ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ರಾಯರು ಪಾರ್ವತಿಯನ್ನು ಮದುವೆಯಾದಾಗ ಅವಳಿಗೆ ಹದಿನಾರು ವರ್ಷ ವಯಸ್ಸು. ಪಾರ್ವತಿಯ ತಂದೆ ನರಸಿಂಹಯ್ಯನವರ ಕೇಸನ್ನು ಪರೀಕ್ಷಿಸಲು ಹಳ್ಳಿಗೆ ಬಂದ ರಾಯರು ಊರಿಗೆ ಹಿಂತಿರುಗುವಾಗ ಜೊತೆಯಲ್ಲಿ ಪಾರ್ವತಿಯನ್ನೂ ಕರೆದೊಯ್ದರು. ತಿಂಗಳ ಕಾಲ ಮನೆಯಲ್ಲಿಯೇ ನೆಲೆಸಿದ ರಾಯರ ಗಂಭೀರವಾದ ನಡವಳಿಕೆ, ಮಾತುಕತೆ, ಪ್ರೌಢಿಮೆಗಳಿಗೆ ಮರುಳಾದ ನರಸಿಂಹಯ್ಯನವರು ತಮ್ಮ ನಾಲ್ಕನೆಯ ಮಗಳಾದ ಪಾರ್ವತಿಯನ್ನು ಅವರ ಮನೆಗೆ ಸೇರಿಸಬೇಕೆಂದು ಬಯಸಿದರು. ರಾಯರ ಮೊದಲನೆಯ ಹೆಂಡತಿ ಸತ್ತು ಮೂರು ವರ್ಷಗಳಾದವು, ಅವರಿಗೆ ಒಬ್ಬ ಮಗನಿದ್ದಾನೆ ಎಂಬ ವಿಷಯಗಳು ಗೊತ್ತಿದ್ದರೂ, ರಾಯರಿಗೆ ಇರುವ ಅಪಾರ ಐಶ್ವರ್ಯ, ಸಮಾಜದಲ್ಲಿನ ಗಣ್ಯಸ್ಥಾನ ಇವುಗಳನ್ನು ನೆನಪಿಗೆ ತಂದುಕೊಂಡು ಪಾರ್ವತಿಯ ತಾಯಿ ಏನು ಆಕ್ಷೇಪಣೆಗಳನ್ನೂ ತರಲಿಲ್ಲ. ತಂದೆ ತಾಯಿ ಉಪಚಾರಕ್ಕಾಗಿ ಮಗಳನ್ನು ಕೇಳಿದರು. ರಾಯರ ಭವ್ಯಾಕೃತಿ, ತಿಳಿಗೆಂಪು ಬಣ್ಣದ ಸೌಮ್ಯ ಮುಖ, ಹೆಮ್ಮೆಯಿಂದ ಸೆಟೆದು ನಿಂತ ದೊಡ್ಡ ಮೀಸೆ ಇವುಗಳನ್ನು ಕಂಡು ಆಕರ್ಷಿತಳಾಗಿದ್ದ ಪಾರ್ವತಿ ರಾಯರ ವಿಷಯವಾಗಿ ತಂದೆ ನಡೆಸಿದ ಗುಣಗಾನ, ಅವರ ಐಶ್ವರ್ಯದ ವಿಷಯವಾಗಿ ತಾಯಿ ಬಣ್ಣಿಸಿದ ಕತೆ, ಕನಸುಗಳು ಇವುಗಳಿಂದ ಉತ್ತೇಜಿತವಾಗಿ ಸಮ್ಮತಿ ಸೂಚಿಸಿದಳು. ನರಸಿಂಹಯ್ಯನವರು ರಾಯರನ್ನು ಅವರ ಮದುವೆಯ ಬಗೆಗೆ ಸೂಕ್ಷ್ಮವಾಗಿ ಪ್ರಶ್ನಿಸಿ ನೋಡಿದರು. ಸರಿಯಾದ ಹೆಣ್ಣು ಸಿಕ್ಕಿದಲ್ಲಿ ಮದುವೆಯಾಗಲು ತನ್ನದೇನೂ ಅಡ್ಡಿಯಿಲ್ಲವೆಂದು ರಾಯರು ಉತ್ತರಿಸಿದಾಗ ಅರ್ಧ ಸಮ್ಮತಿ ಸಿಕ್ಕ ಹಾಗೇ ಎಂದು ನರಸಿಂಹಯ್ಯನವರು ತಿಳಿದರು. ಇದಕ್ಕೆ ಕಾರಣವಿಲ್ಲದಿರಲಿಲ್ಲ. ತಮ್ಮ ಮಗಳ ಮೇಲೆ ರಾಯರು ಹರಿಸುತ್ತಿದ್ದ ದೃಷ್ಟಿ, ಸಂದೇಹಕ್ಕೆ ಆಸ್ಪದ ಕೊಡದಷ್ಟು ಸ್ಪಷ್ಟವಾಗಿರುತ್ತಿತ್ತು. ಪಾರ್ವತಿಯ ಮುಗ್ಧ ಸೌಂದರ್ಯ ತಾರುಣ್ಯವನ್ನು ಹಿಂದೆ ಬಿಟ್ಟ ಪಟ್ಟಣವಾಸಿ ರಾಯರನ್ನು ಆಕರ್ಷಿಸಿದ್ದು ಸಹಜವೇ. ಉತ್ತರದ ಉಳಿದ ಅರ್ಧ ಭಾಗವನ್ನು ಕೇಳಿ ತಿಳಿಯಲು ನರಸಿಂಹಯ್ಯನವರು ಹವಣಿಸಿದರು. ಒಂದು ಸಂಜೆ, ರಾಯರ ಸ್ತುತಿ, ತಮ್ಮ ತಾಪತ್ರಯ ಇವುಗಳ ದೀರ್ಘವರದಿಯಾದ ಮೇಲೆ ಅಂಜುತ್ತಲೇ ಬಿನ್ನವಿಸಿದರು, ‘ನನ್ನ ಮಗಳು ಪಾರ್ವತಿಯನ್ನು ಮದುವೆಯಾಗಿ ನನ್ನ ಮನೆಯನ್ನು ಉದ್ಧರಿಸಬೇಕು ತಾವು.’ ಇಷ್ಟು ಹೊತ್ತಿಗೆ ಸಂಜೆ ರಾತ್ರಿಯಾಗಿದುದರಿಂದ ರಾಯರ ಮುಖ ಕಾಣಿಸಲಿಲ್ಲ. ಉತ್ತರ ಮಾತ್ರ ಕೇಳಿಸಿತು. ಎಂದಿನ ಅನುದ್ವೇಗದ, ಗಂಭೀರ ಧ್ವನಿ: ‘ಯೋಚಿಸಿ ಹೇಳುತ್ತೇನೆ.’ ರಾಯರು ಯೋಚಿಸಲು ಕೇವಲ ಎರಡು ದಿನಗಳನ್ನು ತೆಗೆದುಕೊಂಡರು. ಮತ್ತೊಂದು ವಾರದಲ್ಲಿ ಮದುವೆ ಜರುಗಿತು. ಮದುವೆಗೆ ಬರಲು ತಮ್ಮ ಬಳಗದವರಾರೂ ಇಲ್ಲವೆಂದು ರಾಯರು ತಿಳಿಸಿದರು. ಊರಿನಿಂದ ಅವರ ಇಬ್ಬರು, ಮೂವರು ಸ್ನೇಹಿತರು, ಒಬ್ಬ ಗುಮಾಸ್ತೆ ಇಷ್ಟು ಜನರು ಮಾತ್ರ ಬಂದಿದ್ದರು. ರಾಯರ ಮಗ ಕ್ರಿಕೆಟ್ ಮ್ಯಾಚಿಗಾಗಿ ಬೇರೆ ಊರಿಗೆ ಹೋಗಿದ್ದರಿಂದ ಅವನೂ ಬರಲಾಗಲಿಲ್ಲ. ಮದುವೆ ಹೆಚ್ಚು ಗಲಾಟೆಯಿಲ್ಲದೆ ಹಳ್ಳಿಯ ದೇವಸ್ಥಾನದಲ್ಲಿ ನಡೆಯಿತು. ಆಮಂತ್ರಿತರಲ್ಲಿ ಬಹುಮಂದಿ ಪಾರ್ವತಿಯ ಭಾಗ್ಯವನ್ನು ಕೊಂಡಾಡಿದವರೇ. ಎಲ್ಲೋ ಒಬ್ಬಿಬ್ಬರು, ‘ವರನಿಗೆ ವಯಸ್ಸು ಸ್ವಲ್ಪ ಹೆಚ್ಚಲ್ಲವೇ?’ ಎಂದರು.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಪಾರ್ವತಿ ರಾಯರ ಮನೆಯಲ್ಲಿ ನೆಲೆಸಿದ್ದಳು. ಮಗಳನ್ನು ಕಳುಹಿಸಲು ಬಂದಿದ್ದ ತಂದೆ ತಾಯಿಯರು ರಾಯರ ವಿಶಾಲವಾದ ಮನೆ, ಆಳುಕಾಳುಗಳನ್ನು ನೋಡಿ ಬೆರಗಾದರು. ಮಗಳ ಅದೃಷ್ಟವನ್ನು ಕಂಡು ಸಂತೃಪ್ತರಾದರು. ಅವರು ಹಳ್ಳಿಗೆ ಹಿಂತಿರುಗುವ ಹಿಂದಿನ ದಿನ ರಾಯರ ಮಗ ಶ್ರೀಧರ ಪಂದ್ಯವನ್ನು ಮುಗಿಸಿಕೊಂಡು ಊರಿಗೆ ಬಂದ. ರಾಯರ ದೀರ್ಘ ಕಾಗದ ಅವನಿಗೆ ತಲುಪಿದ್ದರಿಂದ ಮದುವೆ ಅವನಿಗೆ ಆಶ್ಚರ್ಯಕರವಾಗಿ ಕಾಣಲಿಲ್ಲ. ರೈಲಿನಲ್ಲಿ ಹೋಗುತ್ತಿದ್ದಾಗ ಪಾರ್ವತಿಯ ತಾಯಿ ನೆಮ್ಮದಿಯಿಂದ ಗಂಡನಿಗೆ ಹೇಳಿದರು: ‘ಸದ್ಯ, ಪಾರ್ವತಿಯ ಯಜಮಾನರಿಗೆ ಚಿಕ್ಕ ಮಕ್ಕಳು ಯಾವವೂ ಇಲ್ಲವಲ್ಲ. ಈ ಹುಡುಗ ಪರವಾಗಿಲ್ಲ, ದೊಡ್ಡವನು. ತನ್ನನ್ನು ತಾನು ನೋಡಿಕೊಳ್ಳುತ್ತಾನೆ.’
ಮದುವೆಯಾದ ಮೊದಲ ಮೂರು ತಿಂಗಳು ಪಾರ್ವತಿಗೆ ಮೂರು ವಾರಗಳಂತೆ ಕಳೆದುಹೋದವು. ಆಮೇಲಿನ ಆರು ತಿಂಗಳು ಆರು ತಿಂಗಳಂತೆ ಕಳೆದವು. ವರ್ಷದ ಕಡೆಯ ಮೂರು ತಿಂಗಳುಗಳು ವರ್ಷದ ಕಾಲವನ್ನು ಆಕ್ರಮಿಸಿದವು.
ಮದುವೆಯ ಹೊಸತರದಲ್ಲಿ ಕೋರ್ಟಿನ ಕೆಲಸವನ್ನು ಸ್ವಲ್ಪಮಟ್ಟಿಗೆ ನಿರ್ಲಕ್ಷಿಸಿದ್ದ ರಾಯರು ಕಾಲಕ್ರಮೇಣ ಕೆಲಸಕ್ಕೆ ಮೊದಲಿನಂತೆಯೇ ಗಮನವನ್ನು ಕೊಡಲಾರಂಭಿಸಿದರು. ಊರ ಹೊರಗಿನ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದರು; ತಮ್ಮ ಸ್ನೇಹಿತರ ಮನೆಯವರಿಗೆ ಅವಳನ್ನು ಪರಿಚಯ ಮಾಡಿಕೊಟ್ಟರು. ರೇಡಿಯೋ ಹಾಕುವುದನ್ನು ತೋರಿಸಿಕೊಟ್ಟು ತಾವು ಕೋರ್ಟಿಗೆ, ಅಲ್ಲಿಂದ ಕ್ಲಬ್ಬಿಗೆ ಹೋದರು.
ಪಾರ್ವತಿ ಮನೆಯಲ್ಲಿ ಸ್ಥಾಪಿತಳಾದಳು. ದೊಡ್ಡ ಊರನ್ನು ಕುತೂಹಲದಿಂದ, ಉತ್ಸಾಹದಿಂದ ನೋಡಿದಳು. ರಾಯರು ಪರಿಚಯ ಮಾಡಿಕೊಟ್ಟವರ ಮನೆಗೆ ಹೋಗಿ ಬಂದಳು. ಆದರೆ ಕ್ರಮೇಣವಾಗಿ ಹೋಗುವುದನ್ನು ಕಡಿಮೆ ಮಾಡಿದಳು. ಕಡೆಗೆ ನಿಲ್ಲಿಸಿಯೇ ಬಿಟ್ಟಳು. ರಾಯರ ಸ್ನೇಹಿತರ ಪತ್ನಿಯರು ಅವಳಿಗಿಂತ ಬಹಳ ವಯಸ್ಸಾದವರು, ಬಹು ಕಾಲದಿಂದ ಪಟ್ಟಣದಲ್ಲಿ ನೆಲೆಸಿದವರು, ಅವಳ ತಂದೆ ಶ್ರೀಮಂತರಲ್ಲವೆಂಬುದನ್ನು ಬಲ್ಲವರು. ಅವರಲ್ಲಿ ಯಾರ ಸಹಾಯವೂ ಪಾರ್ವತಿಗೆ ರುಚಿಸದೆ ಹೋಯಿತು.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಮನೆಯಲ್ಲಿ ಅಡಿಗೆಗೆ ಒಬ್ಬ ಅಡಿಗೆಯವನಿದ್ದ. ಮನೆ ಕೆಲಸಕ್ಕೆ ಇಬ್ಬರು, ಮೂವರು ಆಳುಗಳಿದ್ದರು. ಪಾರ್ವತಿಗೆ ಏನು ಕೆಲಸವನ್ನೂ ಮಾಡುವ ಅವಶ್ಯಕತೆ ಇರಲಿಲ್ಲ. ಅವಕಾಶವೂ ಇರಲಿಲ್ಲ.
ಒಂದು ದಿನ ಪಾರ್ವತಿ ರಾಯರಿಗೆ ಹೇಳಿದಳು: ‘ದಿನವೆಲ್ಲಾ ಒಬ್ಬಳೇ ಮನೆಯಲ್ಲಿರಬೇಕು. ಬೇಜಾರಾಗುತ್ತೆ.’ ಅವರಿಗೆ ಅಪರೂಪವಾದ ಲಘುತ್ವದಿಂದ ರಾಯರು ನುಡಿದರು: ‘ನೀನೂ ನನ್ನ ಜೊತೆ ಕೋರ್ಟಿಗೆ ಬಾ. ನನ್ನ ಕೆಲಸದಲ್ಲಿ ಸಹಾಯ ಮಾಡು.’ ಹಾಸ್ಯವನ್ನು ಗುರುತಿಸದೆ ಪಾರ್ವತಿ ಮರುನುಡಿದಳು: ‘ನಾನೂ ಓದಿದೋಳಾಗಿದ್ರೆ ಹಾಗೆ ಮಾಡಬಹುದಾಗಿತ್ತು.’ ರಾಯರು ಹಾಸ್ಯವನ್ನು ಮುಂದುವರಿಸಿದರು. ‘ಈಗಲೂ ಏನಂತೆ? ದಿನಾ ಶ್ರೀಧರನ ಕೈಲಿ ಪಾಠ ಹೇಳಿಸಿಕೊ. ನಿನ್ನ ಮಗನಾದರೂ ಅವನು ನಿನಗಿಂತ ಎರಡು ವರ್ಷ ದೊಡ್ಡವನು. ಆದ್ದರಿಂದ ಚಿಕ್ಕೋನ ಕೈಲಿ ಪಾಠ ಹೇಳಿಸಿಕೊಳ್ಳೋದು ಹೇಗೆ ಅನ್ನೋ ಸಂಕೋಚವೂ ಇರೋದಿಲ್ಲ! ಆಮೇಲೆ ಕಾಲೇಜಿಗೆ ಹೋಗಿ ಓದು!’ ಶ್ರೀಧರ! ಪಾರ್ವತಿಯ ಎದೆ ಬಡಿತ ಏಕೋ, ಇದ್ದಕ್ಕಿದ್ದಂತೆ ವೇಗವಾಯಿತು. ಬೇಗ ತಲೆ ಎತ್ತಿ ಗಂಡನ ಮುಖವನ್ನು ನೋಡಿದಳು. ಮುಖದ ಮೇಲಿನ ನಗುವನ್ನು ಕಂಡು ಎದೆ ಬಡಿತ ನಿಧಾನವಾಯಿತು. ತಾನೂ ನಗೆಗೂಡಿಸಿದಳು: ‘ನಿಮ್ಮ ಹಾಸ್ಯವಂತೂ…!’ ಹೆಂಡತಿಯ ಪ್ರತಿ ನಗುವಿನಿಂದ ರಾಯರು ಉತ್ಸಾಹಗೊಂಡರು. ‘ಹೋಗಲಿ, ನಿನಗ್ಯಾಕೆ ಇಷ್ಟೆಲ್ಲ ಕಷ್ಟ? ನಾನೇ ಮನೆಯಲ್ಲಿ ಇದ್ದುಬಿಡ್ತೀನಿ. ಆಯ್ತೆ? ಆವಾಗಲಾದರೂ ನಿನ್ನ ದೂರು ತಪ್ಪುತ್ತೆ!’ ಹೆಂಡತಿ ಉತ್ತರ ಕೊಡುವ ಮೊದಲೇ ಅಂದರು: ”ಆಮೇಲೆ ನೀನೇ ‘ಮೂರುಹೊತ್ತೂ ನಿಮ್ಮನ್ನು ನೋಡ್ತಿರಕ್ಕೆ ಬೇಜಾರಾಗುತ್ತೆ. ಕೆಲಸಕ್ಕೆ ಹೋಗಿ’ ಅಂತ ಅಂತೀಯ!” ರಾಯರು ಇಷ್ಟು ಮಾತನ್ನು ಆಡಿದುದು ಪಾರ್ವತಿಗೆ ಆಶ್ಚರ್ಯವಾಯಿತು. ಹೀಗೆ, ಲಘುರೀತಿಯಲ್ಲಿ ಆಡಿದುದು ಅವಳಿಗೆ ಪ್ರಿಯವಾಗಿತ್ತು. ಇನ್ನೂ ಮಾತನ್ನಾಡಬೇಕೆನಿಸಿತು. ಆದರೆ ರಾಯರು ಆಕಳಿಸಿದರು.
ಅಂದು ರಾತ್ರಿ ಪಾರ್ವತಿಗೆ ಒಂದು ಕನಸಾಯಿತು; ಅವಳು ಶ್ರೀಧರನನ್ನು ಪಾಠ ಹೇಳಿಕೊಡೆಂದು ಕೇಳುತ್ತಿದ್ದಳು. ಅವನು ನಿರುತ್ಸಾಹವನ್ನು ತೋರುತ್ತಿದ್ದ. ಅಷ್ಟು ಹೊತ್ತಿಗೆ ರಾಯರು ಬಂದರು. ಆಗ, ಏಕೋ ಏನೋ, ಶ್ರೀಧರನ ಮೇಲೆ ರೇಗಿದಳು. ಅವನು ಕೋಣೆಯನ್ನು ಬಿಟ್ಟು ಹೊರಟುಹೋದ.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಬೆಳಗಾಗುವ ಹೊತ್ತಿಗೆ ಪಾರ್ವತಿಗೆ ಕನಸು ಮರೆತುಹೋಗಿತ್ತು.
ದಿನದಿನಕ್ಕೆ ಪಾರ್ವತಿಯ ಬೇಸರ ಬೆಳೆಯತೊಡಗಿತು. ತೌರಿನಲ್ಲಿ ಜನ ತುಂಬಿದ ಮನೆಯಲ್ಲಿ ಇದ್ದು, ಈಗ, ಇಲ್ಲಿ ಒಬ್ಬಳೇ ಇರುವದು ಅಸಹನೀಯವಾಗುತ್ತಿತ್ತು. ಅಲ್ಲಿ ದಿನವೆಲ್ಲ ಮಾಡಿದರೂ ಮಾರನೆಯ ದಿನಕ್ಕೆ ಉಳಿಯುವಷ್ಟು ಕೆಲಸವಿರುತ್ತಿತ್ತು. ಇಲ್ಲಿ ಮುಂದಿನ ಒಂದು ವಾರದ ಕೆಲಸವನ್ನೆಲ್ಲ ಮಾಡಿದರೂ ದಿನವನ್ನು ಕಳೆಯುವುದು ದುಸ್ತರವಾಗುತ್ತಿತ್ತು. ಓದಲು ಪ್ರಯತ್ನಿಸಿದಳು. ರಾಯರ ವಿಶಾಲವಾದ ಕೋಣೆಯಲ್ಲಿ ರಾಶಿರಾಶಿ ಪುಸ್ತಕಗಳಿದ್ದವು. ಎಲ್ಲವೂ ವಕೀಲವೃತ್ತಿಗೆ ಸಂಬಂಧಪಟ್ಟವುಗಳಾದ್ದರಿಂದ ಪಾರ್ವತಿ ಅವುಗಳನ್ನು ಮುಟ್ಟುವುದಕ್ಕೂ ಹೋಗಲಿಲ್ಲ. ಶ್ರೀಧರನ ಬಳಿ ಯಾವುದಾದರೂ ಕನ್ನಡದ ಕತೆ ಪುಸ್ತಕಗಳಿರಬಹುದು ಎಂದುಕೊಂಡಳು. ಆದರೆ ಅವನನ್ನು ಪ್ರಶ್ನಿಸಲು ಧೈರ್ಯ ಬರಲಿಲ್ಲ. ಹಳ್ಳಿಯಲ್ಲಿ ಬೆಳೆದವಳಿಗೆ ನಾಗರಿಕ ತರುಣನನ್ನು ಮಾತನ್ನಾಡಿಸಲು ನಾಚಿಕೆಯಾಗುತ್ತಿತ್ತು. ಶ್ರೀಧರನೂ ಹೆಚ್ಚು ಮಾತಿನವನಾಗಿರಲಿಲ್ಲ. ಹೀಗಾಗಿ ಇಬ್ಬರೂ ಒಂದೇ ಮನೆಯಲ್ಲಿ ನಾಲ್ಕೈದು ತಿಂಗಳಿನಿಂದ ವಾಸಿಸುತ್ತಿದ್ದರೂ ಪರಸ್ಪರ ಮಾತನ್ನಾಡಿದುದೇ ಕಡಿಮೆ.
ಪಾರ್ವತಿಗೆ ಶ್ರೀಧರನನ್ನು ಪ್ರಶ್ನಿಸುವ ಧೈರ್ಯವಿರಲಿಲ್ಲ. ಆದ್ದರಿಂದ ಅವನು ಮನೆಯಲ್ಲಿಲ್ಲದ ಹೊತ್ತಿನಲ್ಲಿ ಅವನ ಕೊಠಡಿಯಲ್ಲೇ ಹುಡುಕಿ ನೋಡಬೇಕೆಂದು ನಿರ್ಧರಿಸಿದಳು. ಅಂತೆಯೇ ಒಂದು ಮಧ್ಯಾಹ್ನ ಅವನ ಕೋಣೆಯೊಳಗೆ ಕಾಲಿಟ್ಟಳು. ಎದುರಿಗೇ ಓದುವ ಮೇಜನ್ನು ಇಡಲ್ಪಟ್ಟಿತ್ತು. ಅದರ ಮೇಲಿನ ಪುಸ್ತಕಗಳನ್ನು ಒಂದೊಂದಾಗಿ ತೆಗೆದು ನೋಡಿದಳು, ಹಾಗೇ ಜೋಡಿಸಿ ಇಡುತ್ತಾ ಬಂದಳು. ಎಲ್ಲವೂ ಇಂಗ್ಲೀಷಿನ ಪುಸ್ತಕಗಳು, ಕೆಲವರಲ್ಲಿ ವಿಚಿತ್ರಾಕೃತಿಯ ಸೀಸೆಗಳ ಚಿತ್ರಗಳಿದ್ದವು. ಇನ್ನು ಕೆಲವದರಲ್ಲಿ ಎಲೆಗಳ, ಹೂಗಳ, ಪ್ರಾಣಿಗಳ ಚಿತ್ರಗಳಿದ್ದವು. ಒಂದೆರಡು ಸಣ್ಣ ಸಂಸ್ಕೃತದ ಪುಸ್ತಕಗಳಿದ್ದವು. ಎಲ್ಲವನ್ನೂ ಅಲ್ಲಿಯೇ ಬಿಟ್ಟು ನೋಟ್-ಬುಕ್ಕುಗಳನ್ನು ತೆಗೆದು ನೋಡಿದಳು. ಅವುಗಳಲ್ಲಿಯೂ ಏನೂ ಅರ್ಥವಾಗದಿದ್ದರೂ, ಅಚ್ಚಾದ ಪುಸ್ತಕಗಳಿಗಿಂತ ಆಸಕ್ತಿದಾಯಕವಾಗಿದ್ದವು. ಗೀಚಿದ ಕಡು ನೀಲಿ ಅಕ್ಷರಗಳನ್ನು ನೋಡಲು ಹಿತವೆನಿಸಿತು. ಒಂದು ದಪ್ಪ ರಟ್ಟಿನ ಅಗಲವಾದ ಪುಸ್ತಕದಲ್ಲಿ ಪೆನ್ಸಿಲ್ಲಿನಿಂದ ಬರೆದ ಚಿತ್ರಗಳಿದ್ದವು. ಗೀರುಗಳಿಲ್ಲದ ಪುಟದಲ್ಲಿ ಚಿತ್ರಗಳಿದ್ದವು. ಮಗ್ಗುಲಿನ ಗೆರೆ ಹಾಕಿದ ಪುಟದಲ್ಲಿ ಅಕ್ಷರಗಳನ್ನು ಬರೆಯಲಾಗಿತ್ತು. ಇಲ್ಲಿಯೂ ವಿಚಿತ್ರಾಕೃತಿಯ ಸೀಸೆಗಳನ್ನು ಚಿತ್ರಿಸಲಾಗಿತ್ತು. ಇನ್ನೂ ಎರಡು ಇಂತಹವೇ ಪುಸ್ತಕಗಳಿದ್ದವು. ಅವುಗಳಲ್ಲಿನ ಚಿತ್ರಗಳಂತೂ ತೀರ ವಿಚಿತ್ರವಾಗಿದ್ದವು. ವಜ್ರ, ಕೆಂಪುಗಳನ್ನು ಹೂಳಿದ ಜಡೆಬಿಲ್ಲೆಯಂತೆ ಕಾಣಿಸುತ್ತಿದ್ದ ವರ್ತುಲಾಕೃತಿಯ ಚಿತ್ರಗಳು, ವಂದರಿಯಂತೆ, ಚಿಂದಿ ಬಟ್ಟೆಯಂತೆ, ಒಂದರ ಮೇಲೊಂದು ಜೇಡನ ಬಲೆಯನ್ನು ಇಟ್ಟು ಹೊಲೆದಂತೆ ಕಾಣಿಸುತ್ತಿದ್ದ ಚಿತ್ರಗಳು- ಏನೇನೋ ಇದ್ದವು. ಆಶ್ಚರ್ಯದಿಂದ ಪುಟ ತಿರುವುತ್ತ ಹೋದಳು. ಖಾಲಿ ಹಾಳೆ ಸಿಕ್ಕಿತು. ಪುಸ್ತಕವನ್ನು ಮುಚ್ಚಿದಳು. ಬಿಳಿ ಹಾಳೆ ಖಾಲಿ ಹಾಸಿಗೆಯಂತಿತ್ತು. ಅವಳಿಗರಿವಿಲ್ಲದಂತೆಯೇ ಅವಳ ದೃಷ್ಟಿ ಹತ್ತಿರದಲ್ಲಿಯೇ ಇದ್ದ ಮಂಚದತ್ತ ಧಾವಿಸಿತು. ಅಕಾರಣವಾಗಿ ಉಸಿರು ಹತ್ತಿಬಂತು. ಗಡಿಬಿಡಿಯಿಂದ ಹೊರಗೆ ಹೋದಳು.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಆ ರಾತ್ರಿ ಪಾರ್ವತಿಗೆ ಕನಸಾಯಿತು. ಶ್ರೀಧರ ಅವನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದ. ಅವಳು ಒಂದು ನೋಟ್ ಬುಕ್ಕನ್ನು ತೆಗೆದುಕೊಂಡು ಹೋಗಿ ಅವನ ಮುಂದೆ ಇಟ್ಟಳು. ಅವನು ತಲೆ ಎತ್ತಿ ನೋಡಿದ. ಪುಸ್ತಕವನ್ನು ತೆರೆದಿಟ್ಟು ಅಂದಳು: ‘ಶ್ರೀಧರ, ಚಿತ್ರ ಬರಿ.’ ಅಷ್ಟರಲ್ಲಿ ಹಿಂದಿನಿಂದ ರಾಯರ ಧ್ವನಿ ಕೇಳಿಬಂತು: ‘ಪಾರ್ವತಿ, ಪಾರ್ವತಿ.’ ಬೆಚ್ಚಿಬಿದ್ದು ಹಿಂದಕ್ಕೆ ಓಡಿಹೋದಳು.
ಬೆಳಿಗ್ಗೆ ಏಳುವ ಹೊತ್ತಿಗೆ ಕನಸು ಮಸುಕಾಗಿತ್ತು.
ಒಂದು ರಾತ್ರಿ ರಾಯರು ಪ್ರಸನ್ನರಾಗಿದ್ದಾಗ ಪಾರ್ವತಿ ಅವರನ್ನು ಕೇಳುವ ಧೈರ್ಯ ಮಾಡಿದಳು: ‘ನನಗೊಂದಿಷ್ಟು ಕನ್ನಡ ಕತೆ ಪುಸ್ತಕಗಳನ್ನು ತಂದುಕೊಡಿ.’ ಎಲೆ ಅಡಿಕೆಯನ್ನು ಮೆಲ್ಲುತ್ತ ರಾಯರು ಪ್ರಶ್ನಿಸಿದರು: ‘ಯಾಕೆ? ಪಾಠದ ಪುಸ್ತಕ ಬೇಜಾರಾಯಿತೇನು?’ ಆಶ್ಚರ್ಯದಿಂದ ಕೇಳಿದಳು: ‘ಪಾಠದ ಪುಸ್ತಕ? ಯಾವ ಪಾಠದ ಪುಸ್ತಕ?’ ರಾಯರು ನಕ್ಕರು: ‘ಶ್ರೀಧರನ ಕೈಲಿ ಪಾಠ ಹೇಳಿಸಿಕೋ ಅಂತ ಹೇಳಿದೆನಲ್ಲ, ಮರೆತುಹೋಯಿತೆ?’ ಅಡಿಕೆ ಗಂಟಲಲ್ಲಿ ಸಿಕ್ಕಿಕೊಂಡಿತು. ಜೋರಾಗಿ ಕೆಮ್ಮಿದಳು. ನೀರು ಕುಡಿದು ಹೇಳಿದಳು: ‘ಅವನ ಕೈಲಿ ಹೇಳಿಸಿಕೊಂಡಹಾಗೇ ಸರಿ. ಅವನು ಮನೆಯಲ್ಲಿ ಇರೋ ಹೊತ್ತೇ ಕಡಿಮೆ, ಮೂರು ಹೊತ್ತೂ ಕ್ರಿಕೆಟ್ಟು, ಕ್ರಿಕೆಟ್ಟು ಅಂತ ಅಲೀತಾ ಇದ್ದಾನೆ. ಮನೇಲಿ ಇರೋವಾಗಲೂ ಮನೆಯೋರ ಕೈಲಿ ಆಡೋಮಾತು ಅಷ್ಟಕ್ಕಷ್ಟೆ.’ ತಟ್ಟನೆ, ಆಡಿದ ಮಾತನ್ನು ಮರೆಸುವಂತೆ ಅಂದಳು: ‘ಕಾಲೇಜಿಗೂ ಸರಿಯಾಗಿ ಹೋಗ್ತಾನೋ ಇಲ್ಲವೋ? ನೀವಾದರೂ ವಿಚಾರಿಸಬಾರದೆ? ಮನೇಲಂತೂ ಸ್ವಲ್ಪವೂ ಓದೋ ಹಾಗೆ ಕಾಣಿಸೋದಿಲ್ಲ. ಕಾಲೇಜಿನಲ್ಲಿ ಎಂಥೆಂಥ ಸ್ನೇಹಿತರೋ, ಎಂಥೆಂಥ ಸಹವಾಸವೋ?’ ರಾಯರು ನೆಮ್ಮದಿಯಿಂದ ಕಾಲು ಚಾಚುತ್ತ ಅಂದರು: ‘ಅವನಿಗೆ ಯಾವಾಗಿಂದಲೂ ಈ ಕ್ರಿಕೆಟ್ಟಿನ ಹುಚ್ಚು, ಅವರಮ್ಮ ಇದ್ದಾಗಲೂ ಹೀಗೇ ಅಂತಿದ್ದಳು, ಹುಡುಗ ಮನೇನೇ ಸೇರಲ್ಲ, ಪಾಠ ಸರಿಯಾಗಿ ಓದೋದಿಲ್ಲ. ಹಾಗೆ, ಹೀಗೆ ಅಂತ.’ ಮುಂದೇನೂ ಮಾತನಾಡಲು ತಿಳಿಯದೆ ‘ಆದರೂ ನೀವು ಆಗಾಗ ವಿಚಾರಿಸುತ್ತಿದ್ದರೆ ವಾಸಿ,’ ಎಂದು ಸುಮ್ಮನಾದಳು. ದಿಂಬಿನ ಮೇಲೆ ತಲೆಯನ್ನೂರುತ್ತ ರಾಯರು ಹೇಳಿದರು: ‘ಎಷ್ಟಾದರೂ ಬೆಳೆದ ಹುಡುಗ. ನಾನೇನು ಹೇಳಲಿ, ಹೇಳು.’
ಮಾರನೆಯ ದಿನ ಊಟ ಮಾಡುತ್ತಿದ್ದಾಗ ರಾಯರು ಮಗನಿಗೆ ಹೇಳಿದರು: ‘ಶ್ರೀಧರ, ಇನ್ನು ಮೇಲೆ ನಿಮ್ಮ ಕಾಲೇಜ್ ಲೈಬ್ರೆರಿಯಿಂದ ಕನ್ನಡ ಕತೆ ಪುಸ್ತಕಗಳನ್ನು ತಗೆದುಕೊಂಡು ಬಾ.’ ಶ್ರೀಧರ ಆಶ್ಚರ್ಯದಿಂದ ತಲೆಯೆತ್ತಿ ನೋಡಿದ. ರಾಯರು ವಿವರಿಸಿದರು: ‘ನಿಮ್ಮ ಚಿಕ್ಕಮ್ಮನಿಗೆ ಓದೋದಕ್ಕೆ ಬೇಕಂತೆ.’
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಅಂದು ಸಂಜೆ ಶ್ರೀಧರ ಬರುವುದನ್ನೇ ಕಾಯುತ್ತ ಕುಳಿತಳು ಪಾರ್ವತಿ. ಸೈಕಲ್ಲನ್ನು ನೂಕುತ್ತಾ ಸಿಳ್ಳು ಹಾಕುತ್ತಾ ಮನೆಯೊಳಗೆ ಬಂದ ಶ್ರೀಧರ. ಬಂದವನೇ ಕುರ್ಚಿಯ ಮೇಲೆ ಕುಳಿತು ತಂದೆಯನ್ನು ಕುರಿತು ಅಂದ: ‘ಅಪ್ಪ, ಮದ್ರಾಸಿಗೆ ಹೋಗುವ ಟೀಮಿನಲ್ಲಿ ನಾನು ಒಬ್ಬ.’ ಧ್ವನಿಯಲ್ಲಿ ಎಂದೂ ಇರದ ಉತ್ಸಾಹವಿತ್ತು. ತಂದೆ ಮಗ ಮಾತನಾಡತೊಡಗಿದರು. ಪಾರ್ವತಿ ಶ್ರೀಧರನ ಮುಖವನ್ನು ನೋಡತೊಡಗಿದಳು. ಹಿಂದೆಂದೂ ನೋಡದಂತೆ ನೋಡತೊಡಗಿದಳು. ತಂದೆಯ ಮುಖಚರ್ಯವನ್ನೇ ಹೋಲುವ ಮುಖ. ಅದೇ ಭವ್ಯಾಕೃತಿ. ಜೊತೆಗೆ ಮಾಂಸವನ್ನು ಹೊನ್ನು ಮಾಡುವ ತಾರುಣ್ಯ, ಚಿನ್ನವನ್ನು ಅಪರಂಜಿಯನ್ನಾಗಿ ಮಾಡುವ ಉತ್ಸಾಹ, ಪಾರ್ವತಿ ನೋಡಿಯೇ ನೋಡಿದಳು. ಹಾರಾಡುತ್ತಿದ್ದ ದಟ್ಟವಾದ ಕಪ್ಪು ಕೂದಲು; ನುಣ್ಣಗೆ ಬಾಚಿದ ಒತ್ತಾಗಿ ಬೆಳೆಯದ ಬಿಳಪು ಮಿಶ್ರಿತ ಕೂದಲಲ್ಲ, ನುಣಪು, ಕೆಂಪು ನಗುಮುಖ; ಗೆರೆಗೂಡಿದ ಹಸಿರು ತುಂಬಿದ ಗಂಭೀರ ಮುಖವಲ್ಲ. ಅಗಲವಾದ ಭುಜ, ಬಿಗಿ ಮಾಂಸದ ತೆಳುಮೈ; ಶರ್ಟಿನ ಮೊದಲ ಗುಂಡಿ ತೆಗೆದದ್ದರಿಂದ ಕಾಣಿಸುತ್ತಿದ್ದ ಕತ್ತು, ಎದೆ, ಶರ್ಟಿನ ತೋಳುಗಳನ್ನು ಮೇಲಕ್ಕೆ ಸುತ್ತಿದ್ದರಿಂದ ಕಾಣಿಸುತ್ತಿದ್ದ ಶಕ್ತಿಯುತ ಕೈಗಳು; ಗಡಿಯಾರ, ಬಿಳಿಶರಾಯಿ, ಕಂದುಬಣ್ಣದ ಪಾದರಕ್ಷೆಗಳು… ಇದ್ದಕ್ಕಿದ್ದಂತೆ ಪಾರ್ವತಿಗೆ ಗಂಟಲು ಕಟ್ಟಿದಂತಾಯ್ತು. ನೀರು ಕುಡಿಯಲು ಒಳಗೆ ಹೋದಳು. ನೀರಿನ ಬಟ್ಟಲು ಕೈಯಲ್ಲಿ ನಡುಗಿತು.
ಹಿಂತಿರುಗಿ ವರಾಂಡಕ್ಕೆ ಬಂದಾಗ ರಾಯರು ಉತ್ಸಾಹದಿಂದ ಹೇಳಿದರು. ‘ಕೇಳಿದಿಯಾ ಪಾರ್ವತಿ?’- ಅವರ ವಿವರಣೆಗಳೊಂದೂ ಪಾರ್ವತಿಗೆ ಕೇಳಿಸಲಿಲ್ಲ… ಎಂ.ಸಿ.ಸಿ. ಚೆಪಾಕ್… ಮೂರುದಿನ… ರಾಯರು ಏನೇನೋ ಅನ್ನುತ್ತಿದ್ದರು. ಅವರು ನಿಲ್ಲಿಸುತ್ತಲೂ ನಗಲು ಪ್ರಯತ್ನಿಸುತ್ತ ಅಂದಳು: ‘ಈ ಸಂಭ್ರಮದಲ್ಲಿ ನನಗೆ ಪುಸ್ತಕ ತಂದನೋ ಇಲ್ಲವೋ?’
ಶ್ರೀಧರ- ಅವಳೆಣಿಸಿದ್ದಂತೆಯೇ- ಪುಸ್ತಕಗಳನ್ನು ತರಲು ಮರೆತಿದ್ದ. ನಾಳೆ ತರುತ್ತೇನೆಂದು ಭರವಸೆ ಕೊಟ್ಟ. ಮಾರನೆಯ ದಿನ ತಂದೂ ಕೊಟ್ಟ. ಆದರೆ ಪುಸ್ತಕಗಳು ಮನೆಗೆ ಬರುವುದಕ್ಕೆ ಮುಂಚೆ ಇದ್ದ ಉತ್ಸಾಹ ಅವು ಬಂದ ಮೇಲೆ ಪಾರ್ವತಿಗೆ ಇರಲಿಲ್ಲ. ಮಧ್ಯಾಹ್ನ ಓದಲು ಕುಳಿತುಕೊಳ್ಳುತ್ತಿದ್ದಳು. ಮೂವತ್ತು ನಲವತ್ತು ಪುಟಗಳಷ್ಟು ಓದುವದರೊಳಗೆ ತೂಕಡಿಕೆ ಬಂದು ನಿದ್ರಿಸುತ್ತಿದ್ದಳು. ಎಷ್ಟೋ ಬಾರಿ ಪುಸ್ತಕಗಳನ್ನು ನಿಶ್ಚಿತ ಅವಧಿಯೊಳಗೆ ಹಿಂತಿರುಗಿಸಲಾಗದೆ ಶ್ರೀಧರ ವಾಚನಾಲಯಕ್ಕೆ ದಂಡ ತರಬೇಕಾಗಿ ಬರುತ್ತಿತ್ತು. ಪುಸ್ತಕಗಳನ್ನು ತರುವುದರಲ್ಲಿ ಶ್ರೀಧರ ಉದಾಸೀನನಾದ. ಏನೇನೂ ಆಸಕ್ತಿಯಿಲ್ಲದ್ದರಿಂದ ಪಾರ್ವತಿಯೂ ಒತ್ತಾಯ ಮಾಡಲಿಲ್ಲ. ರಾಯರಿಗಂತೂ ಅದರ ವಿಷಯ ಸಂಪೂರ್ಣವಾಗಿ ಮರೆತೇ ಹೋಗಿತ್ತು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಪಾರ್ವತಿಗೆ ಮಧ್ಯಾಹ್ನದ ನಿದ್ರೆ ಚೆನ್ನಾಗಿ ಅಭ್ಯಾಸವಾಗಿ ಹೋಯಿತು. ಊಟ ಮಾಡಿದ ಮೇಲೆ ಸಂಜೆಯ ಕಾಫೀ ತಿಂಡಿಯವರೆಗೂ ನಿದ್ರಿಸುತ್ತಿದ್ದಳು. ಮೊದಲು ಮೊದಲು ಎದ್ದ ಮೇಲೆ ಭಯಂಕರವಾದ ತಲೆನೋವು, ಅದಕ್ಕಿಂತ ಭಯಂಕರವಾದ ಶೂನ್ಯದ ಅರಿವು ಅವಳನ್ನಾವರಿಸುತ್ತಿದ್ದವು. ಕಾಲಕ್ರಮೇಣ ತಲೆನೋವು ಬರುವುದು ನಿಂತಿತು. ಮಧ್ಯಾಹ್ನದ ನಿದ್ರೆಯಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿರಲಿಲ್ಲ. ಇವೆಲ್ಲವನ್ನು ನಿಲ್ಲಿಸಲು ಮಧ್ಯಾಹ್ನ ನಿದ್ರೆ ಮಾಡಬಾರದೆಂದು ನಿರ್ಧರಿಸಿದಳು. ಅಭ್ಯಾಸಬಲದ ಮೇಲೆ ನಿದ್ರೆ ಬಂತು. ಮಾಡಲು ಬೇರೆ ಏನೂ ಕೆಲಸವಿಲ್ಲದ್ದರಿಂದ ಅವಳು ಪ್ರತಿಭಟನೆಯನ್ನು ತೋರಲಿಲ್ಲ.
ಶ್ರೀಧರ ಮದ್ರಾಸಿಗೆ ಹೋಗುವುದಕ್ಕೆ ಸ್ವಲ್ಪ ದಿನ ಮುಂಚೆ ಅವನ ಕಾಲೇಜಿನಲ್ಲಿ ಒಂದು ಸಮಾರಂಭನಡೆಯಿತು. ರಾಯರು ಪತ್ನಿಯೊಡಗೂಡಿ ಹೋದರು. ಪಾರ್ವತಿ ಕಾಲೇಜನ್ನು ಕಂಡುದು ಅದೇ ಮೊದಲು. ಆಸಕ್ತಿಯಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೂ, ಆಮಂತ್ರಿತರನ್ನೂ ನೋಡತೊಡಗಿದಳು. ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಾರ್ಯಕಲಾಪಗಳ ವರದಿಯನ್ನು ಕೇಳಿದಾಗ, ಅವರ ನಿರಾತಂಕದ ಉಲ್ಲಾಸನೀಯ ಪ್ರವೃತ್ತಿಗಳನ್ನು ಗಮನಿಸಿದಾಗ, ಆಸಕ್ತಿ, ಅಸೂಯೆಗೆ ಹೊರಳಿತು. ಎಲ್ಲಾ ಸುಮಾರು ತನ್ನ ವಯಸ್ಸಿನವರೇ. ಆದರೆ ತಾನಿಲ್ಲಿ. ಆಮಂತ್ರಿತರ ನಡುವೆ. ತಂದೆ ತಾಯಿಯರ ಗುಂಪಿನಲ್ಲಿ. ತನ್ನ ತಂದೆಯೂ ಈ ಊರಿನಲ್ಲಿದ್ದಿದ್ದರೆ, ಹಣವಂತರಾಗಿದ್ದರೆ, ತನಗೆ ಮದುವೆಯಾಗಿರದಿದ್ದರೆ, ಆಗಿದ್ದರೂ ಇವರಿಗಾಗಿರದಿದ್ದರೆ, ತಾನೂ ಹುಡುಗಿಯರ ಜೊತೆ ನಲಿಯಬಹುದಾಗಿತ್ತು… ಜೋರಾಗಿ ಕೇಳಿಬಂದ ಕರತಾಡನದಿಂದ ಬೆಚ್ಚಿ ಎದುರಿಗೆ ನೋಡಿದಳು. ಮತ್ತೆ ಬೆಚ್ಚುವಂತಾಯ್ತು. ವೇದಿಕೆಯ ಮೇಲೆ ಶ್ರೀಧರ ಸಭಾಧ್ಯಕ್ಷರಿಂದ ಪಾರಿತೋಷಕಗಳನ್ನು ಸ್ವೀಕರಿಸುತ್ತ ನಿಂತಿದ್ದ. ಹುಡುಗ ಹುಡುಗಿಯರೆಲ್ಲರೂ ಜೋರಾಗಿ ಚಪ್ಪಾಳೆ ಹೊಡೆಯುತ್ತಿದ್ದರು. ಅವನ ಹೆಸರನ್ನು ಅಮಿತೋತ್ಸಾಹದಿಂದ ಕೂಗುತ್ತಿದ್ದರು. ಶ್ರೀಧರ ನಸುನಗುತ್ತ ಅಧ್ಯಕ್ಷರಿಗೊಮ್ಮೆ ಸಭೆಗೊಮ್ಮೆ ನಮಸ್ಕರಿಸಿ ಕೆಳಗಿಳಿದು ಬಂದು, ಗೆಳೆಯರ ಗುಂಪಿನಲ್ಲಿ ಮರೆಯಾದ.
ಮನೆಗೆ ಬರುವಾಗ ಪಾರ್ವತಿ ಎಂದಿಗಿಂತ ಮೌನಳಾಗಿದ್ದಳು. ಮಗನ ಗೆಲುವಿನಿಂದ ಹುರುಪುಗೊಂಡ ರಾಯರು ಹೆಮ್ಮೆಯಿಂದ ಮಾತನ್ನಾಡುತ್ತಿದ್ದರು. ಪಾರ್ವತಿಗೆ ಅವರನ್ನು, ಸುಮ್ಮನಿರಿ ದಯವಿಟ್ಟು, ನಾನು ಕೇಳಲಾರೆ, ಎಂದು ಬೇಡಿಕೊಳ್ಳಬೇಕೆನಿಸಿತು. ಅತಿಪ್ರಯಾಸದಿಂದ, ಮಾತನ್ನಾಡದೆ ಹೊಂಗುಡುತ್ತಾ ಬಂದಳು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಪಾರ್ವತಿಯ ಬೇಸರ ಬೆಳೆದಂತೆ ಖಿನ್ನತೆಯೂ ಹೆಚ್ಚಾಗುತ್ತ ಬಂದಿತು. ಮೊದಲೇ ಮಿತಭಾಷಿಣಿಯಾಗಿದ್ದವಳು ಈಗ ಮೌನಿಯಾದಳು. ಊಟ ತಿಂಡಿಗಳ ಮೇಲೆ, ಉಡಿಗೆ ತೊಡಿಗೆಗಳ ಮೇಲೆ ಆಸಕ್ತಿ ಕಡಿಮೆಯಾಗಿ ಹೋಯಿತು. ಬೆಳಗ್ಗೆ, ಸಂಜೆ ಹಾಸಿಗೆಯಿಂದ ಏಳಬೇಕಾದರೆ ಅವಳಿಗೆ ಬೇಜಾರಾಗುತ್ತಿತ್ತು.
*
ಶ್ರೀಧರ ಮದ್ರಾಸಿಗೆ ಹೊರಟ ದಿನ ಅವನ ಜೊತೆ ರಾಯರೂ ನಿಲ್ದಾಣಕ್ಕೆ ಹೊರಟರು. ಹೊರಡುವುದಕ್ಕೆ ಮುಂಚೆ ತಾನೂ ಅವರೊಡನೆ ಬರುತ್ತೇನೆಂದು ಹೇಳಿದ್ದರೂ, ಹೊರಡುವುದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ತಾನು ಬರುವುದಿಲ್ಲವೆಂದು ತಿಳಿಸಿದಳು. ರಾಯರಿಗಾಗಲಿ, ಶ್ರೀಧರನಿಗಾಗಲಿ ಪಾರ್ವತಿಯ ನಡವಳಿಕೆ ಅರ್ಥವಾಗಲಿಲ್ಲ. ಆದರೆ ಕಾರಣವನ್ನು ಕೇಳುವುದಕ್ಕೆ ಸಮಯವಿಲ್ಲದ್ದರಿಂದ ಅವರಿಬ್ಬರೂ ಹೊರಟು ಹೋದರು. ಕಾರು ಕಣ್ಮರೆಯಾದ ಮೇಲೆ ಕೊಠಡಿಗೆ ಬಂದು ಪಾರ್ವತಿ ಅತ್ತಳು. ಕಾರಣ ಗೊತ್ತಿಲ್ಲದೆಯೇ ಬಿಕ್ಕಿ ಅತ್ತಳು.
ಪಂದ್ಯದ ವರದಿಯನ್ನು ರಾಯರು ರೇಡಿಯೋದಲ್ಲಿ ತಪ್ಪದೆ ಕೇಳುತ್ತಿದ್ದರು. ಅರ್ಥವಾಗದಿದ್ದರೂ ಪಾರ್ವತಿ ಅಲ್ಲಿಯೇ ಕುಳಿತಿರುತ್ತಿದ್ದಳು. ರಾಯರು ಆಗಾಗ ಏನನ್ನಾದರೂ ವಿವರಿಸುತ್ತಿದ್ದರು. ವರದಿಯಲ್ಲಿ ಶ್ರೀಧರನ ಹೆಸರು ಬಂದಾಗ ಪಾರ್ವತಿಗೆ ಅರ್ಥವಾಗುತ್ತಿತ್ತು. ಅವನು ಔಟಾದನೆಂದು ರಾಯರು ಹೇಳಿದಾಗ ಒಳಗೆ ಎದ್ದು ಹೋಗುತ್ತಿದ್ದಳು.
ಶ್ರೀಧರ ಮದ್ರಾಸಿನಿಂದ ಹಿಂತಿರುಗಿ ಬಂದ ದಿನ ಬೆಳಗ್ಗಿನಿಂದ ಪಾರ್ವತಿಗೆ ಅಸ್ವಾಸ್ಥ್ಯ. ಮನಸ್ಸಿನಲ್ಲಿ ಏನೋ ಅಶಾಂತಿ, ತಳಮಳ, ರೈಲು ಬರುವ ಹೊತ್ತಿಗೆ ದಕ್ಷತೆಯಿಂದ ಅಲಂಕಾರ ಮಾಡಿಕೊಂಡಳು. ಏಕೋ ಮತ್ತೆ ಮುದುಡಿ ಕುಳಿತಳು. ಮತ್ತೆ ಅರಳಿದಳು. ಮತ್ತೆ ಮುದುಡಿದಳು. ಶ್ರೀಧರ ಬಂದವನೇ ಅವಳನ್ನು ನೋಡಿ: ಏಕೆ, ಮೈಗೆ ಸರಿಯಾಗಿಲ್ಲವೆ? ಎಂದು ಕೇಳಿದ. ಪ್ರಶ್ನೆ-ಶ್ರೀಧರನಿಂದ ಬಂದದ್ದದರಿಂದ- ಬಾಡಿದ ಸಸಿಗೆ ನೀರೆರೆಯಿತು. ಅಂದಿನ ದಿನವೆಲ್ಲ ಪಾರ್ವತಿಯ ಉಲ್ಲಾಸಕ್ಕೆ ಮೇರೆಯೇ ಇರಲಿಲ್ಲ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ರಾತ್ರಿಯಲ್ಲಲ್ಲದೆ ಮಧ್ಯಾಹ್ನಗಳಲ್ಲೂ ಕನಸುಗಳು ಕಾಡಲಾರಂಭಿಸಿದವು: ತಾನು ಹೊಸ ಹಸಿರು ಹುಲ್ಲುಗಾವಲಿನಲ್ಲಿ ಆಡಲು ಅಪೇಕ್ಷಿಸಿ ಅದರೆಡೆಗೆ ನಡೆಯತೊಡಗಿದಂತೆ. ನಿಂತಿದ್ದ ಒರಟು ನೆಲದಿಂದ ‘ಪಾರ್ವತಿ’ ಎಂದು ಒಂದು ಧ್ವನಿ ಗರ್ಜಿಸಿದಂತೆ. ಬೆಳದಿಂಗಳಿನಲ್ಲಿ ಮೀಯಲು ಓಡಿದಂತೆ, ಮನೆಯೊಳಗಿನಿಂದ ಯಾರೋ ಸೆರಗನ್ನು ಹಿಡಿದು ನಿಲ್ಲಿಸಿದಂತೆ…
ಕನಸುಗಳಿಗೆ ಹೆದರಿ ಪಾರ್ವತಿ ನಿದ್ರೆ ಮಾಡುವುದಕ್ಕೆ ಇಷ್ಟ ಪಡುತ್ತಿರಲಿಲ್ಲ.
ಹೆಂಡತಿಯ ಖಿನ್ನತೆ ರಾಯರ ಗಮನಕ್ಕೆ ಬಾರದೆ ಇರಲಿಲ್ಲ. ಕಾರಣವನ್ನು ಕೇಳುತ್ತಿದ್ದರು. ‘ಏನಿಲ್ಲ, ಈ ಸೆಕೆಗೆ ತಲೆನೋವು.’ ಎಂದು ಸುಮ್ಮನಾಗುತ್ತಿದ್ದಳು. ರಾಯರು ಉತ್ತರದಿಂದ ತೃಪ್ತಿ ಹೊಂದುತ್ತಿದ್ದರು. ‘ಇನ್ನೇನು ಬೇಸಿಗೆ ಮುಗಿಯುತ್ತ ಬಂತು’ ಎಂದು ಒಂದು ವಾಕ್ಯದಲ್ಲೇ ಸಮಾಧಾನವನ್ನು ನೀಡುತ್ತಿದ್ದರು.
ಒಂದು ದಿನ ಮಧ್ಯಾಹ್ನ ಶ್ರೀಧರ ಅಕಸ್ಮಾತ್ತಾಗಿ ಮನೆಗೆ ಬಂದವನು ವರಾಂಡದ ಆರಾಮ ಕುರ್ಚಿಯ ಮೇಲೆ ಮಲಗಿದ್ದ ಪಾರ್ವತಿಯನ್ನು ಕಂಡು ಗಾಬರಿಯಾದ. ಅವಳ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ತನ್ನ ದಿನದ ಪದ್ಧತಿಯಂತೆ ಸುಮ್ಮನೆ ಒಳಗೆ ಹೋಗದೆ ‘ಏಕೆ? ಏಕೆ ಅಳುತ್ತಿದ್ದೀರಿ?’ ಎಂದ. ಪಾರ್ವತಿಯ ಅಳು ಹೆಚ್ಚಾಯಿತು. ಈಚೆಗೆ ಅವಳಿಗೆ ಕಾರಣವಿಲ್ಲದೆ ಕಣ್ಣು ತುಂಬಿ ಬರುತ್ತಿತ್ತು. ಎಷ್ಟು ಪ್ರಯತ್ನಪಟ್ಟರೂ ತಡೆಯದೆ ತುಂಬಿ ಹರಿಯುತ್ತಿತ್ತು. ಶ್ರೀಧರನ ಅನಿರೀಕ್ಷಿತ, ಔಪಚಾರಿಕ ಪ್ರಶ್ನೆಯಿಂದ ಪಾರ್ವತಿಗೆ ಆಶ್ಚರ್ಯವಾಯಿತು. ಆನಂದವಾಯಿತು, ಸಂಕಟವೂ ಆಯಿತು. ಮತ್ತೆ ಅತ್ತಳು.
ಪಾರ್ವತಿ ದಿನದಿನಕ್ಕೆ ಬಡವಾಗುತ್ತಿರುವುದನ್ನು ನೋಡಿ ಗಾಬರಿಗೊಂಡ ರಾಯರು ತಮ್ಮ ಗುಮಾಸ್ತೆಯೊಬ್ಬನ ಜೊತೆ ಮಾಡಿ ಅವಳನ್ನು ಹಳ್ಳಿಗೆ ಕಳುಹಿಸಿ ಕೊಟ್ಟರು. ಅಲ್ಲಿ ಹೆಚ್ಚು ದಿನ ನಿಲ್ಲಲಾರದೆ ಪಾರ್ವತಿ ಮತ್ತೆ ಊರಿಗೆ ಬಂದಳು. ಎರಡು ದಿನ ನಗು ನಗುತ್ತಿದ್ದಳು. ಮತ್ತೆ ಮ್ಲಾನಮುಖಿಯಾದಳು.
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಶ್ರೀಧರ ಸಂಜೆ ಮನೆಗೆ ಬರುವ ಹೊತ್ತಿಗೆ ಅಲಂಕರಿಸಿಕೊಳ್ಳುತ್ತಿದ್ದಳು, ಮತ್ತೆ ಅಲಂಕಾರವನ್ನೆಲ್ಲಾ ಕೆಡಿಸಿ ಅಳುತ್ತ ಮಲಗುತ್ತಿದ್ದಳು. ಒಂದೊಂದು ದಿನ ಗಂಡನ ಜೊತೆಗೆ ತುಂಬ ಮಾತನಾಡುತ್ತಿದ್ದಳು. ಮತ್ತೆ ಕೆಲವು ದಿನ ಅವರು ಮಾತನ್ನಾಡಿಸಿದರೂ ಉತ್ತರ ಕೊಡುತ್ತಿರಲಿಲ್ಲ.
ಶ್ರೀಧರನ ಹುಟ್ಟಿದ ಹಬ್ಬದ ದಿನ ಪಾರ್ವತಿಯ ಮನಸ್ಸು ಪ್ರಸನ್ನವಾಗಿತ್ತು. ಅಡಿಗೆಯವನು ಎಷ್ಟು ಬೇಡವೆಂದರೂ ಕೇಳದೆ ಅಡಿಗೆಗೆ ನೆರವಾದಳು. ಗಂಡನೊಡನೆ ಸರಸದಿಂದಿದ್ದಳು. ಊಟಕ್ಕೆ ಕುಳಿತಾಗ ಮಾತು ಹೂವುಗಳ ಕಡೆ ಹರಿಯಿತು. ಅತಿಥಿಗಳಾಗಿ ಬಂದಿದ್ದ ಶ್ರೀಧರನ ಸ್ನೇಹಿತರು ತಮ್ಮ ತಮ್ಮ ಮೆಚ್ಚಿನ ಹೂಗಳ ಹೆಸರುಗಳನ್ನು ತಿಳಿಯಪಡಿಸಿದರು. ಶ್ರೀಧರ ತನ್ನ ಮೆಚ್ಚಿಗೆಯ ಹೂವು ಶಾವಂತಿಗೆ ಎಂದ. ರಾಯರು ಕೇದಿಗೆ ಎಂದರು. ಪಾರ್ವತಿಯನ್ನು ಯಾರೂ ಕೇಳಲಿಲ್ಲ.
ಅಂದು ರಾತ್ರಿ ಕನಸಿನಲ್ಲಿ ಪಾರ್ವತಿ ಮೃದುವಾದ ಹಳದಿ ಸೀರೆ, ರವಿಕೆಗಳನ್ನು ಧರಿಸಿದ್ದಳು. ಹೆರಳು ಹಾಕಿಕೊಂಡು ತಲೆಯ ತುಂಬ ಹಳದಿ ಶಾವಂತಿಗೆಯ ಮಾಲೆಯನ್ನು ಮುಡಿದಿದ್ದಳು. ಅವಳು ದಿಟ್ಟಿಸುತ್ತಿದ್ದ ದಿಕ್ಕಿನಿಂದ ಬಂದ ಶ್ರೀಧರ. ಹತ್ತಿರ ಬಂದು ಉಸುರಿದ: ‘ಸೇವಂತಿ, ಸೇವಂತಿ,’ ಕೈ ಚಾಚಿದ. ಹಳದಿ ಸೀರೆ ಸುತ್ತಿದ್ದ ತೆಳು ಮೈ ಮೃದು ಚಲನದಿಂದ ಮುಂದೆ ಸರಿಯಿತು. ಚಾಚಿದ ಕೈಗಳಲ್ಲಿ ಸೆರೆಯಾಗುವುದರಲ್ಲಿತ್ತು. ಮೇಲಿನಿಂದ ಬೀಸಿ ಬಂದ ಹಳದಿ ಪಾಶವೊಂದು ಅವಳನ್ನು ತಡೆದು ನಿಲ್ಲಿಸಿತು. ಪಾಶದ ಅಂಚಿನ ತೀಕ್ಷ್ಮವಾದ ಹಲ್ಲುಗಳು ಮೈಯನ್ನು ಚುಚ್ಚಿದವು. ಅದರ ಉತ್ಕಟ ಸುಗಂಧ, ಮೂರ್ಛೆಗೆ ಕಾರಣವಾಯಿತು.
ಬೆಳಗಾದರೂ ಪಾರ್ವತಿಗೆ, ಕನಸನ್ನು ಮರೆಯಲಾಗಲಿಲ್ಲ.
ಶ್ರೀಧರ ತನ್ನನ್ನು ಕಂಡರೆ ಮೊದಲಿನಷ್ಟು ನಾಚಿಕೆಪಟ್ಟುಕೊಳ್ಳುತ್ತಿರಲಿಲ್ಲವೇನೋ ಎನಿಸಿತು ಪಾರ್ವತಿಗೆ. ಮಾತನ್ನಾಡುವಾಗ ಮೊದಲಿನಷ್ಟು ಸಂಕೋಚವಿರುತ್ತಿರಲಿಲ್ಲ ಎನಿಸುತ್ತಿತ್ತು. ಇದಕ್ಕೆ ಸವಿಯಾದ ಕಾರಣಗಳು ಹೊಳೆಯತೊಡಗಿದವು. ಮತ್ತೆ ಪಾರ್ವತಿ- ಮದುವೆಯ ಮೊದಲ ದಿನಗಳಲ್ಲಿನಂತೆ ಜಾಗರೂಕತೆಯಿಂದ ಸಿಂಗರಿಸಿಕೊಳ್ಳಲು ಪ್ರಾರಂಭಿಸಿದಳು. ನಗು ಮತ್ತೆ ಅವಳ ಪರಿಚಯವನ್ನು ಮಾಡಿಕೊಳ್ಳತೊಡಗಿತು. ರಾಯರ ಸಹವಾಸ, ಸಾನ್ನಿಧ್ಯ ಮೊದಲಿಗಿಂತ ಅಸಹನೀಯವಾಗುತ್ತ ಬಂತು. ಆದರೂ ಯಾವುದೋ ಒಂದು ಅವ್ಯಕ್ತವಾದ ಆಸೆ ಅಸಹನೆಯನ್ನು ಬಂಧಿಸಿ, ಬಾಯಿಕಟ್ಟಿ, ನೆಲಮಾಳಿಗೆಯಲ್ಲಿ ಸೆರೆ ಇಟ್ಟಿತು.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಒಂದು ದಿನ ಮಧ್ಯಾಹ್ನ ಪಾರ್ವತಿ ಎಂದಿನಂತೆ ನಿದ್ರಿಸುತ್ತಿದ್ದಳು. ಕೋಣೆಯ ಬಾಗಿಲಿನಲ್ಲಿ ಶ್ರೀಧರ ಬಂದು ನಿಂತಂತಾಯಿತು. ಇಷ್ಟು ಹೊತ್ತಿನಲ್ಲಿ ಏಕೆ ಬಂದ ಎಂದು ಯೋಚಿಸುವಷ್ಟರಲ್ಲಿ ಅವನು ಕೋಣೆಯೊಳಗೆ ಒಂದು ಹೆಜ್ಜೆಯಿಟ್ಟಿದ್ದ. ಆಶ್ಚರ್ಯಚಕಿತಳಾಗಿ, ಎದ್ದು ಕುಳಿತುಕೊಳ್ಳಬೇಕೆಂದು ಯತ್ನಿಸಿದಳು. ದೇಹ ಅವಳ ಮಾತನ್ನು ಕೇಳಲಿಲ್ಲ. ಬದಲು, ಮಲಗಿದ್ದಂತೆಯೇ ಒಂದು ಬಾರಿ ಹೊರಳಿತು. ಅವಳ ಮುಖ ಅವನೆಡೆಗೆ ತಿರುಗಿತು. ಅವನು ಅವಳನ್ನೇ ನೋಡುತ್ತ ಮುಂದೆ ಬರುತ್ತಿದ್ದ. ಅವಳಿಗೆ ಭಯವೆನಿಸಲಿಲ್ಲ. ವರ್ಣನಾತೀತ ತೃಪ್ತಿ, ಆನಂದ ಅವಳಲ್ಲಿತ್ತು. ಅವನು ಮುಂದೆ ಬರುವುದನ್ನೇ ನೋಡುತ್ತ ಮಲಗಿದ್ದಳು. ತುಟಿಗಳ ಮೇಲೆ ಆಹ್ವಾನದ, ಹೆಮ್ಮೆಯ ನಗು ಹಬ್ಬಿತ್ತು. ಮೈ ಕ್ಷಣಕ್ಷಣಕ್ಕೂ ಮೃದುವಾದಂತೆನಿಸುತ್ತಿತ್ತು. ಧರಿಸಿದ ಬಟ್ಟೆಗಳು ಸಡಿಲವಾಗುತ್ತಿದ್ದಂತೆ ಭಾಸವಾಯಿತು. ಅವನು ಹತ್ತಿರ ಬಂದ. ಇಬ್ಬರೂ ಒಟ್ಟಿಗೆ ಕೈ ಚಾಚಿದರು. ಮಿಂಚು ಮಾಯವಾಗುವ ಮೊದಲೇ ಸಿಡಿಲು ಕೇಳಿಬಂತು. ‘ಪಾ-ರ್ವ-ತಿ!’ ಯಾರೋ ಕೂಗಿದರು. ಸಿಡಿಲಿನ ಬೆನ್ನಿಗೇ ಗುಡುಗುಗಳ ಸಾಲು ಶಸ್ತ್ರ ಸಜ್ಜಿತ ಹಡಗುಗಳ ಗುಂಪಿನಂತೆ ಧಾವಿಸಿ ಬಂತು. ಗುಡುಗುಗಳು ಮಾನವ ಕಂಠದಲ್ಲಿ ರೂಪಿತವಾದವು. ತಾಯಿ, ತಂದೆ, ಗಂಡ, ಎಲ್ಲರೂ ಕೂಗಿಕೊಂಡರು, ಬೇಡಿಕೊಂಡರು, ಶಾಪ ಹಾಕಿದರು: ‘ಪಾ-ರ್ವ-ತಿ!’ ಬೆಚ್ಚಿ ಕೈಯನ್ನು ಹಿಂತೆಗೆದಳು. ಎದುರು ದಿಕ್ಕಿನಿಂದ, ಅವನು ನಿಂತ ದಿಕ್ಕಿನಿಂದ, ಹೊಸದೊಂದು ಧ್ವನಿ ಕೇಳಿ ಬಂತು: ‘ಪಾರ್ವತಿ!’ ಬೆಳ್ಳಿ ಬಳಿದ ಕೊಂಬೆಯಂತೆ, ಹೊಂಬಣ್ಣದ ರೇಶಿಮೆ ನೂಲಿನಂತೆ, ಚಂದ್ರ ಕಿರಣದಂತೆ ಹೊಳೆಯತೊಡಗಿತು ಧ್ವನಿ, ಕೂಗತೊಡಗಿತು ಧ್ವನಿ: ‘ಪಾರ್ವತಿ!’ ಕೈಯನ್ನು ಮತ್ತೆ ಮುಂದೆ ಚಾಚಿದಳು. ಹಿಂದಿನಿಂದ ಬಂಡೆ ಸೀಳಿದಂತೆ, ಸೀಳಿ ಸಮುದ್ರಕ್ಕೆ ಬಿದ್ದಂತೆ, ಸಮುದ್ರ ಚೀತ್ಕರಿಸಿದಂತೆ ಕೇಳಿ ಬಂತು ಧ್ವನಿಗಳ ಮೇಳ. ಎರಡು ದಿಕ್ಕಿನಿಂದ ಬಂದ ಧ್ವನಿಗಳೂ ಹೊಯ್ದಾಡತೊಡಗಿದವು. ಮುಂದಿನ ಧ್ವನಿಯನ್ನು ಆಲಿಸಿದಳು. ಒಲವಿನ ಅಧಿಕಾರದಿಂದ, ಬಯಕೆಯ ಕಾತುರದಿಂದ, ಮಾರ್ದವದ ನುಣುಪಿನಿಂದ ರೂಪಿತವಾದ ಧ್ವನಿ ಕೇಳಿ ಬಂತು; ‘ಪಾರ್ವತಿ!’ ಅವನ ಧ್ವನಿಯಷ್ಟೆ ಅದು? ಕೈಮುಂದೆ ನುಗ್ಗಿತು. ಅವನ ಕೈ ಪ್ರತಿವೇಗದಿಂದ ಅವಳನ್ನು ಸೇರಿತು. ಧ್ವನಿ ಮತ್ತೊಮ್ಮೆ ಅಂದಿತು ‘ಪಾರ್ವತಿ!’ ಅವಳು ಬೆಚ್ಚಿದಳು. ಧ್ವನಿ ಅವನದಾಗಿರಲಿಲ್ಲ. ತನ್ನದೇ! ಹಿಂದಿನ ದಪ್ಪ, ಕಪ್ಪು ಧ್ವನಿಗಳನ್ನು ಭೇದಿಸಿಕೊಂಡು ಭಯಗೊಂಡ, ಆಘಾತಗೊಂಡ, ಅವಳ ಧ್ವನಿ ಚೀರಿತು.
ಚೀರಿದ ಧ್ವನಿಗೆ ಬೆದರಿ ಕಣ್ಣೆರೆದು ನೋಡಿದಳು. ದೇಹ ಕಂಪಿಸುತ್ತಿತ್ತು. ಮುಖ ಬೆವರಿತ್ತು. ಮೈ ಮೇಲಿನ ಬಟ್ಟೆಗಳು ಮುದುಡಿದ್ದವು. ತಲೆಯಲ್ಲಿ ಒಂದು ಪ್ರಶ್ನಾರ್ಥಕ ಚಿಹ್ನೆ ಬಂದು ನೆಲೆಸಿತು. ಹೌಹಾರಿ ಬಾಗಿಲಿನತ್ತ ನೋಡಿದಳು. ಶ್ರೀಧರ ಕಣ್ಣಿಗೆ ಬಿದ್ದ. ನಿಜ! ಪಾರ್ವತಿ ಚೀರಿದಳು. ಆಗತಾನೆ ವರಾಂಡಕ್ಕೆ ಕಾಲಿಟ್ಟಿದ್ದ ರಾಯರು ಓಡಿ ಬಂದರು. ಪ್ರಶ್ನೆ ಬರುವ ಮೊದಲೇ ಪಾರ್ವತಿ ಬಿಕ್ಕಿದಳು. ‘ಶ್ರೀಧರ- ಈಗ ಕೋಣೆಗೆ ಬಂದಿದ್ದ- ನನ್ನ ಮಾನ-ಓ-ಓ!’ ಇಷ್ಟು ಹೇಳಿ ಕುಸಿದಳು. ಬಚ್ಚಲ ಮನೆಯಿಂದ ಓಡಿ ಬಂದ ಶ್ರೀಧರ ತಂದೆಯ ಮುಖವನ್ನು ನೋಡಿ ಸ್ತಂಭಿತನಾಗಿ ನಿಂತುಬಿಟ್ಟ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ರಾಯರ ರೋಷ ನಾಲಿಗೆಯನ್ನು ತೊದಲಿಸಿತು. ‘ಹೊರಡು ಮನೆ ಬಿಟ್ಟು ಪಾಪಿ ನಿನಗಿಂತ ಚಿಕ್ಕೋಳಾದ್ರೂ ನಿನ್ನ ತಾಯಿಯಲ್ಲವೇನೋ? ತೊಲಗಾಚೆ- ಕಣ್ಣೆದುರಿಗೆ ನಿಲ್ಲಬೇಡ,’ ಮಗನ ಕುತ್ತಿಗೆಗೆ ಕೈ ಹಾಕಿ ಆಚೆಗೆ ನೂಕಿ ಬೀದಿ ಬಾಗಿಲು ಹಾಕಿದರು. ಅವರ ಕಣ್ಣು ಕೆಂಡವಾಗಿತ್ತು. ಮೈ ನಡುಗುತ್ತಿತ್ತು. ಕೋಣೆಯ ಬಾಗಿಲಿಗೆ ಬಂದರು. ಪಾರ್ವತಿ ಮಂಚದ ಬಳಿ ಮುದುಡಿಕೊಂಡು ಬಿದ್ದಿದ್ದಳು. ಅವಳೆಡೆಗೆ ನೋಡದೆಯೇ ಹೊರಗೆ ಹೊರಟು ಹೋಗಬೇಕೆನಿಸಿತು. ಮನಸ್ಸನ್ನು ಗಟ್ಟಿಮಾಡಿಕೊಂಡು ಹತ್ತಿರ ಹೋದರು. ಧ್ವನಿಯಲ್ಲಿನ ಕಬ್ಬಿಣವನ್ನು ಆದಷ್ಟು ಕರಗಿಸಿ ‘ಪಾರ್ವತಿ’ ಎಂದು ಕೂಗಿದರು. ಉತ್ತರ ಬರಲಿಲ್ಲ. ಕಿಟಕಿಯಿಂದ ಬಂದ ಗಾಳಿ ಬಿಳಿ ಸೀರೆಯ ಸೆರಗನ್ನು ಹಾರಿಸಿತು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ರಾಜಲಕ್ಷ್ಮಿ ಎನ್.ರಾವ್(1935): ಕರ್ನಾಟಕದ ಆಚಾರ್ಯಪುರುಷ ಎಂದು ಖ್ಯಾತರಾದ ಬಿ.ಎಂ.ಶ್ರೀಕಂಠಯ್ಯನವರ ಮೊಮ್ಮಗಳಾದ ರಾಜಲಕ್ಷ್ಮಿ ಎನ್.ರಾವ್ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಎನ್.ಡಿ.ಎನ್.ರಾವ್, ತಾಯಿ ತಂಗಮ್ಮ. ಕತೆಗಾರ್ತಿ ರಾಜಲಕ್ಷ್ಮಿ ಎನ್.ರಾವ್ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರೆ. ತಾತನ ಮನೆಯಲ್ಲಿ ಅನೇಕ ಹಿರಿ ಕಿರಿಯ ಸಾಹಿತಿಗಳ ಜೊತೆ ಒಡನಾಟ. ಮೈಸೂರಿನಲ್ಲಿ ಬಳಿಕ ನಾಗಪುರದಲ್ಲಿ ಶಿಕ್ಷಣ ಮುಗಿಸಿದರು. ಮದುವೆ ಹಾಗೂ ಒಂದು ಹೆಣ್ಣು ಮಗುವಿನ ಜನನದ ನಂತರ ರಾಜಲಕ್ಷ್ಮಿಯವರ ಮನಸ್ಸು ಅಧ್ಯಾತ್ಮದ ಕಡೆಗೆ ಹೊರಳಿತು, ಸಣ್ಣ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡರು. ನವ್ಯ ಕತೆಗಳನ್ನು ಬರೆದ ಮಹಿಳೆಯರಲ್ಲಿ ಇವರು ಪ್ರಥಮರು. ಸಂಗಮ (ಕಥಾ ಸಂಕಲನ) ಕರ್ನಾಟಕ ಸರಕಾರದಿಂದ 1985ರಲ್ಲಿ ಮರುಪ್ರಕಾಶನಗೊಂಡಿದೆ. ಜಾನ್ ಗಾಲ್ಸವರ್ಥಿ ಅವರ The Apple Treeಯನ್ನು ಕನ್ನಡಕ್ಕೆ ಸೇಬಿನ ಗಿಡ ಎಂದು ಅನುವಾದಿಸಿದ್ದಾರೆ. ಇವರ ಕತೆಗಳನ್ನು ಚಂದನ್ ಗೌಡ ಅವರು Pastorale ಎಂದು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.





