್ತಿವೆ. ಅದರ ಝಳಕ್ಕೆ ಮೈಯೆಲ್ಲ ಕರಗಿ ಕ್ರಮೇಣ ತಾನು ಇಲ್ಲದಂತಾಗುತ್ತಿದ್ದೇನೆ. ಹವೆಯಂತೆ ವಿರಲವಾಗುತ್ತಿದ್ದೇನೆ. ನಿರ್ಲಿಪ್ತಳಾಗಿ ಎಲ್ಲರನ್ನೂ ನುಗಿಸುತ್ತ ರಥದ ಕಡೆಗೆ ಓಡಿದಳು.
ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ
ತಾಯಿ ಏನೂ ತೋಚದೆ ಹಾಗೇ ನಿಂತುಬಿಟ್ಟಿದ್ದಾರೆ. ಹತ್ತಿರವಿದ್ದ ಹೆಂಗಸರೆಲ್ಲ ಅವರನ್ನು ಮನಸ್ವಿಯಾಗಿ ಬೈದರು. ಹುಚ್ಚಮಗಳು ಅವಲಕ್ಷಣವಾಗಿ ಮಾತಾಡುತ್ತ ರಥವನ್ನು ಮುಟ್ಟಿ ಮೈಲಿಗೆ ಮಾಡುತ್ತಿದ್ದರೆ ತಾಯಿಯಾದವಳು ಅದನ್ನು ತಡೆಯಬಾರದೇನು? ಹುಚ್ಚಮಗಳನ್ನು ಕಟ್ಟಿಕೊಂಡು ಇಲ್ಲೇಕೆ ಬರಬೇಕು?… ಮಠದ ಆಚಾರ್ಯರಿಗೂ ಇದರಿಂದ ಬಹಳ ಅಸಮಾಧಾನವಾಯಿತು. ರಥೋತ್ಸವದ ವೇಳೆಯಲ್ಲಿ ಎಂಥ ಅಶುಭ ಮಾತು? ಹುಚ್ಚಿಯಾದರೇನಾಯಿತು, ಇಂಥ ಶುಭ ಗಳಿಗೆಯಲ್ಲಿ ರಥಕ್ಕೆ ಬೆಂಕಿ ಹತ್ತಿದೆಯೆಂದು ಕೂಗುವದೆಂದರೆ? ಆ ಹುಚ್ಚಿಯನ್ನು ತಡೆಯಿರಿ ಎಂದು ಅವರಿವರು ಒದರಿ ಹೇಳುವಷ್ಟರಲ್ಲಿಯೇ ತಂಗಿಯು ಹೋಗಿ ರಥದ ಗಾಲಿಯನ್ನು ಅಪ್ಪಿಕೊಂಡು ನಿಂತುಬಿಟ್ಟಿದ್ದಳು.
ಸುತ್ತಲೂ ಧೂಳುಧೂಳಾದಂತಿದೆ. ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸುವದಿಲ್ಲ. ಆಕಾಶವೇ ಹರಿದು ಬಿದ್ದಂತೆ ಧಾರೆಧಾರೆಯಾಗಿ ಮಳೆ ಸುರಿಯತೊಡಗಿದೆ. ಜನರೆಲ್ಲರೂ ಚೆಲ್ಲಾಪಿಲ್ಲಿಯಾಗುತ್ತಿದ್ದಾರೆ. ಇನ್ನು ಸ್ವಲ್ಪ ಅಂತರ ಸಾಗಿದರೆ ರಥವು ತನ್ನ ಕಟ್ಟೆಯನ್ನು ಮುಟ್ಟುವದು.
ತಂಗಿಯು ಗಾಲಿಯನ್ನು ಗಟ್ಟಿಯಾಗಿ ಅಮುಕಿಕೊಂಡು ಸ್ಮೃತಿ ತಪ್ಪಿದಂತಿದ್ದಾಳೆ. ಕಣ್ಣಲ್ಲಿ ಒಂದೇ ಸವನೆ ನೀರು ಹರಿಯುತ್ತಿದೆ. ಉಳಿದ ಜನರು ಜಯಜಯಕಾರವನ್ನು ಬೊಬ್ಬಿಟ್ಟರು. ರಥವನ್ನು ಎಳೆಯಲು ಮತ್ತೆ ಅಣಿಯಾದರು.
ತಾಯಿಯು ತಂಗಿಯನ್ನು ಹುಡುಕುತ್ತಿದ್ದರು. ತಮ್ಮ ತಂದೆ, ಅವರಲ್ಲಿ ಈಗ ಯಾರು ಸಿಕ್ಕರೂ ಅವರಿಗೆ ಅಪರಿಮಿತ ಸಮಾಧಾನವಾಗಬಹುದಾಗಿತ್ತು. ಆದರೆ ಎಲ್ಲರೂ ಎಲ್ಲೆಲ್ಲಿಯೋ ತಪ್ಪಿಸಿಕೊಂಡು ಹೋಗಿದ್ದಾರೆ. ಇನ್ನು ಯಾರನ್ನು ಎಲ್ಲೆಂದು ಹುಡುಕಬೇಕು?… ರಥದ ಗಾಲಿಯ ಕೆಳಗೆ ಸಿಕ್ಕರೆ ತಂಗಿಯು ನುಚ್ಚು ನೂರಾಗಿ ಹೋಗುವಳು… ಮಳೆಯಲ್ಲಿ, ಈ ಧೂಳಿನಲ್ಲಿ ಏನೂ ಕಾಣಿಸುವದೇ ಇಲ್ಲ.
ತಂದೆಯು ಆವಾರದ ಗೋಡೆಯನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದರು. ಮಳೆಯು ಧಾರೆಧಾರೆಯಾಗಿ ತಲೆಯ ಮೇಲೆ ಇಳಿಯುತ್ತಿದ್ದರೂ ಅವರು ಅಲ್ಲಿಂದ ಚಲಿಸುವ ಯೋಚನೆ ಮಾಡಲಿಲ್ಲ. ಗೋಡೆಗೆ ತಲೆಯಾನಿಸಿ, ಮುಖ ಹಚ್ಚಿ, ಗೋಡೆಗುಂಟ ಆಕಾಶದೆಡೆಗೆ ನೋಡಿದರು. ಭವ್ಯವಾದ ಗೋಡೆ ಎತ್ತರವಾಗುತ್ತ ಚೂಪಾಗುತ್ತ ನಡೆದು, ಆಕಾಶದಲ್ಲಿ ಇರಿದು ಚುಚ್ಚಿಟ್ಟಂತೆ ಕಾಣಿಸುತ್ತದೆ. ಗೋಡೆ ಗುಂಟ ಕೆಳಗಿಳಿಯುವ ಮಳೆ ನೀರಿನಲ್ಲಿ ಗೋಡೆಯ ಹುರಿಮಂಜು ಬೆರೆತು ಕೆಂಪಾಗಿ ರಕ್ತದಂತೆ ಹನಿಹನಿಯಾಗಿ ಒಸರುತ್ತಿದೆ. ಗೋಡೆಯೆಲ್ಲ ತಪತಪ ತೊಯ್ದು ಹಸಿಮಣ್ಣಿನ ವಾಸನೆ ಬರುತ್ತದೆ. ತಂದೆಯು ಪುನಃ ಪುನಃ ನಾಲಿಗೆಯಿಂದ ಗೋಡೆಯನ್ನು ನೆಕ್ಕತೊಡಗಿದರು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ಹಸಿವೆಯಾಗಿದೆ. ಗಂಟಲೊಣಗಿ ಬಂದಿದೆ. ಓತಪ್ರೋತವಾಗಿ ನೀರು ತಲೆಯ ಮೇಲೆ ಸುರಿಯುತ್ತಿದೆ. ಗೋಡೆಯ ಆಚೆಗೆ ಹಾದಿಯಲ್ಲಿ ಸಾವಿರಾರು ಅರ್ಧ ಉಂಡೆದ್ದ ಎಲೆಗಳು ಉಣ್ಣುವವರಿಲ್ಲದೆ ತೆರೆದು ಬಿದ್ದಿವೆ. ತಂದೆಗೆ ಆಯಾಸದಿಂದಲೋ ಬೇಸರದಿಂದಲೋ ಕಣ್ಣರೆಪ್ಪೆಗಳು ಮೆಲ್ಲನೆ ಮುಚ್ಚತೊಡಗಿದವು. ಸಾವಕಾಶವಾಗಿ, ಆನಿಸಿ ನಿಂತ ಗೋಡೆಗುಂಟ ಜರೆದು, ಅವರು ಕೆಳಗೆ ಕುಸಿದು ಬಿದ್ದರು.
ರಥ ಎಳೆಯುವವರ ಕೈ ಜರೆಯುತ್ತಿವೆ. ಹೊರಟ ರಥ ಒಮ್ಮೆಲೆ ಕೆಸರಿನಲ್ಲಿ ಸಿಕ್ಕಂತೆ ನಿಂತುಬಿಟ್ಟಿತು. ಎಲ್ಲರೂ ಜಯಜಯಕಾರ ಮಾಡಿ ಮತ್ತೆ ಸನ್ನದ್ಧರಾದರು. ಇದಿರುಮಳೆ ರಭಸವಾಗಿ ಮುಖದಲ್ಲಿ, ಕಣ್ಣಲ್ಲಿ ಗೊಜ್ಜುತ್ತಿದೆ. ಹುಟ್ಟುಗುರುಡರಂತೆ ಜನರು ರಥವನ್ನು ನೇರವಾಗಿ ಜಗ್ಗಿಯೇ ಜಗ್ಗುತ್ತಿದ್ದಾರೆ. ಪ್ರಾಣಿಗಳಂತೆ ಸರ್ವಶಕ್ತಿಯನ್ನೂ ಪಣಕ್ಕಿಟ್ಟು ಹೆಣಗುತ್ತಾರೆ. ಆದರೆ ರಥ ಸ್ವಲ್ಪವೂ ಸರಿಯಲೊಲ್ಲದು. ಗಾಲಿಯ ಕೆಳಗೆ ಏನಾದರೂ ಸಿಕ್ಕಿರಬೇಕು. ಅಥವಾ ಗಾಲಿಯೇ ನೆಲದಲ್ಲಿ ಹೂತು ಹೋಗಿರಬೇಕು.
ತಾಯಿಯ ಮೈ ತೊಯ್ದು ತಪ್ಪಂಡಿಯಾಗಿದೆ. ಬಹಳ ಹೊತ್ತು ಅವರು ಸುತ್ತೂ ನೋಡಿದರು. ಆದರೆ ತಂಗಿಯು ಎಲ್ಲಿಯೂ ಕಾಣಿಸಲಿಲ್ಲ. ರಥವು ಯಾವಾಗಲೋ ದಾರಿ ಸಾಗದೆ ನಿಂತುಬಿಟ್ಟಿದೆ. ಒಂದೇ ಸವನೆ ಎಡೆಬಿಡದೆ ಸುರಿಯುವ ಮಳೆಯಿಂದ ನದಿಯ ಪಾತ್ರವು ತುಂಬಿ ಬಂದಿರಬೇಕು. ತಾಯಿ ನದಿಗೆ ಓಡಿದರು.
ಅರಿವೆಯೆಲ್ಲ ಮೈಗೆ ತಪತಪ ಅಂಟಿಕೊಂಡಿದೆ. ನಿರ್ಜನವಾದ ಬೀದಿಯಲ್ಲಿ ಅದು ಬಹುಶಃ ಯಾರ ಲಕ್ಷಕ್ಕೂ ಬರಲಿಕ್ಕಿಲ್ಲ. ಬೇಗ ಬೇಗ ನಡೆಯಬೇಕೆಂದರೆ ಕಾಲು ಕ್ಷಣಕ್ಷಣಕ್ಕೆ ಜರೆಯುತ್ತಿವೆ. ಬೀದಿಗುಂಟ ಹರಿದು ನೀರು ನದಿಯ ಕಡೆಗೆ ನುಗ್ಗುತ್ತಿದೆ. ಉಂಡಿದ್ದ ಎಲೆಗಳೆಲ್ಲ ಅಸ್ತವ್ಯಸ್ತವಾಗಿ ಬಿದ್ದುಬಿಟ್ಟಿವೆ. ದೊನ್ನೆಗಳು ದೋಣಿಗಳಂತೆ ತೇಲುತ್ತ ನದಿಯ ಕಡೆಗೆ ಸಾಗಿವೆ.
ಎಂಜಲು-ಮುಸುರೆಯನ್ನು ತುಳಿಯುತ್ತ ತಾಯಿಯು ನದಿಯ ಕಡೆಗೆ ಓಡುತ್ತಿದ್ದರು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ರಾಘವೇಂದ್ರ ಖಾಸನೀಸ(1933-2007): ವಿಜಾಪುರ ಜಿಲ್ಲೆಯ ಇಂಡಿಯವರು. ತಂದೆಯವರಿಂದ ಆರ್ಥರ್ ಕಾನನ್‌ಡೈಲ್, ಶರ್ಲಾಕ್ ಹೋಮ್ಸ್ ಕಥೆಗಳನ್ನು ಚಿಕ್ಕವಯಸ್ಸಿನಿಂದಲೇ ಕೇಳುತ್ತಿದ್ದ ಇವರಲ್ಲಿ ಬಾಲ್ಯದಿಂದಲೇ ಕಥೆಗಾರನೊಬ್ಬ ರೂಪಗೊಳ್ಳತೊಡಗಿದ್ದ. ಇವರು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ. ಮುಂಬೈನಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಮತ್ತು ಗ್ರಂಥಾಲಯ ವಿಜ್ಞಾನದ ಡಿಪ್ಲೊಮಾ ಪದವಿ ಗಳಿಸಿದರು. ಪುಣೆಯ ಎಸ್.ಪಿ. ಕಾಲೇಜು ಮತ್ತು ಬೆಂಗಳೂರು ವಿವಿಯಲ್ಲಿ ಉಪಗ್ರಂಥಪಾಲಕರಾಗಿ ನಿವೃತ್ತರಾದರು. ಮರುವರ್ಷವೇ ಪಾರ್ಕಿನ್‌ಸನ್ ಕಾಯಿಲೆಗೆ ತುತ್ತಾಗಿ 2007ರ ಮಾರ್ಚ್ 19 ರಂದು ನಿಧನರಾದರು. ಪ್ರಕಟಿತ ಕೃತಿಗಳು: ‘ಖಾಸನೀಸರ ಕತೆಗಳು’ (ಕಥಾಸಂಗ್ರಹ); ‘ಬೇಡಿಕೊಂಡವರು’ (ನೀಳ್ಗತೆ). ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಖಾಸನೀಸರ ಕತೆಗಳು’ ಕೃತಿಗೆ 1986ರಲ್ಲಿ ವರ್ಷದ ಅತ್ಯುತ್ತಮ ಸೃಜನಶೀಲ ಕೃತಿಯೆಂದು ಪುರಸ್ಕಾರ ನೀಡಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸಂದಿದೆ.





