ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಉಪ್ಪೇರಿಯ ಹಾಗೆ ಎಲೆಗಳು ಕಾಲ ಕೆಳಗೆ ಪುಡಿಪುಡಿಯಾದವು. ಬೇಸ್‌ವಾಟರ್ ರಸ್ತೆಯಲ್ಲಿ ಕೆನ್ಸಿಂಗ್‌ಟನ್ ಗಾರ್ಡನ್ನಿನ ಮಗ್ಗುಲಿಗೆ ನಡೆಯುತ್ತಿದ್ದ ಎಡ್ವಿನ್ನಿಗೆ ಬಿದ್ದ, ಬೀಳುತ್ತಿದ್ದ ಎಲೆಗಳ ಮೇಲೆ ಹೆಜ್ಜೆಯನ್ನು ಸ್ಪಷ್ಟವಾಗಿ ಊರಿ ಅವು ಪುಡಿಪುಡಿಯಾಗುವ ಸಡಗರವನ್ನು ನೋಡುವುದು ಹೊಸ ಅನುಭವವೆನಿಸಿತು. ಹಳದಿಗೆ ತಿರುಗಿದ್ದ ಎಲೆ; ಹಳದಿಗೆ ತಿರುಗುವ ಮೊದಲೇ ಕಳಚಿ ಬಿದ್ದ ಹಸಿರೆಲೆ; ಕಂದುಮೈಯಿನ ಎಲೆ; ಕೆಲವಕ್ಕೆ ಚಿನ್ನದಂಚಂತೆ ಹಳದಿ.
ಬೀಸಿಯೂ ಬೀಸದ ಹಾಗೆ ಅದುವರೆಗೂ ಇದ್ದ ಗಾಳಿ ಒಮ್ಮೆಗೇ ರೊಯ್ಯನೆ, ಸಿಟ್ಟಿಗೆದ್ದ ನಾಗರದ ಹಾಗೆ, ಚಾವುಟಿ ಬಡೆಯಿತು. ಆ ಗಳಿಗೆಯನ್ನೇ ಕಾದಿದ್ದವೋ ಎನ್ನುವ ಹಾಗೆ, ತೊಟ್ಟು ಕಳಚಿ, ಕಟ್ಟು ಕಳಚಿ ತಮ್ಮ ಗೆಲುವನ್ನು ಗಾಳಿಯಲ್ಲಿ ರೂಪಿಸುತ್ತ, ಬ್ಯಾಲೇ ಹುಡುಗಿಯರ ಹಾಗೆ ಹಗುರವಾಗಿ ತೇಲುತ್ತ, ಬಳುಕುತ್ತ ಹತ್ತಿರ ಬಂದು ಮೈಮೇಲೆ, ಭುಜದಿಂದ ಕಾಲಿನವರೆಗೂ ಕಚಗುಳಿಯಿಟ್ಟು ನೆಲಕ್ಕೆ ಬಿದ್ದ ಎಲೆಗಳ ಮೇಲೆ ಎಡ್ವಿನ್ ಹೆಜ್ಜೆಯಿಟ್ಟ.
ಬೊಂಬಾಯಿನ ಸಾಂತಾಕ್ರೂಸ್ ವಿಮಾನನಿಲ್ದಾಣವನ್ನು ಬಿಟ್ಟು ನವಿಲು ಕಣ್ಣಿನ ಕತ್ತಲೆಗೆ ಮೂರು ವರುಷಗಳ ಕೆಳಗೆ ಏರಿದಾಗ ಎಡ್ವಿನ್ ನೆನ್ನೆಗಳ ನೆನಪನ್ನು ಮಣ್ಣಿನ ಜೊತೆಗೇ ಬಿಟ್ಟುಕೊಟ್ಟಿದ್ದ. ತನ್ನ ಅದುವರೆಗಿನ ಮೂವತ್ತೈದು ವರ್ಷಗಳ ಬದುಕಿಗೆ ಅರ್ಥವಿದ್ದರೆ ಅದಕ್ಕೆ ಕಾರಣ ಮಣ್ಣು ಹಿಡಿತವನ್ನು ತಪ್ಪಿಸಿಕೊಂಡು ಗಾಳಿಗೇಳುವುದು ಸಾಧ್ಯವಾದ ಆ ಗಳಿಗೆ ಚೆಲ್ಲಿದ ಹಿಂಬೆಳಕು ಎನ್ನಿಸಿತ್ತು. ಕತೆ ಮುಗಿದ ರೀತಿಯಿಂದ ಕತೆಯ ಮೈಯಿಗೆ ಬರುವ ಹೊಳಪಿನಂತೆ ಎಂದುಕೊಂಡಿದ್ದ.
ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ
ಅಕ್ಟೋಬರ್ ತಿಂಗಳ ಗಾಳಿಗೆ ಚಳಿಯ ಹಲ್ಲಿತ್ತು. ಬೀದಿ ಮಗ್ಗುಲಿಗೆ ಬೀಳದೆ ರಸ್ತೆಯ ನಡುವಿಗೆ ಹಾರಿದ ಎಲೆಗಳು ಎದುರು-ಬದಿರು ದಿಕ್ಕಿನಲ್ಲಿ ಕೂಗುತ್ತ ಪ್ರಾಯಕ್ಕೆ ಬಂದ ಪ್ರವಾಹದಂತೆ ಸಾಗುತ್ತಿದ್ದ ಕಾರು ಬಸ್ಸು ಲಾರಿಗಳ ನಡುವಿಗಿದ್ದ ಅಂಗೈ ಅಗಲದ ನೇರದಲ್ಲಿ ಕುಣಿದು ಕುಪ್ಪಳಿಸಿದ್ದನ್ನು ಎಡ್ವಿನ್ ನೋಡಿದ. ಎಂಥ ಚಮತ್ಕಾರದ, ಸಾಹಸಪೂರ್ಣ ಬದುಕು, ಎಂದುಕೊಂಡ. ಬೆಳಗಿನ ಜಾವದಲ್ಲಿ ಕಸಗುಡಿಸುವವರು ಬಂದಾಗ ಲಾರಿಯಲ್ಲಿ ಪ್ರಯಾಣ. ಗ್ರೀನ್ ಪಾರ್ಕಿನಲ್ಲಿ ಗೋಪುರವಾಗಿ ಮೇಲೆದ್ದು ಬೆಂಕಿ ಮುಟ್ಟಿದಾಗ ಆಕಾಶದ ಕಡೆಗೆ ಚಿಮ್ಮುವ, ಬೆಳಕಾಗುವ ಭಾಗ್ಯ.
ವಿಮಾನದ ಹಾಸ್ಟೆಸ್ ಚೆಲುವೆ ಎನ್ನಿಸಿತು. ಕಂಡರಿಯದ ಇಂಗ್ಲೆಂಡಿಗೆ ಮನಸೋತಿದ್ದ ಅವನಿಗೆ ರೋಮ್ ನಿಲ್ದಾಣವನ್ನು ಬಿಡುವ ಹೊತ್ತಿಗೆ, ಸುರಿಯ ತೊಡಗಿದ ಮಳೆಯೂ ಸೊಗಸೆನಿಸಿತ್ತು. ಫ್ರಾಂಕ್‌ಫರ್ಟಿಗೆ ಬಂದಾಗ ವಿಮಾನವನ್ನು ಬಿಟ್ಟಿಳಿಯುವುದೂ ಸಾಧ್ಯವಾಗಲಿಲ್ಲ.
‘ನನಗೆ ಇದು ಹೋಮ್ ವೆದರ್ ಎನಿಸುತ್ತಿದೆ.’
ಬಳಿ ಸುಳಿದ ಹಾಸ್ಟೆಸಿಗೆ ಎಡ್ವಿನ್ ಹೇಳಿದ.
ಪಕ್ಕದಲ್ಲಿದ್ದವನು ಹಾಸ್ಟೆಸ್ ಮಾತನಾಡುವ ಮೊದಲೇ ಅಂದ:
‘ಬೆಂಗಳೂರಿನಲ್ಲಿ ಹೀಗೆ ಮಳೆ ಬರುವುದಿಲ್ಲವಲ್ಲ?’
‘ನನ್ನ ಹೋಮ್ ಇಂಗ್ಲೆಂಡು’ ಎಂದು ಕಟುವಾಗಿ ಹೇಳಿಬಿಡುವುದು ಎಡ್ವಿನ್ನಿಗೆ ಸಾಧ್ಯವಾಗಲಿಲ್ಲ. ಏರ್-ಹಾಸ್ಟೆಸ್ ನಕ್ಕು ಮುಂದೆ ಹೋಗಿದ್ದಳು.
ನೇರವಾಗಿ ತನ್ನ ಮುಖದ ಕಡೆಗೇ ಸಾಗಿ ಬಂದ ಎಲೆಯನ್ನು ಹಿಡಿದು ಎಡ್ವಿನ್ ಅಂದುಕೊಂಡ: ಬಿದ್ದ ಹಲ್ಲಿನ ಹಳ್ಳದ ಕಡೆಗೆ ನಾಲಗೆಯನ್ನು ಹೊರಳಿಸುವಂತೆ ನೆನ್ನೆಗಳನ್ನು ಮೆಲುಕು ಹಾಕುವ ಈ ಚಾಳಿ, ಅದನ್ನು ಬೇಗ ಬಿಟ್ಟುಕೊಟ್ಟು ತಾನು ಆರಿಸಿಕೊಂಡ ಇಲ್ಲಿಯ ಹೊಸ ಸಮಾಜದೊಂದಿಗೆ, ಬಾಳಿನೊಂದಿಗೆ ಬೆರೆಯಬೇಕು. ಹಿಂದಿನದನ್ನು ಮರೆಯಬೇಕು.
ಇದನ್ನು ಓದಿದ್ದೀರಾ?: ತರಾಸು ಅವರ ಕತೆ | ಇನ್ನೊಂದು ಮುಖ
ಮೊದಲು ತಾನು ಮಾಡಬೇಕಾದ್ದು ತನ್ನ ಸದ್ಯದ ಕೊಠಡಿಯನ್ನು ಬಿಟ್ಟು ಬೇರೆ ಎಲ್ಲಾದರೂ ಹೋಗುವುದು. ನಾಲ್ಕನೆಯ ಮಹಡಿಯಲ್ಲಿ ಇದ್ದ ಮೂರು ಕೊಠಡಿಗಳಲ್ಲಿ ಮಧ್ಯದ್ದು ತನ್ನದು. ಎಡಕ್ಕೆ ಮ್ಯಾಥ್ಯೂಸ್:
‘ನೋಡು ಎಡ್ವಿನ್, ನೀನು ಇಂಡಿಯನ್, ನಾನು ಐರಿಷ್, ದೇಶ ಬೇರೆಯಾದರೂ, ಬಣ್ಣ ಬೇರೆಯಾದರೂ ನಮ್ಮಿಬ್ಬರನ್ನೂ ಒಂದು ಗುಂಪಿಗೆ ಸೇರಿಸುವುದು ಯಾವುದು ನೀನೇ ಹೇಳು ನಮ್ಮ ಕ್ಯಥಾಲಿಸಿಸಮ್ ತಾನೇ…’
ಅವನ ಬಾಳಿನ ಸದ್ಯದ ಆಧಾರಗಳಾಗಿದ್ದುವು ಎರಡು: ಕ್ಯಥಾಲಿಸಿಸಮ್ ಮತ್ತು ಎಡ್ವಿನ್ನಿನ ಬಲ ಮಗ್ಗುಲ ಕೊಠಡಿಯಲ್ಲಿದ್ದ ವೆಸ್ಟ್ ಇಂಡಿಯನ್ನಿನ ಕಾಮಜೀವನ.
‘ಅವನು ಹೋವೇ, ಅನುಮಾನವೇ ಇಲ್ಲ. ಅಂತಹವರನ್ನು ನೋಡಿದಾಗ ನನ್ನ ರಕ್ತ ಕುದಿಯುತ್ತದೆ.’
ಅವನ ಮಾತು ಇವೆರಡು ವಿಷಯಗಳನ್ನು ಬಿಟ್ಟು ಬೇರೆ ದಿಕ್ಕಿಗೆ ಹರಿದದ್ದನ್ನು ನಾನು ನೋಡಿರಲಿಲ್ಲ. ಉತ್ಸಾಹದ ಬೆಟ್ಟ ಬೆಳೆದು ಉತ್ತುಂಗ ಶಿಖರವಾಗುತ್ತಿದ್ದುದು ನಡುರಾತ್ರಿಗೂ ಮೀರಿದ ವೇಳೆಗೆ- ಆರೇಳು ಸೀಸೆ ಗಿನೆಸ್ ಒಳಗಿಳಿದ ಮೇಲೆ.
ಮೊದಮೊದಲು ಮೋಜೆನಿಸಿದ್ದ ಮ್ಯಾಥ್ಯೂಸಿನ ಸಹವಾಸ ಈಚೆಗೆ ತುಯ್ಯತೊಡಗಿತ್ತು, ಕಾಲಿಗೆ ಕಟ್ಟಿದ ಕೊರಡಾಗಿ. ಅವನ ಧರ್ಮಶ್ರದ್ಧೆ- ಹುಟ್ಟಿನಿಂದ, ಆಚರಣೆಯಿಂದ, ನಂಬಿಕೆಯಿಂದ ಕ್ಯಾಥೊಲಿಕ್ ಆದ ತನ್ನನ್ನು ಮತಾಂತರಗೊಳಿಸಿ ಕ್ಯಾಥೊಲಿಕ್ ಮಾಡುವ ಮಿಷನರಿ ಉತ್ಸುಕತೆಯಿದ್ದ ಮ್ಯಾಥ್ಯೂಸಿನ ಧರ್ಮಶ್ರದ್ಧೆ -ವಾದಪ್ರತಿವಾದಗಳಿಲ್ಲದೆ, ಜ್ವರ ಬಂದವನ ಸನ್ನಿಮಾತಾಗಿತ್ತು. ಇನ್ನು ವೆಸ್ಟ್ ಇಂಡಿಯನ್ನಿನ ಸಲಿಂಗಿ ಕಾಮ, ನಿಜವೋ, ಸುಳ್ಳೋ ತಾನು ಕಾಣ. ನಿಜವಾದರೂ ಏನಂತೆ? ಗಂಡಿನ ಮೈಯಿಗೆ ಹೆಣ್ಣ ಬಳುಕು; ಅವನು ಸ್ನಾನ ಮಾಡಿಯಾದ ಮೇಲೆ ಬಚ್ಚಲು-ಮನೆಗೆ ಕಾಲಿಟ್ಟರೆ ಮೇಲೆದ್ದು ತನ್ನನ್ನು ತಬ್ಬುತ್ತಿದ್ದ ಗಮಗಮ ವಾಸನೆ. ಹೊತ್ತಲ್ಲದ ಹೊತ್ತಲ್ಲಿ ಬಂದು ಹೋಗುತ್ತಿದ್ದ ಗಡಸು-ದನಿಯ ಗಂಡಸರು. ಅರೆತೆರೆದ ಬಾಗಿಲಿನ ಮೂಲಕ ತಾನೊಮ್ಮೆ ಕದ್ದು ನೋಡಿದಾಗ ಕಂಡಿದ್ದು ಗೋಡೆತುಂಬ ಹಚ್ಚಿದ್ದ ಜಾಸ್ ಕಲಾವಿದರ ಮುಖಚಿತ್ರಗಳು. ಗ್ಯಾಸ್ ಫೈರಿನ ನೆತ್ತಿಗೆ, ಮರದ ಹಲಗೆಯ ಮೇಲಿದ್ದ ಸೌಂದರ್ಯವರ್ಧಕ ಸಾಮಗ್ರಿಗಳ ಸಾಲು. ಜೊತೆಗೆ, ಕೆಲವೊಮ್ಮೆ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ, ಕಸಗುಡಿಸುವಾಕೆಯ ಗಮನಕ್ಕೆ ಬರುವಂತೆ ಬಾಗಿಲಿಗೆ ಹಚ್ಚಿದ ಬರಹ; ನನ್ನ ಸೋದರಳಿಯ ಮಲಗಿದ್ದಾನೆ. ಎಬ್ಬಿಸಬೇಡಿ. ಆದರೂ… ಮ್ಯಾಥ್ಯೂಸಿಗೇಕಿಷ್ಟು ಆಸಕ್ತಿ ಅವನಲ್ಲಿ?
ಮೊನ್ನೆ ಮಂಗಳವಾರ ಬೆಳಗಿನ ಜಾವ ಎರಡು ಗಂಟೆಯ ಹೊತ್ತಿಗೆ ಯಾರೋ ಬಾಗಿಲು ತಟ್ಟಲು ಎಡ್ವಿನ್ ಎದ್ದ…
“Come and have a drink. I have a few friends I want you to meet.”
ಕೆಂಪುಗಣ್ಣಿನ ಮ್ಯಾಥ್ಯೂಸ್ ಕರೆದ. ಎಡ್ವಿನ್ ನಿರಾಕರಿಸಿದ. ಬೆಳಿಗ್ಗೆ ಕೆಲಸಕ್ಕೆ ಹೋಗಬೇಕೆಂದೂ, ತನಗೆ ಸಂಜೆಯಿಂದ ತಲೆನೋವೆಂದೂ ಹೇಳಿದ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಮ್ಯಾಥ್ಯೂಸ್ ಹೊರಟುಹೋದ. ತಾನು ಹಾಸಿಗೆಗೆ ಬಂದ. ಹತ್ತು ನಿಮಿಷಗಳಾಗಿರಲಿಲ್ಲ. ಮತ್ತೆ ಬಾಗಿಲು ತಟ್ಟಿದ ಸದ್ದು.
“Don’t act so fucking superior, come along. You are not the only one who work.”
ಮಾತು ಇಷ್ಟು ಬೇಗ ಹೀಗೆ ಹದ ಮೀರಬಹುದೆಂದು ಎಡ್ವಿನ್ ಎಣಿಸಿರಲಿಲ್ಲ. ಮ್ಯಾಥ್ಯೂಸಿನ ಒತ್ತಾಯದ ಆಹ್ವಾನವನ್ನು ಮತ್ತೆ ನಿರಾಕರಿಸುವ ಧೈರ್ಯವಿರದೆ ತಾನು ಹೋಗಿದ್ದ.
ಐದು ಗಂಟೆಗೆ ಕೊಠಡಿಗೆ ಹಿಂದಿರುಗಿದ ಎಡ್ವಿನ್ನಿಗೆ ನಿದ್ದೆ ಬರಲಿಲ್ಲ. ಏಳು ಗಂಟೆಯ ಹೊತ್ತಿಗೆ ಸ್ವಾಧೀನವಿಲ್ಲದ ಹೆಜ್ಜೆಗಳು ಮುಗ್ಗರಿಸುತ್ತ ಮೆಟ್ಟಿಲಿಳಿದು ಹೋದದ್ದನ್ನು ಕೇಳುತ್ತ ಮಲಗಿದ್ದ. ಎಂಟು ಗಂಟೆಗೆ ಬಾಗಿಲು ತಟ್ಟಿದವನು ವೆಸ್ಟ್ ಇಂಡಿಯನ್.
‘ನನಗೆ ಕಣ್ಣು ಮುಚ್ಚುವುದು ಸಾಧ್ಯವೇ ಆಗಿರಲಿಲ್ಲ. ನಿಮಗೆ? ಮನೆಯಾಕೆಗೆ ಹೇಳೋಣವೆಂದುಕೊಂಡಿದ್ದೇನೆ. ನಿಮಗೇ ಗೊತ್ತು, ಇದು ಮೊದಲನೆಯ ಸಲವಲ್ಲ. ಈ ತರಹದ ರಂಪ…’
‘ನೀನು ಹೋವೇನೇ, ನಿಜ ಹೇಳು.’ ನಾಲಗೆಗೆ ಚಿಮ್ಮಿ ಚಿಮ್ಮಿ ಬರುತ್ತಿತ್ತು ಪ್ರಶ್ನೆ.
ತಾನು ಮೊದಲು ಮಾಡಬೇಕಾದ್ದು ಸದ್ಯದ ಕೊಠಡಿಯನ್ನು ಬಿಟ್ಟು ಬೇರೆ ಎಲ್ಲಾದರೂ ಹೋಗುವುದು ಎಂದುಕೊಂಡ ಎಡ್ವಿನ್ ನಾಟಿಂಗ್ ಹಿಲ್ ಗೇಟಿನ ಕಡೆಗೆ ಹೆಜ್ಜೆ ಹಾಕಿದ. ಅಲ್ಲಿ ಮೂಲೆಗಿದ್ದ ಸಿಗರೇಟು-ಅಂಗಡಿಯ ನೋಟಿಸ್ ಬೋರ್ಡಿನಿಂದ ‘Sorry, no coloureds’ ಅಥವಾ ‘Europeans only’ ಎನ್ನುವ ಹಣೆಪಟ್ಟಿಯಿರದ ಟೆಲಿಫೋನು ನಂಬರು ವಿಳಾಸಗಳನ್ನು ಗುರುತು ಹಾಕಿಕೊಂಡು ವೆಸ್ಟ್ ಬೋರ್‍ನ ರಸ್ತೆಯ ಕಡೆಗೆ ತಿರುಗಿದ.
ಓಡಿಯನ್ ಸಿನಿಮದ ಹೊರಗಿನ ಟೆಲಿಫೋನ್ ಡಬ್ಬಿಯೊಳಕ್ಕೆ ಕಾಲಿಡುವ ಹೊತ್ತಿಗೆ ಸಂಜೆಯ ಬಣ್ಣ ಬದಲಾಗಿತ್ತು. ಬೀದಿ ಮಗ್ಗುಲಿನ ಬಾದ್ದೆಲೆಯ ಮೈ, ಗಾಳಿ ಹೊತ್ತ ತೇವದಿಂದ, ಭಾರವಾದಂತೆ ಜಡವಾಗಿತ್ತು. ಆಗೊಂದು ಈಗೊಂದು ಬೀಳುತ್ತಿದ್ದ ಎಲೆ ಚಕ್ಕಂದವಾಡದೆ ಚಕ್ಕಳದ ಹಾಗೆ ನೆಲದ ಮೇಲೆ ನೆಲೆಸುತ್ತಿತ್ತು.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
‘ಬಿ’ ಸ್ವಿಚ್ಚನ್ನೊತ್ತಿ ಬಟ್ಟಲಿಗೆ ಬಿದ್ದ ನಾಲ್ಕು ಪೆನ್ನಿಗಳನ್ನು ಎತ್ತಿಕೊಂಡು ಮತ್ತೆ ಪೆಟ್ಟಿಗೆಯ ನೆತ್ತಿಗಿದ್ದ ಬಿರುಕಿನೊಳಕ್ಕೆ ಒಂದೊಂದಾಗಿ ಬಿಡುತ್ತಿದ್ದಾಗ ಬಾಗಿಲು ತೆಗೆಯಿತು.
‘ಏ, ಮಿಸ್ಟರ್, ಇದು ಸಾರ್ವಜನಿಕ ಟೆಲಿಫೋನು. ಮೂರು ನಿಮಿಷವಷ್ಟೇ ಅವಕಾಶ, ಗೊತ್ತು ತಾನೇ?’
ಕಪ್ಪು ಮುಖ; ತಂತಿ-ಗೂದಲು; ಬೆಳ್ಳಿ ಹಲ್ಲು ಸಾಲು; ಮಾತು ನಾಜೂಕನ್ನರಿಯದ ರೀತಿ.
‘ನಾನು ಬಂದು ಒಂದು ನಿಮಿಷವಾಗಿದೆಯೋ ಏನೋ’
ಎಡ್ವಿನ್ ಮಗುವಿಗೆ ಹೇಳುವಂತೆ ಹೇಳಿದ.
‘ಒಂದು ನಿಮಿಷವಂತೆ, ಒಂದು. ನಾನು ಐದು ನಿಮಿಷದಿಂದ ನಿಂತು ನೋಡುತ್ತಲೇ ಇದ್ದೇನೆ.’
‘ನನಗೆ ಚರ್ಚೆ ಬೇಕಿಲ್ಲ. ನೀವು ಫೋನು ಮಾಡಬೇಕೇನು? ಮಾಡಿ; ನಾನು ಕಾಯುತ್ತೇನೆ.’
‘ಬಿ’ ಸ್ವಿಚ್ಚನೊತ್ತಿ ಆದಾಗಲೇ ಇಳಿಬಿಟ್ಟಿದ್ದ ತನ್ನೆರಡು ಪೆನ್ನಿಗಳನ್ನು ತೆಗೆದುಕೊಂಡು ಹೊರಬಿದ್ದ ಎಡ್ವಿನ್ ನಾಟಕೀಯವಾಗಿ ದಾರಿ ಸೇರಿದ.
ಉಪಚಾರಕ್ಕಾದರೂ ವಂದನೆಗಳನ್ನು ಹೇಳದೆ ಆತ ಒಳಗೆ ಹೋಗಿ ಬಾಗಿಲನ್ನೆಳೆದುಕೊಂಡ. ಎಂಟು ನಿಮಿಷಗಳಾದ ಮೇಲೆ ಅವನು ಹೊರ ಬಂದು ಗಟ್ಟಿಯಾಗಿ ಹೇಳಿದ:
‘ನೋಡಿದಿರ, ನಾನು ಎರಡು ನಿಮಿಷಗಳಲ್ಲಿ ನನ್ನ ಕೆಲಸ ಮುಗಿಸಿದೆ.’
ಉಗುಳು-ಮಳೆಯಲ್ಲಿ ನಿಂತಿದ್ದ ಎಡ್ವಿನ್ ತಡೆಯಲಾರದೆ ಹೇಳಿದ:
‘ಎರಡಲ್ಲ, ಹತ್ತು.’
ಕೈಗಳನ್ನು ಆಕಾಶದ ಕಡೆಗೆ- ಇಂತ ಅನ್ಯಾಯವೂ ಉಂಟೇ ಅನ್ನುವ ಹಾಗೆ- ಎತ್ತಿದ ಆತ ಕೂಗಿದ.
‘ನಾನು ಸುಳ್ಳ ಎನ್ನುತ್ತೀಯ ನೀನು? ನಿನ್ನ ದೇಶದವರೆಲ್ಲ ನಿನ್ನ ಹಾಗೇನು, ಕೊಂಗರೆ?’
‘ನಾನು ಬ್ರಿಟಿಷ್ ಪ್ರಜೆ, ಗೊತ್ತೇ?’
ಪಕ್ಕೆ ಹಿಡಿದುಕೊಂಡು ಗಹಗಹಿಸಿ ನಗತೊಡಗಿದ ಆತ ಮಾತನಾಡದ್ದನ್ನು ನೋಡಿ ಎಡ್ವಿನ್ ಹೇಳಿದ:
‘ಕ್ಷಮಿಸಿ, ನನ್ನದು ತುರ್ತು ಕೆಲಸ.’
ಆ ನಾಲ್ಕು ಮಾತುಗಳ ಪರಿಮಿತಿಗೆ ತನ್ನೆಲ್ಲ ಸಂಸ್ಕೃತಿ, ವಿದ್ಯೆಗಳನ್ನು ಸುರಿಯಲು ಪ್ರಯತ್ನಿಸಿದ ಎಡ್ವಿನ್ ಡಬ್ಬಿಯೊಳಕ್ಕೆ ಹೋಗಿ ಬಾಗಿಲೆಳೆದುಕೊಂಡ. ಬೀದಿಯ ಕಾರು, ಬಸ್ಸುಗಳ ದಾಳಿಗೆ ಸಿಕ್ಕ ನಗು ಉಗುಳು- ಮಳೆಯಲ್ಲಿ ಕರಗಿತು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಜಾಹೀರಾತು ಮಾಡಿದ ಕೊಠಡಿಯಿದ್ದ ಮನೆ ಕಣ್ಣಿಗೆ ಕಾಣಿಸುತ್ತಿತ್ತು. ಹೊಸದಾಗಿ ಬಣ್ಣ, ಸುಣ್ಣ ಕಂಡ ಮನೆ; ಎದುರಿಗೆ ಅಂಡಾಕಾರದ ಸಣ್ಣದೊಂದು ಪಾರ್ಕು. ಮನೆಯ ಹೆಬ್ಬಾಗಿಲನ್ನು ನೋಡುತ್ತಲೇ ನಂಬರನ್ನು ಬೆರಳು ಮಾಡಿದ.
‘ಹಲೋ, ಬೇಸ್ ವಾಟರ್ 1904’
‘ಎ’ ಸ್ವಿಚ್ಚನ್ನೊತ್ತಿದ ಎಡ್ವಿನ್ ಹೆಣ್ಣಿನ ದನಿಯಲ್ಲಿ ಮಾರ್ದವವಿದೆಯೆಂದುಕೊಂಡ.
‘ನನ್ನ ಹೆಸರು ಡಿಕ್ರೂಸ್. ನಿಮ್ಮ ಜಾಹೀರಾತು ನೋಡಿದೆ- ರೂಮಿನ ಬಗ್ಗೆ.’
‘ನೋಡುವುದಕ್ಕೆ ಯಾವಾಗ ಬರಬಲ್ಲಿರಿ, ಮಿ. ಡಿಕ್ರೂಸ್?’
‘ಇನ್ನು ಹತ್ತು ನಿಮಿಷಗಳಾದ ಮೇಲೆ ನಿಮಗೆ ಯಾವಾಗ ಅನುಕೂಲವೋ ಆಗ ಬರಬಲ್ಲೆ.’
‘-ಈಗಲೇ. ವಿಳಾಸ ಗೊತ್ತು ತಾನೇ? ಬನ್ನಿ- ನೀವು ಎಲ್ಲಿಯವರು?’
‘ನಾನು ಬ್ರಿಟಿಷ್ ಪ್ರಜೆ.’
‘ಬನ್ನಿ…’
ಟೆಲಿಫೋನ್ ಡಬ್ಬಿಯಿಂದ ಹೊರಬಿದ್ದ ಎಡ್ವಿನ್ ಸಿನೆಮದ ಮರೆಗೆ ಓಡಿಹೋಗಿ ಸಿಗರೇಟು ಸೇದುತ್ತ ನಿಂತು ಸುರಿಯತೊಡಗಿದ್ದ ಮಳೆಯನ್ನೂ ತನ್ನ ಗುರಿಯಾದ ಮನೆಯನ್ನೂ ನೋಡಿದ.
ಕರೆಗಂಟೆಯನ್ನು ಒತ್ತುವ ಮೊದಲು ಕರವಸ್ತ್ರದಿಂದ ತಲೆಯನ್ನು ಒರಸಿಕೊಂಡ.
‘ನಿಮಗೆ ಹತ್ತು ನಿಮಿಷಗಳ ಹಿಂದೆ ಫೋನು ಮಾಡಿದೆ-ರೂಮಿದೆ ತಾನೇ?’
‘ಎಂಥ ಅನ್ಯಾಯವಾಯಿತು, ಡಿಯರ್. ನೀವು ಫೋನ್ ಮಾಡಿದ ಒಂದು ನಿಮಿಷಕ್ಕೆ ಮನೆಯ ಮಾಲೀಕರು ತಮ್ಮ ಪರಿಚಯದ ಒಬ್ಬರನು ಕರೆದುಕೊಂಡು ಬಂದರು. ಸಾರಿ.’
ಮಾತು ಮೃದುವಾಗಿತ್ತು. ಮುಖದಲ್ಲಿ ನೋವಿತ್ತು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
‘You are a bloody liar’ ಬಾಯಿಗೆ ಬಂದ ಮಾತನ್ನಾಡದೆ,
‘ನನಗರ್ಥವಾಯಿತು, ನೀವು ಯೋಚನೆ ಮಾಡಬೇಡಿ. ಅಲ್ಲಿದೆಯಲ್ಲ, ಟೆಲಿಫೋನ್ ಡಬ್ಬಿ, ಅದರಿಂದ ನಾನು ಫೋನ್ ಮಾಡಿದ್ದು.’
ಎಡ್ವಿನ್ ಗಂಭೀರವಾಗಿ ಹೇಳಿದ.
‘ನೀವು ಬ್ರಿಟಿಷ್ ಪ್ರಜೆಯೆಂದದ್ದು ನನ್ನ ಮಾತಿನಷ್ಟೇ ದಿಟ, ಅಲ್ಲವೇ?’
‘ನಾನು ನಿಜಕ್ಕೂ ಬ್ರಿಟಿಷ್ ಪ್ರಜೆ’ ಪಾಸುಪೋರ್ಟನ್ನು ತಂದಿದ್ದರಾಗಿತ್ತು ಎಂದುಕೊಂಡ.
‘ಇರಬಹುದು. ಆದರೂ…’
ಬಣ್ಣದ ಮಾತು ಹೊರಬರುವ ಮೊದಲೇ ಎಡ್ವಿನ್ ಬೀದಿಗಿಳಿದ. ಮಳೆ ಬೀಳುತ್ತಲೇ ಇತ್ತು.
ಕಾಲ ಕೆಳಗೆ ಎಲೆಗಳು ಕೊಳೆತ ಮಾಂಸವಾಗಿದ್ದವು. ಆಕಾರವಿರದ ಕೊಚ್ಚೆ ಮೈಗೆ ಬಿಡುವಿರದೆ ಬಡಿಯುತ್ತಿತ್ತು ಹೆಂಗಸರ ಹಿಮ್ಮಡಿ ಮುಳ್ಳು. ಮಾಂಸಕ್ಕೆ ಬಡಿದ ಮೊಳೆ-ಪೆಟ್ಟು. ಇದೋ ನನ್ನ ಮೈಯಿನೊಂದು ತುಣುಕು- ಬೂಜೆ ಹಿಡಿದ ಬ್ರೆಡ್ಡು. ಗ್ರೀನ್ ಪಾರ್ಕಿನಲ್ಲಿ ಗೋಪುರವಾಗಿ ಮೇಲೆದ್ದು ಬೆಂಕಿ ಮುಟ್ಟಿದಾಗ ಆಕಾಶದ ಕಡೆಗೆ ಚಿಮ್ಮುವ ಬೆಳಕಾಗುವ ಭಾಗ್ಯ-ಮಳೆ-ಜೂಡಾಸಿನ ಲೆಕ್ಕಾಚಾರ ಮರೆತ ಕ್ರಿಸ್ತನ ಕನಸು.
ಇನ್ನೊಂದು ತಿಂಗಳಿಗೆ ಚಳಿಗಾಲ ಕಾಲೂರಿ ನಿಲ್ಲುವ ಬರಗಾಲ. ಹಸಿರಿನ ಹೆಸರು ನೆನಪಿಗೂ ಬಾರದ ಹಾಗೆ ಬತ್ತಲೆ ನಿಂತ ನರಪೇತಲ ಮರಗಳು- ನವಿಲುಗಣ್ಣಿನ ಇರುಳ ಮೈ ಪರಚುವಂತೆ ಬೆರಳ ಚಾಚದ ಮೂಳೆ-ಹಂದರ ನೋವು…
ವೆಸ್ಟ್ ಬೋರನ್ ಗ್ರೋವಿನಿಂದ ಕ್ವೀನ್ಸ್‌ವೇಗೆ ತಿರುಗಿದ ಎಡ್ವಿನ್ ಮೂಲೆಯ ಕಳ್ಳಂಗಡಿಯ ಬಾಗಿಲು ತಳ್ಳಿ ಒಳಹೊಕ್ಕ.
ಕೊಳಗವನ್ನು ಕೈಗೆತ್ತಿಕೊಂಡು ಬೆನ್ನನ್ನು ಕೌಂಟರಿಗೊರಗಿಸಿ ನಿಂತು ಸುತ್ತ ಕಣ್ಣಾಡಿದ. ಮಳೆಯಿಂದಾಗಿಯೋ ಏನೋ ಜನ ತುಂಬಿದ್ದರು. ಅರ್ಧಕ್ಕರ್ಧ ಕಪ್ಪುಜನ- ವೆಸ್ಟ್ ಇಂಡಿಯನ್ನರು, ಆಫ್ರಿಕದ ಕೆಲವರು- ಮೇಜುಗಳ ಸುತ್ತ ಕುಳಿತು ಗಟ್ಟಿಯಾಗಿ ನಗುತ್ತಿದ್ದುದನ್ನು ನೋಡಿ ಎಡ್ವಿನ್ ಅಂದುಕೊಂಡ: ಚಳಿಗಾಲ ಅನಿವಾರ್ಯವಲ್ಲ.
ಅವನ ಗಮನ ಹತ್ತಿರದ ಮೇಜೊಂದರ ಕಡೆಗೆ ಹರಿಯಿತು. ಏಳು ಜನರ ಆ ಗುಂಪಿನಲ್ಲಿ ಇಬ್ಬರು ವೆಸ್ಟ್ ಇಂಡಿಯನ್ನರು. ಅವರ ಮಧ್ಯಕ್ಕೆ ಕುಳಿತಿದ್ದ ಹುಡುಗಿ-ಕಾಂಟಿನೆಂಟಲ್ ಎಂದುಕೊಂಡ ಎಡ್ವಿನ್- ಅಂದ ಮಾತಿಗೆ ಹಲ್ಲು ಬಿಟ್ಟು ನಕ್ಕರು. ಉಳಿದ ನಾಲ್ಕು ಜನ- ಇಬ್ಬರು ಗಂಡಸರು, ಇಬ್ಬರು ಹೆಂಗಸರು- ನಗಲಿಲ್ಲ.
ಕಳ್ಳಂಗಡಿ ಸಿಡಿದದ್ದು ಆಗ. ವೆಸ್ಟ್ ಇಂಡಿಯನ್ನಿನ ಬಾಯಲ್ಲಿದ್ದ ಸಿಗರೇಟಿಗೆ ಎದುರಿಗಿದ್ದ ಬಿಳಿಯ ಬೆಂಕಿ ತೋರಿಸುತ್ತಿದ್ದಾಗ ಅವನೇನೋ ಅಂದ. ಇನ್ನೊಬ್ಬನ ಕೈ ಹಿಡಿಯಾಗಿ, ಹಾರಿ, ಸಿಗರೇಟನ್ನು ಎಗರಿಸಿತು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ತಾರಕದ ಚೀತ್ಕಾರ, ಸೂಟು ಬೂಟುಗಳಿಂದ ಚಿಮ್ಮಿ ಬತ್ತಲೆ ನಿಂತ ಕಪ್ಪು ಬಿಳಿ ಗಂಡಸರ ನಿಗಿ ನಿಗಿ ಹೊಳೆದ ತೊಗಲು, ಗಾಳಿಯಲ್ಲಿ ಹಾರತೊಡಗಿದ ಕೊಳಗಗಳು, ವೈನ್ ಲೋಟಗಳು, ಸೀಸೆಗಳು. ಕಾಡುಕಪ್ಪಿನ ಗುಹೆಯ ಬಾಗಿಲಿಗೆ ನಿಂತು ಕಾದಾಡತೊಡಗಿದ್ದ ಗಂಡಸರನ್ನು ಕೈಹಿಡಿದು ಬೇಡಿದ ಹೆಂಗಸರು. ಮರದ ಕೊಂಬೆಗಳ ಬದಲು ಮುರಿದ ಕುರ್ಚಿಗಳ ಕಾಲು. ಮೈ-ಮೆತ್ತಗೆ ಗಾಜುಕೊಳಗ, ಹಿಡಿಯಾದ ಕೈ, ಗುದ್ದಿದ ಸದ್ದು.
ಮಣ್ಣು ಬಣ್ಣದ ಕಳ್ಳನ್ನು ಕುಡಿಯದೆ ಹಿಡಿದುಕೊಂಡಿದ್ದ ಮಣ್ಣು ಬಣ್ಣದ ಎಡ್ವಿನ್ ಸಾಕ್ಷೀಭೂತನಾಗಿ ನಿಂತಿದ್ದ.
‘I, Tiresias, throbbing between two lires.’
ಗುರಿಯಿಟ್ಟು ಎಸೆದ ಕೊಳಗ ತೂಗು- ದೀಪಕ್ಕೆ ಬಡಿದು ಕಳ್ಳಂಗಡಿ ಕತ್ತಲಲ್ಲಿ ಮುಳುಗಿತು. ಕಳ್ಳ ಬೆಕ್ಕಿನ ಹೆಜ್ಜೆಯಿಡುತ್ತ ಜನ ಬೀದಿಗಿಳಿದರು.
ಯುಗವಾದ ಮೇಲೆ ಪೋಲೀಸಿನವರು ಬಂದಾಗ ಬೆಳಕಾಯಿತು. ಅಂಗಡಿಯ ಹರವಿಗೆಲ್ಲ ಉಳಿದಿದ್ದವರು ಇಬ್ಬರು: ಮಣ್ಣು ಬಣ್ಣದ ಕಳ್ಳನ್ನು ಕುಡಿಯದೆ ಹಿಡಿದುಕೊಂಡಿದ್ದ ಮಣ್ಣು ಬಣ್ಣದ ತಾನು; ಜಮಖಾನದ ಮೇಲೆ ಸೀಳಿದ ಕೋಳಿಯಂತೆ ಕೈಕಾಲು ಚಾಚಿ ಮಲಗಿದ್ದ ಅವನು- ಗುಂಗುರು ಕೂದಲಿಂದ ಕಪ್ಪುಹಣೆಗೆ ಇಳಿಯುತ್ತಿದ್ದ ಕೆಂಪಿನ ಗಮನವಿರದೆ ಮಲಗಿದ್ದ ಅವನು.
ಮಳೆಗಾಲದಲ್ಲಿ ಬೆಟ್ಟದ ನೆತ್ತಿಯಿಂದ ಧುಮುಕಿ, ಕಾಡಿನ ಕುರುಚಲಿನಲ್ಲಿ ದಾರಿ ಮಾಡಿಕೊಂಡು, ಬಯಲಿಗೆ ಬರುವ ಹೊಳೆ-ಹಾವು ಎಂದುಕೊಂಡ.
ಕಳ್ಳನ್ನು ಕುಡಿಯದೆ ಬೀದಿಗಿಳಿದ ಎಡ್ವಿನ್ನಿಗೆ ಚಳಿಯೆನಿಸಿತು. ಮಳೆ ನಿಂತು ಗಾಳಿ ಬೀಸುತ್ತಿತ್ತು.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ಉರಿಯುವ ಸೂರ್ಯ ನೆಲದಲ್ಲಿ ಕೊರೆದ ನೆರಳು, ಕೆಂಡ ಕೆಂಪಿನ ಸೂರ್ಯನಿಂದ ನೆರಳಿಗೆ ಓಟ- ನೆರಳಿನಿಂದ ಬಿಸಿಲಿಗಲ್ಲ; ಚಿಕ್ಕೆ ಚೆಲ್ಲಿದ, ಚೊಕ್ಕ ನೀಲಿಯ ಆಕಾಶದ ಕೆಳಗೆ, ಕಪ್ಪು-ಬಿಳಿಗಳ ನಡುವೆ, ಋತು-ಋತುಗಳ ನಡುವೆ ಒಡೆಯಲಾಗದ ಅಡ್ಡಗೋಡೆ ಇರದ ನೆಲದಲ್ಲಿ ಏಕಾಕಿತನ ಸಾಕಾರವಾದಂತೆ ಬತ್ತಲೆ ನಿಲ್ಲುವ ಬೋಳು-ಮರವಿಲ್ಲ; ಬದಲು, ಹಣ್ಣೆಲೆಗಳ ನಡುವಿಗೇ ಕಣ್ದೆರೆಯುವ ಹಸಿರು…
ಮನಸ್ಸು ಕರೆದ ನೆನ್ನೆಗಳ ಚಿತ್ರವನ್ನು ಮೆಲುಕು ಹಾಕುತ್ತ ನಡೆದ ಎಡ್ವಿನ್ನಿಗೆ ಬೆನ್ನ ಮೇಲೆ ಕೈ ಬೀಳುವವರೆಗೂ ಎಚ್ಚರವಿರಲಿಲ್ಲ.
ಮ್ಯಾಥ್ಯೂಸ್ ನಕ್ಕ:
‘ಯಾರ ಚಿಂತನೆ, ಎಡ್ವಿನ್, ಕೂಗಿದರೂ ಕೇಳದ ಹಾಗೆ…?’
‘ಬಾ, ಮ್ಯಾಥ್ಯೂಸ್, let us have a drink.’
‘ಸಾರಿ, ಎಡ್ವಿನ್, ನಾನು ಕುಡಿಯುವದನ್ನು ಬಿಟ್ಟು ಎರಡು ದಿನವಾಯಿತು. ಆವೊತ್ತು, ಬುಧವಾರ ಬೆಳಿಗ್ಗೆ, ಮಲಗಿದರೆ ಎಚ್ಚರವಾಗದೇ ಹೋಗಬಹುದು ಎಂದುಕೊಂಡು ನೇರ ಕೆಲಸಕ್ಕೆ ಹೋದೆ. ನನ್ನ ಅದೃಷ್ಟ, ಮಾಲೀಕ ಬಂದ. ನನ್ನ ಅವಸ್ಥೆಯನ್ನು ನೋಡಿದವನೇ ಕೆಲಸದಿಂದ ಡಿಸ್‌ಮಿಸ್ ಮಾಡಿದ…
ಅದಿರಲಿ, ಹೋವೇ ಒಂದು ಹಕ್ಕಿಯನ್ನು ಹಿಡಿದುಕೊಂಡು ಬಂದಿದ್ದಾನೆ, ಗೊತ್ತೇ? ನಮಗೆ ಅವನ ವಿಷಯ ಗೊತ್ತಾಗದೇ ಇರಲಿ ಅಂತ. ನಮ್ಮ ಕಣ್ಣಿಗೆ ಮಣ್ಣು ಹೊಯ್ಯುವುದಕ್ಕೆ…’
ಮ್ಯಾಥ್ಯೂಸ್ ಹೋದಮೇಲೆ, ತನ್ನ ಕೊಠಡಿಯ ಕಡೆಗೆ ನಡೆದ ಎಡ್ವಿನ್ ಹೊಸದಾಗಿ ನೆಲಕ್ಕೆ ಬೀಳುತ್ತಿದ್ದ ಎಲೆಗಳ ಮೇಲೆ ಹೆಜ್ಜೆಯಿಡದ ಹಾಗೆ ನೋಡಿಕೊಂಡ.
ಮನೆಯ ಹೆಬ್ಬಾಗಿಲಿಗೆ ಬಂದು ಕಿಸೆಯೊಳಗಿಂದ ಬೀಗದ ಕೈಯನ್ನು ತೆಗೆಯುವಾಗ ಹೇಳಿಕೊಂಡ:
ಇನ್ನೇನು, ಚಳಿಗಾಲ ಬಂದಹಾಗೇ. ನಾಳೆ, ಮರೆಯದೆ, ಗ್ಲೌಸನ್ನು ಪೆಟ್ಟಿಗೆಯಿಂದ ಹೊರಕ್ಕೆ ತೆಗೆದಿಡಬೇಕು-ಎಲೆಯಷ್ಟೂ ಉದುರಿ ಮರ ಬೋಳು ನಿಲ್ಲುವ ಮೊದಲು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)






